ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ – Kannada News | Unique Faith: Kolar Village Honors Deceased Monkey with Grand Vaikuntha Samaradhane

ಕೋಲಾರ ಆ 4: ಕೋತಿಯನ್ನು ಆಂಜನೇಯನ ಪ್ರತಿರೂಪವೆಂದು ಪೂಜಿಸುವ ಭಾರತೀಯ ಕೃಷಿ ಹಾಗೂ ಗ್ರಾಮೀಣ ಸಂಸ್ಕೃತಿಯ ಅಪರೂಪದ ಭಕ್ತಿಪ್ರಧಾನ ಘಟನೆಯೊಂದು ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿಯೊಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸಕಲ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಲ್ಲದೆ, ಇದೀಗ 11ನೇ ದಿನದ ‘ವೈಕುಂಠ ಸಮಾರಾಧನೆ’ ಕಾರ್ಯಕ್ರಮವನ್ನೂ ಅತ್ಯಂತ ವೈಭವದಿಂದ ನೆರವೇರಿಸಿದ್ದಾರೆ. ಕೆಲವು ದಿನಗಳ ಹಿಂದೆ ತೊಟ್ಲಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಕೋತಿಯನ್ನು ಕಂಡ ಗ್ರಾಮಸ್ಥರು, ಅದನ್ನು ಕೇವಲ ಪ್ರಾಣಿ ಎಂದು ಭಾವಿಸದೆ ಶ್ರೀ ಆಂಜನೇಯ ಸ್ವಾಮಿಯ ಪ್ರತಿರೂಪವೆಂದು ನಂಬಿ ಭಕ್ತಿಯಿಂದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಅಂತ್ಯಸಂಸ್ಕಾರ ಮುಗಿದ 11ನೇ ದಿನದಂದು ಕೋತಿಯ ಸಮಾಧಿ ಸ್ಥಳವನ್ನು ಹೂವುಗಳಿಂದ ಶೃಂಗರಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವೈಕುಂಠ ಸಮಾರಾಧನೆಯ ಅಂಗವಾಗಿ ಗ್ರಾಮಸ್ಥರೆಲ್ಲರೂ ಒಂದಾಗಿ ಸೇರಿ ನೂರಾರು ಜನರಿಗೆ ಆಸರೆಯಾಗಿ ಮಹಾ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಏರ್ಪಡಿಸಿದ್ದರು. ಪ್ರಾಣಿಯೊಂದರ ಮೇಲಿರುವ ಭಕ್ತಿ ಹಾಗೂ ವಾತ್ಸಲ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ನೀಡುತ್ತೇವೆಂದ ಶಾಸಕರಿಗೆ ಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ – Kannada News | Karnataka CM DK Shivakumar Emphasises Party Loyalty Amidst Cabinet Resentment

ಬೆಂಗಳೂರು ಆ. 4: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡಿರುವ ಹಾಗೂ ರಾಜೀನಾಮೆ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಶಿಸ್ತು ಮೀರಿ ರಾಜೀನಾಮೆ ನಾಟಕವಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ನೀಡಲು ಬಂದರೆ, ಕಿಂಚಿತ್ತೂ ವಿಳಂಬ ಮಾಡದೆ ಕ್ಷಣಮಾತ್ರದಲ್ಲೇ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುವುದು ಎಂದು ಸಿಎಂ ಹಾಕಿದ್ದಾರೆ. ಸರ್ಕಾರ ಅಥವಾ ಪಕ್ಷಕ್ಕೆ ರಾಜೀನಾಮೆ ಬೆದರಿಕೆ ಒಡ್ಡುವ ಮೂಲಕ ಒತ್ತಡ ಹೇರಲು ಯತ್ನಿಸುವವರ ತಂತ್ರಗಳಿಗೆ ಹೈಕಮಾಂಡ್ ಅಥವಾ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಎಲ್ಲರಿಗೂ ಒಂದೇ ಬಾರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಹಿರಿಯರು ಹಾಗೂ ಆಕಾಂಕ್ಷಿಗಳು ತಾಳ್ಮೆಯಿಂದಿರಬೇಕು. ಪಕ್ಷದ ನಿಯಮ ಮತ್ತು ಶಿಸ್ತನ್ನು ಮೀರಿ ನಡೆಯುವವರನ್ನು ಸಹಿಸುವುದಿಲ್ಲ ಎಂದು ಸಿಎಂ ಖಡಕ್ ಆಗಿ ಎಚ್ಚರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರಾವಾಹಿ ನಟನಾಗಿದ್ದಾಗ ಕಿಚ್ಚ ಸುದೀಪ್, ಯಾವ ಧಾರಾವಾಹಿ ಗೊತ್ತ? – Kannada News | Actress Sangeetha shared Sudeep’s old photo from serial days

ಸುದೀಪ್ (Sudeep) ಕನ್ನಡ ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪ್ರತಿಭಾವಂತ ಸ್ಟಾರ್ ನಟರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅಭಿಮಾನಿಗಳನ್ನು ಕಿಚ್ಚ ಸುದೀಪ್ ಹೊಂದಿದ್ದಾರೆ. ಸುದೀಪ್ ಇಂದು ಚಿತ್ರರಂಗದ ಬಾದ್​ ಶಾ ಎನಿಸಿಕೊಂಡಿದ್ದಾರೆ. ಆದರೆ ಸುದೀಪ್ ಅವರು ಈ ಸ್ಥಾನಕ್ಕೆ ಏರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹಲವಾರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಬಳಿಕ ನಾಯಕನಾದವರು ಸುದೀಪ್. ಸಿನಿಮಾ ಅವಕಾಶ ಎಂಬುದು ಅವರು ಸುಲಭವಾಗಿ ಬಂದಿದ್ದಲ್ಲ, ಮುಂಬೈಗೆ ಹೋಗಿ ತರಬೇತಿ ಪಡೆದು ಬಂದು, ಧಾರಾವಾಹಿ, ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ ಬಳಿಕವೇ ನಾಯಕ ಆದವರು.

ಸುದೀಪ್ ಅವರು ‘ತಾಯವ್ವ’ ಹೆಸರಿನ ಸಿನಿಮಾನಲ್ಲಿ ಮೊದಲು ನಟಿಸಿದ್ದು ಬಹುತೇಕ ಎಲ್ಲರಿಗೂ ತಿಳಿದಿರುವಂಥಹದೇ ಆದರೆ ಅದಕ್ಕೂ ಮುನ್ನ ಸುದೀಪ್, ಧಾರಾವಾಹಿ ಒಂದರಲ್ಲಿ ಕೆಲ ಸಮಯ ನಟಿಸಿದ್ದರು. ಸುದೀಪ್ ಅವರ ಧಾರಾವಾಹಿ ವಿಷಯ ಅವರ ಅಭಿಮಾನಿಗಳಿಗೆ ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಸುಮಾರು 30 ವರ್ಷಗಳ ಹಿಂದೆ ಸುದೀಪ್ ಅವರು ಧಾರಾವಾಹಿ ಒಂದರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಸುದೀಪ್ ಅವರ ಸಹ ನಟಿ ಆಗಿದ್ದವರು ಇದೀಗ ಸುದೀಪ್ ಅವರ ಆ ಹಳೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1996ರಲ್ಲಿ ಸುದೀಪ್ ಅವರು ‘ಪ್ರೇಮದ ಕಾದಂಬರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದರು. ಬಹುತೇಕ ಧಾರಾವಾಹಿಗಳು ಮಹಿಳಾ ಪ್ರಧಾನ ಆಗಿರುವ ಕಾರಣ, ಧಾರಾವಾಹಿಯಲ್ಲಿ ಬಹಳ ಪ್ರಮುಖವಾದ ಪಾತ್ರ ಸುದೀಪ್ ಅವರದ್ದಾಗಿರಲಿಲ್ಲ. ಅದೇ ಧಾರಾವಾಹಿಯಲ್ಲಿ ಸುದೀಪ್ ಜೊತೆಗೆ ಸಂಗೀತ ಅನಿಲ್ ಅವರು ಹಳೆಯ ಫೊಟೊವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೀಸೆ, ಗಡ್ಡ ರಹಿತವಾಗಿ ಸುದೀಪ್, ಚಾಕಲೇಟ್ ಬಾಯ್ ರೀತಿ ಕಾಣುತ್ತಿದ್ದಾರೆ. ಸುದೀಪ್ ಮತ್ತು ಸಂಗೀತ ಅವರು ‘ಪ್ರೇಮ ಬರಹ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು, ಅದು 1996 ರಲ್ಲಿ ಉದಯ ಚಾನೆಲ್​​​ನಲ್ಲಿ ಪ್ರಸಾರ ಆಗುತ್ತಿತ್ತು.

ಇದನ್ನೂ ಓದಿ:‘ಬಿಗ್​​ಬಾಸ್’ ಅಪ್​​ಡೇಟ್ ಹೊತ್ತು ಬರುತ್ತಿದ್ದಾರೆ ಕಿಚ್ಚ ಸುದೀಪ್

ಚಿತ್ರದ ಜೊತೆಗೆ ಒಕ್ಕಣೆ ಬರೆದಿರುವ ಸಂಗೀತ ಅನಿಲ್, ‘ಇವರು ಯಾರೆಂದು ಊಹಿಸಿ ನನ್ನ ಹಳೆಯ ಆಲ್ಬಮ್ ಫೋಟೋ ಗ್ಯಾಲರಿಯಲ್ಲಿ ಸಿಕ್ಕಿತು ನನ್ನ ಒಂದು ಸೀರಿಯಲ್‌ನಲ್ಲಿ ನನ್ನ ನಾಯಕನಾಗಿದ್ದನು ಮತ್ತು ಈಗ ಅವನು ಕನ್ನಡ ಇಂಡಸ್ಟ್ರಿಯ ಬಾದ್‌ಶಾ ಇದು 26 ವರ್ಷದ ಹಳೆಯ ಚಿತ್ರ , ಹಂಚಿಕೊಳ್ಳದೇ ಇರಲಿಲ್ಲ, ನಮ್ಮ ಕಿಚ್ಚ ಸುದೀಪ್ ಬಗ್ಗೆ ‘ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ ಆದರೆ ಚಿತ್ರ ಸ್ಪಷ್ಟವಾಗಿಲ್ಲ ದಯವಿಟ್ಟು ಸಹಿಸಿಕೊಳ್ಳಿ’ ಎಂದಿದ್ದಾರೆ. ಧಾರಾವಾಹಿ ಹೆಸರು ಊಹಿಸಿ ಎಂದು ಸವಾಲನ್ನು ಹಾಕಿದ್ದಾರೆ. ಆದರೆ ಬಹುತೇಕರಿಗೆ ಸಾಧ್ಯವಾಗಿಲ್ಲ.

ಸುದೀಪ್ ಈಗ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದಾದ ಬಳಿಕ ಒಬ್ಬ ತಮಿಳು ನಿರ್ದೇಶಕ, ಸುದೀಪ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ. ಕೆಆರ್​​ಜಿ ಸ್ಟುಡಿಯೋಸ್ ನಿರ್ಮಾಣದ ಹೊಸ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಇವುಗಳ ಜೊತೆಗೆ ಖುದ್ದು ಹೊಸ ಸಿನಿಮಾ ಒಂದನ್ನು ಸುದೀಪ್ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಮೆರಿಕಾ ಅಮೆರಿಕಾ’ ಸೀಕ್ವೆಲ್​ನಲ್ಲಿ ಮನೋಮೂರ್ತಿ ಸಂಯೋಜನೆಯಲ್ಲಿ ಐದು ಹಾಡು – Kannada News | Nagathihalli Chandrashekar and Mano Murthy Reunite for ‘America America 2’

ಕನ್ನಡ ಚಿತ್ರರಂಗದ ಅದ್ಭುತ ಮೆಲೋಡಿ ಕಾಂಬಿನೇಷನ್ ಎಂದೇ ಪ್ರಸಿದ್ಧವಾಗಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತೆ ಕೈಜೋಡಿಸಿದ್ದಾರೆ. ಈ ಹಿಂದೆ ‘ಅಮೆರಿಕಾ ಅಮೆರಿಕಾ’, ‘ನನ್ನ ಪ್ರೀತಿಯ ಹುಡುಗಿ’, ‘ಅಮೃತಧಾರೆ’ ಹಾಗೂ ‘ಮಾತಾಡ್ ಮಾತಾಡ್ ಮಲ್ಲಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದ ಈ ಜೋಡಿ, ಇದೀಗ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೂಲಕ ಮತ್ತೆ ಒಂದಾಗಿದೆ.

ವಿಶೇಷವೆಂದರೆ, ಫ್ರೆಂಡ್‌ಶಿಪ್ ಡೇ ಶುಭ ಸಂದರ್ಭದಲ್ಲೇ ಇಬ್ಬರೂ ಮುಖಾಮುಖಿಯಾಗಿ ಈ ಹೊಸ ಸಿನಿಮಾ ಹಾಗೂ ಅದರ ಸಂಗೀತದ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಸಿನಿಮಾಗಾಗಿ ಐದು ಅದ್ಭುತ ಹಾಡುಗಳನ್ನು ರಚಿಸಿದ್ದು, ಅದಕ್ಕೆ ಮನೋ ಮೂರ್ತಿ ಅವರು ಈ ಬಾರಿಯೂ ಮಂತ್ರಮುಗ್ಧಗೊಳಿಸುವ ಸ್ವರ ಸಂಯೋಜನೆ ಮಾಡಿದ್ದಾರೆ.

ಈ ಐದೂ ಹಾಡುಗಳ ಆಡಿಯೋ ಹಕ್ಕುಗಳನ್ನು ‘ಮನೋ ಮೂರ್ತಿ ಮ್ಯೂಸಿಕಲ್’ ಆಡಿಯೋ ಲೇಬಲ್ ಹೆಮ್ಮೆಯಿಂದ ಪಡೆದುಕೊಂಡಿದೆ. ಗೆಳೆತನದ ಜೊತೆಗೆ ವ್ಯವಹಾರವೂ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಸ್ವತಃ ಮನೋ ಮೂರ್ತಿ ಅವರ ಸಂಸ್ಥೆಯ ಮೂಲಕವೇ ಈ ಹಾಡುಗಳನ್ನು ಮಾರುಕಟ್ಟೆಗೆ ತರಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಚಿತ್ರದ ಎಲ್ಲಾ ಹಾಡುಗಳು ರಿಲೀಸ್ ಆಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸಿಎಂ ಬದಲಿಸಿದಾಗಲೆಲ್ಲ ಪಕ್ಷಗಳಿಗೆ ಡ್ಯಾಮೇಜ್ ಆಗಿದೆ’: ಸಂಪುಟ ವಿಸ್ತರಣೆ ಬೆನ್ನಲ್ಲೇ ಮಾಜಿ ಸಚಿವ ಕೆಎನ್ ರಾಜಣ್ಣ ಅಚ್ಚರಿಯ ಮಾತು – Kannada News | Congress have suffered damage whenever the CM was changed: KN Rajanna makes a surprising statement following the cabinet expansion

ಕೆಎನ್ ರಾಜಣ್ಣ ಹಾಗೂ ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಬೆನ್ನಲ್ಲೇ ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಮಹತ್ವದ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳನ್ನು ಬದಲಿಸಿದ ಸಂದರ್ಭಗಳಲ್ಲಿ ಪಕ್ಷಗಳಿಗೆ ಆಗಿರುವ ಪರಿಣಾಮ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರನ್ನು ಬದಲಿಸಿರುವುದು ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಬಹುದು ಎಂಬರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದೇ ಈಗಾಗಲೇ ದೊಡ್ಡ ಡ್ಯಾಮೇಜ್. ಈ ಹಿಂದೆ ಮುಖ್ಯಮಂತ್ರಿ ಬದಲಾವಣೆಯಾದ ಸಂದರ್ಭಗಳಲ್ಲಿ ಪಕ್ಷಗಳಿಗೆ ಉಂಟಾದ ಪರಿಣಾಮವನ್ನು ಗಮನಿಸಬೇಕಿದೆ ಎಂದು ರಾಜಣ್ಣ ಹೇಳಿದ್ದಾರೆ.

ಡಿಕೆಶಿ ಒಳ್ಳೆಯ ಸಂಘಟಕ: ರಾಜಣ್ಣ

ಸಿಎಂ ಡಿಕೆ ಶಿವಕುಮಾರ್ ಅವರ ಕಾರ್ಯವೈಖರಿಯ ಬಗ್ಗೆಯೂ ರಾಜಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಒಳ್ಳೆಯ ಸಂಘಟಕ. ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನು ಅವರು ಮಾಡುತ್ತಾರೆ. ಅದನ್ನು ನಾನು ಮ್ಯಾನಿಪ್ಯುಲೇಷನ್ ಎಂದು ಹೇಳುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸುವಂತೆ ಹೈಕಮಾಂಡ್ ಸೂಚನೆ ನೀಡಿರುವ ವಿಚಾರಕ್ಕೂ ಅವರು ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ಅಂತಹ ಸೂಚನೆ ನೀಡಿದ್ದರೆ, ಅದರಂತೆ ಮುಖ್ಯಮಂತ್ರಿ ನಡೆದುಕೊಳ್ಳಬೇಕು. ಹೈಕಮಾಂಡ್‌ನ ತೀರ್ಮಾನವನ್ನು ನಾವು ಪ್ರಶ್ನಿಸಲು ಸಾಧ್ಯವೇ ಎಂದು ರಾಜಣ್ಣ ಹೇಳಿದ್ದಾರೆ.

ಜಿಲ್ಲಾವಾರು ಸಚಿವ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ

ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಎಂದು ರಾಜಣ್ಣ ಹೇಳಿದ್ದಾರೆ. ಕೋಲಾರ ಜಿಲ್ಲೆಗೆ ಯಾರಿಗೂ ಸಚಿವ ಸ್ಥಾನ ನೀಡಲಾಗಿಲ್ಲ. ಕೆಲವು ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಇದರಿಂದ ಆ ಜಿಲ್ಲೆಗಳ ಅಭಿವೃದ್ಧಿ ಹಾಗೂ ಆಡಳಿತದ ಮೇಲೂ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಜಿಲ್ಲೆಯ ಸಚಿವರಿಗೆ ಮತ್ತೊಂದು ಜಿಲ್ಲೆಯ ಉಸ್ತುವಾರಿ ನೀಡುವುದಕ್ಕಿಂತ, ಸಾಧ್ಯವಾದಷ್ಟು ಜಿಲ್ಲಾವಾರು ಪ್ರಾತಿನಿಧ್ಯ ನೀಡುವುದು ಉತ್ತಮ. ಸಂಪುಟದಲ್ಲಿ ಸಂಪೂರ್ಣ ಸಮಾಧಾನ ತರುವಂತಹ ರಚನೆ ಯಾರಿಗೂ ಸಾಧ್ಯವಿಲ್ಲ. ಆದರೆ ಜಿಲ್ಲಾವಾರು ಅಸಮತೋಲನ ಮಾಡಬಾರದು ಎಂದು ರಾಜಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಗೈರಾಗಿದ್ದರ ಬಗ್ಗೆಯೂ ಪ್ರತಿಕ್ರಿಯಿಸಿದ ರಾಜಣ್ಣ, ಅವರು ಉದ್ದೇಶಪೂರ್ವಕವಾಗಿ ಗೈರಾಗಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ತಡವಾದರೂ ಕೊನೆಗೂ ನಡೆದಿದೆ. ನೂತನ ಸಚಿವರಿಗೆ ಅಭಿನಂದನೆಗಳು. ರಾಜ್ಯದಲ್ಲಿನ ಬರ ಪರಿಸ್ಥಿತಿ ಎದುರಿಸಲು ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ರಾಜಣ್ಣ ಹೇಳಿದ್ದಾರೆ.

ನಾನು ಸಚಿವ ಸ್ಥಾನ ಕೇಳಿರಲಿಲ್ಲ: ರಾಜಣ್ಣ

ತಮಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ನಾನು ಮೊದಲಿನಿಂದಲೂ ಸಚಿವ ಸ್ಥಾನ ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರ ಪಟ್ಟಿಯಲ್ಲಿ ಗೊಂದಲವಾಗಿದ್ದು, ಮೂರು ಬಾರಿ ಪಟ್ಟಿಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಪ್ರತ್ಯೇಕ ಸಭೆ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ, ಮುಂದಿನ ನಡೆ ಬಗ್ಗೆ ಚರ್ಚೆ

ಸಚಿವ ಸ್ಥಾನ ವಂಚಿತರಾದ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿರುವುದು ಸಹಜ. ಆದರೆ ಅಸಮಾಧಾನ ಅಥವಾ ಬಂಡಾಯ ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರೂ ಪಕ್ಷದ ಹಿತದೃಷ್ಟಿಯಿಂದ ನಡೆದುಕೊಳ್ಳಬೇಕು ಎಂಬ ಸಂದೇಶವನ್ನೂ ರಾಜಣ್ಣ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Apply Now: ರಾಮನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ; 55 ಟೈಪಿಸ್ಟ್ ಹಾಗೂ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Ramanagara District Court Recruitment 2026: Apply Online for 55 Typist and Servant Posts by August 31

ರಾಮನಗರ ಜಿಲ್ಲಾ ನ್ಯಾಯಾಲಯ ನೇಮಕಾತಿImage Credit source: Getty Images

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಮನಗರ ಜಿಲ್ಲಾ ನ್ಯಾಯಾಲಯವು ಉತ್ತಮ ಅವಕಾಶವನ್ನು ತಂದಿದೆ. ರಾಮನಗರ ಜಿಲ್ಲಾ ಕೋರ್ಟ್ (Ramanagara Court) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 55 ಟೈಪಿಸ್ಟ್ (Typist) ಮತ್ತು ಸೇವಕರ (Servants) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ಸಂಕ್ಷಿಪ್ತ ಮಾಹಿತಿ:

  • ನೇಮಕಾತಿ ಸಂಸ್ಥೆ: ರಾಮನಗರ ಜಿಲ್ಲಾ ಕೋರ್ಟ್ (Ramanagara District Court)
  • ಖಾಲಿ ಇರುವ ಹುದ್ದೆಗಳು: ಟೈಪಿಸ್ಟ್ ಮತ್ತು ಸೇವಕರು (Servants)
  • ಒಟ್ಟು ಹುದ್ದೆಗಳ ಸಂಖ್ಯೆ: 55
  • ಉದ್ಯೋಗ ಸ್ಥಳ: ರಾಮನಗರ
  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಮಾನದಂಡಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಟೈಪಿಸ್ಟ್ ಹುದ್ದೆಗಳಿಗೆ 10ನೇ ತರಗತಿಯ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅಗತ್ಯ ಟೈಪಿಂಗ್ (ತಾಂತ್ರಿಕ) ಅರ್ಹತೆ ಹೊಂದಿರಬೇಕಾಗುತ್ತದೆ. ಸೇವಕರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಸಾಕು. ವಯೋಮಿತಿ, ಮೀಸಲಾತಿ ಹಾಗೂ ವೇತನ ಶ್ರೇಣಿಯ ಪೂರ್ಣ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

  • ರಾಮನಗರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಆನ್‌ಲೈನ್ ನೇಮಕಾತಿ (Online Recruitment) ವಿಭಾಗವನ್ನು ಆಯ್ಕೆ ಮಾಡಿ.
  • ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ವಿದ್ಯಾರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ಅಗತ್ಯ ದಾಖಲೆಗಳನ್ನು ಲಗತ್ತಿಸಿ, ನಿಗದಿತ ದಿನಾಂಕದೊಳಗೆ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ.
  • ಅಧಿಕೃತ ಅರ್ಜಿ ಲಿಂಕ್: Ramanagara District Court Online Recruitment

ಪ್ರಮುಖ ಸೂಚನೆ:

ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಒಳಿತು. ಆಗಸ್ಟ್ 31 ರ ನಂತರ ಬರುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಶುಲ್ಕ, ವಯೋಮಿತಿ ಸಡಿಲಿಕೆ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Video: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥ – Kannada News | A student received the blessings of the female security guard who used to welcome him with a smile.

ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ  ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ.  ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.

ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.

ಎಕ್ಸ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಓದಲು ವಯಸ್ಸಿನ ಮಿತಿಯಿಲ್ಲ; ಐಐಟಿ ಮದ್ರಾಸ್​​ನಲ್ಲಿ ಒಟ್ಟಿಗೇ ಪದವಿ ಪಡೆದ ತಾಯಿ-ಮಗ!

ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Safe Footpath Campaign: 750 ಕಿ.ಮೀ ಪಾದಚಾರಿ ಮಾರ್ಗ ಅತಿಕ್ರಮಣ ತೆರವು; ಪೀಣ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ನಿಷೇಧ! – Kannada News | Bengaluru Reclaims 750 km Footpaths; Night Traffic Curbs on Peenya Flyover

ಪೀಣ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ನಿಷೇಧ!

ಬೆಂಗಳೂರು, ಆಗಸ್ಟ್ 04: ಬೆಂಗಳೂರಿನಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ’ (Safe Footpath) ಅಭಿಯಾನದಡಿ ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್‌ಗೂ ಹೆಚ್ಚು ಪಾದಚಾರಿ ಮಾರ್ಗದ ಅತಿಕ್ರಮಣವನ್ನು ಬಿಬಿಎಂಪಿ ಹಾಗೂ ನಗರಾಡಳಿತ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅತಿಕ್ರಮಣವಾಗದಂತೆ ತಡೆಯಲು ದಿಢೀರ್ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಇನ್ನೊಂದೆಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಾ. ಶ್ರೀ ಶಿವಕುಮಾರ ಸ್ವಾಮೀಜಿ (ಪೀಣ್ಯ) ಮೇಲ್ಸೇತುವೆಯ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಆಗಸ್ಟ್ 12 ರವರೆಗೆ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿದೆ.

ದಿಢೀರ್ ದಾಳಿಗೆ ಪಾಲಿಕೆ ನಿರ್ಧಾರ

ಜುಲೈ 1 ರಿಂದ ಜುಲೈ 31 ರವರೆಗೆ ನಡೆದ ತಿಂಗಳ ಅಭಿಯಾನದಲ್ಲಿ ನಗರದಾದ್ಯಂತ 750 ಕಿ.ಮೀಗೂ ಹೆಚ್ಚು ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳು, ತಳ್ಳುಗಾಡಿಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಸುರಕ್ಷಿತವಾಗಿ ಸಂಚರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮತ್ತೆ ಅತಿಕ್ರಮಣ ಮಾಡಿಕೊಳ್ಳುವುದನ್ನು ತಡೆಯಲು ಬಿಬಿಎಂಪಿ ವಲಯ ಅಧಿಕಾರಿಗಳು ಸಂಚಾರ ಮತ್ತು ಶಿಸ್ತು ಪಾಲನಾ ಪೊಲೀಸರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸೋಮವಾರ ಒಂದೇ ದಿನ 1.20 ಕಿ.ಮೀ ಅತಿಕ್ರಮಣ ತೆರವುಗೊಳಿಸಲಾಗಿದ್ದು, ಜಯನಗರದ 9 ಮತ್ತು 10ನೇ ಮುಖ್ಯ ರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ 31ನೇ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಗಳು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ಜಪ್ತಿ ಮಾಡಲಾಗಿದೆ.

  • ಸೆಂಟ್ರಲ್ ವಲಯ: 195.85 ಕಿ.ಮೀ ತೆರವು
  • ಉತ್ತರ ವಲಯ: 175.75 ಕಿ.ಮೀ ತೆರವು
  • ಪಶ್ಚಿಮ ವಲಯ: 168.37 ಕಿ.ಮೀ ತೆರವು
  • ದಕ್ಷಿಣ ಮತ್ತು ಪೂರ್ವ ವಲಯ: ತಲಾ 116 ಕಿ.ಮೀಗೂ ಹೆಚ್ಚು ತೆರವು

ಪೀಣ್ಯ ಫ್ಲೈಓವರ್‌ನಲ್ಲಿ ಆಗಸ್ಟ್ 12 ರವರೆಗೆ ರಾತ್ರಿ ಸಂಚಾರ ನಿರ್ಬಂಧ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೀಣ್ಯ ಮೇಲ್ಸೇತುವೆಯ ರೀ-ಸರ್ಫೇಸಿಂಗ್ (ಡಾಂಬರೀಕರಣ) ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ಆಗಸ್ಟ್ 3 ರಿಂದ ಆಗಸ್ಟ್ 12 ರವರೆಗೆ ಪ್ರತಿ ರಾತ್ರಿ ಸಂಚಾರ ನಿಯಂತ್ರಣ ಹೇರಲಾಗಿದೆ. ಸೋಮವಾರದಿಂದ ಶುಕ್ರವಾರ) ರಾತ್ರಿ 10:00 ರಿಂದ ಬೆಳಗಿನ ಜಾವ 5:00 ರವರೆಗೆ ಸಂಚಾರ ನಿಷೇಧ. ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ 12:00 ರಿಂದ ಬೆಳಗಿನ ಜಾವ 5:00 ರವರೆಗೆ ಸಂಚಾರ ನಿಷೇಧ.

ಪರ್ಯಾಯ ಮಾರ್ಗ

ತುಮಕೂರು/ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಎಸ್‌ಆರ್‌ಎಸ್ ಅಪ್ಪರ್ ರಾಂಪ್ ಬಳಿ ಕೆಳಗಿಳಿದು ಎನ್‌ಎಚ್-4 ಸರ್ವೀಸ್ ರಸ್ತೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮೂಲಕ ತೆರಳಲು ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಕಾದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ! – Kannada News | India Faces Ultimate Litmus Test in Sri Lanka

ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಆಗಸ್ಟ್ 15 ರಿಂದ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ. ಆದರೆ, ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸಿದರೆ, ಶ್ರೀಲಂಕಾ ನೆಲದಲ್ಲಿ ಲಂಕಾ ಪಡೆಯನ್ನು ಸೋಲಿಸುವುದು ಭಾರತಕ್ಕೆ ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆರಂಭದಲ್ಲೇ ಆಘಾತ!

ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಎಡ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಬುಮ್ರಾ ಅವರ ಅನುಪಸ್ಥಿತಿಯು ಭಾರತದ ವೇಗದ ಬೌಲಿಂಗ್ ವಿಭಾಗದ ಬಲವನ್ನು ಕುಗ್ಗಿಸಿದೆ ಮತ್ತು ಯುವ ವೇಗಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುವಂತೆ ಮಾಡಿದೆ.

ಶ್ರೀಲಂಕಾ ಸರಣಿ ಏಕೆ ಕಠಿಣ ಸವಾಲು?

ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರಿಂದ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಗಾಲೆ ಪಿಚ್‌ಗಳು ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ಅತಿಯಾದ ನೆರವು ನೀಡುತ್ತವೆ. ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಅಂದರೆ ಮೊದಲ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುವುದು ಖಚಿತ.

ಇದರ ಜೊತೆ ಪಂದ್ಯದ ಮೇಲೆ ಸ್ಪಿನ್ನರ್​ಗಳು ಪ್ರಭಾವ ಬೀರಲಿದ್ದಾರೆ. ಅತ್ತ ಶ್ರೀಲಂಕಾದ ಪ್ರಮುಖ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ತವರಿನ ಪಿಚ್‌ಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್. ಪ್ರವಾಸಿ ಬ್ಯಾಟರ್‌ಗಳನ್ನು ಸುಲಭವಾಗಿ ಸಿಲುಕಿಸುವ ಕಲೆ ಅವರಿಗೆ ಕರಗತವಾಗಿದೆ.

ಶ್ರೀಲಂಕಾ ಇತಿಹಾಸದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಹಳೆಯ ದಾಖಲೆಗಳನ್ನೇ ಮುರಿಯುವ ಹಾದಿಯಲ್ಲಿರುವ ಪ್ರಭಾತ್ ಜಯಸೂರ್ಯ, ಗಾಲೆ ಪಿಚ್‌ನಲ್ಲಿ ಪ್ರವಾಸಿ ಬ್ಯಾಟರ್‌ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದ್ದಾರೆ. ಇದಕ್ಕೆ ಸಾಕ್ಷಿ ಅವರ ಅಂಕಿ ಅಂಶಗಳು.

ಪ್ರಭಾತ್ ಜಯಸೂರ್ಯ ಗಾಲೆ ಪಿಚ್​ನಲ್ಲಿ ಈವರೆಗೆ ಆಡಿರುವುದು 15 ಪಂದ್ಯಗಳು ಮಾತ್ರ. ಈ ವೇಳೆ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 98 ಎಂದರೆ ನಂಬಲೇಬೇಕು. ಇದರ ನಡುವೆ 9 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿಯೇ ಪ್ರಭಾತ್​ರನ್ನು ಎದುರಿಸುವುದು ಟೀಮ್ ಇಂಡಿಯಾ ಬ್ಯಾಟರ್​ಗಳ ಮುಂದಿರುವ ಅತೀ ದೊಡ್ಡ ಸವಾಲು.

ಶ್ರೀಲಂಕಾದ ವಿಶಿಷ್ಟ ಹವಾಮಾನವು ವಿದೇಶಿ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಒಡ್ಡುವ ಅತಿ ದೊಡ್ಡ ಸವಾಲಾಗಿದೆ. ಇಲ್ಲಿನ ವಿಪರೀತ ಸೆಕೆ ಮತ್ತು ಅತಿಯಾದ ಆರ್ದ್ರತೆಯಿಂದಾಗಿ ಆಟಗಾರರು ಮೈದಾನದಲ್ಲಿ ಬೇಗನೆ ದಣಿಯುತ್ತಾರೆ ಹಾಗೂ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಆದ್ದರಿಂದ, ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಆಟಗಾರರು ತಮ್ಮ ಶಕ್ತಿ ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳದಂತೆ ದೀರ್ಘಕಾಲ ಜಾಗರೂಕತೆ ವಹಿಸುವುದು ಅತ್ಯಗತ್ಯವಾಗಿದೆ.

ಇನ್ನು ಶ್ರೀಲಂಕಾ ತಂಡವು ತವರಿನಲ್ಲಿ ಆಡಿದ ಕೊನೆಯ 5 ಟೆಸ್ಟ್ ಸರಣಿಗಳಲ್ಲಿ 3 ರಲ್ಲಿ ಜಯ ಸಾಧಿಸಿದರೆ, ಒಂದನ್ನು ಡ್ರಾ ಮಾಡಿಕೊಂಡಿದ್ದಾರೆ. ಅಂದರೆ ಶ್ರೀಲಂಕಾ ಸೋತಿರುವುದು ಒಂದೇ ಒಂದು ಟೆಸ್ಟ್ ಸರಣಿಯನ್ನು ಮಾತ್ರ. ಅದು ಕೂಡ ಆಸ್ಟ್ರೇಲಿಯಾ ವಿರುದ್ಧ. ಉಳಿದೆಲ್ಲಾ ತಂಡಗಳ ವಿರುದ್ಧ ತವರಿನಲ್ಲಿ ಪಾರುಪತ್ಯ ಮೆರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬುಮ್ರಾ ಅವರ ಅನುಪಸ್ಥಿತಿಯಿಂದ ಕುಗ್ಗಿರುವ ಬೌಲಿಂಗ್ ಬಲ, ಗಾಲೆ ಮೈದಾನದ ಸ್ಪಿನ್ ಚಕ್ರವ್ಯೂಹ, ಪ್ರಭಾತ್ ಜಯಸೂರ್ಯ ಅವರ ಘಾತಕ ಬೌಲಿಂಗ್ ಮತ್ತು ತವರಿನಲ್ಲಿ ಲಂಕಾ ಪಡೆಯ ಇತ್ತೀಚಿನ ಭರ್ಜರಿ ಫಾರ್ಮ್ — ಇವೆಲ್ಲವೂ ಭಾರತಕ್ಕೆ ದೊಡ್ಡ ಕಂಟಕವಾಗಲಿವೆ. ಇದರೊಂದಿಗೆ ಅಲ್ಲಿನ ಕಠಿಣ ಹವಾಮಾನವೂ ಆಟಗಾರರ ತಾಳ್ಮೆ ಪರೀಕ್ಷಿಸಲಿದೆ.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಈ ಎಲ್ಲಾ ಸವಾಲುಗಳನ್ನು ಮೀರಿ ಗಿಲ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಮುನ್ನಡೆಯಬೇಕಾದರೆ, ಅಸಾಧಾರಣ ಮತ್ತು ಐತಿಹಾಸಿಕ ಪ್ರದರ್ಶನ ನೀಡಲೇಬೇಕಾಗಿದೆ. ಹೀಗಾಗಿಯೇ, ಈ ಬಾರಿ ಟೀಮ್ ಇಂಡಿಯಾಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

Source link

Udhayanidhi Stalin detained: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ! – Kannada News | Udhayanidhi Stalin Detained After TVK Complaint Over Remarks Against Trisha

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆImage Credit source: PTI

ಚೆನ್ನೈ, ಆಗಸ್ಟ್ 04: ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧಪಕ್ಷದ ನಾಯಕರಾಗಿರುವ ಡಿಎಂಕೆ (DMK) ಪಕ್ಷದ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ಪ್ರತಿಭಟನೆಯಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಾಗ ವೆಟ್ರಿ ಕಳಗಂ’ (TVK) ಪಕ್ಷ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಘಟನೆಯ ಹಿನ್ನೆಲೆಯೇನು?

ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ಡಿಎಂಕೆ ಆಯೋಜಿಸಿದ್ದ ರೈತರ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡುತ್ತಿದ್ದರು. ಉದಯನಿಧಿ ಅವರು ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ, ಸಭೆಯಲ್ಲಿದ್ದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಕೂಗಲು ಪ್ರಾರಂಭಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಉದಯನಿಧಿ, ನೀರು ಎಲ್ಲಿಗೆ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಲೇಬೇಕು. ನಾನು ಹೇಳಿದ್ದು ಕಾವೇರಿ ನೀರನ್ನು” ಎಂದು ದ್ವಂದ್ವಾರ್ಥ ಬರುವ ರೀತಿಯಲ್ಲಿ ಮಾತನಾಡಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ANI ಹಂಚಿಕೊಂಡ ವೀಡಿಯೋ ಇಲ್ಲಿದೆ

ಟಿವಿಕೆ ದೂರು ಹಾಗೂ ಪೊಲೀಸ್ ಕ್ರಮ

ಉದಯನಿಧಿ ಅವರ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ಟಿವಿ ಕೆ (TVK) ಪಕ್ಷ ಹಾಗೂ ಮಹಿಳಾ ಘಟಕದ ನಾಯಕಿಯರು ತಂಜಾವೂರು ಪೊಲೀಸ್ ಠಾಣೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ನೀಡಿದ್ದಾರೆ. ಮಹಿಳೆಯರನ್ನು ಸಾರ್ವಜನಿಕವಾಗಿ ಅಪಮಾನಿಸುವ ಮತ್ತು ಕೀಳಾಗಿ ಕಾಣುವ ಇಂತಹ ಮಾತುಗಳು ಸಾರ್ವಜನಿಕ ನಾಯಕರಿಗೆ ಶೋಭೆಯಲ್ಲ ಎಂದು ಟಿವಿ ಕೆ ಶಾಸಕರು ಮತ್ತು ನಾಯಕರು ಕಿಡಿಕಾರಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ಟಿವಿ ಕೆ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರಿಂದ, ನೀಲಂಗರೈನಲ್ಲಿರುವ ಉದಯನಿಧಿ ನಿವಾಸಕ್ಕೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಳಿಕ ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಉದಯನಿಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಬಹಿರಂಗ ಕ್ಷಮಾಪಣೆಗೆ ಆಗ್ರಹಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:41 am, Tue, 4 August 26

Source link

Exit mobile version