Category Archives: Blog

Your blog category

ಹಾರರ್ ಕಥೆ ಇರುವ ‘ಸೀಟ್‌ ಎಡ್ಜ್‌’ ಸಿನಿಮಾದ ಟ್ರೇಲರ್ ನೋಡಿದ್ರಾ? – Kannada News | Siddu Moolimani Raviksha Shetty starrer Seat Edge Movie Trailer released

ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ (Seat Edge Movie) ಸಿನಿಮಾದಲ್ಲಿ ವ್ಲಾಗರ್ ಹುಡುಗನೊಬ್ಬನ ಕಥೆ ಇದೆ. ಘೋಸ್ಟ್ ಹಂಟಿಂಗ್ ಕುರಿತ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ಕನ್ನಡದ ಪ್ರಮುಖ ವ್ಲಾಗರ್​ಗಳ ಕೈಯಿಂದಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಲಾಗಿದೆ. ಈ ಚಿತ್ರದಲ್ಲಿ ಸಿದ್ದು ಮೂಲಿಮನಿ (Siddu Moolimani) ಅವರು ಹೀರೋ ಆಗಿ ನಟಿಸಿದ್ದು, ರವೀಕ್ಷಾ ಶೆಟ್ಟಿ ನಾಯಕಿ ಆಗಿದ್ದಾರೆ. ⁠ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಗಿರೀಶ್ ಶಿವಣ್ಣ, ಕಿರಣ್, ತೇಜು ಪೊನ್ನಪ್ಪ, ಪುನೀತ್ ಬಾಬು, ಮನಮೋಹನ್ ರೈ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಜನವರಿ 30ರಂದು ‘ಸೀಟ್ ಎಡ್ಜ್’ ಸಿನಿಮಾ ರಿಲೀಸ್ ಆಗಲಿದೆ.

‘ಸೀಟ್ ಎಡ್ಜ್’ ಸಿನಿಮಾದಲ್ಲಿ ಡಾರ್ಕ್‌ ಕಾಮಿಡಿ ಕಥೆಯ ಜೊತೆಗೆ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳು ಇರಲಿವೆ. ಈ ಮೊದಲು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಚೇತನ್ ಶೆಟ್ಟಿ ಅವರು ಈಗ ‘ಸೀಟ್‌ ಎಡ್ಜ್‌’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದ್ದೇ. ‘ಎನ್‌.ಆರ್‌. ಸಿನಿಮಾ ಪ್ರೊಡಕ್ಷನ್ಸ್‌’ ಮೂಲಕ ಗಿರಿಧರ ಟಿ. ವಸಂತಪುರ ಅವರು ನಿರ್ಮಾಣ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ವೇಳೆ ಸಿದ್ದು ಮೂಲಿಮನಿ ಮಾತಾಡಿದರು. ‘ಇದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಮೊದಲ ಬಾರಿಗೆ ನಾನು ಯೂಟ್ಯೂಬ್‌ ವ್ಲಾಗರ್‌ ಪಾತ್ರ ಮಾಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು ಘೋಸ್ಟ್ ಟೌನ್​ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ’ ಎಂದು ಕಥೆಯ ಬಗ್ಗೆ ಅವರು ಮಾಹಿತಿ ನೀಡಿದರು.

Seat Edge Movie Team

ನಟಿ ರವೀಕ್ಷಾ ಶೆಟ್ಟಿ ಕೂಡ ಮಾತನಾಡಿದರು. ‘ಘೋಸ್ಟ್‌ ಹಂಟಿಂಗ್‌ಗೆ ಹೋಗುವ ಯೂಟ್ಯೂಬರ್‌ ಜೊತೆಗೆ ನಾನು ಸಹ ತೊಂದರೆಗೆ ಸಿಲುಕಿಕೊಳ್ಳುತ್ತೇನೆ. ಎರಡು ಶೇಡ್‌ಗಳಿರುವ ಪಾತ್ರ ನನ್ನದು. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಒಳ್ಳೆಯ ಅನುಭವಗಳನ್ನು ನೀಡಿದೆ. ಹೆಸರಿಗೆ ತಕ್ಕಂತೆ ಇದು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಹ ಸಿನಿಮಾ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿದ್ದು ಮೂಲಿಮನಿ ಹೊಸ ಹಾಡು ‘ಹಂಗೋ ಹಿಂಗೋ’: ಸೀಟ್ ಎಡ್ಜ್ ಚಿತ್ರದಲ್ಲಿ ರವೀಕ್ಷಾ ಜೋಡಿ

ನಿರ್ದೇಶಕ ಚೇತನ್‌ ಶೆಟ್ಟಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ವೀವ್ಸ್‌ ಪಡೆಯಲು, ಫೇಮಸ್ ಆಗಲು ಜನರು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆ ಎಳೆಯನ್ನೇ ಇಟ್ಟುಕೊಂಡೆ ಸಿನಿಮಾ ಮಾಡಿದ್ದೇವೆ’ ಎಂದರು. ನಿರ್ಮಾಪಕ ಗಿರಿಧರ ಅವರು ಮಾತನಾಡಿ, ‘ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ, ಮನೆಮಂದಿ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾ ಮಾಡಿದ್ದೇವೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು – Kannada News | Diabetes Symptoms on Skin: What You Need to Know

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಂಬಂಧಿತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ನೀವು ನೋಡಿರಬಹುದು. ಮೊದಲೆಲ್ಲಾ ಈ ರೋಗ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ ಹಾಗಲ್ಲ, ಸಣ್ಣ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಂಡುಬರುತ್ತಿದೆ. ಮಧುಮೇಹ ಸಾಮಾನ್ಯವಾಗಿ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಸಂಬಂಧಿಸಿದೆಯಾದರೂ ಇದರ ಪರಿಣಾಮ ಚರ್ಮ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ದೀರ್ಘಕಾಲದವರೆಗೆ ಹೆಚ್ಚಾಗಿದ್ದರೆ, ಅದು ದೇಹದಲ್ಲಿನ ರಕ್ತದ ಹರಿವು ಮತ್ತು ತೇವಾಂಶದ ಸಮತೋಲನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದು ಚರ್ಮದ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಜನ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಚರ್ಮದ ಮೇಲೆ ಗೋಚರಿಸುವ ಲಕ್ಷಣಗಳು ಮಧುಮೇಹದ ಆರಂಭಿಕ ಮುನ್ಸೂಚನೆಯಾಗಿರಬಹುದು. ಹಾಗಾಗಿ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯವಾಗುತ್ತದೆ.

ಚರ್ಮದಲ್ಲಾಗುವ ಬದಲಾವಣೆ ಮಧುಮೇಹದ ಲಕ್ಷಣವೇ?

ಮಧುಮೇಹದ ಸಂದರ್ಭದಲ್ಲಿ ಚರ್ಮದ ಮೇಲೆ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ. ದೇಹ ಅಗತ್ಯ ತೇವಾಂಶ ಕಾಪಾಡಿಕೊಳ್ಳಲು ಕಷ್ಟವಾದಾಗ ಚರ್ಮ ಅತಿಯಾಗಿ ಒಣಗುವುದು ಸಾಮಾನ್ಯ ಸಮಸ್ಯೆ. ಆದರೆ ಕೆಲವರಲ್ಲಿ ಆಗಾಗ ತುರಿಕೆ ಅಥವಾ ಸುಡುವ ಸಂವೇದನೆಗಳು ಕಂಡುಬರುತ್ತದೆ. ಚರ್ಮದ ಮೇಲೆ, ಅದರಲ್ಲಿಯೂ ಕುತ್ತಿಗೆ ಅಥವಾ ತೊಡೆಯ ಸುತ್ತ ಕಪ್ಪು ಕಲೆಗಳು ಕಂಡು ಬರುವುದು ಸಹ ಒಂದು ಲಕ್ಷಣವಾಗಿರಬಹುದು. ಸಣ್ಣ ಕಡಿತ ಅಥವಾ ಗಾಯಗಳು ಗುಣವಾಗುವುದಕ್ಕೆ ಸಮಯ ತೆಗೆದುಕೊಳ್ಳುವುದು ಮಧುಮೇಹಕ್ಕೆ ಸಂಬಂಧಿಸಿದ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ, ಪುನರಾವರ್ತಿತ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು, ಹುಣ್ಣುಗಳು ಅಥವಾ ಮೊಡವೆ ಕಾಣಿಸಿಕೊಳ್ಳುವುದು ಅಥವಾ ಚರ್ಮದ ಮೇಲೆ ನಿರಂತರ ಕೆಂಪು ಬಣ್ಣ ಕಂಡುಬರುವುದು. ಹೀಗೆ ಈ ಎಲ್ಲಾ ಬದಲಾವಣೆಗಳು ದೇಹದ ಸಕ್ಕರೆ ಮಟ್ಟ ಸಮತೋಲಿತವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ

ತಡೆಗಟ್ಟಲು ಏನು ಮಾಡಬೇಕು?

ನಿಮ್ಮ ಚರ್ಮದ ಮೇಲೆ ಇಂತಹ ಬದಲಾವಣೆಗಳನ್ನು ನಿರಂತರವಾಗಿ ಗಮನಿಸಿದರೆ, ನೀವು ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಮಧುಮೇಹವನ್ನು ನಿಯಂತ್ರಣದಲ್ಲಿಡಲು, ಸಮತೋಲಿತ ಆಹಾರ ಸೇವನೆ ಮಾಡಿ, ನಿಯಮಿತವಾಗಿ ವ್ಯಾಯಾಮ ಮಾಡಿ ಅದರ ಜೊತೆಗೆ ವೈದ್ಯರು ಸೂಚಿಸಿದಂತ ಔಷಧಿಗಳನ್ನು ಸೇವನೆ ಮಾಡಿ. ಚರ್ಮವನ್ನು ಸ್ವಚ್ಛವಾಗಿ ಮತ್ತು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಿ. ಚರ್ಮ ಸ್ನೇಹಿ ಉತ್ಪನ್ನಗಳನ್ನು ಉಪಯೋಗ ಮಾಡಿ. ಯಾವುದೇ ರೀತಿಯ ಸೋಂಕು ಅಥವಾ ಗಾಯವದಲ್ಲಿ ನಿರ್ಲಕ್ಷಿಸಬೇಡಿ, ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತರು: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು – Kannada News | Koppals hirebaganal factory smoke turns crops black farmers suffer and protest

ಕೊಪ್ಪಳ, ಜನವರಿ 20: ಕೊಪ್ಪಳ (Koppal) ಜಿಲ್ಲೆ ಕಾರ್ಖಾನೆಗಳ (Factory) ಊರು. ಈ ಜಿಲ್ಲೆಯಲ್ಲಿ ಕಾರ್ಖಾನೆ ವಿರೋಧಿಸಿ ಕಳೆದ 80 ದಿನಗಳಿಂದ ಹೋರಾಟ ನಡೆಯುತ್ತಿದೆ. ಮತ್ತೊಂದು ಕಡೆ ಕಾರ್ಖಾನೆಗಳ ಹೊಗೆಯಿಂದ ಆ ಗ್ರಾಮದ ಜನ ರೋಸಿ ಹೋಗಿದ್ದಾರೆ. ನಿನ್ನೆ ಆ ಗ್ರಾಮದ ಜನ ಕಾರ್ಖಾನೆ ಅಧಿಕಾರಿಗಳನ್ನ ಗ್ರಾಮಕ್ಕೆ ಕರೆಸಿ ತರಾಟೆಗೆ ತಗೆದುಕೊಂಡಿದ್ದರು. ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದ ಏನೆಲ್ಲಾ ಸಮಸ್ಯೆ ಆಗತ್ತೆ ಅನ್ನೊದನ್ನ ಬಿಚ್ಚಿಟ್ಟಿದ್ದರು. ಸಭೆಯಲ್ಲಿ ಅಧಿಕಾರಿಗಳು ಇನ್ಮುಂದೆ ಹೊಗೆ ಬಿಡಲ್ಲ ಎಂದು ಬರೆದುಕೊಟ್ಟಿದ್ದರು. ಆದರೂ ಆ ಗ್ರಾಮದಲ್ಲಿ ಹೊಗೆ ಮಾತ್ರ ಕಡಿಮೆ ಆಗಿಲ್ಲ. ಕಾರ್ಖಾನೆಗಳು ಬಿಡುವ ಹೊಗೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜಮೀನುಗಳಲ್ಲಿ ಬೆಳೆದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಇದರಿಂದ ರೋಸಿಹೋದ ರೈತರು ಇದೀಗ ಗವಿ ಸಿದ್ದಪ್ಪನ ಮೊರೆ ಹೋಗಲು ಸಿದ್ಧರಾಗಿದ್ದಾರೆ.

ರೈತರಿಗೆ ಸಂಕಷ್ಟ ತಂದಿಟ್ಟ ಕಾರ್ಖಾನೆಗಳ ಹೊಗೆ

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮ ಕಾರ್ಖಾನೆಗಳಿಂದ ನಲುಗಿ ಹೋಗಿದೆ. ಹೀರೆಬಗನಾಳ ಗ್ರಾಮದ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಕಾರ್ಖಾನೆಗಳು ಬಿಡುವ ಹೊಗೆಯಿಂದ ಇದೀಗ ರೈತರಿಗೆ ಸಂಕಷ್ಟಕ್ಕೆ ತಂದಿಟ್ಟಿದೆ. ಹೊಗೆಯಿಂದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಬೆಳೆಗಳ ಮೇಲೆ ಕಪ್ಪು ಬೂದಿ ಬಂದು ಕೂತಿದೆ. ಇದರಿಂದ ಜಾನುವಾಗಳು ಸಹ ಬೆಳೆ ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಗ್ರಾಮದ ಬಹುತೇಕ ಜಮೀನುಗಳು ಕಪ್ಪು ಬೂದಿಯಿಂದ ನಲುಗಿವೆ. ಹಿರೇಬಗನಾಳ ಗ್ರಾಮದ ಗವಿಸಿದ್ದಪ್ಪ ಪಲ್ಲೇದ್ ಅನ್ನೋ ರೈತ ಜಾನುವಾರುಗಳಿಗಾಗಿ ಮೆಕ್ಕೆಜೋಳ ಬೆಳದಿದ್ದರು. ಆದರೆ ಇದೀಗ ಮೆಕ್ಕೆಜೋಳ ಸಂಪೂರ್ಣ ಕಪ್ಪಾಗಿದೆ. ಮೆಕ್ಕೆಜೋಳ ಎಲೆಯ ಮೇಲೆಲ್ಲಾ ಕಪ್ಪು ಧೂಳು ಬಂದು ಕೂತಿದೆ. ನಿನ್ನೆ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಸಿಬ್ಬಂದಿಯನ್ನ ಕರೆದು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೆ ಹೊಗೆ ಬಂದ್ ಮಾಡುವಂತೆ ಸಹಿ ಮಾಡಿಸಿಕೊಂಡಿದ್ದರು. ಅಧಿಕಾರಿಗಳ ಸಹಿ ಮಾಡಿದ ಬಳಿಕ ಇಂದು ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಕಾರ್ಖಾನೆಗಳ ಹೊಗೆಯಿಂದಾದ ಸಮಸ್ಯೆಯನ್ನ ತೆರೆದಿಟ್ಟಿದೆ.

ಗವಿ ಸಿದ್ದೇಶ್ವರ ಸ್ವಾಮೀಜಿಗಳ ಮೊರೆ

ನಿನ್ನೆ ಹಿರೇಬಗನಾಳ ಗ್ರಾಮದ ಜನ ಗ್ರಾಮದ ಸುತ್ತಮುತ್ತ ಇರುವ ವನ್ಯ ಸ್ಟೀಲ್, ಐಎಲ್​ಸಿ, ಪಿಬಿಎಸ್, ಠಾಕೂರ್ ಸೇರಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಂದ ಕಳೆದ ಹಲವು ವರ್ಷಗಳಿಂದ ಗ್ರಾಮದ ಜನ ನರಕ ಅನುಭವಿಸುತ್ತಿದ್ದಾರೆ. ನಿನ್ನೆ ಕಾರ್ಖಾನೆ ಅಧಿಕಾರಿಗಳನ್ನ ಕರೆದು ತರಾಟೆಗೆ ತಗೆದುಕೊಂಡಿದ್ರು, ಅದಾದ ಬಳಿಕವೂ ಕಾರ್ಖಾನೆ ಅಧಿಕಾರಿಗಳು ಹೊಗೆ ಬಿಡೋದನ್ನ ನಿಲ್ಲಿಸಿಲ್ಲ. ಇಂದಿಗೂ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಹೊಗೆಯಿಂದ ನರಳುತ್ತಿದ್ದಾರೆ. ಗ್ರಾಮದ ಜಮೀನನಲ್ಲಿ ಬೆಳೆದ ಬೆಳೆಗಳು ಇದೀಗ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಖಾನೆಗಳು ಹೊಗೆ ಕಡಿಮೆ ಮಾಡದೆ ಹೋದರೆ ನಾವು ಬದಕಲ್ಲ, ಹೋರಾಟಕ್ಕೆ ಗವಿ ಸಿದ್ದೇಶ್ವರ ಸ್ವಾಮೀಜಿಗಳನ್ನ ಕರೆಯುತ್ತೇವೆ ಅನ್ನೋದು ರೈತರ ಮಾತು.

ಇದನ್ನೂ ಓದಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ

ಒಟ್ಟಾರೆ ಹಿರೇಬಗನಾಳ ಗ್ರಾಮದ ಜನ, ಕಾರ್ಖಾನೆಗಳಿಂದ ನರಕಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗಳನ್ನ ಜಾನುವಾರುಗಳು ಕೂಡ ತಿನ್ನಲಾಗದಂತಹ ಸ್ಥಿತಿನಿರ್ಮಾಣವಾಗಿದೆ. ನಿನ್ನೆ ಕಾಟಾಚಾರಕ್ಕೆ ಕಾರ್ಖಾನೆ ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಯಾವ ಬದಲಾವಣೆ ಆಗಿಲ್ಲ. ಎಂದಿನಂತೆ ಕಾರ್ಖಾನೆಗಳು ಹೊಗೆಯನ್ನ ಉಗುಳುತ್ತಿವೆ. ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ದೊಡ್ಡ ಹೋರಾಟ ಆಗೋದು ಖಚಿತ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ: ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದವ ಬೀದಿ ಹೆಣವಾದ – Kannada News | A Youth Hacked to death Who raised Voice Against illegal finance at Mysuru

ಬೆಂಗಳೂರು, ಜನವರಿ 20): ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysuru) ನಿನ್ನೆ(ಜನವರಿ 19) ಮಧ್ಯರಾತ್ರಿ ಮತ್ತೊಂದು ಕೊಲೆಯಾಗಿದೆ (Murder). ಅಂಗಡಿ ಮುಂದೆ ಕುಳಿತಿದ್ದ ಯುವಕನನ್ನು ಚಾಕು, ಲಾಂಗುಗಳನ್ನು ಹಿಡಿದು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೈಸೂರು ಉದಯಗಿರಿ ಬೀಡಿ ಕಾಲೋನಿ ಬಳಿ 26 ವರ್ಷದ ಶಹಬಾಜ ಎಂಬ ಯುವಕನನ್ನು ಅದೇ ಏರಿಯಾದ ಜುಬೇರ್ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಫೈನಾನ್ಸ್ ಹಾವಳಿ ತಡೆಯಲು ಮುಂದಾಗಿದ್ದೆ ಶಹಬಾಜ್ ಕೊಲೆ ಕಾರಣ ಎನ್ನಲಾಗಿದೆ.

ರಾತ್ರಿ‌1 ಗಂಟೆ ವೇಳೆ ಅಂಗಡಿ ಮುಚ್ಚಿ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ಮಾಡಿ ತಲೆ, ಎದೆ, ಕತ್ತು, ಹೊಟ್ಟೆಗೆ ಹೀಗೆ ಸಿಕ್ಕ ಸಿಕ್ಕ ಕಡೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಇದನ್ನೂ ಓದಿ: ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು: ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು

ಕೊಲೆಯಾದ ಯುವಕ ಹಾಗೂ ಕೊಲೆ ಮಾಡಿದ ಆರೋಪಿಗಳು ಒಂದೇ ಏರಿಯಾದವರು. ಶಹಬಾಜ್ ಗೌಸಿಯಾ ನಗರದಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದ. ಏರಿಯಾದಲ್ಲಿ ಫೈನಾನ್ಸ್ ಹಾವಳಿ ಜಾಸ್ತಿಯಾಗಿತ್ತು. ಜುಬೇರ್ ಹಾಗೂ ಅತನ ಸ್ಮೇಹಿತರು ಫೈನ್ಯಾನ್ಸ್ ಹೆಸರಿನಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದರಂತೆ. ಅವರ ವಿರುದ್ಧ ಶಹಬಾನ್‌ ನಿಂತಿದ್ದ. ಪೊಲೀಸರಿಗೆ ದೂರು ಸಹ ಕೊಡಿಸಿದ್ದನಂತೆ. ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ಶಹಬಾಜ್ ಅಂಗಡಿ ಮುಂದೆ ಇವರು ಬಂದು ಗಲಾಟೆ ಮಾಡಿದ್ದರು.

ಇನ್ನು ಒದರ ಜೊತೆಗೆ ಶಹಬಾಜ್ ಮನೆ ಪಕ್ಕ ಖಾಲಿ ಜಾಗದಲ್ಲಿ ಆಟೋಗಳನ್ನು ನಿಲ್ಲಿಸುತ್ತಿದ್ದರು. ಒಂದು ಆಟೋಕ್ಕೆ ದಿನಕ್ಕೆ 20 ರೂಪಾಯಿ ಕಲೆಕ್ಟ್ ಮಾಡಲಾಗುತಿತ್ತು. ಈ ವಿಚಾರಕ್ಕೂ ಗಲಾಟೆ ಆಗಿತ್ತಂತೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಮೈಸೂರಿನ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Inspiring: ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ ಮಾಡಿ ಗೆದ್ದ ಪ್ರಾಚಿ ಪೊದ್ದಾರ್; ಮದುವೆ ಒತ್ತಡದ ನಡುವೆಯೂ ಕುಂದದ ಛಲ – Kannada News | Prachi Poddar of Jagannath Stones, story of how she made new business idea from cement waste

ಕೆಲವು ಕುಟುಂಬಗಳಲ್ಲಿ, ಮನೆತನಗಳಲ್ಲಿ ಈಗಲೂ ಕೂಡ ಹೆಣ್ಮಕ್ಕಳಿಗೆ ಶಿಕ್ಷಣ ಸಿಗುವುದು ಕನಸಿನ ಮಾತೇ ಆಗಿದೆ. ಮಾರ್ವಾಡಿ ಮನೆತನಗಳಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಇರುವುದು ಬಹಳ ಅಪರೂಪ. ಇಂಥ ಸಾಂಪ್ರದಾಯಿಕ ಮಾರ್ವಾಡಿ ಕುಟುಂಬವೊಂದರಲ್ಲಿ ಹುಟ್ಟಿದವರು ಪ್ರಾಚಿ ಪೊದ್ದಾರ್. 2001 ರಲ್ಲಿ ಅವರು ಬೆಂಗಳೂರಿನ ಐಐಎಂಗೆ ಆಯ್ಕೆಯಾದಾಗ, ಅದು ಸಂತೋಷಕ್ಕಿಂತ ಚರ್ಚೆಯ ವಿಷಯವಾಯಿತು. ಮೊದಲು ಮದುವೆಯಾಗು, ಆನಂತರ ಬೇಕಾದರೆ ಓದುವಿಯಂತೆ ಎಂದು ಮನೆಯವರು ಒತ್ತಡ ಹಾಕಿದರು. ಆದರೆ, ಪ್ರಾಚಿ ಅದು ಹೇಗೋ ಐಐಎಂಗೆ ಸೇರಲು ಅನುಮತಿ ಪಡೆದರು. ಆದರೆ, ಅಲ್ಲೊಂದು ಷರತ್ತು ಹಾಕಲಾಗಿತ್ತು. ಓದು ಪೂರ್ಣಗೊಂಡ ಬಳಿಕ ಮದುವೆಯಾಗಬೇಕು ಎಂಬುದು ಆ ಷರತ್ತಾಗಿತ್ತು. ಪ್ರಾಚಿ ಒಪ್ಪಿಕೊಂಡರು. ಆದರೆ, ಅವರ ಕನಸು ಬತ್ತಿಹೋಗಲು ಬಿಡಲಿಲ್ಲ. ಅವರ ಮನಸ್ಸಿನಲ್ಲಿ ಅಚ್ಚೊತ್ತಿ ಗರಿ ಕಟ್ಟಿಕೊಂಡು ಬೆಳೆಯಿತು.

ಛಲಬಿಡದ ಪ್ರಾಚಿ ಎಲ್ಲೂ ನಿಲ್ಲಲಿಲ್ಲ

ತನಗೆ ಸಣ್ಣ ವಯಸ್ಸಿನಿಂದಲೂ ಫೈನಾನ್ಸ್ ವಿಷಯದಲ್ಲಿ ಬಹಳ ಆಸಕ್ತಿ ಇತ್ತು ಎಂದು ಪ್ರಾಚಿ ಹೇಳುತ್ತಾರೆ. ಕಾಲೇಜು ದಿನಗಳಲ್ಲಿ, ಅವರು ಗಣಿತ ಮತ್ತು ಅಕೌಂಟ್ಸ್​ನತ್ತ ಆಕರ್ಷಿತರಾದರು. ಇದೇ ಕಾರಣದಿಂದ ಅವರು ಮ್ಯಾನೇಜ್ಮೆಂಟ್ ಕೋರ್ಸ್ ಸೇರಲು ಪ್ರೇರೇಪಣೆ ಸಿಕ್ಕಿತು. ಬೆಂಗಳೂರಿನ ಐಐಎಂನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅವರು ಊರಿಗೆ ಮರಳಿ, ಮನೆಯವರಿಗೆ ವಾಗ್ದಾನ ನೀಡಿದಂತೆ ವಿವಾಹವಾದರು. ಆದರೆ ಆಗಲೂ, ಅವರು ಮನೆ ನಿರ್ವಹಣೆಗೆ ಮಾತ್ರ ತಮ್ಮನ್ನು ಮಿತಿಗೊಳಿಸಲಿಲ್ಲ. ತನ್ನನ್ನು ತಾನು ಮಿತಿಗೊಳಿಸಿಕೊಳ್ಳಲಿಲ್ಲ. ಅವರು ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಜಿಇ ಫೈನಾನ್ಷಿಯಲ್ ಮತ್ತು ಎಚ್‌ಎಸ್‌ಬಿಸಿಯಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದರು. ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟ್ರಕ್ಚರ್ ಬಗ್ಗೆ ಆಳವಾದ ತಿಳಿವಳಿಕೆ ಪಡೆದರು.

ಅತ್ತೆ-ಮಾವನ ಜವಾಬ್ದಾರಿ ಮತ್ತು ಕೋಲ್ಕತ್ತಾಗೆ ಮರಳಿದ್ದು…

ಕೆಲವು ವರ್ಷಗಳ ನಂತರ ಪ್ರಾಚಿ ಪೊದ್ದಾರ್ ಅವರು ತಮ್ಮ ಅತ್ತೆ-ಮಾವನ ಜವಾಬ್ದಾರಿಗಳಿಂದಾಗಿ ಕೋಲ್ಕತ್ತಾಗೆ ಹಿಂತಿರುಗಬೇಕಾಯಿತು. ಅವರ ಅತ್ತೆ ಮತ್ತು ಮಾವನಿಗೆ ಅನಾರೋಗ್ಯವಿದ್ದರಿಂದ ಕುಟುಂಬಕ್ಕೆ ಅವರ ಅಗತ್ಯತೆ ಇತ್ತು. ಕೋಲ್ಕತ್ತಾಗೆ ಹಿಂದಿರುಗಿದ ನಂತರ, ಪ್ರಾಚಿ ತನ್ನ ಪತಿಯ ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ಭಾಗಿಯಾಗತೊಡಗಿದರು. ಸಿಮೆಂಟ್ ಟ್ರಾನ್ಸ್​ಪೋರ್ಟೇಶನ್ ಬ್ಯುಸಿನೆಸ್ ಅದಾಗಿತ್ತು. ಇಲ್ಲಿಂದ ಪ್ರಾಚಿಯವರ ವೃತ್ತಿಜೀವನದ ಹಾದಿಯಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ.

ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ

ಪ್ರಾಚಿ ಅವರು ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ಭಾಗಿ ಮಾತ್ರವೇ ಆಗಿರಲಿಲ್ಲ, ತಮ್ಮ ಹಣಕಾಸು ನಿರ್ವಹಣೆಯ ಜ್ಞಾನ ಮತ್ತು ಅನುಭವ ಬಳಸಿ ಆ ಬ್ಯುಸಿನೆಸ್​ಗೆ ಹೊಸ ಸ್ವರೂಪವನ್ನೇ ತಂದರು. ಸಿಮೆಂಟ್ ತ್ಯಾಜ್ಯದಲ್ಲಿ ಇರುವ ಸುಣ್ಣದ ಕಲ್ಲನ್ನು ಪುಡಿಮಾಡಿ ಕಲ್ಲಿನ ಚಿಪ್ಸ್ ತಯಾರಿಸುವ ಒಂದು ಐಡಿಯಾ ಸುಮಾರು ಮೂರು ವರ್ಷಗಳ ಹಿಂದೆ ಅವರಿಗೆ ಬಂದಿತು. ಈ ಐಡಿಯಾ ವರ್ಕೌಟ್ ಆಯಿತು. ಬ್ಯುಸಿನೆಸ್ ಹಿಗ್ಗಿತು. ಯಶಸ್ವಿಯಾಯಿತು. ಈ ದೃಷ್ಟಿಕೋನದಿಂದ, ವ್ಯವಹಾರವು ವಿಸ್ತರಿಸಿತು. Jagannath Stones ಅಡಿಯಲ್ಲಿ ಲೈಮ್​ಸ್ಟೋನ್ಸ್ ಪುಡಿಮಾಡುವ ಆಪರೇಷನ್ಸ್ ಪ್ರಾರಂಭಿಸಲಾಯಿತು. ಪ್ರಸ್ತುತ, ಜಗನ್ನಾಥ್ ಸ್ಟೋನ್ಸ್‌ನ ಫೈನಾನ್ಸ್ ವಿಭಾಗದ ಪೂರ್ಣ ಜವಾಬ್ದಾರಿಯನ್ನು ಪ್ರಾಚಿ ಹೊತ್ತು ನಡೆಸುತ್ತಿದ್ದಾರೆ.

ಲಾಭ ಮತ್ತು ನಷ್ಟದಿಂದ ಹಿಡಿದು ಹೂಡಿಕೆಯವರೆಗೆ ಪ್ರತಿಯೊಂದು ನಿರ್ಧಾರವೂ ಪ್ರಾಚಿಯದ್ದೇ

ಇಂದು, ಪ್ರಾಚಿ ಪೊದ್ದಾರ್ ಅವರು ಬ್ಯುಸಿನೆಸ್​ನ ಲಾಭ ಮತ್ತು ನಷ್ಟದಿಂದ ಹಿಡಿದು ಕಂಪನಿಯ ಹೂಡಿಕೆ ಮತ್ತು ಪರ್ಸನಲ್ ಇನ್ವೆಸ್ಟ್​ಮೆಂಟ್​ವರೆಗೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಪಾತ್ರವು ಕೇವಲ ಅಕೌಂಟ್​ಗಳನ್ನು ನಿರ್ವಹಿಸುವುದಕ್ಕೆ ಸೀಮಿತವಾಗಿಲ್ಲ. ಸ್ಟ್ರಾಟಿಜಿ, ಪ್ಲಾನಿಂಗ್ ಮತ್ತು ಡೆವಲಪ್ಮೆಂಟ್ ಅನ್ನೂ ನೋಡಿಕೊಳ್ಳುತ್ತಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಒಂದು ಜವಾಬ್ದಾರಿ ಎಂಬುದು ಅವರ ಭಾವನೆ. ಮಹಿಳೆಯರು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಂಡಾಗ, ವ್ಯವಹಾರಗಳು ಉಳಿಯುವುದು ಮಾತ್ರವಲ್ಲದೆ ಅಭಿವೃದ್ಧಿ ಹೊಂದುತ್ತವೆ.

ಆತ್ಮವಿಶ್ವಾಸ ಕುಂದಲಿಲ್ಲ

ಓದು ಮುಗಿಸಿ ಮದುವೆಯಾಗುತ್ತೇನೆ ಎಂದು ನೀಡಿದ್ದ ವಚನವನ್ನು ಪ್ರಾಚಿ ತಪ್ಪದೇ ಉಳಿಸಿಕೊಂಡರು. ಅದರ ನಡುವೆಯೂ ಅವರು ಒಂದು ಚೌಕಟ್ಟಿಗೆ ಸೀಮಿತಗೊಳ್ಳಲಿಲ್ಲ. ಪತಿಯ ಫ್ಯಾಮಿಲಿ ಬ್ಯುಸಿನೆಸ್​ನಲ್ಲಿ ನೆರವಾಗಿದ್ದು ಮಾತ್ರವಲ್ಲ, ಅದನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಮುಖ ಕೊಡುಗೆ ನೀಡಿದರು. ಇದು ಪ್ರಾಚಿ ಪೊದ್ದಾರ್ ಎನ್ನುವ ಮಹಿಳೆಯ ಸಾಧನೆಯ ಕಥೆ.

ಪ್ರಾಚಿ ಪೊದ್ದಾರ್

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಯಲ್ಲಿ ಪದೇ ಪದೇ ಹುಣ್ಣಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಗಟ್ಟಲು ಈ ಸಿಂಪಲ್ ಟ್ರಿಕ್ಸ್ ಪಾಲಿಸಿ – Kannada News | Mouth Ulcer Symptoms: When to Worry and What to Do

ಬಾಯಿ ಹುಣ್ಣಿನ (Mouth Ulcer) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ… ಕೆಲವರು ನೋಡಿರುತ್ತಾರೆ ಇನ್ನು ಕೆಲವರು ಅನುಭವಿಸಿರುತ್ತಾರೆ. ತುಂಬಾ ಖಾರವಾದ ಆಹಾರ ಸೇವನೆ ಮಾಡಿದಾಗ, ಹೊಟ್ಟೆ ದುರ್ಬಲವಾದಾಗ ನಿಮಗೆ ಬಾಯಿಯಲ್ಲಿ ಹುಣ್ಣುಗಳು ಬರಬಹುದು. ಸಾಮಾನ್ಯವಾಗಿ ಈ ರೀತಿ ಕಂಡುಬರುವ ಹುಣ್ಣುಗಳು ಒಮ್ಮೆ ಕಾಣಿಸಿಕೊಳ್ಳುತ್ತವೆ ಬಳಿಕ ಕೆಲವು ದಿನಗಳಲ್ಲಿಯೇ ಮಾಯವಾಗುತ್ತವೆ, ಈ ರೀತಿಯಾಗುವುದು ಬಹಳ ಸಹಜ. ಆದರೆ ಆಗಾಗ ಈ ರೀತಿಯಾಗುತ್ತಿದ್ದರೆ ಅದನ್ನು ಕಡೆಗಣಿಸಬೇಡಿ. ಏಕೆಂದರೆ ಇದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. ಹೌದು, ಪದೇ ಪದೇ ಈ ರೀತಿಯಾಗುವುದಕ್ಕೆ ಕಾರಣವಿದೆ. ಹಾಗಾಗಿ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಮಾಡುವ ಬದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವ ಕ್ರಮಗಳತ್ತ ಗಮಕೊಡಿ.

ಬಾಯಿಯಲ್ಲಿ ಹುಣ್ಣುಗಳು ಕಂಡುಬರುವುದಕ್ಕೆ ಹಲವಾರು ಕಾರಣಗಳಿರಬಹುದು. ಅವುಗಳಲ್ಲಿ ಸಾಮಾನ್ಯ ಕಾರಣವೆಂದರೆ ದೇಹದಲ್ಲಿ ಫೋಲಿಕ್ ಆಮ್ಲ ಅಥವಾ ಕಬ್ಬಿಣದ ಕೊರತೆಯಾಗಿರುವುದು. ಹೌದು, ಇದರ ಜೊತೆಗೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದರಿಂದಲೂ ಈ ರೀತಿ ಆಗಿರಬಹುದು. ಕೆಲವರಲ್ಲಿ, ಹುಣ್ಣುಗಳು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕಾಣಿಸಿಕೊಂಡು ಬಳಿಕ ತಾನಾಗಿಯೇ ಮಾಯವಾಗಿ ಹೋಗುತ್ತದೆ, ಆದರೆ ನಿಮಗೆ ಪ್ರತಿ ಕೆಲವು ದಿನಗಳಿಗೊಮ್ಮೆ ಹುಣ್ಣುಗಳು ಬಂದು ಅವು ಗುಣವಾದ ನಂತರ ಮತ್ತೆ ಬಂದರೆ, ಆದಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನೂ ಓದಿ: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಹುಣ್ಣುಗಳು ಯಾವಾಗ ಅಪಾಯಕಾರಿಯಾಗಬಹುದು?

ಒಬ್ಬ ವ್ಯಕ್ತಿಗೆ ಪ್ರತಿ ತಿಂಗಳು ಪದೇ ಪದೇ ಬಾಯಿಯಲ್ಲಿ ಹುಣ್ಣುಗಳು ಕಂಡುಬರುತ್ತಿದ್ದರೆ, ಬಾಯಿಯಿಂದ ಸ್ವಲ್ಪ ರಕ್ತಸ್ರಾವ ಅಥವಾ ತೂಕದಲ್ಲಿ ಏರಿಳಿತವಾಗುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬಾರದು. ಈ ರೋಗಲಕ್ಷಣಗಳ ಹೊರತಾಗಿ, ತಿಂಗಳಾದರೂ ಬಾಯಿಯಲ್ಲಿ ಒಂದೇ ಒಂದು ಹುಣ್ಣು ಗುಣವಾಗದಿದ್ದರೆ ಕೂಡ ಅದು ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ, ಬಾಯಿಯ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ, ಇದು ಕರುಳಿನ ಕಾಯಿಲೆ, ಥೈರಾಯ್ಡ್ ಸಮಸ್ಯೆ ಅಥವಾ ಮಧುಮೇಹದಿಂದಲೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ, ಎಚ್‌ಐವಿ ವೈರಸ್ ಸಹ ಅಂತಹ ಲಕ್ಷಣಗಳನ್ನು ಕೂಡ ಉಂಟುಮಾಡಬಹುದು.

ಹೆಚ್ಚಿನ ಅಪಾಯವಿರುವುದು ಯಾರಿಗೆ?

  • ಧೂಮಪಾನ ಮಾಡುವ ಅಥವಾ ತಂಬಾಕು ಬಳಸುವವರಲ್ಲಿ.
  • ಮಧುಮೇಹ ರೋಗಿಗಳಲ್ಲಿ.
  • ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿರುವವರಲ್ಲಿ.
  • ಜೀರ್ಣಕಾರಿ ಸಮಸ್ಯೆಗಳಿರುವವರಲ್ಲಿ.
  • ತುಂಬಾ ಖಾರವಾದ ಆಹಾರವನ್ನು ಸೇವನೆ ಮಾಡುವವರಲ್ಲಿ.

ಬಾಯಿ ಹುಣ್ಣುಗಳನ್ನು ತಡೆಗಟ್ಟುವುದು ಹೇಗೆ?

  • ವಿಟಮಿನ್ ಬಿ 12 ಮಟ್ಟವನ್ನು ಪರೀಕ್ಷಿಸಿಕೊಳ್ಳಿ, ಮತ್ತು ಕಡಿಮೆಯಿದ್ದರೆ, ಅದಕ್ಕೆ ಔಷಧಿ ತೆಗೆದುಕೊಳ್ಳಿ.
  • ತಂಬಾಕು ಸೇವಿಸಬೇಡಿ.
  • ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ.
  • ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು – Kannada News | Kavya Shaiva expresses displeasure over Rakshita Shetty becoming the runner up in Bigg Boss Kannada

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಯಲ್ಲಿ ಗಿಲ್ಲಿ ನಟ (Gilli Nata) ಅವರು ವಿನ್ ಆದರು. ರಕ್ಷಿತಾ ಶೆಟ್ಟಿ ಅವರಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿತು. ಅಶ್ವಿನಿ ಗೌಡ 2ನೇ ರನ್ನರ್ ಅಪ್ ಆದರು. 3ನೇ ರನ್ನರ್ ಅಪ್ ಸ್ಥಾನಕ್ಕೆ ಕಾವ್ಯಾ ಶೈವ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಗ್ಗೆ ಕಾವ್ಯಾ ಶೈವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಟ ಹಾಳಾಗಬೇಕು ಎಂಬ ಮನಸ್ಥಿತಿ ನನಗೆ ಇಲ್ಲ. ನನ್ನ ದೃಷ್ಟಿಕೋನದಲ್ಲಿ ರಕ್ಷಿತಾ ರನ್ನರ್ ಅಪ್ ಆಗಿದ್ದು ನನಗೆ ಇಷ್ಟ ಆಗಿಲ್ಲ. ಆದರೆ ಜನರಿಗೆ ಅದು ಇಷ್ಟ ಆಗಿದೆ. ಅದನ್ನು ಬದಲಾಯಿಸೋಕೆ ಆಗಲ್ಲ. ನನ್ನ ಪ್ರಕಾರ ರಕ್ಷಿತಾ ಸ್ಥಾನದಲ್ಲಿ ನಾನೇ ಇರಬೇಕಿತ್ತು’ ಎಂದು ಕಾವ್ಯಾ ಶೈವ (Kavya Shaiva) ಅವರು ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಫಿನಾಲೆಗೆ ಮೂವರು ಮಹಿಳಾ ಸ್ಪರ್ಧಿಗಳು ಬಂದಿದ್ದರು. ಆ ಬಗ್ಗೆ ಕಾವ್ಯಾ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರಿ ಸಾರಿಗೆ ಸಂಸ್ಥೆಗೂ ಆದಾಯದ ವ್ಯಾಮೋಹ: ಕೆಟ್ಟಿತು ಸರ್ಕಾರಿ ಬಸ್​​ಗಳ ಅಂದ – Kannada News | Karnataka government Bus Ads: NWKRTC Defaces Fleet, Raises Safety Fears

ಸರ್ಕಾರಿ ಬಸ್​ಗಳಿಗೆ ಜಾಹೀರಾತು ಅಂಟಿಸಿರುವುದು

ಧಾರವಾಡ, ಜನವರಿ 20: ಸರಕಾರಿ ಬಸ್ಸುಗಳು (government Buses) ಅಂದರೆ ಅದಕ್ಕೊಂದು ನಿಯಮ, ಶಿಸ್ತು, ಅಂದ ಇರಬೇಕು. ಇದೇ ಕಾರಣಕ್ಕೆ ಬಸ್ಸುಗಳ ಬಣ್ಣದ ವಿನ್ಯಾಸವನ್ನು ರೂಪಿಸುವಾಗ ಸಾರ್ವಜನಿಕರಿಂದ ಸಾಕಷ್ಟು ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತೆ. ಹೀಗೆ ವಿನ್ಯಾಸಗೊಂಡು ಧಾರವಾಡ (Dharwad) ಜಿಲ್ಲೆಯಲ್ಲಿ ರಸ್ತೆಗಿಳಿದ ಸರಕಾರಿ ಬಸ್ಸುಗಳ ಆಕಾರವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಆದಾಯದ ಬೆನ್ನು ಬಿದ್ದಿರುವ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ಸುಗಳ ಅಂದವನ್ನೇ ಕೆಡಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಯುವ್ಯ ಸಾರಿಗೆ ಸಂಸ್ಥೆಯ ಆದಾಯದ ವ್ಯಾಮೋಹ

ಕಪ್ಪು ಬಣ್ಣದ ಸ್ಟಿಕ್ಕರ್ಸ್​ಗಳಿಂದ ತುಂಬಿ ಹೋಗಿರುವ ಬಸ್ಸುಗಳನ್ನು ನೋಡಿದರೆ ಎಂಥವರಿಗೂ ಇವು ಸರಕಾರಿ ಬಸ್ಸುಗಳಾ ಅನ್ನೋ ಅನುಮಾನ ಮೂಡುತ್ತದೆ. ಇದಕ್ಕೆ ಕಾರಣ ವಾಯುವ್ಯ ಸಾರಿಗೆ ಸಂಸ್ಥೆಯ ಆದಾಯದ ಮೇಲಿರುವ ವ್ಯಾಮೋಹ. ಒಂದು ಸಂಸ್ಥೆ ಚೆನ್ನಾಗಿ ನಡೆಯಬೇಕೆಂದರೆ, ಲಾಭದಾಯಕವಾಗಿ ನಡೆಯಬೇಕೆಂದರೆ ಅದಕ್ಕೆ ಆದಾಯದ ಮೂಲ ಬೇಕೇಬೇಕು. ಹಾಗಂತ ಎಲ್ಲ ನೈತಿಕತೆಯನ್ನು ಬದಿಗೊತ್ತಿ ಆದಾಯವನ್ನೇ ನೆಚ್ಚಿಕೊಂಡು ಜಾಹಿರಾತಿಗೆ ಹೋದರೆ ಏನೆಲ್ಲಾ ಆಗಬಹುದು ಅನ್ನೋದಕ್ಕೆ ಈ ಬಸ್ಸುಗಳೇ ಸಾಕ್ಷಿ.

ಇದನ್ನೂ ಓದಿ: ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್​​ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು!

ಇದೀಗ ಧಾರವಾಡ ಜಿಲ್ಲೆಯ 76 ಹಾಗೂ ಬೆಳಗಾವಿ ಜಿಲ್ಲೆಯ 60 ಬಸ್ಸುಗಳ ಮೇಲೆ ಜಾಹಿರಾತು ಮುದ್ರಿಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಆ ಏಜೆನ್ಸಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದ್ದು, ಇಡೀ ಬಸ್ಸುಗಳ ಮೇಲೆ ಜಾಹೀರಾತಿನ ಕಪ್ಪು ಬಣ್ಣದ ಸ್ಟಿಕ್ಕರ್ಸ್ ಅಂಟಿಸಿ, ಇಡೀ ಬಸ್ಸನ್ನು ಕೆಂಪು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿಸಿಬಿಟ್ಟಿದ್ದಾರೆ. ಒಂದು ಕಡೆ ಇದು ಬಸ್ಸುಗಳ ಅಂದವನ್ನು ಕೆಡಿಸಿದ್ದು, ಮತ್ತೊಂದು ಕಡೆ ಮುದ್ರಣವಾದ ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಬಹುತೇಕ ಬಸ್ಸುಗಳ ಸ್ಥಿತಿಯೇ ಸರಿಯಾಗಿಲ್ಲ. ಮೊದಲೇ ಅನೇಕ ಬಸ್ಸುಗಳು ಎಲ್ಲೆಂದರಲ್ಲೇ ಕೆಟ್ಟು ನಿಲ್ಲುವ ಸ್ಥಿತಿಯಲ್ಲಿವೆ. ಇದರಿಂದಾಗಿ ನಿತ್ಯವೂ ಜನರು ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುತ್ತಲೇ ಇರುತ್ತಾರೆ. ಇಂಥದ್ದರೊಳಗೆ ಬಸ್ಸಿನ ಬಣ್ಣವನ್ನೇ ಕುರೂಪಗೊಳಿಸದರೆ ಜನರು ಆಕ್ರೋಶಗೊಳ್ಳದೇ ಮತ್ತೇನು ಮಾಡಿಯಾರು?

ಆರಂಭದಲ್ಲಿ ಕೇವಲ ಕಪ್ಪು ಬಣ್ಣದ ಜಾಹಿರಾತುಗಳಷ್ಟೇ ಬಂದಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಇದೀಗ ನೇರಳ ಬಣ್ಣವೂ ಇದರೊಂದಿಗೆ ಸೇರಿಕೊಂಡಿದೆ. ಜಾಹಿರಾತು ನೀಡೋ ಕಂಪನಿಯವರು ತಮಗೆ ಬೇಕಾದ ರೀತಿಯ ಸ್ಟಿಕ್ಕರ್ಸ್ ಅಂಟಿಸೋ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ ಯಾರು ಏನೇ ಪ್ರಶ್ನೆ ಮಾಡಿದರೂ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ.

ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಯಾಂಗಾ ಅವರನ್ನು ಕೇಳಿದರೆ, ಈಗಾಗಲೇ ಇಂಥದ್ದೊಂದು ಪ್ರಯೋಗ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಅದನ್ನು ಇಲ್ಲಿಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಸಾರಿಗೆ ನಿಯಮಗಳು ಹಾಗೂ ರಾಜ್ಯ ಸರಕಾರದ ನಿಯಮಗಳ ಪ್ರಕಾರವೇ ನಾವು ಇದನ್ನು ಮಾಡುತ್ತಿದ್ದೇವೆ. ಎಲ್ಲಿಯೂ ಇದರಲ್ಲಿ ಲೋಪವಾಗಿಲ್ಲ ಅನ್ನೋದು ಅವರ ಸ್ಪಷ್ಟನೆ.

ಇದೆಲ್ಲಾ ಒಂದು ಕಡೆಯಾದರೆ, ರಾತ್ರಿ ಹೊತ್ತು ಈ ಕಪ್ಪು ಬಣ್ಣದ ಬಸ್ಸುಗಳು ಕಾಣಿಸೋದೇ ಇಲ್ಲ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಕೂಡ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ, ಅಕ್ಕಪಕ್ಕದಿಂದ ಬರುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ರಾತ್ರಿ ಹೊತ್ತು ಈ ಬಸ್ಸುಗಳು ಕಾಣೋದೇ ಇಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚಾಗೋ ಆತಂಕವೂ ಶುರುವಾಗಿದೆ. ಆದರೂ ಇದರ ಬಗ್ಗೆ ಸಂಸ್ಥೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ: ಬಂದ್​ ಆಗುತ್ತಾ ಚಿಗರಿ ಬಸ್​ ಓಡಾಟ?

ಸದ್ಯಕ್ಕೆ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ 136 ಬಸ್ಸುಗಳಿಗೆ ಕಪ್ಪು ಬಣ್ಣದ ದೌರ್ಭಾಗ್ಯವನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಸುಗಳಿಗೂ ಈ ದೌರ್ಭಾಗ್ಯ ಬರೋದು ಗ್ಯಾರಂಟಿ ಅನ್ನೋ ಶೈಲಿಯಲ್ಲಿಯೇ ವ್ಯವಸ್ಥಾಪಕ ನಿರ್ದೇಶಕರು ಮಾತಾಡಿದ್ದಾರೆ. ಒಂದು ಕಡೆ ಬಸ್ಸಿನ ಮೇಲೆ ಕಂಡು ಬರುತ್ತಿರೋ ಜಾಹಿರಾತಿನ ಅಂಶದ ಬಗ್ಗೆ ಜನರಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಬಣ್ಣದ ಬಗೆಗಿನ ಸಿಟ್ಟು ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಆದಾಯವನ್ನೊಂದೇ ನೆಚ್ಚಿಕೊಂಡು ಸರಕಾರಿ ಬಸ್ಸುಗಳನ್ನು ಈ ದುಸ್ಥಿತಿಗೆ ತಂದಿರೋದು ಮಾತ್ರ ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು: ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು – Kannada News | Elderly couple Dead Body Found In House at bhadravathi, Investigation underway

ಶಿವಮೊಗ್ಗ, (ಜನವರಿ 20): ವೃದ್ಧ ದಂಪತಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿಯ ( bhadravathi) ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ. ಚಂದ್ರಪ್ಪ(80), ಪತ್ನಿ ಜಯಮ್ಮ(75) ಎನ್ನುವರ ಮೃತದೇಹಗಳು ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಪತ್ತೆಯಾಗಿವೆ. ನಿನ್ನೆಯೇ ದಂಪತಿ ಮೃತಪಟ್ಟಿದ್ದು, ಇಂದು (ಜನವರಿ 20) ಬೆಳಕಿಗೆ ಬಂದಿದೆ. ವೃದ್ಧ ದಂಪತಿ ಒಟ್ಟಿಗೆ ಮೃತಪಟ್ಟಿರುವ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಸ್ಥಳಕ್ಕೆ ಭದ್ರಾವತಿ ಓಲ್ಡ್ ಟೌನ್ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವಿನ ಸುತ್ತ ಅನುಮಾನಗಳ ಹುತ್ತ

ಮೃತ ಚಂದ್ರಪ್ಪ ಭದ್ರಾವತಿಯ ವಿಐಎಸ್​ಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಮನೆಗೆ ನುಗ್ಗಿ ದರೋಡೆಕೋರರು ಹತ್ಯೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯ ಪ್ರತ್ಯೇಕ ಕೊಠಡಿಯಲ್ಲಿ ವೃದ್ಧ ದಂಪತಿ ಶವಗಳು ಪತ್ತೆಯಾಗಿವೆ. ಹೀಗಾಗಿ ಕೊಲೆಯಾಗಿರಬಹುದು ಎಂದು ಮಕ್ಕಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ದಂಪತಿ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆ ಆಗಿಲ್ಲ. ಇದರಿಂದ ಈ ಪ್ರಕರಣ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್​​ಪಿ ಕಾರ್ಯಪ್ಪ, ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಬ್ಬಕ್ಕೆ ಅಮ್ಮ ಸೀರೆ ಕೊಡಿಸಿಲ್ಲವೆಂದು ನೇಣಿಗೆ ಶರಣಾದ ಬಾಲಕಿ – Kannada News | A Saree Unbought, a Life Lost: Festival Turns Into Mourning in Visakhapatnam

ವಿಶಾಖಪಟ್ಟಣಂ, ಜನವರಿ 20: ಹಬ್ಬಕ್ಕೆ ಅಮ್ಮ ಸೀರೆ ಕೊಡಿಸಿಲ್ಲವೆಂದು 14 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ(Suicide)ಯಂತದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದು ಹೆಚ್ಚಾಗಿದೆ. ಓದು ಅಂದಿದ್ದಕ್ಕೆ, ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಹೀಗೆ ಸಣ್ಣ ಸಣ್ಣ ವಿಚಾರಗಳನ್ನೂ ಅವರು ದೊಡ್ಡದಾಗಿ ತೆಗೆದುಕೊಳ್ಳುತ್ತಿದ್ದಾರೆ.

ಅಮ್ಮ ಸೀರೆ ಕೊಡಿಸಿಲ್ಲವೆಂದು ಈ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ತಂದೆ ಟೈಲರ್ ಆಗಿದ್ದು, ಅಜ್ಜ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಜ್ಜ-ಅಜ್ಜಿ ಊರಿಗೆ ಹೋಗಿರುವಾಗ ಆಕೆ ತನ್ನ ತಾಯಿಯ ಜತೆ ಏನಾದರೂ ಖರೀದಿ ಮಾಡಬೇಕು ಎಂದು ಹೋಗಿದ್ದಳು.

ಆಗ ತಾಯಿ ಬಳಿ ಸೀರೆ ಕೊಡಿಸು ಎಂದು ಕೇಳಿದ್ದಾಳೆ, ಆಗ ನೀನಿನ್ನು ಚಿಕ್ಕವಳು ಅದನ್ನು ಬಿಟ್ಟು ಬೇರೇನಾದರೂ ಕೇಳು ಕೊಡಿಸುತ್ತೇನೆ ಎಂದು ಶಾಂತವಾಗಿಯೇ ಹೇಳಿದ್ದರು. ಆದರೆ ಆಕೆ ತುಂಬಾ ಹಠ ಮಾಡಿದ್ದಳು. ಮನೆಗೆ ಬಂದು ಅಮ್ಮ ಎಷ್ಟೇ ಸಮಾಧಾನ ಪಡಿಸಿದರೂ ಸಮಾಧಾನವಾಗಲೇ ಇಲ್ಲ.
ಅಸಮಾಧಾನದಿಂದ ತನ್ನ ಅಜ್ಜನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮತ್ತಷ್ಟು ಓದಿ: ಗಂಡನ ಜತೆ ಜಗಳ: 4 ವರ್ಷ ಮಗಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಮಗಳು ಎಲ್ಲೂ ಕಾಣದಿದ್ದಾಗ ತನ್ನ ಹಿರಿಯ ಮಗಳ ಬಳಿ ಆಕೆಗೆ ಕರೆ ಮಾಡಲು ಕೇಳಿದ್ದಾರೆ, ಆದರೂ ಆಕೆ ಕರೆ ರಿಸೀವ್ ಮಾಡಿರಲಿಲ್ಲ. ಕೊನೆಗೆ ಇಡೀ ಮನೆಯಲ್ಲಾ ಹುಡುಕಿದ್ದಾರೆ. ಆಗ ಅಜ್ಜನ ಕೋಣೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮತ್ತೊಂದು ಘಟನೆ
ಪತಿ ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತ್ನಿ
ಸಣ್ಣ ಪುಟ್ಟ ವಿಚಾರಗಳಿಗೆ ಆತ್ಮಹತ್ಯೆ(Suicide)ಯಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಮನಸ್ಥಿತಿ ಸೂಕ್ಷ್ಮವಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಪತಿ ಹೊಸ ಮೊಬೈಲ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಮೋಡಸಾದಲ್ಲಿ ನಡೆದಿದೆ.ಶನಿವಾರ ಈ ಘಟನೆ ನಡೆದಿದೆ. ಊರ್ಮಿಳಾ ಎಂಬ ಮಹಿಳೆ ಪತಿಯೊಂದಿಗೆ ಚೀನೀ ಆಹಾರ ವ್ಯವಹಾರ ನಡೆಸುತ್ತಿದ್ದರು.

ಮೂಲಗಳ ಪ್ರಕಾರ, ಮಹಿಳೆ ಕೆಲವು ದಿನಗಳ ಹಿಂದೆ ತನ್ನ ಪತಿಗೆ ಹೊಸ ಮೊಬೈಲ್ ಫೋನ್ ಕೇಳಿದ್ದರು. ಆದರೆ, ಆರ್ಥಿಕ ತೊಂದರೆಗಳನ್ನು ಉಲ್ಲೇಖಿಸಿ ಆ ವ್ಯಕ್ತಿ ನಿರಾಕರಿಸಿದ್ದರು. ಅದಕ್ಕೆ ಬೇಸರಗೊಂಡಿದ್ದ ಊರ್ಮಿಳಾ ಮತ್ತು ಪತಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮಹಿಳೆ ತನ್ನ ಮನೆಯಲ್ಲಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.

ಸ್ಥಳೀಯ ಪೊಲೀಸರಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಯಿತು ಮತ್ತು ಮಾಹಿತಿ ಪಡೆದ ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಆಕಸ್ಮಿಕ ಸಾವು ಎಂದು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link