ಚಿಕ್ಕಬಳ್ಳಾಪುರ, (ಜನವರಿ 30): ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಮೃತಾ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ (Rajeev Gowda) ಜಾಮೀನು ಸಿಕ್ಕಿದೆ. ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿ ಇಂದು (ಜನವರಿ 30) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಶಿಡ್ಲಘಟ್ಟದ ಜೆಎಂಎಫ್ಸಿ ಕೋರ್ಟ್, ರಾಜೀವ್ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್, ಪೊಲೀಸರ ತನಿಖೆಗೆ ಸಹಕರಿಸಲು ಸೂಚನೆ ನೀಡಿದೆ. ಅಲ್ಲದೇ ಪ್ರಮುಖವಾಗಿ ಜಾಮೀನು ಸಿಕ್ಕ ಖುಷಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಾಚರಣೆ ಮಾಡದಂತೆ ಜಡ್ಜ್ ಮೊಹಮ್ಮದ್ ರೋಷನ್ ಶಾ ತಾಕೀತು ಮಾಡಿದ್ದಾರೆ.
ಕನ್ನಡದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಈ ಪ್ರಕಾರದ ಸಿನಿಮಾಗಳಿಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಗುಣ ಇರುತ್ತದೆ. ಕೊನೆಯ ತನಕ ಕುತೂಹಲ ಜಾಗೃತವಾಗಿಯೇ ಇರುತ್ತದೆ. ಅಂಥ ಸಿನಿಮಾಗಳ ಸಾಲಿಗೆ ‘ವಿಕಲ್ಪ’ (Vikalpa Movie) ಕೂಡ ಸೇರ್ಪಡೆ ಆಗಿದೆ. ಜನವರಿ 30ರಂದು ರಿಲೀಸ್ ಆಗಿರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಪಾಟೀಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾನಸಿಕ ಸಮಸ್ಯೆಗಳ ಒಂದಷ್ಟು ಆಯಾಮಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇಂದಿರಾ ಶಿವಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘ವಿಕಲ್ಪ’ ಚಿತ್ರದ ಕಥಾನಾಯಕ ಚಿಕ್ಕ ವಯಸ್ಸಿನಲ್ಲಿ ಏನನ್ನೋ ನೋಡಿ ಹೆದರಿಕೊಂಡಿರುತ್ತಾನೆ. ಆ ಭಯ 33ನೇ ವಯುಸ್ಸಿನ ತನಕವೂ ಕಾಡುತ್ತಲೇ ಇರುತ್ತದೆ. ಹಗಲು-ರಾತ್ರಿ, ನಗರ-ಹಳ್ಳಿ, ದೇಶ-ವಿದೇಶ ಎನ್ನದೇ ಎಲ್ಲ ಜಾಗದಲ್ಲೂ ಎಲ್ಲ ಸಮಯದಲ್ಲೂ ಆತನಿಗೆ ವಿಚಿತ್ರವಾದ ಅನುಭವ ಆಗುತ್ತದೆ. ಅದರಿಂದ ಅವನ ಜೀವನದಲ್ಲಿ ಹಲವು ತೊಂದರೆಗಳು ಉಂಟಾಗುತ್ತವೆ. ಅಂತಿಮವಾಗಿ ಅದಕ್ಕೆ ಯಾವ ರೀತಿಯ ಪರಿಹಾರ ಸಿಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಬೆಂಗಳೂರು ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ‘ವಿಕಲ್ಪ’ ಸಿನಿಮಾವನ್ನು ಚಿತ್ರಿಸಲಾಗಿದೆ. ಆಯಾ ಪ್ರದೇಶ ಮತ್ತು ಆ ಪ್ರದೇಶದ ಪಾತ್ರಗಳಿಗೆ ತಕ್ಕಂತೆ ಸಂಭಾಷಣೆಯನ್ನು ಬರೆಯಲಾಗಿದೆ. ಆ ಮೂಲಕ ಸಿನಿಮಾ ಹೆಚ್ಚು ನೈಜವಾಗಿ ಮೂಡಿಬರುವಂತೆ ನೋಡಿಕೊಳ್ಳಲಾಗಿದೆ. ಕಥೆಯ ಶುರುವಿನಿಂದ ಅಂತ್ಯದ ತನಕ ಸಸ್ಪೆನ್ಸ್ ಕಾಪಾಡಿಕೊಳ್ಳಲಾಗಿದೆ.
ಸಿನಿಮಾದ ಆರಂಭದಲ್ಲಿ ಹಾಸ್ಯ ಮತ್ತು ಹಾರರ್ ಅಂಶಗಳಿಗೆ ಒತ್ತು ನೀಡಲಾಗಿದೆ. ಕಥಾನಾಯಕನ ಅನುಭವಕ್ಕೆ ಬರುತ್ತಿರುವ ವಿಚಿತ್ರ ಘಟನೆಗಳನ್ನು ತೋರಿಸುವಾಗ ಹಾರರ್ ಸಿನಿಮಾ ನೋಡಿದ ಅನುಭವ ಆಗುತ್ತದೆ. ಆ ಘಟನೆಗಳಿಗೆ ಕಾರಣ ಏನಿರಬಹುದು ಎಂಬ ಕುತೂಹಲ ಪ್ರತಿ ಹಂತದಲ್ಲೂ ಮೂಡುತ್ತದೆ. ಜೊತೆಗೆ ಒಂದು ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಕೂಡ ಜಾಗ ಪಡೆದುಕೊಂಡಿದೆ. ಈ ಎಲ್ಲ ಅಂಶಗಳನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಯಕ್ಷಗಾನವನ್ನು ಒಂದು ಮುಖ್ಯ ಅಂಶವಾಗಿ ಬಳಸಿಕೊಳ್ಳಲಾಗಿದೆ.
‘ವಿಕಲ್ಪ’ ಕ್ಲೈಮ್ಯಾಕ್ಸ್ನಲ್ಲಿ ಒಂದಷ್ಟು ಮನೋವೈಜ್ಞಾನಿಕ ಅಂಶಗಳನ್ನು ಪ್ರೇಕ್ಷಕರಿಗೆ ತಿಳಿಸಲಾಗಿದೆ. ಆ ಮೂಲಕ ಮುಖ್ಯವಾದ ಸಂದೇಶ ನೀಡಲಾಗಿದೆ. ದೆವ್ವ-ಭೂತ ಎಂಬ ಮೌಢ್ಯ ಬಿತ್ತುವ ಸಿನಿಮಾಗಳ ನಡುವೆ ‘ವಿಕಲ್ಪ’ ಚಿತ್ರ ಒಂದು ಉತ್ತಮ ಪ್ರಯತ್ನವಾಗಿ ಇಷ್ಟ ಆಗುತ್ತದೆ. ಒಟ್ಟಾರೆ ಈ ಚಿತ್ರದ ಕಥೆ ಸಿಂಪಲ್ ಆಗಿದ್ದರೂ ಕೂಡ ಅದನ್ನು ಫ್ಲ್ಯಾಶ್ಬ್ಯಾಕ್ ತಂತ್ರದ ಮೂಲಕ ಹೇಳಿದ್ದರಿಂದ ಕೊನೆವರೆಗೂ ಕುತೂಹಲ ಉಳಿಸಿಕೊಳ್ಳುತ್ತದೆ. ಆದರೆ ಕಥೆಯನ್ನು ಇನ್ನಷ್ಟು ರೋಚಕವಾಗಿಸಿದ್ದರೆ ‘ವಿಕಲ್ಪ’ ಸಿನಿಮಾ ಹೆಚ್ಚು ಆಪ್ತವಾಗಬಹುದಿತ್ತು.
ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಸಖತ್ ರಿಲೀಫ್ ನೀಡುತ್ತಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ.
ನವದೆಹಲಿ, ಜನವರಿ 30: ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಂದರ್ಭದಲ್ಲಿ ಜೈವಿಕವಾಗಿ ವಿಘಟನೀಯ (ಬಳಸಿ ಬಿಸಾಡುವ) ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜೀವನದ ಮೂಲಭೂತ ಹಕ್ಕಿನ ಒಂದು ಭಾಗವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ನ್ಯಾಯಪೀಠವು ಎಲ್ಲಾ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಸರ್ಕಾರಿ ಸ್ವಾಮ್ಯದ್ದಾಗಿರಲಿ ಅಥವಾ ಸರ್ಕಾರದ ನಿಯಂತ್ರಣದಲ್ಲಿರಲಿ ಎಲ್ಲ ಶಾಲೆಗಳೂ ಅಂಗವಿಕಲ ಸ್ನೇಹಿ ಶೌಚಾಲಯಗಳನ್ನು ಒದಗಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
“ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮುಟ್ಟಿನ ಆರೋಗ್ಯದ ಹಕ್ಕು ಬದುಕುವ ಹಕ್ಕಿನ ಭಾಗವಾಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದುವೇಳೆ ಖಾಸಗಿ ಶಾಲೆಗಳು ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಒದಗಿಸದಿದ್ದರೆ ಅವುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ಒಂದುವೇಳೆ ಬಾಲಕಿಯರಿಗೆ ಶೌಚಾಲಯ ಮತ್ತು ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ವಿಫಲವಾದರೆ ಅದಕ್ಕೆ ಸರ್ಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
6ರಿಂದ 12ನೇ ತರಗತಿಯ ಹದಿಹರೆಯದ ಬಾಲಕಿಯರಿಗೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ‘ಶಾಲಾ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ ನೀತಿ’ಯನ್ನು ಭಾರತಾದ್ಯಂತ ಜಾರಿಗೆ ತರುವಂತೆ ಕೋರಿ ಜಯಾ ಠಾಕೂರ್ ಅವರು 2024ರ ಡಿಸೆಂಬರ್ 10ರಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆದರೆ, ಈ ಪ್ರಕರಣದ ತೀರ್ಪನ್ನು ಇನ್ನೂ ಕಾಯ್ದಿರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜನವರಿ 30: ಉದ್ಯೋಗ (job) ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸ ಅಲ್ಲ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಕೆಲಸವಿಲ್ಲದೇ ಖಾಲಿ ಕುಳಿತು ಕೊಂಡಿದ್ದ ಈ ವ್ಯಕ್ತಿಯೊಬ್ಬರು ಇದೀಗ ಬೆಂಗಳೂರಿನಲ್ಲಿ (Bengaluru) ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈತನ ದಿನದ ಸಂಪಾದನೆ 4000 ರೂ ಅಂತೆ. ಸ್ವತಃ ಈತನೇ ತನ್ನ ತಿಂಗಳ ಗಳಿಕೆಯ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಆರ್/ಬೆಂಗಳೂರು ಹೆಸರಿನ ರೆಡ್ಡಿಟ್ ಪೋಸ್ಟ್‌ನಲ್ಲಿ ದಿ ರಾಂಟ್ ಆಫ್ ಎ ರಿವರ್” ಎಂಬ ಶೀರ್ಷಿಕೆಯಲ್ಲಿ ತನ್ನ ಉದ್ಯೋಗದ ಅನುಭವವನ್ನು ಹಂಚಿಕೊಂಡಿದ್ದು, . ಈ ಪೋಸ್ಟ್‌ನಲ್ಲಿ, 1.5 ವರ್ಷಗಳ ಕಾಲ ನಿರುದ್ಯೋಗಿಯಾಗಿದ್ದೆ, ಬ್ಯುಸಿನೆಸ್ ಮಾಡಿ ನನ್ನ ಕೈಯನ್ನು ಸುಟ್ಟುಕೊಂಡೆ, ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲಗಳಿಗೆ ಸಿಲುಕಿದೆ. ಯಾವುದೇ ಪ್ರಯೋಜನವಾಗಲಿಲ್ಲ. ದಿನಕ್ಕೆ 1.5 ಸಾವಿರಕ್ಕೆ ಹಳದಿ ಬೋರ್ಡ್ ಕಾರನ್ನು ಬಾಡಿಗೆಗೆ ಪಡೆದು ಕಳೆದ ತಿಂಗಳು ಚಾಲನೆ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
ಉಬರ್ ಹಾಗೂ ರ್ಯಾಪಿಡೊದಂತಹ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 16 ಗಂಟೆಗಳ ಕಾಲ ಕಾರು ಚಲಾಯಿಸುತ್ತೇನೆ. ನನ್ನ ದೈನಂದಿನ ಗಳಿಕೆ ಸುಮಾರು 4,000 ರೂ. ಅದರಲ್ಲಿ 1.5 ಸಾವಿರ ಕಾರು ಬಾಡಿಗೆಗೆ ಹೋಗುತ್ತದೆ, 1.2 ಸಾವಿರ ಸಿಎನ್‌ಜಿಗೆ ಮತ್ತು 200 ಆಹಾರಕ್ಕೆ ಖರ್ಚಾಗುತ್ತದೆ. ನನಗೆ ಉಳಿಯುವುದು ಒಂದು ಸಾವಿರ ರೂ ಮಾತ್ರ. ವಿಶೇಷವಾಗಿ ನಗರದಲ್ಲಿನ ಸಂಚಾರದಟ್ಟಣೆಯೊಂದಿಗೆ ಈ ಕೆಲಸ ನಿಜವಾಗಿಯೂ ಕಷ್ಟಕರವಾಗಿದೆ ಎಂದು ವಿವರಿಸಿದ್ದಾರೆ.
ಹಣಕಾಸಿನ ಹೊರತಾಗಿ, ಕಾಲು, ಮೊಣಕಾಲು ನೋವು ಹಾಗೂ ಸೀಮಿತ ನಿದ್ರೆ ಸೇರಿದಂತೆ ಕೆಲಸದ ದೈಹಿಕ ಒತ್ತಡ ಅನುಭವಿಸಬೇಕು. ದಿನಕ್ಕೆ ಸುಮಾರು 6 ಗಂಟೆಗಳ ಕಾಲ ನಿದ್ರೆ ಅಷ್ಟೇ. ಕೆಲಸದ ಹೊರತಾಗಿ ಬೇರೆ ಯಾವುದಕ್ಕೂ ಸಮಯವಿಲ್ಲ. ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಈ ಕ್ಯಾಬ್ ಚಾಲನೆಯನ್ನು ಹೇಗೆ ಮಾಡುತ್ತಿದ್ದಾರೆ ಎನ್ನುವುದೇ ನನಗೆ ಆಶ್ಚರ್ಯವಾಗುತ್ತದೆ. ಅಪ್ಲಿಕೇಶನ್‌ಗಳು ಸ್ವತಃ ರಾಕ್ಷಸದಂತೆ ಆಗಿದೆ. ಲಕ್ಷಾಂತರ ಜನರು ದಿನನಿತ್ಯದ ಜೀವನವನ್ನು ನಡೆಸಲು ಈ ರೀತಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಪ್ರತಿದಿನ ಕಠಿಣ ಪರಿಶ್ರಮದಿಂದ ಬದುಕುತ್ತಾರೆ, ಏನನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ, ಪ್ರತಿದಿನ ತಮ್ಮ ಆರೋಗ್ಯ ಮತ್ತು ಜೀವವನ್ನು ಪಣಕ್ಕಿಡುತ್ತಾರೆ ಎಂದು ವಾಸ್ತವ ಸ್ಥಿತಿಯನ್ನು ಎಂದು ಹೇಳಿದ್ದಾರೆ.
ಫೋನ್‌ನ ನಿರಂತರ ಮೇಲ್ವಿಚಾರಣೆ, ಸಂಚಾರ ಒತ್ತಡ, ಸವಾರಿ ರದ್ದತಿಯ ಭಯ ಮತ್ತು ದೈನಂದಿನ ವಾಹನ ನಿರ್ವಹಣೆ ಒತ್ತಡವನ್ನು ಹೆಚ್ಚಿಸುತ್ತದೆ
ಈ ಕಠಿಣ ಪರಿಶ್ರಮ ನನ್ನನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ ಆದರೆ ಕೋಟ್ಯಂತರ ಭಾರತೀಯರಿಗೆ ಉದ್ಯೋಗ ನೀಡಿದೆ. ಅಗ್ಗದ ದುಡಿಮೆಯಿಂದಾಗಿ ಇತರರು ಈ ಸವಲತ್ತನ್ನು ಆನಂದಿಸಬಹುದು ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಇದು ತುಂಬಾ ಕಠಿಣ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ, ಕಾಯುವ ತಾಳ್ಮೆ ಇರಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಥೆ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಕೈಯಲ್ಲೊಂದು ಉದ್ಯೋಗ ಇದೆಯೆಂದು ಖುಷಿ ಪಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ (Aadhaar) ಬಿಡುಗಡೆ ಮಾಡಿದೆ. ಡಿಜಿಟಲ್ ವೈಯಕ್ತಿಕ ಡಾಟಾ ರಕ್ಷಣಾ ಕಾಯ್ದೆ ಅಡಿ ಯಾವುದೇ ಹೆಚ್ಚುವರಿ ಡಾಟಾ ಹಂಚಿಕೆ ಇಲ್ಲದೇ ಏಜ್ ವೆರಿಫಿಕೇಶನ್ ಮಾಡಲು ಈ ಹೊಸ ಆಧಾರ್ ಆ್ಯಪ್ ಸಹಾಯಕವಾಗಲಿದೆ. ಮೊನ್ನೆ ಬುಧವಾರ (ಜ. 28) ಈ ಆ್ಯಪ್ ಅನಾವರಣಗೊಂಡಿದೆ.
ಉತ್ತಮ ಆಡಳಿತಕ್ಕೆ ಆಧಾರ್ ದೃಢೀಕರಣ (ಸಮಾಜ ಕಲ್ಯಾಣ, ನಾವೀನ್ಯತೆ, ಜ್ಞಾನ) ಕಾಯ್ದೆಯ ನಿಯಮಗಳಿಗೆ (ಸ್ವಿಕ್ ರೂಲ್ಸ್) ತಿದ್ದುಪಡಿ ತರಲಾಗಿದೆ. ಈ ಕಾನೂನು ಅಡಿಯಲ್ಲಿ ಸುರಕ್ಷಿತ ರೀತಿಯಲ್ಲಿ ಆಧಾರ್ ಅಥೆಂಟಿಕೇಶನ್ ಬಳಸಿ ಸೇವೆ ಒದಗಿಲು ಖಾಸಗಿ ಸಂಸ್ಥೆಗಳಿಗೆ ಅನುವು ಮಾಡಿಕೊಡಲಾಗುತ್ತದೆ. ಈ ಮಾಹಿತಿಯನ್ನು ಹೊಸ ಆಧಾರ್ ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವಾಲಯದ ಕಾರ್ಯದರ್ಶಿ ಎಸ್ ಕೃಷ್ಣನ್ ತಿಳಿಸಿದರು.
ಆಧಾರ್ ಅನ್ನು ವಯಸ್ಸು ದೃಢೀಕರಣಕ್ಕೆ ಬಳಸಲಾಗುತ್ತದೆ. ಈ ವೇಳೆ, ಆಧಾರ್ನ ಇತರ ಮಾಹಿತಿಯೂ ರವಾನೆಯಾಗುವ ಸಾಧ್ಯತೆ ಇರುತ್ತದೆ. ಹೊಸ ಆಧಾರ್ ಆ್ಯಪ್ನಲ್ಲಿ ವಯಸ್ಸಿನ ದೃಢೀಕರಣ ಮಾತ್ರವೇ ಮಾಡಬಹುದು. ಸೋಷಿಯಲ್ ಮೀಡಿಯಾ, ಗೇಮ್ಸ್, ಇಕಾಮರ್ಸ್ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ಗಳು ತಮ್ಮ ಬಳಕೆದಾರರ ವಯಸ್ಸನ್ನು ದೃಢೀಕರಿಸಲು ಆಧಾರ್ನ ಏಜ್ ಗೇಟಿಂಗ್ ಫೀಚರ್ ಬಳಸಬಹುದು.
ಏಜ್ ವೆರಿಫಿಕೇಶನ್ ಸಾಧ್ಯವಾದರೆ ಆನ್ಲೈನ್ ಪ್ಲಾಟ್ಫಾರ್ಮ್ಗಳು ಇನ್ನಷ್ಟು ಉಪಯುಕ್ತವಾಗಿ ಸರ್ವಿಸ್ ನೀಡಬಹುದು. ಬಳಕೆದಾರರು ಮಕ್ಕಳಾಗಿದ್ದರೆ ಅವರ ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್ ಅಥವಾ ಪ್ರಾಡಕ್ಟ್ ಅನ್ನು ಪ್ರದರ್ಶಿಸದಿರಬಹುದು.
ಹೊಸ ಆಧಾರ್ ಆ್ಯಪ್ ಏಜ್ ಗೇಟಿಂಗ್ಗೆ ಮಾತ್ರವೇ ಬಳಕೆ ಆಗುವಂಥದ್ದಲ್ಲ. ವ್ಯಕ್ತಿಯ ಗುರುತಿನ ಕಾರ್ಡ್ ರೀತಿ ಡಿಜಿಟಲ್ ಅಗಿ ಬಳಸಬಹುದು. ಹೋಟೆಲ್, ಚಿತ್ರಮಂದಿರ ಇತ್ಯಾದಿ ಸ್ಥಳಗಳಲ್ಲಿ ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಅವರ ಈ ಆಧಾರ್ ಆ್ಯಪ್ ಅನ್ನು ಪರಿಶೀಲಿಸಬಹುದು. ಭೌತಿಕವಾಗಿ ಆಧಾರ್ ದಾಖಲೆ ಕೇಳುವ ಯಾವುದೇ ಸಂಸ್ಥೆಗೂ ಡಿಜಿಟಲ್ ಆಗಿ ಆಧಾರ್ ದೃಢೀಕರಣ ಕೊಡಲು ಈ ಹೊಸ ಆ್ಯಪ್ ನೆರವಾಗುತ್ತದೆ. ಆಧಾರ್ ಕಾಯ್ದೆ ಪ್ರಕಾರ ಖಾಸಗಿ ಸಂಸ್ಥೆಗಳು ಯಾವುದೇ ವ್ಯಕ್ತಿಯ ಆಧಾರ್ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಕೇರಳದ ತಿರುವನಂತಪುರದವರಾಗಿದ್ದಾರೆ. ಅಲ್ಲದೆ ಸಂಜು ಸ್ಯಾಮ್ಸನ್ ಇದೇ ಮೊದಲ ಬಾರಿಗೆ ತನ್ನ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಸಂಜು ಆಟವನ್ನು ನೋಡಲು ಕಾಯುತ್ತಿದ್ದಾರೆ. ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಬಂದ ಸಂಜುಗೆ ವಿಶೇಷ ಸ್ವಾಗತ ಸಿಕ್ಕಿದೆ. ಅಭಿಮಾನಿಗಳಿಂದ ಮಾತ್ರವಲ್ಲದೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಕೂಡ ಸಂಜುಗೆ ವಿಶೇಷ ರೀತಿಯ ಸ್ವಾಗತ ನೀಡಿದ್ದಾರೆ.
ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಅದರಲ್ಲಿ ಸೂರ್ಯ ಮತ್ತು ಸ್ಯಾಮ್ಸನ್ ನಡುವಿನ ತಮಾಷೆಯ ಕ್ಷಣಗಳು ಹೈಲೈಟ್ ಆಗಿವೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ಸಂಜು ಸ್ಯಾಮ್ಸನ್ ಅವರನ್ನು ಸೂರ್ಯಕುಮಾರ್ ಯಾದವ್ ವಿಶೇಷವಾಗಿ ಸ್ವಾಗತಿಸಿದ್ದಾರೆ. ಸಂಜುಗೆ ಅಂಗರಕ್ಷಕನಂತೆ ನಟಿಸಿರುವ ಸೂರ್ಯ, ದಾರಿ ಬಿಡಿ ದಾರಿ ಬಿಡಿ, ಚೇಟ (ಸಂಜು) ಅವರಿಗೆ ತೊಂದರೆಕೊಡಬೇಡಿ, ಅವರ ಫೋಟೋ ತೆಗೆಯಬೇಡಿ ಎಂದಿದ್ದಾರೆ. ಸೂರ್ಯ, ಸಂಜು ಅವರ ಕಾಲೆಳೆಯಲು ಈ ರೀತಿಯಾಗಿ ನಟಿಸಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರು, (ಜನವರಿ 30): ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಬಂಧನ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಂಧಿಸಿದ್ದಾರೆ. ಆದ್ರೆ, ಬಂಧನದ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಿ ರಂಪಾಟ ನಡೆಸಿದ್ದಾನೆ. ರಂಪಾಟ ಮಾಡಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಹಾಸನ, ಜನವರಿ 30: ಮಹಾನಗರ ಪಾಲಿಕೆಯ ಸಿಬ್ಬಂದಿ ಒಂದು ಲೋಡ್ ಕಸವನ್ನು ಮನೆಯ ಕಾಂಪೌಂಡ್ ಒಳಗೆ ಸುರಿಯುವ ಮೂಲಕ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಸನ ನಗರದ ಉದಯಗಿರಿ ಬಡಾವಣೆ ರಸ್ತೆಯಲ್ಲಿ ಘಟನೆ ನಡೆದಿದೆ. ಕರಿಯಪ್ಪ ಮತ್ತು ದ್ಯಾವಮ್ಮ ಎಂಬುವವರ ಮನೆ ಮುಂದೆ ಕಸ ಸುರಿಯಲಾಗಿದೆ. ರಸ್ತೆ ಬದಿ ಕಸ ಸುರಿಯುತ್ತಿದ್ದ ಬಗ್ಗೆ ಮನೆ ಮಾಲೀಕರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆ ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಇದಕ್ಕೆ ಕ್ಯಾರೆ ಎನ್ನದೆ ರಸ್ತೆ ಬದಿ ಕಸ ಎಸೆಯುತ್ತಿದ್ದರು. ಅವರಿಗೆ ಪಾಠ ಕಲಿಸಲೆಂದೇ ಇಂದು ಬೆಳಿಗ್ಗೆ ಒಂದು ಲೋಡ್ ಕಸವನ್ನು ಅವರ ಮನೆಯ ಆವರಣದಲ್ಲಿ ಸುರಿಯಲಾಗಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ಹಾಗೂ ಮಹಿಳೆ ನಡುವೆ ವಾಗ್ವಾದ ಉಂಟಾಗಿದೆ.
ಬೆಂಗಳೂರು (ಜನವರಿ 30): ಬೆಂಗಳೂರಿನಲ್ಲಿ ಮತಾಂತರದ (Conversion) ಆರೋಪವೊಂದು ಕೇಳಿ ಬಂದಿದೆ. ಪ್ರೀತಿ ಹೆಸರಲ್ಲಿ ಯುವತಿಯನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ (Muslim Religion) ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅಂದು ರೀಟಾ ಆಗಿದ್ದ ಮಹಿಳೆ ಇಂದು ಸಾದಿಯಾ ತಬುಸಮ್ ಎಂದು ಮತಾಂತರ ಮಾಡಿದ್ದಾರೆ ಎಂದು ಮೋಸ ಹೋದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೀವನಹಳ್ಳಿಯ ರೀಟಾ ಎಂಬ ಯುವತಿಗೆ ಬೆಂಗಳೂರಿನ ಡಿಜೆ ಹಳ್ಳಿಯ ಪರ್ವೇಜ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಒಂದೇ ಕಾಲೇಜಿನವರಾಗಿದ್ದರಂತೆ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರೀಟಾಳ ಹಿಂದೆ ಬಿದ್ದಿದ್ದ ಪರ್ವೇಜ್, ಪ್ರೀತಿ-ಪ್ರೇಮ ಅಂತ ಆಕೆಯ ತಲೆ ಕೆಡಿಸಿದ್ದ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಅಹಮದಾಬಾದ್, ಜನವರಿ 30: ಕುವೈತ್ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ(IndiGo) ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಹಾಗೂ ಹೈಜಾಕ್ ಮಾಡುವ ಕುರಿತು ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬೆಳಗ್ಗೆ 6.40 ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನವು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಅವರೆಲ್ಲರನ್ನೂ ತಕ್ಷಣವೇ ಸ್ಥಳಾಂತರಿಸಲಾಯಿತು ಮತ್ತು ವಿವರವಾದ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ವಿಮಾನವನ್ನು ಅಪಹರಿಸುವ ಮತ್ತು ಸ್ಫೋಟಿಸುವ ಬೆದರಿಕೆ ಬರೆದಿರುವ ಟಿಶ್ಯೂ ಪೇಪರ್ ವಿಮಾನದೊಳಗೆ ಕಂಡುಬಂದ ಬಳಿಕ ಕೋಲಾಹಲ ಸೃಷ್ಟಿಯಾಗತ್ತು. ಪೈಲಟ್‌ಗಳು ವಿಮಾನವನ್ನು ವಿಳಂಬವಿಲ್ಲದೆ ಅಹಮದಾಬಾದ್‌ಗೆ ವಿಮಾನವನ್ನು ತಿರುಗಿಸಲಾಯಿತು.
ವಿಮಾನ ಇಳಿದ ಕೂಡಲೇ ಭದ್ರತಾ ಸಂಸ್ಥೆಗಳು ಅದನ್ನು ಸುತ್ತುವರೆದವು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಮತ್ತು ಇಬ್ಬರೂ ಪ್ರಯಾಣಿಕರು ಮತ್ತು ಅವರ ಸಾಮಾನುಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು.
ಪ್ರತಿಯೊಬ್ಬ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಗುತ್ತಿದೆ ಮತ್ತು ಪ್ರಮಾಣಿತ ಬೆದರಿಕೆ-ಪ್ರತಿಕ್ರಿಯೆ ಪ್ರೋಟೋಕಾಲ್‌ನ ಭಾಗವಾಗಿ ಗುರುತಿಸಲಾಗುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಜನವರಿ 22 ರಂದು ಇದೇ ರೀತಿಯ ಘಟನೆಯಲ್ಲಿ, ದೆಹಲಿಯಿಂದ ಪುಣೆಗೆ ಹೋಗುವ ಇಂಡಿಗೋ ವಿಮಾನದಲ್ಲಿ ನಡೆದಿತ್ತು.ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಬಾಂಬ್ ಬೆದರಿಕೆ ಮಾಹಿತಿ ಬಂದಿತ್ತು.
ಆದರೆ ಸಂಪೂರ್ಣ ತಪಾಸಣೆಯ ನಂತರ ಅನುಮಾನಾಸ್ಪದ ಏನೂ ಪತ್ತೆಯಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೌಲ್ಯಮಾಪನದ ನಂತರ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿತು ಎಂದು ಅಧಿಕಾರಿ ಹೇಳಿದ್ದಾರೆ.
ವಿಧಾನಗಳು ಪೂರ್ಣಗೊಂಡ ನಂತರ, ವಿಮಾನವನ್ನು ತೆರವುಗೊಳಿಸಲಾಯಿತು ಮತ್ತು ಸಾಮಾನ್ಯ ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಯಿತು.