Category Archives: Blog

Your blog category

ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ? – Kannada News | Vande bharat sleeper train between bengaluru mumbai soon why it is important

ಬೆಂಗಳೂರು, ಮೇ 18: ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವವರಿಗೆ ಇದು ಅತ್ಯಂತ ದೊಡ್ಡ ಮತ್ತು ಸಂತಸದ ಸುದ್ದಿ. ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು ಶೀಘ್ರದಲ್ಲೇ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  • ಶೀಘ್ರದಲ್ಲೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ
  • ಪ್ರಯಾಣದ ಸಮಯ ಉಳಿತಾಯ
  • ದೂರದ ಊರುಗಳ ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾದ ವಿನ್ಯಾಸ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕಕ್ಕೆ ರೈಲ್ವೆ ನಿಧಿಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು 2,160 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ಪೈಕಿ 9 ನಿಲ್ದಾಣಗಳು ಈಗಾಗಲೇ ಪೂರ್ಣಗೊಂಡಿವೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 485 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಇದಲ್ಲದೆ, 2014ರಿಂದ ಕರ್ನಾಟಕದಲ್ಲಿ ಸುಮಾರು 1,750 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ಹಾಕಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 3 ರೈಲುಗಳ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜುಗಳಿಗೆ ಹಾನಿ

ಕರ್ನಾಟಕವು ಪ್ರಸ್ತುತ 14 ಜಿಲ್ಲೆಗಳನ್ನು ಒಳಗೊಂಡಂತೆ 12 ಜೋಡಿ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತದೆ. 270 ಕೋಟಿ ರೂ. ವೆಚ್ಚದಲ್ಲಿ ಥಣಿಸಂದ್ರದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡಿಪೋವನ್ನು ಸ್ಥಾಪಿಸಲಾಗುವುದು. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಇದು ಮಡಗಾಂವ್ ವರೆಗಿನ ಕರಾವಳಿ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ:

ರಾತ್ರಿ ಪ್ರಯಾಣದ ಸೌಲಭ್ಯ:

ಸದ್ಯಕ್ಕೆ ಚಾಲ್ತಿಯಲ್ಲಿರುವ ವಂದೇ ಭಾರತ್ ರೈಲುಗಳು ಕೇವಲ ಕುಳಿತುಕೊಳ್ಳುವ ಸೌಲಭ್ಯ ಹೊಂದಿದ್ದು, ಹಗಲು ಪ್ರಯಾಣಕ್ಕೆ ಸೀಮಿತವಾಗಿವೆ. ಆದರೆ, ಹೊಸ ಸ್ಲೀಪರ್ ರೈಲನ್ನು ದೂರದ ಊರುಗಳ ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರಯಾಣದ ಸಮಯ ಉಳಿತಾಯ:

ಈ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಳಿಗಳ ನವೀಕರಣ ಪೂರ್ಣಗೊಂಡ ನಂತರ, ಬೆಂಗಳೂರು-ಮುಂಬೈ ನಡುವಿನ ಪ್ರಯಾಣದ ಸಮಯವು ಸದ್ಯ ಇರುವ ಸಾಮಾನ್ಯ ರೈಲುಗಳಿಗಿಂತ ಗಣನೀಯವಾಗಿ ಕಡಿಮೆಯಾಗಲಿದೆ.

ಪ್ರಾಯೋಗಿಕ ಪರೀಕ್ಷೆ:

ವಂದೇ ಭಾರತ್ ಸ್ಲೀಪರ್ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಈ ರೈಲುಗಳ ಉತ್ಪಾದನೆಯನ್ನು ಚುರುಕುಗೊಳಿಸಲಾಗಿದೆ. ಬೆಂಗಳೂರು-ಮುಂಬೈ ದೇಶದ ಪ್ರಮುಖ ವಾಣಿಜ್ಯ ಮಾರ್ಗವಾಗಿರುವುದರಿಂದ, ಈ ಮಾರ್ಗಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಐಷಾರಾಮಿ ವಿನ್ಯಾಸ:

ಈ ರೈಲನ್ನು ರಾಜಧಾನಿ ಎಕ್ಸ್​ಪ್ರೆಸ್ ಅಥವಾ ಹಮ್‌ಸಫರ್ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ಎಸಿ ರೈಲುಗಳಿಗಿಂತಲೂ ಹೆಚ್ಚು ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ.

ಅತ್ಯುತ್ತಮ ಸೀಟು ಮತ್ತು ಬರ್ತ್‌ಗಳು:

ಪ್ರಯಾಣಿಕರಿಗೆ ಯಾವುದೇ ರೀತಿಯ ಜರ್ಕ್ ಇಲ್ಲದೆ ಆರಾಮದಾಯಕ ನಿದ್ರೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೆತ್ತನೆಯ ಹಾಸಿಗೆಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

ಆಧುನಿಕ ಸೌಲಭ್ಯಗಳು:

ಸ್ವಯಂಚಾಲಿತ ಒಳಗಿನ ಬಾಗಿಲುಗಳು ಸೆನ್ಸಾರ್ ಆಧಾರಿತ ಲೈಟಿಂಗ್, ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ಮತ್ತು ವಿಮಾನದ ಮಾದರಿಯ ವ್ಯಾಕ್ಯೂಮ್ ಶೌಚಾಲಯಗಳು ಇರಲಿವೆ.

ಶಬ್ದ ನಿಯಂತ್ರಣ:

ರೈಲಿನೊಳಗೆ ಹೊರಗಿನ ಶಬ್ದ ಕೇಳಿಸದಂತೆ ವಿಶೇಷ ತಂತ್ರಜ್ಞಾನ ಬಳಸಲಾಗಿದ್ದು, ರೈಲಿನೊಳಗೆ ಪ್ರಶಾಂತವಾದ ವಾತಾವರಣವಿರುತ್ತದೆ.

ಈ ಮಾರ್ಗ ಏಕೆ ಮುಖ್ಯ?:

ಬೆಂಗಳೂರು (ಭಾರತದ ಸಿಲಿಕಾನ್ ವ್ಯಾಲಿ) ಮತ್ತು ಮುಂಬೈ (ಭಾರತದ ಆರ್ಥಿಕ ರಾಜಧಾನಿ) ನಡುವೆ ಪ್ರತಿದಿನ ಸಾವಿರಾರು ಉದ್ಯಮಿಗಳು ಮತ್ತು ಸಾಫ್ಟ್‌ವೇರ್ ಉದ್ಯೋಗಿಗಳು ಪ್ರಯಾಣಿಸುತ್ತಾರೆ. ಬೆಂಗಳೂರು ವಿಮಾನ ನಿಲ್ದಾಣವು ನಗರದಿಂದ ದೂರವಿರುವುದರಿಂದ, ವಿಮಾನ ಪ್ರಯಾಣದ ಕಿರಿಕಿರಿ ಬೇಡದವರಿಗೆ ಮತ್ತು ಬಸ್‌ಗಿಂತ ವೇಗವಾಗಿ ಹಾಗೂ ಆರಾಮದಾಯಕವಾಗಿ ಪ್ರಯಾಣಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ. ಬಹಳ ಆರಾಮದಾಯಕ ಪ್ರಯಾಣದ ಅನುಭವ ಸಿಗುವುದರಿಂದ ರಾತ್ರಿ ಹತ್ತಿ ಮಲಗಿದರೆ ಬೆಳಿಗ್ಗೆ ಮುಂಬೈ ಅಥವಾ ಬೆಂಗಳೂರು ತಲುಪಿ ನೇರವಾಗಿ ಕಚೇರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು. ಈ ರೈಲಿನ ನಿಖರವಾದ ವೇಳಾಪಟ್ಟಿ ಮತ್ತು ಟಿಕೆಟ್ ದರಗಳ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | Follow these Japanese habits to stay healthy and fit

ತಂತ್ರಜ್ಞಾನ ಮಾತ್ರವಲ್ಲ ಆರೋಗ್ಯ, ಆಯಸ್ಸಿನ ವಿಚಾರದಲ್ಲೂ ಜಪಾನ್‌ ಸದಾ ಮುಂದಿದೆ. ಜಗತ್ತಿನ ಬಹುತೇಕ ಜನ ಒತ್ತಡದ ಜೀವನವನ್ನು ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಜನರು ಮಾತ್ರ ಆರೋಗ್ಯಕರ (healthy life), ನೆಮ್ಮದಿಯ, ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಪದ್ಧತಿಯೇ ಇವರ ಸದೃಢ ಮತ್ತು ಆರೋಗ್ಯಕರ ಜೀವನದ ಗುಟ್ಟು. ಜಪಾನಿನ ಜನರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಾವು ಸಹ ಅವರಂತೆಯೇ ಆರೋಗ್ಯವಂತರಾಗಿ ಜೀವನವನ್ನು ನಡೆಸಬಹುದು. ನಿಮಗೂ ಕೂಡ ಫಿಟ್‌ ಆಗಿರಬೇಕು, ನೂರ್ಕಾಲ ಆರೋಗ್ಯವಂತರಾಗಿ ಜೀವನ ಸಾಗಿಸಬೇಕು ಎಂಬ ಹಂಬಲವಿದ್ದರೆ, ಜಪಾನಿಯರ ಈ ಕೆಲವು ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.

ನೂರ್ಕಾಲ ಆರೋಗ್ಯವಂತರಾಗಿರಲು ಜಪಾನೀಯರ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

ಪೌಷ್ಟಿಕಾಂಶಯುಕ್ತ ಆಹಾರ ಸೇವನೆ: ಜಪಾನಿನ ಜನರು ಯಾವಾಗಲೂ ಹೆಚ್ಚಿನ ಪೌಷ್ಟಿಕಾಂಶಯುಕ್ತ, ಸಮತೋಲಿತ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಹೌದು ಅವರು ಸಮುದ್ರಾಹಾರ, ಹಸಿರು ತರಕಾರಿಗಳು,  ಸುಟ್ಟ ಮತ್ತು ಆವಿಯಲ್ಲಿ ಬೇಯಿಸಿದ ಆಹಾರಗಳು ಸೇರಿದಂತೆ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಮತ್ತು ಇವರು ಸಂಸ್ಕರಿಸಿದ ಆಹಾರ, ಜಂಕ್‌ ಫುಡ್‌ಗಳ ಸೇವನೆಯನ್ನು ತಪ್ಪಿಸುತ್ತಾರೆ. ಇವು ಚಯಾಪಚಯಕ್ರಿಯೆಯನ್ನು ಹೆಚ್ಚಿಸಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜಪಾನಿಯರ ಈ ಆಹಾರಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ಬಾಳಬಹುದು.

ಚಾಪ್‌ಸ್ಟಿಕ್‌ಗಳ ಬಳಕೆ: ನಾವು ಕೈಯಲ್ಲಿ ಆಹಾರವನ್ನು ಸೇವನೆ ಮಾಡುವಂತೆ ಜಪಾನಿಯರು ಚಾಪ್‌ಸ್ಟಿಕ್‌ನಲ್ಲಿ ತಿನ್ನುತ್ತಾರೆ. ಇದು ಅವರಿಗೆ ಸಣ್ಣ ಆಹಾರವನ್ನು ಆಹಾರವನ್ನು ಸೇವಿಸಲು ಅನುವು ಮಾಡಿಕೊಡುತ್ತದೆ.  ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ಸಹ ಜಪಾನಿಯರಂತೆ ಸಣ್ಣ ಸಣ್ಣ ತುತ್ತು ತಿನ್ನುವ ಮೂಲಕ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೇಗ ಊಟ ಮಾಡುವುದು:  ಜಪಾನಿನ ಜನರು ಸಂಜೆ 7 ಗಂಟೆಯೊಳಗೆ ತಮ್ಮ ರಾತ್ರಿಯ ಭೋಜನವನ್ನು ಮುಗಿಸುತ್ತಾರೆ. ಮತ್ತು ಅವರು ಕಡಿಮೆ ಪ್ರಮಾಣದ ಹಾಗೂ ಹಗುರವಾದ ಆಹಾರವನ್ನು ಸೇವನೆ ಮಾಡುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರವಲ್ಲದೆ, ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದನ್ನು ತಡೆಯುತ್ತದೆ. ಫಿಟ್‌ ಮತ್ತು ಆರೋಗ್ಯಕರವಾಗಿರಲು ನೀವು ಕೂಡ ಈ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಗ್ರೀನ್ ಟೀ ಸೇವನೆ: ಜಪಾನ್‌ನಲ್ಲಿ ಗ್ರೀನ್ ಟೀ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ, ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ನೀವು ಸಹ ಆರೋಗ್ಯವಂತರಾಗಿರಲು ಗ್ರೀನ್‌ ಟೀ ಸೇವಿಸಿ.

ಇದನ್ನೂ ಓದಿ: ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ

ವಾಕಿಂಗ್‌ ಮತ್ತು ಸೈಕ್ಲಿಂಗ್: ಜಪಾನಿನ ಜನರು ತಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸೈಕ್ಲಿಂಗ್ ಮಾಡುತ್ತಾರೆ ಮತ್ತು ವಾಕಿಂಗ್‌ ಹೋಗುತ್ತಾರೆ.  ಇದು  ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ. ಇದಲ್ಲದೆ, ಇದು ಫಿಟ್‌ ಆಗಿರಲು ಕೂಡ ಸಹಕಾರಿ. ನೀವು ಕೂಡ  ಊಟದ ನಂತರ ವಾಕಿಂಗ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಬಲವಾದ ಸಾಮಾಜಿಕ ಸಂಬಂಧಗಳು:  ಜಪಾನಿಯರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ. ಭಾವನಾತ್ಮಕ ಆರೋಗ್ಯಕ್ಕೆ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯವಾಗಿದೆ. ಇದು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಕೂಡ ನಿಮ್ಮವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಂಗಾರ’ದಂತಾ ಬದುಕಿಗೆ ಗ್ರಹಣ: ಚಿನ್ನಾಭರಣ ಖರೀದಿ ಕುಸಿತ; ಬೀದಿಗೆ ಬಿದ್ದ ಹಾಸನದ ಅಕ್ಕಸಾಲಿಗರ ಬದುಕು – Kannada News | Hassan Jewellers Struggle as Iran Israel War and Rising Gold Prices Hurt Livelihoods

ಸಂಕಷ್ಟಕ್ಕೆ ಸಿಲುಕಿದ ಅಕ್ಕಸಾಲಿಗರುImage Credit source: tv9 kannada

ಹಾಸನ, ಮೇ 18: ನಿತ್ಯವೂ ಕೆಜಿಗಟ್ಟಲೆ ಬಂಗಾರವನ್ನು (Gold) ಕೈಯಲ್ಲಿ ಹಿಡಿದು, ನೂರಾರು ಡಿಸೈನ್​​ ಒಡವೆಗಳನ್ನು ತಯಾರಿಸುವ ಅಕ್ಕಸಾಲಿಗರ (Goldsmith) ಬದುಕು ಮಾತ್ರ ಬಂಗಾರದಂತಿಲ್ಲ. ಇರಾನ್-ಇಸ್ರೇಲ್ ಯುದ್ಧ, ಚಿನ್ನದ ಬೆಲೆ ಏರಿಕೆ ಮತ್ತು ಆಮದು ಸುಂಕ ಹೆಚ್ಚಳದ ತ್ರಿವಳಿ ಏಟಿಗೆ ಸಿಲುಕಿ ರಾಜ್ಯದ ಅದರಲ್ಲೂ ಹಾಸನ ಜಿಲ್ಲೆಯ ಸಾವಿರಾರು ಅಕ್ಕಸಾಲಿಗರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಖ್ಯಾಂಶಗಳು

  • ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಆಭರಣ ಖರೀದಿ ಭಾರೀ ಕುಸಿತ
  • ಆರ್ಡರ್ ಇಲ್ಲದೆ ಸಾವಿರಾರೂ ಅಕ್ಕಸಾಲಿಗರು ಕೆಲಸ ಕಳೆದುಕೊಂಡ ಆತಂಕ
  • 400ಕ್ಕೂ ಹೆಚ್ಚು ಸಣ್ಣ ಜ್ಯುವೆಲರಿ ವರ್ಕ್ಸ್‌ಗಳು ನಷ್ಟದ ಸುಳಿಯಲ್ಲಿ

ಯುದ್ಧದ ಬಿಸಿ: ಚಿನ್ನಕ್ಕೆ ಸುಟ್ಟ ಗಾಯ

ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಜಗತ್ತಿನ ಬಹುತೇಕ ದೇಶಗಳು ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯದ ನಡುವೆ ಹಳದಿ ಲೋಹದ ವ್ಯಾಪಾರದಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕ ಹೆಚ್ಚಿಸಿದ ಪರಿಣಾಮ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ಇದರಿಂದ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮಾರಾಟ ಕುಸಿದ ಕಾರಣ ಜ್ಯುವೆಲರಿ ಶಾಪ್‌ಗಳಿಂದ ಆಭರಣ ತಯಾರಿಕೆಗೆ ಆರ್ಡರ್ ಬರುತ್ತಿಲ್ಲ.

ಹಾಸನದಲ್ಲಿ 3 ಸಾವಿರ ಕುಟುಂಬಗಳ ಆಕ್ರಂದನ

ಹಾಸನ ಜಿಲ್ಲೆಯೊಂದರಲ್ಲೇ ಸುಮಾರು 400ಕ್ಕೂ ಹೆಚ್ಚು ಸಣ್ಣಪುಟ್ಟ ಜ್ಯುವೆಲರಿ ವರ್ಕ್ ಶಾಪ್‌ಗಳಿದ್ದು, 2 ರಿಂದ 3 ಸಾವಿರಕ್ಕೂ ಹೆಚ್ಚು ನುರಿತ ಕರಕುಶಲ ಕಾರ್ಮಿಕರು ಇದನ್ನೇ ನಂಬಿ ಬದುಕುತ್ತಿದ್ದಾರೆ. ‘ನಮಗೆ ಬೇರೆ ಕೆಲಸ ಗೊತ್ತಿಲ್ಲ. ಈಗ ಕೆಲಸವೂ ಇಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಕಟ್ಟಲು ಪರದಾಡುತ್ತಿದ್ದೇವೆ. ನಮಗೆ ಕೊರೊನಾ ದಿನಗಳು ನೆನಪಾಗುತ್ತಿವೆ’ ಎಂದು ಅಕ್ಕಸಾಲಿಗರು ಅಳಲು ತೋಡಿಕೊಂಡಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಹೊಡೆತ

ಇನ್ನೊಂದೆಡೆ, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ದೊಡ್ಡ ದೊಡ್ಡ ಕಾರ್ಪೊರೇಟ್ ಜ್ಯುವೆಲರಿ ಸಂಸ್ಥೆಗಳು ತಮ್ಮದೇ ಆದ ಸ್ವಂತ ಫ್ಯಾಕ್ಟರಿಗಳ ಮೂಲಕ ಒಡವೆ ತಯಾರಿಸಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳನ್ನು ನಂಬಿಕೊಂಡಿದ್ದ ದೇಶೀಯ ಕರಕುಶಲ ಕರ್ಮಿಗಳು ತೀವ್ರ ನಷ್ಟದ ಸುಳಿಗೆ ಸಿಲುಕಿದ್ದಾರೆ.

ಸರ್ಕಾರಕ್ಕೆ ಕಣ್ಣೀರಿನ ಮನವಿ

ಯುದ್ಧ ಆರಂಭವಾಗಿ ಸುಮಾರು ತಿಂಗಳು ಕಳೆಯುತ್ತಾ ಬಂದಿದ್ದು, ಸಮಸ್ಯೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದ್ರಿಂದ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಹಲವರ ಬದುಕು ಅತಂತ್ರವಾಗುತ್ತಿದೆ. ನಮ್ಮಂತ ನಲುಗಿದ ಕಾರ್ಮಿಕರ ಕೈಹಿಡಿಯುವ ಕೆಲಸ ಸರ್ಕಾರ ಮಾಡಬೇಕಿದ್ದು, ತಕ್ಷಣವೇ ನಮ್ಮ ನೆರವಿಗೆ ಬರಬೇಕು ಎಂದು ಅಕ್ಕಸಾಲಿಗರ ಸಂಘಟನೆಗಳು ಮನವಿ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:05 pm, Mon, 18 May 26

Source link

ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿಗೆ ಅಸಲಿ ಕಾರಣ ಬಿಚ್ಚಿಟ್ಟ ಜನರಲ್ ಸೆಕ್ರೆಟರಿ ಬಿಂದುಗೌಡ

ಬೆಂಗಳೂರು, ಮೇ 18: ನಿನ್ನೆ ಹಲವು ಪದಾಧಿಕಾರಿಗಳನ್ನು ವಜಾ ಮಾಡಿದ್ದ ಯುವ ಕಾಂಗ್ರೆಸ್​​​ ಇಂದು ಅದೇ ವಿಚಾರಕ್ಕೆ ಪದಾಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ​ಗೌಡ ಮತ್ತು ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಈ ಬಗ್ಗೆ ಟಿವಿ9ಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಂದುಗೌಡ ಪ್ರತಿಕ್ರಿಯಿಸಿದ್ದು, ಇಂದು ಯೂತ್ ಕಾಂಗ್ರೆಸ್ ಸಭೆ ಕರೆದಿದ್ದರು. ಸಭೆ ನಡೆಯುವ ವೇಳೆ ಈ ರೀತಿ ಆಗಿದೆ. ಇದು ನಮ್ಮ ಆಂತರಿಕ ವಿಚಾರ. ಬಿಜೆಪಿ, ಜೆಡಿಎಸ್​ನವರು ದೊಡ್ಡದು ಮಾಡುತ್ತಿದ್ದಾರೆ. ಸಭೆಗೆ ಬರುತ್ತಿಲ್ಲ ಅಂತ ಕಾಯ್ದಿರಿಸಿದ್ದರು, ನಮ್ಮನ್ನ ಎಲ್ಲಿಯೂ ಅಮಾನತು ಮಾಡಿರಲಿಲ್ಲ. 15 ಜನರಿಗೆ ಈ ರೀತಿ ಆಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಹೀಗಾಗಿ ಗಲಾಟೆ ಆಗಿದೆ. ಪಕ್ಷದ ಒಳಗಡೆ ಬಗೆಹರಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನಾವೇ ಆಹಾರವಾದಂತೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 3 ರೈಲುಗಳ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜುಗಳಿಗೆ ಹಾನಿ – Kannada News | Stones hurled at Vande Bharat express and 2 other trains in Bihar Muzaffarpur windows damaged

ಪಾಟ್ನಾ, ಮೇ 18: ಭಾನುವಾರ ಸಂಜೆ ಬಿಹಾರದ ಮುಜಫರ್‌ಪುರ ಬಳಿ ಮೂರು ಪ್ಯಾಸೆಂಜರ್ ರೈಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಕಲ್ಲು ತೂರಾಟವು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದು, ಈ ಪ್ರದೇಶದಲ್ಲಿ ರೈಲ್ವೆ ಭದ್ರತೆಯ ಬಗ್ಗೆ ಭಾರೀ ಕಳವಳವನ್ನು ಹುಟ್ಟುಹಾಕಿದೆ. ಭಾರತೀಯ ರೈಲ್ವೆಯ ಪ್ರೀಮಿಯಂ ಸೆಮಿ-ಹೈ-ಸ್ಪೀಡ್ ಸೇವೆಗಳಲ್ಲಿ ಒಂದಾದ ಪಾಟಲಿಪುತ್ರ-ಗೋರಖ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮೇಲೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಘಟನೆಯ ಸಮಯದಲ್ಲಿ ರೈಲಿನ ಮೂರು ಬೋಗಿಗಳ ಕಿಟಕಿಗಳು ಛಿದ್ರಗೊಂಡಿವೆ.

ಮುಜಫರ್‌ಪುರ ಜಂಕ್ಷನ್ ಮತ್ತು ರಾಮದಯಾಳು ನಗರ ನಿಲ್ದಾಣದ ನಡುವೆ ಈ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಜೌಲಿಯಾ ಮತ್ತು ಖಬ್ರಾ ಬಳಿ ರೈಲನ್ನು ಟಾರ್ಗೆಟ್ ಮಾಡಲಾಗಿದ್ದು, ಅಲ್ಲಿ ಹಲವಾರು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಅಪಘಾತದಲ್ಲಿ 3 ಬೋಗಿಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು, ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​

ವಂದೇ ಭಾರತ್ ರೈಲಿನಲ್ಲಿ ನಡೆದ ಘಟನೆಯ ಸ್ವಲ್ಪ ಸಮಯದ ನಂತರ ಪಾಟ್ನಾ-ಜಯನಗರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 14006, ಲಿಚ್ಚವಿ ಎಕ್ಸ್‌ಪ್ರೆಸ್ ಕೂಡ ಅದೇ ಮಾರ್ಗದಲ್ಲಿ ವಿವಿಧ ಸ್ಥಳಗಳಲ್ಲಿ ಕಲ್ಲು ತೂರಾಟಕ್ಕೆ ಒಳಗಾದವು. ಈ ಘಟನೆಗಳು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಭೀತಿಯನ್ನುಂಟುಮಾಡಿದವು. ಈ ಘಟನೆ ಬಗ್ಗೆ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಒಳಗೆ ಅಳವಡಿಸಲಾದ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗಳು ವರದಿಯಾದ ನಂತರ ಭದ್ರತಾ ಸಿಬ್ಬಂದಿ ರೈಲ್ವೆ ಹಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ. ರೈಲ್ವೆ ಹಳಿಗಳ ಬಳಿ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಾಟದಲ್ಲಿ ಭಾಗಿಯಾಗಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿತಿಮೀರಿ ಇಂಧನ ಖರೀದಿಸದಿರಿ: ಕರ್ನಾಟಕದ ಜನತೆಗೆ ವಿಶೇಷ ಮನವಿ – Kannada News | Do not storage fuel: Karnataka Oil Industry Coordinator requested to Public

ಬೆಂಗಳೂರು, (ಮೇ 18): ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್  (Petrol And Diesel) ಮತ್ತು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಧನ ದರ ಹೆಚ್ಚಳವಾಗಲಿದೆ ಎನ್ನಲಾಗತ್ತಿದೆ.ಇನ್ನೊಂದೆಡೆ ಇರಾಕ್-ಇಸ್ರೆಲ್ ಯುದ್ಧದದಿಂದಾಗಿ ಇಂಧನ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮಿತವ್ಯಯ ಜೀವನಶೈಲಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್​​ನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಮಿತಿ ಹೇರಲಾಗಿದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1500ರವರೆಗೆ ಇಂಧನ ಮಿತಿ ಹೇರಲಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸ್ಪಷ್ಟನೆ ನೀಡಿದ್ದು, ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ. ಆತಂಕದಿಂದ ಇಂಧನ ಖರೀದಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

  • ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯ
  • ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸಿದ್ಧಾರ್ಥ್ ಅಗರ್ವಾಲ್ ಸ್ಪಷ್ಟನೆ
  • ನಿರಂತರ ಪೂರೈಕೆಯ ಭರವಸೆ ನೀಡಿದ ಒಎಂಸಿಗಳು
  • ಆತಂಕದಿಂದ ಇಂಧನ ಖರೀದಿಸದಂತೆ ಸಾರ್ವಜನಿಕರಿಗೆ ಮನವಿ

ಇನ್ನು ಈ ಬಗ್ಗೆ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL ಮತ್ತು HPCL) ಸಿದ್ಧಾರ್ಥ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು, ರಾಜ್ಯದ ಎಲ್ಲಾ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಸಾಕಷ್ಟು ದಾಸ್ತಾನು ಸಂಪೂರ್ಣವಾಗಿ ಲಭ್ಯವಿದೆ ಎಂದು ಸಾರ್ವಜನಿಕರಿಗೆ ಅಧಿಕೃತವಾಗಿ ಭರವಸೆ ನೀಡಿದ್ದಾರೆ.

ಇದನ್ನೂ ನೋಡಿ: ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ

ಇಂಧನ ಪೂರೈಕೆಯಲ್ಲಿ ಅಡೆತಡೆಯಿಲ್ಲ

ಟರ್ಮಿನಲ್ ಗಳು ಮತ್ತು ಡಿಪೋಗಳಿಂದ ಹಿಡಿದು ಸ್ಥಳೀಯ ಚಿಲ್ಲರೆ ಮಾರಾಟ ಮಳಿಗೆಗಳವರೆಗಿನ ಸಂಪೂರ್ಣ ಇಂಧನ ಪೂರೈಕೆ ಸರಪಳಿಯು ಯಾವುದೇ ಅಡೆತಡೆಯಿಲ್ಲದೆ, ಸಾಮಾನ್ಯ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂಧನ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಾದ್ಯಂತ ಮರುಪೂರಣ ಕಾರ್ಯಾಚರಣೆಗಳು ಸುಗಮವಾಗಿ ಸಾಗುತ್ತಿವೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕರ್ನಾಟಕದ ಗ್ರಾಹಕರ ದೈನಂದಿನ ಇಂಧನ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಜ್ಜಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಕ್ಕಸ ಹೊಟ್ಟೆಗೆ ಅರೆಕಾಸು ಮಜ್ಜಿಗೆ; ದಿನಕ್ಕೆ 1,600 ಕೋಟಿ ನಷ್ಟವಿರುವ ತೈಲ ಕಂಪನಿಗಳಿಗೆ 3 ರೂ ಪೆಟ್ರೋಲ್ ಬೆಲೆ ಏರಿಕೆ ಸಾಲುತ್ತಾ?

ಅತಿಯಾಗಿ ಇಂಧನ ಸಂಗ್ರಹ ಬೇಡ

ಸಾರ್ವಜನಿಕರು ನಿಶ್ಚಿಂತರಾಗಿರಲು ಮತ್ತು ತಮ್ಮ ಸಾಮಾನ್ಯ ಇಂಧನ ಬಳಕೆಯನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಕರ್ನಾಟಕದ ಜನರಿಗೆ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಸಂಪೂರ್ಣವಾಗಿ ಬದ್ಧವಾಗಿವೆ ಮತ್ತು ಸಿದ್ಧವಾಗಿವೆ. ಅದರಂತೆ, ಸಾರ್ವಜನಿಕರು ಆತಂಕದಿಂದ ಇಂಧನ ಖರೀದಿಸುವುದು ಅಥವಾ ಅತಿಯಾಗಿ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ಮಾಡಬಾರದು. ಇಡೀ ಪ್ರದೇಶದಾದ್ಯಂತ ತಡೆರಹಿತ ಇಂಧನ ಲಭ್ಯತೆಗಾಗಿ ತೈಲ ಉದ್ಯಮವು ಲಾಜಿಸ್ಟಿಕ್ಸ್, ದಾಸ್ತಾನು ಚಲನೆ ಮತ್ತು ಚಿಲ್ಲರೆ ಕಾರ್ಯಾಚರಣೆಗಳನ್ನು ನಿಕಟವಾಗಿ ಸಂಯೋಜಿಸುವುದನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು – Kannada News | AI Job Loss Warning: Microsoft AI Chief Predicts White Collar Jobs Vanish in 18 Months

ನವದೆಹಲಿ, ಮೇ 18: ಕೃತಕ ಬುದ್ಧಿಮತ್ತೆಯಿಂದ (AI) ಮನುಷ್ಯರಿಗೆ ಕೆಲಸ ಇಲ್ಲವಾಗುತ್ತವೆ ಎನ್ನುವ ವಿಚಾರದ ಬಗ್ಗೆ ಪರಿಣಿತರಲ್ಲೇ ಮಿಶ್ರ ಅನಿಸಿಕೆಗಳಿವೆ. ಹಲವರು ಎಐನಿಂದ ಉದ್ಯೋಗನಷ್ಟವಾಗುವುದೆಲ್ಲಾ ಸುಳ್ಳು ಒಂದು ವರ್ಗ ಹೇಳುತ್ತಿದೆ. ಎಐನಿಂದ ಸಿಕ್ಕಾಪಟ್ಟೆ ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಇನ್ನೊಂದು ವರ್ಗ ಹೇಳುತ್ತಿದೆ. ಸ್ಯಾಮ್ ಆಲ್ಟ್​ಮ್ಯಾನ್, ಡೇರಿಯೋ ಅಮೋಡೇ, ಇಲಾನ್ ಮಸ್ಕ್ ಮೊದಲಾದವರು ಇದೇ ಅನಿಸಿಕೆ ಹೊಂದಿದ್ದಾರೆ. ಮೈಕ್ರೋಸಾಫ್ಟ್​ನ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ (Mustafa Suleyman) ಅವರೂ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಅವರ ಪ್ರಕಾರ ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಉದ್ಯೋಗಗಳೇ ಇಲ್ಲವಾಗುತ್ತವಂತೆ.

ಈ ಸುದ್ದಿಯ ಮುಖ್ಯಾಂಶಗಳು

  • ಎಐನಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ ಧ್ವನಿಗೂಡಿಸಿದ್ದಾರೆ.
  • ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಜಾಬ್​ಗಳು ಇಲ್ಲವಾಗುತ್ತವೆ. ಅಕೌಂಟೆಂಟ್, ಲಾಯರ್ ಮತ್ತು ಮಾರ್ಕೆಟಿಂಗ್ ಕೆಲಸಗಳು ಇಲ್ಲದಂತಾಗುತ್ತವಂತೆ.
  • 2027ರರೊಳಗೆ ಮನುಷ್ಯರು ಮಾಡುವಂತಹ ಹೆಚ್ಚಿನ ವೈಟ್ ಕಾಲರ್ ಕೆಲಸಗಳನ್ನು ಎಐ ನಿರ್ಮಿಸಬಲ್ಲುದು ಎಂದು ಸುಲೇಮಾನ್ ಹೇಳುತ್ತಾರೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ವೈಟ್ ಕಾಲರ್ ಕೆಲಸಗಳು ಯಾವುವು?

ಕಚೇರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ವೃತ್ತಿಪರ, ಆಡಳಿತಾತ್ಮಕ ಮತ್ತು ನಿರ್ವಹಣಾತ್ಮಕ ಕೆಲಸಗಳನ್ನು ವೈಟ್ ಕಾಲರ್ ಜಾಬ್​ಗಳೆಂದು ಗಣಿಸಲಾಗುತ್ತದೆ. ಉದಾಹರಣೆಗೆ, ಐಟಿ ಕ್ಷೇತ್ರದ ಉದ್ಯೋಗಗಳು, ಫಿನಾನ್ಸ್, ಅಕೌಂಟಿಂಗ್, ಕಾರ್ಪೊರೇಟ್ ಮ್ಯಾನೇಜ್ಮೆಂಟ್, ವಕೀಲರು, ಲೀಗಲ್ ಅಡ್ವೈಸರ್​ಗಳು, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಇತ್ಯಾದಿ ವರ್ಗದ ಕೆಲಸಗಳು ವೈಟ್ ಕಾಲರ್ ಜಾಬ್ ಎನಿಸುತ್ತವೆ.

ಪ್ಲಂಬರ್, ಎಲೆಕ್ಟ್ರಿಶಿಯನ್, ಕಟ್ಟಡ ಕಾರ್ಮಿಕರು, ಕುಶಲಕರ್ಮಿಗಳು ಇತ್ಯಾದಿ ಮನುಷ್ಯರ ದೈಹಿಕ ಶ್ರಮ ಮತ್ತು ಕೌಶಲ್ಯ ಬೇಡುವ ಕೆಲಸಗಳನ್ನು ಬ್ಲೂ ಕಾಲರ್ ಜಾಬ್ ಎನ್ನುತ್ತಾರೆ. ಎಐ ಹೊಡೆತದಲ್ಲಿ ಹೆಚ್ಚು ದಿನ ಉಳಿಯುವುದು ಬ್ಲೂ ಕಾಲರ್ ಜಾಬ್​ಗಳೇ ಎನ್ನುವುದು ತಜ್ಞರ ಅನಿಸಿಕೆ.

ಎಐ ಏಜೆಂಟ್​ಗಳು ನುಗ್ಗುತ್ತವೆ ಹುಷಾರ್..!

ಮೈಕ್ರೋಸಾಫ್ಟ್ ಎಐ ಡಿವಿಶನ್ ಮುಖ್ಯಸ್ಥರ ಪ್ರಕಾರ ಮುಂದಿನ ಎರಡ್ಮೂರು ವರ್ಷಗಳಲ್ಲಿ ಎಐ ಏಜೆಂಟ್​ಗಳು ಯಾವುದೇ ಕಂಪನಿಯ ವರ್ಕ್​ಫ್ಲೋ ಅನ್ನು ನಿರ್ವಹಿಸಲು ಆರಂಭಿಸುವಷ್ಟು ಶಕ್ತವಾಗಿರಲಿವೆ. ಮನುಷ್ಯರ ಅವಶ್ಯಕತೆ ಇಲ್ಲದಂತೆ ಅವುಗಳೇ ನಿರ್ಧಾರ ತೆಗೆದುಕೊಳ್ಳಬಲ್ಲುವಂತೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಪೋಡ್​ಕ್ಯಾಸ್ಟ್ ಮಾಡಿದಷ್ಟೇ ಸುಲಭವಾಗಿ ಎಐ ಸಿಸ್ಟಂಗಳ ನಿರ್ಮಾಣ ಸಾಧ್ಯ

ಎಐ ಸಿಸ್ಟಂಗಳು ಎಲ್ಲರಿಗೂ ಕೈಗೆಟಕುವಂತಿರುತ್ತವೆ. ಸಾಮಾನ್ಯ ಜನರೂ ಕೂಡ ಯಾವುದೇ ಪರಿಣತಿ ಇಲ್ಲದಿದ್ದರೂ ತಮ್ಮದೇ ಎಐ ಸಿಸ್ಟಂಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಹೇಳುವ ಮುಸ್ತಫಾ ಸುಲೇಮಾನ್, ಅದನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟ್ ಮಾಡುವ ಕೆಲಸಕ್ಕೆ ಹೋಲಿಸುತ್ತಾರೆ.

ಗ್ರಾಹಕೀಯವಾದ ಎಐ ಮಾಡಲ್ ಅನ್ನು ಸೃಷ್ಟಿಸುವುದು ಒಂದು ಬ್ಲಾಗ್ ಬರೆದಷ್ಟೇ ಸುಲಭವಾಗಿರುತ್ತದೆ. ಇದರಿಂದ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಅಗತ್ಯ ಇರುವ ಕಾರ್ಯಗಳಿಗೆ ನೆರವಾಗುವ ಎಐ ಟೂಲ್​ಗಳನ್ನು ಅವರೇ ರಚಿಸಬಲ್ಲುವು ಎಂದೆನ್ನುತ್ತಾರೆ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳ ಎಚ್ಚರಿಕೆಗೂ ಡೋಂಟ್​​ಕೇರ್​​: ಮೇ 20ರಂದು ಸಾರಿಗೆ ನೌಕರರ ಮುಷ್ಕರ ಖಚಿತ ಎಂದ ಮುಖಂಡರು – Kannada News | Karnataka KSRTC Strike Update: Employees Confirm May 20 Action Amid No Work, No Pay Warning

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಸಂಬಂಧ ಈಗಾಗಲೇ ಕೆಎಸ್​ಆರ್​​ಟಿಸಿ ಖಡಕ್​​ ಎಚ್ಚರಿಕೆ ರವಾನಿಸಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಷ್ಕರದಲ್ಲಿ ಭಾಗಿಯಾಗದಂತೆ ಕೆಎಸ್ಆರ್​ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಸಾರಿಗೆ ನೌಕರರು ಮಾತ್ರ ಪಟ್ಟು ಬಿಡಲು ನಿರಾಕರಿಸಿದ್ದು, ನಾವು ದೃಢವಾಗಿ ನಿರ್ಧಾರ ಮಾಡಿದ್ದೀವಿ, ಮುಷ್ಕರ ನಡೆಸುವುದು ಖಚಿತ ಎಂದು ತಿಳಿಸಿದ್ದಾರೆ.

‘ನಾವು ಯಾವುದಕ್ಕೂ ಹೆದರುವುದಿಲ್ಲ’

ನಮ್ಮ ಬೇಡಿಕೆ ಈಡೇರಿಸಲೇಬೇಕು, ಸಾರಿಗೆ ಮುಷ್ಕರ ಶುರುವಾದ ಮೇಲೆ ಏನೇನು ಆಗುತ್ತೆ ನೋಡೋಣ. ಸಾರಿಗೆ ನೌಕರರನ್ನು ಅರೆಸ್ಟ್ ಮಾಡಿದ್ರೆ ಬಸ್ ಯಾರು ಓಡಿಸುತ್ತಾರೆ? ಎಸ್ಮಾ ಜಾರಿಯಲ್ಲಿದೆ ಅಂತಾರೆ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಬೆಂಗಳೂರಲ್ಲಿ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ; ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

‘ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ’

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ ಎಂದಿದ್ದಾರೆ. ಈಗಾಗಲೇ ‘ನೋ ವರ್ಕ್ ನೋ ಪೇ’ ಆದೇಶ ಜಾರಿಮಾಡಲಾಗಿದ್ದು, ಸಾರಿಗೆ ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ನಿಶ್ಚಿತ. ಎಲ್ಲಾ ಜಿಲ್ಲೆಗಳ ಎಸ್​ಪಿ, ಆರ್​ಟಿಒಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ಕಾರದ ಸಾಧನಾ ಸಮಾವೇಶಕ್ಕೆ 2,000 ಬಸ್ ಕಳುಹಿಸಲಾಗುತ್ತಿದೆ. ಮೇ 20ರಂದು ರಾಜ್ಯದ ಎಲ್ಲಾ ಡಿಪೋಗಳಿಗೆ ಭದ್ರತೆ ನೀಡಲಾಗುವುದು. ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗಿದ್ದು ಭದ್ರತೆಗೆ ಸೂಚಿಸಲಾಗಿದೆ. ಮುಷ್ಕರದಲ್ಲಿ ಭಾಗಿಯಾಗಲ್ಲವೆಂದು ಸಾರಿಗೆ ಸಿಬ್ಬಂದಿಯಿಂದ ಮುಚ್ಚಳಿಕೆ ಬರೆಸಿಕೊಂಡಿರುವುದರಿಂದ ಸಾರಿಗೆ ಬಸ್ ಸಂಚಾರ ಇರುತ್ತೆ ಎಂದವರು ತಿಳಿಸಿದ್ದಾರೆ.

ಇದರ ಹೊರತಾಗಿಯೂ ಮುಷ್ಕರ ನಡೆದರೆ ನಮ್ಮಲ್ಲಿ 2,000 ತರಬೇತಿನಿರತರು ಇದ್ದಾರೆ. ಸಾರಿಗೆ ಇಲಾಖೆಯ 4 ನಿಗಮಗಳಲ್ಲಿ 5,000 ತರಬೇತಿ ಚಾಲಕರಿದ್ದಾರೆ. ಅವರನ್ನು ನಿಯೋಜಿಸುವ ಮೂಲಕ ಸಾರಿಗೆ ಬಸ್ ಸೇವೆ ನೀಡುತ್ತೇವೆ. ಜೊತೆಗೆ ಖಾಸಗಿ ಬಸ್​ಗಳ ಮಾಲೀಕರ ಸಂಘದ ಜೊತೆಗೂ ಚರ್ಚೆ ಮಾಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್​ಗಳನ್ನು ಓಡಿಸ್ತೇವೆ. ನಮ್ಮ ಜೊತೆ ಚರ್ಚೆ ನಡೆಸಲು ಸಾರಿಗೆ ಸಿಬ್ಬಂದಿಗೆ ಮುಕ್ತ ಅವಕಾಶವಿದೆ ಎಂದವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Peddi Trailer: ‘ಪೆದ್ದಿ’ ಟ್ರೇಲರ್ ಬಿಡುಗಡೆ; ಕ್ರಿಕೆಟ್ ಜೊತೆ ಕುಸ್ತಿ ಅಖಾಡದಲ್ಲೂ ರಾಮ್ ಚರಣ್ ಮಾಸ್ ಅವತಾರ – Kannada News | Peddi Movie Trailer Released ft Ram Charan Shiva Rajkumar Pan India Film

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ (Peddi) ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಟ್ರೇಲರ್ ಇಂದು (ಮೇ 18) ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ (Peddi Trailer) ನೋಡಿದ ಬಳಿಕ ರಾಮ್ ಚರಣ್ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಆಗಿದೆ. ರಾಮ್ ಚರಣ್ (Ram Charan) ಅವರ ವಿವಿಧ ಗೆಟಪ್ ಗಮನ ಸೆಳೆದಿದೆ. ಮೇಕಿಂಗ್ ಗುಣಮಟ್ಟ ನೋಡಿ ಪ್ರೇಕ್ಷಕರ ಭೇಷ್ ಎಂದಿದ್ದಾರೆ.

1. ‘ಪೆದ್ದಿ’ ಸಿನಿಮಾದಲ್ಲಿ ನಟ ರಾಮ್ ಚರಣ್ ಪಾತ್ರಕ್ಕೆ ಹಲವು ಶೇಡ್ಸ್ ಇವೆ.
2. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಆಗಿದೆ.
3. ಜೂನ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ವಿಜಯನಗರಂ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ರಾಮ್ ಚರಣ್ ಅವರು ಬೆಲ್ಲದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಮಿಕನಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ಅಪಾರ ಒಲವು ಹೊಂದಿರುವ ಹೀರೋ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ತನಗೆ ಪರಿಚಯವೇ ಇಲ್ಲದ ಕುಸ್ತಿ ಅಖಾಡಕ್ಕೆ ಇಳಿಯಬೇಕಾಗಿ ಬರುತ್ತದೆ. ಕೊನೆಗೆ ಆತ ಹೇಗೆ ‘ಕ್ರಾಸ್ ಓವರ್ ಅಥ್ಲೀಟ್’ ಆಗಿ ಹೊರಹೊಮ್ಮುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾಹಂದರ.

‘ಆರ್ಆರ್ಆರ್’ ಚಿತ್ರದಲ್ಲಿ ವಿಭಿನ್ನ ಶೇಡ್‌ಗಳ ಪಾತ್ರದ ಮೂಲಕ ಅಬ್ಬರಿಸಿದ್ದ ರಾಮ್ ಚರಣ್ ಅವರು ‘ಪೆದ್ದಿ’ ಚಿತ್ರಕ್ಕಾಗಿ ತಮ್ಮ ದೇಹವನ್ನು ದಂಡಿಸಿ ಸಖತ್ ಟ್ರಾನ್ಸ್​ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಅವರ ಕಟ್ಟುಮಸ್ತಾದ ಬಾಡಿ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಟನೆ, ಮಾಸ್ ಮ್ಯಾನರಿಸಂ, ಡೈಲಾಗ್ ಡೆಲಿವರಿ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಪೆದ್ದಿ ಸಿನಿಮಾ ಟ್ರೇಲರ್:

ಈ ಸಿನಿಮಾಗೆ ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಿದ್ದಾರೆ. ಕೇವಲ ನಾಯಕನ ಮಾಸ್ ಎಲಿಮೆಂಟ್‌ಗಳನ್ನು ಮಾತ್ರವಲ್ಲದೇ, ಕಥೆಯಲ್ಲಿರುವ ಭಾವನಾತ್ಮಕ ಆಳವನ್ನೂ ಕೂಡ ಅವರು ಈ ಟ್ರೇಲರ್​​ನಲ್ಲಿ ತೋರಿಸಿದ್ದಾರೆ. ಸಿನಿಮಾದ ಅದ್ದೂರಿ ಮೇಕಿಂಗ್ ಹೆಚ್ಚು ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅವರ ಪಾತ್ರ ಕೂಡ ಟ್ರೇಲರ್​ನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜಕುಮಾರ್ ಜೊತೆ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಮೂಲಕ ವೆಂಕಟ ಸತೀಶ್ ಕಿಲಾರು ಅವರು ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 4ರಂದು ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ವಿವಿಧೆಡೆ ಗಾಳಿ ಮಳೆ: ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟ – Kannada News | Bengaluru Rains: Strong Winds, Heavy Downpour Lash Several Areas Across City

ಬೆಂಗಳೂರು, ಮೇ 18: ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ರಾಜಧಾನಿ ಬೆಂಗಳೂರಿಗರಿಗೆ ವರುಣ ತಂಪೆರೆದಿದ್ದಾನೆ. ನಗರದ ವಿವಿಧೆಡೆ ಗಾಳಿ ಸಹಿತ ಮಳೆ (Rain) ಸುರಿದಿದ್ದು, ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಿಂದ ಸಮಸ್ಯೆಗೆ ಸಿಲುಕಿದ್ದು, ರಸ್ತೆ ಬದಿಗಳಲ್ಲೇ ಬೈಕ್ ನಿಲ್ಲಿಸಿ ಬಸ್ ನಿಲ್ದಾಣಗಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಸವಾರರು ನಿಂತ ದೃಶ್ಯಗಳು ಕಂಡುಬಂದಿವೆ. ನಗರದ ಹಲವು ರಸ್ತೆಗಳು ಮಳೆ‌ನೀರಿನಿಂದ ಆವೃತವಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು ಕೆರೆಯಂತಾಗಿವೆ.

ಮುಖ್ಯಾಂಶಗಳು

  • ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗರಿಗೆ ತಂಪೆರೆದ ವರುಣ
  • ನಗರದ ವಿವಿಧೆಡೆ ಗಾಳಿ ಸಹಿತ ಸುರಿದಿರುವ ಸಾಧಾರಣ ಮಳೆ
  • ಮಳೆ ಕಾರಣ ಕೆಲವೆಡೆ ವಾಹನಗಳ ಸಂಚಾರಕ್ಕೆ ತೊಡಕು

ವಸಂತನಗರ, ಸಿಟಿ ಮಾರ್ಕೆಟ್​​, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಇಂದಿರಾ ನಗರ, ಲಗ್ಗೆರೆ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಮಣ್ಯ ನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ವರುಣನ ಆಗಮನವಾಗಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್!

ಕೆ.ಆರ್.ಸರ್ಕಲ್ ಅಂಡರ್ ಪಾಸ್ ಬಂದ್

ಇನ್ನು ಮಳೆ ಹಿನ್ನೆಲೆ ನೀರು ಸಂಗ್ರಹಣೆ ಸಾಧ್ಯತೆ ಇರುವ ಕಾರಣ ಮುಂಜಾಗ್ರತ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಳೆಯ ನಿರೀಕ್ಷೆ ಇದ್ದು, ಗಂಟೆಗೆ 40-50 ಕಿ.ಮೀ. ಗಾಳಿ, ಗುಡುಗು ಸಹಿತ ವರುಣ ಅಬ್ಬರಿಸಲಿದ್ದಾನೆ ಎಂದು ಇಲಾಖೆ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:44 pm, Mon, 18 May 26

Source link