ಕಾರವಾರ, (ಏಪ್ರಿಲ್ 03): ಎರಡು ಬಸ್ಗಳ ನಡುವೆ ಭೀಕರ ಅಪಘಾತ (Two Bus Accident) ಸಂಭವಿಸಿದ್ದು, ಬಸ್ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆ ಶಿರಸಿ (sirsi) ತಾಲೂಕಿನ ಕೊಳಗಿಬೀಸ್ ಬಳಿ ನಡೆದಿದೆ. ಭಟ್ಕಳದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಸರ್ಕಾರಿ ಬಸ್, ಖಾಸಗಿ ಬಸ್ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಇನ್ನು ಎರಡು ಬಸ್ನಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆ, ಏಪ್ರಿಲ್ 03: ರಾಜ್ಯದಲ್ಲಿ ಸಿಲಿಂಡರ್, ಆಟೋ ಗ್ಯಾಸ್ಗೆ ತೀವ್ರ ತೊಂದರೆ ವಿಚಾರವಾಗಿ ಸಚಿವ K.H. ಮುನಿಯಪ್ಪ ವಿರುದ್ಧ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಅದು ಕೇಂದ್ರದ ಸಮಸ್ಯೆ, ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಿಲ್ಲ. ಹೀಗಿರುವಾಗ ಕೇಂದ್ರದವರು ಪೂರೈಸುತ್ತಿಲ್ಲ ಎಂದು ಹೇಳುವುದನ್ನು ಬಿಟ್ಟು, ಸಚಿವರು ಕೇಂದ್ರ ಸರ್ಕಾರದ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಆಟೋ ಚಾಲಕರು ಬಂಕ್ಗಳಲ್ಲಿಯೇ ಮಲಗುತ್ತಿದ್ದು, ಅವರೆಲ್ಲ ರಾಜ್ಯ ಸರ್ಕಾರವೇ ಸಿಲಿಂಡರ್ ಪೂರೈಸ್ತಿದೆ ಎಂದು ತಿಳಿದಿದ್ದಾರೆ. ಹೀಗಾಗಿ ಹಿರಿಯ ಸಚಿವ, ಏಳು ಸಲ ಸಂಸದರಾಗಿದ್ದ ಮುನಿಯಪ್ಪ ಅವರು ಬಾಯಿ ಮುಚ್ಚಿಕೊಂಡು ಇದ್ದರೆ ಚಂದ. ನಾನು ದಯಮಾಡಿ ಕೈಮುಗಿದು ಬೇಡಿಕೊಳ್ಳುವೆ, ಪದೇಪದೆ ಸಭೆ ಮಾಡುವುದು ನಿಲ್ಲಿಸಿ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. (Santosh Kumar RS) ನಡುವೆ ಈಗ ಕಾನೂನು ಸಮರ ಶುರುವಾಗಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾ ತಂಡದ ಮೇಲೆ ಸಂತೋಷ್ ಕುಮಾರ್ ಅವರು ಆರೋಪ ಹೊರಿಸಿದ್ದಾರೆ. ತಮ್ಮ ಚಿತ್ರಕಥೆಯನ್ನು ನಕಲು (Plagiarism) ಮಾಡಿ ‘ಧುರಂಧರ್ 2’ ಮಾಡಲಾಗಿದೆ ಎಂದು ಸಂತೋಷ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಸಂತೋಷ್ ಕುಮಾರ್ ವಿರುದ್ಧ ಆದಿತ್ಯ ಧರ್ (Aditya Dhar) ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸಂತೋಷ್ ಕುಮಾರ್ ಪ್ರಕಾರ, ಅವರು 2023ರಲ್ಲಿ ನೋಂದಾಯಿಸಿದ ‘ಡಿ ಸಾಹೇಬ್’ ಎಂಬ ಚಿತ್ರಕಥೆಯನ್ನು ಆದಿತ್ಯ ಧರ್ ತಂಡ ಕೃತಿಚೌರ್ಯ ಮಾಡಿದೆ. ‘ನನ್ನ ಪ್ರಾಜೆಕ್ಟ್ ಮತ್ತು ಸ್ಕ್ರಿಪ್ಟ್ ಅನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಬಳಿ ಚಿತ್ರಕಥೆ ಬರಹಗಾರರ ಸಂಘದ ಎಲ್ಲ ದಾಖಲೆಗಳಿವೆ’ ಎಂದು ಸಂತೋಷ್ ಹೇಳಿದ್ದಾರೆ. ಅವರ ಹೇಳಿಕೆ ದೊಡ್ಡ ಸುದ್ದಿ ಆಗಿದೆ.
‘ಧುರಂಧರ್ ಚಿತ್ರದ ಮುಖ್ಯ ಪಾತ್ರ ಮತ್ತು ಕಥೆಯ ಎಳೆ ನನ್ನ ಸ್ಕ್ರಿಪ್ಟ್‌ನಿಂದ ಬಂದಿದೆ. ಒಬ್ಬ ಮಾಜಿ ಸೇನಾಧಿಕಾರಿಯ ಮಗ ತನ್ನ ಕುಟುಂಬದ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ರಾ ಏಜೆಂಟ್ ಆಗಿ ಹೋಗುವ ಕಥೆ ತನ್ನದಾಗಿತ್ತು. ಆದಿತ್ಯ ಧರ್ ನನ್ನ ಕಥೆಯ ಮುಖ್ಯ ಸಾಲುಗಳನ್ನು ತೆಗೆದುಕೊಂಡು ಅದಕ್ಕೆ ರಾಜಕೀಯ ಪ್ರೊಪಗಾಂಡದ ಬಣ್ಣ ಹಚ್ಚಿದ್ದಾರೆ’ ಎಂಬುದು ಸಂತೋಷ್ ಆರೋಪ.
ಈ ಆರೋಪಗಳನ್ನು ಆದಿತ್ಯ ಧರ್ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆದಿತ್ಯ ಅವರ ಕಾನೂನು ತಂಡವು ಈಗಾಗಲೇ ಸಂತೋಷ್ ಕುಮಾರ್ ಅವರಿಗೆ ನೋಟಿಸ್ ನೀಡಿದ್ದು, ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ‘ಸಂತೋಷ್ ಅವರು ಪ್ರಚಾರಕ್ಕಾಗಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆದಿತ್ಯ ಧರ್ ಆಪ್ತ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಆದಿತ್ಯ ಧರ್ ತಂಡದ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, ‘ಅವರು ನನಗೆ ಕಳುಹಿಸಿರುವುದು ನೋಟಿಸ್ ಅಲ್ಲ. ಕೇವಲ ಒಂದು ಮೇಲ್ ಅಷ್ಟೇ. ನನ್ನನ್ನು ಬೆದರಿಸಲು ಮತ್ತು ನನ್ನ ಬಾಯಿ ಮುಚ್ಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನಾನು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಿದ್ದೇನೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ವಿರುದ್ಧ ಕೇಸ್ ದಾಖಲಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.
ಆನೆಗಳ (elephants) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಚಂದ. ಆನೆಗಳು ತನ್ನ ಸಹಜ ಗುಣದಿಂದಲೇ ಮನುಷ್ಯರಿಗೆ ಹತ್ತಿರವಾಗುತ್ತದೆ. ಅದರಲ್ಲೂ ಈ ತಾಯಾನೆಗಳು ಸಹಾಯ ಮಾಡಿದ ಮನುಷ್ಯರಿಗೆ ಕೃತಜ್ಞತೆ ಸಲ್ಲಿಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ಬಾಯಾರಿದ್ದ ತನ್ನ ಕಂದಮ್ಮನಿಗೆ ನೀರು ಕೊಟ್ಟದ್ದಕ್ಕೆ ಯುವಕನಿಗೆ ತಾಯಾನೆಯೊಂದು ಧನ್ಯವಾದ ತಿಳಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಯೋಗ್ (Yog) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಾಯಾನೆ ಗುಣವನ್ನು ಕಾಣಬಹುದು. ತಾಯಾನೆ ಹಾಗೂ ಮರಿಯಾನೆ ಅದರ ಮಾವುತನ ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಇದೇ ವೇಳೆ ಮರಿಯಾನೆಗೆ ವಿಪರೀತ ಬಾಯಾರಿಕೆ ಆದಂತೆ ಕಾಣುತ್ತಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಗಿಡಗಳಿಗೆ ಪೈಪ್ ನಲ್ಲಿ ನೀರು ಹಾಕುತ್ತಿದ್ದ ಯುವಕನ ಹತ್ತಿರ ಓಡೋಡಿ ಹೋಗಿದೆ. ಆತ ಕೂಡ ನೀರು ಕುಡಿಯಲು ಅನುವು ಮಾಡಿಕೊಟ್ಟಿದ್ದಾನೆ. ನೀರಿನ ಪೈಪ್ ಬಾಯಿಯೊಳಗಿಟ್ಟು ಮರಿಯಾನೆ ಬಾಯಾರಿಕೆ ನೀಗುವಷ್ಟು ನೀರು ಕುಡಿದಿದೆ. ಅದಾದ ಬಳಿಕ ತಾಯಾನೆ ಯುವಕನಿಗೆ ಸೊಂಡಿಲೆತ್ತಿ ಧನ್ಯವಾದ ಸಲ್ಲಿಸಿರುವುದನ್ನು ಕಾಣಬಹುದು.
ಏಪ್ರಿಲ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮನುಷ್ಯರಿಗೆ ಹೋಲಿಸಿದ್ರೆ ಪ್ರಾಣಿಗಳೇ ಗುಣದಲಿ ಮೇಲು ಎಂದಿದ್ದಾರೆ. ಇನ್ನೊಬ್ಬರು, ತುಂಬಾ ಬಾಯಾರಿಕೆಯಾದಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಪ್ರೀತಿ ಮುಂದೆ ಏನು ಇಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 28 ರಂದು ಆರಂಭವಾದ 2026 ರ ಐಪಿಎಲ್‌ನಲ್ಲಿ (IPL 2026) ಇದುವರೆಗೆ 6 ಪಂದ್ಯಗಳು ನಡೆದಿವೆ. 7ನೇ ಪಂದ್ಯ ಇಂದು, ಸಿಎಸ್ಕೆ ಹಾಗೂ ಪಂಜಾಬ್ (CSK vs PBKS) ನಡುವೆ ನಡೆಯಲಿದೆ. ಅಂದಹಾಗೆ ಈ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ 12 ಡಬಲ್ ಹೆಡರ್ (Double Header) ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ಅದರಲ್ಲಿ ಮೊದಲ ಡಬಲ್ ಹೆಡರ್ ಪಂದ್ಯ ಏಪ್ರಿಲ್ 4 ರಂದು ನಡೆಯಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಹಾಗೆಯೇ ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಎದುರಾಗಲಿದೆ.
ಮುಂಬೈ-ಡೆಲ್ಲಿ ಮುಖಾಮುಖಿ ದಾಖಲೆ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ. ಹೀಗಾಗಿ ಗೆದ್ದ ತಂಡಗಳ ನಡುವಿನ ಕಾಳಗ ತೀವ್ರ ಕುತೂಹಲ ಕೆರಳಿಸಿದೆ.
ಐಪಿಎಲ್‌ನಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ನಡುವೆ ಇದುವರೆಗೆ 8 ಪಂದ್ಯಗಳು ನಡೆದಿವೆ. ಇದರಲ್ಲಿ ಗುಜರಾತ್ ಟೈಟನ್ಸ್ 6 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ಉಳಿದ 2 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಗುಜರಾತ್ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಗುಜರಾತ್ ಟೈಟನ್ಸ್, ಪಂಜಾಬ್ ವಿರುದ್ಧ ಸೋತಿದ್ದರೆ, ಇತ್ತ ರಾಜಸ್ಥಾನ್, ಸಿಎಸ್ಕೆ ತಂಡವನ್ನು ಮಣಿಸಿದೆ.
ಚಿಕ್ಕಬಳ್ಳಾಪುರ, ಏಪ್ರಿಲ್ 03: ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹೋಟೆಲ್‍ಗಳು ಬಂದ್ ಆಗಿವೆ. ಇತ್ತ ಚಿಕ್ಕಬಳ್ಳಾಪುರದಲ್ಲೂ ಗ್ಯಾಸ್ ಅಭಾವ ಮುಂದುವರೆದಿದೆ. ಹೋಟೆಲ್‍ಗಳು ಬಂದ್ ಆಗುತ್ತಿವೆ. ಹೀಗಾಗಿ ಸದ್ಯ ನಗರದಲ್ಲಿ ತರಕಾರಿಗೆ (vegetable) ಬೆಲೆ ಇಲ್ಲದಂತಾಗಿದ್ದು, ರಾಶಿ-ರಾಶಿ ತರಕಾರಿ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿವೆ.
ಚಿಕ್ಕಬಳ್ಳಾಪುರದಲ್ಲಿ ತರಕಾರಿಗಿಲ್ಲ ಬೆಲೆ
ಚಿಕ್ಕಬಳ್ಳಾಪುರ ಹೂವು, ಹಣ್ಣು, ತರಕಾರಿಗೆ ಖ್ಯಾತಿ ಪಡೆದಿದೆ. ಅಲ್ಲಿ ಬೆಳೆಯುವ ತರಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಿಗೆ ದಿನನಿತ್ಯ ರಫ್ತಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದ ಬೆಂಗಳೂರು ಸೇರಿದಂತೆ ವಿವಿಧಡೆ ಹೋಟೆಲ್‍ಗಳು ಬಂದ್ ಆಗಿವೆ.
ಇದರಿಂದ ಚಿಕ್ಕಬಳ್ಳಾಪುರದ ತರಕಾರಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ತರಕಾರಿಗಳ ಬೆಲೆ ತೀವ್ರ ಕುಸಿತವಾಗಿದೆ. ಬೆಸಿಗೆಯಲ್ಲಿ ಕೆ.ಜಿ ಬೀನ್ಸ್ ಬೆಲೆ ಬರೋಬ್ಬರಿ 80 ರೂಪಾಯಿಯಿಂದ 100 ರೂಪಾಯಿವರೆಗೂ ಇರುತ್ತೆ, ಆದರೆ ಈ ಭಾರಿ ಮೂಟೆ ಬೀನ್ಸ್ ಬೆಲೆ 300 ರೂಪಾಯಿಯಿಂದ 400 ನೂರು ರೂಪಾಯಿಗೆ ಬಿಕಾರಿಯಾಗುತ್ತಿದೆ.
ಯಾವ ತರಕಾರಿಗೆ ಎಷ್ಟು ಬೆಲೆ?
ಇರಾನ್, ಇಸ್ರೇಲ್-ಅಮೇರಿಕ ಯುದ್ಧ ಆರಂಭವಾಗುವುದಕ್ಕೂ ಮುನ್ನ ತರಕಾರಿಗಳಿಗೆ ಒಳ್ಳೆಯ ಬೆಲೆಯಿತ್ತು. ಕಳೆದ 20 ದಿನಗಳಿಂದ ತರಕಾರಿಗಳ ಬೆಲೆ ತೀವ್ರ ಕುಸಿತಿದೆ. ಬೀನ್ಸ್ ಕೆಜಿಗೆ 20 ರೂ, ಕ್ಯಾರೆಟ್ 8 ರೂ, ಸೋರೆಕಾಯಿ 5 ರೂ, ಆಲೂಗಡ್ಡೆ 6 ರೂ, ಬೆಂಡೆಕಾಯಿ 10 ರೂ, ಈರುಳ್ಳಿ 12 ರೂ, ಮೂಲಂಗಿ 5 ರೂ, ಆಗಲಕಾಯಿ 15 ರೂ, ಕ್ಯಾಪ್ಸಿಕಂ 20 ರೂ, ಬದನೇಕಾಯಿ 2 ರೂ, ದರ ಕುಸಿದಿದೆ. ಇನ್ನು ಹಗಲು-ರಾತ್ರಿ ಕಷ್ಟಪಟ್ಟು ತರಕಾರಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಒಟ್ಟಿನಲ್ಲಿ ಗಲ್ಫ್ ಯುದ್ಧ ಎಫೆಕ್ಟ್ನಿಂದ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಉದ್ಯಮ ಕುಂಟುತ್ತಾ ಸಾಗಿದೆ. ಇದರಿಂದ ಹೋಟೆಲ್ ಉದ್ಯಮ ನಂಬಿಕೊಂಡಿದ್ದ ತರಕಾರಿ ವ್ಯಾಪಾರಕ್ಕೂ ಭಾರಿ ಹೊಡೆತ ಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ ಪೇಪರ್ ಪ್ಲೇಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮ, ಹುಟ್ಟುಹಬ್ಬ, ಮದುವೆ ಸೇರಿದಂತೆ ವಿವಿಧ ರೀತಿಯ ಸಮಾರಂಭಗಳಲ್ಲಿ ಆಹಾರ ಸೇವನೆಗೆ ಬಾಳೆ ಎಲೆ ಅಥವಾ ಸ್ಟೀಲ್ ಪ್ಲೇಟ್ ಬದಲು ಜನ ಪೇಪರ್ ಪ್ಲೇಟ್‌ಗಳನ್ನು ಬಳಸುವುದಕ್ಕೆ ಆರಂಭಿಸಿದ್ದಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬಿಸಿ ಬಿಸಿ ಆಹಾರವನ್ನು ಇಂತಹ ಪ್ಲೇಟ್‌ಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಅಷ್ಟೇಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಹಲವು ರೀತಿಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಹೇಳಿರುವ ಮಾಹಿತಿ ಕೂಡ ವೈರೆಲ್ ಆಗಿದೆ. ಅವರು ಪೇಪರ್ ಪ್ಲೇಟ್ (Paper Plates)ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅದರಲ್ಲಿ ತಿಳಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸಾಮಾನ್ಯವಾಗಿ ನಾವು ಬಿಸಿ ಆಹಾರವನ್ನು ಪೇಪರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಲೇಪಿತ ಪ್ಲೇಟ್‌ಗಳಲ್ಲಿ ಸೇವಿಸುತ್ತೇವೆ. ಆದರೆ ಇವು ಸಾಮಾನ್ಯ ಪ್ಲೇಟ್‌ಗಳಲ್ಲ, ಇವುಗಳನ್ನು “ಕ್ಯಾನ್ಸರ್ ಪ್ಲೇಟ್‌ಗಳು” ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಏಕೆಂದರೆ ಬಿಸಿ ಆಹಾರದಿಂದ ಪ್ಲೇಟ್‌ನ ಮೇಲಿನ ಪ್ಲಾಸ್ಟಿಕ್ ಲೇಪ ಕರಗಿ, ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಬೆರೆತು ನಮ್ಮ ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ.
ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?
ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ
ಹಾರ್ಮೋನ್ ಅಸಮತೋಲನ
ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
ಪರಿಸರದ ಮೇಲೂ ಹಾನಿ
ಇಂತಹ ಪ್ಲೇಟ್‌ಗಳನ್ನು ಬಳಸಿ ಬಿಸಾಡಿದಾಗ, ಅವುಗಳನ್ನು ಹಸು ಮುಂತಾದ ಪ್ರಾಣಿಗಳು ತಿಂದರೆ ಸಾವಿಗೆ ದಾರಿಮಾಡಿಕೊಡಬಹುದು. ಇನ್ನು, ಇವುಗಳನ್ನು ಸುಟ್ಟರೆ ವಿಷಕಾರಿ ಹೊಗೆ ಉಂಟಾಗಿ ಗಾಳಿ ಮಾಲಿನ್ಯವಾಗಬಹುದು. ಇದರಿಂದ ಉಸಿರಾಟ ಸಂಬಂಧಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು.
ಬೆಂಗಳೂರು, (ಏಪ್ರಿಲ್ 03): ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು (Lokayukta retired justice santosh hegde ) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು (ಏಪ್ರಿಲ್ 03) ಸ್ಕೌಟ್ಸ್ & ಗೈಡ್ಸ್ ಆಯುಕ್ತ PGR ಸಿಂಧ್ಯಾಗೆ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದು, ಈ ವೇಳೆ ಭಾಷಣ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಬಳಿಕ ಭಾಷಣ ಮುಗಿಸಿ ವೇದಿಕೆ ಮೇಲಿನ ಕುರ್ಚಿ ಮೇಲೆ ಕುಳಿತುಕೊಳ್ಳುವಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಕಿತ್ಸೆ ನೀಡಲಾಗುತ್ತಿದೆ.
ನವದೆಹಲಿ, ಏಪ್ರಿಲ್ 3: ಕಳೆದ 1 ವರ್ಷದಿಂದ ಚಿನ್ನದ ಬೆಲೆ (Gold Rates) ಬಹಳ ಏರಿದೆ. 2025ರ ಏಪ್ರಿಲ್ 3ರಂದು ಅಪರಂಜಿ ಚಿನ್ನದ ಬೆಲೆ 9,164 ರೂ ಇತ್ತು. ಒಂದು ವರ್ಷದ ನಂತರ ಇವತ್ತು ಅದರ ಬೆಲೆ 15,093 ರೂಗೆ ಏರಿದೆ. ಒಂದು ವರ್ಷದಲ್ಲಿ ಬೆಲೆಯಲ್ಲಿ ಶೇ. 65ರಷ್ಟು ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 4,700 ಡಾಲರ್ ದಾಟಿ, 4,800 ಡಾಲರ್ ಗಡಿಯತ್ತ ಸಾಗಿದೆ. ಒಂದು ಔನ್ಸ್ ಎಂದರೆ 28.35 ಗ್ರಾಮ್.
ಫೆಬ್ರುವರಿ 28ರಂದು ಯುದ್ಧ ಶುರುವಾದಾಗ ಚಿನ್ನ, ಬೆಳ್ಳಿ ಬೆಲೆ ತೀರಾ ಹೆಚ್ಚಬಹುದು ಎಂದು ಭಾವಿಸಲಾಗಿತ್ತು. ಆದರೆ, ಬೆಲೆ ಇಳಿಕೆಯಾಗಿದೆ. ಮಾರ್ಚ್ 1ರಂದು 17,309 ರೂ ಇದ್ದ ಚಿನ್ನದ ಬೆಲೆ ಇವತ್ತು 15,093 ರೂಗೆ ಇಳಿದಿದೆ. ಮಾರ್ಚ್ 1ರಿಂದೀಚೆ ಶೇ. 12ರಷ್ಟು ಬೆಲೆ ಇಳಿಕೆ ಆಗಿದೆ. ಖ್ಯಾತ ಹೂಡಿಕೆದಾರ ಪೀಟರ್ ಶಿಫ್ ಪ್ರಕಾರ ಚಿನ್ನದ ಇಳಿಕೆಯ ಆಟ ಮುಕ್ತಾಯವಾಗಿದೆ. ಇನ್ನೇನಿದ್ದರೂ ಪವರ್ಫುಲ್ ಜಂಪ್.
ಮಾರ್ಚ್ನಲ್ಲಿ ಇಳಿದಿದ್ದ ಚಿನ್ನದ ಬೆಲೆ ಏಪ್ರಿಲ್ನಲ್ಲಿ ಸತತವಾಗಿ ಏರಿಕೆಯಾಗುವ ಟ್ರೆಂಡ್ ಇದೆ. ಇದು ಯುದ್ಧದ ಪರಿಣಾಮದಿಂದ ಮಾತ್ರವೇ ಆಗುತ್ತಿರುವ ಏರಿಕೆಯಲ್ಲ. ಬದಲಾಗಿ, ಹೂಡಿಕೆದಾರರು ಅಮೆರಿಕನ್ ಡಾಲರ್ನಿಂದ ದೂರವಾಗಿ, ನೈಜ ಆಸ್ತಿಯತ್ತ ವಾಲತೊಡಗಿರುವುದರ ಕುರುಹು ಇದು ಎಂಬುದು ಪೀಟರ್ ಶಿಫ್ ಅವರ ಅನಿಸಿಕೆ.
ಏಪ್ರಿಲ್ನಲ್ಲಿ ಚಿನ್ನದ ಬೆಲೆ 20,000 ರೂ ದಾಟುತ್ತಾ?
ಪೀಟರ್ ಶಿಫ್ ಪ್ರಕಾರ, ಮಾರ್ಚ್ ತಿಂಗಳು 2008ರ ನಂತರ ಚಿನ್ನದ ಸಾಧನೆ ಅತ್ಯಂತ ಕಳಪೆ ಸಾಧನೆ ಕಂಡ ತಿಂಗಳೆನಿಸಿದೆ. ಹಾಗೆಯೇ, ಏಪ್ರಿಲ್ ತಿಂಗಳು ಕಳೆದ ನಾಲ್ಕೂವರೆ ದಶಕದಲ್ಲೇ ಚಿನ್ನಕ್ಕೆ ಬೆಸ್ಟ್ ಮಂತ್ ಆಗಿರಲಿದೆಯಂತೆ.
ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ಗೆ 4,700 ಡಾಲರ್ ಬೆಲೆ ದಾಟಿ, 4,800 ಡಾಲರ್ನತ್ತ ಸಾಗಿದೆ. ಮಾರ್ಚ್ 23ರ ನಂತರ ಚಿನ್ನದ ಬೆಲೆ ಶೇ. 15ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಏಪ್ರಿಲ್ನಲ್ಲಿ ಮುಂದುವರಿಯಲಿದ್ದು, ಒಂದು ಔನ್ಸ್ ಚಿನ್ನದ ಬೆಲೆ 6,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,616 ರೂ ಮುಟ್ಟಬಹುದು. 20,000 ರೂ ದಾಟಿದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯ ಇವರದ್ದು. ಅಂದರೆ ಮುಂದಿನ ನಾಲ್ಕು ವಾರದಲ್ಲಿ ಬಂಗಾರದ ಬೆಲೆ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಏರಿಕೆ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭಾಗಿ ಆಗಿ ಡ್ರಗ್ಸ್ ಸೇವಿಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟಿ ಹೇಮಾ ಕೊಲ್ಲ (Hema Kolla) ಇದಿಗ ಮತ್ತೊಮ್ಮೆ ಪಾರ್ಟಿಯೊಂದರಲ್ಲಿ ಡ್ರಗ್ಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ನಟಿ ಹೇಮಾ ಕೊಲ್ಲ ಹೈದರಾಬಾದ್‌ನ ಪಬ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಪಬ್ ಮೇಲೆ ಪೊಲೀಸ್ ದಾಳಿ ಆಗಿದ್ದು, ಅಲ್ಲಿ ನಟಿ ಹೇಮಾ ಅವರಿಗೆ ಡ್ರಗ್ಸ್ ಪರೀಕ್ಷೆ ಮಾಡಲಾಗಿತ್ತು.
ಹೈದರಾಬಾದ್‌ನ ಕೊಂಡಾಪುರದಲ್ಲಿರುವ ‘ಕ್ವಾಕ್ ಅರೀನಾ ಪಬ್’ ಮೇಲೆ ಇತ್ತೀಚೆಗೆ ಹೈದರಾಬಾದ್ ಪೊಲೀಸರು ಮತ್ತು ಮಾದಕ ವಸ್ತು ನಿಯಂತ್ರಣ ತಂಡವಾದ ಈಗಲ್ ತಂಡ ಜಂಟಿಯಾಗಿ ದಾಳಿ ನಡೆಸಿತ್ತು. ಈ ಪಬ್‌ನಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ. ಪಾರ್ಟಿಯಲ್ಲಿದ್ದ ಸುಮಾರು 64 ಜನರಿಗೆ ಪೊಲೀಸರು ಸ್ಥಳದಲ್ಲೇ ಡ್ರಗ್ಸ್ ಪರೀಕ್ಷೆ ನಡೆಸಿದರು. ಈ ಪರೀಕ್ಷೆಯಲ್ಲಿ ಎಂಟು ಜನರಿಗೆ ಪಾಸಿಟಿವ್ ಬಂದಿದ್ದು, ಅವರಲ್ಲಿ ಆರು ಮಂದಿ ಗಾಂಜಾ ಮತ್ತು ಇಬ್ಬರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಈ ದಾಳಿಯ ಸಮಯದಲ್ಲಿ ನಟಿ ಹೇಮಾ ಕೂಡ ಅದೇ ಪಬ್‌ನಲ್ಲಿದ್ದರು. ಪೊಲೀಸರು ಅವರಿಗೂ ಡ್ರಗ್ಸ್ ಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶ ‘ನೆಗೆಟಿವ್’ ಬಂದಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪಬ್ ಆವರಣದಿಂದಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೇಮಾ, ‘ನಾನು ಮತ್ತೆ ಪಬ್‌ಗೆ ಬಂದಿದ್ದೇನೆ. ಈಗಷ್ಟೇ ಈಗಲ್ ತಂಡದವರು ಮಾಡಿದ ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ’ ಎಂದು ತಮ್ಮ ಯೂರಿನ್ ಟೆಸ್ಟ್ ರಿಪೋರ್ಟ್ ತೋರಿಸಿದ್ದಾರೆ. ‘ನಿಮ್ಮ ಹೇಮಕ್ಕ ಯಾವತ್ತೂ ತಪ್ಪು ಮಾಡುವುದಿಲ್ಲ. ನಾಳೆ ಡ್ರಗ್ಸ್ ಪರೀಕ್ಷೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಪೋಸ್ಟ್ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿ ಆಗಿದ್ದರು. ಆಗ ಅವರ ಮೇಲೆ ಡ್ರಗ್ಸ್ ಪರೀಕ್ಷೆ ನಡೆಸಲಾಗಿದ್ದು, ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವಾರಗಳ ಕಾಲ ನಟಿ ಹೇಮಾ ಕೊಲ್ಲ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬಳಿಕ ಇತ್ತೀಚೆಗಷ್ಟೆ ಪ್ರಕರಣದಲ್ಲಿ ಅವರನ್ನು ನಿರ್ದೋಷಿ ಎಂದು ಘೋಷಿಸಲಾಯ್ತು.
ಆದರೆ ಆ ಘಟನೆಯಿಂದ ತನ್ನ ವೈಯಕ್ತಿಕ ಜೀವನ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ಈ ಹಿಂದೆ ಕಣ್ಣೀರಿಟ್ಟಿದ್ದರು. ಇದೀಗ ಮತ್ತೆ ಪಬ್ ದಾಳಿಯ ವೇಳೆ ಅವರು ಅಲ್ಲಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅವರು ಸಿನಿಮಾಗಳಿಂದ ದೂರವಿದ್ದು, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಸಂಪೂರ್ಣ ನಿಂತು ಹೋಗಿವೆ.