All posts by nagaraj11081993

Video: ರೈಲ್ವೆ ಸ್ಟೇಷನ್ ಮುಂಭಾಗ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದು ಕಳ್ಳ ಪರಾರಿ

Video: ರೈಲ್ವೆ ಸ್ಟೇಷನ್ ಮುಂಭಾಗ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದು ಕಳ್ಳ ಪರಾರಿ

ಕೋಲ್ಕತ್ತಾ, ಮಾರ್ಚ್​ 31: ಸಾಮಾನ್ಯವಾಗಿ ರೈಲ್ವೆ ನಿಲ್ದಾಣದ ಆಸು ಪಾಸು ದಿನದ 24 ಗಂಟೆಯೂ ಜನರು ಓಡಾಡುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಾಗ ಕಳ್ಳನೊಬ್ಬ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬ್ಯಾಗ್​ನಲ್ಲಿ ಅಗತ್ಯವಾದ ಡಾಕ್ಯೂಮೆಂಟ್​ಗಳಿದ್ದವು ಎಂದು ಹೇಳಿರುವ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಭಾರೀ ಮಳೆ ಸಾಧ್ಯತೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಮಾರ್ಚ್​ 31: ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ  (Weather Forecast)  ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರ್ಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ,ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಕಲಬುರ್ಗಿ, ಬೀದರ್, ಗದಗ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರದಲ್ಲೂ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾರಿಯುದ್ಧಕ್ಕೂ ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ

ಬೆಂಗಳೂರು, ಮಾರ್ಚ್​ 31: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಎಂಬಾತನನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬರು ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ತೆರಳಲು ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಪ್ರಯಾಣದ ಸಂದರ್ಭದಲ್ಲಿ, ಚಾಲಕ ಮೊಹಮ್ಮದ್ ಖಾಜಾ ದಾರಿಯುದ್ದಕ್ಕೂ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವರ್ತನೆಯಿಂದ ಅಸಮಾಧಾನಗೊಂಡ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಇಂದಿರಾನಗರ ಪೊಲೀಸರು, ರಾಪಿಡೋ ಚಾಲಕ ಮೊಹಮ್ಮದ್ ಖಾಜಾನನ್ನು ಅರೆಸ್ಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಸ್​​ಕೆಗೆ ದುಸ್ವಪ್ನವಾದ ಜಡೇಜಾ; ವಿಕೆಟ್ ತೆಗೆದು ಗನ್ ಶಾಟ್ ಸೆಲೆಬ್ರೇಷನ್

ರವೀಂದ್ರ ಜಡೇಜಾ ಅವರಿಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಅವಿನಾಭಾವ ಸಂಬಂಧ ಇತ್ತು. ಜಡೇಜಾ ಎಂದರೆ ನೆನಪಾಗುತ್ತಿದ್ದುದು ಸಿಎಸ್​​ಕೆ. ಆದರೆ, ಸಿಎಸ್​​ಕೆ ತಂಡ ಸಂಜು ಸ್ಯಾಮ್​​ಸನ್ ಅವರನ್ನು ಖರೀದಿ ಮಾಡಲು ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ಈ ವಿಷಯ ಜಡೇಜಾಗೆ ನೋವು ತರಿಸಿದ್ದಿರಬಹುದು. ಹೀಗಾಗಿ, ಸಿಎಸ್​​ಕೆ ವಿರುದ್ಧ ಮಾರಕ ಬೌಲಿಂಗ್ ದಾಳಿ ಮಾಡಿ, ಎರಡು ವಿಕೆಟ್ ಪಡೆದು ಅವರು ಭರ್ಜರಿ ಸೆಲೆಬ್ರೇಷನ್ ಮಾಡಿದರು. ಮೂರು ಓವರ್ ಎಸೆದ ಜಡೇಜಾ, ಎರಡು ವಿಕೆಟ್ ಕಿತ್ತು 18 ರನ್​​ಗಳನ್ನಷ್ಟೇ ನೀಡಿದರು.

ಗೌಹಾಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸಿಎಸ್​​ಕೆ ಮುಖಾಮುಖಿ ಆದವು. ಹಿರಿಯ ಆಟಗಾರ ಎಂಎಸ್​ ಧೋನಿ ಇಲ್ಲದೆ ಇರುವುದು ಸಿಎಸ್​ಕೆ ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು. ಮೊದಲು ಬ್ಯಾಟಿಂಗ್​​ಗೆ ಇಳಿದ ಸಿಎಸ್​​ಕೆ ತಂಡ ಸಾಕಷ್ಟು ಹಿನ್ನಡೆ ಅನುಭವಿಸಿತು. 14 ರನ್​​ಗಳಿಗೆ ಒಂದು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ 51 ರನ್​​ಗಳಿಗೆ ತನ್ನ ಪ್ರಮುಖ ಐದು ವಿಕೆಟ್​​ಗಳನ್ನು ಸಿಎಸ್​ಕೆ ಕಳೆದುಕೊಂಡಿತು.

ಜಡೇಜಾ ಅವರು ಎಂಟನೇ ಓವರ್​​​ನಲ್ಲಿ ಬೌಲಿಂಗ್​​ಗೆ ಇಳಿದರು. ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು. ನಂತರ ಕಣಕ್ಕೆ ಇಳಿದ ಶಿವಂ ದೂಬೆ ಅವರು ಬಿರುಸಿನ ಆಟಕ್ಕೆ ಮುಂದಾದರು. ರವೀಂದ್ರ ಜಡೇಜಾ ಬೌಲಿಂಗ್ ಅಲ್ಲಿ ಸಿಕ್ಸ್ ಕೂಡ ಬಾರಿಸಿದರು.

ನಂತರ ಅದೇ ರೀತಿಯಲ್ಲಿ ದೂಬೆ ಮತ್ತೆ ಸಿಕ್ಸ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಅದು ಕ್ಯಾಚ್ ಆಗಿ ಬದಲಾಯಿತು. ಈ ಮೂಲಕ ಒಂದೇ ಓವರ್​ ಅಲ್ಲಿ ಎರಡು ವಿಕೆಟ್ ತೆಗೆದು ಜಡೇಜಾ ಮಿಂಚಿದರು. ಈ ವೇಳೆ ಜಡೇಜಾ ಭರ್ಜರಿಯಾಗಿ ಸೆಲೆಬ್ರೇಷನ್ ಕೂಡ ಮಾಡಿದರು. ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ ಸಿಎಸ್​​ಕೆ ಅಭಿಮಾನಿಗಳಿಗೆ ನೇರವಾಗಿ ನೋವನ್ನುಂಟು ಮಾಡಿದರು.

ಇನ್ನಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

Source link

ಪೋಷಕರಿಗೆ ಡಬಲ್ ಶಾಕ್: ವಯೋಮಿತಿ ಗೊಂದಲದ ಬೆನ್ನಲ್ಲೇ ಖಾಸಗಿ ಶಾಲೆಗಳ ಶುಲ್ಕ ಭರ್ಜರಿ ಏರಿಕೆ!

ಬೆಂಗಳೂರು, ಮಾರ್ಚ್​ 31: ರಾಜಧಾನಿ ಬೆಂಗಳೂರಿನಲ್ಲಿ (Bangalore) ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಶಾಲಾ ಪ್ರವೇಶದ ವಯೋಮಿತಿ ನಿಯಮದ ಗೊಂದಲದಿಂದ ಸಂಕಷ್ಟದಲ್ಲಿರುವ ಪೋಷಕರಿಗೆ, ಇದೀಗ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿ ಮತ್ತಷ್ಟು ತಲೆನೋವು ತಂದಿವೆ. ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026–27ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಕೆಲವು ಖಾಸಗಿ ಶಾಲೆಗಳು ಆರಂಭಿಸಿವೆ. ಇದೇ ಸಂದರ್ಭದಲ್ಲಿ ಹಲವು ಶಾಲೆಗಳು 5ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಲು ಮುಂದಾಗಿವೆ ಎಂಬ ಆರೋಪ ಪೋಷಕರ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಈ ವರ್ಷ ಸರ್ಕಾರ ಶಾಲಾ ಪ್ರವೇಶಕ್ಕೆ ಕೇವಲ 60 ದಿನಗಳ ವಯೋಮಿತಿ ಸಡಿಲಿಕೆ ನೀಡಿರುವುದು ಕೂಡ ಪೋಷಕರಿಗೆ ಮತ್ತೊಂದು ಸಮಸ್ಯೆಯಾಗಿದೆ. ಕಳೆದ ವರ್ಷ ಇದ್ದಂತೆ 5.5 ವರ್ಷದ ವಯೋಮಿತಿಯನ್ನು ಮುಂದುವರಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಮಕ್ಕಳನ್ನು ಮತ್ತೆ ಯುಕೆಜಿ ತರಗತಿಯನ್ನು ಪುನರಾವರ್ತನೆ ಮಾಡಿಸಬೇಕಾಗಿ ಬರುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಶುಲ್ಕವನ್ನು ಮತ್ತೊಮ್ಮೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಿರುವುದು ಪೋಷಕರಿಗೆ ಇನ್ನಷ್ಟು ಕಷ್ಟ ತಂದಿದೆ. ಕೆಲ ಶಾಲೆಗಳು ಕನಿಷ್ಠ 5ರಿಂದ 10 ಶೇಕಡಾ, ಕೆಲವು ಶಾಲೆಗಳು 10ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಪ್ರತಿ ವರ್ಷವೂ ಖಾಸಗಿ ಶಾಲೆಗಳು ವಿವಿಧ ಕಾರಣಗಳನ್ನು ನೀಡಿ ಶುಲ್ಕ ಹೆಚ್ಚಿಸುತ್ತಿರುವುದರಿಂದ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸಲು ತಮಿಳುನಾಡು ಮಾದರಿಯಂತೆ ಶುಲ್ಕ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪೋಷಕರ ಸಮನ್ವಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಹೊಸ ಸಂಘರ್ಷಕ್ಕೆ ಕಾರಣವಾಯ್ತು ಮಕ್ಕಳ 1ನೇ ಕ್ಲಾಸ್ ಪ್ರವೇಶ ವಯೋಮಿತಿ ಸಡಿಲಿಕೆ

ಒಟ್ಟಾರೆ, ಒಂದೆಡೆ ವಯೋಮಿತಿ ಗೊಂದಲ ಮತ್ತು ಮತ್ತೊಂದೆಡೆ ಖಾಸಗಿ ಶಾಲೆಗಳ ಶುಲ್ಕ ಏರಿಕೆ ಪೋಷಕರಿಗೆ ದೊಡ್ಡ ಸಂಕಷ್ಟವಾಗಿದ್ದು, ಈ ಸಮಸ್ಯೆಗೆ ಸರ್ಕಾರ ಶೀಘ್ರ ಪರಿಹಾರ ಕಂಡುಹಿಡಿಯಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಹಾರ ಸಾಮಗ್ರಿಗಳ ಪಡೆಯಲು ಭಾರತಕ್ಕೆ ಹೋಗುತ್ತಿದ್ದ ಇರಾನ್ ವಿಮಾನದ ಮೇಲೆ ಅಮೆರಿಕ ದಾಳಿ

ಟೆಹ್ರಾನ್, ಮಾರ್ಚ್​ 31: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್ ಜತೆ ಮಾತುಕತೆ ನಡೆಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನಿನ ವಿಮಾನಕ್ಕೆ ಹಾನಿಯಾಗಿದೆ. ಈ ವಿಮಾನ ದೆಹಲಿಗೆ ಹಾರಾಟ ನಡೆಸಬೇಕಿತ್ತು.

ಇರಾನ್‌ನ ಮಶಾದ್ ವಿಮಾನ ನಿಲ್ದಾಣದಲ್ಲಿ ಮಹಾನ್ ಏರ್ ವಿಮಾನವು ಅಮೆರಿಕದ ವೈಮಾನಿಕ ದಾಳಿಯಲ್ಲಿ ಹಾನಿಗೊಳಗಾಗಿದೆ. ವರದಿಗಳ ಪ್ರಕಾರ, ವಿಮಾನವು ಪರಿಹಾರ ಸಾಮಗ್ರಿಗಳನ್ನು ಪಡೆಯಲು ನವದೆಹಲಿಗೆ ತೆರಳುತ್ತಿತ್ತು. ಏಪ್ರಿಲ್ 1 ರಂದು ಬೆಳಗ್ಗೆ 4 ಗಂಟೆಗೆ ವಿಮಾನ ಆಗಮಿಸಬೇಕಿತ್ತು ಎಂದು ವರದಿಯಾಗಿದೆ.

ಈ ಘಟನೆಯು ದೇಶದಲ್ಲಿ ನಾಗರಿಕ ವಿಮಾನಯಾನ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಹನ್ ಏರ್ ಖಾಸಗಿ ಒಡೆತನದ ಇರಾನಿನ ವಿಮಾನಯಾನ ಸಂಸ್ಥೆಯಾಗಿದ್ದು, ಇದು ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಹಲವಾರು ದೇಶಗಳಿಗೆ ವಿಮಾನಗಳನ್ನು ನಿರ್ವಹಿಸುತ್ತದೆ.

ಮತ್ತಷ್ಟು ಓದಿ: ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?

ಯುದ್ಧದ ಆರಂಭದಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 16-17 ಪ್ರಯಾಣಿಕ ಮತ್ತು ಸರಕು ವಿಮಾನಗಳು ನಾಶವಾಗಿತ್ತು. ಈ ವಿಮಾನಗಳು ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿವೆ ಮತ್ತು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕುಡ್ಸ್ ಫೋರ್ಸ್ ಬಳಸುತ್ತಿತ್ತು ಎಂದು ಇಸ್ರೇಲ್ ಹೇಳಿಕೊಂಡಿದೆ.

ಉಕ್ರೇನ್ ಯುದ್ಧಕ್ಕಾಗಿ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಇರಾನ್ ಏರ್ ಮತ್ತು ಮಹಾನ್ ಏರ್ ನಂತಹ ವಾಣಿಜ್ಯ ವಿಮಾನಗಳನ್ನು ಬಳಸಲಾಗುತ್ತಿತ್ತು ಎಂದು ಇಸ್ರೇಲ್ ಹೇಳಿದೆ. ಭಾರತದಿಂದ ಇರಾನ್‌ಗೆ ಔಷಧಿಗಳು ಸೇರಿದಂತೆ 11 ಟನ್‌ಗಳಷ್ಟು ಮಾನವೀಯ ನೆರವನ್ನು ಸಾಗಿಸಬೇಕಿತ್ತು.

ಹಿಂದಿನ ಸಾಗಣೆಗಳಲ್ಲಿಯೂ ಭಾರತೀಯ ವಿಮಾನಗಳನ್ನು ಬಳಸಿರಲಿಲ್ಲ. ವಿಮಾನವು ದೆಹಲಿಗೆ ತೆರಳುತ್ತಿತ್ತು ಮತ್ತು ಯುದ್ಧ ಸಂತ್ರಸ್ತರಿಗೆ 11 ಟನ್‌ಗಳಿಗೂ ಹೆಚ್ಚು ಮಾನವೀಯ ಔಷಧಿಗಳನ್ನು ಹೊತ್ತುಕೊಂಡು ಇರಾನ್‌ಗೆ ಹಿಂತಿರುಗಬೇಕಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆರಾಡಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ; ಸಾಧ್ಯವಾಗಿದ್ದು ಹೇಗೆ?

ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲರನ್ನೂ ಅನ್​​ಫಾಲೋ ಮಾಡಿದ್ದು ಚರ್ಚೆ ಆಗಿತ್ತು. ಈಗ ಅವರು ರಿಷಬ್ ಶೆಟ್ಟಿ ಫಿಲ್ಮ್ಸ್, ರಿಷಬ್ ಶೆಟ್ಟಿ ಫೌಂಡೇಷನ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರು ಕೆರಾಡಿಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಫಿಲ್ಮ್​ ಸಿಟಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲೇ ‘ಕಾಂತಾರ 2’ ಚಿತ್ರದ ಸೆಟ್ ನಿರ್ಮಾಣ ಮಾಡಿದರು. ಈ ಸೆಟ್​ ಅದ್ಭುತವಾಗಿತ್ತು ಎಂಬುದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದವರಿಗೆ ಗೊತ್ತಾಗುತ್ತದೆ. ಈಗ ಇದನ್ನು ಸಿನಿಮಾ ಸಿಟಿಯಾಗಿ ಬದಲಾಯಿಸಿರೋದಾಗಿ ಹೇಳಿದ್ದಾರೆ.

‘ಕಾಂತಾರದ ಬಳಿಕ ಕುಂದಾಪುರ, ಬೈಂದೂರು ಭಾಗ ಫಿಲ್ಮ್ ಸಿಟಿಯಾಗಿ ಬದಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಸಿನಿಮಾ ಶೂಟ್ ಆಗುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಸಿನಿಮಾದ ಮೇಲಿನ ಗೌರವ ಹೆಚ್ಚಾಗಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.

ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ಅಪಾರ ಪ್ರಕೃತಿ ಸೌಂದರ್ಯವಿದೆ. ಇದನ್ನು ಕೆಲವು ಸಿನಿಮಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದರೆ, ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ರಿಷಬ್ ಶೆಟ್ಟಿ ಅವರ ಅಭಿಪ್ರಾಯ. ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಬಳಿಕ ಕರಾವಳಿಯ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ ಎಂಬುದು ವಿಶೇಷ.

ಇದನ್ನೂ ಓದಿ: ‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

ರಿಷಬ್ ಶೆಟ್ಟಿ ಅವರು ಸದ್ಯ ‘ಜೈ ಹನುಮಾನ್’ ಸಿನಿಮಾ ಶೂಟ್ ಅಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಕಪ್ಪು ಬೆಕ್ಕು ಅಡ್ಡ ಬಂದರೆ ಏನಾಗುತ್ತೆ ಗೊತ್ತಾ? ವೀಡಿಯೋ ನೋಡಿ

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಪ್ಪು ಬೆಕ್ಕು ಅಡ್ಡ ಬಂದರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದೈನಂದಿನ ಜೀವನದಲ್ಲಿ ಎದುರಾಗುವ ಕೆಲವು ಘಟನೆಗಳು ಶುಭವೋ ಅಶುಭವೋ ಎಂಬ ಕುತೂಹಲ ಸಾಮಾನ್ಯ. ಅದರಲ್ಲೂ ಕಪ್ಪು ಬೆಕ್ಕು ದಾರಿಗೆ ಅಡ್ಡ ಬರುವುದು ಶುಭವೋ ಅಶುಭವೋ ಎಂಬುದು ವ್ಯಾಪಕ ಚರ್ಚೆಯ ವಿಷಯ.

ಪುರಾತನ ನಂಬಿಕೆಗಳ ಪ್ರಕಾರ, ಕಪ್ಪು ಬೆಕ್ಕು ಶನಿ, ರಾಹು ಮತ್ತು ಕೇತು ಗ್ರಹಗಳ ಪ್ರತೀಕವಾಗಿದೆ. ಕಪ್ಪು ಬಣ್ಣವನ್ನು ನಿಧಾನ, ಅಜ್ಞಾನದ ಸಂಕೇತ ಎಂದೂ ಪರಿಗಣಿಸಲಾಗುತ್ತದೆ. ಶುಭ ಕಾರ್ಯಗಳಿಗೆ ಅಥವಾ ಹೊಸ ವಾಹನ ಖರೀದಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು, ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮತ್ತು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಸೂಚಿಸುತ್ತದೆ ಎಂದು ನಂಬಲಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

 

Source link

Horoscope Today: ಇಂದು ಈ ರಾಶಿಯವರು ಇಂದು ಅತಿಯಾಗಿ ಖರ್ಚು ಮಾಡಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 31, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ತ್ರಯೋದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂಬುದನ್ನು ಅವರು ವಿವರಿಸಿದ್ದಾರೆ.

 

 

 

Source link

ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ: ಭಕ್ತರೇ, ವಂಚಕರ ಜಾಲದ ಬಗ್ಗೆ ಇರಲಿ ಎಚ್ಚರ!

ಬೆಂಗಳೂರು, ಮಾರ್ಚ್​ 31: ಬೆಂಗಳೂರು (Bangalore) ನಗರದ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ (Karaga Shaktyotsava) ಕೌಂಟ್‌ಡೌನ್ ಆರಂಭವಾಗಿದೆ. ಇಂದು (ಮಾರ್ಚ್ 31) ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸಂಪಂಗಿರಾಮನಗರದ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಚೈತ್ರ ಪೂರ್ಣಿಮೆಯಂದು ಮಧ್ಯರಾತ್ರಿ ಪೇಟೆ ಕರಗ ನಡೆಯಲಿದ್ದು, ಭಕ್ತರಿಗೆ ದರ್ಶನ ದೊರೆಯಲಿದೆ. ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಡೆಯುವ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವವು ಬೆಂಗಳೂರಿನ ಪ್ರಮುಖ ಸಂಪ್ರದಾಯಿಕ ಉತ್ಸವಗಳಲ್ಲಿ ಒಂದಾಗಿದೆ. ಈ ಬಾರಿ ಉತ್ಸವದಲ್ಲಿ ಸುಮಾರು 10 ರಿಂದ 15 ಲಕ್ಷ ಭಕ್ತರು ಭಾಗವಹಿಸಿ ಕರಗದ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಎಚ್ಚರ: ಕರಗದ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ ವಂಚನೆ

ಇದರ ನಡುವೆಯೇ, ವಿಶ್ವವಿಖ್ಯಾತ ಬೆಂಗಳೂರು ಕರಗದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಹಣ ಸಂಗ್ರಹಿಸಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ 2,500 ರೂಪಾಯಿ ಹಣ ನೀಡಿದರೆ ಕರಗವನ್ನು ಸಂಪೂರ್ಣವಾಗಿ ತೋರಿಸುತ್ತೇವೆ, ಜೊತೆಗೆ ಒಂದು ಹೊತ್ತಿನ ಊಟ ಮತ್ತು ಕರಗದ ಜೊತೆ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೇವಾಲಯದ ವತಿಯಿಂದ ಕರಗ ಉತ್ಸವಕ್ಕಾಗಿ ಭಕ್ತರಿಂದ ಯಾವುದೇ ರೀತಿಯ ಹಣ ವಸೂಲಿ ಮಾಡುವುದಿಲ್ಲ. ಕೆಲವರು ದುಡ್ಡು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ

ಇನ್ನೊಂದೆಡೆ, ಈ ಬಾರಿ ಬೆಂಗಳೂರು ಕರಗ ಶಕ್ತ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕೆಂಪೇಗೌಡರು ನಿರ್ಮಿಸಿದ ಹಳೆಯ ಬೆಂಗಳೂರಿನ ಭಾಗಗಳಲ್ಲಿ ಬಣ್ಣ ಬಣ್ಣದ ದೀಪಾಲಂಕಾರಗಳು ಜಗಮಗಿಸುತ್ತಿದ್ದು, ನಗರವು ಉತ್ಸವದ ಸಂಭ್ರಮದಲ್ಲಿ ಮಿಂಚುತ್ತಿದೆ.

ಧರ್ಮರಾಯ ಸ್ವಾಮಿ ದೇವಸ್ಥಾನ

ದೇವಾಲಯದ ಒಳಾಂಗಣದ ವೆಚ್ಚವನ್ನು ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದ್ದರೆ, ಉತ್ಸವದ ಇತರೆ ವೆಚ್ಚಗಳನ್ನು ಜಿಬಿಎ (GBA) ಭರಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬಾರಿ ಉತ್ಸವವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲಾಗುತ್ತಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್

ಒಟ್ಟಾರೆ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಮೈಸೂರು ದಸರಾ ಶೈಲಿಯ ದೀಪಾಲಂಕಾರದಿಂದ ಈ ಬಾರಿ ಉತ್ಸವ ಮತ್ತಷ್ಟು ವಿಶೇಷವಾಗಲಿದೆ. ನಗರದೆಲ್ಲೆಡೆ ಬಣ್ಣ ಬಣ್ಣದ ಲೈಟಿಂಗ್ಸ್‌ಗಳಿಂದ ಸಿಂಗಾರಗೊಂಡಿದ್ದು, ಭಕ್ತರು ಕರಗ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link