Category Archives: Blog

Your blog category

ಪಿಎಸ್​ಎಲ್​ವಿ ರಾಕೆಟ್ ವೈಫಲ್ಯ; ನಾಶಗೊಂಡ ಸೆಟಿಲೈಟ್​ಗಳ ನಷ್ಟ ಯಾರು ಭರಿಸೋದು? – Kannada News | PSLV rocket mission failure, who bears the loss for lost satellites

ನವದೆಹಲಿ, ಜನವರಿ 12: ಹದಿನಾರು ಸೆಟಿಲೈಟ್​ಗಳನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಉಡಾವಣೆ (PSLV rocket launch) ವಿಫಲವಾಗಿದೆ. ಇಸ್ರೋದಿಂದ ಉಡಾವಣೆಗೊಂಡ ಪಿಎಸ್​ಎಲ್​ವಿ-ಸಿ62 ರಾಕೆಟ್ ತಾಂತ್ರಿಕ ವೈಫಲ್ಯ ಕಂಡು, ಗುರಿ ತಪ್ಪಿದೆ. ಇದರೊಂದಿಗೆ, ರಾಕೆಟ್ ಜೊತೆಗೆ ಅದರಲ್ಲಿದ್ದ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್-ಎನ್1 ಸೇರಿದಂತೆ 16 ಸೆಟಿಲೈಟ್​ಗಳೂ ನಾಶವಾಗಲಿವೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ಬೆಳಗ್ಗೆ 10:18ಕ್ಕೆ ಈ ರಾಕೆಟ್ ಉಡಾವಣೆ ಆಗಿತ್ತು. ಇಒಎಸ್-ಎನ್1 ಸೇರಿದಂತೆ 15 ಸೆಟಿಲೈಟ್​ಗಳನ್ನು ಸೂರ್ಯ ಸಂಬದ್ಧ ಕಕ್ಷೆಗೆ (Sun Synchronous Orbit) ತಲುಪಿಸುವ ಮಿಷನ್ ಇತ್ತು. ಕೆಐಡಿ ಎನ್ನುವ ಮತ್ತೊಂದು ಕ್ಯಾಪ್ಸೂಲ್ ಅನ್ನು ಭೂಮಿಗೆ ವಾಪಸ್ ತರುವ ಯೋಜನೆ ಇತ್ತು.

ಇದನ್ನೂ ಓದಿ: PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ

ಕೆಐಡಿ ಅಥವಾ ಕೆಸ್ಟ್ರೆಲ್ ಇನಿಶಿಯಲ್ ಟೆಕ್ನಾಲಜಿ ಡೆಮಾನ್ಸ್​ಟ್ರೇಟರ್ ಅನ್ನು ಸ್ಪೇನ್ ದೇಶದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಇದು 25 ಕಿಲೋ ಕ್ಯಾಪ್ಸೂಲ್ ಆಗಿದ್ದು, ಭೂಮಿಗೆ ಮರಳಿ ಬರುವುದಕ್ಕೆಂದೇ ರೂಪಿಸಿದಂತಾಗಿತ್ತು. ಇನ್ನು, ಈ ಮಿಷನ್​ನ ಪ್ರಮುಖ ಉಪಗ್ರಹವಾದ ಇಒಎಸ್-ಎನ್1 ಅನ್ನು ಬ್ರಿಟನ್ ಮತ್ತು ಥಾಯ್ಲೆಂಡ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದವು. ಇವುಗಳೂ ಸೇರಿ ಒಟ್ಟು 16 ಸೆಟಿಲೈಟ್​ಗಳು ಕಳೆದುಹೋದಂತಾಗಿದೆ.

ನಷ್ಟಗೊಂಡ ಸೆಟಿಲೈಟ್​ಗಳಿಗೆ ಯಾರು ಹೊಣೆ?

ಸೆಟಿಲೈಟ್ ಉಡಾವಣೆ ವೇಳೆ ರಾಕೆಟ್ ವೈಫಲ್ಯವಾಗಿ, ಅದರಲ್ಲಿದ್ದ ಸೆಟಿಲೈಟ್​ಗಳು ನಾಶಗೊಂಡರೆ ಅದಕ್ಕೆ ಹೊಣೆ ಯಾರೆಂದು ಇರುವುದಿಲ್ಲ. ಬಸ್ ಅಪಘಾತವಾಗಿ ಪ್ರಯಾಣಿಕರು ಸಾವನ್ನಪ್ಪಿದರೆ ಬಸ್ ಮಾಲೀಕರು ಪರಿಹಾರ ಕೊಡಬೇಕೆಂದಿಲ್ಲ. ಹಾಗೆಯೇ, ರಾಕೆಟ್ ವಿಫಲವಾಗಿ ಸೆಟಿಲೈಟ್ ನಾಶವಾದರೆ, ಅದಕ್ಕೆ ರಾಕೆಟ್ ಉಡಾಯಿಸಿದ ಅಥವಾ ಅದನ್ನು ನಿರ್ಮಿಸಿದ ಇಸ್ರೋ ಹೊಣೆಯಾಗುವುದಿಲ್ಲ.

ಸೆಟಿಲೈಟ್ ತಯಾರಿಸಿದವರು ಅದಕ್ಕೆ ಇನ್ಷೂರೆನ್ಸ್ ಮಾಡಿಸುವ ಅವಕಾಶ ಇರುತ್ತದೆ. ಹಾಗೆ ಇನ್ಷೂರೆನ್ಸ್ ಮಾಡಿಸಿದ್ದರೆ ಒಂದಷ್ಟು ಪರಿಹಾರ ಪಡೆಯಬಹುದು. ಬ್ರೆಜಿಲ್, ನೇಪಾಳ ಮೊದಲಾದ ಇತರ ಕೆಲ ದೇಶಗಳ ಸೆಟಿಲೈಟ್​ಗಳೂ ಈ ಮಿಷನ್​ನಲ್ಲಿ ಇದ್ದವು. ಆಯಾ ಕಂಪನಿಗಳು ವಿಮೆ ಮಾಡಿಸಿರುವ ಸಾಧ್ಯತೆ ಇರುತ್ತದೆ. ಇಸ್ರೋದಿಂದಾಗಲೀ, ಅಥವಾ ಸರ್ಕಾರದಿಂದಲಾಗಲೀ ಆ ಸೆಟಿಲೈಟ್ ತಯಾರಕರಿಗೆ ಪರಿಹಾರ ಕೊಡಲಾಗುವುದಿಲ್ಲ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಇಸ್ರೋಗೆ ಇದು ಐದನೇ ಪಿಎಸ್​ಎಲ್​ವಿ ವೈಫಲ್ಯ…

ಇಸ್ರೋ ಇಲ್ಲಿಯವರೆಗೆ 64 ಬಾರಿ ಪಿಎಸ್​ಎಲ್​ವಿ ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿದೆ. ಇವತ್ತಿನದೂ ಸೇರಿ ಐದು ಬಾರಿ ವೈಫಲ್ಯವಾಗಿದೆ. 2025ರಲ್ಲೂ ಪಿಎಸ್​ಎಲ್​ವಿ ಮಿಷನ್ ಫೇಲ್ಯೂರ್ ಆಗಿತ್ತು. ಕಳೆದ ಒಂದು ವರ್ಷದಲ್ಲಿ ಸತತ ಎರಡು ಬಾರಿ ಪಿಎಸ್​ಎಲ್​ವಿ ವೈಫಲ್ಯ ಕಂಡಿದೆ. ಆದರೆ, 64 ಮಿಷನ್​ನಲ್ಲಿ 5 ವೈಫಲ್ಯ ಎಂಬುದು ಕಳಪೆ ಸಾಧನೆಯಲ್ಲ. ಇಲಾನ್ ಮಸ್ಕ್ ಅವರ ರಾಕೆಟ್ ಮಿಷನ್​ಗಳೂ ಕೂಡ ಬಾರಿ ಬಾರಿ ವಿಫಲವಾಗಿರುವುದುಂಟು.

ಸೆಟಿಲೈಟ್​ಗಳು ಏನಾಗುತ್ತವೆ?

ರಾಕೆಟ್ ಉಡಾವಣೆ ವಿಫಲವಾದಾಗ ಅದರಲ್ಲಿದ್ದ ಸೆಟಿಲೈಟ್​ಗಳು ಹೆಚ್ಚಿನವು ಭೂಮಿ ವಾತಾವರಣಕ್ಕೆ ವೇಗವಾಗಿ ಬರುವಾಗ ಸುಟ್ಟು ಹೋಗಬಹುದು. ಕೆಲವು ಆಗಸದಲ್ಲಿ ಕೆಲ ಕಾಲ ಸ್ಪೇಸ್ ತ್ಯಾಜ್ಯಗಳಾಗಿ ಉಳಿಯಬಹುದು. ಇನ್ನು ರಾಕೆಟ್ ಅನ್ನು ಸಮುದ್ರದ ಮೇಲೆ ಉಡಾವಣೆ ಮಾಡುವುದರಿಂದ ಅದು ಸಮುದ್ರಕ್ಕೆ ಉದುರಿ ಬೀಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಿಂಗ್ ಕೊಹ್ಲಿಯ ದಾಖಲೆ ಮೇಲೆ ಕಣ್ಣಿಟ್ಟ ವೈಭವ್ ಸೂರ್ಯವಂಶಿ – Kannada News | Vaibhav Suryavanshi Eyes On Virat Kohli and Gill’s Record

ಟೀಮ್ ಇಂಡಿಯಾ ಅಂಡರ್​-19 ವಿಶ್ವಕಪ್​ಗಾಗಿ ಸಜ್ಜಾಗಿದೆ. ಜನವರಿ 15 ರಿಂದ ಶುರುವಾಗಲಿರುವ ಈ ಟೂರ್ನಿಗೂ ಮುನ್ನವೇ ವೈಭವ್ ಸೂರ್ಯವಂಶಿಯ ಅಬ್ಬರ ಆರಂಭವಾಗಲಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ವೈಭವ್ ಕೇವಲ 50 ಎಸೆತಗಳಲ್ಲಿ 7 ಸಿಕ್ಸರ್​ಗಳೊಂದಿಗೆ 96 ರನ್​ಗಳಿಸಿದ್ದಾರೆ.

ಇದೇ ಫಾರ್ಮ್​ ಅನ್ನು ವಿಶ್ವಕಪ್​ನ ಮೊದಲ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಮುಂದುವರೆಸುವ ನಿರೀಕ್ಷೆಯಿದೆ. ಈ ನಿರೀಕ್ಷೆ ನಿಜವಾದರೆ ಹೊಸ ಇತಿಹಾಸ ನಿರ್ಮಾಣವಾಗುವುದು ಖಚಿತ. ಏಕೆಂದರೆ ಈ ಬಾರಿ ಅಂಡರ್-19 ವಿಶ್ವಕಪ್ ಮೂಲಕ ಹೊಸ ಇತಿಹಾಸ ನಿರ್ಮಿಸುವ ಅವಕಾಶ ವೈಭವ್ ಸೂರ್ಯವಂಶಿ ಮುಂದಿದೆ.

ಅಂದರೆ ಅಂಡರ್-19 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ 1000+ ರನ್ ಕಲೆಹಾಕಿರುವುದು ಕೇವಲ ಇಬ್ಬರು ಮಾತ್ರ. ಇದೀಗ ಈ ಪಟ್ಟಿಗೆ ಎಂಟ್ರಿ ಕೊಡುವ ಹೊಸ್ತಿಲಲ್ಲಿದ್ದಾರೆ ವೈಭವ್ ಸೂರ್ಯವಂಶಿ. ಅದು ಕೂಡ ಕೇವಲ 27 ರನ್​ ಕಲೆಹಾಕುವ ಮೂಲಕ ಎಂಬುದು ವಿಶೇಷ.

ವೈಭವ್ ಸೂರ್ಯವಂಶಿ ಯುಎಸ್​ಎ ವಿರುದ್ಧದ ಮೊದಲ ಪಂದ್ಯದಲ್ಲಿ 27 ರನ್​ಗಳಿಸಿದರೆ ಅಂಡರ್-19 ಏಕದಿನ ಪಂದ್ಯಗಳಲ್ಲಿ 1000 ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಯೂತ್ ಒಡಿಐ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಸಹ ಮುರಿಯಲಿದ್ದಾರೆ.

ಅಂಡರ್-19 ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಕಲೆಹಾಕಿದ ಒಟ್ಟು ಸ್ಕೋರ್ 978 ರನ್​ಗಳು. ಈ ದಾಖಲೆಯನ್ನು ಮುರಿಯಲು ವೈಭವ್​ಗೆ ಬೇಕಿರುವುದು ಕೇವಲ 6 ರನ್​ ಮಾತ್ರ. ಅಂದರೆ ಈ ಬಾರಿಯ ಅಂಡರ್-19 ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಕಿಂಗ್ ಕೊಹ್ಲಿಯ ದಾಖಲೆ ಮುರಿಯುವುದನ್ನು ಎದುರು ನೋಡಬಹುದು.

ಹಾಗೆಯೇ ಅಂಡರ್-19 ಏಕದಿನ ಪಂದ್ಯಗಳಲ್ಲಿ 1149 ರನ್​ ಕಲೆಹಾಕಿರುವ ಶುಭ್​​ಮನ್ ಗಿಲ್ ಅವರ ದಾಖಲೆಯನ್ನು ಸಹ ಮುರಿಯುವ ಅವಕಾಶ ವೈಭವ್ ಸೂರ್ಯವಂಶಿ ಮುಂದಿದೆ. ಇದಕ್ಕಾಗಿ ಅವರು ಒಟ್ಟು 177 ರನ್​ಗಳಿಸಿದರೆ ಸಾಕು. ಈ ಮೂಲಕ ಅಂಡರ್-19 ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ 2ನೇ ಭಾರತೀಯ ಎನಿಸಿಕೊಳ್ಳಬಹುದು.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಜಯ್ ಝೊಲ್. ಅಂಡರ್ -19 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 1404 ರನ್​ ಗಳಿಸುವ ಮೂಲಕ ಝೊಲ್ ಟೀಮ್ ಇಂಡಿಯಾ ಪರ ಯೂತ್ ಓಡಿಐ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ದಾಖಲೆ ಮುರಿಯಲು ವೈಭವ್ ಸೂರ್ಯವಂಶಿ ಈ ಬಾರಿಯ ಟೂರ್ನಿಯ ಮೂಲಕ ಬರೋಬ್ಬರಿ 432 ರನ್​ಗಳನ್ನು ಕಲೆಹಾಕಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಮತ್ತೋರ್ವ ಆಟಗಾರ ಔಟ್..!

ಇತ್ತ ಈಗಾಗಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ವೈಭವ್ ಸೂರ್ಯವಂಶಿ ಕಡೆಯಿಂದ ಈ ಬಾರಿ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ಅಂಡರ್-19 ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

Source link

ಮನೆ ಊಟದ ವಿಷಯದಲ್ಲಿ ತೀರ್ಪು ಮಾರ್ಪಾಡು ಮಾಡಿದ ಕೋರ್ಟ್; ಪವಿತ್ರಾಗೆ ಶಾಕ್ – Kannada News | Renukaswamy Case: Pavithra Gowda’s Jail Home Food Restricted by Court

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲಿನಲ್ಲಿರೋ ಪವಿತ್ರಾ ಗೌಡಗೆ (Pavithra Gowda) ಮನೆ ಊಟ ನೀಡುವಂತೆ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಈ ಮೊದಲು ಆದೇಶ ನೀಡಿತ್ತು. ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿದೆ. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿದೆ. ಇದರಿಂದ ಪವಿತ್ರಾಗೆ ಹಿನ್ನಡೆ ಆಗಿದೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ, ಜೈಲೂಟದಿಂದ ಸಮಸ್ಯೆ ಆಗುತ್ತಿದೆ ಎಂಬುದನ್ನು ಹೈಲೈಟ್ ಮಾಡಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ, ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್‌ಪಾಯಿಸನ್ ಕೂಡ ಆಗುತ್ತಿದೆ ಎಂದು ಕೋರ್ಟ್ ಎದುರು ಹೇಳಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿತ್ತು.

ಆದರೆ, ಇದನ್ನು ಜೈಲಾಧಿಕಾರಿಗಳು ವಿರೋಧಿಸಿದ್ದರು. ಜೈಲಿನ ಊಟ ಉತ್ತಮವಾಗಿದೆ, ಶುಚಿಯಾಗಿದೆ ಎಂದು ವಾದಿಸಿದ್ದರು. ‘ಈ ವರೆಗೆ ಜೈಲಿನಲ್ಲಿ ಊಟ ತಿಂದು ಪವಿತ್ರಾ ಸೇರಿದಂತೆ ಇನ್ಯಾರೂ ಸಹ ಅಸ್ವಸ್ತಗೊಂಡಿಲ್ಲ. ಹೀಗಿರುವಾಗ ಪ್ರತ್ಯೇಕವಾಗಿ ಮನೆ ಊಟದ ಅವಶ್ಯಕತೆ ಇಲ್ಲ’ ಎಂಬುದು ಪೊಲೀಸರ ವಾದ ಆಗಿತ್ತು.

ಇದನ್ನೂ ಓದಿ: ಕೊಲೆ ಕೇಸ್ ವಿಚಾರಣೆ: ಪವಿತ್ರಾ ಗೌಡ ಮುಖದಲ್ಲಿ ಕಾಣಿಸಿತು ಸಿಕ್ಕಾಪಟ್ಟೆ ಟೆನ್ಷನ್

ಜೈಲಧಿಕಾರಿಗಳ ವಾದವು ನ್ಯಾಯಾಲಯಕ್ಕೆ ಸರಿ ಎನಿಸಿದೆ. ಹೀಗಾಗಿ, 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಿದೆ. ವಾರಕ್ಕೆ ಒಮ್ಮೆ ಮಾತ್ರ ಊಟ ನೀಡಲು ಆದೇಶ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ದರ್ಶನ್ ಅವರು ಎ2 ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟೂ 17 ಆರೋಪಿಗಳು ಇದ್ದಾರೆ. ಸದ್ಯ ಕೆಳ ಹಂತದ ಕೋರ್ಟ್​​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಿ: ಸುಪ್ರೀಂಕೋರ್ಟ್ ನಿರ್ದೇಶನ – Kannada News | GBA Elections to Be Held in June 2026: Supreme Court Orders

ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಬೆಂಗಳೂರು, ಜನವರಿ 12: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಅಡಿ ರಚನೆಯಾಗಿರುವ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುದೀರ್ಘ ಸಮಯದಿಂದ ಚಿಂತನೆ ನಡೆಯುತ್ತಲೇ ಇದೆ. ಸುಮಾರು ವರ್ಷಗಳಿಂದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆಯದೆ ಪದೇ ಪದೇ ಮುಂದೂಡಿಕೊಂಡು ಬರಲಾಗುತ್ತಿತ್ತು. ಆದರೀಗ ನಗರದ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಮಾರ್ಚ್​ 16ರೊಳಗೆ ಮತದಾರರ ಪಟ್ಟಿ ಅಂತಿಮ, ಜೂನ್ 30ರೊಳಗೆ ಚುನಾವಣೆ

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಲಿಖಿತ ದಾಖಲೆಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್​​ಮಾಲ್ಯ ಬಾಗ್ಚಿ ಅವರಿರುವ ಪೀಠವು ಹಿರಿಯ ವಕೀಲ ಎ.ಎಂ ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿತ್ತು. ಈ ಕುರಿತು ವಿಚಾರಣೆ ವೇಳೆ, ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಈಗಾಗಲೇ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ಕೋರ್ಟ್ ಸೂಚನೆ ನೀಡಿದೆ.

ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎಸ್ಎಸ್ಎಲ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ, ಜೂನ್ ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಕೋರ್ಟ್‌ಗೆ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 1:17 pm, Mon, 12 January 26

Source link

ಸಿದ್ದರಾಮಯ್ಯಗೆ ಉತ್ತರ ಕರ್ನಾಟಕದಲ್ಲೂ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಏಕಾಏಕಿ ಸಿಎಂ ಪರ ಯತ್ನಾಳ್ ಬ್ಯಾಟಿಂಗ್ – Kannada News | Siddaramaiah Has Strong Support, What Does DK Shivakumar Have? Basanagouda Yatnal’s Surprise Backing Sparks Buzz

ವಿಜಯಪುರ, ಜನವರಿ 12: ರಾಜಕಾರಣ ಹೇಗಿದೆ ಎಂದರೆ, ಶಕ್ತಿ ಪ್ರದರ್ಶನ ಇಂದು ಅನಿವಾರ್ಯವಾಗಿದೆ. ಅದನ್ನು ಮಾಡದಿದ್ದರೆ ನಾಯಕತ್ವವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ಪ್ರದರ್ಶನ ಮಾಡಲು ಅಧಿಕಾರವಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರಿಗೆ, ಸಿದ್ದರಾಮಯ್ಯ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.

ಡಿಕೆ ಶಿವಕುಮಾರ್ ಅವರಿಗೂ ಶಕ್ತಿ ಇದ್ದರೆ ಪ್ರದರ್ಶಿಸಲಿ. ಉತ್ತರ ಕರ್ನಾಟಕದಲ್ಲಿ ಡಿಕೆಶಿ ಶಕ್ತಿ ಪ್ರದರ್ಶನ ಮಾಡಲಿ ನೋಡೋಣ ಎಂದು ಯತ್ನಾಳ್ ಸವಾಲೆಸೆದರು. ಅಲ್ಲದೆ, ವಿಜಯಪುರಕ್ಕೆ ಬಂದು ಅವಮಾನ ಮಾಡಿಸಿಕೊಂಡು ಹೋಗಿದ್ದಾರೆ ಪುಣ್ಯಾತ್ಮ ಎಂದು ವ್ಯಂಗ್ಯವಾಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ – Kannada News | Indian Stock Market crash, 3pc down in 6 trading sessions, investors lose Rs 17 trillion

ನವದೆಹಲಿ, ಜನವರಿ 12: ಭಾರತದ ಷೇರು ಮಾರುಕಟ್ಟೆ (Stock Market) ಸತತವಾಗಿ ಕುಸಿಯುತ್ತಿದೆ. ಆರು ಟ್ರೇಡಿಂಗ್ ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಭಾರೀ ನಷ್ಟ ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಆರು ಸೆಷನ್​ಗಳಲ್ಲಿ 2,700 ಅಂಕಗಳನ್ನು ಕಳೆದುಕೊಂಡಿದೆ. ಅದು ಕಂಡ ನಷ್ಟ ಶೇ. 3. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ ಕೂಡ ಈ ಆರು ಸೆಷನ್​ನಲ್ಲಿ ಶೇ. 3 ಹಿನ್ನಡೆ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ 16-17 ಲಕ್ಷ ಕೋಟಿ ರೂ ನಷ್ಟವಾಗಿದೆ. ಭಾರತದ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿರುವುದು ಯಾಕೆ? ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:

ಅಮೆರಿಕದೊಂದಿಗೆ ಇನ್ನೂ ಕೈಗೂಡದ ಟ್ರೇಡ್ ಡೀಲ್

ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೂ ಕೂಡ ಅಂತಿಮಗೊಳ್ಳಲು ಸಾಧ್ಯವಾಗಿಲ್ಲ. ಶೇ 50 ಟ್ಯಾರಿಫ್ ಅನ್ನು ಸಹಿಸಿಕೊಳ್ಳಲು ಭಾರತಕ್ಕೆ ಹೆಚ್ಚು ದಿನ ಸಾಧ್ಯವಾಗದು. ಗಾಯದ ಮೇಲೆ ಬರೆ ಎಂಬಂತೆ ಅಮೆರಿಕವು ರಷ್ಯಾ ನಿಷೇಧ ಮಸೂದೆ ತರುತ್ತಿದೆ. ಇದು ಜಾರಿಯಾದರೆ ಭಾರತಕ್ಕೆ ವಿಧಿಸುವ ಟ್ಯಾರಿಫ್ ಶೇ. 500ಕ್ಕೆ ಏರಬಹುದು. ಇದು ಭಾರತೀಯ ಮಾರುಕಟ್ಟೆಯ ಉತ್ಸಾಹವನ್ನು ಕುಂದಿಸಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ವಿದೇಶೀ ಹೂಡಿಕೆಗಳ ನಿರಂತರ ಹೊರಹರಿವು

ಎಫ್​ಐಐ ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಕಳೆದ ಆರೇಳು ತಿಂಗಳಿಂದ ಹೊರಬೀಳುತ್ತಿರುವ ಟ್ರೆಂಡ್ ಇದೆ. 2025ರ ಜುಲೈನಿಂದ ಡಿಸೆಂಬರ್​ವರೆಗೆ ಎಫ್​ಐಐಗಳ ಹೊರಹರಿವು ಬರೋಬ್ಬರಿ 1.85 ಲಕ್ಷ ಕೋಟಿ ರೂ. ಜನವರಿಯಲ್ಲಿ ಈಗಾಗಲೇ 12,000 ಕೋಟಿ ರೂ ವಿದೇಶೀ ಹೂಡಿಕೆಗಳು ಹೊರಹೋಗಿವೆ. ಅಂದರೆ, ಆರೇಳು ತಿಂಗಳಲ್ಲಿ ಬಹುತೇಕ 2 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳು ಷೇರು ಮಾರುಕಟ್ಟೆಯಿಂದ ಹೊರಹೋಗಿವೆ.

ಜಾಗತಿಕ ರಾಜಕೀಯ ಅನಿಶ್ಚಿತತೆ

ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಇರಾನ್ ಸಂಘರ್ಷದ ನಂತರ ಈಗ ಅಮೆರಿಕದ ಆಕ್ರಮಣಕಾರಿ ವರ್ತನೆ ವಿಶ್ವವನ್ನು ತಲ್ಲಣಗೊಳಿಸುತ್ತಿದೆ. ವೆನಿಜುವೆಲಾದ ಅಧ್ಯಕ್ಷರನ್ನು ಸೆರೆ ಹಿಡಿದು, ಆ ದೇಶದ ನಿಯಂತ್ರಣ ತೆಗೆದುಕೊಳ್ಳಲು ಯತ್ನಿಸಿದೆ ಟ್ರಂಪ್ ಸರ್ಕಾರ. ಇದರ ಬೆನ್ನಲ್ಲೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಹೊರಟಿದೆ. ಇರಾನ್ ಮೇಲೂ ದಾಳಿ ನಡೆಸಲು ಯೋಜಿಸಿದೆ. ಇದು ಮಾರುಕಟ್ಟೆಯನ್ನು ಭಯಗೊಳಿಸಿರಬಹುದು.

ಇದನ್ನೂ ಓದಿ: ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ

ಈ ಜಾಗತಿಕ ರಾಜಕೀಯ ಅಭದ್ರ ಸ್ಥಿತಿ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡುವುದುಂಟು. ಅಂತೆಯೇ, ಚಿನ್ನ, ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಲು ಇದೇ ಪ್ರಮುಖ ಕಾರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ – Kannada News | Elderly woman gets emotional after seeing surprise birthday gift from husband

ಪ್ರತಿಯೊಬ್ಬ ಹೆಣ್ಣು ತನ್ನ ಉಸಿರು ಇರುವ ತನಕ ತನ್ನ ಗಂಡ ತನ್ನನ್ನು ಕಣ್ಣರೆಪ್ಪೆಯ ಹಾಗೆ ನೋಡಿಕೊಳ್ಳಲಿ ಎಂದು ಬಯಸುತ್ತಾಳೆ. ಅಂತಹ ಜೀವನ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಆದರೆ ಈ ಹೃದಯಸ್ಪರ್ಶಿ ದೃಶ್ಯ ನೋಡಿದಾಗ ಈ ವೃದ್ಧ ದಂಪತಿಯೂ (Elderly couple) ಯುವ ಜೋಡಿಗಳಿಗೆ ಮಾದರಿ  ಎಂದೆನಿಸುತ್ತದೆ. ವಯಸ್ಸಾದ ವ್ಯಕ್ತಿ (Old man) ತನ್ನ ಪತ್ನಿಯನ್ನು ಸಂತೋಷವಾಗಿರಿಸುವ ಸಣ್ಣ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ವೃದ್ಧರೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ. ಭಾವುಕ ಕ್ಷಣದ ಈ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

Little Letters Linked ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡುತ್ತಿರುವುದನ್ನು ಕಾಣಬಹುದು. ವಯಸ್ಸಾದ ವ್ಯಕ್ತಿಯೂ ಪುಟ್ಟದಾದ ಕೇಕ್ ಮೇಲೆ ಕ್ಯಾಂಡಲ್ ಇಟ್ಟುಕೊಂಡು ಮೆಲ್ಲನೆ ನಡೆದುಕೊಂಡು ಬಂದು ಪತ್ನಿಯ ಮುಂದೆ ಇರಿಸುತ್ತಾರೆ. ಇದನ್ನು ನೋಡುತ್ತಿದ್ದಂತೆ ವೃದ್ಧೆಯ ಮುಖವು ಖುಷಿಯಲ್ಲಿ ಅರಳುತ್ತದೆ. ಕೈ ಮುಗಿದು ಕ್ಯಾಂಡಲ್ ಆರಿಸಿ ಕೇಕ್ ಕತ್ತರಿಸಿ ಪತಿಗೂ ಕೇಕ್ ತಿನ್ನಿಸುತ್ತಾರೆ. ಈ ವೇಳೆಯಲ್ಲಿ ತನ್ನ ಮಡದಿಗಾಗಿ ತನ್ನ ಸರ್ಪ್ರೈಸ್ ಉಡುಗೊರೆಯನ್ನು ನೀಡುತ್ತಾರೆ. ಪತಿ ನೀಡಿದ ಉಡುಗೊರೆ ಬಾಕ್ಸ್ ತೆರೆಯುತ್ತಿದ್ದಂತೆ ಮೇಕಪ್ ಕಿಟ್‌ ಎನ್ನುವುದು ವೃದ್ಧೆಗೆ ತಿಳಿಯುತ್ತದೆ. ಪತಿ ನೀಡಿದ ಉಡುಗೊರೆ ನೋಡಿ ವೃದ್ಧೆಯೂ ಖುಷಿಯಾಗಿದ್ದು ಮುಖದಲ್ಲೇ ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ

ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಆದರ್ಶ ದಂಪತಿಗಳು ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಾದರಿ ಜೋಡಿಗಳು ಕಾಣಸಿಗುವುದೇ ವಿರಳ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮತ್ತೆ ಮತ್ತೆ ನೋಡಬೇಕೇನಿಸುವ ವಿಡಿಯೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:46 pm, Mon, 12 January 26

Source link

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​​ ಖರ್ಗೆ ಭೇಟಿಯಾಗಿದ್ದೇಕೆ ಡಿ.ಕೆ. ಶಿವಕುಮಾರ್​? – Kannada News | DCM DK Shivakumar Meets AICC President Mallikarjun Kharge Amidst Karnataka Political Speculation

ಬೆಂಗಳೂರು, ಜನವರಿ 12: ಡಿಸಿಎಂ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ದಿಢೀರ್ ಭೇಟಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್​​ನ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ನವೆಂಬರ್, ಡಿಸೆಂಬರ್ ಮತ್ತು ಈಗ ಜನವರಿ ತಿಂಗಳಲ್ಲೂ ಈ ಚರ್ಚೆ ಮುಂದುವರಿದಿದೆ. ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗಳಿದ್ದವು. ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಹೇಳಿಕೆಗಳು ಹಾಗೂ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಯನ್ನು ಲೀಸ್ ಆಧಾರಿತ ಸಿಎಂ ಎಂದು ಟೀಕಿಸಿದ್ದು ಇಂತಹ ರಾಜಕೀಯ ಬೆಳವಣಿಗೆಗಳಿಗೆ ಮತ್ತಷ್ಟು ಇಂಬು ನೀಡಿದ್ದವು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ: ಡಾ.ಶೆಲ್ವಪಿಳೈ ಅಯ್ಯಂಗಾರ್ – Kannada News | What Happens When Gold Treasure is Found in Lakkundi? Dr. Shalvapillai Iyengar Explains Legalities

ಗದಗ, ಜ.12: ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಕುರಿತು ಇತಿಹಾಸ ತಜ್ಞರಾದ ಡಾ.ಶೆಲ್ವಪಿಳೈ ಅಯ್ಯಂಗಾರ್ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅವರು ಭಾರತದ ನಿಧಿ ಕಾನೂನುಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಒಂದು ವೇಳೆ ಖಾಸಗಿ ಸ್ಥಳದಲ್ಲಿ ಚಿನ್ನ ದೊರೆತರೆ ಮತ್ತು ಅದು 100 ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಪಾರಂಪರಿಕ ಮೌಲ್ಯವನ್ನು ಹೊಂದಿದ್ದರೆ, ಅದನ್ನು ಭಾರತ ಸರ್ಕಾರ ವಶಪಡಿಸಿಕೊಳ್ಳುತ್ತದೆ. ದೇಶದ ಸಂವಿಧಾನವು ಇತಿಹಾಸ ಮತ್ತು ಪರಂಪರೆಯನ್ನು ಉಳಿಸುವ ಕುರಿತು ವಿಧಿಗಳನ್ನು ಹೊಂದಿರುವುದರಿಂದ, ಇಂತಹ ಐತಿಹಾಸಿಕ ಮೌಲ್ಯದ ವಸ್ತುಗಳು ಸರ್ಕಾರಕ್ಕೆ ಸೇರುತ್ತವೆ. ಯಾವುದೇ ನಿಧಿಯನ್ನು ಪತ್ತೆ ಮಾಡಿದವರು ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದರೆ, ಅದರ ಮೌಲ್ಯದ ಆಧಾರದ ಮೇಲೆ ಅವರಿಗೆ ಬಹುಮಾನ ನೀಡುವ ಅವಕಾಶ ಕಾನೂನಿನಲ್ಲಿ ಇದೆ. ಜಿಲ್ಲಾಧಿಕಾರಿಗಳು ಮೊದಲು ನೋಟಿಸ್ ಹೊರಡಿಸಿ, ಯಾರಿಗಾದರೂ ಮಾಲೀಕತ್ವದ ಹಕ್ಕುಗಳಿದ್ದರೆ ಅದನ್ನು ಸಾಬೀತುಪಡಿಸಲು ಅವಕಾಶ ನೀಡುತ್ತಾರೆ. ಆದರೆ, 100 ವರ್ಷಕ್ಕಿಂತ ಹಳೆಯದಾದ ನಿಧಿಗೆ ಮಾಲೀಕತ್ವ ಸಾಧಿಸುವುದು ಅಸಾಧ್ಯ. ಪುರಾತತ್ವಶಾಸ್ತ್ರಜ್ಞರು, ನಾಣ್ಯಶಾಸ್ತ್ರಜ್ಞರು ಮತ್ತು ಚಿನ್ನದ ಮೌಲ್ಯಮಾಪಕರು ಇದರ ಪ್ರಾಚೀನತೆ ಮತ್ತು ಮೌಲ್ಯವನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಮಹಿಳೆ ಖರೀದಿಸಿದ್ರು ಅಪೂರ್ಣ ಈಜಿಪುರ ಫ್ಲೈಓವರ್ ಮ್ಯಾಗ್ನೆಟ್! ಎಕ್ಸ್ನಲ್ಲಿ ಪೋಸ್ಟ್ ವೈರಲ್ – Kannada News | Bangalore Woman’s Incomplete Ejipura Flyover Magnet Sparks humor, X post goes viral

ಬೆಂಗಳೂರಿನ ಮಹಿಳೆ ಖರೀದಿಸಿದ್ರು ಅಪೂರ್ಣ ಈಜಿಪುರ ಫ್ಲೈಓವರ್ ಮ್ಯಾಗ್ನೆಟ್! ಎಕ್ಸ್ನಲ್ಲಿ ಪೋಸ್ಟ್ ವೈರಲ್

ಬೆಂಗಳೂರು, ಜನವರಿ 12: ಎಂಟು ವರ್ಷಗಳ ನಂತರವೂ ನಿರ್ಮಾಣ ಹಂತದಲ್ಲಿರುವ ಬೆಂಗಳೂರಿನ ಈಜಿಪುರ ಫ್ಲೈಓವರ್ ಕುರಿತ ಎಕ್ಸ್ ಪೋಸ್ಟ್ ಒಂದು ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರಿನ ಮಹಿಳೆಯೊಬ್ಬರು ಅಪೂರ್ಣ ಫ್ಲೈಓವರ್ ಅನ್ನು ಚಿತ್ರಿಸುವ ಕಸ್ಟಮ್ ಫ್ರಿಡ್ಜ್ ಮ್ಯಾಗ್ನೆಟ್ ಅನ್ನು ಖರೀದಿಸಿದ್ದು, ಅದರ ಫೋಟೋವನ್ನು X ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಬಸವನಗುಡಿ ಮತ್ತು ಅರ್ಧಂಬರ್ಧ ನಿರ್ಮಾಣವಾದ ಈಜಿಪುರ ಫ್ಲೈಓವರ್​ನ ಕಸ್ಟಮ್ ಮ್ಯಾಗ್ನೆಟ್​ನ ಫೋಟೋವನ್ನು ಹಂಚಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಅಲೆಯೆಬ್ಬಿಸದೆ. ನಾನು ಬಸವನಗುಡಿ , ಜಯನಗರ ಮತ್ತು ಬೆಂಗಳೂರು ಇವುಗಳ ನಡುವೆ ಯಾವ ಮ್ಯಾಗ್ನೆಟ್ ತೆಗೆದುಕೊಳ್ಳಲಿ ಎಂದು ಸ್ವಲ್ಪ ಯೋಚನೆ ಮಾಡಿ, ಕೊನೆಗೆ ಬಸವನಗುಡಿ ಎಂದು ನಿರ್ಧರಿಸಿದೆ ಎಂದು ಪೋಸ್ಟ್ ಮಾಡಿರುವ ಮಹಿಳೆ, ನನಗೂ ಈಜಿಪುರ ಫ್ಲೈಓವರ್‌ಗೂ ತುಂಬಾ ಹತ್ತಿರದ ಸಂಬಂಧವಿದೆ. ಹಾಗಾಗಿ ಈ ಮ್ಯಾಗ್ನೇಟ್ ಮಾಡಿಸಬೇಕಾಯಿತು ಎಂದು ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ.

ಮಹಿಳೆಯ ಎಕ್ಸ್ ಪೋಸ್​ಟ್ನಲ್ಲೇನಿದೆ?

ಆಕೆಯ ಪೋಸ್ಟ್​ಗೆ ಕಾಮೆಂಟ್​ಗಳ ಸುರಿಮಳೆಯೇ ಸುರಿದಿದ್ದು, ಕೆಲವರು ‘ಈಜಿಪುರ ಅಪೂರ್ಣ ಫ್ಲೈಓವರ್ ಅನ್ನು ರಕ್ಷಿಸಬೇಕಾಗಿದೆ. ಅದು ಬೆಂಗಳೂರಿನ ನಿಧಿ’ ಎಂದು ಬರೆದರೆ, ಇನ್ನೂ ಕೆಲವರು ‘ಒಂದು ದಿನ ಜನರು ಹಂಪಿಗೆ ಭೇಟಿ ನೀಡುವಂತೆಯೇ ಈಜಿಪುರವನ್ನು ನೋಡಲು ಬರುತ್ತಾರೆ’ ಎಂದು ತಮಾಷೆ ಮಾಡಿದ್ದಾರೆ. ಒಬ್ಬರಂತೂ ಈಜಿಪುರ ಮ್ಯಾಗ್ನೆಟ್‌ನಲ್ಲಿರುವ ಗುಂಡಿಗಳ ವಿವರವನ್ನೂ ಹೊಗಳಿದ್ದಾರೆ.

ಎರಡೇ ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆ

ಬೆಂಗಳೂರಿನಲ್ಲಿರುವ ಈಜಿಪುರ ಮೇಲ್ಸೇತುವೆಯು ಈಜಿಪುರ ಮುಖ್ಯ ರಸ್ತೆಯ ಉದ್ದಕ್ಕೂ ಇರುವ ಎತ್ತರದ ಕಾರಿಡಾರ್ ಆಗಿದ್ದು, ಇನ್ನರ್ ರಿಂಗ್ ರಸ್ತೆ, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ನಗರದ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಸಿಗ್ನಲ್-ಮುಕ್ತ ಮಾರ್ಗವಾಗಿ ಯೋಜಿಸಲಾಗಿದ್ದು, ಇದು ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿತ್ತು.

ಬದಲಾಗಿ, ಇದು ಬೆಂಗಳೂರಿನಲ್ಲೇ ಅತ್ಯಂತ ವಿಳಂಬವಾದ ಯೋಜನೆಯಾಗಿ ಮಾರ್ಪಟ್ಟಿದೆ. 2017 ರಲ್ಲಿ ಇದರ ನಿರ್ಮಾಣ ಪ್ರಾರಂಭವಾಗಿತ್ತು. ಆರಂಭದಲ್ಲಿ ಈ ಯೋಜನೆಯು ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆಗಳ ಮೇಲೆ ತಣ್ಣೀರು ಬಿದ್ದಿರುವುದು ಬೆಂಗಳೂರಿಗರ ಬೇಸರಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link