Category Archives: Blog

Your blog category

Bank Strike: ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರ; ಯಾವೆಲ್ಲ ಬ್ಯಾಂಕ್​ಗಳ ಸೇವೆ ಸ್ಥಗಿತ? – Kannada News | Bank strike on January 27 These banks to remain closed Tomorrow

ನವದೆಹಲಿ, ಜನವರಿ 26: ತಮಗೆ ವಾರದಲ್ಲಿ 5 ದಿನಗಳ ಕಾಲ ಮಾತ್ರ ಕೆಲಸ ಮಾಡಲು ಅವಕಾಶ ನೀಡಬೇಕು, ಶನಿವಾರ ಹಾಗೂ ಭಾನುವಾರ ರಜೆ ನೀಡಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ದೇಶಾದ್ಯಂತ ಮುಷ್ಕರ ನಡೆಸುತ್ತಿದೆ. ಹೀಗಾಗಿ, ನಾಳೆ (ಮಂಗಳವಾರ) ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ (Banks) ಬ್ಯಾಂಕಿಂಗ್ ಕಾರ್ಯಾಚರಣೆಗಳು ವ್ಯತ್ಯಯಗೊಳ್ಳುವ ಸಾಧ್ಯತೆಯಿದೆ.

ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಸಂಧಾನ ಸಭೆಯು ಬ್ಯಾಂಕ್ ಉದ್ಯೋಗಿಗಳ ಸಮಸ್ಯೆಯನ್ನು ಪರಿಹರಿಸಲು ವಿಫಲವಾದ ನಂತರ ಈ ಮುಷ್ಕರದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಣರಾಜ್ಯೋತ್ಸವದ ಕಾರಣದಿಂದಾಗಿ ಭಾನುವಾರ (ಜನವರಿ 25) ಮತ್ತು ಸೋಮವಾರ (ಜನವರಿ 26) ಬ್ಯಾಂಕುಗಳು ಈಗಾಗಲೇ ಮುಚ್ಚಲ್ಪಟ್ಟಿರುವುದರಿಂದ ನಾಳೆಯ ಮುಷ್ಕರ ಗ್ರಾಹಕರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಇತರ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದನ್ನೂ ಓದಿ: CBI Recruitment 2026: ಸೆಂಟ್ರಲ್ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಅರ್ಹರು

ಆದರೆ, ಖಾಸಗಿ ವಲಯದ ಬ್ಯಾಂಕುಗಳಾದ HDFC ಬ್ಯಾಂಕ್, ICICI ಬ್ಯಾಂಕ್ ಮತ್ತು Axis ಬ್ಯಾಂಕ್‌ಗಳು ಮುಷ್ಕರದಲ್ಲಿ ಭಾಗವಹಿಸುವ ಒಕ್ಕೂಟಗಳ ಭಾಗವಾಗಿಲ್ಲದ ಕಾರಣ ಅವು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಹಾಗೇ, ಯುಪಿಐ (UPI) ಪೇಮೆಂಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿದ್ದಿದ್ಹೇಗೆ ಗೊತ್ತಾ? – Kannada News | Threatening shidlaghatta Lady Officer: Police How To Arrested Rajeev Gowda From Mangaluru businessman shelter

ಬೆಂಗಳೂರು, (ಜನವರಿ 26): ಬ್ಯಾನರ್ ತೆರವು ಮಾಡಿದ ವಿಚಾರಕ್ಕೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ನಿಂದಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ರಾಜೀವ್ ಗೌಡನ (Rajeev Gowda) ಬಂಧನವಾಗಿದೆ. ಕಳೆದ 14 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ರಾಜೀವ್​​ ಗೌಡ ಇಂದು (ಜನವರಿ 26) ಕೇರಳ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪ್ರಮುಖವಾಗಿ ರಾಜೀವ್ ಗೌಡನಿಗೆ ಇಷ್ಟು ದಿನ ಮಂಗಳೂರಿನ (Mangaluru) ಬಹುಕೋಟಿ ಒಡೆಯ ಆಶ್ರಯ ನೀಡಿದ್ದ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಹೌದು…ಆಶ್ರಯ ನೀಡಿದ್ದ ಉದ್ಯಮಿಯ ಕಾರಿನ ಮೂಲಕವೇ ಇಂದು (ಜನವರಿ 26) ಮಂಗಳೂರಿನಿಂದ ಕೇರಳಕ್ಕೆ (Kerala) ಪರಾರಿಯಾಗುತ್ತಿರುವ ವೇಳೆ ರಾಜೀವ್ ಗೌಡನನ್ನು ಪೊಲೀಸರು ಹಿಡಿದು ಕೋಳ ತೊಡಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೀವ್ ಗೌಡ ಸಿಕ್ಕಿಬಿದ್ದಿದ್ಹೇಗೆ?

ಜನವರಿ12ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡಗೆ ಕಲ್ಟ್​ ಸಿನಿಮಾ ಬ್ಯಾನರ್​ ತೆರವು ಮಾಡಿದ್ದಕ್ಕೆ ರಾಜೀವ್​ ಗೌಡ ಧಮ್ಕಿ ಹಾಕಿದ್ದ. ಜನವರಿ 14ರಂದು ಈ ಬಗ್ಗೆ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 13 ದಿನಗಳಿಂದ ಚಿಕ್ಕಬಳ್ಳಾಪುರ ಬಿಟ್ಟು ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಜನವರಿ 24ರಂದು ರಾಜೀವ್​ನನ್ನು ಕೆಪಿಸಿಸಿ ಶಿಸ್ತುಸಮಿತಿ ಅಮಾನತು ಮಾಡಿತ್ತು. ಜೊತೆಗೆ FIR ರದ್ದುಕೋರಿ ರಾಜೀವ್ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್​ ವಜಾಗೊಳಿಸಿತ್ತು. ಹೀಗಾಗಿ ಬಂಧನದ ಭೀತಿಯಲ್ಲಿದ್ದ ರಾಜೀವ್ ಗೌಡನಿಗೆ ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಬಳಿ 3 ದಿನದಿಂದ ಆಶ್ರಯ ಪಡೆದಿದ್ದ. ಇನ್ನು ಪೊಲೀಸರ ಕಣ್ತಪ್ಪಿಸಲು ಮಂಗಳೂರು ರೈಲ್ವೆ ಸ್ಟೇಷನ್​​​ನಲ್ಲಿ ಕಾರು ನಿಲ್ಲಿಸಿ ಕಳ್ಳಾಟ ಆಡಿದ್ದ. ಆದ್ರೆ ಉದ್ಯಮಿ ಕಾರಿನಲ್ಲೇ ತಲಪಾಡಿ ಮಾರ್ಗವಾಗಿ ಕಾಸರಗೋಡಿನತ್ತ ಹೋಗುತ್ತಿದ್ದ ರಾಜೀವ್ ಗೌಡನನ್ನು ಹಿಡಿದು ಕೈಗೆ ಕೋಳ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್!

ಪೊಲೀಸರ ಕಣ್ತಿಪ್ಪಿಸಲು ಯತ್ನಿಸಿದ ಆರೋಪಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಕಳೆದ 14 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರಾಜೀವ್​ ಗೌಡನಿಗೆ ಮಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರು ಆಶ್ರಯ ಕೊಟ್ಟಿದ್ದರು. ಆದ್ರೆ, ಇಂದು (ಜನವರಿ 26) ರಾಜೀವ್ ಗೌಡ, ಮಂಗಳೂರಿನ ಉದ್ಯಮಿಯ ಆಶ್ರಯದಲ್ಲಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಬಂಧನಕ್ಕೆ ಬಲೆ ಬೀಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ರಾಜೀವ್ ಗೌಡ, ತನ್ನ ಕಾರು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ. ಬಳಿಕ ಆಶ್ರಯ ಕೊಟ್ಟಿದ್ದ ಉದ್ಯಮಿಯ ಕಾರಿನಲ್ಲಿ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ಹೋಗಿದ್ದ.

ಉದ್ಯಮಿ ಕಾರಿನಲ್ಲಿ ಪರಾರಿಗೆ ಯತ್ನ

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತನ್ನ ಕಾರು ಬಿಟ್ಟು ಉದ್ಯಮಿಯ ಕಾರಿನಲ್ಲಿ ತೆರಳಿದ್ದಾನೆ ಎಂದು ತಿಳಿದ ಪೊಲೀಸರು, ಉದ್ಯಮಿಯ ಕಾರು ಯಾವ ಕಡೆ ಹೋಗಿದೆ ಎನ್ನುವುದನ್ನು ಕಾರ್ಯಚರಣೆ ನಡೆಸಿದ್ದು, ಆಗ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಬಳಿಕ ಇದೇ ಮಾರ್ಗದಲ್ಲಿ ಉದ್ಯಮಿಯ ಕಾರು ಜಾಡು ಹಿಡಿದು ಹೊರಟ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ತಂಡಕ್ಕೆ ಕೇರಳ ಗಡಿ ಭಾಗದಲ್ಲಿ ಆರೋಪಿ ರಾಜೀವ್ ಗೌಡ ಸಿಕ್ಕಿಬಿದ್ದಿದ್ದಾನೆ.

ಸದ್ಯ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ತಂಡ, ಕೇರಳದ ಗಡಿಭಾಗದಿಂದ ರಾಜೀವ್‌ಗೌಡನನ್ನು ಶಿಡ್ಲಘಟ್ಟ ನಗರ ಠಾಣೆಗೆ ಕರೆತರುತ್ತಿದ್ದು, ಬಳಿಕ ಚಿಂತಾಮಣಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ರಾಜೀವ್ ಗೌಡ ವಿರುದ್ಧ ಜನೆವರಿ 14 ರಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದ್ದವು. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡರಿಂದ ಒಂದು ದೂರು. ಶಾಸಕ ರವಿಕುಮಾರ್ ಪರವಾಗಿ ಒಂದು ದೂರು ದಾಖಲಾಗಿತ್ತು. ಬೆದರಿಕೆ ಪತ್ರ ಹಿನ್ನೆಲೆ ಮೊನ್ನೆ ಮತ್ತೊಂದು ದೂರು ದಾಖಲಾಗಿತ್ತು. ಹೀಗಾಗಿ ರಾಜೀವ್ ಗೌಡ ಬಂಧನಕ್ಕೆ ರಾಜ್ಯದ್ಯಂತ ಒತ್ತಯ ಕೇಳಿ ಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:10 pm, Mon, 26 January 26

Source link

ಕಾಂಗ್ರೆಸ್​​ ಲೋಕಭವನ ಚಲೋಗೆ ಆಕ್ಷೇಪ: ಶಾಸಕ ಸುರೇಶ್​​ ಕುಮಾರ್​​ರಿಂದ ಸಾಲು ಸಾಲು ಪ್ರಶ್ನೆ – Kannada News | BJP MLA Suresh Kumar Slams Congress Lok Bhavan Chalo Amidst Assembly Session

ಕಾಂಗ್ರೆಸ್​​ ಲೋಕಭವನ ಚಲೋಗೆ ಸುರೇಶ್​​ ಕುಮಾರ್​ ಆಕ್ಷೇಪ

ಬೆಂಗಳೂರು, ಜನವರಿ 26: ಮನ್​ರೇಗಾ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರೋದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ನಿಂದ ನಾಳೆ ಲೋಕಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಸಿಎಂ, ಡಿಸಿಎಂ ನೇತೃತ್ವದಲ್ಲಿ ಫ್ರೀಡಂಪಾರ್ಕ್​ನಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದು, ಕಾಂಗ್ರೆಸ್​​ಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಸುರೇಶ್​​ ಕುಮಾರ್​​ ಆಕ್ಷೇಪ ಏನು?

ನಾಳೆ ಕರ್ನಾಟಕ ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ. ಮೊದಲು ಪ್ರಶ್ನೋತ್ತರ, ನಂತರ ರಾಜ್ಯಪಾಲರ ಭಾಷಣದ ಮೇಲೆ ಗೊಂದಲ ನಿರ್ಣಯದ ಕುರಿತು ಚರ್ಚೆ ಎಂಬುದು ನಾಳಿನ ಕಲಾಪದ ಅಜೆಂಡಾ. ಆದರೆ ನಾಳೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್​​ನಿಂದ ಲೋಕಭವನದ ಮುತ್ತಿಗೆ ಕಾರ್ಯಕ್ರಮ ನಡೆಯುತ್ತದೆ ಎಂಬ ಪ್ರಕಟಣೆ ಕಾಂಗ್ರೆಸ್ ಪಕ್ಷದಿಂದ ಹೊರ ಬಿದ್ದಿದೆ. ಇದರಿಂದಾಗಿ ಈಗ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಅಧಿವೇಶನದ ಸಮಯದಲ್ಲಿಯೇ ಆಳುವ ಪಕ್ಷ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡು ತನ್ನ ಶಾಸಕರುಗಳೆಲ್ಲಾ ಇದರಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿರುವುದು ಎಷ್ಟು ಸಮಂಜಸ? ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವಂತಹ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿರ್ದೇಶನಂತೆ ನಿಷೇಧಿಸಲಾಗಿದೆ. ಒಂದೊಮ್ಮೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ, ಮುಂದೆ ಬೇರೆ ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆಯೇ? ಎಂದು ರಾಜಾಜಿನಗರ ಶಾಸಕ ಸುರೇಶ್​​ ಕುಮಾರ್​​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ; ಏನೆಲ್ಲಾ ಅಂಶಗಳಿವೆ?

ರಾಜ್ಯದಲ್ಲಿ ಆಡಳಿತ ನಡೆಸುವ ನಡೆಸುತ್ತಿರುವ ಪಕ್ಷವೇ ಕಾನೂನನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ? ಆಡಳಿತ ನಡೆಸಬೇಕಾದ ಪಕ್ಷವೇ ಈ ರೀತಿ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಪ್ರಶ್ನೆ ಎತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಟಲ್ ಪೆನ್ಷನ್ ಯೋಜನೆ ಇನ್ನೂ 5 ವರ್ಷ ವಿಸ್ತರಣೆ; ಈ ಸ್ಕೀಮ್​ನಲ್ಲಿ ಪಿಂಚಣಿ ಪಡೆಯುವುದು ಹೇಗೆ? – Kannada News | Atal Pension Yojana extended for another 5 years, know how to invest in this APY scheme

ನವದೆಹಲಿ, ಜನವರಿ 26: ಕೇಂದ್ರ ಸರ್ಕಾರದಿಂದ ನಡೆಸಲಾಗುವ ಅಟಲ್ ಪೆನ್ಷನ್ ಯೋಜನೆಯನ್ನು (APY- Atal Pension Yojana) ಇನ್ನೂ ಐದು ವರ್ಷ ವಿಸ್ತರಣೆ ಮಾಡಲಾಗಿದೆ. 2030-31ರವರೆಗೂ ಈ ರಿಟೈರ್ಮೆಂಟ್ ಸ್ಕೀಮ್ ಮುಂದುವರಿಸಲು ಕೇಂದ್ರ ಸಂಪುಟ ಸಮ್ಮತಿ ಕೊಟ್ಟಿರುವುದು ತಿಳಿದುಬಂದಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂಗಿಂತ ಎಪಿವೈ ಭಿನ್ನವಾದ ಪಿಂಚಣಿ ಯೋಜನೆ. ಎನ್​ಪಿಎಸ್​ನಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಆದರೆ, ಅಟಲ್ ಪೆನ್ಷನ್ ಯೋಜನೆಯು ಬಡವರು ಹಾಗೂ ಕೆಳ ಮಧ್ಯಮ ವರ್ಗದವರಿಗೆ ಗುರಿಯಾಗಿಸಿದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಅಟಲ್ ಪೆನ್ಷನ್ ಯೋಜನೆ ಹೇಳಿ ಮಾಡಿಸಿದ್ದಾಗಿದೆ. ಆದಾಯ ತೆರಿಗೆ ಪಾವತಿ ಮಾಡದೇ ಇರುವಂತಹವರು ಇದರಲ್ಲಿ ಹೂಡಿಕೆ ಮಾಡಬಹುದು. ಈ ಎಪಿವೈ ಯೋಜನೆಯಡಿ 1,000 ರೂನಿಂದ 5,000 ರೂವರೆಗೆ ಮಾಸಿಕ ಪಿಂಚಣಿ ಪಡೆಯಲು ಅವಕಾಶ ಇರುತ್ತದೆ. ಇದಕ್ಕೆ ಪಾವತಿಸುವ ಪ್ರೀಮಿಯಮ್ ಬಹಳ ಕಡಿಮೆ ಮೊತ್ತದ್ದು.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?

ಏನಿದು ಅಟಲ್ ಪೆನ್ಷನ್ ಯೋಜನೆ?

18 ವರ್ಷದಿಂದ 40 ವರ್ಷದೊಳಗಿನ ಯಾವುದೇ ಭಾರತೀಯ ನಾಗರಿಕರು ಅಟಲ್ ಪೆನ್ಷನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆಧಾರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್ ಮತ್ತು ಮೊಬೈಲ್ ನಂಬರ್ ಇರಬೇಕು. ಕನಿಷ್ಠ ಪಾವತಿ ಅವಧಿ 20 ವರ್ಷ ಇರುತ್ತದೆ. 60 ವರ್ಷ ವಯಸ್ಸಾಗುವವರೆಗೂ ಪ್ರೀಮಿಯಮ್ ಕಟ್ಟಬೇಕು. 60ರ ವಯಸ್ಸು ರಿಟೈರ್ಮೆಂಟ್ ಏಜ್. ಅಲ್ಲಿಂದ ಪಿಂಚಣಿ ಪ್ರಾರಂಭವಾಗುತ್ತದೆ.

ಈ ಯೋಜನೆಯಲ್ಲಿ ನೀವು 18ರ ವಯಸ್ಸಿಗೆ ಹೂಡಿಕೆ ಆರಂಭಿಸಿದರೆ ಕನಿಷ್ಠ ಪ್ರೀಮಿಯಮ್ ಹಣ ಕೇವಲ 42 ರೂ. ಈ ಹಣಕ್ಕೆ ನಿಮಗೆ ಸಿಗುವ ಮಾಸಿಕ ಪಿಂಚಣಿ 1,000 ರೂ. ನಿಮಗೆ 5,000 ರೂ ಪಿಂಚಣಿ ಬೇಕೆಂದರೆ ಮಾಸಿಕವಾಗಿ 210 ರೂ ಪಾವತಿಸಬೇಕು.

ಹೆಚ್ಚು ವಯಸ್ಸಾದ ನಂತರ ಸ್ಕೀಮ್​ನಲ್ಲಿ ಹೂಡಿಕೆ ಆರಂಭಿಸಿದರೆ ಪ್ರೀಮಿಯಮ್ ಹಣ ಹೆಚ್ಚುತ್ತಾ ಹೋಗುತ್ತದೆ. ಈ ಸ್ಕೀಮ್​ನಲ್ಲಿ ಗರಿಷ್ಠ ಮಾಸಿಕ ಪಿಂಚಣಿ 5,000 ರೂ ಇರುತ್ತದೆ.

ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ

ಪೆನ್ಷನ್ ಸದಸ್ಯರು ಸಾಯುವವರೆಗೂ ಪಿಂಚಣಿ ಸಿಗುತ್ತಾ ಹೋಗುತ್ತದೆ. ಅವರು ಸಾವನ್ನಪ್ಪಿದರೆ ಅವರ ಸಂಗಾತಿಗೆ ಪಿಂಚಣಿ ಮುಂದವರಿಯುತ್ತದೆ. ಅವರೂ ಸತ್ತರೆ ಆಗ ನಿಗದಿತ ನಾಮಿನಿಯ ವ್ಯಕ್ತಿಗೆ ಈ ಪಿಂಚಣಿ ವರ್ಗವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral News: ಈ ರೆಸ್ಟೋರೆಂಟ್​​ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು! – Kannada News | Mobile Phones Banned in Chef gaggan anand restaurant michelin stars know why

ನವದೆಹಲಿ, ಜನವರಿ 26: ಸಾಮಾನ್ಯವಾಗಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ರೆಸ್ಟೋರೆಂಟ್​​ಗೆ ಹೋದರೆ ಎಲ್ಲರೂ ಒಟ್ಟಾಗಿ ಫೋಟೋ ತೆಗೆದುಕೊಳ್ಳುತ್ತಾ, ವಿಡಿಯೋ ಮಾಡುತ್ತಾ ಎಂಜಾಯ್ ಮಾಡಿಕೊಂಡು ಊಟ ಮಾಡುತ್ತಾರೆ. ಹಿಂದೆಲ್ಲ ಊಟವನ್ನು ಮಾತ್ರ ಎಂಜಾಯ್ ಮಾಡುವ ಸ್ಥಳವಾಗಿದ್ದ ರೆಸ್ಟೋರೆಂಟ್ (Restaurant) ಈಗ ರೀಲ್ಸ್, ಫೋಟೋ ತೆಗೆಯುವ ಸ್ಟುಡಿಯೋ ರೀತಿ ಆಗಿಬಿಟ್ಟಿದೆ. ತಾವೇನು ತಿನ್ನುತ್ತೇವೆ, ತಾವೇನು ಮಾಡುತ್ತೇವೆ ಎಂಬುದನ್ನೆಲ್ಲ ಅಪ್​ಡೇಟ್ ಮಾಡುವ ಜನರು ಸದಾಕಾಲ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಈ ರೆಸ್ಟೋರೆಂಟ್​​ನಲ್ಲಿ ಮಾತ್ರ ಮೊಬೈಲ್ ಬಳಕೆ ಮಾಡುವುದು ನಿಷೇಧ.

ನಾವು ಯಾವುದೇ ಹೋಟೆಲ್‌ಗೆ ಹೋದರೆ, ಅಲ್ಲಿರುವ ಅರ್ಧದಷ್ಟು ಜನರು ತಮ್ಮ ತಟ್ಟೆಗಳಲ್ಲಿರುವ ಫುಡ್​ನ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನೋಡಬಹುದು. ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರವೇ ಅವರು ತಿನ್ನಲು ಪ್ರಾರಂಭಿಸುತ್ತಾರೆ. ತಿನ್ನುವಾಗಲೂ ಅವರು ತಮ್ಮ ಫೋನ್‌ಗಳನ್ನು ಇನ್ನೊಂದು ಕೈಯಲ್ಲಿ ಹಿಡಿದು ಸ್ಕ್ರೋಲ್ ಮಾಡುತ್ತಾ ಆ ಪೋಸ್ಟ್​ಗೆ ಏನೆಲ್ಲ ಕಮೆಂಟ್ ಬಂದಿದೆ ಎಂದು ನೋಡುತ್ತಲೇ ತಿನ್ನುತ್ತಾರೆ. ಇನ್ನು ಕೆಲವರು ಫೋನ್ ಮಾಡುತ್ತಾ ತಿನ್ನುತ್ತಾರೆ. ಬಹುತೇಕ ಎಲ್ಲಾ ಹೋಟೆಲ್‌ಗಳಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆ. ಆದರೆ ಇದಕ್ಕೆ ಕಡಿವಾಣ ಹಾಕಲು ಪ್ರಪಂಚದಾದ್ಯಂತದ ಕೆಲವು ಪ್ರಸಿದ್ಧ ರೆಸ್ಟೋರೆಂಟ್‌ಗಳು ನೋ-ಫೋನ್ ನೀತಿಯನ್ನು ಜಾರಿಗೆ ತರುತ್ತಿವೆ. ಪ್ರಸಿದ್ಧ ಶೆಫ್ ಗಗನ್ ಆನಂದ್ ನಡೆಸುತ್ತಿರುವ ಮೆಷಾಲಿನ್ ಸ್ಟಾರ್ಟ್ ಎಂಬ ಥಾಯ್ ರೆಸ್ಟೋರೆಂಟ್‌ನಲ್ಲಿ ಈ ನೀತಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ವೈದ್ಯರಿಗೇ ಅಚ್ಚರಿ ಮೂಡಿಸಿರುವ ಈ ವ್ಯಕ್ತಿ 50 ವರ್ಷದಿಂದ ನಿದ್ರೆಯೇ ಮಾಡಿಲ್ಲವಂತೆ!

ಈ ರೆಸ್ಟೋರೆಂಟ್‌ನಲ್ಲಿ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ಮೇಜಿನ ಮೇಲೆ ಬುಟ್ಟಿ ಇಡಲಾಗಿರುತ್ತದೆ. ಎಲ್ಲರ ಫೋನ್‌ಗಳನ್ನು ಅದರಲ್ಲಿ ಇಡಬೇಕು. ಬಿಲ್ ಪಾವತಿಸಿದ ನಂತರವೇ ನೀವು ನಿಮ್ಮ ಫೋನ್‌ಗಳನ್ನು ತೆಗೆದುಕೊಳ್ಳಬೇಕು. ಇಲ್ಲಿ ಮಾತ್ರವಲ್ಲ, ಯುರೋಪ್, ಜಪಾನ್, ಅಮೆರಿಕ ಮತ್ತು ಏಷ್ಯಾದ ದೇಶಗಳ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಈ ನೋ ಫೋನ್ ನೀತಿಯನ್ನು ಪರಿಚಯಿಸಲಾಗಿದೆ. ಭಾರತದ ಕೆಲವು ರೆಸ್ಟೋರೆಂಟ್‌ಗಳಲ್ಲಿಯೂ ಇದೇ ರೀತಿಯ ಬೋರ್ಡ್‌ಗಳಿವೆ.

ಇಂತಹ ರೆಸ್ಟೋರೆಂಟ್‌ನಲ್ಲಿ ಫೋಟೋ ತೆಗೆಯುವುದು ಮತ್ತು ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ತುರ್ತು ಪರಿಸ್ಥಿತಿ ಇದ್ದರೆ, ನೀವು ಪಕ್ಕಕ್ಕೆ ಹೋಗಿ ಮಾತನಾಡಬೇಕು ಅಥವಾ ಹೊರಗೆ ಹೋಗಬೇಕು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಬೇಕಾದ ರೆಸ್ಟೋರೆಂಟ್‌ಗಳಲ್ಲಿ ಫೋನ್‌ಗಳು ಗುಣಮಟ್ಟದ ಸಮಯವನ್ನು ಹಾಳುಮಾಡಬಹುದು ಎಂಬುದು ಇದಕ್ಕೆ ಇನ್ನೊಂದು ಕಾರಣ. ಹಾಗೂ ನೀವೇನಾದರೂ ಅಂತಹ ರೆಸ್ಟೋರೆಂಟ್​​ಗಳಲ್ಲಿ ಮೊಬೈಲ್ ಬಳಸಿದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ!

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಣ್ಣಯ್ಯ’ ಸೀರಿಯಲ್ ನಟ ವಿಕಾಶ್ ಹೊಸ ಸಿನಿಮಾ ‘ಪಾರ್ಥನ್ ಪರಪಂಚ’ – Kannada News | Vikash Uthaiah new movie Parthan Parapancha shooting in Bengaluru

ಕಿರುತೆರೆಯ ‘ಅಣ್ಣಯ್ಯ’ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟ ವಿಕಾಶ್ ಉತ್ತಯ್ಯ (Vikash Uthaiah) ಅವರು ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಪಾರ್ಥನ್ ಪರಪಂಚ’ (Parthan Parapancha) ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ. ಇದೊಂದು ಕೋರ್ಟ್ ಹಾಲ್ ಡ್ರಾಮಾ ಸಿನಿಮಾ. ಶ್ರೀಹರ್ಷ ಎಂ.ಎನ್. ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಸಿರಿ ಸಿನಿಮಾಸ್’ ಮೂಲಕ ಸೀತಾ ಹರ್ಷವರ್ಧನ್ ಅವರು ನಿರ್ಮಾಣ‌‌ ಮಾಡುತ್ತಿದ್ದಾರೆ. ವಿಕಾಶ್ ಜೊತೆ ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

‘ಪಾರ್ಥನ್ ಪರಪಂಚ’ ಸಿನಿಮಾಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೋರ್ಟ್ ಸೆಟ್ ಹಾಕಲಾಗಿದೆ. ಅದರಲ್ಲೇ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ನಿರ್ದೇಶಕ ಶ್ರೀಹರ್ಷ ಮಾತನಾಡಿದರು. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಇರುವ ಕೋರ್ಟ್ ರೂಮ್ ಡ್ರಾಮಾ. ರಂಗಾಯಣ ರಘು ಅವರು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮಾಡುತ್ತಿದ್ದಾರೆ. ಇಡೀ ಚಿತ್ರದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ’ ಎಂದು ಅವರು ಹೇಳಿದರು.

ಹೀರೋ ವಿಕಾಶ್ ಅವರು ಮಾತನಾಡಿ, ‘ಇಂದಿನ ಕಾಲಕ್ಕೆ ಹೊಂದುವ ಕಥೆ ಇದು. ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಹೊಂದಿದೆ. ಒಂದು ಕೇಸ್ ಹೇಗೆ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ’ ಎಂದರು. ‘ಬ್ಲ್ಯಾಂಕ್’ ಸಿನಿಮಾ ಖ್ಯಾತಿಯ ನಟಿ ಮಂದಾರ ಅವರು ಈ ಸಿನಿಮಾದಲ್ಲಿ ಜೆನ್​ ಜೀ ಹುಡುಗಿಯಾಗಿ ನಟಿಸುತ್ತಿದ್ದಾರೆ.

ರಂಗಾಯಣ ರಘು ಮಾತನಾಡಿ, ‘ನಿರ್ದೇಶಕ ಹರ್ಷ ಈವರೆಗೆ ಯಾರೂ ಗೆಸ್ ಮಾಡಿರದಂಥ ಘಟನೆಯನ್ನು ಯೋಚನೆ ಮಾಡಿದ್ದಾರೆ. ಒಂದು ಕ್ಲೂ ಹಿಂದೆ ಹೋದಾಗ ಏನೇನಾಗುತ್ತೆ ಅನ್ನೋದನ್ನು ಚೆನ್ನಾಗಿ ಹೇಳುತ್ತಿದ್ದಾರೆ. ಟಗರು, ಅಜ್ಞಾತವಾಸಿ, ಶಾಖಾಹಾರಿ ನಂತರ ಇದು ನನಗೆ ಬೇರೆ ರೀತಿಯ ಪಾತ್ರ’ ಎಂದು ಹೇಳಿದರು. ಛಾಯಾಗ್ರಹಾಕ ಜೈಆನಂದ್ ಮಾತನಾಡಿ, ‘45 ದಿನಗಳ ಶೂಟಿಂಗ್ ಪ್ಲಾನ್ ಇದೆ. 25 ದಿನ ಕೋರ್ಟ್ ಹಾಲ್​ನಲ್ಲೇ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದರು.

ಇದನ್ನೂ ಓದಿ: ವಿಷ್ಣುಗೆ ವಿಶೇಷ ಗೌರವ ಸಲ್ಲಿಸಿದ ವಿಕಾಶ್ ಉತ್ತಯ್ಯ

‘ಪಾರ್ಥನ್ ಪರಪಂಚ’ ಸಿನಿಮಾಗೆ ಅನಂತ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ನಾಲ್ಕು ಹಾಡುಗಳು ಈ ಸಿನಿಮಾದಲ್ಲಿ ಇರಲಿವೆ. ಇಂದೂ ನಾಗರಾಜ್, ಶ್ರೀಹರ್ಷ ಬೆಳ್ಮಣ್ಣು ಹಾಡಿದ್ದಾರೆ. ಜಸ್ಕರಣ್ ಸಿಂಗ್ ಸಹ ಒಂದು ಗೀತೆ ಹಾಡಲಿದ್ದಾರೆ’ ಎಂದು ಅನಂತ ಆರ್ಯನ್ ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಮುಂಬೈ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ; ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ – Kannada News | RCB vs MI WPL 2026: Final Berth or Playoff Hope? Match 16 Stakes, Toss and Playing XIs

ಮಹಿಳಾ ಪ್ರೀಮಿಯರ್ ಲೀಗ್  (Women’s Premier League) 2026 ರ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ (RCB vs MI) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವೂ ವಡೋದರಾದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ನಿರ್ಣಾಯಕವಾಗಿದೆ. ಇತ್ತ ಆರ್​ಸಿಬಿಗೂ ಈ ಪಂದ್ಯದ ಗೆಲುವು ಅವಶ್ಯಕವಾಗಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ, ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯಲಿದೆ. ಇತ್ತ ಮುಂಬೈ ಗೆದ್ದರೆ, ಅದರ ಫ್ಲೇ ಆಫ್ ಕನಸು ಜೀವಂತವಾಗಿರಲಿದೆ. ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, ಕೇವಲ ಎರಡರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಮತ್ತೊಂದೆಡೆ, ಆರ್‌ಸಿಬಿ ಆಡಿರುವ 6 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು, ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಸೋಲನ್ನು ಅನುಭವಿಸಿತ್ತು.

ಟಾಸ್ ಗೆದ್ದ ಆರ್​ಸಿಬಿ

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಟಾಸ್ ಗೆದ್ದ ಎಲ್ಲರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗಲಿದೆ. ಹೀಗಾಗಿಯೇ ಸ್ಮೃತಿ ಮಂಧಾನ ಕೂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆ ಪ್ರಕಾರ, ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇತ್ತ ಮುಂಬೈ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್ ಮತ್ತು ಲಾರೆನ್ ಬೆಲ್.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ಸಜನಾ ಸಜೀವನ್, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್ (ನಿಕೋಲಾ ಕ್ಯಾರಿ ಬದಲಿಗೆ), ಅಮಾನ್ಜೋತ್ ಕೌರ್, ಸಂಸ್ಕೃತಿ ಗುಪ್ತಾ, ರಾಹಿಲಾ ಫಿರ್ದೌಸ್ (ವಿಕೆಟ್ ಕೀಪರ್), ಪೂನಮ್ ಖೇಮ್ನಾರ್, ಶಬ್ನಿಮ್ ಇಸ್ಮಾಯಿಲ್, ಮತ್ತು ವೈಷ್ಣವಿ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:17 pm, Mon, 26 January 26

Source link

ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು! – Kannada News | 15 km Traffic Jam in Manali Snowfall Tourists recount harrowing Manali trip

ಮನಾಲಿ, ಜನವರಿ 26: ಹಿಮಾಚಲ ಪ್ರದೇಶದಲ್ಲಿ ಉಂಟಾದ ಭಾರೀ ಹಿಮಪಾತವು (Snowfall) ನೂರಾರು ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಿಮಭರಿತ ರಸ್ತೆಗಳು ಮತ್ತು ಭಾರೀ ಟ್ರಾಫಿಕ್ ಜಾಮ್​ನಿಂದಾಗಿ ಮನಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ರಸ್ತೆ ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ 15 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಿಮಪಾತದಿಂದ ರಸ್ತೆ ಮುಚ್ಚಿದ್ದರಿಂದಾಗಿ ಪ್ರವಾಸಿಗರಿಗೆ ಮುಂದೆ ಸಾಗಲು ಸಾಧ್ಯವಾಗದೆ ಸಿಕ್ಕ ಹೋಟೆಲ್​ಗಳನ್ನೆಲ್ಲ ಬುಕ್ ಮಾಡಿಕೊಂಡರು. ಇದರಿಂದ ಕೆಲವು ಪ್ರವಾಸಿಗರು ಹೋಟೆಲ್ ರೂಂ ಸಿಗದೆ, ಹಿಮಪಾತದಿಂದ ಹೊರಗೂ ಹೋಗಲಾಗದೆ 24 ಗಂಟೆಗಳ ಕಾಲ ಕಾರಿನಲ್ಲೇ ಕುಳಿತಿದ್ದರು. ಹೀಗಾಗಿ, ನೀವು ಕೂಡ ಹಿಮಪಾತ ನೋಡಲು ಮನಾಲಿಗೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದರೆ ಮತ್ತೊಮ್ಮೆ ಯೋಚಿಸುವುದು ಉತ್ತಮ. ಇದು ಅಲ್ಲಿಗೆ ಹೋಗಿರುವ ಪ್ರವಾಸಿಗರೇ ನೀಡಿರುವ ಸಲಹೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy: ಕರ್ನಾಟಕ ತಂಡಕ್ಕೆ ಪಡಿಕ್ಕಲ್ ನಾಯಕ; ರಾಹುಲ್ ಇನ್, ಕರುಣ್ ಔಟ್ – Kannada News | Devdutt Padikkal to Lead Karnataka Ranji; KL Rahul Returns for Punjab Clash

ಪಂಜಾಬ್ ವಿರುದ್ಧದ ಮುಂದಿನ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮಯಾಂಕ್ ಅಗರ್ವಾಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದು, ಅವರ ಬದಲಿಗೆ ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಇತ್ತೀಚಿಗಷ್ಟೇ ಮುಗಿದ ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರ ಫಲವಾಗಿ ಇದೀಗ ಪಡಿಕ್ಕಲ್​ಗೆ ತಂಡದ ನಾಯಕತ್ವ ನೀಡಲಾಗಿದೆ. ಇನ್ನೊಂದು ಪ್ರಮುಖ ಸುದ್ದಿಯೆಂದರೆ ಕೆಎಲ್ ರಾಹುಲ್ ಕೂಡ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು.

ರಾಜ್ಯ ತಂಡಕ್ಕೆ ಕೆಎಲ್ ರಾಹುಲ್ ಎಂಟ್ರಿ

ಮುಂದಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಕೆಎಲ್ ರಾಹುಲ್ ಆಡಲಿದ್ದಾರೆ. ಈ ಪಂದ್ಯ ಜನವರಿ 29 ರಂದು ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ನಡೆಯಲಿದೆ. ರಾಹುಲ್ ಮಾತ್ರವಲ್ಲದೆ, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅನುಭವಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಫಿಟ್ನೆಸ್ ಇಲ್ಲದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಕರುಣ್ ಜೊತೆಗೆ ಅಭಿನವ್ ಮನೋಹರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಕರ್ನಾಟಕ ರಣಜಿ ತಂಡ: ಮಾಯಂಕ್ ಅಗರ್ವಾಲ್, ಕೆಎಲ್ ರಾಹುಲ್, ಕೆವಿ ಅನೀಶ್, ದೇವದತ್ ಪಡಿಕ್ಕಲ್ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ಎಂ ವೆಂಕಟೇಶ್, ವಿದ್ಯಾದರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್ ಮತ್ತು ಧ್ರುವ ಪ್ರಭಾಕರ್.

2025-26ರ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪ್ರದರ್ಶನ

ಪ್ರಸ್ತುತ ರಣಜಿ ಟ್ರೋಫಿ ಆವೃತ್ತಿಯಲ್ಲಿ ಕರ್ನಾಟಕ ತಂಡವು ಗ್ರೂಪ್ ಬಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡವು ತನ್ನ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದು, ಒಂದರಲ್ಲಿ ಸೋತಿದ್ದರೆ, ಮೂರರಲ್ಲಿ ಡ್ರಾ ಸಾಧಿಸಿದೆ. ಕರುಣ್ ನಾಯರ್ ಈ ಆವೃತ್ತಿಯಲ್ಲಿ ಕರ್ನಾಟಕ ಪರ ಅತಿ ಹೆಚ್ಚು (614) ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಸ್ಮರಣ್ ರವಿಚಂದ್ರನ್ ಕೂಡ ಆಡಿರುವ ಐದು ಪಂದ್ಯಗಳಲ್ಲಿ 119 ಸರಾಸರಿಯಲ್ಲಿ 595 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಲೆಗ್-ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ (31) ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:59 pm, Mon, 26 January 26

Source link

ಕಂಟ್ರಿ ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿ ದರೋಡೆ: ಬೆಚ್ಚಿ ಬೀಳಿಸೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ – Kannada News | Two Masked Men Rob a Gold Shop in Halasangi, Vijayapur, Using a Country Made Pistol

ವಿಜಯಪುರ, ಜನವರಿ 26: ಮೈಸೂರು ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼಗೆ ನುಗ್ಗಿದ್ದ ಗ್ಯಾಂಗ್‌, ಸಿಬ್ಬಂದಿಗೆ ಗನ್ ತೋರಿಸಿ 7 ಕೆಜಿ ಚಿನ್ನ ಮತ್ತು ವಜ್ರ ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಅಂತಹುದ್ದೇ ಮತ್ತೊಂದು ರಾಬರಿ ನಡೆದಿದೆ. ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಕಂಟ್ರಿ ಪಿಸ್ತೂಲ್ ತೋರಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಚಿನ್ನದ ಅಂಗಡಿಯಲ್ಲಿ ದರೋಡೆ ನಡೆಸಿದ್ದಾರೆ.

ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ದರೋಡೆ

ಮಹಾರುದ್ರ ಕಂಚಗಾರ ಅವರಿಗೆ ಸೇರಿರುವ ಬಂಗಾರದ ಅಂಗಡಿಯಲ್ಲಿ ದರೋಡೆ ನಡೆದಿದ್ದು, ಅಂಗಡಿಗೆ ಬಂದಿದ್ದ ವೃದ್ಧೆಯನ್ನ ಸಹ ಪಿಸ್ತೂಲ್​​ ತೋರಿಸಿ ಹೆದರಿಸಿ ಆರೋಪಿಗಳು ಕಳುಹಿಸಿದ್ದಾರೆ. ಅಲ್ಲದೆ ದರೋಡೆಕೋರರು ಈ ವೇಳೆ ಗಾಳಿಯಲ್ಲಿ 2 ಸುತ್ತು ಗುಂಡು ಕೂಡ ಹಾರಿಸಿದ್ದು, ಆತ್ಮಲಿಂಗ ಹೂಗಾರ ಎಂಬುವನ ಕಾಲಿಗೆ ಬುಲೆಟ್​ ತಾಗಿದೆ. ಗಾಯಾಳುವನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿನ್ನ ದೋಚಿದ ಆರೋಪಿಗಳು ಮಹಾರಾಷ್ಟ್ರದತ್ತ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ

ಸಿಸಿ ಕ್ಯಾಮರಾದಲ್ಲಿ ದರೋಡೆ ದೃಶ್ಯ ಸೆರೆ

ದರೋಡೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ, ಎಎಸ್​​ಪಿ ರಾಮನಗೌಡ ಹಟ್ಟಿ, DySP ಕಟ್ಟಿಮನಿ, ಇನ್ಸ್​ಪೆಕ್ಟರ್ ಪರಶುರಾಮ ಮನಗೂಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿನ್ನದಂಗಡಿಗೆ ಎಂಟ್ರಿ ಕೊಟ್ಟು ಗನ್​​ ತೋರಿಸಿ ಆರೋಪಿಗಳು ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದರೋಡೆಕೋರರ ಬಂಧನಕ್ಕೆ ಖಾಕಿ ಬಲೆ ಬೀಸಿದೆ.  ಆರೋಪಿಗಳು ಅಂಗಡಿಯಿಂದ ಏನೇನು ರಾಬರಿ ಮಾಡಿದ್ದಾರೆಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮತ್ತೊಂದೆಡೆ ಮೇಲಿಂದ ಮೇಲೆ ನಡೆಯುತ್ತಿರುವ ದರೋಡೆ ಪ್ರಕರಣಗಳು ಚಿನ್ನದಂಗಡಿ ಮಾಲಕರ ನಿದ್ರೆಗೆಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link