‘ಬಿಗ್ ಬಾಸ್ ಹಿಂದಿ 20’ನೇ ಸೀಸನ್​ಗೆ ಶಾರುಖ್ ಕೋ ಹೋಸ್ಟ್? ದೊಡ್ಡ ಸುಳಿವು ನೀಡಿದ ಸಲ್ಮಾನ್ ಖಾನ್ – Kannada News | Bigg Boss 20 Teaser: Salman Khan Hints at ‘Karan Arjun’ Twist, SRK to Join as Co Host?

ಬಿಗ್ ಬಾಸ್ ವೀಕ್ಷಕರಿಗೆ ದೊಡ್ಡ ಒಂದಾದ ಮೇಲೆ ಒಂದರಂತೆ ಗುಡ್ ನ್ಯೂಸ್ ಸಿಗುತ್ತಿದೆ. ಬಿಗ್ ಬಾಸ್‌ನ ಎಲ್ಲಾ 6 ಭಾಷೆಗಳ ಆವೃತ್ತಿಗಳು ಒಂದೇ ಬಾರಿಗೆ ಪ್ರಸಾರವಾಗಲಿವೆ ಎನ್ನಲಾಗಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಕನ್ನಡದ ಟೀಸರ್ ರಿಲೀಸ್ ಆಗಿತ್ತು. ಈಗ ಹಿಂದಿ ಬಿಗ್ ಬಾಸ್ ಟೀಸರ್ ಸಮಯ. ಸಲ್ಮಾನ್ ಖಾನ್ ಮತ್ತೆ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಪ್ರೋಮೋದಲ್ಲಿ ಅವರು ನೀಡಿದ ಒಂದು ರಹಸ್ಯ ಸುಳಿವು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಟೀಸರ್‌ನಲ್ಲಿ ಸಲ್ಮಾನ್ ಖಾನ್ ಕುದುರೆಯ ಜೊತೆಗೆ ಹೆಜ್ಜೆ ಹಾಕುತ್ತಾ ಬರುವ ದೃಶ್ಯವಿದೆ. ಕೊನೆಯಲ್ಲಿ ಅವರು, ‘ಕರಣ್ ಅರ್ಜುನ್ ಸಿನಿಮಾದಲ್ಲಿ ಆಗಿದ್ದು ಈಗ ಬಿಗ್ ಬಾಸ್‌ನಲ್ಲಿ ಮತ್ತೆ ನಡೆಯಲಿದೆ. ತಥಾಸ್ತು’ ಎಂದು ಹೇಳಿದ್ದಾರೆ. ಈ ಸಾಲುಗಳು ವೀಕ್ಷಕರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಲ್ಮಾನ್ ಖಾನ್ ಈ ಸೀಸನ್ ಅನ್ನು ಪೂರ್ತಿಯಾಗಿ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡಿದ್ದವು. ಅವರು ತಮ್ಮ ಸಂಭಾವನೆಯನ್ನು 120 ಕೋಟಿಯಿಂದ 70 ಕೋಟಿಗೆ ಇಳಿಸಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಇದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ.

1995ರಲ್ಲಿ ಬಂದ ‘ಕರಣ್ ಅರ್ಜುನ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಜೊತೆಯಾಗಿ ನಟಿಸಿದ್ದರು. ಹಾಗಾಗಿ ಗ್ರ್ಯಾಂಡ್ ಪ್ರಿಮಿಯರ್‌ನಲ್ಲಿ ಶಾರುಖ್ ಖಾನ್ ಭಾಗವಹಿಸಬಹುದು ಅಥವಾ ಶೋಗೆ ಕೋ-ಹೋಸ್ಟ್ ಆಗಿ ಬರಬಹುದು ಎನ್ನಲಾಗುತ್ತಿದೆ. ಡೈಲಾಗ್ ಕೊನೆಯಲ್ಲಿ ಸಲ್ಮಾನ್ ‘ಎರಡು’ ಎಂದು ಹೇಳಿರುವುದರಿಂದ, ಈ ಬಾರಿ ಬಿಗ್ ಬಾಸ್ 20ರಲ್ಲಿ ಒಬ್ಬರ ಬದಲು ಇಬ್ಬರು ವಿನ್ನರ್‌ಗಳು ಇರಲಿದ್ದಾರಾ ಅಥವಾ ಜೋಡಿಯಾಗಿ ಆಟ ಶುರುವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?

ಹಿಂದಿ ಬಿಗ್ ಬಾಸ್ ಸೆಪ್ಟೆಂಬರ್ 6ರಿಂದ ಪ್ರಾರಂಭವಾಗಲಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ‘ಜಿಯೋ ಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಮತ್ತು ರಾತ್ರಿ 10:30 ಕ್ಕೆ ‘ಕಲರ್ಸ್ ಟಿವಿ’ಯಲ್ಲಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:49 pm, Tue, 4 August 26

Source link

Positive Energy Plants for Home: ಸಕಾರಾತ್ಮಕತೆಯನ್ನು ಹರಡುವ ಈ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು – Kannada News | Plant these plants to increase positivity at home

ಹಚ್ಚ  ಹಸಿರಿನ ಮರಗಿಡಗಳು ಶುದ್ಧ ಗಾಳಿಯನ್ನು ನೀಡುವುದು ಮಾತ್ರವಲ್ಲದೆ, ಮನಸ್ಸಿಗೆ ಖುಷಿಯನ್ನು ನೀಡುತ್ತವೆ. ಮನಸ್ಸಿನ ನೆಮ್ಮದಿಗಾಗಿ, ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸಲು ಎಲ್ಲರೂ ತಮ್ಮ ಮನೆಗಳಲ್ಲಿ ಹಲವು ಬಗೆಯ ಗಿಡಗಳನ್ನು (plants) ನೆಡುತ್ತಾರೆ. ಇದರಲ್ಲಿ ಕೆಲವು ಸಸ್ಯಗಳನ್ನು ಸಕಾರಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಮತ್ತು ಮಾನಸಿಕ ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಸಸ್ಯಗಳನ್ನು ಮನೆಯೊಳಗೆ ಇಡುವುದರಿಂದ ಅಥವಾ ಅಂಗಳದಲ್ಲಿ ನೆಡುವುದರಿಂದ ಮನೆಯ ಅಂದ ಹೆಚ್ಚುವುದಲ್ಲದೆ ಮನೆಯ ತುಂಬೆಲ್ಲಾ ಧನಾತ್ಮಕ ಶಕ್ತಿಯನ್ನು ಹರಡುತ್ತವೆ, ವಾತಾವರಣವನ್ನೂ ಕೂಡ ರಿಫ್ರೆಶ್‌ ಮಾಡುತ್ತವೆ. ಹಾಗಿದ್ದರೆ ಮನೆಯಲ್ಲಿ ನೆಡಲೇಬೇಕಾದಂತಹ ಗಿಡಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಈ ಗಿಡಗಳು:

ತುಳಸಿ ಗಿಡ: ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕತೆಯನ್ನು ಹರಡುತ್ತದೆ. ಅಲ್ಲದೆ ತುಳಸಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ  ಶಾಂತಿ, ಸಂತೋಷ ನೆಲೆಸುತ್ತದೆ, ವಾತಾರವಣವೂ ಪರಿಶುದ್ಧವಾಗಿರುತ್ತದೆ. ಹಾಗಾಗಿ ತುಳಸಿ ಗಿಡವನ್ನು ನೆಡುವುದು ತುಂಬಾನೇ ಒಳ್ಳೆಯದು.

ಶಂಖಪುಷ್ಪ: ಮಾನಸಿಕ ಶಾಂತಿಯನ್ನು ವೃದ್ಧಿಸುವ ಸಸ್ಯವಾದ ಶಂಖಪುಷ್ಪವನ್ನು ನೆಡುವುದು ತುಂಬಾನೇ ಒಳ್ಳೆಯದಂತೆ.  ಈ ಸಸ್ಯ ಮನಸ್ಸನ್ನು ಚುರುಕುಗೊಳಿಸುತ್ತದೆ, ಏಕಾಗ್ರತೆ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಶಂಖಪುಷ್ಪದ ಸಸ್ಯ  ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಸಹ ತೆಗೆದುಹಾಕುತ್ತದೆ.

ಪೀಸ್ ಲಿಲ್ಲಿ: ಬಿಳಿ ಹೂವುಳ್ಳ ಪೀಸ್ ಲಿಲ್ಲಿಯನ್ನು ಶಾಂತಿ ಮತ್ತು ಸಮತೋಲನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಒಳಾಂಗಣ ಪರಿಸರವನ್ನು ಶುದ್ಧೀಕರಿಸಿ, ವಾತಾವರಣದಲ್ಲಿ ಸಕಾರಾತ್ಮಕತೆಯನ್ನು ಹಡುತ್ತದೆ.

ಸ್ನೇಕ್‌ ಪ್ಲಾಂಟ್‌: ಸ್ನೇಕ್‌ ಪ್ಲಾಂಟ್ ಕಡಿಮೆ ನಿರ್ವಹಣೆ ಮತ್ತು ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಇದು ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ. ಮನೆಯೊಳಗೆ ಪಾಟ್‌ನಲ್ಲಿ ಸ್ನೇಕ್‌ ಪ್ಲಾಂಟ್‌ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.

ಮಲ್ಲಿಗೆ ಗಿಡ: ಪರಿಮಳಯುಕ್ತ ಮಲ್ಲಿಗೆ ಹೂವುಗಳು ನಿಮ್ಮ ಮನೆಗೆ ಆಹ್ಲಾದಕರ ವಾತಾವರಣವನ್ನು ನೀಡುತ್ತದೆ. ಅಲ್ಲದೆ ಅವುಗಳ ಆಹ್ಲಾದಕರ ಪರಿಮಳವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಕಿಟಕಿಯ ಬಳಿ ಅಥವಾ ಸೌಮ್ಯವಾದ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ.

ಇದನ್ನೂ ಓದಿ: ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಅಲೋವೆರಾ: ಅಲೋವೆರಾ ಚರ್ಮದ ಕಾಂತಿ ಮತ್ತು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಮನೆಯ ಸಕಾರಾತ್ಮಕತೆಯನ್ನು ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿಯಾಗಿದೆ.  ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಅನಾರೋಗ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಚೆಂಡು ಹೂವಿನ ಗಿಡ: ಚೆಂಡುಹೂವಿನ ಗಿಡಗಳು ಸಹ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಹಕಾರಿ ಎಂದು ಹೇಳಲಾಗುತ್ತದೆ. ಈ ಗಿಡ ಸಕಾರಾತ್ಮಕ ಶಕ್ತಿಯನ್ನು ಹರಡುವುದಲ್ಲದೆ, ಈ ಹೂವಿನ ವಿಶಿಷ್ಟ ವಾಸನೆ ಸೊಳ್ಳೆ, ಕೀಟ, ಹಾವುಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತವೆ.

ಮನಿ ಪ್ಲಾಂಟ್: ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುವ ಮನಿ ಪ್ಲಾಂಟ್ ಕೂಡ ಮನೆಯ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ನೇಹಿತರು, ಸಹೋದ್ಯೋಗಿಗಳು ಆಗಿದ್ದವರು ಈಗ ಬದ್ಧ ವೈರಿಗಳು – Kannada News | Once Udhayanidhi Stalin produced movie with Thalapathy Vijay and Trisha Krishnan

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಘಟನೆಯೊಂದು ಘಟಿಸಿದೆ. ನಟಿ ತ್ರಿಷಾ (Trisha Krishnan) ಕುರಿತು ಆಡಿದ ಡಬಲ್ ಮೀನಿಂಗ್ ಮಾತಿನಿಂದಾಗಿ ವಿಪಕ್ಷ ನಾಯಕ, ನಟ, ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಮತ್ತು ತ್ರಿಷಾ ಅವರ ಅತ್ಯಾಪ್ತ ಸಂಬಂಧ ಗುಟ್ಟೇನೂ ಅಲ್ಲ. ವಿಜಯ್, ಪತ್ನಿ ಸಂಗೀತ ಅವರೊಟ್ಟಿಗೆ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ. ಇತ್ತ ತ್ರಿಷಾ ಜೊತೆಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ವಿಜಯ್ ಅವರು ತ್ರಿಷಾ ಜೊತೆಗೆ ಹೊಂದಿರುವ ಈ ಸಂಬಂಧದ ಬಗ್ಗೆ ವಿಪಕ್ಷಗಳು ಟೀಕೆ, ವ್ಯಂಗ್ಯ ಮಾಡುತ್ತಲೇ ಬಂದಿವೆ. ಇದೀಗ ಇದು ಅತಿರೇಕಕ್ಕೆ ಹೋಗಿದ್ದು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.

ನಟಿ ತ್ರಿಷಾ ಬಗ್ಗೆ ಉದಯನಿಧಿ ಸ್ಟಾಲಿನ್ ಇತ್ತೀಚೆಗಷ್ಟೆ ಕೊಳಕು, ಡಬಲ್ ಮೀನಿಂಗ್ ಮಾತನ್ನಾಡಿದ್ದರು. ಅದೇ ಕಾರಣಕ್ಕೆ ಚೆನ್ನೈ ಪೊಲೀಸರು ಉದಯನಿಧಿ ಅವರನ್ನು ವಶಕ್ಕೆ ಪಡೆದಿದ್ದರು. ಉದಯನಿಧಿ ಬಂಧನದ ಹಿಂದೆ ರಾಜಕೀಯ ದ್ವೇಷ ಇದೆ ಎಂದು ಡಿಎಂಕೆ ಆರೋಪಿಸಿ ಪ್ರತಿಭಟನೆಗಳನ್ನು ನಡೆಸಿದೆ. ಆದರೆ ಇದೇ ಉದಯನಿಧಿ ಸ್ಟಾಲಿನ್, ವಿಜಯ್ ಮತ್ತು ತ್ರಿಷಾ ಒಂದು ಸಮಯದಲ್ಲಿ ಗೆಳೆಯರಾಗಿದ್ದರು, ಸಹೋದ್ಯೋಗಿಗಳಾಗಿದ್ದರು. ವಿಜಯ್ ಮತ್ತು ತ್ರಿಷಾ ನಟಿಸಿದ್ದ ಸಿನಿಮಾಕ್ಕೆ ಉದಯನಿಧಿ ಸ್ಟಾಲಿನ್ ಬಂಡವಾಳ ಹೂಡಿ, ಲಾಭ ಮಾಡಿಕೊಂಡಿದ್ದರು.

ಉದಯನಿಧಿ ಸ್ಟಾಲಿನ್, ರೆಡ್ ಜಾಯಿಂಟ್ ಮೂವೀಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅಸಲಿಗೆ ಈ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಮುಖ್ಯ ಕಾರಣ ವಿಜಯ್ ಎನ್ನಲಾಗುತ್ತದೆ. ದಶಕಗಳ ಹಿಂದೆ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್ ಬಹಳ ಆಪ್ತ ಗೆಳೆಯರಾಗಿದ್ದರು. ಆ ಸಮಯದಲ್ಲಿ ವಿಜಯ್ ಅವರ ಸಲಹೆ ಮೇರೆಗೆ ಉದಯನಿಧಿ ಸ್ಟಾಲಿನ್ ರೆಡ್ ಜಾಯಿಂಟ್ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಮೊದಲ ಸಿನಿಮಾ ಆಗಿ ವಿಜಯ್ ನಟನೆಯ ‘ಕುರುವಿ’ ಸಿನಿಮಾ ನಿರ್ಮಾಣ ಮಾಡಿದರು. ಆ ಸಿನಿಮಾನಲ್ಲಿ ತ್ರಿಷಾ ನಾಯಕಿ. ‘ಕುರುವಿ’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.

ಇದನ್ನೂ ಓದಿ:‘ವಿಜಯ್​​ಗೆ ತ್ರಿಷಾ ಮಧ್ಯರಾತ್ರಿ ಸಿಗ್ತಾರೆ, ಮುಂದೆ ಡಿಸಿಎಂ ಆದರೂ ಅಚ್ಚರಿ ಇಲ್ಲ; ಮಾಜಿ ಸಚಿವನ ಟೀಕೆ

ವಿಶೇಷವೆಂದರೆ ‘ಕುರುವಿ’ ಸಿನಿಮಾದ ಬಳಿಕ ಈ ಮೂವರು ಒಟ್ಟಿಗೆ ಕೆಲಸ ಮಾಡಿದ್ದು ಬರೋಬ್ಬರಿ 15 ವರ್ಷದ ಬಳಿಕ. ‘ಕುರುವಿ’ ಸಿನಿಮಾದ ಬಳಿಕ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ್ದು ‘ಲಿಯೋ’ ಸಿನಿಮಾನಲ್ಲಿ. ಆ ಸಿನಿಮಾದ ವಿತರಣೆ ಹಕ್ಕನ್ನು ಉದಯನಿಧಿ ಸ್ಟಾಲಿನ್ ಅವರೇ ಖರೀದಿ ಮಾಡಿದ್ದರು. ಆ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಯ್ತು. ಮತ್ತೊಮ್ಮೆ ಉದಯನಿಧಿ ಸ್ಟಾಲಿನ್ ಭರ್ಜರಿ ಲಾಭ ಮಾಡಿಕೊಂಡರು.

ಆದರೆ ಈಗ ಪರಸ್ಥಿತಿ ಭಿನ್ನವಾಗಿದೆ. ಉದಯನಿಧಿ ಸ್ಟಾಲಿನ್ ಅವರ ಪಕ್ಷವನ್ನು ದೂಳಿಪಟ ಮಾಡಿ ವಿಜಯ್ ಅಧಿಕಾರಕ್ಕೆ ಏರಿದ್ದಾರೆ. ಅವರ ಗೆಳತಿಯಾಗಿ ತ್ರಿಷಾ ಇದ್ದಾರೆ. ಅದೇ ಹಳೆ ಗೆಳೆಯ ಉದಯನಿಧಿ ಸ್ಟಾಲಿನ್ ವಿಪಕ್ಷದ ನಾಯಕನಾಗಿದ್ದಾರೆ. ಆಗ ಗೆಳೆಯರಾಗಿದ್ದವರು ಈಗ ವಿರೋಧಿಗಳಾಗಿದ್ದಾರೆ. ಈಗ ಉದಯನಿಧಿ ಸ್ಟಾಲಿನ್ ನೀಡಿರುವ ಕೀಳು ಹೇಳಿಕೆ ಈ ಮೂವರ ನಡುವಿನ ಗೆಳೆತನವನ್ನು ಸಂಪೂರ್ಣವಾಗಿ ಒಡೆದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ – Kannada News | Arrogance Paves Way For Destruction DMK Chief MK Stalin big attack on CM Vijay over Udhayanidhi Stalin arrest

ಚೆನ್ನೈ, ಆಗಸ್ಟ್ 4: ನಟಿ ತ್ರಿಶಾ ಕುರಿತ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಬಂಧಿಸಿ, ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, “ಅಹಂಕಾರವೇ ವಿನಾಶಕ್ಕೆ ದಾರಿ. ನಿರಂತರ ಅಹಂಕಾರವು ವಿನಾಶವನ್ನು ಮತ್ತಷ್ಟು ಚುರುಕುಗೊಳಿಸುತ್ತದೆ!” ಎಂದು ಬರೆದುಕೊಂಡಿದ್ದಾರೆ.

“ಕಾವೇರಿ ವಿವಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಈ ಬಂಧನವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಹೈಕೋರ್ಟ್‌ನ ಆದೇಶವು ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ಮನೋಭಾವಕ್ಕೆ ಬಿದ್ದ ದೊಡ್ಡ ಹೊಡೆತ” ಎಂದು ಸ್ಟಾಲಿನ್ ಬಣ್ಣಿಸಿದ್ದಾರೆ.

ಇದನ್ನೂ ಓದಿ: ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ

“ಅಧಿಕಾರ ವಹಿಸಿಕೊಂಡ ಕ್ಷಣದಿಂದಲೂ ನೀಡಿದ ಭರವಸೆಗಳನ್ನು ಈಡೇರಿಸಲು ಶ್ರಮಿಸುವ ಬದಲು, ಬರೀ ರೀಲ್ಸ್ ಕ್ರಿಯೇಟರ್‌ನಂತೆ ಓಡಾಡುತ್ತಿರುವ ಮುಖ್ಯಮಂತ್ರಿ ವಿಜಯ್ ಈಗಲಾದರೂ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಅಧಿಕಾರಕ್ಕೆ ಬಂದಾಗಿನಿಂದ ತಮ್ಮನ್ನು, ತಮ್ಮ ಸಚಿವರನ್ನು ಅಥವಾ ಸರ್ಕಾರವನ್ನು ವಿಮರ್ಶಿಸುವವರನ್ನು ಬಂಧಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಟ್ವೀಟ್ ಅಥವಾ ವೀಡಿಯೊ ಹೇಳಿಕೆ ನೀಡುವುದೇ ತಡ ಅವರನ್ನು ಬಂಧಿಸಲಾಗುತ್ತಿದೆ. ಶಾಸಕರಾದ ಅನಿತಾ ರಾಧಾಕೃಷ್ಣನ್ ಮತ್ತು ಮಾರ್ಕಂಡೇಯನ್ ಅವರನ್ನೂ ಇದೇ ರೀತಿ ಟಾರ್ಗೆಟ್ ಮಾಡಲಾಗಿದೆ” ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ನದಿಯ ಮೇಲಿನ ತಮಿಳುನಾಡಿನ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಮತ್ತು ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವಲ್ಲಿ ಬಿಜೆಪಿ ಸರ್ಕಾರ ತೋರುತ್ತಿರುವ ಉದಾಸೀನ ಹಾಗೂ ಅಹಂಕಾರದ ನಿಲುವನ್ನು ಖಂಡಿಸಿ ತಂಜಾವೂರಿನಲ್ಲಿ ಡಿಎಂಕೆ ನೇತೃತ್ವದ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು ಎಂದಿದ್ದಾರೆ.

ಇದನ್ನೂ ಓದಿ: Udhayanidhi Stalin detained: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಉದಯನಿಧಿ ಭಾಷಣದ ಸಮರ್ಥನೆ:

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಕಾವೇರಿ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು ಮತ್ತು ರೈತರ ಕಳವಳಗಳನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದರು. ಅವರು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಕಾವೇರಿ ನೀರನ್ನು ತರುವಲ್ಲಿ, ಮೇಕೆದಾಟು ಯೋಜನೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಸಿನಿಮಾಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಹರಿಸುತ್ತಾ ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದೆ ಎಂದು ಉದಯನಿಧಿ ಆರೋಪಿಸಿದ್ದರು. ಈ ಆರೋಪಕ್ಕೆ ಉತ್ತರಿಸಲಾಗದ ಸರ್ಕಾರ, ಉದಯನಿಧಿ ಅವರನ್ನು ಬಂಧಿಸುವ ಮೂಲಕ ವಿಷಯವನ್ನು ಬೇರೆಡೆ ತಿರುಗಿಸಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ.

ಉದಯನಿಧಿ ಅವರನ್ನು ಕೇವಲ ವಿಚಾರಣೆ ಮಾಡುವುದು ಮಾತ್ರ ಸರ್ಕಾರದ ಉದ್ದೇಶವಾಗಿದ್ದರೆ ಅವರನ್ನು ತಂಜಾವೂರಿಗೆ ಕರೆದೊಯ್ದಿದ್ದು ಏಕೆ? ಕಸ್ಟಡಿಗೆ ಪಡೆಯುವ ಉದ್ದೇಶವಿಲ್ಲದಿದ್ದ ಮೇಲೆ ಅವರ ವಿರುದ್ಧ ಹಲವು ಕಠಿಣ ಸೆಕ್ಷನ್‌ಗಳನ್ನು ಏಕೆ ಹೇರಲಾಯಿತು? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ವಿಜಯ್ ತಮ್ಮನ್ನು, ತಮ್ಮ ಸಚಿವರನ್ನು ಅಥವಾ ಸರ್ಕಾರವನ್ನು ವಿಮರ್ಶಿಸುವವರನ್ನು ಪದೇ ಪದೇ ಬಂಧಿಸಲು ಆದೇಶಿಸುತ್ತಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಉದಯನಿಧಿ ತಮ್ಮ ಭಾಷಣದಲ್ಲಿ ಯಾವುದೇ ಅಶ್ಲೀಲ ಮಾತುಗಳನ್ನು ಆಡಿಲ್ಲ ಅಥವಾ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಒಂದು ವೇಳೆ ಅವರು ಎಂದಾದರೂ ಅನುಚಿತವಾಗಿ ಮಾತನಾಡಿದ್ದರೆ ತಕ್ಷಣವೇ ಕ್ಷಮೆಯಾಚಿಸುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೇ, ತಮಿಳುನಾಡಿನಾದ್ಯಂತ ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾಗಿರುವ ಡಿಎಂಕೆ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಪಾತ್ರದ ವಸ್ತ್ರಗಳ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದ ವಿನ್ಯಾಸಕರು

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ ಈ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾದಲ್ಲಿನ ಪಾತ್ರಗಳ ವಸ್ತ್ರವಿನ್ಯಾಸದ (Costume Design) ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಟೀಕೆ ಹಾಗೂ ಚರ್ಚೆ ವ್ಯಕ್ತವಾಗಿತ್ತು. ಪೌರಾಣಿಕ ಸಿನಿಮಾಗಳ ವಿಚಾರದಲ್ಲಿ ಈ ರೀತಿಯ ಟೀಕೆಗಳು ಎದುರಾಗುವುದು ಸಹಜ. ಆ ಬಗ್ಗೆ ಚಿತ್ರತಂಡದವರು ಪ್ರತಿಕ್ರಿಯೆ ನೀಡಿದ್ದಾರೆ.

ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರ ಬ್ಲೌಸ್ ಡಿಸೈನ್ ಹಾಗೂ ಕೈಕೇಯಿ ಪಾತ್ರದಲ್ಲಿ ನಟಿಸಿರುವ ಲಾರಾ ದತ್ತಾ ಅವರ ಸೀರೆ ನೋಡಿದರೆ ಟಿವಿ ಧಾರಾವಾಹಿಯ ಪಾತ್ರ ನೋಡಿದಂತೆ ಆಗುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇದೀಗ ಈ ಎಲ್ಲಾ ಟೀಕೆಗಳಿಗೆ ಚಿತ್ರದ ವಸ್ತ್ರವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಸೂಕ್ತ ಸ್ಪಷ್ಟನೆ ನೀಡಿದ್ದಾರೆ.

‘ತ್ರೇತಾಯುಗದ ಉಡುಪುಗಳಿಗೆ ಯಾವುದೇ ನೇರ ಪುರಾವೆಗಳಿಲ್ಲ’

ಸಾಯಿ ಪಲ್ಲವಿ ಅವರ ಉಡುಪಿನ ಬಗ್ಗೆ ಬಂದ ಟೀಕೆಗೆ ಉತ್ತರಿಸಿದ ಅವರು, ‘ತ್ರೇತಾಯುಗದ ಕಾಲದ ಬಟ್ಟೆಗಳು ನಮಗೆ ನೋಡಲು ಸಿಗುವುದಿಲ್ಲ. ನಾವು ಬಾಲ್ಯದಿಂದಲೂ ನೋಡಿಕೊಂಡು ಬಂದಿರುವ ಕ್ಯಾಲೆಂಡರ್ ಆರ್ಟ್, ರಾಜಾ ರವಿವರ್ಮ ಅವರ ವರ್ಣಚಿತ್ರಗಳು, ದೇವಸ್ಥಾನಗಳ ಕೆತ್ತನೆಗಳು ಮತ್ತು ಮಿನಿಯೇಚರ್ ಪೇಂಟಿಂಗ್ಸ್ ಆಧಾರವಾಗಿಟ್ಟುಕೊಂಡು ಈ ಡಿಸೈನ್ ಮಾಡಿದ್ದೇವೆ. ನಮ್ಮ ಪೂಜಾ ಕೊಠಡಿಯಲ್ಲಿರುವ ಸೀತಾ ಮಾತೆಯನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಅದೇ ರೀತಿ ಸಾಯಿ ಪಲ್ಲವಿ ಅವರ ಲುಕ್ ರೂಪಿಸಿದ್ದೇವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಭಾವನೆಗಳಿಗೆ ತಕ್ಕಂತೆ ಬಣ್ಣಗಳ ಆಯ್ಕೆ:

ಲಾರಾ ದತ್ತಾ (ಕೈಕೇಯಿ) ಅವರ ವಸ್ತ್ರವಿನ್ಯಾಸದ ಬಗ್ಗೆ ಉದ್ಭವಿಸಿದ ಟೀಕೆಗೆ ಸ್ಪಂದಿಸಿದ ಹರ್‌ಪ್ರೀತ್, ‘ನಾವು ಬಳಸಿದ ಪ್ರತಿಯೊಂದು ಬಣ್ಣಕ್ಕೂ ಒಂದು ಅರ್ಥವಿದೆ. ಹಸಿರು ಬಣ್ಣವು ಮಾತೃತ್ವವನ್ನು ಸಂಕೇತಿಸಿದರೆ, ಮರೂನ್ ಬಣ್ಣವು ಕೈಕೇಯಿ ತೆಗೆದುಕೊಳ್ಳುವ ಕಠಿಣ ನಿರ್ಧಾರ ಹಾಗೂ ಆಕೆಯೊಳಗಿನ ಭಾವನಾತ್ಮಕ ಹೋರಾಟವನ್ನು ಪ್ರತಿನಿಧಿಸುತ್ತದೆ. ಜನರು ಚಿತ್ರದ ಕಥಾಹಂದರ ಹಾಗೂ ಆಂತರ್ಯವನ್ನು ಅರ್ಥೈಸಿಕೊಳ್ಳುವ ಮುನ್ನವೇ ತರಾತುರಿಯಲ್ಲಿ ಟೀಕಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ

ಪೂರ್ಣ ಸಿನಿಮಾವನ್ನು ಬೆಳ್ಳಿತೆರೆಯಲ್ಲಿ ನೋಡಿದ ನಂತರವೇ ಉಡುಪುಗಳ ಹಿಂದಿರುವ ಶ್ರಮ ಮತ್ತು ಕಲ್ಪನೆ ಅರ್ಥವಾಗುತ್ತದೆ. ಆದ್ದರಿಂದ ಈಗಲೇ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ವಸ್ತ್ರವಿನ್ಯಾಸಕರು ವಿನಂತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿದೇಶಗಳಿಗೆ ಪರಾರಿಯಾಗಿದ್ದ 274 ಆರ್ಥಿಕ ಅಪರಾಧಿಗಳು ಭಾರತಕ್ಕೆ ಹಸ್ತಾಂತರ: 2019-26ರಲ್ಲಾದ ಸಾಧನೆ ಇದು – Kannada News | India brings back 274 fugitive criminals from 36 countries in last 5 years

ಪೊಲೀಸರ ಸಾಂದರ್ಭಿಕ ಚಿತ್ರImage Credit source: PTI

ನವದೆಹಲಿ, ಆಗಸ್ಟ್ 4: ವಿವಿಧ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಅಪರಾಧಿಗಳ (Fugitive criminals) ಪೈಕಿ 274 ಮಂದಿಯನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ (Extradition). 2019 ರಿಂದ 2026 ರ ನಡುವಿನ ಅವಧಿಯಲ್ಲಿ 36 ದೇಶಗಳಿಂದ 274 ಅಪರಾಧಿಗಳನ್ನು ಭಾರತಕ್ಕೆ ತರಲಾಗಿದೆ ಎನ್ನುವ ಮಾಹಿತಿಯನ್ನು ಸರ್ಕಾರ ನೀಡಿದೆ. ಪ್ರಸಕ್ತ ಕೇಂದ್ರ ಸರ್ಕಾರವು ಅಪರಾಧಿಗಳ ಹಸ್ತಾಂತರವನ್ನು ‘ರಾಷ್ಟ್ರೀಯ ಆದ್ಯತೆ’ಯನ್ನಾಗಿ (National Priority) ಮಾಡಿಕೊಂಡಿದೆ.

ತ್ರಿಮುಖ ಕಾರ್ಯತಂತ್ರ ಮತ್ತು ಜಾಗತಿಕ ಸಹಕಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ, ಅಪರಾಧಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ‘ಮಿಷನ್ ಮೋಡ್’ನಲ್ಲಿ ಜಾರಿಗೆ ತರಲಾಗಿದೆ. ಇದಕ್ಕಾಗಿ ಮೋದಿ ಸರ್ಕಾರವು ಮೂರು ಮುಖ್ಯ ತತ್ವಗಳ ಮೇಲೆ ಕಾರ್ಯತಂತ್ರ ರೂಪಿಸಿದೆ:

  • ಜಾಗತಿಕ ಕಾರ್ಯಾಚರಣೆಗಳು (Global Operations)
  • ಸದೃಢ ಸಮನ್ವಯತೆ (Robust Coordination)
  • ಚಾಣಾಕ್ಷ ರಾಜತಾಂತ್ರಿಕತೆ (Smart Diplomacy)

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

ತಂತ್ರಜ್ಞಾನ ಮತ್ತು ಗುಪ್ತಚರ ಆಧಾರಿತ ಮಾದರಿಯನ್ನು ಬಳಸಿ, ಹೆಸರು ಹಾಗೂ ಗುರುತು ಬದಲಾಯಿಸಿಕೊಂಡು ವಿದೇಶಗಳಲ್ಲಿ ಅಡಗಿರುವ ಅಪರಾಧಿಗಳನ್ನು ಪತ್ತೆಹಚ್ಚಲು ‘ಆಪರೇಷನ್ ತ್ರಿಶೂಲ್’ (Operation Trishul) ಅಡಿಯಲ್ಲಿ ಉಪಗ್ರಹ ತಂತ್ರಜ್ಞಾನ ಹಾಗೂ ಡಿಜಿಟಲ್ ಹೆಜ್ಜೆಗುರುತುಗಳನ್ನು (Digital Footprints) ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ಭಾರತ್‌ಪೋಲ್ ಮತ್ತು ಇಂಟರ್‌ಪೋಲ್ ಬಳಕೆ

ಕಳೆದ ಮೂರು ವರ್ಷಗಳಲ್ಲಿ ಇಂಟರ್‌ಪೋಲ್ ಮೂಲಕ ಕನಿಷ್ಠ 401 ಅಪರಾಧಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ (Red Corner Notice) ಹೊರಡಿಸಲಾಗಿದೆ.

ಇದರ ಜೊತೆಗೆ, ಭಾರತ ಸರ್ಕಾರವು ‘ಭಾರತ್‌ಪೋಲ್’ (BHARATPOL) ಎಂಬ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಇದು ದೇಶದ 1,400ಕ್ಕೂ ಹೆಚ್ಚು ತನಿಖಾ ಸಂಸ್ಥೆಗಳನ್ನು ನೇರವಾಗಿ ಇಂಟರ್‌ಪೋಲ್‌ನೊಂದಿಗೆ ಜೋಡಿಸುತ್ತದೆ. ಇದರಿಂದಾಗಿ ಅಪರಾಧಿಗಳ ಮಾಹಿತಿ ವಿನಿಮಯದ ಸಮಯವು ಕೇವಲ 3 ರಿಂದ 10 ದಿನಗಳಿಗೆ ಕಡಿಮೆಯಾಗಿದೆ.

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ಕಠಿಣ ಕಾನೂನುಗಳು ಮತ್ತು ಆಸ್ತಿ ಜಪ್ತಿ

ಅಪರಾಧಿಗಳನ್ನು ಮಟ್ಟಹಾಕಲು ಸರ್ಕಾರವು ಎನ್‍ಐಎ (NIA) ತಿದ್ದುಪಡಿ ಕಾಯ್ದೆ ಹಾಗೂ ಯುಎಪಿಎ (UAPA) ಕಾಯ್ದೆಗಳನ್ನು ಬಲಪಡಿಸಿದೆ. ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 355 ಮತ್ತು 356 ಅಡಿಯಲ್ಲಿ, ದೇಶದಿಂದ ಓಡಿಹೋದ ಅಪರಾಧಿಗಳ ಗೈರುಹಾಜರಿಯಲ್ಲೂ ವಿಚಾರಣೆ ನಡೆಸುವ (Trials in absentia) ಐತಿಹಾಸಿಕ ಕಾನೂನು ತರಲಾಗಿದೆ.

ಆಸ್ತಿ ಮುಟ್ಟುಗೋಲು: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ, 2019 ರಿಂದ 2026 ರವರೆಗೆ ವಿದೇಶಕ್ಕೆ ಓಡಿಹೋದ ಅಪರಾಧಿಗಳಿಗೆ ಸೇರಿದ ₹17,874 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಹಣ ಮರುವಸೂಲಿ: ಆರ್ಥಿಕ ಅಪರಾಧಿಗಳಿಂದ ವಶಪಡಿಸಿಕೊಂಡ ಹಣ ಸೇರಿದಂತೆ ಒಟ್ಟು ₹18,762 ಕೋಟಿಗಳನ್ನು ಬಾಧಿತರಿಗೆ/ಬ್ಯಾಂಕ್‌ಗಳಿಗೆ ಯಶಸ್ವಿಯಾಗಿ ಹಿಂತಿರುಗಿಸಲಾಗಿದೆ.

ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಈ ಮೂಲಕ ರವಾನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಣೆ – Kannada News | ‘Rututare’ Scheme Announced for Women’s Health: Actress Ramya Named Brand Ambassador for Menopause Awareness

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆImage Credit source: Getty Images

ಬೆಂಗಳೂರು, ಆಗಸ್ಟ್​​ 04: ಮಹಿಳೆಯರಿಗಾಗಿ ‘ಋತುತಾರೆ’ ಎಂಬ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​ ಘೋಷಣೆ ಮಾಡಿದ್ದಾರೆ. ಮಹಿಳೆಯರು ಮಾನಸಿಕ ಒತ್ತಡ, ಸಮಸ್ಯೆ ಅನಭವಿಸುತ್ತಿದ್ದಾರೆ. ಹೀಗಾಗಿ ಮೆನೋಪಾಸ್ ಸಂಬಂಧ ಮಹಿಳಾ ತಜ್ಞೆ ಜೋಸ್ನಾ ಅಧ್ಯಕ್ಷೆತೆಯಲ್ಲಿ ಸಮಿತಿ ರಚಿಸಿದ್ದೇವೆ. ನಟಿ ರಮ್ಯಾ ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ಡೇಟಾ ತೆಗೆದುಕೊಳ್ಳಲಿದ್ದು, ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಮಹಿಳೆಯರನ್ನು ಕಾಡುತ್ತಿರುವ ಮೆನೋಪಾಸ್ ಸಮಸ್ಯೆ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಒತ್ತಾಯಿಸಿದ್ದರು. ಈ ಹಿನ್ನಲೆ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ನಟಿ ರಮ್ಯ ಹಾಗೂ ಇತರೆ ಪರಿಣಿತರೊಂದಿಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಹತ್ವದ ಸಂವಾದ ನಡೆಸಲಾಗಿದ್ದು, ಎಲ್ಲರ ಸಲಹೆ ಮತ್ತು ಸೂಚನೆಗಳನ್ನು ಆಲಿಸಿದ ಬಳಿಕ ಸರ್ಕಾರ ಈ ತೀರ್ಮಾನ ಮಾಡಿರೋದಾಗಿ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಪದೇಪದೇ ಹುಳಿ ತೇಗು ಬರುತ್ತಿದ್ದರೆ ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ

ಮಹಿಳಾ ತಜ್ಞರು ಹೇಳಿದ್ದೇನು?

ಮಹಿಳೆಯರಿಗೆ ಋತುಬಂಧ ಯಾವ ಸಮಯದಲ್ಲಿ ಬಂದಿದೆ? ಯಾವ ರೀತಿ ಬಂದಿದೆ? ಅನ್ನೋದನ್ನ ತಿಳಿದುಕೊಳ್ಳಬೇಕು. ನಾರ್ಮಲ್ ಹಾಗೂ ಸರ್ಜಿಕಲ್ ಮೆನೋಪಾಸ್ ಎಂಬ ಎರಡು ವಿಭಾಗಗಳಿವೆ. ಮೆನೋ ಪಾಸ್ ಸಮಯದಲ್ಲಿ ಹೃದಯ ಸಂಬಂಧಿ, ಮೂಳೆ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಜಿಕಲ್ ಆಪರೇಷನ್ ಆದವರು ಹೆಚ್ಚಿನ ಗಮನ ಹರಿಸಬೇಕು. ನಾರ್ಮಲ್ ಮೆನೋಪಾಸ್ ಸಮಯದಲ್ಲಿ ತೊಂದರೆಯಾಗೋರಿಗೆ ಆಹಾರದಲ್ಲೇ ಸರಿಮಾಡಬಹುದು ಎಂದು ಮಹಿಳಾ ತಜ್ಞೆ ಜೋಸ್ನಾ ತಿಳಿಸಿದ್ದಾರೆ.

‘ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ’

ಇನ್ನು ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್‌ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ? ಮತ್ತು ಟ್ರೀಟ್‌ಮೆಂಟ್‌ ಏನೆಂಬ ಬಗ್ಗೆ ಸಿಟಿ ಭಾಗದವರಿಗೂ ಹೆಚ್ಚಾಗಿ ಗೊತ್ತಿಲ್ಲ. ಗ್ರಾಮೀಣ ಭಾಗದವರಿಗಂತೂ ಇದರ ಬಗ್ಗೆ ಮಾಹಿತಿ ಅತಿ ಕಡಿಮೆ ಇದೆ. ಹೀಗಾಗಿ ಇದರ ಬಗ್ಗೆ ಗೃಹಾರೋಗ್ಯ ಪುಸ್ತಕದಲ್ಲಿ ಸೇರಿಸಿ ಅಂತ ಮನವಿ ಇಟ್ಟುಕೊಂಡು ಬಂದಿದ್ದೆವು. ಆದರೆ ಘೋಷಿಸಿರುವ ಯೋಜನೆಗೆ ಸರ್ಕಾರ ತನ್ನನ್ನೇ ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭರ್ತಿಯಾದ ಚಿಕ್ಲಿಹೊಳೆ ಕಿರು ಜಲಾಶಯ: ಅರ್ಧ ಚಂದ್ರಾಕೃತಿಯ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ಲಗ್ಗೆ – Kannada News | Kodagu’s Chiklihole Falls Becomes a Top Monsoon Tourist Attraction

ಕೊಡಗು, ಆಗಸ್ಟ್​​ 04: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ-ತೊರೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದು, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ಚಿಕ್ಲಿಹೊಳೆ ಕಿರು ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ 15 ದಿನಗಳ ಹಿಂದಷ್ಟೇ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಜಲಾಶಯ ಕಳೆದ ಒಂದು ವಾರದ ಸತತ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಜಲಾಶಯ ತುಂಬಿದಾಗ ಈ ಅರ್ಧ ಚಂದ್ರಾಕೃತಿಯ ಕಟ್ಟೆಯ ಮೇಲಿಂದ ನೀರು ಧುಮ್ಮಿಕುವುದನ್ನು ನೋಡುವುದೇ ಚಂದ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆನೀರಲ್ಲಿ ಮೊಬೈಲ್‌ ಫೋನ್‌ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ – Kannada News | If your smartphone gets wet in the rain, follow these safety measures immediately

ಮಳೆಗಾಲದಲ್ಲಿ ವಾತಾವರಣ ತುಂಬಾನೇ ಆಹ್ಲಾದಕರವಾಗಿದ್ದರೂ, ಜೋರು ಮಳೆಗೆ ನೆರೆ, ಪ್ರವಾಹದಂತಹ ಸಮಸ್ಯೆಗಳು ಸಂಭವಿಸುತ್ತದೆ. ಇನ್ನೊಂದು ಕಡೆ ಭಾರೀ ಮಳೆಗೆ ನಾವೇನಾದರೂ ಮನೆಯಿಂದ ಹೊರಗೆ ಹೋದರೆ ಕೈಯಲ್ಲಿ ಹಿಡಿದುಕೊಂಡ, ಪಾಕೆಟ್‌ನಲ್ಲಿದ್ದ ಮೊಬೈಲ್‌ ಫೋನ್‌ (smartphone) ಒದ್ದೆಯಾಗುವ ಸಾಧ್ಯತೆ ಇರುತ್ತವೆ. ಕೆಲವೊಮ್ಮೆ ಫೋನ್‌ ಕೈಯಿಂದ ಜಾರಿ ನೀರಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಫೋನ್‌ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಏನು ಮಾಡೋದೆಂಬ ಟೆನ್ಷನ್‌ ಇರುತ್ತದೆ. ಹೀಗೆ ಮಳೆನೀರಲ್ಲಿ ಮೊಬೈಲ್‌ ಫೋನ್‌ ಒದ್ದೆಯಾದರೆ ಆತಂಕಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ಮೊಬೈಲ್‌ ರಿಪೇರಿಗೆ ಸಾವಿರಾರು ರೂಪಾಯಿ ಖರ್ಚಾಗೋದನ್ನು ತಪ್ಪಿಸಬಹುದು.

ಮೊಬೈನ್‌ ಫೋನ್‌ ಮಳೆನೀರಿನಲ್ಲಿ ಒದ್ದೆಯಾದ್ರೆ ತಕ್ಷಣಕ್ಕೆ ಏನು ಮಾಡ್ಬೇಕು?

ಫೋನ್ ಅನ್ನು ತಕ್ಷಣ ಸ್ವಿಚ್ ಆಫ್ ಮಾಡಿ: ಮಳೆಯಿಂದಾಗಿ ನಿಮ್ಮ ಫೋನ್ ಒದ್ದೆಯಾದರೆ, ತಕ್ಷಣ ಅದನ್ನು ಆಫ್ ಮಾಡಿ. ಒದ್ದೆಯಾದ ಫೋನ್ ಅನ್ನು ಆನ್‌ನಲ್ಲಿ ಇಡುವುದರಿಂದ ಶಾರ್ಟ್ ಸರ್ಕ್ಯೂಟ್ ಮತ್ತು ಮದರ್‌ಬೋರ್ಡ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮೊಬೈಲ್‌ ಒದ್ದೆಯಾದರೆ ಫೋನ್‌  ಅನ್ನು ಆಫ್ ಮಾಡುವುದು.

ಸಿಮ್ ಟ್ರೇ, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಿ: ಫೋನ್ ಆಫ್ ಮಾಡಿದ ನಂತರ, ಮೊದಲು ಸಿಮ್ ಟ್ರೇ ತೆಗೆದುಹಾಕಿ. ಅಲ್ಲದೆ, ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ತೆಗೆಯಿರಿ. ಇದು ಫೋನ್ ಒಳಗೆ ಗಾಳಿಯನ್ನು ಪರಿಚಲನೆ ಮಾಡಲು ಮತ್ತು ತೇವಾಂಶವನ್ನು ಬೇಗನೆ ಒಣಗಿಸಲು ಅನುವು ಮಾಡಿಕೊಡುತ್ತದೆ.

ಒಣ ಬಟ್ಟೆಯಿಂದ ಒರೆಸಿ: ಹೆಚ್ಚುವರಿ ನೀರನ್ನು ತೆಗೆದುಹಾಕಲು ಸ್ವಚ್ಛವಾದ ಮತ್ತು ಒಣಗಿದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಇದು ಹೊರಗಿನ ಮೇಲ್ಮೈಯಿಂದ ಯಾವುದೇ ತೇವಾಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಎಂದಿಗೂ ನೀರನ್ನು ಒಣಗಿಸಲು ಹೇರ್‌ ಡ್ರೈಯರ್‌ ಅನ್ನು ಬಳಸಬಾರದು. ಏಕೆಂದರೆ ಡ್ರೈಯರ್‌ನ ಬಲವಾದ, ಬಿಸಿ ಗಾಳಿಯು ಫೋನಿನ ಸೂಕ್ಷ್ಮವಾದ ವೈರಿಂಗ್ ಅನ್ನು ಸುಟ್ಟುಹಾಕಬಹುದು ಮತ್ತು ನೀರನ್ನು ಒಳಭಾಗಕ್ಕೆ ಆಳವಾಗಿ ತಳ್ಳಬಹುದು.

ಅಕ್ಕಿಯಲ್ಲಿ ಒಣಗಿಸಿ:  ಫೋನ್‌ನ ಮೇಲ್ಭಾಗವನ್ನು ಒರೆಸಿದ ನಂತರ ಮೊಬೈಲ್‌ ಅನ್ನು ಅಕ್ಕಿಯ ಮಧ್ಯೆ ಇಟ್ಟುಬಿಡಿ. ಅಕ್ಕಿಯು ತೇವಾಂಶವನ್ನು ಬೇಗನೆ ಹೀರಿಕೊಳ್ಳುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ. ಕನಿಷ್ಠ 24 ರಿಂದ 48 ಗಂಟೆಗಳ ಕಾಲ ಫೋನ್ ಅನ್ನು ಅಕ್ಕಿಯೊಳಗೆ ಬಿಡಿ ಮತ್ತು ಅದನ್ನು ಹೊರತೆಗೆದು ಮತ್ತೆ ಮತ್ತೆ ಪರಿಶೀಲಿಸುವ ತಪ್ಪನ್ನು ಮಾಡಬೇಡಿ.

ಇದನ್ನೂ ಓದಿ: ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಸರಳ ಮಾರ್ಗಗಳನ್ನು ಅನುಸರಿಸಿ

ಚಾರ್ಜ್ ಮಾಡುವ ತಪ್ಪು ಮಾಡಬೇಡಿ: ಫೋನ್‌ ನೀರನ್ನು ತುಂಬಾನೇ ನೆನೆದರೆ  ಅದನ್ನು ಕನಿಷ್ಠ ಎರಡು ದಿನಗಳವರೆಗೆ ಚಾರ್ಜ್‌ ಮಾಡಬೇಡಿ. ಅನೇಕ ಜನರು ತಮ್ಮ ಫೋನ್ ಇನ್ನೂ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಚಾರ್ಜ್‌ ಮಾಡುತ್ತಾರೆ. ಹೀಗೆ ಒದ್ದೆಯಾದ ಫೋನ್ ಅನ್ನು ಚಾರ್ಜ್ ಮಾಡುವುದು ಅತ್ಯಂತ ಅಪಾಯಕಾರಿ. ಇದು ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಹಾರ್ಡ್‌ವೇರ್ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಫೋನ್ ಅನ್ನು 48 ರಿಂದ 72 ಗಂಟೆಗಳ ಕಾಲ ಆಫ್ ಮಾಡಿಡಿ:  ಕನಿಷ್ಠ 72 ಗಂಟೆಗಳ ಕಾಲ ನಿಮ್ಮ ಫೋನ್ ಅನ್ನು ಆನ್ ಮಾಡಬೇಡಿ. ಅದನ್ನು ಆನ್ ಮಾಡಿ ಪದೇ ಪದೇ ಪರಿಶೀಲಿಸಬೇಡಿ. ಹಾಗೆ ಮಾಡುವುದರಿಂದ ಫೋನ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗಬಹುದು. 48 ರಿಂದ 72 ಗಂಟೆಗಳ ನಂತರವೇ ಫೋನ್‌ ಆನ್‌ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾಗೇಂದ್ರರನ್ನು ಪುನಃ ಮಂತ್ರಿ ಮಾಡಿದ್ದು ಇದೇ ಕಾರಣಕ್ಕೆ’: ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ – Kannada News | ‘Inducted Out of Fear He Would Turn Approver’: Janardhana Reddy’s Explosive Charge Over B Nagendra’s Cabinet Return

ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ
Image Credit source: PTI

ಬಳ್ಳಾರಿ, ಆಗಸ್ಟ್​​ 04: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ನಿನ್ನೆಯಷ್ಟೇ (ಆ.03) ನಡೆದಿದ್ದು, 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಪೈಕಿ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣ ಸಂಬಂಧ ತಲೆದಂಡವಾಗಿದ್ದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಕೂಡ ಮಂತ್ರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಮಾತ್ರವಲ್ಲದೇ ಬಹುತೇಕ ಪಾಲುದಾರ ಇದ್ದಾರೆ ಎಂದು ತಾನು ಹೇಳಿದ್ದು ಈಗ ನಿಜವಾಗಿದೆ. ನಾಗೇಂದ್ರ ಮುಖಕ್ಕೆ ಬೆಣ್ಣೆ ಹಚ್ಚಿರೋದು ತೋರಿಸಿ, ಉಳಿದವರು ಹಿಂದೆ ಲೂಟಿ ಹೊಡೆದಿದ್ದಾರೆ. ನಾಗೇಂದ್ರರಿಗೆ 10-20 ಪರ್ಸೆಂಟ್ ಕೊಟ್ಟು, ಉಳಿದ ಹಣವನ್ನು ಬಳ್ಳಾರಿ, ತೆಲಂಗಾಣ ಮತ್ತು ಗೋವಾ ಚುನಾವಣೆಗಳಿಗೆ ಬಳಸಿದ್ದಾರೆ. ಒಂದೊಮ್ಮೆ ನಾಗೇಂದ್ರರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಅವರು ಅಪ್ರೂವಲ್ ಆಗಿ ಬಿಡುತ್ತಿದ್ದರು ಎಂಬ ಕಾರಣಕ್ಕೆ ಹುದ್ದೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಸತ್ಯ ಹೇಳಬಹುದೆಂಬ ಭಯಕ್ಕೆ ಮಂತ್ರಿಗಿರಿ ನೀಡಿದ್ದಾರೆ’

ಹಗರಣದ ದುಡ್ಡು ಕಾಂಗ್ರೆಸ್ ಪಕ್ಷದವರು ತಿಂದು ತನ್ನ ಜೈಲಿಗೆ ಹಾಕಿಸಿದ್ರು ಎಂದು ಕೋರ್ಟ್ ಮುಂದೆ ನಾಗೇಂದ್ರ ಹೇಳುತ್ತಿದ್ದರು. ಇದೇ ಭಯಕ್ಕೆ ಅವರನ್ನು ಮಂತ್ರಿ ಮಾಡಿದ್ದಾರೆ. ನಾಗೇಂದ್ರ ಬಗ್ಗೆ ತನಗೂ ಅನುಕಂಪ ಇದೆ. ಪಾಪ 10-20 ಪರ್ಸೆಂಟ್ ದುಡ್ಡು ತಿಂದು ಜೈಲಿಗೆ ಹೋದರು. ಆದರೆ ಅವರು ಬುದ್ಧಿವಂತರಾಗಿದ್ದು, ಯಾರ್ಯಾರು ಹಣ ತಿಂದಿದ್ದಾರೆ ಎಂಬ ಬಗ್ಗೆ ಪಟ್ಟಿ ಮಾಡಿ ಕೋರ್ಟ್​​ಗೆ ಕೊಡುತ್ತೇನೆ ಎಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​​ ಅವರಿಗೆ ಮತ್ತೆ ಮಣೆ ಹಾಕಿದೆ ಎಂದು ಜನಾರ್ದನ ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಿಲ್ಲ ಎಂದ ಬಿ‌ಕೆ ಹರಿಪ್ರಸಾದ್

ಬಿಜೆಪಿಯಿಂದ ಪ್ರತಿಭಟನೆ

ಮತ್ತೊಂದೆಡೆ ಇದೇ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​ ಕೂಡ ಕಿಡಿ ಕಾರಿದ್ದಾರೆ. ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಹೋರಾಟ ಮಾಡಿ ನಾವು ನಾಗೇಂದ್ರ ಅವರ ರಾಜೀನಾಮೆ ಕೊಡಿಸಿದ್ದೆವು. ಆದರೆ ಈಗ ಅವರನ್ನು ವಾಷಿಂಗ್​​ ಮಷಿನ್​​ಗೆ ಹಾಕಿ ಕ್ಲೀನ್​​ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರೆ. ಇನ್ನು ನೂತನ ಸಚಿವ ನಾಗೇಂದ್ರರನ್ನು ವಜಾ ಮಾಡುವಂತೆ ಆಗ್ರಹಿಸಿ ಪರಿಷತ್ ಸದಸ್ಯ ಲಿಂಗರಾಜ್ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿಗರು ಪ್ರತಿಭಟನೆ ಕೂಡ ನಡೆಸಿದ್ದಾರೆ. ವಾಲ್ಮೀಕಿ ನಿಗಮದ 187ಕೋಟಿ ನುಂಗಿದವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​​ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:38 pm, Tue, 4 August 26

Source link

Exit mobile version