ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆಕಾಶ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಈ ಸೀಸನ್ನಲ್ಲಿ ಮೊದಲ ಪಂದ್ಯವನ್ನಾಡಿದ ಆಕಾಶ್ ಸಿಕ್ಕ ಅವಕಾಶವನ್ನು ಸ್ಮರಣೀಯವಾಗಿಸಿದರು. ಆಕಾಶ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮ ಆರಂಭ ಪಡೆದರು. ನಂತರ, ತಮ್ಮ ಎರಡನೇ ಓವರ್‌ನಲ್ಲಿ, ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ, ಸೀಸನ್ನ ಮೊದಲ ವಿಕೆಟ್ ಪಡೆದರು.
ವಿಕೆಟ್ ಪಡೆದ ನಂತರ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ ಆಕಾಶ್ ತಮ್ಮ ಜೇಬಿನಿಂದ ಒಂದು ಕಾಗದದ ತುಣುಕನ್ನು ಹೊರತೆಗೆದರು, ಅದರಲ್ಲಿ “ಅಕ್ಕಿ ಆನ್ ಫೈಯರ್! ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂಬುದು ಆಕಾಶ್ಗೆ ಗೊತ್ತು ಎಂದು ಬರೆಯಲಾಗಿತ್ತು. ನಂತರ, ಮೂರನೇ ಓವರ್‌ನಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಎರಡನೇ ವಿಕೆಟ್ ಪಡೆದರು. ಆಗಲೂ ಸಹ ಮತ್ತದೇ ಕಾಗದದ ತುಣುಕನ್ನು ಹೊರ ತೆಗೆದು ಆಚರಿಸಿದರು.
ಪವರ್‌ಪ್ಲೇ ನಂತರವೂ ಬೌಲಿಂಗ್ ಮುಂದುವರೆಸಿದ ಆಕಾಶ್ ಸಿಂಗ್ ತಮ್ಮ ಸತತ ನಾಲ್ಕನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಅವರು ಉರ್ವಿಲ್ ಪಟೇಲ್ ಅವರನ್ನು ಸಹ ಔಟ್ ಮಾಡಿದರು. ಇದರರ್ಥ ಅವರು 4 ಓವರ್‌ಗಳಲ್ಲಿ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು, ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಪೆಲ್ ಆಗಿದೆ.
ನವದೆಹಲಿ, ಮೇ 15: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ (Justice Surya Kant) ಇಂದು ನಿರುದ್ಯೋಗಿ ಯುವಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರುದ್ಯೋಗಿ ಯುವಕರು ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಹಿರಿಯ ವಕೀಲ ಹುದ್ದೆಯನ್ನು ಬಯಸುತ್ತಿರುವ ವಕೀಲರನ್ನು ತರಾಟೆಗೆ ತೆಗೆದುಕೊಂಡಾಗ ಈ ಹೇಳಿಕೆಗಳು ಬಂದವು.
ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆಗಳು ಬಂದವು. ಹಿರಿಯ ವಕೀಲ ಹುದ್ದೆಗಾಗಿ ಆಕ್ರಮಣಕಾರಿಯಾಗಿ ವರ್ತಿಸಿದ್ದಕ್ಕಾಗಿ ನ್ಯಾಯಾಲಯವು ಅರ್ಜಿದಾರರ ವಕೀಲರನ್ನು ಖಂಡಿಸಿತು. ಅವರು ಫೇಸ್‌ಬುಕ್‌ನಲ್ಲಿ ಬಳಸಿದ್ದಾರೆ ಎನ್ನಲಾದ ಭಾಷೆ ಸೇರಿದಂತೆ ಅವರ ನಡವಳಿಕೆಯನ್ನು ಪ್ರಶ್ನಿಸಿತು.
“ದೇಶದಲ್ಲಿ ಜಿರಳೆಗಳಂತೆ ಯುವಕರು ಇದ್ದಾರೆ. ಅವರಲ್ಲಿ ಬಹುತೇಕರು ನಿರುದ್ಯೋಗಿಗಳು. ಅವರಿಗೆ ಇಂಥದ್ದೇ ಅಂತ ಒಂದು ವೃತ್ತಿ ಇರುವುದಿಲ್ಲ. ಅವರಿಗೆ ವೃತ್ತಿಯಲ್ಲಿ ಯಾವುದೇ ಸ್ಥಾನವಿರುವುದಿಲ್ಲ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಕೆಲವರು ಸಾಮಾಜಿಕ ಮಾಧ್ಯಮ, ಆರ್‌ಟಿಐ ಕಾರ್ಯಕರ್ತರು ಮತ್ತು ಇತರ ಕಾರ್ಯಕರ್ತರಾಗುತ್ತಾರೆ. ಆ ಪ್ಲಾಟ್ಫಾರ್ಮ್ಗಳ ಮೂಲಕ ಅವರು ಎಲ್ಲರ ಮೇಲೂ ದಾಳಿ ಮಾಡಲು ಪ್ರಾರಂಭಿಸುತ್ತಾರೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯೂರಿನ್ ಇನ್ಫೆಕ್ಷನ್ (ಮೂತ್ರನಾಳದ ಸೋಂಕು) ಸಾಮಾನ್ಯ ಸಮಸ್ಯೆಯಾದರೂ, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆರಂಭದಲ್ಲಿ ಕೇವಲ ಮೂತ್ರ ವಿಸರ್ಜನೆಯಾಗುವಾಗ ಉರಿಯೂತ ಅಥವಾ ಪದೇಪದೇ ಮೂತ್ರಕ್ಕೆ ಹೋಗುವ ಸಮಸ್ಯೆಯಂತೆ ಕಾಣಿಸಿದರೂ, ಸೋಂಕು ಹೆಚ್ಚಾದರೆ ಕಿಡ್ನಿಗೂ ಹಾನಿಯಾಗುವ ಅಪಾಯವಿದೆ. ತಜ್ಞರ ಪ್ರಕಾರ, ಯೂರಿನ್ ಇನ್ಫೆಕ್ಷನ್ (Urine Infection) ಸಾಮಾನ್ಯವಾಗಿ ಇ.ಕೋಲಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾ ಮೂತ್ರನಾಳದ ಮೂಲಕ ದೇಹಕ್ಕೆ ಪ್ರವೇಶಿಸಿ ಸೋಂಕು ಉಂಟುಮಾಡುತ್ತದೆ. ವೈಯಕ್ತಿಕ ಸ್ವಚ್ಛತೆಯ ಕೊರತೆ, ಕಡಿಮೆ ನೀರು ಕುಡಿಯುವುದು, ಅಸ್ವಚ್ಛ ಶೌಚಾಲಯ ಬಳಕೆ ಹಾಗೂ ಅನಗತ್ಯವಾಗಿ ಆಂಟಿಬಯೋಟಿಕ್ ಸೇವಿಸುವುದರಿಂದ ಈ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಈ ಸಮಸ್ಯೆ ಯಾವಾಗ ಅಪಾಯಕಾರಿಯಾಗಬಹುದು, ಈ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿ?
ಸೋಂಕು ಕೇವಲ ಮೂತ್ರಾಶಯದವರೆಗೆ ಸೀಮಿತವಾಗಿದ್ದರೆ ಸಾಮಾನ್ಯವಾಗಿ ಗಂಭೀರ ಸಮಸ್ಯೆಯಾಗುವುದಿಲ್ಲ. ಆದರೆ ಅದು ಕಿಡ್ನಿವರೆಗೆ ಹರಡಿದರೆ ಪರಿಸ್ಥಿತಿ ಗಂಭೀರವಾಗಬಹುದು. ದೀರ್ಘಕಾಲ ಸೋಂಕು ಮುಂದುವರಿದರೆ ಕಿಡ್ನಿ ಕಾರ್ಯಕ್ಷಮತೆ ಕುಸಿಯುವ ಅಪಾಯವೂ ಇದೆ. ತೀವ್ರ ಜ್ವರ, ಶೀತ, ವಾಂತಿ, ಮೂತ್ರದಲ್ಲಿ ರಕ್ತದ ಗುರುತು ಕಾಣಿಸುವುದು ಅಥವಾ ಬೆನ್ನುನೋವು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು.
ಸರಿಯಾಗಿ ನೀರು ಕುಡಿಯುವುದು, ಮೂತ್ರವನ್ನು ಹೆಚ್ಚು ಸಮಯ ತಡೆಯದೇ ಇರುವುದು ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ಸೇವಿಸಬಾರದು. ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ರಾಮನಗರ, (ಮೇ 15): ಪರಿಚಿತರ ಅಪ್ರಾಪ್ತ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ಬಳಿಕ ಆ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಆನ್‌ಲೈನ್ ಗೆ ಅಪ್ಲೋಡ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರ (Ramanagara) ಸೆನ್ ಪೊಲೀಸರು ಬಂಧಿಸಿದ್ದಾರೆ. ಕಗ್ಗಲಿಪುರದ ಕಿರಣ್ ಕುಮಾರ್ ಹಾಗೂ ಆದಿತ್ಯ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎನ್‌ಸಿಆರ್‌ಪಿ ಪೋರ್ಟಲ್‌ನ ಟಿಫ್‌ಲೈನ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೃಶ್ಯಾವಳಿ (ಸಿಎಸ್‌ಎಎಂ) ಕುರಿತು ಸಿಐಡಿಗೆ ಮಾಹಿತಿ ಬಂದಿತ್ತು. ಈ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್.
ಇಬ್ಬರು ಆರೋಪಿಗಳನ್ನ ಬಂಧಿಸಿದ ರಾಮನಗರ ಸೆನ್ ಪೊಲೀಸರು
ಕಗ್ಗಲೀಪುರ ಮೂಲದ ಕಿರಣ್ ಕುಮಾರ್, ಆದಿತ್ಯ ಬಂಧಿತರು
ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ, ರೆಕಾರ್ಡ್ ಮಾಡಿ ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ್ದ ಆರೋಪಿಗಳು
ಪರಿಚಿತರ ಸೋಗಿನಲ್ಲಿ ಕಿರುಕುಳ
ಚಿತ್ರದುರ್ಗ ಜಿಲ್ಲೆ ಯಮ್ಮನಗಟ್ಟಿ ಗ್ರಾಮದ ಕಿರಣ್ ಕುಮಾರ್‌ಕುರಿಗಾಯಿ ಆಗಿದ್ದು, ತನ್ನ 50 ಕುರಿಗಳ ಮೇಯಿಸಲು ಕಗ್ಗಲಿಪುರಕ್ಕೆ ಆತ ಬಂದಿದ್ದ. ಇನ್ನು ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ಆದಿತ್ಯ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಆರೋಪಿಗಳಿಬ್ಬರು ಸೋದರ ಸಂಬಂಧಿಗಳಾಗಿದ್ದಾರೆ. ಕುರಿ ಮೇಯಿಸುವಾಗ ಆತನಿಗೆ ಸಂತ್ರಸ್ತೆಯರ ಕುಟುಂಬದವರ ಎಂ.ಕೆ.ಆದಿತ್ಯ ಹಾಗೂ ಕಿರಣ್ ಕುಮಾರ್ ಸ್ನೇಹವಾಗಿದೆ. ಈ ಪರಿಚಯದ ನೆಪದಲ್ಲಿ 13 ಹಾಗೂ 15 ವರ್ಷದಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆಕರೆದೊಯ್ದು ಲೈಂಗಿಕವಾಗಿ ಶೋಷಣೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ತಾವು ಅಪ್ರಾಪ್ತ ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಕೃತ್ಯವನ್ನು ಮೊಬೈಲ್‌ನಲ್ಲಿ ಕಿರಣ್ ಹಾಗೂ ಆದಿತ್ಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಮೊಬೈಲ್‌ನ ಫೋಲ್ಡರ್‌ನಲ್ಲಿದ್ದ ಆ ವಿಡಿಯೋಗಳು ಗೂಗಲ್ ಗೆ ಆಪ್ ಲೋಡ್ ಆಗಿವೆ. ಬಳಿಕ ಆನ್‌ಲೈನಲ್ಲಿ ಆ ಆಶ್ಲೀಲ ವಿಡಿಯೋಗಳು ಹರಿದಾಡಿವೆ. ಈ ಬಗ್ಗೆ ಎನ್‌ಸಿಆರ್ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ವರದಿಯಾಗಿದ್ದು, ಆ ವಿಡಿಯೋಗಳನ್ನು ಪರಿಶೀಲಿಸಿದಾಗ ಕಗ್ಗಲೀಪುರ ಸರಹದ್ವಿನಲ್ಲಿ ನಡೆದಿರುವುದು ಗೊತ್ತಾಗಿದೆ. ಕೂಡಲೇ ಸಂತ್ರಸ್ತೆಯರ ಕುಟುಂಬದವರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಈ ಕೃತ್ಯ ಎಸಗಿದ ಬಳಿಕ ಅಲ್ಲೇ ಇದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಪರೂಪದ ಪ್ರಕರಣ
ಡಿಜಿಪಿ ಸೈಬರ್ ಕಮಾಂಡ್ ಸಾಮಾನ್ಯವಾಗಿ ಸಿಎಎಎಂ ಪ್ರಕರಣಗಳಲ್ಲಿ ಇಂಟರ್‌ನೆಟ್ ಅಥವಾ ಇತರೆ ಮೂಲಗಳಿಂದ ಮಕ್ಕಳ ಲೈಂಗಿಕ ದೌರ್ಜನ್ಯ ದೃಶ್ಯಾವಳಿಯನ್ನು ಡೌನ್ ಲೋಡ್ ಮಾಡಿ ಸಂಗ್ರಹಿಸಿಟ್ಟಿದ್ದ ಆರೋ ಪಿಗಳನ್ನು ಪೊಲೀಸರು ಬಂಧಿಸುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ತಾವೇ ಆಶ್ಲೀಲ ವಿಡಿಯೋ ಸೃಷ್ಟಿಸಿ ಇಂಟರ್‌ನೆಟ್‌ಗೆ ಆಪ್ ಲೋಡ್ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಅಪರೂಪದ ಕೆಲವೇ ಪ್ರಕರಣಗಳಲ್ಲೊಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬುಧಾಬಿ, ಮೇ 15: ಪ್ರಧಾನಿ ನರೇಂದ್ರ ಮೋದಿ (PM Modi in UAE) ಇಂದು ಕೇವಲ 4 ಗಂಟೆಗಳ ಭೇಟಿಗಾಗಿ ಅಬುಧಾಬಿಗೆ ತೆರಳಿದ್ದರು. ಈ ಮೂಲಕ ಅವರು ತಮ್ಮ 5 ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು. ಅಲ್ಲಿ ಅವರಿಗೆ ಯುಎಇಯ ನಾಯಕರಿಂದ ಭವ್ಯ ಸ್ವಾಗತ ದೊರೆಯಿತು.
ಅಬುಧಾಬಿಯ ವಿಮಾನ ನಿಲ್ದಾಣದಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಸ್ವಾಗತಿಸಿದರು. ಬಳಿಕ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಈ ಆತ್ಮೀಯ ಸ್ವಾಗತಕ್ಕಾಗಿ ಮೋದಿ ಯುಎಇ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಈ ದೇಶಕ್ಕೆ ಭೇಟಿ ನೀಡುವುದು ನನಗೆ ಎರಡನೇ ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿ, ನಟ ದರ್ಶನ್ ಅವರಿಗೆ ನಿರಾಸೆ ಆಗಿದೆ. ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಂದು (ಮೇ 15) ನ್ಯಾಯಾಲಯದಲ್ಲಿ ವಿಚಾರಣೆ ಹೇಗೆ ನಡೆಯಿತು ಎಂಬುದನ್ನು ಲಾಯರ್ ಸಾಕೇತ್ ಅವರು ವಿವರಿಸಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ‘ದರ್ಶನ್ (Darshan Thoogudeepa) ಓರ್ವ ವಿಚಾರಣಾಧೀನ ಕೈದಿ. ಜೈಲಿನಲ್ಲಿ ಬೇರೆ ಕೈದಿಗಳಿಗೆ ಸಿಗುತ್ತಿರುವ ಸವಲತ್ತುಗಳು ತಮಗೆ ಸಿಗುತ್ತಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು. ಒಟ್ಟು 272 ಸಾಕ್ಷಿಗಳಿವೆ. ಇನ್ನೂ 150 ಸಾಕ್ಷಿಗಳ ವಿಚಾರಣೆ ಆಗಬೇಕಿದೆ. ಅದರಲ್ಲಿ 60 ಸಾಕ್ಷಿಗಳು ಮುಖ್ಯವಾಗಿವೆ. ಅವುಗಳ ವಿಚಾರಣೆ ನಡೆಯುವ ತನಕ ದರ್ಶನ್ ಅವರಿಗೆ ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರ ಕೇಳಿಕೊಂಡಿದೆ. ಒಂದು ವರ್ಷದಲ್ಲಿ 60 ಮುಖ್ಯ ಸಾಕ್ಷಿಗಳ ವಿಚಾರಣೆ ಮಾಡಬೇಕು ಎಂದು ಗಡುವು ನೀಡಲಾಗಿದೆ. ಆ ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಜಾಮೀನು (Bail) ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಪರಿಗಣಿಸಲಾಗುವುದು ಅಂತ ನ್ಯಾಯಾಲಯ ತಿಳಿಸಿದೆ’ ಎಂದು ಅವರು ಹೇಳಿದ್ದಾರೆ.
ಚಾಮರಾಜನಗರ, ಮೇ 15: ಪ್ರವಾಸಿಗರ ಬೇಜವಾಬ್ದಾರಿಗೆ ಮೂಕಪ್ರಾಣಿಗಳು ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಬಂಡೀಪುರದಲ್ಲಿ ಮರುಕಳಿಸುತ್ತಲೇ ಇವೆ. ತಿಂದು ಬಿಸಾಡಿದ ಪ್ಲಾಸ್ಟಿಕ್ ಚೀಲ ಕೋತಿಯ ತಲೆಗೆ ಸಿಲುಕಿ ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದ ಹೃದಯ ವಿದ್ರಾವಕ ಘಟನೆ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಊಟಿ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ, ಬಂಡೀಪುರ ಹಳೆಯ ಡಿಸಿಎಫ್ ಕಚೇರಿಯ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಮುಖ ಸಿಲುಕಿಕೊಂಡು ನಡೆದಾಡುತ್ತಿದ್ದ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವಾರ ನಡೆದ ಈ ಘಟನೆಯನ್ನು ನೋಡಿ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಕಾಡುಪ್ರಾಣಿಗಳಿಗೆ ಮಾರಕವಾಗುತ್ತಿದ್ದು, ಬಂಡೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಕಾನ್ ಸಿನಿಮೋತ್ಸವ (Cannes Film Festival) ಕೇವಲ ಸಿನಿಮಾಗಳ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ, ವಿಶ್ವದ ಅತ್ಯಂತ ದೊಡ್ಡ ಫ್ಯಾಷನ್ ಹಬ್ಬವಾಗಿಯೂ ಹೊರಹೊಮ್ಮಿದೆ. ಜಗತ್ತಿನ ಹೆಸರಾಂತ ತಾರೆಯರು ಟಾಪ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ಉಡುಗೆ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ತೊಟ್ಟು ಇಲ್ಲಿನ ರೆಡ್ ಕಾರ್ಪೆಟ್ ಮೇಲೆ ಮಿಂಚುತ್ತಾರೆ. ಒಬ್ಬರಿಗಿಂತ ಒಬ್ಬರು ಅದ್ದೂರಿಯಾಗಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸುತ್ತಾರೆ. ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದ ನಟಿ ಊರ್ವಶಿ ರೌಟೇಲಾ (Urvashi Rautela) ಕಳೆದ ವರ್ಷ ಕಾನ್ ಇತಿಹಾಸದಲ್ಲೇ ಯಾರೂ ಊಹಿಸಲೂ ಸಾಧ್ಯವಿಲ್ಲದಂತಹ ಬರೋಬ್ಬರಿ 156 ಮಿಲಿಯನ್ ಡಾಲರ್ (ಸುಮಾರು 1,300 ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ ಲುಕ್‌ನಲ್ಲಿ ಕಾಣಿಸಿಕೊಂಡು ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದರು.
2025ರ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಊರ್ವಶಿ ರೌಟೇಲಾ ಒಟ್ಟು ಮೂರು ಬಾರಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಅವರ ಮೊದಲ ದಿನದ ಲುಕ್ ಅತ್ಯಂತ ಹೆಚ್ಚು ಗಮನ ಸೆಳೆಯಿತು. ಅಂದು ಅವರು ಮೈಕಲ್ ಸಿಂಕೋ ವಿನ್ಯಾಸಗೊಳಿಸಿದ ಹೊಳೆಯುವ ಗೌನ್ ಧರಿಸಿದ್ದರು. ಇದರೊಂದಿಗೆ ಹಕ್ಕಿಯ ಆಕಾರದಲ್ಲಿದ್ದ ವಿಶಿಷ್ಟವಾದ ಕೈಚೀಲ ಮತ್ತು ಅತ್ಯಂತ ಅಪರೂಪದ ಆಭರಣಗಳನ್ನು ಧರಿಸಿದ್ದರು.
ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಊರ್ವಶಿ ಅವರ ಆ ದಿನದ ಸಂಪೂರ್ಣ ಲುಕ್‌ನ ಒಟ್ಟು ಮೌಲ್ಯ ಬರೋಬ್ಬರಿ 155.9 ಮಿಲಿಯನ್ ಡಾಲರ್ (1300 ಕೋಟಿ ರೂಪಾಯಿಗೂ ಅಧಿಕ). ವಿಶೇಷವೆಂದರೆ, ಈ ಮೊತ್ತವು ಕಳೆದ ವರ್ಷ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಮಾಯಿ ಮಾಡಿದ್ದ ‘ಧುರಂಧರ್’ ಸಿನಿಮಾದ ಒಟ್ಟು ಗಳಿಕೆಗಿಂತಲೂ ಹೆಚ್ಚಾಗಿತ್ತು!
ಈ ಮೂಲಕ ಕಾನ್ ಸಿನಿಮೋತ್ಸವದ ಇತಿಹಾಸದಲ್ಲೇ ಅತ್ಯಂತ ದುಬಾರಿ ಉಡುಗೆ ತೊಟ್ಟಿದ್ದ ಕಿಮ್ ಕರ್ದಾಶಿಯಾನ್ (ಮರ್ಲಿನ್ ಮನ್ರೋ ಅವರ 5 ಮಿಲಿಯನ್ ಡಾಲರ್ ಮೌಲ್ಯದ ಐಕಾನಿಕ್ ಡ್ರೆಸ್) ಅವರ ದಾಖಲೆಯನ್ನು ಊರ್ವಶಿ ಅತ್ಯಂತ ಸುಲಭವಾಗಿ ಮುರಿದರು. ಹಾಗಾದರೆ ಊರ್ವಶಿ ಧರಿಸಿದ್ದ ಆ ಬಟ್ಟೆಯಲ್ಲಿ ಅಂತಹ ವಿಶೇಷ ಏನಿತ್ತು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಊರ್ವಶಿ ಧರಿಸಿದ್ದ ಮೈಕಲ್ ಸಿಂಕೋ ಗೌನ್ ಸಂಪೂರ್ಣವಾಗಿ ಮೆಕ್ಸಿಕನ್ ಕಲೆಯ ಮೊಸಾಯಿಕ್ ವಿನ್ಯಾಸದಿಂದ ಕೂಡಿತ್ತು. ಅದರ ಅದ್ಭುತ ಕರಕುಶಲತೆ, ವಿನ್ಯಾಸ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಆ ಗೌನ್‌ನ ಬೆಲೆಯೇ ಬರೋಬ್ಬರಿ 4.8 ಮಿಲಿಯನ್ ಡಾಲರ್ (ಸುಮಾರು 40 ಕೋಟಿ ರೂಪಾಯಿ) ಆಗಿತ್ತು. ಇನ್ನು, ಅವರು ಕೈಯಲ್ಲಿ ಹಿಡಿದಿದ್ದ ಗಿಳಿಯ ಆಕಾರದ ಕ್ಲಚ್ ಬೆಲೆ 50,000 ಡಾಲರ್ (41 ಲಕ್ಷ ರೂಪಾಯಿಗೂ ಅಧಿಕ ) ಎಂದು ವರದಿಯಾಗಿತ್ತು.
ಅಷ್ಟೇ ಅಲ್ಲದೇ, 151 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳನ್ನು ಅವರು ಧರಿಸಿದ್ದರು. ಊರ್ವಶಿ ಅವರ ಇಡೀ ಲುಕ್ ಇಷ್ಟೊಂದು ದುಬಾರಿಯಾಗಲು ಇದೇ ಮುಖ್ಯ ಕಾರಣ. ‘ಮನಿ ಕಂಟ್ರೋಲ್’ ವರದಿ ಪ್ರಕಾರ, ಊರ್ವಶಿ ಅಂದು ಜಗತ್ತಿನ ಅತ್ಯಂತ ಅಪರೂಪದ ಮತ್ತು ಅತ್ಯಮೂಲ್ಯವಾದ ವಜ್ರಗಳನ್ನು ಧರಿಸಿದ್ದರು. ಮೌಸಾಯೆಫ್ ರೆಡ್ ಡೈಮಂಡ್, ಒಪೆನ್‌ಹೈಮರ್ ಬ್ಲೂ ಡೈಮಂಡ್, ಡ್ರೆಸ್ಡೆನ್ ಗ್ರೀನ್ ಡೈಮಂಡ್, ಟಿಫಾನಿ ಯೆಲ್ಲೋ ಡೈಮಂಡ್ ಸೇರಿ ಎಲ್ಲ ಆಭರಣಗಳ ಬೆಲೆ 151 ಮಿಲಿಯನ್ ಡಾಲರ್ ಆಗಿತ್ತು.
ದುಬೈ, ಮೇ 15: ತೈಲ ರಫ್ತು ವಿಸ್ತರಿಸಲು ಮತ್ತು ಸುಗಮಗೊಳಿಸಲು ಯುಎಇ ದೇಶವು ತನ್ನ ಆಯಿಲ್ ಪೈಪ್‌ಲೈನ್ ಯೋಜನೆಯ (UAE Oil Pipeline Project) ಕಾರ್ಯಕ್ಕೆ ಚುರುಕು ನೀಡಲು ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ಇರಾನ್-ಅಮೆರಿಕ ಯುದ್ಧದಿಂದಾಗಿ ತಡೆಗೊಂಡಿರುವುದರಿಂದ ತೈಲ ಪೂರೈಕೆಯಲ್ಲಿ ಬಹಳ ವ್ಯತ್ಯಯ ಆಗಿದೆ. ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳ ತೈಲ ರಫ್ತಿಗೆ ಸಂಚಕಾರವಾಗಿದೆ. ಹೀಗಾಗಿ, ತೈಲ ರಫ್ತಿಗೆ ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬನೆ ಕಡಿಮೆ ಮಾಡಲು ಯುಎಇಗೆ ಈಗ ಆಯಿಲ್ ಪೈಪ್‌ಲೈನ್ ಯೋಜನೆ ಒಂದು ಪ್ರಮುಖ ಮಾರ್ಗವಾಗಿದೆ. ಈ ಯೋಜನೆ ಜಾರಿಯನ್ನು ಬೇಗ ಮಾಡಲು ಯುಎಇ ನಿರ್ಧರಿಸಿದೆ.
ಈ ಯೋಜನೆಯನ್ನು ‘ವೆಸ್ಟ್-ಈಸ್ಟ್ ಪೈಪ್‌ಲೈನ್’ (West-East Pipeline) ಎಂದು ಕರೆಯಲಾಗುತ್ತದೆ. ಒಮನ್ ಕೊಲ್ಲಿಯ ಕರಾವಳಿಯಲ್ಲಿರುವ ಫುಜೈರಾ (Fujairah) ಮೂಲಕ ತೈಲ ರಫ್ತು ಮಾಡುವ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಪೈಪ್‌ಲೈನ್ ನಿರ್ಮಾಣ ಕಾರ್ಯವು ಈಗಾಗಲೇ ನಡೆಯುತ್ತಿದ್ದು, 2027 ರ ವೇಳೆಗೆ ಇದು ಪೂರ್ಣಗೊಂಡು ಕಾರ್ಯಾಚರಣೆಗೆ ಮುಕ್ತವಾಗುವ ನಿರೀಕ್ಷೆಯಿದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ತೈಲ ಸಾಗಣೆ ಮಾರ್ಗವಾಗಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗಣೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಪ್ರಸ್ತುತ ಯುಎಇ ತನ್ನ ಬಹುಪಾಲು ತೈಲವನ್ನು ಹಾರ್ಮುಜ್ ಜಲಸಂಧಿಯ ಮೂಲಕವೇ ರಫ್ತು ಮಾಡುತ್ತದೆ. ಹೊಸ ಪೈಪ್‌ಲೈನ್ ಪೂರ್ಣಗೊಂಡರೆ, ಜಲಸಂಧಿಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಯುಎಇ ಸುರಕ್ಷಿತವಾಗಿ ತೈಲವನ್ನು ರಫ್ತು ಮಾಡಬಹುದಾಗಿದೆ.
ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಗೆ (ADNOC) ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.
ಪ್ರಸ್ತುತ ಇರುವ ಪೈಪ್‌ಲೈನ್ ದಿನಕ್ಕೆ ಸುಮಾರು 1.8 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೊಸ ಪೈಪ್‌ಲೈನ್ ಬಂದ ನಂತರ ಫುಜೈರಾ ಮೂಲಕ ರಫ್ತು ಸಾಮರ್ಥ್ಯವು ದಿನಕ್ಕೆ 4 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಈ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಯುಎಇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮತ್ತು ಸಂಘರ್ಷದ ಸಮಯದಲ್ಲಿ ತೈಲ ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.