Category Archives: Blog

Your blog category

IPL 2026: ಗೆಲ್ಲೋರು ಯಾರು? ಹೀಗಿದೆ RCB ಲೆಕ್ಕಾಚಾರ – Kannada News | GT vs RCB: Dharamshala Debut in Qualifier 1

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆತಿಥ್ಯವಹಿಸಲು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ (HPCA) ಸ್ಟೇಡಿಯಂ ಸಜ್ಜಾಗಿದೆ. ಈ ಮೈದಾನದಲ್ಲಿ ನಾಳೆ (ಮೇ 26) ನಡೆಯಲಿರುವ ಪ್ಲೇಆಫ್​ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನ ಆರ್​ಸಿಬಿ ಈ ಮೈದಾನದಲ್ಲಿ ಗೆಲ್ಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಹೆಚ್​ಪಿಸಿಎ ಮೈದಾನದಲ್ಲಿ ಆರ್​ಸಿಬಿ ಈವರೆಗೆ ಆಡಿರುವುದು ಕೇವಲ 3 ಪಂದ್ಯಗಳು. ಈ ಮೂರು ಮ್ಯಾಚ್​ಗಳಲ್ಲಿ ಆರ್​ಸಿಬಿ ತಂಡದ ಪ್ರದರ್ಶನ ಹೇಗಿತ್ತು ಎಂಬುದರ ಇಣುಕು ನೋಟ ಇಲ್ಲಿದೆ…

  •  ಮೇ 17, 2026: ಇತ್ತೀಚೆಗೆ ಈ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್​ಸಿಬಿ 4 ವಿಕೆಟ್‌ ಕಳೆದುಕೊಂಡು 222 ರನ್ ಕಲೆಹಾಕಿದ್ದರು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವನ್ನು 199/8 ರನ್‌ಗಳಿಗೆ ನಿಯಂತ್ರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿತ್ತು
  • 2. ಮೇ 9, 2024: ಈ ಮೈದಾನದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ದಾಖಲೆ ಆರ್​ಸಿಬಿ ತಂಡದ ಹೆಸರಿನಲ್ಲಿದೆ. 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಈ ಮೈದಾನದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 241 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್​ ಕೇವಲ 181 ರನ್‌ಗಳಿಗೆ ಆಲೌಟ್ ಆಗಿತ್ತು.
  • ಮೇ 17, 2011: ಧರ್ಮಶಾಲಾದಲ್ಲಿ ಆರ್‌ಸಿಬಿ ಆಡಿದ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಅದು ಕೂಡ 15 ವರ್ಷಗಳ ಹಿಂದೆ. ಅಂದು ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 232 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಕೇವಲ 121 ರನ್‌ಗಳಿಗೆ ಆಲೌಟ್ ಆಗಿ ಹೀನಾಯವಾಗಿ ಸೋಲೊಪ್ಪಿಕೊಂಡಿದ್ದರು.

ಅಂದರೆ ಧರ್ಮಶಾಲಾದಲ್ಲಿ ಆರ್​ಸಿಬಿ ಆಡಿದ ಮೂರು ಮ್ಯಾಚ್​ಗಳಲ್ಲಿ 2 ಜಯ ಸಾಧಿಸಿದೆ. ಈ ಎರಡೂ ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ವಿರುದ್ಧದವೇ ಗೆದ್ದುಕೊಂಡಿದೆ. ಅಂದರೆ ತವರು ಪ್ರೇಕ್ಷಕರ ಎದುರಲ್ಲಿ ಪಂಜಾಬ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ಹೀಗಾಗಿಯೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿ ಆರ್​ಸಿಬಿ ಗುರುತಿಸಿಕೊಂಡಿದೆ.

ಏಕೆಂದರೆ ಗುಜರಾತ್ ಟೈಟಾನ್ಸ್ ತಂಡವು ಧರ್ಮಶಾಲಾ ಮೈದಾನದಲ್ಲಿ ಈವರೆಗೆ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಅತ್ತ ಮೂರು ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ, ಅದರಲ್ಲೂ ಈ ಬಾರಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೆಚ್​ಪಿಸಿಎ ಮೈದಾನದ ಪಿಚ್​ ಬಗ್ಗೆ ಸ್ಪಷ್ಟತೆ ಇದೆ. ಹೀಗಾಗಿಯೇ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಪ್ರಚಂಡ ಪ್ರದರ್ಶನ ನೀಡುವುದನ್ನು ಎದುರು ನೋಡಬಹುದು.

ಧರ್ಮಶಾಲಾದಲ್ಲಿ ಮಿಂಚಿದ ಆರ್‌ಸಿಬಿ ಸ್ಟಾರ್ಸ್:

  •  ವಿರಾಟ್ ಕೊಹ್ಲಿ: ಹೆಚ್​ಪಿಸಿಎ ಗ್ರೌಂಡ್ ವಿರಾಟ್ ಕೊಹ್ಲಿಯ ನೆಚ್ಚಿನ ಮೈದಾನಗಳಲ್ಲಿ ಒಂದು. ಇಲ್ಲಿ ಆಡಿದ ಪಂದ್ಯಗಳಲ್ಲಿ ಕೊಹ್ಲಿ 92 (2024) ಮತ್ತು 58 (2026) ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
  •  ವೆಂಕಟೇಶ್ ಅಯ್ಯರ್: ಈ ಬಾರಿಯ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ಕೇವಲ 40 ಎಸೆತಗಳಲ್ಲಿ ಅಜೇಯ 73 ರನ್ ಚಚ್ಚಿ ವೆಂಕಟೇಶ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
  • ರಾಸಿಖ್ ಸಲಾಮ್: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ರಾಸಿಖ್  3 ವಿಕೆಟ್ ಕಬಳಿಸಿ ಮಿಂಚಿದ್ದರು.

ಇದನ್ನೂ ಓದಿ: 2 ತಂಡಗಳನ್ನು ಗಂಟು ಮೂಟೆ ಕಟ್ಟುವಂತೆ ಮಾಡಿದ 1 ರನ್, 1 ಅಂಕ..!

ಅಂದರೆ ಈ ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಇವರೊಂದಿಗೆ ವೆಂಕಟೇಶ್ ಅಯ್ಯರ್, ರಜತ್ ಪಾಟಿದಾರ್ ಹಾಗೂ ಟಿಮ್ ಡೇವಿಡ್ ಅಬ್ಬರಿಸಿದರೆ ಗುಜರಾತ್ ಟೈಟಾನ್ಸ್ ವಿರುದ್ಧ ಬೃಹತ್ ಮೊತ್ತದ ಸ್ಕೋರ್ ಎದುರು ನೋಡಬಹುದು.

Published On – 12:53 pm, Mon, 25 May 26

Source link

ಲಕ್ಷ ಲಕ್ಷ ನಾಣ್ಯಗಳನ್ನು ಕೊಟ್ಟು ಕನಸಿನ ಬುಲೆಟ್ ಬೈಕ್ ಖರೀದಿಸಿದ ಮೀನು ವ್ಯಾಪಾರಿ – Kannada News | Fish Seller in Andhra Pradesh Buys Dream Bike Using Only Coins

ಆಂಧ್ರಪ್ರದೇಶ, ಮೇ 25: ಬಾಲ್ಯದ ಕನಸೊಂದನ್ನು ನನಸು ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿ, ವಿಭಿನ್ನ ರೀತಿಯಲ್ಲಿ ಬೈಕ್(Bike) ಖರೀದಿಸಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಿತ್ರ ಘಟನೆಯ ವೀಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಬಾಪಟ್ಲಾ ಜಿಲ್ಲೆಯ ಪಟಾಚಿರಾದ ಮೀನು ವ್ಯಾಪಾರಿಯಾದ ರಸನಿ ರಾಘವ ಅವರಿಗೆ ಬಾಲ್ಯದಿಂದಲೂ ಬುಲೆಟ್ ಬೈಕ್ ಖರೀದಿಸಬೇಕೆಂಬ ಬಲವಾದ ಆಸೆ ಇತ್ತು. ಆದರೆ, ಆರ್ಥಿಕ ತೊಂದರೆಗಳಿಂದಾಗಿ ಅವರ ಕನಸು ನನಸಾಗುತ್ತಿರಲಿಲ್ಲ. ಆಗ ಅವರು ಎಲ್ಲರಿಗಿಂತ ವಿಭಿನ್ನವಾಗಿ ಬೈಕ್ ಖರೀದಿಸಲು ನಿರ್ಧರಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಮ್ಮ ವ್ಯಾಪಾರದಿಂದ ಗಳಿಸಿದ ಹಣದಲ್ಲಿ ಕೇವಲ 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಆರಂಭಿಸಿದರು.

ಹೀಗೆ ಮೂರು ವರ್ಷಗಳ ಕಾಲ ನಿರಂತರವಾಗಿ ಸಂಗ್ರಹಿಸಿದ ಪರಿಣಾಮವಾಗಿ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ 10 ರೂಪಾಯಿ ನಾಣ್ಯಗಳು ಇವರ ಬಳಿ ಇದ್ದವು. ಇವು ಒಟ್ಟು 30,000 ನಾಣ್ಯಗಳಾಗಿದ್ದು, ಇವುಗಳ ಒಟ್ಟು ತೂಕ 220 ಕೆಜಿ ಇತ್ತು. ರಾಘವ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರ ಸಹಾಯದಿಂದ ಈ ನಾಣ್ಯಗಳನ್ನು ಎಣಿಸಿ 300 ಪ್ಯಾಕೆಟ್‌ಗಳಲ್ಲಿ ಜೋಡಿಸಿದರು.

ಮತ್ತಷ್ಟು ಓದಿ:
Video: ಬೈಕ್ ಓಡಿಸುತ್ತಿರುವಾಗಲೇ ಪತ್ನಿ ಕೈಯಲ್ಲಿ ಒದೆ ತಿಂದ ಪತಿ, ವೈರಲ್‌ ಆಯ್ತು ದೃಶ್ಯ

ಕೊನೆಗೆ, ಈ 220 ಕೆಜಿ ತೂಕದ ನಾಣ್ಯಗಳ ಚೀಲಗಳನ್ನು ಲಗೇಜ್ ವಾಹನವೊಂದರಲ್ಲಿ ತುಂಬಿಕೊಂಡು ಒಂಗೋಲ್‌ನಲ್ಲಿರುವ ಶೋರೂಂಗೆ ಸಾಗಿಸಿದ್ದಾರೆ. ಮೊದಮೊದಲು ಇಷ್ಟು ದೊಡ್ಡ ಪ್ರಮಾಣದ ನಾಣ್ಯಗಳನ್ನು ನೋಡಿ ಶೋರೂಂ ಸಿಬ್ಬಂದಿ ಆಶ್ಚರ್ಯಚಕಿತರಾದರು. ಆದರೆ, ರಾಘವ ಅವರ ದೃಢಸಂಕಲ್ಪ ಮತ್ತು ಬುಲೆಟ್ ಬೈಕ್ ಮೇಲಿರುವ ಪ್ರೀತಿಯನ್ನು ಕಂಡು ಮನಸಾರೆ ಶ್ಲಾಘಿಸಿ, ನಾಣ್ಯಗಳನ್ನು ಪಡೆದು ಅವರ ಕನಸಿನ ಬುಲೆಟ್ ಬೈಕ್ ಅನ್ನು ಹಸ್ತಾಂತರಿಸಿದರು. ಕೊನೆಗೂ ನೆಚ್ಚಿನ ಬುಲೆಟ್ ಬೈಕ್ ಏರಿ ಮನೆ ತಲುಪಿದ ರಾಘವ ಅವರನ್ನು ನೋಡಿ ಅವರ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ: ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್! – Kannada News | Bengaluru Economic Crime: One Financial Fraud Case Filed Every 2.5 Hours, NCRB 2024 Report Reveals Structural Shift

ಬೆಂಗಳೂರು, ಮೇ 25: ದೇಶದ ತಂತ್ರಜ್ಞಾನ ರಾಜಧಾನಿ, ಸಿಲಿಕಾನ್ ಸಿಟಿ ಎಂದೆಲ್ಲ ಖ್ಯಾತಿ ಪಡೆದಿರುವ ಬೆಂಗಳೂರು (Bengaluru) ಈಗ ಆರ್ಥಿಕ ಅಪರಾಧಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ! ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯ ಪ್ರಕಾರ, ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ (2022 ರಿಂದ 2024) ಪ್ರತಿ 2.5 ಗಂಟೆಗೆ ಸರಾಸರಿ ಒಂದರಂತೆ ಆರ್ಥಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ನಕಲಿ ದಾಖಲೆ ಸೃಷ್ಟಿ, ವಂಚನೆ, ಹಣಕಾಸು ಹಗರಣಗಳು ಮತ್ತು ವೈಟ್ ಕಾಲರ್ ಅಪರಾಧಗಳು ಸೇರಿ ಕಳೆದ 3 ವರ್ಷಗಳಲ್ಲಿ ಒಟ್ಟು 10,580 ಪ್ರಕರಣಗಳು ದಾಖಲಾಗಿವೆ. 2024ರ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ 3,477 ಆರ್ಥಿಕ ಅಪರಾಧಗಳು ದಾಖಲಾಗಿವೆ. ಇದರೊಂದಿಗೆ, ದೇಶದಲ್ಲೇ ಅತಿ ಹೆಚ್ಚು ಆರ್ಥಿಕ ವಂಚನೆ ನಡೆಯುವ ಟಾಪ್ 5 ಮಹಾನಗರಗಳ ಪಟ್ಟಿಗೆ ಬೆಂಗಳೂರು ಸೇರಿದೆ.

ಮುಖ್ಯಾಂಶಗಳು

  • ಶೇ 93 ರಷ್ಟು ವಂಚನೆ ಪ್ರಕರಣಗಳು ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆಗೆ ಸಂಬಂಧಿಸಿದ್ದಾಗಿವೆ.
  • ಇಡೀ ಕರ್ನಾಟಕದಲ್ಲೇ ವಂಚಕರ ಜಾಲ ಸಕ್ರಿಯ.
  • ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ 5 ರಷ್ಟಿದೆ.

ಡಿಜಿಟಲ್ ವಂಚನೆಗಳತ್ತ ಶಿಫ್ಟ್ ಆದ ಅಪರಾಧ ಲೋಕ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಬೆಂಗಳೂರಿನ ಅಪರಾಧದ ಸ್ವರೂಪವೇ ಬದಲಾಗುತ್ತಿರುವುದು ಸ್ಪಷ್ಟವಾಗಿದೆ. ಸಾಮಾನ್ಯ ಕಳ್ಳತನ, ದರೋಡೆ ಮತ್ತು ದೈಹಿಕ ದೌರ್ಜನ್ಯಗಳಿಗಿಂತಲೂ ಸಾರ್ವಜನಿಕರನ್ನು ಡಿಜಿಟಲ್ ಹಾಗೂ ಆರ್ಥಿಕವಾಗಿ ವಂಚಿಸುವ ಜಾಲಗಳು ಇಲ್ಲಿ ಹೆಚ್ಚಾಗುತ್ತಿವೆ. ನಗರದಲ್ಲಿ ದೊಡ್ಡ ಮಟ್ಟದ ಡಿಜಿಟಲ್ ಆರ್ಥಿಕತೆ, ಆನ್‌ಲೈನ್ ಬ್ಯಾಂಕಿಂಗ್ ಬಳಕೆ ಮತ್ತು ಹೂಡಿಕೆಯ ಸಂಸ್ಕೃತಿ ಹೆಚ್ಚಿರುವುದು ಖದೀಮರಿಗೆ ವರದಾನವಾಗಿದೆ. ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ಗಳು, ಕ್ರಿಪ್ಟೋಕರೆನ್ಸಿ ಹಗರಣಗಳು, ಲೋನ್ ಆಪ್ ಮುಖಾಂತರ ಬ್ಲ್ಯಾಕ್‌ಮೇಲ್ ಮಾಡುವುದು ಮತ್ತು ಟ್ರೇಡಿಂಗ್ ಆಪ್‌ಗಳ ಹೆಸರಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಮಂಡ್ಯ: ನಾಗಮಂಗಲ ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ

ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಈ ವಂಚಕ ಜಾಲಗಳು ನಕಲಿ ಬ್ಯಾಂಕ್ ಖಾತೆಗಳು, ತಾತ್ಕಾಲಿಕ ಸಿಮ್ ಕಾರ್ಡ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಆ್ಯಪ್‌ಗಳನ್ನು ಬಳಸುತ್ತಿರುವುದರಿಂದ ಪೊಲೀಸರಿಗೆ ಇವರನ್ನು ಪತ್ತೆ ಹಚ್ಚಿ ಹಣ ರಿಕವರಿ ಮಾಡುವುದು ಮತ್ತು ಚಾರ್ಜ್‌ಶೀಟ್ ಹಾಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ! – Kannada News | Bakrid 2026: Heavy Demand at Chikkaballapur’s Peresandra Sheep Market, Traders Flock from Neighboring States

ಚಿಕ್ಕಬಳ್ಳಾಪುರ, ಮೇ 25: ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆ ರಾಜ್ಯಾದ್ಯಂತ ಕುರಿ, ಮೇಕೆ ಹಾಗೂ ಕೋಳಿಗಳ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪೆರೆಸಂದ್ರ ಕುರಿ ಸಂತೆಯಲ್ಲಿ ವರ್ತಕರು ಕುರಿ, ಮೇಕೆ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಸಂತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ತಮಿಳುನಾಡು ಮತ್ತು ಕೇರಳದಿಂದಲೂ ವರ್ತಕರು ಆಗಮಿಸುತ್ತಿದ್ದಾರೆ.

ಮಾರಾಟಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಕುರಿಗಳು ಆಗಮಿಸಿದ್ದು, ಪ್ರಸ್ತುತ 25 ಸಾವಿರದಿಂದ 30 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಕ್ಕೆ ಲಭ್ಯವಿವೆ. ಸಾವಿರಾರು ವ್ಯಾಪಾರಿಗಳು ತಮಗೆ ಇಷ್ಟವಾದ ಕುರಿ, ಮೇಕೆ, ಟಗರುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಪರಿಣಾಮವಾಗಿ, ಕುರಿ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿದೆ. ಒಂದು ಕುರಿಗೆ ಕನಿಷ್ಠ 3,000 ರೂಪಾಯಿಗಳಿಂದ ಆರಂಭವಾಗಿ, ಮೇಕೆಗಳಿಗೆ 10,000 ದಿಂದ 15,000 ರೂಪಾಯಿಗಳವರೆಗೂ ಬೆಲೆ ಇದೆ. ಒಟ್ಟಾರೆ, ಬಕ್ರೀದ್ ಹಬ್ಬದ ಪ್ರಯುಕ್ತ ಪೆರೆಸಂದ್ರ ಕುರಿ ಸಂತೆಯಲ್ಲಿ ವ್ಯಾಪಾರ-ವಹಿವಾಟು ಅತ್ಯಂತ ಬಿರುಸಿನಿಂದ ಸಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ – Kannada News | Ashwini Gowda Ask Fans to Watch Hayagriva Movie

ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಅವರು ಈಗ ಅಭಿಮಾನಿಗಳ ಬಳಿ ಒಂದು ವಿಶೇಷ ಮನವಿ ಇಟ್ಟಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಅಶ್ವಿನಿ ಗೌಡ, ಧನ್ವೀರ್, ಸುನೀಲ್ ಮೊದಲಾದವರು ನಟಿಸಿರುವ ‘ಹಯಗ್ರೀವ’ ಹೆಸರಿನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಚಿತ್ರವನ್ನು ನೋಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಶ್ವಿನಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Twisha Sharma Case: ತ್ವಿಶಾ ಶರ್ಮಾ ಸಾವು: ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ – Kannada News | Central Bureau of Investigation Likely to Take Over Twisha Sharma Death Probe Soon

ನವದೆಹಲಿ, ಮೇ 25: ಮಾಡೆಲ್ ತ್ವಿಶಾ ಶರ್ಮಾ(Twisha Sharma) ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಲಿದ್ದು, ಇಂದೇ ಅದಕ್ಕೆ ಬೇಕಾದ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಖಚಿತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ಪೀಠವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸಂತ್ರಸ್ತೆಯ ಪತಿ ಸಮರ್ಥ್ ಸಿಂಗ್ ವಕೀಲರಾಗಿದ್ದು, ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಆರೋಪಿಗಳು ಕಾನೂನು ಹಿನ್ನೆಲೆಯುಳ್ಳ ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತನಿಖೆಯ ಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂಬ ನಿರೂಪಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಸಂತ್ರಸ್ತ ಕುಟುಂಬ ಅಥವಾ ಆರೋಪಿಗಳ ವೈಯಕ್ತಿಕ ಹೇಳಿಕೆಗಳು, ಊಹಾಪೋಹಗಳನ್ನು ಪ್ರಕಟಿಸದಂತೆ ನಮ್ಮ ಮಾಧ್ಯಮ ಸ್ನೇಹಿತರನ್ನು ವಿನಂತಿಸುತ್ತೇವೆ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ಮತ್ತಷ್ಟು ಓದಿ: ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ವಿಚಾರಣೆ ವೇಳೆ ಎಸ್‌ಜಿ ತುಷಾರ್ ಮೆಹ್ತಾ ವಾದ ಮಂಡಿಸಿ, ಸಂಭಾವ್ಯ ಆರೋಪಿಯಾದ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್, ಒಂದು ಚಾನೆಲ್‌ನಿಂದ ಮತ್ತೊಂದು ಚಾನೆಲ್‌ಗೆ ಜಿಗಿಯುತ್ತಾ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ನೋಯ್ಡಾ ನಿವಾಸಿಯಾಗಿದ್ದ 33 ವರ್ಷದ ತ್ವಿಶಾ ಶರ್ಮಾ ಮತ್ತು ಭೋಪಾಲ್‌ನ ವಕೀಲ ಸಮರ್ಥ್ ಸಿಂಗ್ ಸುಮಾರು ಐದು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿ ವಿವಾಹವಾಗಿದ್ದರು. ಆದರೆ, ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ನಿವಾಸದಲ್ಲಿ ತ್ವಿಷಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ತ್ವಿಷಾ ಕುಟುಂಬಸ್ಥರು ಅತ್ತೆ-ಮಾವನ ವಿರುದ್ಧ ನಿರಂತರ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ.

ಸ್ಥಳೀಯ ಪೊಲೀಸರು ಮೂರು ದಿನಗಳ ಕಾಲ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದಿಸಿದರು. ಸಾವಿನ ನಿಜವಾದ ಕಾರಣ ತಿಳಿಯಲು ಎರಡನೇ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಭೋಪಾಲ್‌ನ ಏಮ್ಸ್ (AIIMS) ವೈದ್ಯರ ತಂಡವು ನಿನ್ನೆ ಮೃತದೇಹದ ಎರಡನೇ ಶವಪರೀಕ್ಷೆ ನಡೆಸಿದೆ.

ಪ್ರಸ್ತುತ, ಪತಿ ಸಮರ್ಥ್ ಸಿಂಗ್ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಆತನನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ತೆ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಮಧ್ಯಪ್ರದೇಶ ಪೊಲೀಸರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ದೇಶದ ಪ್ರಮುಖ ಸಂಸ್ಥೆಯಾದ ಸಿಬಿಐ ತನಿಖೆಯನ್ನು ನಂಬುವಂತೆ ಮತ್ತು ಊಹಾಪೋಹಗಳಿಂದ ದೂರವಿರುವಂತೆ ಸುಪ್ರೀಂ ಕೋರ್ಟ್ ಸಾರ್ವಜನಿಕರಲ್ಲಿ ವಿನಂತಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:35 pm, Mon, 25 May 26

Source link

ಶೃಂಗೇರಿ ಶಾರದಾಂಬೆಯ ದರ್ಶನ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್: ಮಂಗಳೂರಿಗೆ ಡಬಲ್​ ಧಮಾಕ ನೀಡಿದ ರೈಲ್ವೆ ಇಲಾಖೆ – Kannada News | Karnataka Rail Revolution: Shivamogga Mangaluru and Hassan Line Doubling Projects

ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗImage Credit source: pinterest

ಮಂಗಳೂರು, ಮೇ.25: ಮಲೆನಾಡು ಮತ್ತು ಕರಾವಳಿ ಭಾಗದ ಜನತೆಯ ದಶಕಗಳ ರೈಲು ಸಂಪರ್ಕದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಬಹುನಿರೀಕ್ಷಿತ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿಕೆ ನೀಡಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ‘ಅಮೃತ್ ಭಾರತ್’ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

3,300 ಕೋಟಿ ವೆಚ್ಚದ ಭಾರಿ ಯೋಜನೆ:

ಪ್ರಸ್ತಾವಿತ ಶಿವಮೊಗ್ಗ-ಮಂಗಳೂರು ಹೊಸ ರೈಲು ಮಾರ್ಗವು ಒಟ್ಟು 332 ಕಿಲೋಮೀಟರ್ ಉದ್ದವಿರಲಿದ್ದು, ಇದಕ್ಕೆ ಅಂದಾಜು 3,300 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಗಿದೆ. ಈ ಮಾರ್ಗದ ಫೈನಲ್ ಲೊಕೇಶನ್ ಸರ್ವೆ (FLS) ಈಗಾಗಲೇ ಯಶಸ್ವಿಯಾಗಿ ಮುಗಿದು ಇಲಾಖೆಯಿಂದ ಅನುಮೋದನೆ ಕೂಡ ದೊರೆತಿದೆ. ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತಕ್ಷಣವೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮಾರ್ಗವು ಜಾರಿಗೆ ಬಂದರೆ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಮತ್ತು ಕರಾವಳಿ-ಮಲೆನಾಡಿನ ವಾಣಿಜ್ಯ ಸಂಪರ್ಕಕ್ಕೆ ಭಾರಿ ದೊಡ್ಡ ಬೂಸ್ಟ್ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ

ಹಾಸನ-ಮಂಗಳೂರು ಹಳಿ ದ್ವಿಗುಣಗೊಳಿಸಲು 8,300 ಕೋಟಿ!:

ಇದೇ ವೇಳೆ ಕರಾವಳಿಯ ಮತ್ತೊಂದು ಪ್ರಮುಖ ರೈಲ್ವೆ ಯೋಜನೆಗೆ ವೇಗ ನೀಡಿರುವ ಸಚಿವರು, ಹಾಸನ ಮತ್ತು ಮಂಗಳೂರು ನಡುವಿನ 247 ಕಿಲೋಮೀಟರ್ ರೈಲು ಹಳಿಯನ್ನು ದ್ವಿಗುಣಗೊಳಿಸುವ (Doubling of Railway Line) ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ಈ ಯೋಜನೆಗಾಗಿ ಒಟ್ಟು 8,300 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸದ್ಯ ಇದರ ಫೈನಲ್ ಲೊಕೇಶನ್ ಸರ್ವೆ (FLS) ಪರಿಶೀಲನಾ ಹಂತದಲ್ಲಿದೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ. ಈ ಎರಡು ಮೆಗಾ ಯೋಜನೆಗಳು ಕರಾವಳಿ ಕರ್ನಾಟಕದ ಸಾರಿಗೆ ಇತಿಹಾಸದಲ್ಲೇ ಹೊಸ ಕ್ರಾಂತಿ ಸೃಷ್ಟಿಸಲಿವೆ.

ರಾಜ್ಯದ ಸುದ್ದಿಗಳನ್ನು ಇದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..! – Kannada News | IPL 2026 Playoffs: Each of the four qualifying teams have won the IPL only once

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 10 ತಂಡಗಳಲ್ಲಿ 4 ಟೀಮ್​ಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅದರಂತೆ ಪ್ಲೇಆಫ್ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ತಂಡಗಳು ಕಣಕ್ಕಿಳಿಯಲಿವೆ. ವಿಶೇಷ ಎಂದರೆ ಈ ಬಾರಿಯ ಪ್ಲೇಆಫ್ ಹಂತವು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅಪರೂಪದ ಹಾಗೂ ಕುತೂಹಲಕಾರಿ ಮುಖಾಮುಖಿಗೆ ಸಾಕ್ಷಿಯಾಗಲಿದೆ.

ಅಂದರೆ ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ಲೇಆಫ್ ತಲುಪಿರುವ ನಾಲ್ಕೂ ತಂಡಗಳು ಈ ಹಿಂದೆ ತಲಾ ಒಂದೊಂದು ಬಾರಿ  ಐಪಿಎಲ್ ಟ್ರೋಫಿ ಗೆದ್ದಿವೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​ನಂತಹ ಬಹು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ದೈತ್ಯ ತಂಡಗಳಿಲ್ಲದ ಈ ಪ್ಲೇಆಫ್ ಕಣದಲ್ಲಿ ಪ್ರತಿಯೊಂದು ತಂಡಕ್ಕೂ ಎರಡನೇ ಬಾರಿ ಚಾಂಪಿಯನ್ ಆಗುವ ಸುವರ್ಣಾವಕಾಶ ಎದುರಾಗಿದೆ.

 ‘ಒಂದೇ ಒಂದು’ ಟ್ರೋಫಿ ಇತಿಹಾಸ:

ಈ ಬಾರಿ ಅಂತಿಮ ನಾಲ್ಕರ ಘಟ್ಟ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ಹಿಂದಿನ ಚಾಂಪಿಯನ್ ಹಾದಿ ಹೀಗಿದೆ:

  • ರಾಜಸ್ಥಾನ್ ರಾಯಲ್ಸ್ (2008): ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವು ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತ್ತು.
  • ಸನ್‌ರೈಸರ್ಸ್ ಹೈದರಾಬಾದ್ (2016): ಡೇವಿಡ್ ವಾರ್ನರ್ ಸಾರಥ್ಯದ ಸನ್​ರೈಸರ್ಸ್ ಹೈದರಾಬಾದ್ ತಂಡ ಫೈನಲ್​ನಲ್ಲಿ ಆರ್​​ಸಿಬಿ ತಂಡವನ್ನು ಮಣಿಸಿ ತನ್ನ ಏಕೈಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
  • ಗುಜರಾತ್ ಟೈಟಾನ್ಸ್ (2022): ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಗುಜರಾತ್ ಟೈಟಾನ್ಸ್ ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (2025): ಐಪಿಎಲ್​ 2025ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಕೋಟ್ಯಂತರ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಿ ಆರ್​ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಇದೀಗ ಈ ನಾಲ್ಕು ತಂಡಗಳೇ ಪ್ಲೇಆಫ್ ಪಂದ್ಯಗಳನ್ನಾಡಿದೆ. ಇದರೊಂದಿಗೆ ಈ ನಾಲ್ಕು ತಂಡಗಳಲ್ಲಿ ಒಂದು ಟೀಮ್ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವುದು ಕೂಡ ಖಚಿತವಾಗಿದೆ. ಅದರಂತೆ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದು ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ!

ಪ್ಲೇಆಫ್ ಸುತ್ತಿನ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ / ಸ್ಥಳ
ಕ್ವಾಲಿಫೈಯರ್ 1  ಮೇ 26, ಮಂಗಳವಾರ  ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಗುಜರಾತ್ ಟೈಟಾನ್ಸ್ ಹೆಚ್​ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಎಲಿಮಿನೇಟರ್  ಮೇ 27, ಬುಧವಾರ ಸನ್​ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಕ್ವಾಲಿಫೈಯರ್ 2  ಮೇ 29, ಶುಕ್ರವಾರ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಫೈನಲ್  ಮೇ 31, ಭಾನುವಾರ ಕ್ವಾಲಿಫೈಯರ್ 1 ವಿಜೇತರು vs ಕ್ವಾಲಿಫೈಯರ್ 2 ವಿಜೇತರು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

Source link

ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ – Kannada News | Massive Indian Air Force Boost: India Prepares LoR for 114 Rafale Fighter Jets, Made in India Focus

ರಫೇಲ್ ಯುದ್ಧ ವಿಮಾನImage Credit source: Indian Air Force

ನವದೆಹಲಿ, ಮೇ 25: ಭಾರತೀಯ ವಾಯುಸೇನೆಯನ್ನು (IAF) ಮತ್ತಷ್ಟು ಬಲಪಡಿಸಲು ಮತ್ತು ದೇಶೀಯ ರಕ್ಷಣಾ ಉತ್ಪಾದನೆಗೆ ಭಾರಿ ಉತ್ತೇಜನ ನೀಡಲು ಭಾರತ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಫ್ರಾನ್ಸ್‌ನಿಂದ ಹೆಚ್ಚುವರಿ 114 ರಫೇಲ್ ಯುದ್ಧ ವಿಮಾನಗಳನ್ನು (Rafale fighter aircraft) ಖರೀದಿಸಲು ಭಾರತವು ಔಪಚಾರಿಕ ವಿನಂತಿ ಪತ್ರವನ್ನು (Letter of Request – LoR) ಸಿದ್ಧಪಡಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ ಇದನ್ನು ಫ್ರಾನ್ಸ್‌ಗೆ ಕಳುಹಿಸಲಾಗುವುದು. ಈ ಬೃಹತ್ ಒಪ್ಪಂದದ ಅಂದಾಜು ಮೌಲ್ಯ ಸುಮಾರು 3.25 ಲಕ್ಷ ಕೋಟಿ ರೂ (39 ಬಿಲಿಯನ್ ಡಾಲರ್) ಎನ್ನಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಕ್ಷಣಾ ಖರೀದಿಗಳಲ್ಲಿ ಒಂದಾಗಲಿದೆ.

ಒಟ್ಟು 114 ಯುದ್ಧ ವಿಮಾನಗಳ ಪೈಕಿ, ಸುಮಾರು 90 ವಿಮಾನಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಫ್ರಾನ್ಸ್‌ನ ಪ್ರಮುಖ ರಕ್ಷಣಾ ಸಂಸ್ಥೆಯಾದ ‘ಡಸಾಲ್ಟ್ ಏವಿಯೇಷನ್’ (Dassault Aviation) ಭಾರತೀಯ ಕಂಪನಿಯೊಂದರ ಜೊತೆ ಕೈಜೋಡಿಸಿ ಇವುಗಳನ್ನು ದೇಶೀಯವಾಗಿ ಉತ್ಪಾದಿಸಲಿದೆ. ಇನ್ನುಳಿದ ವಿಮಾನಗಳನ್ನು ನೇರವಾಗಿ ಫ್ರಾನ್ಸ್‌ನಿಂದ ಹಾರಾಟದ ಸ್ಥಿತಿಯಲ್ಲಿ (Fly-away condition) ಖರೀದಿಸಲಾಗುತ್ತದೆ. ಈ ಖರೀದಿ ಪೂರ್ಣಗೊಂಡರೆ ಭಾರತದ ವಾಯುಪಡೆಯ ಬತ್ತಳಿಕೆಯಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 150 ಆಗಲಿದೆ.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು ಈಗಾಗಲೇ ಈ ಪ್ರಸ್ತಾವನೆಗೆ ಪ್ರಾಥಮಿಕ ಅನುಮೋದನೆ (Acceptance of Necessity) ನೀಡಿದೆ. ಈ ಹೊಸ ರಫೇಲ್ ವಿಮಾನಗಳಲ್ಲಿ ಶೇ. 50 ರಷ್ಟು ದೇಶೀಯ ಬಿಡಿಭಾಗಗಳನ್ನು (Indigenous content) ಬಳಸುವ ಗುರಿ ಹೊಂದಲಾಗಿದೆ. ಅಷ್ಟೇ ಅಲ್ಲದೆ, ಭಾರತದ ಹೆಮ್ಮೆಯ ‘ಅಸ್ತ್ರ’ (Astra) ಕ್ಷಿಪಣಿ ಮತ್ತು ‘ಬ್ರಹ್ಮೋಸ್-ಎನ್‌ಜಿ’ (BrahMos-NG) ನಂತಹ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಈ ವಿಮಾನಗಳಲ್ಲಿ ಅಳವಡಿಸಲು ಅನುವು ಮಾಡಿಕೊಡುವ ‘ಇಂಟರ್ಫೇಸ್ ಕಂಟ್ರೋಲ್ ಡಾಕ್ಯುಮೆಂಟ್ಸ್’ (ICD) ಪಡೆಯಲು ಭಾರತ ಮಾತುಕತೆ ನಡೆಸುತ್ತಿದೆ.

ವಾಯುಸೇನೆಯ ಸಾಮರ್ಥ್ಯ ವೃದ್ಧಿ

ಪ್ರಸ್ತುತ ಭಾರತೀಯ ವಾಯುಸೇನೆಯು ತೀವ್ರ ಸ್ಕ್ವಾಡ್ರನ್ ಕೊರತೆಯನ್ನು ಎದುರಿಸುತ್ತಿದೆ. ಅನುಮೋದಿತ 42 ಸ್ಕ್ವಾಡ್ರನ್‌ಗಳ ಎದುರು ಸದ್ಯ ವಾಯುಸೇನೆಯಲ್ಲಿ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಈ ಹೆಚ್ಚುವರಿ ರಫೇಲ್ ವಿಮಾನಗಳು ವಾಯುಸೇನೆಗೆ ಸಂಜೀವಿನಿಯಾಗಲಿವೆ.

ವಾಯುಸೇನೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಮುಂದಿನ ತಿಂಗಳು ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜೂನ್ ತಿಂಗಳ ಫ್ರಾನ್ಸ್ ಪ್ರವಾಸಕ್ಕೂ ಮುನ್ನ ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ವಾಣಿಜ್ಯ ಮಾತುಕತೆಗಳನ್ನು ಮುಗಿಸಿ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಪ್ರಸ್ತುತ ಭಾರತೀಯ ವಾಯುಸೇನೆಯು ಈಗಾಗಲೇ 36 ರಫೇಲ್ ವಿಮಾನಗಳನ್ನು ಯಶಸ್ವಿಯಾಗಿ ಕಾರ್ಯಾಚರಣೆಗೆ ಬಳಸುತ್ತಿದ್ದು, ನೌಕಾಸೇನೆಗಾಗಿ (Indian Navy) 26 ರಫೇಲ್-ಎಂ (Naval variant) ವಿಮಾನಗಳ ಖರೀದಿಯ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.

ಫ್ರಾನ್ಸ್ ನಂತರ ಭಾರತದಲ್ಲೇ ಇರಲಿದೆ ಅತಿಹೆಚ್ಚು ರಫೇಲ್ ವಿಮಾನಗಳು

ರಫೇಲ್ ಯುದ್ಧವಿಮಾನದ ಮಾತೃದೇಶವಾದ ಫ್ರಾನ್ಸ್​ನ ಮಿಲಿಟರಿ ಬಳಿ 234 ವಿಮಾನಗಳನ್ನು ಹೊಂದುತ್ತಿದೆ. ಅದರ ವಾಯುಸೇನೆ ಮತ್ತು ನೌಕಾಸೇನೆ ಹೀಗೆ ಎಲ್ಲಾ ಸೇನಾ ವಿಭಾಗಗಳಿಂದ ಸೇರಿಸಿದರೆ ರಫೇಲ್ ವಿಮಾನಗಳ ಸಂಖ್ಯೆ 234 ಆಗುತ್ತದೆ. ಈಜಿಪ್ಟ್ ಈಗಾಗಲೇ 54 ಜೆಟ್​ಗಳನ್ನು ಪಡೆದಿದೆ. ಭಾರತ ಸದ್ಯ 36 ವಿಮಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, ಈಗ ಆರ್ಡರ್ ಕೊಡಲಾಗಿರುವ 114 ವಿಮಾನಗಳು ಹಾಗೂ ನೌಕಾಸೇನೆ ಆರ್ಡರ್ ಕೊಟ್ಟಿರುವ 26 ವಿಮಾನಗಳನ್ನು ಸೇರಿಸಿದರೆ ಭಾರತದಲ್ಲಿರುವ ಒಟ್ಟು ರಫೇಲ್ ಜೆಟ್​ಗಳ ಸಂಖ್ಯೆ 176ಕ್ಕೆ ಏರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:50 am, Mon, 25 May 26

Source link

Video: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ – Kannada News | Bengaluru: Bengaluru woman gives tea and biscuits to civic workers cleaning the city.

ಬೆಂಗಳೂರು, ಮೇ 25: ಸ್ವಾರ್ಥಿಗಳೇ (selfish) ತುಂಬಿರುವ ಜನರ ನಡುವೆ ಬೇರೆಯವರಿಗೆ ಸಹಾಯ ಮಾಡುವ ಗುಣ, ಒಳ್ಳೆಯ ಮನಸ್ಸು ಕಾಣಸಿಗುವುದು ಕಡಿಮೆಯೇ. ಇದೆಲ್ಲದರ ನಡುವೆ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ತಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದಲೇ ಹೀರೋಗಳಾಗುತ್ತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಬೆಂಗಳೂರಿನ (Bengaluru) ಈ ಮಹಿಳೆ. ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ನೀಡಿ ಉಪಚರಿಸುತ್ತಿದ್ದಾರೆ ಈ ಮಹಿಳೆ. ಅವರ ಈ ಒಳ್ಳೆಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

ಜಗದೀಶ್ ನಡನಳ್ಳಿ (Jagadish Nadanalli) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನ ಮಹಿಳೆಯ ಒಳ್ಳೆಯ ಕಾರ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಕಸ ತೆಗೆದುಕೊಂಡು ಹೋಗಲು ಮನೆಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವುದನ್ನು ಕಾಣಬಹುದು. ಈ ವೇಳೆ ಪೌರ ಕಾರ್ಮಿಕರು, ಮಹಿಳೆಯೊಂದಿಗೆ ಪ್ರೀತಿಯಿಂದ ಮಾತನಾಡುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದೊಂದಿಗೆ ಜಗದೀಶ್ ಅವರು, ಈ ಮಹಿಳೆಯ ಮಾಡುವ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ. ನಾವು ನೀವುಗಳು ಬಡವರು, ವೃದ್ಧ ನಾಗರಿಕರು, ಆಟೋ ಚಾಲಕರು ಮತ್ತು ರಸ್ತೆಬದಿಯ ಮಾರಾಟಗಾರರಿಗೆ ಸಹಾಯ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ ಇವರು ಮಾತ್ರ ಭಿನ್ನವಾಗಿ ಕಾಣುತ್ತಾರೆ. ಯಾವುದೇ ಪ್ರಚಾರ ಬಯಸದೇ ಅಥವಾ ಹಣ ಗಳಿಸುವ ಉದ್ದೇಶವಿಲ್ಲದೆ ಕಳೆದ ಕೆಲವು ವರ್ಷಗಳಿಂದ ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಈ ಕೆಲಸವನ್ನು ಕೇವಲ ಅವರ ಆತ್ಮತೃಪ್ತಿಗಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಪ್ರದೇಶಕ್ಕೆ ಬರುವ ನೈರ್ಮಲ್ಯ ಕಾರ್ಮಿಕರಿಗೆ ಅವರು ನಿಯಮಿತವಾಗಿ ಕಾಫಿ, ಬ್ರೆಡ್, ಬಿಸ್ಕೆಟ್ ಹಾಗೂ ಬಾಳೆಹಣ್ಣುಗಳನ್ನು ನೀಡುತ್ತಾರೆ. ಕೆಲವೊಮ್ಮೆ ಬಗೆಬಗೆಯ ತಿನಿಸುಗಳು, ಅಗತ್ಯ ವಸ್ತುಗಳನ್ನು ಕೂಡ ನೀಡುತ್ತಾರೆ. ಇನ್ನು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗಾಗಿ ಹಾಲು, ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಾರೆ. ಮನೆಯ ಟೆರೇಸ್‌ ಮೇಲೆ ಪಕ್ಷಿಗಳಿಗೆ ಧಾನ್ಯಗಳು, ನೀರನ್ನು ಕೂಡ ಇಡುವುದು ಅವರ ನಿತ್ಯದ ಕಾಯಕಗಳಲ್ಲಿ ಒಂದಾಗಿದೆ ಎಂದು ಮಹಿಳೆಯ ಕೆಲಸವನ್ನು ಶ್ಲಾಘಿಸಿದ್ದಾರೆ.

ಹಸು, ಕರುಗಳೊಂದಿಗೆ ಮನೆ ಬಾಗಿಲಿಗೆ ಬರುವವರನ್ನು ಮಾತನಾಡಿಸುತ್ತಾರೆ. ತರಕಾರಿ, ಹೂವು ಹಾಗೂ ಹಣ್ಣು ಮಾರಾಟಗಾರರನ್ನು ತಮ್ಮ ಕುಟುಂಬ ಸದಸ್ಯರಂತೆ ಭಾವಿಸುತ್ತಾರೆ. ಕೆಲವು ಸಲ ಅವರಿಗೆ ಮಾರಾಟಗಾರರಿಂದ ಖರೀದಿಸಲು ಏನು ಇರಲ್ಲ. ಈ ವ್ಯಾಪಾರಿಗಳೊಂದಿಗೆ ಮಾತನಾಡಲೆಂದೇ ಅವರ ಮನೆಗೆ ಭೇಟಿ ನೀಡುತ್ತಾರೆ. ಪ್ರತಿದಿನ ಇತರರಿಗೆ ಸಹಾಯ ಮಾಡುವ ಇಂತಹ ವ್ಯಕ್ತಿಯನ್ನು ನಾನು ಎಂದಿಗೂ ನೋಡಿಲ್ಲ. ಆಕೆ ಒಬ್ಬ ಮಹಾನ್ ತಾಯಿಯಂತೆ ಕಾಣಿಸುತ್ತಾಳೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: 4 ಕಿ.ಮೀ ಕ್ರಮಿಸಲು 45 ನಿಮಿಷಗಳು ತೆಗೆದುಕೊಂಡೆ; ಟ್ರಾಫಿಕ್‌ ಸಮಸ್ಯೆ ಬಗ್ಗೆ ಅಸಮಾಧಾನ ಹೊರಹಾಕಿದ ಗೂಗಲ್ ಟೆಕ್ಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ವಿಡಿಯೋ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಆಕೆಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಸುತ್ತಲೂ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈಗಿನ ಕಾಲದಲ್ಲಿ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ವಿರಳ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link