IND vs ENG: ಐಪಿಎಲ್ ಸ್ಟಾರ್​ಗಳ ಬುಡ ಅಲ್ಲಾಡಿಸಿದ ಇಂಗ್ಲೆಂಡ್‌ ವೇಗಿಗಳು – Kannada News | India’s Batting Woes in England T20s: Youngsters Fail to Adapt to Pitch Conditions

ಇಂಗ್ಲೆಂಡ್‌ ಪ್ರವಾಸದಲ್ಲಿ ಬ್ಯಾಟಿಂಗ್‌ ಮರೆತವರಂತೆ ವರ್ತಿಸುತ್ತಿರುವ ಟೀಂ ಇಂಡಿಯಾ (India vs England) ಬ್ಯಾಟರ್​ಗಳು ತಂಡವನ್ನು ಸತತವಾಗಿ ಸೋಲಿನ ದವಡೆಗೆ ತಳ್ಳುತ್ತಿದ್ದಾರೆ. ಐಪಿಎಲ್​ನಲ್ಲಿ (IPL) ಸಿಕ್ಸರ್​ ಹಾಗೂ ಬೌಂಡರಿಗಳ ಮಳೆ ಸುರಿಸಿ ರನ್​ಗಳ ಶಿಖರವನ್ನೇ ಕಟ್ಟಿದ ಯುವ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ ಪಿಚ್​ಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ರನ್ ಗಳಿಸುವುದಿರಲಿ ಅವರಿಗೆ ಪಿಚ್​ನಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಎಸೆತವನ್ನು ಸಿಕ್ಸರ್​ಗಟ್ಟುವ ಮನೋಭಾವ ಹೊಂದಿರುವ ಭಾರತದ ಅಗ್ರ ಬ್ಯಾಟಿಂಗ್‌ ವಿಭಾಗ ತಂಡದ ಅವಮಾನಕರ ಸೋಲಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇಂಗ್ಲೆಂಡ್‌ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ವೈಭವ್ (15), ಕಿಶನ್ (4) ಹಾಗೂ ಅಭಿಷೇಕ್ (16) ಮತ್ತೊಮ್ಮೆ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಮತ್ತೊಮ್ಮೆ ಒತ್ತಡಕ್ಕೆ ಸಿಲುಕಿಸಿದ್ದಾರೆ.

ಮತ್ತೆ ಕೈಕೊಟ್ಟ ಅಗ್ರಕ್ರಮಾಂಕ

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಇದೀಗ ನಡೆಯುತ್ತಿರುವ 4ನೇ ಟಿ20 ಪಂದ್ಯವನ್ನು ಸೋತರೆ ಟಿ20 ಸರಣಿಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ಈ ನಿರ್ಣಾಯಕ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ ಇದೆ. ಟೀಂ ಇಂಡಿಯಾ ಗೆಲ್ಲಬೇಕಾದರೆ ಬ್ಯಾಟಿಂಗ್‌ ವಿಭಾಗ ಸಮಯೋಜಿತ ಬ್ಯಾಟಿಂಗ್‌ ಮಾಡಬೇಕಿತ್ತು. ಆದರೆ ಈ ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಸಿಕ್ಸರ್ ಸಿಡಿಸುವ ಬರದಲ್ಲಿ ವಿಕೆಟ್ ಒಪ್ಪಿಸಿದರು.

ಸಿಡಿಯದ ಸೂರ್ಯವಂಶಿ

15 ವರ್ಷದ ವೈಭವ್ ಸೂರ್ಯವಂಶಿ ಸಿಕ್ಕ ಅವಕಾಶವನ್ನು ಕೈಯಾರೆ ಕೈಚೆಲ್ಲುತ್ತಿದ್ದಾರೆ. ಸ್ವಲ್ಪ ಹೊತ್ತು ಪಿಚ್​ನಲ್ಲಿ ನೆಲೆ ನಿಲ್ಲುವ ಯೋಚನೆಯನ್ನೇ ಮಾಡದ ವೈಭವ್ ಸತತ ಮೂರನೇ ಪಂದ್ಯದಲ್ಲೂ 20 ರನ್​ಗಳ ಗಡಿ ದಾಟುವಲ್ಲಿ ಎಡವಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ವೈಭವ್ 10 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸಹಿತ 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮೂರನೇ ಟಿ20 ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿದ್ದ ವೈಭವ್ 2 ಸಿಕ್ಸರ್ ಸಹಿತ 13 ರನ್ ಬಾರಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು. ಇದೀಗ ಮೂರನೇ ಟಿ20 ಪಂದ್ಯದಲ್ಲಿ 10 ಎಸೆತಗಳನ್ನು ಎದುರಿಸಿ 15 ರನ್ ಬಾರಿಸಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಕಿಶನ್ ಕಳಪೆ ಫಾರ್ಮ್​

ವೈಭವ್ ಸೂರ್ಯವಂಶಿಗೆ ಅನುಭವದ ಕೊರತೆ ಎನ್ನುವುದರಲ್ಲಿ ಸುಳ್ಳಿಲ್ಲ. ಆದರೆ ವೈಭವ್ ಬಳಿಕ ಬರುವ ಇಶಾನ್ ಕಿಶನ್ ಕೂಡ ಬ್ಯಾಟ್ ಬೀಸುವುದಕ್ಕೆ ಭಯ ಪಡುತ್ತಿರುವುದು ಅವರ ಮುಖಭಾವದಲ್ಲೇ ಸ್ಪಷ್ಟವಾಗುತ್ತಿದೆ. ಶಾಟ್ ಆಯ್ಕೆಯಲ್ಲಿ ಸ್ಪಷ್ಟತೆ ಇಲ್ಲದ ಕಿಶನ್ ಇಂಗ್ಲೆಂಡ್‌ ವಿರುದ್ಧದ ಸರಣಿಗೂ ಮುನ್ನ ನಡೆದ ಐರ್ಲೆಂಡ್ ವಿರುದ್ಧದ ಸರಣಿಯಲ್ಲೂ ತಂಡಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನಕ್ಕೆ ಬಂದಿರಲಿಲ್ಲ. ಕಳೆದ 6 ಪಂದ್ಯಗಳಲ್ಲಿ ಕಿಶನ್ ಅವರ ಬ್ಯಾಟ್​ನಿಂದ ಒಂದೇ ಒಂದು ಅರ್ಧಶತಕ ಮೂಡಿಬರದಿರುವುದು ಅವರ ಕಳಪೆ ಬ್ಯಾಟಿಂಗ್​ಗೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ 6 ಪಂದ್ಯಗಳಲ್ಲಿ ಕಿಶನ್ ಬಾರಿಸಿರುವುದು ಕೇವಲ 79 ರನ್​ಗಳು ಮಾತ್ರ. ಅದರಲ್ಲೂ ಒಂದು ಪಂದ್ಯದಲ್ಲಿ ಕಿಶನ್ 49 ರನ್ ಬಾರಿಸಿದ್ದಾರೆ. ಅಂದರೆ ಉಳಿದ 5 ಪಂದ್ಯಗಳಿಂದ ಕಿಶನ್ ಬಾರಿಸಿರುವ ರನ್​ಗಳು ಕೇವಲ 30 ಮಾತ್ರ.

IND vs ENG: ಸತತ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್; ತಂಡದಲ್ಲಿ 2 ಬದಲಾವಣೆ

ಅಬ್ಬರಿಸದ ಅಭಿಷೇಕ್

ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್​ಗೆ ಹೋಲಿಸಿದರೆ, ಅಭಿಷೇಕ್ ಶರ್ಮಾ ಕೊಂಚ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲ. ಒಂದು ಪಂದ್ಯದಲ್ಲಿ ಅಬ್ಬರಿಸಿದರೆ, ಉಳಿದೆರಡು ಪಂದ್ಯಗಳಲ್ಲಿ ಬಹುಬೇಗನೇ ವಿಕೆಟ್ ಒಪ್ಪಿಸುತ್ತಿದ್ದಾರೆ. ಅದರಲ್ಲೂ ತಂಡಕ್ಕೆ ಅವರ ಅವಶ್ಯಕತೆ ಇದ್ದಾಗ ಅಭಿಷೇಕ್ ದೊಡ್ಡ ಹೊಡೆತಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸುತ್ತಿರುವುದು ಅವರ ಬೇಜವಾಬ್ದಾರಿಯುತ ಬ್ಯಾಟಿಂಗ್​ಗೆ ಹಿಡಿದ ಕೈಗನ್ನಡಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:06 pm, Thu, 9 July 26

Source link

Leave a Reply

Your email address will not be published. Required fields are marked *