Category Archives: Blog

Your blog category

ಛತ್ರಪತಿ ಶಿವಾಜಿ ಮಹಾರಾಜ್: ರಿಷಬ್ ಶೆಟ್ಟಿ ನಟನೆಯ 2 ಪಾರ್ಟ್ ಸಿನಿಮಾಗೆ 500 ಕೋಟಿ ಬಜೆಟ್ – Kannada News | Rishab Shetty starrer The Pride of Bharat Chhatrapati Shivaji Maharaj Rs 500 Cr Budget Two Parts

‘ಕಾಂತಾರ’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಬ್ಯುಸಿಯಾಗಿರುವ ನ್ಯಾಷನಲ್ ಅವಾರ್ಡ್ ವಿನ್ನರ್ ರಿಷಬ್ ಶೆಟ್ಟಿ (Rishab Shetty) ಅವರ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಮರಾಠ ಸಾಮ್ರಾಜ್ಯದ ವೀರ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನಾಧಾರಿತ ಚಿತ್ರ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಸಿನಿಮಾ ಈಗ ಎರಡು ಭಾಗಗಳ ದೃಶ್ಯ ಕಾವ್ಯವಾಗಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

‘ವೆರೈಟಿ ಇಂಡಿಯಾ’ ವರದಿಯ ಪ್ರಕಾರ, ಮೊದಲು ಒಂದೇ ಭಾಗದಲ್ಲಿ ತೆರೆಗೆ ಬರಬೇಕಿದ್ದ ಈ ಐತಿಹಾಸಿಕ ಸಿನಿಮಾವನ್ನು ಈಗ ದೊಡ್ಡ ಮಟ್ಟದಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಬಜೆಟ್ ಬರೋಬ್ಬರಿ 500 ಕೋಟಿ ರೂಪಾಯಿ ದಾಟಲಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಐತಿಹಾಸಿಕ ಚಿತ್ರಗಳಲ್ಲಿ ಒಂದಾಗಿ ಇದು ಮೂಡಿಬರಲಿದೆ.

ಸಂದೀಪ್ ಸಿಂಗ್ ನಿರ್ದೇಶನದ ಈ ಸಿನಿಮಾವನ್ನು ಕೇವಲ ಮೂರು ಗಂಟೆಗಳ ಒಂದೇ ಚಿತ್ರವಾಗಿ ಕಟ್ಟಿ ಕೊಡುವುದು ಕಷ್ಟ ಎಂದು ನಿರ್ಮಾಪಕರು ಭಾವಿಸಿದ್ದಾರೆ. ಶಿವಾಜಿ ಮಹಾರಾಜ್ ಅವರ ನಾಯಕತ್ವ, ರಾಜತಾಂತ್ರಿಕ ನಡೆ ಮತ್ತು ಅವರ ಸಾಮ್ರಾಜ್ಯದ ಇತಿಹಾಸವನ್ನು ಸಂಪೂರ್ಣವಾಗಿ ಪ್ರೇಕ್ಷಕರಿಗೆ ತಲುಪಿಸಲು ಎರಡು ಭಾಗಗಳಾಗಿ ಮಾಡಲು ತೀರ್ಮಾನಿಸಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನದ ಪ್ರಮುಖ ಘಟನೆಗಳು ನಡೆದ ಮಹಾರಾಷ್ಟ್ರದ ನೈಜ ತಾಣಗಳಲ್ಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಬಾಲಿವುಡ್‌ನ ಖ್ಯಾತ ನಟ ಅರ್ಜುನ್ ರಾಂಪಾಲ್ ಈ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೆಫಾಲಿ ಶಾ ಅವರು ರಾಜಮಾತೆ ಜೀಜಾಬಾಯಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪ್ರೀತಮ್ ಅವರ ಸಂಗೀತ ಹಾಗೂ ರವಿವರ್ಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ: ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ

ಸದ್ಯಕ್ಕೆ ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದ ಕೆಲಸ ಮುಗಿದ ನಂತರವೇ ರಿಷಬ್ ಅವರು ‘ಛತ್ರಪತಿ ಶಿವಾಜಿ ಮಹಾರಾಜ್’ ಸೆಟ್‌ಗೆ ಬರಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಕಥೆಗಳನ್ನು ಎರಡು ಭಾಗಗಳಲ್ಲಿ ಹೇಳುವ ಟ್ರೆಂಡ್ ಹೆಚ್ಚಾಗಿದ್ದು, ಈಗ ಅದೇ ಹಾದಿಯಲ್ಲಿ ರಿಷಬ್ ಶೆಟ್ಟಿ ಅವರ ಈ ಸಿನಿಮಾ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಶರಣಾಗುವುದಾಗಿ ಹೇಳಿದ್ದ ರೌಡಿ ಎನ್‌ಕೌಂಟರ್‌ಗೆ ಬಲಿ! – Kannada News | Bihar rowdy Who Offered To Surrender In Facebook Live Dies After Police Encounter

ಪಾಟ್ನಾ, ಜೂನ್ 18: ಬಿಹಾರದಲ್ಲಿ ಅಪರಾಧಿಯೊಬ್ಬ ಫೇಸ್​​ಬುಕ್ ಲೈವ್ ಬಂದು ತಾನು ಪೊಲೀಸರ ಮುಂದೆ ಶರಣಾಗುವುದಾಗಿ ನಾಟಕವಾಡಿದ್ದ. ಆ ಲೈವ್ ಪ್ರಸಾರ ಮುಗಿಯುವಷ್ಟರಲ್ಲಿ ಪೊಲೀಸರು ಆತನನ್ನು ಸುತ್ತುವರೆದಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್​ಕೌಂಟರ್ ನಡೆಸಲಾಗಿದೆ. ವರದಿಗಳ ಪ್ರಕಾರ, ಮೃತನಾದ ವ್ಯಕ್ತಿ ಬಿಹಾರದ ಪೊಲೀಸರಿಗೆ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿಯಾಗಿದ್ದ. ಪೊಲೀಸರು ತನ್ನನ್ನು ಹಿಡಿಯಲು ಜಾಲ ಬೀಸಿರುವುದನ್ನು ಅರಿತ ಈತ, ಸಾರ್ವಜನಿಕರ ಅನುಕಂಪ ಗಿಟ್ಟಿಸಲು ಮತ್ತು ಪೊಲೀಸರು ತನ್ನನ್ನು ಎನ್‌ಕೌಂಟರ್ (Police Encounter) ಮಾಡುವುದನ್ನು ತಪ್ಪಿಸಲು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ದಿಢೀರ್ ಲೈವ್ ಬಂದಿದ್ದ.

ಲೈವ್ ವಿಡಿಯೋದಲ್ಲಿ ಮಾತನಾಡಿದ್ದ ಆತ, “ನಾನು ಪೊಲೀಸರಿಗೆ ಶರಣಾಗಲು ಸಿದ್ಧನಿದ್ದೇನೆ. ಕಾನೂನಿನ ಮೇಲೆ ನನಗೆ ಗೌರವವಿದೆ, ನನ್ನನ್ನು ಎನ್‌ಕೌಂಟರ್ ಮಾಡಬೇಡಿ” ಎಂದು ಮನವಿ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಇದನ್ನೂ ಓದಿ: ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಎನ್​ಕೌಂಟರ್​ನಲ್ಲಿ ಸಾವು

ಫೇಸ್‌ಬುಕ್ ಲೈವ್‌ನಲ್ಲಿ ಆತ ಇದ್ದ ಜಾಗದ ಸುಳಿವು ಪತ್ತೆಹಚ್ಚಿದ ಪೊಲೀಸರ ವಿಶೇಷ ತಂಡ ತಡರಾತ್ರಿ ಆತ ಅಡಗಿದ್ದ ಸ್ಥಳದ ಮೇಲೆ ಜಂಟಿ ದಾಳಿ ನಡೆಸಿತು. ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದು ಆತನಿಗೆ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಮತ್ತೊಮ್ಮೆ ಸೂಚಿಸಿದರು. ಆದರೆ, ಫೇಸ್‌ಬುಕ್ ಲೈವ್‌ನಲ್ಲಿ ಶಾಂತಿ ಮಂತ್ರ ಪಠಿಸಿದ್ದ ಅಪರಾಧಿ, ಪೊಲೀಸರನ್ನು ನೋಡುತ್ತಿದ್ದಂತೆ ದಿಢೀರನೆ ಅವರ ಮೇಲೆಯೇ ಗುಂಡಿನ ದಾಳಿ ಆರಂಭಿಸಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಈ ಭೀಕರ ಗುಂಡಿನ ಚಕಮಕಿಯಲ್ಲಿ ಅಪರಾಧಿಗೆ ತೀವ್ರವಾಗಿ ಗುಂಡು ತಗುಲಿದೆ.

ಗುಂಡೇಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಆತನನ್ನು ಪೊಲೀಸರು ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನಾ ಸ್ಥಳದಿಂದ ಕೆಲವು ಕಾನೂನುಬಾಹಿರ ಶಸ್ತ್ರಾಸ್ತ್ರಗಳು ಮತ್ತು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ವಿವಾದ ಸೃಷ್ಟಿಸಿದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಜಯ್ ಶರ್ಮಾ ಯಾರು?

ಒಂದೆಡೆ ಅಪರಾಧಿ ತಾನಾಗಿಯೇ ಶರಣಾಗಲು ಬಯಸಿದ್ದರೂ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಕೆಲವು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಪೊಲೀಸರು “ಆತ ಶರಣಾಗತಿಯ ನಾಟಕವಾಡಿ ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರಿಂದ ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

SBI PO Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,500 ಹುದ್ದೆಗೆ ಅರ್ಜಿ ಆಹ್ವಾನ; ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಸುವರ್ಣಾವಕಾಶ – Kannada News | SBI PO Application 2026: Eligibility, Dates and Salary for 1500 Bank Officer Posts

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಸುವರ್ಣಾವಕಾಶ
Image Credit source: Pinterest

ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಎಸ್‌ಬಿಐ ಒಟ್ಟು 1,500 ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 18 ರಿಂದಲೇ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 8 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಮುಗಿಸಿದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ವರ್ಗಾವಾರು ಹುದ್ದೆಗಳ ವಿವರ:

ಪ್ರಕಟಿಸಲಾದ ಒಟ್ಟು 1,500 ಹುದ್ದೆಗಳಲ್ಲಿ ವಿವಿಧ ವರ್ಗಗಳಿಗೆ ನಿಯಮಾನುಸಾರ ಸೀಟುಗಳನ್ನು ಕಾಯ್ದಿರಿಸಲಾಗಿದೆ. ವರ್ಗಾವಾರು ವಿವರ ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗ (General): 588 ಹುದ್ದೆಗಳು
  • ಒಬಿಸಿ ವರ್ಗ (OBC): 390 ಹುದ್ದೆಗಳು
  • ಎಸ್‌ಸಿ ವರ್ಗ (SC): 234 ಹುದ್ದೆಗಳು
  • ಎಸ್‌ಟಿ ವರ್ಗ (ST): 144 ಹುದ್ದೆಗಳು
  • ಇಡಬ್ಲ್ಯೂಎಸ್ ವರ್ಗ (EWS): 144 ಹುದ್ದೆಗಳು

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಪ್ರಸ್ತುತ ಅಂತಿಮ ವರ್ಷ ಅಥವಾ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ, ಅವರು ಸೆಪ್ಟೆಂಬರ್ 30, 2026 ರೊಳಗೆ ತಾವು ಪದವಿ ಪೂರ್ಣಗೊಳಿಸಿರುವ ಪುರಾವೆಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಏಪ್ರಿಲ್ 1, 2026 ರ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಸರ್ಕಾರದ ನಿಯಮಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರಲಿದ್ದು, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆ:

ಎಸ್‌ಬಿಐ ಪಿಒ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಒಟ್ಟು ಮೂರು ಪ್ರಮುಖ ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ:

  • ಮೊದಲ ಹಂತ (ಪ್ರಾಥಮಿಕ ಪರೀಕ್ಷೆ): ಇದರಲ್ಲಿ ಇಂಗ್ಲಿಷ್ ಭಾಷೆ, ತಾರ್ಕಿಕ ಸಾಮರ್ಥ್ಯ ಮತ್ತು ಪರಿಮಾಣಾತ್ಮಕ ಸಾಮರ್ಥ್ಯದ ವಸ್ತುನಿಷ್ಠ ಪ್ರಶ್ನೆಗಳಿರುತ್ತವೆ.
  • ಎರಡನೇ ಹಂತ (ಮುಖ್ಯ ಪರೀಕ್ಷೆ): ಪ್ರಾಥಮಿಕ ಪರೀಕ್ಷೆಯಲ್ಲಿ ಪಾಸಾದವರಿಗೆ ಮುಖ್ಯ ಪರೀಕ್ಷೆ ನಡೆಯಲಿದ್ದು, ಇದು ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 1/4 ರಷ್ಟು ಋಣಾತ್ಮಕ ಅಂಕಗಳ ವ್ಯವಸ್ಥೆ ಇರಲಿದೆ.
  • ಅಂತಿಮ ಹಂತ: ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ವ್ಯಾಯಾಮಗಳು ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ.

ಆಕರ್ಷಕ ಸಂಬಳ, ಸೇವಾ ಬಾಂಡ್ ಮತ್ತು ಅರ್ಜಿ ಶುಲ್ಕ:

  • ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ 48,480 ರೂ. ಇರಲಿದೆ. ಇದರೊಂದಿಗೆ ವಿವಿಧ ಭತ್ಯೆಗಳನ್ನು ಒಳಗೊಂಡಂತೆ ವಾರ್ಷಿಕ ಸಿಟಿಸಿ (CTC) ಸುಮಾರು 21.97 ಲಕ್ಷ ರೂ. ವರೆಗೆ ತಲುಪಬಹುದು.
  • ಸೇವಾ ಬಾಂಡ್: ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳು ಮೂರು ವರ್ಷಗಳ ಅವಧಿಗೆ 2 ಲಕ್ಷ ರೂ. ಸೇವಾ ಬಾಂಡ್‌ಗೆ ಸಹಿ ಹಾಕಬೇಕಾಗುತ್ತದೆ.
  • ಅರ್ಜಿ ಶುಲ್ಕ: ಸಾಮಾನ್ಯ (General), ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:08 pm, Thu, 18 June 26

Source link

ಭಾರತ- ಐರ್ಲೆಂಡ್ ಟಿ20 ಪಂದ್ಯಗಳು ಒಂದು ಗಂಟೆ ಮುಂಚಿತವಾಗಿ ಆರಂಭ – Kannada News | India vs Ireland T20: Shreyas Iyer to Lead, 6 PM Start Time Revealed!

ಪ್ರಸ್ತುತ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿರುವ ಟೀಂ ಇಂಡಿಯಾ ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಪ್ರವಾಸ (Team India Ireland T20 Tour) ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಪ್ರವಾಸಕ್ಕಾಗಿ ಬಿಸಿಸಿಐ (BCCI) ಈಗಾಗಲೇ ಭಾರತೀಯ ತಂಡವನ್ನು ಘೋಷಿಸಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಯುವ ಆಟಗಾರರನ್ನು ಒಳಗೊಂಡ ಈ ತಂಡವು ಐರ್ಲೆಂಡ್‌ನ ಸವಾಲನ್ನು ಎದುರಿಸಲಿದೆ. ಏತನ್ಮಧ್ಯೆ, ಸರಣಿಯ ಪಂದ್ಯಗಳ ಆರಂಭದ ಸಮಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ.

6 ಗಂಟೆಗೆ ಆರಂಭವಾಗಲಿವೆ ಪಂದ್ಯಗಳು

ಸಾಮಾನ್ಯವಾಗಿ ಭಾರತ ಮತ್ತು ವಿದೇಶಗಳಲ್ಲಿ ಟಿ20 ಪಂದ್ಯಗಳು ಸಂಜೆ 7:00 ಅಥವಾ 7:30 ಕ್ಕೆ ಪ್ರಾರಂಭವಾಗುತ್ತವೆ. ಪ್ರಸಾರಕರು ಮತ್ತು ಕ್ರಿಕೆಟ್ ಮಂಡಳಿಗಳು ಯಾವಾಗಲೂ ಪಂದ್ಯಗಳ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ, ಇದರಿಂದಾಗಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಪ್ರೈಮ್ ಟೈಮ್‌ನಲ್ಲಿ ಟಿವಿ ಅಥವಾ ಮೊಬೈಲ್ ಫೋನ್‌ಗಳಲ್ಲಿ ಪಂದ್ಯಗಳನ್ನು ಸುಲಭವಾಗಿ ಆನಂದಿಸಬಹುದು. ಆದರೆ ಐರ್ಲೆಂಡ್ ಪ್ರವಾಸದಲ್ಲಿ ಪಂದ್ಯಗಳು ಇನ್ನು ಬೇಗನೇ ಆರಂಭವಾಗಲಿವೆ. ಅಂದರೆ ಭಾರತ ಮತ್ತು ಐರ್ಲೆಂಡ್ ನಡುವಿನ ಎರಡೂ ಟಿ20 ಪಂದ್ಯಗಳು ಸಂಜೆ 6 ಗಂಟೆಗೆ ಆರಂಭವಾಗಲಿವೆ.

ಭಾರತ ಮತ್ತು ಐರ್ಲೆಂಡ್ ತಂಡಗಳು ಜೂನ್ 26 ಮತ್ತು 28 ರಂದು ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಇವೆರಡೂ ಪಂದ್ಯಗಳು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿವೆ. ಈ ಎರಡು ಪಂದ್ಯಗಳು ಸಂಜೆ 6 ಗಂಟೆಗೆ ಆರಂಭವಾಗುವುದು ಭಾರತದ ಅಭಿಮಾನಿಗಳಿಗೆ ಹೊಸ ಅನುಭವವಾಗಿದ್ದರೂ, ಇದು ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಪಂದ್ಯವು ಬೇಗನೆ ಆರಂಭವಾಗುವುದರಿಂದ, ರಾತ್ರಿ 9:30 ರಿಂದ 10 ಗಂಟೆಯೊಳಗೆ ಕೊನೆಗೊಳ್ಳುತ್ತದೆ. ಇದರಿಂದ ಅಭಿಮಾನಿಗಳು ಬೇಗನೇ ನಿದ್ರೆಗೆ ಜಾರಬಹುದು.

IND W vs NED W: ಟಿ20 ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

ಐರ್ಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ವೈಭವ್ ಸೂರ್ಯವಂಶಿ, ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:10 pm, Thu, 18 June 26

Source link

ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ – Kannada News | Director Om Praksh remembered old days about Darshan

ಖ್ಯಾತ ನಿರ್ದೇಶಕ ಓಂ ಪ್ರಕಾಶ್, ಶಿವರಾಜ್ ಕುಮಾರ್, ದರ್ಶನ್ (Darshan) ಸೇರಿದಂತೆ ಹಲವು ಸ್ಟಾರ್ ನಟ-ನಟಿಯರ ಜೊತೆಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಓಂ ಪ್ರಕಾಶ್ ಅವರು ಟಿವಿ ಲೋಕಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗಿ ಆಗುತ್ತಿದ್ದಾರೆ. ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿರುವ ಓಂ ಪ್ರಕಾಶ್ ಅವರು ಟಿವಿ9 ಜೊತೆಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ಮಾಡಿಕೊಂಡಿದ್ದಾರೆ. ನಟ ದರ್ಶನ್​ಗೆ ತಾವು ಉಪ್ಪಿಟ್ಟು ಮಾಡಿಕೊಟ್ಟಿದ್ದನ್ನು ಈ ವೇಳೆ ಓಂ ಪ್ರಕಾಶ್ ಅವರು ನೆನಪು ಮಾಡಿಕೊಂಡಿದ್ದು, ಹಳೆಯ ಘಟನೆಯನ್ನು ಬಲು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಆಂಧ್ರ ಮೂಲದ ಕಂಪನಿಯಿಂದ ವಂಚನೆ: ಉದ್ಯೋಗ ನೀಡುವ ನೆಪದಲ್ಲಿ ಕೋಟ್ಯಂತರ ರೂ ವಂಚನೆ – Kannada News | Andhra Based Company Accused of Employment Scam, Defrauding Victims of Crores of Rupees

ಚಿತ್ರದುರ್ಗ, ಜೂನ್​​ 18: ಇತ್ತೀಚೆಗೆ ಬೆಳಗಾವಿಯ ಶಿವಾನಂದ ನೀಲಣ್ಣವರ ಶಿವಂ ಅಸೋಸಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ರೂ ವಂಚನೆ (Fraud) ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಬಳಿಕ ಹಾವೇರಿ, ರಾಯಚೂರು ಮತ್ತು ತುಮಕೂರಿನಲ್ಲೂ ದುಷ್ಕರ್ಮಿಗಳು ಜನರಿಗೆ ಲಕ್ಷಾಂತರ ರೂ ವಂಚಿಸಿದ್ದರು. ಇದೀಗ ಚಿತ್ರದುರ್ಗದಲ್ಲಿ (chitradurga) ಆಂಧ್ರ ಮೂಲದ ಕಂಪನಿಯಿಂದ ಸುಮಾರು 470 ಜನರಿಂದ 60 ರಿಂದ 70 ಕೋಟಿ ರೂ ಹಣ ಸಂಗ್ರಹಿಸಿ ವಂಚಿಸಲಾಗಿದೆ. ಸದ್ಯ ವಂಚನೆಗೊಳಗಾದ ಜನರು ಜಿಲ್ಲಾ ಪೊಲೀಸ್​ ಕಛೇರಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿ ಮಹಾವಂಚನೆ ಬೆಳಕಿಗೆ
  • ಉದ್ಯೋಗ, ವಿಶೇಷ‌ ಪ್ಯಾಕೇಜ್ ನೆಪದಲ್ಲಿ ವಂಚನೆ
  • ನ್ಯಾಯ ಕೊಡಿಸುವಂತೆ ಅಳಲು ತೋಡಿಕೊಂಡ ಸಂತ್ರಸ್ತ ಜನರು

ನಡೆದಿದ್ದೇನು?

ಆಂಧ್ರ ಮೂಲದ ಎಸ್‌ಎಲ್‌ವಿ ಕಂಪನಿ ಉದ್ಯೋಗ ಹಾಗೂ ವಿಶೇಷ ಪ್ಯಾಕೇಜ್ ಆಮಿಷ ತೋರಿಸಿ ಚಿತ್ರದುರ್ಗದ ಸುಮಾರು 470 ಜನರಿಗೆ 60 ರಿಂದ 70 ಕೋಟಿ ರೂ ವಂಚಿಸಿದೆ. ರಾಜೇಶ್ ಬೊಮ್ಮಾಲ ಎಂಬುವವನು ಅಮಾಯಕ ಜನರಿಗೆ ವಂಚಿಸಿದ್ದಾನೆ.

ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ

ಈ ರಾಜೇಶ್ ಬೊಮ್ಮಾಲ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಕಂಪನಿ ಬಗ್ಗೆ ಆಕರ್ಷಕ ಪ್ರಚಾರ ಮಾಡಿದ್ದಾನೆ. ಇದನ್ನು ನಂಬಿ ನೂರಾರು ಕೂಲಿಕಾರ್ಮಿಕರು, ಗೃಹಿಣಿಯರು, ನಿರುದ್ಯೋಗಿ ಯುವಕರು ಫೈನಾನ್ಸ್​ನಲ್ಲಿ ಸಾಲ ಮಾಡಿ ಕಂಪನಿಗೆ ಹಣ ಕಟ್ಟಿದ್ದಾರೆ.

ಚಿನ್ನಾಭರಣ, ಆಸ್ತಿಪತ್ರ ಒತ್ತೆಯಿಟ್ಟು ಹಣ ತುಂಬಿದ ಜನ

ಅಷ್ಟೇ ಅಲ್ಲದೆ ಇನ್ನು ಕೆಲವರು ಚಿನ್ನಾಭರಣ, ಆಸ್ತಿಪತ್ರವನ್ನೂ ಒತ್ತೆಯಿಟ್ಟು ಕಂಪನಿಗೆ ಹಣ ತುಂಬಿದ್ದರು. ಆದರೆ ಇದೀಗ ವಂಚಕರು ಹಣದೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದು, ಜನರಿಗೆ ದಿಕ್ಕು ತೋಚದಂತಾಗಿದೆ. ಹಾವೇರಿ, ರಾಯಚೂರು, ತುಮಕೂರು ಮಾದರಿಯಲ್ಲೇ ಚಿತ್ರದುರ್ಗದಲ್ಲೂ ವಂಚನೆ ನಡೆದಿದೆ. ಸದ್ಯ ನ್ಯಾಯ ಕೊಡಿಸುವಂತೆ ಸಂತ್ರಸ್ತ ಜನರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಇಲ್ಲಿನ ಜನ್ರು ತುಂಬಾ ಒಳ್ಳೆಯವ್ರು: ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆಯ – Kannada News | Australian woman praises Indians for helping her

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹಿಂದೆ ಮುಂದೆ ಯೋಚಿಸುವವರೇ ಹೆಚ್ಚು. ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಣವಿರುವ ಜನರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇಂತಹ ಗುಣವನ್ನು ಭಾರತೀಯರಲ್ಲಿ ಕಂಡು ವಿದೇಶಿ ಮಹಿಳೆ ಫುಲ್ ಖುಷ್ ಆಗಿದ್ದಾಳೆ. ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ಆಸ್ಟ್ರೇಲಿಯನ್ ಮಹಿಳೆ (Australian woman)  ತನಗೆ ಭಾರತೀಯರು ತನಗೆ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾಳೆ. ಅವರ ಒಳ್ಳೆಯ ಗುಣ ಹಾಗೂ ಒಳ್ಳೆತನವನ್ನು ಮೆಚ್ಚಿಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಭಾರತದಲ್ಲಿ ಒಂಟಿಯಾಗಿ ಸುತ್ತಾಟ ಮಾಡುತ್ತಿರುವ ಪೈಜ್ (Paige) ಎಂಬ ವಿದೇಶಿ ಮಹಿಳೆ ಇಲ್ಲಿನ ಸುಂದರ ಕ್ಷಣಗಳ ಜತೆಗೆ ಭಾರತೀಯ ಒಳ್ಳೆತನದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್ ನಲ್ಲಿ ನನಗೆ ಪರಿಚಯವೇ ಇಲ್ಲದ ವ್ಯಕ್ತಿ ಆದರೂ ನಾನು ಸುರಕ್ಷಿತವಾಗಿ ನನ್ನ ಹೋಟೆಲ್‌ಗೆ​ ತಲುಪಿಸಿದರು. ಅಷ್ಟೇ ಅಲ್ಲದೇ, ಮತ್ತೊಂದು ಊಹಿಸಲಾಗದ ಘಟನೆ ಮೆಡಿಕಲ್​ ಸ್ಟೋರ್​ನಲ್ಲಿ ನಡೆಯಿತು. ಬಿಲ್ ಪಾವತಿಸುವಾಗ ಕ್ಯಾಷಿಯರ್ ಬಳಿ ಮರಳಿ ಕೊಡಲು ಚಿಲ್ಲರೆ ಹಣ ಇರಲಿಲ್ಲ. ಹೀಗಾಗಿ ನನಗೆ ಉಚಿತ ಹ್ಯಾಂಡ್ ಸ್ಯಾನಿಟೈಸರ್​ ನೀಡಿದ್ದರು ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ನಾನು ದೆಹಲಿಯಲ್ಲಿ ದಾರಿ ತಪ್ಪಿ ಬಂದಾಗ ನನ್ನನ್ನು ಬಸ್​ ನಿಲ್ದಾಣಕ್ಕೆ ಮಹಿಳೆಯೂ ಕರೆದುಕೊಂಡು ಬಂದರು. ಮಳೆಯಲ್ಲಿ ಸಿಲುಕಿಕೊಂಡಾಗ ತನ್ನ ಸ್ಕೂಟರ್‌ನಲ್ಲಿ ಹೋಗಲು ಸ್ಥಳೀಯ ರೆಸ್ಟೋರೆಂಟ್‌ನ ವ್ಯಕ್ತಿಯೊಬ್ಬರು ಆಫರ್ ನೀಡಿದ್ದರು. ಇನ್ನು ವೃದ್ಧ ಮಹಿಳೆಯೊಬ್ಬರು ನೀವು ಟ್ರೈ ಮಾಡ್ಲೇ ಬೇಕು ಅಂತ ನನಗೆ ಒಂದು ಪ್ಲೇಟ್​ ಪಕೋಡಾ ಕೂಡಾ ನೀಡಿದ್ದರು. ಈ ಎಲ್ಲವೂ ಸ್ವಾರ್ಥವಿಲ್ಲದೆ, ಕೇವಲ ತಮ್ಮ ದೇಶಕ್ಕೆ ಬಂದ ವಿದೇಶಿಗರು ಹಸಿದಿರಬಾರದು. ಯಾವಾಗಲೂ ಸುರಕ್ಷಿತವಾಗಿರಬೇಕು ಎಂದು ಬಯಸುವ ಈ ಮನಸ್ಸುಗಳೇ ಭಾರತವನ್ನು ಅತ್ಯಂತ ಆತಿಥ್ಯಕಾರಿ ದೇಶವನ್ನಾಗಿ ಮಾಡಿವೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಭಾರತಕ್ಕೆ ಸ್ವಾಗತಿಸುವುದು ಯಾವಾಗಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ದೇಶವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತೀಯರು ವಿಶಾಲ ಹೃದಯದವರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ 5 ಸ್ವಾರಸ್ಯಕರ ಘಟನೆಗಳಿವು – Kannada News | Karnataka MLC Elections: Five Eye Catching Incidents You Shouldn’t Miss

ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ ಸ್ವಾರಸ್ಯಕರ ಘಟನೆಗಳಿವುImage Credit source: Tv9 Kannada

ಬೆಂಗಳೂರು, ಜೂನ್​​ 18: ಭಾರಿ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ಮುಕ್ತಾಯಗೊಂಡಿದ್ದು, ಎಲ್ಲ 222 ಶಾಸಕರಿಂದ ಮತದಾನ ನಡೆದಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮೊದಲನೇ ಮತ ಚಲಾಯಿಸಿದ್ದರೆ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕೊನೆಯದಾಗಿ ಮತ ಹಾಕಿದ್ದಾರೆ. ರಾಜ್ಯದ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆ ಕೆಲವು ಸ್ವಾರಸ್ಯಕರರ ಘಟನೆಗಳಿಗೂ ಸಾಕ್ಷಿಯಾಗಿದೆ.

‘ಕೈ’ ನಾಯಕರ ಜೊತೆ ಬಿಜೆಪಿ ಉಚ್ಛಾಟಿತ ಶಾಸಕರು

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರಾದ ಎಸ್​​.ಟಿ. ಸೋಮಶೇಖರ್​​ ಮತ್ತು ಶಿವರಾಮ ಹೆಬ್ಬಾರ್​​ ಚುನಾವಣೆ ವೇಳೆ ಕಾಂಗ್ರೆಸ್​​ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದು ಕಂಡುಬಂತು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕರಿದ್ದ ಕೊಠಡಿಯಲ್ಲಿ ಹೆಬ್ಬಾರ್, ಸೋಮಶೇಖರ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ

ಡಿಸಿಎಂಗಾಗಿ ಕಾದು ಕಾದು ಮತ ಚಲಾಯಿಸಿದ ಸಿಎಂ

ಡಿಸಿಎಂ ಪರಮೇಶ್ವರ್​​ ಜೊತೆ ಮತಚಲಾಯಿಸಲೆಂದು ಕಾದು ಕಾದು ಕೊನೆಗೆ ಸಿಎಂ ಡಿ.ಕೆ. ಶಿವಕುಮಾರ್​ ಒಬ್ಬರೇ ತೆರಳಿ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಡಾ.ಪರಮೇಶ್ವರ್ ಬರ್ತಾರೆ ಎನ್ನಲಾಗಿತ್ತಾದರೂ 1.30 ಕಳೆದರೂ ಬಂದಿರಲಿಲ್ಲ. ಅನಾರೋಗ್ಯದ ಹಿನ್ನೆಲೆ ತಡವಾಗಿ ಪರಮೇಶ್ವರ್​​ ಆಗಮಿಸಿದ್ದು, ಮಾಸ್ಕ್‌ ಹಾಕಿಕೊಂಡು ಬಂದೇ ವೋಟ್​​ ಮಾಡಿದ್ದಾರೆ.

ಯತ್ನಾಳ್​​ ಮತ ಚಲಾವಣೆ ವೇಳೆ ಹೈಡ್ರಾಮಾ

ಇನ್ನು ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್​​ ಮತ ಹಾಕಲು ಬಂದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಯತ್ನಾಳ್‌ ಮತ ಹಾಕಲು ಬಂದಾಗ ಮತಕೇಂದ್ರದಲ್ಲಿದ್ದ ಕಾಂಗ್ರೆಸ್​​ನ ಉಗ್ರಪ್ಪ ಆಕ್ಷೇಪ ತೆಗೆದಿದ್ದು, ಮತ ಹಾಕುವ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಮತವನ್ನು ಮತಪೆಟ್ಟಿಗೆಗೆ ಹಾಕಬೇಡಿ ಎಂದು ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಆದರೆ ಇದನ್ನು ಬಿಜೆಪಿ ಮತಗಟ್ಟೆ ಏಜೆಂಟ್ ಗಳಾದ ಎನ್. ರವಿಕುಮಾರ್ ಮತ್ತು ಕೆ.ಎಸ್. ನವೀನ್ ವಿರೋಧಿಸಿದ್ದು, ಅಂತಿಮವಾಗಿ ಉಗ್ರಪ್ಪ ಆಕ್ಷೇಪವನ್ನು ತಿರಸ್ಕರಿಸಿ ಯತ್ನಾಳ್​​ಗೆ ಮತ ಹಾಕಲು ಚುನಾವಣಾಧಿಕಾರಿ ಅವಕಾಶ ನೀಡಿದ್ದಾರೆ.

ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿದ ಜಿಟಿಡಿ

ಚುನಾವಣಾ ಅಖಾಡಕ್ಕಿಳಿಸಿರುವ ಏಕೈಕ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್​​ ನಾನಾ ಕಸರತ್ತು ನಡುವೆ, ಜಿ.ಟಿ.ದೇವೇಗೌಡ ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿರೋದು ಭಾರಿ ಕುತೂಹಲ ಮೂಡಿಸಿದೆ. ಜಿ.ಟಿ.ದೇವೇಗೌಡ ಮತ ಜೆಡಿಎಸ್​ಗೆ ತಪ್ಪಿರುವ ಸಾಧ್ಯತೆ ಬಗ್ಗೆಯೂ ಲೆಕ್ಕಾಚಾರ ಶುರುವಾಗಿದೆ.

ವ್ಹೀಲ್​​ ಚೇರ್​​ನಲ್ಲಿ ಬಂದ ಕಾಗವಾಡ ಶಾಸಕ

ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಆರೋಗ್ಯ ಸಮಸ್ಯೆಯ ನಡುವೆಯೂ ವ್ಹೀಲ್​​ ಚೇರ್​​ನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ್ತೋರ್ವ ಶಾಸಕ ಇಕ್ಬಾಲ್​​ ಹುಸೇನ್​​ ಕೂಡ ಅನಾರೋಗ್ಯದ ನಡುವೆಯೂ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರೋದು ಗಮನ ಸೆಳೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:32 pm, Thu, 18 June 26

Source link

ಈ ವರ್ಷದಲ್ಲಿ ಸಖತ್ ಏರಿಕೆಯಾಗುತ್ತಾ ಚಿನ್ನದ ಬೆಲೆ; ಜೆಪಿ ಮೋರ್ಗನ್ ವರದಿಯಲ್ಲಿ ಗೋಲ್ಡ್ ಪ್ರೆಡಿಕ್ಷನ್ – Kannada News | Gold Rate to increase by 40pc in next few months, as per JP Morgan forecast report

ನವದೆಹಲಿ, ಜೂನ್ 18: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ (Gold Rates) ಬಹುತೇಕ ಇಳಿಕೆ ಕಾಣುತ್ತಾ ಬಂದಿದೆ. ಬೆಲೆ ಇನ್ನಷ್ಟು ಇಳಿಯಬಹುದು ಎಂದು ಕೆಲವರು ಗ್ರಹಿಸಿದ್ದಾರೆ. ಆದರೆ, ಜೆ.ಪಿ. ಮೋರ್ಗನ್ ಗ್ಲೋಬಲ್ ರಿಸರ್ಚ್ ಸಂಸ್ಥೆಯು ಚಿನ್ನದ ಬೆಲೆ ಏರಿಕೆ ಸಾಧ್ಯತೆ ಬಗ್ಗೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಈ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಚಿನ್ನದ ಬೆಲೆ ಈ ವರ್ಷ ಹಾಗೂ ಮುಂದಿನ ವರ್ಷ ಸತತವಾಗಿ ಏರಿಕೆಯಾಗಬಹುದು ಎನ್ನಲಾಗಿದೆ.

ಜೆ.ಪಿ. ಮೋರ್ಗನ್ ತನ್ನ ವರದಿಯಲ್ಲಿ, 2026ರ ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆಗೆ (2026ರ ಡಿಸೆಂಬರ್) ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ (ounce) ಸರಾಸರಿ $6,000 ತಲುಪಬಹುದು ಎಂದು ಅಂದಾಜಿಸಿದೆ. ಪ್ರಸ್ತುತ $4,300ರ ಮಟ್ಟದಲ್ಲಿರುವ ಚಿನ್ನದ ದರವು ವರ್ಷಾಂತ್ಯದ ವೇಳೆಗೆ ಸುಮಾರು 40% ರಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ. ಅಷ್ಟೇ ಅಲ್ಲ, 2027ರ ಅಂತ್ಯದ ವೇಳೆಗೆ ಇದು $6,300 ಕ್ಕೆ ಏರಬಹುದು ಎಂದೂ ನಿರೀಕ್ಷಿಸಲಾಗಿದೆ.

ಈ ವರ್ಷ ಚಿನ್ನದ ಬೆಲೆ ಏರಿಕೆ ಕಾಣದಿರಲು ಕಾರಣಗಳೇನು?

2025ರಲ್ಲಿ ಚಿನ್ನವು ಭಾರಿ ಜಿಗಿತ (65%) ಕಂಡಿದ್ದರೂ, 2026ರ ಮೊದಲಾರ್ಧದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಇರಾನ್ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಏರಿಕೆಯಾಗಿದ್ದು, ಇದು ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇತ್ತ, ಚಿನ್ನವು ಬಡ್ಡಿ ನೀಡದ ಆಸ್ತಿಯಾದ್ದರಿಂದ ಈ ಹಳದಿ ಲೋಹದ ಮೇಲಿನ ಆಕರ್ಷಣೆ ಕಡಿಮೆಯಾಗಬಹುದು.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 80 ಡಾಲರ್​ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ?

ಇರಾನ್ ಶಾಂತಿ ಒಪ್ಪಂದದ ಪ್ರಭಾವ

ಜೂನ್ 19ರಂದು ನಡೆಯಲಿರುವ ಅಮೆರಿಕ-ಇರಾನ್ ಶಾಂತಿ ಒಪ್ಪಂದವು ಚಿನ್ನದ ಬೆಲೆಗೆ ಒಂದು “ಗೇಮ್ ಚೇಂಜರ್” ಆಗಬಹುದು ಎಂದು ಭಾವಿಸಲಾಗಿದೆ. ಈ ಒಪ್ಪಂದದಿಂದ ತೈಲ ಬೆಲೆಗಳು ಇಳಿಕೆಯಾಗಿ, ಡಾಲರ್ ಮೌಲ್ಯ ಕಡಿಮೆಯಾದರೆ, ಅದು ಚಿನ್ನದ ದರ ಏರಿಕೆಗೆ ಪೂರಕವಾಗಲಿದೆ.

ದೀರ್ಘಕಾಲೀನ ಲಾಭದ ಅಂಶಗಳು

ಜೆ.ಪಿ. ಮೋರ್ಗನ್ ಸಂಶೋಧಕರು ಚಿನ್ನವು ದೀರ್ಘಾವಧಿಯಲ್ಲಿ ಏರಿಕೆ ಕಾಣಲು ಕೆಲವು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ:

  • ನಿರಂತರ ಹಣದುಬ್ಬರ ಮತ್ತು ಕೊಳ್ಳುವ ಶಕ್ತಿಯ ಇಳಿಕೆ
  • ಅಮೆರಿಕದ ವಿತ್ತೀಯ ನೀತಿಯ ಅನಿಶ್ಚಿತತೆ.
  • ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು.
  • ವಿಶ್ವದ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಭಾರತದಲ್ಲಿ ಬೆಲೆ ಇನ್ನೂ ತೀವ್ರ ಏರಿಕೆ?

ಜೆ.ಪಿ. ಮೋರ್ಗನ್ ಸಂಸ್ಥೆಯು ಜಾಗತಿಕ ಚಿನಿವಾರ ಮಾರುಕಟ್ಟೆಯ ದಿಕ್ಕನ್ನು ಗ್ರಹಿಸಿದೆ. ಆದರೆ, ಭಾರತದಲ್ಲಿ ಚಿನ್ನದ ಬೆಲೆ ಮೋರ್ಗನ್ ವರದಿಯ ಅಂದಾಜಿಗಿಂತಲೂ ಹೆಚ್ಚು ಏರಿಕೆ ಆಗಲಿದೆ. ಫಾರೆಕ್ಸ್ ನಿಧಿಯನ್ನು ಉಳಿಸುವ ಸಲುವಾಗಿ ಸರ್ಕಾರವು ಚಿನ್ನದ ಖರೀದಿಯನ್ನು ಕಡಿಮೆ ಮಾಡಿದೆ. ಒಂದು ವೇಳೆ, ಜನಸಾಮಾನ್ಯರು ಚಿನ್ನದ ಖರೀದಿ ಕಡಿಮೆ ಮಾಡದೇ ಹೋದರೆ ಅವಶ್ಯಕ ಚಿನ್ನದ ಕೊರತೆಯಿಂದ ಅದರ ಬೆಲೆ ಭರ್ಜರಿ ಏರಿಕೆ ಆದರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ದಿನ ಒಂದೇ ರೀತಿಯ ಅಪರೂಪದ ದಾಖಲೆ ಬರೆದ ಭಾರತ, ಪಾಕ್ ಆಟಗಾರ್ತಿಯರು – Kannada News | Shafali Verma and Fatima Sana Make T20 World Cup History with Rare All Round Record

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಭಾರತ ಹಾಗೂ ಪಾಕಿಸ್ತಾನ (India Pakistan) ತಂಡಗಳು ಒಂದೇ ದಿನ ಕಣಕ್ಕಿಳಿದಿದ್ದವು. ಆದರೆ ಈ ಎರಡೂ ತಂಡಗಳು ಬೇರೆ ಬೇರೆ ತಂಡಗಳ ವಿರುದ್ಧ ಪಂದ್ಯಗಳನ್ನಾಡಿದವು. ಮೊದಲಿಗೆ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ತಂಡವನ್ನು 95 ರನ್​ಗಳಿಂದ ಸೋಲಿಸಿ ದಾಖಲೆಯ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಒಂದೆಡೆ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇನ್ನೊಂದೆಡೆ ಪಾಕಿಸ್ತಾನ ಸತತ ಎರಡು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಆದಾಗ್ಯೂ ಭಾರತ ಹಾಗೂ ಪಾಕಿಸ್ತಾನ ತಂಡದ ಇಬ್ಬರು ಆಟಗಾರ್ತಿಯರು ಒಂದೇ ದಿನ ಒಂದೇ ರೀತಿಯ ಪ್ರದರ್ಶನವನ್ನು ನೀಡುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಸ್ಟಾರ್ ಓಪನರ್ ಶಫಾಲಿ ವರ್ಮಾ ಮತ್ತು ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ತಮ್ಮ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ವಿಶ್ವ ಕ್ರಿಕೆಟ್ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಇದುವರೆಗೆ ವಿಶ್ವದ ಕೇವಲ ನಾಲ್ಕು ಮಹಿಳಾ ಆಟಗಾರ್ತಿಯರಿಗೆ ಮಾತ್ರ ಸಾಧ್ಯವಾದ ಅಪರೂಪದ ದಾಖಲೆಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

50+ ರನ್ ಜೊತೆಗೆ 3ವಿಕೆಟ್

ಜೂನ್ 17 ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 38 ಎಸೆತಗಳಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ನೆರವಾದರು. ನಂತರ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿದ ಶಫಾಲಿ ಎದುರಾಳಿ ತಂಡದ 3 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಅದ್ಭುತ ಪ್ರದರ್ಶನದೊಂದಿಗೆ, ಶಫಾಲಿ ವರ್ಮಾ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೆ ಭಾರತದ ಪರ ಈ ಅಪರೂಪದ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯೂ ಶಫಾಲಿ ಪಾಲಾಯಿತು.

ಪಾಕ್ ನಾಯಕಿಯಿಂದಲೂ ಅಮೋಘ ಪ್ರದರ್ಶನ

ಭಾರತದ ಪಂದ್ಯ ಮುಗಿದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನವು ಅದೇ ದಿನದಂದು ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ಈ ಪಂದ್ಯದಲ್ಲಿ, ಪಾಕಿಸ್ತಾನದ ಮಹಿಳಾ ನಾಯಕಿ ಫಾತಿಮಾ ಸನಾ ಕೂಡ ಬ್ಯಾಟಿಂಗ್‌ನಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡಿ ನಂತರ ಬೌಲಿಂಗ್​ನಲ್ಲಿ 3 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಫಾತಿಮಾ ಸನಾ ಕೂಡ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ದಾಖಲೆ ಬರೆದರು. ಇದರ ಜೊತೆಗೆ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Womens T20 World Cup 2026: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ

ಪಟ್ಟಿಯಲ್ಲಿ ಕೇವಲ ನಾಲ್ಕು ಆಟಗಾರ್ತಿಯರು

ಮಹಿಳಾ ಟಿ20 ವಿಶ್ವಕಪ್‌ನ ಸುದೀರ್ಘ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ 50 ಕ್ಕೂ ಹೆಚ್ಚು ರನ್ ಗಳಿಸಿ, 3 ವಿಕೆಟ್‌ಗಳನ್ನು ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ. ಶಫಾಲಿ ವರ್ಮಾ ಮತ್ತು ಫಾತಿಮಾ ಸನಾ ಅವರಿಗೂ ಮೊದಲು, ವಿಶ್ವ ಕ್ರಿಕೆಟ್‌ನಲ್ಲಿ ಇಬ್ಬರು ಮಹಿಳಾ ಆಟಗಾರ್ತಿಯರು ಮಾತ್ರ ಈ ಸಾಧನೆ ಮಾಡಿದ್ದರು. ಅವರಲ್ಲಿ, ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ಸನ್ ಲೂಯಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಈಗ, ಭಾರತದ ಶಫಾಲಿ ಮತ್ತು ಪಾಕಿಸ್ತಾನದ ಫಾತಿಮಾ ಸೇರ್ಪಡೆಯೊಂದಿಗೆ, ಈ ವಿಶೇಷ ಕ್ಲಬ್‌ನ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಷ್ಯಾ ಖಂಡದ ಇಬ್ಬರು ಆಟಗಾರ್ತಿಯರೇ ಒಂದೇ ದಿನ ಈ ದಾಖಲೆ ನಿರ್ಮಿಸಿದ್ದಾರೆ ಎಂಬುದು ಗಮನಾರ್ಹ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:26 pm, Thu, 18 June 26

Source link