ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಪ್ಲೇಆಫ್ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಟೂರ್ನಿಯ ಅಂತಿಮ ಹಣಾಹಣಿಯು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿದೆ. ಈ ಹಿಂದೆ ಐಪಿಎಲ್ನ ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರ ಮಾಡಲಾಗಿದೆ.
3 ನಗರಗಳಲ್ಲಿ 4 ಮ್ಯಾಚ್:
ಪ್ಲೇಆಫ್ ಹಂತದ ನಾಲ್ಕು ಪಂದ್ಯಗಳನ್ನು ಮೂರು ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಧರ್ಮಶಾಲಾ, ಚಂಡೀಗಢ್ ಮತ್ತು ಅಹಮದಾಬಾದ್ ನಗರಗಳಲ್ಲಿ ದ್ವಿತೀಯ ಸುತ್ತಿನ ಪಂದ್ಯಗಳು ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯವು ಧರ್ಮಶಾಲಾದಲ್ಲಿ ನಡೆದರೆ, ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯಗಳು ಚಂಡೀಗಢ್ನಲ್ಲಿ ಜರುಗಲಿದೆ. ಇನ್ನು ಫೈನಲ್ ಪಂದ್ಯಕ್ಕೆ ಅಹಮದಾಬಾದ್ ನಗರ ಆತಿಥ್ಯವಹಿಸಲಿದೆ.
- ಕ್ವಾಲಿಫೈಯರ್ 1: ಮೇ 26 (ಮಂಗಳವಾರ) | HPCA ಸ್ಟೇಡಿಯಂ | ಧರ್ಮಶಾಲಾ |
- ಎಲಿಮಿನೇಟರ್: ಮೇ 27 (ಬುಧವಾರ) | ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ಚಂಡೀಗಢ್ |
- ಕ್ವಾಲಿಫೈಯರ್ 2: ಮೇ 29 (ಶುಕ್ರವಾರ) | ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ಚಂಡೀಗಢ್ |
- ಫೈನಲ್: ಮೇ 31 (ಭಾನುವಾರ) | ನರೇಂದ್ರ ಮೋದಿ ಸ್ಟೇಡಿಯಂ | ಅಹಮದಾಬಾದ್ |
ಬೆಂಗಳೂರಿನ ಅಭಿಮಾನಿಗಳಿಗೆ ನಿರಾಸೆ:
ಪೂರ್ವ ನಿಗದಿಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ ಬಿಸಿಸಿಐ ಕೊನೆಯ ಕ್ಷಣದಲ್ಲಿ ಫೈನಲ್ ಪಂದ್ಯದ ಆತಿಥ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿದೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…
- ಶಾಸಕರ ಟಿಕೆಟ್ ಹಂಚಿಕೆ ವಿವಾದ: ಬಿಸಿಸಿಐನ ತನ್ನ ನಿರ್ಧಾರ ಬದಲಿಸಲು ಪ್ರಮುಖ ಕಾರಣವೆಂದರೆ ಸ್ಥಳೀಯ ಶಾಸಕರಿಗೆ ನೀಡಲಾಗುವ ಟಿಕೆಟ್‌ಗಳ ಹಂಚಿಕೆ. ವರದಿಗಳ ಪ್ರಕಾರ, ರಾಜ್ಯ ಸರ್ಕಾರ ಮತ್ತು ಕೆಎಸ್‌ಸಿಎ (KSCA) ನಡುವೆ ಟಿಕೆಟ್ ಕೋಟಾದ ಕುರಿತು ಭಿನ್ನಾಭಿಪ್ರಾಯಗಳು ಮೂಡಿವೆ. ಈ ರಾಜಕೀಯ ಹಸ್ತಕ್ಷೇಪ ಮತ್ತು ಟಿಕೆಟ್ ಗೊಂದಲಗಳು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಫೈನಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
- ಭದ್ರತಾ ಲೋಪ ಮತ್ತು ಸಿಸಿಟಿವಿ ವಿವಾದ: ಇತ್ತೀಚೆಗೆ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ವೇಳೆ ನಡೆದ ಭದ್ರತಾ ಲೋಪವು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಸಿಸಿಟಿವಿ ವ್ಯವಸ್ಥೆ ಮಾಡಿದ್ದ ಕಂಪೆನಿಯ ಸಿಬ್ಬಂದಿಯೇ ಸುಮಾರು 240 ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಫೈನಲ್‌ನಂತಹ ಹೈ-ಪ್ರೊಫೈಲ್ ಪಂದ್ಯಕ್ಕೆ ಇಂತಹ ಭದ್ರತಾ ಲೋಪಗಳು ದೊಡ್ಡ ಹಿನ್ನಡೆಯಾಗಿವೆ.
- ಕ್ರೀಡಾಂಗಣದ ಸುರಕ್ಷತೆ ಮತ್ತು ಮೂಲಸೌಕರ್ಯ: ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್ ಆದಾಗ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲು ಮೈದಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ನ್ಯಾ. ಜಾನ್ ಮೈಕೆಲ್ ಡಿಕುನ್ಹಾ ಅವರ ವರದಿಯು ಕ್ರೀಡಾಂಗಣದ ಕೆಲವು ವಿನ್ಯಾಸಗಳು “ಹೆಚ್ಚಿನ ಜನಸಂದಣಿಗೆ ಸುರಕ್ಷಿತವಲ್ಲ” ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸುರಕ್ಷತೆಯೂ ಬಿಸಿಸಿಐನ ಪ್ರಮುಖ ಕಾಳಜಿಯಾಗಿದೆ.
ಇದನ್ನೂ ಓದಿ: DK ಕೋಚ್ ಆಗಲು ಇವರೇ ಕಾರಣ..!
ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ನ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಅದರಂತೆ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಜರುಗಲಿದೆ.
Published On – 1:15 pm, Wed, 6 May 26