Category Archives: Blog

Your blog category

ಎಲ್​ಪಿಜಿ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ – Kannada News

ಪರಿಶೋಧನಾ ಬಾವಿಯಲ್ಲಿ ಪರೀಕ್ಷೆ ವೇಳೆ ನೈಸರ್ಗಿಕ ಅನಿಲ ಹೊತ್ತಿ ಉರಿದಿರುವುದು ಹಾಗೂ ಬಲ ಚಿತ್ರದಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿImage Credit source: @HardeepSPuri

ನವದೆಹಲಿ, ಜೂನ್ 6: ಭಾರತದ ಇಂಧನ ಕ್ಷೇತ್ರದಲ್ಲಿ (Energy Sector) ಹೊಸದೊಂದು ಆಶಾವಾದ ಮೂಡಿಸುವ ಭಾರಿ ಬೆಳವಣಿಗೆ ನಡೆದಿದೆ. ಅಂಡಮಾನ್ ಸಮುದ್ರದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ದೇಶೀಯ ಇಂಧನ ಸ್ವಾವಲಂಬನೆಯ ಕನಸಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಸಂಸ್ಥೆಯು ಅಂಡಮಾನ್ ದ್ವೀಪಗಳ ಸಾಗರೋತ್ತರ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಇದು ಕೇಂದ್ರ ಸರ್ಕಾರದ ಸಾಗರೋತ್ತರ ಇಂಧನ ಪರಿಶೋಧನಾ ಯೋಜನೆಗೆ ಸಿಕ್ಕ ಅತ್ಯಂತ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.

ಮುಖ್ಯಾಂಶಗಳು

  • ಅಂಡಮಾನ್ ಕಡಲಿನಲ್ಲಿ ಬೃಹತ್ ಅನಿಲ ನಿಕ್ಷೇಪ ಪತ್ತೆ.
  • ‘ಶ್ರೀ ವಿಜಯಪುರಂ’ ಬಾವಿಯಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ.
  • ಸಮುದ್ರ ಮಂಥನ ಮಿಷನ್‌ಗೆ ಬಿಗ್ ಬೂಸ್ಟ್.

ಅಂಡಮಾನ್ ದ್ವೀಪಗಳಲ್ಲಿ ಗ್ಯಾಸ್ ಪತ್ತೆಯ ಮಹತ್ವ ಏನು?

ಈ ನೈಸರ್ಗಿಕ ಅನಿಲದ ಆವಿಷ್ಕಾರವು ಕೇವಲ ಒಂದು ಬಾವಿಗೆ ಮಾತ್ರ ಸೀಮಿತವಾಗಿಲ್ಲ, ಇದರ ಮಹತ್ವ ಅತ್ಯಂತ ವಿಸ್ತಾರವಾದುದಾಗಿದೆ. ಅಂಡಮಾನ್ ಬೇಸಿನ್ (ಕೊಳ್ಳ) ಪ್ರದೇಶವು ಭಾರಿ ಪ್ರಮಾಣದ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊಂದಿರಬಹುದು ಎಂದು ಭೂವಿಜ್ಞಾನಿಗಳು ದಶಕಗಳಿಂದ ನಂಬಿದ್ದರು. ಪ್ರಸ್ತುತ ಪತ್ತೆಯಾಗಿರುವ ಅನಿಲ ನಿಕ್ಷೇಪ ಆ ನಂಬಿಕೆಯನ್ನು ನಿಜವಾಗಿಸಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಸ್ತುತ ಕೈಗೊಂಡಿರುವ ಪರಿಶೋಧನಾ ಅಭಿಯಾನದಲ್ಲಿ ಕೊರೆದಿರುವ ಮೂರು ಬಾವಿಗಳಲ್ಲಿ ಈಗಾಗಲೇ ಎರಡು ಬಾವಿಗಳಲ್ಲಿ ಹೈಡ್ರೋಕಾರ್ಬನ್ ಇರುವುದು ವರದಿಯಾಗಿದೆ. ನಿಕ್ಷೇಪದ ಪ್ರಮಾಣ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲದಿದ್ದರೂ, ಇದು ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸಕಾರಾತ್ಮಕ ಸೂಚನೆಯಾಗಿದೆ.

ಭಾರತದ ಗ್ಯಾಸ್ ಸ್ವಾವಲಂಬನೆಗೆ ನೆರವಾಗಬಹುದೇ?

ಭಾರತವು ಪ್ರಸ್ತುತ ಇಂಧನ ಅಗತ್ಯಗಳಿಗಾಗಿ ವಿದೇಶಿ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ದೇಶದ ಕಚ್ಚಾ ತೈಲದ ಶೇಕಡಾ 85 ಕ್ಕಿಂತ ಹೆಚ್ಚು ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಲಾಗುತ್ತಿದೆ. ನೈಸರ್ಗಿಕ ಅನಿಲದ ಬೇಡಿಕೆಯ ಗಣನೀಯ ಪಾಲನ್ನು ಸಹ ಆಮದು ಮಾಡಿಕೊಳ್ಳಲಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಮೂಲಕವೇ ಪಡೆದುಕೊಳ್ಳಲಾಗುತ್ತಿದೆ. ಅಂಡಮಾನ್ ಬೇಸಿನ್‌ನಲ್ಲಿ, ವಾಣಿಜ್ಯಿಕವಾಗಿ ಲಾಭದಾಯಕವಾಗಲ್ಲ ನಿಕ್ಷೇಪಗಳು ಅಧಿಕೃತವಾಗಿ ದೃಢಪಟ್ಟರೆ, ಭಾರತದ ಈ ಆಮದು ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆ ಹೆಚ್ಚಳದಿಂದ ಜಾಗತಿಕ ಮಾರುಕಟ್ಟೆಯ ತೈಲ ಏರಿಳಿತಗಳಿಂದ ಭಾರತ ನಿರಾಳವಾಗಬಹುದು. ಆದರೆ ಗ್ರಾಹಕರಿಗೆ ಈ ಗ್ಯಾಸ್ ತಲುಪಬೇಕಿದ್ದರೆ ಅನೇಕ ಪ್ರಕ್ರಿಯೆಗಳಿವೆ. ಹಲವು ಸುತ್ತಿನ ಪರೀಕ್ಷೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ಅನುಮೋದನೆಗಳ ಸುದೀರ್ಘ ಪ್ರಕ್ರಿಯೆ ಆದ ನಂತರವಷ್ಟೇ ಅದು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಗಯಾನಾ ಆಗಲಿದೆಯೇ ಅಂಡಮಾನ್?

ಅಂಡಮಾನ್ ಬೇಸಿನ್ ಭಾರತದ ‘ಗಯಾನಾ’ ಆಗಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಗಯಾನಾದಲ್ಲಿ ಕಂಡುಬಂದ ಬೃಹತ್ ತೈಲ ನಿಕ್ಷೇಪಗಳು ಆ ದೇಶದ ಇಂಧನ ಚಿತ್ರಣವನ್ನೇ ಬದಲಾಯಿಸಿದ್ದವು. ಅದೇ ಮಾದರಿಯಲ್ಲಿ ಅಂಡಮಾನ್ ಕೂಡ ಭಾರತದ ಇಂಧನ ಭವಿಷ್ಯವನ್ನು ಬದಲಾಯಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಬಗ್ಗೆ ಈ ಹಿಂದೆ ಇಂಧನ ಇಲಾಖೆ ಕೂಡ ವಿಶ್ವಾಸ ವ್ಯಕ್ತಪಡಿಸಿತ್ತು. ಪ್ರಾಥಮಿಕ ಸಮೀಕ್ಷೆಗಳ ಅಂದಾಜಿನ ಪ್ರಕಾರ, ಈ ಬೇಸಿನ್‌ನಲ್ಲಿ 307 ರಿಂದ 370 ಮಿಲಿಯನ್ ಮೆಟ್ರಿಕ್ ಟನ್ ತೈಲ-ಸಮಾನ ಹೈಡ್ರೋಕಾರ್ಬನ್ ಇರಬಹುದು ಎಂದು ಅಂದಾಜಿಸಲಾಗಿದೆ.

ಹರ್ದೀಪ್​ ಸಿಂಗ್ ಪುರಿ ಎಕ್ಸ್ ಸಂದೇಶದಲ್ಲೇನಿದೆ?

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅನಿಲ ನಿಕ್ಷೇಪ ಪತ್ತೆ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಅಂಡಮಾನ್ ಸಮುದ್ರದಲ್ಲಿ ಇಂಧನ ಅವಕಾಶಗಳ ಮಹಾಸಾಗರವೇ ಅನಾವರಣಗೊಂಡಿದೆ! ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ನೀರಿನ ಆಳದಲ್ಲಿ ಕೊರೆದಿರುವ ‘ಶ್ರೀ ವಿಜಯಪುರಂ-3’ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ ಎಂಬುದನ್ನು ತಿಳಿಸಲು ಅತ್ಯಂತ ಸಂತೋಷವಾಗುತ್ತಿದೆ. ಬಾವಿಯ ಆರಂಭಿಕ ಉತ್ಪಾದನಾ ಪರೀಕ್ಷೆ ವೇಳೆ ನಿರಂತರ ಜ್ವಾಲೆ ಉರಿಯುವ ಮೂಲಕ ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿದೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.

‘ಸಮುದ್ರ ಮಂಥನ ಮಿಷನ್’ಗೆ ಸಿಕ್ಕ ದೊಡ್ಡ ಗೆಲುವು

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ ಅಥವಾ ‘ಸಮುದ್ರ ಮಂಥನ ಮಿಷನ್’ಗೆ ಈ ಆವಿಷ್ಕಾರವು ಆರಂಭಿಕ ಮತ್ತು ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಮಿಷನ್ ಮೋಡ್‌ನಲ್ಲಿ ಸಮುದ್ರದೊಳಗಿನ ಇಂಧನ ಸಂಪನ್ಮೂಲಗಳನ್ನು ಹೊರತೆಗೆಯಲು ಭಾರತ ಹೆಜ್ಜೆ ಇಟ್ಟಿರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪ್ರಸ್ತುತ ಆಯಿಲ್ ಇಂಡಿಯಾ ಸಂಸ್ಥೆಯು ಗ್ಯಾಸ್ ಸ್ಯಾಂಪ್ಲಿಂಗ್ ಮತ್ತು ಐಸೊಟೋಪ್ ಅಧ್ಯಯನಗಳನ್ನು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಆಳ ಸಮುದ್ರ ಪರಿಶೋಧನಾ ತಜ್ಞರ ಸಹಯೋಗದೊಂದಿಗೆ ಇಲ್ಲಿ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಯೋಜನೆಯನ್ನು ಸರ್ಕಾರ ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಗೆದ್ದರೂ ಸೋತರೂ ನೋ ಪ್ರಾಬ್ಲಮ್… ಯಾಕೆ ಗೊತ್ತಾ? – Kannada News

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ಶುರುವಾಗಿದೆ. ಮುಲ್ಲನ್​ಪುರ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಶುಭ್​​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯವು ಭಾರತದ ಮುಖ್ಯವಲ್ಲ. ಅಂದರೆ ಈ ಮ್ಯಾಚ್​ನಲ್ಲಿ ಗೆದ್ದರೂ, ಡ್ರಾ ಮಾಡಿಕೊಂಡರೂ ಅಥವಾ ಸೋತರೂ ಟೀಮ್ ಇಂಡಿಯಾ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಲ್ಲ.

 WTC ನಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಸ್ಥಾನವಿಲ್ಲ:

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಕೇವಲ ವಿಶ್ವದ ಅಗ್ರ 9 ಟೆಸ್ಟ್ ತಂಡಗಳು ಮಾತ್ರ ಆಡಲು ಅರ್ಹತೆ ಪಡೆದಿವೆ. ಅಫ್ಘಾನಿಸ್ತಾನ್ ತಂಡವು ಪೂರ್ಣ ಪ್ರಮಾಣದ ಟೆಸ್ಟ್ ಮಾನ್ಯತೆ ಹೊಂದಿದ್ದರೂ, ಸದ್ಯಕ್ಕೆ ಈ ಒಂಬತ್ತು ತಂಡಗಳ ಪಟ್ಟಿಯಲ್ಲಿಲ್ಲ. ಅಫ್ಘಾನಿಸ್ತಾನದ ಜೊತೆಗೆ ಐರ್ಲೆಂಡ್ ಮತ್ತು ಝಿಂಬಾಬ್ವೆ ತಂಡಗಳೂ ಸಹ WTC ಟೂರ್ನಿಯಿಂದ ಹೊರಗುಳಿದಿವೆ.

 ಕನಿಷ್ಠ 2 ಪಂದ್ಯಗಳ ನಿಯಮ:

ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಡಿಯಲ್ಲಿ ಬರುವ ಯಾವುದೇ ಸರಣಿಯಲ್ಲಿ ಕನಿಷ್ಠ 2 ಟೆಸ್ಟ್ ಪಂದ್ಯಗಳು ಇರಬೇಕು. ಆದರೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನಡೆಯುತ್ತಿರುವುದು ಕೇವಲ ಒಂದು ಪಂದ್ಯದ ದ್ವಿಪಕ್ಷೀಯ ಸರಣಿಯಾಗಿದೆ. ಹೀಗಾಗಿ ಇದು WTC ವ್ಯಾಪ್ತಿಗೆ ಬರಲ್ಲ.

WTC ಪಾಯಿಂಟ್ಸ್ ಮೇಲೆ ಪ್ರಭಾವ ಬೀರಲ್ಲ!

ಈ ಪಂದ್ಯದಲ್ಲಿ ಭಾರತ ಗೆದ್ದರೂ ಅಥವಾ ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ ತಂಡವು ಪ್ರಸ್ತುತ WTC ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಸರಣಿಗಳನ್ನು ಅವಲಂಬಿಸಬೇಕಾಗಿದೆ.

ಮತ್ತೇಕೆ ಪಂದ್ಯವಾಡುತ್ತಿದ್ದಾರೆ?

  •  ಐಸಿಸಿ ರ‍್ಯಾಂಕಿಂಗ್ ಬದಲಾವಣೆ: ಈ ಪಂದ್ಯದಿಂದ WTC ಪಾಯಿಂಟ್ಸ್ ಸಿಗದಿದ್ದರೂ, ತಂಡಗಳ ಮತ್ತು ಆಟಗಾರರ ಅಧಿಕೃತ ಐಸಿಸಿ (ICC) ರ‍್ಯಾಂಕಿಂಗ್ ಮೇಲೆ ಇದು ಪ್ರಭಾವ ಬೀರುತ್ತದೆ.
  •  ಭವಿಷ್ಯದ ಸಿದ್ಧತೆ: ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳಿಗೆ ಯುವ ಆಟಗಾರರನ್ನು ಸಿದ್ಧಪಡಿಸಲು ಮತ್ತು ಹೊಸ ಸಂಯೋಜನೆಗಳನ್ನು ಪರೀಕ್ಷಿಸಲು ಭಾರತೀಯ ಮ್ಯಾನೇಜ್‌ಮೆಂಟ್‌ಗೆ ಇದೊಂದು ಉತ್ತಮ ಅವಕಾಶವಾಗಿದೆ.
  •  ದ್ವಿಪಕ್ಷೀಯ ಬಾಂಧವ್ಯ: ಅಫ್ಘಾನಿಸ್ತಾನ್ ಕ್ರಿಕೆಟ್ ಬೆಳವಣಿಗೆಗೆ ಭಾರತ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದು, ಈ ಪಂದ್ಯವು ಉಭಯ ದೇಶಗಳ ಕ್ರೀಡಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಭಾರತದ ಮುಂದಿನ WTC ಸರಣಿ ಯಾವುದು?

ಭಾರತ ತಂಡದ ಮುಂದಿನ ಅಧಿಕೃತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯು ಆಗಸ್ಟ್ 2026 ರಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ ಪಂದಗಳನ್ನಾಡಲಿದೆ. ಇದಾದ ಬಳಿಕ ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಲಾ 2 ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಹೊಸ ಆಶಾಕಿರಣ: ಯಾರು ಈ ಮಾನವ್ ಸುತಾರ್?

ಆ ಬಳಿಕ ಭಾರತ ತಂಡವು ನವೆಂಬರ್-ಡಿಸೆಂಬರ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಯ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈ ಎಲ್ಲಾ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿದ್ದು, ಟೀಮ್ ಇಂಡಿಯಾ WTC ನಲ್ಲಿ ಫೈನಲ್​ಗೇರಲು ಈ ಮ್ಯಾಚ್​ಗಳು ನಿರ್ಣಾಯಕ.

Published On – 11:14 am, Sat, 6 June 26

Source link

Viral: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ – Kannada News

ಆಟೋ ಚಾಲಕನ ಪ್ರಮಾಣಿಕತೆImage Credit source: Pinterest

ಬೆಂಗಳೂರು: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎಂಬುದೇ ಇಲ್ಲ ಎಂಬ ಮಾತುಗಳ ನಡುವೆ, ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಅಪ್ಪಟ ಪ್ರಾಮಾಣಿಕತೆಯಿಂದ ಇಡೀ ಇಂಟರ್ನೆಟ್ ಜಗತ್ತಿನ ಮನ ಗೆದ್ದಿದ್ದಾನೆ. ಆಟೋ ಬಾಡಿಗೆಯಾಗಿ ಕೇವಲ 150 ರೂಪಾಯಿ ಡಿಜಿಟಲ್ ಪಾವತಿ ಮಾಡಬೇಕಿದ್ದ ಪ್ರಯಾಣಿಕನೊಬ್ಬ, ಆತುರದಲ್ಲಿ ಆಕಸ್ಮಿಕವಾಗಿ ಬರೋಬ್ಬರಿ 15,682 ರೂಪಾಯಿಗಳನ್ನು ಚಾಲಕನ ಖಾತೆಗೆ ವರ್ಗಾಯಿಸಿ ಆತಂಕಕ್ಕೊಳಗಾಗಿದ್ದನು. ಆದರೆ, ಪ್ರಯಾಣಿಕನ ತಪ್ಪು ಅರಿವಾದ ತಕ್ಷಣವೇ ಯಾವುದೇ ಹಿಂಜರಿಕೆಯಿಲ್ಲದೆ ಇಡೀ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ತನಗಲ್ಲದ ಹಣ ಬೇಡ ಎಂಬ ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್‌ಇನ್ (LinkedIn) ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಅಪಾರ ಪ್ರಶಂಸೆಗೆ ಪಾತ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಸಲಿಗೆ ನಡೆದಿದ್ದೇನು?

ಸಾಮಾನ್ಯ ದಿನದಂತೆ ಪ್ರಯಾಣಿಕನೊಬ್ಬ ಆಟೋದಲ್ಲಿ ಪ್ರಯಾಣಿಸಿದ್ದನು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆಯನ್ನು ಆನ್‌ಲೈನ್ (Digital Payment) ಮೂಲಕ ಪಾವತಿಸುವಾಗ, ಆ ಪ್ರಯಾಣಿಕನಿಂದ ದೊಡ್ಡದೊಂದು ಎಡವಟ್ಟಾಗಿದೆ. ಚಾಲಕನಿಗೆ ಕಳುಹಿಸಬೇಕಾದ ಸಣ್ಣ ಮೊತ್ತ ಅಂದರೆ 156ರೂ. ಬದಲಿಗೆ, ಆಕಸ್ಮಿಕವಾಗಿ ಬರೋಬ್ಬರಿ 15,682ರೂ. ಹಣವನ್ನು ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ.

ಟ್ರಾನ್ಸಾಕ್ಷನ್ ಪೂರ್ಣಗೊಂಡ ಮೇಲೆಯೇ ಪ್ರಯಾಣಿಕನಿಗೆ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ಅಪರಿಚಿತ ಆಟೋ ಚಾಲಕನಿಂದ ಇಷ್ಟು ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಆತ ಚಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದಾನೆ.

ತಕ್ಷಣ ಹಣ ಮರಳಿಸಿದ ಚಾಲಕ:

ಆದರೆ, ಪ್ರಯಾಣಿಕನ ಆತಂಕ ಕ್ಷಣಾರ್ಧದಲ್ಲಿ ದೂರಾಗಿದೆ. ಪ್ರಯಾಣಿಕ ಸಂಪರ್ಕಿಸಿದ ತಕ್ಷಣವೇ ಸ್ಪಂದಿಸಿದ ಆಟೋ ಚಾಲಕ, ತನ್ನ ಖಾತೆಗೆ ಹೆಚ್ಚುವರಿ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾನಲ್ಲದೆ, ಅಲ್ಲದೇ ಸಂಪೂರ್ಣ ಮೊತ್ತವನ್ನು ತಕ್ಷಣವೇ ಪ್ರಯಾಣಿಕನಿಗೆ ಮರಳಿ ವರ್ಗಾಯಿಸಿದ್ದಾನೆ. ತನಗಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ:

ತಮಗೆ ಎದುರಾದ ಈ ಅಪರೂಪದ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. “ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ” ಎಂದು ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವಿವಾದಾತ್ಮಕ ಸುದ್ದಿಗಳೇ ಸದ್ದು ಮಾಡುತ್ತಿರುವಾಗ, ಈ ಆಟೋ ಚಾಲಕನ ಸರಳ ನಡೆ ಎಲ್ಲರಿಗೂ ಮಾದರಿಯಾಗಿದೆ. ಈತನ ಪ್ರಾಮಾಣಿಕತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:51 am, Sat, 6 June 26

Source link

‘ನಾನಿನ್ನ ಬಿಡಲಾರೆ’: ಅತ್ತೆ ಮಾಳವಿಕಾಳ ನಿಜರೂಪ ಕಂಡು ಬೆಚ್ಚಿಬಿದ್ದ ದುರ್ಗಾ – Kannada News

ಜೀ ಕನ್ನಡ ವಾಹಿನಿಯ ಪ್ರೇಕ್ಷಕರ ನೆಚ್ಚಿನ ‘ನಾನಿನ್ನ ಬಿಡಲಾರೆ’ ಧಾರಾವಾಹಿಯು ಈಗ ಅತ್ಯಂತ ರೋಮಾಂಚನಕಾರಿ ತಿರುವು ಪಡೆದುಕೊಂಡಿದೆ. ಇದುವರೆಗೆ ಯಾರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದಳೋ, ಯಾರನ್ನು ಮನೆಯ ನಂದಾದೀಪ ಎಂದುಕೊಂಡಿದ್ದಳೋ, ಆ ಅತ್ತೆ ಮಾಳವಿಕಾಳ ಅಸಲಿ ಮುಖವಾಡ ಈಗ ದುರ್ಗಾಳ ಎದುರು ಕಳಚಿ ಬಿದ್ದಿದೆ. ಸದಾ ಒಳ್ಳೆಯವಳಂತೆ ನಟಿಸುತ್ತಿದ್ದ ಅತ್ತೆಯ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ದುರ್ಗಾ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

ದುರ್ಗಾ ತನ್ನ ಇಡೀ ಬದುಕು, ತನ್ನ ಅಪ್ಪ, ಅಕ್ಕನ ಸಾವು ಎಲ್ಲವೂ ನಿಗೂಢತೆಯಿಂದ ಕೂಡಿದೆ ಎಂದುಕೊಂಡಿರುತ್ತಾಳೆ. ಆದರೆ, ತಾನು ಹೆಜ್ಜೆ ಇಟ್ಟಿರುವ ಈ ಮನೆಯಲ್ಲೂ ಇಷ್ಟೊಂದು ನಿಗೂಢತೆ ಅಡಗಿದೆ ಎಂಬ ಸತ್ಯ ಅವಳಿಗೆ ತಡವಾಗಿ ಅರಿವಾಗಿದೆ. ಈ ಮನೆಯ ಸರ್ವನಾಶಕ್ಕೆ ಹೊಂಚು ಹಾಕುತ್ತಿರುವ ಮುಖ್ಯ ಸೂತ್ರಧಾರಿಯೇ ಅತ್ತೆ ಮಾಳವಿಕಾ ಎಂಬ ಕಹಿ ಸತ್ಯ ಈಗ ಅವಳಿಗೆ ಗೊತ್ತಾಗಿದೆ. ಅತ್ತೆಯ ರೂಪದಲ್ಲಿರುವ ಮಾಳವಿಕಾ, ಕುರಿ ಚರ್ಮ ಹೊದ್ದಿರುವ ನರಿ ಎಂಬುದನ್ನು ದುರ್ಗಾ ಪತ್ತೆಹಚ್ಚಿದ್ದಾಳೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ

ತನ್ನ ಅತ್ತೆಯ ದುಷ್ಟ ಶಕ್ತಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ದುರ್ಗಾ, ಈಗ ಸತ್ಯ ದರ್ಶನದ ಬೆನ್ನಲ್ಲೇ ಉಗ್ರ ರೂಪ ತಾಳಿದ್ದಾಳೆ. ‘ನಿನ್ನ ದುಷ್ಟ ಶಕ್ತಿಯನ್ನು ನಾಶ ಮಾಡಿ ನನ್ನ ಇಡೀ ವಂಶವನ್ನು ನಾನು ಕಾಪಾಡಿಕೊಳ್ಳುತ್ತೇನೆ, ಇದು ನಿನ್ನ ಅಂತ್ಯದ ಆರಂಭ’ ಎಂದು ಮಾಳವಿಕಾಗೆ ಸವಾಲು ಹಾಕಿದ್ದಾಳೆ.

ತನ್ನವರ ರಕ್ಷಣೆಗಾಗಿ ಕೈಯಲ್ಲಿ ತ್ರಿಶೂಲ ಹಿಡಿದು ಭದ್ರಕಾಳಿಯಂತೆ ನಿಂತಿರುವ ದುರ್ಗಾಳ ಈ ಹೊಸ ಅವತಾರ ಜಬರ್ದಸ್ತ್ ಜೂನ್ ಸಂಚಿಕೆಗಳಲ್ಲಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮಹಾ ತಿರುವಿನೊಂದಿಗೆ ಮೂಡಿಬರುತ್ತಿರುವ ಈ ಸಂಚಿಕೆಗಳು ದುಷ್ಟ ಸಂಹಾರಕ್ಕೆ ಹೊಸ ಮುನ್ನುಡಿ ಬರೆಯಲಿವೆ. ಇತ್ತ, ಮಾಳವಿಕಾ ಹಲವು ದುಷ್ಟ ಶಕ್ತಿಗಳನ್ನು ಕರಗತ ಮಾಡಿಕೊಂಡಿದ್ದು, ಆಕೆ ಇದಕ್ಕೆ ಯಾವ ರೀತಿಯಲ್ಲಿ ತಿರುಮಂತ್ರ ಹಾಕುತ್ತಾಳೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಡ ಮಕ್ಕಳ ಹೊಟ್ಟೆಮೇಲೆ ಹೊಡೆದ ವಾರ್ಡನ್; 3 ದಿನ ಅನ್ನ-ನೀರಿಲ್ಲದೆ ಪಕ್ಕದ ಹಾಸ್ಟೆಲ್‌ನಲ್ಲಿ ಕೈಚಾಚಿದ ವಿದ್ಯಾರ್ಥಿಗಳು! – Kannada News

ರಾಯಚೂರು, ಜೂನ್ 06: ಕಡು ಬಡತನದ ಹಿನ್ನೆಲೆಯಿಂದ ಬಂದು, ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ವಸತಿ ನಿಲಯಗಳನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೊಂದು ಭೀಕರ ಅನ್ಯಾಯ ನಡೆದಿದೆ. ಜಿಲ್ಲೆಯ (Raichur) ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸಿದ್ದಾರೆ. ಹಸಿವಿನ ನೋವು ತಾಳಲಾರದೇ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಾಂಶಗಳು

  • ರಾಯಚೂರಿನ ಸರ್ಕಾರಿ ಹಾಸ್ಟೆಲ್‌ನಲ್ಲಿ ಮೂರು ದಿನಗಳಿಂದ ಅನ್ನ-ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ.
  • ಹಸಿವು ತಾಳಲಾರದೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ.
  • ಬೇಜವಾಬ್ದಾರಿ ವಾರ್ಡನ್ ಮೆಹಬೂಬ್ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ.

ಬೇರೆ ಹಾಸ್ಟೆಲ್ ಮುಂದೆ ಅನ್ನಕ್ಕಾಗಿ ಕೈಚಾಚಿದ್ವಿ ಎಂದ ವಿದ್ಯಾರ್ಥಿಗಳು

ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ನೂರಾರು ಬಡ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಕಳೆದ ಮೂರು ದಿನಗಳಿಂದ ಇಲ್ಲಿ ಒಂದು ಹೊತ್ತಿನ ಊಟವಾಗಲಿ ಅಥವಾ ಕುಡಿಯುವ ನೀರಾಗಲಿ ಸಿಕ್ಕಿಲ್ಲ. ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಕೈಲಿದ್ದ ಅಲ್ಪಸ್ವಲ್ಪ ಹಣದಲ್ಲೇ ಹೋಟೆಲ್‌ನಲ್ಲಿ ತಿಂದಿದ್ದಾರೆ. ಹಣ ಖಾಲಿಯಾದ ಮೇಲೆ ವಿಧಿಯಿಲ್ಲದೇ ಪಕ್ಕದ ಮತ್ತೊಂದು ಹಾಸ್ಟೆಲ್‌ಗೆ ತೆರಳಿ, ಅಲ್ಲಿನ ಮಕ್ಕಳ ಬಳಿ ಆಹಾರ ಕೇಳಿ ಪಡೆದು ಹಸಿವು ನೀಗಿಸಿಕೊಂಡಿದ್ದಾರೆ. ಬಿರು ಬಿಸಿಲಿನ ನಡುವೆಯೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು, ನಮಗೆ ಅನ್ನ ಕೊಡಿ, ನೀರು ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.

ವಾರ್ಡನ್ ಮಹಾಶಯನ ಉಡಾಫೆ ವರ್ತನೆ!

ವಿದ್ಯಾರ್ಥಿಗಳ ಈ ದುಸ್ಥಿತಿಗೆ ಹಾಸ್ಟೆಲ್ ವಾರ್ಡನ್ ಮೆಹಬೂಬ್ ಎಂಬಾತನೇ ನೇರ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ. ವಾರ್ಡನ್ ತಾನೇ ಖುದ್ದಾಗಿ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಹಾಸ್ಟೆಲ್ ಆರಂಭವಾಗಿದೆ, ಬನ್ನಿ ಎಂದು ಕರೆಸಿಕೊಂಡಿದ್ದನು. ಆದರೆ ಮಕ್ಕಳು ಬಂದ ಮೇಲೆ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನೀವು ಯಾರಿಗೆ ಬೇಕಾದರೂ ದೂರು ಕೊಡಿ, ಡಿಸಿಗೆ (DC) ಬೇಕಾದರೂ ಹೇಳಿ, ಡಿಡಿಗೆ (DD) ಬೇಕಾದರೂ ಹೇಳಿ ಎಂದು ಉಡಾಫೆಯಾಗಿ ಉತ್ತರಿಸಿದ್ದಾನೆ ಎಂದು ವಿದ್ಯಾರ್ಥಿ ವಿಕಾಸ್ ರಾಠೋಡ್ ಆರೋಪಿಸಿದ್ದಾರೆ.

ಇದನ್ನೂ ಓದಿ ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್!

ವಾರ್ಡನ್ ವರ್ಗಾವಣೆಗೆ ವಿದ್ಯಾರ್ಥಿಗಳ ಪಟ್ಟು

ವಿದ್ಯಾರ್ಥಿಗಳು ಇಲಾಖೆಯ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತ ವಾರ್ಡನ್ ಮೆಹಬೂಬ್ ದಿಢೀರನೆ ಸ್ಥಳದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ನಮಗೆ ಇಂತಹ ಬೇಜವಾಬ್ದಾರಿ ವಾರ್ಡನ್ ಬೇಡವೇ ಬೇಡ, ತಕ್ಷಣ ಇವನನ್ನು ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ‘ಲಾರ್ಡ್ಸ್’​ ಟೆಸ್ಟ್

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಅದು ಕೂಡ ಕೇವಲ 2 ದಿನಗಳಲ್ಲಿ 33 ವಿಕೆಟ್​ಗಳ ಪತನದೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಕೇವಲ 140 ರನ್​ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಕೇವಲ 113 ರನ್​ಗಳಿಗೆ ಸರ್ಪಪತನ ಕಂಡಿತು.

27 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್  226 ರನ್​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ ತಂಡಕ್ಕೆ 254 ರನ್​ಗಳ ಗುರಿ ನೀಡಿದೆ.

ಈ ಗುರಿ ಬೆನ್ನತ್ತಿರುವ ನ್ಯೂಝಿಲೆಂಡ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್​ ಕಲೆಹಾಕಿದೆ.

ಇನ್ನೂ 3 ದಿನದಾಟಗಳು ಬಾಕಿಯಿದ್ದು, ನ್ಯೂಝಿಲೆಂಡ್ ತಂಡವು ಗೆಲ್ಲಲು 218 ರನ್​​ ಕಲೆಹಾಕಬೇಕಿದೆ. ಅತ್ತ ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.

 

Source link

ಬರ್ತ್ ಡೇ ಪಾರ್ಟಿ ಆಚರಿಸುತ್ತಿದ್ದಾಗಲೇ ಕುಸಿದು ಬಿದ್ದ ಕಟ್ಟಡ: ಕೂದಲೆಳೆ ಅಂತರದಲ್ಲಿ ಪಾರಾದ 15 ಯುವಕರು – Kannada News

ಬೆಳಗಾವಿ, ಜೂನ್ 6: ಧಾರಾಕಾರ ಮಳೆಗೆ ಹಳೆಯ ಕಟ್ಟಡವೊಂದು ದಿಢೀರನೆ ಕುಸಿದು ಬಿದ್ದಿದ್ದು, 15 ಯುವಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ರೋಮಾಂಚಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಅಂದಹಾಗೆ, ಘಟನೆ ವೇಳೆ ಯುವಕರು ಸ್ನೇಹಿತನ ಬರ್ತ್​​ ಡೇ ಪಾರ್ಟಿ ಆಚರಿಸುತ್ತಿದ್ದರು. ಅಥಣಿ ಪಟ್ಟಣದ ಹಳದಿ ಕಟ್ಟಡವೊಂದರಲ್ಲಿ ಯುವಕರ ತಂಡವೊಂದು ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿತ್ತು. ಈ ವೇಳೆ ಕಟ್ಟಡದಿಂದ ವಿಚಿತ್ರವಾದ ಶಬ್ದ ಕೇಳಿಬಂದಿದೆ. ಅಪಾಯದ ಮುನ್ಸೂಚನೆ ಅರಿತ ಯುವಕರು ತಕ್ಷಣವೇ ಜಾಗರೂಕರಾಗಿ ಕಟ್ಟಡದಿಂದ ಹೊರಗೆ ಓಡಿ ಬಂದಿದ್ದಾರೆ. ಇವರು ಹೊರಬರುತ್ತಿದ್ದಂತೆ ಇಡೀ ಕಟ್ಟಡವು ಧರಾಶಾಯಿಯಾಗಿದೆ. ಯುವಕರ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಟಿಯನ್ನು ಕೀಳಾಗಿ ತೋರಿಸೋ ಉದ್ದೇಶವಿರಲಿಲ್ಲ’; ಜಾನ್ವಿ ಹೊಕ್ಕುಳ ಪ್ರದರ್ಶನದ ಬಗ್ಗೆ ನಿರ್ದೇಶಕರ ಸ್ಪಷ್ಟನೆ – Kannada News

‘ಪೆದ್ದಿ’ ಸಿನಿಮಾ ಮೂಲಕ ಜಾನ್ವಿ ಕಪೂರ್ ಅವರು ದಕ್ಷಿಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳಬಹದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಊಹೆ ತಪ್ಪಾಗಿದೆ. ಜಾನ್ವಿ ಕಪೂರ್ ಅವರನ್ನು (Janhvi Kapoor) ಕೇವಲ ಗ್ಲಾಮರ್ ಗೊಂಬೆಯಾಗಿ ಬಳಕೆ ಮಾಡಿಕೊಳ್ಳಾಗಿದೆ. ‘ದೇವರ’ ಸಿನಿಮಾದಲ್ಲೂ ಇದೇ ರೀತಿಯಲ್ಲಿ ಜಾನ್ವಿ ಪಾತ್ರ ಇತ್ತು. ಈಗ ‘ಪೆದ್ದಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ವಿಷಯ ಸಾಕಷ್ಟು ಚರ್ಚೆ ಆಗುತ್ತಿದ್ದು, ನಿರ್ದೇಶಕ ಬುಚ್ಚಿ ಬಾಬು ಸನ ಅವರನ್ನು ಟೀಕೆ ಮಾಡಲಾಗಿದೆ. ಈ ವಿಷಯವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

‘ಉಪ್ಪೇನಾ’ ಸಿನಿಮಾದಲ್ಲಿ ಮರ್ಹಾದೆ ಹತ್ಯೆ ಬಗ್ಗೆ ಹೇಳಿದ್ದ ಬುಚ್ಚಿ ಬಾಬು ಸನಾ ಅವರು ಸಾಕಷ್ಟು ಎಚ್ಚರಿಕೆಯಿಂದ ನಡೆದುಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ಪ್ರಶಂಸೆ ಸಿಕ್ಕಿತ್ತು. ಆದರೆ, ‘ಪೆದ್ದಿ’ ಸಿನಿಮಾದಲ್ಲಿ ನಾಯಕಿ ಜಾನ್ವಿ ಕಪೂರ್ ಅವರನ್ನು ತೋರಿಸಿದ ರೀತಿ ಅನೇಕರಿಗೆ ಇಷ್ಟ ಆಗಿಲ್ಲ.

‘ಪೆದ್ದಿ’ ಸಿನಿಮಾದಲ್ಲಿ ಜಾನ್ವಿ ಮುಖ ತೋರಿಸಿದ್ದಕ್ಕಿಂತ, ಅಂಗಾಗ ಪ್ರದರ್ಶನ ಮಾಡಿದ್ದೇ ಹೆಚ್ಚು ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಇದು ಬುಚ್ಚಿ ಬಾಬು ಸನಾ ಅವರಿಗೆ ಶಾಕಿಂಗ್ ಎನಿಸಿದೆ. ‘ಇಷ್ಟೊಂದು ನೆಗೆಟಿವ್ ವಿಮರ್ಶೆ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ‘ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಡುವಿನ ಒಂದು ಸುಂದರ ಪ್ರೇಮಕಥೆಯನ್ನು ತೋರಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪಾತ್ರದ ಬಗ್ಗೆ ಟೀಕೆ ಏಕೆ?

‘ಈ ಪಾತ್ರದ ಚಿತ್ರಣವು ಯಾವುದೇ ವಿವಾದ ಸೃಷ್ಟಿಸುವ ಉದ್ದೇಶ ಹೊಂದಿರಲಿಲ್ಲ. ‘ಪೆದ್ದಿ’ ಚಿತ್ರವು ಒಂದು ಹಳ್ಳಿ ಸೊಗಡಿನ, ಹೈ-ಎನರ್ಜಿ ಡ್ರಾಮಾ ಕಥಾಹಂದರವನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿಯೇ ಈ ಪಾತ್ರವನ್ನು ವಿನ್ಯಾಸಗೊಳಿಸಲಾಗಿತ್ತು. ನಟಿಯ ಪಾತ್ರವನ್ನು ಎಲ್ಲೂ ಕೀಳಾಗಿ ಬಿಂಬಿಸುವ ಉದ್ದೇಶ ತಮಗಿರಲಿಲ್ಲ’ ಎಂದು ನಿರ್ದೇಶಕರು ನೇರವಾಗಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾದ ಹೊಸ ಆಶಾಕಿರಣ: ಯಾರು ಈ ಮಾನವ್ ಸುತಾರ್? – Kannada News

ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮತ್ತೊಬ್ಬ ಆಟಗಾರನ ಎಂಟ್ರಿಯಾಗಿದೆ. ಈ ಬಾರಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಆಟಗಾರನ ಹೆಸರು ಮಾನವ್ ಸುತಾರ್ (Manav Suthar). ವಯಸ್ಸು ಕೇವಲ 23. ಇತ್ತ ಟೀಮ್ ಇಂಡಿಯಾದಲ್ಲಿ ಯುವ ಆಟಗಾರನ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆ ಯಾರು ಈ ಮಾನವ್ ಸುತಾರ್ ಎಂಬ ಹುಡುಕಾಟ ಕೂಡ ಶುರುವಾಗಿದೆ. ಅಷ್ಟಕ್ಕೂ ಯಾರು ಈ ಸುತಾರ್?

ಮಾನವ್ ಸುತಾರ್, ರಾಜಸ್ಥಾನದ ಶ್ರೀ ಗಂಗಾನಗರದ ನಿವಾಸಿ. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸುತಾರ್, ಸ್ಥಳೀಯ ಕ್ರಿಕೆಟ್​ನಲ್ಲಿ ಭಾರೀ ಹೆಸರು ಮಾಡಿದ್ದರು. ಅದರಲ್ಲೂ ಬಾಲ್ಯದಿಂದಲೇ ‘ಸ್ಪಾಟ್ ಬೌಲಿಂಗ್’ (ಒಂದೇ ಜಾಗಕ್ಕೆ ಚೆಂಡು ಹಾಕುವುದು) ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಈ ಗಮನ ಸೆಳೆಯುವಿಕೆಯೊಂದಿಗೆ 2022 ರಲ್ಲಿ ರಾಜಸ್ಥಾನ್ ರಣಜಿ ತಂಡದಲ್ಲಿ ಸ್ಥಾನ ಪಡೆದ ಮಾನವ್ ಸುತಾರ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ಇದೀಗ ಭಾರತದ ಭರವಸೆಯ ಯುವ ಸ್ಪಿನ್ ಆಲ್​ರೌಂಡರ್ ಆಗಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಎಂಟ್ರಿ ಕೊಡುವ ಮುನ್ನ ಸುತಾರ್ ಸಾಧಿಸಿದ ಸಾಧನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

  •  ರಣಜಿ ಟ್ರೋಫಿ ದಾಖಲೆ: 2022-23ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಕೇವಲ 6 ಪಂದ್ಯಗಳಿಂದ 39 ವಿಕೆಟ್ ಕಬಳಿಸಿ ರಾಜಸ್ಥಾನದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
  • ಇಂಡಿಯಾ ‘ಎ’ ಪರ ಸಾಧನೆ: 2023ರ ಎಮರ್ಜಿಂಗ್ ಏಷ್ಯಾ ಕಪ್‌ನಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಸುತಾರ್  ಎರಡನೇ ಗರಿಷ್ಠ ವಿಕೆಟ್ ಟೇಕರ್ (10 ವಿಕೆಟ್) ಆಗಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾ ‘ಎ’ ವಿರುದ್ಧದ ಪಂದ್ಯದಲ್ಲಿ 107 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ದರು.
  • ಪ್ರಥಮ ದರ್ಜೆ ಕ್ರಿಕೆಟ್: ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ 29 ಪಂದ್ಯಗಳನ್ನಾಡಿರುವ ಮಾನಸ್ ಸುತಾರ್ ಒಟ್ಟು 129 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ | 945 ರನ್‌ಗಳನ್ನು ಕಲೆಹಾಕಿದ್ದಾರೆ.
  •  ಲಿಸ್ಟ್ ‘ಎ’: 25 ಲಿಸ್ಟ್​ ಎ ಪಂದ್ಯಗಳನ್ನಾಡಿರುವ ಸುತಾರ್ ಈವರೆಗೆ ಪಡೆದಿರುವುದು  34 ವಿಕೆಟ್‌ಗಳು. ಹಾಗೆಯೇ ಬ್ಯಾಟ್ ಮೂಲಕ 350 ರನ್‌ಗಳ ಕೊಡುಗೆ ನೀಡಿದ್ದಾರೆ.

ಸುತಾರ್ ಸ್ಪೆಷಲ್ ಏನು?

ಮೊದಲೇ ಹೇಳಿದಂತೆ ಮಾನವ್ ಸುತಾರ್ ಸ್ಪಿನ್ ಆಲ್​ರೌಂಡರ್. ಈಗಾಲೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರೇ ಸುತಾರ್ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ.

ಚೆಂಡಿಗೆ ಅವರು ನೀಡುವ ‘ರೆವಲ್ಯೂಷನ್’ (ತಿರುವು) ಮತ್ತು ಡ್ರಿಫ್ಟ್ ಎದುರಾಳಿ ಬ್ಯಾಟರ್‌ಗಳನ್ನು ಸುಲಭವಾಗಿ ವಂಚಿಸುತ್ತದೆ. ಹೀಗಾಗಿ ಅವರು ಟೀಮ್ ಇಂಡಿಯಾದ ಮುಂದಿನ ಸ್ಪಿನ್ ಅಸ್ತ್ರವಾಗಲಿದ್ದಾರೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ಇಂದಿನ ಯುವ ಬೌಲರ್‌ಗಳು ಟಿ20 ಶೈಲಿಗೆ ಹೊಂದಿಕೊಂಡು ವೇಗವಾಗಿ ಬೌಲಿಂಗ್ ಮಾಡಲು ಇಷ್ಟಪಟ್ಟರೆ, ಮಾನವ್ ಮಾತ್ರ ಗಂಟೆಗಟ್ಟಲೆ ಒಂದೇ ಜಾಗಕ್ಕೆ ಚೆಂಡು ಹಾಕುವ (ಸ್ಪಾಟ್ ಬೌಲಿಂಗ್) ಹಳೆಯ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಎಕಾನಮಿ ರೇಟ್ 3 ಕ್ಕಿಂತ ಕಡಿಮೆ ಇದೆ ಎಂದರೆ ಅವರ ನಿಯಂತ್ರಣ ಎಷ್ಟು ಅದ್ಭುತವಾಗಿದೆ ಎಂದು ತಿಳಿಯುತ್ತದೆ.

ಸ್ಪಿನ್ ಆಲ್​ರೌಂಡರ್ ಆಗಿದ್ದರೂ ಸುತಾರ್, ಕೇವಲ ಕೊನೆಯಲ್ಲಿ ಬಂದು ಬ್ಯಾಟ್ ಬೀಸುವ ಆಟಗಾರನಲ್ಲ. ತಂಡ ಸಂಕಷ್ಟದಲ್ಲಿದ್ದಾಗ ಮಾಗಿದ ಬ್ಯಾಟರ್‌ನಂತೆ ಆಡಬಲ್ಲರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈಗಾಗಲೇ 120 ರನ್‌ಗಳ ಭರ್ಜರಿ ಶತಕ ಮತ್ತು 6 ಅರ್ಧಶತಕಗಳನ್ನು ಬಾರಿಸಿ ತಮ್ಮ ಬ್ಯಾಟಿಂಗ್ ಕ್ಲಾಸ್ ಪ್ರದರ್ಶಿಸಿದ್ದಾರೆ.

ಒಂದೇ ಇನಿಂಗ್ಸ್​ನಲ್ಲಿ 8 ವಿಕೆಟ್​:

ರಣಜಿ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಕೇವಲ 33 ರನ್ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನದೊಂದಿಗೆ ಮಾನವ್ ಸುತಾರ್ ಎಲ್ಲರ ಗಮನ ಸೆಳೆದಿದ್ದರು.

ಮಾನವ್ ಅವರ ಈ ಪ್ರತಿಭೆಯನ್ನು ಗುರುತಿಸಿದ ಅಶ್ವಿನ್, ಅವರನ್ನು ಚೆನ್ನೈನಲ್ಲಿರುವ ತಮ್ಮ ಕ್ರಿಕೆಟ್ ಅಕಾಡೆಮಿಗೆ ಕರೆಸಿಕೊಂಡು ವಿಶೇಷ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ: ಕೆಎಲ್​ ರಾಹುಲ್ ‘ಅನ್‌ಸೋಲ್ಡ್’ ಆಗಲು ಇದುವೇ ಅಸಲಿ ಕಾರಣ!

ಸದ್ಯ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಅವರ ನಂತರ ಆ ಜಾಗವನ್ನು ತುಂಬಬಲ್ಲ ಅತ್ಯಂತ ಯೋಗ್ಯ ಎಡಗೈ ಸ್ಪಿನ್ ಆಲ್‌ರೌಂಡರ್ ಆಗಿ ಮಾನವ್ ಸುತಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮಾನವ್ ಸುತಾರ್ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Published On – 9:44 am, Sat, 6 June 26

Source link

ಪಾಕ್ ಉಗ್ರನ ಜತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ: ಕರ್ನಾಟಕದಲ್ಲಿ ಬೇರೂರುತ್ತಿವೆ ಉಗ್ರರ ಸ್ಲೀಪರ್ ಸೆಲ್! – Kannada News

ಅಲ್ಲಾಬಕ್ಷು ಮತ್ತು ಜಮೀರ್ ಖಾನ್Image Credit source: tv9

ಬೆಂಗಳೂರು, ಜೂನ್ 6: ರಾಜ್ಯದಲ್ಲಿ ವಿದೇಶಿ ಉಗ್ರರ ನೆಟ್‌ವರ್ಕ್ ಮತ್ತು ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿರುವ ಆತಂಕಕಾರಿ ವಿಚಾರ ಬಯಲಾಗಿದೆ. ಪಾಕಿಸ್ತಾನ (Pakistan) ಮೂಲದ ಶಂಕಿತ ಉಗ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು, ದೇಶದ ಭದ್ರತೆಗೆ ಧಕ್ಕೆ ತರಲು ಹಾಗೂ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಇಬ್ಬರು ಯುವಕರನ್ನು ತುಮಕೂರು (Tumakur) ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ನಿವಾಸಿ ಅಲ್ಲಾಬಕ್ಷು (24) ಮತ್ತು ದಾವಣಗೆರೆಯ ಬಿಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಈ ಜಂಟಿ ಕಾರ್ಯಾಚರಣೆ ನಡೆದಿದೆ.

ಮುಖ್ಯಾಂಶಗಳು

  • ಇನ್‌ಸ್ಟಾಗ್ರಾಮ್ ಮೂಲಕ ಪಾಕ್ ಉಗ್ರನ ಸಂಪರ್ಕ.
  • ಎಕ್ಸ್ ಮತ್ತು ವಾಟ್ಸ್ ಆ್ಯಪ್ ಗ್ರೂಪ್‌ ಸೃಷ್ಟಿ.
  • ಪುಣೆ ಮೌಲ್ವಿ ಹತ್ಯೆಗೆ ಪ್ರತಿಕಾರಕ್ಕೆ ಸಂಚು.

ಐಸಿಸ್ ಫಂಡಿಂಗ್ ಲಿಂಕ್ ಮತ್ತು ಬಾಂಬ್ ಸ್ಫೋಟದ ಸ್ಕೆಚ್

ದಾವಣಗೆರೆ ಎಸ್ಪಿ ಡಾ. ಎಚ್.ಟಿ. ಶೇಖರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತುಮಕೂರು ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೇರೆಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಇವರು ಪಾಕಿಸ್ತಾನದ ಐಸಿಸ್ (ISIS) ಉಗ್ರ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಅಷ್ಟೇ ಅಲ್ಲದೆ, ಭಾರತದ ವಿವಿಧೆಡೆ ಭಾರಿ ಪ್ರಮಾಣದ ಬಾಂಬ್ ಸ್ಫೋಟಗಳನ್ನು ನಡೆಸಲು ವ್ಯವಸ್ಥಿತ ಸಂಚು ಹೂಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಾಕ್ ಉಗ್ರ ರಾಣಾ ಹೆಣೆದಿದ್ದ ಬಲೆ

ಕಳೆದ ಒಂದು ತಿಂಗಳ ಹಿಂದೆ ಪಾಕಿಸ್ತಾನ ಮೂಲದ ‘ರಾಣಾ’ ಎಂಬಾತ ಇನ್‌ಸ್ಟಾಗ್ರಾಮ್ (Instagram) ಮೂಲಕ ಈ ಯುವಕರನ್ನು ಸಂಪರ್ಕಿಸಿದ್ದ. ನಂತರ ಇವರೆಲ್ಲರೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ದೇಶವಿರೋಧಿ ಹಾಗೂ ಪ್ರಚೋದನಾತ್ಮಕ ಚರ್ಚೆಗಳನ್ನು ನಡೆಸುತ್ತಿದ್ದರು. ಅಷ್ಟಕ್ಕೆ ನಿಲ್ಲದೆ, ವಾಟ್ಸ್ ಆ್ಯಪ್‌ನಲ್ಲಿ ಗ್ರೂಪ್ ಒಂದನ್ನು ರಚಿಸಿಕೊಂಡು ಅದರಲ್ಲಿ ಉತ್ತರ ಭಾರತದ ಹಲವು ಮುಸ್ಲಿಂ ಯುವಕರನ್ನು ಸೇರಿಸಿಕೊಳ್ಳಲಾಗಿತ್ತು. ಆರಂಭದಲ್ಲಿ ಧರ್ಮದ ಆಚರಣೆಗಳು ಮತ್ತು ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ ರಾಣಾ, ತದನಂತರ ‘ನಮ್ಮ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು, ತಡೆಯಬೇಕು’ ಎಂದು ಇವರ ತಲೆಗೆ ವಿಷ ತುಂಬಿ ಬ್ರೈನ್‌ವಾಶ್ ಮಾಡಿದ್ದ.

ಪ್ರತಿಕಾರಕ್ಕೆ ಚರ್ಚೆ: ಸ್ಲೀಪರ್ ಸೆಲ್ ಆತಂಕ

ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಗೆ ದೇಶದೊಳಗೆ ಭೀಕರ ಪ್ರತಿಕಾರ ತೀರಿಸಿಕೊಳ್ಳುವ ಕುರಿತು ಈ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಉಗ್ರ ರಾಣಾ ಚರ್ಚೆ ಆರಂಭಿಸಿದ್ದ ಎನ್ನಲಾಗಿದೆ. ದೇಶದ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ಉಂಟಾಗುವ ಮತ್ತು ಭಯೋತ್ಪಾದಕ ದಾಳಿ ನಡೆಯುವ ಗಂಭೀರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಪೊಲೀಸರನ್ನು ಅಲರ್ಟ್ ಮಾಡಿತ್ತು.

ಇದನ್ನೂ ಓದಿ: ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ

ಮೊದಲಿಗೆ ತುಮಕೂರಿನಲ್ಲಿ ಅಲ್ಲಾಬಕ್ಷುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ದಾವಣಗೆರೆಯ ಜಮೀರ್ ಖಾನ್ ಹೆಸರನ್ನು ಬಾಯಿಬಿಟ್ಟಿದ್ದ. ಸದ್ಯ ಇಬ್ಬರನ್ನೂ ಬಂಧಿಸಿರುವ ತುಮಕೂರು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ರಾಜ್ಯದಲ್ಲಿ ಇವರ ಹಿಂದೆ ಇರುವ ದೊಡ್ಡ ಸ್ಲೀಪರ್ ಸೆಲ್ ನೆಟ್‌ವರ್ಕ್ ಭೇದಿಸಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link