All posts by nagaraj11081993

ಕರ್ನಾಟಕದ ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಎದುರಾಯ್ತು ಗ್ಯಾಸ್ ಸಮಸ್ಯೆ

ಕರ್ನಾಟಕದ ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಎದುರಾಯ್ತು ಗ್ಯಾಸ್ ಸಮಸ್ಯೆ

ಬೆಂಗಳೂರು, (ಮಾರ್ಚ್ 11): ಅಮೆರಿಕ –ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ, ಭಾರತದಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಗಣನೀಯವಾಗಿ ಇಳಿಕೆ ಕಂಡಿದೆ. ದೇಶದ ಹಲವು ನಗರಗಳಲ್ಲಿ ಎಲ್‍ಪಿಜಿ ಸಿಲಿಂಡರ್‌ಗಳ (LPG cylinders) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವುದರ ಜತೆಗೆ ವಿತರಣೆಯಲ್ಲಿ ತಾತ್ಕಾಲಿಕ ಅಡಚಣೆ ಎದುರಾಗುತ್ತಿದೆ. ಕೇವಲ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲ ಕರ್ನಾಟಕದ ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಸಹ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದೆ.

ಈ ಬಗ್ಗೆ ಖುದ್ದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನಸೌಧದಲ್ಲಿ ಇಂದು (ಮಾರ್ಚ್ 11) ಮಾತನಾಡಿದ್ದು, ರಾಜ್ಯದ 15 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಸದನದಲ್ಲಿ ಚರ್ಚೆ ಆಯ್ತು. ಪ್ರಸಾದ ವಿನಿಯೋಗಕ್ಕೆ ಉಂಟಾಗುತ್ತಿರುವ ಸಮಸ್ಯೆ ಚರ್ಚೆ ಮಾಡಿದ್ವಿ. ತೊಂದರೆ ಆಗದಂತೆ ನೋಡಿಕೊಳ್ಳಲು ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ದೇಗುಲಕ್ಕೆ ಬಂದು ಪ್ರಸಾದ ಸ್ವೀಕರಿಸಿದರೆ ಮಾತ್ರ ಭಕ್ತರಿಗೆ ಸಮಾಧಾನ. ಹೀಗಾಗಿ ಕಡಿಮೆ ಇಂಧನ ಬಳಸಿ ಪ್ರಸಾದ ತಯಾರಿಕೆ ಬಗ್ಗೆ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿ ಮುಂದೆ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Source link

ಹರೀಶ್ ರಾಣಾ ದಯಾಮರಣದ ತೀರ್ಪಿಗೆ ಅಡಿಪಾಯ ಹಾಕಿತ್ತು ಅರುಣಾ ಶಾನಭಾಗ್ ಕೇಸ್; ಏನಿದು ಪ್ರಕರಣ?

ನವದೆಹಲಿ, ಮಾರ್ಚ್ 11: ಆತ ಉತ್ತರ ಪ್ರದೇಶದ ಸ್ಪುರದ್ರೂಪಿ ಯುವಕ. ಹೆಸರು ಹರೀಶ್ ರಾಣಾ. ಎಂಜಿನಿಯರಿಂಗ್ ಓದುತ್ತಿದ್ದ ಅವರು 2003ರಲ್ಲಿ 4ನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಕೋಮಾದಲ್ಲಿದ್ದರು. 13 ವರ್ಷಗಳಿಂದ ಕೋಮಾದಲ್ಲಿದ್ದ ಅವರು ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇರಲಿಲ್ಲ. ಹೀಗಾಗಿ, ಅವರ ತಂದೆ-ತಾಯಿ ತಮ್ಮ ಮಗನಿಗೆ ದಯಾಮರಣ ನೀಡಬೇಕೆಂದು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ದಯಾಮರಣವೆಂದರೆ ಆ ವ್ಯಕ್ತಿಯ ಜೀವ ಉಳಿಸಲು ನೀಡಲಾಗುತ್ತಿರುವ ಎಲ್ಲ ಚಿಕಿತ್ಸೆ, ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದುಹಾಕುವುದು. ಕೊನೆಗೂ ಹರೀಶ್ ರಾಣಾ ಅವರ ಪೋಷಕರ ಮನವಿಗೆ ಅಸ್ತು ಎಂದ ಕೋರ್ಟ್ ಹರೀಶ್ ರಾಣಾ ದಯಾಮರಣಕ್ಕೆ ಒಪ್ಪಿಗೆ ನೀಡಿದೆ. ಭಾರತದ ದಯಾಮರಣ ಕಾನೂನಿನಲ್ಲಿ ಹಲವು ಬದಲಾವಣೆಗಳನ್ನು ತಂದ ಕೆಲವು ಪ್ರಕರಣಗಳಲ್ಲಿ ಮುಖ್ಯವಾದುದು ಅರುಣಾ ಶಾನಭಾಗ್ ((Aruna Shanbaug) ಕೇಸ್. ಇದು ಭಾರತದ ದಯಾಮರಣದ ಮೊದಲ ಪ್ರಕರಣ.

ಇದೀಗ ಹರೀಶ್ ರಾಣಾ ಅವರ ಪ್ರಕರಣವು ಮತ್ತೊಮ್ಮೆ “ಘನತೆಯಿಂದ ಸಾಯುವ ಹಕ್ಕು” ಎಂದೂ ಕರೆಯಲ್ಪಡುವ ದಯಾಮರಣ ಕುರಿತು ಭಾರತದ ಕಾನೂನು ಚರ್ಚೆಗೆ ಕಾರಣವಾಗಿದೆ. ಅವರ ಪ್ರಕರಣದ ಅಂತಿಮ ನಿರ್ಧಾರವು ಹಿಂದಿನ ಎರಡು ಪ್ರಮುಖ ಕಾನೂನು ಬೆಳವಣಿಗೆಗಳಾದ ಅರುಣಾ ಶಾನ್‌ಭಾಗ್ ಪ್ರಕರಣ ಮತ್ತು ಕಾಮನ್ ಕಾಸ್ ತೀರ್ಪಿನಿಂದ ಪ್ರಭಾವಿತವಾಗಿದೆ.

ಇದನ್ನೂ ಓದಿ: 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ಸುಪ್ರೀಂ ಕೋರ್ಟ್ ಎರಡು ಮಹತ್ವದ ತೀರ್ಪುಗಳ ಮೂಲಕ ದಯಾಮರಣಕ್ಕೆ ಅನುಮತಿ ನೀಡಿದೆ. ಮೊದಲನೆಯದು 2011ರ ಅರುಣಾ ಶಾನ್‌ಭಾಗ್ ಪ್ರಕರಣ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರೂಪದ ಸಂದರ್ಭಗಳಲ್ಲಿ ದಯಾಮರಣವನ್ನು ಕಾನೂನುಬದ್ಧವೆಂದು ಗುರುತಿಸಿತು. ಇನ್ನೊಂದು 2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ.

ಅರುಣಾ ಶಾನಭಾಗ್ ಯಾರು?:

ಅರುಣಾ ಶಾನ್‌ಭಾಗ್ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ನವೆಂಬರ್ 27, 1973ರಂದು ಆಸ್ಪತ್ರೆಯ ಸೆಕ್ಯುರಿಟಿಗಳಿಂದ ಅತ್ಯಾಚಾರಕ್ಕೊಳಗಾದ ಅವರ ಕುತ್ತಿಗೆಯನ್ನು ಸರಪಳಿಯಿಂದ ಬಿಗಿಯಲಾಗಿತ್ತು. ಇದಾದ ನಂತರ ಅವರು 37 ವರ್ಷಗಳ ಕಾಲ ನಿರಂತರ ಕೋಮಾದಲ್ಲಿಯೇ ಇದ್ದರು. ಸೆಕ್ಯುರಿಟಿ ಅರುಣಾ ಶಾನ್‌ಬಾಗ್ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ನಾಯಿ ಸರಪಳಿಯಿಂದ ಅವರ ಕತ್ತು ಹಿಸುಕಿದ್ದ. ಅವರ ಕತ್ತು ಹಿಸುಕಿದಾಗ, ಅದು ಅವರ ಮೆದುಳಿಗೆ ಆಮ್ಲಜನಕವನ್ನು ಕಡಿತಗೊಳಿಸಿತು. ಈ ದಾಳಿಯು ಅವರ ಮೆದುಳಿಗೆ ಹಾನಿಯನ್ನುಂಟುಮಾಡಿತು. ಇದರಿಂದ ಅವರು ಪಾರ್ಶ್ವವಾಯುವಿಗೆ ಒಳಗಾದರು. ಕಣ್ಣು ಕಾಣದಂತಾಯಿತು, ಕಿವಿ ಕೇಳದಂತಾಯಿತು.

 

ಕೆಇಎಂ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಅವರನ್ನು ನೋಡಿಕೊಂಡರು. ಟ್ಯೂಬ್ ಮೂಲಕ ಅವರಿಗೆ ಆಹಾರವನ್ನು ನೀಡುತ್ತಿದ್ದರು. ಅರುಣಾ ಶಾನಭಾಗ್ ಆ ಆಸ್ಪತ್ರೆಯ ಮಗಳಂತಾಗಿದ್ದರು. ಅರುಣಾ ಅವರನ್ನು ಮದುವೆಯಾಗಬೇಕಿದ್ದ ಯುವಕ ಅವರಿಗೆ ದಯಾಮರಣ ನೀಡಬೇಕೆಂದು ಮನವಿ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅರುಣಾ ಶಾನ್‌ಬಾಗ್‌ಗೆ ಆಹಾರ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಆದರೆ, ಆಕೆಯ ಜೀವವನ್ನು ಕೊನೆಗೊಳಿಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಇದನ್ನೂ ಓದಿ: ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಅರುಣಾ ಶಾನ್‌ಭಾಗ್ ಪ್ರಕರಣದಲ್ಲಿ ಹಲವು ದಶಕಗಳಿಂದ ಅವರನ್ನು ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಯನ್ನು ನಿಲ್ಲಿಸುವುದನ್ನು ಬೆಂಬಲಿಸಲಿಲ್ಲ. ಈ ಕಾರಣದಿಂದಾಗಿ, ನ್ಯಾಯಾಲಯವು ಅವರಿಗೆ ದಯಾಮರಣವನ್ನು ಅನುಮತಿಸದಿರಲು ನಿರ್ಧರಿಸಿತು. ಆದರೂ, ಈ ತೀರ್ಪು ಐತಿಹಾಸಿಕವಾಗಿತ್ತು. ಏಕೆಂದರೆ ಇದು ಭಾರತದಲ್ಲಿ ಮೊದಲ ಬಾರಿಗೆ ನಿಷ್ಕ್ರಿಯ ದಯಾಮರಣಕ್ಕೆ ಬಾಗಿಲು ತೆರೆಯಿತು. ಚೇತರಿಕೆ ಅಸಾಧ್ಯವಾದಾಗ ರೋಗಿಗಳು ಘನತೆಯಿಂದ ಸಾಯುವ ಹಕ್ಕನ್ನು ಹೊಂದಿರಬೇಕೇ ಎಂಬ ಬಗ್ಗೆ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿತು. 2015ರಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಕೋಮಾ ಸ್ಥಿತಿಯಲ್ಲಿ ಕಳೆದ ನಂತರ ಅವರು ನಿಧನರಾದರು.

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದರೂ ಈ ತೀರ್ಪು ಭಾರತ ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿ ಪರಿಣಮಿಸಿತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ರಿಯ ದಯಾಮರಣ (ಕಾನೂನುಬಾಹಿರ) ಮತ್ತು ನಿಷ್ಕ್ರಿಯ ದಯಾಮರಣದ ನಡುವೆ ಕಾನೂನು ವ್ಯತ್ಯಾಸವನ್ನು ಮಾಡಲಾಯಿತು.

2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನಿಷ್ಕ್ರಿಯ ದಯಾಮರಣವನ್ನು ಔಪಚಾರಿಕವಾಗಿ ಕಾನೂನುಬದ್ಧಗೊಳಿಸಿತು. ನ್ಯಾಯಾಲಯವು “ಘನತೆಯಿಂದ ಸಾಯುವ ಹಕ್ಕು” ಆರ್ಟಿಕಲ್ 21 (ಜೀವನದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಈ ತೀರ್ಪು ಲಿವಿಂಗ್ ವಿಲ್‌ಗಳನ್ನು ಪರಿಚಯಿಸಿತು. ಇದು ವ್ಯಕ್ತಿಗಳು ತಮ್ಮ ಜೀವಿತಾವಧಿಯ ಅಂತ್ಯದ ಆಸೆಗಳನ್ನು ಮುಂಚಿತವಾಗಿ ದಾಖಲಿಸಲು ಅನುವು ಮಾಡಿಕೊಡುತ್ತದೆ.

2023ರಲ್ಲಿ ಸುಪ್ರೀಂ ಕೋರ್ಟ್ ಈ ಮಾರ್ಗಸೂಚಿಗಳನ್ನು ಸರಳಗೊಳಿಸಿತು. ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಮುಖ್ಯ ಅವಶ್ಯಕತೆಗಳು ಹೀಗಿವೆ.

– ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಮಂಡಳಿ ಮತ್ತು ದ್ವಿತೀಯ ಮಂಡಳಿಯು ರೋಗಿಗೆ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಪ್ರಮಾಣೀಕರಿಸಬೇಕು.

– ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬದಲಿಗೆ, ಲಿವಿಂಗ್ ವಿಲ್ ಅನ್ನು ಈಗ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬಹುದು.

– ರೋಗಿಯು ಒಪ್ಪಿಗೆ ನೀಡಲು ಸಾಧ್ಯವಾಗದಿದ್ದರೆ, ನಿಕಟ ಸಂಬಂಧಿ ಅಥವಾ ಕಾನೂನು ಪಾಲಕರಂತಹ ವ್ಯಕ್ತಿಗಳು ಓ ಪ್ರಕ್ರಿಯೆಯನ್ನು ತೆಗೆದುಕೊಳ್ಳಬಹುದು. ಆದರೆ, ಇದು ವೈದ್ಯಕೀಯ ಮತ್ತು ನ್ಯಾಯಾಂಗ ಅಧಿಸೂಚನೆಗೆ ಒಳಪಟ್ಟಿರಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ

ಯಾದಗಿರಿ, ಮಾರ್ಚ್​​ 11: ಜಿಲ್ಲೆಯ ಭೂಗರ್ಭದಲ್ಲಿ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಚಿನ್ನ ಸೇರಿದಂತೆ ವಿವಿಧ ಖನಿಜ ನಿಕ್ಷೇಪಗಳ ಪತ್ತೆಗಾಗಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಇಂದಿನಿಂದ ಜಿಲ್ಲೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಈ ಸಮೀಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಹೆಲಿಕಾಪ್ಟರ್ ಮೂಲಕ ಆಕಾಶದಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಮತ್ತು ಎಲ್ಹೇರಿ ಭಾಗಗಳಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಯುತ್ತಿದೆ. ಆಕಾಶದಲ್ಲಿ ನಿರಂತರವಾಗಿ ಹೆಲಿಕಾಪ್ಟರ್ ಹಾರುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಈ ಸಮೀಕ್ಷಾ ಕಾರ್ಯವನ್ನು ನಡೆಸಲು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸಮಾಧಾನ ಸ್ಫೋಟ: ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ರಾಜೀನಾಮೆ

ಹುಬ್ಬಳ್ಳಿ (ಮಾರ್ಚ್ 11): ಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ್ (Lingaraj Patil) ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಲಿಂಗರಾಜ ಪಾಟೀಲ್​, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ (Karnataka BJP disciplinary committee chairman ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಎಸ್.ವಿ. ಸಂಕನೂರ ಅವರಿಗೆ ನೀಡಲಾಗಿದೆ, ಇದರಿಂದ ಅಸಮಾಧಾನಗೊಂಡಿರುವ ಲಿಂಗರಾಜ ಪಾಟೀಲ್ , ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದು,  ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ನನ್ನನ್ನು ಕಡೆಗಣಿಸಿ ಎಸ್.ವಿ.ಸಂಕನೂರು ಅವರಿಗೆ ಟಿಕೆಟ್ ನೀಡಿದ್ದರಿಂದ ನೋವಾಗಿದೆ. ಹೀಗಾಗಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎಂದು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಇದನ್ನೂ ಒದಿ: ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜೆಡಿಎಸ್​​ಗೆ 1 ಸೀಟು!

ಬಿಜೆಪಿಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆಯಿಲ್ಲ ಎನ್ನುವುದು ದೃಢವಾಗಿದೆ. ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಈ ಮೂಲಕ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ. 37 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ. ಇದನ್ನು ಗುರುತಿಸದೇ ಪಕ್ಷ ಹೊರಗಿನಿಂದ ಬಂದವರಿಗೆ ಮಣೆ ಹಾಕಿ ಟಿಕೆಟ್ ನೀಡಿದ್ದು, ಸಾಕಷ್ಟು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ. ನನಗೆ ಟಿಕೆಟ್ ಸಿಗುವ ಭರವಸೆ ಇದ್ದು, ಎಂಟು ದಿನಗಳವರೆಗೆ ಕಾದು ನೋಡುತ್ತೇನೆ. ಅವಕಾಶ ಸಿಗದಿದ್ದರೆ ಬೇರೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು. ಈ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೆಕೆಯೆಂದು ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು: ಸಾವಲ್ಲೂ ಒಂದಾದ ಆಪ್ತ ಸ್ನೇಹಿತರು

ಹುಬ್ಬಳ್ಳಿ, ಮಾರ್ಚ್​ 11: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ಎಲ್ಲಿಯಾದ್ರು ನೀರು ಕಂಡ್ರೆ ಸಾಕು ಅಲ್ಲಿ ಸ್ವಲ್ಪ ಹೊತ್ತು ಆಟವಾಡಿ, ರಿಲ್ಯಾಕ್ಸ್ ಆಕಬೇಕು ಎಂದು ಬಯಸುತ್ತಿದ್ದಾರೆ. ಆದ್ರೆ ನಿಮ್ಮ ಮಕ್ಕಳು ಈ ರೀತಿಯಾಗಿ ಹೋಗ್ತಿದ್ದರೆ ಅವರ ಬಗ್ಗೆ ಸ್ವಲ್ಪ ಎಚ್ಚರವಹಿಸೋದು ಉತ್ತಮ. ಯಾಕಂದ್ರೆ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಬೈರಿದೇವರಕೊಪ್ಪದಲ್ಲಿರುವ ರೇಣುಕಾ ನಗರದ ಸಮರ್ಥ್ ಮತ್ತು ಹರೀಶ್ ಎಂಬ ಹದಿನೇಳು ವರ್ಷದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು,ಇವರು ಅಕ್ಕ-ಪಕ್ಕದ ಮನೆಯ ನಿವಾಸಿಗಳು. ಗೋಪನಕೊಪ್ಪ ಬಳಿಯಿರೋ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಇವರು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ಬಿಸಿಲು ಹೆಚ್ಚಾಗಿರೋದರಿಂದ ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ಹೋಗಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಬಂದಿರಲಿಲ್ಲ. ಈ ನಡುವೆ ಇವರು ಹೊಂಡದಲ್ಲಿ ಮುಳುಗಿರೋದನ್ನು ಗಮನಿಸಿರುವ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಿಟ್​​ ಆ್ಯಂಡ್​​ ರನ್​​ ಕೇಸ್​​ಗೆ ಟ್ವಿಸ್ಟ್​; KSRTC ಬಸ್​​ ಡ್ಯಾಶ್​​ ಕ್ಯಾಮರಾದಿಂದ ರಿವೀಲ್​​ ಆಯ್ತು ಸ್ಫೋಟಕ ಸತ್ಯ

ಇನ್ನು ಈ ಇಬ್ಬರಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲವಂತೆ. ಹೀಗಿದ್ದರೂ ಹುಚ್ಚು ಸಾಹಸ ಮಾಡಿ ಈಜಲು ಹೋದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಮನೆಗೆ ಆಧಾರವಾಗಿದ್ದ ಏಕೈಕ ಗಂಡು ಮಕ್ಕಳ ಅಕಾಲಿಕ ನಿಧನ ಹೆತ್ತವರನ್ನು ಆಘಾತಕ್ಕೆ ದೂಡಿದೆ. ಶವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಸಂಬಂಧಿಕರ ಆಕ್ರಂದನ ಕಲ್ಲು ಹೃದಯವನ್ನೂ ಕರಗಿಸುವಂತೆ ಕಂಡುಬಂದಿದ್ದು, ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಸಿಲು ಎಂದು ಸಿಕ್ಕ ಸಿಕ್ಕಲ್ಲಿ ಈಜಲು ಹೋದ್ರೆ ಸಂಕಷ್ಟ ಎದುರಾಗೋ ಸಾಧ್ಯತೆಯಿದ್ದು, ಮಕ್ಕಳು ಮತ್ತು ಯುವಕರು ಈ ಬಗ್ಗೆ ಜಾಗೃತರಾಗಿರಬೇಕು. ಜೊತೆಗೆ ಹೆತ್ತವರು ಕೂಡಾ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಮೇಲೆ ಕಣ್ಣೀರು ಹಾಕಿದರೆ ಯಾವುದೇ ಪ್ರಯೋಜನವಾಗಲಾರದು ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ

ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ವಿವಾಹದ ಸಂಭ್ರಮ ಜೋರಾಗಿತ್ತು. ಇತ್ತೀಚೆಗಷ್ಟೇ ಈ ಜೋಡಿಯು ತಮ್ಮ ಮೆಹಂದಿ ಶಾಸ್ತ್ರದ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಖುಷಿಯ ನಡುವೆಯೇ ರಶ್ಮಿಕಾ ತೊಟ್ಟಿದ್ದ ಉಡುಪಿನ ವಿನ್ಯಾಸ ಈಗ ವಿವಾದಕ್ಕೆ ಕಾರಣವಾಗಿದೆ. ಲಕ್ಷ್ಮಿ ದೇವಿಯ ಚಿತ್ರವಿರುವ ಉಡುಪು ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಪ್ಪಟ ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮತ್ತು ವಿಜಯ್ ಹಂಚಿಕೊಂಡ ಫೋಟೋಗಳಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಆದರೆ ಅವರು ತೊಟ್ಟಿದ್ದ ಉಡುಪಿನ ಮೇಲೆ ಲಕ್ಷ್ಮಿ ದೇವಿಯ ಚಿತ್ರ ಇರುವುದನ್ನು ಗಮನಿಸಿದ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವತೆಗಳ ಚಿತ್ರಗಳನ್ನು ಉಡುಪಿನ ಕೆಳಭಾಗದಲ್ಲಿ ಅಥವಾ ಸೊಂಟದ ಭಾಗದಲ್ಲಿ ಬಳಸುವುದು ದೇವರಿಗೆ ಮಾಡುವ ಅಪಮಾನ ಎಂದು ಕೆಲವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಳಕೆದಾರರು, ‘ದೇವರು ಮತ್ತು ದೇವತೆಗಳು ನಿಮ್ಮ ಉಡುಪಿಗಾಗಿ ಇರುವವರಲ್ಲ. ಇದೊಂದು ಅತ್ಯಂತ ಕೆಟ್ಟ ಡ್ರೆಸ್’ ಎಂದು ಕಮೆಂಟ್ ಮಾಡಿದ್ದಾರೆ. ‘ದೇವಿಯ ಚಿತ್ರವಿರುವ ಬಟ್ಟೆಯನ್ನು ಕಾಲಿನ ಹತ್ತಿರ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುವುದು ದೇವತೆಗೆ ಮಾಡುವ ಅಗೌರವ’ ಎಂದು ಮತ್ತೊಬ್ಬರು, ಆಕ್ಷೇಪಿಸಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ.

ರಶ್ಮಿಕಾ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಇದು ಕೇವಲ ಒಂದು ಫ್ಯಾಷನ್. ರಶ್ಮಿಕಾ ಅವರು ಈ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ವಿನಾಕಾರಣ ಟೀಕೆ ಮಾಡುವ ಅಗತ್ಯವಿಲ್ಲ’ ಎಂದು ಅಭಿಮಾನಿಗಳು ನಟಿಯ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಮದುವೆಗೆ ಕರೆದಿಲ್ಲ ಅಂತ ಕೋಪ ಮಾಡಿಕೊಂಡ ರಶ್ಮಿಕಾ, ವಿಜಯ್ ಅಭಿಮಾನಿ

‘ಭಾರತೀಯ ಕಲ್ಪನೆಯಲ್ಲಿ, ವಧುವಿನ ಆಗಮನವನ್ನು ಹೆಚ್ಚಾಗಿ ಸಮೃದ್ಧಿ, ಸೌಂದರ್ಯ ಮತ್ತು ಹೊಸ ಆರಂಭದ ದೇವತೆಯಾದ ಲಕ್ಷ್ಮಿ ದೇವಿಯ ಆಗಮನಕ್ಕೆ ಹೋಲಿಸಲಾಗುತ್ತದೆ. ಆಕೆಯ ಉಪಸ್ಥಿತಿಯು ಹೊಸ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಾಮರಸ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಇದೇ ಭಾವನೆಯು ರಶ್ಮಿಕಾ ಮಂದಣ್ಣ ಅವರ ಉಡುಪಿನ ವಿನ್ಯಾಸಕ್ಕೆ ಪ್ರಮುಖ ಪ್ರೇರಣೆ ಮತ್ತು ಭಾವನಾತ್ಮಕ ಆಧಾರವಾಯಿತು’ ಎಂದು ಈ ಬಟ್ಟೆಯನ್ನು ವಿನ್ಯಾಸ ಮಾಡಿದ ಕಂಪನಿ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?

2026ರ ಪರಾಭವನಾಮ ಸಂವತ್ಸರದ ಯುಗಾದಿಯಂದು ಮೀನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯವರಿಗೆ ಶನಿ ಸಾಡೇ ಸಾತಿಯ ಗರ್ಭ ಭಾಗ ನಡೆಯುತ್ತಿದ್ದು, ಗುರು ನಾಲ್ಕರಿಂದ ಐದಕ್ಕೆ, ಶನಿ ಒಂದರಲ್ಲಿ, ರಾಹು 12ರಿಂದ 11ರಲ್ಲಿ ಮತ್ತು ಕೇತು ಆರರಿಂದ ಐದರಲ್ಲಿ ಇರುತ್ತಾರೆ. ಆದಾಯ 14 ಮತ್ತು ವ್ಯಯ 7 ಇರಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದರೂ ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಇರುತ್ತದೆ.

ಸರ್ಕಾರಿ ಉದ್ಯೋಗ, ವ್ಯಾಪಾರ, ಪಾಲುದಾರಿಕೆ ಹಾಗೂ ಉದ್ಯೋಗದಲ್ಲಿ ಶುಭ ಫಲಗಳಿವೆ. ಆದರೆ ಮಕ್ಕಳ ಚಿಂತೆ ಮತ್ತು ಅಪವಾದಗಳ ಕುರಿತು ಜಾಗ್ರತೆಯಾಗಿರಲು ಸಲಹೆ ನೀಡಲಾಗಿದೆ. ಕಾನೂನು ವಿಷಯಗಳಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು. ದೈವಾನುಗ್ರಹಕ್ಕಾಗಿ ದೇವಿಯ ಮೊರೆ ಹೋಗುವುದು ಮತ್ತು ಶ್ರೀರಾಮ ಸ್ತೋತ್ರ ಪಠಿಸುವುದು ಶುಭಕರ. ಮೀನ ರಾಶಿಯವರಿಗೆ ಈ ವರ್ಷ ಶೇ. 65 ರಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕೊಪ್ಪಳ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ: ಕಾರ್ಖಾನೆಗಳಿಗೆ ಬೀಗ ಫಿಕ್ಸ್

ಕೊಪ್ಪಳ, ಮಾರ್ಚ್​​ 11: ಜಿಲ್ಲೆಯ ಜನತೆಗೆ ಈಗ ಉಸಿರಾಡುವುದೇ ದೊಡ್ಡ ಸಾಹಸವಾಗಿದೆ. ಕಾರ್ಖಾನೆಗಳು (Factory) ಹೊರಸೂಸುವ ವಿಷಕಾರಿ ಹೊಗೆಗೆ ರೋಸಿ ಹೋಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ. ನಿಯಮ ಉಲ್ಲಂಘಿಸಿದ 5 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, 3 ಕಾರ್ಖಾನೆಗಳಿಗೆ ಬೀಗ ಬೀಳುವುದು ಫಿಕ್ಸ್ ಆಗಿದೆ. ಕಪ್ಪು ಹೊಗೆ ಉಗಳೋ ಕಾರ್ಖಾನೆಗಳು ಬಹುತೇಕ ಬಂದ್ ಆಗೋ ಸಾಧ್ಯತೆ ಇದೆ. ಕಾರ್ಖಾನೆಗಳು ಬಂದ್ ಆಗಿದ್ದೆ ನಿಜವಾದರೆ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಗವಿಸಿದ್ದೇಶ್ವರನ ನಾಡು ಕೊಪ್ಪಳದಲ್ಲಿ ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ತಲೆಯೆತ್ತಿರುವ ಬೃಹತ್ ಕಾರ್ಖಾನೆಗಳು, ಮತ್ತೊಂದು ಕಡೆ ಆ ಕಾರ್ಖಾನೆಗಳು ಕಾರುತ್ತಿರುವ ವಿಷಕಾರಿ ಹೊಗೆ. ಹಗಲು ಹೊತ್ತಿನಲ್ಲೇ ಇಲ್ಲಿನ ಆಕಾಶ ಕಪ್ಪಾಗಿ ಕಾಣುತ್ತಿದೆ. ಜನರ ಶ್ವಾಸಕೋಶಕ್ಕೆ ಗಾಳಿಯ ಬದಲು ವಿಷಕಾರಿ ಕೆಮಿಕಲ್ ಮಿಶ್ರಿತ ಧೂಳು ಸೇರುತ್ತಿದೆ. ಸ್ಥಳೀಯರ ಮನೆಯ ಅಂಗಳ, ಕುಡಿಯುವ ನೀರು, ರೈತರು ಬೆಳೆದ ಬೆಳೆಗಳ ಮೇಲೂ ಕಪ್ಪು ಬಣ್ಣದ ಬೂದಿ ಕುಳಿತುಕೊಳ್ಳುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಸ್ತಮಾ, ಚರ್ಮ ವ್ಯಾಧಿ ಮತ್ತು ಉಸಿರಾಟದ ತೊಂದರೆಗಳು ಕಾಡುತ್ತಿವೆ.

ಇದನ್ನೂ ಓದಿ: ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್​​ ನಿಶ್ಚಿತ; ಶಾಸಕ ಎಚ್ಚರಿಕೆ

ವರ್ಷಗಳಿಂದ ಮನವಿ ಮಾಡಿದರೂ ಕೇಳದ ಅಧಿಕಾರಿಗಳ ವಿರುದ್ಧ ಜನತೆ ಈಗ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಜನರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಸಕರು, ಡಿಸಿ ಸಭೆ ಮಾಡಿದ್ದಾರೆ. ಎಲ್ಲವೂ ಇದೆ, ಆದರೆ ಆರೋಗ್ಯ ಇಲ್ಲ ಎಂದು ಹಿರಿಯರೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಶೋಕಾಸ್ ನೋಟಿಸ್ ಜಾರಿ: 3 ಫ್ಯಾಕ್ಟರಿಗಳ ಬಂದ್​​ಗೆ ಆದೇಶ

ಜನರ ಆಕ್ರೋಶಕ್ಕೆ ಬೆದರಿದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ, ಕೊನೆಗೂ ಕಾರ್ಯಾಚರಣೆಗೆ ಇಳಿದಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ 5 ಪ್ರಮುಖ ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲ, ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಮಾಲಿನ್ಯ ಹರಡುತ್ತಿದ್ದ 3 ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಿಷ್ಟು 

ನಾವು ನಿರಂತರವಾಗಿ ಮಾನಿಟರ್ ಮಾಡುತ್ತಿದ್ದೇವೆ. ಯಾವ ಕಾರ್ಖಾನೆಗಳು ಫಿಲ್ಟರ್ ಬಳಸದೆ ಹೊಗೆ ಬಿಡುತ್ತವೆಯೋ ಅವುಗಳ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈಗಾಗಲೆ 3 ಫ್ಯಾಕ್ಟರಿಗಳಿಗೆ ಕ್ಲೋಸರ್ ಆರ್ಡರ್ ನೀಡಿದ್ದೇವೆ ಎಂದು ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿರುವ ಪಿಬಿಕೆಎಸ್, ಇಸ್ಪಾತ್, ವನ್ಯ ಸ್ಟೀಲ್ ಒಂದು ಎರಡು, ಹೆಆರ್​ಜಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಮೂರು ಕಾರ್ಖಾನೆಗಳ ತಪಾಸಣೆ ಮುಗದಿದ್ದು, ಎರಡು ಕಾರ್ಖಾನೆಗೆ ಕ್ಲೋಸರ್ ನೋಟಿಸ್​ ನೀಡಲಾಗಿದೆ. ಇನ್ನೊಂದು ಕೂಡ ಕ್ಲೋಸ್ ಆಗಲಿದೆ ಎನ್ನುತ್ತಿದ್ದಾರೆ ಡಿಸಿ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ

ಕೈಗಾರಿಕೆಗಳು ಬೇಕು, ಆದರೆ ಜನರ ಜೀವ ಬಲಿ ಕೊಟ್ಟು ಅಲ್ಲ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿ. ಆದರೆ ಈ ನೋಟಿಸ್ ಮತ್ತು ಬಂದ್ ಕೇವಲ ಕಣ್ಣೊರೆಸುವ ತಂತ್ರವಾಗಬಾರದು ಎಂಬುದು ಕೊಪ್ಪಳ ಜಿಲ್ಲೆಯ ಜನರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ತೆಲುಗು ರಾಜ್ಯಗಳಲ್ಲಿ ಫ್ಯಾನ್ಸ್ ವಾರ್​​ಗಳು ಸಾಮಾನ್ಯ. ಕರ್ನಾಟಕಕ್ಕೆ ಹೋಲಿಸಿದರೆ ತುಸು ಹೆಚ್ಚೇ ಎನ್ನಬಹುದು. ಮೆಗಾಸ್ಟಾರ್ ಅಭಿಮಾನಿಗಳು ಮತ್ತು ನಂದಮೂರಿ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್​​ಗೆ ದಶಕಗಳ ಇತಿಹಾಸವಿದೆ. ಇವುಗಳ ನಡುವೆ ಜೂ ಎನ್​​ಟಿಆರ್ vs ಪವನ್ ಕಲ್ಯಾಣ್, ಪವನ್ ಕಲ್ಯಾಣ್ (Pawan Kalyan) vs ಮಹೇಶ್ ಬಾಬು ಹೀಗೆ ಬೇರೆ ಬೇರೆ ಫ್ಯಾನ್ಸ್ ವಾರ್​​ಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವೆ ಕಿರಿಕ್ ಶುರುವಾಗಿದೆ. ಇದಕ್ಕೆ ಕಾರಣ ಆಗಿರುವುದು ಪವನ್ ಕಲ್ಯಾಣ್ ಅವರ ಆಪ್ತ ನಿರ್ದೇಶಕರೊಬ್ಬರ ಟ್ವೀಟ್.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19 ರಂದು ‘ಧುರಂಧರ್ 2’ ಸಿನಿಮಾದ ಎದುರು ಅದು ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಪವನ್ ಕಲ್ಯಾಣ್​​ರ ಆಪ್ತ ನಿರ್ದೇಶಕರುಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ಮಹೇಶ್ ಬಾಬು ಸಿನಿಮಾಗಳ ರೆಕಾರ್ಡ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬ್ರೇಕ್ ಮಾಡಬೇಕು ಎಂದಿದ್ದ. ಮಹೇಶ್ ಬಾಬು ಎಂದು ನೇರವಾಗಿ ಹೆಸರು ಬಳಸುವ ಬದಲಿಗೆ ಮಹೇಶ್ ಬಾಬು ಅಡ್ಡ ಹೆಸರಾದ ‘ಬಾಬ್’ ಎಂದು ಬರೆದಿದ್ದ. ಆ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿದ್ದ ಹರೀಶ್ ಶಂಕರ್ ‘ತಥಾಸ್ತು’ ಎಂದಿದ್ದರು. ಆ ಮೂಲಕ ಮಹೇಶ್ ಬಾಬು ರೆಕಾರ್ಡ್​​ಗಳನ್ನು ಬ್ರೇಕ್ ಮಾಡುತ್ತೇನೆ ಎಂದಿದ್ದರು. ಹರೀಶ್ ಶಂಕರ್ ಅವರ ಈ ಟ್ವೀಟ್ ಮಹೇಶ್ ಅಭಿಮಾನಿಗಳನ್ನು ಕೆರಳಿಸಿದೆ.

ಆದರೆ ಶೀಘ್ರವೇ ತಮ್ಮ ತಪ್ಪು ತಿಳಿದುಕೊಂಡ ಹರೀಶ್ ಶಂಕರ್ ಕೂಡಲೇ ತಮ್ಮ ‘ತಥಾಸ್ತು’ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಲ್ಲದೆ, ತಾವು ಟ್ವೀಟ್​​ ಅನ್ನು ಪೂರ್ಣವಾಗಿ ಓದದೆ ಹಾಗೂ ಸರಿಯಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟ್​​ನಿಂದ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದರೆ ಕ್ಷಮೆ ಕೇಳುವುದಾಗಿ ಸಹ ಹರೀಶ್ ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

ಟಾಲಿವುಡ್ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಅವರು ತಮ್ಮ ಮುಂಬರುವ ಚಿತ್ರ ‘ಉಸ್ತಾದ್ ಭಗತ್ ಸಿಂಗ್’ (ಪವನ್ ಕಲ್ಯಾಣ್ ನಟನೆಯ ಸಿನಿಮಾ) ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ಒಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅವರು ಮಹೇಶ್ ಬಾಬು ಮತ್ತು ಅವರ ಅಭಿಮಾನಿಗಳಿಗೆ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಟ್ವೀಟ್ ಮಾಡಿರುವ ಹರೀಶ್ ಶಂಕರ್, ‘ಸೆನ್ಸಾರ್ ಮಂಡಳಿ ಅಧಿಕಾರಿಗಳ ಭೇಟಿ, ಪೆದ್ದಮ್ಮ ದೇವಸ್ಥಾನದ ದರ್ಶನ ಮತ್ತು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಾನು ತುಂಬಾ ಬ್ಯುಸಿಯಾಗಿದ್ದೆ. ಆ ಹಡಬಡಿಕೆಯಲ್ಲಿ ಅಭಿಮಾನಿಗಳ ಶುಭಾಶಯಗಳಿಗೆ ಪ್ರತಿಕ್ರಿಯಿಸುವಾಗ, ಟ್ವೀಟ್ ಅನ್ನು ಪೂರ್ತಿಯಾಗಿ ಓದದೆ ಕೇವಲ ಮೊದಲ ಅರ್ಧ ಭಾಗವನ್ನು ನೋಡಿ ‘ತಥಾಸ್ತು’ ಎಂದು ಉತ್ತರಿಸಿದ್ದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೇಲೆ ನನಗೆ ಅಪಾರ ಗೌರವವಿದೆ. ರಾಜಮೌಳಿ-ಮಹೇಶ್ ಬಾಬು ಅವರ ‘ವಾರಣಾಸಿ’ ಸಿನಿಮಾ ದೊಡ್ಡ ದಾಖಲೆ ಬರೆಯಲಿದೆ ಎಂಬ ನಂಬಿಕೆ ನನಗಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಸಿನಿಮಾ ಬಿಡುಗಡೆಗೆ ಕೇವಲ 10 ದಿನಗಳಿರುವಾಗ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವಷ್ಟು ಅಜ್ಞಾನಿ ನಾನಲ್ಲ. ತಿಳಿಯದೇ ಮಾಡಿದ ಈ ತಪ್ಪಿಗೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ತನಿಖೆ ವೇಳೆ ಸಿಸಿಟಿವಿ ರಹಸ್ಯ ಬಯಲು

ಬೆಂಗಳೂರು, ಮಾರ್ಚ್​​ 11: ನಗರದ ಅಮೃತಹಳ್ಳಿಯ ವಿಲ್ಲಾದಲ್ಲಿ ಕಾಲೇಜು ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸ್​​ ತನಿಖೆ ವೇಳೆ ಬಗೆದಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಲೇ ಇವೆ. ಬೆಂಗಳೂರಿನ ಬೇರೆ ಬೇರೆ ಕಡೆ, ಗೋವಾ ಮತ್ತು ವಿದೇಶದಲ್ಲಿಯೂ ಆರೋಪಿಗಳು ಪಾರ್ಟಿ ನಡೆಸಿದ್ದು, ಈ ವೇಳೆ ಡ್ರಗ್ಸ್​​ ಬಳಸಿರೋದು ದೃಢಪಟ್ಟಿದೆ. ಆರೋಪಿಗಳ ಮೆಡಿಕಲ್ ಟೆಸ್ಟ್ ವರದಿಯೂ ಪಾಸಿಟಿವ್​​ ಬಂದಿದ್ದು, ಗೋವಾದಿಂದ ಇವರಿಗೆ ಮಾದಕ ವಸ್ತು ಸರಬರಾಜಾಗಿತ್ತು ಎಂಬ ವಿಷಯವೂ ಪೊಲೀಸರಿಗೆ ಗೊತ್ತಾಗಿದೆ.

ಸಿಸಿಟಿವಿ ದೃಶ್ಯಗಳು ಪತ್ತೆ

ಗ್ಯಾಂಗ್​​ ರೇಪ್​​ ನಡೆದಿರುವ ಅಮೃತಹಳ್ಳಿಯ ವಿಲ್ಲಾಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಡಿವಿಆರ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪಾರ್ಟಿಯಲ್ಲೇ ಇದ್ದರು ಎಂಬುದು ದೃಢಪಟ್ಟಿದ್ದು, ಸದ್ಯ ಆರೋಪಿಗಳ ಚಹರೆ ಮ್ಯಾಚ್ ಮಾಡಲು ಸಿಸಿಟಿವಿ ದೃಶ್ಯವಳಿಗಳನ್ನು FSLಗೆ ರವಾನೆ ಮಾಡಲಾಗಿದೆ. ಇನ್ನು ಈ ವಿಲ್ಲಾದಲ್ಲಿ ಎಷ್ಟು ದಿನ ಪಾರ್ಟಿ ನಡೆದಿತ್ತು? ಪಾರ್ಟಿಗೆ ಯಾರು ಯಾರು ಬಂದಿದ್ದರು? ಎಂಬ ಬಗ್ಗೆಯೂ ತನಿಖೆ ನಡೆದಿದೆ. ಗುತ್ತಿಗೆದಾರನಾಗಿದ್ದ ಆರೋಪಿ ಅನಿರುದ್​​ ಪಾರ್ಟಿಗೆ ತಗಲುವ ವೆಚ್ಚವನ್ನು ಭರಿಸಿದ್ದ. ಆತನೇ ವಿಲ್ಲಾ ಬುಕ್​​ ಮಾಡಿದ್ದ ಎಂಬುದು ಪತ್ತೆಯಾಗಿರುವ ಹಿನ್ನೆಲೆ ಆತ ಈ ಹಿಂದೆ ಯಾವೆಲ್ಲ ವಿಲ್ಲಾಗಳನ್ನು ಬುಕ್​​ ಮಾಡಿದ್ದ ಎಂಬ ಪರಿಶೀಲನೆಗೆ ಖಾಕಿ ಮುಂದಾಗಿದೆ.

ಇದನ್ನೂ ಓದಿ: ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು; ವ್ಯಕ್ತಿ ಬದುಕಿದ್ದೇ ಪವಾಡ!

ಆರೋಪಿಗಳನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದು, ಆರೋಪಿಗಳ ಆದಾಯದ ಮೂಲ ಪತ್ತೆಗೂ ಪೊಲೀಸರು ಮುಂದಾಗಿದ್ದಾರೆ. ಡಿಕ್ಸನ್ ಮತ್ತು ಶ್ರವಣ್ ಹುಡುಗಿಯರನ್ನು ಪಟಾಯಿಸಿ ಪಾರ್ಟಿಗೆ ಕರೆಸುತ್ತಿದ್ದರು. ಇವರಿಬ್ಬರಿಗೂ ಕಾಲೇಜು ಹುಡುಗಿಯರ ಪಟಾಯಿಸಲು ಖರ್ಚಾಗುವ ಹಣವನ್ನು ನಿಖಿಲ್ ಮತ್ತು ಅನಿರುದ್ ನೀಡುತ್ತಿದ್ದರು ಎನ್ನಲಾಗಿದೆ. ಬಳಿಕ ಯುವತಿಯರನ್ನು ವಿಲ್ಲಾಗೆ ಕರೆತಂದು ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಗೋವಾದಿಂದ ಎಕ್ಸ್‌ಟೆಸಿ ಮಾತ್ರೆಗಳನ್ನು ತರಿಸಿಕೊಂಡು, ಅವುಗಳನ್ನು ಯುವತಿಯರಿಗೆ ನೀಡಿ ಮತ್ತು ಬರುವಂತೆ ಮಾಡುತ್ತಿದ್ದರು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರ ಮೇಲೆ ಈ ಗ್ಯಾಂಗ್ ಅತ್ಯಾಚಾರ ಎಸಗುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link