Category Archives: Blog

Your blog category

IND vs ENG: ಬದಲಾದ ಸಮಯದಲ್ಲಿ ಆರಂಭವಾಗಲಿದೆ ಭಾರತ- ಇಂಗ್ಲೆಂಡ್ ನಡುವಿನ ಟಿ20 ಸರಣಿ – Kannada News

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸರಣಿಯ ಬಳಿಕ ಭಾರತ ಟಿ20 ತಂಡ, ಟಿ20 ಸರಣಿಗಾಗಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ (India vs England) ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಹೊಸ ನಾಯಕನೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ಭಾರತದ ಯುವ ಪಡೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಕೂಡ ಈಗಾಗಲೇ ಪ್ರಕಟವಾಗಿತ್ತು. ಆದರೀಗ ಈ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಂದರೆ ಈ ಸರಣಿಯ ಪಂದ್ಯಗಳ ಆರಂಭದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಪಂದ್ಯಗಳ ಸಮಯದಲ್ಲಿ ಬದಲಾವಣೆ

ಈ ಮೊದಲು ಐದು ಪಂದ್ಯಗಳ ಟಿ20 ಸರಣಿ ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೀಗ ಪಂದ್ಯಗಳನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಅಂದರೆ ಪಂದ್ಯಗಳು ಈಗ ರಾತ್ರಿ 11 ಗಂಟೆಗೆ ಬದಲು ರಾತ್ರಿ 10 ಗಂಟೆಗೆ ಆರಂಭವಾಗಲಿವೆ. ಸರಣಿಯ ಮೂರು ಪಂದ್ಯಗಳು ರಾತ್ರಿ 10 ಗಂಟೆಗೆ ಆರಂಭವಾದರೆ ಉಳಿದ ಎರಡು ಪಂದ್ಯಗಳು ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿವೆ. ಈ ಸರಣಿಯ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್​ನಲ್ಲಿ ಪ್ರಸಾರವಾಗಲಿವೆ.

ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ

ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಜುಲೈ 1 ರಂದು ಆರಂಭವಾಗಲಿದ್ದು, ಎರಡೂ ತಂಡಗಳು ಐದು ಟಿ20 ಪಂದ್ಯಗಳನ್ನು ಆಡಲಿವೆ. ಮೊದಲ ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯು ಜುಲೈ 11 ರವರೆಗೆ ನಡೆಯಲಿದೆ.

  • ಮೊದಲ ಟಿ20- ಜುಲೈ 1
  • ಎರಡನೇ ಟಿ20- ಜುಲೈ 4
  • ಮೂರನೇ ಟಿ20- ಜುಲೈ 7
  • 4ನೇ ಟಿ20- ಜುಲೈ 9
  • 5ನೇ ಟಿ20- ಜುಲೈ 11

ಟಿ20 ಸರಣಿಯ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಏಕದಿನ ಸರಣಿಯೂ ನಡೆಯಲಿದೆ. ಈ ಏಕದಿನ ಸರಣಿಯು ಜುಲೈ 14 ರಿಂದ ಜುಲೈ 19 ರವರೆಗೆ ನಡೆಯಲಿದೆ. ಬಿಸಿಸಿಐ ಇನ್ನೂ ಏಕದಿನ ಸರಣಿಗೆ ತಂಡವನ್ನು ಘೋಷಿಸಿಲ್ಲ.

ಶ್ರೇಯಸ್ ಅಯ್ಯರ್​ಗೆ ಟಿ20 ತಂಡದ ನಾಯಕತ್ವ; ಯಾರಿಗೆ ಸಿಗಲಿದೆ ಉಪನಾಯಕತ್ವ?

ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಸ್ತೆ ಗುಂಡಿಗೆ ಬಿದ್ದು ಪ್ರಾಣ ಹೋದರೆ ಇಂಜಿನಿಯರ್‌ಗಳೇ ನೇರ ಹೊಣೆ’: ಸಚಿವ ಯು.ಟಿ.ಖಾದರ್ ಖಡಕ್ ವಾರ್ನಿಂಗ್ – Kannada News

ಯು.ಟಿ. ಖಾದರ್Image Credit source: Tv9 kannada

ಮಂಗಳೂರು, ಜೂ.8: ಮಳೆಗಾಲದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ತುರ್ತು ಸಂದರ್ಭ ಎದುರಾದಾಗ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿಯೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆದೇಶಿಸಿದರು.

ಸಭೆಯಲ್ಲಿ ರಸ್ತೆಗಳ ದುರಸ್ತಿ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಮಳೆಗಾಲದಲ್ಲಿ ರಸ್ತೆ ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಉಂಟಾದರೆ, ಅದಕ್ಕೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು. ಕೇವಲ ತಾತ್ಕಾಲಿಕವಾಗಿ ಪದೇ ಪದೇ ಗುಂಡಿ ಮುಚ್ಚುವ ನಾಟಕವಾಡುವುದನ್ನು ಬಿಟ್ಟು, ರಸ್ತೆಗಳ ಶಾಶ್ವತ ಕಾಮಗಾರಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.

ಮಳೆಗಾಲದಲ್ಲಿ ಸುರಿಯುವ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಮುರಿದು ಬಿದ್ದು ಉಂಟಾಗುವ ಅನಾಹುತಗಳನ್ನು ಮತ್ತು ಮಾನವ ನಿರ್ಮಿತ ಸಮಸ್ಯೆಗಳನ್ನು ತಗ್ಗಿಸಲು ಇಲಾಖೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ತ್ವರಿತವಾಗಿ ಮರುಸ್ಥಾಪಿಸಲು ಹೆಚ್ಚುವರಿ ಲೈನ್‌ಮ್ಯಾನ್‌ಗಳು ಹಾಗೂ ತುರ್ತು ವಾಹನಗಳನ್ನು ಬಳಸಿಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ನೆರೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಅಥವಾ ಮರಗಳು ಬಿದ್ದರೆ ಆಯಾ ಸ್ಥಳೀಯ ಸಂಸ್ಥೆಗಳು ಯಾವುದೇ ವಿಳಂಬ ಮಾಡದೇ ತಕ್ಷಣವೇ ತೆರವುಗೊಳಿಸಬೇಕು ಎಂದರು.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ವಿಪತ್ತು ನಿರ್ವಹಣೆಯನ್ನು ತಳಮಟ್ಟದಿಂದಲೇ ಬಲಪಡಿಸಲು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವರು ಆದೇಶಿಸಿದರು. ಯಾವುದೇ ಭಾಗದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಘ-ಸಂಸ್ಥೆಗಳನ್ನು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ ಸಚಿವರು, ಮಳೆಗಾಲದ ಸವಾಲುಗಳನ್ನು ಎದುರಿಸಲು ಇಡೀ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಸೂಚನೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ನಲ್ಲಿನ ಭಾರತೀಯರು ತಕ್ಷಣ ದೇಶ ಬಿಟ್ಟು ಹೊರಡಿ; ಭಾರತ ಆದೇಶ – Kannada News

ನವದೆಹಲಿ, ಜೂನ್ 8: ಇರಾನ್ (Iran War) ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷ ಹಾಗೂ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಹೊಸ ಎಚ್ಚರಿಕೆಗಳನ್ನು ನೀಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಭಾರತೀಯ ನಾಗರಿಕರಿಗೆ ಇರಾನ್‌ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ದಾಳಿ ನಿಲ್ಲುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ ಪರಸ್ಪರ ಇಂಧನ ಹಾಗೂ ಮಿಲಿಟರಿ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿರುವ ಅಥವಾ ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ಅಲ್ಲಿಗೆ ಹೋಗಿರುವ ಎಲ್ಲಾ ಭಾರತೀಯ ನಾಗರಿಕರು ತಕ್ಷಣವೇ ಇರಾನ್ ತೊರೆದು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ. ಇರಾನ್ ತನ್ನ ವಾಯುಪ್ರದೇಶವನ್ನು ಯಾವುದೇ ಕ್ಷಣದಲ್ಲಾದರೂ ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇರುವುದರಿಂದ, ವಿಮಾನ ಯಾನ ಸೇವೆಗಳು ಸ್ಥಗಿತಗೊಳ್ಳುವ ಮುನ್ನವೇ ದೇಶ ತೊರೆಯಲು ಸೂಚಿಸಲಾಗಿದೆ.

ಇದನ್ನೂ ಓದಿ: ಅಮೆರಿಕವನ್ನು ನಂಬುವುದಿಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ; ಇರಾನ್​ ವಿದೇಶಾಂಗ ಸಚಿವ ಅರಘ್ಚಿ

ಇರಾನ್‌ನಿಂದ ತಕ್ಷಣವೇ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಭಾರತೀಯರಿಗೆ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ತಿಳಿಸಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತಕ್ಷಣವೇ ಸಂಪರ್ಕ ಸಾಧಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ. ಇರಾನ್ ದೇಶದ ಒಳಗಡೆಯೂ ಅನಗತ್ಯವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದೆ. ವಸತಿ ಪ್ರದೇಶಗಳಿಂದ ದೂರವಿರದೆ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲಿ ಇರಬೇಕಾಗಿ ವಿನಂತಿಸಲಾಗಿದೆ.

ಇದನ್ನೂ ಓದಿ: ‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್

ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 24/7 ತುರ್ತು ಸಹಾಯವಾಣಿಯನ್ನು ತೆರೆದಿದ್ದು, ಯಾವುದೇ ಆಪತ್ತಿನ ಸಮಯದಲ್ಲಿ ಭಾರತೀಯ ನಾಗರಿಕರು ರಾಯಭಾರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಭಾರತ ಸರ್ಕಾರವು ಅಲ್ಲಿರುವ ತನ್ನ ನಾಗರಿಕರ ಸುರಕ್ಷತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಪ್ರಸ್ತುತ ಇರಾನ್‌ನಲ್ಲಿ ಸುಮಾರು 7,500 ಭಾರತೀಯರು ಸಿಲುಕಿಕೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಅಲ್ಲಿದ್ದಾರೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ನ ಭೂ ಗಡಿಗಳ ಮೂಲಕ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನ ಉಪ್ಪಿನಿಂದ ಬದುಕಿಸಬಹುದಾ? ಮೂಢನಂಬಿಕೆಯ ಸತ್ಯಾಸತ್ಯತೆ ಅನಾವರಣ – Kannada News

ಬಾಗಲಕೋಟೆ, (ಜೂನ್ 08): ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯನ್ನು ನಾಲ್ಕು ಗಂಟೆಗಳವರೆಗೆ ಉಪ್ಪಿನಲ್ಲಿ ಮುಚ್ಚಿದರೆ ಮತ್ತೆ ಬದುಕಿಸಬಹುದು ಎನ್ನುವ ಮೂಢನಂಬಿಕೆ ಸಂದೇಶ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಆದ್ರೆ, ಇದರ ಸತ್ಯಾಸತ್ಯೆ ಬಾಗಲಕೋಟೆಯ ಮಗುವಿನ ಮೇಲೆ ಪ್ರಯೋಗ ಮಾಡಿದಾಗ ಅನಾವರಣಗೊಂಡಿದೆ. ಹೌದು…ಬಾಗಲಕೋಟೆಯ (Bagalkot) ನವನಗರದಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದೆ.  ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್‌ಗೆ ಬಿದ್ದಿದೆ.  ಆದರೆ, ಮಗುವನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ, ಪೋಷಕರು ಆಕೆಯ ದೇಹವನ್ನು ಗಂಟೆಗಟ್ಟಲೆ ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದಾರೆ. ಆದರೂ ಮಗು ಮಾತ್ರ ಬದುಕಲಿಲ್ಲ. ಕೊನೆಗೆ ವೈದ್ಯರ ಸೂಚನೆ ಮೇರೆಗೆ ಮಗುವಿನ ಮೃತ ದೇಹವನ್ನು ಹೊರತೆಗೆಲಾಯ್ತು.

ಮುಖ್ಯಾಂಶಗಳು

  • ನೀರಿನ ಟ್ಯಾಂಕ್​ನಲ್ಲಿ ಮುಳುಗಿ 18 ತಿಂಗಳ ಹೆಣ್ಣು ಮಗು ಸಾವು
  • ಬಾಗಲಕೋಟೆ ಸೆಕ್ಟರ್ ನಂಬರ್ 38ರಲ್ಲಿ ಅಮೀನಾ ಪಠಾಣ್ ಸಾವು
  • ಉಪ್ಪಿನಲ್ಲಿ ಮುಳುಗಿಸಿಟ್ಟರೆ ಮಗು ಬದುಕುತ್ತೆ ಎಂಬ ನಂಬಿಕೆ ಹಿನ್ನೆಲೆ
  • 2 ತಾಸಿಗೂ ಹೆಚ್ಚು ಕಾಲ ಉಪ್ಪಿನಲ್ಲಿ ಮುಳುಗಿಸಿಟ್ಟರೂ ಬದುಕದ ಮಗು

ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್‌ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಉಪ್ಪಿನಲ್ಲಿಟ್ಟರೇ ಮಗು ಬದುಕುತ್ತೆ ಎಂಬ ನಂಬಿಕೆ

ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಹೀಗಾಗಿ, ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದಾರೆ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪವಾಡಗಳು ನಡೆಯದಿದ್ದಾಗ ಮತ್ತು ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದಿದ್ದಾಗ ಪೋಷಕರು ನಿರಾಶೆಗೊಂಡಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಶವ ಹೊರಕ್ಕೆ

ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿ, ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ವೈದ್ಯರ ಮಾತನ್ನು ಕೇಳಿದ ಕುಟುಂಬಸ್ಥರು ಕೊನೆಗೂ ಮಗುವಿನ ದೇಹವನ್ನು ಉಪ್ಪಿನಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಯ್ತು. ನಂತರ ಪೋಷಕರು ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಇದರೊಂದಿಗೆ ಸಾರ್ವಜನಿಕರಲ್ಲಿ ಮನವಿ ಏನೆಂದರೆ ಅರೇಬರೇ ಜೀವ ಇದ್ದಾಗಲು ಇಂತಹ ಮೂಢನಂಬಿಕೆಗಳನ್ನು ನಂಬಿಕೊಂಡು ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು.  ಜೀವ ಉಳಿಸಲು ವೈದ್ಯಕೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:52 pm, Mon, 8 June 26

Source link

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News

ಇಂದಿನ ಈ ಬ್ಯುಸಿ, ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಅತ್ಯಗತ್ಯ.  ಅಲ್ಲದೆ ವ್ಯಾಯಾಮ (exercise) ಫಿಟ್‌ ಆಗಿರಲು, ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡುವುದು. ಇಂದಿನ ಯುವ ಪೀಳಿಗೆ ಫಿಟ್‌ ಆಗಿರುವ ಸಲುವಾಗಿ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡ್ತಾರೆ. ವ್ಯಾಯಾಮ ಫಿಟ್‌ ಆಗಿರಲು ಸಹಾಯ ಮಾಡುವುದಲ್ಲದೆ ಸಾಕಷ್ಟು ಪ್ರಯೋಜನಗಳನ್ನು ಸಹ ಹೊಂದಿವೆ. ಮನಸ್ಥಿತಿಯನ್ನು ಸುಧಾರಿಸುವುದರಿಂದ ಹಿಡಿದು ಅನೇಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟುವರೆಗೆ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.

ದೈನಂದಿನ ವ್ಯಾಯಾಮದ ಪ್ರಯೋಜನಗಳೇನು?

ಸಂತೋಷವಾಗಿರಲು ಸಹಕಾರಿ: ದೈನಂದಿನ ವ್ಯಾಯಾಮವು ನಿಮಗೆ ಸಂತೋಷವನ್ನು ಅನುಭವಿಸಲು ಸಹಾಯ ಮಾಡುತ್ತದೆ. ವ್ಯಾಯಾಮವು ದೇಹವನ್ನು ಸದೃಢವಾಗಿಡಲು ಸಹಾಯ ಮಾಡುವುದಲ್ಲದೆ, ಸಂತೋಷದ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತೂಕವನ್ನು ನಿಯಂತ್ರಣದಲ್ಲಿಡುತ್ತದೆ: ನೀವು ಪ್ರತಿದಿನ ವ್ಯಾಯಾಮ ಮಾಡಿದರೆ, ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ. ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗಿದಾಗ, ನಿಮ್ಮ ದೇಹವು ಕ್ಯಾಲೊರಿಗಳನ್ನು ಸುಡುತ್ತದೆ. ನೀವು ಫಿಟ್‌ ಆಗಿರಬಹುದು.

ಅನೇಕ ಗಂಭೀರ ಕಾಯಿಲೆಗಳನ್ನು ತಡೆಯುತ್ತದೆ: ನಿಯಮಿತ ವ್ಯಾಯಾಮವು ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ, ತೂಕ ಹೆಚ್ಚಾಗುವುದನ್ನು ತಡೆಯುತ್ತದೆ ಮತ್ತು ಹೃದಯ ಕಾಯಿಲೆ, ಕೊಲೆಸ್ಟ್ರಾಲ್, ಮಧುಮೇಹ, ರಕ್ತದೊತ್ತಡ, ಒತ್ತಡ, ಖಿನ್ನತೆ, ಸಂಧಿವಾತ ಮತ್ತು ವಿವಿಧ ರೀತಿಯ ಕ್ಯಾನ್ಸರ್‌ಗಳಂತಹ ಮಾರಕ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಮನಸ್ಥಿತಿ ಸುಧಾರಣೆ: ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ನೀವು ಒತ್ತಡದಿಂದ ಬಳಲುತ್ತಿದ್ದರೆ, ಅರ್ಧ ಗಂಟೆ ನಡೆಯಿರಿ. ಇದು ತಕ್ಷಣವೇ ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ದೈಹಿಕ ಚಟುವಟಿಕೆಯು ತಕ್ಷಣವೇ ನಿಮ್ಮನ್ನು ಸಂತೋಷ, ಹೆಚ್ಚು ವಿಶ್ರಾಂತಿ ಪಡೆಯಲು ಮತ್ತು  ಆತಂಕದ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ: ನಿಮ್ಮ ದಿನಚರಿಯಿಂದ ನೀವು ದಣಿದಿದ್ದರೆ, ಪ್ರತಿದಿನ ವ್ಯಾಯಾಮ ಮಾಡುವುದನ್ನು ಪರಿಗಣಿಸಿ. ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನಿದ್ರೆಗೆ ಭಂಗ ಉಂಟಾಗಲು ನಿಮ್ಮ ಅಭ್ಯಾಸಗಳೇ ಕಾರಣ

ನಿದ್ರೆಯನ್ನು ಸುಧಾರಿಸುತ್ತದೆ: ಇಂದಿನ ದಿನಗಳಲ್ಲಿ ಒತ್ತಡದ ಕಾರಣದಿಂದ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೂ ಸಹ ನಿದ್ರೆ ಮಾಡಲು ಕಷ್ಟಸಾಧ್ಯವಾದರೆ ನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.ಇದು ನಿಮಗೆ ವೇಗವಾಗಿ ನಿದ್ರಿಸಲು ಮತ್ತು ಹೆಚ್ಚು ಆಳವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮವು ಮನಸ್ಸನ್ನು ಶಾಂತಗೊಳಿಸುತ್ತದೆ.

ಬೊಜ್ಜು ನಿವಾರಣೆ: ನೀವು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯ ವ್ಯಾಯಾಮ ಮಾಡಿ. ದೈನಂದಿನ ವ್ಯಾಯಾಮವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡುತ್ತದೆ, ಇದು ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ: ಸಕಾರಾತ್ಮಕ ಚಿಂತನೆಯು ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ವ್ಯಾಯಾಮವು ನಿಮ್ಮ ಮನಸ್ಸನ್ನು ನಿರ್ವಿಷಗೊಳಿಸುತ್ತದೆ ಮತ್ತು ಸಕಾರಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ಇದು ನಿಮ್ಮ ಆಲೋಚನೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ, ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್ – Kannada News

‘ಕೆರೆಬೇಟೆ’ ಖ್ಯಾತಿಯ ನಟ ಗೌರಿಶಂಕರ್ ಅವರು ‘ಕಾಮನ್ ಮ್ಯಾನ್’ (Common Man) ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆದರೆ ಏನಾಗುತ್ತದೆ ಎಂಬುದು ಈ ಸಿನಿಮಾದ ಕಥೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನಿರ್ಮಾಪಕ ಎನ್. ನರಸಿಂಹಮೂರ್ತಿ ಅವರ ಜನ್ಮದಿನದ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಓಂ ಸಾಯಿ ಪ್ರಕಾಶ್ (Om Sai Prakash) ಅವರು ಮಾತನಾಡಿದರು. ‘ಚುನಾವಣೆಯಲ್ಲಿ ನಿಲ್ಲದೆಯೇ ಯಾವ ರೀತಿ ಸಿಎಂ ಆಗಿದ್ದಾರೆ ಎಂಬುದು ಈ ಕಥೆಯಲ್ಲಿನ ಸಸ್ಪೆನ್ಸ್. ಗೌರಿಶಂಕರ್ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ತಿಂಗಳಲ್ಲಿ ಸೆನ್ಸಾರ್ ಪ್ರಕ್ರಿಯೆ ಮುಗಿದರೆ ನಂತರ ರಿಲೀಸ್ ದಿನಾಂಕ ತಿಳಿಸುತ್ತೇವೆ. ಮಳೆಗಾಲದ ಬಳಿಕ ರಿಲೀಸ್ ಮಾಡಬೇಕು ಎಂಬ ಆಸೆ ಇದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕರಗಿದ ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು – Kannada News

ವಿಶಾಖಪಟ್ಟಣಂ, ಜೂನ್ 8: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ರಸಿದ್ಧ ವೈಜಾಗ್ ಸ್ಟೀಲ್ ಪ್ಲಾಂಟ್‌ನ (Visakhapatnam Steel Plant) ಎಸ್‌ಎಂಎಸ್-2 ವಿಭಾಗದಲ್ಲಿ ದುರಂತ ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಎಂದಿನಂತೆ ಕೆಲಸ ನಡೆಯುತ್ತಿದ್ದಾಗ, ಕರಗಿದ ದ್ರವರೂಪದ ಕಬ್ಬಿಣವನ್ನು ಕ್ರೇನ್​ನಲ್ಲಿ ಸಾಗಿಸುತ್ತಿದ್ದಾಗ ಬೃಹತ್ ಬಕೆಟ್ ಇದ್ದಕ್ಕಿದ್ದಂತೆ ಉರುಳಿಬಿದ್ದಿದೆ. ಅತಿ ಹೆಚ್ಚು ಬಿಸಿಯಾಗಿದ್ದ ಕರಗಿದ ಕಬ್ಬಿಣವು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ನೇರವಾಗಿ ಚೆಲ್ಲಿದ್ದರಿಂದ, ಸ್ಥಳದಲ್ಲೇ 8 ಜನ ಕಾರ್ಮಿಕರು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಹಲವು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಸ್ಟೀಲ್ ಪ್ಲಾಂಟ್ ಜನರಲ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಕಾರ್ಖಾನೆಯ ಸುರಕ್ಷತಾ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ.

ಇದನ್ನೂ ಓದಿ: Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!

ಕ್ರೇನ್ ಮೂಲಕ ಚಲಾಯಿಸಲಾಗುತ್ತಿದ್ದ ಬಕೆಟ್‌ನಲ್ಲಿ ಕರಗಿದ ಕಬ್ಬಿಣವನ್ನು ಸಾಗಿಸುವಾಗ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ಸಮಯದಲ್ಲಿ ಆ ಲೋಹವು ಸುಮಾರು 1,600 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿತ್ತು ಎಂದು ವರದಿಯಾಗಿದ್ದು, ಇದೇ ಕಾರಣಕ್ಕೆ ಈ ಅಪಘಾತವು ಅತ್ಯಂತ ಭೀಕರ ಹಾಗೂ ವಿನಾಶಕಾರಿಯಾಗಿ ಮಾರ್ಪಟ್ಟಿದೆ.

ಆ ಪ್ರದೇಶದಲ್ಲಿ ಹರಡಿಕೊಂಡಿರುವ ಕರಗಿದ ಕಬ್ಬಿಣದ ತಾಪಮಾನವನ್ನು ಕಡಿಮೆ ಮಾಡಲು ಮತ್ತು ಸಿಲುಕಿರುವ ಇತರ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಟೀಲ್ ಪ್ಲಾಂಟ್‌ನ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಇದನ್ನೂ ಓದಿ: ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್

ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲು ಕಾರ್ಖಾನೆಯ ಆಡಳಿತ ಮಂಡಳಿಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕಾರ್ಮಿಕರ ಸಾವು ಕೈಗಾರಿಕಾ ವಲಯದಲ್ಲಿ ತೀವ್ರ ಕಳವಳ ಮತ್ತು ಶೋಕವನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮೂರು ನಮ್ಮವರು’ ಆಲ್ಬಂ ಸಾಂಗ್ ಮೂಲಕ ಜನಜಾಗೃತಿ ಮೂಡಿಸುವ ಕೆಲಸ – Kannada News

ಇತ್ತೀಚಿನ ದಿನಗಳಲ್ಲಿ ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಬಡವರು, ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ ವಿರುದ್ಧ ಅಲ್ಲಲ್ಲಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿದ್ದರೂ, ಅದಾವುದಕ್ಕೂ ಇನ್ನೂ ಪೂರ್ಣ ಕಡಿವಾಣವಂತೂ ಬಿದ್ದಿಲ್ಲ ಎಂಬುದು ವಾಸ್ತವ. ಈಗ ಇದೇ ಭ್ರಷ್ಟಾಚಾರ, ಅನ್ಯಾಯ, ಸಾಮಾಜಿಕ ಅಸಮಾನತೆಯ ವಿರುದ್ಧ ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳ ತಂಡವೊಂದು ‘ನಮ್ಮೂರು ನಮ್ಮವರು’ ಎಂಬ ಮ್ಯೂಸಿಕ್ ವಿಡಿಯೋ (Kannada Album Song) ಮೂಲಕ ಜನಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿದೆ.

‘ನಮ್ಮೂರು ನಮ್ಮವರು’ ಶೀರ್ಷಿಕೆಯಲ್ಲಿ ತಯಾರಾಗಿರುವ ಈ ಮ್ಯೂಸಿಕ್ ವಿಡಿಯೋದಲ್ಲಿ ‘ಭಾವತೀರ ಯಾನ’ ಚಿತ್ರದ ಹೀರೋ ತೇಜಸ್ ಕಿರಣ್, ‘ಡಿಕೆಡಿ’ ಖ್ಯಾತಿಯ ಶಶಿನ್ ಆರ್. ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಖ್ಯಾತಿಯ ಭವಾನಿ ಪುರೋಹಿತ್, ‘ಮಗ್ಗಿ ಪುಸ್ತಕ’ ಚಿತ್ರದ ಖ್ಯಾತಿಯ ನಟ ಸಂದೀಪ್ ರಾಜಗೋಪಾಲ್, ನಟರಾದ ಸುನಿಲ್, ಅರುಣ್, ಮುರುಡಯ್ಯ ಸೇರಿದಂತೆ ಅನೇಕ ಕಲಾವಿದರು ತೆರೆಮೇಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದಾರೆ.

ಈ ಮೊದಲು ‘ಶಾಖಾಹಾರಿ’, ‘ಭಾವತೀರ ಯಾನ’, ‘ಪಬ್ಬಾರ್’ ಸೇರಿದಂತೆ ಹಲವು ಸದಭಿರುಚಿ ಸಿನಿಮಾಗಳಿಗೆ ವಿಭಿನ್ನ ರೀತಿಯಲ್ಲಿ ಸಂಗೀತ ಸಂಯೋಜಿಸಿ, ಯುವ ಸಂಗೀತ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಯೂರ್ ಅಂಬೇಕಲ್ಲು ಅವರು ‘ನಮ್ಮೂರು ನಮ್ಮವರು’ ಗೀತೆಗೆ ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ವಿಶಾಕ್ ನಾಗಲಾಪುರ ಈ ಹಾಡಿನ ಸಾಹಿತ್ಯ ರಚಿಸಿದ್ದಾರೆ.

‘ನಮ್ಮೂರು ನಮ್ಮವರು’ ಮ್ಯೂಸಿಕ್ ವಿಡಿಯೋ:

‘ಭಾವತೀರ ಯಾನ’, ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’, ‘ಉಡಾಳ’, ‘ಇನ್ ಹಿಸ್ ನೇಮ್’ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ ಅನುಭವ ಹೊಂದಿರುವ ಛಾಯಾಗ್ರಹಕ ಶಿವಶಂಕರ ನೂರಂಬಡ ಅವರು ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಅನು ರಂಜನ್ ಹೆಚ್.ಆರ್. ಅವರು ಸಂಕಲನ ಮತ್ತು ಡಿಐ ಕೆಲಸ ಮಾಡಿದ್ದಾರೆ. ಶಿಬಿನ್ ನಡು ವೀಟ್ಟಿಲ್ ಆಡಿಯೋಗ್ರಫಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ‘ನೀ ನಂಗೆ ಅಲ್ಲವ’ ಹಾಡನ್ನು ಸಂಜಿತ್ ಹಾಡಿದ್ದು ಯಾರಿಗಾಗಿ? ಉತ್ತರಿಸಿದ ಗಾಯಕ

‘ನಮ್ಮೂರು ನಮ್ಮವರು’ ಮ್ಯೂಸಿಕ್ ವಿಡಿಯೋ ಬಗ್ಗೆ ತಂಡದವರು ಮಾತನಾಡಿದ್ದಾರೆ. ‘ಇದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿರುವ ಒಂದು ಕಾರ್ಯ. ಹಾಡಿನ ಮೂಲಕ ಸಂಘಟನೆಯ ಆಶಯ, ಮಣ್ಣಿನ ನಂಟು, ಜನರ ಆತ್ಮೀಯತೆ ಹಾಗೂ ಸಮುದಾಯದ ಒಗ್ಗಟ್ಟಿನ ದನಿ, ಹಾಗೂ ಅದರ ಶಕ್ತಿಗಳನ್ನು, ಸಂಗೀತ ಮತ್ತು ದೃಶ್ಯ ರೂಪದಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನ ಮಾಡಲಾಗಿದೆ. ಇದು ಕೇವಲ ಒಂದು ಗೀತೆಯಲ್ಲ. ಬದ್ಧತೆಯನ್ನು ಪ್ರತಿಧ್ವನಿಸುವ ಸಮೂಹ ಧ್ವನಿಯಾಗಿದೆ. ಈ ಗೀತೆಯ ಮೂಲಕ ನಮ್ಮೂರು ನಮ್ಮವರು ಎಂಬ ದೃಷ್ಟಿಕೋನವನ್ನು ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾಗುವಂತೆ ಪರಿಚಯಿಸಲಾಗುತ್ತದೆ’ ಎಂದು ತಂಡದವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂನ್​​ನಲ್ಲಿ ಶುಕ್ರ ಗೋಚಾರ ಫಲ: ಕರ್ಕಾಟಕದಲ್ಲಿ ಶುಕ್ರನ ಸಂಚಾರ; ಈ ರಾಶಿಯವರಿಗೆ ಒಲಿಯಲಿದೆ ಅಪಾರ ಸಂಪತ್ತು, ಧನಲಾಭದ ರಾಜಯೋಗ! – Kannada News

ಕಾಲಜ್ಞಾನ ಶಾಸ್ತ್ರದಲ್ಲಿ ಕರ್ಕಾಟಕ ರಾಶಿಯಲ್ಲಿರುವ ಶುಕ್ರನು ಸ್ಥಿತಿಯು ಗುರುವಿನ ದ್ರೇಕ್ಕಾಣ, ರವಿಯ ಹೋರೆ, ಶನಿಯ ನವಾಂಶ, ಕುಜನ ತ್ರಿಂಶಾಂಶ, ಶುಕ್ರನ ದ್ವಾದಶಾಂಶದಲ್ಲಿ ಜೂನ್ ತಿಂಗಳಿನಲ್ಲಿ ಇದ್ದು ಮಿಶ್ರಫಲ ನೀಡುವನು.

​ಮೇಷ ರಾಶಿ :

​ಶುಕ್ರನು ಸುಖಸ್ಥಾನದಲ್ಲಿದ್ದು ಮಿಶ್ರಫಲ ನೀಡುವನು. ರವಿಯ ಹೋರೆಯಿಂದಾಗಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರವಿರಲಿ. ಶನಿಯ ನವಾಂಶದಲ್ಲಿದ್ದು ವೃತ್ತಿರಂಗದಲ್ಲಿ ಕಠಿಣ ಪರಿಶ್ರಮವನ್ನು ಬೇಡುತ್ತದೆ. ಕುಜನ ತ್ರಿಂಶಾಂಶದಿಂದಾಗಿ ಆತುರದ ನಿರ್ಧಾರಗಳು ನಷ್ಟ ತರಬಹುದು. ಶುಕ್ರದಶೆ ನಡೆಯುತ್ತಿರುವ ಈ ರಾಶಿಯ ಕಲಾಪ್ರೇಮಿಗಳು, ಕೃಷಿಕರು ಮತ್ತು ಭೂ ವ್ಯವಹಾರಸ್ಥರಿಗೆ ಈ ತಿಂಗಳು ಆರ್ಥಿಕವಾಗಿ ಹೆಚ್ಚಿನ ಧನಲಾಭ ಹಾಗೂ ವಿಶೇಷ ಪ್ರಯೋಜನವನ್ನು ತಂದುಕೊಡಲಿದೆ.

​ವೃಷಭ ರಾಶಿ ;

​ಶುಕ್ರನು ತೃತೀಯದಲ್ಲಿದ್ದು ಧೈರ್ಯ ಹೆಚ್ಚಿಸುವನು. ಗುರುವಿನ ದ್ರೇಕ್ಕಾಣದಿಂದಾಗಿ ಸಹೋದರರೊಂದಿಗೆ ಬಾಂಧವ್ಯ ವೃದ್ಧಿ ಹಾಗೂ ಆಧ್ಯಾತ್ಮಿಕ ಪ್ರಗತಿಯಾಗಲಿದೆ. ಆದರೆ ಶನಿಯ ನವಾಂಶವು ಪ್ರಯಾಣದಲ್ಲಿ ಅಡೆತಡೆ ತರಬಹುದು. ಕುಜನ ಪ್ರಭಾವದಿಂದ ಕೋಪ ನಿಯಂತ್ರಿಸಿ. ರಾಶ್ಯಾಧಿಪತಿ ಶುಕ್ರನ ದಶೆ ನಡೆಯುತ್ತಿರುವ ವೃಷಭ ರಾಶಿಯ ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಈ ತಿಂಗಳು ಅತ್ಯಂತ ಲಾಭದಾಯಕ ಹಾಗೂ ಯಶಸ್ವಿ ಎನಿಸಲಿದೆ.

​ಮಿಥುನ ರಾಶಿ :

​ಧನಸ್ಥಾನದ ಶುಕ್ರನು ಆರ್ಥಿಕ ಸುಧಾರಣೆ ತರುವನು. ರವಿ ಹೋರೆಯಿಂದಾಗಿ ಕಣ್ಣಿನ ಸಮಸ್ಯೆ ಅಥವಾ ತಲೆನೋವು ಕಾಡಬಹುದು. ಗುರು ದ್ರೇಕ್ಕಾಣವು ಹಿರಿಯರಿಂದ ಆಸ್ತಿ ಅಥವಾ ಧನಸಹಾಯವನ್ನು ಒದಗಿಸಲಿದೆ. ಶನಿ ನವಾಂಶವು ಸಾಲದ ಸುಳಿಗೆ ಸಿಲುಕದಂತೆ ಎಚ್ಚರಿಸುತ್ತದೆ. ಪ್ರಸ್ತುತ ಶುಕ್ರದಶೆ ನಡೆಯುತ್ತಿರುವ ಮಿಥುನ ರಾಶಿಯ ಬ್ಯಾಂಕಿಂಗ್ ಕ್ಷೇತ್ರ, ವಾಗ್ಮಿಗಳು, ಉಪನ್ಯಾಸಕರು ಮತ್ತು ವಿದೇಶಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ವಿಶೇಷ ಧನಲಾಭ ಹಾಗೂ ಅಭಿವೃದ್ಧಿಯ ಪ್ರಯೋಜನ ಸಿಗಲಿದೆ.

​ಕರ್ಕಾಟಕ ರಾಶಿ :

​ಲಗ್ನದಲ್ಲೇ ಶುಕ್ರನಿರುವುದರಿಂದ ಆಕರ್ಷಣೆ ಹೆಚ್ಚಲಿದೆ. ಗುರುವಿನ ದ್ರೇಕ್ಕಾಣದ ಶುಭ ಪ್ರಭಾವದಿಂದ ಮಾನಸಿಕ ನೆಮ್ಮದಿ, ಧಾರ್ಮಿಕ ಆಸಕ್ತಿ ಮೂಡುತ್ತದೆ. ರವಿಯ ಹೋರೆಯು ಸಮಾಜದಲ್ಲಿ ಗೌರವ ತರಲಿದೆ. ಆದರೆ ಕುಜ ತ್ರಿಂಶಾಂಶವು ದಾಂಪತ್ಯದಲ್ಲಿ ಸಣ್ಣ ಭಿನ್ನಾಭಿಪ್ರಾಯ ಉಂಟುಮಾಡಬಹುದು. ಶುಕ್ರದಶೆ ನಡೆಯುತ್ತಿರುವ ಈ ರಾಶಿಯ ಮಹಿಳೆಯರು, ಸೌಂದರ್ಯವರ್ಧಕ ವ್ಯಾಪಾರಿಗಳು, ಕಲಾಪ್ರತಿಭೆಗಳು ಮತ್ತು ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಈ ತಿಂಗಳು ಅಪಾರ ಗೌರವ ಮತ್ತು ಪ್ರಗತಿಯ ಪ್ರಯೋಜನ ನೀಡಲಿದೆ.

​ಸಿಂಹ ರಾಶಿ :

​ವ್ಯಯಸ್ಥಾನದ ಶುಕ್ರನಿಂದಾಗಿ ಐಷಾರಾಮಿ ವಸ್ತುಗಳಿಗೆ ವೆಚ್ಚ ಹೆಚ್ಚಾಗಲಿದೆ. ಗುರು ದ್ರೇಕ್ಕಾಣವು ಧರ್ಮಕಾರ್ಯಗಳಿಗೆ ಹಣ ವಿನಿಯೋಗಿಸುವಂತೆ ಮಾಡುತ್ತದೆ. ಶನಿ ನವಾಂಶವಿರುವುದರಿಂದ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಅತಿ ಜಾಗ್ರತೆ ಅಗತ್ಯ. ಕುಜ ತ್ರಿಂಶಾಂಶವು ಶತ್ರುಬಾಧೆ ತರಬಹುದು. ಶುಕ್ರದಶೆ ನಡೆಯುತ್ತಿರುವ ಸಿಂಹ ರಾಶಿಯ ವಿದೇಶಿ ಉದ್ಯೋಗಿಗಳು, ಆಸ್ಪತ್ರೆ ಮತ್ತು ಫಾರ್ಮಾ ರಂಗದವರು ಹಾಗೂ ರಫ್ತು-ಆಮದು ವ್ಯವಹಾರಸ್ಥರಿಗೆ ಈ ತಿಂಗಳು ಆರ್ಥಿಕವಾಗಿ ಹೆಚ್ಚಿನ ಲಾಭ ಮತ್ತು ಪ್ರಯೋಜನ ಸಿಗಲಿದೆ.

​ಕನ್ಯಾ ರಾಶಿ :

​ಲಾಭಸ್ಥಾನದ ಶುಕ್ರನು ಸರ್ವತೋಮುಖ ಪ್ರಗತಿ ನೀಡುವನು. ಗುರು ದ್ರೇಕ್ಕಾಣದಿಂದಾಗಿ ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ರವಿ ಹೋರೆಯು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಲಿದೆ. ಶನಿ ನವಾಂಶವು ಹಳೆಯ ಬಾಕಿ ವಸೂಲಾತಿಗೆ ಸಹಕಾರಿ. ಶುಕ್ರದಶೆ ನಡೆಯುತ್ತಿರುವ ಕನ್ಯಾ ರಾಶಿಯ ಷೇರು ಮಾರುಕಟ್ಟೆ ಹೂಡಿಕೆದಾರರು, ಮಾಹಿತಿ ತಂತ್ರಜ್ಞಾನದ ಉದ್ಯೋಗಿಗಳು ಮತ್ತು ಶಿಕ್ಷಣ ಸಂಸ್ಥೆ ನಡೆಸುವವರಿಗೆ ಅತ್ಯುತ್ತಮ ಧನಲಾಭ ಹಾಗೂ ಯಶಸ್ಸಿನ ಪ್ರಯೋಜನ ಸಿಗಲಿದೆ.

​ತುಲಾ ರಾಶಿ :

​ದಶಮದ ಶುಕ್ರನು ವೃತ್ತಿಯಲ್ಲಿ ಸ್ಥಾನಪಲ್ಲಟ ಅಥವಾ ಬದಲಾವಣೆ ತರಬಹುದು. ಗುರುವಿನ ದ್ರೇಕ್ಕಾಣವು ಉದ್ಯೋಗದಲ್ಲಿ ಮೇಲಾಧಿಕಾರಿಗಳ ಬೆಂಬಲವನ್ನು ತಂದುಕೊಡುತ್ತದೆ. ಕುಜ ತ್ರಿಂಶಾಂಶದಿಂದಾಗಿ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಏರ್ಪಡಬಹುದು. ಶನಿಯ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಸಾಧ್ಯತೆ ಇದೆ. ರಾಶ್ಯಾಧಿಪತಿ ಶುಕ್ರನ ದಶೆ ನಡೆಯುತ್ತಿರುವ ತುಲಾ ರಾಶಿಯ ಸ್ವಯಂ ಉದ್ಯೋಗಿಗಳು, ವಾಹನ ಡೀಲರ್ಸ್, ರಾಜಕಾರಣಿಗಳು ಮತ್ತು ನವೋದ್ಯಮಿಗಳಿಗೆ ಈ ತಿಂಗಳಲ್ಲಿ ಯಶಸ್ಸು ಹಾಗೂ ಆರ್ಥಿಕ ಸುಧಾರಣೆಯ ಪ್ರಯೋಜನ ದೊರೆಯಲಿದೆ.

​ವೃಶ್ಚಿಕ ರಾಶಿ :

​ಭಾಗ್ಯಸ್ಥಾನದ ಶುಕ್ರನು ಅದೃಷ್ಟವನ್ನು ತರಲಿದ್ದಾನೆ. ಗುರುವಿನ ದ್ರೇಕ್ಕಾಣದಿಂದಾಗಿ ಸುದೀರ್ಘ ಧಾರ್ಮಿಕ ಪೂಜಾ ಕಾರ್ಯಗಳು ಕೈಗೂಡಲಿವೆ. ರವಿಯ ಹೋರೆಯು ತಂದೆಯ ಕಡೆಯಿಂದ ಆಸ್ತಿ ಲಾಭವನ್ನು ಸೂಚಿಸುತ್ತದೆ. ಆದರೆ ಕುಜನ ತ್ರಿಂಶಾಂಶವು ಪಿತ್ತ ಸಂಬಂಧಿ ಆರೋಗ್ಯ ಸಮಸ್ಯೆ ನೀಡಬಹುದು. ಶುಕ್ರದಶೆ ನಡೆಯುತ್ತಿರುವ ವೃಶ್ಚಿಕ ರಾಶಿಯ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಬರಹಗಾರರು, ಪುರೋಹಿತರು ಮತ್ತು ಜ್ಯೋತಿಷ್ಯ ಕ್ಷೇತ್ರದವರಿಗೆ ಈ ತಿಂಗಳು ಕೀರ್ತಿ ಹಾಗೂ ಆರ್ಥಿಕ ಪ್ರಯೋಜನ ಲಭಿಸುವುದು.

​ಧನು ರಾಶಿ :

​ಅಷ್ಟಮದ ಶುಕ್ರನು ಅನಿರೀಕ್ಷಿತ ಧನಲಾಭದ ಜೊತೆಗೆ ಸಣ್ಣ ಆರೋಗ್ಯ ಸಮಸ್ಯೆಯನ್ನೂ ನೀಡುವನು. ಗುರು ದ್ರೇಕ್ಕಾಣವು ಸಂಶೋಧನೆ ಮತ್ತು ಗೂಢ ವಿದ್ಯೆಗಳಲ್ಲಿ ಆಸಕ್ತಿ ಮೂಡಿಸುತ್ತದೆ. ರವಿಯ ಹೋರೆಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು. ಶನಿ ನವಾಂಶವು ಆಸ್ತಿ ವಿವಾದ ತರಬಹುದು. ಶುಕ್ರದಶೆ ನಡೆಯುತ್ತಿರುವ ಧನುರಾಶಿಯ ವಿಮಾ ಕ್ಷೇತ್ರದವರು, ಗಣಿ ಉದ್ಯಮಿಗಳು, ಪಿತ್ರಾರ್ಜಿತ ಆಸ್ತಿ ನಿರೀಕ್ಷೆಯಲ್ಲಿರುವವರು ಮತ್ತು ಸಂಶೋಧಕರಿಗೆ ಈ ತಿಂಗಳು ಅನಿರೀಕ್ಷಿತ ಧನಸಹಾಯದ ದೊಡ್ಡ ಪ್ರಯೋಜನ ಸಿಗಲಿದೆ.

​ಮಕರ ರಾಶಿ :

​ಸಪ್ತಮದ ಶುಕ್ರನು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುವನು. ಗುರುವಿನ ದ್ರೇಕ್ಕಾಣದ ಶುಭ ದೃಷ್ಟಿಯಿಂದ ಹೊಸ ಪಾಲುದಾರಿಕೆ ವ್ಯವಹಾರಗಳು ಲಾಭದಾಯಕವಾಗಿ ಪರಿಣಮಿಸಲಿವೆ. ರವಿಯ ಹೋರೆಯು ಸಮಾಜದಲ್ಲಿ ಕೀರ್ತಿ ತರಲಿದ್ದರೂ, ಕುಜ ತ್ರಿಂಶಾಂಶವು ಸಂಗಾತಿಯೊಂದಿಗೆ ಸಣ್ಣ ಜಗಳ ತರಬಹುದು. ಶುಕ್ರದಶೆ ನಡೆಯುತ್ತಿರುವ ಮಕರ ರಾಶಿಯ ಅವಿವಾಹಿತರು, ಜವಳಿ ಉದ್ಯಮಿಗಳು, ಸಿನೆಮಾ ಮತ್ತು ನಾಟಕ ರಂಗದ ಕಲಾವಿದರಿಗೆ ಈ ತಿಂಗಳು ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶಗಳ ಸುಂದರ ಪ್ರಯೋಜನ ಸಿಗಲಿದೆ.

​ಕುಂಭ ರಾಶಿ :

​ಷಷ್ಠದ ಶುಕ್ರನು ಆರೋಗ್ಯದ ಕಡೆ ಗಮನಹರಿಸಲು ಎಚ್ಚರಿಸುವನು. ಗುರು ದ್ರೇಕ್ಕಾಣದಿಂದಾಗಿ ಸಾಲದ ಬಾಧೆಗಳು ಸದ್ಯಕ್ಕೆ ಹತೋಟಿಗೆ ಬರಲಿವೆ. ರವಿ ಹೋರೆಯು ತಾಯಿಯ ಕಡೆಯವರಿಂದ ವಿರೋಧ ತರಬಹುದು. ಶನಿ ನವಾಂಶವಿರುವುದರಿಂದ ಶ್ರಮಕ್ಕೆ ತಕ್ಕ ಫಲ ತಡವಾಗಿ ಸಿಗಲಿದೆ. ಶುಕ್ರದಶೆ ನಡೆಯುತ್ತಿರುವ ಕುಂಭ ರಾಶಿಯ ವಕೀಲರು, ಬ್ಯಾಂಕ್ ಉದ್ಯೋಗಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಸಣ್ಣ ಕೈಗಾರಿಕೆ ಹೊಂದಿರುವವರಿಗೆ ಈ ತಿಂಗಳು ಕಠಿಣ ಶ್ರಮದ ಅನಂತರ ಯಶಸ್ಸಿನ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್?

ಮೀನ ರಾಶಿ :

​ಪಂಚಮದ ಶುಕ್ರನು ಬುದ್ಧಿಶಕ್ತಿ ಹಾಗೂ ಸೃಜನಶೀಲತೆ ಹೆಚ್ಚಿಸುವನು. ಗುರು ದ್ರೇಕ್ಕಾಣವು ಉನ್ನತ ಜ್ಞಾನ ಮತ್ತು ಧಾರ್ಮಿಕ ಚಿಂತನೆಗಳನ್ನು ವೃದ್ಧಿಗೊಳಿಸುತ್ತದೆ. ರವಿ ಹೋರೆಯಿಂದಾಗಿ ಮಕ್ಕಳ ಪ್ರಗತಿ ಕಂಡು ಆನಂದಿಸುವಿರಿ. ಆದರೆ ಕುಜ ತ್ರಿಂಶಾಂಶವು ಅತಿಯಾದ ಆತುರದಿಂದ ನಷ್ಟ ತರಬಹುದು. ಶುಕ್ರದಶೆ ನಡೆಯುತ್ತಿರುವ ಮೀನ ರಾಶಿಯ ಗರ್ಭಿಣಿಯರು, ಕಲಾ ಶಿಕ್ಷಕರು, ಹೂಡಿಕೆದಾರರು ಮತ್ತು ಆಧ್ಯಾತ್ಮಿಕ ಕ್ಷೇತ್ರ ದಲ್ಲಿರುವ ಜನರಿಗೆ ಈ ತಿಂಗಳು ದೈವಿಕ ಅನುಗ್ರಹ ಹಾಗೂ ಮಾನಸಿಕ ಶಾಂತಿಯ ವಿಶೇಷ ಪ್ರಯೋಜನ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:11 pm, Mon, 8 June 26

Source link

IND vs AFG: ಭಾರತ- ಅಫ್ಘನ್ ಏಕದಿನ ಸರಣಿ ಯಾವಾಗ ಆರಂಭ? ಎಷ್ಟು ಪಂದ್ಯಗಳು ನಡೆಯಲಿವೆ? – Kannada News

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಲಿದೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಏಕದಿನ ಸರಣಿ ಉಭಯ ತಂಡಗಳಿಗೂ ಬಹುಮುಖ್ಯವಾಗಿದೆ. ಆದಾಗ್ಯೂ ಈ ಸರಣಿಯಲ್ಲಿ ಕೊಹ್ಲಿ (Virat Kohlli) ಆಡುತ್ತಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಆಡುವುದು ಸಹ ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಈ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ ಯುವ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತ-ಅಫ್ಘಾನಿಸ್ತಾನ ಏಕದಿನ ಸರಣಿ

  • ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜೂನ್ 13 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.
  • ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ನಡೆಯಲಿದೆ.
  • ಮೂರನೇ ಏಕದಿನ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿರುತ್ತವೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಇಲ್ಲಿಯವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಟೀಂ ಇಂಡಿಯಾ ಮೂರರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಅಂದರೆ ಅಫ್ಘಾನಿಸ್ತಾನ ಇದುವರೆಗೆ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.

ಏಕದಿನ ಪಂದ್ಯಗಳು ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಪ್ರತಿಯೊಂದು ಪಂದ್ಯವೂ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿವೆ. ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಈ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಹಾಟ್​ಸ್ಟಾರ್​ನಲ್ಲೂ ನೇರಪ್ರಸಾರವಿರಲಿದೆ.

IND vs AFG: ಏಕದಿನ ಸರಣಿಯಿಂದ ಕೊಹ್ಲಿ ಔಟ್..! ಬದಲಿ ಆಟಗಾರನನ್ನು ಘೋಷಿಸಿದ ಬಿಸಿಸಿಐ

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಸ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಷಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ನಂಗ್ಯಾಲ್ ಖರೋಟೈ, ಎಎಮ್ ಗಜನ್ಫರ್, ಜಿಯಾ ಯು ರೆಹಮಾನ್ ಶರೀಫಿ, ಫರೀದ್ ಮಲಿಕ್, ಬಿಲಾಲ್ ಸಾಮಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:53 pm, Mon, 8 June 26

Source link