Category Archives: Blog

Your blog category

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ಬಗ್ಗೆ ಭಾರತ ತೀವ್ರ ಕಳವಳ

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ಬಗ್ಗೆ ಭಾರತ ತೀವ್ರ ಕಳವಳ

ನವದೆಹಲಿ, ಏಪ್ರಿಲ್ 10: ಲೆಬನಾನ್ ಮೇಲಿನ ಇಸ್ರೇಲ್ ದಾಳಿಯಿಂದ (Israel Attack) ಜನರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ದಾಳಿಯಿಂದಾಗಿ ಲೆಬನಾನ್‌ನಲ್ಲಿ ಹೆಚ್ಚುತ್ತಿರುವ ಜನರ ಸಾವಿನ ಸಂಖ್ಯೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನವಿರಾಮದ ನಂತರ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಅತ್ಯಂತ ವಿನಾಶಕಾರಿ ದಾಳಿಗಳನ್ನು ನಡೆಸಿತ್ತು. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 1,150 ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, “ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಸಾವುನೋವುಗಳ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತವು ಯಾವಾಗಲೂ ನಾಗರಿಕರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಒತ್ತಿಹೇಳಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

“ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಸಾವುನೋವುಗಳ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತ ಯಾವಾಗಲೂ ನಾಗರಿಕರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು, ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅತ್ಯಗತ್ಯ. ಲೆಬನಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಭಾರತೀಯ ಸಮುದಾಯದೊಂದಿಗೆ ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ನಿಕಟ ಸಂಪರ್ಕದಲ್ಲಿದೆ” ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ: ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಚರ್ಚೆ ಇಲ್ಲ, ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಕೆ

ಇರಾನ್ ಮತ್ತು ಯುಎಸ್ 2 ವಾರಗಳ ಒಪ್ಪಂದಕ್ಕೆ ಒಪ್ಪಿಕೊಂಡ ಬಳಿಕ ಈ ದಾಳಿಗಳು ನಡೆದಿವೆ. ಯುಎಸ್-ಇರಾನ್ ನಡುವಿನ ಕದನವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಲೆಬನಾನ್ ಮೇಲೆ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಜ್ಬೊಲ್ಲಾ ಕೂಡ ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಯನ್ನು ಮುಂದುವರೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ಯಾಸೆಂಜರ್ ವಿಚಾರಕ್ಕೆ ಗಲಾಟೆ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಭೀಕರ ಹತ್ಯೆ

ಬೆಳಗಾವಿ, ಏಪ್ರಿಲ್​​ 10: ಸರತಿ ಸಾಲಿನಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದಿದೆ. ಆಟೋ ಚಾಲಕ ಅಶೋಕ ವಡ್ಡರ್(27) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಶಿವಾ ವಡ್ಡರ್​, ಸಾಗರ್​ ವಡ್ಡರ್​ ಮತ್ತು ವಿನೋದ್ ಎಂಬವರನ್ನು ಪೊಲೀಸರು​ ಬಂಧಿಸಿದ್ದಾರೆ. ಇನ್ನು 20 ದಿನದಲ್ಲಿ ಮದುವೆಯಾಗಬೇಕಿದ್ದ ಅಶೋಕ ಹಸೆಮಣೆ ಏರುವ ಬದಲು ಭೀಕರವಾಗಿ ಹತ್ಯೆಯಾಗಿದ್ದಾರೆ.

ಮೊನ್ನೆ ದಿನ ಊರಲ್ಲಿ ದೇವರ ಜಾತ್ರೆ ನಡೆದ ಕಾರಣ, ಭಕ್ತರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರತಿನಿತ್ಯ ಸರತಿ ಸಾಲಲ್ಲಿ ನಿಲ್ಲುತ್ತಿದ್ದ ಆಟೋಗಳು ಅಂದು ಈ ನಿಯಮ ಉಲ್ಲಂಘಿಸಿ ಜನ ಬಂದಂತೆ ಅವರನ್ನು ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋದು, ಬರೋದು ಮಾಡಿದ್ದಾರೆ. ಅದರಂತೆ ತನ್ನ ಆಟೋ ಹಿಂದಿದ್ರೂ ಇಬ್ಬರು ಪ್ಯಾಸೆಂಜರ್ ಬಂದ ಕಾರಣ ಅವರನ್ನು ಕರೆದುಕೊಂಡು ಅಶೋಕ ಹೋಗಿದ್ದಾರೆ. ಇದನ್ನ ಗಮನಿಸಿದ್ದ ಮತ್ತೊಬ್ಬ ಆಟೋ ಚಾಲಕ ಶಿವಾ ವಡ್ಡರ್, ಅಶೋಕ ವಾಪಸ್ ಬಂದಿದ್ದೇ ತಡ  ಜಗಳ ತೆಗೆದಿದ್ದಾನೆ. ಸಾಲದ್ದಕ್ಕೆ ಮತ್ತಿಬ್ಬರು ಸ್ನೇಹಿತರು ಸೇರಿಕೊಂಡು ಅಶೋಕ್​ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಸಾಯಿಸಿ ಆತನ ಬಳಿ ಇದ್ದ ಹಣ ಕಿತ್ತುಕೊಂಡು ಆಟೋದ ಹಿಂಬದಿ ಸೀಟ್​​ನಲ್ಲಿ ಆತನನ್ನ ಮಲಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ; ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಇನ್ನು ಅಶೋಕನ ಮೇಲೆ ಹಲ್ಲೆ ಮಾಡೋದನ್ನ ನೋಡಿರುವ ಬೇರೆ ಆಟೋ ಚಾಲಕರು ಅವರ ಸಹೋದರನಿಗೆ ವಿಚಾರವನ್ನ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಅಶೋಕನನ್ನ ಅದೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಲವಾದ ಏಟಿನಿಂದ ಅದಾಗಲೇ ಅಶೋಕ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಕಾಗವಾಡ ಠಾಣೆ ಪೊಲೀಸರಿಗೆ ಕುಟುಂಬಸ್ಥರು ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ತಲೆ ಮರೆಸಿಕೊಂಡಿದ್ದ ಶಿವಾ ವಡ್ಡರ್, ಸಾಗರ್ ವಡ್ಡರ್, ವಿನೋದ್ ವಡ್ಡರ್ ಮೂವರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ಕಾರಿ ವಸತಿ ಕಾಲೇಜ್​ ವಿದ್ಯಾರ್ಥಿಗಳಿಗೆ ಗುಡ್​​​ ನ್ಯೂಸ್​​: ಸಚಿವ ಮಹದೇವಪ್ಪ ಮಹತ್ವದ ಘೋಷಣೆ

ಬೆಂಗಳೂರು, ಏಪ್ರಿಲ್ 10: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (2nd PUC Result) ಏಪ್ರಿಲ್​ 09ರಂದು ಪ್ರಕಟವಾಗಿದ್ದು, ಈ ಬಾರಿ ಶೇಕಡಾ 86ರಷ್ಟು ಮಕ್ಕಳು ಪಾಸ್​ ಆಗುವ ಮೂಲಕ ಫಲಿತಾಂಶ ದಾಖಲೆ ಮಟ್ಟಕ್ಕೆ ಏರಿಕೆ ಆಗಿದೆ. ಇನ್ನು ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆಯಾಗಿದ್ದಾರೆ. ಆ ಮೂಲಕ ವಸತಿ ಶಾಲೆಗಳಲ್ಲೂ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. 72 ವಸತಿ ಕಾಲೇಜುಗಳಲ್ಲಿ ಜಿಇಇ, ಎಸ್​​ಇಇಟಿ ಮತ್ತು ಕೆಸಿಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಜಕಲ್ಯಾಣ ಸಚಿವ ಹೆಚ್​​ಸಿ ಮಹದೇವಪ್ಪ (HC Mahadevappa) ಮಹತ್ವದ ಘೋಷಣೆ ಮಾಡಿದ್ದಾರೆ.

ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆ: ಸಚಿವ H.C.ಮಹದೇವಪ್ಪ

ಬೆಂಗಳೂರಿನಲ್ಲಿ ಸಮಾಜಕಲ್ಯಾಣ ಸಚಿವ H.C.ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆಯಾಗಿದ್ದಾರೆ. ಹಳ್ಳಿ ಮಕ್ಕಳು ಹೆಚ್ಚು ಪಾಸಾಗಿದ್ದಾರೆ, ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಪಾಸಾಗಿದ್ದಾರೆ. ಇದು ಬಹಳ ಸಂತೋಷ. ವಸತಿ ಶಾಲೆಗಳಲ್ಲಿ ಈ ಬಾರಿ ಹೆಚ್ಚಿನ ರಿಸಲ್ಟ್ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಹಾ ಎಡವಟ್ಟು! 600ಕ್ಕೆ 683 ಅಂಕ ನೀಡಿದ ಬೋರ್ಡ್​!

ರಾಜ್ಯದಲ್ಲಿ 539 ಎಸ್​ಸಿ, 156 ಎಸ್​ಟಿ ಮತ್ತು 179 ಹಿಂದುಳಿದ ವರ್ಗಗಳ ವಸತಿ ಶಾಲೆಗಳಿವೆ. ವಿಜ್ಞಾನ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತ್ ಭೀಮಪ್ಪ 598 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ

ಇನ್ನು ವಸತಿ ಶಾಲೆಗಳಲ್ಲಿ ಓದಿದ 2,321 ಮಕ್ಕಳು ಡಿಸ್ಟಿಂಕ್ಷನ್​, 2487 ವಿದ್ಯಾರ್ಥಿಗಳು ಫಸ್ಟ್​​ ಕ್ಲಾಸ್​​ನಲ್ಲಿ ಪಾಸ್​ ಆಗಿದ್ದಾರೆ. 72 ವಸತಿ ಕಾಲೇಜುಗಳಲ್ಲಿ JEE, NEET, KCET ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಜಕಲ್ಯಾಣ ಸಚಿವ ಹೆಚ್​​ಸಿ ಮಹದೇವಪ್ಪ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಸಿಗೆಯ ಧಗೆಯ ನಡುವೆ ಅಡುಗೆಮನೆಯ ನಿರ್ವಹಣೆ ಮತ್ತು ಆಹಾರದ ಸುರಕ್ಷತೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಬೇಸಿಗೆ ಎಂದರೆ ಬರೀ ಬೆವರುವ ತಾಪಮಾನ ಮಾತ್ರವಲ್ಲ, ಅದು ಅಡುಗೆಮನೆಯ ತಾಳ್ಮೆಯ ಪರೀಕ್ಷೆಯೂ ಹೌದು. ಹೊರಗಿನ ಬಿಸಿಲಿಗೆ ಫ್ರಿಜ್ ಬಾಗಿಲು ತೆರೆದಾಗ ಸಿಗುವ ತಂಪು ಹಿತವೆನಿಸಿದರೂ, ಅಡುಗೆಮನೆಯೊಳಗಿನ ಪದಾರ್ಥಗಳು ಬಾಡದಂತೆ ನೋಡಿಕೊಳ್ಳುವುದು ಒಂದು ದೊಡ್ಡ ಕಲೆ. ಹಿರಿಯರು ಹೇಳುತ್ತಿದ್ದ ಒಂದು ಮಾತು ಇಂದಿಗೂ ಸತ್ಯ— “ಆಹಾರವನ್ನು ಅಡುಗೆ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಕಾಪಾಡುವುದು ಅಷ್ಟೇ ಮುಖ್ಯ”. ಬೇಸಿಗೆಯ ಈ ದಿನಗಳಲ್ಲಿ ನಿಮ್ಮ ಅಡುಗೆಮನೆಯನ್ನು ತಾಜಾವಾಗಿಡಲು ಇಲ್ಲಿವೆ ಕೆಲವು ಸರಳ ಮತ್ತು ಪ್ರಭಾವಶಾಲಿ ಸೂತ್ರಗಳು.

ಯಾವುದನ್ನು ಎಲ್ಲಿಡಬೇಕು? – ಸರಿಯಾದ ಜಾಗದ ಆಯ್ಕೆ:

ಪ್ರತಿ ಪದಾರ್ಥಕ್ಕೂ ತನ್ನದೇ ಆದ ಸ್ವಭಾವವಿರುತ್ತದೆ. ಹಣ್ಣು, ಸೊಪ್ಪು ಮತ್ತು ಹಾಲಿನ ಪದಾರ್ಥಗಳಿಗೆ ತಂಪು ಆಶ್ರಯ ಬೇಕು, ಹಾಗಾಗಿ ಅವು ಫ್ರಿಜ್‌ಗೆ ಸೇರಲಿ. ಆದರೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಬಾಳೆಹಣ್ಣುಗಳಿಗೆ ಫ್ರಿಜ್‌ನ ತಂಪು ಹಿಡಿಸುವುದಿಲ್ಲ. ಅವುಗಳನ್ನು ಗಾಳಿಯಾಡುವ, ಒಣ ಜಾಗದಲ್ಲಿಟ್ಟರೆ ಮಾತ್ರ ದೀರ್ಘಕಾಲ ಬಾಳಿಕೆ ಬರುತ್ತವೆ.

ತೊಳೆಯುವುದರಲ್ಲೂ ಇರಲಿ ವಿವೇಚನೆ:

ಸಾಮಾನ್ಯವಾಗಿ ತರಕಾರಿ ತಂದೊಡನೆ ತೊಳೆದಿಡುತ್ತೇವೆ. ಆದರೆ ಬೇಸಿಗೆಯಲ್ಲಿ ತರಕಾರಿಗಳಲ್ಲಿ ತೇವಾಂಶ ಉಳಿದರೆ ಅವು ಬೇಗ ಕೊಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ, ಹಣ್ಣು-ತರಕಾರಿಗಳನ್ನು ಬಳಸುವ ಮೊದಲು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಒಂದು ವೇಳೆ ತೊಳೆದರೂ ಸಹ, ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ ನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ.

ಮುಚ್ಚಿದ ಡಬ್ಬಿ ಬಳಸಿ:

ಅಡುಗೆಮನೆಯಲ್ಲಿ ಗಾಳಿ ಮತ್ತು ಅತಿಯಾದ ತೇವಾಂಶ ಆಹಾರದ ಶತ್ರುಗಳು. ಉಳಿದ ಅನ್ನ, ಪಲ್ಯ ಅಥವಾ ಕತ್ತರಿಸಿದ ಹಣ್ಣುಗಳನ್ನು ತೆರೆದಿಡುವುದರಿಂದ ಅವು ಬೇಗನೆ ಬ್ಯಾಕ್ಟೀರಿಯಾಗಳ ವಾಸಸ್ಥಾನವಾಗುತ್ತವೆ. ಒಂದು ಗಾಳಿಯಾಡದ (Air-tight) ಡಬ್ಬಿ ಆಹಾರದ ರುಚಿ ಮತ್ತು ತಾಜಾತನವನ್ನು ಕಾಪಾಡುವ ಸಣ್ಣ ಕೋಟೆಯಂತೆ ಕೆಲಸ ಮಾಡುತ್ತದೆ.

ಫ್ರಿಜ್ ಕೂಡ ಉಸಿರಾಡಲಿ:

ಹಾಳಾಗಬಾರದು ಎಂಬ ಆತುರದಲ್ಲಿ ಫ್ರಿಜ್ ತುಂಬಾ ಪದಾರ್ಥಗಳನ್ನು ತುರುಕಬೇಡಿ. ಫ್ರಿಜ್ ಸರಿಯಾಗಿ ತಂಪಾಗಲು ಅದರೊಳಗೆ ಗಾಳಿಯ ಸಂಚಾರ (Air circulation) ಅಗತ್ಯ. ಫ್ರಿಜ್‌ನಲ್ಲಿ ಸ್ವಲ್ಪ ಜಾಗ ಬಿಡುವುದು ಆಹಾರದ ದೀರ್ಘಕಾಲದ ರಕ್ಷಣೆಗೆ ಬಹಳ ಮುಖ್ಯ.

ಬೇಯಿಸಿದ ಆಹಾರದ ಬಗ್ಗೆ ಎಚ್ಚರವಿರಲಿ:

ಬೇಸಿಗೆಯಲ್ಲಿ ಬೆಳಿಗ್ಗೆ ಮಾಡಿದ ಅಡಿಗೆ ಮಧ್ಯಾಹ್ನದ ಹೊತ್ತಿಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಆಹಾರ ತಯಾರಾದ ನಂತರ ಅದು ಸಾಮಾನ್ಯ ತಾಪಮಾನಕ್ಕೆ ಬಂದ ತಕ್ಷಣ ಫ್ರಿಜ್‌ನಲ್ಲಿಡುವುದು ಉತ್ತಮ. ಹೆಚ್ಚು ಹೊತ್ತು ಹೊರಗೆ ಬಿಟ್ಟರೆ ಆಹಾರದ ಗುಣಮಟ್ಟ ಹದಗೆಡುತ್ತದೆ.

ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?

ಒಣ ಪದಾರ್ಥಗಳ ರಕ್ಷಣೆ:

ಅಕ್ಕಿ, ಬೇಳೆ ಮತ್ತು ಮಸಾಲೆ ಪದಾರ್ಥಗಳಿಗೆ ಬೇಸಿಗೆಯಲ್ಲಿ ಕೀಟಗಳ ಕಾಟ ಹೆಚ್ಚು. ಅವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿಡಿ. ಅಜ್ಜಿಯ ಹಳೆಯ ಪದ್ಧತಿಯಂತೆ ಬೇಳೆಕಾಳುಗಳ ಡಬ್ಬಿಗೆ ಸ್ವಲ್ಪ ಒಣಗಿದ ಬೇವು ಎಲೆ ಹಾಕಿದರೆ ಕೀಟಗಳ ಬಾಧೆಯನ್ನು ಸುಲಭವಾಗಿ ತಡೆಯಬಹುದು.

ದಿನಕ್ಕೊಮ್ಮೆ ಇಣುಕಿ ನೋಡಿ:

ಅಡುಗೆಮನೆಯ ಕಪಾಟು ಮತ್ತು ಫ್ರಿಜ್ ಅನ್ನು ದಿನಕ್ಕೊಮ್ಮೆ ಗಮನಿಸುವುದು ಒಳ್ಳೆಯ ಅಭ್ಯಾಸ. ಹಳೆಯ ಪದಾರ್ಥ ಯಾವುದು, ಹೊಸದು ಯಾವುದು ಎಂಬ ಅರಿವಿದ್ದರೆ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಯಾವುದಾದರೂ ಹಣ್ಣು ಅಥವಾ ತರಕಾರಿ ಹಾಳಾಗಿದ್ದರೆ ಅದನ್ನು ಕೂಡಲೇ ತೆಗೆಯಿರಿ, ಇಲ್ಲದಿದ್ದರೆ ಅದು ಪಕ್ಕದಲ್ಲಿರುವ ಪದಾರ್ಥಗಳನ್ನೂ ಹಾಳು ಮಾಡುತ್ತದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಣ್ಣೀರಿಟ್ಟ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ: ಕಾರಣ ಇಲ್ಲಿದೆ

ಹಾವೇರಿ, ಏಪ್ರಿಲ್​​ 10: ಜಿಲ್ಲಾ ಪಂಚಾಯತ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಸ್ವತಂತ್ರಪೂರ್ವದಿಂದಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೆಲವು ಗ್ರಾಮ ಇವೆ. ಅವು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಬರುತ್ತವೆ ಎಂದು ಜನರ ಮೇಲೆ FIR ದಾಖಲು ಮಾಡಿ ಜಾಗೆ ಖಾಲಿ ಮಾಡಿಸಿದ್ದಾರೆ. ಹಾವೇರಿಯ ಗುತ್ತಲ ತಾಂಡಾ, ಕರೂರು ಗ್ರಾಮ ನಿವಾಸಿಗಳನ್ನ ವಕ್ಕಲು ಎಬ್ಬಿಸಿದ್ದಾರೆ. ಸರ್ಕಾರವೇ ಮೂರು ದಶಕಗಳಿಂದ ಮನೆ ಮತ್ತು ಉಳುಮೆಗೆ ಅವಕಾಶ ಮಾಡಿದೆ. ಈಗ ಅರಣ್ಯ ಇಲಾಖೆ ಸಿಬ್ಬಂದಿ ಜಾಗ ಮೀಸಲು ಅರಣ್ಯಕ್ಕೆ ಬರುತ್ತೆ ಎಂದು ನೋಟೀಸ್ ನೀಡಿದ್ದಾರೆ. ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಮಂತ್ರಿ ಮತ್ತು ಸಂಸದರನ್ನ ನಾನು ಭೇಟಿ ಮಾಡಿದ್ದಾನೆ. ಎಲ್ಲಿಯೋ ಎಸಿ ಕಚೇರಿಯಲ್ಲಿ ಕೂತು ಆದೇಶ ಮಾಡುತ್ತಾರೆ. ಹೀಗಾದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಲೇ ಅವರು ಭಾವುಕರಾಗಿದ್ದಾರೆ. ಅಲ್ಲದೆ ಈ ಸಂಬಂಧ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೇಗ ಅತಿವೇಗ.. ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ

Source link

ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ನವದೆಹಲಿ, ಏಪ್ರಿಲ್ 10: ಹೆದ್ದಾರಿಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ನೂರಕ್ಕೆ ನೂರು ಫಾಸ್​ಟ್ಯಾಗ್ (FASTag) ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ (Digital toll collection system) ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್​ಪ್ರೆಸ್​ವೇಗಳಲ್ಲಿ ಇರುವ ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್​ಟ್ಯಾಗ್ ಇಲ್ಲದವರು ಟೂಲ್ ಬೂತ್​ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ.

ಫಾಸ್​ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್​ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್​ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ಫಾಸ್​ಟ್ಯಾಗ್ ಕೆಲಸ ಮಾಡದಿದ್ದಾಗ?

ಎಲ್ಲಾ ವಾಹನಗಳಿಗೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್​ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್​ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್​ಗೆ 125 ರೂ ಪಾವತಿಸಬೇಕಾಗುತ್ತದೆ.

ಟೋಲ್ ಬೂತ್​ಗಳಲ್ಲಿ ವಿನಾಯಿತಿ; ನಿಯಮಗಳೀಗ ಕಠಿಣ

ಟೋಲ್ ಬೂತ್​ಗಳಲ್ಲಿ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಹೇಳಿಕೊಂಡು ಬಹಳ ಜನರು ಟೋಲ್ ಕಟ್ಟುವುದಿಲ್ಲ. ಸಾಕಷ್ಟು ಕಡೆ ಮಾರಾಮಾರಿಯೇ ಆಗಿ ಹೋಗಿ ಸಾವುನೋವುಗಳು ಸಂಭವಿಸಿರುವುದಿದೆ. ಇದನ್ನು ತಪ್ಪಿಸಲು ಈಗ ಸರ್ಕಾರ ಬಿಗಿ ನಿಯಮ ತಂದಿದೆ. ಯಾವುದೇ ವ್ಯಕ್ತಿಗಳಿಗೆ ಟೋಲ್ ಎಕ್ಸೆಂಪ್ಷನ್ ಸಿಗುವುದಿಲ್ಲ. ನಿರ್ದಿಷ್ಟಪಡಿಸಿದ ವಾಹನಗಳಿಗೆ ಮಾತ್ರವೇ ಈ ವಿನಾಯಿತಿ ಕೊಡಲಾಗುತ್ತದೆ.

ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಫಾಸ್​ಟ್ಯಾಗ್ ವಾರ್ಷಿಕ ಪಾಸ್

ಹೆದ್ದಾರಿಗಳನ್ನು ಸಾಕಷ್ಟು ಬಳಸುವವರಿಗೆ, ಅಂದರೆ ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನುಕೂಲವಾಗಲಿದೆ. ಖಾಸಗಿ ಕಾರುಗಳಿಗೆ ಈ ವಾರ್ಷಿಕ ಪಾಸ್ ನೀಡಲಾಗುತ್ತದೆ. ವರ್ಷದಲ್ಲಿ 200 ಟೋಲ್ ಕ್ರಾಸಿಂಗ್ ಮಾಡಬಹುದು. ಈ ಪಾಸ್ ಬೆಲೆ 3,000 ರೂ ಇದ್ದದ್ದು 3,075ಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರ ವಿಧಾನಸಭೆಗೆ ಬಾಂಬ್ ಬೆದರಿಕೆ; ತೀವ್ರ ಶೋಧ ಕಾರ್ಯಾಚರಣೆ ಆರಂಭ

ಪಾಟ್ನಾ, ಏಪ್ರಿಲ್ 10: ಬಿಹಾರ ವಿಧಾನಸಭೆಗೆ (Bihar Assembly) ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2 ದಿನಗಳ ಹಿಂದಷ್ಟೇ ದೆಹಲಿ ವಿಧಾನಸಭೆ ಆವರಣದೊಳಗೆ ಕಾರಿನಲ್ಲಿ ನುಗ್ಗಿದ್ದ ವ್ಯಕ್ತಿಯೊಬ್ಬ ಸ್ಪೀಕರ್ ಕಚೇರಿ ಬಳಿ ಹೂವಿನ ಬೊಕ್ಕೆ ಇಟ್ಟು ಹೋಗಿದ್ದ. ಆತನನ್ನು ಬಂಧಿಸಲಾಗಿತ್ತು. ದೆಹಲಿ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಬಿಹಾರ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿರುವುದರಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆದಿದೆ.

“ಬಿಹಾರ ವಿಧಾನಸಭೆ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದಿದೆ ಎಂದು ನಮಗೆ ಮಾಹಿತಿ ಬಂದಿದೆ. ಪೊಲೀಸರು ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಬಾಂಬ್ ಮತ್ತು ಶ್ವಾನ ದಳದ ತಂಡಗಳನ್ನು ನಿಯೋಜಿಸಲಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮಾರ್ಚ್ 13ರಂದು ಕೂಡ ವಿಧಾನಸಭೆಗೆ ಇದೇ ರೀತಿಯ ಬೆದರಿಕೆ ಬಂದಿತ್ತು. ಆದರೆ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು. ಗುರುವಾರ ದೆಹಲಿ ವಿಧಾನಸಭೆಗೆ ಕೂಡ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆವಿಎನ್ ಬೆಂಬಲಕ್ಕೆ ನಿಂತ ಚಿರಂಜೀವಿ; ದೊಡ್ಡ ಕರೆಕೊಟ್ಟ ನಟ

ದಳಪತಿ ವಿಜಯ್ ಅವರ ‘ಜನ ನಾಯಗನ್’ (Jana Nayagan) ಸಿನಿಮಾಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಮೊದಲು ಸಿನಿಮಾ ರಿಲೀಸ್ ವಿಳಂಬ ಆಯಿತು. ಆ ಬಳಿಕ ತಂಡದವರು ಕೋರ್ಟ್​​ಗೆ ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಪುನರ್ ವಿಮರ್ಶೆ ಸಮಿತಿಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದ್ದು, ಅಲ್ಲಿ ಇನ್ನಷ್ಟೇ ವೀಕ್ಷಿಸಬೇಕಿದೆ. ಹೀಗಿರುವಾಗಲೇ ಚಿತ್ರದ ಪ್ರಮುಖ ದೃಶ್ಯಗಳು ಲೀಕ್ ಆಗಿದೆ. ಕೆಲವು ವರದಿ ಪ್ರಕಾರ ಇಡೀ ಚಿತ್ರವೇ ಲೀಕ್ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಚಿರಂಜೀವಿ ಅವರು ಆತಂಕ ಹೊರಹಾಕಿದ್ದಾರೆ. ಅಲ್ಲದೆ, ಕೆವಿಎನ್​​ಗೆ ಬೆಂಬಲ ಕೊಟ್ಟಿದ್ದಾರೆ.

ಚಿರಂಜೀವಿ ಅವರು ಚಿತ್ರರಂಗದ ಆಗು ಹೋಗುಗಳ ಬಗ್ಗೆ ಮಾತನಾಡುತ್ತಾರೆ.ಅವರು ಸದಾ ಚಿತ್ರರಂಗದ ಪರವಾಗಿ ನಿಲ್ಲುತ್ತಾ ಬಂದಿದ್ದಾರೆ. ಈಗ ಅವರು ಜನ ನಾಯಗನ್ ಸಿನಿಮಾ ಪರವಾಗಿ ಮಾತನಾಡಿದ್ದಾರೆ. ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ಜನ ನಾಯಗನ್’ ದೃಶ್ಯ ಲೀಕ್: ದಳಪತಿ ವಿಜಯ್ ಸಿನಿಮಾಗೆ ಸಂಕಷ್ಟ 

‘ಜನನಾಯಗನ್ ಸೋರಿಕೆ ಆಗಿದ್ದು ತುಂಬಾನೇ ಕಳವಳಕಾರಿ ವಿಷಯ. ಸಿನಿಮಾ ಎಂಬುದು ನಂಬಿಕೆ, ಪ್ರಯತ್ನ ಮತ್ತು ಅನೇಕರ ಕನಸಿನಿಂದ ಮಾಡಲ್ಪಟ್ಟಿದೆ. ಇಂತಹ ಘಟನೆಗಳು ಉದ್ಯಮದಲ್ಲಿರುವ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಸಿನಿಮಾಗೆ ಆದ ಹಾನಿಯನ್ನು ತಡೆಗಟ್ಟುವಲ್ಲಿ ಮತ್ತು ಅಪರಾಧಿಗಳನ್ನು ಶಿಕ್ಷಿಸುವಲ್ಲಿ ನಾವು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗಿದ್ದೇವೆ. ಸಿನಿಮಾವನ್ನು ಗೌರವಿಸಲು ಮತ್ತು ರಕ್ಷಿಸಲು ನಾವೆಲ್ಲರೂ ನಮ್ಮ ಬೆಂಬಲವನ್ನು ನೀಡೋಣ. ಪೈರಸಿಯನ್ನು ನಾಶ ಮಾಡಿ, ಸಿನಿಮಾ ಉಳಿಸಿ’ ಎಂದು ಕರೆ ಕೊಟ್ಟಿದ್ದಾರೆ.

ಸಿನಿಮಾ ಲೀಕ್ ಪ್ರಕರಣ ಇಡೀ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರವಾಗಿ ಚಿತ್ರತಂಡ ಕಾನೂನು ಹೋರಾಟಕ್ಕೆ ಮುಂದಾಗುತ್ತಿದೆ. ಸಿನಿಮಾದ ದೃಶ್ಯಗಳನ್ನ ಶೇರ್ ಮತ್ತು ಡೌನ್ಲೋಡ್ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊನಾಲಿಸಾ ವಯಸ್ಸು ಕೇವಲ 16: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ಕುಂಭಮೇಳದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ (Monalisa Bhosale) ಅವರ ವಿವಾಹ ಪ್ರಕರಣ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ತನಿಖೆಯಲ್ಲಿ, ಮದುವೆಯ ವೇಳೆ ಮೊನಾಲಿಸಾ ಅಪ್ರಾಪ್ತ ಬಾಲಕಿ ಆಗಿದ್ದಳು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಇದರಿಂದಾಗಿ ಗಂಡ ಫರ್ಮಾನ್ ಖಾನ್ (Farman Khan)​ ಕಾನೂನಿನ ಸಂಕಷ್ಟ ಎದುರಿಸಬೇಕಾಗಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದಕ್ಕಾಗಿ ಫರ್ಮಾನ್ ಖಾನ್ ಮೇಲೆ ಪೋಕ್ಸೋ (POCSO) ಕೇಸ್ ದಾಖಲಾಗಿದೆ.

ಮಾರ್ಚ್ 11ರಂದು ಕೇರಳದ ತಿರುವನಂತಪುರದ ಅರುಮನೂರು ನೈನಾರ್ ದೇವಾಲಯದಲ್ಲಿ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಜೊತೆ ಮೊನಾಲಿಸಾ ವಿವಾಹ ನಡೆದಿತ್ತು. ಈ ಮದುವೆಯ ನೋಂದಣಿಗಾಗಿ ಸಲ್ಲಿಸಲಾಗಿದ್ದ ಆಧಾರ್ ಕಾರ್ಡ್‌ನಲ್ಲಿ ಆಕೆಗೆ 18 ವರ್ಷ ಎಂದು ನಮೂದಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಮೊನಾಲಿಸಾ 2009ರ ಡಿಸೆಂಬರ್ 30ರಂದು ಜನಿಸಿರುವುದು ದೃಢಪಟ್ಟಿದೆ. ಇದರರ್ಥ ಮದುವೆಯ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು.

ಆಕೆ ಅಪ್ರಾಪ್ತ ವಯಸ್ಕಳು ಎಂಬುದು ಸಾಬೀತಾದ ಬೆನ್ನಲ್ಲೇ, ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಗಾಗಿ ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಕೇರಳದ ಸ್ಥಳೀಯ ಅಧಿಕಾರಿಗಳಿಗೂ ಆಯೋಗವು ಸಮನ್ಸ್ ನೀಡಿದೆ.

ಮೊನಾಲಿಸಾಳನ್ನು ಬಲವಂತವಾಗಿ ಮತಾಂತರಿಸಿ ಮದುವೆ ಮಾಡಲಾಗಿದೆ ಎಂದು ಆಕೆಯ ತಂದೆ ಜೈ ಸಿಂಗ್ ಭೋಸ್ಲೆ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಥಮ್ ದುಬೆ ಅವರು ಆಯೋಗಕ್ಕೆ ದೂರು ನೀಡಿದ್ದರು. ಆ ಬಳಿಕ ತನಿಖೆ ಆರಂಭಿಸಲಾಗಿತ್ತು. ಈಗ ತನಿಖೆಯ ವಿವರಗಳು ಲಭ್ಯವಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನು ಲವ್ ಜಿಹಾದ್ ಎಂದು ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಧ್ಯಪ್ರದೇಶ ಮತ್ತು ಕೇರಳದ ಪೊಲೀಸ್ ಮಹಾನಿರ್ದೇಶಕರಿಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. ಮದುವೆ ನಡೆದ ರೀತಿಗೆ ಹಾಗೂ ನಕಲಿ ದಾಖಲೆಗಳ ಬಳಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link