ಪ್ರದೀತ್ ರಾವತ್ ಅನ್ನು ಮರೆತೇ ಬಿಟ್ಟಿತೆ ತೆಲುಗು ಚಿತ್ರರಂಗ? – Kannada News | Telugu Movie Industry forgets Pradeep Rawat contribution

ಪ್ರದೀಪ್ ರಾವತ್ (Pradeep Rawat), ಭಾರತೀಯ ಚಿತ್ರರಂಗದ ಸ್ಟಾರ್ ವಿಲನ್ ನಿನ್ನೆ (ಆಗಸ್ಟ್ 04) ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. 1985ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಾದರೂ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ಜನಪ್ರಿಯತೆ ದಕ್ಷಿಣ ಭಾರತದಲ್ಲಿ ಹೆಚ್ಚಾಯ್ತು. 2004 ರಲ್ಲಿ ರಾಜಮೌಳಿ ನಿರ್ದೇಶನದ ‘ಸೈ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಿದ ಪ್ರದೀಪ್ ರಾವತ್ ಆ ನಂತರ ತೆಲುಗು ಚಿತ್ರರಂಗದ ಅವಿಭಾಜ್ಯ ಅಂಗವೇ ಆಗಿಬಿಟ್ಟರು. ಚಿತ್ರರಂಗದ ಎಲ್ಲ ಸ್ಟಾರ್ ನಟರ ಎದುರು ವಿಲನ್ ಆಗಿ ನಟಿಸಿದರು ಪ್ರದೀಪ್. ಆದರೆ ಈಗ ಪ್ರದೀಪ್ ಅವರನ್ನು ತೆಲುಗು ಚಿತ್ರರಂಗ ಮರೆತೇ ಬಿಟ್ಟಂತಿದೆ.

ಪ್ರದೀಪ್ ರಾವತ್ ಅವರು ನಿನ್ನೆ (ಆಗಸ್ಟ್ 04) ನಿಧನ ಹೊಂದಿದ್ದಾರೆ. ತೆಲುಗು ಚಿತ್ರರಂಗದ ಯಾವೊಬ್ಬ ಸ್ಟಾರ್ ನಟರೂ ಸಹ ಪ್ರದೀಪ್ ಅವರಿಗಾಗಿ ಮೂರಕ್ಷದ ಟ್ವೀಟ್ ಮಾಡಿಲ್ಲ. ಪ್ರದೀಪ್ ಅವರು, ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚು ನಟಿಸಿದ್ದು ತೆಲುಗು ಸಿನಿಮಾಗಳಲ್ಲಿಯೇ. ತೆಲುಗು ಚಿತ್ರರಂಗದಲ್ಲಿ ವಿಲನ್​​ ಪಾತ್ರಕ್ಕೆ ಹೊಸ ಕಳೆಯನ್ನು, ಹೊಸ ಮಾದರಿಯನ್ನು ಹಾಕಿಕೊಟ್ಟ ನಟ ಪ್ರದೀಪ್, ತೆಲುಗು ಚಿತ್ರರಂಗ ಸಹ ಪ್ರದೀಪ್ ಅವರನ್ನು ತಮ್ಮ ಸಿನಿಮಾಗಳಿಗಾಗಿ ಚೆನ್ನಾಗಿ ದುಡಿಸಿಕೊಂಡಿತು, ಆದರೆ ಈಗ ಪ್ರದೀಪ್ ನಿಧನಕ್ಕೆ ಚುಕ್ಕೆ ಕಂಬನಿ ಸಹ ಇಲ್ಲ.

ರಾಜಮೌಳಿ ನಿರ್ದೇಶನದ ‘ಸೈ’ ಸಿನಿಮಾದ ಮೂಲಕ ಪ್ರದೀಪ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಿನಿಮಾದ ಮುಖ್ಯ ಧಾತುವೇ ವಿಲನ್ ‘ಬಿಕ್ಸು ಯಾದವ್’. ಗೂಳಿಯಂಥಹಾ ಮೈಕಟ್ಟು, ಭರ್ಜರಿ ಮೀಸೆ ಹೊಂದಿದ್ದ ಪ್ರದೀಪ್ ಆ ಸಿನಿಮಾನಲ್ಲಿ ನಾಯಕನನ್ನೂ ಮೀರಿಸಿ ಜನಪ್ರಿಯತೆ ಗಳಿಸಿದರು. ಅದಾದ ಬಳಿಕ ಪ್ರಭಾಸ್ ನಟನೆಯ ‘ಛತ್ರಪತಿ’ ಸಿನಿಮಾನಲ್ಲಿ ರಾಸ್ ಬಿಹಾರಿ ಪಾತ್ರದಲ್ಲಿ ಗಮನ ಸೆಳೆದರು. ರಾಜಮೌಳಿ ನಿರ್ದೇಶನದ ಎರಡು ಸಿನಿಮಾಗಳಲ್ಲಿ ವಿಲನ್ ಆದ ಏಕೈಕ ನಟ ಪ್ರದೀಪ್.

ಇದನ್ನೂ ಓದಿ:ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

ತೆಲುಗು ಚಿತ್ರರಂಗ ಅದ್ಯಾವ ಪರಿ ಪ್ರದೀಪ್ ಅವರನ್ನು ಬಳಸಿಕೊಂಡಿತೆಂದರೆ ವರ್ಷಕ್ಕೆ ಏಳು-ಎಂಟು ತೆಲುಗು ಸಿನಿಮಾಗಳಲ್ಲಿ ಪ್ರದೀಪ್ ವಿಲನ್ ಆಗಿ ನಟಿಸುತ್ತಿದ್ದರು. ಅವರ ಲುಕ್ ಸಹ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿಬಿಟ್ಟಿತ್ತು. ಹಾಗಾಗಿ ಆ ಲುಕ್ ಸಹ ಬದಲಾವಣೆ ಮಾಡುತ್ತಿರಲಿಲ್ಲ. ವಿಲನ್ ಪಾತ್ರಗಳು ಮಾತ್ರವೇ ಅಲ್ಲದೆ ಕಾಮಿಡಿ, ಕಾಮಿಡಿ ವಿಲನ್, ಪೋಷಕ ನಟ ಪಾತ್ರಗಳಲ್ಲಿಯೂ ಪ್ರದೀಪ್ ಅವರು ನಟಿಸಿದ್ದಾರೆ. ಪ್ರದೀಪ್ ಅವರು ತೆಲುಗಿನ ನಟರೇ ಆಗಿಬಿಟ್ಟಿದ್ದರು.

ಚಿರಂಜೀವಿ, ಪವನ್ ಕಲ್ಯಾಣ್, ಜೂ ಎನ್​​ಟಿಆರ್, ಅಲ್ಲು ಅರ್ಜುನ್, ಪ್ರಭಾಸ್, ರವಿತೇಜ, ಬಾಲಕೃಷ್ಣ ಇನ್ನೂ ಹಲವಾರು ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಆಗಿ ಪ್ರದೀಪ್ ನಟಿಸಿದ್ದಾರೆ. ಆದರೆ ಈಗ ಪ್ರದೀಪ್ ನಿಧನಕ್ಕೆ ತೆಲುಗಿನ ಒಬ್ಬ ನಟರೂ ಸಹ ಸಂತಾಪ ವ್ಯಕ್ತಪಡಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:26 am, Wed, 5 August 26

Source link

ಯಾದಗಿರಿ: ಕಡೇಚೂರಿನಲ್ಲಿ ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ – Kannada News | Yadgir Chemical Leak: Three Workers Die at Kadechur CIL Laboratory

ಯಾದಗಿರಿ, ಆಗಸ್ಟ್ 5: ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಸಿಐಎಲ್ ಲ್ಯಾಬೊರೇಟರಿ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಾಗಿ ಭೀಕರ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಇಬ್ಬರು ಅಸ್ವಸ್ಥಗೊಂಡಿದ್ದಾರೆ. ಮಧ್ಯಪ್ರದೇಶ ಮೂಲದ ವಿಕ್ರಂ ಸಿಂಗ್, ಸಂಜಯ್ ಸಿಂಗ್ ಮತ್ತು ತೆಲಂಗಾಣ ಮೂಲದ ಗಣೇಶ್ ಎಂಬುವವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ತೆಲಂಗಾಣದ ಶಿವಕುಮಾರ್ ಮತ್ತು ಆಂಧ್ರಪ್ರದೇಶದ ಹೇಮಂತ್ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿದೆ. ಸೋರಿಕೆಯಾದ ರಾಸಾಯನಿಕ ಗಾಳಿಯಲ್ಲಿ ಸೇರಿ ಉಸಿರಾಟದ ಸಮಸ್ಯೆಗೆ ಕಾರಣವಾಗಿದೆ.

ದುರಂತ ಸಂಭವಿಸಿದ ತಕ್ಷಣವೇ ಸ್ಥಳೀಯರು ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಮತ್ತು ಎಸ್‌ಪಿ ಪ್ರದೀಪ್ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆಗಿಳಿದ ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ! – Kannada News | Chikkaballapur District Witnesses Bundh as S.N. Subbareddy Supporters Protest Ministerial Snub

ಚಿಕ್ಕಬಳ್ಳಾಪುರ, ಆಗಸ್ಟ್ 05: ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ .ಮೂರು ಬಾರಿ ಶಾಸಕರಾಗಿದ್ದರೂ ಸಹ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಪ್ರತಿಭಟನಾಕಾರರು ಕೆಎಸ್ಆರ್‌ಟಿಸಿ ಬಸ್‌ಗಳನ್ನು ತಡೆದು ರಸ್ತೆ ಮಧ್ಯೆ ನಿಲ್ಲಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನ್ಯಾಯ ಸಿಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹೇಶ್ ಬಾಬು ಜನ್ಮದಿನಕ್ಕೆ ‘ವಾರಣಾಸಿ’ ಗ್ಲಿಂಪ್ಸ್ ಸಿಗಲ್ವಾ? ಸಿಕ್ಕಿದೆ ಬಿಗ್ ಅಪ್‌ಡೇಟ್ – Kannada News | No Varanasi Glimpse on Mahesh Babu Birthday SS Rajamouli Plans Poster Release

ಸ್ಟಾರ್ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಹಾಗೂ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಸಿನಿಮಾ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಆಗಸ್ಟ್ 9ರಂದು ಮಹೇಶ್ ಬಾಬು ಜನ್ಮದಿನ ಇದೆ. ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಸಿನಿಮಾ ತಂಡ ದೊಡ್ಡ ಗಿಫ್ಟ್ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ವಾರಣಾಸಿ 80 ಶೇಕಡಾ ಶೂಟಿಂಗ್ ಕಂಪ್ಲೀಟ್

ರಾಜಮೌಳಿ ಅವರ ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಈಗಾಗಲೇ ಶೇಕಡಾ 80ರಷ್ಟು ಪೂರ್ಣಗೊಂಡಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಸಿನಿಮಾದ ಟೀಸರ್ ಅಥವಾ ಸಣ್ಣ ಗ್ಲಿಂಪ್ಸ್ ಬರಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಚಿತ್ರತಂಡ ಕೇವಲ ಒಂದು ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಪಕ್ಕಾ ಪ್ಲಾನ್ ಮಾಡಿರುವ ರಾಜಮೌಳಿ

ರಾಜಮೌಳಿ ಪ್ರಚಾರದ ವಿಷಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ. ಪ್ರತಿಯೊಂದು ಅಪ್‌ಡೇಟ್ ಸರಿಯಾದ ಸಮಯಕ್ಕೆ ನೀಡಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ. ಆದ್ದರಿಂದಲೇ ಗ್ಲಿಂಪ್ಸ್ ಬದಲಿಗೆ ಕೇವಲ ಪೋಸ್ಟರ್ ರಿಲೀಸ್ ಮಾಡಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ

2027ರಲ್ಲಿ ವಿಶ್ವದಾದ್ಯಂತ ಸಿನಿಮಾ ರಿಲೀಸ್

ಈ ಚಿತ್ರವನ್ನು 2027ರ ಏಪ್ರಿಲ್ 7ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ ರಾಜಮೌಳಿ ಮತ್ತು ತಂಡ ಹಗಲಿರುಳು ಶ್ರಮಿಸುತ್ತಿದೆ. ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಎಲ್ ನಾರಾಯಣ್ ಮತ್ತು ಎಸ್‌ಎಸ್ ಕಾರ್ತಿಕೇಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರ ರಾಮಾಯಣವನ್ನು ಆಧರಿಸಿದೆ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ – Kannada News | Udhayanidhi Stalin Released: Slams CM Vijay Over Terrorist Treatment Amidst Budget Session

ತ್ರಿಷಾ ಹಾಗೂ ವಿಜಯ್ ಅವರ ನಡುವಿನ ಸಂಬಂಧದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತಡರಾತ್ರಿ ಅವರು ಚೆನ್ನೈಗೆ ವಾಪಸ್ ಆಗಿದ್ದಾರೆ. ಬಿಡುಗಡೆಯಾದ ನಂತರ, ಉದಯನಿಧಿ ಸ್ಟಾಲಿನ್ ಅವರು ಸಿಎಂ ವಿಜಯ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. “ಸರ್ಕಾರ ನನ್ನನ್ನು ಭಯೋತ್ಪಾದಕನ ರೀತಿನಲ್ಲಿ ನಡೆಸಿಕೊಂಡಿದೆ” ಎಂದು ಆರೋಪಿಸಿದ್ದು, ಸಿಎಂ ವಿಜಯ್ ಅವರನ್ನು ಡಮ್ಮಿ ಸಿಎಂ ಮತ್ತು ರೀಲ್ಸ್ ಕ್ರಿಯೇಟರ್ ಎಂದು ಜರೆದಿದ್ದಾರೆ.

ಉದಯನಿಧಿ ಅವರ ಬಂಧನಕ್ಕೆ ಡಿಎಂಕೆ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ವಿಜಯ್ ಅವರದ್ದು ಸರ್ವಾಧಿಕಾರಿ ಮನೋಭಾವ ಎಂದು ಕಿಡಿಕಾರಿದ್ದಾರೆ. ಇಂದು ಆರಂಭವಾಗಲಿರುವ ತಮಿಳುನಾಡು ಬಜೆಟ್ ಅಧಿವೇಶನದಲ್ಲಿ ಈ ಬಂಧನ ವಿಚಾರವನ್ನು ಇಟ್ಟುಕೊಂಡು ವಿಧಾನಸಭೆ ಒಳಗಡೆ ಮತ್ತು ಹೊರಗಡೆ ಪ್ರತಿಭಟನೆ ನಡೆಸಲು ಡಿಎಂಕೆ ಶಾಸಕರು ಸಜ್ಜಾಗಿದ್ದಾರೆ. ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ ಉದಯನಿಧಿಯವರನ್ನು ಬಂಧಿಸಿದ್ದೇಕೆ ಎಂದು ಪ್ರಶ್ನಿಸಿ ಹೋರಾಟ ನಡೆಸಲು ಡಿಎಂಕೆ ಸಿದ್ಧತೆ ನಡೆಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

Karnataka Dam Water Level: ತುಂಗಭದ್ರಾ, ಆಲಮಟ್ಟಿಗೆ ಕಳೆ ತಂದ ಮುಂಗಾರು, ರೈತರಲ್ಲಿ ಹರ್ಷ! – Kannada News | Karnataka Reservoir Water Level on August 05: KRS and Tungabhadra Inflow Rises

ತುಂಗಭದ್ರಾ, ಆಲಮಟ್ಟಿಗೆ ಕಳೆ ತಂದ ಮುಂಗಾರು, ರೈತರಲ್ಲಿ ಹರ್ಷ!

ಬೆಂಗಳೂರು, ಆಗಸ್ಟ್ 05: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ (Dam water level) ಭಾರಿ ಏರಿಕೆ ಕಂಡಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳು ಭರ್ತಿಯತ್ತ ಸಾಗುತ್ತಿದ್ದರೆ, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳಲ್ಲಿಯೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.

1. ತುಂಗಭದ್ರಾ ಜಲಾಶಯ

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. 105 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಒಂದೇ ದಿನದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದ್ದು, ಪ್ರಸ್ತುತ 59 ಟಿಎಂಸಿ ನೀರಿದೆ. ಇದರಿಂದ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಸಂತಸ ಮನೆಮಾಡಿದೆ.

2. ಆಲಮಟ್ಟಿ ಜಲಾಶಯ (ವಿಜಯಪುರ)

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯಕ್ಕೆ 1,45,675 ಕ್ಯೂಸೆಕ್ ಒಳಹರಿವು ಇದ್ದು, 1,51,297 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ಮಟ್ಟ 518.87 ಮೀಟರ್ ತಲುಪಿದೆ.

3. ಕೆಆರ್‌ಎಸ್ ಜಲಾಶಯ (ಮಂಡ್ಯ)

ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ 105.10 ಅಡಿಯಷ್ಟಿದೆ (ಗರಿಷ್ಠ ಮಟ್ಟ: 124.80 ಅಡಿ). 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 27.077 ಟಿಎಂಸಿ ನೀರು ಸಂಗ್ರಹವಿದ್ದು, 19,275 ಕ್ಯೂಸೆಕ್ ಒಳಹರಿವು ಮತ್ತು 1,985 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

4. ಕಬಿನಿ ಜಲಾಶಯ (ಮೈಸೂರು)

ಕಬಿನಿ ಜಲಾಶಯದಲ್ಲಿ ಕಳೆದ 24 ಗಂಟೆಗಳಲ್ಲಿ 45 ಮಿ.ಮೀ. ಮಳೆಯಾಗಿದ್ದು, 22,256 ಕ್ಯೂಸೆಕ್ ಒಳಹರಿವಿದೆ. 19.52 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ 18.26 ಟಿಎಂಸಿ ನೀರು ಸಂಗ್ರಹವಾಗಿದ್ದು, 27,000 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ (ಇಂದಿನ ಮಟ್ಟ: 82.04 ಅಡಿ).

5. ಹೇಮಾವತಿ ಜಲಾಶಯ (ಗೊರೂರು, ಹಾಸನ)

37 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ 28.782 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಮಟ್ಟ 2912.70 ಅಡಿಯಿದ್ದು, 4,879 ಕ್ಯೂಸೆಕ್ ಒಳಹರಿವು ಹಾಗೂ 500 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿರಲಿದೆ ಎಂದ ರಣ್​​ಬೀರ್ – Kannada News | Ranbir Kapoor said Ramayana movie sequel will be more entertaining that first part

ರಾಮಾಯಣ’ (Ramayana) ಸಿನಿಮಾದ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ. ವಿದೇಶಿ ಮಾರುಕಟ್ಟೆಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಕೆಲವರು ಟ್ರೈಲರ್ ಚೆನ್ನಾಗಿದೆ ಎಂದರೆ ಇನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ಏನೇ ಆಗಲಿ ಟ್ರೈಲರ್ ವೈರಲ್ ಅಂತೂ ಆಗಿದೆ. ಆದರೆ ಇದೀಗ ಸಿನಿಮಾದ ನಾಯಕ ರಣ್​​ಬೀರ್ ಕಪೂರ್ ನೀಡಿರುವ ಹೇಳಿಕೆ ಸಿನಿಮಾದ ಬಗ್ಗೆ ತುಸು ಗೊಂದಲ ಮೂಡಿಸುವಂತಿದೆ. ಅವರು ‘ರಾಮಾಯಣ’ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿರಲಿದೆ ಎಂದಿದ್ದಾರೆ. ಆ ಮೂಲಕ ಮೊದಲ ಭಾಗ ಅಷ್ಟೇನೂ ಅದ್ಭುತವಾಗಿಲ್ಲ ಎಂಬ ಸಂದೇಶ ಪರೋಕ್ಷವಾಗಿ ನೀಡಿದಂತಿದ್ದಾರೆ.

‘ದಿ ಡೈರೆಕ್ಟ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಣಬೀರ್ ಕಪೂರ್, ‘ಭಾರತದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದನ್ನು ದೊಡ್ಡ ಪರದೆಗೆ ತರುವ ಅಪಾರ ಜವಾಬ್ದಾರಿಯ ಬಗ್ಗೆ ಹೇಳಿಕೊಂಡಿದ್ದಾರೆ, ‘ನಿಜ ಹೇಳಬೇಕೆಂದರೆ, ರಾಮಾಯಣವನ್ನು ಹೇಳಲು ಬಹುಶಃ 10 ಭಾಗಗಳ ಸಿನಿಮಾ ಬೇಕಾಗಬಹುದು, ಆದರೆ ಅದನ್ನು ಕೇವಲ ಎರಡು ಭಾಗಗಳಲ್ಲಿ ಸಂಕ್ಷಿಪ್ತವಾಗಿ ಹೇಳುವುದು ಬಹಳ ಕಷ್ಟವಾಗಿತ್ತು’ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಕಪೂರ್, ‘ರಾಮಾಯಣ ಗ್ರಂಥವು 4,000 ವರ್ಷಗಳಿಗೂ ಹೆಚ್ಚು ಕಾಲ ಉಳಿದುಕೊಂಡು ಬಂದಿದೆ ಎನ್ನಲಾಗುತ್ತದೆ. ಪ್ರಭು ಶ್ರೀರಾಮ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಆಂತರಿಕ ರಕ್ಷಕನಾಗಿದ್ದಾರೆ, ಮತ್ತು ಇದು ಧೈರ್ಯ, ಕೆಟ್ಟದರ ಮೇಲೆ ಒಳ್ಳೆಯದರ ವಿಜಯ, ಧರ್ಮ, ಕ್ಷಮೆ, ಕರುಣೆ ಹಾಗೂ ಅಹಂಕಾರದ ಬಗ್ಗೆ ಮಾತನಾಡುವ ಕತೆಯಾಗಿದೆ. ಕತೆಯ ಪ್ರತಿಯೊಂದು ವಿಷಯವೂ ಜೀವನದ ಒಂದು ಪಾಠವಾಗಿದೆ’ ಎಂದು ರಾಮಾಯಣ ಕತೆಯನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

‘ರಾಮಾಯಣ 2’ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಣಬೀರ್, ‘ಸೀಕ್ವೆಲ್‌ನ ಕೆಲಸಗಳು ವೇಗದ ಗತಿಯಲ್ಲಿ ಸಾಗುತ್ತಿವೆ ಎಂದು ಖಚಿತಪಡಿಸಿದರು. ‘ಮೊದಲ ಭಾಗ ಬಿಡುಗಡೆಯಾಗುವ ಮೊದಲೇ ನಾವು ಈಗಾಗಲೇ ಪಾರ್ಟ್ 2 ರ ಶೂಟಿಂಗ್ ಅನ್ನು ಶೇಕಡಾ 50 ರಷ್ಟು ಮುಗಿಸಿದ್ದೇವೆ. ಕಥೆಯು ತನ್ನ ಮಹತ್ವದ ಅಂತ್ಯದತ್ತ ಸಾಗುತ್ತಿದ್ದಂತೆ ಸನ್ನಿ ಡಿಯೋಲ್ ಅವರ ಹನುಮಾನ್ ಪಾತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ ಎಂದು ತಿಳಿಸಿದ ನಟ, ಮುಂಬರುವ ಭಾಗವು “ಇನ್ನಷ್ಟು ದೊಡ್ಡದಾಗಿ ಮತ್ತು ಹೆಚ್ಚು ಮನರಂಜನೆಯಿಂದ ಕೂಡಿರಲಿದೆ” ಎಂದು ಭರವಸೆ ನೀಡಿದ್ದಾರೆ.

ರಾಮಾಯಣ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ಮೊದಲ ಭಾಗ ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:57 am, Wed, 5 August 26

Source link

ಅಭಿಮಾನಿಗಳು ಒದ್ದೆ ಆಗ್ತಿರೋದನ್ನು ನೋಡಿ ತಾವೂ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್ – Kannada News | Kiccha Sudeep Drenches in Rain for Fans at Ramanagara Karaga Event

ಕಿಚ್ಚ ಸುದೀಪ್ ಅವರಿಗೆ  (Kichcha Sudeep) ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ. ರಾಮನಗರ ಕರಗ ಉತ್ಸವಕ್ಕೆ ಸುದೀಪ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಮಳೆ ಬಂದಿದೆ. ಅಭಿಮಾನಿಗಳ ಜೊತೆ ಅವರೂ ಮಳೆಯಲ್ಲಿ ನೆನೆದಿದ್ದಾರೆ.
ಸುದೀಪ್ ಅವರು ಕರಗ ಉತ್ಸವದಲ್ಲಿ ಮಾತನಾಡಲು ವೇದಿಕೆ ಏರಿದರು. ಆಗ ಮಳೆ ಬರುತ್ತಾ ಇತ್ತು. ಅವರ ಸಹಾಯಕರು ಇವರಿಗೆ ಛತ್ರಿ ಹಿಡಿದಿದ್ದರು. ‘ಪರವಾಗಿಲ್ಲ ನಾವೂ ಸ್ವಲ್ಪ ಒದ್ದೆ ಆಗೋಣ’ ಎಂದು ಸಹಾಯಕರನ್ನು ಸುದೀಪ್ ದೂರ ತಳ್ಳಿದರು. ಈ ಮೂಲಕ ಮಳೆಯಲ್ಲಿಯೇ ಅವರು ಮಾತನಾಡಿದರು. ಅವರ ಈ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಮಳೆ ಬರ್ತಾ ಇದೆ ಜನ ಬರ್ತಾರಾ ಎಂದು ನಾನು ಮೊಹಮ್ಮದ್ ನಲಪಾಡ್ ಬಳಿ ಕೇಳಿದೆ. ರಾಮನಗರದ ಜನರ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ ಬನ್ನಿ ಎಂದು ಕರೆದುಕೊಂಡುಬಂದರು’ ಎಂದು ಸುದೀಪ್ ಹೇಳಿದ್ದಾರೆ. ಮಳೆಯ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರ ಬಗ್ಗೆ ಅವರು ಖುಷಿ ಹೊರಹಾಕಿದರು.

ಬಿಗ್ ಬಾಸ್​​ನಲ್ಲಿ ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಇದು ಗೆಳೆಯರ ವೇದಿಕೆ. ಗೆಳೆಯರು ಕರೆದ ವೇದಿಕೆ. ಇಲ್ಲಿ ಬಿಗ್ ಬಾಸ್ ಬೇಡ. ಬಿಗ್ ಬಾಸ್ ಎಲ್ಲಿ ನಡೆಯಬೇಕೋ, ಹೇಗೆ ನಡೆಯಬೇಕೋ ನಡೆಯುತ್ತಲೇ ಇರುತ್ತದೆ. ಜನರು ನೋಡುತ್ತಲೇ ಇರುತ್ತಾರೆ’ ಎಂದು ಖುಷಿಯಿಂದ ಹಂಚಿಕೊಂಡರು.

ಇದನ್ನೂ ಓದಿ: ದರ್ಶನ್, ಸುದೀಪ್​​ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದ ಪ್ರದೀಪ್ ರಾವತ್

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್’ ನಡೆಸಿಕೊಡಲಿದ್ದಾರೆ. ಆಗಸ್ಟ್ 16ರಿಂದ ‘ಅಗ್ನಿಪರೀಕ್ಷೆ ಆರಂಭ ಆಗಲಿದೆ. ಸೆಪ್ಟೆಂಬರ್ 6ರಿಂದ ಅಸಲಿ ಆಟ ಶುರುವಾಗಲಿದೆ ಎನ್ನಲಾಗಿದೆ. ಸುದೀಪ್ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿಯೂ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟಾ ವಿರುದ್ಧ ಕೇಂದ್ರದ ಕಠಿಣ ನಿಲುವು: ಮಕ್ಕಳ ಮೇಲಿನ ದೌರ್ಜನ್ಯ, AI ಕಂಟೆಂಟ್‌ ಬಗ್ಗೆ ಸ್ಪಷ್ಟನೆ ಕೇಳಿದ ಸರ್ಕಾರ – Kannada News | Centre to Question Meta on CSAM, AI Content and Post Takedown Safeguards

ಮೆಟಾ (ಸಾಂದರ್ಭಿಕ ಚಿತ್ರ)Image Credit source: TV9 Network

ನವದೆಹಲಿ, ಆಗಸ್ಟ್ 5: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ (CSAM), ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾಗುವ ಕಂಟೆಂಟ್‌ (AI-generated content) ಹಾಗೂ ಪ್ರಮುಖ ವ್ಯಕ್ತಿಗಳ ಪೋಸ್ಟ್‌ಗಳನ್ನು ತೆಗೆದುಹಾಕುವ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಮೆಟಾ ಸಂಸ್ಥೆಯಿಂದ ಸ್ಪಷ್ಟನೆ ಕೇಳಲು ಮುಂದಾಗಿದೆ. ಮೆಟಾದ ಹಿರಿಯ ಅಧಿಕಾರಿಗಳು ಈ ವಾರ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಈ ವೇಳೆ ಭಾರತೀಯ ಕಾನೂನುಗಳ ಪಾಲನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಈ ಕುರಿತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಮಾಹಿತಿ ನೀಡಿದ್ದು, ಮೆಟಾದ ಪಬ್ಲಿಕ್ ಪಾಲಿಸಿ ವಿಭಾಗದ ಮುಖ್ಯಸ್ಥ ಜೋಯೆಲ್ ಕಪ್ಲಾನ್ ಸೇರಿದಂತೆ ಹಿರಿಯ ಅಧಿಕಾರಿಗಳು ಬುಧವಾರ ಮತ್ತು ಗುರುವಾರ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಈ ಸಭೆಯಲ್ಲಿ ಕಂಟೆಂಟ್ ಮಾಡರೇಷನ್, ಭಾರತೀಯ ಕಾನೂನುಗಳ ಅನುಸರಣೆ ಹಾಗೂ ಎಐ ಆಧಾರಿತ ಕಂಟೆಂಟ್‌ನಿಂದ ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ.

ಸಿಎಸ್​ಎಎಂ ವಿರುದ್ಧ ಮೆಟಾ ಕೈಗೊಂಡ ಕ್ರಮಗಳೇನು?

ಮೆಟಾ ತನ್ನ ವಿವಿಧ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ (CSAM) ತಡೆಗಟ್ಟಲು ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಬಯಸಿದೆ. ಈ ಕಂಟೆಂಟ್‌ ಅನ್ನು ಗುರುತಿಸುವುದು ಮತ್ತು ನಿಯಂತ್ರಿಸುವಲ್ಲಿ ಸಂಸ್ಥೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ.

ಎಐ ಕಂಟೆಂಟ್ ಮೆಟಾ ನಿರ್ವಹಣೆ ಬಗ್ಗೆಯೂ ಮಾಹಿತಿ ಕೋರಿದ ಸರ್ಕಾರ

ಅದೇ ರೀತಿ, ಎಐ ಅಥವಾ ಇತರ ತಂತ್ರಜ್ಞಾನಗಳ ಮೂಲಕ ಕೃತಕವಾಗಿ ಸೃಷ್ಟಿಸಲಾಗುತ್ತಿರುವ ಕಂಟೆಂಟ್‌ ಅನ್ನು ಮೆಟಾ ಹೇಗೆ ಮೇಲ್ವಿಚಾರಣೆ ಮಾಡುತ್ತಿದೆ ಎಂಬುದರ ಕುರಿತು ಸರ್ಕಾರ ಮಾಹಿತಿ ಕೇಳಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಂಥೆಟಿಕ್ ಕಂಟೆಂಟ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದೆ.

ಪ್ರಮುಖ ವ್ಯಕ್ತಿಗಳ ಪೋಸ್ಟ್‌ಗಳಿಗೂ ಸುರಕ್ಷತಾ ಕ್ರಮ

ಪ್ರಮುಖ ವ್ಯಕ್ತಿಗಳ, ವಿಶೇಷವಾಗಿ ಪರಿಶೀಲಿತ (Verified) ಖಾತೆಗಳಿಂದ ಪ್ರಕಟವಾಗುವ ಪೋಸ್ಟ್‌ಗಳನ್ನು ತೆಗೆದುಹಾಕುವ ಸಂದರ್ಭದಲ್ಲಿಯೂ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇಂತಹ ಖಾತೆಗಳ ಕಂಟೆಂಟ್‌ ಅನ್ನು ತೆಗೆದುಹಾಕುವ ಕ್ರಮಗಳಿಗೆ ಹೆಚ್ಚಿನ ಸುರಕ್ಷತಾ ವ್ಯವಸ್ಥೆ ಹಾಗೂ ಸ್ಪಷ್ಟವಾದ ನಿಯಮಗಳು ಇರಬೇಕು ಎಂಬ ನಿಲುವನ್ನು ಸರ್ಕಾರ ವ್ಯಕ್ತಪಡಿಸಿದೆ.

‘ನಿಯಮಗಳ ಪಾಲನೆ ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಅದಲ್ಲದೆ ಇನ್ನೂ ಹಲವು ವಿಚಾರಗಳಿವೆ’ ಎಂದು ಎಸ್. ಕೃಷ್ಣನ್ ಹೇಳಿದ್ದಾರೆ. ಸಿಎಸ್​ಎಎಂ ಹಾಗೂ ಸಿಂಥೆಟಿಕ್ ಕಂಟೆಂಟ್‌ ಕುರಿತಂತೆ ಮೆಟಾ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯುವುದು ಸಭೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್

ಒಟ್ಟಿನಲ್ಲಿ, ಮಕ್ಕಳ ಸುರಕ್ಷತೆ, ಎಐ ಮೂಲಕ ಸೃಷ್ಟಿಯಾಗುವ ಕಂಟೆಂಟ್‌ ನಿಯಂತ್ರಣ ಮತ್ತು ಪ್ರಮುಖ ವ್ಯಕ್ತಿಗಳ ಪೋಸ್ಟ್‌ಗಳ ತೆರವು ವಿಚಾರಗಳು ಮೆಟಾ ಹಾಗೂ ಕೇಂದ್ರ ಸರ್ಕಾರದ ನಡುವಿನ ಈ ವಾರದ ಚರ್ಚೆಯಲ್ಲಿ ಪ್ರಮುಖವಾಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ವಾರದ ಈ ಎರಡು ದಿನ ಮಣ್ಣಿನ ಮಡಕೆ ಖರೀದಿಸಲೇಬೇಡಿ; ವಾಸ್ತು ನಿಯಮ ಇಲ್ಲಿದೆ – Kannada News | Vastu Rules for Buying Clay Pots: Days to Avoid and Healthy Selection Tips

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬೇಸಿಗೆಯಲ್ಲಷ್ಟೇ ಅಲ್ಲದೆ, ವರ್ಷವಿಡೀ ಕುಡಿಯುವ ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸುವುದು ಸಾಮಾನ್ಯವಾಗಿದೆ. ಮಣ್ಣಿನ ಪಾತ್ರೆಯ ನೀರು ಆರೋಗ್ಯಕ್ಕೆ ಅತ್ಯಂತ ಹಿತಕರ. ಆದರೆ, ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೊಸ ಮಣ್ಣಿನ ಮಡಕೆಯನ್ನು ಯಾವಾಗ ಖರೀದಿಸಬೇಕು, ಯಾವ ದಿನಗಳಲ್ಲಿ ಖರೀದಿಸಬಾರದು ಮತ್ತು ಅದನ್ನು ಆಯ್ಕೆ ಮಾಡುವ ಸರಿಯಾದ ವಿಧಾನ ಯಾವುದು ಎಂಬುದು ಅತ್ಯಂತ ಮುಖ್ಯವಾಗಿದೆ.

ಮಣ್ಣಿನ ಮಡಕೆ ಖರೀದಿಸಲು ಈ ದಿನಗಳು ಅಶುಭವೇ?

ವಾಸ್ತು ಶಾಸ್ತ್ರದ ಪ್ರಕಾರ ಭಾನುವಾರ ಮತ್ತು ಮಂಗಳವಾರದಂದು ಜೇಡಿಮಣ್ಣು, ಮಣ್ಣಿನ ಪಾತ್ರೆಗಳು ಅಥವಾ ಯಾವುದೇ ಮಣ್ಣಿನ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಮಂಗಳ ಗ್ರಹವು ಮಣ್ಣಿನ ತತ್ತ್ವವನ್ನು ಪ್ರತಿನಿಧಿಸುವುದರಿಂದ, ಮಂಗಳವಾರ ಮಣ್ಣಿನ ವಸ್ತುಗಳನ್ನು ಮನೆಗೆ ತರುವುದು ಸೂಕ್ತವಲ್ಲ ಎಂಬ ನಂಬಿಕೆ ಇದೆ. ಇದರ ಜೊತೆಗೆ ಕೆಲವೊಂದು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಶನಿವಾರದಂದೂ ಕೂಡ ಮಣ್ಣಿನ ಮಡಕೆಗಳನ್ನು ಖರೀದಿಸುವುದನ್ನು ತಪ್ಪಿಸುವುದು ಒಳಿತು.

ಸೂರ್ಯಾಸ್ತದ ನಂತರ ಮಡಕೆ ಖರೀದಿಸಬಾರದು ಏಕೆ?

ಸೂರ್ಯಾಸ್ತದ ನಂತರ ಅಂದರೆ ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಮಣ್ಣಿನ ಪಾತ್ರೆಗಳನ್ನು ಮನೆಗೆ ಖರೀದಿಸಿ ತರುವುದು ಅಶುಭ ತರುತ್ತದೆ ಎಂದು ಹೇಳಲಾಗುತ್ತದೆ. ಮಣ್ಣಿನ ಮಡಕೆಯನ್ನು ಯಾವಾಗಲೂ ಹಗಲಿನ ವೇಳೆಯಲ್ಲಿ, ಸೂರ್ಯನ ಬೆಳಕಿದ್ದಾಗ ಮಾತ್ರ ಖರೀದಿಸಬೇಕು. ಹಳೆಯ ಮಡಕೆ ಒಡೆದು ಹೋದಾಗ ಅಥವಾ ಹೊಸ ಮಡಕೆ ಬೇಕಾದಾಗ ಈ ಕಾಲಮಾನದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ.

ಅತಿಯಾಗಿ ಹೊಳೆಯುವ ಅಥವಾ ಬಣ್ಣದ ಮಡಕೆಗಳಿಂದ ದೂರವಿರಿ:

ಮಡಕೆಯನ್ನು ಆಯ್ಕೆ ಮಾಡುವಾಗ ಕೇವಲ ವಾಸ್ತು ಮಾತ್ರವಲ್ಲದೆ ಆರೋಗ್ಯದ ಕಡೆಯೂ ಗಮನ ಹರಿಸುವುದು ಅಗತ್ಯ. ಮಾರುಕಟ್ಟೆಯಲ್ಲಿ ಸಿಗುವ ಅತಿಯಾಗಿ ಹೊಳೆಯುವ ಅಥವಾ ಆಕರ್ಷಕ ಬಣ್ಣ ಬಳಿದಿರುವ ಮಡಕೆಗಳನ್ನು ಖರೀದಿಸಬೇಡಿ. ಇವುಗಳ ಮೇಲೆ ರಾಸಾಯನಿಕ ಬಣ್ಣ (Chemical colors) ಅಥವಾ ವಾರ್ನಿಷ್ ಲೇಪಿಸಿರುತ್ತಾರೆ. ಇಂತಹ ಮಡಕೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದರಿಂದ ರಾಸಾಯನಿಕಗಳು ನೀರಿಗೆ ಸೇರಿ ಆರೋಗ್ಯಕ್ಕೆ ತೀವ್ರ ಹಾನಿ ಉಂಟಾಗಬಹುದು.

ಮಣ್ಣಿನ ಮಡಕೆಯನ್ನು ಸರಿಯಾಗಿ ಪರೀಕ್ಷಿಸಿ ಖರೀದಿಸುವ ವಿಧಾನ:

ಉತ್ತಮ ಮಡಕೆಯನ್ನು ಆರಿಸಲು ಅದನ್ನು ಲಘುವಾಗಿ ಬೆರಳಿನಿಂದ ತಟ್ಟಿ ನೋಡಿ. ತಟ್ಟಿದಾಗ ಮಂದವಾದ ಅಥವಾ ಸಣ್ಣ ಶಬ್ದ ಬಂದರೆ ಅದು ಮಡಕೆ ಸರಿಯಾಗಿ ಬೇಯದೇ ಕಚ್ಚಾ ಆಗಿರಬಹುದು ಎಂದರ್ಥ. ಬಲವಾದ ಮತ್ತು ಸ್ಪಷ್ಟವಾದ ‘ಖಣ’ ಎಂಬ ನಾದ ಬರುವ ಮಡಕೆಯನ್ನು ಆಯ್ಕೆ ಮಾಡಿ. ಕೊನೆಯದಾಗಿ, ಖರೀದಿಸುವ ಮುನ್ನವೇ ಅದಕ್ಕೆ ನೀರು ತುಂಬಿಸಿ, ಎಲ್ಲಾದರೂ ನೀರು ಸೋರುತ್ತಿದೆಯೇ (Leakage) ಎಂಬುದನ್ನು ಖಚಿತಪಡಿಸಿಕೊಂಡು ಮನೆಗೆ ತರುವುದು ಒಳ್ಳೆಯದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:40 am, Wed, 5 August 26

Source link

Exit mobile version