ಬೆಂಗಳೂರು, ಏಪ್ರಿಲ್ 09: ಬೆಂಗಳೂರಿನ ಆರ್‌ವಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ನಿಹಾರಿಕಾ, ಅಭಿಜ್ಞಾ ಹಾಗೂ ಪ್ರಿಯಾ 600ಕ್ಕೆ 597 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ತಮ್ಮ ಮಕ್ಕಳ ಸಾಧನೆ ಕುರಿತು ಮಾತನಾಡಿದ ಪೋಷಕರು ಭಾವುಕರಾದರು. ನಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರದೆ, ಅವರ ಆಸಕ್ತಿಗಳಿಗೆ ಮತ್ತು ಆಯ್ಕೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ಮಕ್ಕಳ ಸಾಧನೆಗೆ ಅತೀವ ಸಂತೋಷ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ.
ಇರಾನ್ ಯುದ್ಧದ ಪರಿಣಾಮದಿಂದಾಗಿ ಎಲ್ಪಿಜಿ (LPG) ಅಭಾವ ಉಂಟಾಗಿದೆ. ಆಟೋ ಚಾಲಕರು ಗ್ಯಾಸ್ ಇಲ್ಲದೇ ಪರದಾಡುವಂತಾಗಿದೆ. ಹಾಗಾಗಿ ನಟ ವಿನೋದ್ ರಾಜ್ ಅವರು ಆಟೋ ಚಾಲಕರ ನೆರವಿಗೆ ಬಂದಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ತಾಯಿ, ನಟಿ ಲೀಲಾವತಿ ಸಮಾಧಿ ಬಳಿ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ನೂರಾರು ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಲಾಗಿದೆ. ತಾಯಿಯ ಹೆಸರಿನಲ್ಲಿ ವಿನೋದ್ ರಾಜ್ (Vinod Raj) ಅವರು ಈ ಕಾರ್ಯ ಮಾಡಿದ್ದಾರೆ. ಈ ವೇಳೆ ಆಟೋ ಚಾಲಕರಿಗೆ ಅವರು ಊಟ ಹಾಕಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಬೆಂಗಳೂರು, (ಏಪ್ರಿಲ್ 09): 2025-26ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಫಸ್ಟ್ ಟೈಂ ಶೇ.86.48 ಫಲಿತಾಂಶ ಬಂದಿದೆ. ಇದು ಐತಿಹಾಸಿಕ ದಿನ ಎಂದು ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಭಾಗವಾರು ಫಲಿತಾಂಶ
ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,66,071( 86.48%) ಉತ್ತೀರ್ಣರಾಗಿದ್ದಾರೆ. ಈ ಪೈಕಿ ನಗರ ವಿಭಾಗದಲ್ಲಿ 3,71,853 (85.95%) ಮಕ್ಕಳು, ಗ್ರಾಮೀಣ ವಿಭಾಗದ 1,74,845 (87.62%) ಮಕ್ಕಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 1,70,529 ಮಕ್ಕಳು, ಪ್ರಥಮ ದರ್ಜೆಯಲ್ಲಿ 2,95,385 ಮಕ್ಕಳು, ದ್ವೀತಿಯ ದರ್ಜೆಯಲ್ಲಿ 63,957 ಮಕ್ಕಳು ಉತ್ತೀರ್ಣರಾಗಿದ್ದು, 16,827 ಮಕ್ಕಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ 5,577 ವಿದ್ಯಾರ್ಥಿಗಳು 35% ನಿಂದ 33% ಪಾಸಿಂಗ್ ಅಂಕದಿಂದ ಪಾಸ್ ಆಗಿದ್ದಾರೆ. ಮಕ್ಕಳಿಗೆ ಫಲಿತಾಂಶ ಮೊದಲು ಕೊಡಬೇಕು ಅಂತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದೇವೆ. ಅಂಕಪಟ್ಟಿ ಕೂಡ ಇಂದೇ ಲಭ್ಯವಾಗಿದೆ. ಡಿಜಿ ಲಾಕರ್‌ನಲ್ಲೂ ಅಂಕಪಟ್ಟಿ ಸಿಗಲಿದೆ. ರಾಜ್ಯದಲ್ಲಿ ಫಸ್ಟ್ ಟೈಮ್ 86.48% ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಏ. 30ರಿಂದ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ
ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದವರು ಯಾವುದೇ ಬೇಸರ ಮಾಡಿಕೊಳ್ಳದೆ ಧೈರ್ಯವಾಗಿ ಫೇಲ್ ಆದ ವಿಷಯಗಳ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಅವಕಾಶ ಇದೆ. ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ (Exam-2) ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮರುಮೌಲ್ಯಮಾಪನ-ಮರುಎಣಿಕೆಗೆ ಅರ್ಜಿ
ಫಲಿತಾಂಶದ ಬಗ್ಗೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಮರುಎಣಿಕೆ (Recounting)ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಗಾಗಿ ಏಪ್ರಿಲ್ 13ರಿಂದ ಏಪ್ರಿಲ್ 19ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ವಿಧಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬಹುದು.
ಭೂಪಾಲ್, ಏಪ್ರಿಲ್ 9: ಮಧ್ಯಪ್ರದೇಶದಲ್ಲಿ ಭಕ್ತರು ಧಾರ್ಮಿಕ ಆಚರಣೆಯ ಸಲುವಾಗಿ ನರ್ಮದಾ ನದಿಗೆ ಸುಮಾರು 11,000 ಲೀಟರ್ ಹಾಲನ್ನು ಸುರಿಯುತ್ತಿರುವ ವಿಡಿಯೋ ವೈರಲ್ (Viral Video) ಆಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆ ಮತ್ತು ತೀವ್ರ ಟೀಕೆಗೆ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯು ಸಾಂಪ್ರದಾಯಿಕ ಆಧ್ಯಾತ್ಮಿಕ ಆಚರಣೆ ಅಥವಾ ಪ್ರತಿಜ್ಞೆಯ ಈಡೇರಿಕೆಯ ಭಾಗವಾಗಿ ಪವಿತ್ರವಾದ ನದಿಗೆ ಟ್ಯಾಂಕರ್ಗಟ್ಟಲೆ ಹಾಲನ್ನು ನೇರವಾಗಿ ಸುರಿಯುವ ದೊಡ್ಡ ಆಚರಣೆಯಾಗಿದೆ. ಅಂದಾಜಿನ ಪ್ರಕಾರ, ಇಷ್ಟು ಪ್ರಮಾಣದ ಹಾಲಿನ ಬೆಲೆ 5.5 ಲಕ್ಷ ರೂ.ನಿಂದ 7.7 ಲಕ್ಷ ರೂ.ವರೆಗೆ ಇರಲಿದೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: ‘ಎಂದೆಂದಿಗೂ ಬೆಂಗಳೂರು’ ಥೀಮ್ ಅಡಿಯಲ್ಲಿ 18 ಆವೃತ್ತಿಯ ಟಿಸಿಎಸ್ ವಿಶ್ವ 10 ಓಟವು ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷ ರಸ್ತೆಗಳಲ್ಲಿ ಎಲ್ಲೆಡೆ ಗುಂಡಿಗಳೇ ತುಂಬಿದ್ದರಿಂದ ಓಟಗಾರರು ತೊಂದರೆ ಅನುಭವಿಸಿದ್ದರು. ಆದರೆ ಈ ಭಾರಿ ಹಾಗಾಗಬಾರದು. ಈ ನಿಟ್ಟಿನಲ್ಲಿ ರೇಸ್ ನಡೆಯುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಂ, ಡಿಸಿಎಂ ಮತ್ತು ಜಿಬಿಎ ಆಯುಕ್ತರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ರೇಸ್ ಬೆಂಗಳೂರಿನ ಹೆಮ್ಮೆ. ಭಾರತದಾದ್ಯಂತ ಓಟಗಾರರು ಭಾಗವಹಿಸುತ್ತಾರೆ. ಅವರಿಗೆ ನಿರಾಶೆಯಾಗಬಾರದು. ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸುವುದು ನಿಮ್ಮಿಂದ ತುಂಬಾ ಕಷ್ಟ ಎಂದು ನಮಗೆ ಗೊತ್ತು, ಹಾಗಾಗಿ 10 ಕಿ.ಮೀ ರಸ್ತೆಯನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.
ಐಪಿಎಲ್ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಅದರಂತೆ ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಮಹತ್ವದ ಬದಲಾವಣೆ ಮಾಡಲು ಐಸಿಸಿ ನಿರ್ಧರಿಸಿದೆ. ವಾಸ್ತವವಾಗಿ ಜಯ್ ಶಾ (Jay Shah) ಅವರು ಐಸಿಸಿ (ICC) ಅಧ್ಯಕ್ಷರಾದ ಬಳಿಕ ಟೆಸ್ಟ್ ಕ್ರಿಕೆಟ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದೀಗ ಅದಕ್ಕೆ ಪೂರಕವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 9 ತಂಡಗಳ ಬದಲಿಗೆ 12 ತಂಡಗಳನ್ನು ಕಣಕ್ಕಿಣಿಸುವ ಯೋಜನೆಯನ್ನು ಐಸಿಸಿ ಹಾಕಿಕೊಂಡಿದೆ. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಹೊಸದಾಗಿ 3 ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಆ ಹೊಸ 3 ತಂಡಗಳು ಯಾವುವು?
ಜಯ್ ಶಾ ನೇತೃತ್ವದ ಐಸಿಸಿ, ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೇರಿಸಲು ಯೋಚಿಸಿದೆ ಎಂದು ವರದಿಯಾಗಿದೆ. ಈ ಮೂರು ತಂಡಗಳು ಈಗ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸ್ಪರ್ಧಿಸಲಿವೆ.
WTC ಯ ನಿಯಮಗಳು ಯಾವುವು?
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ, ಪ್ರತಿ ಎರಡು ವರ್ಷಗಳಿಗೊಮ್ಮೆ, ಪ್ರತಿ ತಂಡವು ತಮ್ಮ ಆಯ್ಕೆಯ ಆರು ತಂಡಗಳ ವಿರುದ್ಧ ತವರು ಮತ್ತು ವಿದೇಶ ಸರಣಿಯನ್ನು ಆಡುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಹೊಂದಿರುವ ತಂಡವು ಫೈನಲ್‌ಗೆ ಮುನ್ನಡೆಯುತ್ತದೆ. ಮೂರು ಹೊಸ ತಂಡಗಳ ಸೇರ್ಪಡೆಯೊಂದಿಗೆ, ನಿಯಮಗಳು ಬದಲಾಗಬಹುದು. ಆದಾಗ್ಯೂ, ಹೊಸ ಮೂರು ತಂಡಗಳ ಸೇರ್ಪಡೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಪಂದ್ಯಾವಳಿಯಲ್ಲಿ ಮೂರು ಸಣ್ಣ ತಂಡಗಳನ್ನು ಸೇರಿಸುವ ಐಸಿಸಿ ಈ ನಿರ್ಧಾರವು ಈ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಪ್ರಯೋಜನಕಾರಿಯಾಗಲಿದೆ.
ಇಲ್ಲಿಯವರೆಗೆ ಮೂರು ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿವೆ. ನ್ಯೂಜಿಲೆಂಡ್ 2019-2021 ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದರೆ, ಆಸ್ಟ್ರೇಲಿಯಾ 2021-23 ಚಾಂಪಿಯನ್‌ಶಿಪ್ ಗೆದ್ದಿದೆ. ದಕ್ಷಿಣ ಆಫ್ರಿಕಾ 2023-25 ರಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದೆ. ಇನ್ನು ಭಾರತ ಎರಡೂ ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಫೈನಲ್ ತಲುಪಿದೆಯಾದರೂ ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಏಪ್ರಿಲ್ 10ರಂದು ತಮ್ಮ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರವು ಈಗ ದೇಶದ ಅತ್ಯಂತ ಹೈ-ಪ್ರೊಫೈಲ್ ತಾಣವಾಗಿ ಮಾರ್ಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಬಾಲಿವುಡ್‌ನ ಘಟಾನುಘಟಿ ನಟ-ನಟಿಯರು ಈ ಅದ್ದೂರಿ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್ (Ranveer Singh), ಸಲ್ಮಾನ್ ಖಾನ್ ಮುಂತಾದವರು ಬಂದಿದ್ದಾರೆ.
ಇತ್ತೀಚೆಗಷ್ಟೇ ‘ಧುರಂಧರ್ 2’ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ನಟ ರಣವೀರ್ ಸಿಂಗ್, ಜಾಮ್‌ನಗರದ ಪಾರ್ಟಿಯಲ್ಲಿ ಫುಲ್ ಜೋಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ನಡುವೆ ರಣವೀರ್ ಸಿಂಗ್ ಅವರ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರಣವೀರ್ ಎನರ್ಜಿಗೆ ಫಿದಾ ಆಗಿದ್ದಾರೆ.
ಅನಂತ್ ಅಂಬಾನಿ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮುಂಬೈನ ಖಾಸಗಿ ವಿಮಾನ ನಿಲ್ದಾಣಗಳಿಂದ ಸೆಲೆಬ್ರಿಟಿಗಳ ದಂಡೇ ಪ್ರಯಾಣ ಬೆಳೆಸಿದೆ. ಕಪ್ಪು ಶರ್ಟ್ ಮತ್ತು ನೀಲಿ ಡೆನಿಮ್ ಧರಿಸಿ ಸರಳ ಹಾಗೂ ಸ್ಟೈಲಿಶ್ ಲುಕ್‌ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಶಾರುಖ್ ಖಾನ್ ಅವರು ಪತ್ನಿ ಗೌರಿ ಖಾನ್, ಪುತ್ರ ಅಬ್ರಾಮ್ ಮತ್ತು ತಮ್ಮ ಮುದ್ದಿನ ನಾಯಿಯೊಂದಿಗೆ ಜಾಮ್‌ನಗರಕ್ಕೆ ಆಗಮಿಸಿದರು.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಮಣಿ ಅಲಿಯಾಸ್ ಒರಿ ಕೂಡ ವಿಭಿನ್ನ ಏರ್‌ಪೋರ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದರು. ಇನ್ನೂ ಅನೇಕ ಸೆಲೆಬ್ರಿಟಿಗಳು ಜಾಮ್ನಗರ್ಗೆ ಬಂದು ಸೇರಿದ್ದಾರೆ. ಎಲ್ಲ ಸ್ಟಾರ್ ಕಲಾವಿದರ ಆಗಮನದಿಂದಾಗಿ ಇಡೀ ಬಾಲಿವುಡ್ ಒಂದೆಡೆ ಸೇರಿದಂತಾಗಿದೆ. ಅನಂತ್ ಅಂಬಾನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಎಲ್ಲರೂ ಎಂಜಾಯ್ ಮಾಡಲಿದ್ದಾರೆ.
ಅಂಬಾನಿ ಕುಟುಂಬದ ಯಾವುದೇ ದೊಡ್ಡ ಕಾರ್ಯಕ್ರಮಗಳಿರಲಿ, ಅದಕ್ಕೆ ಜಾಮ್‌ನಗರವೇ ಮೊದಲ ಆಯ್ಕೆ. ರಿಲಯನ್ಸ್ ಸಂಸ್ಥೆಯ ಬೃಹತ್ ಘಟಕಗಳು ಇಲ್ಲಿ ಇರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಈ ಸ್ಥಳವನ್ನು ಕುಟುಂಬವು ಹೆಚ್ಚು ಇಷ್ಟಪಡುತ್ತದೆ. ಅನಂತ್ ಅಂಬಾನಿ ಅವರ ಈ ಬಾರಿಯ ಜನ್ಮದಿನದ ಸೆಲೆಬ್ರೇಷನ್ ಆಪ್ತರು ಮತ್ತು ಸೆಲೆಬ್ರಿಟಿಗಳ ಜೊತೆ ನಡೆಯುತ್ತಿದೆ. ಅದರ ವೈಭವ ಜೋರಾಗಿದೆ.
ಚೆನ್ನೈ, ಏಪ್ರಿಲ್ 9: ಜಾತ್ಯತೀತ ರಚನೆಯನ್ನು ಉಳಿಸಲು ಶ್ರಮಿಸುತ್ತಿರುವ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಡಿಎಂಕೆಯೊಂದಿಗೆ ದೃಢವಾಗಿ ನಿಂತಿದೆ. ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಟಿವಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ವಿಜಯ್ ಹೇಳಿಕೆ ಸಂಪೂರ್ಣ ಸುಳ್ಳು ಎಂದಿದ್ದಾರೆ.
“ವಿಜಯ್ ಒಬ್ಬ ಅಪ್ರಬುದ್ಧ ರಾಜಕಾರಣಿ. ಆ ಟಿಎಂಸಿ (ತೃಣಮೂಲ ಕಾಂಗ್ರೆಸ್) ವಿಜಯ್ ಜೊತೆ ಇರಬಹುದು ಅನಿಸುತ್ತದೆ. ನಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅವರ ಜೊತೆ ಇಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಡಿಎಂಕೆ ಜೊತೆಗಿದೆ. ಈ ಬಾರಿ ನಮ್ಮ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತವನ್ನು ಹೊಂದಲಿದೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದುಮ ಶೇಕಡಾ 86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 6,32,200 ಮಂದಿ ಪೈಕಿ 5,46,698 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ದಾಖಲೆ ಮಟ್ಟದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಏರಿಕೆ ಕಂಡಿದೆ. ಕಳೆದ ವರ್ಷ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ಶೇಕಡಾ 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದಬಾರಿಗಿಂತ ಈ ಬಾರಿ ಶೇಕಡಾ 13ರಕ್ಕಿಂತಲೂ ಹೆಚ್ಚು ಪ್ರತಿಶತ ಫಲಿತಾಂಶದಲ್ಲಿ ಸುಧಾರಣೆ ಆಗಿದೆ ಎಂದಿದ್ದಾರೆ.
ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.86.48 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆ ಪೈಕಿ ಶೇ. 83.65ರಷ್ಟು ಬಾಲಕರು ಮತ್ತು ಶೇ. 88.70ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 44 ಸಾವಿರ ಮಕ್ಕಳು ಒಂದು ವಿಷಯದಲ್ಲಿ ಫೇಲ್ ಆಗಿದ್ದರೆ, ಎರಡು ಸಬ್ಜೆಕ್ಟ್ಗಳಲ್ಲಿ 18 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗೆಯೇ ಎಲ್ಲ ವಿಷಯಗಳಲ್ಲಿಯೂ ಫೇಲ್ ಆದವರ ಸಂಖ್ಯೆ 1,772ಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ. 1,70,529 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 2,95,385 ವಿದ್ಯಾರ್ಥಿಗಳು ಪ್ರಥಮ ದರ್ಜೆ 63,957 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು ಶೇಕಡಾ 50ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 63,957 ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಬಾರಿ ಮೂರನೇ ಪರಿಕ್ಷೆ ಇರುವುದಿಲ್ಲ ಎಂದೂ ಮಧು ಬಂಗಾರಪ್ಪ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಕಾವೂರಿನ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಪ್ರಿನ್ಸಿಲ್ಲಾ 600ಕ್ಕೆ 599 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಾಧನೆ
600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳು- 02
600ಕ್ಕೆ 599 ಅಂಕ ಪಡೆದ ವಿದ್ಯಾರ್ಥಿಗಳು- 02
600ಕ್ಕೆ 598 ಅಂಕ ಪಡೆದ ವಿದ್ಯಾರ್ಥಿಗಳು- 06
ಬೆಂಗಳೂರಿನ ವಿವಿ ಪುರಂನ ಎಸ್ಬಿ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಸಾಧನೆ
600ಕ್ಕೆ 598 ಅಂಕ ಪಡೆದ ವಿದ್ಯಾರ್ಥಿಗಳು- 03
600ಕ್ಕೆ 595 ಅಂಕ ಪಡೆದ ವಿದ್ಯಾರ್ಥಿಗಳು- 05
600ಕ್ಕೆ 594 ಅಂಕ ಪಡೆದ ವಿದ್ಯಾರ್ಥಿಗಳು- 08
ಕೊಟ್ಟೂರಿನ ಇಂದು ಪಿಯು ಕಾಲೇಜಿನ ಅರ್ಚನಾ, ಸಂಗೀತಾ ಮತ್ತು ಕಲಬುರಗಿಯ ಎಸ್ಎಂವಿಟಿ ವಿಜಿ ಮಹಿಳಾ ಪಿಯು ಕಾಲೇಜಿನ ಶ್ರುತಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಸತತವಾಗಿ ಟ್ರೋಲಿಂಗ್ ಮತ್ತು ನೆಗೆಟಿವಿಟಿಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತಾಯಿಯ ಜನ್ಮದಿನದಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದ ಅವರು, ಜೀವನವು ತಮಗೆ ‘ಕ್ರೂರವಾಗಿ ವರ್ತಿಸುತ್ತಿದೆ’ ಎಂದು ಬರೆದುಕೊಂಡಿದ್ದರು. ಇದೀಗ ಅರ್ಜುನ್ ಹಂಚಿಕೊಂಡಿರುವ ಮತ್ತೊಂದು ಗೂಢಾರ್ಥದ ಸಂದೇಶವು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಗುರುವಾರ (ಏಪ್ರಿಲ್ 9) ಅರ್ಜುನ್ ಕಪೂರ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಸಾಲನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ‘ಅಂತ್ಯವನ್ನು ಒಪ್ಪಿಕೊಳ್ಳಿ, ಅದು ನೀವು ಬಯಸಿದ ರೀತಿಯಲ್ಲಿ ಕೊನೆಗೊಳ್ಳದಿದ್ದರೂ ಸಹ’ ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅರ್ಜುನ್ ಯಾವುದೋ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆಯೇ ಅಥವಾ ಅವರು ಮಾನಸಿಕವಾಗಿ ಕುಗ್ಗಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅರ್ಜುನ್ ಅವರ ಈ ಪೋಸ್ಟ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ನಟನ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ‘ಅರ್ಜುನ್ ಈ ವಿಷಪೂರಿತ ಚಿತ್ರರಂಗದಿಂದ ಹೊರಬಂದು ಲೈಮ್‌ಲೈಟ್‌ನಿಂದ ದೂರವಿರುವುದು ಅವರ ಆರೋಗ್ಯಕ್ಕೆ ಒಳ್ಳೆಯದು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ, ‘ಒಬ್ಬರನ್ನು ಟ್ರೋಲ್ ಮಾಡುವುದಕ್ಕೂ ಒಂದು ಮಿತಿ ಇರುತ್ತದೆ. ಕಂಪ್ಯೂಟರ್ ಪರದೆಯ ಹಿಂದೆ ಕುಳಿತು ಟೀಕಿಸುವುದು ಸುಲಭ. ನಿಮಗೆ ಅವರ ನಟನೆ ಇಷ್ಟವಿಲ್ಲದಿದ್ದರೆ ಸಿನಿಮಾ ನೋಡಬೇಡಿ. ಆದರೆ ಸತತವಾಗಿ ನಿಂದಿಸುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಅವರು ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅನಾಹುತ ಸಂಭವಿಸುವ ಮುನ್ನ ಟ್ರೋಲಿಂಗ್ ನಿಲ್ಲಿಸಿ’ ಎಂದು ಹಲವರು ಎಚ್ಚರಿಸಿದ್ದಾರೆ.
ಅರ್ಜುನ್ ಕಪೂರ್ ಅವರ ವೃತ್ತಿಜೀವನವು ಸದ್ಯಕ್ಕೆ ಸಂಕಷ್ಟದಲ್ಲಿದೆ. 2025ರಲ್ಲಿ ಬಿಡುಗಡೆಯಾದ ‘ಮೇರೆ ಹಸ್ಬೆಂಡ್ ಕಿ ಬಿವಿ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋಲನುಭವಿಸಿತು. ಸುಮಾರು 12.85 ಕೋಟಿ ರೂಪಾಯಿ ಮಾತ್ರ ಗಳಿಸಿದ ಈ ಚಿತ್ರದ ನಂತರ ಅರ್ಜುನ್ ಯಾವುದೇ ಹೊಸ ಸಿನಿಮಾಗಳನ್ನು ಘೋಷಿಸಿಲ್ಲ. ಇದರಿಂದ ಅವರು ಕುಗ್ಗಿರುವ ಸಾಧ್ಯತೆ ಇದೆ.