Category Archives: Blog

Your blog category

ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಬೆಂಗಳೂರು, ಜೂನ್​ 01: ನಗರದಲ್ಲಿ ದೀಪಕ್ ಕೇಬಲ್ ಇಂಡಿಯಾ ಲಿಮಿಡೆಟ್​​ನಿಂದ ವಿವಿಧ ಬ್ಯಾಂಕ್​ಗಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದಾಳಿ ವೇಳೆ ಕಂಪನಿಗೆ ಸಂಬಂಧಿಸಿದ 1.27 ಕೋಟಿ ರೂ ನಗದು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 18 ಕೋಟಿ ರೂ ಹಣವನ್ನೂ ಫ್ರೀಜ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಮಾಹಿತಿ ನೀಡಿದೆ.

ಮುಖ್ಯಾಂಶಗಳು

  • ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ ಕೇಸ್​
  • ಕಂಪನಿಗೆ ಸಂಬಂಧಿಸಿದ 1.27 ಕೋಟಿ ನಗದು ಮತ್ತು ಚಿನ್ನಾಭರಣ ಜಪ್ತಿ
  • ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ 18 ಕೋಟಿ ಹಣ ಫ್ರೀಜ್

ಬ್ಯಾಂಕ್​​ಗಳಿಗೆ 899 ಕೋಟಿ ರೂ ವಂಚನೆ 

ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ಎಸ್​​ಬಿಐ ಸೇರಿದಂತೆ ವಿವಿಧ ಬ್ಯಾಂಕ್​ಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಸಾಲ ಪಡೆದುಕೊಂಡಿತ್ತು. ಆದರೆ, ಆ ಸಾಲದ ಹಣವನ್ನು ಉದ್ದೇಶಿತ ಉದ್ದೇಶಕ್ಕೆ ಬಳಸದೆ, ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಒಟ್ಟು 899 ಕೋಟಿ ರೂ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿತ್ತು. ಸಿಬಿಐ ದಾಖಲಿಸಿದ್ದ ಇದೇ ಪ್ರಕರಣದ ಆಧಾರದ ಮೇಲೆ ಇದೀಗ ಇಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ‘ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ಇಡಿ ದಾಳಿ ನಂತರ ನಲಪಾಡ್ ಸ್ಫೋಟಕ ಹೇಳಿಕೆ

ಬೆಂಗಳೂರಿನ ಇ.ಡಿ ಅಧಿಕಾರಿಗಳ ನೇತೃತ್ವದ ತಂಡವು ಇತ್ತೀಚೆಗೆ ಅಂದರೆ ಮೇ 21 ಹಾಗೂ ಮೇ 29ರಂದು ದೀಪಕ್ ಕೇಬಲ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಕೆ. ವೆಂಕಟೇಶ್ವರ್ ರಾವ್ ಮತ್ತು ಅಧುನಿಕ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕ ಮಹೇಶ್ ಅಗರ್ವಾಲ್ ಅವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಡಿ ದಾಳಿ: ನೆರೆ ರಾಜ್ಯದ ಚುನಾವಣೆಗೆ ದೊಡ್ಡ ಮೊತ್ತದ ಹಣ ಹೋಗಿರೋ ಶಂಕೆ

ಇನ್ನು ದಾಳಿ ಸಂದರ್ಭದಲ್ಲಿ ವಂಚನೆಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಜಪ್ತಿ ಮಾಡಲಾದ ನಗದು, ಚಿನ್ನಾಭರಣ ಹಾಗೂ ಫ್ರೀಜ್ ಮಾಡಲಾದ ಬ್ಯಾಂಕ್ ಖಾತೆಗಳ ವಿವರಗಳೊಂದಿಗೆ ಇಡಿ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ಪ್ರಾತಿನಿಧಿಕ ಚಿತ್ರImage Credit source: gettyimages

ಬೆಂಗಳೂರು, ಜೂನ್​ 01: ಸಿಲಿಕಾನ್ ಸಿಟಿಯಲ್ಲಿ (bangaluru) ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆ ಮತ್ತು ಅತಿಯಾದ ಸೆಕೆಯ ವಾತಾವರಣವು ಸಾರ್ವಜನಿಕರನ್ನು, ಅದರಲ್ಲೂ ಮುಖ್ಯವಾಗಿ ಪುಟಾಣಿ ಮಕ್ಕಳನ್ನು (Children) ಹೈರಾಣಾಗಿಸಿದೆ. ಹವಾಮಾನ ವೈಪರೀತ್ಯದ ಬೆನ್ನಲ್ಲೇ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗ್ಯೂ ಸೇರಿ ವೈರಾಣು ಜ್ವರಗಳ ಪ್ರಕರಣಗಳು ತೀವ್ರವಾಗಿ ಉಲ್ಬಣಿಸುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬದಲಾವಣೆ ಹವಾಮಾನದಿಂದ ಮಕ್ಕಳ ಮೇಲೆ ಪರಿಣಾಮ
  • ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ, ವೈರಲ್ ಜ್ವರದ ಆತಂಕ
  • ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ

ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ರಾಜಧಾನಿಯಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಇದರೊಂದಿಗೆ ಬಿಸಿಲು ಮತ್ತು ಉಸಿರುಕಟ್ಟುವ ಸೆಕೆಯ ವಾತಾವರಣವೂ ನಿರ್ಮಾಣವಾಗಿದೆ. ಈ ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ನೆಗಡಿ, ಕೆಮ್ಮು, ಶೀತ ಮತ್ತು ತೀವ್ರ ಜ್ವರದ ಸಮಸ್ಯೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದ್ದ ಡೆಂಗ್ಯೂ ಜ್ವರದ ಪ್ರಕರಣಗಳು ಇದೀಗ ಮಕ್ಕಳಲ್ಲಿ ಮತ್ತೆ ಪತ್ತೆಯಾಗುತ್ತಿದ್ದು, ಒಟ್ಟಾರೆ ವೈರಲ್ ಜ್ವರದ ಪ್ರಕರಣಗಳಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ.

ಶಾಲೆ ಆರಂಭದ ಹೊತ್ತಲ್ಲೇ ಸೊಳ್ಳೆಗಳ ಕಾಟ

ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಇದು ಸೊಳ್ಳೆಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಡೆಂಗ್ಯೂ ಕಾಯಿಲೆಯು ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ. ಇದರ ನಡುವೆ, ಶಾಲೆಗಳು ಆರಂಭ ಬೆನ್ನಲ್ಲೇ ಮಕ್ಕಳಲ್ಲಿ ಡಯೇರಿಯಾ (ಅತಿಸಾರ) ಮತ್ತು ನ್ಯುಮೋನಿಯಾ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೊರಗಿನ ಆಹಾರವನ್ನು ನೀಡಬಾರದು ಎಂದು ವೈದ್ಯರು ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳು ಯಾವವು?

  • ವೈರಾಣು ಜ್ವರ ಮತ್ತು ತೀವ್ರ ಚಳಿ ಜ್ವರ
  • ಡೆಂಗ್ಯೂ ಮತ್ತು ಶೀತ ಜ್ವರ
  • ನೆಗಡಿ, ಕೆಮ್ಮು ಮತ್ತು ಗಂಟಲು ನೋವು
  • ಉಸಿರಾಟದ ತೊಂದರೆ ಮತ್ತು ತಲೆನೋವು
  • ತೀವ್ರವಾದ ಸುಸ್ತು, ಮೈಕೈ ನೋವು ಮತ್ತು ವಾಂತಿ

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಒಟ್ಟಿನಲ್ಲಿ ಮಳೆ, ಬಿಸಿಲಿನಿಂದ ಬದಲಾದ ವಾತವರಣ ಹಿನ್ನೆಲೆ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಆರ್​​ಸಿಬಿಗೆ ಆಘಾತ; ಟಿಮ್ ಡೇವಿಡ್​ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ

ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಂತಸದಲ್ಲಿದ್ದ ಆರ್​ಸಿಬಿ ತಂಡಕ್ಕೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್​ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಇದರನ್ವಯ ಟಿಮ್ ಡೇವಿಡ್ 2027 ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.

ಅಷ್ಟಕ್ಕೂ ಟಿಮ್ ಡೇವಿಡ್​ ವಿರುದ್ಧ ಬಿಸಿಸಿಐ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಕಾರಣವೆನೆಂದರೆ, ಗುಜರಾತ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಟಿಮ್ ಡೇವಿಡ್ ಕೋಪದಿಂದ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದಿದ್ದರು. ಟಿಮ್ ಡೇವಿಡ್ ಅವರ ಈ ಕೃತ್ಯ ಐಪಿಎಲ್​ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕಾರಣ ಆಸ್ಟ್ರೇಲಿಯಾದ ಈ ಸ್ಟಾರ್ ಬ್ಯಾಟ್ಸ್​ಮನ್ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಿದೆ.

ದಂಡದ ಜೊತೆಗೆ ಡಿಮೆರಿಟ್ ಅಂಕ

ವಾಸ್ತವವಾಗಿ ಟಿಮ್ ಡೇವಿಡ್, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನ್ನಿಂಗ್ಸ್​ನ 10 ನೇ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಿಸಿಸಿಐ, ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದ್ದು, ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.

ಒಂದು ಪಂದ್ಯದಿಂದ ನಿಷೇಧ

ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಬಿಸಿಸಿಐನಿಂದ ದಂಡನೆಗೆ ಗುರಿಯಾಗುತ್ತಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದ ಡೇವಿಡ್​ಗೆ ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿತ್ತು. ಇದಾದ ಬಳಿಕ ಅದೇ ಮುಂಬೈ ವಿರುದ್ಧ ನಡೆದಿದ್ದ 54 ನೇ ಪಂದ್ಯದಲ್ಲಿ ಇದೇ ರೀತಿ ಮಾಡಿದ್ದ ಟಿಮ್​ಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಿತ್ತು. ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ಟಿಮ್ ಐದು ಡಿಮೆರಿಟ್ ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ ಟಿಮ್ ಅವರನ್ನು ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

ಈ ಆವೃತ್ತಿಯಲ್ಲಿ ಟಿಮ್ ಪ್ರದರ್ಶನ

ಟಿಮ್ ಡೇವಿಡ್ ಸತತ ಎರಡನೇ ಬಾರಿಗೆ ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ್ದಾರೆ. ಫೈನಲ್ ಪಂದ್ಯದಲ್ಲಿ ನಿರ್ಣಾಯಕ 24 ರನ್ ಬಾರಿಸಿದ್ದ ಟಿಮ್ ಡೇವಿಡ್ ಆಡಿದ 16 ಪಂದ್ಯಗಳಲ್ಲಿ 33.88 ಸರಾಸರಿಯಲ್ಲಿ 305 ರನ್ ಬಾರಿಸಿದರು. ಇದರಲ್ಲಿ 23 ಸಿಕ್ಸರ್‌ಗಳು ಸೇರಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ದಾವಣಗೆರೆ, (ಜೂನ್ 01): ಜಮೀರ್ ಅಹ್ಮದ್ ಖಾನ್ (Zameer Ahmed Khan). ಚಾಮರಾಜಪೇಟೆಯ ಚತುರ. ಅಲ್ಪಸಂಖ್ಯಾತರ ಮತಗಳ ಮೇಲೆ ಹಿಡಿತ ಸಾಧಿಸಿರೋ ಲೀಡರ್. ಇದೀಗ ಇದೇ ಜಮೀರ್ ಅಹ್ಮದ್ ವಿರುದ್ಧ ಪಕ್ಷವಿರೋಧಿ ಆರೋಪ ಕೇಳಿಬಂದಿದೆ. ಸಚಿವ ಸಂಪುಟ ರಚನೆ ಹೊತ್ತಲ್ಲೇ ಜಮೀರ್​ರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮಾಜಿ ಸಚಿವ ಜಮೀರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು…ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಎನ್ನುವರು ಹೈಕಮಾಂಡ್​​​​​ಗೆ ಪತ್ರದ ಮೂಲಕ ಜಮೀರ್ ವಿರುದ್ಧ ದೂರು ನೀಡಿದ್ದು, ಪಕ್ಷ ವಿರೋಧಿ ಆಡಿಯೋವನ್ನು ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು

  • ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಆರೋಪ
  • ಮಾಜಿ ಸಚಿವ ಜಮೀರ್ ಅಹ್ಮದ್‌ಖಾನ್‌ ಅವರದ್ದು ಎನ್ನಲಾದ ಆಡಿಯೋ ವೈರಲ್
  • ಮಾಜಿ ಸಚಿವ ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು
  • ಹೈಕಮಾಂಡ್​ಗೆ ಪತ್ರದ ಮೂಲಕ ದೂರು ನೀಡಿದ ಕಾಂಗ್ರೆಸ್ ಮುಖಂಡರು
  • ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ದೂರು

ಜಮೀರ್ ವಿರುದ್ಧ ಹೈಕಮಾಂಡ್​​​ಗೆ ದೂರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮುಸ್ಲಿಮರು ಮನೆ ಬಿಟ್ಟು ಹೊರಹೋಗದಂತೆ ಹೇಳಿದ್ದಾರೆ. ಈ ಮೂಲಕ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಚಿವ ಜಮೀರ್ ಹುನ್ನಾರ ನಡೆಸಿದ್ದಾರೆ. ಪಕ್ಷದ್ರೋಹಿ ಜಮೀರ್​ರನ್ನ ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಗೆ ಆಗ್ರಹಿಸಿದ್ದಾರೆ.

ಇದನ್ನು ನೋಡಿ: ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ

ಜಮೀರ್ ಅಹಮ್ಮದ್ ಖಾನ್​​​ಗೆ ಸಂಕಷ್ಟ

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಈಗಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರ ಬೈ ಎಲೆಕ್ಷನ್​​​ನಿಂದ ಜಮಿರ್ ದೂರ ಉಳಿದಿದ್ದರು. ಕ್ಷೇತ್ರಕ್ಕೆ ಬಂದಿದ್ದರೂ ಸಹ ಪ್ರಚಾರ ಮಾಡಿರಲಿಲ್ಲ. ಈ ಸಂಬಂಧ ಹೈಕಮಾಂಡ್ ಗರಂ ಆಗಿದ್ದು, ಕಟ್ಟು ನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿತ್ತು. ಇದರ ಮಧ್ಯೆ ಸದ್ಯ ಕಾಂಗ್ರೆಸ್​​​ನಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಇದರ ಮಧ್ಯೆ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಪಕ್ಷ ವಿರೋಧಿ ಚಟವಟಿಕೆ ಆರೋಪ ಕೇಳಿಬಂದಿದ್ದು, ಅವರ ಸಚಿವ ಸ್ಥಾನಕ್ಕೆ ಕುತ್ತ ತರುವ ಸಧ್ಯತೆಗಳಿವೆ.

ಆಡಿಯೋನಲ್ಲಿ ಏನಿದೆ?

ದಾವಣಗೆರೆ ಉಪಚುನಾವಣೆ ವೇಳೆ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ತಮಗೆ ಟಿಕೆಟ್ ಸಿಕ್ಕಿಲ್ಲ ಎಂದು ನಾಯಕರು ಕೂಡ ಬೇಸರ ಹೋರಹಾಕಿದ್ದರು. ಆ ವೇಳೆ ಕೈ ಪಡೆಗೆ ಒಳೇಟು ಕೊಡಲು ತಂತ್ರವೂ ನಡೆದಿತ್ತು ಅನ್ನೋ ಮಾತು ಹರಿದಾಡಿತ್ತು. ಇದೀಗ ಮುಸ್ಲಿಂ ಮುಖಂಡರ ಜೊತೆಗೆ ಜಮೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಮುಸ್ಲಿಮರನ್ನ ಕಾಂಗ್ರೆಸ್​ಗೆ ವೋಟ್ ಹಾಕದಂತೆ ತಡೆಯಬೇಕು ಎಂಬ ಚರ್ಚೆ ಮಾಡಲಾಗಿದೆ. ದಾವಣಗೆರೆ ವಕ್ಫ್​ ಮಂಡಳಿ ಮಾಜಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಜೊತೆ ಜಮೀರ್ ಮಾತನಾಡಿದ್ದಾರೆಂದು ಈ ಆಡಿಯೋವನ್ನ ಬಿಂಬಿಸಲಾಗ್ತಿದೆ. ಈ ಆಡಿಯೋದಲ್ಲಿ ಬಂಡಾಯ ಅಭ್ಯರ್ಥಿಯಾಗಿ, ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಪೈಲ್ವಾನ್ ಬಗ್ಗೆಯೂ ಮಾತನಾಡಲಾಗಿದೆ.

ಜಮೀರ್ ಅಹಮ್ಮದ್ ಕೊಟ್ಟ ಸ್ಪಷ್ಟನೆ ಏನು?

ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಜಮೀರ್, ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಕುರಿತ ಆಡಿಯೋ ನಕಲಿ ಆಗಿದೆ. ಎಐ ತಂತ್ರಜ್ಞಾನ ಬಳಸಿ ಆಡಿಯೋ ಮಾಡಲಾಗಿದೆ , ಇದೊಂದು ರಾಜಕೀಯ ಷಡ್ಯಂತ್ರ ಅಂತಾ ಜಮೀರ್ ಹೇಳ್ತಿದ್ದಾರೆ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಆಗಿದೆ, ಸೈಬರ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು, ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಕ್ರಮ ಆಗುತ್ತೆ. ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವರ್ಷ ಟೀಂ ಇಂಡಿಯಾ ಯಾವೆಲ್ಲ ತಂಡಗಳ ವಿರುದ್ಧ ಸೆಣಸಲಿದೆ? ಇಲ್ಲಿದೆ ವಿವರ

19ನೇ ಆವೃತ್ತಿಯ ಐಪಿಎಲ್ (IPL 2026)​ ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಸುಮಾರು 2 ತಿಂಗಳಿಗೂ ಹೆಚ್ಚಿನ ಕಾಲ ನಡೆದ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಟೀಂ ಇಂಡಿಯಾದ (Team India) ಎಲ್ಲಾ ಆಟಗಾರರು ಭಾಗವಹಿಸಿದ್ದರು. ಹೀಗಾಗಿ ಈ ಸಮಯದಲ್ಲಿ ಭಾರತ ತಂಡ ಯಾವುದೇ ಅಂತರರಾಷ್ಟ್ರೀಯ ಸರಣಿಗಳನ್ನು ಆಡಲಿಲ್ಲ. ಇದೀಗ ಐಪಿಎಲ್ ಮುಗಿದಿದ್ದು, ಟೀಂ ಇಂಡಿಯಾ ಕೂಡ ಅಂತರರಾಷ್ಟ್ರೀಯ ವೇಳಾಪಟ್ಟಿಯ ಕಡೆಗೆ ತನ್ನ ಗಮನ ಹಾಯಿಸಲಿದೆ. ಅದರಂತೆ ಜೂನ್ 6 ರಿಂದ ಟೀಂ ಇಂಡಿಯಾದ ಅಂತರರಾಷ್ಟ್ರೀಯ ವೇಳಾಪಟ್ಟಿಗೆ ಚಾಲನೆ ಸಿಗಲಿದೆ.

ಐಪಿಎಲ್ ಮುಗಿದ ಕೇವಲ 5 ದಿನಗಳ ನಂತರ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಅನೇಕ ಸ್ಟಾರ್ ಆಟಗಾರರು ಮೈದಾನಕ್ಕೆ ಮರಳಲಿದ್ದಾರೆ. ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅದಾದ ನಂತರ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಗಳ ಜೊತೆಗೆ 2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಯುವ ತಂಡ ಜಪಾನ್‌ಗೆ ಪ್ರಯಾಣಿಸಲಿದೆ.

ಟೀಂ ಇಂಡಿಯಾದ ವೇಳಾಪಟ್ಟಿ

ಜೂನ್ 2026

  • ಜೂನ್ 6-10: ಭಾರತ-ಅಫ್ಘಾನಿಸ್ತಾನ ನಡುವೆ ಟೆಸ್ಟ್ ಪಂದ್ಯ
  • ಜೂನ್ 13-20: ಭಾರತ-ಅಫ್ಘಾನಿಸ್ತಾನದ ನಡುವೆ 3 ಪಂದ್ಯಗಳ ಏಕದಿನ ಸರಣಿ
  • ಜೂನ್ 26-29: ಭಾರತ 2 ಟಿ20 ಪಂದ್ಯಗಳಿಗಾಗಿ ಐರ್ಲೆಂಡ್ ಪ್ರವಾಸ ಮಾಡಲಿದೆ.

ಜುಲೈ 2026

  • ಜುಲೈ 1-11: ಭಾರತ 5 ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ
  • ಜುಲೈ 14-19: ಟಿ20 ಸರಣಿ ಮುಗಿದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ
  • ಜುಲೈ 23-26: 3 ಪಂದ್ಯಗಳ ಟಿ20 ಸರಣಿಗಾಗಿ ಭಾರತ. ಜಿಂಬಾಬ್ವೆ ಪ್ರವಾಸ ಮಾಡಲಿದೆ.

ಆಗಸ್ಟ್ 2026

  • 2 ಟೆಸ್ಟ್ ಮತ್ತು 3 ಟಿ20 ಪಂದ್ಯಗಳಿಗಾಗಿ ಭಾರತ, ಶ್ರೀಲಂಕಾ ಪ್ರವಾಸ ಮಾಡಲಿದೆ. ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026

  • ಸೆಪ್ಟೆಂಬರ್ 17 – ಅಕ್ಟೋಬರ್ 3: ಏಷ್ಯನ್ ಗೇಮ್ಸ್ 2026, ಜಪಾನ್ (ಟಿ20 ಸ್ವರೂಪ)
  • ಸೆಪ್ಟೆಂಬರ್ 27 – ಅಕ್ಟೋಬರ್ 3: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ
  • ಅಕ್ಟೋಬರ್ 6-17: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 5 ಪಂದ್ಯಗಳ ಟಿ20 ಸರಣಿ

ಅಕ್ಟೋಬರ್ ಮತ್ತು ಡಿಸೆಂಬರ್ 2026

  • ಅಕ್ಟೋಬರ್ 22 – ಡಿಸೆಂಬರ್: ಭಾರತ 2 ಟೆಸ್ಟ್, 5 ಏಕದಿನ, 5 ಟಿ20 ಪಂದ್ಯಗಳ ಟಿ20 ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್

ಕಿಚ್ಚ ಸುದೀಪ್ (Kichcha Sudeep) ಅವರ ಪತ್ನಿ ಪ್ರಿಯಾ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಬ್ಯಾನರ್ ಮೂಲಕ ಅವರು ‘ಮ್ಯಾಂಗೋ ಪಚ್ಚ’ (Mango Pachcha) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಟಿವಿ9 ವಿಶೇಷ ಸಂದರ್ಶನದಲ್ಲಿ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಸುದೀಪ್ ಅವರಿಗೆ ಸಣ್ಣ ಟ್ರಿಬ್ಯೂಟ್ ರೀತಿ ಈ ಸಿನಿಮಾದಲ್ಲಿ ತೋರಿಸಬೇಕು ಎಂಬ ಆಸೆ ನನಗೆ ಇತ್ತು. ಆ ಬಗ್ಗೆ ನಾನು ಮತ್ತು ಸಂಚಿತ್ ಮಾತನಾಡಿಕೊಂಡ್ವಿ. ಸಿನಿಮಾದ ಎಲ್ಲೋ ಒಂದು ಸಣ್ಣ ತುಣುಕಿನಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳಬೇಕಾ ಅಥವಾ ಬೇರೆ ಯಾವುದೇ ರೀತಿಯಲ್ಲಿ ನಾವು ಅವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ ಅವರು ನಮ್ಮ ಕೈ ಹಿಡಿದಿದ್ದಾರೆ. ಒಳ್ಳೆಯ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಸಣ್ಣ ಸಣ್ಣ ಬದಲಾವಣೆಗಳನ್ನು ಸೂಚಿಸಿದ್ದಾರೆ. ವಿವರಣೆಗಳಿಗೆ ಹೆಚ್ಚು ಗಮನ ನೀಡಿದ್ದಾರೆ. ಅದರಿಂದಾಗಿ ಪರದೆ ಮೇಲೆ ದೊಡ್ಡ ವ್ಯತ್ಯಾಸ ಆಗುತ್ತದೆ. ಅದನ್ನೆಲ್ಲ ನಾವು ಅವರಿಂದ ಕಲಿತಿದ್ದೇವೆ. ನಾವು ಈ ಚಿತ್ರರಂಗಕ್ಕೆ ಬಂದಿದ್ದೇವೆ ಅಂದರೆ ಅದು ಅವರನ್ನು ನೋಡಿಕೊಂಡು ಬಂದಿರುವುದು. ಹಾಗಾಗಿ ನಮ್ಮ ಕಡೆಯಿಂದ ಸುದೀಪ್ ಅವರಿಗೆ ಒಂದು ಸಣ್ಣ ಗೌರವ ಸಲ್ಲಿಸಬೇಕು ಎಂಬ ಕಾರಣಕ್ಕಾಗಿ ಸಿನಿಮಾದಲ್ಲಿ ಒಂದು ಸರ್ಪ್ರೈಸ್ ಇಟ್ಟಿದ್ದೇವೆ. ನೀವು ಸಿನಿಮಾ ನೋಡಿದಾಗ ಅದು ತಿಳಿಯುತ್ತದೆ’ ಎಂದು ಪ್ರಿಯಾ ಸುದೀಪ್ (Priya Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಬೆಂಗಳೂರು, (ಜೂನ್ 01): ಡಿ.ಕೆ. ಶಿವಕುಮಾರ್​ ಅವರು ಇದೇ ಜೂನ್ 03ರಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಜೊತೆ ಕೆಲವರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಹೀಗಾಗಿ ಸಚಿವರು ಆಗುವ ಶಾಸಕರು ಯಾರ್ಯಾರು ಎನ್ನುವುದೇ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಮಂತ್ರಿ ಸ್ಥಾನಕ್ಕೆ ಶಾಸಕರು ಭರ್ಜರಿ ಲಾಬಿ ನಡೆಸಿದ್ದಾರೆ.

ಹೌದು.. ಬೀದರ್​ನಿಂದ ಹಿಡಿದು ಚಾಮರಾಜನಗರದವರೆಗೆ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯರ ಸಂಪುಟದಲ್ಲಿ ಇದ್ದ, ಕೆಲವರಿಗೆ ಪಟ್ಟ ಕೈತಪ್ಪಿ ಹೋಗೋ ಆತಂಕವೂ ಕಾಡುತ್ತಿದೆ. ಹೀಗಾಗಿ ಅನೇಕರು ದೆಹಲಿಗೆ ದಂಡಯಾತ್ರೆ ನಡೆಸುತ್ತಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಆಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅವರೇ ಪ್ರತಿಕ್ರಿಯಿಸಿ, ಹೈಕಮಾಂಡ್ ಕೊಟ್ಟ ಭರವಸೆಯನ್ನು ಬಹಿರಂಗಪಡಿಸಿದ್ದಾರೆ.

Source link

ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಕಂದಮ್ಮನಿಗೆ ಮರುಜೀವ ನೀಡಿದ ಆ್ಯಂಬುಲೆನ್ಸ್ ಸಿಬ್ಬಂದಿ

ಹೈದರಾಬಾದ್, ಜೂನ್ 01: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಮಗುವಿಗೆ ತುರ್ತು ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್ ಸಿಬ್ಬಂದಿ ಜೀವ ಉಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನಲೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಆಸ್ಪತ್ರೆಗೆ ರೆಫರ್ ಮಾಡಿದ್ದರು ಅದಕ್ಕಾಗಿ ಮಗುವನ್ನು ಕರೆದೊಯ್ಯುವಾಗ ಶಿಶು ಚಿಂತಾಜನಕ ಸ್ಥಿತಿಗೆ ತಲುಪಿತ್ತು ಕೂಡಲೇ ಎಚ್ಚೆತ್ತ ಆ್ಯಂಬುಲೆನ್ಸ್ ಸಿಬ್ಬಂದಿ ಸಿಪಿಆರ್ (CPR) ನೀಡಿ ಜೀವ ಉಳಿಸಿದ್ದಾರೆ.

ಘಟನೆ ಏನು?

ವಿಕಾರಾಬಾದ್ ಜಿಲ್ಲೆಯ ಕೊಡಂಗಲ್ ಕ್ಷೇತ್ರದ ತುಂಕಿಮೆಟ್ಲ ಗ್ರಾಮದ ಭುವನೇಶ್ವರಿ ಅವರು ಮೂರು ದಿನಗಳ ಹಿಂದೆ ತಾಂಡೂರಿನ ಮಾತಾ- ಶಿಶು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹೈದರಾಬಾದ್‌ ನಲ್ಲಿರುವ ನೀಲೋಫರ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಮಗುವಿನ ಆರೋಗ್ಯ ಏಕಾಏಕಿ ಹದಗೆಟ್ಟಿತು, ಉಸಿರಾಟದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡು, ಮಗು ಪ್ರಾಣಾಪಾಯದ ಸ್ಥಿತಿಗೆ ತಲುಪಿತ್ತು. ಆಗ ಆ್ಯಂಬುಲೆನ್ಸ್‌ನಲ್ಲಿದ್ದ ಶಾಂತ್ ಕುಮಾರ್ ಹಾಗೂ ಆಯೂಬ್ ಪಾಷಾ ಪರಿಸ್ಥಿತಿಯನ್ನು ತಕ್ಷಣ ಅರಿತು ಕಾರ್ಯಪ್ರವೃತ್ತರಾದರು. ಕ್ಷಣವೂ ವಿಳಂಬ ಮಾಡದೆ ಮಗುವಿಗೆ ಸಿಪಿಆರ್ (Cardio Pulmonary Resuscitation) ನೀಡಿದರು. ಮಗುವಿನ ಹೃದಯ ಬಡಿತ ಮತ್ತು ಉಸಿರಾಟವನ್ನು ಪುನಃ ಚೇತರಿಸಲು ಅವರು ನಿರಂತರವಾಗಿ ಪ್ರಯತ್ನಿಸಿದರು.

ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಅವರ ತ್ವರಿತ ಕ್ರಮ ಫಲಕಾರಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಮಗುವಿನ ಸ್ಥಿತಿ ಸುಧಾರಿಸಿದ್ದು ನಂತರ ಮಗುವನ್ನು ಸುರಕ್ಷಿತವಾಗಿ ಹೈದರಾಬಾದ್‌ನ ನೀಲೋಫರ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ತಮ್ಮ ಕಣ್ಣೆದುರೇ ಜೀವ ಕಳೆದುಕೊಳ್ಳುತ್ತಿದ್ದ ಮಗುವನ್ನು ಉಳಿಸಿದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಮಗುವಿನ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆ, ಸೇವಾ ಮನೋಭಾವ ಮತ್ತು ವೃತ್ತಿಪರತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಮೇಶ್ವರ್, ರಾಜಣ್ಣಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ನಿರ್ಧಾರ

ತುಮಕೂರು, ಜೂನ್​ 01: ತುಮಕೂರು ವಿಶ್ವವಿದ್ಯಾಲಯದ (Tumkur University) 19ನೇ ಘಟಿಕೋತ್ಸವವು ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ (Honorary Doctorate) ನೀಡದಿರಲು ವಿವಿಯ ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣಗೆ ಗೌರವ ಡಾಕ್ಟರೇಟ್​ ನೀಡದಿರಲು ನಿರ್ಧರಿಸಲಾಗಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ತುಮಕೂರು ವಿವಿ 19ನೇ ಘಟಿಕೋತ್ಸವ
  • ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನಿರಾಕರಣೆ
  • ತುಮಕೂರು ವಿಶ್ವವಿದ್ಯಾಲಯದ ವಿಸಿ ಪ್ರೊ.ಎಂ.ವೆಂಕಟೇಶ್ವರಲು ಮಾಹಿತಿ

ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದ್ದಿಷ್ಟು 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರ ಕೊಡುಗೆ ತುಂಬಾನೇ ಇದೆ. ಹೀಗಾಗಿ ಇಬ್ಬರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಆಶಯ ನಮಗಿತ್ತು. ಈ ನಿಟ್ಟಿನಲ್ಲಿ ನಾವು ಮೊನ್ನೆ ಇಬ್ಬರ ಹೆಸರುಗಳನ್ನು ಸೇರಿಸಿದ್ದೆವು. ಆದರೆ, ಪರಿಶೀಲನಾ ಸಮಿತಿಯು ಬೇರೆ ಬೇರೆ ರಾಜ್ಯಗಳಲ್ಲಿ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳೇನು ಹಾಗೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಾವ್ಯಾವ ರಾಜಕಾರಣಿಗಳು ಇದನ್ನು ಸ್ವೀಕರಿಸಿದ್ದಾರೆ ಅಥವಾ ನಿರಾಕರಿಸಿದ್ದಾರೆ ಎಂಬುದರ ಕುರಿತು ಚರ್ಚಿಸಲಾಗಿದೆ.

ಇದನ್ನೂ ಓದಿ: ತುಮಕೂರು ವಿವಿ: ಏಳು ವರ್ಷಗಳೇ ಕಳೆದರೂ ಸರಿಯಾಗಿ ಸಿಮೆಂಟ್ ಕಲಿಸಿಲ್ಲ, ಕಾಮಗಾರಿ ಪೂರ್ಣಗೊಂಡಿಲ್ಲ -ಆದರೂ ಹಾಸ್ಟೆಲ್ ಉದ್ಘಾಟನೆ ಭಾಗ್ಯ!

ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸತೀಶ್ ಜಾರಕಿಹೊಳಿ ಅವರು ತಮಗೆ ಬಂದ ಗೌರವ ಡಾಕ್ಟರೇಟ್ ಅನ್ನು ತಿರಸ್ಕರಿಸಿದ್ದರು. ಅಲ್ಲದೆ, ಸಿದ್ದರಾಮಯ್ಯಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದಾಗ, ಅವರೇ ಖುದ್ದಾಗಿ ಕರೆದು ಈ ರೀತಿ ಕೊಡಬಾರದು ಎಂದು ಹೇಳಿದ್ದರು. ಈ ಎಲ್ಲಾ ವಿಚಾರಗಳನ್ನು ಚರ್ಚಿಸಿದ ಸಮಿತಿಯು, ಇನ್ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂದು ಅಂತಿಮವಾಗಿ ನಿರ್ಧರಿಸಿದೆ ಎಂದರು.

ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ರಾಜಕಾರಣಿಗಳನ್ನು ಹೊರತುಪಡಿಸಿ ಈ ಬಾರಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ, ವಚನಕಾರ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ, ಮತ್ತು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವೃತ್ತಿನಿರತ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.

ರಾಜ್ಯಪಾಲರಿಗೆ ಆಹ್ವಾನ

ಈ ಬಾರಿಯ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್​ರಿಗೆ ಆಹ್ವಾನಿಸಲಾಗಿದ್ದು, ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮ ಇರುವುದರಿಂದ ಅವರು ಬರುವುದು ಇನ್ನೂ ಅಧಿಕೃತವಾಗಿಲ್ಲ. ಘಟಿಕೋತ್ಸವಕ್ಕೂ ಮುನ್ನ ರಾಜ್ಯಪಾಲರು ತುಮಕೂರು ವಿವಿಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ತುಮಕೂರು ಇನ್ನೋವೇಶನ್ ಇನ್ ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್ ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್- ಬೈಸಿಕಲ್ ಇನೀಶಿಯೇಟೀವ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟು 29 ಲಕ್ಷ ರೂ ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪದವಿ ಹಾಗೂ ರ‍್ಯಾಂಕ್​ಗಳ ವಿವರ

ಇನ್ನು ಈ ಬಾರಿಯ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿಗೆ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳಿಗೆ ಪಿಎಚ್.ಡಿ, 2,058 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 8,781 ಅಭ್ಯರ್ಥಿಗಳಿಗೆ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕ್​ಗಳನ್ನು ಘೋಷಿಸಿದ್ದು, ಒಟ್ಟು 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳನ್ನು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಗುತ್ತಿದೆ ಎಂದು ಕುಲಪತಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಫ್ರಿಕಾದಿಂದ ಬಂದ ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ: 1 ದಿನಕ್ಕೆ 4 ಲಕ್ಷ ರೂಪಾಯಿ ಸಂಬಳ

ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಲವು ದಿನಗಳ ವಿಳಂಬದ ನಂತರ ಈ ಸಿನಿಮಾ ಕೊನೆಗೂ ಜೂನ್ 4ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಚಾರದ ವೇಳೆ ರಾಮ್ ಚರಣ್ (Ram Charan) ಅವರ ರಗಡ್ ಲುಕ್ ಮತ್ತು ಲಾಂಗ್ ಹೇರ್ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರೆ, ಅವರ ಜೊತೆಗಿರುವ ಬಾಡಿಗಾರ್ಡ್ ಕೆವಿನ್ ಕುಂಟಾ (Kevin Kunta) ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಸಂಬಳ ಎಷ್ಟು ಎಂಬುದು ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿದೆ.

ಮೂಲತಃ ಆಫ್ರಿಕಾದ ಗಾಂಬಿಯಾ ದೇಶದವರಾದ ಕೆವಿನ್ ಕುಂಟಾ ಸದ್ಯ ಇಟಲಿಯ ಫ್ಲಾರೆನ್ಸ್‌ನಲ್ಲಿ ನೆಲೆಸಿದ್ದಾರೆ. ಇವರು ಕೇವಲ ಸಾಮಾನ್ಯ ಬಾಡಿಗಾರ್ಡ್ ಅಲ್ಲ, ಅಂತರರಾಷ್ಟ್ರೀಯ ಮಟ್ಟದ ವೃತ್ತಿಪರ ಎಂಎಂಎ (Mixed Martial Arts) ಫೈಟರ್. 2021ರಲ್ಲಿ ಇಟಲಿಯ ರಾಷ್ಟ್ರೀಯ ಎಂಎಂಎ ತಂಡದ ಭಾಗವಾಗಿದ್ದ ಕೆವಿನ್, ಹಲವು ಕಠಿಣ ಪಂದ್ಯಗಳಲ್ಲಿ ಭಾಗವಹಿಸಿ ಯಶಸ್ಸು ಕಂಡಿದ್ದಾರೆ. ತಮ್ಮ ದೇಹದಾರ್ಢ್ಯತೆ ಮತ್ತು ಫಿಟ್ನೆಸ್‌ನಿಂದಾಗಿ ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಫಾಲೋವರ್ಸ್ ಹೊಂದಿದ್ದಾರೆ.

ವರದಿಗಳ ಪ್ರಕಾರ, ‘ಪೆದ್ದಿ’ ಚಿತ್ರದ ರಾಷ್ಟ್ರವ್ಯಾಪಿ ಪ್ರಚಾರದ ಸಂದರ್ಭದಲ್ಲಿ ರಾಮ್ ಚರಣ್ ಅವರಿಗೆ ಬಿಗಿ ಭದ್ರತೆ ಒದಗಿಸಲು ಕೆವಿನ್ ಕುಂಟಾ ಅವರನ್ನು ನೇಮಿಸಿಕೊಳ್ಳಲಾಗಿದೆ. ಇದಕ್ಕಾಗಿ ಅವರಿಗೆ ದಿನವೊಂದಕ್ಕೆ ಬರೋಬ್ಬರಿ 2 ಲಕ್ಷದಿಂದ 4 ಲಕ್ಷ ರೂಪಾಯಿವರೆಗೆ ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದು ನಿಜವೇ ಆದಲ್ಲಿ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಬಾಡಿಗಾರ್ಡ್‌ಗಳಲ್ಲಿ ಕೆವಿನ್ ಕೂಡ ಒಬ್ಬರಾಗಲಿದ್ದಾರೆ.

ರಾಮ್ ಚರಣ್ ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಕೆವಿನ್ ನೆರಳಿನಂತೆ ಅವರ ಜೊತೆಯಿರುತ್ತಾರೆ. ಅವರ ಎತ್ತರ ಹಾಗೂ ಬಲಿಷ್ಠ ಕಾಯ ಕೇವಲ ಅಭಿಮಾನಿಗಳನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೊಸ ಟ್ರೆಂಡ್ ಸೃಷ್ಟಿಸಿದೆ. ರಾಮ್ ಚರಣ್ ಕ್ಯಾಶುವಲ್ ಡ್ರೆಸ್‌ನಲ್ಲಿ ಸರಳವಾಗಿ ಕಾಣಿಸಿಕೊಂಡರೆ, ಕೆವಿನ್ ಮಾತ್ರ ಶಾರ್ಪ್ ಸೂಟ್‌ ಧರಿಸಿ ಅತ್ಯಂತ ಸ್ಟೈಲಿಶ್ ಆಗಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಓರ್ವ ಫುಟ್‌ಬಾಲ್ ಆಟಗಾರ ಎಂದ ರಾಮ್ ಚರಣ್; ತಪ್ಪಿಗೆ ಕ್ಷಮೆ ಕೇಳಿದ ನಟ

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಜೊತೆಗೆ ಶಿವರಾಜ್‌ಕುಮಾರ್, ದಿವ್ಯೇಂದು ಶರ್ಮಾ, ರವಿ ಕಿಶನ್, ಬೊಮನ್ ಇರಾನಿ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿರುವ ಈ ಚಿತ್ರವನ್ನು ‘ವೃದ್ಧಿ ಸಿನಿಮಾಸ್’, ‘ಮೈತ್ರಿ ಮೂವಿ ಮೇಕರ್ಸ್’ ಮತ್ತು ‘ಸುಕುಮಾರ್ ರೈಟಿಂಗ್ಸ್’ ಜಂಟಿಯಾಗಿ ನಿರ್ಮಿಸಿವೆ. ಸಿನಿಮಾ ಜೂನ್ 4ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link