Category Archives: Blog

Your blog category

ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ – Kannada News

ವಾಷಿಂಗ್ಟನ್, ಜೂನ್ 11: ಒಮಾನ್ (Oman) ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ, ಆ ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿ 2 ‘ಹೆಲ್‌ಫೈರ್ ಕ್ಷಿಪಣಿ’ಗಳನ್ನು ಉಡಾಯಿಸಿದ್ದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಒಪ್ಪಿಕೊಂಡಿದೆ. ಗಲ್ಫ್ ವಲಯದಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಹಡಗಿನ ಮೇಲೆ ಈ ವಾರ ನಡೆದ ಮೂರನೇ ದಾಳಿ ಇದಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾಮಾಜಿಕ ಮಾಧ್ಯಮವಾದ ಎಕ್ಸ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಗಿನಿ-ಬಿಸೌ ದೇಶದ ಧ್ವಜವನ್ನು ಹೊಂದಿದ್ದ ‘ಎಂ/ಟಿ ಜಲವೀರ್’ (M/T Jalveer) ಎಂಬ ತೈಲ ಟ್ಯಾಂಕರ್ ಒಮಾನ್ ಕೊಲ್ಲಿಯ ಮೂಲಕ ಇರಾನ್‌ನ ತೈಲವನ್ನು ಸಾಗಿಸಲು ಪ್ರಯತ್ನಿಸುತ್ತಿತ್ತು ಎಂದು ಹೇಳಿಕೊಂಡಿದೆ. ಅಮೆರಿಕ ಪಡೆಗಳು ನೀಡಿದ ಸರಣಿ ಸೂಚನೆಗಳನ್ನು ಹಡಗಿನ ಸಿಬ್ಬಂದಿ ಪಾಲಿಸಲು ವಿಫಲರಾದ ಹಿನ್ನೆಲೆಯಲ್ಲಿ ಅಮೆರಿಕದ ಯುದ್ಧ ವಿಮಾನವು ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎಂದು ಅದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ವಾಣಿಜ್ಯ ನೌಕೆಗಳ ಮೇಲಿನ ಸರಣಿ ದಾಳಿಗಳ ಮಧ್ಯೆ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಾರತೀಯ ನಾವಿಕರಿದ್ದ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದು, ಇವು ಅತ್ಯಂತ ಆತಂಕಕಾರಿ ಎಂದು ಟೀಕಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ. ಗಲ್ಫ್ ಪ್ರದೇಶದಲ್ಲಿ ಸಂಚರಿಸುವ ಕಡಲ ಸಾರಿಗೆ ಮತ್ತು ನಾಗರಿಕ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಶಸ್ತ್ರ ಪಡೆಗಳು ಸಂಯಮವನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಒಮಾನ್​ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ

ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳಿಗೆ ಸಂಬಂಧಿಸಿದಂತೆ ಹಲವಾರು ಘಟನೆಗಳು ನಡೆದಿವೆ. ನಮ್ಮ ನಾವಿಕರ ಸಮುದಾಯದ ಕಲ್ಯಾಣ ಮತ್ತು ಸುರಕ್ಷತೆಗೆ ನಾವು ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಈ ಅಂಶವನ್ನು ನಾವು ಪದೇ ಪದೇ ಒತ್ತಿಹೇಳುವ ಅಗತ್ಯವಿಲ್ಲ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Chanakya Niti: ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ; ಏಕೆ ಗೊತ್ತಾ? – Kannada News

ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವುದು ತುಂಬಾನೇ ಮುಖ್ಯ. ಆದರೆ ಅತಿಯಾದ ಒಳ್ಳೆಯತನ  (honesty) ಎಂದಿಗೂ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಒಳ್ಳೆಯತನದಿಂದ ನಾವೇ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಒಳ್ಳೆಯ ಗುಣಕ್ಕೂ ಒಂದು ಮಿತಿ ಇರಬೇಕು, ಜಾಸ್ತಿ ಒಳ್ಳೆಯತನವನ್ನು ತೋರಿದರೆ  ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಮತ್ತು ಜನ  ನಮ್ಮ ಈ ಒಳ್ಳೆಯತನ ಲಾಭವನ್ನು ಪಡೆಯಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.  ಅತಿಯಾದ ಒಳ್ಳೆಯತನ ಏಕೆ ಒಳ್ಳೆಯದಲ್ಲ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅತಿಯಾದ ಒಳ್ಳೆಯತನ ಏಕೆ ಒಳ್ಳೆಯದಲ್ಲ?

ಸುಲಭವಾಗಿ ಮೋಸ ಹೋಗಬಹುದು: ಎಲ್ಲದಕ್ಕೂ ಹೌದು ಎಂದು ಹೇಳುವುದು ಅಥವಾ ನಾನು ಇಲ್ಲ ಎಂದು ಹೇಳಿದರೆ ಅವರ ಭಾವನೆಗಳಿಗೆ ನೋವಾಗಬಹುದೇನೋ ಎಂದು ಭಾವಿಸಿ ಎಲ್ಲದಕ್ಕೂ ಹೌದು ಹೇಳಿ ಅತಿಯಾದ ಒಳ್ಳೆಯತನ ತೋರಿಸುತ್ತಾ ಹೋದರೆ ನೀವು ಸುಲಭವಾಗಿ ಮೋಸ ಹೋಗುತ್ತೀರಿ. ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ನಿಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಇತರರು ನಿಮ್ಮನ್ನು ದುರ್ಬಲರೆಂದು ನೋಡುತ್ತಾರೆ.

ಇತರರ ಸ್ವಾರ್ಥಕ್ಕಾಗಿ ಬಲಿಯಾಗಬೇಕಾಗುತ್ತದೆ: ತುಂಬಾ ಒಳ್ಳೆಯವರಾಗಿದ್ದರೆ ನೀವು ಇತರರ ಸ್ವಾರ್ಥಕ್ಕೆ ಬಹುಬೇಗನೇ ಬಲಿಯಾಗುತ್ತೀರಿ. ಜಾಸ್ತಿ ಒಳ್ಳೆಯತನವನ್ನು ತೋರಿದರೆ  ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಆದ್ದರಿಂದ, ಪರಿಸ್ಥಿತಿಯ ಬಗ್ಗೆ ಯೋಚಿಸಿ ಸಮತೋಲನದಿಂದ ವರ್ತಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಚಾಣಕ್ಯರ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ

ಅವಕಾಶಗಳು ಕಳೆದುಹೋಗುತ್ತವೆ: ಯಾವಾಗಲೂ ಒಳ್ಳೆಯತನ ತೋರುವುದರಿಂದ ಇತರರಿಗೆ ಒಳ್ಳೆಯದಾಗಲಿ ಎಂದು ನೀವು ಅವರಿಗಾಗಿ ಅವಕಾಶಗಳನ್ನು ಬಿಟ್ಟುಕೊಟ್ಟಾಗ ನಿಮ್ಮ ಪಾಲಿಗೆ ಬರುವಂತಹ ಒಳ್ಳೊಳ್ಳೆ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಇದರಿಂದ ಇತರರು ಜೀವನದಲ್ಲಿ ಮುಂದೆ ಸಾಗುತ್ತಾರೆ ನೀವು ಹಿಂದೆಯೇ ಉಳಿಯಬೇಕಾಗುತ್ತದೆ. ಹಾಗಾಗಿ ಯಾವತ್ತಿಗೂ ಅತಿಯಾಗಿ ಒಳ್ಳೆಯವರಾಗಿರಬೇಡಿ

ಒಳ್ಳೆಯತನ ಒಳ್ಳೆಯದೆ ಆದರೆ ಅತಿಯಾದ ಒಳ್ಳೆಯತನ ನಿಮಗೆಯೇ ಮುಳುವಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಮ್ಮ ಯಶಸ್ಸಿಗಾಗಿ ನೀವು ಶ್ರಮಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Thu, 11 June 26

Source link

ಪಿಒಕೆಯಲ್ಲಿ ರಕ್ತಪಾತ; ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು – Kannada News

ಮುಜಾಫರಾಬಾದ್, ಜೂನ್ 11: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಅತಿಯಾದ ಹಣದುಬ್ಬರ, ಹಿಂಸಾತ್ಮಕ ದಬ್ಬಾಳಿಕೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಸ್ಥಳೀಯ ನಾಗರಿಕರು ದೀರ್ಘಕಾಲದಿಂದ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಈ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನಿ ಸೇನೆಯು ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಇದರಿಂದ ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಿಂದ 16 ಜನರು ಸಾವನ್ನಪ್ಪಿದ್ದಾರೆ ಮತ್ತು 37ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಿಒಕೆಯಲ್ಲಿನ ಸ್ಥಳೀಯ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ಕೆಲವು ಪ್ರಮುಖ ಕಾರಣಗಳಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು. ತಮಗೆ ಸಿಗಬೇಕಾದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದ್ದರೂ, ಸ್ಥಳೀಯರಿಗೆ ಅತಿಯಾದ ವಿದ್ಯುತ್ ಬಿಲ್ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ಪ್ರದೇಶವನ್ನು ಪಾಕಿಸ್ತಾನಿ ಮಿಲಿಟರಿ ತನ್ನ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು ಸ್ಥಳೀಯರ ಧ್ವನಿಯನ್ನು ಹತ್ತಿಕ್ಕುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ಸ್ಥಳೀಯ ಹಕ್ಕುಗಳ ಒಕ್ಕೂಟದ ನೇರ ನಾಯಕತ್ವದಲ್ಲಿ ಸಾವಿರಾರು ನಿರಸ್ತ್ರ ನಾಗರಿಕರು, ಮಹಿಳೆಯರು ಮತ್ತು ಯುವಕರು ಮುಜಾಫರಾಬಾದ್ ಕಡೆಗೆ ಬೃಹತ್ ಮೆರವಣಿಗೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಮೊದಲು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮಾಡಿದ ಪಾಕಿಸ್ತಾನಿ ಅರೆಸೇನಾ ಪಡೆ ಮತ್ತು ಸೇನೆಯು, ನಂತರ ನೇರವಾಗಿ ಪ್ರತಿಭಟನಾಕಾರರ ಮೇಲೆ ಗುಂಡಿನ ಮಳೆಗರೆದಿದೆ.

ಈ ಪ್ರದೇಶದಲ್ಲಿ ಪಾಕಿಸ್ತಾನದ ನಿರಂತರ ಆಕ್ರಮಣ ಮತ್ತು ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಲು ಸುಮಾರು 60,000 ದಿಂದ 70,000 ಕ್ಕೂ ಹೆಚ್ಚು ಜನರು ರಾವಲಕೋಟ್‌ನಲ್ಲಿ ಜಮಾಯಿಸಿದ್ದರು. ಕಳೆದ ಮಂಗಳವಾರ ಪಿಒಕೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಮೃತಪಟ್ಟ 30 ಜನರಿಗೆ ನ್ಯಾಯ ಒದಗಿಸಬೇಕು ಹಾಗೂ ಗಾಯಗೊಂಡ 200 ಕ್ಕೂ ಹೆಚ್ಚು ಜನರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ: ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ

ಸೇನೆಯ ಬರ್ಬರ ದಾಳಿಗೆ ಸಿಲುಕಿ 16 ನಿಶಸ್ತ್ರ ನಾಗರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 37ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಈ ಭೀಕರ ಹತ್ಯಾಕಾಂಡದ ನಂತರ ಇಡೀ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಈ ಘಟನೆಯ ಭೀಕರ ದೃಶ್ಯಗಳು ಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪಾಕಿಸ್ತಾನ ಸರ್ಕಾರವು ಇಡೀ ಪಿಒಕೆ ವಲಯದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರಮುಖ ನಗರಗಳಲ್ಲಿ ಕಠಿಣ ಕರ್ಫ್ಯೂ ಹೇರಲಾಗಿದ್ದರೂ, ಆಕ್ರೋಶಗೊಂಡಿರುವ ಸಾರ್ವಜನಿಕರು ಮಿಲಿಟರಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು – Kannada News

ಕೀನ್ಯಾ ಏರ್​ಪೋರ್ಟ್Image Credit source: Nairobinews

ನೈರೋಬಿ, ಜೂನ್ 11: ಭಾರತದ ಪ್ರಮುಖ ಉದ್ಯಮ ಸಂಸ್ಥೆಯಾದ ‘ಅದಾನಿ ಗ್ರೂಪ್’ (Adani Group) ಜೊತೆಗಿನ ಒಪ್ಪಂದ ರದ್ದಾದ ಬೆನ್ನಲ್ಲೇ, ಕೀನ್ಯಾ ದೇಶವು ತನ್ನ ಅತ್ಯಂತ ದೊಡ್ಡ ವಿಮಾನ ನಿಲ್ದಾಣದ ನವೀಕರಣ ಮತ್ತು ವಿಸ್ತರಣೆಯ ಬೃಹತ್ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಿದೆ. ಕೀನ್ಯಾ ರಾಜಧಾನಿನಗರಿ ನೈರೋಬಿಯಲ್ಲಿರುವ ‘ಜೋಮೋ ಕೆನ್ಯಾಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ (JKIA- Jomo Kenyatta International Airport) ನವೀಕರಣದ ಜವಾಬ್ದಾರಿಯನ್ನು ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ‘ಚೀನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಕೋ’ಗೆ (CCCC) ನೀಡಿದೆ.

ಈ ಇಡೀ ಯೋಜನೆಯ ಒಟ್ಟು ವೆಚ್ಚ 2.9 ಬಿಲಿಯನ್ ಡಾಲರ್ (ಸುಮಾರು ₹27,000 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.

ಪ್ರತಿಭಟನೆಗಳಿಂದಾಗಿ ಅದಾನಿ ಗ್ರೂಪ್‌ಗೆ ಕೈತಪ್ಪಿದ ಒಪ್ಪಂದ

ಇದಕ್ಕೂ ಮುನ್ನ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಕೀನ್ಯಾದ ಈ ವಿಮಾನ ನಿಲ್ದಾಣವನ್ನು 30 ವರ್ಷಗಳ ಕಾಲ ನಿರ್ವಹಿಸುವ ಮತ್ತು ನವೀಕರಿಸುವ ಸಂಬಂಧ 2.6 ಬಿಲಿಯನ್ ಡಾಲರ್ ಮೊತ್ತದ ಬಿಡ್ ಸಲ್ಲಿಸಿ ಒಪ್ಪಂದವೂ ಆಗಿತ್ತು. ಆದರೆ, ಈ ಒಪ್ಪಂದದಿಂದ ಕೀನ್ಯಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಮತ್ತು ಸ್ಥಳೀಯ ಉದ್ಯೋಗ ನಷ್ಟವಾಗುತ್ತದೆ ಎಂದು ಆರೋಪಿಸಿ ಅಲ್ಲಿನ ವಿಮಾನಯಾನ ಕಾರ್ಮಿಕರು ಭಾರಿ ಮುಷ್ಕರ ಮತ್ತು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ

ಸಾರ್ವಜನಿಕರು ಮತ್ತು ನಾಗರಿಕ ಸಂಘಟನೆಗಳಿಂದ ಬಂದ ತೀವ್ರ ವಿರೋಧ ಹಾಗೂ ನ್ಯಾಯಾಲಯದಲ್ಲಿ ಎದುರಾದ ಕಾನೂನು ಸವಾಲುಗಳ ಕಾರಣದಿಂದಾಗಿ, ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರ ಸರ್ಕಾರವು ಅದಾನಿ ಗ್ರೂಪ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ಈಗ ಚೀನೀ ಕಂಪನಿಗೆ ಗುತ್ತಿಗೆ ಸಿಕ್ಕಿದೆ.

ಕೀನ್ಯಾದಲ್ಲಿ ಚೀನಾದ ಪ್ರಭಾವ

ಈ ಹೊಸ ಒಪ್ಪಂದದೊಂದಿಗೆ ಕೀನ್ಯಾದ ಮೂಲಸೌಕರ್ಯ ವಲಯದ ಮೇಲೆ ಚೀನಾದ ಹಿಡಿತ ಮತ್ತಷ್ಟು ಬಲಗೊಂಡಿದೆ. ಚೀನಾದ ಇದೇ ‘CCCC’ ಕಂಪನಿಯು ಈಗಾಗಲೇ ಕೀನ್ಯಾದಲ್ಲಿ ಪ್ರಮುಖ ರೈಲ್ವೆ ಯೋಜನೆ, 60,000 ಆಸನಗಳ ಬೃಹತ್ ಕ್ರೀಡಾಂಗಣ, ಎಕ್ಸ್‌ಪ್ರೆಸ್‌ವೇ ಟೋಲ್ ರಸ್ತೆ ಮತ್ತು ದೊಡ್ಡ ಸಮಾವೇಶ ಕೇಂದ್ರವನ್ನು (Convention Center) ನಿರ್ಮಿಸಿದೆ.

ಯೋಜನೆಗೆ ಹಣಕಾಸು ಒದಗಿಸುವುದು ಹೇಗೆ?

ಕೀನ್ಯಾ ಸರ್ಕಾರವು ಈ ಯೋಜನೆಗೆ ತನ್ನ ಹೊಸ ‘ರಾಷ್ಟ್ರೀಯ ಮೂಲಸೌಕರ್ಯ ನಿಧಿ’ (National Infrastructure Fund) ಮತ್ತು ವಿಮಾನ ಪ್ರಯಾಣಿಕರ ಸೇವಾ ಶುಲ್ಕದಿಂದ (Air-passenger service charge) ಬರುವ ಆದಾಯದ ಆಧಾರದ ಮೇಲೆ ವಾಣಿಜ್ಯ ಸಾಲಗಳನ್ನು ಪಡೆದು ಹಣ ಹೂಡಿಕೆ ಮಾಡಲಿದೆ. ಯೋಜನೆಯ ಕಾಮಗಾರಿಗಳು ಇದೇ ತಿಂಗಳಿನಿಂದ ಆರಂಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

ನೆರೆಯ ದೇಶಗಳಿಂದ ಕೀನ್ಯಾಗೆ ಪೈಪೋಟಿ

ಪೂರ್ವ ಆಫ್ರಿಕಾದ ಪ್ರಮುಖ ವಾಯುಯಾನ ಹಬ್ ಆಗಿರುವ ಕೀನ್ಯಾ, ನೆರೆಹೊರೆಯ ದೇಶಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಇಥಿಯೋಪಿಯಾ ದೇಶವು ಈಗಾಗಲೇ 12.5 ಬಿಲಿಯನ್ ಡಾಲರ್ ವೆಚ್ಚದ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುತ್ತಿದ್ದರೆ, ರುವಾಂಡಾ ದೇಶವು ‘ಕತಾರ್ ಏರ್ವೇಸ್’ ಸಹಭಾಗಿತ್ವದಲ್ಲಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ ಕೀನ್ಯಾ ತನ್ನ ಅತಿ ದೊಡ್ಡ ವಿಮಾನ ನಿಲ್ದಾಣವನ್ನು ನವೀಕರಿಸುವುದು ಬಹಳ ಅಗತ್ಯವೆನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

349 ರನ್ ಬಾರಿಸಿಯೂ ಅಫ್ಘನ್ ವಿರುದ್ಧ ಸೋತ ಟೀಂ ಇಂಡಿಯಾ – Kannada News

ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ (Sri Lanka Triangular Series) ಭಾರತ ಎ ತಂಡ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಿದ್ದ ಭಾರತ ಎ ಪಡೆ ( Afghanistan A vs India A) 349 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿದ ಹೊರತಾಗಿಯೂ ಸೋಲಿಗೆ ಕೊರಳೊಡ್ಡಬೇಕಾಯಿತು. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಮಳೆ ಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 49 ಓವರ್‌ಗಳಲ್ಲಿ 349 ರನ್ ಕಲೆಹಾಕಿತು. ಆದರೆ ಅಫ್ಘನ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದ ಕಾರಣ ಪಂದ್ಯವನ್ನು 38 ಓವರ್​ಗಳಿಗೆ ಸೀಮಿತಗೊಳಿಸಲಾಯಿತು.

38 ಓವರ್​ಗಳಲ್ಲಿ 294 ರನ್ ಗುರಿ

ಹೀಗಾಗಿ ಅಫ್ಘನ್ ತಂಡಕ್ಕೆ 38 ಓವರ್​ಗಳಲ್ಲಿ 294 ರನ್ ಗುರಿ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ತಂಡ 25.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದ್ದಾಗ ಮತ್ತೆ ಮಳೆ ಆಟಕ್ಕೆ ಅಡ್ಡಿಪಡಿಸಿತು. ಎಷ್ಟೇ ಕಾದರೂ ಮಳೆ ನಿಲ್ಲದ ಕಾರಣ ಡಕ್ವರ್ತ್​ ಲೂಯಿಸ್ ನಿಯಮದಡಿಯಲ್ಲಿ ಅಂಪೈರ್​ಗಳು ಅಫ್ಘಾನಿಸ್ತಾನ ತಂಡವನ್ನು ವಿಜಯಿ ಎಂದು ಘೋಷಿಸಿದರು.

ಭಾರತದ ಭರ್ಜರಿ ಬ್ಯಾಟಿಂಗ್

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಪರ ವೈಭವ್ 44 ರನ್ ಗಳಿಸಿದರೆ, ಪ್ರಿಯಾಂಶ್ ಆರ್ಯ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪ್ರಭ್ಸಿಮ್ರಾನ್ ಸಿಂಗ್ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿ 84 ರನ್​ಗಳ ಇನ್ನಿಂಗ್ಸ್ ಆಡಿದರು. ಅದ್ಭುತ ಫಾರ್ಮ್​ನಲ್ಲಿರುವ ರುತುರಾಜ್ ಗೈಕ್ವಾಡ್ 65 ಎಸೆತಗಳಲ್ಲಿ ಅರ್ಧಶತಕ ಗಳಿಸಿ 66 ರನ್ ಗಳಿಸಿ ಔಟಾದರು. ಆದರೆ ಆಯುಷ್ ಬದೋನಿ ತಮ್ಮ ಖಾತೆ ತೆರೆಯಲೂ ವಿಫಲರಾದರು. ನಾಯಕ ತಿಲಕ್ ವರ್ಮಾ 60 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 66 ರನ್ ಗಳಿಸಿ ಔಟಾದರೆ, ವಿಪ್ರಜ್ ನಿಗಮ್ 8 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಇತ್ತ ಅಫ್ಘಾನಿಸ್ತಾನ ಪರ ಅಬ್ದುಲ್ಲಾ ಅಹ್ಮದ್‌ಜೈ 5 ವಿಕೆಟ್‌ಗಳ ಗೊಂಚಲು ಪಡೆದರು.

ಅಫ್ಘನ್ ತಂಡದಿಂದಲೂ ತಕ್ಕ ಹೋರಾಟ

ಮೇಲೆ ಹೇಳಿದಂತೆ ಮಳೆಯಿಂದಾಗಿ ಅಫ್ಘನ್ ತಂಡಕ್ಕೆ 38 ಓವರ್​ಗಳಲ್ಲಿ 294 ರನ್​ಗಳ ಗುರಿ ನಿಗಧಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ‘ಎ’ ಪರ ನಾಯಕ ಇಮ್ರಾನ್ ಮಿರ್ ಅಜೇಯ 75 ರನ್ ಗಳಿಸಿದರೆ, ಬಹೀರ್ ಶಾ ಅಜೇಯ 51 ರನ್ ಬಾರಿಸಿದರು. ಹಸನ್ ಇಸಾಖಿಲ್ 29 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಅಫ್ಘಾನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಂತಿಮವಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರಿಂದ ಡಿಎಲ್ಎಸ್ ವಿಧಾನದ ಮೂಲಕ ಅಫ್ಘನ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇತ್ತ ಭಾರತ ಎ ಪರ ಅರ್ಷದ್ ಖಾನ್ ಮತ್ತು ಅನುಕುಲ್ ರಾಯ್ ಮೊದಲ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೈಡರ್ ಮ್ಯಾನ್ ಹೊಸ ಸಿನಿಮಾ ಬಿಡುಗಡೆ, ಭಾರತದಲ್ಲೇ ಮೊದಲು – Kannada News

ಭಾರತದ ‘ಸ್ಪೈಡರ್ ಮ್ಯಾನ್’ (Spider Man) ಅಭಿಮಾನಿಗಳಿಗೆ ಖುಷಿ ಸುದ್ದಿ, ಹೊಸ ಸ್ಪೈಡರ್ ಮ್ಯಾನ್ ಸಿನಿಮಾ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಭಾರತದಲ್ಲಿ ಮಾತ್ರ, ಒಂದು ದಿನ ಮುಂಚಿತವಾಗಿ ಬಿಡುಗಡೆ ಆಗಲಿದ್ದು, ವಿಶ್ವದಲ್ಲಿ ಎಲ್ಲರಿಗಿಂತಲೂ ಮೊದಲು ಭಾರತೀಯ ಅಭಿಮಾನಿಗಳು ಸಿನಿಮಾವನ್ನು ನೋಡಬಹುದಾಗಿದೆ. ಭಾರತದಲ್ಲಿ ಬಿಡುಗಡೆ ಆದ ಒಂದು ದಿನದ ಬಳಿಕ ವಿಶ್ವದಾದ್ಯಂತ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

‘ಸ್ಪೈಡರ್ ಮ್ಯಾನ್’ ಹೊಸ ಸಿನಿಮಾ ವಿಶ್ವದಾದ್ಯಂತ ಜುಲೈ 31 ರಂದು ಬಿಡುಗಡೆ ಆಗಲಿದೆ. ಆದರೆ ಭಾರತದಲ್ಲಿ ಈ ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 30ರಂದೇ ಬಿಡುಗಡೆ ಆಗಲಿದೆ. ಭಾರತದಲ್ಲಿ ಇಂಗ್ಲೀಷ್ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವನ್ಸ್ ಬುಕಿಂಗ್ ಭಾರತದಲ್ಲಿ ಜುಲೈ 17ರಿಂದ ಆರಂಭವಾಗಲಿದೆ.

ಆದರೆ ಯುನೈಟೆಡ್ ಸ್ಟೇಟ್ಸ್‌ನ ಅಮೆಜಾನ್ ಪ್ರೈಮ್ ಸದಸ್ಯರು ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರವನ್ನು ವೀಕ್ಷಿಸುವ ವಿಶೇಷ ಅವಕಾಶವನ್ನು ಪಡೆಯಲಿದ್ದಾರೆ. ವಿಶೇಷ ಅರ್ಲಿ-ಆಕ್ಸೆಸ್ ಸ್ಕ್ರೀನಿಂಗ್ ಕಾರ್ಯಕ್ರಮದ ಮೂಲಕ, ಪ್ರೈಮ್ ಸದಸ್ಯರು ಜುಲೈ 29ರಂದು ದೇಶಾದ್ಯಂತದ ಆಯ್ದ ಚಿತ್ರಮಂದಿರಗಳಲ್ಲಿ ಈ ಬಹುನಿರೀಕ್ಷಿತ ಸೂಪರ್‌ಹೀರೋ ಚಿತ್ರವನ್ನು ವೀಕ್ಷಿಸಬಹುದು. ಇದು ಯುಎಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುವ ಎರಡು ದಿನಗಳ ಮೊದಲೇ ದೊರಕುವ ಸೌಲಭ್ಯವಾಗಿದೆ.

ಇದನ್ನೂ ಓದಿ:ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ

‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ (2021)ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಅಂತ್ಯದಲ್ಲಿ ಸ್ಪೈಡರ್​ಮ್ಯಾನ್ ಆಪ್ತ ಗೆಳೆಯರ ಸ್ಪೈಡರ್ ಮ್ಯಾನ್ ಇರುವುದನ್ನೇ ಮರೆತು ಹೋಗಿದ್ದಾರೆ. ಈಗ ಗೆಳೆಯರಿಲ್ಲದೆ, ಆಪ್ತರಿಲ್ಲದೆ ಸ್ಪೈಡರ್​​ಮ್ಯಾನ್ ಜೀವನ ಹೇಗಿರಲಿದೆ, ಈಗ ಸ್ಪೈಡರ್​ ಮ್ಯಾನ್​​ಗೆ ಹೊಸ ಕಂಟಕ ಏನು ಎದುರಾಗಲಿದೆ. ಅವುಗಳಿಂದ ಸ್ಪೈಡರ್​​ಮ್ಯಾನ್ ಹೇಗೆ ಪಾರಾಗಲಿದ್ದಾನೆ ಎಂಬುದು ಸಿನಿಮಾದ ಕತೆ ಆಗಿರಲಿದೆ. ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿದೆ. ಒಂದು ಬಿಲಿಯನ್​​ಗೂ ಅಧಿಕ ವೀಕ್ಷಣೆಗಳನ್ನು ಯೂಟ್ಯೂಬ್​​ನಲ್ಲಿ ಅದು ಪಡೆದುಕೊಂಡಿದೆ.

ಐದು ವರ್ಷಗಳ ನಂತರ ಟಾಮ್ ಹಾಲೆಂಡ್ ಅವರು ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಮೂಲಕ ಸೋಲೋ ಸ್ಪೈಡರ್-ಮ್ಯಾನ್ ಸಿನಿಮಾ ಮೂಲಕ ಮರಳುತ್ತಿದ್ದಾರೆ. ವಿಶೇಷವೆಂದರೆ ಇದೇ ತಿಂಗಳು ಅವರ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಸಿನಿಮಾ ಬಿಡುಗಡೆ ಆದ ಒಂದು ತಿಂಗಳ ಬಳಿಕ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Thu, 11 June 26

Source link

‘ಸೌಂದರ್ಯ’ ಸಿನಿಮಾ ಬಾಲನಟಿ ನೆನಪಿದ್ದಾರಾ? ಈಗ ಹೇಗಿದ್ದಾರೆ ನೋಡಿ? – Kannada News

ಬಾಲನಟ-ಬಾಲನಟಿಯಾಗಿ ಚಿತ್ರರಂಗಕ್ಕೆ (Movie) ಎಂಟ್ರಿ ಕೊಟ್ಟ ಹಲವರು ಆ ನಂತರ ನಾಯಕರಾಗಿಯೋ, ನಾಯಕಿಯರಾಗಿಯೋ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ಹೆಚ್ಚು. ಈಗ ಚಾಲ್ತಿಯಲ್ಲಿರುವ ಹಲವು ನಟ-ನಟಿಯರು ಖುದ್ದು ಬಾಲನಟ-ನಟಿಯಾಗಿ ಎಂಟ್ರಿ ಕೊಟ್ಟಿದ್ದವರೇ. ಆದರೆ ಕೆಲವರು ಮಾತ್ರ ಬಾಲನಟರಾಗಿ ಮಿಂಚಿ ಆ ನಂತರ ಮರೆ ಆಗಿದ್ದಾರೆ. ಅವರಲ್ಲಿ ಶ್ರಿಯಾ ಶರ್ಮಾ ಸಹ ಒಬ್ಬರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ರಿಯಾ ಶರ್ಮಾ, ಈಗ ಚಿತ್ರರಂಗದಿಂದ ದೂರ ಉಳಿದಿದ್ದಾ. ಅಂದಹಾಗೆ ಅವರು ಈಗ ಏನು ಮಾಡುತ್ತಿದ್ದಾರೆ? ಈಗ ಹೇಗೆ ಕಾಣುತ್ತಾರೆ? ಇಲ್ಲಿದೆ ಮಾಹಿತಿ…

2005 ರಲ್ಲಿ ಬಿಡುಗಡೆ ಆದ ತೆಲುಗಿನ ಹಿಟ್ ಸಿನಿಮಾ ‘ಜೈ ಚಿರಂಜೀವ’ ನಲ್ಲಿ ಚಿರಂಜೀವಿ ಅವರ ಸಹೋದರಿಯ ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದ ಶ್ರಿಯಾ ಶರ್ಮಾ, ತಮ್ಮ ಮುದ್ದಾದ ಮುಖ ಹಾಗೂ ಚುರುಕು ನಟನೆಯಿಂದ ಬಲು ಬೇಗನೆ ದೊಡ್ಡ ಜನಪ್ರಿಯತೆ ಗಳಿಸಿದರು. ಆ ಸಮಯದಲ್ಲಿ ಬಿಡುಗಡೆ ಆದ ಹಲವಾರು ಸಿನಿಮಾಗಳಲ್ಲಿ ಶ್ರಿಯಾ ಬಾಲನಟಿಯಾಗಿ ನಟಿಸಿದರು. ಕನ್ನಡದಲ್ಲಿ ರಮೇಶ್ ಅರವಿಂದ್ ನಟಿಸಿದ್ದ 2007 ರಲ್ಲಿ ಬಿಡುಗಡೆ ಆದ ‘ಸೌಂದರ್ಯ’ ಸಿನಿಮಾನಲ್ಲಿ, ರಮೇಶ್ ಅವರ ಪುತ್ರಿಯ ಪಾತ್ರದಲ್ಲಿ ಶ್ರಿಯಾ ನಟಿಸಿದ್ದರು. ರಜನೀಕಾಂತ್ ನಟನೆಯ ‘ರೋಬೊ’, ‘ಮಗಧೀರ’, ‘ಊಸರವಳ್ಳಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳು, ತೆಲುಗು, ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ಶ್ರಿಯಾ ಮಿಂಚಿದ್ದರು. ಸುಮಾರು 150ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಸಹ ನಟಿಸಿದ್ದರು.

ಆದರೆ ಈಗ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. 2012 ರ ವರೆಗೆ ಬಾಲನಟಿಯಾಗಿ ನಟಿಸಿದ ಶ್ರಿಯಾ, ಆ ಬಳಿಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿಯೂ ಎಂಟ್ರಿ ಕೊಟ್ಟರು. 2015 ರಲ್ಲಿ ‘ಗಾಯಕುಡು’ ಸಿನಿಮಾನಲ್ಲಿ ನಾಯಕಿಯಾದರು. ಬಳಿಕ ಹಿಂದಿಯ ‘ಬಿಲ್ಲು ಗೇಮರ್’ ಸಿನಿಮಾನಲ್ಲೂ ನಾಯಕಿ. 2016ರಲ್ಲಿ ಬಂದ ತೆಲುಗಿನ ‘ನಿರ್ಮಲಾ ಕಾನ್ವೆಂಟ್’ ಸಿನಿಮಾನಲ್ಲೂ ನಾಯಕಿ ಆದರು. ಆದರೆ ಅವರಿಗೆ ನಾಯಕಿಯಾಗಿ ಯಶಸ್ಸು ಸಿಗಲಿಲ್ಲ.

ಶ್ರಿಯಾ ಶರ್ಮಾ ಈಗ ವಕೀಲೆ ಆಗಿದ್ದಾರೆ. ಅದ್ಭುತ ಬಾಲನಟಿಯಾಗಿದ್ದ ಶ್ರಿಯಾ ಶರ್ಮಾ ಒಳ್ಳೆಯ ವಿದ್ಯಾರ್ಥಿ ಸಹ ಆಗಿದ್ದರು. ಕಾನೂನು ಪದವಿ ಪೂರೈಸಿ ವಕೀಲೆಯಾಗಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ಅಡ್ವೊಕೇಟ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದು, ಕಾರ್ಪೊರೇಟ್ ಕಾನೂನು ಕ್ಷೇತ್ರದಲ್ಲಿ ಲಾಯರ್ ಆಗಿ ನೆಲೆಸಿದ್ದಾರೆ.

ಸಿನಿಮಾಗಳಿಂದ ದೂರವಾದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ತಮ್ಮ ಸುಂದರ ಚಿತ್ರಗಳನ್ನು ಶ್ರಿಯಾ ಶರ್ಮಾ ಹಂಚಿಕೊಳ್ಳುತ್ತಲೇ ಇರುತ್ತಾರೆ. ಬಾಲನಟಿಯಾಗಿ ರಂಜಿಸಿದ್ದ ಆ ಪುಟ್ಟ ಬಾಲಕಿ, ಈಗ ಒಬ್ಬ ಜವಾಬ್ದಾರಿಯುತ ಲಾಯರ್ ಆಗಿ ಬದಲಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Thu, 11 June 26

Source link

ಹಾಲು ಹಾಕಿದ ಚಹಾ ಕುಡಿದರೆ ಅಸಿಡಿಟಿ ಆಗುತ್ತಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ ಪಾಲಿಸಿ ನೋಡಿ – Kannada News

ಇತ್ತೀಚಿನ ದಿನಗಳಲ್ಲಿ ಗ್ಯಾಸ್ (Gas Problem), ಅಸಿಡಿಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಅದರಲ್ಲಿಯೂ ಕೆಲವರಿಗೆ ಹಾಲು ಹಾಕಿದ ಚಹಾ ಕುಡಿದ ಕೆಲವೇ ಸಮಯದಲ್ಲಿ ಹೊಟ್ಟೆ ಉಬ್ಬರ, ಎದೆ ಉರಿ, ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದಿನವನ್ನು ಚಹಾದಿಂದಲೇ ಆರಂಭಿಸುವವರ ಸಂಖ್ಯೆ ಹೆಚ್ಚಾದರೂ, ಕುಡಿಯಬಾರದ ಸಮಯದಲ್ಲಿ ಅಥವಾ ಸರಿಯಾದ ರೀತಿಯಲ್ಲಿ ಚಹಾ ಸೇವಿಸದಿರುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಹಾಲಿನ ಚಹಾ ಮತ್ತು ಅಸಿಡಿಟಿಗಿರುವ ಸಂಬಂಧವೇನು, ಈ ರೀತಿ ಸಮಸ್ಯೆಯನ್ನು ತಪ್ಪಿಸಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲಿನ ಚಹಾ ಮತ್ತು ಅಸಿಡಿಟಿಗಿರುವ ಸಂಬಂಧ:

ತಜ್ಞರ ಪ್ರಕಾರ, ಕೆಲವರಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ ಎಂಬ ಅಂಶ ಸರಿಯಾಗಿ ಜೀರ್ಣವಾಗುವುದಿಲ್ಲ. ದೇಹದಲ್ಲಿ ಲ್ಯಾಕ್ಟೇಸ್‌ ಎಂಬ ಎನ್ಜೈಮ್‌ ಕಡಿಮೆಯಿದ್ದರೆ ಹಾಲು ಜೀರ್ಣಿಸಲು ಕಷ್ಟವಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್‌, ಆಸಿಡಿಟಿ ಮತ್ತು ಕೆಲವೊಮ್ಮೆ ಅತಿಸಾರವೂ ಕಾಣಿಸಬಹುದು. ಅದರಲ್ಲಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಹಲವರಲ್ಲಿದೆ. ಆದರೆ ಚಹಾದಲ್ಲಿರುವ ಕ್ಯಾಫಿನ್‌ ಹೊಟ್ಟೆಯಲ್ಲಿ ಹೆಚ್ಚುವರಿ ಆಸಿಡ್‌ ಉತ್ಪತ್ತಿ ಮಾಡಬಹುದು. ಇದರಿಂದ ಎದೆ ಉರಿ, ಹುಳಿ ತೇಗು ಹಾಗೂ ಆಸಿಡ್‌ ರಿಫ್ಲಕ್ಸ್‌ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ದಿನದಲ್ಲಿ ಹಲವಾರು ಬಾರಿ ಚಹಾ ಕುಡಿಯುವವರಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರಬಹುದು.

ಚಹಾ ಕುಡಿಯುವ ಸಮಯವೂ ಮುಖ್ಯ:

ಸಾಮಾನ್ಯವಾಗಿ ಯಾವ ಸಮಯದಲ್ಲಿ ಚಹಾ ಕುಡಿಯುತ್ತೇವೆ ಎಂಬುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಹೆಚ್ಚು ಗಟ್ಟಿಯಾಗಿರುವ ಹಾಲಿನಿಂದ ಮಾಡಿದ ಚಹಾ ಅಥವಾ ಸಂಜೆ ತಡವಾಗಿ ಚಹಾ ಸೇವಿಸುವುದರಿಂದ ಕೆಲವರಿಗೆ ಅಜೀರ್ಣ ಸಮಸ್ಯೆ ಕಾಣಿಸಬಹುದು. ಆದ್ದರಿಂದ ಮಿತ ಪ್ರಮಾಣದಲ್ಲಿ ಮಾತ್ರ ಚಹಾ ಸೇವಿಸುವುದು ಉತ್ತಮ.

ಇದನ್ನೂ ಓದಿ: ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು!

ಅಸಿಡಿಟಿಗೆ ಕಾರಣವಾಗುವ ಇತರ ಅಭ್ಯಾಸಗಳು:

ತೈಲಯುಕ್ತ ಆಹಾರ, ಜಂಕ್‌ ಫುಡ್‌, ಮೈದಾ ಪದಾರ್ಥಗಳು ಹಾಗೂ ದೈಹಿಕ ಚಟುವಟಿಕೆ ಕೊರತೆ ಜೀರ್ಣಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಸರಿಯಾದ ವ್ಯಾಯಾಮ ಇಲ್ಲದಿದ್ದರೆ ಮೆಟಾಬಾಲಿಸಂ ನಿಧಾನವಾಗಿ ಅಸಿಡಿಟಿ ಸಮಸ್ಯೆ ಹೆಚ್ಚಾಗಬಹುದು. ದಿನಕ್ಕೆ ಕನಿಷ್ಠ 30 ನಿಮಿಷ ವಾಕಿಂಗ್ ಅಥವಾ ವ್ಯಾಯಾಮ ಮಾಡುವುದು ಅಗತ್ಯ.

ಗ್ಯಾಸ್ ಮತ್ತು ಅಸಿಡಿಟಿ ತಪ್ಪಿಸಲು ಏನು ಮಾಡಬೇಕು?

  • ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ
  • ದಿನಕ್ಕೆ 2–3 ಕಪ್‌ಗಿಂತ ಹೆಚ್ಚು ಚಹಾ ಸೇವಿಸಬೇಡಿ
  • ಚಹಾ ಜೊತೆ ಹಗುರವಾದ ಆಹಾರ ಸೇವಿಸಿ
  • ಹೆಚ್ಚು ನೀರು ಕುಡಿಯಿರಿ
  • ಜಂಕ್‌ ಫುಡ್‌ ಮತ್ತು ಎಣ್ಣೆ ಪದಾರ್ಥಗಳನ್ನು ಕಡಿಮೆ ಮಾಡಿ
  • ನಿಯಮಿತ ವ್ಯಾಯಾಮ ಮತ್ತು ಸರಿಯಾಗಿ ನಿದ್ರೆ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:30 pm, Thu, 11 June 26

Source link

ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ತಿನ್ನಿ ಈ ಗಿಡದ ಎಲೆ – Kannada News

ಗಿಡಮೂಲಿಕೆಗಳ ರಾಣಿ ಎಂದೇ ಕರೆಯಲ್ಪಡುವ ತುಳಸಿ (Tulsi) ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಸ್ಯಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿರುವುದರಿಂದ ಮನೆಗಳಲ್ಲಿ ಈ ಪವಿತ್ರ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ಧಾರ್ಮಿಕ ಮಹತ್ವವನ್ನು ಪಡೆದಿರುವ ತುಳಸಿ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿದೆ. ತುಳಸಿ ಎಲೆಯಲ್ಲಿ ವಿಟಮಿನ್‌ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೇಸಿಯಂ, ರಂಜಕ, ಕಬ್ಬಿಣದಂತಹ ಹಲವಾರು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳಿದ್ದು, ಪ್ರತಿನಿತ್ಯ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಸಾಕಷ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ದರೆ ತುಳಸಿ ಎಲೆಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.

ತುಳಸಿ ಎಲೆಯ ಸೇವನೆಯಿಂದ ಲಭಿಸುವ  ಪ್ರಯೋಜನಗಳೇನು?

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತುಳಸಿ ಎಲೆಗಳು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ, ಇದು ಶೀತ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಒತ್ತಡವನ್ನು ನಿವಾರಿಸುತ್ತದೆ: ತುಳಸಿ ಎಲೆಗಳು ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಒತ್ತಡದ ಹಾರ್ಮೋನ್ ‘ಕಾರ್ಟಿಸೋಲ್’ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ, ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿಯುವುದರಿಂದ ದೇಹದಲ್ಲಿನ ಒತ್ತಡದ ಮಟ್ಟ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಇದಲ್ಲದೆ ತುಳಸಿ ಚಹಾವನ್ನು ಕೂಡ ಸೇವಿಸಬಹುದು. ತುಳಸಿಯು ಆತಂಕ, ಚಿಂತೆ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ ,ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಎಲೆಗಳು ನೈಸರ್ಗಿಕ ಉರಿಯೂತ ನಿವಾರಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿವೆ, ಇದು ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಾಮಾನ್ಯವಾಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ. ತುಳಸಿ ಎಲೆಯ ನಿಯಮಿತ ಸೇವನೆಯು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ. ಈ ಎಲೆಗಳು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಹೃದಯಕ್ಕೂ ತುಂಬಾ ಪ್ರಯೋಜನಕಾರಿ. ತುಳಸಿ ಎಲೆಗಳು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಗಿಡಗಳನ್ನಿಡಿ

ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ: ತುಳಸಿ ಗಿಡ ಇರುವ ಸ್ಥಳವು ಶಾಂತಿ ಮತ್ತು ಸಕಾರಾತ್ಮಕ ಕಂಪನಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನಸ್ಸಿಗೆ ಒಂದು ರೀತಿಯ ಶಾಂತಿ ಲಭಿಸುತ್ತದೆ, ಸಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ.

ಗಾಳಿಯನ್ನು ಶುದ್ಧೀಕರಿಸುತ್ತದೆ: ತುಳಸಿ ದಿನದ 24 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ, ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಈ ಗಿಡದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ತುಳಸಿ ಎಲೆಗಳನ್ನು ಯಾವಾಗ ತಿನ್ನಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.
  • ನೀವು ತುಳಸಿ ಎಲೆಯ ಚಹಾ ಅಥವಾ ರಸವನ್ನು ಸಹ ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ‘ಪೊಲೀಸ್ ಕಂಪ್ಲೈಂಟ್’ ಜೂನ್ 12ಕ್ಕೆ ಬಿಡುಗಡೆ – Kannada News

ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾಗಳಿಗೆ ಅದರದ್ದೇ ಆದ ಪ್ರೇಕ್ಷಕರ ವರ್ಗವಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಅಂಥ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಮತ್ತು ವರಲಕ್ಷ್ಮೀ ಶರತ್ ಕುಮಾರ್ ಅಭಿನಯಿಸಿರುವ ಮಹಿಳಾ ಪ್ರಧಾನ ಸಿನಿಮಾ ‘ಪೊಲೀಸ್ ಕಂಪ್ಲೈಂಟ್’ ಬಿಡುಗಡೆಗೆ ಸಜ್ಜಾಗಿದೆ. ಜೂನ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ. ನವೀನ್ ಚಂದ್ರ, ಕೃಷ್ಣ ಸಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದವರು ‘ಪೊಲೀಸ್ ಕಂಪ್ಲೈಂಟ್’ (Police Complaint) ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಸಂಜೀವ ಮೆಗೋಟಿ ಅವರು ‘ಪೊಲೀಸ್ ಕಂಪ್ಲೈಂಟ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಪೂಜಾ ಗಾಂಧಿ ನಟನೆಯ ‘ಅನು’, ‘ದಂಡು’, ‘ಆಪ್ತ’, ‘ಆದಿ ಪರ್ವ’ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ‘ಎಂ.ಎಸ್.ಕೆ. ಪ್ರಮೀದಾಶ್ರೀ ಫಿಲ್ಮ್ಸ್’ ಮೂಲಕ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ನಿರ್ಮಾಣ ಆಗಿದೆ. ತೆಲುಗಿನಲ್ಲಿ ಹಲವು ಸಿನಿಮಾ ಮಾಡಿರುವ ನಟ ಕೃಷ್ಣಸಾಯಿ ಅವರಿಗೆ ಕನ್ನಡದಲ್ಲಿ ನಾಯಕ ನಟನಾಗಿ ಇದು ಮೊದಲ ಸಿನಿಮಾ.

‘ಪೊಲೀಸ್ ಕಂಪ್ಲೈಂಟ್’ ಸಿನಿಮಾದ ಬಗ್ಗೆ ನಿರ್ದೇಶಕ ಸಂಜೀವ ಮೆಗೋಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸುಮಾರು 10 ವರ್ಷದ ನಂತರ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್, ಹಾರರ್-ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಹೇಳಿದರು.

ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಇದು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಇದರಲ್ಲಿ ಮನಮುಟ್ಟುವ ಕಥೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೂಡ ಇದೆ. ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲ ರೀತಿಯ ಮನರಂಜನೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ

ನಟಿ ರಾಗಿಣಿ ದ್ವಿವೇದಿ ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಪೊಲೀಸ್ ಕಂಪ್ಲೈಂಟ್ ಒಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಹಾಗೂ ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಸಹ ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ರಾಗಿಣಿ ದ್ವಿವೇದಿ ಅವರು ಹೇಳಿದರು. ಆರೋಹಣ ಸುಧೀಂದ್ರ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹರೀಶ್ ಸೊಂಡೇಕೊಪ್ಪ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link