ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನImage Credit source: vecteezy
ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರ ಬರುವುದು ತುಂಬಾನೇ ಕಷ್ಟ. ಈ ಮಾದಕ ವ್ಯಸನ (Drug addiction) ಸಮಾಜದಲ್ಲಿನ ಗಂಭೀರ ಸಮಸ್ಯೆಯಾಗಿದ್ದು, ಹದಿಹರೆಯದವರು ಮತ್ತು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ವ್ಯಸನವು ತುಂಬಾ ಹಾನಿಕಾರಕ ಅಭ್ಯಾಸವಾಗಿದ್ದು, ಇದು ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ಆರ್ಥಿಕ ಸಂಕಷ್ಟಕ್ಕೂ ಕಾರಣವಾಗುತ್ತದೆ, ಸಂಬಂಧಗಳನ್ನು ಹಾಳುಮಾಡುತ್ತದೆ ಮತ್ತು ವೃತ್ತಿಪರ ಜೀವನವನ್ನು ಸಹ ನಾಶಪಡಿಸುತ್ತದೆ. ಜನರು ಕ್ಷಣಿಕ ನೆಮ್ಮದಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ಸುಂದರ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದಾಗುವ ಈ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು, ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿವರ್ಷ ಜೂನ್ 26 ರಂದು ಅಂತಾರಾಷ್ಟ್ರೀಯ ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಇತಿಹಾಸವೇನು?
ಡಿಸೆಂಬರ್ 7, 1987 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ವಸ್ತುಗಳ ಅಕ್ರಮ ಬಳಕೆ ಮತ್ತು ಅಕ್ರಮ ಸಾಗಣೆಯನ್ನು ಎದುರಿಸಲು ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ವಿರೋಧಿ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ಜೂನ್ 26 ಅನ್ನು ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನವೆಂದು ಗೊತ್ತುಪಡಿಸಿತು. ಈ ದಿನವನ್ನು ಮೊದಲು ಜೂನ್ 26, 1989 ರಲ್ಲಿ ಆಚರಿಸಲಾಯಿತು ಮತ್ತು ಅಂದಿನಿಂದ ವಾರ್ಷಿಕವಾಗಿ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ಸಮಾಜ ಎದುರಿಸುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಗಂಭೀರ ಸಮಸ್ಯೆಯತ್ತ ಗಮನ ಸೆಳೆಯುವುದು ಈ ದಿನದ ಹಿಂದಿನ ಉದ್ದೇಶವಾಗಿದೆ.
ಇದನ್ನೂ ಓದಿ: ಒಲಿಂಪಿಕ್ ದಿನವನ್ನು ಏಕೆ ಆಚರಿಸಲಾಗುತ್ತದೆ ಅದರ ಮಹತ್ವವೇನು?
ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಮಹತ್ವವೇನು?
- ಜನರು ಮಾದಕ ವ್ಯಸನಕ್ಕೆ ಒಳಗಾಗುವುದನ್ನು ತಡೆಯುವುದು ಈ ದಿನದ ಪ್ರಮುಖು ಉದ್ದೇಶವಾಗಿದೆ.
- ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸಾಗಣೆಗೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಈ ಸಮಸ್ಯೆಯನ್ನು ಎದುರಿಸಲು ತಡೆಗಟ್ಟುವಿಕೆ, ಶಿಕ್ಷಣ, ಚಿಕಿತ್ಸೆ ಮತ್ತು ಪುನರ್ವಸತಿ ಮುಂತಾದ ಕ್ರಮಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
- ಮಾದಕ ವಸ್ತುಗಳ ಬಳಕೆಯ ಜೊತೆಗೆ, ಅಕ್ರಮ ಸಾಗಣೆಯ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ. ಈ ವಿಷಯಗಳನ್ನು ನಿಗ್ರಹಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾದಕ ವ್ಯಸನ ದಿನವನ್ನು ಆಚರಿಸಲಾಗುತ್ತದೆ.
- ಈ ಜಾಗೃತಿ ದಿನವು ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಮಾದಕ ದ್ರವ್ಯ ಮುಕ್ತ ಜಗತ್ತನ್ನು ಸೃಷ್ಟಿಸಲು ರಾಷ್ಟ್ರಗಳು ಮತ್ತು ಗುಂಪುಗಳ ನಡುವೆ ಸಂವಹನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
- ಈ ದಿನದಂದು, ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಅನೇಕ ಸಮುದಾಯಗಳು ಮಾದಕ ದ್ರವ್ಯ ಸೇವನೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಮತ್ತು ಮಾದಕ ದ್ರವ್ಯ ಮುಕ್ತ ಸಮಾಜನವನ್ನು ನಿರ್ಮಾಣ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ