Category Archives: Blog

Your blog category

ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು – Kannada News

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಇಂಟರ್‌ನೆಟ್‌ (internet) ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ. ಈ ಜಗತ್ತಿನಲ್ಲಿರುವ ಬಹುತೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಫುಡ್‌  ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಹಣ ವರ್ಗಾವಣೆ ಮಾಡುವುದು, ಶಾಪಿಂಗ್‌ ಮಾಡುವುದು ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿರುವ  ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮಾತನಾಡುವುದು ಈ ಎಲ್ಲವೂ ಇಂಟರ್‌ನೆಟ್‌ ಮೂಲಕವೇ ನಡೆಯುತ್ತಿವೆ. ಮುಖ್ಯವಾಗಿ ಉದ್ಯೋಗ ಸ್ಥಳದಲ್ಲೂ ಇಂಟರ್‌ನೆಟ್‌ ಬೇಕೇ ಬೇಕು. ಒಟ್ಟಿನಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಹೀಗಿರುವಾಗ ಇಲ್ಲೊಂದು ದೇಶದಲ್ಲಿ ಮಾತ್ರ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ ಇಲ್ವೇ  ಇಲ್ಲ. ಆ ದೇಶ ಯಾವುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇಂಟರ್ನೆಟ್‌ ವ್ಯವಸ್ಥೆ ಇಲ್ಲದ ದೇಶ ಯಾವುದು ಗೊತ್ತಾ?

ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವೆಂದರೆ ಅದು ಎರಿಟ್ರಿಯಾ. ಈ ದೇಶವು ವಿಶ್ವದಲ್ಲೇ ಅತ್ಯಂತ ಕಡಿಮೆ ಸಂಪರ್ಕ ಹೊಂದಿರುವ ದೇಶವೆಂದು ಪರಿಗಣಿಸಲಾಗಿದೆ. ಪೂರ್ವ ಆಫ್ರಿಕಾದ ಕೆಂಪು ಸಮುದ್ರದ ಬಳಿಯಿರುವ ಈ ದೇಶದಲ್ಲಿ ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲ. ಇಲ್ಲಿ ಇಂಟರ್ನೆಟ್ ಪ್ರವೇಶವು ತುಂಬಾ ಸೀಮಿತವಾಗಿದೆ ಮತ್ತು ಜನಸಂಖ್ಯೆಯ ಒಂದು ಸಣ್ಣ ಭಾಗ ಮಾತ್ರ ಇಂಟರ್‌ನೆಟ್‌ ಬಳಸಲು ಸಾಧ್ಯವಾಗುತ್ತಿದೆ. ಇಲ್ಲಿನ ಸರ್ಕಾರ ಇಂಟರ್ನೆಟ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಇಂಟರ್ನೆಟ್ ಸೇವೆಗಳು ಪ್ರಾಥಮಿಕವಾಗಿ ಸರ್ಕಾರಿ ನೆಟ್‌ವರ್ಕ್‌ಗಳ ಮೂಲಕ ಮಾತ್ರ ಲಭ್ಯವಿದೆ, ಆದರೆ ಖಾಸಗಿ ಇಂಟರ್ನೆಟ್ ಸೇವೆಗಳು ಅಸ್ತಿತ್ವದಲ್ಲಿಲ್ಲ.

ನಾವೆಲ್ಲರೂ 4G ಮತ್ತು 5G ಯುಗದಲ್ಲಿದ್ದರೆ, 18 ನೇ ಶತಮಾನದಿಂದ ಯಾವುದೇ ಅಭಿವೃದ್ಧಿಯನ್ನು ಅನುಭವಿಸಿಲ್ಲ. ಈ ದೇಶದಲ್ಲಿ, ಸರ್ಕಾರವು ಜನರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಪ್ರಸ್ತುತ, ಸಂಪೂರ್ಣ ದೂರಸಂಪರ್ಕ ಜಾಲವು ಸರ್ಕಾರದ ಕೈಯಲ್ಲಿದೆ. ಪರಿಣಾಮವಾಗಿ, ಖಾಸಗಿ ಕಂಪನಿಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿ ಮೊಬೈಲ್ ಡೇಟಾ ಲಭ್ಯವಿಲ್ಲ. ಇಲ್ಲಿನ ಪ್ರಮುಖ ನಗರಗಳಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಇಂಟರ್ನೆಟ್ ಕೆಫೆಗಳಿವೆ. ಇಂಟರ್ನೆಟ್ ಕೆಫೆಗಳು ಅಸ್ತಿತ್ವದಲ್ಲಿದ್ದರೂ, ಅಲ್ಲಿ ಕಟ್ಟುನಿಟ್ಟಿನ ನಿಯಮಗಳು ಅನ್ವಯಿಸುತ್ತವೆ. ಅಲ್ಲದೆ ಇಂಟರ್ನೆಟ್ ವೇಗ ತುಂಬಾ ನಿಧಾನವಾಗಿದ್ದು, ನೆಟ್‌ವರ್ಕ್‌ 2G ಗಿಂತಲೂ ಸ್ಲೋ ಆಗಿದೆ. ಮತ್ತು ವೆಚ್ಚವು ಹೆಚ್ಚು. ಇದರಿಂದಾಗಿ ಇಂಟರ್ನೆಟ್ ಪ್ರವೇಶ ಹೊಂದಿರುವವರು ಸಹ ಅದನ್ನು ವ್ಯಾಪಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಈ ದೇಶದ ಜನಸಂಖ್ಯೆಯ ಕೇವಲ 1 ಪ್ರತಿಶತದಷ್ಟು ಜನರು ಮಾತ್ರ ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದಾರೆ.

ಎರಿಟ್ರಿಯಾದಲ್ಲಿ ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆ ಏಕಿಲ್ಲ?

ಎರಿಟ್ರಿಯಾದಲ್ಲಿದ ಇಂಟರ್ನೆಟ್ ಕೊರತೆಗೆ ಇಲ್ಲಿನ ಸರ್ವಾಧಿಕಾರ, ರಾಜಕೀಯ ವ್ಯವಸ್ಥೆ  ಮತ್ತು ಆರ್ಥಿಕ ಪರಿಸ್ಥಿತಿ ಮುಖ್ಯ ಕಾರಣ. ಒಟ್ಟಾರೆಯಾಗಿ ಇಂಟರ್ನೆಟ್ ಪ್ರವೇಶದ ಕೊರತೆಯು ಇಲ್ಲಿ ಶಿಕ್ಷಣ, ವ್ಯವಹಾರ ಮತ್ತು ಸಂವಹನದ ಮೇಲೆ  ಸಾಕಷ್ಟು ಪರಿಣಾಮ ಬೀರಿವೆ. ದೇಶಿಯ ವ್ಯವಹಾರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುತ್ತಿವೆ. ಇದಲ್ಲದೆ, ಯುವಜನರು ತಮ್ಮ ಪ್ರತಿಭೆಯನ್ನು ಜಾಗತಿಕವಾಗಿ ಪ್ರದರ್ಶಿಸಲು ಅವಕಾಶಗಳ ಕೊರತೆಯಿದೆ. ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳ ಲಭ್ಯತೆಯ ಕೊರತೆಯಿಂದಾಗಿ, ಅವರು ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುತ್ತದೆ. ಜಗತ್ತು ವೇಗವಾಗಿ ಡಿಜಿಟಲ್‌ಮಯವಾಗುತ್ತಿದ್ದರೆ, ಎರಿಟ್ರಿಯಾ ಮಾತ್ರ ಇನ್ನೂ ಬಹಳ ಹಿಂದುಳಿದಿದೆ. ಇದಕ್ಕೆ ಇಲ್ಲಿನ ಸರ್ವಾಧಿಕಾರವೇ ಮುಖ್ಯ ಕಾರಣವೆನ್ನಬಹುದು.

ಇದನ್ನೂ ಓದಿ: ಭಯಗೊಂಡಾಗ ಕೈ ಕಾಲುಗಳು ನಡುಗುವುದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ಎರಿಟ್ರಿಯಾವನ್ನು ಆಫ್ರಿಕಾದ ಉತ್ತರ ಕೊರಿಯಾ ಎಂದೂ ಕರೆಯಲಾಗುತ್ತದೆ:

ಈ ದೇಶವನ್ನು ಆಫ್ರಿಕಾದ ಉತ್ತರ ಕೊರಿಯಾ ಎಂದೂ ಕರೆಯುತ್ತಾರೆ. ಈ ದೇಶಕ್ಕೆ ಯಾವುದೇ ಅಧಿಕೃತ ಭಾಷೆ ಇಲ್ಲ. ಎರಿಟ್ರಿಯನ್ನರು ಗ್ರೀಕ್, ಅರೇಬಿಕ್ ಮತ್ತು ಇಂಗ್ಲಿಷ್ ಜೊತೆಗೆ ಕುಶಿಟಿಕ್ ಮತ್ತು ಆಪ್ರೋ-ಏಷ್ಯಾಟಿಕ್ ಭಾಷೆಗಳನ್ನು ಮಾತನಾಡುತ್ತಾರೆ. ಅಲ್ಲದೆ ಎರಿಟ್ರಿಯಾ ಇನ್ನೂ ಸರ್ವಾಧಿಕಾರದ ಆಳ್ವಿಕೆಯಲ್ಲಿದೆ. ಸ್ವಾತಂತ್ರ್ಯದ ನಂತರ ಎಂದಿಗೂ ಚುನಾವಣೆಗಳು ನಡೆದಿಲ್ಲ. ಈ ದೇಶದ ನಾಗರಿಕರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಈ ದೇಶದಲ್ಲಿ ಯಾವುದೇ ಎಟಿಎಂಗಳಿಲ್ಲ.  ಅಲ್ಲದೆ ಎರಿಟ್ರಿಯಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿವೆ. ಇಲ್ಲಿ ಯಾವುದೇ ಖಾಸಗಿ ಚಾನೆಲ್‌ಗಳಿಲ್ಲ ಮತ್ತು ಸ್ವತಂತ್ರ ಪತ್ರಕರ್ತರೂ ಇಲ್ಲ. ಒಂದೇ ಒಂದು ದೂರದರ್ಶನ ಚಾನೆಲ್ ಇದೆ ಮತ್ತು ಇದರಲ್ಲಿ ಯಾವುದೇ ವಿದೇಶಿ ಚಾನೆಲ್‌ಗಳು ಪ್ರಸಾರವಾಗುವುದಿಲ್ಲ. ಇಲ್ಲಿನ ನಿವಾಸಿಗಳು ಸರ್ಕಾರದ ಅನುಮತಿಯಿಲ್ಲದೆ ದೇಶವನ್ನು ಬಿಡುವಂತಿಲ್ಲ. ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುವ ಯಾರನ್ನಾದರೂ ಕಂಡ ತಕ್ಷಣವೇ ಗುಂಡು ಹಾರಿಸಲಾಗುತ್ತದೆ. ಇದಲ್ಲದೆ ಎರಿಟ್ರಿಯಾವು ಬಹಳ ಕಟ್ಟುನಿಟ್ಟಾದ ಪ್ರವಾಸಿ ನಿರ್ಬಂಧಗಳನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆ ಭೇಟಿ ನೀಡುವ ದೇಶಗಳಲ್ಲಿ ಒಂದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣ ಅಮೆರಿಕಕ್ಕೆ ಅದಾನಿ ಲಗ್ಗೆ; ಅರ್ಜೆಂಟೀನಾದಲ್ಲಿ 10 ವರ್ಷದ ಗುತ್ತಿಗೆ ಪಡೆದ ಅದಾನಿ ಪೋರ್ಟ್ಸ್ – Kannada News

ನವದೆಹಲಿ, ಜೂನ್ 8: ಭಾರತದ ಅತಿದೊಡ್ಡ ಖಾಸಗಿ ಸಮಗ್ರ ಸಾರಿಗೆ ನಿರ್ವಹಣೆ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ (APSEZ), ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ದಕ್ಷಿಣ ಅಮೆರಿಕಾದ ಮಾರುಕಟ್ಟೆಗೆ ಮೊದಲ ಪ್ರವೇಶ ಪಡೆದಿದೆ. ಅದಾನಿ ಪೋರ್ಟ್ಸ್ ಸಂಸ್ಥೆಯು ಅರ್ಜೆಂಟೀನಾದಲ್ಲಿ 10 ವರ್ಷಗಳ ಸುದೀರ್ಘ ಅವಧಿಯ ಎಲ್‌ಎನ್‌ಜಿ (LNG – ದ್ರವೀಕೃತ ನೈಸರ್ಗಿಕ ಅನಿಲ) ಸಾಗಣೆ ಮತ್ತು ಮರೈನ್ ಸೇವೆಗಳ (Marine Services) ಗುತ್ತಿಗೆಯನ್ನು ಪಡೆದುಕೊಂಡಿದೆ.

ಈ ಒಪ್ಪಂದದೊಂದಿಗೆ ಅದಾನಿ ಪೋರ್ಟ್ಸ್ ದಕ್ಷಿಣ ಅಮೆರಿಕಾ ಖಂಡದಲ್ಲಿ (South America) ತನ್ನ ಮೊದಲ ವ್ಯವಹಾರವನ್ನು ಆರಂಭಿಸುತ್ತಿದೆ. ಇದು ಕಂಪನಿಯ ಜಾಗತಿಕ ವಿಸ್ತರಣಾ ಯೋಜನೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಅದಾನಿ ಪೋರ್ಟ್ಸ್​ನ ಅಂಗಸಂಸ್ಥೆಯಾದ ಅದಾನಿ ಹಾರ್ಬರ್ ಇಂಟರ್​ನ್ಯಾಷನಲ್ (ಎಫ್​ಝಡ್​ಸಿಒ) ಮತ್ತು ಅರ್ಜೆಂಟೀನಾದ ಮೆರಿಡಿಯನ್ ಗ್ರೂಪ್ ಜೊತೆಗೂಡಿ ರಚಿಸಲಾದ ಸಮೂಹಕ್ಕೆ ಈ ಗುತ್ತಿಗೆ ಸಿಕ್ಕಿದೆ.

ಅರ್ಜೆಂಟೀನಾದ ಬಂದರುಗಳಲ್ಲಿ ಎಲ್‌ಎನ್‌ಜಿ ಹಡಗುಗಳಿಗೆ ಅಗತ್ಯವಿರುವ ಕಡಲ ಸೇವೆಗಳನ್ನು (Marine Services) ಅದಾನಿ ಪೋರ್ಟ್ಸ್ ಒದಗಿಸಲಿದೆ. ಇದು 10 ವರ್ಷಗಳ ದೀರ್ಘಾವಧಿಯ ಒಪ್ಪಂದವಾಗಿದ್ದು, ಕಂಪನಿಗೆ ಸ್ಥಿರವಾದ ಆದಾಯವನ್ನು ತಂದುಕೊಡಲಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಅದಾನಿ ಪೋರ್ಟ್ಸ್ ಈಗಾಗಲೇ ಭಾರತದಲ್ಲಿ ಬಂದರು ನಿರ್ವಹಣೆ, ಟಗ್‌ಬೋಟ್‌ಗಳು ಮತ್ತು ಪೈಲಟೇಜ್ ಸೇವೆಗಳಲ್ಲಿ ಅಪಾರ ಅನುಭವ ಹೊಂದಿದೆ. ಇದೇ ನೈಪುಣ್ಯತೆಯನ್ನು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ವಯಿಸಲಾಗುತ್ತಿದೆ.

ಷೇರು ಮಾರುಕಟ್ಟೆಯ ಮೇಲೆ ಪ್ರಭಾವ

ಈ ಸುದ್ದಿಯ ಬೆನ್ನಲ್ಲೇ ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಹೂಡಿಕೆದಾರರಲ್ಲಿ ಸಂಸ್ಥೆಯ ಜಾಗತಿಕ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೆಚ್ಚಿದೆ.

ಇದನ್ನೂ ಓದಿ: ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಅದಾನಿ ಪೋರ್ಟ್ಸ್ ಕೇವಲ ಭಾರತಕ್ಕೆ ಸೀಮಿತವಾಗದೆ, ಶ್ರೀಲಂಕಾ, ಇಸ್ರೇಲ್ ಮತ್ತು ಇದೀಗ ಅರ್ಜೆಂಟೀನಾದಂತಹ ದೇಶಗಳಲ್ಲಿ ತನ್ನ ಜಾಲವನ್ನು ವಿಸ್ತರಿಸುತ್ತಿರುವುದು, ಜಾಗತಿಕ ಬಂದರು ನಿರ್ವಹಣಾ ಕ್ಷೇತ್ರದಲ್ಲಿ ಭಾರತದ ಕಂಪನಿಯೊಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಸೂಚಿಸುತ್ತದೆ. ಈ ಒಪ್ಪಂದವು ಕಂಪನಿಯು ಎಲ್‌ಎನ್‌ಜಿ ಮತ್ತು ಇಂಧನ ಸಾಗಣೆ ವಲಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಮುಂದಿನ 6 ದಿನ ಭಾರೀ ಮಳೆ ಎಚ್ಚರಿಕೆ,ಕರಾವಳಿಗೆ ರೆಡ್ ಅಲರ್ಟ್ – Kannada News

ಬೆಂಗಳೂರು (ಜೂ.08): ಕರ್ನಾಟಕದಲ್ಲಿ ಮುಂಗಾರು (Karnataka Monsoon Rain) ಅಬ್ಬರ ಜೋರಾಗಿದ್ದು, ಇಂದಿನಿಂದ ಅಂದರೆ ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ (Karavali) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೇ ಜೂನ್ 10 ಮತ್ತು 11 ರಂದು ಕೂಡ ಭಾರೀ ಮಳೆ ಮುಂದುವರಿಯಲಿದ್ದು, ಇಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ತಿಳಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಮುಂಗಾರು ಅಬ್ಬರ ಜೋರು
  • ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ
  • ಕರಾವಳಿ ದಕ್ಷಿನ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ
  • ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 8ರಿಂದ 11ರವರೆಗೆ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ 8ರಿಂದ 10ರವರೆಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 8ರಿಂದ ಜೂನ್ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನ ವಾಯು ಗುಣಮಟ್ಟ ಇಂದು ಉತ್ತಮ, ಉಡುಪಿಯ ಎಕ್ಯೂಐ ಎಲ್ಲದಕ್ಕಿಂತ ಬೆಸ್ಟ್!

ಉತ್ತರ ಮತ್ತು ದಕ್ಷಿಣ ಒಳನಾಡು

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇನ್ನುಳಿದಂತೆ ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಜೂನ್ 14 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.

ರೆಡ್ ಮತ್ತು ಆರೆಂಜ್ ಅಲರ್ಟ್​ ಎಲ್ಲೆಲ್ಲಿ-ಯಾವಾಗ?

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜೂನ್ 9 ರಂದು, ಒಂದು ಅಥವಾ ಎರಡು ಸ್ಥಳಗಳಲ್ಲಿ ಅತ್ಯಧಿಕ (204.5mm) ಸಾಧ್ಯತೆ ಇದೆ. ಇದರಿಂದ IMD ಯಿಂದ #ರೆಡ್‌ಅಲರ್ಟ್ ನೀಡಲಾಗಿದ್ದು, ಜನರು ಮುನ್ನೆಚ್ಚರಿಕೆ ವಹಿಸಲು ಕೋರಿದೆ.

ಇನ್ನು ಜೂನ್ 10 ಮತ್ತು 11 ರಂದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 8 ರಿಂದ 10 ರವರೆಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 8 ರಿಂದ 11 ರವರೆಗೆ, ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ (64.5mm -115.4mm) (115.5mm-204.4mm) ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.

ಬೆಂಗಳೂರು ಹವಾಮಾನ ವರದಿ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ. ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್ – Kannada News

ಭಾರತೀಯ ಚಿತ್ರರಂಗದಲ್ಲಿ ಸಮಾಜದ ಕಣ್ಣು ತೆರೆಸುವಂತಹ ಸಾಮಾಜಿಕ ಕಳಕಳಿಯ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಭ್ರಷ್ಟಾಚಾರ, ಬಡತನ, ಗ್ರಾಮೀಣ ಭಾಗದ ಸಮಸ್ಯೆಗಳು, ಲಿಂಗ ತಾರತಮ್ಯ, ಮಹಿಳಾ ಸಬಲೀಕರಣ ಮುಂತಾದ ವಿಷಯಗಳ ಕುರಿತು ಈಗಾಗಲೇ ಹಲವು ಭಾಷೆಗಳಲ್ಲಿ ನೂರಾರು ಸಿನಿಮಾಗಳು ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶವನ್ನು ತೀವ್ರವಾಗಿ ಕಾಡುತ್ತಿರುವ, ಸರ್ಕಾರಗಳು ಹಾಗೂ ಚಿತ್ರರಂಗವೂ ಅಷ್ಟಾಗಿ ಗಮನಹರಿಸದ ಆಹಾರ ಕಲಬೆರಕೆ ಕುರಿತು ಈಗೊಂದು ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ‘ದಿ ಇಂಡಿಯಾ ಸ್ಟೋರಿ’ (The India Story) ಎಂದು ಶೀರ್ಷಿಕೆ ಇಡಲಾಗಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮತ್ತು ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಆಹಾರ ಕಲಬೆರಕೆ ದಂಧೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬೆಳ್ಳಿತೆರೆಯ ಮೇಲೆ ಬಿಚ್ಚಿಡಲು ಈ ಸಾಮಾಜಿಕ ಕಳಕಳಿಯ ಸಿನಿಮಾ ಸಜ್ಜಾಗಿದೆ. ಸದ್ಯ ಈ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ದೇಶದ ಆಹಾರ ಸುರಕ್ಷತೆಯ ಆತಂಕಕಾರಿ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ ಈ ಟೀಸರ್.

‘ದಿ ಇಂಡಿಯಾ ಸ್ಟೋರಿ’ ಚಿತ್ರದ ಟೀಸರ್:

ಆಘಾತಕಾರಿ ಅಂಕಿಅಂಶಗಳನ್ನು ಈ ಟೀಸರ್ ತೆರೆದಿಟ್ಟಿದೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ಜ್ವಲಂತ ಸಮಸ್ಯೆಯ ಸುತ್ತ ಈ ಸಿನಿಮಾದ ಕಥೆ ಇರಲಿದೆ. ನಾವು ಪ್ರತಿದಿನ ಸೇವಿಸುವ ಆಹಾರದ ಹಿಂದಿರುವ ಕರಾಳ ಸತ್ಯಗಳು, ಕಾರ್ಪೊರೇಟ್ ಭ್ರಷ್ಟಾಚಾರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಅಪಾಯಗಳನ್ನು ಈ ಸಿನಿಮಾ ಚರ್ಚಿಸಲಿದೆ.

‘ದಿ ಇಂಡಿಯಾ ಸ್ಟೋರಿ’ ಚಿತ್ರವು ಜನರಿಗೆ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಮಹತ್ವದ ಸಂದೇಶವನ್ನು ನೀಡಲು ಹೊರಟಿದೆ ಎಂಬುದು ಟೀಸರ್ ನೋಡಿದರೆ ತಿಳಿಯುತ್ತದೆ. ಚೇತನ್ ಡಿ.ಕೆ. ನಿರ್ದೇಶನದ ಈ ಚಿತ್ರವನ್ನು ಸಾಗರ್ ಬಿ. ಶಿಂದೆ ನಿರ್ಮಿಸಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ ಜುಲೈ 24ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸ್ಟಾರ್ ಹೀರೋ ನೀಡಿದ ಆ ಒಂದು ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ ಕಾಜಲ್ ಅಗರ್ವಾಲ್

ಆಹಾರದಲ್ಲಿ ಬಳಸಲಾಗುವ ರಾಸಾಯನಿಕ ಇಂಜೆಕ್ಷನ್‌ಗಳು, ಕೀಟನಾಶಕಗಳ ಅತಿಯಾದ ಬಳಕೆ ಮತ್ತು ವ್ಯವಸ್ಥೆಯ ನಿರ್ಲಕ್ಷ್ಯವನ್ನು ಚಿತ್ರತಂಡ ಯಾವುದೇ ಮುಲಾಜಿಲ್ಲದೆ ನೇರವಾಗಿ ತೋರಿಸಿದೆ ಎನ್ನಲಾಗಿದೆ. ಒಂದು ವೇಳೆ ಸಿನಿಮಾದಲ್ಲಿ ಯಾವುದೇ ಕಟ್ಟುಕಥೆಗಳಿಲ್ಲದೆ ನೈಜವಾದ ಗ್ರೌಂಡ್ ರಿಯಾಲಿಟಿಯನ್ನು ತೋರಿಸಿದರೆ, ಇದು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ – Kannada News

ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿ Image Credit source: Tv9 kannada

ದಾವಣಗೆರೆ, ಜೂ.8: ಜಿಲ್ಲೆಯ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಬದುಕು ಸಿಗುವ ‘ವಿದೇಶ ಭಾಗ್ಯ’ ಒದಗಿಬಂದಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ಅಮೆರಿಕಾ, ಇಂಗ್ಲೆಂಡ್ ಹಾಗೂ ಇಟಲಿ ಸೇರಿದಂತೆ ವಿವಿಧ ಪ್ರಮುಖ ದೇಶಗಳ ದಂಪತಿಗಳ ಮಡಿಲು ಸೇರಲು ಸಜ್ಜಾಗಿದ್ದಾರೆ. ಇದರ ಭಾಗವಾಗಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕೃತ ಪ್ರಕ್ರಿಯೆಯಲ್ಲಿ ಒಂದು ವರ್ಷದ ಅನಾಥ ಗಂಡು ಮಗುವನ್ನು ಇಟಲಿಯ ದಂಪತಿಗಳು ಕಾನೂನುಬದ್ಧವಾಗಿ ದತ್ತು (Adoption) ಪಡೆದುಕೊಂಡಿದ್ದಾರೆ.

ಇಟಲಿ ದೇಶದ ವೈರಿ ಹಾಗೂ ಪ್ರಿಯಾ ದಂಪತಿಗಳು ಈ ಮಗುವನ್ನು ದತ್ತು ಪಡೆದ ಅದೃಷ್ಟವಂತರಾಗಿದ್ದಾರೆ. ಪ್ರಿಯಾ ಅವರು ಮೂಲತಃ ಚೆನ್ನೈ ಮೂಲದವರಾಗಿದ್ದರೂ, ಇಟಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ದಂಪತಿಗಳು ಮಗುವಿಗಾಗಿ ಕಳೆದ ಮೂರು ವರ್ಷಗಳಿಂದ ಹಂಬಲಿಸುತ್ತಿದ್ದರು. ಕೇಂದ್ರ ಸರ್ಕಾರದ ಕಾರಾ (CARA) ಸಂಸ್ಥೆಯ ನಿಯಮಾವಳಿಗಳ ಪ್ರಕಾರ, ಕಳೆದ 2023 ರಲ್ಲೇ ಮಗು ದತ್ತು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸುಮಾರು ವರ್ಷಗಳ ಕಾಯುವಿಕೆಯ ನಂತರ ಇಂದು ಅವರ ಕನಸು ನನಸಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ

ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿದ್ದ ಈ ಗಂಡು ಮಗುವನ್ನು, ದಾವಣಗೆರೆ ಜಿಲ್ಲಾಧಿಕಾರಿ (DC) ಜಿ.ಎಂ. ಗಂಗಾಧರಸ್ವಾಮಿ ಅವರ ಸಮ್ಮುಖದಲ್ಲಿ ದಂಪತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮಗುವನ್ನು ಪಡೆಯುತ್ತಿದ್ದಂತೆ ದತ್ತು ತಂದೆ ವೈರಿ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದರು. “ಕಳೆದ ಮೂರು ವರ್ಷಗಳಿಂದ ನಾನು ಮತ್ತು ನನ್ನ ಪತ್ನಿ ಮಗುವಿಗಾಗಿ ಪ್ರಾರ್ಥಿಸುತ್ತಿದ್ದೆವು. ಇಂದು ನಮ್ಮ ಹಂಬಲ ಈಡೇರಿದೆ. ನನಗೆ ‘ಅಪ್ಪ’ ಎಂಬ ಕಿರೀಟ ಸಿಕ್ಕ ದಿನವಿದು” ಎಂದು ಗದ್ಗದಿತ ಕಂಠದಿಂದ ಸಂಭ್ರಮ ಹಂಚಿಕೊಂಡರು. ದಾವಣಗೆರೆಯ ಬಾಲಮಂದಿರದ ಮಕ್ಕಳು ವಿದೇಶಿ ನೆಲದಲ್ಲಿ ರಾಜವೈಭೋಗದ ಬದುಕು ಕಾಣುತ್ತಿರುವುದು ಇಲಾಖೆಯ ಅಧಿಕಾರಿಗಳ ಮುಖದಲ್ಲೂ ಮಂದಹಾಸ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಹೊಸ ಪಕ್ಷ ಕಟ್ಟುವ ಸಾಧ್ಯತೆ – Kannada News

ನವದೆಹಲಿ, ಜೂನ್ 8: ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಹೊಡೆತವನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ವಿಭಜನೆಯಾಗಿತ್ತು. ಇದೀಗ ಸಂಸದೀಯ ಪಕ್ಷದಲ್ಲಿ ವಿಭಜನೆ ಬಹುತೇಕ ಖಚಿತವಾಗಿದೆ. ಬಂಡಾಯವೆದ್ದಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರು ಕೇಂದ್ರ ಸಚಿವ ಮತ್ತು ಪಕ್ಷದ ವೀಕ್ಷಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಹಾಜರಿದ್ದರು. ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ, ಹಿರಿಯ ಡಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 20 ಟಿಎಂಸಿ ಸಂಸದರು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದರು. ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯಲ್ಲಿ ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಪೀಕರ್​ಗೆ ಪತ್ರ ಬರೆದಿರುವ ಟಿಎಂಸಿ ಸಂಸದರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ರಾಜಕೀಯ ವಲಯದ ಮೂಲಗಳ ಪ್ರಕಾರ, ಪತ್ರ ಬರೆದಿರುವ ಈ 20 ಪ್ಲಸ್ ಸಂಸದರು ಟಿಎಂಸಿಯಿಂದ ಸಂಪೂರ್ಣವಾಗಿ ಹೊರಬಂದು ಹೊಸ ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆಗಳು ದಟ್ಟವಾಗಿವೆ. ಸಂಸತ್ತಿನಲ್ಲಿ ತಮ್ಮ ಸಂಸದ ಸ್ಥಾನಕ್ಕೆ ಯಾವುದೇ ಧಕ್ಕೆ ಬರದಂತೆ ಕಾನೂನುಬದ್ಧವಾಗಿ ಪಕ್ಷದಿಂದ ಹೊರಬರಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಕ್ರೋಢೀಕರಿಸಲು ಈ ಬಂಡಾಯದ ಗುಂಪು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ನೇತೃತ್ವದ ಅತೃಪ್ತರ ಬಣ ಇದೇ ಪ್ಲಾನ್ ಮಾಡಿತ್ತು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ, ಮತ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಪತ್ರ; ಇಂಡಿಯ ಸಭೆಯ 5 ನಿರ್ಧಾರಗಳಿವು

ಒಂದೆಡೆ, ಮಮತಾ ಬ್ಯಾನರ್ಜಿ ಇಂಡಿಯ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ಬಂಡಾಯ ಸಂಸದರು ಪ್ರತ್ಯೇಕ ಬಣವನ್ನು ರಚಿಸುವ ಉದ್ದೇಶವನ್ನು ಘೋಷಿಸಿ ಸ್ಪೀಕರ್‌ಗೆ ಪತ್ರಗಳನ್ನು ಸಲ್ಲಿಸಿದರು. ಅವರು ಟಿಎಂಸಿ ಸಂಸದೀಯ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.53ಕ್ಕೆ ಪತ್ರವನ್ನು ಸಲ್ಲಿಸಲಾಯಿತು.

ಲೋಕಸಭೆಯಲ್ಲಿ ಟಿಎಂಸಿ ಒಟ್ಟು 28 ಸಂಸದರನ್ನು ಹೊಂದಿದೆ. ಅವರಲ್ಲಿ 20 ಮಂದಿ ಸಹಿ ಹಾಕಿದ್ದಾರೆ ಎಂದು ಕಾಕೋಲಿ ಹೇಳಿದ್ದಾರೆ. ಆದರೂ, ಯಾರು ಯಾವುದಕ್ಕೆ ಸಹಿ ಹಾಕಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಈ ಪಟ್ಟಿಯಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಪಾರ್ಥ ಭೌಮಿಕ್, ಶರ್ಮಿಳಾ ಸರ್ಕಾರ್, ಅಸಿತ್ ಮಾಲ್, ಜಗದೀಶ್ ಬಸುನಿಯಾ, ಕಾಲಿಪಾದ ಸೊರೆನ್, ಅರೂಪ್ ಚಕ್ರವರ್ತಿ, ರಚನಾ ಬ್ಯಾನರ್ಜಿ ಮತ್ತು ದೇವ್ ಸೇರಿದ್ದಾರೆ. ಇದಕ್ಕೂ ಮೊದಲು ಟಿಎಂಸಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ಕಾಕೋಲಿ ಘೋಷ್ ಸಲ್ಲಿಸಿದ ಪತ್ರದಲ್ಲಿ ಅವರು ಬಿಜೆಪಿಗೆ ಸೇರುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಅವರು ಎನ್‌ಡಿಎಗೆ ಸೇರಲಿದ್ದಾರೆ. ಇದರರ್ಥ ಅವರು ತೃಣಮೂಲ ಕಾಂಗ್ರೆಸ್‌ನಿಂದ ಪ್ರತ್ಯೇಕ ಗುಂಪಾಗಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಲು ಬಯಸುತ್ತಾರೆ. ಇದರರ್ಥ ಈ ಪತ್ರವನ್ನು ಅಂಗೀಕರಿಸಿದರೆ, ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷವು ವಿಭಜನೆಯಾಗುತ್ತದೆ. ಆದರೆ, ಓಂ ಬಿರ್ಲಾ ಇಂದು ಲೋಕಸಭೆಯಲ್ಲಿ ಇಲ್ಲ. ಅವರು ಬೇರೆ ರಾಜ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದಾರೆ. ಆದ್ದರಿಂದ, ಟಿಎಂಸಿ ಸಂಸದರು ಪತ್ರವನ್ನು ಅವರ ಕಚೇರಿಗೆ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆಯ ನಂತರ, ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷವು ವಿಭಜನೆಯಾಗಿದೆ. ರಿತಬ್ರತಾ ಬ್ಯಾನರ್ಜಿ ನೇತೃತ್ವದ 58 ಶಾಸಕರು, ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡು ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅದನ್ನು ಅನುಮೋದಿಸಿದ್ದಾರೆ. ಶಾಸಕರ ನಡುವಿನ ವಿಭಜನೆಯ ನಂತರ ಈಗ ಟಿಎಂಸಿ ಸಂಸದರ ನಡುವಿನ ವಿಭಜನೆ ಬಹುತೇಕ ಖಚಿತವಾಗಿದೆ. ಇದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ – Kannada News

ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿರುವ ಅಫ್ಘಾನಿಸ್ತಾನ  (India vs Afghanistan) ತಂಡ ಟೆಸ್ಟ್ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಿದೆ. ಚಂಡೀಗಢದ ಮಹಾರಾಜ ಯಾದವಿಂದರ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಮುಲ್ಲನ್‌ಪುರ) ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿತು. ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಗೆದ್ದು ಏಕೈಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಈ ಟೆಸ್ಟ್ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC Points Table) ಭಾಗವಾಗಿರಲಿಲ್ಲ. ಹೀಗಾಗಿ ಭಾರತ 300 ರನ್​ಗಳಿಂದ ಗೆದ್ದರೂ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

WTC ಪಾಯಿಂಟ್‌ಗಳ ಪಟ್ಟಿ ಹೇಗಿದೆ?

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರದ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದಾಗ್ಯೂ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ 115 ರನ್‌ಗಳಿಂದ ಸೋತಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕಿವೀಸ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಗಮನಾರ್ಹ ಲಾಭವನ್ನು ಗಳಿಸಿವೆ. ಉಳಿದಂತೆ ಆಸ್ಟ್ರೇಲಿಯಾ 87.5 ಪ್ರತಿಶತದಷ್ಟು ಗೆಲುವಿನ ಶೇಕಡವಾರುವಿನೊಂದಿಗೆ ಅಗ್ರಸ್ಥಾನದಲ್ಲಿದೆ.

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

6ನೇ ಸ್ಥಾನದಲ್ಲೇ ಉಳಿದ ಭಾರತ

ಇತ್ತ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದರೂ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿಲ್ಲ. ಇಂಗ್ಲೆಂಡ್ ತಂಡವು ಭಾರತದ ನಂತರ ಏಳನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಲ್ಲಿಯವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಜಯ ದಾಖಲಿಸಿದೆ. ಭಾರತ ಈ ವರ್ಷ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಲಿದೆ. ಈ ಮೂರು ಸರಣಿಗಳು ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ಗೆ ತಲುಪುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ – Kannada News

ಗಂಡು ಮಕ್ಕಳಿಗೆ ಹೆಂಡ್ತಿ ತವರಿಗೆ ಹೊರಟು ನಿಂತರೆ ಅದೇನೋ ಖುಷಿ. ಹೆಂಡ್ತಿ ಮರಳಿ ಬರುವ ತನಕ ತಮ್ಮ ಸ್ನೇಹಿತರ ಪಾರ್ಟಿ, ಸುತ್ತಾಟ ಎಂದು ಬ್ಯುಸಿಯಾಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತವರಿಗೆ ಹೋದ ಹೆಂಡ್ತಿ ಬರ್ತಾಳೆ ಎಂದು ಕಾದು ಕೊನೆಗೆ ಅತ್ತೆ (mother-in-law) ಮನೆಗೆ ಹೋಗಿದ್ದಾನೆ. ಕೇಕ್ ತೆಗೆದುಕೊಂಡು ಹೋಗಿ ನನ್ನ ಹೆಂಡ್ತಿನಾ ಕೊಡಿ ಎಂದು ಕೇಳಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರಿಗೆ ನಗು ತಡೆಯಲಾಗಲಿಲ್ಲ.

Karan and Mona ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಂಡ್ತಿ ತವರಿಗೆ ಹೋದ ಹತ್ತು ದಿನದ ಬಳಿಕ ಅತ್ತೆ ಮನೆಗೆ ತೆರಳಿದ್ದಾನೆ. ಹೌದು, 11 ನೇ ದಿನ ಈ ವ್ಯಕ್ತಿ ಕೇಕ್‌ ಹಿಡಿದುಕೊಂಡು ಅತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಸುಳಿವೇ ನೀಡದೇ ಅತ್ತೆ ಮನೆಗೆ ಬಂದ ಅಳಿಯನನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. 15 ದಿನ ತವರು ಮನೆಯಲ್ಲಿ ಉಳಿದು ಬರುವೆ. ಫೋನ್ ಮಾಡುವೆ ಆಗ ಬನ್ನಿ ಎಂದಿದ್ದ ಪತ್ನಿಗೂ ಗಂಡನ ಆಗಮನದಿಂದ ಅಚ್ಚರಿಯಾಗಿದೆ. ಅತ್ತೆ ಮಾವನ ಬಳಿ ಪತ್ನಿಯನ್ನು ವಾಪಸ್ ಕೊಡಿ ಎಂದು ಕೇಳಿದ್ದಾನೆ. ಅಳಿಯನ ಮಾತು ಕೇಳಿ ಒಂದೆಡೆ ಶಾಕ್ ಆದರೆ, ಕೇಕ್ ಮೇಲೆ ನನಗೆ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದು ಬರೆದಿದ್ದ ಸಾಲುಗಳನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಕೊನೆಗೆ ಅತ್ತೆ ಮಾವ ತಮ್ಮ ಮಗಳ ಕೈಹಿಡಿದು ಮತ್ತೆ ಅಳಿಯನ ಕೈಗೆ ಇಟ್ಟಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಹೊಸದಾಗಿ ಮದುವೆಯಾದ ಜೋಡಿ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಅಳಿಯ ನಿಮಗೆ ಸಿಕ್ಕಿದ್ದು ಪುಣ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ವಲ್ಪ ವರ್ಷಗಳು ಕಳೆಯಲಿ ಹೆಂಡ್ತಿ ತವರು ಮನೆಯಿಂದ ಕರೆ ತರುವಾಗ ಇಷ್ಟೊಂದು ಖುಷಿ ಇರಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:34 pm, Mon, 8 June 26

Source link

ಶಿಕ್ಷಣ ಸಚಿವರ ರಾಜೀನಾಮೆ, ಮತ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಪತ್ರ; ಇಂಡಿಯ ಸಭೆಯ 5 ನಿರ್ಧಾರಗಳಿವು – Kannada News

ನವದೆಹಲಿ, ಜೂನ್ 8: ಇಂದು ಕಾಂಗ್ರೆಸ್ ನೇತೃತ್ವದಲ್ಲಿ ದೆಹಲಿಯಲ್ಲಿ ಇಂಡಿಯ (INDIA) ಒಕ್ಕೂಟದ ಸಭೆ ನಡೆಯಿತು. ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ದುರಾಡಳಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗಗನಕ್ಕೇರಿರುವ ಇಂಧನ ಬೆಲೆಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಯಿತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ದೇಶದ ಕೋಟ್ಯಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ಅಖಿಲ ಭಾರತ ಮೈತ್ರಿಕೂಟದ (ಇಂಡಿಯ)ನಿರ್ಣಾಯಕ ಸಭೆಯ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೈತ್ರಿಕೂಟವು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಲಿದೆ ಎಂದು ಹೇಳಿದ್ದಾರೆ. ಮುಂದಿನ ಸಭೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸಭೆಯು 5 ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದಿತು. ಎಸ್‌ಐಆರ್ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತೇವೆ. ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ದೇಶದ ಪರೀಕ್ಷಾ ವ್ಯವಸ್ಥೆಯ “ದೊಡ್ಡ ದುರಾಡಳಿತ” ಲಕ್ಷಾಂತರ ಆಕಾಂಕ್ಷಿಗಳ ಭರವಸೆಯನ್ನು ಮಣ್ಣುಪಾಲು ಮಾಡಿದೆ ಎಂದು ಖರ್ಗೆ ಟೀಕಿಸಿದ್ದಾರೆ. ವ್ಯಾಪಕ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ನೀಟ್-ಯುಜಿ 2026 (NEET-UG 2026) ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಿಗದಿಪಡಿಸಲಾಗಿತ್ತು. ಈ ವಿವಾದವು ದೇಶಾದ್ಯಂತ ಭಾರಿ ಪ್ರತಿಭಟನೆಗಳು, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಮತ್ತು ಹಲವರ ಬಂಧನಕ್ಕೆ ಕಾರಣವಾಗಿತ್ತು. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒಕ್ಕೂಟ ತೀವ್ರ ಒತ್ತಾಯ ಮಾಡಿದೆ.

ಈ ಸಭೆಯು 5 ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದಿದೆ ಎಂದು ಖರ್ಗೆ ಹೇಳಿದರು. “ಮೊದಲನೆಯದಾಗಿ, ಮತಗಟ್ಟೆ ವಂಚನೆಯ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲಾಗುವುದು. ಎರಡನೆಯದಾಗಿ, ನೀಟ್-ಯುಜಿ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುವುದು. ಮೂರನೆಯದಾಗಿ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು. ನಾಲ್ಕನೆಯದಾಗಿ, ನಾವು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರುತ್ತೇವೆ. ಮುಂದಿನ ಸಭೆ ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಐದನೆಯದಾಗಿ, ಸಂಸತ್ತಿನಲ್ಲಿ ಸರ್ವಪಕ್ಷ ಸಮನ್ವಯ ಮುಂದುವರಿಯುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ.

“ಭಾರತ ಮೈತ್ರಿಕೂಟ ಸಭೆಯಲ್ಲಿ 25 ಪಕ್ಷಗಳು ಭಾಗವಹಿಸಿದ್ದವು. ಉದ್ಧವ್ ಠಾಕ್ರೆ ಮತ್ತು ಹೇಮಂತ್ ಸೊರೇನ್ ಕೂಡ ವರ್ಚುವಲ್ ಆಗಿ ಸಭೆಗೆ ಸೇರಿಕೊಂಡರು. ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಎಲ್ಲಾ ವಿಷಯಗಳ ಬಗ್ಗೆಯೂ ಅವರು ಒಪ್ಪುತ್ತಾರೆ. ಇದಾದ ನಂತರ, ನಾವು ಐದು ಅಂಶಗಳ ಬಗ್ಗೆ ಒಮ್ಮತಕ್ಕೆ ಬಂದಿದ್ದೇವೆ. ನಾವು ಇಂದು ಒಪ್ಪಿಕೊಂಡಿದ್ದೇವೆ; ನಾವು ಈ ಸಮಸ್ಯೆಗಳಿಗಾಗಿ ಹೋರಾಡುತ್ತೇವೆ, ಅವುಗಳ ಮೇಲೆ ಕೆಲಸ ಮಾಡುತ್ತೇವೆ ಮತ್ತು ಮುಂದುವರಿಯುತ್ತೇವೆ” ಎಂದು ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ಬ್ರೇಕಪ್; ಇಂಡಿಯ ಒಕ್ಕೂಟದ ಸಭೆ ಬಹಿಷ್ಕರಿಸಲು ಡಿಎಂಕೆ ನಿರ್ಧಾರ

“ಎಸ್​ಐರ್, ಮತಗಟ್ಟೆಗಳಲ್ಲಿ ಅಕ್ರಮ ಮತ್ತು ಚುನಾವಣಾ ಕಳ್ಳತನಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಕಳುಹಿಸುವ ಬಗ್ಗೆ ಒಮ್ಮತವಿತ್ತು. ಈ ಪತ್ರವನ್ನು ಶೀಘ್ರದಲ್ಲೇ ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪಿಸಲಾಗುವುದು. ಎರಡನೆಯದಾಗಿ, ಶಿಕ್ಷಣ ಸಚಿವರು ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳಿಗೆ ಹಾಜರಾದ ಲಕ್ಷಾಂತರ ಯುವಕರಿಗೆ ದ್ರೋಹ ಬಗೆದ ಕಾರಣ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸುವ ಬಗ್ಗೆ ಸರ್ವಾನುಮತದ ಒಮ್ಮತವಿತ್ತು” ಎಂದು ಖರ್ಗೆ ಹೇಳಿದ್ದಾರೆ.

“ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆಗಳು ಮತ್ತು ಇತರ ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಎಲ್ಲಾ ಪಕ್ಷಗಳು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಬೇಕೆಂದು ನಿರ್ಧರಿಸಲಾಯಿತು. ಮಳೆಗಾಲದ ಅಧಿವೇಶನದಲ್ಲಿ ಸಂಸದೀಯ ಸಮನ್ವಯ ಮುಂದುವರಿಯುತ್ತದೆ ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ ಸಭೆಗಳು ನಡೆಯುತ್ತವೆ” ಎಂದು ಖರ್ಗೆ ಹೇಳಿದರು.

ಈ ಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಜಾರ್ಖಂಡ್ ಮುಕ್ತಿ ಮೋರ್ಚಾ, ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ವಿಮೋಚನೆ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ವಿದುತಲೈ ಚಿರುತೈಗಲ್ ಕಚ್ಚಿ, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಎಂ), ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ಭಾರತ್ ಆದಿವಾಸಿ ಪಕ್ಷ, ಲೋಕದಳ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಶೇತ್ಕರಿ ಕಾಮಗಾರಿ ಪಕ್ಷದ ನಾಯಕರು ಪಾಲ್ಗೊಂಡಿದ್ದರು.

5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಭಾರತ ಮೈತ್ರಿಕೂಟದ ಮೊದಲ ಸಭೆ ಇದಾಗಿತ್ತು. ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಿದ್ದರು. ತಮಿಳುನಾಡಿನಲ್ಲಿನ ಸೋಲಿನ ನಂತರ ಡಿಎಂಕೆ ಇಂಡಿಯ ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

Source link