Category Archives: Blog

Your blog category

ಅಜಾಗರೂಕ‌ ಚಾಲನೆ ಕೇಸ್: ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ?; ಅರ್ಜಿದಾರರಿಗೆ ಕೋರ್ಟ್​​ ಪ್ರಶ್ನೆ

ಅಜಾಗರೂಕ‌ ಚಾಲನೆ ಕೇಸ್: ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ?; ಅರ್ಜಿದಾರರಿಗೆ ಕೋರ್ಟ್​​ ಪ್ರಶ್ನೆ

ಬೆಂಗಳೂರು, ಏಪ್ರಿಲ್​​ 10: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅಜಾಗರೂಕ‌ ಚಾಲನೆ ಕೇಸ್ ಸಂಬಂಧ ಪ್ರಕರಣ ರದ್ದು ಕೋರಿ ಕಾರು ಚಲಾಯಿಸಿದ್ದ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಮುದಾಯ ಸೇವೆ ಮಾಡುವ ಷರತ್ತಿನಡಿ ಕೇಸ್​​ ರದ್ದುಪಡಿಸುವುದಾಗಿ ಮೌಖಿಕವಾಗಿ ಸೂಚಿಸಿದೆ. ಬಿ.ಆರ್.ಚಿರಂತ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಪಶ್ಚಾತ್ತಾಪ ರೂಪದಲ್ಲಿ ಸಮುದಾಯ ಸೇವೆ ಮಾಡುವುದಾಗಿ ವಕೀಲರ ಪ್ರಸ್ತಾವಿಸಿದ್ದರು. ಹೊಸ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ? ಎಂದು ಪ್ರಶ್ನಿಸಿದೆ. ಈ ವೇಳೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದಾಗಿ ಅರ್ಜಿದಾರರ ಪರ ವಕೀಲ ರಜತ್​ರಿಂದ ಹೈಕೋರ್ಟ್​ಗೆ ತಿಳಿಸಿದ್ದಾರೆ. ಈ ವೇಳೆ ಮರು ಪ್ರಶ್ನೆ ಮಾಡಿರುವ ಪೀಠ, ನಿರ್ಲಕ್ಷ್ಯದಿಂದ ಅಜಾಗರೂಕ ಚಾಲನೆ ಮಾಡಿ ಮಕ್ಕಳಿಗೆ ಪಾಠ ಮಾಡುತ್ತೀರಾ? ನಿಯಮ ಉಲ್ಲಂಘನೆ ಹೇಗೆಂದು ಮಕ್ಕಳು ಕಲಿಯಬೇಕೇ? ಎಂದು ಅರ್ಜಿದಾರರ ಪರ ವಕೀಲರಿಗೆ ಕೇಳಿದೆ.

ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ; ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್

ಅಲ್ಲದೆ, ಕೋರ್ಟ್ ಸೂಚಿಸಿದ ಸಮುದಾಯ ಸೇವೆ ಮಾಡಬೇಕೆಂದು ಸೂಚನೆ ನೀಡಿರುವ ಪೀಠ, ಆದೇಶದಲ್ಲಿ ಸೇವೆ ಯಾವುದಿರಬೇಕೆಂದು ತಿಳಿಸುವುದಾಗಿ ಹೇಳಿದೆ. ಅರ್ಜಿದಾರನ‌ ಬಗ್ಗೆ ಅನುಕಂಪ ತೋರಿಸುವಂತೆ ಅವರ ಪರ ವಕೀಲರು ಹೈಕೋರ್ಟ್​​ನ ಮನವಿ ಮಾಡಿದ್ದು, ಲ್ಯಾಂಬೋರ್ಗಿನಿ ಕಾರು ಅಜಾಗರೂಕ‌ ಚಾಲನೆ ಸಂಬಂಧ ಜನವರಿಯಲ್ಲಿ ಕೆಂಗೇರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕಾರನ್ನು ಅತಿವೇಗವಾಗಿ ಲೇನ್ ಬದಲಿಸುತ್ತಾ, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಬಿಹಾರದ ವ್ಯಕ್ತಿ ಬಲೆಗೆ ಬಿದ್ದಿದ್ದು ಹೇಗೆ?

ನವದೆಹಲಿ, ಏಪ್ರಿಲ್ 10: ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪದ ಮೇಲೆ ಬಿಹಾರದಲ್ಲಿ ಮೂವರನ್ನು ಬಂಧಿಸಲಾಗಿದೆ. ಅಮೆರಿಕದ ಸಿಐಎ (US Central Intelligence Agency) ನೀಡಿದ ಮಾಹಿತಿಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಭಾರತದ ಅಧಿಕಾರಿಗಳು ಬಂಧಿಸಿದ್ದಾರೆ. ಅಮನ್ ತಿವಾರಿ ಸೇರಿದಂತೆ ಬಕ್ಸಾರ್ ಜಿಲ್ಲೆಯ ಮೂವರನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಅಮನ್ ತಿವಾರಿ ಯುಎಸ್ ಕೇಂದ್ರ ಗುಪ್ತಚರ ಸಂಸ್ಥೆಗೆ (ಸಿಐಎ) ದೊಡ್ಡ ಮೊತ್ತದ ಹಣವನ್ನು ಕೋರಿ ಸಂದೇಶವನ್ನು ಕಳುಹಿಸಿದ್ದರು. ಆ ಹಣಕ್ಕೆ ಬದಲಾಗಿ ತಾನು ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು 22 ದಿನಗಳ ಕಾಲಾವಕಾಶ ಕೋರಿದ್ದರು ಎಂದು ಆರೋಪಿಸಲಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಬೆದರಿಕೆ ಇಮೇಲ್ ಬಗ್ಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತೀಯ ಅಧಿಕಾರಿಗಳಿಗೆ ಸುಳಿವು ನೀಡಿದ್ದು ಸಿಐಎಯೇ. ಸಂದೇಶ ಕಳುಹಿಸಲು ಬಳಸಿದ ಐಪಿ ವಿಳಾಸವನ್ನು ಸಹ ಸಿಐಎ ಹಂಚಿಕೊಂಡಿದೆ. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸರು ಅಮನ್ ತಿವಾರಿ ಎಂಬ ಬಿಹಾರದ ವ್ಯಕ್ತಿಯನ್ನು ಪತ್ತೆಹಚ್ಚಿ, ಆತನ ಇಬ್ಬರು ಸಹಚರರೊಂದಿಗೆ ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ ಹತ್ಯೆಯ ಸಂಚಿನ ಬಗ್ಗೆ ಬಕ್ಸರ್ ಜಿಲ್ಲೆಯ ಪೊಲೀಸರು ರಹಸ್ಯ ಮಾಹಿತಿ ಪಡೆದ ನಂತರ ಸಿಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಆಶಾ ಪರಾರಿ ಗ್ರಾಮದ ಅಮನ್ ತಿವಾರಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಶಂಕಿತರು ಪ್ರಧಾನ ಮಂತ್ರಿ ಕಚೇರಿಯಿಂದ ಗೌಪ್ಯ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ವಿದೇಶಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ತಡರಾತ್ರಿಯ ದಾಳಿಯ ನಂತರ ಅವರನ್ನು ಬಂಧಿಸಲಾಗಿದ್ದು, ಜಿಲ್ಲಾ ಪೊಲೀಸರು ಸುರಕ್ಷಿತ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peter Movie Review: ಪರಿಸ್ಥಿತಿಯ ಹಿಡಿತಕ್ಕೆ ಸಿಕ್ಕ ‘ಪೀಟರ್’ ಕಥೆಯೊಳಗೆ ಸಾಕಷ್ಟು ಸಸ್ಪೆನ್ಸ್

ನಟ ರಾಜೇಶ್ ಧ್ರುವ ಅವರು ‘ಪೀಟರ್’ (Peter) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಎಂದರೆ ಸಕಲ ಕಲಾವಲ್ಲಭನಲ್ಲ. ಸರ್ವಶಕ್ತನೂ ಅಲ್ಲ. ನಮ್ಮ-ನಿಮ್ಮ ನಡುವೆ ಇರುವ ಒಬ್ಬ ಸಾಮಾನ್ಯ ಹುಡುಗ ಆತ. ಇಂಥ ಪಾತ್ರದ ಮೂಲಕ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ರೀತಿಯಲ್ಲಿ ರಾಜೇಶ್ ಧ್ರುವ (Rajesh Dhruva) ಕಾಣಿಸಿಕೊಂಡಿದ್ದಾರೆ. ಮಡಿಕೇರಿಯ ಸುಂದರ ಪರಿಸರದಲ್ಲಿ ಈ ಕಥೆ ನಡೆಯುತ್ತದೆ. ಈ ಕಥೆಯೊಳಗೆ ಒಂದಷ್ಟು ರಹಸ್ಯಗಳು ಅಡಗಿವೆ. ಈ ಸಿನಿಮಾಗೆ ಸುಕೇಶ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದು, ರವಿ ಹಿರೇಮಠ್ ಮತ್ತು ರಾಕೇಶ್ ಹೆಗ್ಗಡೆ ಅವರು ಬಂಡವಾಳ ಹೂಡಿದ್ದಾರೆ.

ಊರಿನಲ್ಲಿ ಚಂಡೆ ಬಾರಿಸುವ ಮೂಲಕ ಎಲ್ಲರ ಮನಗೆದ್ದ ಪೀಟರ್ (ರಾಜೇಶ್ ಧ್ರುವ) ಎಂಬ ಹುಡುಗನ ಬದುಕಿನಲ್ಲಿ ಒಂದಷ್ಟು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಮೀರಾ (ರವೀಕ್ಷಾ ಶೆಟ್ಟಿ) ಎಂಬ ಹುಡುಗಿ ಜೊತೆ ಅವರಿಗೆ ಪ್ರೀತಿಯೂ ಚಿಗುರುತ್ತದೆ. ಆದರೆ ಪರಿಸ್ಥಿತಿಯ ಕೈವಾಡಕ್ಕೆ ಸಿಕ್ಕ ಪೀಟರ್, ತಾನು ಇಷ್ಟಪಡುವ ಚಂಡೆ ಮತ್ತು ಪ್ರೇಯಸಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಕಾರಣ ಏನು? ಅಂತಿಮವಾಗಿ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ.

ಈ ಕಥೆಯ ಒಳಗೆ ಸಾಕಷ್ಟು ಸಸ್ಪೆನ್ಸ್ ಅಂಶಗಳನ್ನು ಸೇರಿಸಲಾಗಿದೆ. ಪೀಟರ್ ಬದುಕಿನ ವಿವರಗಳು ಒಂದೊಂದಾಗಿಯೇ ತೆರೆದುಕೊಂಡಾಗ ಕೆಲವು ಅಚ್ಚರಿಯ ವಿಷಯಗಳು ತಿಳಿಯುತ್ತವೆ. ಮುಂದೇನಾಗುತ್ತದೆ ಎಂಬ ಕೌತುಕವನ್ನು ಇಟ್ಟುಕೊಂಡೇ ಕಥೆ ಸಾಗುತ್ತದೆ. ಇಡೀ ಸಿನಿಮಾವನ್ನು ಸಾಧ್ಯವಾದಷ್ಟು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಮೊದಲೇ ಹೇಳಿದಂತೆ, ಈ ಸಿನಿಮಾದಲ್ಲಿ ರಾಜೇಶ್ ಧ್ರುವ ಅವರು ಒಬ್ಬ ಸಿಂಪಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಇದ್ದರೂ ಕೂಡ ಎಲ್ಲಿಯೂ ಅತಿರೇಕ ಆಗಿಲ್ಲ. ಇಡೀ ಕಥೆಯಲ್ಲಿ ಚಂಡೆಯನ್ನು ಒಂದು ಪ್ರಮುಖ ಅಂಶವಾಗಿ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಸಿನಿಮಾಗೆ ವಿಶೇಷ ಮೆರುಗು ಬಂದಿದೆ.

ರಿತ್ವಿಕ್ ಮುರಳಿಧರ್ ಅವರು ‘ಪೀಟರ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅವರಿಬ್ಬರ ಕೆಲಸ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಕಥೆಯ ಕೌತುಕವನ್ನು ಹೆಚ್ಚಿಸುವ ರೀತಿಯಲ್ಲಿ ರಿತ್ವಿಕ್ ಮುರಳಿಧರ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಡುಗಳ ಮೂಲಕವೂ ಅವರು ಸೆಳೆಯಲು ಪ್ರಯತ್ನಿಸಿದ್ದಾರೆ. ಗುರುಪ್ರಸಾದ್ ಅವರ ಛಾಯಾಗ್ರಹಣವೂ ಈ ಸಿನಿಮಾಗೆ ಪ್ಲಸ್ ಆಗಿದೆ. ಚಿತ್ರದ ಮೇಕಿಂಗ್ ಅಚ್ಚುಕಟ್ಟಾಗಿದೆ.

ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರಿಗೆ ‘ಪೀಟರ್’ ಒಂದು ಸಿಂಪಲ್ ಸಿನಿಮಾ ಎನಿಸುತ್ತದೆ. ಮಲಯಾಳಂ ಸಿನಿಮಾಗಳ ಫೀಲ್ ಕೊಡುವ ಗುಣ ಈ ಚಿತ್ರಕ್ಕೆ ಇದೆಯಾದರೂ ಕಥೆಯಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಭಾವನೆ ಕೂಡ ಮೂಡುತ್ತದೆ. ಆ ಬಗ್ಗೆ ಚಿತ್ರತಂಡ ಗಮನ ಹರಿಸಿದ್ದರೆ ಇನ್ನಷ್ಟು ಅಂಕ ಪಡೆದುಕೊಳ್ಳಬಹುದಿತ್ತು.

ಇದನ್ನೂ ಓದಿ: Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

‘ಪೀಟರ್’ ಚಿತ್ರದಲ್ಲಿ ಎಲ್ಲ ಕಲಾವಿದರ ನಟನೆ ಗಮನ ಸೆಳೆಯುವಂತಿದೆ. ಬಡ ಕುಟುಂಬದ ಹುಡುಗನಾಗಿ, ಪರಿಸ್ಥಿತಿಯ ಹಿಡಿತಕ್ಕೆ ಸಿಕ್ಕು ಒದ್ದಾಡುವ ವ್ಯಕ್ತಿಯಾಗಿ ರಾಜೇಶ್ ಧ್ರುವ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ನಟಿಯರಾದ ರವೀಕ್ಷಾ ಶೆಟ್ಟಿ ಮತ್ತು ಜಾನ್ವಿ ರಾಯಲ ಅವರು ಉತ್ತಮ ಅಭಿನಯ ತೋರಿದ್ದಾರೆ. ಪ್ರತಿಮಾ ನಾಯಕ್ ಅವರು ಕೂಡ ತಮ್ಮ ನಟನೆಯಿಂದ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ. ರಾಮ್ ನಾಡಗೌಡ ಅವರು ತಮ್ಮ ಪಾತ್ರದಿಂದ ಸಸ್ಪೆನ್ಸ್ ತುಂಬಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RR vs RCB IPL 2026 Live Score: ರಾಜಸ್ಥಾನಕ್ಕೆ ರಾಯಲ್ ಚಾಲೆಂಜ್ – Kannada News | Rajasthan Royals vs Royal Challengers Bengaluru IPL 2026 Live Cricket Score RR vs RCB Match on 10th April latest news in Kannada

ಐಪಿಎಲ್ 2026 ರ 16 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ರಾಜಸ್ಥಾನ ಈ ಪಂದ್ಯವನ್ನು ತಮ್ಮ ಎರಡನೇ ತವರು ಮೈದಾನವಾದ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಆಡಲಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಅಜೇಯವಾಗಿ ಉಳಿದಿವೆ ಆದ್ದರಿಂದ, ಈ ಪಂದ್ಯದ ಬಳಿಕ ಒಂದು ತಂಡಕ್ಕೆ ಮೊದಲ ಸೋಲು ಎದುರಾಗಲಿದೆ.

Source link

ಮಕ್ಕಳ ಆರೋಗ್ಯ ಚೆನ್ನಾಗಿರಬೇಕಾ? ಹಾಗಿದ್ರೆ ಈ ಬ್ಲಡ್ ಟೆಸ್ಟ್‌ಗಳನ್ನು ಮಾಡಿಸಲೇಬೇಕು!

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತಿದ್ದು, ಈ ಸಮಯದಲ್ಲಿ ಅವರ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಈ ರೀತಿಯ ಸಂದರ್ಭಗಳಲ್ಲಿ, ಯಾವುದೇ ರೋಗವನ್ನು ಮೊದಲೇ ಪತ್ತೆಹಚ್ಚಲು ಕಾಲಕಾಲಕ್ಕೆ ಅಗತ್ಯವಾದ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮಗುವಿನ ವಯಸ್ಸು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಯಾವ ರಕ್ತ ಪರೀಕ್ಷೆಗಳನ್ನು (Health Tests) ಮಾಡಬೇಕು ಮತ್ತು ಈ ಪರೀಕ್ಷೆಗಳನ್ನು ಯಾವಾಗ ನಡೆಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಬ್ಲಡ್ ಟೆಸ್ಟ್‌ಗಳನ್ನು ಮಾಡಿಸಬೇಕು?

ಎಐಐಎಂಎಸ್‌ನ ವೈದ್ಯರಾದ ಡಾ. ಅಶೋಕ್ ಕುಮಾರ್ ಅವರ ಪ್ರಕಾರ, ಮಕ್ಕಳಿಗೆ ಅತ್ಯಂತ ಮೂಲಭೂತ ಪರೀಕ್ಷೆಯಾದ ಸಿಬಿಸಿ (CBC) ಪರೀಕ್ಷೆ ಅಗತ್ಯವಾಗಿದೆ. ಇದರಿಂದ ರಕ್ತದಲ್ಲಿನ ಹೀಮೋಗ್ಲೋಬಿನ್, ಇನ್ಫೆಕ್ಷನ್ ಮತ್ತು ಇತರ ಅಂಶಗಳ ಬಗ್ಗೆ ಮಾಹಿತಿ ಸಿಗುತ್ತದೆ. ಇದರ ಜೊತೆಗೆ ವಿಟಮಿನ್ D ಮತ್ತು B12 ಪರೀಕ್ಷೆಗಳು ಕೂಡ ಮುಖ್ಯವಾಗಿವೆ, ಏಕೆಂದರೆ ಇವುಗಳ ಕೊರತೆ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಕ್ಯಾಲ್ಸಿಯಂ ಮತ್ತು ಥೈರಾಯ್ಡ್ ಫಂಕ್ಷನ್ ಟೆಸ್ಟ್‌ಗಳು ಕೂಡ ಕೆಲವು ಸಂದರ್ಭಗಳಲ್ಲಿ ಅಗತ್ಯವಾಗಬಹುದು, ವಿಶೇಷವಾಗಿ ಮಕ್ಕಳ ಬೆಳವಣಿಗೆ ನಿಧಾನವಾಗಿದ್ದರೆ ಅಥವಾ ತೂಕದಲ್ಲಿ ಅಸಮತೋಲನ ಕಂಡುಬಂದರೆ ಅದನ್ನು ಮಾಡಿಸಬೇಕು. ಇನ್ನು, ಮಕ್ಕಳ ಎತ್ತರ ಮತ್ತು ತೂಕ ಇತರ ಮಕ್ಕಳಿಗಿಂತ ಕಡಿಮೆ ಅಥವಾ ಹೆಚ್ಚು ಇದ್ದರೆ, ಗ್ರೋತ್ ಹಾರ್ಮೋನ್ ಪರೀಕ್ಷೆ ಮಾಡಿಸುವುದು ಅಗತ್ಯ. ಇದು ಮಕ್ಕಳ ದೇಹವು ಅವರ ವಯಸ್ಸಿಗೆ ತಕ್ಕಂತೆ ಅಭಿವೃದ್ಧಿಯಾಗುತ್ತಿದೆಯೇ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಈ ಪರೀಕ್ಷೆಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾಡಿಸಬೇಕು.

ಇದನ್ನೂ ಓದಿ: ಚಿಕ್ಕ ಮಕ್ಕಳಲ್ಲಿ ಕೂದಲು ಬಿಳಿಯಾಗುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೇ ಅಥವಾ ರೋಗದ ಲಕ್ಷಣವೇ?

ಯಾವಾಗ ಪರೀಕ್ಷೆ ಮಾಡಿಸಬೇಕು?

ಮಕ್ಕಳಲ್ಲಿ ದುರ್ಬಲತೆ, ತೂಕ ಕಡಿಮೆ ಆಗುತ್ತಿದ್ದರೆ, ಪದೇಪದೇ ಜ್ವರ, ಓದು ಅಥವಾ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಲಕ್ಷಣಗಳಿಲ್ಲದಿದ್ದರೂ ವರ್ಷಕ್ಕೆ ಒಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ. ಪರೀಕ್ಷೆಗಳನ್ನು ಸದಾ ಮಾನ್ಯತೆ ಪಡೆದ ಉತ್ತಮ ಲ್ಯಾಬ್‌ಗಳಲ್ಲಿ ಮಾಡಿಸಬೇಕು. ಗುಣಮಟ್ಟವಿಲ್ಲದ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿದರೆ ವರದಿಯಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಇನ್ನು, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರ ಸಲಹೆಯ ಮೇರೆಗೆ ಮಾತ್ರ ಪರೀಕ್ಷೆ ಮಾಡಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Akshaya Tritiya 2026: ಅಕ್ಷಯ ತೃತೀಯದಂದು ಚಿನ್ನ ಮತ್ತು ಬೆಳ್ಳಿ ಖರೀದಿಸಲು ಶುಭ ಸಮಯ ಯಾವುದು?

ಸನಾತನ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 19ರಂದು ಅಕ್ಷಯ ತೃತೀಯ ಬಂದಿದೆ. ಈ ದಿನದ ವಿಶೇಷತೆಯೆಂದರೆ, ಅಂದು ಮಾಡುವ ಯಾವುದೇ ಸತ್ಕರ್ಮಗಳು ‘ಅಕ್ಷಯ’ವಾಗಿರುತ್ತವೆ, ಅಂದರೆ ಅವುಗಳ ಫಲ ಎಂದಿಗೂ ಮುಗಿಯುವುದಿಲ್ಲ ಎಂಬುದು ಭಕ್ತರ ಗಾಢ ನಂಬಿಕೆ.

ಮುಹೂರ್ತ ನೋಡದೆಯೇ ಶುಭ ಕಾರ್ಯ ಮಾಡಬಹುದಾದ ದಿನ:

ಅಕ್ಷಯ ತೃತೀಯವನ್ನು ‘ಸ್ವಯಂ ಸಿದ್ಧ ಮುಹೂರ್ತ’ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಮದುವೆ, ಗೃಹಪ್ರವೇಶ ಅಥವಾ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ದಿನ ಪ್ರತ್ಯೇಕವಾಗಿ ಶುಭ ಸಮಯ ನೋಡುವ ಅವಶ್ಯಕತೆಯಿಲ್ಲ. ಇಡೀ ದಿನವು ಅತ್ಯಂತ ಮಂಗಳಕರವಾಗಿರುತ್ತದೆ. ಈ ದಿನ ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಒತ್ತು ನೀಡಲಾಗುತ್ತದೆ.

ಚಿನ್ನ-ಬೆಳ್ಳಿ ಖರೀದಿಗೆ ಶುಭ ಸಮಯ:

ಶತಮಾನಗಳಿಂದಲೂ ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಸಂಪ್ರದಾಯವಿದೆ. ಅಂದು ಮನೆಗೆ ತಂದ ಆಭರಣಗಳು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಶಾಶ್ವತವಾಗಿ ನೆಲೆಸುವಂತೆ ಮಾಡುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಈ ವರ್ಷದ ಖರೀದಿ ಮುಹೂರ್ತ:

  • ಪ್ರಾರಂಭ: ಏಪ್ರಿಲ್ 19, ಬೆಳಿಗ್ಗೆ 10:49 ಕ್ಕೆ.
  • ಮುಕ್ತಾಯ: ಏಪ್ರಿಲ್ 20, ಬೆಳಿಗ್ಗೆ 05:51 ಕ್ಕೆ.

ಭಕ್ತರು ಈ ಅವಧಿಯಲ್ಲಿ ಚಿನ್ನ ಖರೀದಿಸಿದರೆ ಅದು ಅತ್ಯಂತ ಲಾಭದಾಯಕ ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯದ ಧಾರ್ಮಿಕ ಮಹತ್ವ:

‘ಅಕ್ಷಯ’ ಎಂದರೆ ನಾಶವಿಲ್ಲದ್ದು ಎಂದರ್ಥ. ಈ ದಿನ ಮಾಡುವ ದಾನ, ಧರ್ಮ ಮತ್ತು ಪ್ರಾರ್ಥನೆಗಳಿಗೆ ಅನಂತ ಪುಣ್ಯ ಲಭಿಸುತ್ತದೆ. ಅಕ್ಷಯ ತೃತೀಯದಂದು ಬಡವರಿಗೆ ಆಹಾರ, ಬಟ್ಟೆ ಮತ್ತು ಕುಡಿಯುವ ನೀರನ್ನು ದಾನ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ಮಾಡುವ ಜಪ ಮತ್ತು ಹೋಮ-ಹವನಗಳು ಜೀವನದಲ್ಲಿ ಯಶಸ್ಸು ಮತ್ತು ಶಾಂತಿಯನ್ನು ತರುತ್ತವೆ. ಅನೇಕ ಭಕ್ತರು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲು ಈ ದಿನ ಉಪವಾಸವಿದ್ದು, ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೈವ ಅನುಕರಣೆ ಪ್ರಕರಣ; ಪರಿಷ್ಕೃತ ಕ್ಷಮಾಪಣೆ ಸಲ್ಲಿಸಲು ಒಪ್ಪಿದ ರಣವೀರ್ ಸಿಂಗ್

ಚಾವುಂಡಿ ದೈವ ಅನುಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಅವರು ಕೇಸ್ ಎದುರಿಸುತ್ತಿದ್ದಾರೆ. ಈ ಪ್ರಕರಣ ಕರ್ನಾಟಕ ಹೈಕೋರ್ಟ್​​​ನಲ್ಲಿದೆ. ಇಂದು (ಏಪ್ರಿಲ್ 10) ನಡೆದ ವಿಚಾರಣೆಯಲ್ಲಿ ರಣವೀರ್ ಸಿಂಗ್ ಪರವಾಗಿ ವಕೀಲರು ಹೊಸ ಹೇಳಿಕೆ ನೀಡಿದ್ದಾರೆ. ಹೊಸದಾಗಿ ಕ್ಷಮೆ ಕೇಳಲು ಸಿದ್ಧ ಎಂದಿರುವ ರಣವೀರ್, ದೇವಾಲಯಕ್ಕೂ ಭೇಟಿ ನೀಡುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

‘ಚಾವುಂಡಿ ದೈವ ಅನುಕರಿಸಿದ ಪ್ರಕರಣದಲ್ಲಿ ಪರಿಷ್ಕೃತ ಕ್ಷಮೆಯಾಚನಾ ಅಫಿಡವಿಟ್​ ಸಲ್ಲಿಸಲು ನಾನು ಸಿದ್ಧ. ಈ ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಕಳವಳವನ್ನು ಇದು ದೂರ ಮಾಡುತ್ತದೆ’ ಎಂದು ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್​​ಗೆ ತಿಳಿಸಿದ್ದಾಗಿ ಬಾರ್ ಆ್ಯಂಡ್ ಬೇಂಚ್ ವರದಿ ಮಾಡಿದೆ.

‘ನಾನು ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದೇನೆ ಮತ್ತು ಆ ಅಫಿಡವಿಟ್‌ನಲ್ಲಿ ದೇವಸ್ಥಾನಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದೇನೆ. ದೈವಾರಾಧಕರನ್ನು ನೋಯಿಸಿದ್ದೇನೆ ಎಂದು ಮಿಮಿಕ್ರಿ ಮಾಡಿದಾಗ ನನಗೆ ತಿಳಿದಿರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು. ನನಗೆ ಈ ಸೂಕ್ಷ್ಮತೆಗಳ ಬಗ್ಗೆ ತಿಳಿದಿರಲಿಲ್ಲ’ ಎಂದು ರಣವೀರ್ ಸಿಂಗ್ ಕೋರ್ಟ್​​ಗೇ ಈ ಮೊದಲು ವಕೀಲರ ಮೂಲಕ ತಿಳಿಸಿದ್ದರು.

‘ಈ ಅಫಿಡವಿಟ್ ಮೂಲಕ ನಾನು ಮತ್ತೊಮ್ಮೆ ನನ್ನ ವಿಷಾದ ಹೊರಹಾಕುತ್ತೇನೆ. ಬೇಷರತ್ತ ಕ್ಷಮೆಯಾಚಿಸುತ್ತೇನೆ . ನನ್ನ ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸಲು ನಾನು ಶೀಘ್ರವೇ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ’ ಎಂದು ರಣವೀರ್ ಸಿಂಗ್ ಅಫಿಡವಿಟ್​​ನಲ್ಲಿ ತಿಳಿಸಿರುವುದಾಗಿ ಪೂವಯ್ಯ ಹೇಳಿದ್ದರು.

ಇದನ್ನೂ ಓದಿ: ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

ಆದರೆ, ದೂರುದಾರ ಪ್ರಶಾಂತ್ ಮೇಥಲ್​​ಗೆ ಇದು ಖುಷಿ ಕೊಟ್ಟಿರಲಿಲ್ಲ. ರಣವೀರ್ ಕ್ಷಮೆಯಲ್ಲಿ ಪ್ರಾಮಾಣಿಕತೆ ಕಾಣಿಸಿಲ್ಲ ಎಂದಿದ್ದರು. ಇದಕ್ಕೆ ಉತ್ತರಿಸಿರೋ ಪೂವಯ್ಯ ಅವರು, ಪ್ರಶಾಂತ್ ಅವರ ಜೊತೆ ಚರ್ಚಿಸಿ, ಹೊಸ ಅಫಿಡವಿಟ್ ಸಿದ್ಧ ಮಾಡಿ ಸಲ್ಲಿಕೆ ಮಾಡೋದಾಗಿ ಹೇಳಿದ್ದಾರೆ. ಪ್ರಕರಣವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ.
ರಣವೀರ್ ಸಿಂಗ್ ಅವರು ಗೋವಾದಲ್ಲಿ ನಡೆದ ಫಿಲ್ಮ್​ ಫೆಸ್ಟಿವಲ್​​ನಲ್ಲಿ ದೈವವನ್ನು ಅನುಕರಿಸಿದ್ದರು. ರಿಷಬ್ ಎದುರು ಅವರು ಈ ಅನುಕರಣೆ ಮಾಡಿ ವಿವಾದಕ್ಕೆ ಸಿಲುಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Delayed Marriage: ಮದುವೆ ವಿಳಂಬವಾಗುತ್ತಿದೆಯೇ? ಜಾತಕದಲ್ಲಿನ ಈ ಗ್ರಹ ದೋಷಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

ಜೀವನದಲ್ಲಿ ಎಲ್ಲವೂ ಸುಸೂತ್ರವಾಗಿದ್ದರೂ, ಅಂದರೆ ಉತ್ತಮ ಉದ್ಯೋಗ, ಸುಸಂಸ್ಕೃತ ನಡವಳಿಕೆ ಮತ್ತು ಗೌರವಾನ್ವಿತ ಕುಟುಂಬವಿದ್ದರೂ ಕೆಲವೊಮ್ಮೆ ಮದುವೆ ಎಂಬುದು ವಿಳಂಬವಾಗುತ್ತಿರುತ್ತದೆ . ಬಂದ ಸಂಬಂಧಗಳು ಕೈತಪ್ಪುವುದು ಅಥವಾ ಸೂಕ್ತವಾದ ಪ್ರಸ್ತಾಪಗಳೇ ಬಾರದಿರುವುದು ಅನೇಕರನ್ನು ಚಿಂತೆಗೀಡು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿನ ಗ್ರಹಗಳ ಸ್ಥಾನಗತಿ ಮತ್ತು ದೋಷಗಳೇ ಇಂತಹ ಅಡೆತಡೆಗಳಿಗೆ ಪ್ರಮುಖ ಕಾರಣಗಳಾಗಿವೆ.

ಜಾತಕದ ‘ಏಳನೇ ಮನೆ’ಯ ಪ್ರಾಮುಖ್ಯತೆ:

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕದ 12 ಮನೆಗಳ ಪೈಕಿ ಏಳನೇ ಮನೆಯನ್ನು ವಿವಾಹ ಮತ್ತು ಜೀವನ ಸಂಗಾತಿಯ ಸ್ಥಾನ ಎಂದು ಕರೆಯಲಾಗುತ್ತದೆ. ಈ ಮನೆಯ ಅಧಿಪತಿ ದುರ್ಬಲನಾಗಿದ್ದರೆ ಅಥವಾ ಅಶುಭ ಸ್ಥಾನಗಳಲ್ಲಿ (6, 8 ಅಥವಾ 12ನೇ ಮನೆ) ಕುಳಿತಿದ್ದರೆ ಮದುವೆಯಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತವೆ. ಏಳನೇ ಮನೆಯ ಮೇಲೆ ಪಾಪ ಗ್ರಹಗಳ ದೃಷ್ಟಿ ಬಿದ್ದಾಗಲೂ ಸಂಬಂಧಗಳು ಅಂತಿಮ ಹಂತದಲ್ಲಿ ಮುರಿದು ಬೀಳುವ ಸಾಧ್ಯತೆ ಇರುತ್ತದೆ.

ಮದುವೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಗ್ರಹಗಳು:

ಶನಿ ಗ್ರಹದ ಮಂದಗತಿ:

ಶನಿಯನ್ನು ಶಿಸ್ತು ಮತ್ತು ನ್ಯಾಯದ ದೇವರೆಂದು ಕರೆಯಲಾಗುತ್ತದೆ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ್ದರಿಂದ, ಇದರ ಪ್ರಭಾವ ಏಳನೇ ಮನೆಯ ಮೇಲಿದ್ದರೆ ಮದುವೆಯು ಸಾಮಾನ್ಯವಾಗಿ 30 ವರ್ಷಗಳ ನಂತರವೇ ಜರುಗುತ್ತದೆ. ಆದರೆ, ಶನಿಯಿಂದ ವಿಳಂಬವಾದ ಮದುವೆಯು ಹೆಚ್ಚು ಸ್ಥಿರವಾಗಿ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ.

ಮಂಗಳ ದೋಷ (ಕುಜ ದೋಷ):

ಅನೇಕರು ‘ಮಂಗಳಿಕ’ ಅಥವಾ ‘ಕುಜ ದೋಷ’ದ ಬಗ್ಗೆ ಕೇಳಿರುತ್ತಾರೆ. ಜಾತಕದಲ್ಲಿ ಮಂಗಳನ ಸ್ಥಾನವು ಉಗ್ರವಾಗಿದ್ದರೆ, ಅದು ಕೇವಲ ಮದುವೆ ವಿಳಂಬ ಮಾಡುವುದು ಮಾತ್ರವಲ್ಲದೆ, ವಿವಾಹದ ನಂತರ ದಂಪತಿಗಳ ನಡುವೆ ಹೊಂದಾಣಿಕೆಯ ಸಮಸ್ಯೆಗಳನ್ನು ಸೃಷ್ಟಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ರಾಹು ಮತ್ತು ಕೇತುಗಳ ಛಾಯೆ:

ರಾಹು ಮತ್ತು ಕೇತುಗಳನ್ನು ಛಾಯಾ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇವುಗಳ ಪ್ರಭಾವವಿದ್ದರೆ ಸಂಬಂಧಗಳು ನಿಶ್ಚಯವಾಗುವ ಮೊದಲೇ ತಪ್ಪು ತಿಳುವಳಿಕೆಯಿಂದ ಹಠಾತ್ತನೆ ಮುರಿದು ಬೀಳುತ್ತವೆ. ಇವು ಮದುವೆಯ ಪ್ರಕ್ರಿಯೆಯಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತವೆ.

ಗುರು ಮತ್ತು ಶುಕ್ರ ಗ್ರಹಗಳ ಬಲ:

ವಿವಾಹ ಸುಗಮವಾಗಿ ನಡೆಯಲು ಸ್ತ್ರೀ ಜಾತಕದಲ್ಲಿ ಗುರು (Jupiter) ಮತ್ತು ಪುರುಷ ಜಾತಕದಲ್ಲಿ ಶುಕ್ರ (Venus) ಗ್ರಹಗಳ ಬಲ ಅತ್ಯಗತ್ಯ. ಹುಡುಗಿಯರಿಗೆ ಗುರುವು ಪತಿ ಸುಖವನ್ನು ನೀಡುವ ಗ್ರಹವಾದರೆ, ಹುಡುಗರಿಗೆ ಶುಕ್ರನು ಪತ್ನಿಯ ಸುಖವನ್ನು ನೀಡುವವನು. ಈ ಗ್ರಹಗಳು ದುರ್ಬಲವಾದಾಗ ಮದುವೆಯ ಪ್ರಸ್ತಾಪಗಳು ಬರುವುದು ಕಡಿಮೆಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀನಂದಾ ಸಾವಿಗೆ ಸ್ಫೋಟಕ ಟ್ವಿಸ್ಟ್: ಬಾಲಕಿ ಸಾವಿನ ಬಗ್ಗೆ ಪೊಲೀಸರಿಗೆ ಮತ್ತೊಂದು ಅನುಮಾನ

ಚಿಕ್ಕಮಗಳೂರು, (ಏಪ್ರಿಲ್ 10): ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ (Chikkamagaluru) ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (Srinanda) (14) ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7ರಂದು ಕುಟುಂಬದವರೊಂದಿಗೆ ಚಿಕ್ಕಮಗಳೂರಿನ ಮಾಣಿಕ್ಯಧಾರಕ್ಕೆ ಪ್ರವಾಸಕ್ಕೆ ಬಂದಿದ್ದು, ಮಂಗಳವಾರ ಸಂಜೆ ಸುಮಾರು 5.30ರ ವೇಳೆ ಆಕೆ ಆಕಸ್ಮಿಕವಾಗಿ ನಾಪತ್ತೆಯಾಗಿದ್ದಳು. ಬಳಿಕ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.ಬಳಿಕ ಅರಣ್ಯ ಇಲಾಖೆ, ಪೊಲೀಸರು, ಸೇರಿದಂತೆ ಇತರೆ ರಕ್ಷಣಾ ತಂಡಗಳು ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಅಂತಿಮವಾಗಿ ಇಂದು (ಏಪ್ರಿಲ್ 10) ಶ್ರೀನಂದಾ 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದ್ರೆ, ಶ್ರೀನಂದಾ ಅದು ಹೇಗೆ ಬಿದ್ದಿದ್ದಾಳೆ ಎನ್ನುವುದೇ ನಿಗೂಢವಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ಇದೀಗ ತಂದೆ, ಪೊಲೀಸರ ಮುಂದೆ ಹೇಳಿರುವ ಅದೊಂದು ಹೇಳಿಕೆ ಶ್ರೀನಂದಾ ಸಾವಿನ ಬಗ್ಗೆ ಮತ್ತೊಂದು ಅನುಮಾನ ಮೂಡಿದ್ದು,  ತಂದೆ ಬೈದಿದ್ದಕ್ಕೆ ಶ್ರೀನಂದಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕ್ಷಣಾರ್ಧದಲ್ಲೇ ಮಾಯವಾಗಿದ್ದ ಶ್ರೀನಂದಾ

ಆ ದಿನ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಬಾಲಕಿ ಶ್ರೀನಂದ ಅವರ ಹಿಂದೆಯೇ ಬರುತ್ತಿದ್ದಳು. ಆದರೆ, ಒಂದು ತಿರುವಿನಲ್ಲಿ ನೋಡುವಷ್ಟರಲ್ಲಿ ಆಕೆ ಅಲ್ಲಿರಲಿಲ್ಲ. ಕ್ಷಣಾರ್ಧದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾದ್ದಳು. ಇದರಿಂದ ಆತಂಕಗೊಂಡ ಕುಟುಂಬಸ್ಥ ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಇರುವ ಅನುಮಾನ ಬಾಲಕಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಆದ್ರೆ, ಇದೀಗ ತಂದೆ ಹೇಳಿಕೆ ಶ್ರೀನಂದಾ ಸಾವಿನ ಸುತ್ತ ಮತ್ತೊಂದು ಅನುಮಾನ ವ್ಯಕ್ತವಾಗಿದೆ.

ಇದನ್ನೂ ನೋಡಿ: 2000 ಅಡಿ ಆಳದ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ

ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಶಂಕೆ

ಮೂರು ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆದ ಬಳಿಕ, ಅರಿಶಿನಗುಪ್ಪೆ ಭಾಗದಿಂದ ಹೊರಟ ಶೋಧ ತಂಡಕ್ಕೆ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಆಳವಾದ ಕಂದಕದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಪ್ರಪಾತವು ಸುಮಾರು 2000 ಅಡಿ ಆಳವಿದೆ. ಅತ್ಯಂತ ದುರ್ಗಮ ಪ್ರದೇಶವಾಗಿರುವ ಕಾರಣ ಶವವನ್ನು ಹೊರತೆಗೆದು ಮೇಲೆ ಎತ್ತಿಕೊಂಡು ಬರುವ ಕಾರ್ಯವೂ ಸವಾಲಿನದ್ದಾಗಿತ್ತು. ಇನ್ನು ಶ್ರೀನಂದಾ ಮೃತದೇಹ ಪತ್ತೆಯಾದ ಬಳಿಕ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ಇದೀಗ ತಂದೆ ರಮೇಶ್, ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿದ್ದಾರೆ. ಇದರಿಂದ ಶ್ರೀನಂದಾ, ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿ ವ್ಯಕ್ತವಾಗಿದೆ.

ಶ್ರೀನಂದಾ ಕಾಣೆಯಾಗುವ ಮುನ್ನ ಆಗಿದ್ದೇನು?

ಶ್ರೀನಂದಾ ತಂದೆ ರಮೇಶ್ ಅವರು ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಮಾಣಿಕ್ಯಧಾರಾ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಶ್ರೀನಾಂದಗೆ ತಂದೆ ರಮೇಶ್​​ ಬೈದಿದ್ದು, ಅಲ್ಲದೇ ಮೊಬೈಲ್ ಕೊಡುವಂತೆ ವಾರ್ನ್​ ಮಾಡಿದ್ದ. ಇದರಿಂದ ಮನನೊಂದು ಶ್ರೀನಂದಾ, ಮಾಣಿಕ್ಯಧಾರಾದ ಫಾಲ್ಸ್​ಗೆ ತೆರಳದೆ ವಾಪಸ್ ವಾಪಸ್ ಆಗಿದ್ದಳು. ಬಳಿಕ ಶ್ರೀನಂದಾ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬೈದಿದ್ದಕ್ಕೆ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಸಹ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ನೋ ಕಿಡ್ಸ್, ಡಬಲ್ ಇನ್ಕಮ್; ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಬೆಂಗಳೂರು, ಏಪ್ರಿಲ್‌ 10: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡಿದ್ರೂ ಕಡಿಮೆನೇ. ಈ ಬೆಂಗಳೂರಿನಲ್ಲಿ (Bengaluru) ತಿಂಗಳಿಗೆ ಲಕ್ಷ ಲಕ್ಷ ರೂ ದುಡಿಯುತ್ತಿದ್ರೂ ಖರ್ಚು ವೆಚ್ಚಗಳಿಗೆ ಲಗಾಮು ಹಾಕದೇ ಇದ್ರೆ ಉಳಿತಾಯ ಮಾಡೋದು ಅಷ್ಟು ಸುಲಭವಲ್ಲ. ಡ್ಯುಯಲ್ ಇನ್‌ಕಮ್ ಹಾಗೂ ಮಕ್ಕಳಿಲ್ಲದ (DINK) ದಂಪತಿ ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡು, ಮಾಸಿಕ ಖರ್ಚು 81,600 ರೂ ಆಗುತ್ತದಂತೆ ಎಂದು ತಿಳಿಸಿದ್ದಾರೆ. ದಂಪತಿಯ ತಿಂಗಳ ಖರ್ಚು ವೆಚ್ಚದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

@_the_ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹೌದು, ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಹಿರಿಯ ಅಸೋಸಿಯೇಟ್-ಸೇಲ್ಸ್ ಆಗಿ ಕೆಲಸ ಮಾಡುತ್ತಿರುವ ಐಶ್ವರ್ಯ ಘೋಷ್ ತಾನು ಹಾಗೂ ತನ್ನ ಪತಿ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತೇವೆ ಎಂದು ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಬಾಡಿಗೆ ಮತ್ತು ನಿರ್ವಹಣೆ ವೆಚ್ಚ 29,000 ರೂ, ಪೀಠೋಪಕರಣಗಳ ಬಾಡಿಗೆ 2,500 ರೂ, ಮನೆಕೆಲಸಕ್ಕೆ (ಮನೆಕೆಲಸಗಾರ ಸೇರಿದಂತೆ) ಮಾಸಿಕ ಖರ್ಚು 2,800 ರೂ, ವಿದ್ಯುತ್ ಮತ್ತು ನೀರು ತಲಾ 600 ರೂ, ವೈಫೈ 850 ರೂ ಮತ್ತು ಎಲ್‌ಪಿಜಿ ಆರು ತಿಂಗಳಿಗೊಮ್ಮೆ ರೂ 1,500 ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ದಿನಸಿ ಮತ್ತು ಮನೆಯ ಅಡುಗೆಗೆ ಸುಮಾರು 6,000 ರೂ, ಹೊರಗಡೆ ಊಟ ಹಾಗೂ ಫುಡ್ ಆರ್ಡರ್ ಗೆ ಹೆಚ್ಚುವರಿ 4,000 ರೂ ಹಾಗೂ ಪ್ರತಿ ತಿಂಗಳು ₹ 15,000 ರಜೆಗಾಗಿಯೇ ಮೀಸಲಿಡುತ್ತೇವೆ ಎಂದಿದ್ದಾರೆ.

ಬೈಕ್ ಇಂಧನದ ಬೆಲೆ 1,500 ರೂ, ಆಟೋ ಮತ್ತು ಕ್ಯಾಬ್‌ ಸೇವೆಗೆ 2,000 ರೂ ಹಾಗೂ ಮೆಟ್ರೋದಲ್ಲಿ ಪ್ರಯಾಣಿಸಲು 2,500 ರೂ ಎತ್ತಿಡುತ್ತೇವೆ. ಇನ್ನು ಉಳಿದಂತೆ  ಸ್ನೇಹಿತರೊಂದಿಗೆ ಸೇರಿದಾಗ 5,000 ರೂ ಕೈಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದರೊಂದಿಗೆ  ಶಾಪಿಂಗ್ ಗಾಗಿ 3,000 ರೂ ಮನರಂಜನೆಗಾಗಿ 2,000 ರೂ, ಉಡುಗೊರೆ ಸೇರಿದಂತೆ ಇತರ ವೆಚ್ಚಗಳು 4,000 ರೂ  ಖರ್ಚು ತಗಲುತ್ತದೆ. ಹೀಗಾಗಿ ಒಟ್ಟಾರೆ ತಿಂಗಳ ವೆಚ್ಚಗಳು 81,600 ರೂ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಮುಂಜಾನೆ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತ ಬೆಂಗಳೂರಿನ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರು ದುಬಾರಿ ದುನಿಯಾ ಎಂದರೆ ಮತ್ತೊಬ್ಬರು, ನಾವು ಕೂಡ ಡಿಂಕ್ ದಂಪತಿಗಳು. ನಮ್ಮ ಖರ್ಚು ನೀವು ಹೇಳಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಬಾಡಿಗೆಯಿಂದ ಪ್ರಾರಂಭಿಸಿ ಎಲ್ಲವೂ ಎರಡು ಪಟ್ಟು ಹೆಚ್ಚು ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೆಂಗಳೂರು ನಾನು ನಿರೀಕ್ಷಿಸಿದ್ದಕ್ಕಿಂತ ಅಗ್ಗವಾಗಿ ಕಾಣುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link