Category Archives: Blog

Your blog category

ಪ್ರಧಾನಿ ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಗೌರವ – Kannada News | PM Modi Awarded Slovakia’s Highest Honor, ‘Order of the White Double Cross’, Boosting India Ties

ಬ್ರಾಟಿಸ್ಲಾವಾ, ಜೂನ್ 16: ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ ಲಭಿಸಿದೆ, ನಾರ್ವೆ ಮತ್ತು ಸ್ವೀಡನ್ ದೇಶಗಳ ಬಳಿಕ ಈಗ ಸ್ಲೋವಾಕಿಯಾ ಸರ್ಕಾರವು ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ ‘ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನ್ ಅವರು ಪ್ರಧಾನಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 33ನೇ ಅತ್ಯುನ್ನತ ಗೌರವ ಇದಾಗಿದೆ.

ಪ್ರಧಾನಿ ಮೋದಿ ಪೋಸ್ಟ್

ಏನಿದು ಪ್ರತಿಷ್ಠಿತ ಪ್ರಶಸ್ತಿ, ಪ್ರಧಾನಿಗೆ ಏಕೆ ಸಿಕ್ಕಿದೆ?
‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಎಂಬುದು ಸ್ಲೋವಾಕಿಯಾ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ, ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ: ಪ್ರಧಾನಿ ಮೋದಿ
ಪ್ರಶಸ್ತಿ ಸ್ವೀಕರಿಸಿದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ಸ್ಲೋವಾಕಿಯಾದ ಸರ್ಕಾರ ಮತ್ತು ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವ. ಇದು ಭಾರತದ 1.4 ಶತಕೋಟಿ (140 ಕೋಟಿ) ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಇತಿಹಾಸ ಸೃಷ್ಟಿಸಿದ ಭೇಟಿ: 11 ಪ್ರಮುಖ ಒಪ್ಪಂದಗಳಿಗೆ ಸಹಿ
ಸ್ಲೋವಾಕಿಯಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಭೇಟಿಯ ವೇಳೆ ಪ್ರಧಾನಿ ಮೋದಿ ಮತ್ತು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರು ನಡೆಸಿದ ದೀರ್ಘ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ. ಉಭಯ ದೇಶಗಳು ತಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಲಾಗಿದೆ.

ವಲಸೆ, ಡಿಜಿಟಲ್ ತಂತ್ರಜ್ಞಾನ ಮತ್ತು ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು 11 ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತ ಮತ್ತು ಐರೋಪ್ಯ ಒಕ್ಕೂಟ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಜಾರಿಗೆ ತರಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಹಾಗೂ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ – Kannada News | Sri Lanka A vs India A, 4th Match Highlights

ಭಾರತ ಎ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಜಯ ಸಾಧಿಸಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ಗಳಿಸಿ ಆಲೌಟ್ ಆಗಿತ್ತು.

266 ರನ್​​ಗಳ ಗುರಿ ಪಡೆದ ಶ್ರೀಲಂಕಾ ಎ ತಂಡವು 49 ಓವರ್​ಗಳ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಬರೋಬ್ಬರಿ 261 ರನ್​ಗಳು. ಅದರಂತೆ ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳ ಗುರಿ ಪಡೆದಿದ್ದರು.

ಆದರೆ ಟೀಮ್ ಇಂಡಿಯಾ ಪರ 50ನೇ ಓವರ್​ ಎಸೆದ ಅರ್ಷದ್ ಖಾನ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. 2ನೇ ಎಸೆತದಲ್ಲಿ ಸಮರವಿಕ್ರಮ (93) ರನ್ನು ಬೌಲ್ಡ್ ಮಾಡಿದರು. 3ನೇ ಎಸೆತದಲ್ಲಿ ಒಂದು ರನ್ ನೀಡಿದರು. 4ನೇ ಎಸೆತದಲ್ಲಿ 1 ರನ್​ ಕಲೆಹಾಕಿದರು. 5ನೇ ಎಸೆತದಲ್ಲಿ ಮತ್ತೊಂದು ರನ್​ ನೀಡಿದರು. ಅದರಂತೆ ಕೊನೆಯ ಎಸೆತದಲ್ಲಿ  2 ರನ್ ಬೇಕಿತ್ತು. ಈ ವೇಳೆ ಕೇವಲ ಒಂದು ರನ್ ಮಾತ್ರ ನೀಡುವ ಮೂಲಕ ಅರ್ಷದ್ ಖಾನ್ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು.

– ಭಾರತ ಎ- 265 (49.2)
– ಶ್ರೀಲಂಕಾ- 265/9 (50)

ಸೂಪರ್ ಓವರ್​:

ಮ್ಯಾಚ್ ಟೈ ಆಗಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಟೀಮ್ ಇಂಡಿಯಾ ಪರ ಸೂಪರ್ ಓವರ್ ಎಸೆದ ಅರ್ಷದ್ ಖಾನ್ ನೀಡಿದ್ದು ಬರೋಬ್ಬರಿ 16 ರನ್​ಗಳು.

17 ರನ್​ಗಳ ಗುರಿ ಬೆನ್ನತ್ತಲು ಬಂದ ಸೂರ್ಯಾಂಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಜೊತೆಗೂಡಿ 6 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್​ ಮಾತ್ರ. ಈ ಮೂಲಕ ಶ್ರೀಲಂಕಾ ತಂಡವು 7 ರನ್​ಗಳ ಸೂಪರ್ ಜಯ ಸಾಧಿಸಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

 

Source link

Karnataka Weather Forecast: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ – Kannada News | Karnataka Weather Forecast: Bengaluru, Coastal And South Interior Areas To Witness 2 Days Of Heavy Rainfall

ಬೆಂಗಳೂರು, ಜೂನ್​​ 16: ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಗರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು-ಮಿಂಚಿನೊಂದಿಗೆ ವರುಣಾರ್ಭಟ ಇರುವ ಬಗ್ಗೆ ಅಂದಾಜಿಸಲಾಗಿದ್ದು, ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ ಮಳೆ ನಿರೀಕ್ಷೆ

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಬಹುತೇಕ ಕಡೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿಯೂ ಗುರುವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು IMD ಎಚ್ಚರಿಕೆ ನೀಡಿದೆ. ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬುಧವಾರದವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ವರುಣನ ಅಬ್ಬರಕ್ಕೆ ಭಕ್ತರು ಕಂಗಾಲು; ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೂ ಪರದಾಟ

ಹಲವೆಡೆ ಸುರಿಯದ ನಿರೀಕ್ಷಿತ ಮಳೆ

ಇತ್ತೀಚಿನ ಎರಡು ವಾರಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಿಗೆ IMD ಕೆಂಪು, ಕಿತ್ತಳೆ ಹಾಗೂ ಹಳದಿ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ಅನೇಕ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಸುರಿದಿಲ್ಲ. ಕೆಲವು ಕಡೆಗಳಲ್ಲಿ ಮಳೆಯೇ ಆಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ತಜ್ಞರು, ಹವಾಮಾನ ಮಾದರಿಗಳು (Weather Models) ಸುಮಾರು 3 ರಿಂದ 4 ಕಿ.ಮೀ ಎತ್ತರದಲ್ಲಿ ಬಲವಾದ ವಾಯು ಚಲನೆಗಳಿರುವುದನ್ನು ತೋರಿಸುತ್ತಿವೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಗಳು ಭಾರೀ ಮಳೆಗೆ ಕಾರಣವಾಗುತ್ತವೆ. ಆದರೆ ಅರಬ್ಬಿ ಸಮುದ್ರದಿಂದ ಬರುತ್ತಿರುವ ಗಾಳಿಯಲ್ಲಿ ಸಾಕಷ್ಟು ತೇವಾಂಶ ಇಲ್ಲದ ಕಾರಣ ನಿರೀಕ್ಷಿತ ಪ್ರಮಾಣದ ಮಳೆ ಬೀಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ – Kannada News | Rajamouli Mahesh Babu’s ‘Varanasi’: Debunking Budget Rumors and Global Vision

ಟಾಲಿವುಡ್ ನಟ ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನ ಮುಂಬರುವ ಸಿನಿಮಾ ‘ವಾರಣಾಸಿ’ (Varanasi) ಸದ್ಯ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರ. ಚಿತ್ರತಂಡ ಸದ್ದಿಲ್ಲದೆ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದರೆ, ಸಿನಿಮಾ ರಂಗದಲ್ಲಿಮಾತ್ರ ಈ ಚಿತ್ರದ ಬಜೆಟ್ ಬಗ್ಗೆ ಇಲ್ಲಸಲ್ಲದ ವದಂತಿಗಳು ಹರಿದಾಡುತ್ತಿವೆ. ಅಲ್ಲದೆ, ಒಟಿಟಿ ಡೀಲ್​​ಗೆ ಬೇಡಿಕೆ ಇಲ್ಲ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ಆದರೆ, ಈ ಗೇಮ್ ರಾಜಮೌಳಿಗಿಂತ ಬೇರೆಯವರಿಗೆ ಚೆನ್ನಾಗಿ ಗೊತ್ತಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

‘ವಾರಣಾಸಿ’ ಚಿತ್ರದ ಬಜೆಟ್ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ ಮತ್ತು ಬಜೆಟ್ ಕಂಟ್ರೋಲ್ ಮಾಡಲು ರಾಜಮೌಳಿ ಕಷ್ಟಪಡುತ್ತಿದ್ದಾರೆ ಎಂದೆಲ್ಲಾ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಂತಹ ಗೇಮ್‌ಗಳನ್ನು ರಾಜಮೌಳಿ ಸಾಕಷ್ಟು ನೋಡಿದ್ದಾರೆ ಮತ್ತು ಅವರಿಗೆ ಈ ಮಾರುಕಟ್ಟೆಯ ಪಲ್ಸ್ ಚೆನ್ನಾಗಿ ಗೊತ್ತಿದೆ ಎಂಬುದು ಅನೇಕರ ಅಭಿಪ್ರಾಯ. ರಾಜಮೌಳಿ ಅವರ ಸಿನಿಮಾಗಳಿಗೆ ಬಜೆಟ್ ಎಷ್ಟೇ ಆದರೂ, ಚಿತ್ರೀಕರಣದ ಒಂದು ಫ್ರೇಮ್ ಕೂಡ ರಿಲೀಸ್ ಆಗುವ ಮುನ್ನವೇ ಅವರ ಹೆಸರೊಂದಕ್ಕೇ ಕೋಟಿ ಕೋಟಿ ಬಿಸಿನೆಸ್ ಆಗುತ್ತದೆ. ಥಿಯೇಟ್ರಿಕಲ್ ರೈಟ್ಸ್, ಸ್ಯಾಟಲೈಟ್ ಡೀಲ್ಸ್, ಮತ್ತು ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗುತ್ತವೆ.

‘ವಾರಣಾಸಿ’ ಚಿತ್ರದ ಟೀಸರ್ ಈಗಾಗಲೇ ಹುಟ್ಟುಹಾಕಿರುವ ಹೈಪ್ ನೋಡಿದರೆ, ಬಜೆಟ್ ಎಂಬುದು ಈ ಚಿತ್ರದ ಯಶಸ್ಸಿಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಿರ್ಮಾಪಕರನ್ನು ಹೇಗೆ ಸೇಫ್ ಝೋನ್‌ನಲ್ಲಿ ಇಡಬೇಕು ಮತ್ತು ಹಾಕಿದ ಬಂಡವಾಳವನ್ನು ಹೇಗೆ ಲಾಭದೊಂದಿಗೆ ವಾಪಸ್ ತರಬೇಕು ಎಂಬ ಲೆಕ್ಕಾಚಾರ ರಾಜಮೌಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ಪ್ರಸ್ತುತ ಒಟಿಟಿ ಮಾರುಕಟ್ಟೆಯಲ್ಲಿ ಸಣ್ಣಮಟ್ಟದ ಕುಸಿತ ಇರಬಹುದು. ರಾಜಮೌಳಿ ಸಿನಿಮಾಗೆ ದೊಡ್ಡ ಮೊತ್ತ ಕೊಡಲು ಕೆಲವರು ರೆಡಿ ಇಲ್ಲದೆ ಇರಬಹುದು. ಆದರೆ ‘ವಾರಣಾಸಿ’ ಕೇವಲ ಭಾರತೀಯ ಮಾರುಕಟ್ಟೆಯನ್ನು ನಂಬಿ ಮಾಡುತ್ತಿರುವ ಸಿನಿಮಾವಲ್ಲ. ಇದು ವೆಸ್ಟರ್ನ್ ಮತ್ತು ಏಷ್ಯನ್ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಹಾಗಾಗಿ, ಸಿನಿಮಾ ರಿಲೀಸ್ ಆಗುವ ಮುನ್ನವೇ ಪ್ರಿ-ರಿಲೀಸ್ ಬಿಸಿನೆಸ್ ಮೂಲಕವೇ ಹೂಡಿಕೆ ಮಾಡಿದ ಹಣ ನಿರ್ಮಾಪಕರ ಕೈ ಸೇರುವುದು ಗ್ಯಾರಂಟಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ – Kannada News | Monsoon Deficit 2026: IMD Reports 32 Percent Rain Shortage in India, Farmers fear in Karnataka

ಬೆಂಗಳೂರು, ಜೂನ್ 16: ದೇಶಾದ್ಯಂತ ತಡವಾಗಿ ಪ್ರವೇಶಿಸಿದ ನೈಋತ್ಯ ಮುಂಗಾರು (Monsoon Rain) ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದೆ. ಎಲ್ ನಿನೋ (El Nino) ಮಾರಕ ಪರಿಣಾಮದಿಂದಾಗಿ ದೇಶದ ಸುಮಾರು 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗದಲ್ಲಿ ಭಾರಿ ಮಳೆ ಕೊರತೆಯಾಗಿದ್ದು, ಒಟ್ಟಾರೆ ಶೇಕಡಾ 32 ರಷ್ಟು ಇಳಿಕೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆಘಾತಕಾರಿ ಮಾಹಿತಿ ನೀಡಿದೆ.

  • ದೇಶದ 200 ಜಿಲ್ಲೆಗಳಲ್ಲಿ ಮಳೆ ಅಭಾವ
  • ಕೃಷ್ಣಾ ನದಿ ಪಾತ್ರದ ಕೃಷಿ ನೀರು ಬಂದ್
  • ಬಿತ್ತನೆ ಕಾರ್ಯವಾಗದೆ ಕಂಗಾಲಾದ ಅನ್ನದಾತರು

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ 57 ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ 41 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಶೇ 9 ರಷ್ಟು ಒಣ ಹವಾಮಾನ ವರದಿಯಾಗಿದೆ. ಅತಿ ಕಡಿಮೆ ಮಳೆಯಾದ ರಾಜ್ಯಗಳ ಪೈಕಿ ಗುಜರಾತ್ (ಶೇ 75 ಕೊರತೆ) ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಶೇ 69 ರಷ್ಟು ಮಳೆ ಅಭಾವ ಕಂಡುಬಂದಿದೆ.

ಕರ್ನಾಟಕ ಗಡಿ ಭಾಗದಲ್ಲಿ ಕೃಷಿಗೆ ಕೃಷ್ಣಾ ನೀರು ಬಂದ್

ಜೈಪುರ ಮತ್ತು ಕೊಲ್ಹಾಪುರ ಭಾಗಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಕೊಯ್ನಾ ಜಲಾಶಯದಿಂದ ಕರ್ನಾಟಕ ಗಡಿಯ ರಾಜಾಪುರ ಬ್ಯಾರೇಜ್‌ವರೆಗಿನ ಕೃಷ್ಣಾ ನದಿ ಪಾತ್ರದಲ್ಲಿ ಕೃಷಿಗಾಗಿ ನೀರು ಪೂರೈಸುವುದನ್ನು ಅಧಿಕಾರಿಗಳು ಸಂಪೂರ್ಣ ನಿಷೇಧಿಸಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ಮುಂಗಾರು ಕುಂಠಿತ: ಬಿತ್ತನೆ ಸ್ಥಗಿತ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳದ ಕಾರಣ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಕೇವಲ ಶೇಕಡಾ 5 ರಷ್ಟು ಮಳೆಯಾಗಿದ್ದು, ಶುಂಠಿ ನಾಟಿ ಮಾಡಿದ್ದ ರೈತರು ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಕುಸಿತದಿಂದಾಗಿ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇತ್ತ ದಾವಣಗೆರೆಯಲ್ಲೂ ಸಾಲ ಸೂಲ ಮಾಡಿ ಭೂಮಿ ಹದಗೊಳಿಸಿದ ರೈತರು ಮಳೆ ಬಾರದೆ ಕಂಗಾಲಾಗಿದ್ದಾರೆ. ತುಂಗಭದ್ರಾ ನದಿಯಲ್ಲೂ ನೀರಿನ ಮಟ್ಟ ತಳ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ

ಮತ್ತೊಂದೆಡೆ, ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಮಳೆ ಕೊರತೆಯಿಂದ ರೈತರ ಆದಾಯ ಕುಂಠಿತಗೊಳ್ಳುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು? ಇಲ್ಲಿದೆ ವಿವರ – Kannada News | Garuda Purana Food Rules: Dr Basavaraja Guruji Explains Where to Eat and Places to Avoid as Per Shastra

ನಮ್ಮ ದೈನಂದಿನ ಜೀವನದಲ್ಲಿ ಊಟವು ಕೇವಲ ದೇಹದ ಪೋಷಣೆಯಲ್ಲದೆ, ಒಂದು ಯಜ್ಞವೂ ಆಗಿದೆ. ಗರುಡ ಪುರಾಣವು ಊಟದ ಮಹತ್ವ ಮತ್ತು ಎಲ್ಲಿ ಊಟ ಮಾಡಬೇಕು, ಎಲ್ಲಿ ಮಾಡಬಾರದು ಎಂಬುದರ ಕುರಿತು ಮಹತ್ವದ ವಿಚಾರಗಳನ್ನು ತಿಳಿಸುತ್ತದೆ ಎಂದಿದ್ದಾರೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ. ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಆ ಬಗ್ಗೆ ವಿವರಣೆ ನೀಡಿರುವ ಅವರು, ಸಾಮಾನ್ಯವಾಗಿ ದೇವಾಲಯಗಳಲ್ಲಿ ಊಟ ಮಾಡಿದಾಗ ಅದನ್ನು ಪ್ರಸಾದ ಎಂದು ಭಾವಿಸಿ ಭಗವಂತನ ಕೃಪೆ ಲಭಿಸುತ್ತದೆ ಎಂದು ನಂಬಲಾಗುತ್ತದೆ. ಆದರೆ, ಗರುಡ ಪುರಾಣದ ಪ್ರಕಾರ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಊಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ದುಷ್ಟರು, ಅನ್ಯಾಯದಿಂದ ಹಣ ಗಳಿಸಿದವರು, ವಿಪರೀತ ಬಡ್ಡಿ ವಸೂಲಿ ಮಾಡುವವರು, ದುರಹಂಕಾರಿಗಳು, ಹಾಗೆಯೇ ಹೆಂಡತಿ, ಮಕ್ಕಳನ್ನು, ವೃದ್ಧರನ್ನು ಅಥವಾ ಪಶುಪಕ್ಷಿಗಳನ್ನು ಹಿಂಸಿಸುವವರ ಮನೆಯಲ್ಲಿ ಊಟ ಮಾಡಬಾರದು. ಇಂತಹ ಸ್ಥಳಗಳಲ್ಲಿ ಸೇವಿಸಿದ ಆಹಾರವು ನಮ್ಮ ವಂಶಕ್ಕೆ ತೊಂದರೆಯನ್ನು ತರಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಮಾಣಿಕವಾಗಿ ದುಡಿದು ಊಟ ಮಾಡುವ ಶ್ರಮಜೀವಿಗಳ ಮನೆಯಲ್ಲಿ ಒಂದು ತುತ್ತು ಅನ್ನ ಸೇವಿಸುವುದು ಪುಣ್ಯಕರ. ಅಲ್ಲಿ ಭಗವಂತನ ಆವಾಸವಿರುತ್ತದೆ ಮತ್ತು ನಮಗೆ ಒಳ್ಳೆಯದಾಗುತ್ತದೆ. ನಮ್ಮ ಪಂಚಭೂತಗಳು ಮತ್ತು ಸಪ್ತಚಕ್ರಗಳು ಆಹಾರವನ್ನು ಸ್ವೀಕರಿಸಲು, ಆ ಆಹಾರವು ಶುದ್ಧವಾಗಿರಬೇಕು. ಊಟ ಮಾಡುವಾಗ ಅದನ್ನು ಭಗವಂತನಿಗೆ ಅರ್ಪಿಸಿ ಸ್ವೀಕರಿಸಬೇಕು. ಈ ನಿಯಮಗಳು ನಂಬಿಕೆಯ ಆಧಾರದ ಮೇಲೆ ನಮ್ಮ ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ತರಲು ಸಹಕಾರಿ ಎಂದು ಅವರು ಹೇಳಿದ್ದಾರೆ.

Source link

Today Horoscope: ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ – Kannada News | Daily Horoscope: Dr. Basavaraj Gurujis Predictions for 16 June 2026

ಪರಾಭವನಾಮ ಸಂವತ್ಸರ, ಉತ್ತರಾಯಣ, ನಿಜ ಜೇಷ್ಠ ಮಾಸದಲ್ಲಿ, ಈ ದಿನದ ರಾಹುಕಾಲ ಮಧ್ಯಾಹ್ನ 3:31 ರಿಂದ ಸಂಜೆ 5:07 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ ಮತ್ತು ಶುಭಕಾಲ ಬೆಳಗ್ಗೆ 10:43 ರಿಂದ ಮಧ್ಯಾಹ್ನ 12:20 ರವರೆಗೆ ಇರುತ್ತದೆ. ನಿಜ ಜೇಷ್ಠ ಮಾಸವು ಗೃಹಪ್ರವೇಶ, ವಿವಾಹ ಮತ್ತು ಭೂ ಪೂಜೆಗಳಂತಹ ಶುಭ ಕಾರ್ಯಗಳಿಗೆ ಉತ್ತಮ ಮುಹೂರ್ತಗಳನ್ನು ಒದಗಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಜೂನ್ 16, 2026, ಮಂಗಳವಾರವಾದ ಇಂದಿನ ದ್ವಾದಶ ರಾಶಿಗಳ ಬಗ್ಗೆ ಅವರು ನೀಡಿರುವ ಭವಿಷ್ಯದ ಮಾಹಿತಿಯೂ ಈ ವಿಡಿಯೋದಲ್ಲಿದೆ.

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮಿಷ್ಟದವರ ಕೈಹಿಡಿಯುವ ಉತ್ಸಾಹದಲ್ಲಿರುವರು – Kannada News | Dina Rashi Bhavishya June 16, 2026: Daily Horoscope Predictions for Tuesday

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:09, ಯಮಗಂಡ ಕಾಲ 09:08 – 10:44, ಗುಳಿಕ ಕಾಲ 12:20 – 13:57.

ಮೇಷ ರಾಶಿ: ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಆತ್ಮವಂಚನೆಗೆ ಅವಕಾಶ ಕೊಡಬೇಡಿ. ಪ್ರಾಮಾಣಿಕವಾಗಿದ್ದರೆ ನೀವು ತೃಪ್ತರು. ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಸೋಮಾರಿತನ ಮೇಲುಗೈ ಸಾಧಿಸಬಹುದು, ಆದರೆ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಒಳ್ಳೆಯ ಸುದ್ದಿ ಸಿಗಬಹುದು. ಆದಾಯ ಚೆನ್ನಾಗಿರುತ್ತದೆ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು.

ವೃಷಭ ರಾಶಿ: ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಯಾವುದನ್ನೂ ಕಲಿಸುವ ಪ್ರಯತ್ನ ಮಾಡಬೇಡಿ. ಹಣಕಾಸಿನಲ್ಲಿ ಸ್ವಲ್ಪ ಚಿಂತೆ ಉಂಟಾಗಬಹುದು. ಸಂಬಂಧಿತ ವ್ಯಕ್ತಿಗಳೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಕೆಲಸದ ಒತ್ತಡ ಹೆಚ್ಚು ಇರುವುದು ಸಾಧ್ಯ. ವಿವಾದಗಳನ್ನು ಬದಿಗೊತ್ತುವುದು ಉತ್ತಮ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ.

ಮಿಥುನ ರಾಶಿ: ಇಂದು ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಹೊಸ ಕೆಲಸವನ್ನು ತಯಾರಿಸಲು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ವ್ಯವಹಾರದಲ್ಲಿ ಮುಂದಾಲೋಚನೆ ಅಗತ್ಯ. ಮನಸ್ಸು ಕೆಲವೊಮ್ಮೆ ಆಳವಾದ ಯೋಚನೆಗಳಲ್ಲಿ ಇಳಿಯಬಹುದು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು.

ಕರ್ಕಾಟಕ ರಾಶಿ: ಪದೇ ಪದೇ ಆಗಿಹೋದುದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುವಿರಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ನಿಮ್ಮನ್ನು ಬೆರಳು ಮಾಡಿ ತೋರಿಸದಂತೆ ನೋಡಿಕೊಳ್ಳಿ. ದೀರ್ಘ ಪ್ರಯಾಣ ಉತ್ತಮ ದಿನವಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಅಧಿಕವಾಗಬಹುದು. ಪ್ರೇಮವು ಕಾಮವಾಗಿ ಮನಸ್ಸನ್ನು ಕೆಡಿಸುವುದು. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.

ಸಿಂಹ ರಾಶಿ: ಬಹಳ ದಿನಗಳ ಅನಂತರ ಹೊರಗಿನ‌ ಸುತ್ತಾಟವು ಹಿತವೆನಿಸುವುದು. ಗೊಂದಲ ಬರುವ ವಿಚಾರಕ್ಕೆ ಸಮಾಲೋಚನೆ ಅಗತ್ಯ. ಹಣದ ವಿಚಾರದಲ್ಲಿ ಗೆಲುವು ಇದೆ. ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ. ಸರ್ಕಾರದ ಕೆಲಸಕ್ಕೆ ನಿಯುಕ್ತರಾಗಬಹುದು. ಸದೃಢ ಭವಿಷ್ಯದ ನೆಲೆಗಾಗಿ ಸಣ್ಣ ಸಿದ್ಧತೆ ಆರಂಭವಾಗುತ್ತದೆ. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ.

ಕನ್ಯಾ ರಾಶಿ: ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಇಂದು ನಿಮಗೆ ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಹಣಕಾಸು ಪರಿಸ್ಥಿತಿ ಬಲವಾಗಲಿದೆ. ಎಲ್ಲಿಯೂ ಪೂರ್ಣ ಬಲವನ್ನು ಹಾಕಲಾರಿರಿ. ಶಾಂತ ವಾತಾವರಣಕ್ಕಾಗಿ ಮನೆಯಲ್ಲಿ ಸಮಯ ಕಳೆಯಿರಿ. ವ್ಯವಹಾರಕ್ಕೆ ಸಮಯ ಒಳ್ಳೆಯದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ.

ತುಲಾ ರಾಶಿ: ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಕೇಳಿ ಪಡೆದ ಹಣವನ್ನು ಕೇಳದೇ ಕೊಡಿ. ಮನಸ್ಸು ಭಾರವಾಗಿದ್ದರೂ, ಸಾಯಂಕಾಲದವರೆಗೆ ಸ್ಥಿತಿಗತಿಗಳು ಸುಧಾರಿಸುತ್ತವೆ. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ.

ವೃಶ್ಚಿಕ ರಾಶಿ; ಇಂದು ಅನವಶ್ಯಕ ಸಮಸ್ಯೆಗಳನ್ನು ಬೇಕೆಂದೇ ಎಳೆದುಕೊಳ್ಳುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ಇರಬೇಕಾಗುವುದು. ನಿಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ಮುಂದಾಗಿ. ಕೆಲಸದಲ್ಲಿ ಸಣ್ಣ ಬದಲಾವಣೆಗಳು ಆಗಬಹುದು. ಕೆಲವೊಂದು ವಿಷಯಗಳಲ್ಲಿ ಸಹೋದ್ಯೋಗಿಗಳಿಂದ ಸ್ಪಷ್ಟತೆ ಬೇಕಾಗುತ್ತದೆ. ಹಣದ ಲೆಕ್ಕಾಚಾರದಲ್ಲಿ ತಪ್ಪು ಸಾಧ್ಯ. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ.

ಧನು ರಾಶಿ: ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಮಾರ್ಗದರ್ಶನವನ್ನು ಪಡೆಯುತ್ತೀರಿ. ಮುಂದಾಳುವಾಗಲು ನಿಮ್ಮನ್ನೇ ದೂಡಬಹುದು. ಹಣದ ವ್ಯವಹಾರದಲ್ಲಿ ನೀವು ತಕ್ಷಣ ವಿಶ್ವಾಸಕ್ಕೆ ಬರಬೇಡಿ. ವ್ಯಾಪಾರದವರು ಹೊಸ ಅವಕಾಶ ಪಡೆಯಬಹುದು. ಕುಟುಂಬದಲ್ಲಿ ಸಂತೋಷದ ಸನ್ನಿವೇಶ. ಮಕ್ಕಳ ಯಶಸ್ಸು ನಿಮಗೆ ಗರಿಮೆ ತರುತ್ತದೆ. ಇಂದು ಶತ್ರುವಿನ ಆಗಲಿಕೆಯಿಂದ ಸಂತೋಷವಾಗುವುದು‌. ನಿಮ್ಮ ವಿದ್ಯಾಭ್ಯಾಸದ ಸಾಮರ್ಥ್ಯವನ್ನು ತೋರಿಸುವಿರಿ.

ಮಕರ ರಾಶಿ: ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರೆ ಉತ್ಸಾಹ ಹೆಚ್ಚಾಗುತ್ತದೆ. ಕಛೇರಿಯ ವಸ್ತುವನ್ನು ಸ್ವಂತ ಖರ್ಚಿನಿಂದ ಮಾಡಿಸುವಿರಿ. ಪ್ರವಾಸದ ಯೋಜನೆ ಕೈಗೊಳ್ಳಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿರುವುದು ಉತ್ತಮ. ಶತ್ರುಗಳು ನಿಮ್ಮ ಸಂಪತ್ತನ್ನು ಕರಗಿಸಲು ತಂತ್ರವನ್ನು ಹೆಣೆಯಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ.

ಕುಂಭ ರಾಶಿ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆದು ನೆಮ್ಮದಿಯನ್ನು ಪಡೆಯುವಿರಿ. ಚಿಂತೆಯ ಸ್ಥಿತಿಯನ್ನು ಸ್ವತಃ ನಿರ್ಮಾಣ ಮಾಡಿಕೊಳ್ಳುವಿರಿ. ಕೆಲವೊಂದು ನಿರ್ಧಾರಗಳನ್ನು ಬದಲಾಯಿಸಬೇಕಾದ ಪರಿಸ್ಥಿತಿ ಇರದು. ಹಳೆಯ ಪರಿಚಯಗಳು ಪುನಃ ಸಂಪರ್ಕಕ್ಕೆ ಬರಲಿವೆ. ಖರ್ಚು ಹೆಚ್ಚು ಆಗುವ ದಿನವಿದು. ಕುಟುಂಬದಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಮೂಡಬಹುದು. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು.

ಮೀನ ರಾಶಿ: ನಿಮ್ಮ ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಯವಾಗಿ ತಳ್ಳಿಹಾಕುವಿರಿ. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ನಿಮ್ಮ ಕೆಲಸದ ಗತಿಯು ಹೆಚ್ಚು ಚುರುಕುಗೊಳ್ಳುವುದು. ಕೌಟುಂಬಿಕ ವಿಚಾರದಲ್ಲಿ ಮಾತುಕತೆ ಗಂಭೀರವಾಗಬಹುದು. ಸ್ನೇಹಿತರಿಂದ ಅಲ್ಪ ನಿರಾಶೆ ಸಿಗಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಅಪಮಾನವಾಗುವ ಘಟನೆಗಳು ನಡೆಯಬಹುದು.

ಲೋಹಿತ್ ಹೆಬ್ಬಾರ್ -8762924271 (what’s app only)

Source link

ಸ್ಲೋವಾಕಿಯಾದಲ್ಲಿ 11 ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ; 3 ಪ್ರಮುಖ ಘೋಷಣೆಗಳೇನು? – Kannada News | PM Modi unveils expanded India Slovakia partnership Signs 11 Agreements

ನವದೆಹಲಿ, ಜೂನ್ 15: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi Slovakia Visit) ಸ್ಲೋವಾಕಿಯಾಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಏರಿಸಿದವು. ಉಭಯ ದೇಶಗಳ ಪ್ರಧಾನಿಗಳು 11 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಮತ್ತು ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಅತ್ಯಂತ ಮಹತ್ವದ ನಿರ್ಧಾರವೆಂದರೆ ಎರಡೂ ದೇಶಗಳ ಸಂಬಂಧಗಳನ್ನು ಸಮಗ್ರ ಪಾಲುದಾರಿಕೆಗೆ ಏರಿಸುವುದು. ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಬ್ರಾಟಿಸ್ಲಾವಾದಲ್ಲಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಫಿಕೊ ಅವರ ಆತ್ಮೀಯ ಸ್ವಾಗತಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಅವರನ್ನು ಭಾರತದ ಆಪ್ತ ಸ್ನೇಹಿತ ಎಂದು ಬಣ್ಣಿಸಿದರು.

ಭಾರತ ಮತ್ತು ಸ್ಲೋವಾಕಿಯಾ ನಡುವಿನ ಬಾಂಧವ್ಯವು ಪರಸ್ಪರ ನಂಬಿಕೆ ಮತ್ತು ಸಮಾನ ಮೌಲ್ಯಗಳ ಮೇಲೆ ನಿಂತಿದೆ. ಇಂದಿನ ನಮ್ಮ ಮಾತುಕತೆಯು ಕೇವಲ ಸೌಹಾರ್ದ ಭೇಟಿಯಲ್ಲ, ಇದು ಭವಿಷ್ಯದ ದಿಕ್ಸೂಚಿಯಾಗಿದೆ. ನಾವು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ, ಆದರೆ ಈಗ ನಮ್ಮ ಆಕಾಂಕ್ಷೆಗಳು ಮತ್ತಷ್ಟು ದೊಡ್ಡದಾಗಿವೆ ಎಂದು ಮೋದಿ ಹೇಳಿದರು. ಸ್ಲೋವಾಕಿಯಾ ರಾಜಧಾನಿ ಬ್ರಾಟಿಸ್ಲಾವಾದಲ್ಲಿ ನಡೆದ ಉನ್ನತ ಮಟ್ಟದ ನಿಯೋಗದ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣೆ, ಹಸಿರು ಇಂಧನ ಮತ್ತು ಮುಕ್ತ ವ್ಯಾಪಾರ ಸೇರಿದಂತೆ ಹಲವು ವಲಯಗಳಲ್ಲಿ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಅನಾವರಣಗೊಳಿಸಿದರು.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಭೇಟಿಯ ಮಹತ್ವವನ್ನು ಒತ್ತಿ ಹೇಳುತ್ತಾ, ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಯೋಜನೆಗಳನ್ನು ಪ್ರಕಟಿಸಿದರು. “ಇದು ಸ್ಲೋವಾಕಿಯಾಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ. ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಗೆ ಏರಿಸಲು ನಾವು ನಿರ್ಧರಿಸಿದ್ದೇವೆ. ಇದು ನಮ್ಮ ನಂಬಿಕೆ, ಆದ್ಯತೆಗಳು ಮತ್ತು ಭವಿಷ್ಯವನ್ನು ಸಂಕೇತಿಸುತ್ತದೆ” ಎಂದು ಅವರು ಹೇಳಿದರು.

ಪ್ರಮುಖ ಒಪ್ಪಂದಗಳು ಮತ್ತು ನಿರ್ಧಾರಗಳು:

  • ಕಾರ್ಮಿಕ ವಲಸೆಯನ್ನು ಉತ್ತೇಜಿಸಲು ಭಾರತ ಮತ್ತು ಸ್ಲೋವಾಕಿಯಾ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಉದ್ದೇಶ ಪತ್ರ (LoI) ಗೆ ಸಹಿ ಹಾಕಲಾಯಿತು.
  • ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಬಲಪಡಿಸಲು ಒಪ್ಪಂದಕ್ಕೆ ಬರಲಾಯಿತು.
  • ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ಚಲನಚಿತ್ರ, ದೂರದರ್ಶನ ಮತ್ತು ಇತರ ಸೃಜನಶೀಲ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಶ್ರವ್ಯ-ದೃಶ್ಯ ಸೃಷ್ಟಿಯ ಕುರಿತು ಒಪ್ಪಂದಕ್ಕೆ ಬರಲಾಯಿತು.
  • ಸ್ಲೋವಾಕಿಯಾದ ಕೊಸಿಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ಮೊದಲ ಐಸಿಸಿಆರ್ ಚೇರ್ ಅನ್ನು ಸ್ಥಾಪಿಸಲು ನಿರ್ಧರಿಸಲಾಯಿತು.
  • ಕ್ವಾಂಟಮ್ ಸಂವಹನ ಮತ್ತು ನಿರ್ಣಾಯಕ ಮೂಲಸೌಕರ್ಯ ರಕ್ಷಣೆ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಒಪ್ಪಂದವಾಯಿತು.
  • ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಆಯುಷ್ ಸಚಿವಾಲಯ ಮತ್ತು ಸ್ಲೋವಾಕಿಯಾದ ಹೆಲ್ತ್ ಸ್ಪಾ ಪಿಯಸ್ಟನಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ಐಐಟಿ ದೆಹಲಿ ಮತ್ತು ಸ್ಲೋವಾಕ್ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿನಿಮಯ, ವಿದ್ಯಾರ್ಥಿವೇತನಗಳು ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.
  • ಎರಡೂ ದೇಶಗಳ ಪ್ರವಾಸ ನಿರ್ವಾಹಕ ಸಂಸ್ಥೆಗಳ ನಡುವೆ ಪ್ರವಾಸೋದ್ಯಮ ಸಹಕಾರವನ್ನು ಉತ್ತೇಜಿಸಲು ಒಪ್ಪಂದಕ್ಕೆ ಬರಲಾಯಿತು.
  • ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (INSA) ಮತ್ತು ಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್ (SAS) ನಡುವೆ ವೈಜ್ಞಾನಿಕ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಇದನ್ನೂ ಓದಿ: Video: ಸ್ಲೋವಾಕಿಯಾದಲ್ಲಿ ಬ್ರೆಡ್ ಮತ್ತು ಉಪ್ಪಿನೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ

3 ಪ್ರಮುಖ ಘೋಷಣೆಗಳು:

  • ಭಾರತ ಮತ್ತು ಸ್ಲೋವಾಕಿಯಾ ತಮ್ಮ ಸಂಬಂಧಗಳನ್ನು ಸಮಗ್ರ ಪಾಲುದಾರಿಕೆಯಾಗಿ ಉನ್ನತೀಕರಿಸುವುದಾಗಿ ಘೋಷಿಸಲಾಯಿತು.
  • ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸಹಕಾರವನ್ನು ಹೆಚ್ಚಿಸಲು ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಯಿತು.
  • ನಾಗರಿಕ ಸೇವೆಗಳು ಮತ್ತು ವೀಸಾ ಸಂಬಂಧಿತ ವಿಷಯಗಳಲ್ಲಿ ಸಹಕಾರಕ್ಕಾಗಿ ಕಾನ್ಸುಲರ್ ಮಾತುಕತೆಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:21 pm, Mon, 15 June 26

Source link

ಅನುಮಾನಾಸ್ಪದ ರೀತಿಯಲ್ಲಿ ‘ಮಜಾ ಭಾರತ’ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರು ನಿಧನ – Kannada News | Majaa Bharatha and Comedy Kiladigalu fame Siddartha Parasanura found dead suspiciously in Humnabad

ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರು (Siddartha Parasanura) ಅವರು ನಿಧನರಾಗಿದ್ದಾರೆ. ಅವರ ಅಭಿಮಾನಿಗಳಿಗೆ, ಆಪ್ತರಿಗೆ ಮತ್ತು ಕುಟುಂಬದವರಿಗೆ ಈ ಸಾವಿನ ಸುದ್ದಿ ತೀವ್ರ ಆಘಾತ ನೀಡಿದೆ. ಸಿದ್ದಾರ್ಥ ಅವರ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ಮೂಡಿವೆ. ಅವರ ನಿಧನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ‘ಮಜಾ ಭಾರತ’ (Majaa Bharatha) ಮುಂತಾದ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಸಿದ್ದಾರ್ಥ ಪರಸನೂರು ಅವರು ಅನುಮಾನಾಸ್ಪದವಾಗಿ ನಿಧನರಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ಸಿದ್ದಾರ್ಥ ಪರಸನೂರು ಅವರು ವಾಸಿಸುತ್ತಿದ್ದರು. ಮೂರು ದಿನದ ಹಿಂದೆ ಅವರು ಮೃತಪಟ್ಟಿರುವ ಸಾಧ್ಯತೆ ಇದೆ. ಈಗ ಅವರ ಮೃತದೇಹ ಪತ್ತೆ ಆಗಿದೆ. ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಖಾಲಿ‌ ಜಾಗದಲ್ಲಿ ಮೃತ ದೇಹ ಪತ್ತೆ ಆಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುತ್ತದೆ. ಕರೆಂಟ್ ಹಿಡಿದು ಮೃತಪಟ್ಟಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮಾನ ಬರುವ ರೀತಿಯಲ್ಲಿ ಶವ ಪತ್ತೆ ಆಗಿರುವುದರಿಂದ ಹುಮ್ನಾಬಾದ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ನಿಧನರಾಗಿ ಆರೇ ವರ್ಷಕ್ಕೆ ಸುಶಾಂತ್ ಸಿಂಗ್ ರಜಪೂತ್ ಯಾರಿಗೂ ನೆನಪಿಲ್ಲ; ಪುಣ್ಯತಿಥಿಗೆ ಬಾಲಿವುಡ್ ಮೌನ

ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಾದ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಮಜಾ ಭಾರತ’ ಶೋನಲ್ಲಿ ಸಿದ್ದಾರ್ಥ ಪರಸನೂರು ಭಾಗವಹಿಸಿದ್ದರು. ತಮ್ಮ ಅಭಿನಯದ ಮೂಲಕ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಈಗ ಅವರ ನಿಧನದಿಂದ ಅಭಿಮಾನಿಗಳು ಮತ್ತು ಆಪ್ತರಿಗೆ ನೋವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link