ಶಿವಮೊಗ್ಗ, ಏಪ್ರಿಲ್ 13: ಎದುರಿಗೆ ತೆರಳುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕುಮದ್ವತಿ ಕಾಲೇಜು ಮುಂಭಾಗ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ವಿದ್ಯುತ್ ಕಂಬಕ್ಕೆ ಗುದ್ದಿ ಬಸ್ ಪಲ್ಟಿಯಾಗಿದ್ದು, ಹಂಪ್ ತಪ್ಪಿಸಲು ಯತ್ನಿಸಿದ ಬೈಕ್ ಸವಾರ ಎಡ ಮತ್ತು ಬಲ ಎರಡೂ ಕಡೆ ಒಂದೇ ಸಮನೆ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಬೆಳಗಾವಿ, ಏಪ್ರಿಲ್ 13: ಜಿಲ್ಲೆಯಲ್ಲಿ ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ತುರಮರಿ ಗ್ರಾಮದ ಗರ್ಭಿಣಿಯಾದ ಈರಮ್ಮ ಈರಪ್ಪ ಶಿಗೀಹಳ್ಳಿ (21) ಅವರನ್ನು ಏಪ್ರಿಲ್ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವಿನ ಬಳಿಕ ಮಧ್ಯರಾತ್ರಿ ಸಹಿ ಪಡೆದು ದೇಹವನ್ನು ಕಳುಹಿಸಲು ಯತ್ನಿಸಿದ್ದಾಗಿ ತಿಳಿದುಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದು, ಎಪಿಎಂಸಿ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರತೀಯ (Indian) ಯುವಕ ಯುವತಿಯರು ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ (foreign) ತೆರಳುತ್ತಾರೆ, ಅಲ್ಲೇ ಸೆಟ್ಲ್ ಆಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಭಾರತ ಬಿಡಲು ಮುಂದಾಗಿದ್ದಾರೆ. 10 ಕೋಟಿ ರೂ ಉಳಿತಾಯ ಹೊಂದಿರುವ ವ್ಯಕ್ತಿಯೂ, ಭಾರತದ ಬಗೆಗಿನ ನನ್ನ ನಿಷ್ಠೆ ಮಿತಿಯನ್ನು ಮೀರಿದೆ ಎಂದು ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅನಾಮಧೇಯ ಕೆಲಸದ ವೇದಿಕೆ ಬ್ಲೈಂಡ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು 10 ಕೋಟಿ ಉಳಿಸಲಾಗಿದೆ ಮತ್ತು ನಾನು ಭಾರತ ಎಂಬ ಸರ್ಕಸ್ ಮುಗಿಸಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ನನ್ನ 50ರ ಹರೆಯದಲ್ಲಿ 10 ಕೋಟಿ ಆಸ್ತಿ ಇರುವುದು ಗೆದ್ದಂತೆ ಭಾಸವಾಗಬೇಕು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬ್ಯುರೊ ಅಥವಾ ದೆಹಲಿಯಲ್ಲಿ ವಾಸಿಸುವುದು ಈಗ ಕೇವಲ ದೈನಂದಿನ ಹೋರಾಟವಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ
ಇಲ್ಲಿನ ಉದ್ದನೆ ಸರತಿ ಸಾಲುಗಳು, ಅಸ್ತವ್ಯಸ್ತವಾಗಿರುವ ರಸ್ತೆಗಳು ಮತ್ತು ಶೂನ್ಯ ಸೇವೆಯೊಂದಿಗೆ ಹೆಚ್ಚಿನ ತೆರಿಗೆಯಿದೆ. ನಿರಂತರ ಶಬ್ದ, ಕೊಳಕು ಚರಂಡಿಗಳು ಮತ್ತು ವೈಯಕ್ತಿಕ ಸ್ಥಳದ ಸಂಪೂರ್ಣ ಕೊರತೆಯ ನಡುವೆ, ಭಾರತದ ಈ ಪರಿಕಲ್ಪನೆಗೆ ನನ್ನ ನಿಷ್ಠೆ ಅಂತಿಮವಾಗಿ ಅದರ ಮಿತಿಯನ್ನು ತಲುಪಿದೆ ಎಂದು ನಾನು ಅರಿತುಕೊಂಡೆ. ಈಗ ನಾನು ನಿವೃತ್ತರಾಗಲು ಶಾಂತಿಯುತ ಸ್ಥಳವನ್ನು ಹುಡುಕುತ್ತಿದ್ದೇವೆ ಎಂದಿದ್ದಾರೆ.
ಪ್ರತಿಯೊಂದು ಮೂಲೆಯಲ್ಲೂ ಪಾನ್ ಕಲೆಗಳು ಮತ್ತು ಪ್ರತಿ ಮಾಲ್‌ನಲ್ಲಿ ದುಬಾರಿ ಜಾಗತಿಕ ಬ್ರ್ಯಾಂಡ್‌ಗಳ ಕಲೆಗಳು, ಕಾಣದ ಶಾಂತಿಯುತ ನಿವೃತ್ತಿ ಜೀವನವನ್ನು ನಾನು ಬಯಸುತ್ತೇನೆ. ಇತರರು ಸಹ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದೀರಾ ಅಥವಾ ಈ ವಹಿವಾಟಿನ ಜಂಜಾಟದಿಂದ ಬೇಸತ್ತಿದ್ದೀರಾ ಎಂದು ಕೇಳಿದ್ದಾರೆ.
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಎಲ್ಲಿದ್ದೀರಿ ಅಲ್ಲಿ ಸಂತೋಷವಾಗಿಲ್ಲದಿದ್ದರೆ, ಬೇರೆಲ್ಲಿಯೂ ನೀವು ಸಂತೋಷವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಹಿಮಾಚಲ ಪ್ರದೇಶ, ಉತ್ತರಾಖಂಡ ಅಥವಾ ಈಶಾನ್ಯದಲ್ಲಿರುವ ಗಿರಿಧಾಮಕ್ಕೆ ತೆರಳಿ ಶಾಂತವಾಗಿರಿ. ಅಲ್ಲಿ ವಾಯು ಮಾಲಿನ್ಯವಿಲ್ಲ, ಕಡಿಮೆ ವಾಯು ಗುಣಮಟ್ಟ ಸೂಚ್ಯಂಕ, ರಸ್ತೆಗಳಲ್ಲಿ ಕಸವಿಲ್ಲ, ಸಂಜೆಗಳು ಶಾಂತವಾಗಿರುತ್ತವೆ ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬರು, ನಿವೃತ್ತಿ ಹೊಂದಲು ಕೇರಳ ಅತ್ಯುತ್ತಮ ಸ್ಥಳ. ಕೇರಳದಲ್ಲಿ ಯಾವುದೇ ತಂತ್ರಜ್ಞಾನ ಕಂಪನಿಯ ಪ್ರಧಾನ ಕಚೇರಿ ಇಲ್ಲ. ಹೆಚ್ಚಾಗಿ ಸಣ್ಣ ಕಂಪನಿಗಳು. ಆದ್ದರಿಂದ, ಬೆಂಗಳೂರು ದೆಹಲಿಗೆ ಹೋಲಿಸಿದರೆ ಮನೆಗಳು ಮತ್ತು ವೆಚ್ಚಗಳು ಅಗ್ಗವಾಗಿವೆ. ಆದರೆ ಬಹುತೇಕ ಎಲ್ಲರೂ ಶ್ರೀಮಂತರಾಗಿದ್ದು, ಅವರೆಲ್ಲರೂ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದ ಜನದಟ್ಟಣೆಯ ಮನೆಗಳಿಗಿಂತ ಭಿನ್ನವಾಗಿ ಮನೆಗಳಿದ್ದು, ಮುಂಭಾಗ ದೊಡ್ಡದಿದ್ದು, ಹಿತ್ತಲುಗಳು ಅಗಲವಾಗಿವೆ. ತಂಪಾದ, ಉತ್ತಮ, ತಾಜಾ ಗಾಳಿ. ನೀವು ನಗರದಲ್ಲಿ ವಾಸಿಸುತ್ತಿದ್ದರೆ, ನೀವು ವಾಸಿಸಲು ಬೇಕಾದ ಎಲ್ಲವನ್ನೂ ನೀವು ಪಡೆಯುತ್ತೀರಿ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 50 ರನ್ ಬಾರಿಸಿದರೆ, ಫಿಲ್ ಸಾಲ್ಟ್ 78 ರನ್ ಸಿಡಿಸಿದರು. ಇನ್ನು ರಜತ್ ಪಾಟಿದಾರ್ 53 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಆರ್‌ಸಿಬಿ 20 ಓವರ್ಗಳಲ್ಲಿ 240 ರನ್ ಕಲೆಹಾಕಿತು.
241 ರನ್ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್‌ಸಿಬಿ ತಂಡ 18 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಂಡದ ಪ್ರದರ್ಶನ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಈ ಗೆಲುವಿಗೆ ಮುಖ್ಯ ಕಾರಣ ‘ಸ್ಪಷ್ಟತೆ’. ನಮ್ಮ ಆಟಗಾರರಲ್ಲಿ ಅವರ ಜವಾಬ್ದಾರಿಯ ಬಗ್ಗೆ ಸ್ಪಷ್ಟವಾದ ಅರಿವಿತ್ತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ್ದು ನಮ್ಮನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತು. ಆ ಬಳಿಕ ನಾನು ಹಾಗೂ ಟಿಮ್ ಡೇವಿಡ್ ಸ್ಫೋಟಕ ಇನಿಂಗ್ಸ್ ಆಡಿದ ಕಾರಣ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಅಂದರೆ ದೊಡ್ಡ ಮೊತ್ತ ಪೇರಿಸುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇತ್ತು. ಈ ಸ್ಪಷ್ಟ ಗುರಿಯಿಂದಾಗಿ ನಾನು ಗೆದ್ದಿದ್ದೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇದೇ ವೇಳೆ ತನ್ನನ್ನು ಸ್ಪಿನ್ ಬ್ಯಾಟರ್ ಎಂದು ಕರೆಯುವ ಬಗ್ಗೆ ಸ್ಪಷ್ಟನೆ ನೀಡಿದ ರಜತ್ ಪಾಟಿದಾರ್, ಜನರು ನಾನು ಸ್ಪಿನ್ ಆಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ. ಆದರೆ ಸತ್ಯ ಏನೆಂದರೆ ನನಗೆ ವೇಗದ ಬೌಲಿಂಗ್ ಎದುರಿಸುವುದೆಂದರೆ ತುಂಬಾ ಪ್ರೀತಿ. ಅದರಲ್ಲೂ ವಾಂಖೆಡೆಯಂತಹ ವೇಗದ ಪಿಚ್‌ಗಳಲ್ಲಿ ವೇಗಿಗಳನ್ನು ಎದುರಿಸುವುದು ಅದ್ಭುತ ಅನುಭವ ಎಂದು ತಿಳಿಸಿದ್ದಾರೆ.
ಮುಂಬೈ ಅಂಗಳದ ಬಗ್ಗೆ ಮಾತನಾಡಿದ ಪಾಟಿದಾರ್, ಇಲ್ಲಿನ ವಾತಾವರಣ ಮತ್ತು ತುಂಬಿ ತುಳುಕುವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಮುಂದೆ ಆಡುವುದು ಒಂದು ವಿಭಿನ್ನ ಭಾವನೆ ನೀಡುತ್ತದೆ. ಇಲ್ಲಿನ ಬೆಂಬಲ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಒಟ್ಟಾರೆಯಾಗಿ, ಸಾಂಘಿಕ ಹೋರಾಟದ ಫಲವಾಗಿ ಆರ್‌ಸಿಬಿ ತಂಡವು ಮತ್ತೊಂದು ಸ್ಮರಣೀಯ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಅಂದಹಾಗೆ ಈವರೆಗೆ ಆಡಿದ 4 ಮ್ಯಾಚ್ಗಳಲ್ಲಿ 3 ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ನವದೆಹಲಿ, ಏಪ್ರಿಲ್ 13:ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಕೇವಲ ಪಾಲುದಾರರಲ್ಲ, ಬದಲಾಗಿ ಅವರು ನಿರ್ಧಾರ ಕೈಗೊಳ್ಳುವ ನಾಯಕಿಯರಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾರಿ ಶಕ್ತಿ ವಂದನ ಸಮ್ಮೇಳನದಲ್ಲಿ ಮಾತನಾಡಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾದ ‘ನಾರಿ ಶಕ್ತಿ ವಂದನ ಕಾಯ್ದೆ’ ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ಬದಲಾವಣೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು (ಮೂರನೇ ಒಂದು ಭಾಗ) ಮೀಸಲಾತಿ ನೀಡುವ ಈ ಕಾಯ್ದೆಯು ಈಗ ಅನುಷ್ಠಾನದ ಹಂತಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ಏಪ್ರಿಲ್ 16 ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಇಂದಿನ ಸಮ್ಮೇಳನವು ಭದ್ರ ಬುನಾದಿ ಹಾಕಲಿದೆ.ವಿಜ್ಞಾನ, ಕ್ರೀಡೆ, ಉದ್ಯಮಶೀಲತೆ, ಕಲೆ ಮತ್ತು ಮಿಲಿಟರಿ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರನ್ನು ಒಂದೇ ವೇದಿಕೆಗೆ ತರುವುದು.2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯಲ್ಲಿ ಮಹಿಳಾ ಸಬಲೀಕರಣವನ್ನು ಕೇಂದ್ರ ಸ್ತಂಭವಾಗಿ ಸ್ಥಾಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು, ಏಪ್ರಿಲ್ 13: ಅಕ್ಕಪಕ್ಕದ ಮನೆಗಳ ನಡುವೆ ಬೆಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶೇಷಾದ್ರಿಪುರದಲ್ಲಿ (Bengaluru) ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದ ನಾಲ್ಕು ಮರಿಗಳು ಜನಿಸಿದ್ದು, ಈ ವಿಚಾರವೇ ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.
ಅತಿರೇಕಕ್ಕೆ ತಿರುಗಿದ ಗಲಾಟೆ
ತಮ್ಮ ಮನೆಯ ಹೆಣ್ಣು ಬೆಕ್ಕಿನ ಜೊತೆ ನಾಲ್ಕು ಮರಿಗಳೂ ಮನೆಗೆ ಸೇರಿರುವುದನ್ನು ಕಂಡ ಮಾಲೀಕರು ಪಕ್ಕದ ಮನೆಯವರೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ಮರಿಗಳು ಗಂಡು ಬೆಕ್ಕಿನದ್ದೇ ಎಂದು ವಿವಾದಕ್ಕಿಳಿದ ಹೆಣ್ಣು ಬೆಕ್ಕಿನ ಮಾಲೀಕರು ಮರಿಗಳನ್ನು ಗಂಡು ಬೆಕ್ಕಿನ ಮನೆಯ ಮುಂದೆ ಬಿಸಾಡಿ ಜಗಳ ನಡೆಸಿದ್ದಾರೆ ಎನ್ನಲಾಗಿದೆ.ವಿವಾದದ ವೇಳೆ ಗಂಭೀರ ಆರೋಪಗಳೂ ಕೇಳಿಬಂದಿದ್ದು, ಹೆಣ್ಣು ಬೆಕ್ಕಿನ ಮನೆಯವರು ಆಕ್ರೋಶದಿಂದ ನಿಮ್ಮ ಮಕ್ಕಳಿಗೆ ಆಸಿಡ್ ಹಾಕುತ್ತೀನಿ ಎಂದು ಅತಿರೇಕದ ಮಾತನ್ನಾಡಿದ್ದಾರೆಂದು ಪಕ್ಕದ ಮನೆಯವರು ಆರೋಪಿಸಿದ್ದಾರೆ.
ಈ ಗಲಾಟೆಯ ನಡುವೆ ಮರಿಗಳು ತಾಯಿಯಿಂದ ದೂರವಾಗಿ ದಿಕ್ಕಾಪಾಲಾಗಿದ್ದು, ತಾಯಿ ಬೆಕ್ಕು ತನ್ನ ಮರಿಗಳನ್ನು ಹುಡುಕುತ್ತ ನರಳುತ್ತಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಗಂಡು ಬೆಕ್ಕಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶೇಷಾದ್ರಿಪುರ ಪೊಲೀಸರು ಎರಡೂ ಪಕ್ಷಗಳನ್ನು ಸಮಾಧಾನಪಡಿಸಿ ಜಗಳವನ್ನು ಶಮನಗೊಳಿಸಿದ್ದಾರೆ.
ದಾವಣಗೆರೆ, ಏಪ್ರಿಲ್ 13: ಹಾಸನದಿಂದ ಚಿಕ್ಕೋಡಿಗೆ ‘ಪವರ್ ಕೂಲ್’ ಬಿಯರ್ ಟಿನ್ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಬಳಿ ನಡೆದಿದೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಲಾರಿ, ಪಕ್ಕದ ಅಡಿಕೆ ತೋಟಕ್ಕೆ ಉರುಳಿ ಬಿದ್ದಿದೆ. ಅಪಘಾತದ ಭೀಕರತೆಗೆ ಲಾರಿಯಲ್ಲಿದ್ದ ಸಾವಿರಾರು ಬಿಯರ್ ಟಿನ್‌ಗಳು ತೋಟದಾದ್ಯಂತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿದ್ದ ಬಾಟಲಿಗಳನ್ನು ಮತ್ತೊಂದು ಲಾರಿಗೆ ವರ್ಗಾಯಿಸಿದರು. ಕತ್ತಲೆಯ ಲಾಭ ಪಡೆದು ಸ್ಥಳೀಯರು ಕೆಲ ಬಿಯರ್ ಬಾಕ್ಸ್‌ಗಳನ್ನು ಹೊತ್ತೊಯ್ದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮರೆನಾ, ಏಪ್ರಿಲ್ 13: ಅಪ್ರಾಪ್ತ ಬಾಲಕಿಯೊಬ್ಬಳು ಬಾಯ್ಫ್ರೆಂಡ್ನನ್ನು ಮದುವೆಯಾಗಲು ತನ್ನ ಹೆತ್ತವರಿಗೆ ವಿಷ(Poison) ಉಣಿಸಿರುವ ಘಟನೆ ಮಧ್ಯಪ್ರದೇಶದ ಮರೆನಾದಲ್ಲಿ ನಡೆದಿದೆ. ಮನುಷ್ಯತ್ವಕ್ಕೇ ಕಪ್ಪುಚುಕ್ಕಿ ಇಡುವಂತಹ ಘಟನೆಯೊಂದು ನಡೆದಿದೆ. ಪ್ರೀತಿಯ ಅಮಲಿನಲ್ಲಿ ಕುರುಡಾದ ಮಗಳೊಬ್ಬಳು, ಹೆತ್ತವರನ್ನೇ ಮುಗಿಸಲು ಸಂಚು ರೂಪಿಸಿದ ಕರಾಳ ಕಥೆ ಇಲ್ಲಿದೆ.
ಹೆತ್ತವರು ಮಗಳ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ, ಚಪಾತಿಯಲ್ಲಿ ಇಲಿ ಪಾಷಾಣ ಬೆರೆಸಿ ಪೋಷಕರಿಗೆ ನೀಡಿರುವ ಘಟನೆ ಬೆಳಕಿಗೆ . ಮೊರೆನಾ ಜಿಲ್ಲೆಯ ಪೋರ್ಸಾ ಎಂಬಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಗೆಳೆಯನ ಜೊತೆ ಸೇರಿ ತಂದೆ-ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ತನ್ನ ಪ್ರೇಮಕ್ಕೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೋ ಏನೋ, ಈ ಬಾಲಕಿ ತನ್ನ ಗೆಳೆಯ ಸುದಾಮನ ಜೊತೆ ಸೇರಿ ಕ್ರೂರ ಯೋಜನೆಯೊಂದನ್ನು ರೂಪಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ತಾನೇ ಅಡುಗೆ ಮಾಡುವ ಜವಾಬ್ದಾರಿ ವಹಿಸಿಕೊಂಡ ಬಾಲಕಿ, ಚಪಾತಿಯ ಹಿಟ್ಟಿನಲ್ಲಿ ಇಲಿ ವಿಷವನ್ನು ಬೆರೆಸಿದ್ದಾಳೆ. ಇದನ್ನು ತಿಂದ ತಾಯಿ ಮಿಥಿಲೇಶ್ ಮತ್ತು ತಂದೆ ಗಬ್ಬರ್ ಪ್ರಜಾಪತಿ ಅವರ ಆರೋಗ್ಯ ತಕ್ಷಣವೇ ಹದಗೆಟ್ಟಿದೆ. ಸದ್ಯ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದ್ದು, ಮೊರೆನಾದಿಂದ ಗ್ವಾಲಿಯರ್‌ನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.
ಈ ಪ್ರಕರಣವು ಆರಂಭದಲ್ಲಿ ಕೇವಲ ಫುಡ್ಪಾಯ್ಸನ್ನಂತೆ ತೋರಿತ್ತು. ಆದರೆ ಪೊಲೀಸರಿಗೆ ಸಿಕ್ಕ ಒಂದು ಆಡಿಯೋ ಕ್ಲಿಪ್ ಇಡೀ ಕಥೆಯನ್ನೇ ಬದಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಡಿಯೋದಲ್ಲಿ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮ ಪರಸ್ಪರ ಸಂಚು ಹೂಡುತ್ತಿರುವುದು ಸ್ಪಷ್ಟವಾಗಿದೆ.
ಹತ್ತಿರದಲ್ಲೇ ಗೊಬ್ಬರದ ಅಂಗಡಿ ಇದೆ, ಅಲ್ಲಿಂದ ಇಲಿ ವಿಷ ತಂದಿಟ್ಟುಕೊ. ಇವತ್ತು ನಾನೇ ರೊಟ್ಟಿ ಮಾಡುತ್ತಿದ್ದೇನೆ, ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ರೊಟ್ಟಿಯಲ್ಲಿ ವಿಷ ಬೆರೆಸಿ ಅವರಿಗೆ ತಿನ್ನಿಸಿಬಿಡುತ್ತೇನೆ ಎಂದು ಆಕೆ ಹೇಳಿದ್ದಳು. ಈ ಒಂದು ಸಂಭಾಷಣೆ ಪೊಲೀಸರ ಕೈಗೆ ಸಿಕ್ಕ ನಂತರವೇ ಮಗಳ ಕ್ರೂರ ಮುಖ ಅನಾವರಣಗೊಂಡಿತು.
ಪೋಷಕರಾದ ಮಿಥಿಲೇಶ್ ಮತ್ತು ಗಬ್ಬರ್ ಪ್ರಜಾಪತಿ ಅವರು ಪ್ರಾಣಾಪಾಯದಿಂದ ಪಾರಾದ ನಂತರ ಪೋರ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಡಿಯೋ ಸಾಕ್ಷ್ಯ ಮತ್ತು ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಅಪ್ರಾಪ್ತ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ಹೆತ್ತವರನ್ನೇ ಬಲಿ ಕೊಡಲು ಹೊರಟ ಮಗಳ ಈ ಕೃತ್ಯ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ. ಸಂಬಂಧಗಳ ನಡುವಿನ ನಂಬಿಕೆ ಎಷ್ಟು ಶಿಥಿಲವಾಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿಯಂತಿದೆ.
ನಟ ಅಕ್ಷಯ್ ಕುಮಾರ್ ಅವರು ಇಂದು ಸ್ಟಾರ್ ಹೀರೋ. ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ಭಾರತದ ಹೊರಗೆಯೂ ತುಂಬಾ ದೊಡ್ಡ ಅಭಿಮಾನಿ ಬಳಗ ಇದೆ. 2003ರ ವರ್ಷ ನಟನಿಗೆ ಮಾತ್ರವಲ್ಲದೆ ಚಿತ್ರರಂಗಕ್ಕೂ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ವರ್ಷ, ನಟಿಯರಾದ ಲಾರಾ ದತ್ ಮತ್ತು ಪ್ರಿಯಾಂಕಾ ಚೋಪ್ರಾ ‘ಅಂದಾಜ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಲಾರಾ ಅವರು ಅಕ್ಷಯ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ.
‘ಪ್ರಿಯಾಂಕಾ ಮತ್ತು ನಾನು ಒಟ್ಟಿಗೆ ಚಿತ್ರರಂಗಕ್ಕೆ ಬಂದೆವು. ಆಗ ನಾವಿಬ್ಬರೂ ತುಂಬಾ ಚಿಕ್ಕವರಾಗಿದ್ದೆವು. ಆದರೆ ಕನಸು ದೊಡ್ಡದಾಗಿತ್ತು. ದರೆ ನಮಗೆ ಸರಿಯಾದ ಮಾರ್ಗವನ್ನು ತೋರಿಸಲು ಗಾಡ್‌ಫಾದರ್ ಇರಲಿಲ್ಲ. ಆದ್ದರಿಂದ ನಮ್ಮ ಲಾಭವನ್ನು ಪಡೆಯುವ ಬದಲು, ಅಕ್ಷಯ್ ಕುಮಾರ್ ನಮಗೆ ಅಣ್ಣನಂತೆ ದಾರಿ ತೋರಿಸಿದರು’ ಎಂದಿದ್ದಾರೆ ಲಾರಾ.
‘ನೀವು ಬಾಲಿವುಡ್‌ಗೆ ಹೊಸಬರಾದಾಗ, ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ತುಂಬಾ ಕಷ್ಟ. ಅಕ್ಷಯ್ ನಮ್ಮ ಅಸಹಾಯಕತೆ ಅಥವಾ ಅನನುಭವದ ಲಾಭವನ್ನು ಎಂದಿಗೂ ಪಡೆಯಲಿಲ್ಲ. ಇದಕ್ಕೆ ವಿರುದ್ಧವಾಗಿ, ನಮ್ಮ ಸುತ್ತಲಿನ ಪರಿಸರ ಸುರಕ್ಷಿತವಾಗಿರುವಂತೆ ಮತ್ತು ನಾವು ಯಾವುದೇ ರೀತಿಯಲ್ಲಿ ಶೋಷಣೆಗೆ ಒಳಗಾಗದಂತೆ ಅವರು ನೋಡಿಕೊಂಡರು’ ಎಂದು ಲಾರಾ ಅಕ್ಷಯ್ ಕುಮಾರ್ ಅವರನ್ನು ಹೊಗಳಿದರು.
ಲಾರಾ, ಅಕ್ಷಯ್ ಮತ್ತು ಪ್ರಿಯಾಂಕಾ ಬಗ್ಗೆ ಹೇಳುವುದಾದರೆ, ಈ ಮೂವರೂ ‘ಅಂದಾಜ್’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಚಿತ್ರದಲ್ಲಿ ಲಾರಾ ಅವರು ಕಾಜಲ್ ಪಾತ್ರವನ್ನು ನಿರ್ವಹಿಸಿದರು ಮತ್ತು ಆ ಚಿತ್ರಕ್ಕಾಗಿ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಗೆದ್ದರು.
ಲಾರಾ ದತ್ತಾ ಬಗ್ಗೆ ಹೇಳುವುದಾದರೆ, ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರು. ಈಗ ಅವರು ‘ರಾಮಾಯಣ’ ಮತ್ತು ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾರಾ ಸಾಮಾಜಿಕ ಮಾಧ್ಯಮದಲ್ಲಿಯೂ ಯಾವಾಗಲೂ ಸಕ್ರಿಯರಾಗಿದ್ದಾರೆ. ನಟಿ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಯಾವಾಗಲೂ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.
IPL 2026: ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಪಾಂಡ್ಯ ಸಹೋದರರ ಜಿದ್ದಾಜಿದ್ದು. ತಮ್ಮ ಹಾರ್ದಿಕ್ ಪಾಂಡ್ಯ ವಿಕೆಟ್ ಪತನಗೊಂಡಾಗ ಅಣ್ಣ ಕೃನಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್ಗಳಲ್ಲಿ 240 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಆರ್‌ಸಿಬಿ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದರು.
ಆದರೆ, 15ನೇ ಓವರ್‌ನಲ್ಲಿ ಆರ್‌ಸಿಬಿ ವೇಗಿ ಜೇಕಬ್ ಡಫಿ ಎಸೆದ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಹೋಗಿ ಹಾರ್ದಿಕ್ ಔಟ್ ಆದರು. ಈ ಕ್ಷಣದಲ್ಲಿ ಆರ್‌ಸಿಬಿ ಪರ ಆಡುತ್ತಿದ್ದ ಅಣ್ಣ ಕೃನಾಲ್ ಪಾಂಡ್ಯ ತೋರಿದ ಪ್ರತಿಕ್ರಿಯೆ ಎಲ್ಲರನ್ನೂ ದಂಗಾಗುವಂತೆ ಮಾಡಿತು
ಸಾಮಾನ್ಯವಾಗಿ ಅಣ್ಣ ಅಥವಾ ತಮ್ಮ ಔಟ್ ಆದಾಗ ಆಟಗಾರರು ಮೌನವಾಗಿರುತ್ತಾರೆ ಅಥವಾ ಸಾಧಾರಣವಾಗಿ ಸಂಭ್ರಮಿಸುತ್ತಾರೆ. ಆದರೆ ಇಲ್ಲಿ ಕೃನಾಲ್ ಪಾಂಡ್ಯ ಅವರು ಹಾರ್ದಿಕ್ ಔಟ್ ಆಗುತ್ತಿದ್ದಂತೆ ಬೌಲರ್‌ಗಿಂತಲೂ ಮಿಗಿಲಾಗಿ ಕುಣಿದು ಕುಪ್ಪಳಿಸಿದರು. ಅವರ ಮುಖದಲ್ಲಿದ್ದ ಆವೇಶ ಮತ್ತು ಸಂಭ್ರಮ ಕಂಡು ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಪೆವಿಲಿಯನ್‌ಗೆ ಮರಳುವಾಗ ಒಮ್ಮೆ ಅಣ್ಣನತ್ತ ತಿರುಗಿ ನೋಡುವಂತಾಯಿತು.
ಸಹೋದರರ ನಡುವೆ ಬಿರುಕು?
ಈ ಸಂಭ್ರಮದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿದಾಗಲೂ ಕೃನಾಲ್ ಮೈದಾನಕ್ಕೆ ಬಂದಿರಲಿಲ್ಲ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದಿಸಿರಲಿಲ್ಲ.
ಇದೀಗ ತಮ್ಮ ಔಟಾಗುತ್ತಿದ್ದಂತೆ ಕೃನಾಲ್ ಪಾಂಡ್ಯ ವಿಚಿತ್ರವಾಗಿ ಸಂಭ್ರಮಿಸುವ ಮೂಲಕ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪುಷ್ಠಿ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ (ವಿಚ್ಛೇದನ) ನಡೆದ ಬದಲಾವಣೆಗಳು ಎನ್ನಲಾಗುತ್ತಿದೆ.
ಅಂದರೆ ಹಾರ್ದಿಕ್ ಪಾಂಡ್ಯ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಹೊಸ ಗರ್ಲ್ಫ್ರೆಂಡ್ ಜೊತೆ ಇರುವುದೇ ಸಹೋದರರ ನಡುವಣ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಐಪಿಎಲ್ ವೇಳೆ ಮುಖಾಮುಖಿಯಾದಾಗ ಸದಾ ನಗುತ್ತಾ ಪೈಪೋಟಿ ನಡೆಸುತ್ತಿದ್ದ ಇಬ್ಬರು ಸಹೋದರರು ಇದೇ ಮೊದಲ ಬಾರಿ ಮುಖ ಸಿಂಡರಿಸಿಕೊಂಡು ಪಂದ್ಯ ಮುಗಿಸಿ ತೆರಳಿದ್ದಾರೆ. ಇದರೊಂದಿಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.