Category Archives: Blog

Your blog category

370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್ – Kannada News

ಸ್ಟ್ಯಾಂಡಪ್ ಕಾಮಿಡಿಯನ್ ಪ್ರಣೀತ್ ಮೋರೆ (Pranit More) ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರ ಶೋ ಒಂದರ ವಿಡಿಯೋ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ಈ ವಿವಾದ ಸೃಷ್ಟಿಯಾಗಿದ್ದು, ಇದರ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ಈ ಮೊದಲೇ ಪ್ರಣೀತ್‌ ಮೋರೆಗೆ ನೀಡಿದ್ದ ಎಚ್ಚರಿಕೆಯ ವಿಡಿಯೋ ಒಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಏನಿದು 370 ರೂಪಾಯಿ ಬಿರಿಯಾನಿ ವಿವಾದ? ಇತ್ತೀಚೆಗೆ ನಡೆದ ಪ್ರಣೀತ್ ಅವರ ಶೋನಲ್ಲಿ ಪ್ರೇಕ್ಷಕನೊಬ್ಬ ತಾನು ಡೇಟ್‌ಗೆ ಹೋದಾಗ ಮಹಿಳೆಯೊಬ್ಬಳಿಗೆ 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದಾಗಿ ಹೇಳಿದ್ದನು. ಆಕೆ ಮನೆಗೆ ಬಿಡಲು ಹೇಳಿದಾಗ, ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಹಾಗಾಗಿ ಆ ಹಣಕ್ಕೆ ತಕ್ಕ ದೈಹಿಕ ಸುಖ ಪಡೆಯದೇ ಬಿಡುವುದಿಲ್ಲ’ ಎಂದು ಆ ಪ್ರೇಕ್ಷಕ ಅಸಭ್ಯವಾಗಿ ಮಾತನಾಡಿದ್ದನು. ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಈ ಮಾತಿಗೆ ಕಾಮಿಡಿಯನ್ ಪ್ರಣೀತ್ ಕೂಡ ವೇದಿಕೆ ಮೇಲೆ ನಕ್ಕಿದ್ದು ಮತ್ತು ಅದನ್ನು ತಡೆಯದಿದ್ದಕ್ಕೆ ನೆಟ್ಟಿಗರು ಪ್ರಣೀತ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಹೊಸ ವಿವಾದ ಸೃಷ್ಟಿಯಾಗುತ್ತಿದ್ದಂತೆ, 2025ರ ಬಿಗ್ ಬಾಸ್ ಸೀಸನ್ 19ರ ಹಳೆಯ ಘಟನೆಯನ್ನು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರಣೀತ್ ಕಾಲಿಟ್ಟಾಗ, ಅವರ ಹಳೆಯ ಕಾಮಿಡಿ ಶೋಗಳ ಕ್ಲಿಪ್‌ಗಳು ವೈರಲ್ ಆಗಿದ್ದವು. ಅದರಲ್ಲಿ ಮಹಿಳಾ ಪ್ರೇಕ್ಷಕಿಯೊಬ್ಬರು ಸಲ್ಮಾನ್ ಖಾನ್ ಧರಿಸುವ ರೀತಿಯದ್ದೇ ಬ್ರೇಸ್‌ಲೆಟ್ ಧರಿಸಿದ್ದನ್ನು ನೋಡಿ, ‘ನೀವು ಎಂದಾದರೂ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ಗೆ ಹೋಗಿದ್ದೀರಾ?’ ಎಂದು ಪ್ರಣೀತ್ ಅಶ್ಲೀಲವಾಗಿ ಪ್ರಶ್ನೆ ಕೇಳಿದ್ದರು.

ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡ ವೈರಲ್ ವಿಡಿಯೋ:

ಇದು ಬಿಗ್ ಬಾಸ್ ವೇದಿಕೆಯಲ್ಲಿ ಸ್ವತಃ ಸಲ್ಮಾನ್ ಖಾನ್ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಪ್ರಣೀತ್ ಮೋರೆಗೆ ಕ್ಲಾಸ್ ತಗೆದುಕೊಂಡಿದ್ದ ಸಲ್ಮಾನ್, ‘ನನ್ನ ಹೆಸರನ್ನು ಬಳಸಿ ನೀವು ಏನೆಲ್ಲಾ ಜೋಕ್ ಮಾಡಿದ್ದೀರಿ ಎಂದು ನನಗೆ ಗೊತ್ತು. ಅದು ಸರಿಯಲ್ಲ. ಆ ಸಮಯದಲ್ಲಿ ಜನರನ್ನು ನಗಿಸಲು ನನ್ನ ಹೆಸರನ್ನು ಬಳಸಿಕೊಂಡಿದ್ದೀರಿ. ಆದರೆ ಯಾರ ವೈಯಕ್ತಿಕ ಜೀವನದ ಬಗ್ಗೆಯೂ ಕೀಳು ಮಟ್ಟದ ಜೋಕ್ ಮಾಡಬೇಡಿ’ ಎಂದು ನೇರವಾಗಿಯೇ ವಾರ್ನಿಂಗ್ ನೀಡಿದ್ದರು.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ

370 ರೂ.ಬಿರಿಯಾನಿ ವಿವಾದ ಇಂಟರ್ನೆಟ್‌ನಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾಮಿಡಿಯನ್ ಪ್ರಣೀತ್ ಮೋರೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ಕ್ಷಮೆ ಯಾಚಿಸಿದ್ದಾರೆ. ಅವರ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಆ ಪ್ರೇಕ್ಷಕ ಕೂಡ ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಚಿವರಿಂದ ಎದ್ದು ನಿಂತು ಚಪ್ಪಾಳೆಯ ಗೌರವ – Kannada News

ನವದೆಹಲಿ, ಜೂನ್ 10: ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟವು ಇಂದು ನಿರ್ಣಯವೊಂದನ್ನು ಅಂಗೀಕರಿಸಿದೆ. ಈ ಅಪರೂಪದ ಸಾಧನೆಯನ್ನು ಗೌರವಿಸಲು ಸಚಿವ ಸಂಪುಟದ ಎಲ್ಲಾ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿಯವರಿಗೆ ಗೌರವ ವಂದನೆ ಸಲ್ಲಿಸಿದರು. ಚುನಾಯಿತ ಪ್ರಧಾನ ಮಂತ್ರಿಯಾಗಿ ಸತತ ಹಾಗೂ ನಿರಂತರ ಅಧಿಕಾರಾವಧಿಯ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿದ ದಿನವೇ ಈ ಅಭಿನಂದನಾ ನಿರ್ಣಯ ಬಂದಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ರಾತ್ರಿ 7 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಧಾನಿ ಕಚೇರಿಯಲ್ಲಿ ಸತತ 4,399 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಜವಾಹರಲಾಲ್ ನೆಹರು ಅವರ 4,398 ದಿನಗಳ ಚುನಾಯಿತ ಅಧಿಕಾರಾವಧಿಯ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ.

1952ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ಪ್ರಧಾನಿಯಾಗಿ ಆಯ್ಕೆಯಾಗಿದ್ದ ನೆಹರು ಮೇ 27, 1964ರಂದು ನಿಧನರಾಗುವವರೆಗೂ ಸತತವಾಗಿ ದೇಶದ ಸೇವೆಯಲ್ಲಿದ್ದರು. ಆದರೆ, 1947 ಮತ್ತು 1952ರ ನಡುವಿನ ಅವಧಿಯಲ್ಲಿ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಅವಧಿಯನ್ನು ಈ ಚುನಾಯಿತ ಅಧಿಕಾರಾವಧಿಯ ಹೋಲಿಕೆಯಲ್ಲಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಆ ಸಮಯದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಇನ್ನೂ ನಡೆದಿರಲಿಲ್ಲ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಆಡಸ್ಸಿ’ ಬೆಂಗಳೂರಲ್ಲಿ ಶೋ ಕಡಿಮೆ, ಆದರೆ ಬೆಲೆ ಬಲು ಹೆಚ್ಚು – Kannada News

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಬಲು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ದಿ ಆಡಸ್ಸಿ’ (The Odyssey) ರಿಲೀಸ್​​ಗೆ ಇನ್ನೊಂದು ವಾರ ಬಾಕಿ ಇದೆ. ವಿಶ್ವದ ನಂಬರ್ 1 ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿ ತಿಂಗಳುಗಳೇ ಆಗಿವೆ. ಆದರೆ ಭಾರತದಲ್ಲಿ ತುಸು ತಡವಾಗಿ ಅಂದರೆ ಇತ್ತೀಚೆಗಷ್ಟೆ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಕೆಲವು ಮೆಟ್ರೊ ನಗರಗಳಲ್ಲಿ ಭಾರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಐಮ್ಯಾಕ್ಸ್​ಗಾಗಿ ವಿಶೇಷವಾಗಿ ನಿರ್ಮಿಸಲಾಗಿರುವ ಈ ಸಿನಿಮಾದ ಪ್ರತಿ ಟಿಕೆಟ್ ಗರಿಷ್ಟ 2500 ದಿಂದ ಕನಿಷ್ಟ 800 ರೂಪಾಯಿಗಳ ವರೆಗೆ ಬೆಂಗಳೂರಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಜೂನ್ 10ರ ವೇಳೆಗೆ ಈ ಸಿನಿಮಾದ 12 ಶೋಗಳನ್ನಷ್ಟೆ ಬೆಂಗಳೂರಿನಲ್ಲಿ ನೀಡಲಾಗಿದ್ದು, ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಲ್ಟಿಪ್ಲೆಕ್ಸ್​ಗಳಲ್ಲಿ ಶೋಗಳು ಓಪನ್ ಆಗುವ ಸಾಧ್ಯತೆ ಇದೆ. ಈ ಹಿಂದೆ ಕ್ರಿಸ್ಟೊಫರ್ ನೋಲನ್ ಅವರ ‘ಆಪನ್​​ಹೈಮರ್’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಸಾಕಷ್ಟು ಶೋಗಳು ದೊರೆತಿದ್ದವು. ‘ದಿ ಆಡಸ್ಸಿ’ಗೂ ಸಹ ಹೆಚ್ಚಿನ ಸಂಖ್ಯೆಯ ಶೋಗಳು ಸಿಗುವ ಸಾಧ್ಯತೆ ಇದೆ.

ಇನ್ನು ಮುಂಬೈನಲ್ಲಿ ಇದೇ ಸಿನಿಮಾದ ಟಿಕೆಟ್​​ಗಳು ಕೆಲವು ಮಲ್ಟಿಪ್ಲೆಕ್ಸ್​​ಗಳಲ್ಲಿ 3300 ರೂಪಾಯಿಗೆ ಮಾರಾಟ ಆಗುತ್ತಿವೆ. ಆದರೆ ಬೆಂಗಳೂರಿಗೆ ಹೋಲಿಸಿದಲ್ಲಿ ಮುಂಬೈನಲ್ಲಿ ಬುಕಿಂಗ್ ಕಡಿಮೆ ಇದೆ. ಬುಕ್ ಮೈ ಶೋ ಮಾಹಿತಿಯಂತೆ ಮುಂಬೈನಲ್ಲಿ ಯಾವ ಶೋ ಸಹ ಇನ್ನೂ ಹೌಸ್​​ಫುಲ್ ಆಗಿಲ್ಲ. ದೆಹಲಿಯಲ್ಲೂ ಸಹ ಸರಾಸರಿ 1500 ರೂಪಾಯಿಗೆ ಅಡ್ವಾನ್ಸ್ ಬುಕಿಂಗ್ ಜಾರಿಯಲ್ಲಿದೆ.

ಇದನ್ನೂ ಓದಿ:ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

‘ದಿ ಆಡಸ್ಸಿ’ ಸಿನಿಮಾವು ಕ್ರಿಸ್ಟೊಫರ್ ನೋಲನ್ ಅವರ 13ನೇ ಸಿನಿಮಾ ಆಗಿದ್ದು, ನೋಲನ್ ಅವರು ಮೊದಲ ಬಾರಿಗೆ ಐತಿಹಾಸಿಕ ಹಾಗೂ ಜನಪದ ಆಧರಿತ ಸಿನಿಮಾ ನಿರ್ದೇಶಿಸಿದ್ದಾರೆ. 8ನೇ ಶತಮಾನದಲ್ಲಿ ಬದುಕಿದ್ದ ಎನ್ನಲಾಗುವ ಹೋಮರ್ ಬರೆದಿರುವ ‘ಆಡಸ್ಸಿ’ ಬೃಹತ್ ಪದ್ಯದ ಸಿನಿಮಾ ರೂಪಾಂತರವಾಗಿದೆ. ರಾಜ ಅಡೆಸ್ಸಿಯಸ್, ಟ್ರಾಜನ್ ಯುದ್ಧದ ಬಳಿಕ ಮನೆಗೆ ವಾಪಸ್ಸಾಗುವ ಬೃಹತ್ ಪಯಣದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಸಿನಿಮಾನಲ್ಲಿ ಹಾಲಿವುಡ್​​ನ ಹಲವು ದೊಡ್ಡ ಸ್ಟಾರ್ ನಟ, ನಟಿಯರು ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಆಸ್ಕರ್ ವಿಜೇತ ಮ್ಯಾಟ್ ಡೇಮನ್, ಸ್ಪೈಡರ್ ಮ್ಯಾನ್ ಖ್ಯಾತಿಯ ಟಾಮ್ ಹಾಲಂಡ್, ಅನ್ನಾ ಹಾತ್​​ವೇ, ಜೆಂಡೆಯಾ, ರಾಬರ್ಟ್ ಪ್ಯಾಟಿನ್​​ಸನ್ ಇನ್ನೂ ಹಲವಾರು ಸ್ಟಾರ್ ನಟ, ನಟಿಯರು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಜುಲೈ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್​ನಲ್ಲಿ ಅಮೆರಿಕದ ಪೈಲಟ್​ಗಳ ಜೀವ ಉಳಿಸಿದ ಡ್ರೋನ್ ಬೋಟ್; ಇದರ ಹಿಂದಿರುವ ಶಕ್ತಿ ವಿಭವ್ ಅಲ್ಟೇಕರ್ – Kannada News

ವಾಷಿಂಗ್ಟನ್, ಜೂನ್ 10: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಅತ್ಯಂತ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಮೂಲದ ಇಂಜಿನಿಯರ್ ಒಬ್ಬರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಪಘಾತಕ್ಕೀಡಾಗಿದ್ದ ಅಮೆರಿಕ ಸೇನೆಯ ಪೈಲಟ್‌ಗಳನ್ನು ರಕ್ಷಿಸಿದ ಡ್ರೋನ್ ಬೋಟ್ ಕಾರ್ಯಾಚರಣೆ ಅನೇಕರ ಗಮನ ಸೆಳೆದಿದೆ. ಈ ವೇಳೆ, ಭಾರತ ಮೂಲದವರಾದ ವಿಭವ್ ಅಲ್ಟೇಕರ್ (Vibhav Altekar) ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಮೆರಿಕ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದಾಗ, ಅದರ ಪೈಲಟ್ ಮತ್ತು ಕೋ ಪೈಲಟ್ ಅವರನ್ನು ರಕ್ಷಿಸಲು ಬಳಸಲಾದ ಕಾರ್ಸ್​ಏರ್ ಎನ್ನುವ ಡ್ರೋನ್ ಬೋಟ್ ಅನ್ನು ತಯಾರಿಸಿದ್ದು ಸರೋನಿಕ್ ಟೆಕ್ನಾಲಜೀಸ್ ಎಂಬ ಸಂಸ್ಥೆ. ಇದರ ಸಹ-ಸಂಸ್ಥಾಪಕರಲ್ಲಿ ವಿಭವ್ ಅಲ್ಟೇಕರ್ ಒಬ್ಬರಾಗಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಮಧ್ಯಪ್ರಾಚ್ಯದ ಅತ್ಯಂತ ಸೂಕ್ಷ್ಮ ಮತ್ತು ಉದ್ವಿಗ್ನ ವಲಯವಾದ ಹಾರ್ಮುಜ್ ಜಲಸಂಧಿಯ ಸಮುದ್ರ ಭಾಗದಲ್ಲಿ ಅಮೆರಿಕದ ಮಿಲಿಟರಿ ವಿಮಾನವೊಂದು ಪತನಗೊಂಡಿತ್ತು. ಇರಾನ್ ದಾಳಿಯಿಂದ ಹೆಲಿಕಾಪ್ಟರ್ ಪತನಗೊಂಡಿದ್ದು ಎಂದು ಕೆಲ ವರದಿಗಳು ಹೇಳಿದರೆ, ಕಾಪ್ಟರ್​ನ ತಾಂತ್ರಿಕ ದೋಷದಿಂದ ಕುಸಿದಿದೆ ಎಂದು ಇನ್ನೂ ಕೆಲ ವರದಿಗಳು ಹೇಳುತ್ತಿದೆ. ಆದರೆ, ಪತನಗೊಂಡ ಈ ಹೆಲಿಕಾಪ್ಟರ್​ನಲ್ಲಿದ್ದ ಪೈಲಟ್‌ಗಳು ತುರ್ತಾಗಿ ಸಮುದ್ರಕ್ಕೆ ಜಿಗಿದಿದ್ದರು.

ಬಹಳ ಅಪಾಯಕಾರಿ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಪತನಗೊಂಡ ಹೆಲಿಕಾಪ್ಟರ್​ನ ರಕ್ಷಣೆಗೆ ಮಾನವಚಾಲಿತ ಹಡಗು ಅಥವಾ ಕಾಪ್ಟರ್ ಕಳುಹಿಸುವುದು ಕಷ್ಟಸಾಧ್ಯವಿತ್ತು. ಹೀಗಾಗಿ, ಅಮೆರಿಕದ ನೌಕಾಪಡೆಯಲ್ಲಿದ್ದ ಎಐ ಆಧಾರಿತ ಸ್ವಯಂಚಾಲಿತ ಡ್ರೋನ್ ಬೋಟ್ ಅನ್ನು ಅಖಾಡಕ್ಕೆ ಇಳಿಸಲಾಯಿತು. ದೂರದಿಂದಲೇ ವ್ಯಕ್ತಿಗಳು ಈ ಬೋಟ್ ಅನ್ನು ಆಪರೇಟ್ ಮಾಡಬಹುದು. ಹೆಲಿಕಾಪ್ಟರ್​ನ ಪೈಲಟ್​ಗಳು ಬಿದ್ದಿರುವ ಸ್ಥಳವನ್ನು ಗುರುತಿಸಿ, ಅವರನ್ನು ರಕ್ಷಿಸಲು ಈ ಡ್ರೋನ್ ಬೋಟ್​ನ ಪಾತ್ರ ಬಹಳ ಮಹತ್ವದ್ದು.

ಇದನ್ನೂ ಓದಿ: ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?

ಯಾರು ಈ ವಿಭವ್ ಅಲ್ಟೇಕರ್?

ಈ ಅತ್ಯಾಧುನಿಕ ರೋಬೋಟಿಕ್ ಮತ್ತು ಸ್ವಯಂಚಾಲಿತ ಡ್ರೋನ್ ಬೋಟ್‌ನ ತಾಂತ್ರಿಕ ವಿನ್ಯಾಸ ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿಯ ಹಿಂದೆ ಇರುವುದು ಭಾರತೀಯ ಮೂಲದ ಪ್ರತಿಭೆ ವಿಭವ್ ಅಲ್ಟೇಕರ್. ವಿಭವ್ ಅವರು ಭಾರತದಲ್ಲಿ ತಮ್ಮ ಆರಂಭಿಕ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ನಂತರ ಅಮೆರಿಕದಲ್ಲಿ ರೋಬೋಟಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದರು.

ಅವರು ಪ್ರಸ್ತುತ ಅಮೆರಿಕದ ಪ್ರಮುಖ ಕಡಲ ತಂತ್ರಜ್ಞಾನ ಮತ್ತು ರಕ್ಷಣಾ ವಲಯದ ಸ್ಟಾರ್ಟ್‌ಅಪ್ ಸಂಸ್ಥೆಯಾದ ಸಾರೊನಿಕ್ ಟೆಕ್ನಾಲಜೀಸ್​ನಲ್ಲಿ (Saronic Technologies) ಸಿಟಿಒ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಂಪನಿಯ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರು. ಈ ಕಂಪನಿಯು ನೀರಿನ ಮೇಲೆ ಮತ್ತು ನೀರಿನ ಆಳದಲ್ಲಿ (Submersible) ಎರಡೂ ಕಡೆ ಚಲಿಸಬಲ್ಲ ವಿಶ್ವದ ಮೊದಲ ಸ್ವಯಂಚಾಲಿತ ನೌಕೆಗಳನ್ನು ತಯಾರಿಸಲು ಪ್ರಸಿದ್ಧಿಯಾಗಿದೆ.

ಈ ಡ್ರೋನ್ ಬೋಟ್‌ನ ವಿಶೇಷತೆಗಳೇನು?

ಸಮುದ್ರದ ಮೇಲ್ಮೈನಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲ ಈ ಮಾನವರಹಿತ ನೌಕೆಯು (Unmanned Surface Vessel – USV) ಹಲವು ವಿಶೇಷತೆಗಳನ್ನು ಹೊಂದಿದೆ:

  • ಇದು ಸೌರಶಕ್ತಿ (Solar Power) ಮತ್ತು ವಾಯು ಶಕ್ತಿಯನ್ನು (Wind Power) ಬಳಸಿ ತಿಂಗಳುಗಟ್ಟಲೆ ಸಮುದ್ರದಲ್ಲೇ ಉಳಿದು ನಿರಂತರವಾಗಿ ನಿಗಾ ಇಡಬಲ್ಲದು.
  • ಶತ್ರುಗಳ ರಾಡಾರ್‌ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಈ ಬೋಟ್ ಕ್ಷಣಾರ್ಧದಲ್ಲಿ ಜಲಗಾಡಿಯಂತೆ ಸಮುದ್ರದ ಆಳಕ್ಕೆ ಮುಳುಗುವ (Submerge) ವಿಶಿಷ್ಟ ವಿನ್ಯಾಸ ಹೊಂದಿದೆ.
  • ಇದರಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸೋನಾರ್, ಎಐ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳು ಕತ್ತಲೆಯಲ್ಲೂ ಮೈಲಿಗಳ ದೂರದಲ್ಲಿರುವ ವಸ್ತುವನ್ನು ನಿಖರವಾಗಿ ಗುರುತಿಸಬಲ್ಲವು.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಮಿಲಿಟರಿ ಇತಿಹಾಸದಲ್ಲೇ ಇಂತಹ ಸಾಗರದಾಳದ ಅತ್ಯಂತ ಅಪಾಯಕಾರಿ ವಲಯದಲ್ಲಿ ಡ್ರೋನ್ ಬೋಟ್ ಬಳಸಿ ಯಶಸ್ವಿಯಾಗಿ ಮಾನವ ಜೀವಗಳನ್ನು ರಕ್ಷಿಸಿರುವುದು ಇದೇ ಮೊದಲು ಎನ್ನಲಾಗಿದೆ. ಈ ಯಶಸ್ಸಿನ ನಂತರ ಯುಎಸ್ ರಕ್ಷಣಾ ಇಲಾಖೆಯು (Pentagon) ವಿಭವ್ ಅಲ್ಟೇಕರ್ ಮತ್ತು ಅವರ ತಂಡದ ತಂತ್ರಜ್ಞಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಇದು ಜಾಗತಿಕ ರಕ್ಷಣಾ ತಂತ್ರಜ್ಞಾನ ವಲಯದಲ್ಲಿ ಭಾರತೀಯ ಇಂಜಿನಿಯರ್‌ಗಳ ದಕ್ಷತೆಗೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆ: ದೇಗುಲದ ಸಿಬ್ಬಂದಿ ವಿರುದ್ಧವೇ ದೂರು ದಾಖಲು – Kannada News

ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆImage Credit source: Tv9 Kannada

ಮಂಡ್ಯ, ಜೂನ್​​ 10: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ದೇಗುಲದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳುವಾಗಿರುವ ಸಂಬಂಧ ದೇವಸ್ಥಾನದ ಇಒ ಶೀಲಾ ಮೇಲುಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ದೇವಸ್ಥಾನದ ಪಾರುಪತ್ತೆಗಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೆಂಗಡಚಾರ್ , ಕಾವಲುಗಾರರಾದ ಗಂಗಾಧರ್ ಮತ್ತು ಬಸವಾರಾಜ್​​ ವಿರುದ್ದ ಪ್ರಕರಣ ದಾಖಲಾಗಿದೆ.

ರಹಸ್ಯ ಕ್ಯಾಮರಾವನ್ನೂ ಕೆಡಿಸಿ ಕಳ್ಳಾಟ!

ವಜ್ರಾಂಗಿ ಆಭರಣ ಕಳ್ಳತನದ ಬಳಿಕ ದೊಡ್ಡ ಪ್ರಮಾಣದ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪದೇ ಪದೇ ಸಿಸಿ ಕ್ಯಾಮರಾ ಡಿವಿಆರ್​​ನ ಕಿಡಿಗೇಡಿಗಳು ಕೆಡಿಸುತ್ತಿದ್ದರು. ದೇವಾಲಯದಲ್ಲಿ ಹಿಂದಿನಿಂದಲೂ ಹುಂಡಿಯಲ್ಲಿನ ಹಣ, ಚಿನ್ನ, ಬೆಳ್ಳಿಯ ವಸ್ತುಗಳು ಕಳ್ಳತನವಾಗುತ್ತಿದ್ದ ಆರೋಪದ ಹಿನ್ನೆಲೆ ರಹಸ್ಯ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದರೆ ಅದನ್ನೂ ಕೆಡಿಸಿರೋದು ಗೊತ್ತಾಗಿದೆ. ಈ ರಹಸ್ಯ ಸಿಸಿ ಕ್ಯಾಮರಾ ಅಳವಡಿಸಿರುವ ವಿಚಾರ ದೇವಾಲಯ ಆಡಳಿತ ಸಿಬ್ಬಂದಿಗೆ ಮಾತ್ರ ಗೊತ್ತಿತ್ತು. ಹೀಗಾಗಿ ಕಳ್ಳತನ ಉದ್ದೇಶದಿಂದ ಸಿಬ್ಬಂದಿ ಹಾಗೂ ಅರ್ಚಕರೇ ಕೃತ್ಯ ಎಸಗಿರಬಹುದು. ಅಥವಾ ಇವರ ಸಹಕಾರದಿಂದ ಬೇರೆಯವರು ಕಳ್ಳತನ ಮಾಡಿರಬಹುದೆಂಬ ಶಂಕೆಯನ್ನು ದೂರಲ್ಲಿ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್

ಹುಂಡಿ ಹಣದ ಎಣಿಕೆಗೂ ಮುನ್ನ ಈ ಕೃತ್ಯ ಎಸಗಿರುವ ಕಾರಣ ಇಂತಿಷ್ಟೇ ಹಣ ಅಥವಾ ಬೆಳ್ಳಿ, ಬಂಗಾರದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧ ಕಾವಲುಗಾರರಿಗೆ ಅಂಚೆ ಮೂಲಕ ಕಾರಣ ಕೇಳಿ ನೋಟಿಸ್​​ ಜಾರಿಮಾಡಲಾಗಿತ್ತು. ಆದರೆ ಅವರಿಂದ ಈವರೆಗೂ ಉತ್ತರ ಬಾರದ ಕಾರಣ ತಡವಾಗಿ ಘಟನೆ ಬಗ್ಗೆ ದೂರು ನೀಡುತ್ತಿರೋದಾಗಿ ಇಒ ಶೀಲಾ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್ – Kannada News

ದೆಹಲಿ, ಜೂ.10: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯ ‘10 ಜನಪಥ್’ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಈ ದೆಹಲಿ ಭೇಟಿಯ ವೇಳೆ ಕೇವಲ ಸೋನಿಯಾ ಗಾಂಧಿ ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಉಪಸ್ಥಿತರಿದ್ದರು. ಸಿಎಂ ಆದ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಶಿವಕುಮಾರ್ ಅವರಿಗೆ ಗಾಂಧಿ ಕುಟುಂಬದ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚಿನ ಲಾಭ ನೀಡುತ್ತಾ ಇಪಿಎಫ್? ಪಿಂಚಣಿ ಸ್ಕೀಮ್​ನಲ್ಲಿ ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ – Kannada News

ಇಪಿಎಫ್ (EPF) ಎಂಬುದು ಉದ್ಯೋಗಿಗಳ ನಿವೃತ್ತಿ ಅಥವಾ ಭವಿಷ್ಯದ ಕಾಲದ ಸುರಕ್ಷತೆಗೆಂದು ರೂಪಿಸಲಾಗಿದೆ. ಇದರಲ್ಲಿ ಸಾಮಾನ್ಯ ಎಫ್​ಡಿಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಸರ್ಕಾರ ಒದಗಿಸುತ್ತದೆ. ಆದರೆ, ಇಪಿಎಫ್​ನಲ್ಲಿ ವಾರ್ಷಿಕವಾಗಿ ಶೇ. 8.25 ಮಾತ್ರವೇ ಬಡ್ಡಿ ಸಿಗುತ್ತದೆ. ಮ್ಯೂಚುವಲ್ ಫಂಡ್​ಗಳಲ್ಲಿ ಹೆಚ್ಚಿನ ರಿಟರ್ನ್ ಸಿಗುತ್ತದೆ. ಹೀಗಾಗಿ, ಇಪಿಎಫ್​ನಿಂದ ಹಣ ತೆಗೆದು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಎಂದು ಕೆಲ ಹಣಕಾಸು ಪರಿಣಿತರು ಸಲಹೆ ನೀಡುವುದುಂಟು. ಆದರೆ, ಇಪಿಎಫ್​ನ ಉದ್ದೇಶ ಬೇರೆ, ಮ್ಯೂಚುವಲ್ ಫಂಡ್​ನ ಉದ್ದೇಶ ಬೇರೆ. ಎರಡೂ ಬೇರೆ ಬೇರೆ ಪ್ರಾಡಕ್ಟ್ಸ್. ಆದರೂ ರಿಟರ್ನ್ ಲೆಕ್ಕಾಚಾರಕ್ಕೆ ಬಂದರೆ ಇಪಿಎಫ್​ನಲ್ಲಿ ಬಡ್ಡಿ ಜೊತೆಗೆ ಇರುವ ಇನ್ನೊಂದು ಅಂಶವು ಅನುಕೂಲ ಮಾಡಿಕೊಡುತ್ತದೆ.

ಬಹಳಷ್ಟು ಜನರು ಇಪಿಎಫ್‌ನ ಶೇ. 8.25 ಬಡ್ಡಿಯನ್ನು ಮ್ಯೂಚುವಲ್ ಫಂಡ್‌ಗಳ ಶೇ. 12-15 ಗಳಿಕೆಗೆ ಹೋಲಿಸಿ, ಇದು ಕಡಿಮೆ ಎಂದು ಭಾವಿಸುತ್ತಾರೆ. ಆದರೆ, ಇಪಿಎಫ್‌ಗೆ ಇರುವ E-E-E (Exempt-Exempt-Exempt) ಸ್ಥಾನಮಾನವೇ ಅದರ ನಿಜವಾದ ಶಕ್ತಿಯಾಗಿದೆ. ಅದರಲ್ಲೂ ಶೇ. 30ರ ಟ್ಯಾಕ್ಸ್ ಬ್ರಾಕೆಟ್​ನಲ್ಲಿರುವ ತೆರಿಗೆ ಪಾವತಿದಾರರಿಗೆ ಇಪಿಎಫ್ ಮ್ಯಾಜಿಕ್ ಮಾಡುತ್ತದೆ.

ವಾರ್ಷಿಕವಾಗಿ ₹2.5 ಲಕ್ಷದವರೆಗಿನ ಇಪಿಎಫ್ ಕೊಡುಗೆಗೆ ಸಿಗುವ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ (Tax-Free). ಅದೇ ಫಿಕ್ಸೆಡ್ ಡೆಪಾಸಿಟ್, ಮ್ಯೂಚುವಲ್ ಫಂಡ್​ಗಳಲ್ಲಿ ಬೇರೆಯೇ ವಸೂಲಿ ಇರುತ್ತದೆ. ಎಫ್​ಡಿ ವಿಚಾರಕ್ಕೆ ಬಂದರೆ, ನೀವು ಶೇ. 30 ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದರೆ (Tax Slab), ಬ್ಯಾಂಕ್ ನೀಡುವ ಶೇ. 7.5 ರಷ್ಟು ಬಡ್ಡಿಯು ತೆರಿಗೆ ಕಡಿತದ ನಂತರ ಕೇವಲ ಶೇ. 5.25ಕ್ಕೆ ಕುಸಿಯುತ್ತದೆ! ಆದರೆ ಇಪಿಎಫ್‌ನಲ್ಲಿ ಶೇ. 8.25 ಎಂದರೆ ಅದು ನಿವ್ವಳ ಶೇ. 8.25 ರಷ್ಟೇ ಆಗಿರುತ್ತದೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್​ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ

ಚಕ್ರಬಡ್ಡಿಯ ಶಕ್ತಿ (Power of Compounding)

ಇಪಿಎಫ್‌ನಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಹಣ ಕಡಿತವಾಗಿ ಜಮೆಯಾಗುತ್ತದೆ. ಇದರ ಬಡ್ಡಿಯು ಪ್ರತಿ ವರ್ಷದ ಕೊನೆಯಲ್ಲಿ ಅಸಲಿಗೆ ಸೇರುತ್ತಾ ಹೋಗುತ್ತದೆ. ಇದರ ಜೊತೆಗೆ ಟ್ಯಾಕ್ಸ್ ಉಳಿತಾಯವನ್ನೂ ಸೇರಿಸಿದರೆ ನಿಮ್ಮ ಇಪಿಎಫ್ ನಿಧಿ ದೀರ್ಘಾವಧಿಯಲ್ಲಿ ವಾರ್ಷಿಕ ಶೇ. 11ರಿಂದ 12ರಷ್ಟು ರಿಟರ್ನ್ ಕೊಡಬಲ್ಲುದು.

ಮ್ಯೂಚುವಲ್ ಫಂಡ್‌ಗಳ ಮೇಲಿನ ತೆರಿಗೆ ಗಮನಿಸಿ..!

ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಆದಾಯ ನೀಡಿದರೂ, ಹಣ ಹಿಂಪಡೆಯುವಾಗ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (LTCG – Long Term Capital Gains Tax) ಪಾವತಿಸಬೇಕಾಗುತ್ತದೆ. ಆದರೆ ಇಪಿಎಫ್‌ನಲ್ಲಿ ಐದು ವರ್ಷಗಳ ನಿರಂತರ ಸೇವೆಯ ನಂತರ ಹಿಂಪಡೆಯುವ ಸಂಪೂರ್ಣ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಹಳೆಯ ಟ್ಯಾಕ್ಸ್ ರಿಜೈಮ್​ನಲ್ಲಿ ಪಿಪಿಎಫ್ ರೀತಿಯಲ್ಲಿ ಇಪಿಎಫ್​ನಿಂದಲೂ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಇಪಿಎಫ್ ಕೊಡುಗೆಗೆ ಟ್ಯಾಕ್ಸ್ ಇರುವುದಿಲ್ಲ. ಅಂದರೆ, ಒಂದೂವರೆ ಲಕ್ಷ ರೂಗೆ ಟ್ಯಾಕ್ಸ್ ಉಳಿತಾಯ ಆಗುತ್ತದೆ. ಶೇ. 30ರ ಟ್ಯಾಕ್ಸ್ ಸ್ಲಾಬ್​ನಲ್ಲಿರುವ ವ್ಯಕ್ತಿಗಳು ಇದರಿಂದ ವರ್ಷಕ್ಕೆ 45,000 ರೂ ಟ್ಯಾಕ್ಸ್ ಉಳಿಸಬಹುದು.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಮ್ಯೂಚುವಲ್ ಫಂಡ್‌ಗಿಂತ ಇಪಿಎಫ್ ಹೇಗೆ ಸುರಕ್ಷಿತ?

ಮ್ಯೂಚುವಲ್ ಫಂಡ್‌ಗಳು (Equity Mutual Funds) ಶೇ. 12 ಕ್ಕಿಂತ ಹೆಚ್ಚಿನ ಆದಾಯ ನೀಡಬಹುದಾದರೂ, ಅವುಗಳಲ್ಲಿ ಮಾರುಕಟ್ಟೆಯ ಅಪಾಯವಿರುತ್ತದೆ (Market Risk). ಷೇರು ಮಾರುಕಟ್ಟೆ ಕುಸಿದಾಗ ನಿಮ್ಮ ಹಣದ ಮೌಲ್ಯವೂ ಕುಸಿಯುತ್ತದೆ.

ಆದರೆ, ಇಪಿಎಫ್ ಭಾರತ ಸರ್ಕಾರದಿಂದ ಖಾತರಿಪಡಿಸಲ್ಪಟ್ಟ ಸಂಪೂರ್ಣ ಸುರಕ್ಷಿತ ಹೂಡಿಕೆಯಾಗಿದೆ. ಸ್ಥಿರವಾದ ಆರ್ಥಿಕ ಭವಿಷ್ಯ ಮತ್ತು ನಿವೃತ್ತಿ ಜೀವನಕ್ಕಾಗಿ (Retirement Planning) ಯಾವುದೇ ಅಪಾಯವಿಲ್ಲದೆ ಶೇ. 8.25 ರಷ್ಟು ಗ್ಯಾರಂಟಿ ರಿಟರ್ನ್ಸ್ ನೀಡುವ ಮತ್ತೊಂದು ಹೂಡಿಕೆ ಸದ್ಯಕ್ಕೆ ಮಾರುಕಟ್ಟೆಯಲ್ಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ – Kannada News

ಇಸ್ಲಮಾಬಾದ್, ಜೂನ್ 10: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸೇನೆಗೆ ಸೇರಿದ ಯುದ್ಧ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ. ಈ ದುರಂತದಲ್ಲಿ ಅದರಲ್ಲಿದ್ದ ಎಲ್ಲಾ ಸೈನಿಕರು ದುರ್ಮರಣಕ್ಕೀಡಾಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆಯಕಟ್ಟಿನ ಪ್ರದೇಶವೊಂದರಲ್ಲಿ ಪಾಕಿಸ್ತಾನ ಸೇನೆಗೆ ಸೇರಿದ ಹೆಲಿಕಾಪ್ಟರ್ ಭೀಕರವಾಗಿ ಪತನಗೊಂಡಿದೆ. ಹೆಲಿಕಾಪ್ಟರ್ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿದ್ದ ಉನ್ನತ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಐಎಸ್‌ಪಿಆರ್ (ISPR) ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹೆಲಿಕಾಪ್ಟರ್ ಪಿಒಕೆಯ ಮುಜಾಫರಾಬಾದ್ ಸಮೀಪದ ಸೇನಾ ನೆಲೆಯಿಂದ ತುರ್ತು ಕಾರ್ಯಾಚರಣೆಗಾಗಿ ಟೇಕ್-ಆಫ್ ಆಗುತ್ತಿತ್ತು. ನೆಲದಿಂದ ಕೆಲವೇ ಅಡಿಗಳಷ್ಟು ಎತ್ತರಕ್ಕೆ ಹಾರುತ್ತಿದ್ದಂತೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ರನ್‌ವೇ ಪಕ್ಕದ ಮೈದಾನಕ್ಕೆ ಅಪ್ಪಳಿಸಿತು. ಈ ವೇಳೆ ಇಂಧನ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ ಇಡೀ ಹೆಲಿಕಾಪ್ಟರ್ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿದೆ. ಅಪಘಾತದ ತೀವ್ರತೆಗೆ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು (ಮೇಜರ್ ಶ್ರೇಣಿಯ ಅಧಿಕಾರಿಗಳು) ಮತ್ತು ಇಬ್ಬರು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 4ರಿಂದ 5 ಸೈನಿಕರು ಸಜೀವ ದಹನವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತದೇಹಗಳನ್ನು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದು, ಅವುಗಳನ್ನು ಮುಜಾಫರಾಬಾದ್‌ನ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ; 30 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಲವು ದಿನಗಳಿಂದ ಪಿಒಕೆಯ ರಾವಲಕೋಟ್ ಮತ್ತು ಮೀರ್‌ಪುರ ಭಾಗಗಳಲ್ಲಿ ಜಾಯಿಂಟ್ ಅವಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಭಾರಿ ನಾಗರಿಕ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆಯು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮತ್ತು ಕಣ್ಗಾವಲು ಇಡಲು ಹೆಲಿಕಾಪ್ಟರ್‌ಗಳನ್ನು ಬಳಸುತ್ತಿತ್ತು. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವುದು ಪಾಕಿಸ್ತಾನ ರಕ್ಷಣಾ ಪಡೆಗಳಿಗೆ ದೊಡ್ಡ ಹಿನ್ನಡೆಯಾಗಿದೆ.

ದಾಳಿ ಅಥವಾ ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನು ಸದ್ಯಕ್ಕೆ ಪಾಕಿಸ್ತಾನ ಸೇನೆ ತಳ್ಳಿಹಾಕಿದ್ದು, ಕೇವಲ ಯಾಂತ್ರಿಕ ವೈಫಲ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಹೇಳಿದೆ. ಈ ಘಟನೆಯ ಕುರಿತು ಉನ್ನತ ಮಟ್ಟದ ಮಿಲಿಟರಿ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ, 11 ಮಕ್ಕಳು ಸೇರಿ 13 ಮಂದಿ ಸಾವು

ಪಾಕಿಸ್ತಾನದ ಚೀಫ್ ಆಫ್ ಆರ್ಮಿ ಸ್ಟಾಫ್ ಹಾಗೂ ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು, ಪಾಕಿಸ್ತಾನ ಸೇನೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹೆಲಿಕಾಪ್ಟರ್ ದುರಂತದಲ್ಲಿ ಜೀವಹಾನಿಯಾಗಿರುವುದಕ್ಕೆ ತೀವ್ರ ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಮಿಲಿಟರಿ ನಾಯಕತ್ವವು ಮೃತರ ಕುಟುಂಬಗಳಿಗೆ ತಮಗಿರುವ ತೀವ್ರ ಸಂತಾಪವನ್ನು ಸೂಚಿಸಿದ್ದು, ಕರ್ತವ್ಯದ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ನಮನ ಸಲ್ಲಿಸಿದೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೂ ಸಹ ಮುಜಾಫರಾಬಾದ್ ಸಮೀಪ ನಡೆದ ಹೆಲಿಕಾಪ್ಟರ್ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಸೇನಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, “ಪಾಕಿಸ್ತಾನದ ಮಣ್ಣಿನ ವೀರ ಪುತ್ರರ ತ್ಯಾಗಕ್ಕೆ ಇಡೀ ದೇಶವೇ ತಲೆಬಾಗುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:57 pm, Wed, 10 June 26

Source link

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

Source link

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

Source link