All posts by nagaraj11081993

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

ಬೆಂಗಳೂರು, ಮಾರ್ಚ್​ 08: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ (by-election) ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ಎರಡೂ  ಕ್ಷೇತ್ರಕ್ಕೆ 16-16 ನಾಯಕರನ್ನೊಳಗೊಂಡ ಉಸ್ತುವಾರಿ ಸಮಿತಿ ರಚನೆ ಮಾಡಿದ್ದಾರೆ. ಬಾಗಲಕೋಟೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮತ್ತು ದಾವಣಗೆರೆಗೆ ಕಾಱಧ್ಯಕ್ಷ ಮಂಜುನಾಥ್ ಭಂಡಾರಿ ಸಂಚಾಲಕರಾಗಿದ್ದಾರೆ.

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಮತ್ತೋರ್ವ ಮಾಜಿ ಸಚಿವ ವಿಎಸ್​​​ ಮೇಟಿ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕೂಡ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯುವ ಹಿನ್ನಲೆ ಇದೀಗ ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ಉಸ್ತುವಾರಿ ಸಮಿತಿಯನ್ನು ನೇಮಕ ಮಾಡಿದೆ.

ದಾವಣಗೆರೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ಮಂಜುನಾಥ್ ಭಂಡಾರಿ, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕ
  • ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ
  • ಸಚಿವ ಕೆ.ಎಚ್. ಮುನಿಯಪ್ಪ
  • ಸಚಿವ ಜಮೀರ್ ಅಹಮದ್ ಖಾನ್​​
  • ಸಚಿವ ಈಶ್ವರ್ ಖಂಡ್ರೆ
  • ಸಚಿವ ಕೃಷ್ಣ ಬೈರೇಗೌಡ
  • ಸಚಿವ ಶರಣಪ್ರಕಾಶ್ ಪಾಟೀಲ್​
  • ಸಚಿವ ಪ್ರಿಯಾಂಕ್ ಖರ್ಗೆ
  • ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​
  • ಸಚಿವ ಸಂತೋಷ್ ಲಾಡ್​
  • ಸಚಿವ ಮಧು ಬಂಗಾರಪ್ಪ
  • ಸಲೀಂ ಅಹಮದ್, ಮುಖ್ಯ ಸಚೇತಕರು, ವಿಧಾನ ಪರಿಷತ್ತು
  • ತನ್ವೀರ್ ಸೇಠ್, ಶಾಸಕರು/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ, ಮಾಜಿ ಸಚಿವ
  • ಮಾಜಿ ಎಂಎಲ್​ಸಿ ವಿ.ಆರ್. ಸುದರ್ಶನ್​
  • ಮಾಜಿ ಸಚಿವ ಎಚ್.ಎಂ. ರೇವಣ್ಣ
  • ಮಾಜಿ ಸಚಿವ ಎಚ್. ಆಂಜನೇಯ

ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ವಸಂತ ಕುಮಾರ್, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕರು
  • ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
  • ಸಚಿವ ಸತೀಶ್ ಜಾರಕಿಹೊಳಿ
  • ಸಚಿವ ಎಂ ಬಿ ಪಾಟೀಲ್​​
  • ಸಚಿವ ಶಿವಾನಂದ ಪಾಟೀಲ್​​
  • ಸಚಿವ ಶಿವರಾಜ್ ತಂಗಡಗಿ
  • ಸಚಿವ ಶರಣಬಸಪ್ಪ ದರ್ಶನಾಪುರ
  • ಸಚಿವ ಬೈರತಿ ಸುರೇಶ್​​
  • ಸಚಿವ ರಹೀಮ್ ಖಾನ್​
  • ಶಾಸಕ ಸಿ.ಎಸ್. ನಾಡಗೌಡ
  • ಮಾಜಿ ಸಚಿವ ರಾಜಶೇಖರ್ ಪಾಟೀಲ್​​
  • ಶಾಸಕ ವಿಜಯಾನಂದ ಕಾಶಪ್ಪನವರ್​
  • ಎಂಎಲ್​ಸಿ ಎಫ್.ಎಚ್. ಜಕ್ಕಪ್ಪನವರ್​​
  • ಎಂಎಲ್​ಸಿ ಬಸನಗೌಡ ಬಾದರ್ಲಿ
  • ಮಾಜಿ ಎಂಎಲ್​ಸಿ ಸೋಮಣ್ಣ ಬೇವಿನಮರದ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: ಟಿ20 ವಿಶ್ವಕಪ್‌ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ

2026 ರ ಟಿ20 ವಿಶ್ವಕಪ್‌ (T20 World Cup 2026) ಫೈನಲ್​ನಲ್ಲಿ ಆತಿಥೇಯ ಟೀಂ ಇಂಡಿಯಾ, ನ್ಯೂಜಿಲೆಂಡ್ (India vs New Zealand) ತಂಡವನ್ನು 96 ರನ್‌ಗಳಿಂದ ಸೋಲಿಸಿ ದಾಖಲೆಯ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು. ಇದು ಭಾರತಕ್ಕೆ ಸತತ ಎರಡನೇ ಟಿ20 ವಿಶ್ವಕಪ್ ಟ್ರೋಫಿಯೂ ಆಗಿದೆ. 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ, ಇದೀಗ ಸೂರ್ಯಕುಮಾರ್ ನಾಯಕತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದು ಮಾತ್ರವಲ್ಲದೆ ಈ ಫೈನಲ್ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ನೋಡಿರದ ಸಾಧನೆಯನ್ನು ಮಾಡಿ ತೋರಿಸಿದೆ.

ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ

ಇದುವರೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ, ಯಾವುದೇ ಹಾಲಿ ಚಾಂಪಿಯನ್ ತಂಡಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ 2026 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಆ ಸಾಧನೆಯನ್ನು ಮಾಡಿದೆ. ಭಾರತವು ಈಗ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ದೇಶವಾಗಿದೆ.

ಚಾಂಪಿಯನ್ ಆದ ಮೊದಲ ಆತಿಥೇಯ ತಂಡ

ಆತಿಥೇಯ ತಂಡವಾಗಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿಯವರೆಗೆ, ಯಾವುದೇ ಆತಿಥೇಯ ತಂಡವು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಇದೀಗ ಟೀಂ ಇಂಡಿಯಾ ಆ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಮೊದಲ ಜಯ

ಭಾರತ ತಂಡವು ಟಿ20 ವಿಶ್ವಕಪ್‌ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂದಿಗೂ ಜಯ ಸಾಧಿಸಿರಲಿಲ್ಲ. ಆದರೀಗ 2026 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಕಿವೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ಆ ಸೋಲಿನ ಸರಣಿಯನ್ನು ಮುರಿದಿದೆ. ಇದು ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ವಿಶ್ವಕಪ್ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ ಜಯಗಳಿಸಿದೆ. ಇದಕ್ಕೂ ಮೊದಲು, ನ್ಯೂಜಿಲೆಂಡ್ 2007, 2016 ಮತ್ತು 2021 ರ ಮುಖಾಮುಖಿಗಳಲ್ಲಿ ಭಾರತವನ್ನು ಮಣಿಸಿತ್ತು.

IND vs NZ: ವಿಶ್ವ ವಿಜೇತ ಭಾರತಕ್ಕೆ ದಾಖಲೆಯ ಮೂರನೇ ಟಿ20 ವಿಶ್ವಕಪ್ ಕಿರೀಟ

ಟಿ20 ಸ್ವರೂಪದಲ್ಲಿ ಕಿವೀಸ್ ವಿಫಲ

ವಾಸ್ತವವಾಗಿ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ತನ್ನ ಮೊದಲ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಆದರೆ ಟಿ20 ಮಾದರಿಯಲ್ಲಿ ಅದನ್ನು ಮಾಡಲು ಕಿವೀಸ್ ಸಾಧ್ಯವಾಗಲಿಲ್ಲ. 2000 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ್ದ ಕಿವೀಸ್ ಟ್ರೋಫಿ ಎತ್ತಿಹಿಡಿದಿತ್ತು. ಹಾಗೆಯೇ 2021 ರ ಟೆಸ್ಟ್ ಚಾಂಪಿಯನ್‌ಶಿಪ್​ ಫೈನಲ್​ನಲ್ಲಿ ಭಾರತವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು. ಆದರೆ 2026 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಕ್ರಿಕೆಟ್‌ನ ಮತ್ತೊಂದು ಸ್ವರೂಪದಲ್ಲಿ ಕಿವೀಸ್ ಮೇಲುಗೈ ಸಾಧಿಸದಂತೆ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ವಿಶ್ವ ವಿಜೇತ ಭಾರತಕ್ಕೆ ದಾಖಲೆಯ ಮೂರನೇ ಟಿ20 ವಿಶ್ವಕಪ್ ಕಿರೀಟ

2024 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ (T20 World Cup) ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಹಿಡಿದು ಇಲ್ಲಿಗೆ 617 ದಿನಗಳು ಕಳೆದಿವೆ. ಇದೀಗ ಈ 617 ದಿನಗಳ ನಂತರ ಹಾಲಿ ಚಾಂಪಿಯನ್ ಟೀಂ ಇಂಡಿಯಾ (Team India) ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್​ನ ಮೋದಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಟೀಂ ಇಂಡಿಯಾ (India vs New Zealand) ತನ್ನ ಮೂರನೇ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ವಾಸ್ತವವಾಗಿ ಈ ಆವೃತ್ತಿಯಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್​ಗೇರಿದ್ದವು. ಹೀಗಾಗಿ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೇನೆಂದರೆ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಟೀಂ ಇಂಡಿಯಾ, ಕಿವೀಸ್ ವಿರುದ್ಧ ಗೆದ್ದೇ ಇರಲಿಲ್ಲ. ಹೀಗಾಗಿ ಅದೊಂದು ಭಯದೊಂದಿಗೆ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾ ಪಂದ್ಯದ ಆರಂಭದಿಂದಲೇ ಕಿವೀಸ್ ಮೇಲೆ ಸವಾರಿ ಮಾಡಿತು. ಇದರ ಪರಿಣಾಮವಾಗಿ ಭಾರತದ ಮುಂದೆ ಮಂಡಿಯೂರಿದ ಕಿವೀಸ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ ಸೋಲು ಅನುಭವಿಸುವುದರ ಜೊತೆಗೆ ಚಾಂಪಿಯನ್ ಪಟ್ಟದಿಂದಲೂ ವಂಚಿತವಾಯಿತು.

ಭಾರತಕ್ಕೆ ಸ್ಫೋಟಕ ಆರಂಭ

ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರನ್​ ಮಳೆಯೇ ಹರಿಯಿತು. ಕಿವೀಸ್ ಬೌಲರ್​ಗಳನ್ನು ಮೊದಲ ಓವರ್​ನಿಂದಲೇ ತರಾಟೆಗೆ ತೆಗೆದುಕೊಂಡ ಟೀಂ ಇಂಡಿಯಾ ಬ್ಯಾಟರ್​ಗಳು ಆರಂಭದಲೇ ಕಿವೀಸ್ ಪಡೆಯನ್ನು ಪಂದ್ಯದಿಂದ ಹೊರಹಾಕಿದರು. ಉಳಿದ ಕೆಲಸವನ್ನು ತಂಡದ ಬೌಲರ್​ಗಳು ಮಾಡಿ ಮೂಗಿಸಿದರು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಇಡೀ ವಿಶ್ವಕಪ್‌ನಲ್ಲಿ ರನ್ ಬರ ಎದುರಿಸಿದ್ದ ಅಭಿಷೇಕ್ ಶರ್ಮಾ ಕೊನೆಗೂ ಲಯ ಕಂಡುಕೊಳ್ಳುವುದರೊಂದಿಗೆ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸಂಜು ಹ್ಯಾಟ್ರಿಕ್ ಅರ್ಧಶತಕ

ಇತ್ತ ಎಂದಿನಂತೆ ತನ್ನ ಅಮೋಘ ಫಾರ್ಮ್ ಮುಂದುವರೆಸಿದ ಸಂಜು ಸ್ಯಾಮ್ಸನ್, ಸತತ ಮೂರನೇ ಪಂದ್ಯದಲ್ಲಿ ಅರ್ಧಶತಕ ಪೂರೈಸುವುದರ ಮೂಲಕ ಹ್ಯಾಟ್ರಿಕ್ ಅರ್ಧಶತಕ ದಾಖಲಿಸಿದರು. ಈ ಜೋಡಿಯ ಅಬ್ಬರದಿಂದಾಗಿ ಟೀಂ ಇಂಡಿಯಾ ಮೊದಲ ವಿಕೆಟ್​ಗೆ 98 ರನ್ ಕಲೆಹಾಕಿತು. ಇದಕ್ಕೆ ತೆಗೆದುಕೊಂಡಿದ್ದು ಕೇವಲ 43 ಎಸೆತಗಳು ಮಾತ್ರ. 52 ರನ್ ಬಾರಿಸಿದ ಅಭಿಷೇಕ್ ಶರ್ಮಾ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆನಂತರ ಬಂದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್‌ ಜೊತೆಗೂಡಿ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಇವರಿಬ್ಬರು ಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು.

ದಾಖಲೆಯ 255 ರನ್​ಗಳ ಗುರಿ

ಕೇವಲ 15.1 ಓವರ್​ಗಳಲ್ಲಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದ ಈ ಜೋಡಿ ಸ್ಯಾಮ್ಸನ್‌ ವಿಕೆಟ್ ಪತನದೊಂದಿಗೆ ಬೇರ್ಪಟ್ಟಿತು. ಸತತ ಮೂರನೇ ಪಂದ್ಯದಲ್ಲೂ ಶತಕ ವಂಚಿತರಾದ ಸಂಜು ಸ್ಯಾಮ್ಸನ್ 89 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಬೆನ್ನಲ್ಲೇ ಇಶಾನ್ ಕಿಶನ್ ಕೂಡ 54 ರನ್​​ಗಳಿಗೆ ಪೆವಿಲಿಯನ್‌ ಸೇರಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿಮ್ಮಿ ನಿಶಮ್ ಎಸೆದ ಈ ಓವರ್​ನಲ್ಲಿ ಭಾರತ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಆದ್ದರಿಂದ ತಂಡದ ರನ್ ವೇಗಕ್ಕೆ ಬ್ರೇಕ್ ಬಿದ್ದಿತು. ಆದಾಗ್ಯೂ ಕೊನೆಯ ಓವರ್​ನಲ್ಲಿ ಶಿವಂ ದುಬೆ (26 ರನ್) ಅಬ್ಬರಿಸುವ ಮೂಲಕ ತಂಡವನ್ನು 255 ರನ್​ಗಳಿಗೆ ಕೊಂಡೊಯ್ದರು.

ಆರಂಭದಲ್ಲೇ ಸೋಲೊಪ್ಪಿಕೊಂಡ ಕಿವೀಸ್

ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಮೊದಲ ಓವರ್​ನಲ್ಲೇ ಆಘಾತ ಎದುರಾಗುವುದರಲಿತ್ತು. ಆದರೆ ಶಿವಂ ದುಬೆ, ಫಿಲ್ ಆಲೆನ್ ಅವರ ಸುಲಭ ಕ್ಯಾಚ್ ಕೈಚೆಲಿದರು. ಸೆಮಿಫೈನಲ್‌ನಲ್ಲಿ ದಾಖಲೆಯ ಶತಕ ಬಾರಿಸಿದ್ದ ಆಲೆನ್ ಕ್ಯಾಚ್ ಬಿಟ್ಟಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿತು. ಇದಕ್ಕೆ ಪೂರಕವಾಗಿ ಸೈಫರ್ಟ್​ ಮುಂದಿನ ಓವರ್​ನಲ್ಲಿ ಬರೋಬ್ಬರಿ 21 ರನ್ ಬಾರಿಸಿದರು. ಇದು ತಂಡವನ್ನು ಒತ್ತಡಕ್ಕೆ ತಳ್ಳಿದಂತೆ ಕಾಣುತ್ತಿತ್ತು. ಆದರೆ ಮೂರನೇ ಓವರ್​ನಲ್ಲಿ ದಾಳಿಗಿಳಿದ ಅಕ್ಷರ್ ಆಲೆನ್ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ನಂತರ ಬಂದ ರಚಿನ್ ರವೀಂದ್ರಗೆ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಪೆವಿಲಿಯನ್‌ ದಾರಿ ತೋರಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಫ್ಸ್ ಆಟವೂ 5 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ಕಿವೀಸ್ 47 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು.

IND vs NZ: 18 ಎಸೆತಗಳಲ್ಲಿ ಅರ್ಧಶತಕ; ಫೈನಲ್‌ನಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

ಬೂಮ್ ಬೂಮ್ ಬುಮ್ರಾ ಮ್ಯಾಜಿಕ್

ತಂಡದ ಪರ ಏಕಾಂಗಿ ಹೋರಾಟ ನೀಡಿದ ಆರಂಭಿಕ ಟಿಮ್ ಸೈಫರ್ಟ್​ 26 ಎಸೆತಗಳಲ್ಲಿ 52 ರನ್ ಬಾರಿಸಿ ಏಕಾಂಗಿ ಹೋರಾಟ ನೀಡಿದರು. ಆದರೆ ಅವರು ಕೂಡ ವರುಣ್ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕಿಶನ್​ಗೆ ಕ್ಯಾಚಿತ್ತು ಔಟಾದರು. ಸೈಫರ್ಟ್​ ಔಟಾಗುತ್ತಿದ್ದಂತೆ ಕಿವೀಸ್ ಸೋಲು ಖಚಿತವಾಯಿತು. ಅದರಂತೆ ಆ ಬಳಿಕ ಬಂದ ಕಿವೀಸ್ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಒಂದು ತುದಿಯಲ್ಲಿ ಹೋರಾಟ ನೀಡಲು ಯತ್ನಿಸಿದ ನಾಯಕ ಸ್ಯಾಂಟ್ನರ್ 43 ರನ್​ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಿವೀಸ್ 159 ರನ್​ಗಳಿಸಲಷ್ಟೇ ಶಕ್ತವಾಗಿ 96 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

March 8-14 Career Horoscope: ಈ ರಾಶಿಯವರ ವೃತ್ತಿಜೀವನದಲ್ಲಿ ಸ್ಥಿರತೆ; ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ

ಮಾರ್ಚ್ 08ರಿಂದ 14 ರವರೆಗೆ ಎರಡನೇ ವಾರ. ಈ ವಾರದಲ್ಲಿ ಕಠಿಣ ಶ್ರಮ, ಸಮಯಪ್ರಜ್ಞೆ, ವರ್ಗಾವಣೆ, ಗೌರವ, ಭೋಗ, ಪ್ರಯಾಣ ಎಲ್ಲವೂ ಉದ್ಯೋಗ ಸಂಬಂಧವಾಗಿ ಹೆಚ್ಚು ಅನುಭವಕ್ಕೆ ಬರಲಿದೆ. ಎಲ್ಲವನ್ನೂ ಸ್ವೀಕರಿಸಿ ನೆಮ್ಮದಿಯಿಂದ ಬಾಳಬೇಕಾದುದು ಕರ್ತವ್ಯ ಕೂಡ ಆಗಿರುತ್ತದೆ.

ಮೇಷ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶನಿ. ಶನಿಯು ಲಾಭ ಸ್ಥಾನದಲ್ಲಿರುವುದರಿಂದ ವೃತ್ತಿಜೀವನದಲ್ಲಿ ಸ್ಥಿರತೆ ಇರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯವಿದು. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿದ್ದರೆ ಉತ್ತಮ ಅವಕಾಶಗಳು ಹುಡುಕಿ ಬರಲಿವೆ.

ವೃಷಭ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶನಿ. ಭಾಗ್ಯ ಸ್ಥಾನದಲ್ಲಿ ಶನಿಯ ಸಂಚಾರವು ವೃತ್ತಿಯಲ್ಲಿ ಸ್ವಲ್ಪ ವಿಳಂಬ ತಂದರೂ ಯಶಸ್ಸು ಖಚಿತ. ವಿದೇಶಿ ಸಂಬಂಧಿತ ಉದ್ಯೋಗಗಳಲ್ಲಿ ಲಾಭವಾಗಲಿದೆ. ನಿಮ್ಮ ಶಿಸ್ತು ಮತ್ತು ಸಮಯಪ್ರಜ್ಞೆ ಕಚೇರಿಯಲ್ಲಿ ಎಲ್ಲರ ಗಮನ ಸೆಳೆಯಲಿದೆ. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧರಾಗಿರಿ, ಇದು ಭವಿಷ್ಯದ ಪ್ರಗತಿಗೆ ದಾರಿಯಾಗಲಿದೆ.

ಮಿಥುನ: ​ನಿಮ್ಮ ದಶಮ ಸ್ಥಾನದ ಅಧಿಪತಿ ಗುರು. ಗುರುವು ಲಾಭ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ವೃತ್ತಿಯಲ್ಲಿ ಧನಲಾಭ ಹೆಚ್ಚಲಿದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಗಳು ಲಾಭದಾಯಕವಾಗಿರಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆಯ ಸಾಧ್ಯತೆಯಿದೆ. ಸಹೋದ್ಯೋಗಿಗಳ ಸಹಕಾರದಿಂದ ಕ್ಲಿಷ್ಟಕರ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಗೌರವ-ಪ್ರತಿಷ್ಠೆಗಳು ಹೆಚ್ಚಾಗಲಿವೆ.

ಕರ್ಕಾಟಕ: ​ನಿಮ್ಮ ದಶಮ ಸ್ಥಾನದ ಅಧಿಪತಿ ಮಂಗಳ. ಮಂಗಳನು ಭಾಗ್ಯ ಸ್ಥಾನದಲ್ಲಿ ಶುಕ್ರನೊಂದಿಗೆ ಇರುವುದರಿಂದ ವೃತ್ತಿಯಲ್ಲಿ ಸೃಜನಶೀಲತೆ ಹೆಚ್ಚಲಿದೆ. ಕಲೆ, ಮಾಧ್ಯಮ ಅಥವಾ ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅದ್ಭುತ ಅವಕಾಶಗಳು ಸಿಗಲಿವೆ. ಕೋಪವನ್ನು ನಿಯಂತ್ರಿಸಿದರೆ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬಹುದು. ಹಠಾತ್ ಧನಲಾಭದ ಯೋಗವಿದೆ, ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.

​ಸಿಂಹ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶುಕ್ರ. ಶುಕ್ರನು ಸಪ್ತಮ ಸ್ಥಾನದಲ್ಲಿರುವುದರಿಂದ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ಸ್ತ್ರೀ ವರ್ಗದ ಸಹಕಾರದಿಂದ ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಐಷಾರಾಮಿ ವಸ್ತುಗಳ ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕ. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಶುಭ ಸಮಯ.

ಕನ್ಯಾ: ​ನಿಮ್ಮ ದಶಮ ಸ್ಥಾನದ ಅಧಿಪತಿ ಬುಧ. ಬುಧನು ಷಷ್ಠ ಸ್ಥಾನದಲ್ಲಿರುವುದರಿಂದ ವೃತ್ತಿಯಲ್ಲಿ ಸ್ಪರ್ಧೆ ಹೆಚ್ಚಿರಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ವಾದ-ವಿವಾದಗಳಿಂದ ದೂರವಿರುವುದು ಒಳಿತು. ಲೆಕ್ಕಪತ್ರ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಕೆಲಸದ ಒತ್ತಡವಿರಲಿದೆ. ಯೋಜಿತವಾಗಿ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಕಡೆಗೂ ಗಮನವಿರಲಿ.

ತುಲಾ: ​ನಿಮ್ಮ ದಶಮ ಸ್ಥಾನದ ಅಧಿಪತಿ ಚಂದ್ರ. ಚಂದ್ರನ ವೇಗದ ಸಂಚಾರವು ವೃತ್ತಿಯಲ್ಲಿ ಅಸ್ಥಿರತೆ ತರಬಹುದು, ಆದರೆ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ನೀಡಲಿದೆ. ಮಾನಸಿಕವಾಗಿ ದೃಢವಾಗಿರುವುದು ಮುಖ್ಯ. ಹಾಲಿನ ಉತ್ಪನ್ನ ಅಥವಾ ದ್ರವ ರೂಪದ ವ್ಯಾಪಾರ ಮಾಡುವವರಿಗೆ ಲಾಭದಾಯಕ ವಾರ. ಕೆಲಸದ ಸ್ಥಳದಲ್ಲಿ ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿ.

ವೃಶ್ಚಿಕ: ​ನಿಮ್ಮ ದಶಮ ಸ್ಥಾನದ ಅಧಿಪತಿ ಸೂರ್ಯ. ಸೂರ್ಯನು ಸುಖ ಸ್ಥಾನದಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಲಾಭವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಅಥವಾ ಸಮಾಜ ಸೇವಕರಿಗೆ ಉತ್ತಮ ಸಮಯ. ವೃತ್ತಿಯಲ್ಲಿ ಅಧಿಕಾರ ಪ್ರಾಪ್ತಿಯಾಗುವ ಲಕ್ಷಣಗಳಿವೆ. ತಂದೆಯ ಮಾರ್ಗದರ್ಶನದಿಂದ ವೃತ್ತಿಯಲ್ಲಿರುವ ಗೊಂದಲಗಳು ಬಗೆಹರಿಯಲಿವೆ. ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯ ಸಿಗಲಿದೆ.

ಧನು: ​ನಿಮ್ಮ ದಶಮ ಸ್ಥಾನದ ಅಧಿಪತಿ ಬುಧ. ಬುಧನು ತೃತೀಯ ಸ್ಥಾನದಲ್ಲಿರುವುದರಿಂದ ಸಂವಹನ ಕಲೆ ಮತ್ತು ಬರವಣಿಗೆಯಿಂದ ಲಾಭವಾಗಲಿದೆ. ಸಣ್ಣ ಪ್ರಯಾಣಗಳು ವೃತ್ತಿಗೆ ಪೂರಕವಾಗಿರಲಿವೆ. ಹೊಸ ತಂತ್ರಜ್ಞಾನ ಕಲಿಕೆಗೆ ಇದು ಸೂಕ್ತ ಕಾಲ. ಕಿರಿಯ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ವ್ಯಾಪಾರ ವಿಸ್ತರಣೆಗೆ ನೀವು ಮಾಡುವ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.

ಮಕರ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶುಕ್ರ. ಶುಕ್ರನು ಎರಡನೇ ಮನೆಯಲ್ಲಿರುವುದರಿಂದ ವೃತ್ತಿಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಾತಿನ ಚತುರತೆಯಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿರುವವರಿಗೆ ಬಡ್ತಿಯ ಯೋಗವಿದೆ. ಕುಟುಂಬದ ವ್ಯಾಪಾರದಲ್ಲಿ ತೊಡಗಿರುವವರಿಗೆ ಲಾಭ ದ್ವಿಗುಣವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

​ಕುಂಭ: ​ನಿಮ್ಮ ದಶಮ ಸ್ಥಾನದ ಅಧಿಪತಿ ಮಂಗಳ. ಮಂಗಳನು ಲಗ್ನದಲ್ಲಿರುವುದರಿಂದ ವೃತ್ತಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮತ್ತು ಆತುರ ಬೇಡ. ಶಿಸ್ತಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ. ರಕ್ಷಣಾ ಪಡೆ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ವಿಶೇಷ ಮನ್ನಣೆ ಸಿಗಲಿದೆ. ಸ್ವಂತ ಉದ್ಯೋಗ ಆರಂಭಿಸಲು ಬಯಸುವವರಿಗೆ ಸಮಯ ಪೂರಕವಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಮೀನ: ​ನಿಮ್ಮ ದಶಮ ಸ್ಥಾನದ ಅಧಿಪತಿ ಗುರು. ಗುರುವು ದ್ವಿತೀಯ ಸ್ಥಾನದಲ್ಲಿರುವುದರಿಂದ ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ವೃತ್ತಿಯಲ್ಲಿ ಹಿರಿಯರ ಸಲಹೆಗಳು ವರದಾನವಾಗಲಿವೆ. ಹಣಕಾಸಿನ ಹರಿವು ಸುಗಮವಾಗಿರಲಿದೆ. ದೂರದ ಊರಿನಿಂದ ಕೆಲಸದ ಆಫರ್ ಬರಬಹುದು. ನಿಮ್ಮ ದಕ್ಷತೆಯಿಂದ ವೃತ್ತಿಯಲ್ಲಿ ವಿಶೇಷ ಸ್ಥಾನಮಾನ ಗಳಿಸುವಿರಿ.

ಲೋಹಿತ ಹೆಬ್ಬಾರ್ – 8762924271

Source link

Weekly Love Horoscope: ಮಾ 08ರಿಂದ 14; ಈ ವಾರದ ಪ್ರೇಮ-ಪ್ರೀತಿ ಭವಿಷ್ಯ ತಿಳಿಯಿರಿ

ಮಾರ್ಚ್ 08ರಿಂದ ಮಾರ್ಚ್ 14ರವರೆಗೆ ಪ್ರೇಮದಲ್ಲಿ, ದಾಂಪತ್ಯದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಸತ್ತ್ವವುಳ್ಳದ್ದು ಉಳಿಯುವುದು. ನಿಸ್ಸತ್ತ್ವ ಅಳಿಯುವುದು. ಎಲ್ಲವೂ ನಿಮ್ಮ ನಡವಳಿಕೆ ಹಾಗೂ ಮಾತನ್ನು ಅವಲಂಬಿಸಿದೆ. ಶುಕ್ರನು ತನ್ನ ಉನ್ನತ ಸ್ಥಾನಕ್ಕೆ ಹೋದ ಕಾರಣ ಹಲವು ಶುಭವನ್ನು ನಿರೀಕ್ಷಿಸಬಹುದು.

ಮೇಷ: ​ಶುಕ್ರನ ಸಂಚಾರವು ಪ್ರೇಮಿಗಳಲ್ಲಿ ಹೊಸ ಉತ್ಸಾಹ ತುಂಬಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ಆದರೆ ಸಂವಹನದಿಂದ ಬಗೆಹರಿಯಲಿವೆ. ಅವಿವಾಹಿತರಿಗೆ ಮದುವೆಯ ಮಾತುಕತೆಗಳು ಅಂತಿಮವಾಗಬಹುದು. ವಿಚ್ಛೇದನ ಕೋರಿದವರಿಗೆ ನ್ಯಾಯಾಲಯದಿಂದ ಸಮಾಧಾನಕರ ವಾರ್ತೆ ಸಿಗುವ ಸಾಧ್ಯತೆಯಿದೆ.

ವೃಷಭ: ನಿಮ್ಮ ರಾಶ್ಯಾಧಿಪತಿ ಶುಕ್ರನ ಅನುಗ್ರಹದಿಂದ ಪ್ರೇಮ ಜೀವನವು ಮಧುರವಾಗಿರುತ್ತದೆ. ಸಂಗಾತಿಯ ನಡುವೆ ಪರಸ್ಪರ ವಿಶ್ವಾಸ ವೃದ್ಧಿಯಾಗಲಿದೆ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿ ಬರಲಿವೆ. ಹಳೆಯ ಕಹಿ ನೆನಪುಗಳನ್ನು ಮರೆತು ದಂಪತಿಗಳು ಹೊಸ ಜೀವನ ಆರಂಭಿಸಲು ಇದು ಸುಸಮಯ.

ಮಿಥುನ: ಈ ವಾರ ಪ್ರೀತಿಯ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ತಪ್ಪು ತಿಳುವಳಿಕೆಯಿಂದ ವಿರಹ ಉಂಟಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಚ್ಛೇದನದ ಹಂತದಲ್ಲಿರುವವರು ಭಾವನಾತ್ಮಕವಾಗಿ ಕುಗ್ಗಬಹುದು. ಶಾಂತವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು.

ಕರ್ಕಾಟಕ: ​ಪ್ರೀತಿಯಲ್ಲಿರುವವರಿಗೆ ಮನೆಯವರ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ. ಹೊಸ ಪ್ರೇಮ ಸಂಬಂಧಗಳು ಚಿಗುರಲಿವೆ. ವಿಚ್ಛೇದನಕ್ಕಾಗಿ ಕಾಯುತ್ತಿರುವವರಿಗೆ ಪ್ರಕ್ರಿಯೆಗಳು ವೇಗ ಪಡೆಯಬಹುದು. ಒಂಟಿ ಜೀವನ ನಡೆಸುತ್ತಿರುವವರಿಗೆ ಆಪ್ತ ಸ್ನೇಹಿತರಿಂದ ಪ್ರೇಮ ನಿವೇದನೆಯಾಗುವ ಸಾಧ್ಯತೆಯಿದೆ.

ಸಿಂಹ: ​ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಯೋಗವಿದೆ. ಪ್ರೇಮ ಜೀವನದಲ್ಲಿ ಆಕರ್ಷಣೆ ಹೆಚ್ಚಾಗಲಿದೆ. ವಿವಾಹದ ವಿಚಾರದಲ್ಲಿ ಅಡೆತಡೆಗಳು ದೂರವಾಗಲಿವೆ. ವಿಚ್ಛೇದನದ ಪ್ರಕರಣಗಳಲ್ಲಿ ಅಂತಿಮ ತೀರ್ಪು ನಿಮ್ಮ ಪರವಾಗಿ ಬರುವ ಲಕ್ಷಣಗಳಿವೆ. ಒಟ್ಟಾರೆಯಾಗಿ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ.

ಕನ್ಯಾ: ​ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು, ಇದು ಅಸಮಾಧಾನಕ್ಕೆ ಕಾರಣವಾಗಬಹುದು. ಮದುವೆ ಸಂಬಂಧಿತ ಮಾತುಕತೆಗಳಲ್ಲಿ ವಿಳಂಬವಾಗಬಹುದು. ಸಂಬಂಧ ಮುರಿಯುವ ಹಂತದಲ್ಲಿದ್ದರೆ ಹಿರಿಯರ ಮಧ್ಯಸ್ಥಿಕೆಯಿಂದ ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ತಾಳ್ಮೆ ಅತಿ ಅಗತ್ಯ.

ತುಲಾ: ​ಶುಕ್ರನ ಪ್ರಭಾವದಿಂದ ನಿಮ್ಮ ಆಕರ್ಷಣೆ ಹೆಚ್ಚಲಿದೆ. ಪ್ರೀತಿಯ ಪ್ರಸ್ತಾಪಕ್ಕೆ ಇದು ಸಕಾಲ. ದಂಪತಿಗಳ ನಡುವೆ ಪ್ರೀತಿ ಮರುಕಳಿಸಲಿದೆ. ವಿವಾಹ ವಿಳಂಬವಾಗುತ್ತಿದ್ದವರಿಗೆ ಶುಭ ಸುದ್ಧಿ ಸಿಗಲಿದೆ. ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸಲು ಬಯಸುವವರಿಗೆ ಸೂಕ್ತ ವ್ಯಕ್ತಿಯ ಪರಿಚಯವಾಗಬಹುದು.

ವೃಶ್ಚಿಕ: ​ಗುಪ್ತ ಪ್ರೇಮ ಸಂಬಂಧಗಳಿಂದ ದೂರವಿರುವುದು ಉತ್ತಮ. ದಾಂಪತ್ಯ ಜೀವನದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ದೊಡ್ಡದಾಗದಂತೆ ನೋಡಿಕೊಳ್ಳಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರಿಗೆ ಕಾಯುವಿಕೆ ಅನಿವಾರ್ಯವಾಗಬಹುದು. ವಿವಾಹ ಆಕಾಂಕ್ಷಿಗಳು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ.

ಧನು: ​ಈ ವಾರ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ವಿಚ್ಛೇದನದ ನಂತರ ಏಕಾಂಗಿಯಾಗಿದ್ದವರಿಗೆ ಹೊಸ ಸಂಬಂಧಗಳು ಹತ್ತಿರವಾಗಲಿವೆ. ಸಂಗಾತಿಯ ಬೆಂಬಲದಿಂದ ದೊಡ್ಡ ಸಮಸ್ಯೆಗಳು ಪರಿಹಾರವಾಗಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.

ಮಕರ: ​ಸಂಬಂಧಗಳಲ್ಲಿ ಅನಿಶ್ಚಿತತೆ ಕಂಡುಬರಬಹುದು. ಹಳೆ ಪ್ರೇಮಿಯ ಭೇಟಿಯಿಂದ ಗೊಂದಲ ಉಂಟಾಗಬಹುದು. ವಿವಾಹ ಸಂಬಂಧಗಳಲ್ಲಿ ಧನಸಹಾಯದ ನಿರೀಕ್ಷೆಯಿದೆ. ವಿಚ್ಛೇದನ ಪ್ರಕ್ರಿಯೆಗಳಲ್ಲಿ ಆಸ್ತಿ ಹಂಚಿಕೆಯ ವಿಷಯ ಚರ್ಚೆಗೆ ಬರಬಹುದು. ಸಂಗಾತಿಯ ಮಾತುಗಳಿಗೆ ಗೌರವ ನೀಡಿ.

ಕುಂಭ: ​ಶುಕ್ರನ ಬಲವು ನಿಮ್ಮ ಪ್ರೇಮ ಜೀವನಕ್ಕೆ ಬಲ ನೀಡಲಿದೆ. ಬಹುಕಾಲದ ಪ್ರೀತಿಗೆ ಮದುವೆಯ ಮುದ್ರೆ ಬೀಳಲಿದೆ. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ಹೊಂದಾಣಿಕೆ ಮೂಡಲಿದೆ. ವಿಚ್ಛೇದನ ಬಯಸುವವರಿಗೆ ಕಾನೂನು ಹೋರಾಟದಲ್ಲಿ ಮುನ್ನಡೆ ಸಿಗಲಿದೆ.

ಮೀನ: ​ನಿಮ್ಮ ರಾಶಿಯಲ್ಲಿ ಶುಕ್ರನ ಸಂಚಾರವು ಪ್ರೀತಿಯಲ್ಲಿ ಯಶಸ್ಸನ್ನು ನೀಡಲಿದೆ. ಪ್ರೇಮಿಗಳ ನಡುವೆ ನಂಬಿಕೆ ಹೆಚ್ಚಾಗಲಿದೆ. ಹೊಸದಾಗಿ ವಿವಾಹವಾದವರಿಗೆ ಸಂತಸದ ವಾರ್ತೆ ಸಿಗುವ ಸಾಧ್ಯತೆಯಿದೆ. ವಿಚ್ಛೇದನದ ಆಲೋಚನೆ ಬಿಟ್ಟು ಒಂದಾಗಲು ಇದು ಉತ್ತಮ ಸಮಯ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಲಿದೆ.

ಲೋಹಿತ ಹೆಬ್ಬಾರ್

Source link

ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ

ಸಲ್ಮಾನ್ ಖಾನ್ (Salman Khan) ಬಾಲಿವುಡ್​​ನ ಸೂಪರ್ ಸ್ಟಾರ್. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರಿಗೆ ದೊಡ್ಡ ಬಾಕ್ಸ್ ಆಫೀಸ್​​ ಗೆಲುವು ಸಿಕ್ಕೇ ಇಲ್ಲ. ಅತ್ತ ಶಾರುಖ್ ಖಾನ್ ದೊಡ್ಡ ದೊಡ್ಡ ಹಿಟ್ ನೀಡುತ್ತಿದ್ದಾರೆ. ಸಲ್ಲು ಅವರಿಂಗತಲೂ ಕಿರಿಯರಾದ ರಣ್​​ಬೀರ್ ಕಪೂರ್, ರಣ್ವೀರ್ ಸಿಂಗ್, ವಿಕ್ಕಿ ಕೌಶಲ್ ಅವರುಗಳು 1000 ಕೋಟಿ ಕಲೆಕ್ಷನ್ ತೆಗೆಯುತ್ತಿದ್ದಾರೆ ಆದರೆ ಸಲ್ಲು ಸಿನಿಮಾಗಳು ಮಾತ್ರ ಫ್ಲಾಪ್ ಮೇಲೆ ಫ್ಲಾಪ್ ಆಗುತ್ತಿವೆ. ಇದೀಗ ಸೋಲಿನ ಸುಳಿಯಿಂದ ಹೊರಬರಲು ಸಲ್ಮಾನ್ ಖಾನ್ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದಾರೆ. ಅದೂ ಕೇವಲ ನಿರ್ದೇಶಕ ಮಾತ್ರವಲ್ಲ ನಿರ್ಮಾಪಕರೂ ದಕ್ಷಿಣದವರೇ ಆಗಿದ್ದಾರೆ.

ಸಲ್ಮಾನ್ ಖಾನ್ ಅವರಿಗಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ದಕ್ಷಿಣದ ಖ್ಯಾತ ನಿರ್ಮಾಪಕ ದಿಲ್ ರಾಜು. ತೆಲುಗು ಸಿನಿಮಾ ರಂಗದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್ ರಾಜು ಇದೀಗ ಮೂರನೇ ಹಿಂದಿ ಸಿನಿಮಾಣಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ತೆಲುಗಿನ ರೀಮೇಕ್​​ಗಳಾದ ಹಿಂದಿಯ ‘ಜೆರ್ಸಿ’ ಮತ್ತು ‘ಹಿಟ್’ ಸಿನಿಮಾಗಳನ್ನು ದಿಲ್ ರಾಜು ನಿರ್ಮಿಸಿದ್ದರು. ಇದೀಗ ಮೊದಲ ಬಾರಿಗೆ ಹಿಂದಿಯ ಸೂಪರ್ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಸಿನಿಮಾಕ್ಕಾಗಿ ದಿಲ್ ರಾಜು, ತೆಲುಗಿನ ಪ್ರತಿಭಾವಂತ ಜೊತೆಗೆ ಕಮರ್ಶಿಯಲ್ ಸಿನಿಮಾ ನಿರ್ದೇಶಕರೂ ಎನಿಸಿಕೊಂಡಿರುವ ವಂಶಿ ಪೈಡಪಲ್ಲಿ ಅವರನ್ನು ಜೊತೆಗೆ ಕರೆದೊಯ್ದಿದ್ದಾರೆ. ಈ ಹಿಂದೆ ‘ಮಹರ್ಶಿ’, ದಳಪತಿ ವಿಜಯ್ ನಟನೆಯ ‘ವಾರಿಸು’, ಜೂ ಎನ್​​ಟಿಆರ್ ನಟನೆಯ ‘ಬೃಂದಾವನಂ’, ರಾಮ್ ಚರಣ್ ನಟನೆಯ ‘ಯೆವುಡು’ ಸಿನಿಮಾಗಳನ್ನು ನಿರ್ದೇಶಿಸಿರುವ ವಂಶಿ ಪೈಡಪಲ್ಲಿ, ಸ್ಟಾರ್ ನಟರಿಗಾಗಿ ಸಾಮಾಜಿಕ ಸಂದೇಶವುಳ್ಳ ಅಥವಾ ಕೌಟುಂಬಿಕ ಕತೆಗಳುಳ್ಳ ಸಿನಿಮಾಗಳನ್ನು ಮಾಡುವುದರಲ್ಲಿ ನಿಸ್ಸೀಮರು. ವಂಶಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ಮಹರ್ಷಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ದೊರೆತಿದೆ.

ಇದನ್ನೂ ಓದಿ:ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್

ಇದೀಗ ಸಲ್ಮಾನ್ ಖಾನ್ ಅವರಿಗಾಗಿ ಸಾಮಾಜಿಕ ಸಂದೇಶವುಳ್ಳ ಆಕ್ಷನ್ ಸಿನಿಮಾ ಕತೆಯನ್ನು ವಂಶಿ ಪೈಡಪಲ್ಲಿ ಹೆಣೆದಿದ್ದು, ಸಿನಿಮಾದ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಈ ಹಿಂದೆಯೂ ಸಹ ಹಲವು ದಕ್ಷಿಣದ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಪ್ರಭುದೇವ ನಿರ್ದೇಶನದ ‘ವಾಂಟೆಡ್’, ‘ರಾಧೆ’, ‘ದಬಂಗ್ 3’ ಸಿನಿಮಾಗಳಲ್ಲಿ ಸಲ್ಲು ನಟಿಸಿದ್ದರು. ಮುರುಗದಾಸ್ ನಿರ್ದೇಶನದ ‘ಸಿಖಂಧರ್’ ಸಿನಿಮಾನಲ್ಲಿ ನಟಿಸಿದರು, ಅದು ಧಾರುಣವಾಗಿ ಫ್ಲಾಪ್ ಆಯ್ತು. ಮಲಯಾಳಂ ನಿರ್ದೇಶಕ ಸಿದ್ಧಿಕ್ ಅವರೊಟ್ಟಿಗೆ ‘ಬಾಡಿಗಾರ್ಡ್’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಜೊತೆಗೆ ಕೆಲಸ ಮಾಡಲಿದ್ದಾರೆ.

ಸಲ್ಮಾನ್ ಖಾನ್ ಇದೀಗ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಮುಗಿಸಿದ್ದಾರೆ. ಗಲ್ವಾನ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಗಲಾಟೆಯ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಾಮಿಡಿ-ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದೇ ಸಿನಿಮಾದ ಜೊತೆಗೆ ವೈಂಶಿ ಪೈಡಪಲ್ಲಿಯ ಸಿನಿಮಾ ಸಹ ಚಿತ್ರೀಕರಣಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವರಾಜ್ ಕುಮಾರ್​​ ಬಗ್ಗೆ ವಿಷ್ಣುವರ್ಧನ್​​ಗಿತ್ತು ಅಪಾರ ಪ್ರೀತಿ, ಕೊಟ್ಟಿದ್ದರು ಅಮೂಲ್ಯ ಉಡುಗೊರೆ

ವಿಷ್ಣುವರ್ಧನ್ (Vishnuvardhan), ಕನ್ನಡ ಚಿತ್ರರಂಗದ ಮೇರು ನಟ. ಹಲವಾರು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಅಣ್ಣಾವ್ರ ಬಳಿಕ ಅತಿ ಹೆಚ್ಚು ಗೌರವಿಸಲ್ಪಡುವ ನಟ ವಿಷ್ಣುವರ್ಧನ್. ಆದರೆ ಒಂದು ಸಮಯದಲ್ಲಿ ವಿಷ್ಣುವರ್ಧನ್ ಮತ್ತು ರಾಜ್​​ಕುಮಾರ್ ಅವರ ನಡುವೆ ವೈಮನಸ್ಯ ಇದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ರಾಜ್​​ಕುಮಾರ್ ಅಭಿಮಾನಿಗಳು ವಿಷ್ಣುವರ್ಧನ್ ಮೇಲೆ ದಾಳಿ ಮಾಡಿದ್ದರು, ವಿಷ್ಣುವರ್ಧನ್ ಅಭಿಮಾನಿಗಳು ಸಹ ರಾಜ್​​ಕುಮಾರ್ ಅವರ ಸಿನಿಮಾಗಳ ಸೋಲಿಸಲು ಯತ್ನಿಸಿದ್ದರು ಎಂದೆಲ್ಲ ಹೇಳಲಾಗುತ್ತದೆ. ಆದರೆ ವೈಯಕ್ತಿಕವಾಗಿ ರಾಜ್​​ಕುಮಾರ್ ಮತ್ತು ವಿಷ್ಣುವರ್ಧನ್ ಅವರುಗಳು ಬಲು ಆಪ್ತರಾಗಿದ್ದರು. ರಾಜ್​​ಕುಮಾರ್ ಅವರ ಬಗ್ಗೆ ಅಪಾರ ಗೌರವ ವಿಷ್ಣುವರ್ಧನ್ ಅವರಿಗೆ ಇತ್ತು. ಅಲ್ಲದೆ ಅವರ ಪುತ್ರ ಶಿವರಾಜ್ ಕುಮಾರ್ ಮೇಲೆ ಸಹ ವಿಪರೀತ ಪ್ರೀತಿ ಇತ್ತು. ಇಬ್ಬರ ನಡುವಿನ ಬಾಂಧವ್ಯ ಹೇಗಿತ್ತು ಎಂಬುದನ್ನು ಚಿ ಗುರುದತ್ ಅವರು ವಿವರಿಸಿದ್ದಾರೆ.

ವಿಷ್ಣುವರ್ಧನ್ ನಟನೆಯ ‘ಕೋಟಿಗೊಬ್ಬ’ ಸಿನಿಮಾದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಚಿ ಗುರುದತ್ ಅವರು ಶಿವಣ್ಣ ಮತ್ತು ವಿಷ್ಣುವರ್ಧನ್ ನಡುವೆ ಇದ್ದ ಬಂಧದ ಬಗ್ಗೆ ಮಾತನಾಡಿದರು. ತಾವು ಖುದ್ದಾಗಿ ನೋಡಿದ ಘಟನೆಗಳನ್ನೇ ಅವರು ವಿವರಿಸಿದರು. ಎಲ್ಲರಿಗೂ ಗೊತ್ತಿರುವಂತೆ ಗುರುದತ್ ಅವರ ತಂದೆ ಖ್ಯಾತ ಚಿತ್ರಸಾಹಿಸಿ ಚಿ ಉದಯಶಂಕರ್. ಇವರು ಒಮ್ಮೆ ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡುವ ಯೋಜನೆ ಹಾಕಿದ್ದರಂತೆ. ಅದರಲ್ಲೂ ಶಿವರಾಜ್ ಕುಮಾರ್ ಆ ಸಿನಿಮಾದ ನಾಯಕ, ವಿಷ್ಣುವರ್ಧನ್ ಉಪನಾಯಕ ಎಂದೆನಿಸುವ ರೀತಿಯ ಕತೆ ಅದಾಗಿತ್ತು. ಸಿನಿಮಾದ ಹೆಸರು ‘ಕೃಷ್ಣ-ಅರ್ಜುನ’.

ಇದನ್ನೂ ಓದಿ:ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ಉದಯಶಂಕರ್ ಅವರು ಶಿವರಾಜ್ ಕುಮಾರ್ ಅವರ ಬಳಿ ಈ ಸಿನಿಮಾದ ಬಗ್ಗೆ ಕೇಳಿದಾಗ, ವಿಷ್ಣುವರ್ಧನ್ ಅವರು, ‘ಉದಯ ಶಂಕರ್ ಅವರೇ ನಿಮಗೆ ಒಳ್ಳೆಯದಾಗುತ್ತೆ ಎಂದಾದರೆ ಖಂಡಿತ ನಾನು ಸಿನಿಮಾ ಮಾಡುತ್ತೀನಿ’ ಎಂದಿದ್ದರಂತೆ. ಅದಾಗಲೇ ವಿಷ್ಣುವರ್ಧನ್ ಸ್ಟಾರ್ ನಟ, ಆದರೂ ಸಹ ಹೊಸ ನಟನೊಟ್ಟಿಗೆ ನಟಿಸಲು ಒಪ್ಪಿದ್ದರಂತೆ ವಿಷ್ಣುವರ್ಧನ್.

ಒಮ್ಮೆ ಅಶೋಕ ಹೋಟೆಲ್​​ನಲ್ಲಿ ‘ಸತ್ಯಜ್ಯೋತಿ’ ಸಿನಿಮಾದ ಯಶಸ್ಸಿನ ಪಾರ್ಟಿ ಮಾಡುತ್ತಿದ್ದರಂತೆ. ಅಲ್ಲಿಗೆ ಬಂದಿದ್ದ ವಿಷ್ಣುವರ್ಧನ್ ನಾನು ಶಿವರಾಜ್ ಕುಮಾರ್ ಅವರನ್ನು ಭೇಟಿ ಆಗಬೇಕು ಎಂದರಂತೆ. ಆಗಿನ್ನೂ ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ ಮಾತ್ರವೇ ಬಿಡುಗಡೆ ಆಗಿತ್ತಂತೆ. ಕೂಡಲೇ ಶಿವರಾಜ್ ಕುಮಾರ್ ಅವರನ್ನು ಕರೆದುಕೊಂಡು ಬಂದರಂತೆ ಗುರುದತ್. ಆಗ ವಿಷ್ಣುವರ್ಧನ್ ಅವರು, ‘ನೀನು ಬಹಳ ದೊಡ್ಡ ಸ್ಟಾರ್ ಆಗುತ್ತೀಯ. ನೀನು ಸ್ಟಾರ್ ಆಗಿ ಬೆಳೆಯುವುದನ್ನು ನಾನು ನೋಡುತ್ತೀನಿ. ನೀನು ಸ್ಟಾರ್ ಆದ ದಿನ ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ ಆಗಿರುತ್ತದೆ’ ಎಂದರಂತೆ.

ಅಷ್ಟು ಮಾತ್ರವೇ ಅಲ್ಲದೆ, ತಮ್ಮ ಬಳಿ ಇದ್ದ ವಾಚ್ ಒಂದನ್ನು ಶಿವರಾಜ್ ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದರಂತೆ ವಿಷ್ಣುವರ್ಧನ್. ಅಸಲಿಗೆ ಆ ವಾಚನ್ನು ವಿಷ್ಣುವರ್ಧನ್ ಅವರಿಗೆ ದಿವಂಗತ ತಮಿಳಿನ ಲಿಜೆಂಡರಿ ನಟ ಎಂಜಿಆರ್ ನೀಡಿದ್ದರಂತೆ. ಆ ಅಪರೂಪದ ವಾಚನ್ನು ಯುವಕ ಶಿವಣ್ಣನ ಕೈಗೆ ಕೊಟ್ಟಿದ್ದರಂತೆ ವಿಷ್ಣುವರ್ಧನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ ರಾಜಧಾನಿ ಮೇಲೆ ಇಸ್ರೇಲ್ ವಾಯುದಾಳಿ: ತೈಲ ಡಿಪೋಗಳು ಸ್ಫೋಟ, ಬಾನೆತ್ತರಕ್ಕೆ ಚಿಮ್ಮಿದ ಬೆಂಕಿ

ಟೆಹ್ರಾನ್, ಮಾ.8: ಇಸ್ರೇಲ್ ಮತ್ತು ಇರಾನ್ ನಡುವಿನ ಮಹಾಯುದ್ಧವು ಸ್ಫೋಟಕ ರೂಪ ಪಡೆದಿದೆ. ಶನಿವಾರ ರಾತ್ರಿ ಇಸ್ರೇಲ್ ಯುದ್ಧವಿಮಾನಗಳು ಟೆಹ್ರಾನ್‌ನ ಐದು ಪ್ರಮುಖ ತೈಲ ಡಿಪೋಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ದಾಳಿಯಿಂದಾಗಿ ಇಡೀ ನಗರವು ಸ್ಫೋಟ ಮತ್ತು ದಟ್ಟವಾದ ಹೊಗೆಯಿಂದ ಆವೃತವಾಗಿದೆ. ತೈಲ ಟ್ಯಾಂಕರ್‌ಗಳಿಂದ ಸೋರಿಕೆಯಾದ ಇಂಧನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ರಸ್ತೆಗಳಲ್ಲಿ “ಬೆಂಕಿಯ ನದಿ” ಹರಿಯುತ್ತಿರುವಂತೆ ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಶಹ್ರಾನ್ ಮತ್ತು ಅಘದಾಸಿಯಾದಂತಹ ಪ್ರಮುಖ ಡಿಪೋಗಳು ಧಗಧಗಿಸಿ ಉರಿಯುತ್ತಿವೆ.

ತೈಲ ಮತ್ತು ಹೊಗೆಯ ಮಿಶ್ರಣದಿಂದಾಗಿ ಟೆಹ್ರಾನ್‌ನಲ್ಲಿ ‘ಕಪ್ಪು ಮಳೆ’ಯಂತೆ ಸುರಿದಿದೆ ಎಂದು ವರದಿಯಾಗಿದೆ. ಸುಟ್ಟ ಇಂಧನದ ವಾಸನೆ ಇಡೀ ನಗರವನ್ನು ಆವರಿಸಿದೆ.ದಾಳಿಯಲ್ಲಿ ಇಬ್ಬರು ಟ್ಯಾಂಕರ್ ಚಾಲಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಫೆಬ್ರವರಿ 28 ರಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಈವರೆಗೆ ಇರಾನ್‌ನಲ್ಲಿ ಸುಮಾರು 1,200 ನಾಗರಿಕರು ಮೃತಪಟ್ಟಿದ್ದು, 10,000 ಜನರು ಗಾಯಗೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆದಿದ್ದು, ಇರಾನ್‌ನ ಸುಮಾರು 16 ಮಿಲಿಟರಿ ವಿಮಾನಗಳು ಹಾನಿಗೊಳಗಾಗಿವೆ. ಇಸ್ರೇಲ್ ತನ್ನ ಪರ್ಷಿಯನ್ ಭಾಷೆಯ ಸಾಮಾಜಿಕ ಜಾಲತಾಣದ ಮೂಲಕ ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (Assembly of Experts) ಗೆ ನೇರ ಎಚ್ಚರಿಕೆ ನೀಡಿದೆ. “ಮುಂದಿನ ಸುಪ್ರೀಂ ಲೀಡರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರನ್ನು ನಾವು ಗುರಿಯಾಗಿಸಿಕೊಳ್ಳುತ್ತೇವೆ, ಇದು ನಿಮಗೆ ಎಚ್ಚರಿಕೆ” ಎಂದು ಇಸ್ರೇಲ್ ಗುಡುಗಿದೆ.

ಇದನ್ನೂ ಓದಿ: “ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈ ಯುದ್ಧವನ್ನು ಕನಿಷ್ಠ 6 ತಿಂಗಳ ಕಾಲ ಮುಂದುವರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಈವರೆಗೆ ನಾವು ಹಳೆಯ ಕ್ಷಿಪಣಿಗಳನ್ನು ಮಾತ್ರ ಬಳಸಿದ್ದೇವೆ, ಮುಂದಿನ ದಿನಗಳಲ್ಲಿ ‘ಅತ್ಯಾಧುನಿಕ ಲಾಂಗ್ ರೇಂಜ್’ ಕ್ಷಿಪಣಿಗಳನ್ನು ಬಳಸುವುದಾಗಿ ಇರಾನ್ ಎಚ್ಚರಿಸಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕ್​ ಖರ್ಗೆ ತವರು ಜಿಲ್ಲೆಯಲ್ಲಿ ಕೋಟ್ಯಂತರ ರೂ ಕಾಮಗಾರಿಗೆ ಚಾಲನೆ: ಬಿಜೆಪಿಗರ ಆರೋಪಗಳಿಗೆ ತಿರುಗೇಟು

ಕಲಬುರಗಿ, ಮಾರ್ಚ್​ 08: ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಗ್ಯಾರಂಟಿಗಳಿಂದ ರಾಜ್ಯ ಅಭಿವೃದ್ಧಿ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಗಳ ಸುರಿ ಮಳೆ ಮಾಡ್ತಿತ್ತು. ಅದಕ್ಕೆ ಅಪವಾದ ಎಂಬಂತೆ ಇಂದು ಸಾವಿರಾರು ಕೋಟಿ ರೂ ಕಾಮಗಾರಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಚಾಲನೆ ನೀಡಿದ್ದಾರೆ. ಒಂದೇ ಒಂದು ಕ್ಷೇತ್ರಕ್ಕೆ ಸಾವಿರ ಕೋಟಿ ರೂ ಅನುದಾನ ನೀಡಿದ್ದೇವೆ ಅಂತ ಬಿಜೆಪಿಗೆ ಖಡಕ್ ಉತ್ತರ ನೀಡಿದ್ದಾರೆ‌.

ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಜಾರಿಗೆ ತಂದಿತ್ತು. ಯಾವಾಗ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವೋ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎನ್ನೋ ಆರೋಪ ಕೇಳಿಬರುತ್ತಲೇ ಇದ್ದವು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ರಾಜ್ಯ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ ಎಂಬ ಆರೋಪವನ್ನ ಬಿಜೆಪಿ ಮಾಡ್ತಿತ್ತು. ಇದ್ರಿಂದ ರಾಜ್ಯ ಸರ್ಕಾರಕ್ಕೂ ತೀವ್ರ ಮುಜುಗರ ಆಗ್ತಿತ್ತು. ಇಂದು ತೀರುಗೇಟು ಎನ್ನುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಬರೋಬ್ಬರಿ 1069 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ನಾಯಕರ ಆರೋಪಕ್ಕೆ ಕಾಂಗ್ರೆಸ್​ ನಾಯಕರ ತಿರುಗೇಟು ನೀಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು 

ಚಿತ್ತಾಪುರ ಪಟ್ಟಣದ ಬಸ್ ಡಿಪೋ ಪಕ್ಕದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸರ್ಕಾರ, ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಿಧ ಕಾರ್ಯಕ್ರಮಗಳನ್ನ ಲೋಕಾರ್ಪಣೆ ಮಾಡಿದರು. ನಂತರ ಮಾತಾನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ನಡೆಯುತ್ತಿದ್ದೇವೆ. ರಾಜ್ಯದ ಮಹಿಳೆಯರಿಗೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಇದನ್ನೂ ಓದಿ: ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಮಲ್ಲಿಕಾರ್ಜುನ ಖರ್ಗೆ

ಕೇವಲ ಒಂದೇ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೋಟಿ ರೂ ಅನುದಾನವನ್ನ ಸರ್ಕಾರ ನೀಡಿದೆ.  ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು ಅಂತ ಪ್ರತಿ ತಿಂಗಳು ಎರಡು ಸಾವಿರ ರೂ ಹಾಗೂ ಉಚಿತ ಬಸ್ ನೀಡಿದ್ದೇವೆ. ಆದರೂ ಬಿಜೆಪಿಯವರು ನಮ್ಮ ಬಗ್ಗೆ ಅಪ್ರಚಾರ ಮಾಡುತ್ತಿದ್ದಾರೆ‌.‌ ಅಲ್ಲದೇ ಗ್ಯಾರಂಟಿಗಳನ್ನ ಬಂದ್ ಮಾಡಬೇಕು ಎನ್ನುತ್ತಿದ್ದಾರೆ ಎಂದರು. ನಮ್ಮ ಸರ್ಕಾರ ಜನರ ದುಡ್ಡನ್ನ ಗ್ಯಾರಂಟಿ ಮೂಲಕ ಜನರಿಗೆ ನೀಡ್ತಿದೆ‌. ಆದರೆ ಬಿಜೆಪಿಯವರು ಜನರ ದುಡ್ಡನ್ನ ಲೂಟಿ ಹೊಡೆಯುತ್ತಿದ್ದರು ಎಂದು ಆರೋಪಿಸಿದರು.

ಚಿತ್ತಾಪುರ ಕ್ಷೇತ್ರದ ಜನ ರಾಜ್ಯಕ್ಕೆ ಭವಿಷ್ಯದ ನಾಯಕನನ್ನ ನೀಡಿದ್ದಿರಿ: ಡಿಕೆ ಶಿವಕುಮಾರ್​

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನ ಹೆಚ್ಚಾಗಿ ಮಾಡುತ್ತಿದ್ದೇವೆ. ಚಿತ್ತಾಪುರ ಕ್ಷೇತ್ರದ ಜನ ರಾಜ್ಯಕ್ಕೆ ಭವಿಷ್ಯದ ನಾಯಕನನ್ನ ನೀಡಿದ್ದಿರಿ ಎಂದು ಪರೋಕ್ಷವಾಗಿ ಪ್ರಿಯಾಂರ್​​ ಪರ ಬ್ಯಾಟ್​ ಬೀಸಿದರು.

ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಯಾವ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಆದರೆ ಇಂದು ದೊಡ್ಡಮಟ್ಟದ ಕೆಲಸಗಳು ಆಗ್ತಿವೆ. ಈ ಮೊದಲು ಚಿತ್ತಾಪುರಕ್ಕೆ ಬರಲು ರಸ್ತೆಯೇ ಇರಲಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ಶಾಸಕರಾದ ಮೇಲೆ ಹೈವೇ ಮಾಡಿಸಿದ್ದಾರೆ. ಆದರೂ ಬಿಜೆಪಿಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದರು.

ಪ್ರಿಯಾಂಕ್ ಬಂದ ಮೇಲೆ ಚಿತ್ತಾಪುರದಲ್ಲಿ ಅಭಿವೃದ್ಧಿ ಆಗುತ್ತಿದೆ. ಕೆಲಸ ಮಾಡುವವರಿಗೆ ನೀವು ಬೆಂಬಲ ಕೊಡಿ. ಈ ಭಾಗಕ್ಕೆ ನಾವು 371ಜೆ ಜಾರಿಗೆ ತಂದೆವು. ಅದರಿಂದ ಸಾವಿರಾರು ಕೋಟಿ ರೂ ಅನುದಾನ ಬರುತ್ತಿದೆ. ಅದರ ಲಾಭ ನಾನೊಬ್ಬನೆ ತೆಗೆದುಕೊಳ್ತಿಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಿಗುತ್ತೆ. ಆದರೆ ಕೇಂದ್ರ ಸರ್ಕಾರ ಖರ್ಗೆ ಓಡಾಟ ಮಾಡುತ್ತಾರೆ ಅಂತ ವಿಮಾನ ಬಂದ್ ಮಾಡಿದರು. ಅದಕ್ಕೆ ಇಲ್ಲಿನ ಜನ ಹುಷಾರ್ ಆಗಿ ಇರಬೇಕು ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!

ಒಟ್ಟಿನಲ್ಲಿ ಗ್ಯಾರಂಟಿಗಳ ಮಧ್ಯ ಅಭಿವೃದ್ಧಿಯೂ ನಮ್ಮ ಮೂಲ‌ ಮಂತ್ರ ಅಂತ ಕಾಂಗ್ರೆಸ್​ ನಾಯಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸ್ವಾಭಿಮಾನದ ಬದುಕಿನ ಜೊತೆಗೆ ರಾಜ್ಯದ ಅಭಿವೃದ್ಧಿಯೂ ನಮ್ಮ ಸರ್ಕಾರದ ಬದ್ದತೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್​ ಶಕ್ತಿ ಪ್ರದರ್ಶನ‌ ಮಾಡಿದೆ. ಕುರ್ಚಿ ಕಿತ್ತಾಟದ ಮಧ್ಯೆ ಸಿಎಂ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಮತ್ತಷ್ಟು ಉಹಾಪೋಹಕ್ಕೆ ರೆಕ್ಕೆಪುಕ್ಕ ಬಂದಿದ್ದು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: 18 ಎಸೆತಗಳಲ್ಲಿ ಅರ್ಧಶತಕ; ಫೈನಲ್‌ನಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

Source link