All posts by nagaraj11081993

IPL mobile Theft: ಕ್ರೀಡಾಂಗಣ ಮಾತ್ರವಲ್ಲದೆ ಮೆಟ್ರೋ, ಬಸ್ ನಿಲ್ದಾಣಗಳಲ್ಲೂ ಮೊಬೈಲ್ ಕಳ್ಳತನ, ಹುಷಾರಾಗಿರಿ!

IPL mobile Theft: ಕ್ರೀಡಾಂಗಣ ಮಾತ್ರವಲ್ಲದೆ ಮೆಟ್ರೋ, ಬಸ್ ನಿಲ್ದಾಣಗಳಲ್ಲೂ ಮೊಬೈಲ್ ಕಳ್ಳತನ, ಹುಷಾರಾಗಿರಿ!

ಬೆಂಗಳೂರು, ಮಾರ್ಚ್​ 31: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ನಡೆದ ಮೊಬೈಲ್​ಗಳ ಕಳ್ಳತನದ (Mobile Theft) ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ ಒಟ್ಟು 21 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಮಾತ್ರವಲ್ಲದೆ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲೂ ಆರೋಪಿಯು ಮೊಬೈಲ್ ಕಳವು ಮಾಡುತ್ತಿದ್ದನು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್​ ಪೊಲೀಸ್ ಸ್ಟೇಷನ್​ನಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಆರೋಪಿ ಅಪ್ರಾಪ್ತ ಬಾಲಕರನ್ನು ಸಹ ತನ್ನ ಜೊತೆ ಸೇರಿಸಿಕೊಂಡು ಕಳ್ಳತನ ನಡೆಸುತ್ತಿದ್ದ ವಿಚಾರವೂ ಬಹಿರಂಗವಾಗಿದ್ದು, ಇದೀಗ ಪೊಲೀಸರು ಕೆಲ ಬಾಲಕರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಇದನ್ನೂ ಓದಿ ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಪೊಲೀಸ್ ಆಯುಕ್ತರ ಎಚ್ಚರಿಕೆ

ಘಟನೆಯ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಐಪಿಎಲ್ ಪಂದ್ಯಗಳಂತಹ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವವರು ತಮ್ಮ ವೈಯಕ್ತಿಕ ವಸ್ತುಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ. ಮೊಬೈಲ್, ಪರ್ಸ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮಶಾನದಲ್ಲಿ ಸಿಲಿಂಡರ್ ದಂಧೆ

ತೆಲಂಗಾಣ, ಮಾರ್ಚ್​ 31: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿ ದೇಶದಲ್ಲಿರುವ ಅನಿಲ ಕೊರತೆ ಭಯವನ್ನೇ ಉಪಯೋಗಿಸಿಕೊಂಡು ಸ್ಮಶಾನದಲ್ಲಿ ಸಿಲಿಂಡರ್(Cylinder) ದಂಧೆ ನಡೆಸುತ್ತಿದ್ದವರ ವಿರುದ್ಧ ತೆಲಂಗಾಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪಂಜಗುಟ್ಟದಲ್ಲಿರುವ ಸ್ಮಶಾನವನ್ನು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಅನಿಲ ಲಭ್ಯತೆ ಕಡಿಮೆಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಸಿಲಿಂಡರ್‌ಗಳು ಲಭ್ಯವಿರುವುದಿಲ್ಲ ಎಂಬ ಕೃತಕ ಭಯವನ್ನು ಒಡ್ಡಿ ಈ ಗ್ಯಾಂಗ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಮಾಲೀಕರಿಂದ ಹೆಚ್ಚುವರಿ ಹಣ ಪಡೆದಿದೆ. ಸುಮಾರು 2,100 ರೂ. ಬೆಲೆಯ ವಾಣಿಜ್ಯ ಸಿಲಿಂಡರ್ ಅನ್ನು 6,000 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಟಾಸ್ಕ್ ಫೋರ್ಸ್ ಡಿಸಿಪಿ ವೈಭವ್ ರಘುನಾಥ್ ಬಹಿರಂಗಪಡಿಸಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಲು, ಸಿಲಿಂಡರ್‌ಗಳನ್ನು ಪಂಜಗುಟ್ಟದಲ್ಲಿರುವ ಸ್ಮಶಾನದಲ್ಲಿ ಸಂಗ್ರಹಿಸಲಾಗಿತ್ತು. ಆರೋಪಿಗಳು ಶಂಷಾಬಾದ್‌ನಲ್ಲಿ ಬೃಹತ್ ಗೋಡೌನ್ ಮತ್ತು ಅಫ್ಜಲ್‌ಗಂಜ್‌ನಲ್ಲಿ ಕಚೇರಿಯನ್ನು ಸಹ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ರಾಜ್ಯದಲ್ಲಿ ಗ್ಯಾಸ್​​ ಸಿಲಿಂಡರ್​​ ಬೆನ್ನಲ್ಲೇ ರಸಗೊಬ್ಬರ ಅಭಾವ ಆತಂಕ: ಸೂಕ್ತ ಕ್ರಮಕ್ಕೆ ಆಗ್ರಹ

ಟಾಸ್ಕ್ ಫೋರ್ಸ್ ಜುಬಿಲಿ ಹಿಲ್ಸ್ ತಂಡ ಮತ್ತು ಬಂಜಾರಾ ಹಿಲ್ಸ್ ಪೊಲೀಸರು ಜಂಟಿಯಾಗಿ ನಡೆಸಿದ ಈ ದಾಳಿಗಳಲ್ಲಿ 414 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು 22 ಲಕ್ಷ ರೂ. ಎಂದು ಅವರು ಹೇಳಿದರು. 11 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಮೊಹಮ್ಮದ್ ಅಮೀರ್ ಜೊತೆಗೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರು ಗ್ಯಾಸ್ ಡೆಲಿವರಿ ಬಾಯ್ಸ್ ಆಗಿದ್ದರು ಎಂಬುದು ಅಚ್ಚರಿಯ ಸಂಗತಿ.

ಈ ಗ್ಯಾಂಗ್ ಕಳೆದ 18 ತಿಂಗಳಿನಿಂದ ಈ ಅಕ್ರಮ ವ್ಯವಹಾರ ನಡೆಸುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಮೆಟ್ರೋ ಗ್ಯಾಸ್ ಏಜೆನ್ಸಿ ಹೆಸರಿನಲ್ಲಿ ವಾಣಿಜ್ಯ ಅನಿಲ ಸರಬರಾಜುಗಳನ್ನು ಬೇರೆಡೆಗೆ ತಿರುಗಿಸಿ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿನ ಸಣ್ಣ ಪ್ರಮಾಣದ ಹೋಟೆಲ್‌ಗಳು ಮತ್ತು ಟಿಫಿನ್ ಕೇಂದ್ರಗಳು ಹತಾಶ ಪರಿಸ್ಥಿತಿಯಲ್ಲಿದ್ದಾಗ ಅವರಿಂದ ಮೂರು ಪಟ್ಟು ಬೆಲೆಗೆ ಅನಿಲವನ್ನು ಖರೀದಿಸುತ್ತಿವೆ ಎಂದು ವರದಿಯಾಗಿದೆ.

ನಗರದಲ್ಲಿ ಗ್ಯಾಸ್ ಕೊರತೆ ಇಲ್ಲ, ಸರಬರಾಜು ಸುಗಮವಾಗಿದೆ. ಯಾರೂ ವದಂತಿಗಳನ್ನು ನಂಬಿ ಕಾಳಸಂತೆಯಲ್ಲಿ ಖರೀದಿಸಬಾರದು ಎಂದು ಡಿಸಿಪಿ ರಘುನಾಥ್ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಕೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Sainik School Recruitment 2026: ಸೈನಿಕ್ ಶಾಲೆಯಲ್ಲಿ ಬೋಧಕ-ಬೋಧಕೇತರ ಹುದ್ದೆಗಳಿಗೆ ನೇಮಕಾತಿ; 10ನೇ ತರಗತಿ ಪಾಸಾದವರಿಗೂ ಅವಕಾಶ!

ನೀವು ಶಿಕ್ಷಣ ಕ್ಷೇತ್ರ ಅಥವಾ ಆಡಳಿತಾತ್ಮಕ ವಿಭಾಗದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುತ್ತಿದ್ದರೆ, ಹರಿಯಾಣದ ರೇವಾರಿಯಲ್ಲಿರುವ ಸೈನಿಕ್ ಶಾಲೆಯು ನಿಮಗಾಗಿ ಒಂದು ಸುವರ್ಣಾವಕಾಶವನ್ನು ತಂದಿದೆ. ಬೋಧಕ ಮತ್ತು ಬೋಧಕೇತರ ವಿಭಾಗದ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಮಾರ್ಚ್ 28 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 17 ವರೆಗೆ ಸಮಯವಕಾಶವಿದೆ.

ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ಒಟ್ಟು ಐದು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಟಿಜಿಟಿ (ಸಾಮಾನ್ಯ ವಿಜ್ಞಾನ) ಮತ್ತು ಟಿಜಿಟಿ (ಸಮಾಜ ವಿಜ್ಞಾನ) ವಿಭಾಗದಲ್ಲಿ ತಲಾ ಒಂದು ಹುದ್ದೆ, ಸಂಗೀತ ಶಿಕ್ಷಕರ ಒಂದು ಹುದ್ದೆ ಹಾಗೂ ಎರಡು ಎಲ್‌ಡಿಸಿ (ಲೋವರ್ ಡಿವಿಷನ್ ಕ್ಲರ್ಕ್) ಹುದ್ದೆಗಳು ಸೇರಿವೆ. ವಿಶೇಷವೆಂದರೆ, ಕೇವಲ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಕಂಪ್ಯೂಟರ್ ಜ್ಞಾನವಿದ್ದರೆ ಎಲ್‌ಡಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಮತ್ತು ಮಾನದಂಡಗಳು:

ಟಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಅಥವಾ ಆನರ್ಸ್ ಪದವಿ ಪಡೆದಿರಬೇಕು ಮತ್ತು ಬಿ.ಎಡ್ ಜೊತೆಗೆ ಸಿಟಿಇಟಿ (CTET) ಪತ್ರಿಕೆ-II ರಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ. ಸಂಗೀತ ಶಿಕ್ಷಕರ ಹುದ್ದೆಗೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನಿಷ್ಠ ಮೂರು ವರ್ಷಗಳ ವಿಷಯಾಧಾರಿತ ಅಧ್ಯಯನ ಅಗತ್ಯವಿದೆ. ಇನ್ನು ಎಲ್‌ಡಿಸಿ ಹುದ್ದೆ ಬಯಸುವವರು 10ನೇ ತರಗತಿ ಪಾಸಾಗಿರಬೇಕು ಹಾಗೂ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗದೊಂದಿಗೆ ಎಂಎಸ್ ವರ್ಡ್, ಎಕ್ಸೆಲ್ ಮತ್ತು ಇಂಟರ್ನೆಟ್‌ನಂತಹ ಮೂಲಭೂತ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಸೈನಿಕ್ ಸ್ಕೂಲ್ ರೇವಾರಿಯ ಅಧಿಕೃತ ವೆಬ್‌ಸೈಟ್ ssrw.org ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು ಮತ್ತು 500 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಲಗತ್ತಿಸಿ, “ಗೋತ್ರ, ಅಹಿರ್, ಜಿಲ್ಲೆ ರೇವರಿ, ಪಿನ್-123102” ವಿಳಾಸಕ್ಕೆ ಕಳುಹಿಸಿಕೊಡಬೇಕು. ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ಲಕೋಟೆಯನ್ನು ಲಗತ್ತಿಸುವುದನ್ನು ಮರೆಯಬೇಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ ಪ್ರೇಮ್-ರಕ್ಷಿತಾ

ನಿರ್ದೇಶಕ ಪ್ರೇಮ್ (Director Prem) ಇತ್ತೀಚೆಗೆ ‘ಕೆಡಿ’ ಸಿನಿಮಾದ ಹಾಡಿನ ವಿವಾದದಿಂದ ಬಹಳ ಸುದ್ದಿಯಲ್ಲಿದ್ದರು. ಅವರು ಬರೆದಿರುವ ‘ಕೆಡಿ’ ಸಿನಿಮಾದ ಹಾಡಿನ ವಿರುದ್ಧ ತೀವ್ರ ಆಕ್ಷೇಪ ಎದ್ದಿತ್ತು. ಸ್ವತಃ ಪ್ರೇಮ್ ಸೇರಿದಂತೆ ಹಲವರಿಗೆ ನೊಟೀಸ್ ಸಹ ಜಾರಿ ಆಗಿತ್ತು. ಇದೀಗ ಆ ವಿವಾದದಿಂದ ಹೊರ ಬಂದಂತಿರುವ ಪ್ರೇಮ್ ಅವರು ತಮ್ಮ ಪತ್ನಿ ರಕ್ಷಿತಾ ಅವರೊಟ್ಟಿಗೆ ಸೇರಿ ಹೊಸ ಸ್ಟುಡಿಯೋ ಕಮ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಪ್ರತಿಭಾವಂತ ಹೊರಬರಿಗೆ ಅವಕಾಶ ಕೊಡುವ ಉದ್ದೇಶ ಈ ಸ್ಟುಡಿಯೋ ನಿರ್ಮಾಣದ ಹಿಂದೆ ಇದೆಯಂತೆ.

​ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಈಗ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ ‘ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಟಾರ್ ನಟ-ನಟಿಯರೊಟ್ಟಿಗೆ ಭಾರಿ ಬಜೆಟ್​ನ ಸಿನಿಮಾಗಳನ್ನು ಮಾಡುವ ಪ್ರೇಮ್ ಅವರು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಸದುದ್ದೇಶದಿಂದ ಈ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿದ್ದಾರಂತೆ.

ತಮ್ಮ ಈ ಹೊಸ ನಿರ್ಮಾಣ ಸಂಸ್ಥೆಯ ಮೂಲಕ ತಮ್ಮದೇ ಗರಡಿಯಲ್ಲಿ ಪಳಗಿರುವ ತಮ್ಮದೇ ಶಿಷ್ಯ ಮಂಜುನಾಥ್ ಬಿಎಸ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಅವರ ಸಿನಿಮಾಕ್ಕೆ ಗುರು ಪ್ರೇಮ್ ಅವರದ್ದೇ ಬಂಡವಾಳ.

ಇದನ್ನೂ ಓದಿ:‘ಸರ್ಸೆ ಸೆರಗು’ ಹಾಡು ವಿವಾದ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಪ್ರೇಮ್​​ಗೆ ನೊಟೀಸ್

ಈಗ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಕ್ಕೆ ‘ಏಕ್ ಲವ್ ಯಾ’ ಖ್ಯಾತಿಯ ಯುವ ನಟ ರಾಣಾ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಟಿ ರಕ್ಷಿತಾ ಅವರ ಸಹೋದರ ಸಹ ಆಗಿದ್ದಾರೆ ರಾಣಾ. ಖ್ಯಾತ ಛಾಯಾಗ್ರಾಹಕ ವಿಲಿಯಂ ಡೆವಿಡ್ ಈ ಸಿನಿಮಾಕ್ಕೆ ಸಿನಿಮಾಟೊಗ್ರಫಿ ಮಾಡಲಿದ್ದಾರೆ. ಯುವ ಪ್ರತಿಭೆ ರೋಮಿಯೋ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ನಿರ್ದೇಶಕರಾಗಿ ಭಾರಿ ಹೆಸರು ಮಾಡಿರುವ ಪ್ರೇಮ್ ಅವರು ಈಗ ನಿರ್ಮಾಪಕರಾಗಿ ಯಶಸ್ವಿ ಆಗುತ್ತಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫಲಕೊಟ್ಟ ವಯಸ್ಕರ ಶಿಕ್ಷಣ ಅಭಿಯಾನ: ಉಡುಪಿ ಶೀಘ್ರವೇ ಪೂರ್ಣ ಸಾಕ್ಷರ ಜಿಲ್ಲೆ; ಘೋಷಣೆಯೊಂದೇ ಬಾಕಿ

ಉಡುಪಿ, ಮಾರ್ಚ್​​ 31: ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇ. 82.7ರಷ್ಟಿರುವ ನಡುವೆ ಕರಾವಳಿ ಜಿಲ್ಲೆಗಳು ಪೂರ್ಣ ಸಾಕ್ಷರ ಜಿಲ್ಲೆಗಳಾಗುವತ್ತ ದಾಪುಗಾಲಿಟ್ಟಿವೆ. ಆ ಪೈಕಿ ಉಡುಪಿ ಶೀಘ್ರದಲ್ಲೇ ಪೂರ್ಣ ಸಾಕ್ಷರ ಜಿಲ್ಲೆಯಾಗಿ ಘೋಷಣೆಯಾಗಲಿದ್ದು, ಇದನ್ನು ಜಿಲ್ಲೆಯ ವಯಸ್ಕರ ಶಿಕ್ಷಣ ಅಭಿಯಾನದಲ್ಲಿನ ಮಹತ್ವದ ಮೈಲಿಗಲ್ಲೆಂದೇ ಪರಿಗಣಿಸಲಾಗಿದೆ. ಕಳೆದ ವರ್ಷ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಕ್ಷರಾಸಕ್ತರ ಗುರುತಿಸುವಿಕೆ ಹಾಗೂ ಶಿಕ್ಷಣ ನೀಡುವ ಕಾರ್ಯ ಆರಂಭವಾಗಿತ್ತು. ವಯಸ್ಕರ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳಿಂದ ಪೂರ್ಣ ಸಾಕ್ಷರತೆ ಘೋಷಣೆಗಳು ಈಗಾಗಲೇ ಲಭಿಸಿವೆ. ಉಡುಪಿ ಮತ್ತು ಕುಂದಾಪುರ ತಾಲೂಗಳಿಂದ ಈ ಕುರಿತ ಹೇಳಿಕೆ ಬಾಕಿ ಇದ್ದು, ಆ ಬಳಿಕ ಜಿಲ್ಲಾ ಪಂಚಾಯಿತಿ ಉಡುಪಿಯನ್ನು ಪೂರ್ಣ ಸಾಕ್ಷರ ಜಿಲ್ಲೆ ಎಂದು ಅಧಿಕೃತವಾಗಿ ಘೋಷಿಸಲಿದೆ.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ಶೇ.95 ಅಥವಾ ಅದಕ್ಕಿಂತ ಹೆಚ್ಚು ಸಾಕ್ಷರತೆ ಪಡೆದ ಪ್ರದೇಶವನ್ನು ಸಂಪೂರ್ಣ ಸಾಕ್ಷರ ಎಂದು ಪರಿಗಣಿಸಲಾಗುತ್ತದೆ. ಈ ಪ್ರಮಾಣವನ್ನು ಶೇ.100ರ ಸಾಕ್ಷರತೆಗೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 158 ಗ್ರಾಮ ಪಂಚಾಯಿತಿಗಳಿದ್ದು, ಎಲ್ಲವೂ ಸಂಪೂರ್ಣ ಸಾಕ್ಷರತೆ ಸಾಧಿಸಿರುವುದಾಗಿ ವರದಿಗಳನ್ನು ಸಲ್ಲಿಸಿವೆ. ಅಂತಿಮ ಹಂತದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಈ ಘೋಷಣೆಗಳನ್ನು ಸಂಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ; ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಈ ಸಾಧನೆಗೆ ವಯಸ್ಕರ ಶಿಕ್ಷಣ ಇಲಾಖೆ ನಡೆಸಿದ ವಿಶೇಷ ಕಾರ್ಯಕ್ರಮ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಗುರುತಿಸಲಾದ 1,246 ಅಕ್ಷರಾಸಕ್ತರನ್ನು ನಾಲ್ಕು ತಿಂಗಳ ವಿಶೇಷ ಪಠ್ಯಕ್ರಮಕ್ಕೆ ಸೇರಿಸಿ, ಓದು, ಬರಹ ಹಾಗೂ ಅಂಕಗಣಿತದ ಮೂಲಭೂತ ಕೌಶಲ್ಯಗಳನ್ನು ಕಲಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪರೀಕ್ಷೆ ಕೂಡ ನಡೆಸಲಾಗಿದೆ. ಈ ಯೋಜನೆ ಮುಖ್ಯವಾಗಿ ಬಾಲ್ಯದಲ್ಲಿ ಶಿಕ್ಷಣದಿಂದ ದೂರ ಉಳಿದ ವಯಸ್ಕರು ಮತ್ತು ಹಿರಿಯರಿಗೆ ಸಹಾಯಕವಾಗಿದೆ. ಸಾಕ್ಷರತಾ ಕೋರ್ಸ್ ಅಗತ್ಯವಿದ್ದವರು ತಮ್ಮ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಿದ್ದು, ಪಂಚಾಯಿತಿಗಳು ಅವರಿಗೆ ಸಹಾಯ ಮಾಡಿವೆ. ಸುಮಾರು ಎಂಟು ತಿಂಗಳ ಹಿಂದೆ ಜಿಲ್ಲೆಯ 158 ಗ್ರಾಮ ಪಂಚಾಯಿತಿಗಳ ಪೈಕಿ 45 ಪಂಚಾಯಿತಿಗಳು ಇನ್ನೂ ಪೂರ್ಣ ಸಾಕ್ಷರವಾಗಿರಲಿಲ್ಲ. ಆದರೆ ಇದೀಗ ಈ ಮಹತ್ವದ ಸಾಧನೆ ಸಾಧ್ಯವಾಗಿರುವುದು ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ ಬೇಟೆ: ಬಟ್ಟೆ ವ್ಯಾಪಾರದ ನೆಪದಲ್ಲಿ ಎಂಡಿಎಂಎ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅಂದರ್!

ಬೆಂಗಳೂರು, ಮಾರ್ಚ್ 31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಮಾದಕ ವಸ್ತುಗಳ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಯಲಹಂಕ ಪೊಲೀಸರು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಎಂಡಿಎಂಎ (MDMA) ಕ್ರಿಸ್ಟಲ್ಸ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ನೈಜೀರಿಯಾ ಮೂಲದ ಪೆಡ್ಲರ್ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಬಂಧಿಸಿದ್ದಾರೆ.

ಬಿಸಿನೆಸ್ ವೀಸಾದಡಿ ಬಂದು ಡ್ರಗ್ ಡೀಲಿಂಗ್

ಬಂಧಿತ ಆರೋಪಿ ಸ್ಯಾಮುಯೆಲ್ 2012ರಲ್ಲಿ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ದೆಹಲಿ ಮತ್ತು ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ, ಕಳೆದ ವರ್ಷ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಬಟ್ಟೆ ವ್ಯಾಪಾರ ಮಾಡುವುದು ಕೇವಲ ನೆಪವಾಗಿದ್ದು, ಅದರ ಮರೆಯಲ್ಲಿ ಈತ ದೊಡ್ಡ ಮಟ್ಟದ ಡ್ರಗ್ ನೆಟ್‌ವರ್ಕ್ ನಡೆಸುತ್ತಿದ್ದ. ಬನ್ನೇರುಘಟ್ಟ ಬಳಿ ಕೇವಲ 50 ಸಾವಿರ ರೂ.ಗೆ ಡ್ರಗ್ಸ್ ಖರೀದಿಸಿ, ಅದನ್ನು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಈತನ ಮೇಲಿದೆ. ಸದ್ಯ ಯಲಹಂಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ಪ್ರಮುಖ ಡ್ರಗ್ಸ್ ವಶ ಪ್ರಕರಣಗಳು

  • ಮಾರ್ಚ್ 25, 2026: ಸಿಸಿಬಿ ಪೊಲೀಸರಿಂದ ಕೆಂಗೇರಿ ಬಳಿ ಕಾರ್ಯಾಚರಣೆ; 50 ಲಕ್ಷ ರೂ. ಮೌಲ್ಯದ ಹ್ಯಾಶಿಷ್ ಆಯಿಲ್ ವಶ.
  • ಮಾರ್ಚ್ 12, 2026: ಎಲೆಕ್ಟ್ರಾನಿಕ್ ಸಿಟಿ ಬಳಿ ವಿದೇಶಿ ಪ್ರಜೆಯಿಂದ 1 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ.
  • ಮಾರ್ಚ್ 3, 2026: ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್​​ಮೆಂಟ್​​ನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್.
  • ಫೆಬ್ರವರಿ 28, 2026: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಕೇನ್ ಸಾಗಿಸುತ್ತಿದ್ದ ಪೆಡ್ಲರ್ ಬಂಧನ.

ಇದನ್ನೂ ಓದಿ: ಸಿಸಿಬಿ ಪೊಲೀಸರ ಮೆಗಾ ರೇಡ್​​: ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​

ಇಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರಕರಣಗಳಲ್ಲಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಮಾರ್ಚ್​ 3 ರಂದು ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್​​ಮೆಂಟೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಜಾಲವನ್ನು ಬಯಲಿಗೆಳೆದಿದ್ದ ಸಿಸಿಬಿ ಪೊಲೀಸರು, ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 31: ನಿನ್ನೆ ಕಡಿಮೆಗೊಂಡಿದ್ದ ಚಿನ್ನದ ಬೆಲೆ (Gold Rates) ಇವತ್ತು ಮಂಗಳವಾರ ಗ್ರಾಮ್​ಗೆ 185 ರೂಗಳಷ್ಟು ಏರಿಕೆಯಾಗಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆಯೂ ಮಂಗಳವಾರ ಹೆಚ್ಚಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮತ್ತೊಮ್ಮೆ 250 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,929 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,685 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,197 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,929 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,685 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,685 ರೂ
  • ಚೆನ್ನೈ: 13,670 ರೂ
  • ಮುಂಬೈ: 13,685 ರೂ
  • ದೆಹಲಿ: 13,700 ರೂ
  • ಕೋಲ್ಕತಾ: 13,685 ರೂ
  • ಕೇರಳ: 13,685 ರೂ
  • ಅಹ್ಮದಾಬಾದ್: 13,690 ರೂ
  • ಜೈಪುರ್: 13,700 ರೂ
  • ಲಕ್ನೋ: 13,700 ರೂ
  • ಭುವನೇಶ್ವರ್: 13,685 ರೂ

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 574 ರಿಂಗಿಟ್ (13,370 ರುಪಾಯಿ)
  • ದುಬೈ: 505 ಡಿರಾಮ್ (12,911 ರುಪಾಯಿ)
  • ಅಮೆರಿಕ: 141.50 ಡಾಲರ್ (13,278 ರುಪಾಯಿ)
  • ಸಿಂಗಾಪುರ: 183.70 ಸಿಂಗಾಪುರ್ ಡಾಲರ್ (13,348 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (12,991 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,882 ರುಪಾಯಿ)
  • ಓಮನ್: 54.05 ಒಮಾನಿ ರಿಯಾಲ್ (13,177 ರುಪಾಯಿ)
  • ಕುವೇತ್: 41.66 ಕುವೇತಿ ದಿನಾರ್ (12,744 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 250 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 250 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bihar Stampede: ಬಿಹಾರದ ಶೀತಲ ದೇವಸ್ಥಾನದಲ್ಲಿ ಕಾಲ್ತುಳಿತ, 8 ಮಹಿಳೆಯರು ಸಾವು

ಪಾಟ್ನಾ, ಮಾರ್ಚ್​ 31: ಬಿಹಾರದ ನಳಂದದಲ್ಲಿರುವ ಶೀತಲ ದೇವಸ್ಥಾನದಲ್ಲಿ ಕಾಲ್ತುಳಿತ ಉಂಟಾಗಿದ್ದು, 8 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. 6ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಚೈತ್ರ ಮಾಸದ ಕೊನೆಯ ಮಂಗಳವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಅಪಘಾತದಿಂದ ಮಹಿಳೆಯರು ಸೇರಿದಂತೆ ಅನೇಕ ಜನರು ತೊಂದರೆಗೀಡಾಗಿದ್ದಾರೆ. ದುರಂತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಗ್ರಾಮಸ್ಥರೊಂದಿಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ನಡೆಸಿದರು. ಕಳೆದ ವರ್ಷ, ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿಯಂದು ಕಾಲ್ತುಳಿತ ಉಂಟಾಗಿ 9 ಮಂದಿ ಭಕ್ತರು ಉಸಿರು ಚೆಲ್ಲಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಒಂದು ಗಂಟೆ ಮಳೆ ಬಂದ್ರೆ 20 ಸಲ ಪವರ್ ಕಟ್ ಮಾಡ್ತಾರೆ’: ಬೆಂಗಳೂರಿನ ಖ್ಯಾತ ಹೃದಯ ತಜ್ಞರ ಎಕ್ಸ್ ಪೋಸ್ಟ್ ವೈರಲ್!

ಬೆಂಗಳೂರು, ಮಾರ್ಚ್​ 31: ಮಾರ್ಚ್​ನಲ್ಲಿ ಬಿಸಿಲಿನ ಬೇಗೆ ಅನುಭವಿಸಿದ ನಿವಾಸಿಗಳಿಗೆ ಭಾನುವಾರ ಸುರಿದ ಸಾಧಾರಣ ಮಳೆಯೊಂದಿಗೆ (weather) ಸ್ವಲ್ಪ ಮಟ್ಟಿಗಿನ ತಂಪಿನ ಅನುಭವ ಸಿಕ್ಕಿತು. ಗುಡುಗು ಸಹಿತ ಮಳೆಯು ನಗರವನ್ನು ತಂಪುಗೊಳಿಸಿದರೂ, ವಿದ್ಯುತ್ ವ್ಯತ್ಯಯ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಈ ಬಗ್ಗೆ ತಮ್ಮ ಅಸಮಾಧಾನ ಹಂಚಿಕೊಂಡ ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ, X ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಒಂದು ಗಂಟೆಯ ಮಳೆ ಸುರಿದರೆ 20 ಬಾರಿ ವಿದ್ಯುತ್ ಹೋಗಿ ಬಂದಿದೆ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದಿರುವ ದೀಪಕ್, ನಾವು ಕೃತಕ ಬುದ್ಧಿಮತ್ತೆ (AI) ಬಗ್ಗೆ ಮಾತನಾಡುತ್ತೇವೆ, ಆದರೆ ಮೂಲಭೂತ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಇನ್ನೂ ಅನಾದಿಕಾಲದ್ದೇ ಆಗಿದೆ. ಇವು ನಂಬಿಕೆಗೆ ಅರ್ಹವಲ್ಲ ಎಂದು ಟೀಕಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ.

ನೆಟ್ಟಿಗರ ರಿಯಾಕ್ಷನ್ ಏನು?

ಡಾ. ದೀಪಕ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮ್ಮದೇ ಅನುಭವಗಳನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬ ಬಳಕೆದಾರ, ಬೆಂಗಳೂರುದಲ್ಲಿ BESCOM ಅತ್ಯುತ್ತಮ ಸೇವೆ ನೀಡುತ್ತದೆ. ನಮ್ಮ ಪ್ರದೇಶದಲ್ಲಿ ಸಮಸ್ಯೆ ತಿಳಿಸಿದ ಕೂಡಲೇ, ಮಧ್ಯರಾತ್ರಿಯಲ್ಲಿಯೂ ಪರಿಹಾರ ಕೊಡುತ್ತಾರೆ ಎಂದು ಬರೆದು ವಿದ್ಯುತ್ ಇಲಾಖೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು, ಭಾರತದ ಅತ್ಯಂತ ಓವರ್‌ಹೈಪ್ ಆಗಿರುವ ನಗರ ಬೆಂಗಳೂರು. ಹೊರಗಿನವರು ಇದನ್ನು ತಂತ್ರಜ್ಞಾನದ ನಗರ ಎಂದು ಮಾತ್ರ ನೋಡುತ್ತಾರೆ. ಆದರೆ ಇದರ ಇನ್ನೊಂದು ಮುಖವನ್ನೂ ನೋಡಬೇಕು ಎಂದು ಟೀಕಿಸಿದ್ದಾರೆ.

ಒಬ್ಬ ಬಳಕೆದಾರ ಅತ್ಯಂತ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ನಾವು ಎಐ ಬಳಸಿ ಮಳೆಯ ಹನಿಗಳನ್ನು ಗಾಳಿಯಲ್ಲೇ ಪತ್ತೆಹಚ್ಚಿ, ನೆಲಕ್ಕೆ ಬೀಳುವ ಮುನ್ನವೇ ವಿದ್ಯುತ್ ಕಡಿತ ಮಾಡುತ್ತೇವೆ ಎಂದು ಇಲಾಖೆಯ ಕಾಲೆಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ನವದೆಹಲಿ, ಮಾರ್ಚ್ 31: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ಗೆ ಪರಿಷ್ಕರಿಸುತ್ತದೆ. 2026ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಗೆ (April-June quarter) ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ಕ್ವಾರ್ಟರ್ ಆದ ಜನವರಿ-ಮಾರ್ಚ್ ಅವಧಿಯಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಸತತ ಎಂಟು ಕ್ವಾರ್ಟರ್​ಗಳಿಂದಲೂ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಕೊನೆಯ ಬಾರಿ ಬಡ್ಡಿದರದಲ್ಲಿ ಬದಲಾವಣೆ ಆಗಿದ್ದು 2024ರ ಜನವರಿ-ಮಾರ್ಚ್ ಕ್ವಾರ್ಟರ್​ನಲ್ಲಿ.

2026ರ ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳ ವಾರ್ಷಿಕ ಬಡ್ಡಿದರ

  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2 ವಾರ್ಷಿಕ ಬಡ್ಡಿದರ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1 ಬಡ್ಡಿ
  • ಕಿಸಾನ್ ವಿಕಾಸ್ ಪತ್ರ ಸ್ಕೀಮ್: ಶೇ. 7.5 ಬಡ್ಡಿ
  • ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ): ಶೇ. 7.7 ಬಡ್ಡಿ
  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
  • ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಶೇ. 4 ಬಡ್ಡಿದರ
  • ಪೋಸ್ಟ್ ಆಫೀಸ್ 1 ವರ್ಷದ ಠೇವಣಿ: ಶೇ. 6.9 ಬಡ್ಡಿದರ
  • ಪೋಸ್ಟ್ ಆಫೀಸ್ 2 ವರ್ಷದ ಠೇವಣಿ: ಶೇ. 7 ಬಡ್ಡಿದರ
  • ಪೋಸ್ಟ್ ಆಫೀಸ್ 3 ವರ್ಷದ ಠೇವಣಿ: ಶೇ. 7.1 ಬಡ್ಡಿದರ
  • ಪೋಸ್ಟ್ ಆಫೀಸ್ 5 ವರ್ಷದ ಠೇವಣಿ: ಶೇ. 7.5 ಬಡ್ಡಿದರ
  • ಪೋಸ್ಟ್ ಆಫೀಸ್ 5 ವರ್ಷದ ಆರ್​ಡಿ: ಶೇ. 6.70 ಬಡ್ಡಿದರ
  • ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8.2 ಬಡ್ಡಿದರ

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಇಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆಂದು ರೂಪಿಸಲಾದ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಿಗೆ ಗರಿಷ್ಠ ಬಡ್ಡಿದರ ಸಿಗುತ್ತದೆ. ರಾಷ್ಟ್ರೀಯ ಉಳಿತಾಯಪತ್ರ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೂ ಉತ್ತಮ ಬಡ್ಡಿದರ ಸಿಗುತ್ತದೆ.

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಹೇಗೆ ನಿಗದಿ?

ಸಣ್ಣ ಉಳಿತಾಯ ಯೋಜನೆಗಳಿಗೆ ಪ್ರತೀ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ನಿಗದಿ ಮಾಡಲು ಶ್ಯಾಮಲಾ ಗೋಪಿನಾಥ್ ಕಮಿಟಿ ಶಿಫಾರಸು ಮಾಡಿರುವ ಸೂತ್ರವನ್ನು ಉಪಯೋಗಿಸಲಾಗುತ್ತದೆ. ಈ ಸೂತ್ರವು ಮಾರುಕಟ್ಟೆ ಜೋಡಿತವಾಗಿರುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಗವರ್ನ್ಮೆಂಟ್ ಸೆಕ್ಯೂರಿಟಿಗಳ ಯೀಲ್ಡ್, ಹಣದುಬ್ಬರ ಮತ್ತು ಆರ್​ಬಿಐ ಮಾನಿಟರಿ ಪಾಲಿಸಿಯ ಅಂಶಗಳು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದ ಮೇಲೆ ಪ್ರಭಾವ ಬೀರಬಹುದು. 2016ರಿಂದಲೂ ಸರ್ಕಾರ ಇಂತಹದ್ದೊಂದು ಸೂತ್ರ ಇಟ್ಟುಕೊಂಡು ಪ್ರತೀ ಕ್ವಾರ್ಟರ್​ಗೆ ಬಡ್ಡಿದರ ಪರಿಷ್ಕರಣೆ ಮಾಡುತ್ತದೆ. ಈ ಹಿಂದೆ ವಾರ್ಷಿಕವಾಗಿ ಬಡ್ಡಿದರ ಪರಿಷ್ಕರಿಸಲಾಗುತ್ತಿತ್ತು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link