Category Archives: Blog

Your blog category

ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್, 21 ಮಂದಿ ರಕ್ಷಣೆ, 3 ಭಾರತೀಯರು ಇನ್ನೂ ನಾಪತ್ತೆ – Kannada News

ಒಮಾನ್, ಜೂನ್ 11: ಒಮಾನ್​ನಲ್ಲಿ ಭಾರತದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ.  24 ಮಂದಿ ಭಾರತೀಯರ ಪೈಕಿ, 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ರಾಸಾಯನಿಕ ಮತ್ತು ತೈಲ ಉತ್ಪನ್ನಗಳ ಟ್ಯಾಂಕರ್ ಸೆಟ್ಟೆಬೆಲ್ಲೊ ಒಮಾನಿ ಕರಾವಳಿಯಲ್ಲಿ ಡಿಕ್ಕಿ ಹೊಡೆದಿದ್ದು, ಇದು ಅಮೆರಿಕದ ಕ್ಷಿಪಣಿ ದಾಳಿ ಎಂದು ಹೇಳಲಾಗುತ್ತಿದೆ. ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚು ಅಪಾಯಕಾರಿಯಾಗುತ್ತಿವೆ ಎಂದು ಭಾರತ ಎಚ್ಚರಿಸಿದೆ. ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ತುರ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಕರೆ ನೀಡಿದೆ. ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.

Video Source: Forward Seamen’s Union of India

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:06 am, Thu, 11 June 26

Source link

ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ: ಬಯೋಮೆಟ್ರಿಕ್ ದೃಢೀಕರಣದ ಜೊತೆ ಈ ಎಲ್ಲ ದಾಖಲೆ ಕಡ್ಡಾಯ

ಬೆಂಗಳೂರು, ಜೂನ್​​ 11: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಹೊಸ ನಿಯಮಾವಳಿಗಳು ಜಾರಿಯಾಗುತ್ತಿವೆ. ಯೋಜನೆಯ ಫಲಾನುಭವಿಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ಒಂದು ತಿಂಗಳೊಳಗೆ ಬಯೋಮೆಟ್ರಿಕ್ ದೃಢೀಕರಣ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಪಾಲಿಸದಿದ್ದರೆ ಫಲಾನುಭವಿಗಳ ಖಾತೆಗೆ 2,000 ರೂಪಾಯಿ ಹಣ ಜಮಾವಣೆ ನಿಲ್ಲಲಿದೆ. ಬಯೋಮೆಟ್ರಿಕ್ ದೃಢೀಕರಣವನ್ನು ಬೆಂಗಳೂರು ಒನ್, ಗ್ರಾಮ ಒನ್, ಸೇವಾ ಕೇಂದ್ರ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಸಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಮತ್ತು ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ – Kannada News

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಫೈನಲ್ ರೇಸ್ ಅತ್ಯಂತ ರೋಚಕ ಘಟ್ಟಕ್ಕೆ ತಲುಪಿದೆ. ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ, ಈ ಬಾರಿ ಲಾರ್ಡ್ಸ್ ಮೈದಾನಕ್ಕೆ ಲಗ್ಗೆ ಇಡಬೇಕಾದರೆ ಅಸಾಧ್ಯವೆನಿಸುವ ಹಾದಿಯನ್ನು ಕ್ರಮಿಸಬೇಕಿದೆ. ಸದ್ಯದ ಅಂಕಪಟ್ಟಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಶುಭ್​ಮನ್ ಗಿಲ್​ ಪಡೆಗೆ ಮುಂದಿನ ಪ್ರತಿಯೊಂದು ಪಂದ್ಯವೂ ‘ಮಾಡೋ ಇಲ್ಲವೇ ಮಡಿ’ ಎಂಬಂತಾಗಿದೆ. ಹಾಗಾದರೆ ಭಾರತ ತಂಡ ಫೈನಲ್ ತಲುಪಲು ಇರುವ ಲೆಕ್ಕಾಚಾರಗಳೇನು? ಮುಂದಿರುವ ಕಠಿಣ ಸವಾಲುಗಳೇನು? ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಸವಾಲುಗಳು:

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.

  • ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.

ಟೀಮ್ ಇಂಡಿಯಾ ಲೆಕ್ಕಾಚಾರ:

WTC ನಿಯಮಾವಳಿಗಳ ಪ್ರಕಾರ ಫೈನಲ್ ತಲುಪಲು ತಂಡಗಳು ಕನಿಷ್ಠ ಶೇಕಡಾ 60 ರಿಂದ 65 ರಷ್ಟು ಶೇಕಡಾವಾರು ಅಂಕಗಳನ್ನು (PCT) ಹೊಂದಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮುಖ್ಯವಾಗಿ ಎರಡು ಆಯ್ಕೆಗಳಿವೆ:

  • ಆಯ್ಕೆ 1: ಉಳಿದಿರುವ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 68.52 ಶೇಕಡಾವಾರು ಅಂಕಗಳನ್ನು ಪಡೆಯುವುದು.
  • ಆಯ್ಕೆ 2: 6 ಗೆಲುವು ಮತ್ತು 2 ಡ್ರಾ  ಸಾಧಿಸಿ 62.96 ಶೇಕಡಾವಾರು ಅಂಕಗಳನ್ನು ಪಡೆಯುವುದು.

ಟೀಮ್ ಇಂಡಿಯಾ ಮುಮದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಇದಕ್ಕಾಗಿ ಟೀಮ್ ಇಂಡಿಯಾ ಏನು ಮಾಡಬೇಕೆಂಬುದರ ವಿಶ್ಲೇಷಣೆ ಈ ಕೆಳಗಿನಂತಿದೆ..

 ಕ್ಲೀನ್ ಸ್ವೀಪ್ ಪ್ಲ್ಯಾನ್:

ಆಗಸ್ಟ್ 2026 ರಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತ ಎಲ್ಲಾ 4 ಪಂದ್ಯಗಳನ್ನು ಗೆಲ್ಲಲೇಬೇಕು. ನ್ಯೂಝಿಲೆಂಡ್ ಮಣ್ಣಿನಲ್ಲಿ ಭಾರತದ ಹಿಂದಿನ ದಾಖಲೆ ಕಳಪೆಯಾಗಿದ್ದರೂ, ಈ ಬಾರಿ ಅಲ್ಲಿ ಗೆಲುವು ಅನಿವಾರ್ಯವಾಗಿದೆ. ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ವಿರುದ್ಧ ತಲಾ 2 ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಬಹುದು.

ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ:

ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ಭಾರತದ ಪಾಲಿಗೆ ಆಸ್ಟ್ರೇಲಿಯಾ ಸರಣಿ ನಿರ್ಣಾಯಕವಾಗಲಿದೆ. ಆದರೆ ಈ ಸರಣಿಯು ಭಾರತದಲ್ಲಿ ನಡೆಯಲಿರುವುದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್.

ಈ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 4 ಮ್ಯಾಚ್ ಗೆದ್ದರೆ ಫೈನಲ್​ ಆಡುವುದು ಖಚಿತವಾಗಲಿದೆ. ಒಂದು ವೇಳೆ 3 ಪಂದ್ಯಗಳಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದರೂ ಫೈನಲ್​ಗೇರಲು ಅವಕಾಶ ಸೃಷ್ಟಿಯಾಗಲಿದೆ.

 ಟೀಮ್ ಇಂಡಿಯಾ ಸೋತರೆ?

ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬೇಕಿದ್ದರೆ ಸೋಲಿನಿಂದ ದೂರವೇ ಉಳಿಯಬೇಕು. ಒಂದು ವೇಳೆ ಮುಂದಿನ ಸರಣಿಗಳಲ್ಲಿ ಭಾರತ ತಂಡವು ಒಂದೆರಡು ಪಂದ್ಯಗಳಲ್ಲಿ ಸೋತರೆ WTC ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕು. ಆಗ ಮಾತ್ರ ಭಾರತಕ್ಕೆ ಫೈನಲ್​ ರೇಸ್‌ನಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ.

ಇದನ್ನೂ ಓದಿ: IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್

ಹೀಗಾಗಿಯೇ ಟೀಮ್ ಇಂಡಿಯಾ ಪಾಲಿಗೆ ಮುಂಬರುವ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಲಿದೆಯಾ ಕಾದು ನೋಡಬೇಕಿದೆ.

Published On – 9:53 am, Thu, 11 June 26

Source link

ಚಡಚಣ ಬ್ಯಾಂಕ್ ದರೋಡೆಯಾಗಿ 9 ತಿಂಗಳಾದರೂ ಸಿಗದ ಚಿನ್ನ: ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ – Kannada News

ವಿಜಯಪುರ, ಜೂನ್ 11: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಯಲ್ಲಿ 2025 ರ ಸೆಪ್ಟೆಂಬರ್ 16 ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ತಮಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡೀ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಂಟ್ರಿ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ಅಂದು ಬರೋಬ್ಬರಿ 1.50 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು 9 ತಿಂಗಳು ಕಳೆದರೂ ಲಾಕರ್‌ನಲ್ಲಿಟ್ಟಿದ್ದ ಹಾಗೂ ಸಾಲಕ್ಕಾಗಿ ಅಡವಿಟ್ಟಿದ್ದ ತಮ್ಮ ಚಿನ್ನದ ಒಡವೆಗಳು ವಾಪಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್‌ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂನ್ 10 ಕಳೆದರೂ ಬ್ಯಾಂಕ್‌ನಿಂದ ಯಾವುದೇ ಪರಿಹಾರ ಸಿಗದ ಕಾರಣ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನಾಕಾರರು ತಡರಾತ್ರಿ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ದರೋಡೆಕೋರರಿಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರಿಂದ 6.5 ಕೆಜಿ ಚಿನ್ನ ಹಾಗೂ 41 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ತಲೆಮರೆಸಿಕೊಂಡಿರುವ ಪ್ರಮುಖ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ನಟ ದರ್ಶನ್ ಮೌನ; ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ – Kannada News

ಬೆಂಗಳೂರು ಜೂನ್ 11: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಒಂದು ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೈತಪ್ಪಿದ ಬಳಿಕ ನಟ ದರ್ಶನ್ ಅವರು (Darshan) ಜೈಲಿನಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರೆ, ಇತ್ತ ಎ1 ಆರೋಪಿ ಪವಿತ್ರಾ ಗೌಡ ಅವರು ಕಂಬಿ ಎಣಿಸುತ್ತಲೇ ತಮ್ಮ ಆತ್ಮಚರಿತ್ರೆ ಬರೆಯುವಲ್ಲಿ ಮಗ್ನರಾಗಿದ್ದಾರೆ. ಇಬ್ಬರು ಆರೋಪಿಗಳ ದಿನಚರಿ ಈಗ ಜೈಲಿನಲ್ಲಿ ಸಂಪೂರ್ಣ ವಿಭಿನ್ನವಾಗಿದೆ.

ಜಾಮೀನು ಸಿಗದೇ ದಾಸ ಫುಲ್ ಸೈಲೆಂಟ್:

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ದರ್ಶನ್ ಸುಪ್ರೀಂಕೋರ್ಟ್​​ನಲ್ಲಿ ಜಾಮೀನು ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್ ಇದಕ್ಕೆ ನಿರಾಕರಿಸಿದೆ. ಒಂದು ವರ್ಷದ ಒಳಗೆ ಪ್ರಮುಖ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಲು ಕೆಳ ಹಂತದ ನ್ಯಾಯಾಲಯಕ್ಕೆ ಗಡುವು ನೀಡಿದೆ. ಒಂದೊಮ್ಮೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳದೆ ಇದ್ದರೆ, ಆ ಬಳಿಕ ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಬದಲಾಗಲಿದ್ದಾರೆ ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಜಡ್ಜ್; ಕಾರಣ ಇಲ್ಲಿದೆ

ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ತೀವ್ರ ನಿರಾಶರಾಗಿದ್ದಾರೆ ಎನ್ನಲಾಗಿದೆ. ಇನ್ನು ಕನಿಷ್ಠ ಒಂದು ವರ್ಷದವರೆಗೆ ತಮಗೆ ಬೇಲ್ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಸದ್ಯ ಯಾರ ಜತೆಯೂ ಮಾತನಾಡದೆ ಸೈಲೆಂಟ್ ಆಗಿದ್ದಾರೆ. ತಾವಾಯಿತು, ತಮ್ಮ ಪಾಡಾಯ್ತು ಎನ್ನುವಂತೆ ಇರುತ್ತಿರುವ ದರ್ಶನ್ ಅವರು, ವಾರಕ್ಕೊಮ್ಮೆ ಜೈಲಾಡಳಿತ ನೀಡುವ ಮೂರ್ನಾಲ್ಕು ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದಾರೆ.

ಬಿಳಿ ಹಾಳೆ ಹಿಡಿದು ಕುಳಿತ ಪವಿತ್ರಾ ಗೌಡ:

ಮತ್ತೊಂದೆಡೆ, ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಕಥೆಯೇ ಬೇರೆಯದ್ದಾಗಿದೆ. ಕಳೆದ ಒಂದು ತಿಂಗಳಿಂದಲೂ ಅವರು ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ಸಿಲ್ ಪಡೆದು ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು ಹಾಗೂ ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೇ ಪವಿತ್ರಾ ಗೌಡ ಅವರು ಜೈಲಿನ ಕೋಣೆಯಲ್ಲಿ ಕುಳಿತು ಆತ್ಮಚರಿತ್ರೆ ಬರೆಯುವುದರಲ್ಲೇ ಮೌನವಾಗಿ ಕಾಲ ಕಳೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ – Kannada News

ನವದೆಹಲಿ, ಜೂನ್ 11: ಹೆಚ್ಚಿನ ಶೇಕಡಾವಾರು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್(Petrol) ಮೇಲಿನ ಅಬಕಾರಿ ಸುಂಕದಿಂದ ವಿನಾಯಿತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಕಂದಾಯ ಇಲಾಖೆಯು ಈ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರವು 2002 ಮತ್ತು 2017 ರಲ್ಲಿ ಹೊರಡಿಸಲಾದ ಹಿಂದಿನ ಅಬಕಾರಿ ಸುಂಕ ನಿಯಮಗಳನ್ನು ನವೀಕರಿಸಿದೆ.

ಶೂನ್ಯ ತೆರಿಗೆ ವ್ಯಾಪ್ತಿಗೆ ಬರುವ ಇಂಧನಗಳು ಯಾವುವು?
ಇದುವರೆಗೆ ಕೇವಲ ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಣಗಳಿಗೆ (E20 ವರೆಗೆ) ಮಾತ್ರ ಲಭ್ಯವಿದ್ದ ತೆರಿಗೆ ವಿನಾಯಿತಿಯನ್ನು ಈಗ ಸರ್ಕಾರವಯ ಶೇ.22 ರಿಂದ ಶೇ.30ರಷ್ಟು ಹೆಚ್ಚಿನ ಎಥೆನಾಲ್ ಮಿಶ್ರಣ ಹೊಂದಿರುವ ಇಂಧನಗಳಿಗೂ ವಿಸ್ತರಿಸಿದೆ. ಹೊಸ ನಿಯಮದ ಪ್ರಕಾರ ಕೆಳಗಿನ ಇಂಧನ ರೂಪಾಂತರಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ:

E22 (ಶೇ.22 ಎಥೆನಾಲ್, ಶೇ.78 ಪೆಟ್ರೋಲ್)

E25 (ಶೇ.25 ಎಥೆನಾಲ್, ಶೇ.75 ಪೆಟ್ರೋಲ್)

E27 (ಶೇ. 27 ಎಥೆನಾಲ್, ಶೇ.73 ಪೆಟ್ರೋಲ್)

E30 (ಶೇ.30 ಎಥೆನಾಲ್, ಶೇ.70 ಪೆಟ್ರೋಲ್)

ಈ ಇಂಧನಗಳ ಮೇಲೆ ಕೇಂದ್ರ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್​ಗಳನ್ನು ಸಂಪೂರ್ಣವಾಗಿ ರದ್ದುಗಿಳಿಸಲಾಗಿದೆ. ಈ ಎಲ್ಲಾ ಮಿಶ್ರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ ನಿಯಮಗಳಿಗೆ ಒಳಪಟ್ಟಿರುತ್ತದೆ.

ಮತ್ತಷ್ಟು ಓದಿ: CNG Price Hike: ಪೆಟ್ರೋಲ್, ಡೀಸೆಲ್​ ಆಯ್ತು ಈಗ ಸಿಎನ್​ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್​

ಎಥೆನಾಲ್ ಮಿಶ್ರಣದಲ್ಲಿ ಭಾರತದ ಅದ್ಭುತ ಪ್ರಗತಿ
ಭಾರತವು ತನ್ನ ಇಂಧನ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುತ್ತಾ ಸಾಗುತ್ತಿದೆ. ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯ ಅಡಿಯಲ್ಲಿ, ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಮಾಡುವ (E20) ಗುರಿಯನ್ನು 2030 ರ ಬದಲಿಗೆ 2025-26 ಕ್ಕೇ ಮುಂಚಿತವಾಗಿ ಸಾಧಿಸಲು ಶ್ರಮಿಸಲಾಗುತ್ತಿದೆ.

ಇಂಧನ ಸರಬರಾಜು ವರ್ಷ (ESY) ಎಥೆನಾಲ್ ಮಿಶ್ರಣದ ಶೇಕಡಾವಾರು
2022-23 12.06%
2023-24 14.60%
2024-25 (ಫೆಬ್ರವರಿ 2025 ರವರೆಗೆ)17.98%

ಈ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ಈಗಾಗಲೇ ಶೇ. 10 ರಷ್ಟು ಮಿಶ್ರಣದ ಗುರಿಯನ್ನು ಐದು ತಿಂಗಳು ಮುಂಚಿತವಾಗಿಯೇ ಸಾಧಿಸಿ ಯಶಸ್ವಿಯಾಗಿದೆ. ಈಗ ಇಲಾಖೆಯು E30 ವರೆಗಿನ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ.

ದೇಶಕ್ಕೆ ಮೂರು ದೊಡ್ಡ ಲಾಭಗಳು: ಮಾಲಿನ್ಯ ಮುಕ್ತ ಮತ್ತು ರೈತಸ್ನೇಹಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೇಳಿದಂತೆ, ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲ ಅಗತ್ಯತೆಯ ಶೇ. 87 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಹೊಸ ನೀತಿಯಿಂದ ದೇಶಕ್ಕೆ ಮೂರು ಪ್ರಮುಖ ಲಾಭಗಳಾಗಲಿವೆ.

ಆರ್ಥಿಕ ಸ್ವಾವಲಂಬನೆ: ಇಂಧನ ಆಮದಿಗಾಗಿ ವಿದೇಶಗಳಿಗೆ ಹರಿದು ಹೋಗುತ್ತಿದ್ದ ಕೋಟ್ಯಂತರ ರೂಪಾಯಿ ಹಣ ದೇಶದ ಒಳಗೇ ಉಳಿಯುತ್ತದೆ.

ಪರಿಸರ ಸಂರಕ್ಷಣೆ: ಎಥೆನಾಲ್ ಒಂದು ‘ಹಸಿರು ಇಂಧನ’ (Green Fuel) ಆಗಿರುವುದರಿಂದ, ಪಳೆಯುಳಿಕೆ ಇಂಧನಗಳ ಬಳಕೆಗೆ ಹೋಲಿಸಿದರೆ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಕೃಷಿ ವಲಯಕ್ಕೆ ಆದಾಯ: ಕಬ್ಬು ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ, ದೇಶದ ರೈತರು, ಗ್ರಾಮೀಣ ಯುವಕರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ನೇರ ಆರ್ಥಿಕ ಲಾಭ ಸಿಗಲಿದೆ.

ಭವಿಷ್ಯದ ಆಶಾವಾದ: ಇ20 ಇಂಧನ ಜಾರಿಗೆ ಬಂದಾಗ ಎಂಜಿನ್ ಹೊಂದಾಣಿಕೆಯ ಬಗ್ಗೆ ಕೆಲವು ಕಳವಳಗಳು ವ್ಯಕ್ತವಾಗಿದ್ದರೂ, ಸೆಪ್ಟೆಂಬರ್ 2025 ರಲ್ಲಿ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿ, ಸರ್ಕಾರದ ಈ ಪರಿವರ್ತನೆಯು ರೈತರಿಗೆ ಪೂರಕವಾಗಿದೆ ಎಂದು ಎತ್ತಿಹಿಡಿದಿದೆ. ಈಗ ಹೆಚ್ಚಿನ ಎಥೆನಾಲ್ ಮಿಶ್ರಣದ ಪೆಟ್ರೋಲ್ ಮೇಲಿನ ತೆರಿಗೆ ವಿನಾಯಿತಿಯು ತೈಲ ಕಂಪನಿಗಳಿಗೆ ಆರ್ಥಿಕ ಬಲ ತರಲಿದ್ದು, ದೇಶವನ್ನು ಇಂಧನ ಸ್ವಾವಲಂಬನೆಯತ್ತ ಮುನ್ನಡೆಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:28 am, Thu, 11 June 26

Source link

TV9 Kannada Live: ರಾಜ್ಯ, ದೇಶ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು

ಕೇಂದ್ರದಲ್ಲಿ NDA ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿ ಎನ್​​ಡಿಎ ನಾಯಕರ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿಗಳ ಜೊತೆಗಿನ ಸಭೆ ಕುತೂಹಲ ಮೂಡಿಸಿದೆ. ಇತ್ತ ಕರ್ನಾಟಕದಲ್ಲಿ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದ್ದು, ಸಚಿವಾಕಾಂಕ್ಷಿಗಳಿಂದ ಲಾಬಿ ಜೋರಾಗಿದೆ. ಯುವ ಮುಖಗಳಿಗೆ ಹೈಕಮಾಂಡ್​​ ಪ್ರಾಧಾನ್ಯತೆ ನೀಡಬಹುದೆಂಬ ಬಗ್ಗೆಯೂ ಮಾತುಗಳು ಕೇಳಿಬಂದಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಹಾವೇರಿ ಬಳಿಕ ತುಮಕೂರಿನಲ್ಲೂ SLV ಮಹಿಳಾ ಮಾರ್ಟ್ ಭಾರೀ ವಂಚನೆ: ಮಹಿಳೆಯರಿಗೆ ಲಕ್ಷ ಲಕ್ಷ ವಂಚನೆ – Kannada News

ತುಮಕೂರು ಎಸ್‌ಎಲ್‌ವಿ ಮಹಿಳಾ ಮಾರ್ಟ್​ಗೆ ಬೀಗ ಜಡಿದಿರುವುದುImage Credit source: tv9

ತುಮಕೂರು, ಜೂನ್ 11: ಹಾವೇರಿಯಲ್ಲಿ ಸ್ವಯಂ ಉದ್ಯೋಗದ ಹೆಸರಿನಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಸದ್ದು ಮಾಡಿದ್ದ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್’ (SLV Mahila Mart) ಕಂಪನಿಯ ವಂಚನಾ ಜಾಲ ರಾಜ್ಯದಾದ್ಯಂತ ವಿಸ್ತರಿಸಿದೆ ಎನ್ನಲಾಗಿತ್ತು. ಇದೀಗ ತುಮಕೂರು ಜಿಲ್ಲೆಯಲ್ಲಿಯೂ ಮಹಾ ಮೋಸ ನಡೆದಿರುವುದು ಗೊತ್ತಾಗಿದೆ. ತುಮಕೂರು ನಗರದ ಜಯನಗರದಲ್ಲಿ ಶಾಖೆ ತೆರೆದಿದ್ದ ಈ ಸಂಸ್ಥೆಯು, ಗೃಹಿಣಿಯರು ಹಾಗೂ ವಿದ್ಯಾವಂತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಆಮಿಷ ಒಡ್ಡಿ 5 ಲಕ್ಷ ರೂಪಾಯಿಯಿಂದ ಹಿಡಿದು ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ರಾತ್ರೋರಾತ್ರಿ ವಂಚಿಸಿ ಕೈಕೊಟ್ಟಿದೆ. ಹಾವೇರಿ ಮಾದರಿಯಲ್ಲೇ ಇಲ್ಲೂ ನೂರಾರು ಮಹಿಳೆಯರು ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಮುಖ್ಯಾಂಶಗಳು

  • ಹಾವೇರಿ ಬೆನ್ನಲ್ಲೇ ತುಮಕೂರಿನಲ್ಲೂ ಮಹಾ ವಂಚನೆ.
  • ಸ್ವಯಂ ಉದ್ಯೋಗ ಹೆಸರಲ್ಲಿ ಡೆಪಾಸಿಟ್ ಲೂಟಿ.
  • ಜಯನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲು.

ಹಣ ಡಬಲ್ ಆಗುವ ಆಸೆಗೆ ಬಿದ್ದ ಮಹಿಳೆಯರು

ಈ ಕಂಪನಿಯು ಮನೆಯಲ್ಲಿಯೇ ಇರುವ ಗೃಹಿಣಿಯರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ವಂಚನಾ ಜಾಲ ಹೆಣೆದಿತ್ತು. ಕಂಪನಿಯ ನಿಯಮದ ಪ್ರಕಾರ, ಮಹಿಳೆಯರು ಆರಂಭದಲ್ಲಿ ಮುಂಗಡವಾಗಿ (Security Deposit) ಲಕ್ಷ ಲಕ್ಷ ಹಣವನ್ನು ಡೆಪಾಸಿಟ್ ಮಾಡಬೇಕಿತ್ತು. ಈ ಡೆಪಾಸಿಟ್ ಮೊತ್ತಕ್ಕೆ ಅನುಗುಣವಾಗಿ ಕಂಪನಿಯು ಮನೆಯಲ್ಲೇ ಪ್ಯಾಕಿಂಗ್ ಮಾಡಲು ಅಗರಬತ್ತಿ, ಕಸದ ಪೊರಕೆ ಹಾಗೂ ಮೇಣದಬತ್ತಿ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುತ್ತಿತ್ತು. ಮಹಿಳೆಯರು ಇವುಗಳನ್ನು ಪ್ಯಾಕ್ ಮಾಡಿ ಕಂಪನಿಗೆ ವಾಪಸ್ ನೀಡಬೇಕಿತ್ತು. ಪ್ರತಿ ತಿಂಗಳು ಹೂಡಿಕೆ ಮಾಡಿದ ಹಣಕ್ಕೆ ತಕ್ಕಂತೆ ಇಂತಿಷ್ಟು ಸಾವಿರ ರೂಪಾಯಿ ಸಂಬಳ ಹಾಗೂ ಕಂತುಗಳಲ್ಲಿ ಡೆಪಾಸಿಟ್ ಹಣವನ್ನು ವಾಪಸ್ ನೀಡುವುದಾಗಿ ಕಂಪನಿ ನಂಬಿಸಿತ್ತು. ಅಲ್ಲದೆ, ಕಂತುಗಳು ಮುಗಿದ ತಕ್ಷಣ ಪೂರ್ಣ ಡೆಪಾಸಿಟ್ ಹಣ ವಾಪಸ್ ಸಿಗಲಿದೆ, ಇದರಿಂದ ಹೂಡಿಕೆ ಮಾಡಿದ ಹಣ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟಾಗಲಿದೆ (Double) ಎಂದು ನಂಬಿಸಲಾಗಿತ್ತು.

ಏಪ್ರಿಲ್ ವರೆಗೆ ಹಣ ವಸೂಲಿ ಮಾಡಿ ಬಾಗಿಲು ಹಾಕಿದ ಕಂಪನಿ

ಕಳೆದ ಒಂದು ವರ್ಷದಿಂದ ತುಮಕೂರಿನಲ್ಲಿ ಈ ಕಂಪನಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿತ್ತು. ಇತ್ತೀಚಿನ ಏಪ್ರಿಲ್ ತಿಂಗಳವರೆಗೂ ಮಹಿಳೆಯರಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಪಡೆದುಕೊಂಡಿದ್ದ ಕಂಪನಿ, ತದನಂತರ ದಿಢೀರನೆ ತನ್ನ ವಹಿವಾಟನ್ನು ಸ್ಥಗಿತಗೊಳಿಸಿ ಕಚೇರಿಗೆ ಬಾಗಿಲು ಹಾಕಿದೆ. ಮೋಸ ಹೋಗಿರುವುದು ಗೊತ್ತಾಗಿ ಮಹಿಳೆಯರು ಹಲವು ಬಾರಿ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ತೀವ್ರ ಆರ್ಥಿಕ ನಷ್ಟ ಉಂಟಾಗಿದ್ದರೂ, ಮರ್ಯಾದೆಗೆ ಅಂಜಿ ಆರಂಭದಲ್ಲಿ ದೂರು ನೀಡಲು ಮಹಿಳೆಯರು ಮೀನಾಮೇಷ ಎಣಿಸುತ್ತಿದ್ದರು. ಆದರೆ ಹಾವೇರಿ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಧೈರ್ಯ ತಂದಿಕೊಂಡ ಕೆಲವು ಸಂತ್ರಸ್ತರು ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ

ಹಣ ಕಳೆದುಕೊಂಡ ಮಹಿಳೆಯರ ಕಹಾನಿ ಬೆಚ್ಚಿಬೀಳಿಸುವಂತಿದೆ. ಕುಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಹಣ ಹೂಡಿಕೆ ಮಾಡಿದ್ದ ಹಲವು ಗೃಹಿಣಿಯರು, ತಮ್ಮ ಪತಿಗೆ ಗೊತ್ತಾಗದಂತೆ ಮನೆಯ ಅಸಲಿ ಆಸ್ತಿ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಲೋನ್ ಪಡೆದು ಕಂಪನಿಗೆ ತಂದುಕೊಟ್ಟಿದ್ದಾರೆ! ಇನ್ನು ಕೆಲವರು ತಾವಷ್ಟೇ ಅಲ್ಲದೆ ತಮ್ಮ ಆಪ್ತ ಸ್ನೇಹಿತೆಯರು ಹಾಗೂ ಸಂಬಂಧಿಕರಿಂದಲೂ ಲಕ್ಷ ಲಕ್ಷ ರೂಪಾಯಿ ಸಾಲ ಕೊಡಿಸಿ ಹೂಡಿಕೆ ಮಾಡಿಸಿದ್ದರು.

ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ

ಸದ್ಯ ವಂಚನೆಗೊಳಗಾದ ಮಹಿಳೆಯರು ಮುಖ ಮುಚ್ಚಿಕೊಂಡು ಕಚೇರಿಯ ಮುಂದೆ ಅಸಹಾಯಕರಾಗಿ ನಿಂತಿದ್ದಾರೆ. ಸದ್ಯ ಜಯನಗರ ಪೊಲೀಸರು ಈ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ಕಂಪನಿಯ ಹಿನ್ನೆಲೆ ಹಾಗೂ ವಂಚನೆಗೊಳಗಾದ ಮಹಿಳೆಯರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ – Kannada News

ಬೆಂಗಳೂರು, ಜೂನ್​​ 11: ಡಬಲ್ ಡೆಕ್ಕರ್‌ ಯೋಜನೆ ಸೇರ್ಪಡೆಯಿಂದ ಅನುಮೋದನೆಗಾಗಿ ಬಾಕಿ ಉಳಿದಿದ್ದ ನಮ್ಮ ಮೆಟ್ರೋ 3ನೇ ಹಂತ (Phase-3) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ RITES Ltd ಸಿದ್ಧಪಡಿಸಿರುವ ಕರಡು ವರದಿಯಲ್ಲಿ, 44.65 ಕಿ.ಮೀ ಉದ್ದದ ಈ ಯೋಜನೆಯ ಆರ್ಥಿಕ ಆಂತರಿಕ ಆದಾಯ ಪ್ರಮಾಣ (Economic Internal Rate of Return – EIRR) ಶೇ. 15.9ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಮೆಟ್ರೋ ಯೋಜನೆಗಳಿಗೆ ಅಗತ್ಯವೆಂದು ಪರಿಗಣಿಸಲಾದ ಶೇ.14ರ ಮಾನದಂಡಕ್ಕಿಂತ ಹೆಚ್ಚಾಗಿದೆ.

2024ರ ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರ ಮೂರನೇ ಹಂತದ ಯೋಜನೆಗೆ ಅನುಮೋದನೆ ನೀಡಿದಾಗ ಡಬಲ್ ಡೆಕ್ಕರ್‌ ವಯಾಡಕ್ಟ್‌ ಯೋಜನೆ ಇರಲಿಲ್ಲ. ನಂತರ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಗತ್ಯ ತಪ್ಪಿಸಲು ರಾಜ್ಯ ಸರ್ಕಾರ ಹೆಚ್ಚುವರಿ 9,700 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್‌ ವ್ಯವಸ್ಥೆಯನ್ನು ಸೇರಿಸಲು ನಿರ್ಧರಿಸಿತ್ತು. ಆದರೆ, ಮೆಟ್ರೋ ಮಾರ್ಗದ ಮೇಲೆಯೇ ಫ್ಲೈಓವರ್ ನಿರ್ಮಾಣವಾದರೆ ಪ್ರಯಾಣಿಕರು ಮೆಟ್ರೋ ಬಳಕೆ ಕಡಿಮೆ ಮಾಡಬಹುದು ಎಂಬ ಕಾರಣ ನೀಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಯೋಜನೆಯ ಸಾಮಾಜಿಕ-ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆ ಎತ್ತಿತ್ತು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್; ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

RITES ವರದಿ ಪ್ರಕಾರ, ಡಬಲ್ ಡೆಕ್ಕರ್‌ ಸೇರಿಸಿದ ಬಳಿಕ EIRR ಶೇ.15.9ಕ್ಕೆ ಇಳಿದಿದ್ದರೂ ಅದು ಇನ್ನೂ ಅನುಮೋದನೆಗೆ ಅಗತ್ಯವಾದ ಮಟ್ಟಕ್ಕಿಂತ ಹೆಚ್ಚಾಗಿದೆ. ಮೂಲ ಯೋಜನೆಯಲ್ಲಿ EIRR ಶೇ.17.04 ಇತ್ತು. ಸಚಿವಾಲಯದ ಆಕ್ಷೇಪಣೆಗಳು ತಾಂತ್ರಿಕವಾಗಿದ್ದು, RITES ವರದಿ ಅದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಅಂತಿಮ ವರದಿಯೂ ಇದೇ ರೀತಿಯಲ್ಲಿರಲಿದೆ. ಹೀಗಾಗಿ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಮೂರನೇ ಹಂತದ ಮಾರ್ಗ?

  • ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆಯ (ORR) ಮೂಲಕ 32.5 ಕಿ.ಮೀ ಉದ್ದದ ಮಾರ್ಗ
  • ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯ ಮೂಲಕ 12.15 ಕಿ.ಮೀ ಉದ್ದದ ಮಾರ್ಗ

ಕೇಂದ್ರ ಸಚಿವರ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್

ಬುಧವಾರ ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್​​ ಲಾಲ್​​ ಖಟ್ಟರ್​ ಅವರನ್ನು ಭೇಟಿ ಮಾಡಿರುವ ಸಿಎಂ ಡಿ.ಕೆ. ಶಿವಕುಮಾರ್​​, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಡಬಲ್ ಡೆಕ್ಕರ್‌ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಇದರ ಜೊತೆಗೆ ಎರಡನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚ 40,425.02 ಕೋಟಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ ಅನುಮೋದನೆಯನ್ನು ಶೀಘ್ರ ನೀಡುವಂತೆ ಆಗ್ರಹಿಸಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು – Kannada News

ಮುಂಬೈ, ಜೂನ್ 11: ಮಹಾರಾಷ್ಟ್ರ(Maharashtra) ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ ಏಳು ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ಹೈಡ್ರಾಮಕ್ಕೆ ಮುನ್ನುಡಿ ಬರೆದಿದೆ.

ಮಾಹಿತಿಗಳ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಪುತ್ರ, ಲೋಕಸಭಾ ಸಂಸದ ಶ್ರೀಕಾಂತ್ ಶಿಂಧೆ ಅವರು ಕಳೆದ ಆರು ತಿಂಗಳಿನಿಂದ ಉದ್ಧವ್ ಠಾಕ್ರೆ ಬಣದ ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇದರ ಮುಂದುವರಿದ ಭಾಗವಾಗಿ, ಜೂನ್ 7 ರಂದು ನವದೆಹಲಿಯಲ್ಲಿ ಏಕನಾಥ್ ಶಿಂಧೆ ಹಾಗೂ ಉದ್ಧವ್ ಬಣದ ಸಂಸದರ ನಡುವೆ ಅತ್ಯಂತ ಗೌಪ್ಯ ಸಭೆಯೊಂದು ನಡೆದಿದೆ ಎನ್ನಲಾಗಿದೆ. ಈ ಸಭೆಯ ಬೆನ್ನಲ್ಲೇ ಏಳು ಸಂಸದರು ಶಿಂದೆ ಬಣಕ್ಕೆ ಬೆಂಬಲ ಸೂಚಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಕೇಂದ್ರ ಸಚಿವ ಸ್ಥಾನದ ಆಫರ್ ಮತ್ತು ಅಮಿತ್ ಶಾ ಭೇಟಿ
ಈ ರಾಜಕೀಯ ಬೆಳವಣಿಗೆಗಳ ನಡುವೆ, ಇತ್ತೀಚೆಗೆ ಏಕನಾಥ್ ಶಿಂಧೆ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಮೂಲಗಳ ಪ್ರಕಾರ, ಶಿಂದೆ ಬಣಕ್ಕೆ ಸೇರಲಿರುವ ಹೊಸ ಸಂಸದರಲ್ಲಿ ಒಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಆಫರ್ ಉದ್ಧವ್ ಬಣದ ಸಂಸದರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್​ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!

ಉದ್ಧವ್ ಬಣದ ಪ್ರಮುಖ ಸಂಸದರ ಪಟ್ಟಿ
ಪ್ರಸ್ತುತ ಉದ್ಧವ್ ಠಾಕ್ರೆ ಬಣದಲ್ಲಿರುವ 9 ಲೋಕಸಭಾ ಸಂಸದರ ಪಟ್ಟಿ ಇಲ್ಲಿದೆ. ಇವರಲ್ಲಿ ಏಳು ಮಂದಿ ಶಿಂದೆ ಬಣದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರವಿಂದ್ ಸಾವಂತ್ (ಮುಂಬೈ ದಕ್ಷಿಣ)

ಸಂಜಯ್ ದಿನ ಪಾಟೀಲ್ (ಮುಂಬೈ ಈಶಾನ್ಯ)

ಅನಿಲ್ ದೇಸಾಯಿ (ಮುಂಬೈ ದಕ್ಷಿಣ ಮಧ್ಯ)

ಸಂಜಯ್ ದೇಶಮುಖ್ (ಯವತ್ಮಾಲ್-ವಾಶಿಂ)

ನಾಗೇಶ ಪಾಟೀಲ ಅಷ್ಟಿಕರ್ (ಹಿಂಗೋಲಿ)

ಸಂಜಯ್ ಹರಿಭಾವು ಜಾಧವ್ (ಪರ್ಭಾನಿ)

ರಾಜಭಾವು ವಾಜೆ (ನಾಸಿಕ್)

ಭೌಸಾಹೇಬ್ ವಕ್ಚೌರೆ (ಶಿರಡಿ)

ಓಂಪ್ರಕಾಶ್ ರಾಜೇನಿಂಬಾಳ್ಕರ್ (ಧಾರಾಶಿವ್ / ಒಸ್ಮಾನಾಬಾದ್)

ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ, ಯಾವುದೇ ಒಂದು ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಶಿಕ್ಷೆಯಿಂದ ಪಾರಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕಾದರೆ ಅಥವಾ ಪ್ರತ್ಯೇಕ ಗುಂಪು ಎಂದು ಗುರುತಿಸಿಕೊಳ್ಳಬೇಕಾದರೆ, ಒಟ್ಟು ಸಂಸದರ/ಶಾಸಕರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬಲ ಇರಬೇಕಾಗುತ್ತದೆ.

ಪ್ರಸ್ತುತ ಉದ್ಧವ್ ಬಣದಲ್ಲಿ 9 ಸಂಸದರಿದ್ದಾರೆ. ಇದರ 2/3ರಷ್ಟು ಎಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಉದ್ಧವ್ ಬಣವನ್ನು ತೊರೆಯಬೇಕಾಗುತ್ತದೆ. ಈಗ 7 ಸಂಸದರು ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ನಿಜವೇ ಆದಲ್ಲಿ, ಅವರು ಯಾವುದೇ ಕಾನೂನು ಸಂಕಷ್ಟವಿಲ್ಲದೆ ಅಧಿಕೃತವಾಗಿ ಶಿಂದೆ ಬಣವನ್ನು ಸೇರಿಕೊಳ್ಳಬಹುದು ಮತ್ತು ಅವರ ಸಂಸದ ಸ್ಥಾನಕ್ಕೂ ಯಾವುದೇ ಧಕ್ಕೆ ಬರುವುದಿಲ್ಲ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆಯು ಉದ್ಧವ್ ಠಾಕ್ರೆ ಅವರಿಗೆ ಭಾರಿ ಹಿನ್ನಡೆಯನ್ನು ಉಂಟುಮಾಡಿದರೆ, ಏಕನಾಥ್ ಶಿಂಧೆ ಮತ್ತು ಮಹಾಯುತಿ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮೈತ್ರಿಗೆ ದೆಹಲಿ ಮಟ್ಟದಲ್ಲಿ ಮತ್ತಷ್ಟು ಬಲ ತಂದುಕೊಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link