ಪ್ಲಾಸ್ಟಿಕ್ ಶೀಟ್ ಹೊದಿಸಿದ ಶೆಡ್ನಲ್ಲಿ ಕೊಡಗು ಪ್ರವಾಹ ಸಂತ್ರಸ್ತರುImage Credit source: tv9
ಮಡಿಕೇರಿ, ಜೂನ್ 3: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ಕೊಡಗು (Kodagu) ಜಿಲ್ಲೆಯ ನಿವಾಸಿಗಳಲ್ಲಿ, ಅದರಲ್ಲೂ ಕುಶಾಲನಗರ ಭಾಗದಲ್ಲಿ ಜಲಪ್ರಳಯದ ಕರಾಳ ನೆನಪುಗಳು ಮತ್ತೆ ನಡುಕ ಹುಟ್ಟಿಸಿವೆ. ನದಿತೀರದ ಗ್ರಾಮಸ್ಥರಿಗೆ ವರ್ಷದ 365 ದಿನಗಳೂ ಕಾಡುಪ್ರಾಣಿಗಳ ಉಪಟಳ ಒಂದೆಡೆಯಾದರೆ, ಮುಂಗಾರು ಮಳೆ ಚುರುಕಾಗುತ್ತಿದ್ದಂತೆಯೇ ಉಕ್ಕಿ ಹರಿಯುವ ಕಾವೇರಿ ನದಿ ತಮ್ಮ ಬದುಕನ್ನು ಎಲ್ಲಿ ಕಸಿದುಕೊಳ್ಳುತ್ತದೋ ಎಂಬ ಜೀವಭಯ ಮತ್ತೊಂದೆಡೆ ಕಾಡುತ್ತಿದೆ. ಸುರಕ್ಷಿತ ಜಾಗದಲ್ಲಿ ಆಶ್ರಯ ಕಲ್ಪಿಸಿಕೊಡಿ ಎಂದು ಈ ಭಾಗದ ನಿರಾಶ್ರಿತರು ವರ್ಷಗಳಿಂದ ಅದೆಷ್ಟು ಚೀರಿಕೊಂಡರೂ, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಾತ್ರ ಇವರ ಕರುಣಾಜನಕ ಕೂಗು ಕೇಳಿಸುತ್ತಲೇ ಇಲ್ಲ.
ಮುಖ್ಯಾಂಶಗಳು
2018ರ ಮಹಾಪ್ರವಾಹದಲ್ಲಿ ಮನೆ ಕಳೆದುಕೊಂಡು ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸಿಸುತ್ತಿರುವ ನದಿತೀರದ ನೂರಾರು ಕುಟುಂಬಗಳು.
ಸಂತ್ರಸ್ತರ ಪುನರ್ವಸತಿಗಾಗಿ ಅಭ್ಯತ್ ಮಂಗಳ ಗ್ರಾಮದಲ್ಲಿ 7 ಎಕರೆ ಜಾಗ ಗುರುತಿಸಿದರೂ 7 ವರ್ಷಗಳಿಂದ ಅನುಷ್ಠಾನಗೊಳ್ಳದ ವಸತಿ ಯೋಜನೆ.
ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಸಮನ್ವಯದ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದ ಸರ್ಕಾರದ ಆಶ್ರಯ ಯೋಜನೆ.
ಬೀದಿಗೆ ಬಿದ್ದ ಹೊಳೆಯಂಚಿನ ಬದುಕು: ಆಡಳಿತದ ನಿರ್ಲಕ್ಷ್ಯ
2018 ಮತ್ತು ತದನಂತರದ ಪ್ರವಾಹದ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕಿನ ಸಿದ್ದಾಪುರ, ನೆಲ್ಲಿಹುದಿಕೇರಿ, ಕರಡಿಗೋಡು, ಕುಂಬಾರಗುಂಡಿ ಹಾಗೂ ನಲ್ವತ್ತೆಕರೆ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ನಿವಾಸಿಗಳು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸಂಪೂರ್ಣ ನಿರಾಶ್ರಿತರಾಗಿದ್ದರು. ಅಕ್ಷರಶಃ ಬೀದಿಗೆ ಬಿದ್ದಿದ್ದ ಈ ಸಂತ್ರಸ್ತರ ಪೈಕಿ ಕಾವೇರಿ ನದಿ ತಟದಲ್ಲಿ ವಾಸವಿದ್ದ ಸುಮಾರು 140 ಜನರಿಗೆ ಪರ್ಯಾಯ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಇದೇ ತಾಲ್ಲೂಕಿನ ಅಭ್ಯತ್ ಮಂಗಳ ಸಮೀಪ 7 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿತ್ತು.
ತಮಗೂ ಸ್ವಂತ ಭೂಮಿ ಸಿಗುತ್ತದೆ, ಮನೆ ಕಟ್ಟಲು ಹಣ ಸಿಗುತ್ತದೆ ಎಂದು ಸಂತ್ರಸ್ತರು ಆಸೆಯಿಂದ ಕಾಯುತ್ತಿದ್ದಾರೆ. ಆದರೆ, ಈ ಭರವಸೆ ನೀಡಿ ಏಳು ವರ್ಷಗಳಾಗುತ್ತಾ ಬಂದರೂ ಇದುವರೆಗೆ ಸಂತ್ರಸ್ತರಿಗೆ ಭೂಮಿಯೂ ಸಿಕ್ಕಿಲ್ಲ, ಹಣವೂ ಮಂಜೂರಾಗಿಲ್ಲ. ಇದರ ನಡುವೆ ಸ್ಥಳೀಯಾಡಳಿತವು ನದಿ ತೀರದ ಜನರಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲು ಸಜ್ಜಾಗಿರುವುದು ಇವರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಲಾಖೆಗಳ ಮುನಿಸು; ಜನರ ಬದುಕು ಅತಂತ್ರ
ಈ ಕುರಿತು ಅಳಲು ತೋಡಿಕೊಂಡಿರುವ ಸಂತ್ರಸ್ತೆ ರುಕ್ಮಿಣಿ, ‘ಪ್ರತಿ ವರ್ಷ ಮಳೆಗಾಲ ಬಂದಾಗ ನಾವು ಮನೆ ಬಿಟ್ಟು ಎಲ್ಲೆಲ್ಲೋ ಕಂಡವರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದರಿಂದ ಮಕ್ಕಳ ಶಿಕ್ಷಣ, ನಿತ್ಯದ ಕೆಲಸ ಕಾರ್ಯಗಳೆಲ್ಲವೂ ಏರುಪೇರಾಗುತ್ತವೆ. ಮಳೆ ಕಡಿಮೆಯಾಗಿ ವಾಪಸ್ ಬರುವಷ್ಟರಲ್ಲಿ ನಮ್ಮ ಮನೆಗಳು ಕುಸಿಯುವ ಹಂತ ತಲುಪಿರುತ್ತವೆ’ ಎಂದು ಕಣ್ಣೀರಿಟ್ಟಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್ ಮಾತನಾಡಿ, ‘ಇವರೆಲ್ಲರೂ ಕಳೆದ 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಮಾನವೀಯ ಉದ್ದೇಶದಿಂದ ಇವರನ್ನು ತೆರವುಗೊಳಿಸಿ ಹೊಸ ಜಾಗ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ಕಳೆದ ಸರ್ಕಾರದ ಅವಧಿಯಲ್ಲೂ ಇವರನ್ನು ನಿರ್ಲಕ್ಷಿಸಲಾಯಿತು. ಈಗಿನ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಭೂಮಿ ನೀಡಲು ಮೀನ-ಮೇಷ ಎಣಿಸುತ್ತಿದೆ. ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಹೊಂದಾಣಿಕೆ ಕೊರತೆಯೇ ಈ ಯೋಜನೆ ನೆನೆಗುದಿಗೆ ಬೀಳಲು ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆ ಮಳೆಗಾಲದ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಈ ಜನರ ಅತಂತ್ರ ಬದುಕು ಮತ್ತೆ ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದು ಐಪಿಎಲ್ 2026 ರ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈಗಲೇ 2027 ರ ಸೀಸನ್ ಮೇಲೆ ಕಣ್ಣಿಟ್ಟಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ಭರ್ಜರಿ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡಿದ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೋ ಬೊಬಾಟ್ ಇತಿಹಾಸ ಸೃಷ್ಟಿಸುವ ಹೊಸ ಗುರಿಯನ್ನು ತಂಡದ ಮುಂದೆ ಇಟ್ಟಿದ್ದಾರೆ.
ಆರ್‌ಸಿಬಿ ಮುನ್ನುಡಿ:
ಗೆಲುವಿನ ಖುಷಿಯಲ್ಲಿದ್ದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮೋ ಬೊಬಾಟ್, “ನಾನು ಕೊನೆಯದಾಗಿ ಒಂದು ಮಾತು ಹೇಳಲು ಬಯಸುತ್ತೇನೆ, ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಯಾವ ತಂಡವೂ ಸತತ ಮೂರು ಬಾರಿ ಟ್ರೋಫಿ ಗೆದ್ದಿಲ್ಲ… ಕ್ಯಾಪ್ಟನ್, ನಿಮ್ಮ ಪ್ರಕಾರ ಏನಂತೀರಾ? ಮುಂದಿನ ವರ್ಷ ಮೂರನೇ ಟ್ರೋಫಿ ಗೆಲ್ಲೋಣವಾ?” ಎಂದು ಸವಾಲು ಎಸೆದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನಾಯಕ ರಜತ್ ಪಾಟಿದಾರ್, “ಖಂಡಿತವಾಗಿಯೂ ಗೆಲ್ಲಲಿದ್ದೇವೆ!” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು.
ಈ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಸೀಸನ್ಗಾಗಿ ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯೊಂದಿಗೆ ಐಪಿಎಲ್ 2027 ರಲ್ಲಿ ಆರ್‌ಸಿಬಿ ಪಡೆ ಕಣಕ್ಕಿಳಿಯಲಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ಹೊಸ ಇತಿಹಾಸ ಬರೆಯಲು ಯೋಜನೆ ಹಾಕಿಕೊಂಡಿದ್ದಾರೆ.
ಬೊಬಾಟ್ ಬೊಂಬಾಟ್ ಪ್ಲ್ಯಾನ್:
ಮೊ ಬೊಬಾಟ್ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆಟಗಾರರಿಗೆ ಹೊಸ ಗುರಿಯ ಸ್ಪಷ್ಟ ಸಂದೇಶ ನೀಡುತ್ತಿರುವುದು ಇದು ಮೊದಲೇನಲ್ಲ. 2025 ರಲ್ಲಿ ಆರ್‌ಸಿಬಿ ತಂಡ ಟ್ರೋಫಿ ಗೆದ್ದಾಗಲೂ ಕೊನೆಯ ಡ್ರೆಸ್ಸಿಂಗ್ ರೂಮ್ ಸಂಭಾಷಣೆಯಲ್ಲಿ ಬೊಬಾಟ್ ತಮ್ಮ ಮುಂದಿನ ಗುರಿಯನ್ನು ಒತ್ತಿ ಹೇಳಿದ್ದರು.
ಈ ವೇಳೆ ಮಾತನಾಡಿದ ಮೊ ಬೊಬಾಟ್ “ಇದು ಕೇವಲ ಆರಂಭ ಅಷ್ಟೇ. ಐಪಿಎಲ್ ಇತಿಹಾಸದಲ್ಲಿ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದ ತಂಡಗಳು ಬಹಳ ಕಮ್ಮಿ. ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಹಾಗೆ ನಡೆದಿದೆ. ಮುಂದಿನ ವರ್ಷ ಬೆಂಗಳೂರಿನಲ್ಲೇ ಫೈನಲ್ ಇರಲಿದೆ, ನಾವು ಮತ್ತೊಮ್ಮೆ ಗೆಲ್ಲಲಿದ್ದೇವೆ. ಆದ್ದರಿಂದ ಈ ಗೆಲುವಿನ ಅಮಲನ್ನು ಇಂದಿನ ರಾತ್ರಿಯೇ ಮೈಗೂಡಿಸಿಕೊಳ್ಳಿ, ಏಕೆಂದರೆ ಇದೇ ಹಸಿವು ಮುಂದಿನ ವರ್ಷವೂ ನಮ್ಮನ್ನು ಮುನ್ನಡೆಸುತ್ತದೆ.” ಎಂದಿದ್ದರು.
ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಕಳೆದ ಬಾರಿಯ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಈ ಬಾರಿ ರಣ ಉತ್ಸಾಹದಲ್ಲಿ ಪಂದ್ಯವಾಡಿದ್ದರು. ಅಷ್ಟೇ ಅಲ್ಲದೆ ಫೈನಲ್ ಮ್ಯಾಚ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎರಡನೇ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಮತ್ತೊಮ್ಮೆ ಹ್ಯಾಟ್ರಿಕ್ ಟ್ರೋಫಿಯ ಕನಸು ಬಿತ್ತಿ ಮೊ ಬೊಬಾಟ್ ಐಪಿಎಲ್ ಕೊನೆಗೊಳಿಸಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ಆರ್‌ಸಿಬಿ ಹ್ಯಾಟ್ರಿಕ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.
ಬಾಗಲಕೋಟೆ, ಜೂನ್ 03: ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 13.34 ಲಕ್ಷ ರೂಪಾಯಿ ಮೌಲ್ಯದ ಕಳುವಾಗಿದ್ದ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಾಂಶಗಳು
ಮಹಾಲಿಂಗಪುರ ಪೊಲೀಸರಿಂದ 13.34 ಲಕ್ಷ ರೂಪಾಯಿ ಮೌಲ್ಯದ ಭರ್ಜರಿ ಮಾಲು ರಿಕವರಿ.
ಸಿಇಐಆರ್ ಪೋರ್ಟಲ್ ಮೂಲಕ ಕಳುವಾಗಿದ್ದ 30 ಮೊಬೈಲ್ ಫೋನ್‌ಗಳ ಯಶಸ್ವಿ ಪತ್ತೆ.
ಪೊಲೀಸ್ ಸಿಬ್ಬಂದಿಯ ಭರ್ಜರಿ ಕಾರ್ಯಕ್ಷಮತೆಗೆ ಎಸ್‌ಪಿ ಸಿದ್ದಾರ್ಥ ಗೋಯಲ್ ಬಹುಮಾನ ಘೋಷಣೆ.
13 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಸ್ವತ್ತು
ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2025-26ನೇ ಸಾಲಿನಲ್ಲಿ ಸಾರ್ವಜನಿಕರ ಮನೆ ಹಾಗೂ ವಿವಿಧೆಡೆ ಕಳುವಾಗಿದ್ದ ಒಟ್ಟು 62 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದರ ಅಂದಾಜು ಮೌಲ್ಯ 9 ಲಕ್ಷದ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದರೊಂದಿಗೆ, ಸಾರ್ವಜನಿಕರು 2026ನೇ ಸಾಲಿನಲ್ಲಿ ಕಳೆದುಕೊಂಡಿದ್ದ 30 ದುಬಾರಿ ಮೊಬೈಲ್ ಫೋನ್‌ಗಳನ್ನು ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ತಡೆ ಉಪಕ್ರಮವಾದ ಸಿ ಇ ಐ ಆರ್ (CEIR) ಪೋರ್ಟಲ್ ತಂತ್ರಜ್ಞಾನದ ಮುಖಾಂತರ ಯಶಸ್ವಿಯಾಗಿ ಟ್ರ್ಯಾಕ್ ಮಾಡಿ ರಿಕವರಿ ಮಾಡಲಾಗಿದೆ. ಜಪ್ತಿ ಮಾಡಲಾದ ಈ ಮೊಬೈಲ್‌ಗಳ ಒಟ್ಟು ಮೌಲ್ಯ 4 ಲಕ್ಷದ 19 ಸಾವಿರ ರೂಪಾಯಿಗಳಾಗಿವೆ. ಇವೆರಡೂ ಸೇರಿ ಒಟ್ಟು 13,34,000 ರೂ. ಮೌಲ್ಯದ ಸಾರ್ವಜನಿಕರ ಸ್ವತ್ತನ್ನು ಪೊಲೀಸರು ಮೂಲ ಮಾಲೀಕರಿಗೆ ಮರಳಿ ತಲುಪಿಸಲು ಕ್ರಮ ಕೈಗೊಂಡಿದ್ದಾರೆ.
ತಂತ್ರಜ್ಞಾನದ ಸಮರ್ಪಕ ಬಳಕೆ ಹಾಗೂ ಸಮಯಪ್ರಜ್ಞೆಯಿಂದ ಕಳ್ಳರನ್ನು ಪತ್ತೆಹಚ್ಚಿ, ಮಾಲನ್ನು ವಶಪಡಿಸಿಕೊಂಡ ಮಹಾಲಿಂಗಪುರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಇಡೀ ತಂಡಕ್ಕೆ ಸೂಕ್ತ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ಘೋಷಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ ಶುರುವಾಗಿದ್ದು, ಅವರೊಂದಿಗೆ ಇನ್ನುಳಿದ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಡಾ. ಜಿ.ಪರಮೇಶ್ವರ್ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಪ್ರದಗ್ರಹ ಮಾಡಲಿದ್ದಾರೆ. ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ರಾಜ್ಯ ನಾಯಕರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದ್ದು, ದಲಿತ ಪರಮೇಶ್ವರ್ ಅವರನ್ನು ಮಾತ್ರ ಡಿಸಿಎಂ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಇನ್ನುಳಿಂದತೆ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಡಿ.ಕೆ.ಶಿವಕುಮಾರ್ -ಸಿಎಂ, ಡಾ.ಜಿ.ಪರಮೇಶ್ವರ್-ಡಿಸಿಎಂ, ಸತೀಶ್ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಹೆಸರು ಮೊದಲ ಪಟ್ಟಿಯಲ್ಲಿದ್ದಾರೆ. ಇನ್ನು ಮೊದಲ ಪಟ್ಟಿಯಲ್ಲಿ ಹಲವು ಘಟಾನುಘಟಿ ನಾಯಕರಿಗೆ ಸ್ಥಾನ ಸಿಕ್ಕಿಲ್ಲ.
ಒಕ್ಕಲಿಗರ ಕೋಟಾದಲ್ಲಿ ಡಿ.ಕೆ.ಶಿವಕುಮಾರ್ ಸೇರಿ ಮೂವರಿಗೆ ಸ್ಥಾನ ನೀಡಲಾಗಿದ್ದರೆ, ಲಿಂಗಾಯತ ಕೋಟಾದಲ್ಲಿ ಮೂವರು, ದಲಿತ ಕೋಟಾದಡಿ ಪರಮೇಶ್ವರ್ ಸೇರಿ ಮೂವರು, ಕುರುಬ ಸಮುದಾಯದಡಿ ಇಬ್ಬರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ಇನ್ನು ಎಸ್ಟಿ, ಮುಸ್ಲಿಮ್, ಕ್ರಿಶ್ಚಿಯನ್ ಕೋಟಾದಡಿ ತಲಾ ಒಬ್ಬರಿಗೆ ಸ್ಥಾನ ನೀಡಲಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮುಕ್ತಾಯದ ಬೆನ್ನಲ್ಲೇ ಸನ್ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಆಘಾತ ಎದುರಾಗಿದೆ. ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮುಂದಿನ ಸೀಸನ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎಂಬ ವರದಿ ಹೊರಬಿದ್ದಿದೆ.
ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಪ್ಯಾಟ್ ಕಮಿನ್ಸ್ ಐಪಿಎಲ್ 2027ರ ಟೂರ್ನಿಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.
ಮುಂದಿನ 18 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಮೆಲ್ಬೋರ್ನ್‌ನಲ್ಲಿ 150ನೇ ವರ್ಷದ ಐತಿಹಾಸಿಕ ಟೆಸ್ಟ್, ಆಶಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್‌ನಂತಹ ಸರಣಿಗಳನ್ನು ಆಡಬೇಕಿದೆ.
ಈ ಬಗ್ಗೆ ಸಿಡ್ನಿ ಹೆರಾಲ್ಡ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, “ಮುಂದಿನ ವರ್ಷದ ಯಾವುದಾದರೂ ಒಂದು ಹಂತದಲ್ಲಿ ಯಾವುದಕ್ಕಾದರೂ ಬ್ರೇಕ್ ನೀಡಲೇಬೇಕಾಗುತ್ತದೆ. ಆದರೆ ಅದು ಖಂಡಿತವಾಗಿಯೂ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್ ಪಂದ್ಯಗಳಂತೂ ಅಲ್ಲ” ಎಂದು ನೇರವಾಗಿ ಹೇಳಿದ್ದಾರೆ.
ಅಲ್ಲದೆ ” ಐಪಿಎಲ್ ಟೂರ್ನಿ ಹತ್ತಿರ ಬಂದಾಗ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಫ್ರಾಂಚೈಸಿ (SRH) ಜೊತೆಗೂ ಮಾತನಾಡಿ ಯಾವುದು ಸೂಕ್ತವೋ ಹಾಗೆ ಮಾಡುತ್ತೇನೆ” ಎಂದು ಇದೇ ವೇಳೆ ಕಮಿನ್ಸ್ ತಿಳಿಸಿದ್ದಾರೆ.
ಈ ಮೂಲಕ ಫ್ರಾಂಚೈಸಿ ಲೀಗ್‌ಗಳಿಗಿಂತ ತಮಗೆ ದೇಶದ ಪರ ಆಡುವ ಟೆಸ್ಟ್ ಪಂದ್ಯಗಳು ಮತ್ತು ಐಸಿಸಿ ಟೂರ್ನಿಗಳೇ ಮೊದಲ ಆದ್ಯತೆ ಎಂದು ಪ್ಯಾಟ್ ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್ ಸೀಸನ್-19ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲದೆ ಸನ್ರೈಸರ್ಸ್ ಹೈದರಾಬಾದ್ ಪರ ಈ ಬಾರಿ ಕೇವಲ 8 ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು.
ಇತ್ತ ಕಮಿನ್ಸ್ ಅಲಭ್ಯತೆಯ ನಡುವೆ ಮೊದಲ 7 ಪಂದ್ಯಗಳಲ್ಲಿ ಇಶಾನ್ ಕಿಶನ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ತಂಡವನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಸೀಸನ್ನಲ್ಲಿ ಪ್ಯಾಟ್ ಕಮಿನ್ಸ್ ಅಲಭ್ಯರಾದರೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ: ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ
ಕನಕಪುರದ ಬಂಡೆ, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ (DK Shivakumar), ಇದೀಗ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಬರೆದಿದ್ದಾರೆ. ಕಾಲೇಜಿನಲ್ಲೇ ರಾಜಕೀಯ ರಂಗಕ್ಕೆ ಧುಮುಕಿದ ಇವರ 45 ವರ್ಷಗಳ ಸುದೀರ್ಘ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಉದ್ಯಮ ಹಾಗೂ ರಾಜಕಾರಣ ಎರಡರಲ್ಲೂ ಕಠಿಣ ಪರಿಶ್ರಮದಿಂದಲೇ ಸಾಮ್ರಾಜ್ಯ ಕಟ್ಟಿದ ಡಿಕೆಶಿ, ಇಂದು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನು ಅಲಂಕರಿಸುವ ಮೂಲಕ ಕಾಂಗ್ರೆಸ್‌ನ ಧೀಮಂತ ನಾಯಕನಾಗಿ ಹೊರಹೊಮ್ಮಿದ್ದಾರೆ. ಡಿ.ಕೆ ಶಿವಕುಮಾರ್ ಜೀವನ ಜೀವನದ ಸಣ್ಣ ಚಿತ್ರಣ ಇಲ್ಲಿದೆ.
ಕೌಟುಂಬಿಕ ಹಿನ್ನೆಲೆ
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಮೇ 15, 1962 ರಂದು ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ ಅವರು ಸದ್ಯ ಸ್ನಾತಕೋತ್ತರ ಪದವೀಧರರಾಗಿದ್ದು, ರಾಜಕಾರಣ ಹಾಗೂ ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ಕೌಟುಂಬಿಕ ಹಿನ್ನೆಲೆಯನ್ನು ನೋಡುವುದಾದರೆ, ಇವರಿಗೆ ಡಿ.ಕೆ.ಸುರೇಶ್ ಎಂಬ ಓರ್ವ ಸಹೋದರ ಮತ್ತು ಒಬ್ಬರು ಸಹೋದರಿ ಇದ್ದಾರೆ. ಇನ್ನು ಶಿವಕುಮಾರ್ ಅವರಿಗೆ ಐಶ್ವರ್ಯ, ಆಭರಣಾ ಹಾಗೂ ಆಕಾಶ್ ಎಂಬ ಮೂವರು ಮಕ್ಕಳಿದ್ದಾರೆ.
ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ರಾಮನಗರ ಜಿಲ್ಲೆಗೆ ಒಂದು ವಿಶೇಷ ಹೆಮ್ಮೆಯಿದೆ. ಈ ಹಿಂದೆ ಇದೇ ಜಿಲ್ಲೆಯಿಂದ ನಾಲ್ವರು ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಕೆಂಗಲ್ ಹನುಮಂತಯ್ಯ ಮೊದಲ ಮುಖ್ಯಮಂತ್ರಿ, ದೇವೇಗೌಡ ದ್ವಿತೀಯ ಹಾಗೂ ಕುಮಾರ ಸ್ವಾಮಿ ಮೂರನೇಯವರಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಅವರು ಆ ಸಾಲಿಗೆ ಸೇರ್ಪಡೆಯಾಗುವ ಮೂಲಕ ಜಿಲ್ಲೆಯಿಂದ ಸಿಎಂ ಗದ್ದುಗೆಗೇರಿದ ನಾಲ್ಕನೇ ಮುಖ್ಯಮಂತ್ರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಚಟುವಟಿಕೆ
ಡಿಕೆಶಿ ಅವರು ತಮ್ಮ 18ನೇ ವಯಸ್ಸಿನಲ್ಲಿಯೇ ಎನ್‌ಎಸ್‌ಯುಐ ಸೇರಿ 1981-83ರ ತನಕ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಿನಿಂದಲೇ ರಾಜಕೀಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿಕೆಶಿ, ಬೆಂಗಳೂರಿನ ಆರ್.ಸಿ.ಕಾಲೇಜಿನಲ್ಲಿ ಓದುವಾಗ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ದೇವೇಗೌಡರ ವಿರುದ್ಧ ಮೊದಲ ಫೈಟ್
1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ.ದೇವೇಗೌಡರ ವಿರುದ್ಧ ಚುನಾವಣಾ ಕಣಕ್ಕಿಳಿದರು. ಪ್ರಬಲ ಪೈಪೋಟಿ ನೀಡಿದ ಡಿ.ಕೆ.ಶಿವಕುಮಾರ್, ದೇವೇಗೌಡರು ಪ್ರಯಾಸದ ಗೆಲುವು ಪಡೆಯುವಂತೆ ಮಾಡಿದರು. 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ದ್ದ ಜೆಡಿಎಸ್ ಪ್ರಭಾವವನ್ನು ಕಡಿಮೆಗೊಳಿಸಿದರು.
ಬಂಗಾರಪ್ಪ ಸಂಪುಟದಿಂದ ಎಸ್.ಎಂ. ಕೃಷ್ಣ ಸರ್ಕಾರದವರೆಗಿನ ಪಯಣ
1991ರಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಡಿ.ಕೆ.ಶಿವಕುಮಾರ್ ಮಹತ್ವದ ಪಾತ್ರವಹಿಸಿದ್ದರು. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಹೊಣೆಯನ್ನು ಅವರಿಗೆ ನೀಡಲಾಯಿತು. 1994ರ ಚುನಾವಣೆಯಲ್ಲಿ ಕೆಲವು ನಾಯಕರ ಪಿತೂರಿ ಕಾರಣ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಆಯ್ಕೆಯಾದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಇಲ್ಲವಾಯಿತು. ಆಗ ಕನಕಪುರ ಕ್ಷೇತ್ರಕ್ಕೆ ಬಂದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಕನಕಪುರದಿಂದ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ಡಿ.ಕೆ.ಶಿವಕುಮಾರ್‌ಗೆ ಸುಲಭವಾಗಿ ಸಚಿವ ಸ್ಥಾನ ಸಿಗಲಿಲ್ಲ. ಅಂತಿಮವಾಗಿ ಹೈಕಮಾಂಡ್ ಒಪ್ಪಿದ ಮೇಲೆ ಸಂಪುಟ ಸೇರಿ ಇಂಧನ ಖಾತೆ ವಹಿಸಿಕೊಂಡರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು. 2023 ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರೊಂದಿಗೆ ಜಲ ಸಂಪನ್ಮೂಲ ಇಲಾಖೆ ಸಚಿವರಾಗಿದ್ದರು.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಡಿ.ಕೆ.ಶಿವಕುಮಾರ್ ಪಕ್ಷ ವಹಿಸಿದ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡರು. 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದರು. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ.ಶಿವಕುಮಾರ್ ಬಂಧನವಾಯಿತು. ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಿದ್ದರು ಎಂಬುದು ವಿಶೇಷ.
ಎಂಟನೇ ಗೆಲುವು
ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಇದು ಸತತ ಎಂಟನೇ ಗೆಲುವು. 1985ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್.ಡಿ.ದೇವೇಗೌಡರ ಎದುರು ಸೋಲು ಕಂಡಿದ್ದ ಡಿಕೆಶಿ 1989ರಿಂದ 2004ರವರೆಗೆ ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಸತತವಾಗಿ ಆಯ್ಕೆ ಆಗಿದ್ದಾರೆ. 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಸಾತನೂರು ಕ್ಷೇತ್ರವು ಕನಕಪುರ ಕ್ಷೇತ್ರದಲ್ಲಿ ವಿಲೀನ ಆಗಿದ್ದು, ಕನಕಪುರಕ್ಕೆ ವಲಸೆ ಬಂದ ಶಿವಕುಮಾರ್ ಇಲ್ಲೂ ಗೆಲುವಿನ ಓಟ ಮುಂದುವರಿಸಿದ್ದಾರೆ. 2008ರಿಂದ ಈವರೆಗೆ ಕನಕಪುರದಲ್ಲಿ ಅವರನ್ನು ಮಣಿಸಲು ಯಾರಿಗೂ ಸಾಧ್ಯವಾಗಿಲ್ಲ.
ವಿರೋಧಿಗಳೇ ಇಲ್ಲ
ಇನ್ನು ಕನಕಪುರ ಕ್ಷೇತ್ರದಲ್ಲಿ ಡಿಕೆಶಿಗೆ ವಿರೋಧಿಗಳೇ ಇಲ್ಲವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್ ಅವರನ್ನು ತವರಿನಲ್ಲಿ ಕಟ್ಟಿಹಾಕಬೇಕು ಎನ್ನುವ ಬಿಜೆಪಿಯ ತಂತ್ರ ಫಲ ನೀಡಿಲ್ಲ. ಅರುಣ್ ಸಿಂಗ್, ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಪಕ್ಷದ ರಾಷ್ಟ್ರೀಯ ರಾಜ್ಯ ಮಟ್ಟದ ನಾಯಕರು ಬಂದು ಪ್ರಚಾರ-ತಂತ್ರಗಾರಿಕೆ ನಡೆಸಿದರೂ ಗೆಲುವಿನ ಸಮೀಪಕ್ಕೆ ಹೋಗಲು ಆಗಿಲ್ಲ. ನಾಮಪತ್ರ ಸಲ್ಲಿಸಿ ಪ್ರಚಾರವನ್ನೇ ಮಾಡದೇ ಭಾರಿ ಅಂತರದಲ್ಲಿ ಗೆಲ್ಲುವ ಮೂಲಕ ಶಿವಕುಮಾರ್ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಕಾಂಗ್ರೆಸ್ ಒಳಗೂ ಅವರ ಪ್ರತಿಷ್ಠೆ ಹೆಚ್ಚಾಗುವಂತೆ ಮಾಡಿದೆ. ಪಿಜಿಆರ್ ಸಿಂಧ್ಯಾ, ಡಿ.ಎಂ.ವಿಶ್ವನಾಥ್, ನಾರಾಯಣ ಗೌಡ ಸೇರಿದಂತೆ ಹಿಂದಿನ ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿಗಳನ್ನೆಲ್ಲ ಕಾಂಗ್ರೆಸ್‌ಗೆ ಸೆಳೆದು ಕ್ಷೇತ್ರದಲ್ಲಿ ವಿರೋಧ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತೆ ನೋಡಿಕೊಂಡಿದ್ದಾರೆ.
ಸಾವಿರ ಕೋಟಿ ಒಡೆಯ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಟುಂಬದ ಆಸ್ತಿ 1,413.78 ಕೋಟಿ ಆಸ್ತಿ ಚುನಾವಣೆಯ ಘೋಷಣೆ ಮಾಡಿಕೊಂಡಿದ್ದಾರೆ. ಸಾವಿರ ಕೋಟಿ ಸರದಾರನಾದರೂ ಅವರ ಬಳಿ ಇರುವುದು ಒಂದೇ ಕಾರಾಗಿದೆ. ರಾಜ್ಯ ಮಾತ್ರವಲ್ಲ ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಡಿ.ಕೆ.ಶಿ ಬಳಿ ಇರುವುದು ಒಂದೇ ಕಾರು ಎಂಬುದು ಮತ್ತೊಂದು ವಿಶೇಷವಾಗಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಒಟ್ಟು 840.08 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಡಿಕೆ ಶಿವಕುಮಾರ್ ಅವರು ಘೋಷಿಸಿಕೊಂಡಿದ್ದರು. ಅದು 2023ರ ಚುನಾವಣೆಯಲ್ಲಿ 1,413.78 ಕೋಟಿಗೆ ಏರಿಕೆಯಾಗಿದೆ. ಡಿಕೆಶಿ ಕಳೆದ ಐದು ವರ್ಷಗಳಲ್ಲಿ ಶೇ 68.29 ರಷ್ಟು ಹೆಚ್ಚಳವಾಗಿದೆ.
ಇಷ್ಟೊಂದು ಕೇಸ್‌ಗಳು
ಆದಾಯ ತೆರಿಗೆಗೆ ಸಂಬಂಧಿಸಿದ ನಾಲ್ಕು ಪ್ರಕರಣ, ಜಾರಿ ನಿರ್ದೇಶನಾಲಯದ ಎರಡು ಪ್ರಕರಣ ಮತ್ತು ಒಂದು ಸಿಬಿಐ ಪ್ರಕರಣ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಪಾದಯಾತ್ರೆ
ಡಿಕೆಶಿ ಅವರ ರಾಜ್ಯದಲ್ಲಿ ಭರತ್ ಜೋಡೋ ಹಾಗೂ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪೂರ್ವವೇ ಪಕ್ಷಕ್ಕೆ ವರ್ಚಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದರಲ್ಲೂ ಕುಡಿಯುವ ನೀರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೇಕೆದಾಟು ಯಾತ್ರೆಯು ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಪಡೆಯುವ ಹಿಂದೆ ಡಿಕೆಶಿ ಅವರ ಪಾತ್ರ ಹೆಚ್ಚಾಗಿದೆ. ತಮ್ಮ ಗಡಸುತನ, ನೇರ ಮಾತಿನಿಂದಲೇ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖರಾಗಿ ದುಡಿದಿದ್ದಾರೆ.
ಉದ್ಯಮಿ, ವಿದ್ಯಾಸಂಸ್ಥೆ
ರಾಜಕಾರಣಿಯ ಜೊತೆಗೆ, ಡಿ.ಕೆ.ಶಿವಕುಮಾರ್ ಉದ್ಯಮಿಯಾಗಿದ್ದಾರೆ. ಜೊತೆಗೆ, ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಡಿಕೆಶಿ ಗೆಲುವು, ಸೋಲಿನ ಹಾದಿ
ತ್ರಿವಿಕ್ರಮ ಸಾಧಿಸುತ್ತಾರಾ ಡಿಕೆಶಿ?
ಜಿಲ್ಲೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿ ಹುದ್ದೆಗೇರಿದ್ದರೂ ಇದುವರೆಗೆ ಯಾರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಮತ್ತು ರಾಮಕೃಷ್ಣ ಹೆಗಡೆ ಕೇವಲ 1 ವರ್ಷ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಹೆಚ್.ಡಿ. ದೇವೇಗೌಡ ಅವರು 17 ತಿಂಗಳ ಆಡಳಿತ ನಡೆಸಿದ್ದರು. ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಮೊದಲ ಅವಧಿಯಲ್ಲಿ 20 ತಿಂಗಳು ಹಾಗೂ ಎರಡನೇ ಅವಧಿಯಲ್ಲಿ 14 ತಿಂಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, 24 ತಿಂಗಳು ಅಧಿಕಾರ ನಡೆಸಲಿದ್ದಾರೆ. ಅದಾದ ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎಂಬ ಕತೂಹಲ ಎಲ್ಲರಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂ.3: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಜಾರಿಯಾಗುತ್ತಿರುವ ಎರಡು ಪ್ರಮುಖ ಸಾರಿಗೆ ಯೋಜನೆಗಳಾದ ‘ನಮ್ಮ ಮೆಟ್ರೋ’ (Namma Metro) ಮತ್ತು ‘ಬೆಂಗಳೂರು ಉಪನಗರ ರೈಲು’ (Suburban Rail) ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಸಂಪರ್ಕ ಸಾಧಿಸಲಿದೆ. ನಗರದ ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ, ಈ ಎರಡು ಬೃಹತ್ ಸಾರಿಗೆ ವ್ಯವಸ್ಥೆಗಳು ಒಂದೇ ಮಾರ್ಗದಲ್ಲಿ (Shared Alignment), ಒಂದರ ಕೆಳಗೆ ಮತ್ತೊಂದರಂತೆ ಸಂಚರಿಸುವ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಭೂಸ್ವಾಧೀನದ ವೆಚ್ಚ ಮತ್ತು ಯೋಜನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಬೆನ್ನಿಗಾನಹಳ್ಳಿ ಫ್ಲೈಓವರ್ ಬಳಿ ಸುಮಾರು 500 ಮೀಟರ್‌ಗಳವರೆಗೆ ಉಪನಗರ ರೈಲಿನ ‘ಕನಕ ಲೈನ್’ ಮೇಲ್ಸೇತುವೆಯು, ನಮ್ಮ ಮೆಟ್ರೋದ ‘ಬ್ಲೂ ಲೈನ್’ ಮೇಲ್ಸೇತುವೆಯ ಕೆಳಭಾಗದಲ್ಲೇ ನೇರವಾಗಿ ಹಾದುಹೋಗಲಿದೆ. ಹೀಗಾಗಿ ಒಂದೇ ಪಿಲ್ಲರ್ ಬೇಸ್‌ನ ಮೇಲ್ಭಾಗದಲ್ಲಿ ಮೆಟ್ರೋ ಹಾಗೂ ಅದರ ಕೆಳಭಾಗದಲ್ಲಿ ಸಬರ್ಬನ್ ರೈಲು ಸಂಚರಿಸಲಿವೆ. ಕನಕ ಲೈನ್ ಹೀಲಳಿಗೆಯಿಂದ ರಾಜಾನುಕುಂಟೆಯನ್ನು (46 ಕಿ.ಮೀ) ಸಂಪರ್ಕಿಸಿದರೆ, ಮೆಟ್ರೋ ಬ್ಲೂ ಲೈನ್ ಕೆ.ಆರ್. ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.
ಈ ಮಾದರಿಯಿಂದಾಗಿ ಬೆಂಗಳೂರಿನ ಅತ್ಯಂತ ದುಬಾರಿ ವಸತಿ ಪ್ರದೇಶದ ಸುಮಾರು 1.65 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಲಾಗಿದೆ. ಇದರಿಂದಾಗಿ ಆ ಭಾಗದಲ್ಲಿ ವಾಸವಿದ್ದ ಸುಮಾರು 600 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳುವ ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ. ಈ ಅತ್ಯಾಧುನಿಕ ಕಲ್ಪನೆಯಿಂದ ಯೋಜನೆಗೆ ಅಂದಾಜು 150 ಕೋಟಿ ರೂಪಾಯಿಯಿಂದ 169 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣ ಉಳಿತಾಯವಾಗಿದೆ ಎಂದು ಕೆ-ರೈಡ್ ಹೇಳಿದೆ.
ಈ ಯೋಜನೆಯಲ್ಲಿ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸುವುದು ಎಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿತ್ತು. ಉಪನಗರ ರೈಲು ಆಲ್ಟರ್ನೇಟಿಂಗ್ ಕರೆಂಟ್ (AC) ಬಳಸಿದರೆ, ಮೆಟ್ರೋ ಡೈರೆಕ್ಟ್ ಕರೆಂಟ್ (DC) ತಂತ್ರಜ್ಞಾನದಲ್ಲಿ ಚಲಿಸುತ್ತದೆ. ಈ ಎರಡೂ ವಿಭಿನ್ನ ತಾಂತ್ರಿಕ ಸುರಕ್ಷತೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ. ಜಾಗದ ಅಭಾವವಿರುವ ಭಾರತದ ಇತರೆ ಮೆಟ್ರೋ ಸಿಟಿಗಳಿಗೆ ಬೆಂಗಳೂರಿನ ಈ ಮಾದರಿಯನ್ನೇ ತರಲಾಗುವುದು ಎಂದು ಹೇಳಲಾಗಿದೆ.
ಬಾಲಿವುಡ್ (Bollywood) ಸ್ಪೈ ಸಿನಿಮಾಗಳೆಂದರೆ ಅವುಗಳಲ್ಲಿ ಮಾಸ್ ಸೀನ್ಗಳು, ಎಲಿವೇಷನ್ ಸೀನ್ಗಳು, ಓವರ್ ದಿ ಟಾಪ್ ಆಕ್ಷನ್, ಕಾಮಿಡಿ, ಐಟಂ ಹಾಡುಗಳು, ನಾಯಕನ ಥರಹೇವಾರಿ ಡ್ರೆಸ್ಸುಗಳು, ನಾಯಕಿಯ ಬಿಕಿನಿ ಸೀನ್ ಇರಲೇ ಬೇಕು ಎಂಬ ಸಂಪ್ರದಾಯ ಇತ್ತು. ಇವುಗಳ ಜೊತೆಗೆ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಟ್ಟಾಗಿ ಮತ್ತೊಬ್ಬ ವಿದೇಶಿ ವಿಲನ್ ವಿರುದ್ಧ ಹೊಡೆದಾಡುವ ಕತೆ ಇರುತ್ತಿತ್ತು. ಈ ಹಿಂದೆ ಬಂದಿದ್ದ ಸ್ಪೈ ಆಕ್ಷನ್ ಸಿನಿಮಾಗಳಾದ ‘ಟೈಗರ್’, ‘ಪಠಾಣ್’, ‘ವಾರ್’, ‘ಬ್ಯಾಂಗ್ ಬ್ಯಾಂಗ್’ ಇವೆಲ್ಲ ಸಿನಿಮಾಗಳಲ್ಲಿ ಮೇಲೆ ಹೇಳಿರುವ ಸೂತ್ರವೇ ಇತ್ತು. ಆದರೆ ‘ಧುರಂಧರ್’ ಸಿನಿಮಾ, ಭಾರತದಲ್ಲಿ ಸ್ಪೈ ಥ್ರಿಲ್ಲರ್ ವ್ಯಾಕರಣವನ್ನೇ ಬದಲಾಯಿಸಿದೆ. ದಶಕಗಳಿಂದಲೂ ಸ್ಪೈ ಆಕ್ಷನ್ ಸಿನಿಮಾ ಜಾನರ್ ಮೇಲೆ ಗಟ್ಟಿ ಹಿಡಿತ ಹೊಂದಿದ್ದ ಯಶ್ ರಾಜ್ ಫಿಲಮ್ಸ್ ಇದೀಗ ತನ್ನ ಮುಂಬರುವ ಸಿನಿಮಾಗಳ ಚಿತ್ರಕತೆಯನ್ನು ಸಂಪೂರ್ಣ ಬದಲಾಯಿಸುತ್ತಿದೆ.
ಯಶ್ ರಾಜ್ ಫಿಲಮ್ಸ್, ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿದ್ದು, ಸ್ಪೈ ಆಕ್ಷನ್ ಸಿನಿಮಾಗಳನ್ನು ದಶಕಗಳಿಂದಲೂ ನಿರ್ಮಿಸುತ್ತಾ ಬರುತ್ತಿರುವುದು ಮಾತ್ರವಲ್ಲದೆ ಭಾರಿ ಯಶಸ್ಸನ್ನೂ ಗಳಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯು ಒಂದು ಸಿದ್ಧ ಸೂತ್ರ ಇಟ್ಟುಕೊಂಡೇ ಸ್ಪೈ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿದೆ. ಆದರೆ ಈಗ ‘ಧುರಂಧರ್’ ದೆಸೆಯಿಂದಾಗಿ ಯಶ್ ರಾಜ್ ಫಿಲಮ್ಸ್ ಸಹ ಸ್ಪೈ ಸಿನಿಮಾಗಳ ತಮ್ಮ ಸಿದ್ಧ ಸೂತ್ರದಲ್ಲಿ ಮಾರ್ಪಾಡು ಮಾಡುತ್ತಿದೆ.
ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಹೊಸ ಸ್ಪೈ ಆಕ್ಷನ್ ಸಿನಿಮಾ ‘ಆಲ್ಫಾ’ ಬಿಡುಗಡೆ ಹಂತದಲ್ಲಿದೆ. ಈ ಸಿನಿಮಾನಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ವಾಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗ ‘ಧುರಂಧರ್’ ಸಿನಿಮಾ, ಸ್ಪೈ ಸಿನಿಮಾಗಳ ರೂಪವನ್ನೇ ಬದಲಿಸಿರುವ ಕಾರಣ, ಇದೀಗ ‘ಆಲ್ಫಾ’ ಸಿನಿಮಾನಲ್ಲಿಯೂ ಚಿತ್ರಕತೆಯನ್ನು ಬದಲಾಯಿಸಿ, ಕೆಲ ದೃಶ್ಯಗಳ ಮರುಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ.
‘ಆಲ್ಫಾ’ ಸಿನಿಮಾನಲ್ಲಿಯೂ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಂದಾಗಿ ವಿಲನ್ ಎದುರು ಹೊಡೆದಾಡುವ ಕತೆಯನ್ನು ಮಾಡಲಾಗಿತ್ತಂತೆ. ಆದರೆ ‘ಧುರಂಧರ್’ ಸಿನಿಮಾವು, ಭಾರತದ ವಿರೋಧಿ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕತೆ ಹೊಂದಿದ್ದು, ಆ ಸಿನಿಮಾಕ್ಕೆ ಭಾರಿ ಜನಮನ್ನಣೆ ವ್ಯಕ್ತವಾಗಿರುವ ಕಾರಣ, ಇದೀಗ ‘ಆಲ್ಫಾ’ ಕತೆಯನ್ನು ಬದಲಾಯಿಸಿ, ಪಾಕಿಸ್ತಾನದ ಏಜೆಂಟ್ ಜೊತೆ ಸೇರಿ ಮಿಷನ್ ನಡೆಸುವ ಕತೆಯನ್ನೇ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ‘ಆಲ್ಫಾ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಒಬ್ಬರು ಪಾಕಿಸ್ತಾನದ ಏಜೆಂಟ್, ಒಬ್ಬರು ಭಾರತದ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಈಗ ಆ ಕತೆಯನ್ನೇ ಬದಲಾಯಿಸಿ, ಇಬ್ಬರೂ ಭಾರತೀಯ ಏಜೆಂಟರುಗಳ ಪಾತ್ರವನ್ನು ಸೃಷ್ಟಿಸಲಾಗಿದೆಯಂತೆ. ಇದೇ ಕಾರಣಕ್ಕೆ ಕೆಲವು ದೃಶ್ಯಗಳ ಮರು ಚಿತ್ರೀಕರಣವನ್ನೂ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ‘ಆಲ್ಫಾ’ ಸಿನಿಮಾದ ಬಿಡುಗಡೆ ಸಹ ತಡವಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಟಾಕ್ಸಿಕ್’ ಸಿನಿಮಾದ ಅಪ್‌ಡೇಟ್‌ಗಾಗಿ ಇಡೀ ಭಾರತೀಯ ಚಿತ್ರರಂಗ ಕಾದು ಕುಳಿತಿದೆ. ‘ಕೆಜಿಎಫ್’ ಸರಣಿಯ ಅದ್ದೂರಿ ಸಕ್ಸಸ್ ನಂತರ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಯೋಜನೆಯೊಂದಿಗೆ ‘ಟಾಕ್ಸಿಕ್’ ಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಈಗ ಎಲ್ಲರ ಗಮನ ಜೂನ್ 8ರ ಮೇಲಿದೆ.
ಸದ್ಯ ‘ಟಾಕ್ಸಿಕ್’ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದೆ. ಮತ್ತೊಂದೆಡೆ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಸ್ಪಷ್ಟ ಘೋಷಣೆ ಮಾಡಿಲ್ಲ. ಆದರೆ, ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಜೂನ್ 8ರಂದು ‘ಟಾಕ್ಸಿಕ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುವ ದಟ್ಟ ಸಾಧ್ಯತೆಗಳಿವೆ ಎನ್ನಲಾಗಿದೆ.
ಜೂನ್ 8ರಂದು ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಜನ್ಮದಿನ. ಈ ವಿಶೇಷ ಸಂದರ್ಭವನ್ನು ಮತ್ತಷ್ಟು ಅದ್ದೂರಿಯಾಗಿಸಲು ಚಿತ್ರತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಅಂದೇ ಸಿನಿಮಾದ ಹೊಸ ಪೋಸ್ಟರ್ ಅಥವಾ ಖಚಿತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಗಿಫ್ಟ್ ನೀಡಲು ಮೇಕರ್ಸ್ ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೊದಲ ಪ್ಲ್ಯಾನ್ ಪ್ರಕಾರ ಸಿನಿಮಾ ಈ ಹಿಂದೆಯೇ ಬರಬೇಕಿತ್ತಾದರೂ, ವಿಶ್ವ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಬೇಕಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಯಶ್ ಅವರ ಮಾಸ್ ಲುಕ್ ಮತ್ತು ಗೀತು ಮೋಹನ್‌ದಾಸ್ ಅವರ ವಿಭಿನ್ನ ಮೇಕಿಂಗ್ ಶೈಲಿ ಎರಡು ಒಟ್ಟಿಗೆ ಸೇರಿರುವುದರಿಂದ ಈ ಚಿತ್ರದ ಮೇಲಿನ ನಿರೀಕ್ಷೆಗಳು ಆಕಾಶ ಮುಟ್ಟಿವೆ. ಸಿನಿಮಾ ಅನೌನ್ಸ್ ಆದ ದಿನದಿಂದಲೂ ಅಭಿಮಾನಿಗಳು ಈ ಚಿತ್ರದ ರಿಲೀಸ್ ದಿನಕ್ಕಾಗಿ ಕಾಯುತ್ತಿದ್ದಾರೆ. ಈಗ ಜೂನ್ 8ರಂದು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬದ ದಿನ ಬಿಗ್ ಅಪ್ಡೇಟ್ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ನಾರ್ವೆ ಚೆಸ್ 2026 ಟೂರ್ನಮೆಂಟ್‌ನಲ್ಲಿ ಭಾರತದ ಯುವ ಚೆಸ್ ತಾರೆ, 20 ವರ್ಷದ ಆರ್. ಪ್ರಜ್ಞಾನಂದ (R Praggnanandhaa) ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಸರಿಗಟ್ಟಿದ್ದಾರೆ.
ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.
ಮೇ 27 ರಂದು ಪ್ರಜ್ಞಾನಂದ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು.
ಜೂನ್ 2, 2026 ರಂದು ನಡೆದ ಪಂದ್ಯದಲ್ಲಿ ಕಪ್ಪು ದಾಳಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದರು.
ಈ ಮೂಲಕ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಎರಡು ಸೋಲುಣಿಸಿದ ಸಾಧನೆ ಮಾಡಿದ್ದಾರೆ.
ವಿಶಿ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ:
ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು.
ಆ ಬಳಿಕ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.
ಈ ಗೆಲುವಿನೊಂದಿಗೆ, ಕ್ಲಾಸಿಕಲ್ ಚೆಸ್‌ನಲ್ಲಿ ಕಾರ್ಲ್‌ಸನ್ ಅವರನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೋಲಿಸಿದ ವಿಶ್ವದ ಅತ್ಯಂತ ಪ್ರಮುಖ ಗ್ರ್ಯಾಂಡ್‌ಮಾಸ್ಟರ್‌ಗಳ ಗಣ್ಯರ ಪಟ್ಟಿಗೆ ಪ್ರಜ್ಞಾನಂದ ಸೇರಿದ್ದಾರೆ.
ಹಾಗೆಯೇ ಜಯದೊಂದಿಗೆ ನಾರ್ವೆ ಚೆಸ್ 2026 ರ ಪ್ರಶಸ್ತಿ ರೇಸ್ ಮತ್ತಷ್ಟು ರೋಚಕ ಹಂತ ತಲುಪಿದೆ. ಪ್ರಜ್ಞಾನಂದ ಅವರ ಅಂಕಗಳ ಪಟ್ಟಿ ಮೇಲೇರಿದ್ದರೆ, ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದೆ.
ಪ್ರಜ್ಞಾನಂದ ಮುಂದಿನ ಸವಾಲು:
ನಾರ್ವೆ ಚೆಸ್ 2026 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಪ್ರಜ್ಞಾನಂದ ಪಾಲಿಗೆ ಇನ್ನುಳಿದ ಕೊನೆಯ 2 ಸುತ್ತುಗಳು (Round 9 & Round 10) ಅತ್ಯಂತ ನಿರ್ಣಾಯಕವಾಗಿವೆ. ಸದ್ಯದ ಅಂಕಗಳ ಪಟ್ಟಿಯಲ್ಲಿ ಅವರು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅಮೆರಿಕದ ವೆಸ್ಲಿ ಸೋ (14 ಅಂಕ) ಹಾಗೂ ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಅವರನ್ನು ಹಿಂದಿಕ್ಕಬೇಕು.
ಇದಕ್ಕಾಗಿ ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಡಿ. ಗುಕೇಶ್ ವಿರುದ್ಧ ಗೆಲ್ಲಬೇಕಾಗಿದೆ. ಈ ಗೆಲುವುಗಳ ಮೂಲಕ ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಅವರ ಕೈಸೇರಲು ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.