ಟಿ20 ವಿಶ್ವಕಪ್ನ ಮೊದಲ ಪಂದ್ಯವೇ ವಿವಾದಕ್ಕೀಡಾಗಿದೆ. ವಿವಾದಕ್ಕೀಡಾಲು ಮುಖ್ಯ ಕಾರಣ ಐಸಿಸಿಯ ನಿಯಮ.ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚೆಗೆ ರಿಲೇ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಈ ನಿಯಮದ ಬದಲಾವಣೆ ಪಾಕಿಸ್ತಾನ್ ತಂಡಕ್ಕೆ ಅನ್ವಯಿಸುವುದಿಲ್ಲವೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿ ಜೊತೆಗೂಡಿ ರಿಲೇ ಕ್ಯಾಚ್ ಹಿಡಿದಿದ್ದರು. ಬೌಂಡರಿ ಲೈನ್ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದ ಬಾಬರ್ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟಿದ್ದರು. ಆದರೆ ಕ್ಷಣಾರ್ಧದಲ್ಲೇ ಬಾಬರ್ ಚೆಂಡನ್ನು ಶಾಹೀನ್ ಅಫ್ರಿದಿಯತ್ತ ಎಸೆದಿದ್ದರು.
ಬಾಬರ್ ಎಸೆದ ಚೆಂಡನ್ನು ಹಿಡಿಯುವಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾಗಿದ್ದರು. ಆದರೆ ಶಾಹೀನ್ ಚೆಂಡು ಹಿಡಿದಾಗ ಬಾಬರ್ ಆಝಂ ಮೈದಾನದ ಹೊರಗಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
ಐಸಿಸಿ ರಿಲೇ ಕ್ಯಾಚ್ ನಿಯಮ 19.5.2 ಪ್ರಕಾರ, ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಅಂದರೆ ಬೌಂಡರಿ ಲೈನ್ ದಾಟುತ್ತಿದ್ದಂತೆ ಚೆಂಡನ್ನು ಮತ್ತೋರ್ವ ಫೀಲ್ಡರ್ಗೆ ನೀಡಿದ್ದರೆ ಆತನು ಕ್ಯಾಚ್ ಹಿಡಿಯುವಷ್ಟರಲ್ಲಿ ಬೌಂಡರಿ ಲೈನ್ ದಾಟಿದ ಆಟಗಾರ ಮತ್ತೆ ಮೈದಾನದ ಒಳಗಿರಬೇಕು. ಅಂದರೆ ಮಾತ್ರ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ.
ಈ ನಿಯಮವು ಜೂನ್ ತಿಂಗಳಿಂದಲೇ ಜಾರಿಯಲ್ಲಿದೆ. ಹೀಗಾಗಿಯೇ ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ್ ಎ ವಿರುದ್ಧ ಭಾರತ ಎ ತಂಡದ ಆಟಗಾರ ನೆಹಾಲ್ ವಧೇರಾ ಹಿಡಿದ ಕ್ಯಾಚ್ ಅನ್ನು ಅಮಾನ್ಯ ಎಂದು ಪರಿಗಣಿಸಲಾಗಿತ್ತು.
ಈ ಪಂದ್ಯದಲ್ಲಿ ಸುಯಶ್ ಶರ್ಮಾ ಎಸೆದ 10ನೇ ಓವರ್ನ ಮೊದಲ ಎಸೆತವನ್ನು ಮಾಝ್ ಸದಾಖತ್ ಲಾಂಗ್ ಆಫ್ನತ್ತ ಬಾರಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ನೆಹಾಲ್ ವಧೇರಾ ಅದ್ಭುತವಾಗಿ ಚೆಂಡನ್ನು ಹಿಡಿದಿದ್ದರು.
ಕ್ಯಾಚ್ ಹಿಡಿದ ಬಳಿಕ ನಿಯಂತ್ರಣ ಕಳೆದುಕೊಂಡ ವಧೇರಾ ಬೌಂಡರಿ ಲೈನ್ ದಾಟಿದರು. ಅಷ್ಟರಲ್ಲಾಗಲೇ ಸಹ ಆಟಗಾರ ನಮನ್ ಧೀರ್ಗೆ ವಧೇರಾ ಚೆಂಡನ್ನು ನೀಡಿದ್ದರು. ಇತ್ತ ಬೌಂಡರಿ ಲೈನ್ ಕ್ಯಾಚ್ನೊಂದಿಗೆ ಮಾಝ್ ಸದಾಖತ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು.
ಆದರೆ ಕ್ಯಾಚ್ ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದಿದ್ದಾರೆ. ಇತ್ತ ನೆಹಾಲ್ ವಧೇರಾ ತನ್ನ ಕಾಲು ಬೌಂಡರಿ ಲೈನ್ಗೆ ತಾಗಿಲ್ಲ ಎಂಬ ವಾದವನ್ನು ಫೀಲ್ಡ್ ಅಂಪೈರ್ ಮುಂದಿಟ್ಟಿದ್ದರು. ಬೌಂಡರಿ ಲೈನ್ ಚೆಕ್ಕಿಂಗ್ ವೇಳೆಯೂ ವಧೇರಾ ಅವರ ಕಾಲು ಲೈನ್ಗೆ ತಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಇದಾಗ್ಯೂ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಈ ವೇಳೆ ಅಂಪೈರ್ ಭಾರತೀಯ ಆಟಗಾರರಿಗೆ ಹೊಸ ನಿಯಮದ ಬಗ್ಗೆ ಪಾಠ ಮಾಡಿದ್ದರು.
ಅಂದರೆ ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಆದರೆ ನಮನ್ಧೀರ್ ಕ್ಯಾಚ್ ಹಿಡಿಯುವಷ್ಟರಲ್ಲಿ ನೇಹಾಲ್ ವಧೇರಾ ಮೈದಾನಕ್ಕೆ ಹಿಂತಿರುಗಿರಲಿಲ್ಲ. ಹೀಗಾಗಿಯೇ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.
ಇದೀಗ ಇಂತಹದ್ದೇ ಕ್ಯಾಚ್ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿ ಜೊತೆಗೂಡಿ ಹಿಡಿದಿದ್ದಾರೆ. ಇಲ್ಲಿ ಶಾಹೀನ್ ಅಫ್ರಿದಿ ಕ್ಯಾಚ್ ಪೂರ್ಣಗೊಳಿಸುವ ವೇಳೆ ಬಾಬರ್ ಮೈದಾನದಲ್ಲಿ ಇರಲಿಲ್ಲ. ಇದಾಗ್ಯೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ.
ಈ ತೀರ್ಪಿನ ಬೆನ್ನಲ್ಲೇ ಭಾರತಕ್ಕೆ ಒಂದು ರೂಲ್ಸ್, ಪಾಕಿಸ್ತಾನಕ್ಕೆ ಇನ್ನೊಂದು ರೂಲ್ಸಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Published On – 2:09 pm, Sat, 7 February 26