National Dengue Day 2026: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ – Kannada News | National Dengue Day 2026: Why celebrate National Dengue Day? Here’s the information

ರಾಷ್ಟ್ರೀಯ ಡೆಂಗ್ಯೂ ದಿನImage Credit source: Freepik

ಡೆಂಗ್ಯೂ (Dengue) ಜ್ವರ ಈಡೀಸ್‌ ಈಜಿಪ್ಟಿ ಜಾತಿಯ ಹೆಣ್ಣು ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಗಂಭೀರ ಕಾಯಿಲೆಯಾದ್ದು, ಇದರ ಸಣ್ಣ ನಿರ್ಲಕ್ಷ್ಯ ಕೂಡ ಜೀವಕ್ಕೆ ಮಾರಕವಾಗಿದೆ. ಈ ಜ್ವರದ ಲಕ್ಷಣ ಆರಂಭದಲ್ಲಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಆನಂತರದಲ್ಲಿ ವಿಪರೀತ ತಲೆನೋವು, ಅತಿಯಾದ ಮೈಕೈ ನೋವು, ಕೀಲು ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಜ್ವರದ ರೋಗಲಕ್ಷಣಗಳನ್ನು ಆರಂಭದಲ್ಲಿ ತಿಳಿದುಕೊಂಡು ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳದಿದ್ದರೆ, ಶ್ವಾಸಕೋಶ, ಲಿವರ್‌ ಇತ್ಯಾದಿ ದೇಹದ ಪ್ರಮುಖ ಅಂಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಇದು ಜೀವಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮಾರಣಾಂತಿಕ ಕಾಯಿಲೆ, ಇದರ ರೋಗ ಲಕ್ಷಣಗಳು ಹಾಗೂ ಸೂಕ್ತ ರೋಗ ನಿರ್ಣಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಡೆಂಗ್ಯೂ ದಿನದ ಇತಿಹಾಸ ಹಾಗೂ ಮಹತ್ವವೇನು?

ರಾಷ್ಟ್ರೀಯ ಡೆಂಗ್ಯೂ ದಿನವು ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಾಗಿದ್ದು, ಡೆಂಗ್ಯೂ ವಿರೋಧಿ ದಿನ ಅಥವಾ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರತಿ ವರ್ಷ ಮೇ 16 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವೇ ರೋಗ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಡೆಂಗ್ಯೂ ತಡೆಗಟ್ಟುವ ಬಗೆಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುವ ಉದ್ದೇಶವೇನು?

  • ಡೆಂಗ್ಯೂ ಎಂಬ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ಡೆಂಗ್ಯೂ ತಡೆಗಟ್ಟುವ ಕ್ರಮಗಳು, ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ಸೂಕ್ತ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ರಾಷ್ಟ್ರೀಯ ಡೆಂಗ್ಯೂ ದಿನದಂದು, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಡೆಂಗ್ಯೂ ಲಕ್ಷಣಗಳು, ಅದರ ಹರಡುವಿಕೆ ಮತ್ತು ತಡೆಗಟ್ಟುವ ಕ್ರಮಗಳನ್ನು ಚರ್ಚಿಸಲಾಗುತ್ತದೆ.

ಡೆಂಗ್ಯೂ ಜ್ವರದ ಲಕ್ಷಣಗಳೇನು?

ಡೆಂಗ್ಯೂ ಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಬಹುದು. ಸೋಂಕು ತಗುಲಿದ ನಾಲ್ಕರಿಂದ ಏಳು ದಿನಗಳಲ್ಲಿ ಸೌಮ್ಯ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.  ತಲೆನೋವು, ಜ್ವರ, ಸ್ನಾಯು, ಮೂಳೆ ಮತ್ತು ಕೀಲು ನೋವು, ವಾಂತಿ, ಕಣ್ಣು ನೋವು ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ಜ್ವರ ಉಲ್ಬಣಗೊಂಡರೆ, ದೇಹದಲ್ಲಿ ಪ್ಲೇಟ್‌ಲೆಟ್ ಎಣಿಕೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದಲ್ಲದೆ ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಮೂತ್ರ, ಮಲ ಅಥವಾ ವಾಂತಿಯಲ್ಲಿ ರಕ್ತ, ಉಸಿರಾಟದ ತೊಂದರೆ, ಸುಸ್ತು, ಕಿರಿಕಿರಿ ಅಥವಾ ಚಡಪಡಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿಯಾಗಬಹುದು ಗೊತ್ತಾ? ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಡೆಂಗ್ಯೂ ತಡೆಗಟ್ಟಲು ಕ್ರಮಗಳೇನು?

  • ಕೂಲರ್‌ಗಳು ಮತ್ತು ನಿಮ್ಮ ಮನೆಯ ಇತರ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
  • ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಿ.
  • ನಿಮ್ಮ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆದಿಡುವುದನ್ನು ತಪ್ಪಿಸಿ.
  • ಸೊಳ್ಳೆಗಳಿಂದ ದೂರವಿರಲು ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ.
  • ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ತಿಳಿ ಬಣ್ಣದ ಬಟ್ಟೆಗಳು ಶಾಖದಿಂದ ಮಾತ್ರವಲ್ಲದೆ ಸೊಳ್ಳೆಗಳಿಂದಲೂ ರಕ್ಷಿಸುತ್ತವೆ. ಸೊಳ್ಳೆಗಳು ಗಾಢ ಬಣ್ಣಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ.
  • ಚರಂಡಿಗಳು, ಹೂವಿನ ಕುಂಡಗಳು ಮತ್ತು ಇತರ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಅವುಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *