GT vs RCB: ಕಳಪೆ ಬ್ಯಾಟಿಂಗ್‌, ಫಿಲ್ಡಿಂಗ್​ಗೆ ಸೋಲಿನ ಬೆಲೆ ತೆತ್ತ ಆರ್​ಸಿಬಿ – Kannada News | IPL 2026: GT Dominates RCB in 42nd Match; Gujarat Titans Secure Easy Win in Ahmedabad

ಐಪಿಎಲ್ 2026 (IPL 2026) ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಲೀಗ್​ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಗೆದ್ದಿದ್ದರೆ, ಇದೀಗ ಎರಡನೇ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಕೇವಲ 155 ರನ್​​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಇನ್ನು 25 ಬಾಲ್​ಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ಈ ಆವೃತ್ತಿಯಲ್ಲಿ ಇದು ಆರ್​ಸಿಬಿಯ ಮೂರನೇ ಸೋಲಾದರೆ, ಇತ್ತ ಗುಜರಾತ್ ತಂಡಕ್ಕೆ 5ನೇ ಗೆಲುವಾಗಿದೆ.

ಆರ್‌ಸಿಬಿ ಬ್ಯಾಟಿಂಗ್ ವಿಫಲ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕಳಪೆ ಆರಂಭ ಪಡೆಯಿತು. ಜಾಕೋಬ್ ಬೆಥೆಲ್ ಕೇವಲ 5 ರನ್‌ಗಳಿಗೆ ಔಟಾದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ, ರಬಾಡ ಅವರ ಓವರ್‌ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಆದರೆ ಅದೇ ರಬಾಡ ಬೌಲ್ ಮಾಡಿದ ಮುಂದಿನ ಓವರ್​ನಲ್ಲಿ ಔಟಾದರು. ಪಡಿಕ್ಕಲ್ ಮತ್ತು ಪಾಟಿದಾರ್ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸಿದರು, ಆದರೆ ಆರ್‌ಸಿಬಿ ನಾಯಕ ಪಾಟಿದಾರ್ 19 ರನ್‌ಗಳಿಗೆ ಔಟಾದರು. ಜಿತೇಶ್ ಶರ್ಮಾ ಮತ್ತೊಮ್ಮೆ ನಿರಾಶೆಗೊಳಿಸಿ 1 ರನ್‌ಗೆ ಔಟಾದರು. ಟಿಮ್ ಡೇವಿಡ್ ಅವರನ್ನು ರಶೀದ್ ಖಾನ್ 9 ರನ್‌ಗೆ ಔಟ್ ಮಾಡಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ದೇವದತ್ (40 ರನ್), ರಶೀದ್ ಖಾನ್ ಅವರ ಅದ್ಭುತ ಎಸೆತದಲ್ಲಿ ಬೌಲ್ಡ್ ಆದರು. ಅಂತಿಮವಾಗಿ ಆರ್​ಸಿಬಿ 19.1 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು.

ಗಿಲ್, ಬಟ್ಲರ್ ಅದ್ಭುತ ಬ್ಯಾಟಿಂಗ್

ಗುರಿ ಬೆನ್ನಟ್ಟಿದ ಗುಜರಾತ್ ತಂಡ ಕೂಡ ಕಳಪೆ ಆರಂಭ ಪಡೆಯಿತು. ಸಾಯಿ ಸುದರ್ಶನ್ 6 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಆದರೆ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್‌ ನಡೆಸಿ ಜೋಶ್ ಹ್ಯಾಜಲ್‌ವುಡ್ ಅವರ ಮೊದಲ ಓವರ್‌ನಲ್ಲಿ 24 ರನ್ ಕಲೆಹಾಕಿದರು. ಅವರು 18 ಎಸೆತಗಳಲ್ಲಿ 3 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ 43 ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ 19 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಒಳಗೊಂಡಂತೆ 39 ರನ್ ಗಳಿಸಿದರು. ಕೊನೆಯಲ್ಲಿ, ರಾಹುಲ್ ತೆವಾಟಿಯಾ ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

GT vs RCB IPL 2026 Highlights: ಆರ್​​ಸಿಬಿ ವಿರುದ್ಧ ಸುಲಭವಾಗಿ ಗೆದ್ದ ಗುಜರಾತ್

ಆರ್​​ಸಿಬಿ ಕಳಪೆ ಫಿಲ್ಡಿಂಗ್

ಗುಜರಾತ್ ತಂಡದ ಈ ಗೆಲುವಿನಲ್ಲಿ ಆರ್​ಸಿಬಿಯ ಕಳಪೆ ಫಿಲ್ಡಿಂಗ್ ಕೂಡ ಕಾರಣವಾಯಿತು. ಶುಭ್​ಮನ್ ಗಿಲ್ ನೀಡಿದ ರನೌಟ್ ಅವಕಾಶಗಳನ್ನು ಆರ್​ಸಿಬಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗೆಯೇ ಜೋಸ್ ಬಟ್ಲರ್ ಕೇವಲ 1 ರನ್​ ಬಾರಿಸಿದ್ದಾಗ ನೀಡಿದ ಸುಲಭ ಕ್ಯಾಚ್ ಅನ್ನು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ಬಟ್ಲರ್ 39 ರನ್ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:11 pm, Thu, 30 April 26

Source link

Leave a Reply

Your email address will not be published. Required fields are marked *