Category Archives: Blog

Your blog category

ಆರ್​ಸಿಬಿ ಗೆಲುವಿಗಾಗಿ ಶ್ರಮಿಸಿದ ಈ ತೆರೆ ಮರೆಯ ಹೀರೋಗಳನ್ನು ಮರೆಯುವುದುಂಟೆ..!

Source link

ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು

‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರ ಬಹುದಿನಗಳ ಹಂಬಲವೊಂದು ಕೊನೆಗೂ ಈಡೇರುತ್ತಿದೆ. ತಮ್ಮ ಬಹುನಿರೀಕ್ಷಿತ ‘ವಾರಣಾಸಿ’ (Varanasi) ಚಿತ್ರದ ಪ್ರಚಾರದ ವೇಳೆ ಹೈದರಾಬಾದ್‌ನಲ್ಲಿ ಐಮ್ಯಾಕ್ಸ್ (IMAX) ಸ್ಕ್ರೀನ್ ಇಲ್ಲದಿರುವ ಬಗ್ಗೆ ರಾಜಮೌಳಿ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ದೊಡ್ಡ ಬಜೆಟ್​ನ ಮತ್ತು ದೃಶ್ಯ ವೈಭವದ ಸಿನಿಮಾಗಳನ್ನು ನೀಡುವ ಟಾಲಿವುಡ್‌ನಲ್ಲೇ ಒಂದು ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಥಿಯೇಟರ್ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದರು. ಆದರೆ ಆ ಕೊರತೆಯನ್ನು ಮಹೇಶ್ ಬಾಬು ನೀಗಿಸಿದ್ದಾರೆ.

ಈಗ ‘ವಾರಣಾಸಿ’ ಚಿತ್ರದ ಬಿಡುಗಡೆಗೂ ಮುನ್ನವೇ ರಾಜಮೌಳಿ ಅವರ ಈ ಕನಸು ನನಸಾಗುತ್ತಿದೆ. ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ, ಐಮ್ಯಾಕ್ಸ್ ಸಂಸ್ಥೆಯು ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ಏಷ್ಯನ್ ಸಿನಿಮಾಸ್ ಜೊತೆ ಕೈಜೋಡಿಸುವ ಮೂಲಕ ಹೈದರಾಬಾದ್‌ಗೆ ಭರ್ಜರಿ ಕೊಡುಗೆ ನೀಡುತ್ತಿದೆ. ರಾಜಮೌಳಿ ಬಯಸಿದಂತೆ ನಗರದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಆರಂಭ ಆಗುತ್ತಿದೆ.

ಮಹೇಶ್ ಬಾಬು ನಟನೆಯ, ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರವು ಅಂತಾರಾಷ್ಟ್ರೀಯ ಮಟ್ಟದ ಸಾಹಸ ಪ್ರಧಾನ ಕಥೆಯನ್ನು ಹೊಂದಿದ್ದು, ಅತ್ಯಂತ ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಬಿಡುಗಡೆಯ ಸರಿಯಾದ ಸಮಯದಲ್ಲೇ ಹೈದರಾಬಾದ್‌ಗೆ ಐಮ್ಯಾಕ್ಸ್ ಪರದೆ ಬರುತ್ತಿರುವುದು ಚಿತ್ರಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ನಿರ್ದೇಶಕರು ಯಾವ ದೃಶ್ಯ ವೈಭವವನ್ನು ಕಲ್ಪಿಸಿಕೊಂಡು ಸಿನಿಮಾ ಮಾಡಿದ್ದಾರೋ, ಅದನ್ನು ಅದೇ ತೀವ್ರತೆಯಲ್ಲಿ ಪ್ರೇಕ್ಷಕರು ಐಮ್ಯಾಕ್ಸ್ ಪರದೆಯ ಮೇಲೆ ಸವಿಯಬಹುದು.

ಈ ಐಮ್ಯಾಕ್ಸ್ ಸ್ಕ್ರೀನ್ ಬರೀ ‘ವಾರಣಾಸಿ’ ಚಿತ್ರಕ್ಕಷ್ಟೇ ಸೀಮಿತವಾಗಿಲ್ಲ. ಮುಂಬರುವ ದಿನಗಳಲ್ಲಿ ತೆರೆಕಾಣಲಿರುವ ದೊಡ್ಡ ಬಹುನಿರೀಕ್ಷಿತ ಚಿತ್ರಗಳಾದ ‘ರಾಕಾ’, ‘ಕಲ್ಕಿ 2’, ಯಶ್ ನಟನೆಯ ‘ಟಾಕ್ಸಿಕ್’ ಮತ್ತು ಜೂನಿಯರ್ ಎನ್‌ಟಿಆರ್ ಅವರ ‘ಡ್ರ್ಯಾಗನ್’ ಸಿನಿಮಾಗಳಿಗೂ ಹೈದರಾಬಾದ್​ನಲ್ಲಿ ಐಮ್ಯಾಕ್ಸ್ ಸ್ಕ್ರೀನ್‌ಗಳು ದೊರೆಯುವುದರಿಂದ ಭಾರಿ ಅನುಕೂಲವಾಗಲಿದೆ.

ಇದನ್ನೂ ಓದಿ: ‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ನಿರ್ದೇಶಕ ರಾಜಮೌಳಿ ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ‘ಆರ್​ಆರ್​ಆರ್’ ಸಿನಿಮಾದಿಂದಾಗಿ ಅವರ ಜನಪ್ರಿಯತೆ ಹೆಚ್ಚಿತು. ಹಾಗಾಗಿ ಮುಂಬರುವ ‘ವಾರಣಾಸಿ’ ಸಿನಿಮಾಗೆ ವಿಪರೀತ ಹೈಪ್ ಸೃಷ್ಟಿ ಆಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weather Forecast: ಕರ್ನಾಟಕದಲ್ಲಿ ಮುಂದಿನ ಕೆಲ ದಿನ ಭಾರೀ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು, ಜೂನ್​ 01: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 1 ರಿಂದ 4ರವರೆಗೆ ರಾಜ್ಯದ ಒಳನಾಡು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇದೇ ರೀತಿಯಾಗಿ ಜೂನ್ 3 ರಿಂದ 5ರವರೆಗೆ ಕರಾವಳಿ ಜಿಲ್ಲೆಗಳಲ್ಲೂ ಸಹ ಮಳೆಯಾಗುವ ಸಾಧ್ಯತೆ ಇದೆ.

ಮುಖ್ಯಾಂಶಗಳು

  • ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​
  • ರಾಜ್ಯದಲ್ಲಿ ಮಳೆ ಜೊತೆಗೆ ತಾಪಮಾನ ಏರಿಕೆ
  • ಮುಂಗಾರು ಮಳೆ ಮತ್ತು ಹವಾಮಾನದಲ್ಲಿ ಬದಲಾವಣೆಗಳು

ಯೆಲ್ಲೋ ಅಲರ್ಟ್ ಘೋಷಣೆ

ಈ ದಿನಗಳಂದು ರಾಜ್ಯದ ಪ್ರತ್ಯೇಕ ಪ್ರದೇಶಗಳಲ್ಲಿ ಸುಮಾರು 64.5 ಮಿ.ಮೀನಿಂದ 115.5 ಮಿ.ಮೀ ನಷ್ಟು ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸುರಕ್ಷಿತವಾಗಿರುವಂತೆ ಕೋರಲಾಗಿದೆ.

KSNDMC ಟ್ವೀಟ್​

ಇನ್ನು ರಾಜ್ಯದಲ್ಲಿ ಮುಂದಿನ 3 ದಿನಗಳವರೆಗೆ ಗರಿಷ್ಠ ತಾಪಮಾನ ಹೆಚ್ಚಾಗಲಿದ್ದು, ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ  ಮುನ್ಸೂಚನೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಆದರೆ, ಮಧ್ಯಾಹ್ನದ ನಂತರ ಹವಾಮಾನದಲ್ಲಿ ಏರುಪೇರಾಗಲಿದ್ದು, ಗಾಳಿಯ ದಿಕ್ಕಿನಲ್ಲಿನ ಬದಲಾವಣೆಯಿಂದಾಗಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ: Karnataka Weather Forecast: ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಜೋರು! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಜೂನ್ 1 ರಿಂದ 3ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್​ನಿಂದ 38 ಡಿಗ್ರಿ ಸೆಲ್ಸಿಯಸ್​ವರೆಗೆ ಇರಲಿದೆ. ಅದೇ ರೀತಿಯಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ತಾಪಮಾನವು ತುಸು ಕಡಿಮೆಯಿರಲಿದ್ದು, ಸರಾಸರಿ 28 ಡಿಗ್ರಿ ಸೆಲ್ಸಿಯಸ್​ನಿಂದ 32 ಡಿಗ್ರಿ ಸೆಲ್ಸಿಯಸ್​​ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026 Final: ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್; ವಿಡಿಯೋ

ತನ್ನದೇ ಆಟಗಾರರ ಕಾಲೆಳೆದು ನಗೆ ಚಟಾಕಿ ಹಾರಿಸಲೆಂದೇ ಕಲಾವಿದನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿರುವ ಏಕೈಕ ಐಪಿಎಲ್ ಫ್ರಾಂಚೈಸಿಯೇ ಎಂದರೆ ಅದು ಆರ್​ಸಿಬಿ. 2014 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡ ನಿರೂಪಕ ಮತ್ತು ಹಾಸ್ಯಗಾರ ಡ್ಯಾನಿಶ್ ಸೇಠ್ ಕಿತಾಪತಿ ಮಾಡುವುದರಿಂದಲೇ ಫೇಮಸ್. ಆರ್​ಸಿಬಿ ಪಾಳಯದಲ್ಲಿ ಮಿ. ನಾಗ್ಸ್ ಎಂದೇ ಖ್ಯಾತರಾಗಿರುವ ಡ್ಯಾನಿಶ್ ಸೇಠ್ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಕ್ಯಾಂಪ್​​ಗೆ ಭೇಟಿ ನೀಡಿ ತಂಡದ ಆಟಗಾರರ ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಅದರಂತೆ ಈ ಭಾರಿಯ ಐಪಿಎಲ್​ನಲ್ಲೂ ಅದೇ ಕೆಲಸ ಮಾಡಿರುವ ಡ್ಯಾನಿಶ್ ಸೇಠ್ ಫೈನಲ್​ನಲ್ಲಿ ಆರ್​ಸಿಬಿ ಗೆದ್ದ ಬಳಿಕ ಪ್ರತಿಯೊಬ್ಬ ಆಟಗಾರನನ್ನು ತನ್ನದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಇಲ್ಲಿಗೆ ನಿಲ್ಲದ ನಾಗ್ಸ್ ತಂಡದ ನೂತನ ಮಾಲೀಕರು ಹಾಗೂ ಅಧ್ಯಕ್ಷರು ಆಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ ಹಾಗೂ ಅವರ ಸಹೋದರಿ ಅನನ್ಯಶ್ರೀ ಬಿರ್ಲಾ ಅವರನ್ನು ಚೇಷ್ಟೇಯ ಪ್ರಶ್ನೆಗಳ ಮೂಲಕ ಕಾಡಿದ್ದಾರೆ. ಅದರ ವಿಡಿಯೋವನ್ನು ಆರ್​ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗಿದ್ರೆ ಮಿ. ನಾಗ್ಸ್ ತಮ್ಮ ಕಿತಾಪತಿಯ ಪ್ರಶ್ನೆಗಳ ಮೂಲಕ ಯಾವೆಲ್ಲ ಆಟಗಾರರನ್ನು ಹೇಗೆಲ್ಲ ಕಾಡಿದರು ಎಂಬುದನ್ನು ನೋಡಿ.

Source link

ಕ್ಷೇತ್ರ ತ್ಯಾಗಕ್ಕೆ ಸುಮಲತಾಗೆ ಸಿಗುತ್ತಾ ಪ್ರತಿಫಲ? ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

ಬೆಂಗಳೂರು, (ಜೂನ್ 01): ಕರ್ನಾಟಕ ರಾಜ್ಯಸಭಾ  ಚುನಾವಣೆ (Karnataka Rajyasabha Election) ತೀವ್ರ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​​ನಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇವಲ ಒಂದೇ ಸ್ಥಾನ ದೊರೆಯಲಿದ್ದು, ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರನ್ನೆ (HD Devegowda) ಮುಂದುವರೆಸಬೇಕೆಂದು ಪಟ್ಟು ಹಿಡಿದಿದೆ. ಆದರೂ  ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ (BJP) ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ. ಮೊನ್ನೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೆಲವರ ಹೆಸರುಗಳು ಪ್ರಸ್ತಾಪವಾಗಿದೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ಆದರೂ ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ (dv sadananda gowda) ಅವರ ಹೆಸರು ಶಿಫಾರಸ್ಸು ಮಾಡಲಾಗಿದೆ. ಈ ಎಲ್ಲಾ ವಿದ್ಯಾಮಾನಗಳ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ಹೈಕಮಾಂಡ್, ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬಗ್ಗೆ ವಿವರ ಕೇಳಿದ್ದು, ಸಂಚಲನದ ಜೊತೆ ಕುತೂಹಲ ಮೂಡಿಸಿದೆ.

ಮುಖ್ಯಾಂಶಗಳು

  • ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ
  • NDA ಅಭ್ಯರ್ಥಿಯಾಗಿ ಎಚ್​ಡಿ ದೇವೇಗೌಡ ಸ್ಪರ್ಧೆ ಬಗ್ಗೆ ಇನ್ನೂ ಸಿಗದ ಖಚಿತತೆ
  • ಮಾಜಿ ಸಂಸದೆ ಸುಮಲತಾ ಬಗ್ಗೆ ವಿವರ ಕೇಳಿರುವ BJP ಹೈಕಮಾಂಡ್
  • ರಾಜ್ಯ ಘಟಕದಿಂದ ಸುಮಲತಾ ಬಗ್ಗೆ ಮಾಹಿತಿ ಕೇಳಿರುವ ಹೈಕಮಾಂಡ್
  • ಈಗಾಗಲೇ ಸದಾನಂದಗೌಡ ಹೆಸರು ಕೇಂದ್ರೀಯ ಸಂಸದೀಯ ಮಂಡಳಿಗೆ ಶಿಫಾರಸು ಮಾಡಿರುವ ರಾಜ್ಯ ಬಿಜೆಪಿ

ಸುಮಲತಾ ಬಗ್ಗೆ ವಿವರಣೆ ಕೇಳಿದ ಹೈಕಮಾಂಡ್

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ಸಹ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದರ ಮಧ್ಯೆ ರಾಜ್ಯ ಬಿಜೆಪಿ ಸಹ ಕೇಂದ್ರೀಯ ಸಂಸದೀಯ ಮಂಡಳಿಗೆ ಸದಾನಂದಗೌಡ ಹೆಸರು ಶಿಫಾರಸು ಮಾಡಿದೆ. ಆದ್ರೆ, ಹೈಕಮಾಂಡ್ ಮಟ್ಟದಲ್ಲಿ ಸುಮಲತಾ ಹೆಸರು ಮುನ್ನಲೆಗೆ ಬಂದಿದ್ದು, ರಾಜ್ಯ ನಾಯಕರಿಂದ ಸುಮಲತಾ ರಾಜಕೀಯ ಪ್ರಭಾವದ ಕುರಿತು ವಿವರಣೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತ್ಯಾಗ ಸಿಗುತ್ತಾ ಪ್ರತಿಫಲ?

ಹಾಲಿ ಮಂಡ್ಯದ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ಜೆಡಿಎಸ್​​​ಗೆ ತ್ಯಾಗ ಮಾಡಿದ್ದರು. ಇದರ ಫಲವಾಗಿ ಎಚ್​​​ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಇದೀಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಸುಮಲತಾ ಮಾಡಿದ ಈ ದೊಡ್ಡ ತ್ಯಾಗವನ್ನು ಬಿಜೆಪಿ ವರಿಷ್ಠರು ಇದೀಗ ಗಣನೆಗೆ ತೆಗೆದುಕೊಂಡಿದ್ದು, ರಾಜ್ಯಸಭೆಯ ಟಿಕೆಟ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ತ್ಯಾಗಕ್ಕೆ ಪ್ರತಿಫಲ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅಚ್ಚರಿ ಆಯ್ಕೆಯಲ್ಲಿ ಖ್ಯಾತ ಪಡೆದುಕೊಂಡಿದೆ. ಹೀಗಾಗಿ ಕರ್ನಾಟಕ ರಾಜ್ಯಸಭೆಗೆ ಸುಮಲತಾ ಅಂಬರೀಶ್ ಅಚ್ಚರಿ ಆಯ್ಕೆಯಾಗುತ್ತಾರಾ ಎನ್ನುವುದೇ ಕುತೂಹಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪದೇಪದೇ ತಲೆನೋವು ಬರುತ್ತಾ? ಈ ರೀತಿಯಾಗುವುದಕ್ಕೂ ಹೈ ಬಿಪಿಗೂ ಸಂಬಂಧವಿದೆಯೇ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (High Blood Pressure) ಸಮಸ್ಯೆ ಯುವಕರಲ್ಲಿಯೂ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅನೇಕರಲ್ಲಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಹಲವರು ಸಾಮಾನ್ಯ ದಣಿವು, ಒತ್ತಡ ಅಥವಾ ನಿದ್ರಾಹೀನತೆಯ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ನಿಮಗೆ ತಿಳಿದಿರಲಿ ಈ ರೀತಿ ಪದೇಪದೇ ಕಾಣಿಸಿಕೊಳ್ಳುವ ತಲೆನೋವು ಆರೋಗ್ಯ ಸಮಸ್ಯೆಯ ಎಚ್ಚರಿಕೆಯ ಸಂಕೇತವೂ ಆಗಿರಬಹುದು. ಹೌದು, ಇದು ದೇಹ ನೀಡುವ ಸೂಚನೆಯಾಗಿರಬಹುದು. ಇದು ಬಿಪಿ ಬಂದಿರುವ ಸೂಚನೆಯಾಗಿರಬಹುದು. ಹಾಗಾದರೆ ಹೈ ಬಿಪಿ ಮತ್ತು ತಲೆನೋವಿಗಿರುವ ಸಂಬಂಧವೇನು, ಯಾವ ಲಕ್ಷಣಗಳು ಕಂಡುಬಂದಾಗ ತಕ್ಷಣ ಬಿಪಿ ಪರೀಕ್ಷೆ ಮಾಡಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೈ ಬಿಪಿ ಮತ್ತು ತಲೆನೋವಿಗೂ ಇರುವ ಸಂಬಂಧವೇನು?

ವೈದ್ಯರ ಪ್ರಕಾರ, ಪ್ರತಿ ಬಾರಿ ಕಂಡುಬರುವ ತಲೆನೋವಿಗೂ ಹೈ ಬಿಪಿಗೂ ಸಂಬಂಧವಿರುವುದಿಲ್ಲ. ಮೈಗ್ರೇನ್, ಮಾನಸಿಕ ಒತ್ತಡ, ನೀರಿನ ಕೊರತೆ, ಸರಿಯಾದ ನಿದ್ರೆಯ ಅಭಾವ ಸೇರಿದಂತೆ ಹಲವು ಕಾರಣಗಳಿಂದ ತಲೆನೋವು ಕಾಣಿಸಬಹುದು. ಆದರೆ ರಕ್ತದೊತ್ತಡ ಅತಿಯಾಗಿ ಏರಿದಾಗ ಕೆಲವರಲ್ಲಿ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇವಲ ತಲೆನೋವಿನ ಆಧಾರದ ಮೇಲೆ ಹೈ ಬಿಪಿ ಇದೆ ಎಂದು ನಿರ್ಧರಿಸುವುದು ಸರಿಯಲ್ಲ. ಪದೇಪದೇ ತಲೆನೋವು ಕಾಣಿಸುತ್ತಿದ್ದರೆ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

ಯಾವ ಲಕ್ಷಣಗಳು ಕಂಡುಬಂದರೆ ತಕ್ಷಣ ಬಿಪಿ ಪರೀಕ್ಷೆ ಮಾಡಿಸಬೇಕು?

  • ಪದೇಪದೇ ತಲೆನೋವು
  • ತಲೆಸುತ್ತು
  • ದೃಷ್ಟಿ ಮಸುಕಾಗುವುದು
  • ಎದೆನೋವು
  • ಉಸಿರಾಟದ ತೊಂದರೆ
  • ಅತಿಯಾದ ದಣಿವು
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
    ಇದಲ್ಲದೆ, ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇರುವವರು, ಮಧುಮೇಹ, ಸ್ಥೂಲಕಾಯ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳಿರುವವರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಹೈ ಬಿಪಿಯನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ?

  • ಆರೋಗ್ಯಕರ ಜೀವನಶೈಲಿಯನ್ನು ರೂಡಿಸಿಕೊಳ್ಳಿ
  • ಸಮತೋಲಿತ ಆಹಾರ ಸೇವಿಸಿ
  • ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ
  • ಪ್ರತಿದಿನ ವ್ಯಾಯಾಮ ಮಾಡಿ
  • ಸಾಕಷ್ಟು ನಿದ್ರೆ ಪಡೆಯಿರಿ
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ
  • ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ

ಹೈ ಬ್ಲಡ್ ಪ್ರೆಶರ್ ಅನ್ನು “ಸೈಲೆಂಟ್ ಕಿಲ್ಲರ್” ಎಂದು ಕರೆಯಲಾಗುತ್ತದೆ. ಏಕೆಂದರೆ ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆದ್ದರಿಂದ ಪದೇಪದೇ ತಲೆನೋವು ಕಾಣಿಸಿಕೊಂಡರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ಕಡೆಗಣಿಸದೆ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಹೃದಯ, ಕಿಡ್ನಿ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಭಾರತ-ಓಮನ್ ವ್ಯಾಪಾರ ಒಪ್ಪಂದ ಜಾರಿಯಲ್ಲಿ; ಭಾರತಕ್ಕೇನು ಲಾಭ, ಒಪ್ಪಂದ ಮುಖ್ಯಾಂಶಗಳೇನು? ಇಲ್ಲಿದೆ ಮಾಹಿತಿ

ನವದೆಹಲಿ, ಜೂನ್ 1: ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಇಂದು (ಜೂನ್ 1, 2026) ಹೊಸ ಇತಿಹಾಸ ಸೃಷ್ಟಿಯಾಗಿದೆ. ಎರಡೂ ದೇಶಗಳ ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA – Comprehensive Economic Partnership Agreement) ಅಥವಾ ಮುಕ್ತ ವ್ಯಾಪಾರ ಒಪ್ಪಂದವು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.

ಈ ಒಪ್ಪಂದದ ಅಡಿಯಲ್ಲಿ, ಭಾರತದಿಂದ ಓಮನ್‌ ದೇಶಕ್ಕೆ ರಫ್ತಾಗುವ ಶೇಕಡಾ 80 ಕ್ಕೂ ಹೆಚ್ಚು ಸರಕುಗಳ ಮೇಲಿನ ಆಮದು ಸುಂಕವನ್ನು (Import Duty) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಅಥವಾ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಇದರಿಂದಾಗಿ ಓಮನ್ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಗೆ ಸಿಗಲಿದ್ದು, ರಫ್ತು ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಭಾರತದ ಯಾವೆಲ್ಲಾ ವಲಯಗಳಿಗೆ ಲಾಭ?

ಓಮನ್ ದೇಶವು ಪ್ರಸ್ತುತ ಭಾರತೀಯ ಉತ್ಪನ್ನಗಳ ಮೇಲೆ 5% ರಷ್ಟು ಆಮದು ಸುಂಕವನ್ನು ವಿಧಿಸುತ್ತಿತ್ತು. ಇಂದಿನಿಂದ ಸುಂಕ ಮುಕ್ತವಾಗಿರುವುದರಿಂದ ಭಾರತದ ಈ ಕೆಳಗಿನ ಪ್ರಮುಖ ವಲಯಗಳಿಗೆ ಭಾರಿ ಅನುಕೂಲವಾಗಲಿದೆ:

  • ಪೆಟ್ರೋಲಿಯಂ ಉತ್ಪನ್ನಗಳು ಮತ್ತು ತೈಲ
  • ಚಿನ್ನ ಮತ್ತು ಆಭರಣಗಳು (Jewellery)
  • ಎಂಜಿನಿಯರಿಂಗ್ ಸರಕುಗಳು ಹಾಗೂ ಯಂತ್ರೋಪಕರಣಗಳು
  • ಫಾರ್ಮಾಸ್ಯುಟಿಕಲ್ಸ್ (ಔಷಧ ವಲಯ)
  • ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಬಿಡಿಭಾಗಗಳು
  • ಕೃಷಿ ಉತ್ಪನ್ನಗಳು (ಅಕ್ಕಿ, ಚಹಾ, ಕಾಫಿ, ಮಸಾಲೆ ಪದಾರ್ಥಗಳು)

ಇದನ್ನೂ ಓದಿ: ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

ಭಾರತಕ್ಕೆ ಓಮನ್ ಏಕೆ ಮಹತ್ವದ್ದೆನಿಸಿದೆ?

ಗಲ್ಫ್ ಸಹಕಾರ ಮಂಡಳಿ (GCC) ಒಕ್ಕೂಟದಲ್ಲಿ ಓಮನ್ ಭಾರತದ ಅತ್ಯಂತ ಹಳೆಯ ಮತ್ತು ನಂಬಿಕಸ್ಥ ಸ್ಟ್ರಾಟಿಜಿಕ್ ಪಾರ್ಟ್ನರ್ ದೇಶವಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು $12.5 ಬಿಲಿಯನ್ (ಅಂದಾಜು ₹1 ಲಕ್ಷ ಕೋಟಿಗೂ ಅಧಿಕ) ತಲುಪಿತ್ತು. ಈ ಒಪ್ಪಂದದಿಂದಾಗಿ ಮುಂಬರುವ ಮುಂದಿನ ಕೆಲವು ವರ್ಷಗಳಲ್ಲಿ ಇದು $20 ಬಿಲಿಯನ್ ದಾಟುವ ಅಂದಾಜಿದೆ.

ಸೇವಾ ವಲಯ ಹಾಗೂ ಉದ್ಯೋಗಾವಕಾಶಗಳ ವೃದ್ಧಿ

ಕೇವಲ ವಸ್ತುಗಳ ವ್ಯಾಪಾರ ಅಷ್ಟೇ ಅಲ್ಲದೆ, ಸೇವಾ ವಲಯದಲ್ಲೂ (Services) ಈ ಒಪ್ಪಂದ ದೊಡ್ಡ ಬದಲಾವಣೆ ತರಲಿದೆ. ಭಾರತದ ಐಟಿ (IT) ವೃತ್ತಿಪರರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಇಂಜಿನಿಯರ್‌ಗಳು, ವೈದ್ಯರು ಮತ್ತು ನರ್ಸ್‌ಗಳಿಗೆ ಓಮನ್‌ನಲ್ಲಿ ಸುಲಭವಾಗಿ ಕೆಲಸದ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ. ಇದು ಓಮನ್‌ನಲ್ಲಿರುವ ಲಕ್ಷಾಂತರ ಅನಿವಾಸಿ ಭಾರತೀಯರಿಗೂ (NRIs) ನೆರವಾಗಲಿದೆ.

ಇದನ್ನೂ ಓದಿ: ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?

ಇನ್ನು, ಓಮನ್‌ನಿಂದ ಭಾರತಕ್ಕೆ ಆಮದಾಗುವ ರಸಗೊಬ್ಬರ (Fertilizers), ಪೆಟ್ರೋಕೆಮಿಕಲ್ಸ್ ಮತ್ತು ಅಲ್ಯೂಮಿನಿಯಂ ಮುಂತಾದ ಕಚ್ಚಾ ವಸ್ತುಗಳು ಕಡಿಮೆ ದರದಲ್ಲಿ ಭಾರತಕ್ಕೆ ಸಿಗಲಿವೆ. ಇದು ಭಾರತೀಯ ಕೃಷಿ ಮತ್ತು ಉತ್ಪಾದನಾ ವಲಯಕ್ಕೆ ಆರ್ಥಿಕವಾಗಿ ಬಲ ತುಂಬಲಿದೆ.

ಒಟ್ಟಾರೆಯಾಗಿ, ಯುಎಇ (UAE) ಮತ್ತು ಆಸ್ಟ್ರೇಲಿಯಾದ ನಂತರ ಭಾರತವು ಮಾಡಿಕೊಂಡಿರುವ ಮತ್ತೊಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದ್ದು, ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಆರ್ಥಿಕ ಹಿಡಿತವನ್ನು ಇದು ಮತ್ತಷ್ಟು ಗಟ್ಟಿಗೊಳಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಸಿನಿಮಾ ಬಳಿಕ ಮತ್ತೆ ಸಕ್ರಿಯವಾದ ದಾವೂದ್ ಇಬ್ರಾಹಿಂ ಗ್ಯಾಂಗ್ ‘ಡಿ ಕಂಪನಿ’?

ಬಾಲಿವುಡ್‌ನಲ್ಲಿ ಸೂಪರ್‌ ಹಿಟ್ ಆದ ‘ಧುರಂಧರ್’ (Dhurandhar) ಚಿತ್ರವು ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಡಿ-ಕಂಪನಿಯನ್ನು (D-Company) ಕೆರಳಿಸಿದೆ. ರಣವೀರ್ ಸಿಂಗ್ ನಟನೆಯ ಈ ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ತನ್ನ ಮುಂಬೈ ನೆಟ್‌ವರ್ಕ್ ಅನ್ನು ಮತ್ತೆ ಸಕ್ರಿಯಗೊಳಿಸಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿರುವ ‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹೇಬ್’ ಎಂಬ ಪಾತ್ರವೊಂದಿದೆ. ಮರಣ ಶಯ್ಯೆಯಲ್ಲಿರುವಂತೆ ತೋರಿಸಲಾದ ಈ ಪಾತ್ರವು ಭೂಗತ ದೊರೆ ದಾವೂದ್ ಇಬ್ರಾಹಿಂನನ್ನೇ ಹೋಲುತ್ತದೆ. ಮೂಲಗಳ ಪ್ರಕಾರ, ಈ ದೃಶ್ಯಗಳಿಂದ ತೀವ್ರ ಆಕ್ರೋಶಗೊಂಡಿರುವ ಡಿ-ಕಂಪನಿಯು, ದಾವೂದ್ ಇನ್ನೂ ಬದುಕಿದ್ದಾನೆ ಮತ್ತು ಸಕ್ರಿಯನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಮುಂಬೈನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ. ಭೂಗತ ಜಗತ್ತಿನಲ್ಲಿ ಮತ್ತು ಸುಲಿಗೆ ದಂಧೆಯಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ದಾವೂದ್ ಗ್ಯಾಂಗ್, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಕೊನೆಯ ಹತಾಶ ಪ್ರಯತ್ನ ಇದು ಎನ್ನಲಾಗಿದೆ.

ಭಾರತದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ದಾವೂದ್ ಸಂಚು ರೂಪಿಸಿದ್ದಾನೆ. ಇದಕ್ಕಾಗಿ ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಛೋಟಾ ಶಕೀಲ್ ಗ್ಯಾಂಗ್‌ಗೆ ವಹಿಸಲಾಗಿತ್ತು. ಹೀಗೆ ಮುಂಬೈನ ರಸ್ತೆಗಳಿಂದ ಆಯ್ಕೆಯಾದ ಯುವಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮೂಲಕ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿತ್ತು. ಶೂಟರ್ ಮುನ್ನಾ ಜಿಂಗಾಡಾಗೆ ಈ ಉಗ್ರ ಸಂಚನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನೀಡಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.

ಈ ಕಾರ್ಯಾಚರಣೆಗೆ ನೇಮಕಗೊಂಡ ಯುವಕರಿಗೆ ಇದರ ಹಿಂದಿನ ಅಸಲಿ ಕಾರಣವನ್ನೇ ತಿಳಿಸಿರಲಿಲ್ಲ. ಇತ್ತೀಚೆಗೆ ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿದ್ದ ಅಕ್ರಮ ಮಸೀದಿಯೊಂದರ ವಿರುದ್ಧ ನಡೆದ ಬುಲ್ಡೋಜರ್ ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು, ಯುವಕರನ್ನು ಧಾರ್ಮಿಕವಾಗಿ ಪ್ರಚೋದಿಸಿ ಈ ಉಗ್ರ ಜಾಲಕ್ಕೆ ಸೆಳೆಯಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ

ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಜಗತ್ತಿನ ನಡುವಿನ ಈ ಅಪಾಯಕಾರಿ ಲಿಂಕ್ ಅನ್ನು ದೆಹಲಿ ಪೊಲೀಸರು ಇತ್ತೀಚೆಗೆ ಭೇದಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಭಾರತೀಯ ತನಿಖಾ ಸಂಸ್ಥೆಗಳು ದೇಶದ ಮೇಲಿದ್ದ ದೊಡ್ಡ ಗಂಡಾಂತರವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರಕ್ಕೆ ಆರು ಜಯ; ಈತ ಆಡಿದ ಪಂದ್ಯಗಳಲ್ಲಿ ಆರ್​ಸಿಬಿ ಸೋಲಲೇ ಇಲ್ಲ

ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿಯೇ 2026 ರ ಐಪಿಎಲ್ ಅಖಾಡಕ್ಕೆ ಧುಮುಕ್ಕಿದ್ದ ಆರ್​ಸಿಬಿ ಕೊನೆಗೂ ತನ್ನ ಗುರಿಯನ್ನು ಮುಟ್ಟಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಇಡೀ ಸೀಸನ್ ಉದ್ದಕ್ಕೂ ಅಲ್ಲಲ್ಲಿ ಕೊಂಚ ಎಡವಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಪಾರುಪತ್ಯ ಮೆರೆದಿತ್ತು. ಅದರಲ್ಲೂ ಲೀಗ್ ಹಂತದಲ್ಲಿ ಆಡಿದ14 ಲೀಗ್ ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ ಆರ್​ಸಿಬಿ, ಪ್ಲೇಆಫ್​ನಲ್ಲಿ ಕ್ವಾಲಿಫೈಯರ್ 1 ಮತ್ತು ಫೈನಲ್ ಪಂದ್ಯವನ್ನು ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು ತಂಡದ ಈ ಸಾಧನೆಗೆ ಸಂಘಟಿತ ಹೋರಾಟವೇ ಕಾರಣವಾಗಿತ್ತು.

ಈ ಆವೃತ್ತಿಯಲ್ಲಿ ಆರ್​ಸಿಬಿ ಸೋತಿದ್ದು, ಕೇವಲ ಐದು ಪಂದ್ಯಗಳನ್ನು ಮಾತ್ರ. ಆದಾಗ್ಯೂ ಆರ್​ಸಿಬಿ ಪರ ಇದೇ ಮೊದಲ ಬಾರಿಗೆ ಐಪಿಎಲ್ ಆಡಿದ್ದ ನ್ಯೂಜಿಲೆಂಡ್​ನ ವೇಗದ ಬೌಲರ್ ಜಾಕೋಬ್ ಡಫ್ಫಿಗೆ ಈ ಆವೃತ್ತಿಯಲ್ಲಿ ಒಂದೇ ಒಂದು ಸೋಲನ್ನು ಎದುರಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮೇಲೆ ಹೇಳಿದಂತೆ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಡಫ್ಫಿ ಚೊಚ್ಚಲ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ ಎತ್ತಿಹಿಡಿಯುವ ಮೂಲಕ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು.

ಆರಕ್ಕೆ ಆರು ಪಂದ್ಯಗಳಲ್ಲೂ ಜಯ

ಜಾಕೋಬ್ ಡಫಿ ಐಪಿಎಲ್ 2026 ರಲ್ಲಿ ಫೈನಲ್ ಸೇರಿದಂತೆ ಆರು ಪಂದ್ಯಗಳನ್ನು ಆಡಿದರು. ಅವರು ಆಡಿದ ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ಗೆಲುವು ಸಾಧಿಸಿತು. ಈ ಮೂಲಕ ಡಫ್ಫಿ ಒಂದೇ ಒಂದು ಪಂದ್ಯವನ್ನು ಸೋಲದೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆರ್‌ಸಿಬಿ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆದ ಡಫ್ಫಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್​ನ ಮೊದಲ ಪಂದ್ಯದಲ್ಲಿ 22 ರನ್‌ ನೀಡಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆ ನಂತರ ಸಿಎಸ್​ಕೆ ವಿರುದ್ಧ ನಡೆದ ಮುಂದಿನ ಪಂದ್ಯದಲ್ಲಿಯೂ 2 ವಿಕೆಟ್ ಕಬಳಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ಪಡೆದ ಡಫ್ಫಿಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಸಿಗಲಿಲ್ಲ. ಆದಾಗ್ಯೂ, ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ ಮತ್ತೆ ಆಡುವ ಅವಕಾಶ ಪಡೆದಿದ್ದ ಡಫ್ಫಿ 3 ವಿಕೆಟ್ ಕಬಳಿಸಿದರು. ಅದಾದ ಬಳಿಕ ನಡೆದ ಫೈನಲ್‌ ಪಂದ್ಯದಲ್ಲಿ ಡಫ್ಫಿಗೆ ವಿಕೆಟ್ ಸಿಗಲಿಲ್ಲ. ಆದಾಗ್ಯೂ ಉಳಿದವರ ಪ್ರದರ್ಶನದಿಂದಾಗಿ ಆರ್‌ಸಿಬಿ ಕಪ್ ಗೆದ್ದುಕೊಂಡಿತು. ಇನ್ನು ಈ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಡಫ್ಫಿ 9 ವಿಕೆಟ್ ಕಬಳಿಸಿದರು.

ಜಾಕೋಬ್ ಡಫ್ಫಿ ವೃತ್ತಿಜೀವನ

ಜಾಕೋಬ್ ಡಫ್ಫಿ ಟಿ20 ಕ್ರಿಕೆಟ್‌ನಲ್ಲಿ ನಂಬರ್ ಒನ್ ಬೌಲರ್ ಕೂಡ ಆಗಿದ್ದಾರೆ. ಆಡಿರುವ 48 ಪಂದ್ಯಗಳಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಡಫ್ಫಿ ಆಡಿರುವ 19 ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದು, ಟೆಸ್ಟ್ ಕ್ರಿಕೆಟ್​ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 9 ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ದಿ ಹಂಡ್ರೆಡ್​ ಲೀಗ್​ನಲ್ಲಿ 8 ವಿಕೆಟ್‌ಗಳು ಮತ್ತು ಟಿ20 ಬ್ಲಾಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಿಂದ ಲಾಬಿ: ಇತ್ತ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ಪೂಜೆ ಪುನಸ್ಕಾರ

ಅಭಿಮಾನಿಗಳಿಂದ ಅರೆ ಬೆತ್ತಲೆ ಸೇವೆImage Credit source: tv9 kannada

ಕೋಲಾರ, ಜೂನ್​ 01: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೂನ್​ 3ರಂದು ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿಲಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ (DK Shivakumar) ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆದಿದ್ದು, ಈಗಾಗಲೇ ಜಿಲ್ಲೆಯ ಶಾಸಕರು ದೆಹಲಿಗೆ ತೆರಳಿದ್ದಾರೆ. ಆದರೆ ಇತ್ತ ಅಭಿಮಾನಿಗಳು ಮತ್ತು ಬೆಂಬಲಿಗರು ಇನ್ನಿಲ್ಲದ ಸರ್ಕಸ್​ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಜೋರಾದ ಲಾಬಿ
  • ಇತ್ತ ಅಭಿಮಾನಿಗಳಿಂದ ನಾನಾ ಕಸರತ್ತು
  • ದೇವಾಲಯದಲ್ಲಿ ವಿಶೇಷ ಪೂಜೆ, ಅರೆ ಬೆತ್ತಲೆ ಸೇವೆ

ಡಿಕೆ ಶಿವಕುಮಾರ್​ ಸಿಎಂ ಆಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ನಡುವೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ. ಅದರಲ್ಲೂ ಮೂರು ಬಾರಿ ಶಾಸಕರಾಗಿ ಜಿಲ್ಲೆಯ ಹಿರಿಯ ಶಾಸಕ ಹಾಗೂ ಎಸ್​.ಸಿ ಬಗಲೈ ಸಮುದಾಯದ ಶಾಸಕ ಎಸ್.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಬೇಕೆಂದು ಬಂಗಾರಪೇಟೆ ಕ್ಷೇತ್ರದ ಮುಖಂಡರು ಹಾಗೂ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

ದೇವಾಲಯದಲ್ಲಿ ಅರೆ ಬೆತ್ತಲೆ ಸೇವೆ

ಇಂದು ಅವರ ಹುಟ್ಟುಹಬ್ಬ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲೆಂದು ಬಂಗಾರಪೇಟೆಯ ಶ್ರೀಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಗಿದೆ. ನಂತರ ದೇವಾಲಯ ಎದುರು ಅರೆ ಬೆತ್ತಲೆಯಾಗಿ ಮಂಡಿಯೂರಿ ಕುಳಿತು ದೇವಾಲಯದ ಮೆಟ್ಟಿಲುಗಳನ್ನು ಹತ್ತುವ ಸಚಿವ ಸ್ಥಾನ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ದೇವಾಲಯದ ಆವರಣದಲ್ಲಿ ಉರುಳು ಸೇವೆ ಕೂಡ ಮಾಡಿದರು.

ಇದನ್ನೂ ಓದಿ: ಸಂಪುಟ ಸೇರಲು ಕಸರತ್ತು: ಡಿಕೆ ಶಿವಕುಮಾರ್​ ನಿವಾಸಕ್ಕೆ ಮಾಜಿ ಸಚಿವರು, ಶಾಸಕರ ಪರೇಡ್‌!

ಇನ್ನು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕಾಂಗ್ರೆಸ್​ ಶಾಸಕರಿದ್ದು, ಆ ಪೈಕಿ ಬಂಗಾರಪೇಟೆ ಶಾಸಕ ಎಸ್​.ಎನ್​, ನಾರಾಯಣಸ್ವಾಮಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳುರು ಗ್ರಾಮಾಂತರ ಜಿಲ್ಲೆಗಳ ಪೈಕಿ ಎಸ್.ಸಿ. ಬಲಗೈ ಸಮುದಾಯದ ಏಕೈಕ ಶಾಸಕ ಹಾಗೂ ಮೂರು ಬಾರಿ ಸತತವಾಗಿ ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇನ್ನು ಹಿರಿಯ ಶಾಸಕ ಅನ್ನೋ ಕಾರಣಕ್ಕೆ ಉಳಿದ ಶಾಸಕರಾದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಕೊತ್​ತೂರು ಮಂಜುನಾಥ್​ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರುಗಳಾದ ನಸೀರ್ ಅಹಮದ್ ಮತ್ತು ಅನಿಲ್ ಕುಮಾರ್ ಕೂಡ ಎಸ್.ಎನ್​.ನಾರಾಯಣ ಸ್ವಾಮಿಗೆ ಸಚಿವ ಸ್ಥಾನ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

ಮಹಿಳಾ ಕೋಟಾದಡಿ ಸಚಿವ ಸ್ಥಾನಕ್ಕೆ ಕೆಜಿಎಫ್ ಶಾಸಕಿ ರೂಪಕಲಾ ಮನವಿ

ಇತ್ತ ಕೆಜಿಎಫ್ ಶಾಸಕಿ ರೂಪಕಲಾ ಮಾತ್ರ ಮಹಿಳಾ ಕೋಟಾದಡಿ ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ ಮಗಳ ಪರವಾಗಿ ಸಚಿವ ಕೆಹೆಚ್ ಮುನಿಯಪ್ಪ ಕೂಡ ಬ್ಯಾಟಿಂಗ್ ಮಾಡುತ್ತಿದ್ದು, ತಮಗೆ ಇಲ್ಲ, ಮಗಳಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.  ಇದಕ್ಕೆ ಬಂಗಾರಪೇಟೆಯ ಎಸ್​ಸಿ ಬಲಗೈ ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿದ್ದು ಎಸ್​.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಬಗಲೈ ಸಮುದಾಯ ಕಾಂಗ್ರೆಸ್​ ವಿರುದ್ಧ ಕೆಲಸ ಮಾಡದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ?: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ನಿಯೋಜಿತ ಸಿಎಂ

ಒಟ್ಟಾರೆ ರಾಜ್ಯದಲ್ಲಿ ನೂತನ ಸಿಎಂ ಹಾಗೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ವಿಚಾರದಲ್ಲಿ ಕೋಲಾರ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ನಾಲ್ವರಲ್ಲಿ ಅವಕಾಶ ಯಾರಿಗೆ ಅನ್ನೋದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:25 pm, Mon, 1 June 26

Source link