All posts by nagaraj11081993

ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ನವದೆಹಲಿ, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ (West Asia crisis) ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್​ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ:

  1. ಅಮೆರಿಕ ಮತ್ತು ಇಸ್ರೇಲ್​ನಿಂದ ತತ್​ಕ್ಷಣವೇ ಎಲ್ಲಾ ಮಿಲಿಟರಿ ದಾಳಿಗಳು ನಿಲ್ಲಬೇಕು. ಪೂರ್ಣ ನಿಂತ ಬಳಿಕವಷ್ಟೇ ಸಂಧಾನ ಅಥವಾ ಮಾತುಕತೆ ಸಾಧ್ಯ ಎಂದಿದೆ ಇರಾನ್.
  2. ಕದನ ವಿರಾಮ ತಾತ್ಕಾಲಿಕ ಆಗಿರಕೂಡದು. ಭವಿಷ್ಯದಲ್ಲಿ ಇಂಥ ದಾಳಿಗಳನ್ನು ಮಾಡುವುದಿಲ್ಲ ಎಂದು ಗ್ಯಾರಂಟಿ ಕೊಡಬೇಕು ಎಂದು ಇರಾನ್ ಹಾಕಿರುವ ಮತ್ತೊಂದು ಷರತ್ತು.
  3. ತನ್ನ ಸಾರ್ವಭೌಮ ಹಕ್ಕುಗಳನ್ನು ಮಾನ್ಯ ಮಾಡಬೇಕು. ಈ ಸಂಘರ್ಷದಲ್ಲಿ ತನಗೆ ಆಗಿರುವ ಹಾನಿಗಳಿಗೆ ಪರಿಹಾರ ಕೊಡಬೇಕು ಎಂದು ಇರಾನ್ ಒತ್ತಾಯಿಸಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದ ಮೇಲೇನು ಪರಿಣಾಮ?

ಅತಿಹೆಚ್ಚು ತೈಲ ಮತ್ತು ಅನಿಲ ಬಳಸುವ ದೇಶಗಳಲ್ಲಿ ಭಾರತವೂ ಒಂದು. ಹೆಚ್ಚಿನವನ್ನು ಭಾರತ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ತೈಲ ಬಿಕ್ಕಟ್ಟು ಶುರುವಾದರೆ ಭಾರತದ ಆರ್ಥಿಕತೆಯ ಮೇಲೆ ನಾನಾ ಪರಿಣಾಮಗಳಾಗುತ್ತವೆ. ಕೆಲ ಸಂಭಾವ್ಯ ಪರಿಣಾಮಗಳಿವು…

ಯುದ್ಧ ಬೇಗ ಮುಗಿದರೆ ಭಾರತಕ್ಕೆ ಅನುಕೂಲ

ಅಕಸ್ಮಾತ್ ಯುದ್ಧ ಬಹಳ ಬೇಗ ಮುಗಿದುಹೋದಲ್ಲಿ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್​ಗೂ ಹೆಚ್ಚು ಇದ್ದದ್ದು 70 ಡಾಲರ್​ನೊಳಗೆ ಬರಬಹುದು. ಭಾರತದ ಆರ್ಥಿಕತೆ ಮೇಲಿನ ನಕಾರಾತ್ಮಕ ಪರಿಣಾಮ ಬಹಳ ಕಡಿಮೆ ಇರುತ್ತದೆ. ತಾತ್ಕಾಲಿಕ ಹಿನ್ನಡೆ ನಂತರ ಆರ್ಥಿಕತೆಯ ವೇಗ ಯಥಾಸ್ಥಿತಿಗೆ ಮರಳಬಹುದು.

ಯುದ್ಧ ದೀರ್ಘಕಾಲ ಮುಂದುವರಿದಿದರೆ?

ಯುದ್ಧ ದೀರ್ಘಕಾಲ ಮುಂದುವರಿದರೆ ತೈಲ ಬೆಲೆ ಅಧಿಕ ಮಟ್ಟದಲ್ಲೇ ಇರುತ್ತದೆ. ಪೆಟ್ರೋಲ್, ಡೀಸಲ್, ಎಲ್​ಪಿಜಿ ಇತ್ಯಾದಿ ಬೆಲೆಗಳೆಲ್ಲವೂ ಹೆಚ್ಚಳವಾಗುತ್ತಲೇ ಹೋಗುತ್ತದೆ. ಇದರಿಂದ ಬಹುತೇಕ ಎಲ್ಲಾ ಸರಕುಗಳ ಬೆಲೆ ಸಹಜವಾಗಿ ಏರಿಕೆ ಆಗುತ್ತದೆ. ತೈಲ ಬೆಲೆಯ ಪ್ರತೀ ಶೇ. 10 ಏರಿಕೆಯಿಂದ ಜಿಡಿಪಿ ಬೆಳವಣಿಗೆಯ ವೇಗ ಶೇ. 0.25ರಷ್ಟು ಕುಂಠಿತಗೊಳ್ಳಬಹುದು ಎನ್ನುತ್ತಾರೆ ಅರ್ಥತಜ್ಞರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ

ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಟ್ಟರೆ?

ಯುದ್ಧ ಮುಂದುವರಿಯುವುದರ ಜೊತೆಗೆ ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಡುವ ಸಾಧ್ಯತೆ ಇಲ್ಲದಿಲ್ಲ. ವಿಶ್ವದ ಹೆಚ್ಚಿನ ತೈಲ ಮತ್ತು ಅನಿಲ ಸರಬರಾಜು ಈ ಮಾರ್ಗದಲ್ಲೇ ಸಾಗುವುದು. ಭಾರತ ಸೇರಿ ಹಲವು ರಾಷ್ಟ್ರಗಳಿಂದ ವಿವಿಧ ಸರಕುಗಳು ಗಲ್ಫ್ ದೇಶಗಳಿಗೆ ರಫ್ತಾಗಲು ಈ ಮಾರ್ಗ ಮುಖ್ಯ. ಈ ಜಲಸಂಧಿ ಬಂದ್ ಆಗಿ ಹೋದರೆ ಹಲವಾರು ರಾಷ್ಟ್ರಗಳಿಗೆ ಬಹಳ ಹಿನ್ನಡೆಯಾಗಬಹುದು. ಭಾರತದ ಮೇಲೆ ಬಹಳ ದೊಡ್ಡ ಪರಿನಾಮ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ

ಬೆಂಗಳೂರು, ಮಾರ್ಚ್ 12: ಇರಾನ್- ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಮೂರು ದೇಶಗಳ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳ ಮೇಲೆ ಕೂಡ ದಾಳಿ ಮುಂದುವರೆದಿದ್ದು, ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ತೈಲ, ಗ್ಯಾಸ್ ಮುಂತಾದ ಸೌಕರ್ಯಗಳ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಅನೇಕ ಪ್ರಮುಖ ನಗರಗಳ ಹೋಟೆಲ್​, ರೆಸ್ಟೋರೆಂಟ್, ಹಾಸ್ಟೆಲ್​ಗಳಲ್ಲಿ ಎಲ್​ಪಿಜಿ ಕೊರತೆ (LPG Crisis) ಎದುರಾಗಿದ್ದು, ಅವುಗಳ ಬಾಗಿಲು ಮುಚ್ಚಲಾಗುತ್ತಿದೆ. ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ ನಡುವೆ ಭಾರತದ ಹಲವಾರು ಭಾಗಗಳಲ್ಲಿ LPG ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ‘ತಕ್ಷಣದ ಎಲ್​ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಬಂದರೆ ಅದನ್ನು ನಂಬಬೇಡಿ.

ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಲು ಜನರು ಪರದಾಡುತ್ತಿರುವಾಗ ಸೈಬರ್ ಅಪರಾಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಾವು ಲಾಭ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು LPG ಸಿಲಿಂಡರ್ ರೀಫಿಲ್ಲಿಂಗ್​ಗೆ ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ವಂಚನೆಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್​ಪಿಜಿ ಸಿಲಿಂಡರ್​​ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಮತ್ತು ಪೂರೈಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ವದಂತಿಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದರಿಂದ, ಸೈಬರ್ ಅಪರಾಧಿಗಳು ಜನರ ಭಯದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಸೈಬರ್ ಅಪರಾಧಿಗಳು ಗ್ಯಾಸ್ ಬುಕಿಂಗ್ ಸೇವೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ದಾರಿತಪ್ಪಿಸುವ ಜಾಹೀರಾತುಗಳು ಸೋಷಿಯಲ್ ಮೀಡಿಯಾ ಮತ್ತು ಮೆಸೇಜ್ ಅಪ್ಲಿಕೇಶನ್‌ಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿವೆ. ಈ ನಕಲಿ ಪ್ರಚಾರಗಳು ವೇಗವಾಗಿ LPG ಸಿಲಿಂಡರ್ ವಿತರಣೆಯನ್ನು ನೀಡುವುದಾಗಿ ನಂಬಿಸುತ್ತಿವೆ. ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ, ಹೆಚ್ಚಿನ ಸಿಲಿಂಡರ್​ ಕೊಡುತ್ತೇವೆ ಎಂಬ ಆಮಿಷವೊಡ್ಡಿ ಗ್ರಾಹಕರನ್ನು ಸುಲಿಗೆ ಮಾಡುವ ಜಾಲ ಸೃಷ್ಟಿಯಾಗಿದೆ. ಇಂತಹ ಮೋಸಗೊಳಿಸುವ ಪ್ರಚಾರಗಳನ್ನು ಸಾಮಾನ್ಯವಾಗಿ WhatsApp ಫಾರ್ವರ್ಡ್‌ಗಳು, SMS ಸಂದೇಶಗಳು ಮತ್ತು ಇತರ ಮೆಸೇಜಿಂಗ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.

ಈ ಸಂದೇಶಗಳು ಸಾಮಾನ್ಯವಾಗಿ ಕಾನೂನುಬದ್ಧ ಗ್ಯಾಸ್ ಬುಕಿಂಗ್ ಪೋರ್ಟಲ್‌ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇವರು ಸಾಮಾನ್ಯವಾಗಿ ತಕ್ಷಣದ ಸಿಲಿಂಡರ್ ವಿತರಣೆಗೆ ಆನ್‌ಲೈನ್‌ನಲ್ಲಿ ಮುಂಗಡ ಪಾವತಿ ಮಾಡಲು ಕೇಳುತ್ತಾರೆ. ನೀವೇನಾದರೂ ಪ್ರಿ ಬುಕಿಂಗ್​ಗೆ ಹಣ ಪಾವತಿ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ, ಅಧಿಕೃತ ವೆಬ್​​ಸೈಟ್ ಅನ್ನು ಹೊರತುಪಡಿಸಿ ಬೇರಾವುದೇ ಸೈಟ್​​ಗಳಲ್ಲೂ ಮುಂಗಡ ಹಣ ಪಾವತಿ ಮಾಡಿ ಸಿಲಿಂಡರ್ ಬುಕ್ ಮಾಡುವುದು ಸುರಕ್ಷಿತವಲ್ಲ.

ಇದನ್ನೂ ಓದಿ: 25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ಯಾವುದೇ ಕಾರಣಕ್ಕೂ ಬ್ಯಾಂಕ್ ಅಕೌಂಟ್, OTP, UPI ಪಿನ್‌ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬೇರೆ ಯಾವುದೇ ಇತರ ಗೌಪ್ಯ ಡೇಟಾದಂತಹ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಇಂತಹ ವಂಚನೆಗಳು ನಿಮಗೂ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ವಂಚನೆಗಳಿಗೆ ಬಲಿಯಾದವರು ತಕ್ಷಣ ರಿಪೋರ್ಟ್ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಡೆಗಟ್ಟಲು ಮತ್ತು ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ಸಹಾಯವಾಗುತ್ತದೆ.

ಸೈಬರ್ ವಂಚನೆ ದೂರುಗಳಿಗೆ ಪ್ರತಿಕ್ರಿಯಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು ಸ್ಥಾಪಿಸಲಾದ 1930ಗೆ ಕರೆ ಮಾಡುವ ಮೂಲಕ ವಂಚನೆಗೆ ಒಳಗಾದವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕವೂ ದೂರುಗಳನ್ನು ನೋಂದಾಯಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ: ಹೇಳಿದ್ದೇನು?

ರಣವೀರ್ ಸಿಂಗ್ (Ranveer Singh) ನಟನೆಯ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಅದೇ ದಿನ ಯಶ್ ಅವರ ‘ಟಾಕ್ಸಿಕ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಬೇಕಿತ್ತು. ಎರಡೂ ಚಿತ್ರಗಳು ಮಾರ್ಚ್ 19 ರಂದು ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಆದರೆ ‘ಟಾಕ್ಸಿಕ್’ ತಂಡವು ಚಿತ್ರದ ಬಿಡುಗಡೆಯನ್ನು ಜೂನ್ 4 ಕ್ಕೆ ಮುಂದೂಡಿತು. ಇದಕ್ಕೆ ಕಾರಣವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಘರ್ಷಣೆಯಿಂದಾಗಿ ಚಿತ್ರದ ವ್ಯವಹಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣವನ್ನು ಚಿತ್ರತಂಡ ನೀಡಿದೆ.

ಆದರೆ ಕೆಲವರು ವಿಶೇಷವಾಗಿ ಹಿಂದಿ ಮಾಧ್ಯಮಗಳು, ಯೂಟ್ಯೂಬರ್​​ಗಳು ಸಿನಿಮಾ ರಂಗದವರು ‘ಧುರಂಧರ್ 2’ ಸಿನಿಮಾಕ್ಕೆ ಹೆದರು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದೆ ಎಂದೇ ಹೇಳುತ್ತಿದ್ದಾರೆ. ಕುಹುಕ, ವ್ಯಂಗ್ಯದ ಪೋಸ್ಟ್​​ಗಳನ್ನು ಸಹ ‘ಟಾಕ್ಸಿಕ್’ ಬಗ್ಗೆ ಕೆಲವರು ಹಂಚಿಕೊಂಡಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದ ನಟರೊಬ್ಬರು ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಿದ್ದಕ್ಕೆ ಟಾಂಗ್ ನೀಡಿದ್ದಾರೆ.

‘ಧುರಂಧರ್ 2’ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ನಿರ್ವಹಿಸಿರುವ ರಾಕೇಶ್ ಬೇಡಿ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿರುವ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ, ಆದರೆ ನಾವು ಮಾತ್ರ ಸಿನಿಮಾ ಬಿಡುಗಡೆ ಮಾಡುತ್ತಿದ್ದೀವಿ’ ಎಂದು ಹೇಳಿದ್ದಾರೆ. ಯಶ್ ತಂಡ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲು ನೀಡಿದ್ದ ಕಾರಣವನ್ನು ಪರೋಕ್ಷವಾಗಿ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ;ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ

ರಾಕೇಶ್ ಬೇಡಿ ಪ್ರಕಾರ, ಯಾವುದೇ ಅಡೆತಡೆಗಳಿದ್ದರೂ ‘ಧುರಂಧರ್ 2’ ನಿಗದಿತ ದಿನಾಂಕದಂದೇ (ಮಾರ್ಚ್ 19) ತೆರೆಗೆ ಬರಲಿದೆ. ಆದರೆ ‘ಧುರಂಧರ್ 2’ಗೂ ‘ಟಾಕ್ಸಿಕ್’ ಪರಿಸ್ಥಿತಿಗೂ ಅಂತರ ಇದೆ. ‘ಧುರಂಧರ್’ ಮೊದಲ ಭಾಗವು ಪಾಕಿಸ್ತಾನ ಮತ್ತು ಆರು ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿತ್ತು. ಈಗ ಯುದ್ಧದ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳಲ್ಲಿ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುವುದೇ ಇಲ್ಲ. ಹಾಗಾಗಿ ಯುದ್ಧದ ಪರಿಣಾಮ ‘ಟಾಕ್ಸಿಕ್’ ಸಿನಿಮಾದ ಮೇಲೆ ಆದಷ್ಟು ‘ಧುರಂಧರ್ 2’ ಸಿನಿಮಾದ ಮೇಲೆ ಆಗುವುದಿಲ್ಲ. ಹಾಗಾಗಿ ಅವರು ಧೈರ್ಯವಾಗಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

‘ಧುರಂಧರ್ 2’ ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದು, ರಣ್ವೀರ್ ಸಿಂಗ್ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಇನ್ನು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ರಾಮಾಯಣ’ ಕೂಡ ಒಂದು. ಈ ಚಿತ್ರವನ್ನು ಯಾವ ರೀತಿ ಮಾಡಿರಬಹುದು ಎಂಬ ಕುತೂಹಲ ಮೂಡಿದೆ. ಈ ವರ್ಷದ ದೀಪಾವಳಿಗೆ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಯಶ್ ಇತ್ತೀಚೆಗೆ ಪೂರೈಸಿದ್ದರು. ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಶೂಟಿಂಗ್ ಶುರುವಾಗಿದೆ.

ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2026ರ ದೀಪಾವಳಿಗೆ ಒಂದು ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗವನ್ನು ರಿಲೀಸ್ ಮಾಡುವ ಆಲೋಚನೆ ಅವರಿಗೆ ಇದೆ. ಈಗ ಸಿನಿಮಾದ ಎರಡನೇ ಭಾಗಕ್ಕೆ ಶೂಟಿಂಗ್ ಆರಂಭ ಆಗಿದೆ. ರಣಬಿರ್ ಕಪೂರ್ ಸದ್ಯ ಸೆಟ್​​ನಲ್ಲಿ ಇದ್ದು, ಶೀಘ್ರವೇ ಯಶ್ ಅವರು ಇದರ ಭಾಗ ಆಗಲಿದ್ದಾರೆ.

‘ರಾಮಾಯಣ’ ಚಿತ್ರದ ಮೊದಲ ಭಾಗದಲ್ಲಿ ಯಶ್ ಅವರ ಭಾಗ ಕಡಿಮೆ ಇರಲಿದೆ ಎನ್ನಲಾಗಿದೆ. ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣನ ಎಂಟ್ರಿಯೇ ಲೇಟ್. ಜೊತೆಗೆ ಅರ್ಧ ರಾಮಾಯಣವನ್ನು ಮಾತ್ರ ಮೊದಲ ಭಾಗದಲ್ಲಿ ಹೇಳುತ್ತಿದ್ದು, ಎರಡನೇ ಭಾಗದಲ್ಲಿ ಯಶ್ ಅವರ ಪಾತ್ರದ ಅವಧಿ ಹೆಚ್ಚಿರಲಿದೆ. ಹೀಗಾಗಿ, ಅವರು ಹೆಚ್ಚು ಶೂಟ್​​ನ ಭಾಗ ಆಗಲಿದ್ದಾರೆ.

ರಣಬೀರ್ ಈಗಾಗಲೇ ಶೂಟಿಂಗ್​​​ನಲ್ಲಿ ಭಾಗಿ ಆಗುತ್ತಿದ್ದಾರೆ. ವೀಕೆಂಡ್ ವೇಳೆಗೆ ಯಶ್, ಸನ್ನಿ ಡಿಯೋಲ್ ಮೊದಲಾದವರು ಸೆಟ್​​​ಗೆ ತೆರಳುವ ಸಾಧ್ಯತೆ ಇದೆ.ಯಶ್ ಅವರನ್ನು ರಾವಣನ ಲುಕ್​​ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ರಾಮನಾಗಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಎರಡನೇ ಭಾಗದಲ್ಲಿ ಶ್ರೀಲಂಕಾದ ಕಥೆ ಇರಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್​​​ಗಳ ನಿರ್ಮಾಣ ಮುಂಬೈ ಸ್ಟುಡಿಯೋದಲ್ಲಿ ಆಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಆಗಾಗ ಯಶ್ ಬಂದು ಹೋಗ್ತಿದ್ರು ಯಾರಿಗೂ ಕಾಣಿಸಿಕೊಳ್ಳದೆ ಇದ್ದಿದ್ದು ಹೇಗೆ?

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಜೂನ್​ ಅಲ್ಲಿ ರಿಲೀಸ್ ಆಗಲಿದೆ. ಇದಾದ ಕೆಲವು ತಿಂಗಳ ಬಳಿಕ ‘ರಾಮಾಯಣ’ ತೆರೆಗೆ ಬರಲಿದೆ. ಯಾವ ರೀತಿಯಲ್ಲಿ ಸಿನಿಮಾ ಇರಲಿದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಣಿಜ್ಯ ಸಿಲಿಂಡರ್ ಕೊರತೆ: ಹುಬ್ಬಳ್ಳಿಯಲ್ಲಿ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ಹುಬ್ಬಳ್ಳಿ, ಮಾರ್ಚ್​​ 12: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಹುಬ್ಬಳ್ಳಿಯ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್‌ಗಳು ಸಿಗದೆ ಹಲವು ಹೋಟೆಲ್‌ಗಳು ತಮ್ಮ ಕಾರ್ಯಚಟುವಟಿಕೆ ನಿಲ್ಲಿಸುವ ಭೀತಿ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ಎದುರಿಸಲು, ಹೋಟೆಲ್ ಮಾಲೀಕರು ಪರ್ಯಾಯ ಮಾರ್ಗವಾಗಿ ಕಟ್ಟಿಗೆ ಒಲೆಗಳತ್ತ ಮುಖ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನಗರದ ಎಂಜಿ ಮಾರ್ಕೆಟ್‌ನಲ್ಲಿ ಕಟ್ಟಿಗೆ ಒಲೆಗಳ ಬೇಡಿಕೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಈ ಹಿಂದೆ ಯಾರೂ ಖರೀದಿಸದ ಕಟ್ಟಿಗೆ ಒಲೆಗಳಿಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಹೋಟೆಲ್ ಮಾಲೀಕರು ಸಾಲುಗಟ್ಟಿ ನಿಂತು ಖರೀದಿ ಮಾಡುತ್ತಿದ್ದಾರೆ. ಬಹುತೇಕ ಹೋಟೆಲ್‌ಗಳು ಮುಚ್ಚುವ ಸ್ಥಿತಿ ತಲುಪಿದ್ದು, ಕನಿಷ್ಠ ಕಟ್ಟಿಗೆ ಒಲೆಯನ್ನಾದರೂ ಬಳಸಿ ವ್ಯವಹಾರ ಮುಂದುವರಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ಹರಸಾಹಸ

ಕೆಲವರಂತೂ ಎಂತೆಂಥಾ ಸಾಹಸಗಳನ್ನು ಮಾಡ್ತಾರಪ್ಪ, ರೈಲಿನ ಮೆಟ್ಟಿಲುಗಳ ಮೇಲೆ ನಿಲ್ಲುವುದು, ರೈಲಿನ ಮೇಲೆ ಹತ್ತಿ ಅಲ್ಲಿ ವಿಡಿಯೋ ಮಾಡುವುದು, ದುಸ್ಸಾಹಸಗಳೇ ಹೆಚ್ಚು. ಆದರೆ ಈ ವಿಡಿಯೋ ಅಂತಾ ಅಪಾಯಕಾರಿಸಾಹಸವೇನಲ್ಲ. ರೈಲಿನ ಕಿಟಕಿಯಿಂದ ಎಳನೀರು ಒಳಗೆಳೆಯಲು ವ್ಯಕ್ತಿಯೊಬ್ಬ ಹರಸಾಹಸಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಸೀಟಿನಲ್ಲಿ ವ್ಯಕ್ತಿ ಮತ್ತೆ ಅವರ ಪತ್ನಿ ಕುಳಿತಿದ್ದಾರೆ, ರೈಲಿನ ಕಿಟಕಿಯ ಹೊರಭಾಗದಿಂದ ಸ್ಟ್ರಾ ಹಾಕಿರುವ ಎಳನೀರನ್ನು ಕಿಟಕಿಯ ಸರಳುಗಳ ಮಧ್ಯೆ ಒಳಗೆಳೆದುಕೊಳ್ಳುವ ಭಾರಿ ಸಾಹಸ ಮಾಡಿ ಗೆದ್ದಿದ್ದಾರೆ. ಆದರೆ ಸ್ಟ್ರಾ ಇದ್ದ ಕಾರಣ ಅಲ್ಲಿಂದಲೇ ಎಳನೀರು ಕುಡಿಯಲೂ ಬಹುದಿತ್ತು.ಆದರೆ ಈ ಸಾಹಸ ಮಾಡಿದ್ದಾದರೂ ಏಕೆ ಎಂಬುದರ ಕುರಿತು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತ್ಯೇಕ ರಸ್ತೆ ಅಪಘಾತ: ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಸಾವು; ಮತ್ತೋರ್ವಳ ಸ್ಥಿತಿ ಗಂಭೀರ

ಯಾದಗಿರಿ/ಬೆಂಗಳೂರು, ಮಾರ್ಚ್​​ 12: ರಾಜ್ಯದ ಯಾದಗಿರಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಮೃತಪಟ್ಟಿದ್ದು, ಮತ್ತೋರ್ವಳು ಗಂಭೀರ ಗಾಯಗೊಂಡಿದ್ದಾಳೆ. ಯಾದಗಿರಿಯಲ್ಲಿ ಕ್ರೂಸರ್​ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್​​ ಸವಾರರು ಮೃತಪಟ್ಟಿದ್ದರೆ, ಇತ್ತ ಬೆಂಗಳೂರಲ್ಲಿ ಟಿಪ್ಪರ್​ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಹ ಸವಾರಳ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೈಕ್​​ಗೆ ಡಿಕ್ಕಿಯಾಗಿ ಕ್ರೂಸರ್​​ ಪಲ್ಟಿ

ಪಲ್ಟಿಯಾಗಿರುವ ಕ್ರೂಸರ್​​ ವಾಹನ

ಕ್ರೂಸರ್ ಹಾಗೂ ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಬಳಿ ನಡೆದಿದೆ. ಬೈಕ್​​ಗೆ ಗುದ್ದದ ಬಳಿಕ ನಿಯಂತ್ರಣ ತಪ್ಪಿ ಕ್ರೂಸರ್​​ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಮೃತ ವ್ಯಕ್ತಿಗಳು ಶಹಾಪುರ ತಾಲೂಕಿನ ಗೋಗಿ ಗ್ರಾಮದವರು ಎಂಬುದು ಗೊತ್ತಾಗಿದ್ದು, ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣ; ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಟಿಪ್ಪರ್​ಗೆ ದ್ವಿಚಕ್ರ ವಾಹನ ಡಿಕ್ಕಿ

ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಟಿಪ್ಪರ್​​ಗೆ ದ್ವಿಚಕ್ರ ವಾಹನ​ ಡಿಕ್ಕಿಯಾಗಿ ವೈದ್ಯ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕೃತಿಕಾ(21) ಸ್ಥಳದಲ್ಲೇ ಪ್ರಾಣಬಿಟ್ಟಿದ್ದರೆ, ಹಂಸ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ಸಂಜೆ ಕಾಲೇಜು ಮುಗಿಸಿ ಕೃತಿಕಾ ಮತ್ತು ಹಂಸ ತೆರಳುತ್ತಿದ್ದರು.  ಈ ವೇಳೆ ಅವಘಾತ ನಡೆದಿದ್ದು, ಸವಾರರು ನೆಲಕ್ಕೆ ಬಿದ್ದಿದ್ದಾರೆ.  ಟಿಪ್ಪರ್​ ಹರಿದ ಪರಿಣಾಮ ಕೃತಿಕಾ ದುರ್ಮರಣ ಹೊಂದಿದ್ದರೆ, ಗಂಭೀರ ಗಾಯಗೊಂಡ ಹಂಸಗೆ ಆರ್​ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆ ಎಕ್ಸಿಟ್ ಗೇಟ್​​ನಲ್ಲಿ ಘಟನೆ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿಗೆ ಡಿಕ್ಕಿ ಆಗಿ ಅಪಘಾತ ನಡೆದಿದೆ. ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಕೃತಿಕಾ ಮೃತಪಟ್ಟಿದ್ದರೆ, ವಾಹನ ಚಲಾಯಿಸುತ್ತಿದ್ದ ಮತ್ತೋರ್ವಳಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಹಿಂದೂ ಧರ್ಮದ ನಂಬಿಕೆಯಂತೆ ಯುಗಾದಿಯು ಸೃಷ್ಟಿಯ ಆರಂಭದ ದಿನ ಹಾಗೂ ಹೊಸ ವರ್ಷದ ಮುನ್ನುಡಿ. ಈ ಬಾರಿ ಅಂದರೆ 2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಅಂದು ಮುಂಜಾನೆಯ ಶುಭ ಮುಹೂರ್ತಗಳಾದ ಬೆಳಿಗ್ಗೆ 5:00 ರಿಂದ 7:30 ಅಥವಾ 9:00 ರಿಂದ 11:30 ರ ಅವಧಿಯಲ್ಲಿ ದೈವಿಕ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಯುಗಾದಿ ಹಬ್ಬದಂದು ಏನು ಮಾಡಬೇಕು?

ಈ ಶುಭ ದಿನದ ಆಚರಣೆಯು ಶಿಸ್ತು ಮತ್ತು ಭಕ್ತಿಯಿಂದ ಕೂಡಿದೆ. ಹಬ್ಬದ ಮುನ್ನಾದಿನವೇ ಮನೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುವುದು ವಾಡಿಕೆ. ಹಬ್ಬದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲೇ ಎದ್ದು, ಮನೆಯ ಮುಂಭಾಗದಲ್ಲಿ ಮಾವಿನ ಎಲೆ ಮತ್ತು ಹೂವುಗಳ ತೋರಣವನ್ನು ಕಟ್ಟಿ ಶೃಂಗರಿಸಬೇಕು. ಮೈಗೆ ಎಳ್ಳೆಣ್ಣೆಯನ್ನು ಹಚ್ಚಿ, ಅರಿಶಿನ ಬೆರೆಸಿದ ಪವಿತ್ರ ನೀರಿನಲ್ಲಿ ಅಭ್ಯಂಜನ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಶುದ್ಧೀಕರಣದ ಸಂಕೇತವಾಗಿದೆ. ಸ್ನಾನದ ನಂತರ ಹೊಸ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕವನ್ನಿಟ್ಟು ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಆಧುನಿಕ ಯುಗದಲ್ಲಿ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದರೂ, ಸಾಂಪ್ರದಾಯಿಕ ರಂಗೋಲಿ ಮತ್ತು ತಳಿರು ತೋರಣಗಳ ಮೆರುಗು ಇಂದಿಗೂ ಕಡಿಮೆಯಾಗಿಲ್ಲ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಯುಗಾದಿ ಹಬ್ಬದಂದು ಏನು ಮಾಡಬಾರದು?

ಹೊಸ ವರ್ಷದ ಮೊದಲ ದಿನ ನಾವು ಮಾಡುವ ಕೆಲಸಗಳು ಇಡೀ ವರ್ಷದ ಮೇಲೆ ಪ್ರಭಾವ ಬೀರುತ್ತವೆ ಎಂಬ ಗಾಢವಾದ ನಂಬಿಕೆಯಿದೆ. ಆದ್ದರಿಂದ ಈ ದಿನದಂದು ಕೆಲವು ತಪ್ಪುಗಳನ್ನು ಮಾಡದಂತೆ ಜಾಗರೂಕರಾಗಿರಬೇಕು. ವಿಶೇಷವಾಗಿ ಯಾರೊಂದಿಗೂ ವಾದ-ವಿವಾದ ಅಥವಾ ಜಗಳಗಳಲ್ಲಿ ತೊಡಗಬಾರದು. ಇಂದು ಹಣಕಾಸಿನ ಸಾಲ ನೀಡುವ ಅಥವಾ ಪಡೆಯುವ ವ್ಯವಹಾರಗಳಿಂದ ದೂರವಿರುವುದು ವರ್ಷವಿಡೀ ಆರ್ಥಿಕ ಸ್ಥಿರತೆಗೆ ಒಳ್ಳೆಯದು. ಆಹಾರದ ವಿಚಾರದಲ್ಲಿ ಈ ದಿನ ಮಾಂಸಾಹಾರ ಮತ್ತು ಮದ್ಯಪಾನದಂತಹ ತಾಮಸಿಕ ವಸ್ತುಗಳನ್ನು ತ್ಯಜಿಸಿ ಸಾತ್ವಿಕತೆಯನ್ನು ಪಾಲಿಸಬೇಕು. ಉಗುರು ಅಥವಾ ಕೂದಲು ಕತ್ತರಿಸುವುದು ಹಾಗೂ ಹರಿದ ಬಟ್ಟೆಗಳನ್ನು ಧರಿಸುವುದು ಈ ಪವಿತ್ರ ದಿನದಂದು ನಿಷಿದ್ಧವೆಂದು ಪರಿಗಣಿಸಲಾಗಿದೆ. ಜೀವನದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾದ ಬೇವು-ಬೆಲ್ಲವನ್ನು ಸವಿಯುತ್ತಾ, ಈ ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸುವುದು ಹಬ್ಬದ ನಿಜವಾದ ಆಶಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು: 3 ವರ್ಷದ ಜೈಲು ಶಿಕ್ಷೆ ಭೀತಿ

ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ.  ಮಾರ್ಚ್ 8 ರಂದು  ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಬಳಸಿದ ರೀತಿ ವಿವಾದಕ್ಕೆ ಕಾರಣವಾಗಿದೆ.

ದೂರು ನೀಡಿದ್ದು ಯಾರು?

ಫೈನಲ್​ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಈ ಹಿನ್ನಲೆಯಲ್ಲಿ  ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ.

ಪಾಂಡ್ಯ ವಿರುದ್ಧದ ಆರೋಪವೇನು?

ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಮೈಮೇಲೆ ಸುತ್ತಿಕೊಂಡು ಮೈದಾನದಲ್ಲಿ ಮಲಗಿದ್ದಾರೆ. ಅಲ್ಲದೆ
ಸಂಭ್ರಮಾಚರಣೆಯ ವೇಳೆ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗೆ ಪೋಡಿಯಂ ಮೇಲೆ ಮಲಗಿದ್ದಾಗಲೂ ರಾಷ್ಟ್ರಧ್ವಜವನ್ನು ಮೈಮೇಲೆ ಧರಿಸಿದ್ದರು. ಇದು ಧ್ವಜಕ್ಕೆ ಮಾಡಿದ ಅಗೌರವ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಷ್ಟ್ರ ಧ್ವಜ ಸುತ್ತಿ ಮಲಗಿದ್ದ ಹಾರ್ದಿಕ್ ಪಾಂಡ್ಯ

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ (1971) ರ ಅಡಿಯಲ್ಲಿ, ರಾಷ್ಟ್ರಧ್ವಜವನ್ನು ವಸ್ತ್ರದಂತೆ ಬಳಸಬಾರದು ಮತ್ತು ಅದು ನೆಲಕ್ಕೆ ತಾಗಿಸಬಾರದು ಎಂಬ ನಿಯಮವಿದೆ. ಪಾಂಡ್ಯ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ದೂರುದಾರರ ವಕೀಲ ವಾಜಿದ್ ಖಾನ್ ತಿಳಿಸಿದ್ದಾರೆ.

ಸದ್ಯ ಪುಣೆ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ (FIR) ದಾಖಲಿಸುವ ಬಗ್ಗೆ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ.

ಈ ಆರೋಪ ಸಾಬೀತಾದರೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.

ಭಾರತದ ರಾಷ್ಟ್ರಧ್ವಜದ ನಿಯಮಗಳು:

  • ನೆಲಕ್ಕೆ ತಾಗಬಾರದು: ಧ್ವಜವು ಎಂದಿಗೂ ನೆಲಕ್ಕೆ ಅಥವಾ ನೀರಿಗೆ ತಾಗಬಾರದು.
  • ತಲೆಕೆಳಗಾಗಿ ಹಾರಿಸಬಾರದು: ಕೇಸರಿ ಬಣ್ಣ ಯಾವಾಗಲೂ ಮೇಲಿರಬೇಕು. ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವುದು ಅಪರಾಧ.
  • ಹರಿದ ಧ್ವಜ: ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸಬಾರದು. ಅಂತಹ ಧ್ವಜವನ್ನು ಗೌರವಯುತವಾಗಿ (ಖಾಸಗಿಯಾಗಿ ಸುಡುವ ಮೂಲಕ) ವಿಲೇವಾರಿ ಮಾಡಬೇಕು.
  • ಉಡುಪಾಗಿ ಬಳಸಬಾರದು: ರಾಷ್ಟ್ರಧ್ವಜವನ್ನು ಯಾವುದೇ ರೀತಿಯ ಸಮವಸ್ತ್ರ, ಉಡುಪು ಅಥವಾ ಮೈಮೇಲೆ ಸುತ್ತಿಕೊಳ್ಳುವ ವಸ್ತ್ರವಾಗಿ ಬಳಸಬಾರದು.
  • ಕುಷನ್ ಅಥವಾ ಪರ್ದೆ: ಧ್ವಜವನ್ನು ದಿಂಬುಗಳು, ಕರವಸ್ತ್ರಗಳು ಅಥವಾ ಯಾವುದೇ ಪೀಠೋಪಕರಣಗಳ ಮೇಲೆ ಮುದ್ರಿಸಬಾರದು ಅಥವಾ ಅಲಂಕಾರಕ್ಕೆ ಬಳಸಬಾರದು.
  • ಸೊಂಟದ ಕೆಳಗೆ: ಧ್ವಜದ ಚಿತ್ರವಿರುವ ಯಾವುದೇ ವಸ್ತುವನ್ನು ಸೊಂಟದ ಕೆಳಗೆ ಧರಿಸುವಂತಿಲ್ಲ.
  • ಬರವಣಿಗೆ: ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯಬಾರದು ಅಥವಾ ಚಿತ್ರ ಬಿಡಿಸಬಾರದು.
  • ಜಾಹೀರಾತು: ಧ್ವಜವನ್ನು ಯಾವುದೇ ವಾಣಿಜ್ಯ ಉದ್ದೇಶದ ಜಾಹೀರಾತಿಗೆ ಬಳಸುವಂತಿಲ್ಲ.
  • ವಸ್ತುಗಳನ್ನು ಸುತ್ತುವುದು: ಧ್ವಜದ ಒಳಗೆ ಯಾವುದೇ ವಸ್ತುಗಳನ್ನು ಇಟ್ಟು ಕಟ್ಟಿ ಸಾಗಿಸಬಾರದು (ಹೂವಿನ ದಳಗಳನ್ನು ಹೊರತುಪಡಿಸಿ, ಧ್ವಜಾರೋಹಣದ ಸಮಯದಲ್ಲಿ ಮಾತ್ರ ಅನುಮತಿ ಇದೆ).

ಶಿಕ್ಷೆಯ ಪ್ರಮಾಣ:

ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಇದನ್ನೂ ಓದಿ: ಫೋನ್ ರಿಪೇರಿಯಿಂದ ಬಯಲಾಗಿತ್ತು ಪಾಕ್ ಆಟಗಾರರ ಕಳ್ಳಾಟ!

ಪುಣೆ ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಮುಖ್ಯವಾಗಿ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ರ  ಅಡಿಯಲ್ಲಿ ಕ್ರಮ ಜರುಗಿಸಲು ಕೋರಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ದೋಷಿ ಎಂದು ಸಾಬೀತಾದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದು.

 

Source link

ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಮಾದರಿಯ ರೋಗದ ಸೋಂಕು! ಬಚಾವಾಗೋದು ಹೇಗೆ?

ಬೆಂಗಳೂರು, ಮಾರ್ಚ್​ 12: ರಾಜ್ಯದಲ್ಲಿ ಲೆಪ್ಟೋಸ್ಪೈರೋಸಿಸ್ (Leptospirosis) ಸೋಂಕಿನ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಯಲ್ಲಿ ಆತಂಕ ಎಬ್ಬಿಸಿದೆ.

ವರ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ 2020ರಲ್ಲಿ 544 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 906 ಪ್ರಕರಣಗಳು ಕಂಡುಬಂದಿವೆ. ಬಳಿಕ 2022ರಲ್ಲಿ 3,174 ಪ್ರಕರಣಗಳು, 2023ರಲ್ಲಿ 5,404 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 5,088 ಪ್ರಕರಣಗಳು ವರದಿಯಾಗಿದ್ದು, 2025ರಲ್ಲಿ ಈ ಸಂಖ್ಯೆ 6,525ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಮಾತ್ರವೇ 19 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.

ಲೆಪ್ಟೋಸ್ಪೈರೋಸಿಸ್ ಎಂದರೆ ಏನು?

ಲೆಪ್ಟೋಸ್ಪೈರೋಸಿಸ್ ಒಂದು ಝೂನೋಟಿಕ್ ಬ್ಯಾಕ್ಟೀರಿಯಾ ಸೋಂಕಾಗಿದ್ದು, ಸೋಂಕಿತ ಪ್ರಾಣಿಗಳ ಮೂತ್ರದ ಸಂಪರ್ಕದಿಂದ ಅಥವಾ ಅದರಿಂದ ಮಾಲಿನ್ಯಗೊಂಡ ನೀರು ಮತ್ತು ಮಣ್ಣಿನ ಸಂಪರ್ಕದಿಂದ ಹರಡುತ್ತದೆ. ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿರುವುದರಿಂದ ಇದನ್ನು ಡೆಂಗ್ಯೂ ಅಥವಾ ಮಲೇರಿಯಾ ಎಂದು ತಪ್ಪಾಗಿ ಗುರುತಿಸುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕು ತಗುಲಿದ ನಂತರ ಸಾಮಾನ್ಯವಾಗಿ 2 ರಿಂದ 14 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಆರಂಭಿಕ ಲಕ್ಷಣಗಳು

  • ಜ್ವರ
  • ತೀವ್ರ ತಲೆನೋವು
  • ದೇಹ ನೋವು, ವಿಶೇಷವಾಗಿ ಕಾಲು ಮತ್ತು ಬೆನ್ನು ಭಾಗದಲ್ಲಿ
  • ಚಳಿ ಅಥವಾ ನಡುಕ
  • ವಾಂತಿ ಅಥವಾ ಅಸ್ವಸ್ಥತೆ
  • ಕಣ್ಣು ಕೆಂಪಾಗುವುದು
  • ದೌರ್ಬಲ್ಯ ಮತ್ತು ದೇಹ ಸೊರಗು
  • ಹೊಟ್ಟೆ ನೋವು

ಗಂಭೀರ ಲಕ್ಷಣಗಳು

  • ಮೂತ್ರಪಿಂಡ ಸಮಸ್ಯೆ (ಕಿಡ್ನಿ ಫೇಲ್ಯರ್)
  • ಯಕೃತ್ ಹಾನಿಯಿಂದ ಕಾಮಳೆ (ಜಾಂಡಿಸ್)
  • ಉಸಿರಾಟದ ತೊಂದರೆ ಅಥವಾ ಶ್ವಾಸಕೋಶ ಸಮಸ್ಯೆಗಳು
  • ಮೆದುಳಿನ ಸೋಂಕು (ಮೆನಿಂಜೈಟಿಸ್)
  • ಒಳರಕ್ತಸ್ರಾವ

ಹೇಗೆ ತಡೆಗಟ್ಟಬಹುದು?

  • ನೆರೆ ನೀರು ಅಥವಾ ಕಲುಷಿತ ನೀರಿನಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಬೇಕು.
  • ಕೃಷಿ ಕೆಲಸ ಅಥವಾ ಕಸ ವಿಲೇವಾರಿ ಮಾಡುವಾಗ ಬೂಟು, ಕೈಗವಸು ಧರಿಸಬೇಕು.
  • ಕಲುಷಿತ ನೀರಿನ ಸಂಪರ್ಕದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು.
  • ಗಾಯ ಅಥವಾ ಕತ್ತರಿದ ಜಾಗಗಳನ್ನು ಮುಚ್ಚಿಕೊಂಡಿರಬೇಕು.
  • ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಇಲಿಗಳ ನಿಯಂತ್ರಣ ಮಾಡಬೇಕು.
  • ಶುದ್ಧವಾದ ನೀರನ್ನೇ ಕುಡಿಯಬೇಕು.
  • ಕಲುಷಿತ ನೀರಿನ ಸಂಪರ್ಕದ ನಂತರ ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ ಪ್ರತಿದಿನ ಮಲ್ಟಿವಿಟಮಿನ್ ತೆಗೆದುಕೊಳ್ಳುವುದು ನಿಜವಾಗಿಯೂ ಒಳ್ಳೆಯದೇ? ಏನ್ ಹೇಳ್ತಾರೆ ವೈದ್ಯರು?

ರೋಗದ ಈ ಎಲ್ಲಾ ಲಕ್ಷಣಗಳ ಹೊರತಾಗಿಯೂ ಸರಿಯಾದ ನಿರ್ಧಾರಕ್ಕೆ ಲ್ಯಾಬ್ ಪರೀಕ್ಷೆಗಳು ಅಗತ್ಯ. ಐಜಿಎಂ ಎಲಿಸಾ ಪರೀಕ್ಷೆ ಮೂಲಕ ಆರಂಭಿಕ ತಪಾಸಣೆ ನಡೆಸಲಾಗುತ್ತದೆ. ಮೈಕ್ರೋಸ್ಕೋಪಿಕ್ ಅಗ್ಗ್ಲುಟಿನೇಶನ್ ಟೆಸ್ಟ್ (MAT) ಮುಖ್ಯ ಪರೀಕ್ಷೆಯಾಗಿದ್ದು, ವಿಶೇಷ ಪ್ರಯೋಗಾಲಯಗಳಲ್ಲಿ ನಡೆಸಲಾಗುತ್ತದೆ. ಆರಂಭಿಕ ಹಂತದಲ್ಲಿ ಪಿಸಿಆರ್ ಪರೀಕ್ಷೆಯಿಂದ ಬ್ಯಾಕ್ಟೀರಿಯಾ ಡಿಎನ್‌ಎ ಪತ್ತೆ ಮಾಡಬಹುದು. ಚಿಕಿತ್ಸೆ ವಿಳಂಬವಾದರೆ ಈ ಸೋಂಕು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link