ಮತ್ತೆ ಬಾಲಿವುಡ್​​ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ

ಮತ್ತೆ ಬಾಲಿವುಡ್​​ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ

ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟ, ತೆಲುಗು ರಾಜ್ಯಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಧನುಶ್ ಅವರು ದಕ್ಷಿಣದಲ್ಲಿ ಮಾತ್ರವಲ್ಲ ಹಿಂದಿ ಭಾಷಿಕ ಪ್ರದೇಶದಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರ ನಟನೆಯ ‘ರಾಂಝನಾ’ ಸಿನಿಮಾ. 2013 ರಲ್ಲಿ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ ‘ರಾಂಝನಾ’ ಹಿಂದಿಯ ಕಲ್ಟ್ ಕ್ಲಾಸಿಕ್​​ಗಳಲ್ಲಿ ಒಂದು. ಅದಾದ ಬಳಿಕ ಸತತವಾಗಿ ಧನುಶ್ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ.

ಧನುಶ್ ಮತ್ತು ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಅವರದ್ದು ಜೋಡಿಯೇ ಆಗಿಬಿಟ್ಟಿದೆ. ಇತ್ತೀಚೆಗಷ್ಟೆ ಧನುಶ್, ಕೃತಿ ಸನೋನ್ ನಟಿಸಿದ್ದ ‘ತೇರೆ ಇಷ್ಕ್ ಮೇ’ ಸಿನಿಮಾವನ್ನು ಆನಂದ್ ಎಲ್ ರಾಯ್ ನಿರ್ದೇಶಿಸಿದ್ದು, ಸಿನಿಮಾ ಸಾಧಾರಣ ಹಿಟ್ ಅಷ್ಟೇ ಆಯ್ತಾದರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳೇ ವ್ಯಕ್ತವಾಗಿದ್ದವು. ಇದೀಗ ಧನುಶ್ ಅವರು ಮತ್ತೊಮ್ಮೆ ಹಿಂದಿ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಆನಂದ್ ಅವರೇ ಧನುಶ್ ಅವರ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಈ ವರೆಗೆ ಆನಂದ್ ಅವರು, ಧನುಶ್ ಅನ್ನು ಸ್ಟ್ರೀಟ ಲವ್ವರ್, ಠಪೋರಿ ರೀತಿಯ ಪಾತ್ರಗಳಲ್ಲೇ ತೋರಿಸಿದ್ದರು. ಆದರೆ ಮೊದಲ ಬಾರಿಗೆ ಧನುಶ್ ಅವರಿಗಾಗಿ ಐತಿಹಾಸಿಕ ಕತೆಯನ್ನು ಆನಂದ್ ಅವರು ಹೆಣೆದಿದ್ದಾರೆ. ಆನಂದ್ ಅವರು ಪೀರಿಯಡ್ ಲವ್ ಸ್ಟೋರಿ ಒಂದನ್ನು ಹೆಣೆದಿದ್ದು, ಸಿನಿಮಾನಲ್ಲಿ ಧನುಶ್ ಜೊತೆಗೆ ಕೃತಿ ಸನೋನ್ ನಾಯಕಿಯಾಗಿ ನಟಿಸಲಿದ್ದಾರೆ. ‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿಯೂ ಕೃತಿ ಸನೋನ್ ನಾಯಕಿ ಆಗಿದ್ದರು. ಧನುಶ್ ಅಂಥಹಾ ನಟನ ಮುಂದೆ ಸಹ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾಗಿ ಇದೇ ಜೋಡಿಯನ್ನು ಆನಂದ್ ಅವರು ತಮ್ಮ ಹೊಸ ಸಿನಿಮಾಕ್ಕೂ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ

‘ರಾಂಝನಾ’, ‘ಅತರಂಗಿ ರೇ’, ‘ತೇರೆ ಇಷ್ಕ್ ಮೇ’ ಸಿನಿಮಾಗಳು ಧನುಶ್ ಮತ್ತು ಆನಂದ್ ಎಲ್ ರಾಯ್ ಅವರ ಕಾಂಬಿನೇಷನ್​​ನಲ್ಲಿ ಈ ವರೆಗೆ ಮೂಡಿ ಬಂದಿದ್ದು, ಈ ಮೂರು ಸಿನಿಮಾಗಳು ಅದ್ಭುತ ಪ್ರೇಮಕತೆಯನ್ನು ಒಳಗೊಂಡಿವೆ. ಇದೀಗ ಮೊದಲ ಬಾರಿಗೆ ಆನಂದ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರೇಮಕತೆ ನಿರ್ದೇಶಿಸಲು ಕೈ ಹಾಕಿದ್ದಾರೆ. ಧನುಶ್ ಅವರೂ ಸಹ ಐತಿಹಾಸಿಕ ರೀತಿಯ ಪಾತ್ರಗಳಲ್ಲಿ ನಟಿಸಿರುವುದು ಕಡಿಮೆಯೇ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೀಡಿ, ಸಿಗರೇಟ್ ವಿಚಾರಕ್ಕೆ ಜೈಲಲ್ಲೇ ಡಿಶುಂ ಡಿಶುಂ: ಸಿಬ್ಬಂದಿ ಮೇಲೆ ಕೈದಿಗಳ ಅಟ್ಯಾಕ್​

ಬಳ್ಳಾರಿ, ಏಪ್ರಿಲ್​​ 08: ಜೈಲು ಎಂದರೆ ಮಾಡಿದ ತಪ್ಪಿಗೆ ಅಪರಾಧಿಗಳು ಶಿಕ್ಷೆಯ ಅವಧಿಯನ್ನು ಕಳೆಯಬೇಕಾದ ಮತ್ತು ತಮ್ಮನ್ನು ತಾವು ತಿದ್ದುಕೊಳ್ಳಬೇಕಾದ ಜಾಗ. ಆದರೆ ಪ್ರಸ್ತುತವಾಗಿ ರಾಜ್ಯದ ಜೈಲುಗಳು ಇವಕ್ಕೆ ತದ್ವಿರುದ್ಧವಾಗಿವೆ. ಮನಃ ಪರಿವರ್ತನೆ ಮಾಡಿಕೊಳ್ಳುವ ಬದಲು ಕೈದಿಗಳು ಹೊರಗಿನಗಿಂತಲೂ ಬಂಧೀಖಾನೆಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇರೋದು ಕಾರಗೃಹದಲ್ಲಿ ಅನ್ನೋದು ಒಂದನ್ನು ಹೊರತು ಪಡಿಸಿದರೆ ದುಡ್ಡು ಕೊಟ್ಟರೆ ಏನು ಬೇಕಾದರೂ ಇಲ್ಲಿ ಸಿಗುತ್ತೆ ಎಂಬ ಸ್ಥಿತಿ ಇದೆ. ರಾಜಾತಿಥ್ಯ ಪ್ರಕರಣಗಳ ಬಗ್ಗೆ ಸಾಲು ಸಾಲು ವರದಿಯಾಗುತ್ತಿದ್ದರೂ, ಕೈದಿಗಳ ಪುಂಡಾಟಕ್ಕೆ ಮಾತ್ರ ಇನ್ನೂ ಬ್ರೇಕ್​​ ಬಿದ್ದಿಲ್ಲ.

ಇನ್ನು ಜೈಲು ಸಿಬ್ಬಂದಿಗೆ ಹೆದರಬೇಕಿದ್ದ ಕೈದಿಗಳು ಅವರನ್ನೇ ಹೆದರಿಸುತ್ತಿರೋದು, ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೇ ಸರಿ. ಮೊನ್ನೆ ಮೊನ್ನೆಯಷ್ಟೇ ಮೊಬೈಲ್​​ ತಪಾಸಣೆಗೆ ಹೋದ ಸಿಬ್ಬಂದಿಗೆ ಪರಪ್ಪನ ಅಗ್ರಹಾರದ ಕೈದಿಗಳು ಬೆದರಿಕೆ ಹಾಕಿರುವ ಘಟನೆ ಮಾಸುವ ಮುನ್ನವೇ ಇತ್ತ ಬಳ್ಳಾರಿಯಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಸೆಂಟ್ರಲ್ ಜೈಲಿನಲ್ಲಿ ಬೀಡಿ, ಸಿಗರೇಟ್ ನೀಡದಿರುವ ವಿಚಾರಕ್ಕೆ ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದಾರೆ. ಜೈಲರ್ ಅಶೋಕ ಹೊಸಮನಿ ಜೊತೆ ಮಾತಿನಚಕಮಕಿ ನಡೆಸಿದ ಕೈದಿಗಳು, ವಾಗ್ವಾದದ ನಂತರ ದಾಳಿ ನಡೆಸಿದ್ದಾರೆ. ಅಲ್ತಾಫ್, ರಶೀದ್ ಸೇರಿದಂತೆ ಐವರು ಕೈದಿಗಳಿಂದ ಅಟ್ಯಾಕ್​​ ನಡೆದಿದ್ದು, ಈ ಸಂಬಂಧ ಬಳ್ಳಾರಿಯ ಬ್ರೂಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್

ಕಾರವಾರ ಜೈಲಿನಲ್ಲೂ ನಡೆದಿತ್ತು ಇಂತಹುದ್ದೇ ಘಟನೆ

ತಂಬಾಕು ಮತ್ತು ಇನ್ನಿತರೆ ಮದಕ ವಸ್ತುಗಳ ಬಳಕೆಗೆ ಆಸ್ಪದ ನೀಡದ ಕಾರಣಕ್ಕೆ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳು ಹಲ್ಲೆಗೆ ಮುಂದಾದ ಘಟನೆ ಕೆಲ ತಿಂಗಳುಗಳ ಹಿಂದೆಯಷ್ಟೇ ಕಾರವಾರ ಜೈಲಿನಲ್ಲಿಯೂ ನಡೆದಿತ್ತು. ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬವರು ಅಟ್ಯಾಕ್​​ಗೆ ಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಹೆಚ್ಚಿನ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಬೆಂಗಳೂರು, ಏಪ್ರಿಲ್ 8: ಆಧಾರ್, ಪ್ಯಾನ್ ಇತ್ಯಾದಿ ವೈಯಕ್ತಿಕ ದಾಖಲೆಗಳನ್ನು ಎಲ್ಲೆಂದರಲ್ಲಿ ನೀಡಬಾರದು ಎಂದು ಸರ್ಕಾರ ಪದೇ ಪದೇ ಹೇಳುತ್ತಿರುತ್ತದೆ. ವಂಚಕರು ಈ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾದ ಘಟನೆಯೊಂದು ಈ ಎಚ್ಚರಿಕೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ (PAN) ಅನ್ನು ಪಡೆದು, ದುರುಳರು 22 ಲಕ್ಷ ರೂ ಮೊತ್ತದ ಐದು ವಿವಿಧಗಳನ್ನು ಮಾಡಿದ್ದಾರೆ. ಉತ್ತಮವಾಗಿದ್ದ ಆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಒಮ್ಮೆಗೇ ಕುಸಿದಿದೆ. ಈ ಘಟನೆಯನ್ನು ಟ್ಯಾಕ್ಸ್ ಅಡ್ವೈಸರಿ ಸಂಸ್ಥೆಯಾದ ಟ್ಯಾಕ್ಸ್​ಬಡ್ಡಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ವಿವರಿಸಿದೆ.

ಪ್ಯಾನ್ ದುರ್ಬಳಕೆ ಪತ್ತೆ ಮಾಡುವುದು ಹೇಗೆ?

ನಿಯಮಿತವಾಗಿ ನೀವು ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವ ಅಭ್ಯಾಸ ರೂಢಿಸಿಕೊಳ್ಳಿ. ಕ್ರೆಡಿಟ್ ಬ್ಯೂರೋಗಳಾದ ಸಿಬಿಲ್, ಎಕ್ಸ್​ಪೀರಿಯನ್, ಈಕ್ವಿಫ್ಯಾಕಸ್ ಅಥವಾ ಸಿಆರ್​ಐಎಫ್, ಯಾವುದಾದರೂ ಒಂದರಲ್ಲಿ ನೀವು ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಪಡೆಯಬಹುದು. ನಿಮ್ಮ ಪ್ಯಾನ್ ಮತ್ತು ಮೊಬೈಲ್ ನಂಬರ್ ಇದ್ದರೆ ಸಾಕು.

ಇದನ್ನೂ ಓದಿ: ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ಕ್ರೆಡಿಟ್ ಸ್ಕೋರ್ ಅನ್ನು ಎಷ್ಟು ಬಾರಿ ಬೇಕಾದರೂ ನೋಡಬಹುದು. ಕ್ರೆಡಿಟ್ ರಿಪೋರ್ಟ್ ಅನ್ನು ವರ್ಷಕ್ಕೆ ಒಮ್ಮೆ ಉಚಿತವಾಗಿ ಪಡೆಯಬಹುದು. ಹೆಚ್ಚು ಬೇಕೆಂದರೆ ಒಂದಿಷ್ಟು ಶುಲ್ಕ ಕೊಡಬೇಕು.

ದುರ್ಬಳಕೆ ಪತ್ತೆ ಸಾಧ್ಯತೆ

ನೀವು ಕ್ರೆಡಿಟ್ ಸ್ಕೋರ್ ಮೊದಲು ಪರಿಶೀಲಿಸಬಹುದು. ಸ್ಕೋರ್ ಅಸಹಜವಾಗಿ ವ್ಯತ್ಯಾಸಗೊಂಡಿದ್ದರೆ ಅಲರ್ಟ್ ಆಗಿರಿ. ಕೂಡಲೇ ಕ್ರೆಡಿಟ್ ರಿಪೋರ್ಟ್ ಪಡೆಯಿರಿ. ಈ ರಿಪೋರ್ಟ್​ನಲ್ಲಿ ನಿಮ್ಮ ಪ್ಯಾನ್ ಅಡಿಯಲ್ಲಿ ದಾಖಲಾದ ಎಲ್ಲಾ ಲೋನ್ ದಾಖಲೆ, ಕ್ರೆಡಿಟ್ ಕಾರ್ಡ್ ದಾಖಲೆಗಳ ಮಾಹಿತಿ ಇರುತ್ತದೆ. ನೀವು ಭಾಗಿಯಾಗಿರದ ಚಟುವಟಿಕೆ ಯಾವುದಾದರೂ ಇದ್ದರೆ ತತ್​ಕ್ಷಣವೇ ಕ್ರೆಡಿಟ್ ಬ್ಯೂರೋಗೆ ದೂರು ಕೊಡಿ.

ನಿಮ್ಮ ಪ್ಯಾನ್ ಬಳಸಿ ಯಾರಾದರೂ ಸಾಲ ಪಡೆದಿದ್ದರೆ, ಆ ಬ್ಯಾಂಕ್​ಗೆ ಹೋಗಿಯೂ ದೂರು ಕೊಡಬಹುದು. ಇದರಿಂದ ನಿಮ್ಮದಲ್ಲದ ತಪ್ಪಿಗೆ ನೀವು ಬಲಿಯಾಗುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಪ್ಯಾನ್ ದುರ್ಬಳಕೆ ಮಾಡಿದರೆ ನಿಮಗೆ ಆಗುವ ಹಾನಿಗಳು…

ಪ್ಯಾನ್ ದುರ್ಬಳಕೆ ಮಾಡಿಕೊಳ್ಳುವವರು ಉದ್ದೇಶಪೂರ್ವಕವಾಗಿ ವಂಚನೆ ಮಾಡುವಂಥವರೇ ಆಗಿರುತ್ತಾರೆ. ಸಾಲ ಪಡೆದು ಮರುಪಾವತಿಸದೇ ಹೋಗಬಹುದು. ಆಗ ಪ್ಯಾನ್ ನಂಬರ್ ನಿಮ್ಮದಾಗಿರುವುದರಿಂದ ಬ್ಯಾಂಕ್​ನವರು ನಿಮ್ಮ ಬೆನ್ನು ಬೀಳಬಹುದು. ಕ್ರೆಡಿಟ್ ಏಜೆನ್ಸಿಗಳು ನಿಮ್ಮ ಸ್ಕೋರ್ ಅನ್ನು ತಗ್ಗಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಳೆ ಕೇಸ್​​ನಲ್ಲಿ ವಾಟಾಳ್ ನಾಗರಾಜ್ ಅರೆಸ್ಟ್, ಆಟೋದಲ್ಲಿ ಕೋರ್ಟ್​​ಗೆ ಕರೆದೊಯ್ದ ಪೊಲೀಸ್ರು

ಬೆಂಗಳೂರು, (ಏಪ್ರಿಲ್ 08): ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Kannada Activist Vatal Nagaraj )  ಅವರನ್ನು ಬೆಂಗಳೂರಿನ ಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.  42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು (ಏಪ್ರಿಲ್ 08) ವಾಟಾಳ್ ನಾಗರಾಜ್ ಅವರನ್ನ ಬಂಧಿಸಿ ಆಟೋದಲ್ಲಿ ಕೋರ್ಟ್​​ಗೆ ಕರೆದುಕೊಂಡು ಹೋಗಿದ್ದಾರೆ. 2021ರಲ್ಲಿ ಕೊರೊನಾ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ ವಾಟಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದರು, ಈ ಸಂಬಂಧ ದೂರು ದಾಖಲಾಗಿತ್ತು. ಆದ್ರೆ,ಈ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅದರಂತೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಖತ್ ಫೈಟ್ ಮಾಡ್ತಾರೆ ರಾಮ್ ಗೋಪಾಲ್ ವರ್ಮಾ: ವಿಡಿಯೋ

ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ತಮ್ಮ ವಿವಾದಾತ್ಮಕ ಹೇಳಿಕೆಗಳು, ಟ್ವೀಟುಗಳಿಂದಲೇ ಹೆಚ್ಚು ಜನಪ್ರಿಯರು. ಇತ್ತೀಚೆಗಷ್ಟೆ ತಾವು ಇನ್ನು ಮುಂದೆ ತೆಲುಗು ಸಿನಿಮಾ ಮಾಡುವುದಿಲ್ಲ, ಹಿಂದಿ ಸಿನಿಮಾ ಮಾಡುವುದಾಗಿ ಘೋಷಿಸಿ, ವಾಸ್ತವ್ಯವನ್ನು ಮುಂಬೈಗೆ ಶಿಫ್ಟ್ ಸಹ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ವರ್ಮಾ ಸಖತ್ ಆಗಿ ಫೈಟ್ ಮಾಡುತ್ತಿದ್ದಾರೆ. ಅವರ ಆಕ್ಷನ್​ ನೆಟ್ಟಿಗರನ್ನು ಅವಾಕ್ಕಾಗಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ ದೈಹಿಕ ಸಂಪರ್ಕ: ಪತಿಗೆ ಶಾಕ್​​ ಕೊಟ್ಟ ಹೈಕೋರ್ಟ್​​

ಬೆಂಗಳೂರು, ಏಪ್ರಿಲ್​​ 08: ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಪ್ರಕರಣ ಸಂಬಂಧ ಪತಿಯ ವಿರುದ್ಧದ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದಯ ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಅದಾಗಲೇ ದಂಪತಿ ಬೇರೆಯಾಗಿದ್ದರೂ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಕಾರಣ ಪತಿಯ ವಿರುದ್ಧ ಐಪಿಸಿ ಸೆ. 376(ಬಿ) ಅಡಿ ಕೇಸ್ ದಾಖಲಾಗಿತ್ತು. ಪತ್ನಿ ದಾಖಲಿಸಿದ್ದ ಕೇಸ್ ರದ್ದು ಕೋರಿ ಹೈಕೋರ್ಟ್​ಗೆ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಪತಿ ಪರ ವಕೀಲರ ವಾದವೇನು?

ಸಾಂಸಾರಿಕ ವೈಮನಸ್ಸಿನಿಂದ 2019ರಿಂದಲೇ ಪತ್ನಿಯಿಂದ ಪತಿ ಪ್ರತ್ಯೇಕವಾಗಿದ್ದರು. ಹೀಗಿದ್ದರೂ 2021ರಲ್ಲಿ ಪತ್ನಿ ಮನೆಗೆ ಬಂದು ಒತ್ತಾಯದ ದೈಹಿಕ ಸಂಪರ್ಕ ನಡೆಸಿದ್ದು, ರಾಜಿ ಸಂಧಾನಕ್ಕೆಂದು ಮನೆಗೆ ಆಹ್ವಾನಿಸಿ ದೈಹಿಕ ಸಂಪರ್ಕ ನಡೆಸಿರೋದಾಗಿ ದೂರಲಾಗಿತ್ತು. ಆದರೆ ಆರೋಪ ನಿರಾಕರಿಸಿದ್ದ ಪತಿ ಪರ ವಕೀಲರು, ಆರೋಪಿಸಿರುವಂತೆ ಯಾವುದೇ ದೈಹಿಕ ಸಂಪರ್ಕ ನಡೆದಿರಲಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ; ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಸ್ವತಃ ವಾದ ಮಂಡಿಸಿದ್ದ ಪತ್ನಿ

ಇನ್ನು ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿಯೇ ಸ್ವತಃ ಹೈಕೋರ್ಟ್​​ನಲ್ಲಿ ತನ್ನ ಪರವಾಗಿ ವಾದಿಸಿಕೊಂಡಿದ್ದು, ತನ್ನ ಮೇಲೆ ನಡೆದಿರುವ ದೌರ್ಜನ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ ಪತಿಯ ಅರ್ಜಿ ತಿರಸ್ಕರಿಸುವಂತೆ ಕೋರ್ಟ್​ನ ಮನವಿ ಮಾಡಿದ್ದರು. ಎರಡೂ ಕಡೆಯವರ ಪರ ಮತ್ತು ವಿರೋಧ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಂತಿಮವಾಗಿ ಪತಿಯ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಆ ಮೂಲಕ ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದಿಂದ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳಸಿರುವ ಈ ಪ್ರಕರಣದ ವಿಚಾರಣೆ ಅಗತ್ಯವಿದೆ ಎಂಬ ಸಂದೇಶ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ತಮಿಳುನಾಡು ಚುನಾವಣೆಯ (Tamil Nadu Elections) ಕಾವು ಏರುತ್ತಿರುವ ಬೆನ್ನಲ್ಲೇ, ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಅವರು ಬುಧವಾರ (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದಳಪತಿ ವಿಜಯ್ (Thalapathy Vijay) ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ನನ್ನನ್ನು ಜನರಿಂದ ದೂರವಿಡಲು ವಿರೋಧಿಗಳು ಒಂದಲ್ಲ ಒಂದು ದಾರಿ ಹುಡುಕುತ್ತಿದ್ದಾರೆ. ಮೊದಲು ಕರೂರ್ ಘಟನೆಯನ್ನು ನನ್ನ ಮೇಲೆ ಹಾಕಲು ನೋಡಿದರು. ಈಗ ನನ್ನ ಸಿನಿಮಾದ ಬಿಡುಗಡೆಯನ್ನು ತಡೆಯುತ್ತಿದ್ದಾರೆ. ನಾನು ಜನರನ್ನು ಭೇಟಿ ಮಾಡಬಾರದು ಎಂದು ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಅಷ್ಟೇ ಅಲ್ಲದೇ, ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿಜಯ್ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಮೌನ ಮುರಿದ ವಿಜಯ್, ‘ಚುನಾವಣೆಗೆ 30 ದಿನ ಬಾಕಿ ಇರುವಾಗ ನನ್ನ ಆಪ್ತರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಏನೇ ಆದರೂ ನೀವು ನನ್ನನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

‘ನನ್ನ ಮೇಲೆ ಎಷ್ಟೇ ಆರೋಪಗಳನ್ನು ಹೊರಿಸಿದರೂ ಜನರು ನನ್ನ ಜೊತೆಗಿದ್ದಾರೆ. ಈ ಪವಾಡವನ್ನು ನೋಡಿ ವಿರೋಧಿಗಳಿಗೆ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯ್ ತಮ್ಮ ಭಾಷಣದಲ್ಲಿ ಗುಡುಗಿದ್ದಾರೆ. ವಿಜಯ್ ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ತೀವ್ರವಾಗಿದೆ.

ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ಈ ವರ್ಷ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಮಾರ್ಚ್ನಲ್ಲಿ ನಟಿ ತ್ರಿಶಾ ಅವರೊಂದಿಗೆ ವಿಜಯ್ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರಿಂದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಅವರ ವೈಯಕ್ತಿಕ ಜೀವನದ ವಿಚಾರವನ್ನು ರಾಜಕೀಯದಲ್ಲಿ ಎಳೆದುತಂದಿದ್ದಕ್ಕೆ ವಿಜಯ್ ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೌರ ಯುಗಾದಿಯ ಪರಿಣಾಮದಿಂದ ಏನೆಲ್ಲ ಬದಲಾವಣೆಯಾಗಲಿದೆ…

ಸೌರಮಾನ ಯುಗಾದಿಯು ಏಪ್ರಿಲ್ 14ರಂದು ಆಗಲಿದ್ದು ಸಂದರ್ಭದಲ್ಲಿ ಗ್ರಹಗಳ ಸ್ಥಿತಿಗತಿಗಳು ಕೇವಲ ವೈಯಕ್ತಿಕ ಜೀವನದ ಮೇಲಲ್ಲದೆ, ಇಡೀ ಸಮಾಜದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಗ್ಗಲುಗಳ ಮೇಲೆ ಗಾಢವಾದ ಪರಿಣಾಮ ಬೀರಲಿವೆ. ಈ ಸಂಧಿಕಾಲದ ಕುರಿತು ಅವಲೋಕನ ಅಗತ್ಯ.

​ಸೌರಮಾನ ಯುಗಾದಿಯ ದಿನದಂದು ಗ್ರಹಗಳ ಸಂಯೋಜನೆಯು ಸಾಮಾಜಿಕವಾದ ಅನೇಕ ಬದಲಾವಣೆಗೆ ಕಾರಣವೂ ಆಗಲಿದೆ. ​ಈ ಬಾರಿಯ ಯುಗಾದಿಯು ಪರಿವರ್ತನೆಯ ಕಾಲ ಎಂದು ಕರೆಯಲ್ಪಡಲು ಪ್ರಮುಖ ಕಾರಣವೆಂದರೆ ಬೃಹತ್ ಗ್ರಹಗಳಾದ ಶನಿ, ರಾಹು ಮತ್ತು ಗುರುವಿನ ವಿಶಿಷ್ಟ ನಡೆ.

​ಶನಿ-ರಾಹಗಳ ಬದಲಾವಣೆ: ಸಾಮಾಜಿಕ ಮಥನ:

ಕುಂಭದಲ್ಲಿ ರಾಹುವಿನ ಸ್ಥಿತಿಯು ಸಮಾಜದಲ್ಲಿ ಒಂದು ಬಗೆಯ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಲೋಕದಲ್ಲಿ ಅಭೂತಪೂರ್ವ ಬದಲಾವಣೆಗಳು ಕಂಡುಬರುತ್ತವೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಸವಾಲುಗಳನ್ನು ತಂದರೂ, ದೀರ್ಘಕಾಲಿಕವಾಗಿ ಸಮಾಜವನ್ನು ಆಧುನೀಕರಣದತ್ತ ಕೊಂಡೊಯ್ಯುತ್ತದೆ. ಕೆಳವರ್ಗಗಳ ಧ್ವನಿಯು ಬಲವಾಗುವ ಸಾಧ್ಯತೆ ಇದೆ. ಹಳೆಯ ಕಾನೂನುಗಳಲ್ಲಿ ತಿದ್ದುಪಡಿ ಅಥವಾ ಹೊಸ ಸಾಮಾಜಿಕ ನಿಯಮಗಳ ಜಾರಿಗೆ ಈ ಕಾಲ ಪೂರಕವಾಗಿದೆ.

ಜ್ಞಾನಾರ್ಜನೆ:

ಬೃಹಸ್ಪತಿಯು ಮಿಥುನ ರಾಶಿಯಲ್ಲಿ ಇರುವುದು ಸಮಾಜದ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ವಿಶೇಷವಾಗಿ ವೇದ-ಪುರಾಣಗಳಂತಹ ಪ್ರಾಚೀನ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸುವ ಪ್ರಯತ್ನಗಳು ಸಮಾಜದಲ್ಲಿ ಮನ್ನಣೆ ಪಡೆಯುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದ್ದು, ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು ಸಿಗಲಿದೆ.

ಆರ್ಥಿಕ ಮತ್ತು ಕೃಷಿ ಸ್ಥಿತಿಗತಿ:

ಸೌರಮಾನ ಯುಗಾದಿಯಂದು ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಆಡಳಿತ ಮಂಡಳಿಗಳು ಕಠಿಣ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಶನಿಯ ಪ್ರಭಾವದಿಂದ ಸಾಂಪ್ರದಾಯಿಕ ಕೃಷಿಗಿಂತ ತಾಂತ್ರಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬಂದರೂ, ವರ್ಷದ ದ್ವಿತೀಯಾರ್ಧದಲ್ಲಿ ಸ್ಥಿರತೆ ಬರಲಿದೆ. ಆರಂಭಿಕ ಹಂತದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಬಹುದು, ಆದರೆ ಜೂನ್ ಅನಂತರ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ.

ರಾಜಕೀಯಯ ಹಳೆಯ ಮೈತ್ರಿಗಳು ಮುರಿದು ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗುತ್ತವೆ. ಆರೋಗ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿ. ಧರ್ಮ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ; ಸಂಪ್ರದಾಯದ ಪುನರುತ್ಥಾನ. ಪರಿಸರದ ಭೂಮಿಯ ಉಷ್ಣಾಂಶ ಏರಿಕೆಯಿಂದಾಗಿ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಗಂಭೀರ ಚಿಂತನೆ.

ಈ ಕಾಲಘಟ್ಟವು ಕ್ಷೋಭೆ ಮತ್ತು ಸೃಷ್ಟಿ ಎರಡನ್ನೂ ಒಳಗೊಂಡಿದೆ. ಸಮಾಜವು ಹಳೆಯ ಜಡತ್ವವನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಪ್ಪಿಕೊಳ್ಳುವ ಪ್ರಕ್ರಿಯೆಯೇ ಈ ಯುಗಾದಿಯ ಫಲ.
​ಈ ಗ್ರಹಗತಿಗಳು ಸಮಾಜದಲ್ಲಿ ಸತ್ಯ ಮತ್ತು ಪಾರದರ್ಶಕತೆಯನ್ನು ಬಯಸುತ್ತವೆ. ಯಾರೂ ಎಣಿಸದಂತಹ ಆಕಸ್ಮಿಕ ಬದಲಾವಣೆಗಳು ಈ ಸಂವತ್ಸರದಲ್ಲಿ ಸಂಭವಿಸುವ ಸಾಧ್ಯತೆಗಳಿವೆ.

– ಲೋಹಿತ ಹೆಬ್ಬಾರ್

Source link

ಟಾಟಾ ಏಸ್, ಕಾರಿನ ನಡುವೆ ಭೀಕರ ಅಪಘಾತ: ಮೂವರ ಸ್ಥಿತಿ ಗಂಭೀರ

ಹಾವೇರಿ, ಏಪ್ರಿಲ್​​ 08: ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟಾಟಾ ಏಸ್ ವಾಹನ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರೇಮಲ್ಲಾಪುರ ಗ್ರಾಮದಿಂದ ಹಾನಗಲ್ ಕಡೆಗೆ ಮದುವೆ ಸಮಾರಂಭದ ಅಡುಗೆ ಮಾಡಲು ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆತನಿಗೆ ಮಹಿಳೆಯರ ಒಳ ಉಡುಪು ಮಾತ್ರ ಬೇಕು: ನಮಗೆ ತುಂಬಾ ಭಯ ಆಗ್ತಿದೆ ಎಂದ ಗೃಹಿಣಿ

ಚಾಮರಾಜನಗರ, ಏ.8: ಜಿಲ್ಲೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಸೈಕೋಪಾತ್ ಒಬ್ಬನ ಉಪಟಳದಿಂದ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಗೃಹಿಣಿಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ವಿಚಿತ್ರ ಕೃತ್ಯಗಳು ವರದಿಯಾಗುತ್ತಿವೆ. ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ, ಒಬ್ಬ ಅಪರಿಚಿತ ವ್ಯಕ್ತಿ ಮಹಿಳೆಯರ ವೇಷಧರಿಸಿ ಮನೆಗಳ ಮುಂದೆ ಒಣಗಲು ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾನೆ. ಈ ಸೈಕೋಪಾತ್ ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ಒಂದು ವಿಕೃತಿಯನ್ನು ಮೆರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇವು ಬೆಳಕಿಗೆ ಬಂದ ನಂತರ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಈ ಪ್ರದೇಶದ ಮಹಿಳೆಯರು ಮತ್ತು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹಿಣಿ ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಚಾಮರಾಜನಗರವನ್ನು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂತಹ ಘಟನೆಗಳಿಂದ ಪ್ರಸ್ತುತ ನಿರ್ಜನ ಪ್ರದೇಶವೆನ್ನಿಸುವ ವಾಸಸ್ಥಳದಲ್ಲಿ ಒಂಟಿಯಾಗಿರುವ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಯ ಮನಸ್ಥಿತಿ ಯಾವ ರೀತಿ ಇದೆ ಎಂಬುದು ತಿಳಿದಿಲ್ಲ. ಮುಂದೆ ಈತನಿಂದ ಬೇರೆ ಯಾವುದೇ ಅನಾಹುತಗಳಾಗುವ ಸಾಧ್ಯತೆಗಳಿರುವುದರಿಂದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಸೈಕೋಪಾತ್ ಮಕ್ಕಳ ಮೇಲೆ ದುಷ್ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳ್ಳತನದಂತಹ ಪ್ರಕರಣಗಳನ್ನು ಕಂಡಿದ್ದೇವೆ, ಆದರೆ ಒಳ ಉಡುಪುಗಳನ್ನು ಕದ್ದು ಧರಿಸುವ ಇಂತಹ ವಿಕೃತಕಾಮಿಯ ಕೃತ್ಯವು ತೀರಾ ವಿಚಿತ್ರವಾಗಿದೆ. ಈತನಿಂದ ಯಾವುದೇ ಆಪತ್ತು ಸಂಭವಿಸುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಂಡು, ಬಂಧನ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್, ಒಬವ್ವ ಪಡೆ ಮತ್ತು ಅಕ್ಕಪಡೆಗಳಂತಹ ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಕೋಪಾತ್‌ನನ್ನು ಶೀಘ್ರವಾಗಿ ಬಂಧಿಸಿ ಮಹಿಳೆಯರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version