IPL 2026: ಮೂರು ವಾರ ಕಣಕ್ಕಿಳಿಯಲ್ಲ CSK ಆಟಗಾರ..! – Kannada News | CSK’s Ayush Mhatre Out for 3 Weeks

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸೋಲು-ಗೆಲುವುಗಳ ಲೆಕ್ಕಾಚಾರದೊಂದಿಗೆ ಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಯುವ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಅವರು ಹ್ಯಾಮ್‌ಸ್ಟ್ರಿಂಗ್ (ಸ್ನಾಯು ಸೆಳೆತ) ಗಾಯದ ಸಮಸ್ಯೆಯಿಂದಾಗಿ ಸುಮಾರು ಮೂರು ವಾರಗಳ ಕಾಲ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದ ವೇಳೆ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದರು. ಐದನೇ ಓವರ್‌ನಲ್ಲಿ ಎರಡನೇ ರನ್‌ಗಾಗಿ ಓಡುತ್ತಿದ್ದಾಗ ಅವರ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಯಿತು. ಈ ನೋವಿನ ನಡುವೆ ಬ್ಯಾಟ್ ಬೀಸಿದ ಆಯುಷ್ 30 ರನ್​ಗಳಿಸಿ ಔಟಾಗಿದ್ದರು.

ಇದೀಗ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಈ ವರದಿಯಲ್ಲಿ ಗಾಯವು ಗಂಭೀರವಾಗಿ ಎಂಬುದು ತಿಳಿದು ಬಂದಿದೆ. ಹೀಗಾಗಿ ಆಯುಷ್ ಮ್ಹಾತ್ರೆಗೆ ಮೂರು ವಾರಗಳ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಸಿಎಸ್​ಕೆ ತಂಡಕ್ಕೆ ಹಿನ್ನಡೆ:

ಈ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ ಅದ್ಭುತ ಲಯದಲ್ಲಿದ್ದರು. ಆಡಿರುವ 6 ಪಂದ್ಯಗಳಲ್ಲಿ 177ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿದ್ದರು. ಇದೀಗ ಉತ್ತಮ ಫಾರ್ಮ್​ನಲ್ಲಿರುವ ಆಟಗಾರನೇ ಗಾಯಗೊಂಡು ಹೊರ ನಡೆಯುತ್ತಿರುವುದು ಸಿಎಸ್​ಕೆ ಪಾಲಿಗೆ ಹಿನ್ನಡೆಯಾಗಲಿದೆ.

ಬದಲಿ ಆಟಗಾರ ಯಾರು?

ಆಯುಷ್ ಮ್ಹಾತ್ರೆ ಅವರ ಅಲಭ್ಯತೆಯಲ್ಲಿ ತಂಡವು ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಗಾಯದ ಸಮಸ್ಯೆಯಲ್ಲಿ ಸಿಎಸ್‌ಕೆ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿಗಳಾದ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಈಗಾಗಲೇ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್​ನೆಸ್ ಸಮಸ್ಯೆಗೀಡಾಗಿದ್ದಾರೆ.

ಇದನ್ನೂ ಓದಿ: ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..!

ಇದೀಗ ಆಯುಷ್ ಮ್ಹಾಮ್ಹಾತ್ರೆ ಅವರ ಗಾಯವು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮ್ಯಾನೇಜ್‌ಮೆಂಟ್‌ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್‌ಕೆ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎಲ್​ಕ್ಲಾಸಿಕೊ ಪಂದ್ಯವಾಡಲಿದೆ.

Source link

Leave a Reply

Your email address will not be published. Required fields are marked *