Category Archives: Blog

Your blog category

ಖರ್ಜೂರ ಅಥವಾ ಬಾದಾಮಿ; ಈ ಋತುಮಾನಕ್ಕೆ ಯಾವುದರ ಸೇವನೆ ಆರೋಗ್ಯಕರ? – Kannada News | Winter Dry Fruits: Almonds vs Dates Showdown

ಚಳಿಗಾಲದಲ್ಲಿ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಸಾಮಾನ್ಯ. ಪರಿಣಾಮವಾಗಿ, ಕಾಲೋಚಿತ ಕಾಯಿಲೆಗಳಿಗೆ ದೇಹ ಬೇಗ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ, ಈ ಋತುಮಾನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ದೇಹವನ್ನು ಒಳಗಿನಿಂದ ಬೆಚ್ಚಗಿಡುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ನಿಯಮಿತವಾಗಿ ಖರ್ಜೂರ (Dates) ಮತ್ತು ಬಾದಾಮಿಯಂತಹ ಒಣ ಹಣ್ಣುಗಳ ತಿನ್ನಿ ಎಂದು ಸಲಹೆ ನೀಡುತ್ತಾರೆ. ಇವೆರಡೂ ಆರೋಗ್ಯಕರ, ಆದರೆ ಅವುಗಳ ಪ್ರಯೋಜನಗಳು ವಿಭಿನ್ನವಾಗಿರುತ್ತದೆ. ಹಾಗಾದರೆ ಇವೆರಡರಲ್ಲಿ ಯಾವುದು ಒಳ್ಳೆಯದು, ಇವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಖರ್ಜೂರ ತಿನ್ನುವುದರಿಂದಾಗುವ ಪ್ರಯೋಜನಗಳು:

ಖರ್ಜೂರವು ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಇವುಗಳ ಸೇವನೆಯಿಂದ ತ್ವರಿತ ಶಕ್ತಿ ದೊರೆಯುತ್ತದೆ. ಬೆಳಿಗ್ಗೆ 2 ರಿಂದ 3 ಖರ್ಜೂರ ತಿನ್ನುವುದರಿಂದ ಆಯಾಸ ಕಡಿಮೆಯಾಗುತ್ತದೆ. ಅಷ್ಟೇಅಲ್ಲ, ಖರ್ಜೂರವು ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು ಚಳಿಗಾಲದ ದೌರ್ಬಲ್ಯ ಮತ್ತು ಹಿಮೋಗ್ಲೋಬಿನ್ ಕೊರತೆಯನ್ನು ತಡೆಯುತ್ತದೆ. ಇವುಗಳಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಖರ್ಜೂರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಈ ಪ್ರಯೋಜನಗಳನ್ನು ಮಿತವಾಗಿ ಸೇವಿಸುವ ಮೂಲಕ ಪಡೆಯಬಹುದು.

ಇದನ್ನೂ ಓದಿ: ಬಾಳೆಹಣ್ಣು vs ಖರ್ಜೂರ: ಆಯಾಸ ಕಡಿಮೆ ಮಾಡಿ ತ್ವರಿತ ಶಕ್ತಿ ಪಡೆಯಲು ಇವೆರಡರಲ್ಲಿ ಯಾವುದು ಒಳ್ಳೆಯದು?

ಬಾದಾಮಿ ತಿನ್ನುವುದರ ಪ್ರಯೋಜನಗಳು:

ಬಾದಾಮಿ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವುದಿಲ್ಲ. ಆದರೆ ದೀರ್ಘಕಾಲದವರೆಗೆ ನಿರಂತರ ಶಕ್ತಿ ಒದಗಿಸಲು ಸಹಾಯ ಮಾಡುತ್ತವೆ. ಅವುಗಳಲ್ಲಿರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಅಂಶ ಚಳಿಗಾಲದಲ್ಲಿ ದೇಹವನ್ನು ಬಲವಾಗಿ ಮತ್ತು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ, ಇದು ಶೀತ ವಾತಾವರಣದಲ್ಲಿ ಒಣ ಚರ್ಮದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಷ್ಟೇಅಲ್ಲ, ಬಾದಾಮಿ ಮೆದುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಖರ್ಜೂರ, ಬಾದಾಮಿ: ಚಳಿಗಾಲಕ್ಕೆ ಯಾವುದು ಒಳ್ಳೆಯದು?

ಚಳಿಗಾಲದಲ್ಲಿ ಖರ್ಜೂರ ಮತ್ತು ಬಾದಾಮಿ ಎರಡೂ ಕೂಡ ಆರೋಗ್ಯಕರ. ಶೀತ ಅಥವಾ ದಣಿದಿದ್ದವರಿಗೆ ಖರ್ಜೂರದ ಸೇವನೆ ಉತ್ತಮ ಏಕೆಂದರೆ ಅವು ತಕ್ಷಣಕ್ಕೆ ಶಕ್ತಿ ಮತ್ತು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಆದರೆ ದೀರ್ಘಕಾಲೀನ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು, ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ಎರಡನ್ನೂ ಸೇರಿಸಿಕೊಳ್ಳುವುದು ಒಳ್ಳೆಯದು. ರೋಗನಿರೋಧಕ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸಲು, ಬೆಳಿಗ್ಗೆ 10-12 ನೆನೆಸಿದ ಬಾದಾಮಿ ತಿನ್ನುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏರ್ ಇಂಡಿಯಾ ಡ್ರೀಮ್‌ಲೈನರ್​ನಲ್ಲಿ ಮತ್ತೆ ಇಂಧನದ ಸ್ವಿಚ್ ಸಮಸ್ಯೆ; ಲಂಡನ್-ಬೆಂಗಳೂರು ಮಾರ್ಗದ ವಿಮಾನ ಹಾರಾಟ ಸ್ಥಗಿತ – Kannada News | Air India Dreamliner Grounded After Fuel Switch issue scare in London to Bengaluru flight

ಬೆಂಗಳೂರು, ಫೆಬ್ರವರಿ 2: ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಮಸ್ಯೆ ಪತ್ತೆಯಾದ ನಂತರ ಏರ್ ಇಂಡಿಯಾ (Air India) ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಹಾರಾಟವನ್ನು ಇಂದು ಸ್ಥಗಿತಗೊಳಿಸಲಾಗಿದೆ. ಈ ವಿಮಾನ ಲಂಡನ್​​ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. AI 132 ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರುತ್ತಿತ್ತು. ಈ ವೇಳೆ ಪೈಲಟ್ ವಿಮಾನದ ಕಾರ್ಯವಿಧಾನವನ್ನು ಪರಿಶೀಲಿಸುವಾಗ ಫ್ಯೂಯೆಲ್ ಕಂಟ್ರೋಲ್ ಸ್ವಿಚ್​​ನಲ್ಲಿ ಸಮಸ್ಯೆ ಕಂಡುಬಂದಿತ್ತು. ತಕ್ಷಣ ಅವರು ಏರ್ ಇಂಡಿಯಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡು ಅಧಿಕಾರಿಗಳು ಆ ವಿಮಾನದ ಹಾರಾಟವನ್ನು ರದ್ದುಗೊಳಿಸಿದ್ದಾರೆ.

2025ರಲ್ಲಿ ಅಹಮದಾಬಾದ್​​ನಲ್ಲಿ ನಡೆದ ಏರ್ ಇಂಡಿಯಾ ಡ್ರೀಮ್​ಲೈನರ್ ವಿಮಾನದ ಅಪಘಾತ ನಿಮಗೆ ನೆನಪಿರಬಹುದು. ಆ ದುರಂತದಲ್ಲಿ 260 ಜನರು ಮೃತಪಟ್ಟಿದ್ದರು. ಆ ವಿಮಾನದಲ್ಲಿ ಕೂಡ ಫ್ಯೂಯೆಲ್ ಸ್ವಿಚ್ ಸಮಸ್ಯೆಯಿಂದಲೇ ಅಪಘಾತ ಸಂಭವಿಸಿತ್ತು ಎಂಬುದು ವರದಿಯಲ್ಲಿ ಬಹಿರಂಗವಾಗಿತ್ತು. ಹೀಗಾಗಿ, ಇದೀಗ ಮತ್ತೆ ಅದೇ ಮಾದರಿಯ ಏರ್ ಇಂಡಿಯಾ ಡ್ರೀಮ್​​ಲೈನರ್ ಬೋಯಿಂಗ್ ವಿಮಾನದಲ್ಲಿ ಫ್ಯೂಯೆಲ್ ಸ್ವಿಚ್ ಸಮಸ್ಯೆ ಉಂಟಾಗಿದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ವಿಮಾನಯಾನ ಸಿಬ್ಬಂದಿ ಆ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ, ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ; 5 ಏರ್​ಪೋರ್ಟ್​ಗಳಲ್ಲಿ ಹೈ ಅಲರ್ಟ್

ಈ ಬಗ್ಗೆ ಏರ್ ಇಂಡಿಯಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಪೈಲಟ್​ಗಳಲ್ಲಿ ಒಬ್ಬರು ಫ್ಯೂಯೆಲ್ ಕಂಟ್ರೋಲ್ ಸ್ವಿಚ್​​ನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ ಕೂಡಲೆ ಆ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹೀಗಾಗಿ, ಈ ಬಗ್ಗೆ ಡಿಜಿಸಿಎಗೂ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದರೆ, ಸಂಪೂರ್ಣ ಪರಿಶೀಲನೆಯ ನಂತರ ಆ ವಿಮಾನದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; ಪ್ರಯಾಣಿಕರು ಸೇಫ್

“DGCA ನಿರ್ದೇಶನದ ನಂತರ ಏರ್ ಇಂಡಿಯಾ ತನ್ನ ಫ್ಲೀಟ್‌ನಲ್ಲಿರುವ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಿದೆ. ಅದರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಏರ್ ಇಂಡಿಯಾದಲ್ಲಿ ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ” ಎಂದು ಏರ್ ಇಂಡಿಯಾ ಹೇಳಿದೆ.

ಈ ಘಟನೆಯು ಜುಲೈ 2025 ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ 241 ಪ್ರಯಾಣಿಕರು ಸೇರಿದಂತೆ 260 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಡ್ರೀಮ್‌ಲೈನರ್ ಅಪಘಾತದ ನೆನಪುಗಳನ್ನು ಮರಳಿ ತಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:23 pm, Mon, 2 February 26

Source link

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್ – Kannada News | Priya Hassan condemns Chakravarthy Chandrachud statement on movie producers

ಕಿಚ್ಚ ಸುದೀಪ್ ಅವರ ಆಪ್ತರಾದ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಸಿನಿಮಾ ನಿರ್ಮಾಪಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಅನೇಕ ನಿರ್ಮಾಪಕರು ಖಂಡಿಸುತ್ತಿದ್ದಾರೆ. ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಸಹ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಿವಿ9 ಜತೆ ಅವರು ಮಾತನಾಡಿದ್ದಾರೆ. ‘ಚಂದ್ರಚೂಡ್ ಅವರ ವಿಡಿಯೋ ನೋಡಿದಾಗ ನನಗೆ ಅಸಹ್ಯ ಅನಿಸಿತು. ಅಷ್ಟು ಅಸಭ್ಯವಾದ ಪದವನ್ನು ಅವರು ಬಳಸಿದ್ದಾರೆ. ಹೆಣ್ಮಕ್ಕಳು ಕೇಳಲು ಹಿಂಜರಿಯುವಂತಹ ಪದ ಬಳಕೆ ಮಾಡಿದ್ದಾರೆ. ಡಾ. ರಾಜ್​ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದಿದ್ದರು. ಆದರೆ ಈಗ ಚಂದ್ರಚೂಡ್ ಇಷ್ಟು ಹೀನಾಯವಾಗಿ ಮಾತನಾಡಿರುವುದು ಎಲ್ಲ ನಿರ್ಮಾಪಕರ ಮನಸ್ಸಿಗೆ ನೋವು ಉಂಟುಮಾಡಿದೆ’ ಎಂದು ಪ್ರಿಯಾ ಹಾಸನ್ (Priya Hassan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆ್ಯಂಬುಲೆನ್ಸ್​ಗೆ ಕಾದು ಕಾದು ಸಾಕಾಗಿ ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ! – Kannada News | Madhya Pradesh Woman Delivers Baby On Roadside After Ambulance Fails To Arrive At Her Village

ನವದೆಹಲಿ, ಫೆಬ್ರವರಿ 2: ಆ ಮಹಿಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರು. ಅವರು ಅಂದುಕೊಂಡದ್ದಕ್ಕಿಂತ ಮೊದಲೇ ಹೆರಿಗೆ ನೋವು (Delivery Pain) ಕಾಣಿಸಿಕೊಂಡಿದ್ದರಿಂದ ತಕ್ಷಣ ತಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಹೋಗಲೇಬೇಕಾಗಿತ್ತು. ಆದರೆ, ಆ ಊರಿಗೆ ರಸ್ತೆ ಸರಿ ಇಲ್ಲದ ಕಾರಣದಿಂದ ಆ್ಯಂಬುಲೆನ್ಸ್​ (Ambulance) ಬರುವುದೇ ಕಷ್ಟವಾಗಿತ್ತು. ಆದರೂ ಅನಿವಾರ್ಯವಾದ್ದರಿಂದ ಹಾಗೂ ಬೇರೆ ವಾಹನಗಳಲ್ಲಿ ಅವರನ್ನು ಕರೆದುಕೊಂಡು ಹೋಗಲಾಗದ ಸ್ಥಿತಿ ಇದ್ದುದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್​ ಕಳುಹಿಸಲು ಮನವಿ ಮಾಡಲಾಗಿತ್ತು.

ಆದರೆ, ಈಗ ಬರುತ್ತೇವೆಂದು ಆ್ಯಂಬುಲೆನ್ಸ್​ನವರು ಹೇಳಿದ್ದರಿಂದ ಆ ಮಹಿಳೆ ರಸ್ತೆಯ ಬಳಿ ಹೋಗಿ ನಿಂತು ಕಾಯುತ್ತಿದ್ದರು. ಎಷ್ಟೇ ಹೊತ್ತು ಕಾದರೂ ಆ್ಯಂಬುಲೆನ್ಸ್ ಬರಲೇ ಇಲ್ಲ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಅವರು ಇನ್ನು ಕಾಯಲು ಸಾಧ್ಯವೇ ಇಲ್ಲ ಎಂದು ರಸ್ತೆಬದಿಯಲ್ಲೇ ಕುಳಿತರು. ತಾತ್ಕಾಲಿಕ ಪರದೆಯಂತೆ ಟಾರ್ಪಲ್ ಕಟ್ಟಿದ ಆ ಊರಿನ ಮಹಿಳೆಯರು ಟಾರ್ಚ್ ಬೆಳಕು ಹಾಕಿಕೊಂಡು ರಸ್ತೆ ಬದಿಯಲ್ಲೇ ಆ ಮಹಿಳೆಗೆ ಹೆರಿಗೆ ಮಾಡಿಸಿದರು. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿ ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ರಸ್ತೆಬದಿಯಲ್ಲಿಯೇ ಮಗುವನ್ನು ಹೆತ್ತಿದ್ದಾರೆ.

ಇದನ್ನೂ ಓದಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮಹಿಳೆಗೆ ಹೆರಿಗೆ: ಸರ್ಕಾರಿ ಆಸ್ಪತ್ರೆ ಅವಸ್ಥೆ ವಿಡಿಯೋ ವೈರಲ್

ಕುಟುಂಬದವರ ಪ್ರಕಾರ, ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅದಾದ ನಂತರ 108 ಆ್ಯಂಬುಲೆನ್ಸ್ ಸೇವೆಗೆ ಪದೇ ಪದೇ ಫೋನ್ ಮಾಡಲಾಯಿತು. ಆ ಕುಟುಂಬವು ಸುಮಾರು 3 ಗಂಟೆಗಳ ಕಾಲ ಕಾಯುತ್ತಿತ್ತು. ಆದರೆ, ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಅಷ್ಟರಲ್ಲಿ ಆ ಮಹಿಳೆಗೆ ನೋವು ಹೆಚ್ಚಾಗಿತ್ತು. ಹೀಗಾಗಿ, ಅವರ ಕುಟುಂಬವು ಅವರನ್ನು ಕಾಲ್ನಡಿಗೆಯಲ್ಲಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು.

ಇದನ್ನೂ ಓದಿ: Viral: ಹೆರಿಗೆಯಾದ 17 ದಿನಕ್ಕೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಕೇರಳದ ಮಹಿಳೆ

ಆದರೆ, ಮಧ್ಯದಲ್ಲಿಯೇ ಹೆರಿಗೆ ನೋವು ತೀವ್ರಗೊಂಡ ಕಾರಣ ರಸ್ತೆಬದಿಯಲ್ಲೇ ಹೆರಿಗೆಯನ್ನು ಮಾಡಬೇಕಾಯಿತು. ತೀವ್ರವಾದ ಚಳಿಯಲ್ಲಿಯೇ ಆ ಮಹಿಳೆ ರಸ್ತೆಬದಿ ಮಗುವಿಗೆ ಜನ್ಮ ನೀಡಿದರು. ಆ ಮಹಿಳೆ ಮತ್ತು ಅವರ ಶಿಶುವನ್ನು ಶೀತದಿಂದ ರಕ್ಷಿಸಲು, ಗ್ರಾಮಸ್ಥರು ಬಟ್ಟೆ, ಪ್ಲಾಸ್ಟಿಕ್ ಹಾಳೆಗಳು ಮತ್ತು ಸಾಮಗ್ರಿಗಳನ್ನು ತಂದು ಬೆಚ್ಚಗಿಡಲು ಬೆಂಕಿಯನ್ನು ಹಚ್ಚಿದರು. ಬೆಳಗಿನ ಜಾವ 3.20ರ ಸುಮಾರಿಗೆ ವ್ಯಾನ್ ಚಾಲಕನೊಬ್ಬ ಬಂದು ತಾಯಿ ಮತ್ತು ನವಜಾತ ಶಿಶುವನ್ನು ತನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದನು.

ಆರೋಗ್ಯ ಇಲಾಖೆಯ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೂ ಈ ಘಟನೆಯು ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆ ಮತ್ತು ತಾಯಿಯ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:35 pm, Mon, 2 February 26

Source link

ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ? – Kannada News | Class 8 student gets pregnant in Government Hostel Gave Birth to Child

ನವದೆಹಲಿ, ಫೆಬ್ರವರಿ 2: ಆಕೆಗೆ ಕೇವಲ 13 ವರ್ಷ. ಓದುವ ಸಲುವಾಗಿ ಮನೆಯಲ್ಲಿ ಹಠ ಮಾಡಿ ಹಾಸ್ಟೆಲ್ ಸೇರಿದ್ದ ಆಕೆ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತಮ್ಮ ಮಗಳು ಸರ್ಕಾರಿ ಹಾಸ್ಟೆಲ್​ನಲ್ಲಿ ಸುರಕ್ಷಿತಳಾಗಿದ್ದಾಳೆ ಎಂದು ಆಕೆಯ ಪೋಷಕರು ಕೂಡ ನಿರಾಳವಾಗಿದ್ದರು. ಆದರೆ, ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿದು ಅವರ ಎದೆ ಒಡೆದುಹೋಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲವೆಂದು ಆ ಮಗುವನ್ನು ಅಬಾರ್ಷನ್ ಮಾಡಿಸೋಣ ಎಂದು ಅವರು ನಿರ್ಧಾರ ಮಾಡುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಇನ್ನೇನು 3-4 ತಿಂಗಳಲ್ಲಿ ಡೆಲಿವರಿಯೇ ಆಗುತ್ತದೆ ಎಂದು ವೈದ್ಯರು ಹೇಳಿದ್ದರು. ಅಲ್ಲಿಯವರೆಗೂ ತಾನು ಗರ್ಭಿಣಿ (Pregnant) ಎಂಬ ವಿಷಯ ಆ ಬಾಲಕಿಗೂ ಗೊತ್ತಿರಲಿಲ್ಲ.

ಮಧ್ಯ ಪ್ರದೇಶದ ಬಾಲಘಾಟ್​​ನ ಸರ್ಕಾರಿ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿತ್ತು. ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕರು ಆಕೆಗೆ ಕೊಲೆ ಬೆದರಿಕೆ ಹಾಕಿದ್ದರು. ಆಕೆ ಗರ್ಭಿಣಿಯಾದ ನಂತರ ಈ ಘೋರ ಕೃತ್ಯ ಬಯಲಾಗಿತ್ತು. ಇದೀಗ ಆಕೆ ಮಗುವಿಗೂ ಜನ್ಮ ನೀಡಿದ್ದಾಳೆ.

ಹಾಸ್ಟೆಲ್​ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆದರೆ, ಆಕೆ ಈ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆರೋಪಿಯು ಸುಮಾರು 4 ತಿಂಗಳ ಕಾಲ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆತ ಆಕೆಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಇತ್ತೀಚೆಗೆ ಆ ಬಾಲಕಿಯ ಆರೋಗ್ಯ ಹದಗೆಟ್ಟಾಗ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ತಪಾಸಣೆ ಮಾಡಿದಾಗ ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಈ ಘಟನೆಯು ಖುರೈನಲ್ಲಿರುವ ಬುಡಕಟ್ಟು ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!

ಆ ಬಾಲಕಿ 2 ವರ್ಷಗಳಿಂದ ಹಾಸ್ಟೆಲ್​ನಲ್ಲಿ ವಾಸವಾಗಿದ್ದಳು. ಆರೋಪಿಗಳು ಹಾಸ್ಟೆಲ್‌ಗೆ ತರಕಾರಿ ಕೊಡಲು ಬರುತ್ತಿದ್ದರು. ಅಲ್ತಾಫ್ ಎಂಬ ಯುವಕ ಹಾಸ್ಟೆಲ್‌ಗೆ ತರಕಾರಿ ನೀಡಲು ಬರುತ್ತಿದ್ದ. ಸೆಪ್ಟೆಂಬರ್ 2025ರಲ್ಲಿ ಆತ ಆ ವಿದ್ಯಾರ್ಥಿನಿಯ ಕೋಣೆಗೆ ಬಲವಂತವಾಗಿ ನುಗ್ಗಿ ಬಾಗಿಲು ಮುಚ್ಚಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ ವಿರೋಧಿಸಿದಾಗ, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಭಯಗೊಂಡ ವಿದ್ಯಾರ್ಥಿನಿ ಈ ಬಗ್ಗೆ ಯಾರಿಗೂ ಹೇಳಲಿಲ್ಲ. ನಂತರ, ಆರೋಪಿಗೆ ಅವಕಾಶ ಸಿಕ್ಕಾಗಲೆಲ್ಲಾ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ಅವಳು ವಾರ್ಡನ್ ಮತ್ತು ಕಾವಲುಗಾರನಿಗೆ ಮಾಹಿತಿ ನೀಡಿದ್ದಳು. ಆ ವಾರ್ಡನ್ ವಿದ್ಯಾರ್ಥಿನಿಯ ಪೋಷಕರಿಗೆ ಕರೆ ಮಾಡಿದ್ದರು. ಕುಟುಂಬದ ಸದಸ್ಯರು ಆಕೆಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಪರೀಕ್ಷೆಯ ಸಮಯದಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಐದು ವರ್ಷದ ಬಾಲಕಿಯನ್ನು ಬೆದರಿಸಿ 55 ವರ್ಷದ ವ್ಯಕ್ತಿಯಿಂದ 5 ದಿನಗಳ ಕಾಲ ಅತ್ಯಾಚಾರ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತರು ಕಸ್ತೂರ್ಬಾ ಗಾಂಧಿ ಬಾಲಿಕಾ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್ ಚೈನ್‌ಬಾಟಿ ಸೈಯಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಆ ಬಾಲಕಿಯ ದೇಹದಲ್ಲಿ ಯಾವ ಬದಲಾವಣೆಯನ್ನೂ ನೀವು ಗುರುತಿಸಲಿಲ್ಲವೇ? ಎಂಬ ಪ್ರಶ್ನೆ ಮಾಡಿರುವ ಅವರು ಈ ಆದೇಶ ಹೊರಡಿಸಿದ್ದಾರೆ.

ಈ ಘಟನೆ ವರದಿಯಾದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಆ ಗ್ರಾಮದ ಯುವಕನನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಈ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ, ಯಾವಾಗ-ಎಲ್ಲೆಲ್ಲಿ? – Kannada News | Bengaluru to face 2 day Cauvery water disruption on Feb 5 And 6 due to BWSSB emergency pipeline works

ಬೆಂಗಳೂರು, (ಫೆಬ್ರವರಿ 02): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಿದೆ. ಹೀಗಾಗಿ ಇದೇ ಫೆಬ್ರವರಿ 5 ಮತ್ತು 6ರಂದು ಬೆಂಗಳೂರು ನಗರದ ವಿವಿಧೆಡೆ ಕಾವೇರಿ ನೀರು (Cauvery water )ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಮಂಡಳಿಯ ವತಿಯಿಂದ ಸರಬರಾಜು ವತಿಯಿಂದ ನಿರ್ಮಾಣ 1200ಎಂಎಂ, 900 ಎಂಎಂ ಹಾಗೂ 700ಎಂಎಂ ವ್ಯಾಸದ ನೀರು ಸರಬರಾಜು ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಫೆಬ್ರವರಿ 5 ಗುರುವಾರದಂದು ಬೆಳಗ್ಗೆ 6ರಿಂದ ಫೆಬ್ರವರಿ 6 ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ರವರೆಗೆ ಒಟ್ಟು 24 ಗಂಟೆ ಸ್ಥಗಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ

ಯಾವ್ಯಾವ ಏರಿಯಾದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?

ಬೆಂಗಳೂರು ನಗರದ ಮಾಗಡಿ ರಸ್ತೆ, ಕದ್ರೆನಹಳ್ಳಿ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಬಡಾವಣೆ, ಮಿನಜ್ ನಗರ, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ.

ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುದ್ದಗುಂಟೆಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್‌, ವೆಂಟೇಶ್ವರ ಬಡಾವಣೆ, ಬೃಂದಾವನ ಲೇಔಟ್‌, ಮಡಿವಾಳ, ಚಿನ್ನಮ್ಮ ಲೇಔಟ್‌, ಕೋರಮಂಗಲ 2,4,5,6,7 ಮತ್ತು 8 ನೇ ಬ್ಲಾಕ್‌, ಚಿಕ್ಕಆಡುಗೋಡಿ, ಸೆಂಟ್‌ ಜಾನ್‌ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್‌ ಮಾರ್ಕೆಟ್‌, ಸಿಎಲ್‌ಆರ್‌, ಶಾಂತಿನಗರ, ಲಾಗ್‌ ಪೋರ್ಡ್‌ ಟೌನ್‌, ಎಂಜಿ ರಸ್ತೆ, ರಿಚ್‌ಮಂಡ್‌ ಟೌನ್‌, ನೀಲಸಂದ್ರ, ಅಶೋಕ್‌ ನಗರ, ಆಸ್ಟಿನ್‌ ಟೌನ್‌, ವಿವೇಕ್‌ ನಗರ, ಈಜಿಪುರ, ದೊಮ್ಮಲೂರು ಲೇಔಟ್‌, ದೊಮ್ಮಲೂರು ವಿಲೇಜ್‌, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌ ಚಾಮರಾಜಪೇಟೆ, ಶ್ರೀನಗರ ಬಿಎಸ್‌ಕೆ 1ನೇ ಹಂತ.

ಅಶೋಕ್‌ ನಗರ ಪೈಪ್‌ ಲೈನ್‌ ರಸ್ತೆ, ಜಯನಗರ 4ನೇ ಮತ್ತು ʼಟಿʼ ಬ್ಲಾಕ್‌, ತಿಲಕ್‌ ನಗರ, ಮಾಧವನ ಪಾರ್ಕ್‌ , ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್‌, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್‌, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 ಮತ್ತು 8ನೇ ಬ್ಲಾಕ್‌, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್‌, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್‌, ಭೈರಸಂದ್ರ, ಎಲ್‌ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್‌ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On – 8:13 pm, Mon, 2 February 26

Source link

ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ – Kannada News | India US trade deal talks near completion, says commerce secretary Rajesh Agarwal

ನವದೆಹಲಿ, ಫೆಬ್ರುವರಿ 2: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (India US trade deal) ಅಂತಿಮ ಹಂತದಲ್ಲಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹಾಗೂ ಈ ಡೀಲ್​ಗೆ ಭಾರತದ ಮುಖ್ಯ ಸಂಧಾನಕಾರರಾದ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಡೀಲ್ ಮುಗಿದೇ ಹೋಯಿತು ಎಂದು ಆಗಾಗ್ಗೆ ಮಿಂಚಿ ಮಾಯವಾಗುತ್ತಿದ್ದ ಭರವಸೆಗೆ ರಾಜೇಶ್ ಅಗರ್ವಾಲ್ ಜೀವ ತುಂಬಿದ್ದಾರೆ. ಎರಡು ದೇಶಗಳ ನಡುವೆ ವ್ಯಾಪಾರ ಸಂಧಾನ ಸರಿಯಾದ ದಿಸೆಯಲ್ಲಿದೆ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.

ದೊಡ್ಡ ಡೀಲ್​ಗೆ ಹೆಚ್ಚು ಸಮಯ ಬೇಕು

ದೊಡ್ಡ ಆರ್ಥಿಕತೆಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ಸಮಯ ಹಿಡಿಯುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ‘ಅಮೆರಿಕವು ದೊಡ್ಡ ಆರ್ಥಿಕತೆಯಾದ್ದರಿಂದ ಸಮಗ್ರವಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮ ಗೊಳಿಸಲು ಹೆಚ್ಚು ಸಮಯ ಹಿಡಿಯುತ್ತದೆ’ ಎಂದಿದ್ದಾರೆ ಅವರು. ಆದರೆ, ವಿಸ್ತೃತವಾದ ಒಪ್ಪಂದ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತ ಕಳೆದ ತಿಂಗಳಷ್ಟೇ ಐರೋಪ್ಯ ಒಕ್ಕೂಟದ ಜೊತೆ ಬಹಳ ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್, ಇಎಫ್​ಟಿಎ ದೇಶಗಳೊಂದಿಗೂ ಭಾರತ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಅಗರ್ವಾಲ್, ‘ಈ ಎಲ್ಲಾ ಒಪ್ಪಂದಗಳು ಚಾಲನೆಗೆ ಬಂದ ಬಳಿಕ ಶೇ. 55-60ರಷ್ಟು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ರಫ್ತಿಗೆ ಆದ್ಯತೆಯ ಪ್ರವೇಶ ಸಿಗುತ್ತದೆ. ಇದರಿಂದ ಭಾರತದ ರಫ್ತು ಸ್ಪರ್ಧಾತ್ಮಕತೆ ಬಲಗೊಳ್ಳುತ್ತದೆ’ ಎಂದು ವಾಣಿಜ್ಯ ಕಾರ್ಯದರ್ಶಿಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಭಾರತ 2024-25ರಲ್ಲಿ 825 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಿತ್ತು. 2025-26ರಲ್ಲಿ 850 ಬಿಲಿಯನ್ ಡಾಲರ್ ರಫ್ತಿಗೆ ಗುರಿ ಇಡಲಾಗಿದೆ. ಭಾರತದ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಭಾರತದ ರಫ್ತು ಹೆಚ್ಚಳಕ್ಕೆ ಪ್ರಮುಖ ತಡೆಯಾಗಿದೆ. ಐರೋಪ್ಯ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ನಡುವೆ ಮಾಡಿಕೊಂಡಿರುವ ಟ್ರೇಡ್ ಡೀಲ್​ಗಳು ಭಾರತದ ರಫ್ತಿಗೆ ಹೆಚ್ಚಿನ ವೈವಿಧ್ಯತೆ ಮತ್ತು ವಿಸ್ತೃತತೆ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಿತ್ರೋತ್ಸವ: ಫೆ.3ರಂದು ವೀಕ್ಷಿಸಬಹುದಾದ 10 ಬೆಸ್ಟ್ ಸಿನಿಮಾಗಳಿವು.. – Kannada News | Watch these 10 movies on Feb 3 in Bengaluru International Film Festival

ಹಲವು ದೇಶಗಳ ಸಿನಿಮಾಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಪ್ರದರ್ಶನ ಮಾಡಲಾಗುತ್ತಿದೆ. ಸುಚಿತ್ರಾ ಫಿಲ್ಮ್ ಸೊಸೈಟಿ, ಲುಲು ಮಾಲ್ ಹಾಗೂ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಇದ್ದವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ..

1. ಡೆಡ್ ಡಾಗ್ – ಲೆಬನಾನ್/ ಫ್ರಾನ್ಸ್. (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1). ವಿವರ: ಸಾರಾ ಫ್ರಾನ್ಸಿಸ್ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಸಮಕಾಲೀನ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತದೆ. 92 ನಿಮಿಷಗಳ ಅವಧಿಯ ಈ ಸಿನಿಮಾ ಅಂತರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆದಿದೆ.

2. ದ ಪೋರ್ಚುಗೀಸ್ ಹೌಸ್ – ಸ್ಪೇನ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 2). ವಿವರ: ಅವೆಲಿನಾ ಪ್ರಾಟ್ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತದೆ. ಇದು 114 ನಿಮಿಷಗಳ ಭಾವನಾತ್ಮಕ ಪ್ರಯಾಣವಾಗಿದೆ.

3. ಆ್ಯಶಸ್ ಆ್ಯಂಡ್ ಡೈಮಂಡ್ಸ್ – ಪೋಲೆಂಡ್ (ಸಮಯ: ಬೆಳಗ್ಗೆ 9:50, ವಿಐಪಿ ಸ್ಕ್ರೀನ್ 3). ವಿವರ: ಆಂಡ್ರೆಜ್ ವಾಜ್ದಾ ನಿರ್ದೇಶನದ 1958ರ ಈ ಸಿನಿಮಾ ವಿಶ್ವ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದು. ಪೋಲಿಷ್ ಭಾಷೆಯ ಈ ಚಿತ್ರವು ಯುದ್ಧದ ನಂತರದ ಪರಿಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸುತ್ತದೆ.

4. ಮದರ್ ಟಂಗ್ – ಚೀನಾ (ಸಮಯ: ಮಧ್ಯಾಹ್ನ 12:00, ಸ್ಕ್ರೀನ್ 3). ವಿವರ: ಜಾಂಗ್ ಲು ನಿರ್ದೇಶನದ ಈ ಮ್ಯಾಂಡರಿನ್ ಭಾಷೆಯ ಚಿತ್ರವು ಭಾಷೆ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯನ್ನು ವಿವರಿಸುತ್ತದೆ. 122 ನಿಮಿಷಗಳ ಈ ಚಿತ್ರವು ಸಿನಿಮಾ ಪ್ರೇಮಿಗಳಿಗೆ ಉತ್ತಮ ಆಯ್ಕೆ.

5. ದ ನೇಚರ್ ಆಫ್ ಇನ್ವಿಸಿಬಲ್ ಥಿಂಗ್ಸ್- ಬ್ರೇಜಿಲ್ (ಸಮಯ: ಸಂಜೆ 6:00, ಸುಚಿತ್ರಾ ಫಿಲ್ಮ್ ಸೊಸೈಟಿ). ವಿವರ: ರಾಫೆಲಾ ಕ್ಯಾಮೆಲೊ ನಿರ್ದೇಶನದ ಈ 2025ರ ಪೋರ್ಚುಗೀಸ್ ಚಿತ್ರವು ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.

6. ಚಾಪಿನ್, ಎ ಸೋನಾಟಾ ಇನ್ ಪ್ಯಾರಿಸ್ – ಪೋಲೆಂಡ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 4). ವಿವರ: ಮೈಕಲ್ ಕ್ವಿನ್ಸಿನ್ಸ್ಕಿ ನಿರ್ದೇಶನದ ಈ ಪೋಲಿಷ್ ಸಿನಿಮಾ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ. 133 ನಿಮಿಷಗಳ ಸುದೀರ್ಘ ಕಥಾಹಂದರವನ್ನು ಇದು ಹೊಂದಿದೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

7. ಭವನಿ ಭವಾಯಿ – ಗುಜರಾತಿ (ಸಮಯ: ರಾತ್ರಿ 8:10, ವಿಐಪಿ ಸ್ಕ್ರೀನ್ 3). ವಿವರ: ಕೇತನ್ ಮೆಹ್ತಾ ನಿರ್ದೇಶನದ 1980ರ ಈ ಕ್ಲಾಸಿಕ್ ಚಿತ್ರವು ಜಾನಪದ ಶೈಲಿಯಲ್ಲಿದೆ. ಜಾತಿ ಪದ್ಧತಿಯ ವಿಡಂಬನೆ ಮಾಡುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

8. ವಾಸ್ತುಹಾರ – ಮಲಯಾಳಂ (ಸಮಯ: ರಾತ್ರಿ 8:30, ವಿಐಪಿ ಸ್ಕ್ರೀನ್ 2). ವಿವರ: ಜಿ. ಅರವಿಂದನ್ ನಿರ್ದೇಶನದ ಈ 1991ರ ಸಿನಿಮಾ ಬಂಗಾಳದ ವಿಭಜನೆಯ ಸಂದರ್ಭದ ನಿರಾಶ್ರಿತರ ಕಥೆಯನ್ನು ಹೇಳುತ್ತದೆ. ಇದು ಬಹಳ ಗಂಭೀರವಾದ ಮತ್ತು ಅರ್ಥಪೂರ್ಣವಾದ ಸಿನಿಮಾ.

9. ಎ ಪೋಯೆಟ್ – ಕೊಲಂಬಿಯಾ/ ಸ್ಪೇನ್ (ಸಮಯ: ರಾತ್ರಿ 8:00, ಸ್ಕ್ರೀನ್ 5). ವಿವರ: ಸಿಮೋನ್ ಮೆಸಾ ಸೊಟೊ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಕವಿ ಮತ್ತು ಅವನ ಬದುಕಿನ ಸುತ್ತ ಸಾಗುತ್ತದೆ.

10. ಎ ಪ್ರೆಗ್ನೆಂಟ್ ವಿಡೋ – ಮಲಯಾಳಂ (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 2). ವಿವರ: ಉಣ್ಣಿ ಕೆ.ಆರ್. ನಿರ್ದೇಶನದ ಈ ಹೊಸ ಚಿತ್ರವು ಸಮಕಾಲೀನ ಕೇರಳದ ಸಾಮಾಜಿಕ ಚಿತ್ರಣವನ್ನು ನೀಡುತ್ತದೆ. 125 ನಿಮಿಷಗಳ ಈ ಸಿನಿಮಾ ಗಂಭೀರ ಚರ್ಚೆಗೆ ಹಾದಿ ಮಾಡಿಕೊಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೋಲಾರ್ ಪ್ಲಾಂಟ್ ಹೆಸರಲ್ಲಿ ಗುಡ್ಡ ಅಗೆದು ಮರಗಳ ಮಾರಣಹೋಮ: ಇದರ ಹಿಂದೆ ‘ಲಕ್ಷ್ಮೀ’ ಕೃಪಾಕಟಾಕ್ಷ? – Kannada News | Belagavi Forest Destruction: Illegal Sandalwood Felling for Solar Plant Outrages Locals

ಬೆಳಗಾವಿ, ಫೆಬ್ರವರಿ 02: ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಕ್ಷೇತ್ರ. ಸಂಗೊಳ್ಳಿ ರಾಯಣ್ಣ ಕೂಡ ಈ ಕೌರಿ ಗುಡ್ಡದಲ್ಲಿ ಉಳಿದಿದ್ದ ಅನ್ನೋದು ಇತಿಹಾಸ. ಈ ಗುಡ್ಡದಲ್ಲಿ ಶ್ರೀಗಂಧದ ಮರ ಸೇರಿದಂತೆ ಹಲವು ಬಗೆಯ ಗಿಡಗಳು, ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಆದರೆ ಇದೀಗ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ  ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳ (tree) ಮಾರಣಹೋಮವೇ ನಡೆದಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಗುಡ್ಡ ಅಗೆಯುವ ಹಾಗೂ ಮರಗಳನ್ನ ಕಟ್ ಮಾಡುವ ಕೆಲಸ ನಡೆಯುತ್ತಿದೆಯಂತೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಡೆಯುವ ಕೆಲಸ ಮಾಡಿದ್ದು, ಅವರಿಗೂ ಬೆದರಿಕೆ ಹಾಕಿ ಕೆಲಸ ಮುಂದುವರೆಸಿದ್ದಾರೆ. ಯಾವಾಗ ರೈತರು ವಿರೋಧ ವ್ಯಕ್ತಪಡಿಸಿದರೂ ಆಗ ಜೆಸಿಬಿ ಸಮೇತ ಕಾಲ್ಕಿತ್ತಿದ್ದಾರೆ. ಈವರೆಗೂ 40 ಎಕರೆಗೂ ಹೆಚ್ಚು ಪ್ರದೇಶವನ್ನ ಅಗೆದು ಹಾಳು ಮಾಡಲಾಗಿದೆ.

ಸಚಿವೆ ಕುಮ್ಮಕ್ಕು ಆರೋಪ

ಶ್ರೀಗಂಧದ, ತೇಗು ಮತ್ತು ವಿವಿಧ ಹಣ್ಣಿನ ಗಿಡಗಳು, ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಈ ಜಾಗದಲ್ಲಿ ವಾಸಿಸುತ್ತಿದ್ದವು. ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಈ ರೀತಿ ಮರಗಿಡಗಳನ್ನ ಕಟಾವು ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ರೂ ಅವರಿಗೆ ಈ ವಿಚಾರ ಗೊತ್ತಿಲ್ಲವಾ ಅಥವಾ ಅವರ ಕುಮ್ಮಕ್ಕಿನಿಂದ ಈ ರೀತಿ ಆಗಿದೆ ಅಂತಾನೂ ರೈತರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: Belagavi: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ

ಇನ್ನು ಟಿವಿ9 ಮರಗಳ ಮಾರಣಹೋಮ ಕುರಿತು ವಿಸ್ತೃತವಾದ ಸುದ್ದಿ ಬಿತ್ತರಿಸುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು. ಅಷ್ಟೇ ಅಲ್ಲದೆ ಹೆಸ್ಕಾಂ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಗೆ ಸೇರಿರುವ ಸರ್ವೇ ನಂಬರ್ 359ರ ಗೈರಾಣು ಜಾಗದಲ್ಲಿ 67ಎಕರೆ ಜಮೀನು ಪ್ರದೇಶದಲ್ಲಿ ಸೊಲಾರ್ ಪ್ಲಾಂಟ್ ಮಾಡಲು ತಹಶಿಲ್ದಾರ್​ ಬಸವರಾಜ್ ನಾಗರಾಳ ಅನುಮತಿ ನೀಡಿದ್ದಾರೆ. ಇದು ಹೆಸ್ಕಾಂ ಇಲಾಖೆಗೆ ಕಳುಹಿಸಿದ್ದು, ಇಂಧನ ಇಲಾಖೆಯಿಂದ ಈ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ.

ಪಿಎಂ ಕುಸುಮ ಪೀಡರ್ ಲೇವಲ್ ಸೊಲ್ ರೈಸೇಷನ್ ಯೋಜನೆಯಡಿ ಸೌರಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಗೈರಾಣು ಜಾಗವಿದ್ರೂ ಅರಣ್ಯ ಇರುವ ಕಾರಣಕ್ಕೆ ಅರಣ್ಯ ಇಲಾಖೆಗೆ ಹೆಸ್ಕಾಂ ಇಲಾಖೆಯಿಂದ ಪತ್ರ ಕೂಡ ಬರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದು, ಅನುಮತಿ ನೀಡಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿದ್ರೂ ಮರಗಳನ್ನ ಕಟ್ ಮಾಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಮೌಖಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು, ಹೀಗಾಗಿ ಕೆಲಸ ಆರಂಭಿಸಿದ್ದೇವೆ ಅಂತಾ ಹೇಳಿದ್ದಾರೆ.

ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ರೈತರು

ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಎಇಇ ಅಣ್ಣಪ್ಪ ಅವರ ಮಾತು ಕೇಳ್ತಿದ್ದಂತೆ ತರಾಟೆಗೆ ತೆಗೆದುಕೊಂಡರು. ಎಸಿಎಫ್ ನಾಗರಾಜ್ ಅವರೇ ತರಾಟೆಗೆ ತೆಗೆದುಕೊಂಡು ದಿಕ್ಕು ತಪ್ಪಿಸದಂತೆ ಹೇಳಿದರು. ಇದೇ ವೇಳೆ ರೈತರು ಎರಡು ಇಲಾಖೆಯ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು. ಮರಗಳನ್ನ ಕಟ್ ಮಾಡಿರುವ ಅಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸಿಎಫ್ ನಾಗರಾಜ್, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು

ಸದ್ಯ ಪ್ರಕರಣವನ್ನ ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದು ಅನುಮತಿ ಇಲ್ಲದೇ ಮರಗಳನ್ನ ಕಟ್ ಮಾಡಿರುವುದೇಕೆ ಅನ್ನೋ ನಿಟ್ಟಿನಲ್ಲಿ ತನಿಖೆ ಆಗುತ್ತಿದೆ. ಇನ್ನೊಂದು ಕಡೆ ಶ್ರೀಗಂಧದ ಮರಗಳಿರುವ ಕಾಡನ್ನ ತರಾತುರಿಯಲ್ಲಿ ಯಾರ ಗಮನಕ್ಕೆ ತರದೇ ಕಟ್ ಮಾಡಿರುವುದೇಕೆ ಇದರ ಹಿಂದೆ ಯಾರಿದ್ದಾರೆ ಅನ್ನೊದು ಕೂಡ ಹೊರಬರಬೇಕಿದೆ. ಸದ್ಯ ಸಾವಿರಾರು ಮರಗಳ ಮಾರಣಹೋಮ ನಡೆದಿದ್ದು, ಇದಕ್ಕೆ ಹೊಣೆ ಯಾರು, ತಪ್ಪಿತಸ್ಥರ ವಿರುದ್ದ ಕ್ರಮವಾಗುತ್ತಾ ಅನ್ನೋದನ್ನ ಕೂಡ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರಗೆ ಭಂಗ ತರಬಹುದು ಎಚ್ಚರ! – Kannada News | Never make these mistakes before going to bed at night

ದೇಹಾರೋಗ್ಯಕ್ಕೆ ಆಹಾರದಂತೆ ನಿದ್ರೆಯೂ (sleep) ಅತೀ ಅವಶ್ಯಕ. ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಟ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ನಾವು ಸಾಕಷ್ಟು ನಿದ್ರೆ ಮಾಡಿದಾಗ, ನಮ್ಮ ದೇಹವು ದಿನದ ಆಯಾಸದಿಂದ ಚೇತರಿಸಿಕೊಳ್ಳುತ್ತದೆ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಅದೇ ಏಳೆಂಟು ಗಂಟೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೆ, ದೈನಂದಿನ ಚಟುವಟಿಕೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಹೀಗೆ ಸರಿಯಾಗಿ ನಿದ್ರೆ ಬಾರದಿರಲು, ನಿದ್ರಾಹೀನತೆ ನಾವು ಮಾಡುವ ಕೆಲವು ತಪ್ಪುಗಳು ಸಹ ಕಾರಣವಂತೆ. ಹಾಗಿದ್ರೆ ನಿದ್ರೆಗೆ ಭಂಗ ತರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರೆಗೆ ಭಂಗ ತರುವ ಅಭ್ಯಾಸಗಳಿವು:

ಮಲಗುವ ಮುನ್ನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ನೋಡುವುದು: ಇದು ನಾವು ಮಾಡುವ ಅತ್ಯಂತ ಸಾಮಾನ್ಯ ತಪ್ಪು. ಮೊಬೈಲ್, ಲ್ಯಾಪ್‌ಟಾಪ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಮೆಲಟೋನಿನ್ ನಮ್ಮ ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದ್ದು, ಇದಕ್ಕೆ ಅಡಿಯುಂಟಾದಾಗ, ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಆದ್ದರಿಂದ, ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲ್ಲಾ ಗ್ಯಾಜೆಟ್‌ಗಳಿಂದ ದೂರವಿರಿ.

ಮಲಗುವ ಮುನ್ನ ಭಾರವಾದ ಅಥವಾ ಮಸಾಲೆಯುಕ್ತ ಆಹಾರ ಸೇವಿಸವುದು: ರಾತ್ರಿ ಊಟ ಹಗುರವಾಗಿರಬೇಕು ಮತ್ತು ಸುಲಭವಾಗಿ ಜೀರ್ಣವಾಗಬೇಕು. ಮಲಗುವ ಮುನ್ನ ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಅಜೀರ್ಣ ಉಂಟಾಗುತ್ತದೆ. ಮತ್ತು ರಾತ್ರಿಯ ಸಮಯ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವುದರಲ್ಲಿಯೇ ನಿರತವಾಗಿರುತ್ತದೆ, ಇದು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ ಮತ್ತು ನಿದ್ರೆಗೂ ಅಡ್ಡಿಪಡಿಸುತ್ತದೆ. ಅಷ್ಟೇ ಅಲ್ಲದೆ ಈ ತಪ್ಪಿನಿಂದ  ಬೊಜ್ಜು ಮತ್ತು ಇತರ ಜೀರ್ಣಕಾರಿ ಅಸ್ವಸ್ಥತೆಗಳ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.

ಕೆಫೀನ್ ಮತ್ತು ಮದ್ಯ ಸೇವನೆ: ಮಲಗುವ ಮುನ್ನ ಕಾಫಿ, ಟೀ, ತಂಪು ಪಾನೀಯಗಳು ಅಥವಾ ಮದ್ಯಪಾನ ಸೇವನೆ ಮಾಡುವ ಅಭ್ಯಾಸವು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಲಗುವ ಮುನ್ನ ಈ ಪಾನೀಯಗಳನ್ನು ಸೇವನೆ ಮಾಡಬೇಡಿ.

ಇದನ್ನೂ ಓದಿ: ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿ

ಒಳ್ಳೆಯ ನಿದ್ರೆ ಪಡೆಯುವುದು ಹೇಗೆ?

ರಾತ್ರಿಯ ಉತ್ತಮ ನಿದ್ರೆ ಪಡೆಯಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮೊದಲಿಗೆ ಮಲಗುವ ಸಮಯವನ್ನು ನಿಗದಿಪಡಿಸಿ ಮತ್ತು ಪ್ರತಿದಿನ ಆ ಸಮಯದಲ್ಲಿಯೇ ಮಲಗಲು ಪ್ರಯತ್ನಿಸಿ. ಮಲಗುವ ಮುನ್ನ ಕೋಣೆಯನ್ನು ಕತ್ತಲೆಯಾಗಿಡಿ. ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ. ಮಲಗುವ ಮುನ್ನ ಪುಸ್ತಕ ಓದುವುದು ಸಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಉತ್ತಮ ನಿದ್ರೆಗಾಗಿ ನೀವು ಮಲಗುವ ಮುನ್ನ ಧ್ಯಾನವನ್ನೂ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link