Category Archives: Blog

Your blog category

Karnataka Weather Forecast: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್‌ ಅಲರ್ಟ್‌ – Kannada News

ಹುಬ್ಬಳ್ಳಿಯಲ್ಲಿ ಸುರಿದ ಮಳೆImage Credit source: tv9

ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಚುರುಕು ಪಡೆದುಕೊಂಡಿದ್ದು ದಕ್ಷಿಣ ಕನ್ನಡ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಮನೆ, ಆಸ್ಪತ್ರೆ ಹಾಗೂ ಕಚೇರಿಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಈ ಮಧ್ಯೆ, ಕೇಂದ್ರ ಹವಾಮಾನ ಇಲಾಖೆ (IMD) ಇಡೀ ರಾಜ್ಯಕ್ಕೆ ಜೂನ್ 9 (ಮಂಗಳವಾರ) ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಮತ್ತು ಜೂನ್ 10 (ಬುಧವಾರ) ರಾಜ್ಯಾದ್ಯಂತ ರೆಡ್ ಅಲರ್ಟ್ (Red Alert) ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಚುರುಕುಗೊಂಡ ಮುಂಗಾರು ಮಳೆ.
  • ರಾಜ್ಯಾದ್ಯಂತ ಮುಂದಿನ ಎರಡು ದಿನ ರೆಡ್ ಅಲರ್ಟ್.
  • ಕರಾವಳಿಯಲ್ಲಿ ಕಟ್ಟೆಚ್ಚರ, ಎನ್‌ಡಿಆರ್‌ಎಫ್ ತಂಡ ನಿಯೋಜನೆ.

ಎಲ್ಲೆಲ್ಲಿ ರೆಡ್ ಅಲರ್ಟ್?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 9ರ ಮಂಗಳವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 10ರ ಬುಧವಾರದಂದು ಕರ್ನಾಟಕದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಗಳಲ್ಲಿ ಮಳೆ ಅವಾಂತರಗಳ ಮಹಾಪೂರ

ಬಳ್ಳಾರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರೇಣುಕಾನಗರ, ರಾಣಿಪೇಟ್ ಮತ್ತು ಹಳೇ ತಾಲೂಕು ಕಚೇರಿ ರಸ್ತೆಗಳು ಜಲಮಯವಾಗಿದ್ದು, ಪ್ರಸಿದ್ಧ ವಿಮ್ಸ್ ಆಸ್ಪತ್ರೆಯ ಒಳಗೂ ನೀರು ನುಗ್ಗಿದೆ. ಇದರಿಂದಾಗಿ ರೋಗಿಗಳನ್ನು ಮಳೆ ನೀರಿನಲ್ಲೇ ಸಾಗಿಸಬೇಕಾದ ದುಃಸ್ಥಿತಿ ಎದುರಾಯಿತು. ಜೆಸ್ಕಾಂ ಕಚೇರಿಯ ಆವರಣ ಜಲಾವೃತಗೊಂಡು ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಕೊಠಡಿಗೆ ನೀರು ನುಗ್ಗಿರುವುದು

ಚಿತ್ರದುರ್ಗ, ಬೆಳಗಾವಿ: ಚಿತ್ರದುರ್ಗ ನಗರದಲ್ಲಿ ರಾತ್ರಿ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದಿದ್ದು, ತುರುವನೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ವೃದ್ಧರೊಬ್ಬರು ಗಾಯಗೊಂಡಿದ್ದಾರೆ. ಬೆಳಗಾವಿಯ ಖಾನಾಪುರ ತಾಲೂಕಿನ ಪಾರಶ್ವಾಡ ಗ್ರಾಮದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಅದೇ ನೀರಿನಲ್ಲೇ ಟ್ರ್ಯಾಕ್ಟರ್ ಹಾಗೂ ಬೈಕ್‌ಗಳು ಸಂಚಸಿವೆ.

ಬಾಗಲಕೋಟೆ, ಹಾವೇರಿ: ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಚೆನ್ನಗೀರೇಶ್ವರ ದೇವಸ್ಥಾನದ ಅಂಗಳ ಜಲಾವೃತಗೊಂಡು, ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿದಿದೆ. ವಲ್ಲಭಬಾಯಿ ವೃತ್ತದ ಬಳಿ ಮನೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಹಾವೇರಿಯ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಕೇವಲ ಎರಡು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.

ರೈತರು ಕಂಗಾಲು, ಕರಾವಳಿಯಲ್ಲಿ ಹೈ ಅಲರ್ಟ್

ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಾವು, ಬಾಳೆ, ಪಪ್ಪಾಯ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕಳೆದ ಒಂದು ತಿಂಗಳಲ್ಲಿ ಸುಮಾರು 1200 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಆಸ್ಪತ್ರೆ ಎದುರು ರಸ್ತೆಗಳು ಜಲಾವೃತವಾಗಿದ್ದರೆ, ಗೋಕರ್ಣ ಮಾರ್ಗ ಮಧ್ಯೆ ಪ್ರವಾಸಿಗರ ವಾಹನದ ಮೇಲೆಯೇ ಬೃಹತ್ ಮರ ಉರುಳಿ ಬಿದ್ದಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆ‌ ಮೇಲ್ಚಾವಣಿ: ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು

ಮುಂಗಾರು ಅಬ್ಬರ ಹೆಚ್ಚಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 24X7 ಕಂಟ್ರೋಲ್ ರೂಮ್ ತೆರೆಯಲಾಗಿದೆ. ಪುತ್ತೂರಿನಲ್ಲಿ 30 ಸದಸ್ಯರ ಎನ್‌ಡಿಆರ್‌ಎಫ್ (NDRF) ತಂಡ ಬೀಡುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 08 June : ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ – Kannada News

ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಕೌಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:33 – 09:10, ಯಮಗಂಡ ಕಾಲ 10:47 – 12:24, ಗುಳಿಕ ಕಾಲ 14:00 – 16:37

ಮೇಷ ರಾಶಿ :

ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವ ಸಂದರ್ಭ ಪ್ರಾಪ್ತಿ. ನೀವು ಕಾಯವನ್ನು ದಂಡಿಸಲು ಒಪ್ಪಲಾರಿರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ನಿಮ್ಮ ಸಂಕಷ್ಟಕ್ಕೆ ಇತರರ ಸಹಾಯವನ್ನು ಪಡೆದುಕೊಳ್ಳುವಿರಿ. ಸಮಾಜಮುಖೀ ಕಾರ್ಯಗಳ ಕಡೆ ಗಮನಹರಿಸುವಿರಿ. ಹಿರಿಯರ ಮಾತು ನಿಮ್ಮ ಸ್ವಭಾವವನ್ನು ಪರಿವರ್ತಿಸಬಹುದು. ರಾಜಕಾರಣದ ಸ್ಪರ್ಶದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು. ಹಳೆಯ ಯಂತ್ರಗಳು ದುರಸ್ತಿಗೆ ಬರುವ ಸಾಧ್ಯತೆ ಇದೆ.

ವೃಷಭ ರಾಶಿ :

ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ, ಕಾರ್ಯ ಚಟುವಟಿಕೆಗಳು ಚುರುಕು. ನಿಮ್ಮ ಕೆಲಸಗಳಿಗೆ ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಆಸ್ತಿಯ ಹಂಚಿಕೆಯಿಂದ ನಿಮಗೆ ಸಂತೋಷವಾಗಲಿದೆ. ಸಾಹಸ ಮಾಡಲು ಹೋಗಿ ಮುಖಭಂಗವಾದೀತು. ಆಪ್ತರಿಂದ ಏನಾನ್ನಾದರೂ ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ.

ಮಿಥುನ ರಾಶಿ :

ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಆದಾಯ, ಪ್ರಭಾವಗಳು ಹೆಚ್ಚಾಗಲಿದೆ‌. ಯಾರಾದರೂ ತಟಸ್ಥರಾದರೆ ಶಾಂತವಾಗಲಿದೆ. ತಲೆ ಮುಂತಾದ ಕೆಲವು ಭಾಗಗಳಲ್ಲಿ ನೋವುಗಳು ಕಾಣಿಸಬಹುದು. ಬೆಂಗಾವಲು ಪಡೆಯನ್ನು ಇಟ್ಟುಕೊಂಡು ಓಡಾಡಿ. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ. ಇನ್ನೊಬ್ಬರು ಹೇಳುವ ತನಕ ಕಾಯುವುದು ಬೇಡ‌.

ಕರ್ಕಾಟಕ ರಾಶಿ :

ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕಾರ್ಯದ ಒತ್ತಡದ ನಡುವೆಯೂ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವಿರಿ. ಹೂಡಿಕೆಯ ವ್ಯವಹಾರಗಳಲ್ಲಿ ಏಳಿಗೆಯು ಅಷ್ಟಾಗಿ ಇರುವುದಿಲ್ಲ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.

ಸಿಂಹ ರಾಶಿ :

ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲಾಗದು. ಇದೆ ಎಂದ ಮಾತ್ರಕ್ಕೆ ಏನನ್ನೋ ಮಾಡುವುದು ಔಚಿತ್ಯವಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡುವುದು. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ.

ಕನ್ಯಾ ರಾಶಿ :

ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ನಿಮ್ಮ ಯೋಜನೆಗೆ ನಕಾರಾತ್ಮಕತೆ ಬರಬಹುದು. ನಿಮ್ಮ ಪ್ರಯಾಣವು ಸರಿಯಾದ ಯೋಜನೆಯಿಂದ ಕೂಡಿರಲಿ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ತಾಳ್ಮೆಯೇ ಅತ್ಯವಶ್ಯ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು.

ತುಲಾ ರಾಶಿ :

ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ನಿರೀಕ್ಷಿಸಲಾರಿರಿ. ಹಣವು ದೀರ್ಘಕಾಲದವರೆಗೆ ಬಾರದೇ ಇರುವುದರಿಂದ ಇದನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಲು ಹೋಗಿ ಪರಿಸ್ಥಿತಿಯಲ್ಲಿ ನೀವು ಸಿಲುಕಿಕೊಳ್ಳುವಿರಿ. ಕೃತಕವಾದ ಸಂತೋಷದಲ್ಲಿ ಮೈಮರೆಯುವಿರಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌

ವೃಶ್ಚಿಕ ರಾಶಿ :

ನಿಮ್ಮ ಸಂಗಾತಿಯನ್ನು ತಪ್ಪಾಗಿ ಗ್ರಹಿಸುವಿರಿ. ಇಷ್ಟಾರ್ಥಗಳು ಸಿದ್ಧಿಸುವ ಬಗ್ಗೆ ಅಸಮಾಧಾನ ಕಾಣಿಸುವುದು. ಇದೇ ನಿಮ್ಮ ನಡುವಿನ ಅಂತರಕ್ಕೆ ಕಾರಣವಾಗಲಿದೆ. ನಿಮ್ಮ ಸಂಬಂಧವನ್ನು ಸುಧಾರಿಸಲು ಬಯಸಿದರೆ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ. ನೀವು ಅಮೂಲ್ಯ ವಸ್ತುವನ್ನು ಖರೀದಿಸಲು ಆಲೋಚಿಸಿದರೆ ಒಳ್ಳೆಯದೇ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ.

ಧನು ರಾಶಿ :

ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಂಡಂತಾಗುತ್ತದೆ. ಅತಿಯಾದ ಸಂತೋಷದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದರೆ ನೀವು ನಷ್ಟವನ್ನು ಅನುಭವಿಸುವಿರಿ. ಇಲ್ಲದವರನ್ನು ಇಂದು ಬಹುವಾಗಿ ನೆನೆಸುವಿರಿ. ಮನೆಯ ವಾತಾವರಣವು ಪ್ರಿಯವಾಗುವುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ.

ಮಕರ ರಾಶಿ :

ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸವಹುದು. ಅದಕ್ಕೆ ಅವಕಾಶವನ್ನು ಕೊಡಬೇಡಿ. ದ್ರವವ್ಯಾಪಾರದಿಂದ ಲಾಭದ ಕಡೆಗೆ ಪಯಣ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದು ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು.

ಕುಂಭ ರಾಶಿ :

ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಅದು ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಸಾಕುಗುವಷ್ಟನ್ನು ಮಾತ್ರ ಗಳಿಸಿ. ಅತಿಯಾದ ಆಸೆ ಬೇಡ. ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆ. ಆದರೆ ಅದನ್ನು ನಿಮಗೆ ಪರಿಚಯಿಸುವ ಕೆಲಸವಾಗಬೇಕು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲವಾಗಿರುವುದು. ಇಂದು ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ.

ಮೀನ ರಾಶಿ :

ವಿದ್ಯಾರ್ಥಿಯಾಗಿದ್ದರೆ ಶಿಕ್ಷಣದಲ್ಲಿನ ಅಡೆತಡೆಗಳು ಸರಿಯಾಗಬಹುದು. ಇರುವುದನ್ನು ಇರುವಂತೆ ಹೇಳಲಾಗದು. ದಾಂಪತ್ಯಜೀವನದಲ್ಲಿ ನೀವು ಪ್ರೀತಿಯನ್ನು ಅನುಭವಿಸುವಿರಿ. ಕೆಲವು ದಿನಗಳ ಕಾಲ ಮನೆಯಿಂದ ಹೊರಗೆ ಸುತ್ತಾಡಲು ಯೋಜಿಸಬಹುದು. ಉದ್ಯೋಗಿಗಳಿಗೆ ಇಂದು ಶುಭ ಸೂಚನೆಗಳು ಸಿಗಲಿದೆ. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಹೋಗಲು ಅನ್ಯಾನ್ಯ ಕಾರಣಗಳಿವೆ.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ನರ್ಸ್​​ಗಳ ಬಗ್ಗೆ, ಅವರ ಸಮವಸ್ತ್ರದ ಬಗ್ಗೆ ನಟಿ ಕಂಗನಾ ಮಾತು – Kannada News

ಬಾಲಿವುಡ್ (Bollywood) ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರು ತಮ್ಮ ನಟನೆಯ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಲೂ ಪದೇ ಪದೇ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ನಟಿ ಕಂಗನಾ ಹೊಸದೊಂದು ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಿಡುಗಡೆ ವೇಳೆ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಂಗನಾ ರನೌತ್ ಅವರು ಶುಶ್ರೂಕಿ (ನರ್ಸ್)ಗಳ ಕುರಿತಾದ ‘ಭಾರತ ಭಾಗ್ಯ ವಿದಾತ’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಪ್ರಚಾರದ ವೇಳೆ ಅವರು ನರ್ಸ್​​ಗಳ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಭಾರತದಲ್ಲಿ ಶುಶ್ರೂಶಕಿಯ ವೃತ್ತಿಯನ್ನು ತೀವ್ರವಾಗಿ ಸೆಕ್ಷುಲೈಸ್ಡ್ ಮಾಡಲಾಗಿದೆ. ನರ್ಸ್​​ಗಳಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದಿದ್ದಾರೆ. ‘ನರ್ಸಿಂಗ್ ಎನ್ನುವುದು ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಾಗಿ ಲೈಂಗಿಕೀಕರಿಸಲ್ಪಟ್ಟ ವೃತ್ತಿಯಾಗಿದೆ. ಚಲನಚಿತ್ರಗಳು, ಹಾಸ್ಯ ಪ್ರದರ್ಶನಗಳು (comedy shows) ಮತ್ತು ಪಾಪ್ ಸಂಸ್ಕೃತಿಯಲ್ಲಿ ಅವರನ್ನು ಬಿಂಬಿಸುವ ವಿಧಾನವೇ ಇದಕ್ಕೆ ಪ್ರಮುಖ ಕಾರಣ. ಇದು ಅವರಿಗೆ ಸಿಗಬೇಕಾದ ಗೌರವವನ್ನು ಕಸಿದುಕೊಳ್ಳುತ್ತದೆ’ ಎಂದು ಕಂಗನಾ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ನಟಿ ಕಂಗನಾ, ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿರುವ ಅವರ ಯೂನಿಫಾರ್ಮ್ ಭಾರತೀಯ ಪರಿಸರಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದಾರೆ. ‘ಅವರ ಬ್ರಿಟಿಷ್ ಕಾಲದ ಯೂನಿಫಾರ್ಮ್ ಅವರಿಗೆ ಒಂದು ವಿದೇಶಿ ಲುಕ್ ನೀಡುತ್ತದೆ, ಇದು ನಮ್ಮ ಗ್ರಾಮೀಣ ಅಥವಾ ಸಾಂಪ್ರದಾಯಿಕ ಭಾರತೀಯರಿಗೆ ಅವರೊಂದಿಗೆ ಸುಲಭವಾಗಿ ಕನೆಕ್ಟ್ ಆಗಲು ಬಿಡುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಈ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಘನತೆ ಮತ್ತು ಗೌರವ ಸಿಗಬೇಕು ಎಂದು ಕಂಗನಾ ಒತ್ತಿ ಹೇಳಿದ್ದಾರೆ. ನರ್ಸ್ ಜೀವರಕ್ಷಕಿಯಾಗಿದ್ದು, ಅವರನ್ನು ಕೇವಲ ಒಂದು ಗ್ಲಾಮರ್ ಅಥವಾ ಲೈಂಗಿಕ ವಸ್ತುವಾಗಿ ನೋಡುವುದನ್ನು ನಿಲ್ಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಕಂಗನಾ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಕೆಲವರು ಅವರ ಮಾತನ್ನು ಬೆಂಬಲಿಸಿ, ಸಿನಿಮಾಗಳಲ್ಲಿ ನರ್ಸ್ ಪಾತ್ರಗಳನ್ನು ತಪ್ಪಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಯೂನಿಫಾರ್ಮ್ ಮತ್ತು ವಿದೇಶಿ ಲುಕ್ ಬಗ್ಗೆ ಅವರು ಮಾಡಿರುವ ಕಾಮೆಂಟ್‌ಗಳನ್ನು ಟೀಕಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಖುದ್ದು ಕರೆ ಮಾಡಿ ನಟಿ ಮಮತಾ ಬಳಿ ಕ್ಷಮೆ ಕೇಳಿದ್ದ ರಜನೀಕಾಂತ್ – Kannada News

ನಟ ರಜನೀಕಾಂತ್ (Rajinikanth), ಭಾರತದ ಟಾಪ್ ಸೂಪರ್ ಸ್ಟಾರ್. ಅವರೊಟ್ಟಿಗೆ ನಟಿಸಲು ಖ್ಯಾತ ನಟ-ನಟಿಯರು ಈಗಲೂ ಸಾಲು ಗಟ್ಟಿ ನಿಂತಿದ್ದಾರೆ. ರಜನೀಕಾಂತ್, ತಮಿಳುನಾಡಿನಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳನ್ನು ಎದುರಿಸಿ ಬೆಳೆದು ಬಂದ ವ್ಯಕ್ತಿ. ಯಾರಿಗೂ ತಲೆಬಾಗಿ ನಡೆದವರೇ ಅಲ್ಲ. ಆದರೆ ಇಂಥಹಾ ರಜನೀಕಾಂತ್ ಅವರು ನಟಿಯೊಬ್ಬರಿಗೆ ಖುದ್ದು ಕರೆ ಮಾಡಿ ಕ್ಷಮೆ ಯಾಚನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಮಮತಾ ಮೋಹನ್​​ದಾಸ್, ಈ ವಿಷಯವನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಮಮತಾ ಮೋಹನ್​​ದಾಸ್ ಒಂದು ಸಮಯದಲ್ಲಿ ಬಲು ಬೇಡಿಕೆ ಇದ್ದ ಜನಪ್ರಿಯ ನಟಿ. ಕನ್ನಡದಲ್ಲಿ ಸುದೀಪ್ ಜೊತೆಗೆ ‘ಗೂಳಿ’ ಸಿನಿಮಾನಲ್ಲಿ ಸಹ ನಟಿಸಿರುವ ಮಮತಾ, ತೆಲುಗು ಹಾಗೂ ತಮಿಳಿನ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಮತಾ ಅವರು ರಜನೀಕಾಂತ್ ನಟಿಸಿರುವ ‘ಕುಸೇಲನ್’ ಸಿನಿಮಾನಲ್ಲಿ ನಟಿಸಿದ್ದರು.

ಸಿನಿಮಾನಲ್ಲಿ ಅವರದ್ದು ಸಿನಿಮಾ ನಿರ್ದೇಶಕಿಯ ಪಾತ್ರ. ಸಿನಿಮಾನಲ್ಲಿ ಮಮತಾ ನಟಿಸಿದ್ದರಾದರೂ ಸಿನಿಮಾ ಬಿಡುಗಡೆ ಆದಮೇಲೆ ಅವರ ಒಂದೇ ಒಂದು ಶಾಟ್ ಸಹ ಸಿನಿಮಾನಲ್ಲಿ ಇರಲಿಲ್ಲ. ಕೇವಲ ಅವರ ಒಂದು ಬ್ಯಾಕ್ ಶಾಟ್ ಮಾತ್ರವನ್ನೇ ಉಳಿಸಿಕೊಳ್ಳಲಾಗಿತ್ತು. ಇದಕ್ಕೆ ಮುಖ್ಯ ಕಾರಣ ನಯನತಾರಾ. ನಟಿ ನಯನತಾರಾ ಆ ಸಿನಿಮಾದ ನಾಯಕಿ, ತಾನು ಬೇರೆ ನಾಯಕಿಯ ಜೊತೆ ನಟಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಕ್ಕೆ. ಮಮತಾ ಅವರು ಡ್ಯಾನ್ಸ್ ಮಾಡಬೇಕಿದ್ದ ಹಾಡನ್ನು ರದ್ದು ಮಾಡಿದ್ದಲ್ಲದೆ, ಅವರ ದೃಶ್ಯಗಳನ್ನು ಸಹ ಕತ್ತರಿಸಲಾಯ್ತು.

ಇದನ್ನೂ ಓದಿ:ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

ಆದರೆ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳ ಬಳಿಕ ಮಮತಾಗೆ ರಜನೀಕಾಂತ್ ಕಚೇರಿ ಇಂದ ಕರೆ ಬಂತಂತೆ. ಖುದ್ದು ರಜನೀಕಾಂತ್ ಅವರೇ ಮಾತನಾಡಿ, ನಾಲ್ಕು ದಿನಗಳ ಕಾಲ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆ ಇರಲಿ. ನನ್ನ ಕೈಯಲ್ಲಿ ಏನೂ ಇರಲಿಲ್ಲ. ನಾನು ಕ್ಷಮೆ ಕೇಳುವುದಷ್ಟೆ ನನ್ನ ನಿಯಂತ್ರಣದಲ್ಲಿ ಇರುವುದು ಎಂದರಂತೆ. ಈ ವಿಷಯವನ್ನು ನಟಿ ಮಮತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕುಸೇಲನ್’ ಸಿನಿಮಾನಲ್ಲಿ ರಜನೀಕಾಂತ್ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ನಯನತಾರಾ ಖುದ್ದು ನಾಯಕಿ ನಯನತಾರಾ ಪಾತ್ರದಲ್ಲಿ ನಟಿಸಿದ್ದಾರೆ. ಪಶುಪತಿ, ರಜನೀಕಾಂತ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಬಳಿಕ ತೆಲುಗಿನಲ್ಲೂ ರೀಮೇಕ್ ಆಯ್ತು. ಹಿಂದಿಯಲ್ಲಿ ಶಾರುಖ್ ಖಾನ್ ಮತ್ತು ಇರ್ಫಾನ್ ಖಾನ್ ಅವರು ಈ ಸಿನಿಮಾನಲ್ಲಿ ನಟಿಸಿದರು. ಅಲ್ಲಿ ‘ಬಿಲ್ಲು ಬಾರ್ಬರ್’ ಎಂದು ಸಿನಿಮಾದ ಹೆಸರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:51 pm, Sun, 7 June 26

Source link

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್​​ನಲ್ಲಿ ಮುಂದುವರಿದ ಭಾರತದ ಪ್ರಾಬಲ್ಯ: ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್! – Kannada News

ಅಹಮದಾಬಾದ್, (ಜೂನ್ 7): ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ (World Yoga Championship) ಭಾರತ (India) ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ (Heena Rajgor)  ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದಿದ್ದಾರೆ. ಇಕೆಎ (EKA) ಅರೆನಾದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತವು 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 50 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಖ್ಯಾಂಶಗಳು

  • ಅಹಮದಾಬಾದ್ ನ ಏಕಾ ಎರೆನಾದಲ್ಲಿ ನಡೆಯುತ್ತಿರುವ ವಿಶ್ವ ಯೋಗಾಸನ ಚಾಂಪಿಯನ್ ಶಿಪ್
  • ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ ಭಾರತಕ್ಕೆ ಚಿನ್ನದ ಪದಕ
  • 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಈವರೆಗೆ ಒಟ್ಟು 50 ಪದಕ ಬಾಚಿರುವ ಭಾರತ

ಜಪಾನ್ ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಎರಡು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿರುವ ಸಿಂಗಾಪುರ ಮೂರನೇ ಸ್ಥಾನದಲ್ಲಿದೆ.

ಗುಜರಾತ್‌ನ ಭುಜ್ ಮೂಲದ ಹೀನಾ ರಾಜಗೋರ್, ಪ್ರಸ್ತುತ ಯೋಗದಲ್ಲಿ ಪಿಎಚ್‌ಡಿ (PhD) ಅಧ್ಯಯನ ಮಾಡುತ್ತಿದ್ದು, ಹಿರಿಯರ ‘ಬಿ’ ಮಹಿಳಾ ವಿಭಾಗದ ಫಾರ್ವರ್ಡ್ ಬೆಂಡ್ ಸ್ಪರ್ಧೆಯಲ್ಲಿ 43.50 ಅಂಕಗಳನ್ನು ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಓಮನ್‌ನ ಪ್ರೀತಿ ಜೈಮಾನಿ ಬೆಳ್ಳಿ ಪದಕ ಗೆದ್ದರೆ, ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಮತ್ತು ಜೋರ್ಡನ್‌ನ ಮಾಯಾ ಅಲ್ ಅಲೋಸ್ಥಾತ್ ಕಂಚಿನ ಪದಕಗಳನ್ನು ಹಂಚಿಕೊಂಡರು.

“ತವರಿನಲ್ಲಿ ಚಿನ್ನದ ಪದಕ ಗೆಲ್ಲುವುದು ವಿಶೇಷ ಅನುಭವ. ಕೋವಿಡ್ ನಂತರ ಸ್ಪರ್ಧಾತ್ಮಕ ಯೋಗಾಸನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆ. ಬಳಿಕ ಮಾನಸಿಕ ಏಕಾಗ್ರತೆಯ ಮೇಲೆ ಗಮನಹರಿಸಿದ್ದು, ಅದರ ಫಲ ಈಗ ಕಾಣಿಸುತ್ತಿದೆ” ಎಂದು ಹೀನಾ ಸಂತಸ ವ್ಯಕ್ತಪಡಿಸಿದರು.

ಭಾರತೀಯ ಅಥ್ಲೀಟ್‌ಗಳು ವಿವಿಧ ವಿಭಾಗಗಳಲ್ಲಿ ಪದಕಗಳ ಬೇಟೆ ಮುಂದುವರಿಸಿದ್ದರೆ, ಜಪಾನ್‌ನ ಹಿಸಾಶಿ ವತಾನಬೆ ಮತ್ತು ಟೊಮೊಕಾ ಶಿಮಿಜು ತಮ್ಮ ವಿಭಾಗಗಳಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಸೀನಿಯರ್ ‘ಬಿ’ ಮಹಿಳಾ ಸೂಪೈನ್ ಇಂಡಿವಿಜುವಲ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನದ ಕಾಮೋಲಾತ್ದಿನ್ ರಖ್ಮಾನೊವ್ ಲೆಗ್ ಬ್ಯಾಲೆನ್ಸ್ ಇಂಡಿವಿಜುವಲ್ ಸೀನಿಯರ್ ‘ಸಿ’ ಪುರುಷ ವಿಭಾಗದಲ್ಲಿ ಜಯ ಸಾಧಿಸಿ, ತಮ್ಮ ದೇಶಕ್ಕೆ ಈ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ; ನಾಯಕತ್ವ ಸಿಕ್ಕ ಬಳಿಕ ಶ್ರೇಯಸ್ ಮೊದಲ ಮಾತು – Kannada News

ಭಾರತದ ಟಿ20 ತಂಡಕ್ಕೆ ಹೊಸ ನಾಯಕನ ನೇಮಕವಾಗಿದೆ. ಟೀಂ ಇಂಡಿಯಾವನ್ನು ಟಿ20 ಚಾಂಪಿಯನ್‌ ಆಗಿ ಮಾಡಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಚುಟುಕು ಮಾದರಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿಗೆ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ನಾಯಕನಾಗಿ ನೇಮಿಸಿದೆ. ಈ ಮಾದರಿಯಲ್ಲಿ ಅಪಾರ ಅನುಭವವನ್ನು ಹೊಂದಿರುವ ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ನಾಯಕತ್ವ ಸಿಕ್ಕ ಬಳಿಕ ಇದೇ ಮೊದಲನೇ ಬಾರಿಗೆ ಮಾತನಾಡಿರುವ ಶ್ರೇಯಸ್ ಅಯ್ಯರ್, ತಮ್ಮ ಮುಂದಿನ ಗುರಿ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ

ಪ್ರಸ್ತುತ ಮುಂಬೈ ಟಿ20 ಲೀಗ್​ನಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್, ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಮನದಾಳ ತೆರೆದಿಟ್ಟಿದ್ದು, ‘ನಾಯಕನಾದ ಕೂಡಲೇ ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ. ನಾನು ಮೊದಲಿನಂತೆಯೇ ಇರುತ್ತೇನೆ. ನಾನು ಯಾರಂತೆಯೂ ಇರಲು ಅಥವಾ ಯಾರ ನೆರಳಿನಲ್ಲಿ ಬದುಕಲು ಪ್ರಯತ್ನಿಸುವುದಿಲ್ಲ. ಸ್ಪಷ್ಟವಾಗಿ, ನಾನು ಬಾಲ್ಯದಿಂದಲೂ ಸವಾಲುಗಳನ್ನು ಎದುರಿಸುವುದನ್ನು ಆನಂದಿಸಿದ್ದೇನೆ. ವಿಶೇಷವಾಗಿ ಮುಂಬೈನಿಂದ ಬಂದಿರುವುದರಿಂದ, ಅಲ್ಲಿ ಕ್ರಿಕೆಟ್​ಗೆ ವಿಶೇಷ ಮನ್ನಣೆಯಿದ್ದು, ಸ್ಪರ್ಧೆಯು ತುಂಬಾ ತೀವ್ರವಾಗಿರುತ್ತದೆ. ಪ್ರತಿಯೊಂದು ಮಗುವೂ ಮುಂಬೈ ಪರ ಆಡಲು ಬಯಸುತ್ತದೆ ಎಂದಿದ್ದಾರೆ.

ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ

ಮುಂದವರೆದು ಮಾತನಾಡಿದ ಅಯ್ಯರ್, ‘ನಾನು ಯಾರ ವಿರುದ್ಧ ಆಡಿದ್ದರೂ, ನನ್ನ ಮನಸ್ಥಿತಿ ಯಾವಾಗಲೂ ಗೆಲ್ಲುವುದೇ ಆಗಿದೆ, ಅದು ಕಲಿಯುವುದಾಗಲಿ ಅಥವಾ ಗೆಲ್ಲುವುದಾಗಲಿ. ಆದ್ದರಿಂದ ಕಲಿಯುವುದು ಅಥವಾ ಗೆಲ್ಲುವುದು ಗೌಣ, ಆದರೆ ನೀವು ಆಟವನ್ನು ಹೆಚ್ಚು ಆನಂದಿಸುತ್ತೀರಿ. ನೀವು ಹೆಚ್ಚು ಸ್ಪರ್ಧಾತ್ಮಕವಾಗಿ ಬೆಳೆದಷ್ಟೂ, ವಿಶೇಷವಾಗಿ ಕ್ರಿಕೆಟ್ ಅಥವಾ ಯಾವುದೇ ಇತರ ಕ್ರೀಡೆಯನ್ನು ಆಡುವಾಗ, ನೀವು ಸಾಕಷ್ಟು ಕಲಿಯುತ್ತೀರಿ. ಅದು ನಿಮ್ಮನ್ನು ಮುಂದಿನ ಹಂತಕ್ಕೆ ತಳ್ಳುತ್ತದೆ. ಇದರಿಂದ ನೀವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ. ಈಗ ನನಗೆ ಆ ಜವಾಬ್ದಾರಿ ಸಿಕ್ಕಿರುವುದರಿಂದ, ಅದು ನನಗೊಂದು ಒಂದು ದೊಡ್ಡ ಸವಾಲು ಎಂದಿದ್ದಾರೆ.

ಶ್ರೇಯಸ್ ಅಯ್ಯರ್​ಗೆ ಟಿ20 ತಂಡದ ನಾಯಕತ್ವ; ಯಾರಿಗೆ ಸಿಗಲಿದೆ ಉಪನಾಯಕತ್ವ?

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸ ಮಾಡಲಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿ ನಡೆದರೆ, ಆ ಬಳಿಕ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಎರಡು ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಯಾವ ರೀತಿಯಾಗಿ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಎರಡು ಸರಣಿಗಳ ಬಳಿಕ ಟೀಂ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಪಾಲ್ಗೊಳ್ಳಲಿದೆ. ಅಲ್ಲೂ ಕೂಡ ಶ್ರೇಯಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ – Kannada News

ಬೆಂಗಳೂರು, (ಜೂನ್ 07): ಸಿಎಂ ಡಿಕೆ ಶಿವಕುಮಾರ್ (CM DK Shivakumar) ಸೂಚನೆಯಂತೆ ಪೊಲೀಸ್ ಇಲಾಖೆಯು (Karnataka Police Department) ರೌಡಿಸಂ ನಿಯಂತ್ರಣಕ್ಕೆ ಹೊಸ ಕ್ರಮ ಕೈಗೊಂಡಿದೆ. ಪ್ರತಿ ಪೊಲೀಸ್ ವಲಯ ಮತ್ತು ಠಾಣೆ ಮಟ್ಟದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ಆದೇಶಿಸಲಾಗಿದೆ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ ಡಾ. ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಈ ಕ್ರಮಕೈಗೊಂಡಿದ್ದಾರೆ.

ರೌಡಿಸಂ ನಿರ್ಮೂಲನೆಗೆ ಕಠಿಣ ಕ್ರಮ

ರೌಡಿ ಅಂಶಗಳು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುತ್ತವೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನಿರ್ದೇಶನದಂತೆ, ರೌಡಿಸಂ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ‎ಪೊಲೀಸ್ ಮುಖ್ಯ ಕಚೇರಿಯಿಂದ ಸಮಯಕ್ಕೊಮ್ಮೆ ನೀಡಲಾಗುವ ನಿರ್ದೇಶನಗಳಂತೆ, ಎಲ್ಲಾ ಅಧಿಕಾರಿಗಳು ರೌಡಿಸಂ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ಸ್ಕ್ವಾಡ್ ರಚಿಸಲಾಗುವುದು. ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಠಾಣೆಗಳಲ್ಲಿ ಪ್ರತ್ಯೇಕ ಸ್ಕ್ವಾಡ್‌ಗಳೂ ರಚಿಸಲಾಗುವುದು. ಸ್ಕ್ವಾಡ್‌ನ ಸಂಯೋಜನೆ ಸ್ಥಳೀಯ ಅಗತ್ಯತೆ ಮತ್ತು ಅಪರಾಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗಾಧಿಕಾರಿ ಅಥವಾ ಎಸಿಪಿ ನಿರ್ಧರಿಸಲಿದ್ದಾರೆ.

ಇದನ್ನೂ ನೋಡಿ: ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹ ತಂಡ ರಚನೆಗೆ ಆದೇಶ

ರೌಡಿ ಸ್ಕ್ವಾಡ್‌ಗಳು ಅಪರಾಧ ಪ್ರಕರಣಗಳ ಪರಿಶೀಲನೆ ನಡೆಸಿ ಹೊಸ ರೌಡಿ ಶೀಟ್‌ಗಳನ್ನು ತೆರೆಯುವ ಕಾರ್ಯ ಕೈಗೊಳ್ಳಬೇಕು. ರೌಡಿ ಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಯಮಿತ ನಿಗಾವಹಣೆ ನಡೆಸಬೇಕು. ಹೊಸ ರೌಡಿ ಅಂಶಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಆಕ್ಷನ್‌ಬಲ್ ಇಂಟೆಲಿಜೆನ್ಸ್ ಸಂಗ್ರಹಿಸಬೇಕು. ಪಿಎಆರ್, ಗುಂಡಾ ಕಾಯ್ದೆ, ಕೆಸಿಒಸಿಎ ಕಾಯ್ದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಬೀಟ್ ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು ಹಾಗೂ ಅಪಾಯದ ಪ್ರದೇಶಗಳಲ್ಲಿ ವಿಶೇಷ ಡ್ರೈವ್‌ಗಳು ಮತ್ತು ಅಚ್ಚರಿ ತಪಾಸಣೆಗಳು ನಡೆಸಬೇಕು.

ಪ್ರತಿ ಸ್ಕ್ವಾಡ್‌ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್

‎ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಮತ್ತು ಠಾಣಾ ಅಧಿಕಾರಿಗಳು ಪ್ರತಿ ಪಕ್ಷಾವಧಿಯಲ್ಲಿ ಸ್ಕ್ವಾಡ್ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು. ಎಸ್‌ಡಿಪಿಒಗಳು ಮತ್ತು ಎಸಿಪಿಗಳು ಮಾಸಿಕ ಅಪರಾಧ ಸಭೆಗಳಲ್ಲಿ ಸ್ಕ್ವಾಡ್‌ಗಳ ಕಾರ್ಯಕ್ಷಮತೆಯನ್ನು ವಿಮರ್ಶಿಸಬೇಕು. ಪ್ರತಿ ಸ್ಕ್ವಾಡ್‌ನ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್ ಇರಬೇಕು ಮತ್ತು ಮಾಸಿಕ ವರದಿಗಳನ್ನು ಡಿಓ ಪತ್ರದ ರೂಪದಲ್ಲಿ ಸಲ್ಲಿಸಬೇಕು.

‎ಪೊಲೀಸ್ ಅಧಿಕಾರಿಗಳು ರೌಡಿಸಂ ಮತ್ತು ಅಸಾಮಾಜಿಕ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಯಾವುದೇ ರೀತಿಯ ಬೆದರಿಕೆ, ಬಲವಂತದ ಹಣ ಸಂಗ್ರಹಣೆ, ಗ್ಯಾಂಗ್ ಚಟುವಟಿಕೆ ಅಥವಾ ಸಾರ್ವಜನಿಕ ಅಶಾಂತಿ ಕಂಡುಬಂದರೆ ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

‎ಎಲ್ಲಾ ಘಟಕಾಧಿಕಾರಿಗಳು ಈ ಸರ್ಕ್ಯುಲರ್‌ನ್ನು ಸ್ವೀಕರಿಸಿ ಏಳು ದಿನಗಳೊಳಗೆ ರೌಡಿ ಸ್ಕ್ವಾಡ್ ರಚನೆಯ ವರದಿ ಸಲ್ಲಿಸಬೇಕು. ಸರ್ಕ್ಯುಲರ್‌ನ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ನಿರ್ದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 3 ವರ್ಷಗಳ ನಂತರ ಭಾರತದ ನೆಲದಲ್ಲಿ ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ – Kannada News

ಅಫ್ಘಾನಿಸ್ತಾನದ ವಿರುದ್ಧ ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಅನುಭವಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ತಂಡದ ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಪ್ರಸಿದ್ಧ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಅಮೋಘ ಪ್ರದರ್ಶನ ನೀಡುವ ಮೂಲಕ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅಚ್ಚರಿಯ ಸಂಗತಿಯೆಂದರೆ ಇದು ಭಾರತದ ನೆಲದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಪ್ರಸಿದ್ಧ್ ಪಡೆದ ಮೊಟ್ಟ ಮೊದಲ ವಿಕೆಟ್ ಆಗಿತ್ತು.

ಆಟದ ಎರಡನೇ ದಿನದಂದು ಪ್ರಸಿದ್ಧ್ ಒಟ್ಟು 7 ಓವರ್‌ಗಳನ್ನು ಬೌಲ್ ಮಾಡಿ 27 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಪ್ರಸಿದ್ಧ್ ದಾಳಿಗೆ ಬಲಿಯಾದವರಲ್ಲಿ ಆರಂಭಿಕ ಸೇದಿಕುಲ್ಲಾ ಅಟಲ್‌ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಸೇರಿದ್ದರು. ಮೇಲೆ ಹೇಳಿದಂತೆ ಭಾರತದ ನೆಲದಲ್ಲಿ ಪ್ರಸಿದ್ಧ್ ಪಡೆದ ಮೊದಲ ಟೆಸ್ಟ್ ವಿಕೆಟ್ ಇದಾಗಿತ್ತು. 2023 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪ್ರಸಿದ್ಧ್ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಮೊದಲ 5 ಟೆಸ್ಟ್ ಪಂದ್ಯಗಳನ್ನು ಪ್ರಸಿದ್ಧ್ ವಿದೇಶಿ ನೆಲದಲ್ಲಿ ಆಡಿದ್ದು 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಇನ್ನಿಂಗ್ಸ್‌ವೊಂದರಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಸಹ ಮಾಡಿದ್ದಾರೆ.

 

Source link

ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿಕೆ ಶಿವಕುಮಾರ್, ಜತೆಗೊಂದು ಕಿವಿಮಾತು – Kannada News

ರಾಮನಗರ, (ಜೂನ್ 07): “ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ” ಹೀಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸ್ವಕ್ಷೇತ್ರ ಕನಕನಪುರ (Kanakapura) ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ನೀಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್   ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಿಕೆಶಿ, ಕ್ಷೇತ್ರ ಅಭಿವೃದ್ಧಿ ಜೊತೆಗೆ ಜನರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು.

“ನನ್ನ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ಸೇವೆಗೆ ಇರುವವನು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇ‌‌ನೆ. ನನ್ನ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದ ನಾನು ಜನರ ಸೇವಕ. ಜಿಲ್ಲಾ ಪಂಚಾಯತಿ, ಟಿಎಪಿಸಿಎಂಎಸ್ ಮೂಲಕ ನನ್ನ ರಾಜಕೀಯ ಪ್ರಾರಂಭ ಮಾಡಿದೆ. ಪಕ್ಷಬೇಧ ಮರೆತು ನನ್ನನ್ನು ಬೆಳೆಸಿದ್ದೀರಿ” ಎಂದರು.

ಇದನ್ನೂ ಓದಿ: ಸ್ವಕ್ಷೇತ್ರ ಕನಕಪುರಕ್ಕೆ ಡಿಕೆ ಶಿವಕುಮಾರ್ ಭೇಟಿ: ನಿಮ್ಮೊಂದಿಗೆ ಸದಾ ಇರ್ತೆನೆ ಎಂಬ ಸಂದೇಶ ರವಾನಿಸಿದ ಸಿಎಂ

ಮೆಡಿಕಲ್ ಕಾಲೇಜು ನನ್ನ ಕನಸಾಗಿತ್ತು

ತುಂಗಣಿ ಗ್ರಾಮದಲ್ಲಿ ಮಾತನಾಡಿದ ಅವರು, “ಅಕ್ಷರ, ಆಶ್ರಯ, ಆರೋಗ್ಯ ಹುಡುಕಿಕೊಂಡು ವಲಸೆ ಹೋಗಬೇಡಿ. ಅದೆಲ್ಲವೂ ಇಲ್ಲಿಯೇ ದೊರೆಯಲಿದೆ. ಕನಕಪುರದಲ್ಲಿ ದೊಡ್ಡ ಮೆಡಿಕಲ್ ಕಾಲೇಜು ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಇಡೀ ರಾಜ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಇದ್ದರೆ ಅದು ಈ ಕ್ಷೇತ್ರದಲ್ಲಿ ಮಾತ್ರ. ಯಡಿಯೂರಪ್ಪ ಅವರು ನಮಗೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ನಾನು ಛಲಬಿಡದೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದೇನೆ” ಎಂದು ತಿಳಿಸಿದರು.

ನಿಮ್ಮ ಪಾದಗಳಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದ್ದೇನೆ

ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಇದೊಂದು ಇತಿಹಾಸಕ್ಕೆ ಸಾಕ್ಷಿ ದಿನ. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಪ್ರಮಾಣ ವಚನ ಮಾಡಿದ್ದೇನೆ.ಇದು ನಿಮ್ಮ ಗ್ರಾಮಕ್ಕೆ ಗೌರವ ಸಲ್ಲಬೇಕು. ನಾನು 1985ರಿಂದ ಚುನಾವಣೆ ನಿಂತಾಗಲಿಂದಲೂ ನನ್ನ ಜೊತೆ ಇದ್ದೀರಿ. ಸಾಕಷ್ಟು ಹಿರಿಯರು ಬೆನ್ನಾಲಬಾಗಿ ನಿಂತು ಆರ್ಶಿವಾದ ಮಾಡಿದ್ದಾರೆ. ನಾನು ಸಿಎಂ ಅಂತಾ ಹೇಳಿಕೊಳ್ಳಲು ಬಂದಿಲ್ಲ.ನಾನು ಎಂದಿಗೂ ಊರಿನ ಮಗ. ನನ್ನನ್ನ ಬಿಜೆಪಿಯವರು ಜೈಲಿಗೆ ಕಳುಹಿಸಿದರು. ನಾನು ಎಂದಿಗೂ ಅಗೌರವ ತಂದಿಲ್ಲ. ರಾಜಕೀಯವಾಗಿ ಷ್ಯಡ್ಯಂತ್ರ ನಡೆಯಿತು. ಆದರೂ ನೀವು ನನಗೆ ದೊಡ್ಡ ಶಕ್ತಿ ನೀಡಿದ್ರಿ. ಆದರೂ ಕೊನೆಗೂ ಅಧಿಕಾರ ನನಗೆ ಕೊಟ್ಟಿದ್ದಾರೆ. ಅಧಿಕಾರ ಹಂಚಿಕೆ ಪ್ರಕಾರ ನೀಡಿದ್ದಾರೆ. ನಿಮ್ಮ ಪಾದಗಳಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ

“ಕ್ಷೇತ್ರದಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು.‌ ನನ್ನ ಕ್ಷೇತ್ರದ ಜನ ವಲಸೆ ಹೋಗುವುದನ್ನು ತಪ್ಪಿಸಲು ಕೆಲಸ ಮಾಡಲಾಗುತ್ತಿದೆ. ದೊಡ್ಡಆಲಳ್ಳಿ, ಹೊಸದುರ್ಗಗಳಲ್ಲಿ ಸಿಎಸ್ ಆರ್ ಅನುದಾನ ಬಳಸಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ದೊರೆಯುವ ಶಿಕ್ಷಣ ಇಲ್ಲಿಯೇ ದೊರೆಯಬೇಕು. ನಿಮಗೆ ಆಶ್ರಯ, ಆರೋಗ್ಯ, ಅಕ್ಷರ ನೀಡುವುದು ನನ್ನ ಮೊದಲ ಆದ್ಯತೆ.‌ ಇದೇ ವೇಳೆ ಭೂಮಿ ಮಾರಬೇಡಿ- ವ್ಯವಸಾಯ ಬಿಡಬೇಡಿ” ಎಂದು ಕಿವಿಮಾತು ಹೇಳಿದರು.

ಜೆಡಿಎಸ್-ಬಿಜೆಪಿಗರಿಗೆ ಆಹ್ವಾನ ಕೊಟ್ಟ ಡಿಕೆಶಿ

ನನ್ನ ಕಷ್ಟಕಾಲದಲ್ಲಿ ನನ್ನ ಜೊತೆ ಇದ್ದೀರಿ. ಯಾವ ಕುತಂತ್ರಕ್ಕೂ ನೀವು ಬಗ್ಗಲಿಲ್ಲ. ನಾನು ನಿಮ್ಮ ಋಣವನ್ನ ತೀರಿಸಬೇಕಿದೆ. ಗ್ರಾಮಕ್ಕೆ ಏನೆಲ್ಲ ಅಭಿವೃದ್ಧಿ ಮಾಡಬೇಕೋ ಮಾಡಿದ್ದೇನೆ. ನಾವು ಬೆಂಗಳೂರು ಜಿಲ್ಲೆಯವರು ಎಂದು ಹೇಳಿಕೊಳ್ಳಲು ಗೌರವ ಬರುತ್ತದೆ. ನನಗೆ ಸಿಕ್ಕಿರೋ ಬಿರುದು ನನ್ನದಲ್ಲ ಅದು ನಿಮ್ಮದು. ಯಾರು ಕೂಡ ಬಿಜೆಪಿ ಜೆಡಿಎಸ್ ನವರ ಜೊತೆ ಜಗಳ ಮಾಡಬಾರದು. ಓಟ್ ಹಾಕುವುದು ಬಿಡುವುದು ಅವರ ಆತ್ಮಸಾಕ್ಷಿಗೆ ಬಿಟ್ಟಿದ್ದು. ಯುವಕರಿಗೆ ರಾಜಕೀಯ ಪ್ರಜ್ಞೆ ಇದೆ. ಯುವಕರು ಯಾವುದೇ ಗಲಾಟೆ ಮಾಡಿಕೊಳ್ಳಬಾರದು. ಮುಂದೆ ಏನು ಕೆಲಸ ಆಗಬೇಕು ಅದನ್ನ ಮಾಡುತ್ತೇನೆ . ತಾಲೂಕಿನ ಸ್ವಾಭಿಮಾನ ಉಳಿಸಿದ್ದೇನೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರಿಗೆ ನನ್ನ ಮನೆ ಬಾಗಿಲು ತೆಗೆದಿದೆ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾಂಗ್ರೆಸ್​​​ಗೆ ಆಹ್ವಾನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತವಾಗುವುದಕ್ಕೆ ಕಾರಣವೇನು? ತಡೆಗಟ್ಟಲು ಇಲ್ಲಿದೆ ಸಲಹೆ – Kannada News

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹಿಂದೆ ವಯೋವೃದ್ಧರಲ್ಲಿ ಹೆಚ್ಚು ಕಂಡುಬರುತ್ತಿದ್ದ ಈ ಸಮಸ್ಯೆ ಈಗ ಯುವಕರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಹೃದಯಾಘಾತಕ್ಕೆ ಹೆಚ್ಚಿದ ಕೊಲೆಸ್ಟ್ರಾಲೇ ಮುಖ್ಯ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯವಾಗಿದ್ದರೂ ಕೂಡ ಕೆಲವರಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ. ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ. ಇದರಿಂದ ಹೃದಯಕ್ಕೆ ರಕ್ತ ಸರಿಯಾಗಿ ಹರಿಯದೇ ಹೃದಯಾಘಾತದ ಅಪಾಯ ಹೆಚ್ಚಬಹುದು. ಆದರೆ ಹೃದಯ ಆರೋಗ್ಯವು ಕೇವಲ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತವಾಗುವುದಕ್ಕೆ ಕಾರಣವೇನು, ಹೃದಯವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೈ ಕೊಲೆಸ್ಟ್ರಾಲ್ ಇಲ್ಲದಿದ್ದರೂ ಹೃದಯಾಘಾತಕ್ಕೆ ಕಾರಣಗಳೇನು?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಹಲವು ಅಂಶಗಳಿವೆ. ಜೀವನಶೈಲಿ, ಆಹಾರ ಪದ್ಧತಿ ಮತ್ತು ಇತರ ಆರೋಗ್ಯ ಸಮಸ್ಯೆಗಳೂ ಹೃದಯಾಘಾತಕ್ಕೆ ಕಾರಣವಾಗಬಹುದು. ಅಲ್ಲದೆ ಹೈ ಬ್ಲಡ್ ಪ್ರೆಶರ್, ಮಧುಮೇಹ, ಧೂಮಪಾನ, ಅತಿಯಾದ ಒತ್ತಡ, ದೇಹದ ತೂಕ ಹೆಚ್ಚಳ, ವ್ಯಾಯಾಮದ ಕೊರತೆ ಮತ್ತು ಕುಟುಂಬದ ಆರೋಗ್ಯ ಇತಿಹಾಸವು ಪ್ರಮುಖ ಕಾರಣಗಳಾಗಬಹುದು. ಕೆಲವರು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹೊಂದಿದ್ದರೂ ಕೂಡ ಮಾನಸಿಕ ಒತ್ತಡ ಅಥವಾ ಅಸ್ವಸ್ಥ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ಕೇವಲ ಕೊಲೆಸ್ಟ್ರಾಲ್ ವರದಿ ನೋಡಿ ಹೃದಯದ ಸ್ಥಿತಿಯನ್ನು ಅಂದಾಜು ಮಾಡುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು; ನಿರ್ಲಕ್ಷ್ಯ ಬೇಡ

ಹೃದಯಾಘಾತದ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಸಾಮಾನ್ಯವಾಗಿ ಹೃದಯಾಘಾತವಾಗುವ ಮೊದಲು ಕೆಲವರಲ್ಲಿ ಎದೆನೋವು, ಎದೆ ಮೇಲೆ ಒತ್ತಡದ ಅನುಭವ, ಉಸಿರಾಟದ ತೊಂದರೆ, ತೀವ್ರ ದಣಿವು, ತಲೆಸುತ್ತು, ಕೈ, ಭುಜ, ಕುತ್ತಿಗೆ ಅಥವಾ ದವಡೆಯಲ್ಲಿ ನೋವು ಕಾಣಿಸಬಹುದು. ಮಹಿಳೆಯರು ಹಾಗೂ ಮಧುಮೇಹ ಇರುವವರಲ್ಲಿ ಲಕ್ಷಣಗಳು ವಿಭಿನ್ನವಾಗಿರಬಹುದು. ಯಾವುದೇ ಈ ರೀತಿಯ ಸಾಮಾನ್ಯವಲ್ಲದ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಹೃದಯವನ್ನು ಆರೋಗ್ಯವಾಗಿಡಲು ಏನು ಮಾಡಬೇಕು?

ಹೃದಯ ಆರೋಗ್ಯಕ್ಕಾಗಿ ಸಮತೋಲನ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಧೂಮಪಾನದಿಂದ ದೂರವಿರುವುದು ಅಗತ್ಯ. ಜೊತೆಗೆ ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಸಾಕಷ್ಟು ನಿದ್ರೆ, ಒತ್ತಡ ನಿಯಂತ್ರಣ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದೂ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link