ಪ್ರದೀಪ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ ಪವನ್ ಕಲ್ಯಾಣ್, ಪ್ರಭುದೇವ – Kannada News | Actor Pradeep Rawat passes away Pawan Kalyan Vishnu Manchu pay tribute

ಬಾಲಿವುಡ್, ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕವೇ ಹೆಸರುವಾಸಿಯಾಗಿದ್ದ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು ಆಗಸ್ಟ್ 4ರಂದು ನಿಧನರಾದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಕಾಯಿಲೆ ಉಲ್ಬಣಿಸಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan), ನಟ ವಿಷ್ಣು ಮಂಚು, ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಿಂದಿ ಕಿರುತೆರೆ ಹಾಗೂ ಬಾಲಿವುಡ್ ಸಿನಿಮಾ ಮೂಲಕ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ ಪ್ರದೀಪ್ ರಾವತ್ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ವಿಲನ್ ಆಗಿ ಹೊರಹೊಮ್ಮಿದ್ದರು. ‘ಘಜನಿ’ ಸಿನಿಮಾದ ಕ್ರೂರಿ ವಿಲನ್ ಹಾಗೂ ‘ಲಗಾನ್’ ಚಿತ್ರದ ದೇವ್ ಪಾತ್ರದ ಮೂಲಕ ಇಡೀ ದೇಶದ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಛಾಪು ಮೂಡಿಸಿದ್ದರು.

ಕಂಬನಿ ಮಿಡಿದ ಪವನ್ ಕಲ್ಯಾಣ್:

ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು, ‘ಶ್ರೀ ಪ್ರದೀಪ್ ರಾವತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹೆಸರಾಂತ ನಟ ಪ್ರದೀಪ್ ರಾವತ್ ಅವರ ನಿಧನದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ತಮ್ಮ ಜೊತೆ ನಟಿಸಿದ ದಿನಗಳನ್ನು ನೆನೆದ ಪವನ್ ಕಲ್ಯಾಣ್, ‘ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿದ ಪ್ರದೀಪ್ ರಾವತ್ ಅವರು ತಮ್ಮ ವಿಲನ್ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿದ್ದರು. ನಾನು ನಟಿಸಿದ ‘ಸರ್ದಾರ್ ಗಬ್ಬರ್ ಸಿಂಗ್’ ಮತ್ತು ‘ಕಾಟಮರಾಯುಡು’ ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಪ್ರದೀಪ್ ರಾವತ್ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: ದರ್ಶನ್, ಸುದೀಪ್​​ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದ ಪ್ರದೀಪ್ ರಾವತ್

‘ತೆರೆಯ ಮೇಲೆ ಮಾತ್ರ ವಿಲನ್’ ಎಂದ ವಿಷ್ಣು ಮಂಚು:

ನಟ ವಿಷ್ಣು ಮಂಚು ಅವರು ಪ್ರದೀಪ್ ರಾವತ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ, ‘ಪ್ರದೀಪ್ ರಾವತ್ ಅವರ ಅಗಲಿಕೆ ದುಃಖ ತಂದಿದೆ. ಬೆಳ್ಳಿತೆರೆಯ ಮೇಲೆ ಅವರು ಪೋಷಿಸಿದ ಪ್ರತಿಯೊಂದು ಪಾತ್ರಕ್ಕೂ ಅಗಾಧವಾದ ಶಕ್ತಿ ತುಂಬುತ್ತಿದ್ದರು. ಆದರೆ ತೆರೆಯ ಹಿಂದೆ ಅಥವಾ ನಿಜ ಜೀವನದಲ್ಲಿ ಅವರು ಸಂಪೂರ್ಣ ಭಿನ್ನರಾಗಿದ್ದರು. ಅತ್ಯಂತ ವಿನಮ್ರ, ಸರಳ, ಪ್ರೀತಿಯ ವ್ಯಕ್ತಿಯಾಗಿದ್ದರು. ಅವರನ್ನು ನಾನು ಸದಾ ಹೀಗೆಯೇ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಭಗವಂತ ಈ ನೋವನ್ನು ತಡೆಯುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ’ ಎಂದು ಭಾವನಾತ್ಮಕವಾಗಿ ಕಂಬನಿ ಮಿಡಿದಿದ್ದಾರೆ.

ಪ್ರಭುದೇವ, ಯಶಪಾಲ ಶರ್ಮಾ ಸಂತಾಪ:

ಖ್ಯಾತ ನಟ, ನಿರ್ದೇಶಕ ಪ್ರಭುದೇವ ಅವರು ಪ್ರದೀಪ್ ರಾವತ್ ಅವರ ಫೋಟೋ ಹಂಚಿಕೊಂಡು, ‘ಪ್ರದೀಪ್ ರಾವತ್ ಸರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ನನ್ನ ಸಾಂತ್ವನಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಮಾಡಿದ್ದಾರೆ. ಮಂಗಳವಾರ ಸಾಯಂಕಾಲ ಹಿರಿಯ ನಟ ಯಶಪಾಲ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ರಾವತ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ‘ನಮ್ಮ ಗಜನಿ, ಲಗಾನ್ ಸಿನಿಮಾದ ದೇವ್ ಪ್ರದೀಪ್ ರಾವತ್ ಇನ್ನು ನೆನಪು ಮಾತ್ರ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Guest Lecturer Recruitment: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Bangalore University Guest Lecturer Recruitment 2026 27: Apply Online for Teaching Posts

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನImage Credit source: Getty Images

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಹಾಗೂ ರಾಮನಗರದ ಸ್ನಾತಕೋತ್ತರ ಕೇಂದ್ರದಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಬೋಧನೆ ನಡೆಸಲು ಪೂರ್ಣಕಾಲಿಕ ಮತ್ತು ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯದ ಕುಲಸಚಿವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ನಿಯಮಾವಳಿಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ನಿಯಮಾವಳಿಗಳ ಪ್ರಕಾರ ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು (PG) ಪೂರ್ಣಗೊಳಿಸಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಯಮಾವಳಿಗಳನ್ನು ಪರಿಶೀಲಿಸಲು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ bangaloreuniversitykarnataka.gov.in ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಮತ್ತು ಪ್ರಮುಖ ದಿನಾಂಕಗಳು:

ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಪೋರ್ಟಲ್ ಆಗಸ್ಟ್ 05 ರ ಬೆಳಿಗ್ಗೆ 10:00 ಗಂಟೆಯಿಂದ ಸಕ್ರಿಯಗೊಂಡಿದ್ದು, ಆಗಸ್ಟ್ 21ರ ಸಂಜೆ 5:00 ಗಂಟೆಯವರೆಗೆ ಲಭ್ಯವಿರುತ್ತದೆ. ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳು ತಮ್ಮ ಮಾಹಿತಿಯನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ವಿಶ್ವವಿದ್ಯಾಲಯ ಕೋರಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ – Kannada News | Unity Small Finance Bank offers upto 7pc interest rates for savings accounts

ಬೆಂಗಳೂರು, ಆಗಸ್ಟ್ 5: ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Unity Small Finance Bank) ತನ್ನ ಉಳಿತಾಯ ಖಾತೆಗಳ (Savings Account) ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಗರಿಷ್ಠ ಶೇಕಡಾ 7.00 ರವರೆಗೆ ಬಡ್ಡಿದರವನ್ನು ನೀಡುತ್ತಿದೆ. ಹೊಸ ಬಡ್ಡಿದರಗಳು ಆಗಸ್ಟ್ 1 ರಿಂದಲೇ ಅನ್ವಯಕ್ಕೆ ಬಂದಿವೆ. ಈ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್​ಗಳಿಗೂ ಬೆಸ್ಟ್ ರೇಟ್ಸ್ ಆಫರ್ ಮಾಡುತ್ತಿದೆ. ಇಲ್ಲಿಯ ಸ್ಥಿರ ಠೇವಣಿಗಳಿಗೆ (Fixed Deposit) ಶೇ. 8.5ರವರೆಗೂ ಬಡ್ಡಿದರ ಇದೆ. ದೇಶಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಈ ಬ್ಯಾಂಕ್​ನ ಶಾಖೆಗಳಿವೆ.

ಬ್ಯಾಂಕ್ ತನ್ನ ಉಳಿತಾಯ ಖಾತೆಯಲ್ಲಿ ಇರಿಸಲಾಗುವ ಬ್ಯಾಲೆನ್ಸ್ (ಹಣದ ಮೊತ್ತ) ಆಧಾರದ ಮೇಲೆ ಈ ಕೆಳಗಿನಂತೆ ಬಡ್ಡಿದರಗಳನ್ನು ನಿಗದಿಪಡಿಸಿದೆ. ಪರಿಷ್ಕೃತ ಉಳಿತಾಯ ಖಾತೆ ಬಡ್ಡಿದರಗಳ ವಿವರ ಇಂತಿದೆ:

  • ₹1 ಲಕ್ಷದವರೆಗೆ: 4.50% ಬಡ್ಡಿದರ
  • ₹1 ಲಕ್ಷದಿಂದ ₹5 ಲಕ್ಷದವರೆಗೆ: 6.00%
  • ₹5 ಲಕ್ಷಕ್ಕಿಂತ ಹೆಚ್ಚು: 7.00%

ಬ್ಯಾಂಕ್ ಗ್ರಾಹಕರ ಖಾತೆಗೆ ಪ್ರತಿ ತಿಂಗಳು ಬಡ್ಡಿಯನ್ನು ಜಮಾ (Monthly Interest Credit) ಮಾಡಲಿದ್ದು, ಗ್ರಾಹಕರು ತಮ್ಮ ಉಳಿತಾಯದಿಂದ ಉತ್ತಮ ಲಾಭ ಪಡೆಯಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

FD ಮೇಲಿನ ಬಡ್ಡಿದರಗಳು: ಹಿರಿಯ ನಾಗರಿಕರಿಗೆ ವಿಶೇಷ ಆಫರ್

ಯುನಿಟಿ ಬ್ಯಾಂಕ್ ತನ್ನ 501 ದಿನಗಳ ವಿಶೇಷ ಸ್ಥಿರ ಠೇವಣಿ (Fixed Deposit) ಪ್ಲಾನ್​ನಲ್ಲಿ ಹಿರಿಯ ನಾಗರಿಕರಿಗೆ ಶೇ. 8.50 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಇದೇ ಅವಧಿಗೆ ಶೇ. 8.00 ರಷ್ಟು ಬಡ್ಡಿ ಸಿಗಲಿದೆ. 501 ದಿನ ಎಂದರೆ ಸುಮಾರು 16-17 ತಿಂಗಳ ಅವಧಿಯದ್ದು.

ಇತರ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳ ಎಫ್‌ಡಿ (FD) ಬಡ್ಡಿದರಗಳ ಹೋಲಿಕೆ

ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತಿರುವ ಇತರ ಬ್ಯಾಂಕ್‌ಗಳ ವಿವರ ಇಲ್ಲಿದೆ:

  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Utkarsh SFB): 666 ದಿನಗಳ FD ಮೇಲೆ ಸಾಮಾನ್ಯ ನಾಗರಿಕರಿಗೆ 8.10% ಮತ್ತು ಹಿರಿಯ ನಾಗರಿಕರಿಗೆ 8.25% ಬಡ್ಡಿ.
  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Ujjivan SFB): 2 ವರ್ಷಗಳ ಅವಧಿಗೆ ಹಿರಿಯ ನಾಗರಿಕರಿಗೆ 8.30% ವರೆಗೆ ಬಡ್ಡಿ.
  • ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Equitas SFB): 3 ವರ್ಷ 1 ದಿನದ ಅವಧಿಗೆ ಹಿರಿಯ ನಾಗರಿಕರಿಗೆ 8.50% ಬಡ್ಡಿ.

ಇಲ್ಲಿ ಯುನಿಟಿ ಮಾತ್ರವಲ್ಲ, ಇತರ ಹಲವು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳು ಸೇವಿಂಗ್ಸ್ ಅಕೌಂಟ್​ಗೆ 7% ಕ್ಕಿಂತ ಹೆಚ್ಚು ಬಡ್ಡಿ ಆಫರ್ ಮಾಡುತ್ತಿವೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ಕೋಟಿ ರೂ ಮೇಲ್ಪಟ್ಟ ಹಣಕ್ಕೆ 7.75% ಬಡ್ಡಿ ನೀಡುತ್ತದೆ. 10 ಲಕ್ಷ ರೂ ಮೇಲ್ಪಟ್ಟ ಹಣಕ್ಕೆ 7.50% ಬಡ್ಡಿ ನೀಡುತ್ತದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಹಣ ಫಿಕ್ಸೆಡ್ ಡೆಪಾಸಿಟ್ ಇಡಬಹುದು?

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 50 ಲಕ್ಷ ರೂ ಮೇಲ್ಪಟ್ಟ ಹಣಕ್ಕೆ ಶೇ. 7.50 ಬಡ್ಡಿ, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಶೇ. 7.25 ಬಡ್ಡಿ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಯುನಿಟಿ ಬ್ಯಾಂಕ್ ಶಾಖೆಗಳು

ಮುಂಬೈನಲ್ಲಿ ಮುಖ್ಯ ಕಚೇರಿ ಇರುವ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ 14 ಶಾಖೆಗಳನ್ನು ಹೊಂದಿದೆ. ಜಯನಗರ, ಬನಶಂಕರ್ 3ನೇ ಹಂತ, ಕೋರಮಂಗಲ, ರಾಜಾಜಿನಗರ, ಜೆಪಿ ನಗರ, ವಿಜಯನಗರ, ಬಸವೇಶ್ವರನಗರ, ಕನ್ನಿಂಗ್ಹ್ಯಾಂ ರಸ್ತೆ, ಹೆಸರಘಟ್ಟ ಇತ್ಯಾದಿ ಕಡೆ ಈ ಬ್ಯಾಂಕ್ ಶಾಖೆಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ: ಉಪಮುಖ್ಯಮಂತ್ರಿ ಘೋಷಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ – Kannada News | Karnataka Cabinet Formation: Jarkiholi on Nagendras Ministerial Role Amidst Bail and DCM Speculations

ಬೆಂಗಳೂರು, ಆ.5: ಸಂಪುಟ ರಚನೆಯ ಸುತ್ತ ಚರ್ಚೆಗಳು ನಡೆಯುತ್ತಿರುವಾಗ, ಶಾಸಕ ಸತೀಶ್ ಜಾರಕಿಹೊಳಿ ಅವರು ಹಲವಾರು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಾಮೀನಿನ ಮೇಲೆ ಇರುವ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಪ್ರಶ್ನಿಸಿದಾಗ, “ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಎಲ್ಲ ಹಿರಿಯರು ಚರ್ಚಿಸಿ ಇದನ್ನು ಮಾಡಿದ್ದಾರೆ,” ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿಗಳ ಘೋಷಣೆ ಇನ್ನೂ ಆಗದಿರುವ ಬಗ್ಗೆ ಮಾತನಾಡಿದ ಅವರು, “ಪಕ್ಷದಲ್ಲಿ ಇದರ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಖಾತೆ ಹಂಚಿಕೆ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಇದನ್ನು ಯಾವುದೇ ಸಮಯದಲ್ಲಿ ಮಾಡಬಹುದು,” ಎಂದು ತಿಳಿಸಿದರು. ಅಲ್ಲದೆ, ಕೆಲವು ಹುದ್ದೆಗಳಿಗೆ ಹಣ ನೀಡಿರಬಹುದು ಎಂಬ ಆಡಿಯೋ ವೈರಲ್ ಬಗ್ಗೆ, “ಇದು ಕೇವಲ ಊಹಾಪೋಹ. ಯಾರಿಗೆ ಹಣ ನೀಡಿದ್ದಾರೆಂದು ಅವರು ಹೇಳಲಿ,” ಎಂದು ತಳ್ಳಿಹಾಕಿದರು. ಮಹಿಳಾ ಮಂತ್ರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, “ಮಹಿಳೆಯರಿಗಾಗಿ ಒಂದು ಸ್ಥಾನ ಖಾಲಿ ಇದೆ. ಮಹಿಳಾ ಪ್ರಾತಿನಿಧ್ಯ ಇಲ್ಲದೆ ಮಂತ್ರಿಮಂಡಲ ಆಗುವುದಿಲ್ಲ. ಹೈಕಮಾಂಡ್ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ,” ಎಂದು ಭರವಸೆ ನೀಡಿದರು. ಕೊರಟಗೆರೆ ರಾಜೀನಾಮೆ ವಿಚಾರ ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಟಾರ್ಟಿಕಾದಿಂದ ರೋಮ್​ ವರೆಗೆ ‘ವಾರಣಾಸಿ’ ಚಿತ್ರೀಕರಣ ನಡೆದಿದ್ದು ಎಲ್ಲೆಲ್ಲಿ? – Kannada News | In which contries did Varanasi movie has been shot till now

ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಕ್ಯಾನ್ವಾಸ್ ಬಲು ವಿಶಾಲ. ಇದೊಂದು ‘ಆಕ್ಷನ್-ಅಡ್ವೇಂಚರ್’ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾಕ್ಕಾಗಿ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಕಥೆಯು ಖಂಡಗಳನ್ನು ದಾಟಿ ಶತಮಾನಗಳನ್ನು ದಾಟಿ ಸಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ಹೆಸರಿನಂತೆ ಕತೆ ಪ್ರಾರಂಭವಾಗುವುದು ‘ವಾರಣಾಸಿ’ಯಲ್ಲಿ ಆದರೆ ಅದು ಅಲ್ಲಿಂದ ಹಲವು ದೇಶಗಳನ್ನು ದಾಟಿ ಸಾಗಿ ಕೊನೆಗೆ ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಬೃಹತ್ ಕ್ಯಾನ್ವಾಸ್ ಹೊಂದಿರುವ ಈ ಸಿನಿಮಾವನ್ನು ರಾಜಮೌಳಿ ಅವರು ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅವುಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಪವಿತ್ರ ನಗರ ವಾರಣಾಸಿಯಿಂದ ಆರಂಭವಾಗಿ ಅಂಟಾರ್ಕ್ಟಿಕಾಕ್ಕೆ ಹೋಗಿ, ಅಲ್ಲಿಂದ ಆಫ್ರಿಕಾ, ನಂತರ ಕಾಲದಲ್ಲಿ ಹಿಂದೆ ಸರಿದು ಪ್ರಾಚೀನ ರೋಮ್‌ಗೆ ಪ್ರಯಾಣಿಸಿ, ಅಂತಿಮವಾಗಿ ಎಲ್ಲವೂ ಎಲ್ಲಿ ಆರಂಭವಾಯಿತೋ ಅಲ್ಲಿಗೆ ಮರಳುತ್ತದೆ ಎಂದು ರಾಜಮೌಳಿ ಇತ್ತೀಚೆಗಿನ ಹೇಳಿದ್ದಾರೆ. ‘ನಾವು ಒಂದು ಟೀಸರ್ ಬಿಡುಗಡೆ ಮಾಡಿದ್ದೇವೆ, ಆದರೆ ನಾನು ಕಥೆಯನ್ನು ಹೆಚ್ಚು ಬಹಿರಂಗಪಡಿಸಲು ಸಾಧ್ಯವಿಲ್ಲ, ಬದಲಿಗೆ, ಕಥೆಯನ್ನು ಬಿಟ್ಟುಕೊಡದೆ ಪ್ರೇಕ್ಷಕರು ಯಾವ ರೀತಿಯ ಅನುಭವವನ್ನು ನಿರೀಕ್ಷಿಸಬಹುದು ಎಂಬುದನ್ನು ತೋರಿಸುವ ವೀಡಿಯೊವನ್ನು ನಾವು ಮಾಡಿದ್ದೇವೆ’ ಎಂದು ರಾಜಮೌಳಿ ಯುರೋಪಿಯನ್ ಮ್ಯಾಗಜೀನ್ ‘ತ್ಸೌನಾಮಿ’ ಜೊತೆಗಿನ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ

ಚಿತ್ರೀಕರಣದ ಶೇಕಡಾ 80 ರಷ್ಟು ಭಾಗ ಪೂರ್ಣಗೊಂಡಿದ್ದು, ಸಣ್ಣಪುಟ್ಟ ದೃಶ್ಯಗಳು ಮಾತ್ರ ಬಾಕಿ ಇವೆ, ಎಲ್ಲಾ ಪ್ರಮುಖ ಆಕ್ಷನ್ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. ‘ಆರ್‌ಆರ್‌ಆರ್’ ಮುಗಿದ ನಂತರ ನಾವು 2022 ರಲ್ಲಿ ಕಥೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆವು. ಇದು ಸುಮಾರು ನಾಲ್ಕುವರೆ ವರ್ಷಗಳಿಂದ ಸಾಗುತ್ತಿದೆ, ದಸರಾ ಹಬ್ಬದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಉಳಿದ ಶೇಕಡಾ 20 ರಷ್ಟು ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ನಡೆಸಲಾಗುವುದು ‘ವಾರಣಾಸಿ’ ಸಂಪೂರ್ಣವಾಗಿ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾದ ಮೊದಲ ಇಂಗ್ಲಿಷ್ ಅಲ್ಲದ ಚಿತ್ರ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಾಧ್ಯಮಗಳು ‘ವಾರಣಾಸಿ’ ಚಿತ್ರವನ್ನು ‘ಇಂಡಿಯಾನ ಜೋನ್ಸ್’ ಮತ್ತು ‘ಜೇಮ್ಸ್ ಬಾಂಡ್’ ಫ್ರಾಂಚೈಸಿಗಳ ಮಿಶ್ರಣ ಎಂದು ಬಣ್ಣಿಸಿವೆ. ಮುಂಚೆ ‘ಇನ್ವರ್ಸ್’ ಜೊತೆಗಿನ ಸಂದರ್ಶನದಲ್ಲಿ ಎಸ್​ಎಸ್ ರಾಜಮೌಳಿ ಅವರು ಕಥೆಯ ತಿರುಳಾಗಿರುವ ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡಿದ್ದರು. ಮಹೇಶ್ ಬಾಬು ಅವರು ಸಾಮಾನ್ಯ ಮನುಷ್ಯ ರುದ್ರ ಮತ್ತು ಭಗವಾನ್ ರಾಮನಾಗಿ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ನೀವು ರಾಮನ ಸಂಪೂರ್ಣ ಕಥೆಯನ್ನು ಅರ್ಥಮಾಡಿಕೊಳ್ಳದೇ ಇರಬಹುದು, ಪಾತ್ರಗಳ ಭಾವನೆಗಳನ್ನು ನೀವು ಅರ್ಥಮಾಡಿಕೊಂಡರೆ, ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದಲ್ಲಿ ಹಾಲೇತರ ಪನೀರ್ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, 1 ಲಕ್ಷ ರೂ. ದಂಡ – Kannada News | Maharashtra Government bans Analogue or non dairy paneer violators face 6 months in jail and Rs 1 lakh fine

ಮುಂಬೈ, ಆಗಸ್ಟ್ 5: ನಾವು ಸೇವಿಸುವ ಆಹಾರ ಎಷ್ಟು ಕಲಬೆರಕೆ ಆಗುತ್ತಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದೀಗ ಹಾಲೇತರ ಪನೀರ್ (Paneer) ಅಥವಾ ಅನಲಾಗ್ ಪನೀರ್ (Analogue paneer) ಬಳಕೆಯ ಮೇಲೆ ನಿಷೇಧ ಹೇರಿದೆ. ನೋಡಲು ಹಾಲಿನ ಪನೀರ್ ರೀತಿಯೇ ಇರುವ ಅನಲಾಗ್ ಪನೀರ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಛತ್ತೀಸ್‌ಗಢದ ನಂತರ ಇಂತಹ ನಿಷೇಧವನ್ನು ಹೇರಿದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಮಹಾರಾಷ್ಟ್ರ ರಾಜ್ಯದಾದ್ಯಂತ ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿಕ್ಷೆಯ ಪ್ರಮಾಣ:

ನಿಷೇಧ ಹೇರಿದರೂ ಅನಲಾಗ್ ಪನೀರ್ ಬಳಸುವವರಿಗೆ ಆಹಾರ ಭದ್ರತೆ ಮತ್ತು ಮಾನದಂಡಗಳ ಕಾಯ್ದೆ 2006ರ (FSSAI) ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ, 2 ಲಕ್ಷ ಮನೆಗಳಿಗೆ ವಿದ್ಯುತ್ ಸ್ಥಗಿತ

ಸಾಮಾನ್ಯ ಉಲ್ಲಂಘನೆ: 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ.

ಅಸುರಕ್ಷಿತ ಆಹಾರದಿಂದ ಸಾವು ಸಂಭವಿಸಿದರೆ: ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗ್ರಾಹಕರಿಗೆ ವಂಚನೆ: ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ನಂಬಿಸಿ ಮಾರಾಟ ಮಾಡುವುದು ಗ್ರಾಹಕರನ್ನು ಹಾದಿತಪ್ಪಿಸುವ ಮತ್ತು ಕಾನೂನುಬಾಹಿರ ವ್ಯಾಪಾರ ಜಾಲಕ್ಕೆ ಸೇರುತ್ತದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ.

ಏನಿದು ‘ಅನಲಾಗ್’ ಪನೀರ್?:

ಅನಲಾಗ್ ಪನೀರ್ ಎಂಬುದು ಸಾಂಪ್ರದಾಯಿಕ ಹಾಲಿನ ಕೊಬ್ಬಿನ (ಮಲೈ) ಬದಲಿಗೆ ಸಸ್ಯಜನ್ಯ ಎಣ್ಣೆ (ಪಾಮ್ ಆಯಿಲ್), ಸ್ಟಾರ್ಚ್ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸುವ ಹಾಲೇತರ ಪನೀರ್ ಉತ್ಪನ್ನವಾಗಿದೆ. ಆಹಾರ ಭದ್ರತಾ ಪ್ರಾಧಿಕಾರದ (FSSAI) ನಿಯಮಾವಳಿಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದ ಮಾತ್ರ ತಯಾರಿಸಬೇಕು. ಅದರಲ್ಲಿ ಯಾವುದೇ ಪಿಷ್ಟ (ಸ್ಟಾರ್ಚ್) ಅಥವಾ ಹಾಲೇತರ ಕೊಬ್ಬನ್ನು ಸೇರಿಸುವಂತಿಲ್ಲ. FSSAI ಅನಲಾಗ್ ಪನ್ನೀರ್ ಮಾರಾಟಕ್ಕೆ ಅವಕಾಶ ನೀಡುತ್ತದೆಯಾದರೂ, ಅದನ್ನು ‘ಅನಲಾಗ್’ ಎಂದೇ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ, ಹೆಚ್ಚಿನ ಹೋಟೆಲ್ ಹಾಗೂ ವ್ಯಾಪಾರಿಗಳು ಇದನ್ನು ಅಸಲಿ ಪನೀರ್ ಎಂದೇ ಮಾರಿ ವಂಚಿಸುತ್ತಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಪೇಪರ್ ಲೀಕ್ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ

ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಅನಲಾಗ್ ಪನೀರ್ ನಿಷೇಧಿಸುವಂತೆ ಶಾಸಕರು ಒತ್ತಾಯಿಸಿದ್ದರು. ಪ್ರಸ್ತುತ ಜುಲೈ 30ರ ಆದೇಶದ ಮೂಲಕ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಮೇ ತಿಂಗಳಿನಿಂದ ಮಹಾರಾಷ್ಟ್ರದಾದ್ಯಂತ ನಕಲಿ ಹಾಲು ಮತ್ತು ಪನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ (FDA) ಭಾರಿ ದಾಳಿಗಳನ್ನು ನಡೆಸುತ್ತಿದೆ. ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸುಮಾರು 1,400 ಕೆಜಿ ನಕಲಿ ಪನೀರ್ ಅನ್ನು ವಶಪಡಿಸಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:28 pm, Wed, 5 August 26

Source link

ಎಸ್ಟೀಮ್ ಮಾಲ್–ಪಶುವೈದ್ಯಕೀಯ ಕಾಲೇಜು ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು? ಪರಿಸರವಾದಿಗಳ ಆತಂಕ – Kannada News | Tunnel Road Threatens Green Cover: 893 Trees at Risk for 2.2 km Esteem Mall Veterinary College Project in Bengaluru

ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು?

ಬೆಂಗಳೂರು, ಆಗಸ್ಟ್​​ 05: ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗೆ ನಿರ್ಮಾಣವಾಗಲಿರುವ 2.2 ಕಿ.ಮೀ. ಉದ್ದದ ಸುರಂಗ ಮಾರ್ಗ (ಟನಲ್) ಯೋಜನೆಯಿಂದ 893 ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತಿಳಿಸಿದೆ. ಇದರಿಂದ ಉತ್ತರ ಬೆಂಗಳೂರಿನ ಪ್ರಮುಖ ಹಸಿರು ವಲಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಯೋಜನೆಯಿಂದ ಪರಿಣಾಮ ಬೀರುವ 893 ಮರಗಳಲ್ಲಿ ಸುಮಾರು ಶೇ. 85ರಷ್ಟು ಮರಗಳನ್ನು ಸ್ಥಳಾಂತರ (Transplantation) ಮಾಡಲು ಉದ್ದೇಶಿಸಲಾಗಿದೆ. ಈ ಮರಗಳನ್ನು ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಜಾಗಗಳಿಗೆ ಸ್ಥಳಾಂತರಿಸುವ ಯೋಜನೆ ಇದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸುದರ್ಶನ್ ಅವರು, ಈ ಕುರಿತು ಬಿಡಿಎ ಇನ್ನೂ ಫಾರ್ಮ್–1 ಅಡಿಯಲ್ಲಿ ಸಂಪೂರ್ಣ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ

ಹಸಿರು ವಲಯಕ್ಕೆ ಧಕ್ಕೆ

ಈ ಸುರಂಗ ಮಾರ್ಗದ ಸಂರೇಖೆ (Alignment) ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಮರಗಳ ಉದ್ಯಾನ (Tree Park), ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ ಆವರಣಗಳ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶಗಳು ನಗರದಲ್ಲಿನ ಜೀವ ವೈವಿಧ್ಯ ಸಂರಕ್ಷಣೆಗೆ ಪ್ರಮುಖ ಆಶ್ರಯ ತಾಣಗಳಾಗಿವೆ. ಸ್ವತಂತ್ರ ಸಂಶೋಧಕ ಹಾಗೂ ಪರಿಸರ ಶಿಕ್ಷಣ ತಜ್ಞ ಹರೀಶ ಎ.ಎಸ್. ಅವರ ಪ್ರಕಾರ, ಈ ಹಸಿರು ಪ್ರದೇಶಗಳು ಪಕ್ಷಿಗಳು, ಚಿಟ್ಟೆಗಳು ಹಾಗೂ ಇತರ ವನ್ಯಜೀವಿಗಳಿಗೆ ಸುಮಾರು 10 ಕಿ.ಮೀ. ಉದ್ದದ ಹಸಿರು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಮೂಲಸೌಕರ್ಯ ಯೋಜನೆಗಳಿಂದ ಈ ನೈಸರ್ಗಿಕ ಸಂಪರ್ಕ ಈಗಾಗಲೇ ದುರ್ಬಲಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಮರ ಸ್ಥಳಾಂತರ ಯಶಸ್ವಿಯಾಗುವುದು ಅನುಮಾನ

ಪರಿಸರ ಮತ್ತು ಪರಿಸರಶಾಸ್ತ್ರ ಸಂಶೋಧನಾ ಸಂಸ್ಥೆ ATREEಗೆ ಸಂಬಂಧಿಸಿದ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರಜ್ಞ ಗಣೇಶನ್ ಅವರು, ದೊಡ್ಡ ಮರಗಳ ಸ್ಥಳಾಂತರ ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮರಗಳ ಸ್ಥಳಾಂತರ ಕೇವಲ ಹೆಸರಿಗಷ್ಟೇ ನಡೆಯುತ್ತದೆ. ಇವು ಬಹುತೇಕ ಪ್ರೌಢ (ಮೆಚ್ಯೂರ್) ಮರಗಳಾಗಿದ್ದು, ಸ್ಥಳಾಂತರಕ್ಕೆ ಸೂಕ್ತವಾಗಿರುವುದಿಲ್ಲ. ಜಾತಿ ಆಧಾರಿತ ಮೌಲ್ಯಮಾಪನ, ಬೇರುಗಳ ಪೂರ್ವಸಿದ್ಧತೆ ಹಾಗೂ ಹಲವು ತಿಂಗಳ ನಿರ್ವಹಣೆ ಅಗತ್ಯವಿರುತ್ತದೆ. ಆದರೆ ಇಂತಹ ಕ್ರಮಗಳನ್ನು ಸಾಮಾನ್ಯವಾಗಿ ಅನುಸರಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ. ಭಾರೀ ಯಂತ್ರಗಳ ಮೂಲಕ ಮರಗಳನ್ನು ಕಿತ್ತು ಸ್ಥಳಾಂತರಿಸುವಾಗ ಬೇರುಗಳು ಹಾಗೂ ಕೊಂಬೆಗಳು ಹಾನಿಗೊಳಗಾಗುವುದರಿಂದ ಅವು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವ ರಾಮಲಿಂಗಾರೆಡ್ಡಿಗೆ ‘ಅರ್ಚಕರ ಕಣ್ಮಣಿ’ ಬಿರುದು ಸನ್ಮಾನ: ಮುಜರಾಯಿ ಖಾತೆ ನೀಡಲು ಸಿಎಂಗೆ ಅರ್ಚಕರ ಒಕ್ಕೂಟ ಮನವಿ – Kannada News | Bengaluru Priests’ Meet: Ramalinga Reddy ‘Archakara Kanmani’, CM DKS Urged for Muzrai Reforms

ಬೆಂಗಳೂರು ಆ,5: ಕರ್ನಾಟಕ ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರು, ಆಗಮಿಕರು ಹಾಗೂ ಮುಜರಾಯಿ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಇಂದು (ಆ.5) ನಡೆದ ‘ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರ ಬೃಹತ್ ಸಮಾವೇಶ’ದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ‘ಅರ್ಚಕರ ಕಣ್ಮಣಿ’ ಬಿರುದು ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಅರ್ಚಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜಗುರು ದ್ವಾರಕನಾಥ್, “ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆಗೆ ಸಂಜೀವಿನಿಯಂತೆ ಕೆಲಸ ಮಾಡಿದ್ದಾರೆ. ಬಡ ಅರ್ಚಕರ ಸುದೀರ್ಘ ಸಮಸ್ಯೆಗೆ ಸ್ಪಂದಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಅವಧಿ ಸೇರಿದಂತೆ ಮುಂದಿನ 5 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿ ಆಡಳಿತ ನಡೆಸಲಿ” ಎಂದು ಆಶೀರ್ವದಿಸಿದರು.

ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲು ಮೈಸೂರು ಮಹಾರಾಜರ ಕಾಲದ ಪದ್ಧತಿಯಂತೆ ರಾಜ್ಯದ 36,000 ಮುಜರಾಯಿ ದೇವಾಲಯಗಳಲ್ಲಿ ಅರ್ಚಕರಿಂದ ರುದ್ರಜಪ ಮಾಡಿಸಲು ಸರ್ಕಾರ ಸುತ್ತೋಲೆ ಹೊರಡಿಸಬೇಕು ಮತ್ತು ಉಸ್ತುವಾರಿಗೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ರಾಜಗುರು ದ್ವಾರಕನಾಥ್ ಸರ್ಕಾರವನ್ನು ಒತ್ತಾಯಿಸಿದರು.

ಬಡ ಅರ್ಚಕರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮನೆಗಳಿಲ್ಲದೆ ಕಷ್ಟಪಡುತ್ತಿರುವ ಜನರಿಗೆ ಸರ್ಕಾರ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ವೇದಿಕೆಯಲ್ಲಿ ಮನವಿ ಮಾಡಲಾಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅವರು, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮತ್ತೆ ಮುಜರಾಯಿ ಖಾತೆಯನ್ನು ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗವಾಗಿ ಮನವಿ ಸಲ್ಲಿಸಿದರು.

ಇದನ್ನೂ ಓದಿ: ‘ಕೈ’ ಮನೆಯಲ್ಲಿ ತಾರಕಕ್ಕೇರಿದ ಅಸಮಾಧಾನ: ವಿಪಕ್ಷದ ಸಾಲಿನಲ್ಲಿ ಆಸನ ಕೇಳಲು ಮುಂದಾದ ಜಯಚಂದ್ರ, ಹೆಚ್​ಡಿಕೆ ನಡೆ ಸ್ಮರಿಸಿದ ಎಸ್​ಆರ್ ಶ್ರೀನಿವಾಸ್​

ಸಾಲು ಸಾಲು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ಅವರು, “ನಮ್ಮ ಅರ್ಚಕರ ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದರೆ ಮುಂದಿನ 10 ವರ್ಷಗಳ ಕಾಲ ನೀವೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತೀರಿ” ಎಂದು ಸಿಎಂ ಅವರಿಗೆ ಶುಭ ಹಾರೈಸಿದರು. ಈ ವೇಳೆ ನೆರೆದಿದ್ದ ಅರ್ಚಕರು ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡುವಂತೆ ಘೋಷಣೆಗಳನ್ನು ಕೂಗಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TET Deadline Extended: ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಗಡುವು ವಿಸ್ತರಣೆ – Kannada News | TET Deadline Extended to 2028: Mandatory for Govt Teachers by Supreme Court Order

ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಅರ್ಹತೆಯು ಕಡ್ಡಾಯ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಈಗ ವಿಸ್ತರಿಸಲಾಗಿದೆ. ಈ ಹಿಂದೆ ನೀಡಲಾಗಿದ್ದ ಆಗಸ್ಟ್ 31, 2027 ರ ಗಡುವನ್ನು ಮತ್ತೊಂದು ವರ್ಷ ವಿಸ್ತರಿಸಿ, ಆಗಸ್ಟ್ 31, 2028 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ ಆಯೋಜಿಸಲಾದ ಕಲಾಪದ ವೇಳೆ ಘೋಷಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾಯ್ದೆಯ ನಿಯಮಗಳು:

ಲೋಕಸಭೆ ಸದಸ್ಯರೊಬ್ಬರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೇ 29, 2026 ರಂದು ಪರಿಶೀಲನಾ ಅರ್ಜಿಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷಕರಿಗೆ ಈ ಒಂದು ವರ್ಷದ ಹೆಚ್ಚುವರಿ ಅವಧಿಯನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE ಕಾಯ್ದೆ), 2009 ರ ಸೆಕ್ಷನ್ 23 ರ ಅಡಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಹಾಗೂ ಮುಂದುವರಿಯಲು ಟಿಇಟಿ ಕಡ್ಡಾಯ ಕನಿಷ್ಠ ಅರ್ಹತೆಯಾಗಿದೆ. ಸೆಪ್ಟೆಂಬರ್ 1, 2025 ರಂದು ನೀಡಿದ್ದ ತೀರ್ಪಿನಲ್ಲೂ ನ್ಯಾಯಾಲಯ ಇದನ್ನೇ ಪುನರುಚ್ಚರಿಸಿತ್ತು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ವರ್ಷಕ್ಕೆ ಎರಡು ಬಾರಿ TET ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನ:

ಶಿಕ್ಷಣ ವಿಷಯವು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು (Concurrent List), ಶಿಕ್ಷಕರ ನೇಮಕಾತಿ ಹಾಗೂ ಸೇವಾ ನಿಯಮಗಳ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರಗಳು ಪ್ರತಿ ಆರು ತಿಂಗಳಿಗೊಮ್ಮೆ, ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ನಿಯಮಿತ ಪರೀಕ್ಷೆಗಳಿಂದಾಗಿ ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ.

2013 ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರ ಮೇಲೆ ಪರಿಣಾಮ:

ಈ ಕಡ್ಡಾಯ ಟಿಇಟಿ ನಿಯಮವು 2013 ಕ್ಕಿಂತ ಮೊದಲು ನೇಮಕಗೊಂಡಿರುವ ಕೆಲವು ಶಿಕ್ಷಕರ ಸೇವಾ ಪರಿಸ್ಥಿತಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅಂತಹ ಶಿಕ್ಷಕರ ಸೇವಾ ದಾಖಲೆಗಳು ಮತ್ತು ಸಂಪೂರ್ಣ ವಿವರಗಳು ಆಯಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಬಹು ಸರಣಿಗಳ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | Australia Women’s A Tour India: Full Squad, Schedule and Venues for Sep Series

ಬಹು ಸರಣಿಗಳ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಮಹಿಳಾ ಎ ತಂಡವನ್ನು (Australia Women’s A Tour India) ಪ್ರಕಟಿಸಲಾಗಿದೆ. ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ಎ ತಂಡಗಳ ನಡುವೆ ಬರುವ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಮಾದರಿಗಳ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ಎ ಮಹಿಳಾ ತಂಡದ ಈ ಭಾರತ ಪ್ರವಾಸ ಮೂರು ವಾರಗಳ ನಡೆಯಲಿದ್ದು, ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳು, ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಒಂದು ನಾಲ್ಕು ದಿನಗಳ ಪಂದ್ಯ ನಡೆಯಲಿದೆ.

15 ಸದಸ್ಯರ ಆಸ್ಟ್ರೇಲಿಯಾ ಎ ಮಹಿಳಾ ತಂಡ

ಇನ್ನು ಈ ಭಾರತ ಪ್ರವಾಸಕ್ಕಾಗಿ 15 ಸದಸ್ಯರ ಆಸ್ಟ್ರೇಲಿಯಾ ಎ ಮಹಿಳಾ ತಂಡವನ್ನು ಪ್ರಕಟಿಸಿದ್ದು, ಅನುಭವಿ ವೇಗಿಗಳಾದ ಟೇಲಾ ವ್ಲೇಮಿಂಕ್ ಮತ್ತು ಡಾರ್ಸಿ ಬ್ರೌನ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಟೇಲಾ ವ್ಲೇಮಿಂಕ್ ಗಾಯದಿಂದ ಚೇತರಿಸಿಕೊಂಡು ಬಹಳ ದಿನಗಳ ಮಂತರ ಕ್ರಿಕೆಟ್​ಗೆ ಮರಳುತ್ತಿದ್ದು, ಡಾರ್ಸಿ ಬ್ರೌನ್ ಕೂಡ ಬಹಳ ದಿನಗಳ ನಂತರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಸರಣಿಯಲ್ಲಿ ತಹ್ಲಿಯಾ ವಿಲ್ಸನ್ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಮುನ್ನಡೆಸಲಿದ್ದು, ನಿಕೋಲ್ ಫಾಲ್ಟಮ್ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ರಾಚೆಲ್ ಟ್ರೆನಮನ್ ನಾಲ್ಕು ದಿನಗಳ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲಿಗೆ ಮೂರು ಟಿ20 ಪಂದ್ಯಗಳು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊನೆಯದಾಗಿ ನಾಲ್ಕು ದಿನಗಳ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ಮಹಿಳಾ ತಂಡ: ಡಾರ್ಸಿ ಬ್ರೌನ್, ಮೈಟ್ಲಾನ್ ಬ್ರೌನ್, ನಿಕೋಲ್ ಫಾಲ್ಟಮ್, ಟೆಸ್ ಫ್ಲಿಂಟಾಫ್, ಸಿಯಾನಾ ಜಿಂಜರ್, ಚಾರ್ಲಿ ನಾಟ್, ಅನಿಕಾ ಲಿಯರಾಯ್ಡ್, ಕೇಟೀ ಮ್ಯಾಕ್, ಲಿಲ್ಲಿ ಮಿಲ್ಸ್, ಫ್ರಾಂಕಿ ನಿಕ್ಲಿನ್, ಹೇಲಿ ಸಿಲ್ವರ್-ಹೋಮ್ಸ್, ರಾಚೆಲ್ ಟ್ರೆನಮನ್, ಕೋರ್ಟ್ನಿ ವೆಬ್, ತಹ್ಲಿಯಾ ವಿಲ್ಸನ್ ಮತ್ತು ಟೇಲಾ ವ್ಲೇಮಿಂಕ್.

ಪ್ರವಾಸದ ವೇಳಾಪಟ್ಟಿ

ಟಿ20 ಸರಣಿ

  • ಸೆಪ್ಟೆಂಬರ್ 12 – ಮೊದಲ ಟಿ20, ನ್ಯೂ ಚಂಡೀಗಢ
  • ಸೆಪ್ಟೆಂಬರ್ 15 – ಎರಡನೇ ಟಿ20, ನ್ಯೂ ಚಂಡೀಗಢ
  • ಸೆಪ್ಟೆಂಬರ್ 17 – ಮೂರನೇ ಟಿ20, ನ್ಯೂ ಚಂಡೀಗಢ

ಏಕದಿನ ಸರಣಿ

  • ಸೆಪ್ಟೆಂಬರ್ 20- ಮೊದಲ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 23- ಎರಡನೇ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 25 – ಮೂರನೇ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 29–ಅಕ್ಟೋಬರ್ 2- ನಾಲ್ಕು ದಿನಗಳ ಪಂದ್ಯ, ಧರ್ಮಶಾಲಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:10 pm, Wed, 5 August 26

Source link

Exit mobile version