ಪರೀಕ್ಷೆ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಲು ಹೋಗಿ ಹೆಣವಾದ ಕಾಲೇಜು ವಿದ್ಯಾರ್ಥಿ

ಪರೀಕ್ಷೆ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಲು ಹೋಗಿ ಹೆಣವಾದ ಕಾಲೇಜು ವಿದ್ಯಾರ್ಥಿ

ನೊಯ್ಡಾ, ಏಪ್ರಿಲ್ 8: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆತನ ಮೂವರು ಸ್ನೇಹಿತರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಹರ್ಷಿತ್ ಭಟ್ ಎಂದು ಗುರುತಿಸಲಾಗಿದೆ.

ನೊಯ್ಡಾದ ಅಮಿಟಿ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ನಂತರ ಪಾರ್ಟಿಗಾಗಿ ಸೂಪರ್‌ನೋವಾ ಬಳಿಯ ನಿರ್ಜನ ಜಾಗಕ್ಕೆ ಹೋಗಿದ್ದರು. ಆಗ ಜಮೀನಿನಲ್ಲಿ ಹರ್ಷಿತ್ ಸ್ನಾನ ಮಾಡಲು ನೀರು ತುಂಬಿದ ಹೊಂಡದ ಬಳಿ ಹೋದ. ಆಗ ಇದ್ದಕ್ಕಿದ್ದಂತೆ ಆಳವಾದ ನೀರಿಗೆ ಜಾರಿ ಆತ ಮುಳುಗಲು ಪ್ರಾರಂಭಿಸಿದ. ಆತನನ್ನು ಉಳಿಸಲು ಇತರ ಮೂವರು ಸ್ನೇಹಿತರು ಸಹ ನೀರಿಗೆ ಇಳಿದರು.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ಅವರೆಲ್ಲರೂ ಜೋರಾಗಿ ಕಿರುಚಾಡಿದ್ದರಿಂದ ಅಕ್ಕಪಕ್ಕದ ಜಮೀನಿನವರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳೀಯ ಡೈವರ್‌ಗಳೊಂದಿಗೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗ್ನಿಶಾಮಕ ಇಲಾಖೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ಬಹು ಸಂಸ್ಥೆಗಳ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಯಿತು. ಹರ್ಷಿತ್ ಭಟ್​ನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಕೊಲೆ ಮಾಡಿದ್ದು ಹೇಗೆ ಗೊತ್ತಾ?

ಆತನನ್ನು ಉಳಿಸುವ ಪ್ರಯತ್ನದಲ್ಲಿ ನೀರಿಗೆ ಇಳಿದಿದ್ದ ಮೂವರು ಸ್ನೇಹಿತರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ. ಈ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಶಾಂತಿ ಸದಾ ಉಳಿಯಲಿ ಎಂಬುದು ನಮ್ಮ ಆಶಯ, ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ

ನವದೆಹಲಿ, ಏಪ್ರಿಲ್ 08:ಅಮೆರಿಕ-ಇಸ್ರೇಲ್(Israel) ಮತ್ತು ಅಮೆರಿಕದ ನಡುವಿನ ಕದನ ವಿರಾಮದ ಕುರಿತು ಭಾರತ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ನಾವು ಕದನ ವಿರಾಮವನ್ನು ಸ್ವಾಗತಿಸುತ್ತೇವೆ ಮತ್ತು ಅದು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುತ್ತದೆ ಎಂದು ಆಶಿಸುತ್ತೇವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ನಾವು ಹಿಂದೆ ಪದೇ ಪದೇ ಹೇಳಿದಂತೆ, ನಡೆಯುತ್ತಿರುವ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಸಚಿವಾಲಯ ಹೇಳಿದೆ.

ಈ ಸಂಘರ್ಷ ಈಗಾಗಲೇ ಜನರಿಗೆ ಅಪಾರ ನೋವನ್ನುಂಟು ಮಾಡಿದೆ ಮತ್ತು ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳಿಗೆ ಅಡ್ಡಿಪಡಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಮೊದಲಿನಂತೆಯೇ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ ಎಂದು ಭಾವಿಸಿದ್ದೇವೆ ಎಂದು ತಿಳಿಸಲಾಗಿದೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದಿಂದ ಮಧ್ಯಪ್ರಾಚ್ಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದ ಹೋರಾಟ ನಿಂತಿದೆ. ಇರಾನ್ ಐತಿಹಾಸಿಕ ವಿಜಯ ಸಾಧಿಸಿದೆ. ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆ ದಾಳಿಗಳಿಂದ ಹಿಂದೆ ಸರಿದು ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇರಾನ್ ಈ ಹೇಳಿಕೆ ನೀಡಿದೆ.  ಟೆಹ್ರಾನ್ 10 ಅಂಶಗಳ ಪ್ರಸ್ತಾವನೆಯನ್ನು ಸಹ ಮಂಡಿಸಿದೆ, ಅದನ್ನು ಅಮೆರಿಕ ಅದನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ.

ಮತ್ತಷ್ಟು ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಗುಪ್ತಚರ ಮುಖ್ಯಸ್ಥ ಮಜೀದ್ ಸಾವು, ಇರಾನ್​​ಗೆ ದೊಡ್ಡ ಹಿನ್ನಡೆ

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರು ತಕ್ಷಣ ದೇಶವನ್ನು ತೊರೆಯುವಂತೆ ಸೂಚಿಸಿದೆ. ಇದಕ್ಕೂ ಮೊದಲು, ಏಪ್ರಿಲ್ 7 ರಂದು ಹೊರಡಿಸಲಾದ ಹಿಂದಿನ ಸಲಹೆಯಲ್ಲಿ, ಜನರು ಜಾಗರೂಕರಾಗಿರಿ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚಿಸಲಾಗಿತ್ತು.

ಭಾರತೀಯ ನಾಗರಿಕರು ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಅವರು ಸೂಚಿಸಿದ ಸುರಕ್ಷಿತ ಮಾರ್ಗಗಳ ಮೂಲಕ ಮಾತ್ರ ಇರಾನ್‌ನಿಂದ ಹೊರಡಬೇಕು ಎಂದು ರಾಯಭಾರ ಕಚೇರಿ ಹೇಳಿದೆ. ಯಾವುದೇ ಭಾರತೀಯ ನಾಗರಿಕರು ಪೂರ್ವ ಸಮಾಲೋಚನೆ ಇಲ್ಲದೆ ಯಾವುದೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸಬಾರದು ಎಂದು ರಾಯಭಾರ ಕಚೇರಿ ಕಟ್ಟುನಿಟ್ಟಾಗಿ ಸೂಚಿಸಿದೆ. ಯಾವುದೇ ಗಡಿಯನ್ನು ದಾಟುವ ಮೊದಲು ರಾಯಭಾರ ಕಚೇರಿ ಸಂಪರ್ಕಿಸುವುದು ಒಳಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

ತುಮಕೂರು, (ಏಪ್ರಿಲ್ 08): ನಿವೇಶನ ಮಂಜೂರಾಗಿದ್ದರೂ ಸಹ ಹಕ್ಕುಪತ್ರ ನೀಡದ್ದಕ್ಕೆ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವರ ಜನ ಸ್ಪಂದನಾ ಕಾರ್ಯಕ್ರಮದ ವೇದಿಕೆ ಮೇಲೆ ದಯಾಮರಣ ಕೋರಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಹಕ್ಕುಪತ್ರ ನೀಡದ್ದಕ್ಕೆ ವೇದಿಕೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿರಾದ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಸಚಿವರು, ಡಿಸಿಗೆ , ಡಿಸಿ ಕಮಿಷನರ್ ಕಡೆಗೆ ಕಳುಹಿಸುತ್ತಾರೆ. ಹೀಗೆ 15 ದಿನಕ್ಕೊಮ್ಮೆ ಅಲೆದಾಡುತ್ತಿದ್ದೇನೆ. ಜನಸಂಪರ್ಕ ಸಭೆಯಲ್ಲಿ ಸ್ಪಂದನೆಯಿಲ್ಲ. ಹಕ್ಕುಪತ್ರಕ್ಕೆ 25 ಸಾವಿರ ರೂ ಕೇಳುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.

ಇನ್ನು ಇದೇ ವೇಳೆ ಮಹಿಳೆ ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾಳೆ. ಬಾರಯ್ಯ ಸಿದ್ದಯ್ಯ, ಬಾರಯ್ಯ ರಾಮಯ್ಯ ನಮ್ಮ ಮನವಿ ಆಲಿಸಯ್ಯಾ. ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ ಎಂದು ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ 2024ರಲ್ಲಿ ಸಿಎಂ ಸಿದ್ದರಾಮಯ್ಯನವರು ತುಮಕೂರಿಗೆ ಬಂದಿದ್ದ ವೆಳೆ ಇದೇ ಮಹಿಳೆಗೆ 20/30ಜಾಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ ಈವರೆಗೂ ಆ ಜಾಗ ಹೇಳಿಲ್ಲ. ಹಕ್ಕು ಪತ್ರ ನೀಡಿಲ್ಲ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಜೆ ಹಳ್ಳಿಯಲ್ಲಿ ಹಸುಗಳ‌ ಶೆಡ್​​ಗೆ ಬೆಂಕಿ: ವಿಕೃತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು, (ಏಪ್ರಿಲ್ 08): ನಗರದ ಡಿಜೆ ಹಳ್ಳಿ (DJ Halli) ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ (ಏಪ್ರಿಲ್ 07) ಅಗ್ನಿ ದುರಂತವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆರು ಹಸುಗಳು (Cows) ಸಾವನ್ನಪ್ಪಿದ್ದವು. ಶೆಡ್​​​​ನಲ್ಲಿದ್ದ 20 ಹಸುಗಳ ಪೈಕಿ ಆರು ಮೂಕಜೀವಿಗಳು ಬೆಂಕಿಯ (Fire) ಜ್ವಾಲೆಗೆ ನರಳಿ ಪ್ರಾಣ ಬಿಟ್ಟಿದ್ದಾವೆ. ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ನಡೆದಿದೆ ಎನ್ನಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದ್ದು, ಬೇಕಂತಲೇ ಕಿರಾತಕನೊಬ್ಬ ಹಸುಗಳಿದ್ದ ಶೆಡ್​ಗೆ ಬೆಂಕಿ ಇಟ್ಟು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಂಕಿ ಇಟ್ಟು ಮೂಕಪ್ರಾಣಿಗಳನ್ನ ಬಲಿಪಡೆದ ವಿಕೃತನಿಗೆ ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೀದರ್​​: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಬೀದರ್, ಏಪ್ರಿಲ್​ 08: ಗಲ್ಫ್​​ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧಕ್ಕೆ (Gulf War) ಸದ್ಯ ಎರಡು ವಾರಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಆದರೆ ಯುದ್ಧದ ಎಫೆಕ್ಟ್​ ಈರುಳ್ಳಿ ಬೀಜ ಬೆಳೆಗಾರರಿಗೂ ತಟ್ಟಿದೆ. ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆಯಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಯುದ್ಧದ ಪರಿಣಾಮದಿಂದಾಗಿ ಬೆಳೆಗಳ ದರ ಕುಸಿಯುತ್ತಿದ್ದು, ರೈತರನ್ನು ಕಂಗಾಲು ಮಾಡಿದೆ.

ಕ್ವಿಂಟಾಲ್​ಗೆ 80 ಸಾವಿರ ರೂ ಕುಸಿತ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಬೀಜ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜ ಮಾರುಕಟ್ಟೆಯಲ್ಲಿ 1 ಲಕ್ಷ 20 ಸಾವಿರ ರೂ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಕ್ವಿಂಟಾಲ್​ಗೆ 80 ಸಾವಿರ ರೂ ಕುಸಿತವಾಗಿದ್ದು, ರೈತರನ್ನ ನಷ್ಟಕ್ಕೆ ತಳ್ಳಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಬೆಳೆಯಲಾಗುತ್ತದೆ. ಹೀಗಾಗಿ ಹೈದರಾಬಾದ್​ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿ ಬೀಜಕ್ಕೆ ಭಾರೀ ಬೇಡಿಕೆಯಿದೆ. ಹೈದರಾಬಾದ್​ನಿಂದ ದಲ್ಲಾಳಿಗಳು ರೈತರಿಂದ ಈರುಳ್ಳಿ ಬೀಜ ಖರೀದಿಸಿ ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದಿಂದ ರಫ್ತಿನಲ್ಲಿ ತೊಂದರೆ ಉಂಟಾಗಿದ್ದು, ದಲ್ಲಾಳಿಗಳು ಬೆಲೆ ಕಡಿಮೆ ಮಾಡಿ ರೈತರಿಂದ ಈರುಳ್ಳಿ ಬೀಜ ಖರೀದಿಸುತ್ತಿದ್ದಾರೆ. ಇದು ಸಹಜವಾಗಿಯೇ ರೈತರಿಗೆ ಸಂಕಷ್ಟ ತಂದಿದೆ.

ಜಿಲ್ಲೆಯೊಂದರಲ್ಲಿಯೇ ಸುಮಾರು 5 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೀಜವನ್ನ ಬೆಳೆಯುತ್ತಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಈರುಳ್ಳಿ ಬೀಜ ಗಲ್ಫ್​ ರಾಷ್ಟ್ರಕ್ಕೆ ಹೆಚ್ಚಾಗಿ  ರಫ್ತಾಗುತ್ತಿತ್ತು.

ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದ ರೈತ

ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ. ಇನ್ನೂ ಈರುಳ್ಳಿ ಬೀಜಕ್ಕೆ ದೇಶ ಸೇರಿದಂತೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆಯಿದೆ. ಒಂದು ಎಕರೆ ಪ್ರದೇಶಕ್ಕೆ 70 ರಿಂದ 80 ಸಾವಿರ ರೂ ಖರ್ಚು ಮಾಡಿ ರೈತರು ಈರುಳ್ಳಿ ಬೀಜ ಬೆಳೆಯುತ್ತಾರೆ. ಕಡಿಮೆ ನೀರು ಇದ್ದರೂ ಸಾಕು ಬೆಳೆಯಬಹುದಾಗಿದೆ. ಹೀಗಾಗಿ ಬೀದರ್ ಬಯಲು ಸೀಮೆಯಾಗಿದ್ದರಿಂದ ಇಲ್ಲಿ ನೀರಾವರಿ ಹೆಚ್ಚಾಗಿಲ್ಲ. ಹೀಗಾಗಿ ಕಡಿಮೆ ನೀರು ಸೌಲಭ್ಯ ಹೊಂದಿರುವ ರೈತರು ಈರುಳ್ಳಿ ಬೀಜ ಬೆಳೆ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಆದರೆ ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದು ರೈತ ಬಸವರಾಜ್​​ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್​​ ರೈತರು ಕಂಗಾಲು

ಜಿಲ್ಲೆಯ ಬಹುತೇಕ ರೈತರು ಈರುಳ್ಳಿ ಬೀಜ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು, ರೈತರನ್ನ ಕಂಗಾಲು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕದನವಿರಾಮದ ಬೆನ್ನಲ್ಲೇ ಇರಾನ್​ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

ಟೆಹ್ರಾನ್, ಏಪ್ರಿಲ್ 8: ಇರಾನ್ ಮತ್ತು ಅಮೆರಿಕ ನಡುವಿನ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಇರಾನ್ (Iran War) ಮೇಲೆ ದಾಳಿ ನಡೆದಿದೆ. ಇದರಿಂದ ಇರಾನ್‌ನ ಲವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರಕ್ಕೆ ಹಾನಿಯಾಗಿದೆ. ಇಂದು ಸ್ಥಳೀಯ ಸಮಯ 10 ಗಂಟೆಯ ಸುಮಾರಿಗೆ ಇರಾನ್​ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸ್ಥಳವನ್ನು ಸುರಕ್ಷಿತಗೊಳಿಸಲು ಅಗ್ನಿಶಾಮಕ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಅದಾದ ಒಂದು ಗಂಟೆಯೊಳಗೆ ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್ ವಿರುದ್ಧ ಪ್ರತೀಕಾರದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.

ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ಮಂಗಳವಾರ ಘೋಷಿಸಲಾದ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಈ ದಾಳಿ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಸಂಪೂರ್ಣ ವಿನಾಶವನ್ನು ತಡೆಗಟ್ಟುವ ಪ್ರಯತ್ನದಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಅಣ್ಣನ ಮದುವೆ ಸಂಭ್ರಮದ ನಡುವೆ ಘೋರ ದುರಂತ!”: ಲಿಫ್ಟ್ ಕೇಬಲ್ ತುಂಡಾಗಿ ತಮ್ಮನಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಾನ್ಪುರ, ಏ. 8: ಉತ್ತರ ಪ್ರದೇಶದ ಕಾನ್ಪುರದ ಮುಬಾರಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಬಿದ್ದ ಪರಿಣಾಮ ವರನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ಯಾಸ್ ಕೊರತೆಯಿಂದಾಗಿ ಅಡುಗೆಗೆ ಕಟ್ಟಿಗೆ ತರಲು ಹೋದಾಗ ಈ ಅನಾಹುತ ಸಂಭವಿಸಿದೆ. ಮದುವೆ ಸಮಾರಂಭದ ವೇಳೆ ಅಡುಗೆಗೆ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿತ್ತು. ಈ ಕಾರಣದಿಂದಾಗಿ ವರನ ಸಹೋದರ ಕೆಳಮಹಡಿಯಿಂದ ಕಟ್ಟಿಗೆಯನ್ನು ಲಿಫ್ಟ್ ಮೂಲಕ ಮೇಲೆ ತರಲು ಪ್ರಯತ್ನಿಸುತ್ತಿದ್ದರು. ಲಿಫ್ಟ್‌ನಲ್ಲಿ ಕಟ್ಟಿಗೆಯನ್ನು ತುಂಬಿಸಿ ಕೆಳಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್‌ನ ಕೇಬಲ್ ತುಂಡಾಗಿದೆ. ಕೇಬಲ್ ಕಟ್ ಆದ ತಕ್ಷಣ ಲಿಫ್ಟ್ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಲಿಫ್ಟ್ ನೆಲಕ್ಕೆ ಅಪ್ಪಳಿಸಿದ ತೀವ್ರತೆಗೆ ಅದರಲ್ಲಿದ್ದ ವರನ ಸಹೋದರನಿಗೆ ಗಂಭೀರವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಅಲ್ಲಿದ್ದವರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ದೃಶ್ಯಗಳು ಕಲ್ಯಾಣ ಮಂಟಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ. ಕಲ್ಯಾಣ ಮಂಟಪದ ಲಿಫ್ಟ್ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲು ಅರ್ಜುನ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಇಂದು (ಏಪ್ರಿಲ್ 8) 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ (ಏಪ್ರಿಲ್ 7) ರಾತ್ರಿಯಿಂದಲೇ ದೇಶದ ವಿವಿಧ ಮೂಲೆಗಳಿಂದ ಬಂದ ಸಾವಿರಾರು ಅಭಿಮಾನಿಗಳು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ನಟನ ನಿವಾಸದ ಮುಂದೆ ಜಮಾಯಿಸಿದ್ದರು. ಈ ವೇಳೆ ಜನದಟ್ಟಣೆ ಮಿತಿಮೀರಿದ ಕಾರಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ (Lathi Charge) ನಡೆಸಬೇಕಾಯಿತು. ಸೋಶಿಯಲ್ ಮೀಡಿಯಾದಲ್ಲಿ ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಲು ಮಂಗಳವಾರ ರಾತ್ರಿಯೇ ಅಭಿಮಾನಿಗಳು ಫಲಕ ಮತ್ತು ಉಡುಗೊರೆಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. ಅಭಿಮಾನಿಗಳ ಕೂಗಾಟ ಮತ್ತು ನೂಕುನುಗ್ಗಲು ಹೆಚ್ಚಾದಾಗ, ಅಲ್ಲು ಅರ್ಜುನ್ ಅವರ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬುಧವಾರ ಬೆಳಿಗ್ಗೆ ಅಲ್ಲು ಅರ್ಜುನ್ ಅವರು ತಮ್ಮ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದರು. ಈ ವೇಳೆ ಅಭಿಮಾನಿಯೊಬ್ಬರು ‘ಪುಷ್ಪ 2: ದಿ ರೂಲ್’ ಸಿನಿಮಾದ ಜಾತ್ರೆ ಗೆಟಪ್‌ನಲ್ಲಿ ಬಂದು ಎಲ್ಲರ ಗಮನ ಸೆಳೆದರು. ಅಭಿಮಾನಿಗಳ ಪ್ರೀತಿಗೆ ಮನಸೋತ ಅಲ್ಲು ಅರ್ಜುನ್, ಕಾಂಪೌಂಡ್ ಗೋಡೆಯ ಮೇಲೆ ನಿಂತು ಕೈ ಮುಗಿದು ಎಲ್ಲರಿಗೂ ಧನ್ಯವಾದ ತಿಳಿಸಿದರು. ಅಷ್ಟೇ ಅಲ್ಲದೆ, ಹತ್ತಿರಕ್ಕೆ ಬಂದು ಅಭಿಮಾನಿಗಳ ಕೈ ಮುಟ್ಟಿ ಸಂಭ್ರಮ ಹಂಚಿಕೊಂಡರು.

‘ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ನಾನು ಸದಾ ಋಣಿ. ಇಷ್ಟು ದೂರದಿಂದ ಬಂದು ನನಗೆ ಶುಭ ಕೋರುತ್ತಿರುವುದಕ್ಕೆ ಧನ್ಯವಾದಗಳು’ ಎಂದು ಅಲ್ಲು ಅರ್ಜುನ್ ಅವರು ಅಭಿಮಾನಿಗಳ ಪ್ರೀತಿಗೆ ಪ್ರತಿಕ್ರಿಯಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶದಲ್ಲಿ ಕೂಡ ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳು ಇದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಬೆಳೆಯಲು ಈ ಎಲ್ಲಾ ವ್ಯಕ್ತಿಗಳು ಕಾರಣ

ಅಲ್ಲು ಅರ್ಜುನ್ ಅವರು ಈಗ ನಿರ್ದೇಶಕ ಅಟ್ಲಿ ಜೊತೆಗಿನ ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಆ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ‘ರಾಕಾ’ ಎಂದು ಶೀರ್ಷಿಕೆ ಇಡಲಾಗಿದೆ. ಅಲ್ಲು ಅರ್ಜುನ್ ಅವರ ಲುಕ್ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್​​ಗೆ ದೊಡ್ಡ ಶಾಕ್; ಅಸ್ಸಾಂನಲ್ಲಿ ಚುನಾವಣೆಗೂ ಕೆಲವೇ ಗಂಟೆ ಮೊದಲು ಪಕ್ಷಕ್ಕೆ ಅಭ್ಯರ್ಥಿ ರಾಜೀನಾಮೆ!

ಗುವಾಹಟಿ, ಏಪ್ರಿಲ್ 8: ಅಸ್ಸಾಂನಲ್ಲಿ ಮತದಾನಕ್ಕೆ (Assam Assembly Elections) ಕೆಲವೇ ಗಂಟೆಗಳು ಬಾಕಿ ಇರುವಾಗ ಉದಲ್ಗುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ಡೈಮರಿ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಅವರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಅವರು ಇನ್ನೂ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಸುರೇನ್ ಅವರ ಈ ನಿರ್ಧಾರದಿಂದ ಕಾಂಗ್ರೆಸ್​ಗೆ ದೊಡ್ಡ ಶಾಕ್ ಉಂಟಾಗಿದೆ.

ಈ ಬಗ್ಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದರೂ ಸುರೇನ್ ಡೈಮರಿ ಅವರ ಹೆಸರು ಇವಿಎಂನಲ್ಲಿ ಇರಲಿದೆ. ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಬಹಳ ಹಿಂದೆಯೇ ಮುಗಿದಿರುವುದರಿಂದ ಜನರು ನಾಳೆ ಅವರಿಗೆ ಮತ ಚಲಾಯಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಕಾಂಗ್ರೆಸ್ ಪಕ್ಷವು ತನ್ನ ಪರವಾಗಿ ಪ್ರಚಾರವನ್ನು ನಿರ್ಲಕ್ಷಿಸಿದೆ ಎಂದು ಸುರೇನ್ ಡೈಮರಿ ಆರೋಪಿಸಿದ್ದಾರೆ. ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಸುರೇನ್ ಡೈಮರಿ, ತಮ್ಮ ಉಮೇದುವಾರಿಕೆಯ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು ಅಗತ್ಯ ಬೆಂಬಲ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

“ನನಗೆ ಪಕ್ಷ ಅಥವಾ ಅದರ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದ್ದರಿಂದ ನಾನು ಪಕ್ಷ ಬಿಟ್ಟು ಹೊರಟಿದ್ದೇನೆ. ನನಗೆ ಯಾವುದೇ ಬೆಂಬಲ ಸಿಗಲಿಲ್ಲ. ಅದಕ್ಕಾಗಿಯೇ ನಾನು ಹಿಂದೆ ಸರಿದಿದ್ದೇನೆ. ಪಕ್ಷದ ನಾಯಕರನ್ನು ಸಂಪರ್ಕಿಸಲು ನಾನು ಪದೇ ಪದೇ ಪ್ರಯತ್ನಗಳನ್ನು ಮಾಡಿದರೂ ಉತ್ತರ ಸಿಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಅಸ್ಸಾಂನಲ್ಲಿ ನಾಳೆ ಅಂದರೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್

ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ಸದ್ಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿತ್ರದ ಶೂಟಿಂಗ್ ಹೇಗೆ ನಡೆಯುತ್ತಿದೆ ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ದಳಪತಿ ವಿಜಯ್ ನಟನೆಯ ‘ಜಗ ನಾಯಗನ್’ (Jana Nayagan) ಸಿನಿಮಾದ ವಿಳಂಬದ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು.

ಸಿನಿಮಾ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಜೈಲರ್ 2’ ಬಗ್ಗೆ ಮಾತನಾಡಿದ ರಜನಿಕಾಂತ್, ‘ಜೈಲರ್ 2 ಚಿತ್ರದ ಚಿತ್ರೀಕರಣಕ್ಕೆ ಇನ್ನು ಕೇವಲ 2ರಿಂದ 3 ದಿನಗಳ ಕೆಲಸ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಶೂಟಿಂಗ್ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು. ಈ ಚಿತ್ರದಲ್ಲಿ ಅವರು ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಹಳ ವರ್ಷಗಳ ನಂತರ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ (KHxRK) ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಬಗ್ಗೆಯೂ ತಲೈವಾ ಮಾತನಾಡಿದ್ದಾರೆ. ಚಿತ್ರದ ಕಥೆ ಈಗಾಗಲೇ ಫೈನಲ್ ಆಗಿದೆ. ಆಗಸ್ಟ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಣ ಸಂಸ್ಥೆಗಳೇ ಅಧಿಕೃತವಾಗಿ ತಿಳಿಸಲಿವೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ ರಜನಿಕಾಂತ್ ಅವರು ‘ಜನ ನಾಯಗನ್’ ಬಗ್ಗೆ ಮೌನ ತಾಳಿದರು. ಈ ಸಿನಿಮಾ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ತುಸು ಗಂಭೀರವಾಗಿಯೇ ಅವರು ಪ್ರತಿಕ್ರಿಯಿಸಿದರು. ‘ಕ್ಷಮಿಸಿ, ಈ ಪ್ರಶ್ನೆಗೆ ಉತ್ತರಿಸಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ಹಾಗಾಗಿ ಅವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್

ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರವು ಈ ವರ್ಷದ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆ ವಿಳಂಬವಾಗಿದೆ. ಸದ್ಯ ಈ ಚಿತ್ರವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಳಂಬ ಆಗಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ಆರೋಪ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version