ಯೂಟ್ಯೂಬ್​​ನಿಂದ ಬಾಲಿವುಡ್​​ ವರೆಗೆ ಬೆಂಗಳೂರು ಯುವತಿಯ ಛಲ ಸಾಮಾನ್ಯದ್ದಲ್ಲ – Kannada News | Who is Niharika NM, Ex YouTuber now Bollywood heroine

ಛಲ ಒಂದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಬೆಂಗಳೂರಿನ ಯುವತಿ ನಿಹಾರಿಕ ಎನ್​​ಎಂ (Niharika NM) ತಾಜಾ ಸಾಕ್ಷಿ. ನಿಹಾರಿಕಾ ಈಗ ಬಾಲಿವುಡ್​​ ಸಿನಿಮಾದ ನಾಯಕಿ. ಇದಕ್ಕೂ ಮುಂಚೆ ತೆಲುಗಿನ ಕೆಲ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ವಿಶೇಷವೆಂದರೆ ಬೆಂಗಳೂರಿನ ಈ ಯುವತಿ, ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ನಟಿಸುತ್ತಿದ್ದರು. ಆದರೆ ತಾವು ಯೂಟ್ಯೂಬಿನಿಂದ ಹೊರಬಂದು ಸಿನಿಮಾ ನಾಯಕಿಯಾಗ ಬೇಕು ಎಂದು ನಿಶ್ಚಯಿಸಿದ್ದು ಮಾತ್ರವಲ್ಲದೆ ಸತತ ಪ್ರಯತ್ನ, ಶ್ರಮ, ತ್ಯಾಗದ ಬಳಿಕ ಈಗ ನಾಯಕಿ ಆಗಿದ್ದಾರೆ. ಬಾಲಿವುಡ್​​ ಯುವ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ.

ಯೂಟ್ಯೂಬ್​​ನಲ್ಲಿ ಕಾಮಿಡಿ ವಿಡಿಯೋ ನೋಡುವವರು ನಿಹಾರಿಕಾ ಅವರನ್ನು ನೋಡಿರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ನಿಹಾರಿಕಾ ಬೆಂಗಳೂರಿನ ಬಲು ಜನಪ್ರಿಯ ಯೂಟ್ಯೂಬ್ ಚಾನೆಲ್ ಆಗಿರುವ ‘ಜಾರ್ಡ್ ಇಂಡಿಯನ್​​’ನ ಯೂಟ್ಯೂಬ್ ವಿಡಿಯೋಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ನಾಸರ್ ಹಾಗೂ ವಿನೀತ್ ಅವರು ಥರಹೇವಾರಿ ಹಾಸ್ಯ ಪ್ರಧಾನ ವಿಡಿಯೋಗಳನ್ನು ಈ ಜಾರ್ಡ್ ಇಂಡಿಯನ್ ಚಾನೆಲ್​​ನಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಇವರ ವಿಡಿಯೋಗಳಲ್ಲಿ ಆಗೊಮ್ಮೆ ಈಗೊಮ್ಮೆ, ವಿಶೇಷವಾಗಿ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ನಿಹಾರಿಕ ಮೂಲತಃ ಕನ್ನಡತಿ ಅಲ್ಲದೇ ಹೋದರೂ ಅವರು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ.

ಜಾರ್ಡ್ ಇಂಡಿಯನ್ ವಿಡಿಯೋಗಳಲ್ಲಿ ಸಾಮಾನ್ಯವಾಗಿ ತಾಯಿಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ನಟನೆ, ತಮಾಷೆ ರೀತಿಯ ಇಂಗ್ಲೀಷ್ ಮಾತು, ಹಾವ-ಭಾವಗಳಿಂದ ಸಖತ್ ನಗಿಸುತ್ತಿದ್ದರು. ಆ ಬಳಿಕ ಒಬ್ಬರೇ ಯೂಟ್ಯೂಬ್ ಕಂಟೆಂಟ್ ಕೊಡಲು ಪ್ರಾರಂಭಿಸಿದರು. ‘ಕೆಜಿಎಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ನಿಹಾರಿಕಾ ಅವರು ಯಶ್ ಜೊತೆಗೆ ಮಾಡಿದ್ದ ವಿಡಿಯೋ ನೆನಪಿದ್ದೇ ಇರುತ್ತದೆ. ಅದಾದ ಬಳಿಕ ಮಹೇಶ್ ಬಾಬು, ಚಿಯಾನ್ ವಿಕ್ರಂ ಇನ್ನೂ ಹಲವರೊಟ್ಟಿಗೆ ವಿಡಿಯೋಗಳನ್ನು ಸಹ ನಿಹಾರಿಕಾ ಮಾಡಿದರು. ಹಾಲಿವುಡ್​​ಗೆ ಹೋಗಿ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರನ್ನು ಭೇಟಿ ಆದರು, ಮೈಖಲ್ ಜಾರ್ಡನ್ ಅನ್ನು ಅಪ್ಪಿಕೊಂಡರು. ಚಿತ್ರರಂಗವನ್ನು ಸಹ ಆ ಸಮಯದಲ್ಲಿ ಹತ್ತಿರದಿಂದ ನೋಡಿದರು. ತಾವೂ ನಟಿ ಆಗಬೇಕು ಎಂದು ಕನಸು ಕಟ್ಟಿಕೊಂಡರು.

ಇದನ್ನೂ ಓದಿ:‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್​​ಗೆ ಬರುತ್ತಿದ್ದರು ಅಂಬರೀಶ್’

ತಮ್ಮನ್ನು ಯೂಟ್ಯೂಬ್​​ಗೆ ಸೀಮಿತಗೊಳಿಸಿಕೊಳ್ಳದ ನಿಹಾರಿಕಾ ಮುಂದುವರೆದು ಪ್ರಯತ್ನ ಮಾಡಿ ಈಗ ಸಿನಿಮಾ ನಾಯಕಿ ಆಗಿದ್ದಾರೆ. ನಿಹಾರಿಕಾ ಮೊದಲು ‘ಪೆರುಸು’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾನಲ್ಲಿ ಮಧ್ಯಮ ವರ್ಗ ಕುಟುಂಬದ ಯುವತಿಯ ಪಾತ್ರ. ಆ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಬಳಿಕ 2025ರಲ್ಲೇ ತೆಲುಗಿನ ‘ಮಿತ್ರ ಮಂಡಳಿ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಯ್ತು. ನಿಹಾರಿಕಾ ನಟನೆಗೂ ಮೆಚ್ಚುಗೆ ವ್ಯಕ್ತವಾಯ್ತು.

ಇದೀಗ ನಿಹಾರಿಕಾ, ಬಾಲಿವುಡ್​​ನ ಯುವ ಸ್ಟಾರ್ ನಟ ರಾಘವ್ ಜುರೆಲ್ ಜೊತೆಗೆ ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಪ್ರಚಾರವನ್ನು ರಾಘವ್ ಜೊತೆ ಸೇರಿ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಲೇಟೆಂಟ್​​ಗೆ ಸಹ ಹೋಗಿ ಬಂದರು. ಯೂಟ್ಯೂಬರ್ ಆಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ ನಿಹಾರಿಕಾ ತನ್ನ ಸತತ ಪರಿಶ್ರಮ, ಶ್ರಮದಿಂದ ಇಂದು ಬಾಲಿವುಡ್ ಹೀರೋಯಿನ್ ಆಗಿದ್ದಾರೆ. ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾದ ಬಳಿಕ ‘ಇದಯುಂ ಮುರಲಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:45 pm, Sun, 2 August 26

Source link

ದಿಲ್ಲಿಯಿಂದ ಡಿಕೆಶಿಗೆ ಕರೆ: ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ, ಇಲ್ವಾ? – Kannada News | No Any Clarification about August 3rd cabinet expansion , Likely KCV to arrive with final list

ಬೆಂಗಳೂರು, (ಆಗಸ್ಟ್ 02): ಕರ್ನಾಟಕ (Karnataka) ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ (cabinet expansion)  ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಸೋಮವಾರ (ಆಗಸ್ಟ್ 03) ಸಂಜೆ ನಾಲ್ಕು ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಸುವ ಬಗ್ಗೆ ಮೌಖಿಕ ಮಾಹಿತಿ ನೀಡಲಾಗಿದೆ. ಆದರೆ, ಈವರೆಗೆ ಯಾವುದೇ ಲಿಖಿತ ಆದೇಶ ಲೋಕಭವನಕ್ಕೆ ತಲುಪಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳೂ ಅಂತಿಮ ಸಿದ್ಧತೆಗೆ ಕೈ ಹಾಕಿಲ್ಲ. ಆದ್ರೆ ಸಿಎಂ ಡಿಕೆ ಶಿವಕುಮಾರ್ ಸಹ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕೇವಲ ಮೌಖಿಕ ಮಾಹಿತಿಯ ಆಧಾರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುವುದು ಸಾಧ್ಯವಿಲ್ಲ ಅನ್ನೋದು ಲೋಕಭವನದ ಸ್ಪಷ್ಟ ನಿಲುವು. ಅಧಿಕೃತ ಪತ್ರ ಬಂದ ನಂತರವೇ ವೇದಿಕೆ, ಭದ್ರತೆ, ಪ್ರೋಟೋಕಾಲ್ ಸೇರಿದಂತೆ ಎಲ್ಲಾ ವ್ಯವಸ್ಥೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲೂ ತೀವ್ರ ಗೊಂದಲ ಮನೆ ಮಾಡಿದೆ. ಸೋಮಾವಾರ ಪ್ರಮಾಣವಚನ ಇದ್ಯಾ? ಇಲ್ಲವಾ? ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಆದರೂ, ರಾತ್ರಿ ವೇಳೆಯಾದರೂ ಹೈಕಮಾಂಡ್‌ನಿಂದ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಹುತೇಕ ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ. ನಾಳೆ 99 ಪರ್ಸೆಂಟ್ ಸಚಿವ ಸಂಪುಟ ವಿಸ್ತರಣೆ ಆಗುತ್ತೆ, ಇನ್ನೊಂದು ಪರ್ಸೆಂಟ್ ಏನ್ ಬೇಕಾದ್ರೂ ಆಗ್ಬೋದು ಅಂತಾ ಮಾಜಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಹೇಳಿದ್ದಾರೆ. ಇನ್ನು ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಆದ್ರೆ, ಸಿಎಂ ಡಿಕೆ ಶಿವಕುಮಾರ್ ಮಾತ್ರ ಯಾವುದು ಸುಳಿವು ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ: ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ: ಯಾವೆಲ್ಲ ಪ್ರಮುಖ ವಿಷಯಗಳು ಚರ್ಚೆ?

ದೆಹಲಿ ಮಟ್ಟದಲ್ಲೂ ಇನ್ನೂ ಮುಗಿದಿಲ್ಲ ಕಸರತ್ತು

ದೆಹಲಿ ಮಟ್ಟದಲ್ಲೂ ಇನ್ನೂ ಕಸರತ್ತು ಮುಗಿದಿಲ್ಲ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಕೆಲ ಹೆಸರುಗಳ ಬಗ್ಗೆ ಇನ್ನೂ ಸಂಪೂರ್ಣ ಒಮ್ಮತ ಮೂಡಿಲ್ಲ ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಕೆಲವು ಅಚ್ಚರಿಯ ಹೆಸರುಗಳು ಪಟ್ಟಿಗೆ ಸೇರುವ ಸಾಧ್ಯತೆಯೂ ಇರುವುದರಿಂದ ಹಿರಿಯ ನಾಯಕರಲ್ಲೂ ಆತಂಕ ಹೆಚ್ಚಾಗಿದೆ. ಇದರ ಮಧ್ಯೆ ಹೈಕಮಾಂಡ್​​​​ನಿಂದ ಸಿಎಂ ಡಿಕೆ ಶಿವಕುಮಾರ್​​​ಗೆ ಬರೆಬಂದಿದ್ದು, ಇಂದು ಮತ್ತೊಂದು ಸುತ್ತು ಎಐಸಿಸಿ ನಾಯಕರ ಅಂತಿಮ ಚರ್ಚೆ ಆಗಲಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಪಟ್ಟಿ ರವಾನಿಸುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಬೆಂಗಳೂರಿಗೆ ಯಾವಾಗ ಬರುತ್ತಾರೆ ಅನ್ನೋದರ ಬಗ್ಗೆಯೂ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಇಬ್ಬರೂ ಬಂದು ಸಿಎಂಗೆ ಅಂತಿಮ ಪಟ್ಟಿ ನೀಡುತ್ತಾರಾ? ಅಥವಾ ಎಐಸಿಸಿಯೇ ಅಧಿಕೃತವಾಗಿ ಸಚಿವರ ಪಟ್ಟಿಯನ್ನು ಪ್ರಕಟಿಸುತ್ತಾ? ಎನ್ನುವುದೂ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಬೆಂಬಲಿಗರಲ್ಲಿ ಗೊಂದಲ

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಲವು ಶಾಸಕರ ಬೆಂಬಲಿಗರು ನಾಳೆ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ, ಇನ್ನೂ ಯಾವುದೇ ಅಧಿಕೃತತೆ ಇಲ್ಲದ ಕಾರಣ, ಸದ್ಯಕ್ಕೆ ಬೆಂಗಳೂರಿಗೆ ಬಾರದಂತೆ ಹಲವು ಆಕಾಂಕ್ಷಿಗಳೇ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

ಸೋಮವಾರ ಬಿಟ್ರೆ ಬುಧವಾರ ಸಂಪುಟ ವಿಸ್ತರಣೆ

ಇದು ಸಚಿವ ಸಂಪುಟ ವಿಸ್ತರಣೆಗೆ ಮೂರನೇ ಬಾರಿ ನಿಗದಿಯಾಗಿರುವ ಮುಹೂರ್ತ. ಒಂದು ವೇಳೆ ನಾಳೆಯೂ ಕಾರ್ಯಕ್ರಮ ನಡೆಯದೇ ಹೋದರೆ, ಬುಧವಾರಕ್ಕೆ ಮತ್ತೆ ಮುಂದೂಡುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಆಕಾಂಕ್ಷಿಗಳ ಆತಂಕವೂ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ ಅನ್ನೋ ಸಂದೇಶ ಹೊರಬಿದ್ದಿದ್ರೂ, ಅಧಿಕೃತ ಆದೇಶ ಮಾತ್ರ ಇನ್ನೂ ಹೊರಬಿದ್ದಿಲ್ಲ. ಸಚಿವರಾಗೋವರ ಪಟ್ಟಿಯೂ ಫೈನಲ್ ಆಗಿಲ್ಲ. ಹೈಕಮಾಂಡ್‌ನಿಂದ ಅಂತಿಮ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಸೋಮವಾರ ಸಂಜೆ ಪ್ರಮಾಣ ವಚನ ನಡೆಯುತ್ತಾ? ಅಥವಾ ಮತ್ತೊಮ್ಮೆ ಮುಂದೂಡಿಕೆಯಾಗುತ್ತಾ? ಅನ್ನೋ ಕುತೂಹಲವೇ ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ.

ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಘೋಷಣೆ ಸಮೀಪದಲ್ಲಿದೆ ಎಂಬ ವಾತಾವರಣ ನಿರ್ಮಾಣವಾಗಿದ್ದರೂ, ಅಧಿಕೃತ ಸ್ಪಷ್ಟತೆ ಮಾತ್ರ ಇನ್ನೂ ಇಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಹಿಡಿದು ಅವರ ಬೆಂಬಲಿಗರವರೆಗೂ ಎಲ್ಲರ ಕಣ್ಣು ಈಗ ದೆಹಲಿ ಮತ್ತು ಸಿಎಂ ಕಚೇರಿಯತ್ತ ನೆಟ್ಟಿದೆ. ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನ ಹೊರಬೀಳುತ್ತೆ ಅನ್ನೋದು ಮುಂದಿನ ಕೆಲ ಗಂಟೆಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:49 pm, Sun, 2 August 26

Source link

Video: ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್‌ ಹೋಗಲು ದಾರಿ ಮಾಡಿಕೊಟ್ಟ ಯುವಕ – Kannada News | A young man made way for an ambulance stuck in traffic.

ಈಗಿನ ಕಾಲದಲ್ಲಿ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಸಿಗುವುದೇ ಅಪರೂಪ. ಅಪರಿಚಿತ ವ್ಯಕ್ತಿಗಳಿಗೆ ಸಹಾಯ (helping nature) ಮಾಡುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದೀಗ ಯುವಕನೊಬ್ಬ ಜವಾಬ್ದಾರಿ ಹಾಗೂ ಮಾನವೀಯ ಕೆಲಸ ಮೆಚ್ಚುಗೆ ಪಾತ್ರವಾಗಿದೆ. ಹೌದು, ಟ್ರಾಫಿಕ್ (traffic) ನಡುವೆ ಸಿಲುಕಿದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟು, ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಕ್ಷ್ಮಣ್‌ ಭಟ್ರೇ (Lakshman Bhatree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಯೂಟ್ಯೂಬರ್ ಆಗಿರುವ ಯುವಕ ಟ್ರಾಫಿಕ್ ನಡುವೆ ಸಿಲುಕಿದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿರುವ ದೃಶ್ಯವನ್ನು ಕಾಣಬಹುದು. ಆಂಬ್ಯುಲೆನ್ಸ್ ಡ್ರೈವರ್ ಗೆ ಎಮರ್ಜೆನ್ಸಿ ಇದ್ಯಾ ಎಂದು ಕೇಳಿದ್ದಾನೆ. ಡ್ರೈವರ್ ಹೌದು ಎನ್ನುತ್ತಿದ್ದಂತೆ ತನ್ನ ಬೈಕನ್ನು ಫುಟ್ ಪಾತ್‌ನಲ್ಲಿ ಚಲಾಯಿಸಿ ಟ್ರಾಫಿಕ್ ಪೊಲೀಸರಿಗೆ ಈ ವಿಷ್ಯ ತಿಳಿಸಿದ್ದಾನೆ. ಕೊನೆಗೆ ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಕಾರ್ಪೋರೆಟ್ ಜಗತ್ತು; ಟ್ರಾಫಿಕ್ ಜಾಮ್‌ ನಡುವೆಯೇ ಬೈಕ್‌ನಲ್ಲಿ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ

ಈ ವಿಡಿಯೋ ಇಪ್ಪತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಕೆಲಸ ಎಂದರೆ, ಮತ್ತೊಬ್ಬರು, ನನ್ನ ಪ್ರಕಾರ ಆಂಬುಲೆನ್ಸ್ ಗೆ ಬೇರೆ ಒಂದು ರೋಡ್ ಇದ್ದರೆ ಒಳ್ಳೆಯದು ಅಲ್ವಾ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಮೆಚ್ಚುಗೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’ – ಭಾರತ ಮತ್ತು ಅಫ್ಘಾನ್ ಸಂಬಂಧಕ್ಕೆ ಹುಳಿ ಹಿಂಡಲು ಪಾಕಿಸ್ತಾನ ಯತ್ನ – Kannada News | Muslims should not make friendship with Kafirs, says Pakistan Army on India Afghan relationship

ಪಾಕಿಸ್ತಾನದ ಬಾವುಟದ ಚಿತ್ರImage Credit source: Getty Images

ಇಸ್ಲಾಮಾಬಾದ್, ಆಗಸ್ಟ್ 2: ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಬೆಳೆಯುತ್ತಿರುವ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದ ಕುರಿತು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ (DG ISPR) ವಕ್ತಾರರು ಅತ್ಯಂತ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. “ಮುಸ್ಲಿಮರು ಕಾಫಿರ್‌ಗಳೊಂದಿಗೆ (ಮುಸ್ಲಿಮೇತರರು) ಸ್ನೇಹ ಬೆಳೆಸಬಾರದು” ಎಂದು ಪಾಕ್ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ (Lt Gen Ahmed Sharif Chaudhary) ಹೇಳಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಭಾರತದೊಂದಿಗೆ ಹತ್ತಿರವಾಗುತ್ತಿರುವುದನ್ನು ಟೀಕಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಅಫ್ಘಾನ್ ಪ್ರಜೆಗಳು ಮತ್ತು ಅಲ್ಲಿನ ತಾಲಿಬಾನ್ ಸರ್ಕಾರವು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಪಾಕಿಸ್ತಾನ ಸೇನೆ ಅಸಮಾಧಾನ ವ್ಯಕ್ತಪಡಿಸಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರು ಮುಸ್ಲಿಮೇತರರೊಂದಿಗೆ ಸಂಬಂಧ ಹೊಂದಬಾರದು ಎಂಬ ಧರ್ಮಧಾರಿತ ಹೇಳಿಕೆಯನ್ನು ವಕ್ತಾರರು ನೀಡಿದ್ದಾರೆ.

ಇದನ್ನೂ ಓದಿ: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಹೊತ್ತಿ ಉರಿದ ಹಡಗು: ಐವರು ಸಜೀವ ದಹನ, 41 ಮಂದಿ ನಾಪತ್ತೆ

ಭಾರತ-ಅಫ್ಘಾನ್ ಬಾಂಧವ್ಯಕ್ಕೆ ಕಿರಿಕಿರಿ: ಅಫ್ಘಾನಿಸ್ತಾನ್‌ನಲ್ಲಿ ಭಾರತವು ಕೈಗೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಮಾನವೀಯ ನೆರವು ಮತ್ತು ಬೆಳೆಯುತ್ತಿರುವ ರಾಜತಾಂತ್ರಿಕ ನಿಕಟತೆಯು ಪಾಕಿಸ್ತಾನಕ್ಕೆ ಸಹಿಸಲಾಗದ ಮುಳ್ಳಾಗಿದೆ.

ಪಾಕ್ ಸೇನಾ ವಕ್ತಾರರ ಈ ಪ್ರಚೋದನಕಾರಿ ಹೇಳಿಕೆಗೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗಡಿಭಾಗದ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟನ್ನು ಧಾರ್ಮಿಕ ಬಣ್ಣ ಬಳಿದು ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.

ಇದನ್ನೂ ಓದಿ: ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿಭಾಗದಲ್ಲಿ (ದುರಾಂಡ್ ಲೈನ್) ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಅಫ್ಘಾನಿಸ್ತಾನ ತನ್ನ ಆರ್ಥಿಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ನಿಕಟ ಬಾಂಧವ್ಯ ಕಾಯ್ದುಕೊಳ್ಳುತ್ತಿರುವುದು ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಂದೆಡೆ ಭೀಕರ ಬರ, ಇನ್ನೊಂದೆಡೆ ಹಕ್ಕಿ ಜ್ವರದ ಭೀತಿ: ಕೊಪ್ಪಳ ಜನತೆಗೆ ಎದುರಾಯ್ತು ಮತ್ತೊಂದು ಕಂಟಕ! – Kannada News | Koppal Faces Double Crisis: Severe Drought and Bird Flu Threat Deepen Public Concerns

ಕೊಪ್ಪಳ, ಆಗಸ್ಟ್​​ 02: ಜಿಲ್ಲೆಯಲ್ಲಿ ಒಂದೆಡೆ ಬರಗಾಲದ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಕ್ಕಿ ಜ್ವರ (bird flu) ಆತಂಕ ಶುರುವಾಗಿದೆ. ಕೊಪ್ಪಳ (koppal) ನಗರದ ಹೃದಯಭಾಗದಲ್ಲೇ ನೂರಾರು ಹಕ್ಕಿಗಳು ಸಾವನ್ನಪ್ಪುತ್ತಿವೆ. ಇತ್ತ ನಗರದಲ್ಲಿ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ.

ನಿಗೂಢವಾಗಿ ಸಾವನ್ನಪ್ಪುತ್ತಿವೆ ಬೆಳ್ಳಕ್ಕಿಗಳು

ಕೊಪ್ಪಳದಲ್ಲಿ ಕಳೆದ ಮೂರು ತಿಂಗಳಿಂದ ಕೊಪ್ಪಳದ ನಗರಸಭೆ ಹಿಂಭಾಗದ ಮರದಲ್ಲಿ ಸಾವಿರಾರು ಬೆಳ್ಳಕ್ಕಿಗಳ ಹಿಂಡು ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಸಂಸಾರ ಹೂಡಿದ್ದವು. ಆದರೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಹತ್ತಾರು ಹಕ್ಕಿಗಳು ಸತ್ತು ಬೀಳ್ತಿವೆ‌. ಅಸ್ವಸ್ಥಗೊಂಡಿರುವ ನೂರಾರು ಹಕ್ಕಿಗಳು ಹಾರಲಾರದ ಪರಿಸ್ಥಿತಿಗೆ ತಲುಪಿವೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ

ಹಕ್ಕಿಗಳ ಈ ಸಾವಿನಿಂದ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ಆವರಿಸಿದೆ. ಇದರ ನಡುವೆ ಇದೀಗ ಈ ರೀತಿ ಸಾಲು ಸಾಲು ಬೆಳ್ಳಕ್ಕಿಗಳು ನಿಗೂಢವಾಗಿ ಸಾಯುತ್ತಿರುವುದು ಸಾರ್ವಜನಿಕರಲ್ಲಿ ಹಕ್ಕಿ ಜ್ವರದ ಭೀತಿಯನ್ನು ಹುಟ್ಟುಹಾಕಿದೆ. ಮರದಲ್ಲಿದ್ದ ನೂರಾರು ಹಕ್ಕಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಕ್ಕಿಗಳು ಈಗಾಗಲೇ ಅಸ್ವಸ್ಥಗೊಂಡಿದ್ದು, ಒಂದೊಂದಾಗಿ ನೆಲಕ್ಕೆ ಬೀಳುತ್ತಿವೆ. ಹಾರಾಡುವುದಕ್ಕೆ ಆಗದೆ, ಸಂಕಷ್ಟ ಎದುರಿಸುತ್ತಿವೆ.

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ವಿಪರ್ಯಾಸವೆಂದರೆ ಕಣ್ಣೆದುರೇ ದಿನವೂ ಹಕ್ಕಿಗಳು ಸತ್ತು ಬೀಳುತ್ತಿದ್ದರೂ ನಗರಸಭೆ ಅಧಿಕಾರಿಗಳಾಗಲಿ ಅಥವಾ ಪಶುಸಂಗೋಪನಾ ಇಲಾಖೆಯವರಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಮೃತಪಟ್ಟ ಹಕ್ಕಿಗಳ ರಕ್ತ ಅಥವಾ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸುವ ಕೆಲಸವೂ ನಡೆದಿಲ್ಲ. ನಗರಸಭೆ ಹಿಂಭಾಗವೇ ಘಟನೆ ನಡೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ‌‌. ಅಲ್ಲದೆ ಸ್ಥಳೀಯರು ಮಾಹಿತಿ ನೀಡಿದರು, ನಾವು ಎಸ್​​ಐಆರ್ ಕೆಲಸದಲ್ಲಿ ಬ್ಯೂಸಿ ಇದ್ದೇವೆ ಎನ್ನುತ್ತಿದ್ದಾರೆ. ಇದು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಹಕ್ಕಿಗಳ ನಿರಂತರ ಸಾವಿಗೆ, ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆ,‌ ಪಶುಸಂಗೋಪನಾ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಪರಿಶೀಲನೆ ಮಾಡಬೇಕು. ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋಳಿ ಫಾರಂಗಳಿವೆ. ಇದೀಗ ಹಕ್ಕಿ ಜ್ವರದ ಆತಂಕ ಎಲ್ಲರಲ್ಲೂ ಮನೆ ಮಾಡಿದ್ದು, ಜೊತೆಗೆ ಭಯ ಆವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Weather Forecast: ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: ಹಲವೆಡೆ ರೆಡ್, ಆರೆಂಜ್ ಅಲರ್ಟ್ – Kannada News | Karnataka Weather Forecast: IMD issues heavy rain warnings across Karnataka Next 7 days

ಬೆಂಗಳೂರು, (ಆಗಸ್ಟ್ 02): ಮುಂದಿನ 7 ದಿನಗಳ ಕಾಲ ಕರ್ನಾಟಕದ (Karnataka) ಹಲವೆಡೆ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ ಹಾಗೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮೀನುಗಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಹಲವೆಡೆ ರೆಡ್-ಆರೆಂಜ್ ಅಲರ್ಟ್

ದಕ್ಷಿಣ ಕನ್ನಡ, ಶಿವಮೊಗ್ಗ, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ರೆಡ್ ಅಲರ್ಟ್ ನೀಡಲಾಗಿದೆ. ಇನ್ನು ಕರಾವಳಿಯ ಉಳಿದ ಜಿಲ್ಲೆಗಳು ಸೇರಿದಂತೆ ಒಟ್ಟು 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬಳ್ಳಾರಿ , ಬೆಂಗಳೂರು (ಗ್ರಾಮೀಣ) ಬೆಂಗಳೂರು (ನಗರ) ಚಾಮರಾಜನಗರ ,ಚಿಕ್ಕಬಳ್ಳಾಪುರ , ಚಿತ್ರದುರ್ಗ, ದಾವಣಗೆರೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ (40-50 ಕಿ.ಮೀ. ವೇಗದಲ್ಲಿ) ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

National Watermelon Day 2026: ಮಾವು ಮಾತ್ರವಲ್ಲ ಕಲ್ಲಂಗಡಿ ಹಣ್ಣಿನಲ್ಲೂ ಅನೇಕ ವಿಧಗಳಿವೆ; ಅವು ಯಾವುವು ಗೊತ್ತೇ? – Kannada News | National Watermelon Day 2026: What are the different varieties of watermelon? Here is the information

ಕಲ್ಲಂಗಡಿ (Watermelon)  ಬೇಸಿಗೆಯ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಜನ ಬೇಸಿಗೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸುಮಾರು 92 ಪ್ರತಿಶತ ನೀರು, ವಿಟಮಿನ್ ಎ, ಬಿ6, ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಈ ಹಣ್ಣು ಶಾಖದಿಂದ ಪರಿಹಾರ ನೀಡಿ ದೇಹಕ್ಕೆ ತಾಜಾತನವನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ನೀರಿನ ಅಂಶವು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಕಲ್ಲಂಗಡಿ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಹೀಗೆ ಈ ರುಚಿಕರ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಆಗಸ್ಟ್‌ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನದ ಈ ಶುಭ ಸಂದರ್ಭದಲ್ಲಿ ಮಾವಿನಹಣ್ಣಿನಂತೆ ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ, ಈ ಹಣ್ಣಿನ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ರಾಷ್ಟ್ರೀಯ ಕಲ್ಲಂಗಡಿ ದಿನದ ಇತಿಹಾಸವೇನು?

ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನವನ್ನು 1980 ರ ದಶಕದ ಆರಂಭದಲ್ಲಿ ಯುನೈಟೆಡ್‌ ಸ್ಟೇಟ್‌ನ ರಾಷ್ಟ್ರೀಯ ಕಲ್ಲಂಗಡಿ ಬೆಳೆಗಾರರು ಮತ್ತು ವಿತರಕರ ಸಂಘವು ಕೃಷಿ ಪ್ರಚಾರ ಕಾರ್ಯಕ್ರಮವಾಗಿ ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಾರಂಭಿಸಿತು. ಇಂದು ಪ್ರಪಂಚದ ಅನೇಕ ಕಡೆ ಈ ದಿನವನ್ನು ಆಚರಿಸಲಾಗುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ:

ಮಾವಿನಹಣ್ಣಿನಲ್ಲಿ ಅಲ್ಫೋನ್ಸೋ, ಮಲ್ಲಿಕಾ, ತೋತಾಪುರಿ ಇತ್ಯಾದಿ ವಿಧಗಳಿರುವಂತೆ ಕಲ್ಲಂಗಡಿ ಹಣ್ಣಿನಲ್ಲೂ ಸಾಕಷ್ಟು ವಿಧಗಳಿವೆ ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಶುಗರ್ ಬೇಬಿ: ಇದು ಅತ್ಯಂತ ಜನಪ್ರಿಯ ಕಲ್ಲಂಗಡಿ ವಿಧಗಳಲ್ಲಿ ಒಂದಾಗಿದೆ, ಇದು 2-3 ಕೆಜಿ ತೂಕವಿರುತ್ತದೆ. ಇದರ ಬೀಜಗಳು ಚಿಕ್ಕದಾಗಿರುತ್ತವೆ ಮತ್ತು ಕಂದು ಬಣ್ಣದ್ದಾಗಿರುತ್ತವೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಅರ್ಕ ಜ್ಯೋತಿ: ಅರ್ಕ ಜ್ಯೋತಿ ವಿಧದ ಕಲ್ಲಂಗಡಿ ಹಣ್ಣುಗಳು ದುಂಡಗಿನ ಆಕಾರದಲ್ಲಿದ್ದು, ಇವು ಹಸಿರು ಪಟ್ಟೆಗಳನ್ನು ಹೊಂದಿರುತ್ತವೆ. ಇದರ ತೂಕ ಸುಮಾರು 4 ರಿಂದ 6 ಕೆಜಿ. ಇದು ಸ್ಥಳೀಯ ವಿಧವಾಗಿದ್ದು, ಪ್ರಕಾಶಮಾನವಾದ ಕೆಂಪು ತಿರುಳನ್ನು ಹೊಂದಿರುತ್ತದೆ.

ದುರ್ಗಾಪುರ ಕೇಸರ್:  ಈ ಬಗೆಯ ಕಲ್ಲಂಗಡಿ ಹಣ್ಣು, 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತವೆ. ಈ ಹಣ್ಣು ಹಸಿರು ಬಣ್ಣದಲ್ಲಿ ಪಟ್ಟೆಗಳೊಂದಿಗೆ ಇರುತ್ತದೆ ಮತ್ತು ಇದರ ತಿರುಳು ಸ್ವಲ್ಪ ಕೇಸರಿ ಬಣ್ಣದಲ್ಲಿರುತ್ತವೆ.

ಅರ್ಕಾ ಮಾಣಿಕ್: ಈ ಪ್ರಕಾರದ ಕಲ್ಲಂಗಡಿ ಹಣ್ಣು ದುಂಡಗಿನ ಮತ್ತು ಅಂಡಾಕಾರದಲ್ಲಿರುತ್ತವೆ. ಇವು ಸುಮಾರು 5 ರಿಂದ 6 ಕೆಜಿ ತೂಗುತ್ತವೆ. ಅಲ್ಲದೆ ಈ ಹಣ್ಣು ಸಖತ್‌ ಸಿಹಿಯಾಗಿರುತ್ತದೆ.

ಅಸಾಹಿ ಯಾಮೊಟೊ: ಇದು ಜಪಾನಿನಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿನ ವಿಧವಾಗಿದೆ. ಈ ಕಲ್ಲಂಗಡಿ 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದರ ಸಿಪ್ಪೆ ಹಸಿರು ಬಣ್ಣದ್ದಾಗಿದ್ದು,  ಸೌಮು ಸಿಹಿಯನ್ನು ಹೊಂದಿರುತ್ತದೆ ಮತ್ತು ಈ ಕಲ್ಲಂಗಡಿ  ಆಳವಾದ ಗುಲಾಬಿ ಬಣ್ಣದ ತಿರುಳನ್ನು ಹೊಂದಿರುತ್ತದೆ.

ಕಾಶಿ ಪಿತಾಂಬರ್:‌ ಈ ಕಾಶಿ ಪಿತಾಂಬರ್ ಕಲ್ಲಂಗಡಿ ವಿಧವು ಹಳದಿ ಸಿಪ್ಪೆ ಮತ್ತು ಗುಲಾಬಿ ಬಣ್ಣದ ತಿರುಳನ್ನು ಹೊಂದಿದೆ. ಈ ಹಣ್ಣಿನ ಸರಾಸರಿ ತೂಕ 2.5 ರಿಂದ 3.5 ಕಿಲೋಗ್ರಾಂಗಳು.

ಕಾಶಿ ಮೋಹಿನಿ: ಈ ಬಗೆಯ ಕಲ್ಲಂಗಡಿ ಹಣ್ಣಿನ ತಿರುಳು ಗಾಢ ಕೆಂಪು ಬಣ್ಣವನ್ನು ಹೊಂದಿದ್ದು, ತುಂಬಾ ಸಿಹಿಯಾಗಿರುತ್ತದೆ. ಈ ವಿಧವು ಅತ್ಯುತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಇದನ್ನೂ ಓದಿ: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಆಹಾರಗಳನ್ನು ಸೇವಿಸಿ

ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

  • ಕಲ್ಲಂಗಡಿ ಹಣ್ಣಿನಲ್ಲಿ 92% ನೀರಿನಾಂಶವಿದ್ದು, ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
  • ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ಪದಾರ್ಥವಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
  • ನೀರಿನಂಶದಿಂದ ಸಮೃದ್ಧವಾಗಿರುವ ಈ ಹಣ್ಣು ತ್ವರಿತ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಬೇಗನೆ ತುಂಬುತ್ತದೆ.
  • ಕಲ್ಲಂಗಡಿ ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ. ಇದು ಆಸ್ತಮಾದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
  • ಕಲ್ಲಂಗಡಿ ವಿಟಮಿನ್ ಎ, ವಿಟಮಿನ್ ಸಿ, ಬಿ6, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಅವು ಜೀವಕೋಶದ ಹಾನಿಯನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
  • ಈ ಹಣ್ಣಿನಲ್ಲಿ ನೀರಿನ ಅಂಶ ಮತ್ತು ಜೀವಸತ್ವಗಳು ಅಧಿಕವಾಗಿವೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಸೂರ್ಯನ ನೇರಳಾತೀತ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೀಗೆ ಈ ಹಣ್ಣು ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:47 pm, Sun, 2 August 26

Source link

91 ಎಸೆತ, 25 ಸಿಕ್ಸರ್, 202 ರನ್; ಅಭಿಷೇಕ್ ವಿಸ್ಫೋಟಕ ಬ್ಯಾಟಿಂಗ್‌ – Kannada News | Abhishek Sharma Blasts 233: Strong Bid for India T20 Team Spot After Form Dip

ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸ್ಥಳೀಯ ಕ್ರಿಕೆಟ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಅಂತರ ಜಿಲ್ಲಾ ಹಿರಿಯರ ಪಂದ್ಯಾವಳಿಯಲ್ಲಿ ಅಮೃತಸರ ಪುರುಷರ ಸೀನಿಯರ್ ತಂಡದ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ Tarn Tara ಪುರುಷರ ಸೀನಿಯರ್ ತಂಡದ ವಿರುದ್ದ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕದ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಅವರ ಈ ಅಬ್ಬರದ ಇನ್ನಿಂಗ್ಸ್​ನಿಂದಾಗಿ ಅಮೃತಸರ ಪುರುಷರ ಸೀನಿಯರ್ ತಂಡವು 50 ಓವರ್‌ಗಳಲ್ಲಿ ಬರೋಬ್ಬರಿ 533 ರನ್ ಕಲೆಹಾಕಿತು.

91 ಎಸೆತಗಳನ್ನು ಎದುರಿಸಿ 233 ರನ್​

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ 91 ಎಸೆತಗಳನ್ನು ಎದುರಿಸಿ 233 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 250 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ತಮ್ಮ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 25 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಇದರರ್ಥ ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದಲೇ 202 ರನ್ ಗಳಿಸಿದರು. ಈ 50 ಓವರ್‌ಗಳ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅವರ ದ್ವಿಶತಕ ಮತ್ತು ಅಭಯ್ ಚೌಧರಿ ಅವರ 91 ರನ್‌ಗಳ ಇನ್ನಿಂಗ್ಸ್​ನಿಂದಾಗಿ ಅಮೃತಸರ ಪುರುಷರ ಸೀನಿಯರ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 533 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.

ಕಳಪೆ ಫಾರ್ಮ್​ನಲ್ಲಿ ಅಭಿಷೇಕ್

ಮೇಲೆ ಹೇಳಿದಂತೆ ಟಿ20 ವಿಶ್ವಕಪ್​ನಿಂದಲೂ ಅಭಿಷೇಕ್ ಶರ್ಮಾ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅವರಿಗೆ ತಂಡದಲ್ಲಿ ಸತತ ಅವಕಾಶಗಳನ್ನು ನೀಡಲಾಗುತ್ತಿದೆ. ಅಭಿಷೇಕ್ ತಮ್ಮ ಕೊನೆಯ ಏಳು ಟಿ20 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಕ್ರಮವಾಗಿ 1, 8 ಮತ್ತು 2 ರನ್ ಗಳಿಸಿದ್ದರು. ಹೀಗಾಗಿ ಅಭಿಷೇಕ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಆದರೀಗ ಸ್ಥಳೀಯ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿರುವ ಅಭಿಷೇಕ್ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೊಳ್ಳೆಗಳು ಕೆಲ ಜನರಿಗೆ ಹೆಚ್ಚು ಕಚ್ಚುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ – Kannada News | This is why mosquitoes bite some people more than others

ಎಲ್ಲಾ ಋತುವಿನಲ್ಲೂ ಸೊಳ್ಳೆಗಳ (mosquitoes) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಮಳೆಗಾಲದ ತೇವಯುಕ್ತ ವಾತಾವರಣದಲ್ಲಿ ಸೊಳ್ಳೆಗಳ ಹಾವಳಿ ತುಸು ಹೆಚ್ಚೇ ಇರುತ್ತವೆ. ಇವುಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಸೊಳ್ಳೆಗಳು ಕಚ್ಚದಂತೆ ಜನ ಅನೇಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿದ್ದರೂ ಹುಡುಕಿ ಹುಡುಕಿ ಬಂದು ಸೊಳ್ಳೆಗಳು ಕೆಲವು ಜನರನ್ನು ಕಚ್ಚುತ್ತವೆ. ನನ್ನ ರಕ್ತ ಸಿಹಿಯಾಗಿರಬೇಕು ಅದಕ್ಕೆ ಬಹುಶಃ ಸೊಳ್ಳೆಗಳು ಬಂದು ಬಂದು ನನಗೆ ಕಚ್ಚುತ್ತವೆ ಎಂದು ಜನ ತಮಾಷೆ ಮಾಡುತ್ತಾರೆ. ಆದರೆ ಹೀಗೆ ಸೊಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚು ಕಚ್ಚುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಸೊಳ್ಳೆಗಳು ಕೆಲ ಜನರಿಗೆ ಏಕೆ ಹೆಚ್ಚು ಕಚ್ಚುತ್ತವೆ?

ಸೊಳ್ಳೆಗಳು ತಮ್ಮ ಆಹಾರವನ್ನು ಆಯ್ಕೆ ಮಾಡಲು ಹಲವಾರು ಸೂಚನೆಗಳನ್ನು ಬಳಸುತ್ತವೆ ಎಂದು ವೈದ್ಯಕೀಯ ಅಧ್ಯಯನಗಳು ತೋರಿಸುತ್ತವೆ. ದೇಹದ ವಾಸನೆ, ಚರ್ಮದ ಮೇಲಿನ ಬ್ಯಾಕ್ಟೀರಿಯಾ, ದೇಹದ ಉಷ್ಣತೆ ಮತ್ತು ಕೆಲವು ರಕ್ತದ ಪ್ರಕಾರಗಳು ಸಹ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತವೆ.

ದೇಹದ ವಾಸನೆ: ಸೊಳ್ಳೆಗಳು ಬೆವರಿನಲ್ಲಿರುವ ಕೆಲವು ಸಂಯುಕ್ತಗಳಿಗೆ ಆಕರ್ಷಿತವಾಗುತ್ತವೆ, ಇದು ಸೊಳ್ಳೆಗಳನ್ನು ಆಕರ್ಷಿಸುವ ಪರಿಮಳವನ್ನು ಸೃಷ್ಟಿಸುತ್ತದೆ. ಈ ಸಂಯುಕ್ತಗಳಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಅಮೋನಿಯಾ ಸೇರಿವೆ. ಇದಲ್ಲದೆ ಲಕ್ಷಾಂತರ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ವಾಸಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಬೆವರಿನಲ್ಲಿರುವ ಅಂಶಗಳನ್ನು ಒಡೆಯುತ್ತವೆ ಮತ್ತು ವಿಭಿನ್ನ ವಾಸನೆಯನ್ನು ಉಂಟುಮಾಡುತ್ತವೆ. ಕೆಲವು ಜನರ ಚರ್ಮದಿಂದ ಬಿಡುಗಡೆಯಾಗುವ ಕಾರ್ಬಾಕ್ಸಿಲಿಕ್ ಆಮ್ಲಗಳು ಎಂಬ ರಾಸಾಯನಿಕಗಳಿಗೂ ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗುತ್ತವೆ. ಈ ರಾಸಾಯನಿಕಗಳು ಹೆಚ್ಚು ಯಾರ ದೇಹದಲ್ಲಿ ಉತ್ಪಾದನೆಯಾಗುತ್ತದೆಯೋ ಆ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.

ರಕ್ತದ ಪ್ರಕಾರ: ಜಪಾನ್‌ನಲ್ಲಿ ನಡೆಸಿದ ಅಧ್ಯಯನವೊಂದು “O” ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂಬುದನ್ನು ಕಂಡು ಹಿಡಿದಿದೆ. ಚರ್ಮದಿಂದ ಹೊರಸೂಸುವ ರಾಸಾಯನಿಕ ಸಂಕೇತಗಳ ಆಧಾರದ ಮೇಲೆ ಸೊಳ್ಳೆಗಳು ರಕ್ತದ ಪ್ರಕಾರಗಳನ್ನು ಪತ್ತೆ ಮಾಡುತ್ತವೆ ಮತ್ತು O ರಕ್ತದ ಪ್ರಕಾರ ಹೊಂದಿರುವ ಜನರನ್ನು ಇತರರಿಗಿಂತ ಹೊಂದಿರುವವರಿಗಿಂತ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.

ಗಾಢ ಬಣ್ಣದ ಬಟ್ಟೆಗಳು: ನೀವು ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಸೊಳ್ಳೆಗಳು ನಿಮ್ಮತ್ತ ಹೆಚ್ಚು ಆಕರ್ಷಿತವಾಗುತ್ತದೆ. ಸೊಳ್ಳೆಗಳು ಗಾಢ ಬಣ್ಣದ ಬಟ್ಟೆಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ. ನೀವು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ನಿಮಗೆ ಸೊಳ್ಳೆಗಳು ಕಚ್ಚುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು

ಸೊಳ್ಳೆಗಳಿಗೆ ಇಂಗಾಲದ ಡೈಆಕ್ಸೈಡ್ ಇಷ್ಟ: ನಾವು ಉಸಿರಾಟದ ಮೂಲಕ ಹೊರ ಹಾಕುವ ಇಂಗಾಲದ ಡೈ ಆಕ್ಸೈಡ್‌ ಕೂಡ ಸೊಳ್ಳೆಗಳಿಗೆ ಬಲು ಇಷ್ಟ. ಸೊಳ್ಳೆಗಳು ಇಂಗಾಲದ ಡೈ ಆಕ್ಸೈಡ್‌ ಅನ್ನು ದೂರದಿಂದಲೇ ಗ್ರಹಿಸಬಲ್ಲವು. ಗರ್ಭಿಣಿಯರು ಮತ್ತು ಹೆಚ್ಚು ವ್ಯಾಯಾಮ ಮಾಡುವ ಜನರು ತುಲನಾತ್ಮಕವಾಗಿ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತಾರೆ. ಇಂತಹ ಜನರ ಬಳಿ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.

ದೇಹದ ಉಷ್ಣತೆ ಮತ್ತು ಬೆವರು: ದೇಹದ ಉಷ್ಣತೆ ಹೆಚ್ಚಿದ್ದರೂ ಸೊಳ್ಳೆಗಳು ನಿಮ್ಮನ್ನು ಕಚ್ಚುತ್ತವೆ. ಹೌದು  ದೇಹದ ಉಷ್ಣತೆ ಹೆಚ್ಚಿದ್ದರೆ ಅಥವಾ ನೀವು ಜಾಸ್ತಿ ಬೆವರಿದರೆ ನಿಮ್ಮತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.

ಮದ್ಯ ಸೇವಿಸುವ ಜನ: ಸಂಶೋಧನೆಯ ಪ್ರಕಾರ, ಬಿಯರ್ ಕುಡಿಯುವ ಜನರು ಸಹ ಇತರರಿಗಿಂತ ಹೆಚ್ಚಾಗಿ ಸೊಳ್ಳೆಗಳಿಂದ ಕಚ್ಚಲ್ಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ – Kannada News | Police Constable Exam Chaos in Vijayapura: DC Clarifies OMR Sheet and Question Paper Rules

ಪೊಲೀಸ್​​ ಕಾನ್ಸ್‌ಟೇಬಲ್​ ನೇಮಕಾತಿ ಪರೀಕ್ಷೆImage Credit source: tv9 kannada

ವಿಜಯಪುರ, ಆಗಸ್ಟ್​​ 02: ರಾಜ್ಯದಲ್ಲಿ ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ (Police Constable Recruitment) ಲಿಖಿತ ಪರೀಕ್ಷೆ ನಡೆಯಿತು. ಆದರೆ ಇತ್ತ ಜಿಲ್ಲೆಯಲ್ಲಿ ಪರೀಕ್ಷೆ ವೇಳೆ ಗೊಂದಲ ಉಂಟಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್​ ಶೀಟ್ ನೀಡುವುದು ವಿಳಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸೀರಿಯಲ್ ನಂಬರ್ ಹೊಂದಾಣಿಕೆ ಆಗಿಲ್ಲ ಎನ್ನಲಾಗಿದೆ. ಹೀಗಾಗಿ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ ಘಟನೆ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ನಡೆದಿದ್ದೇನು? 

ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್​ ಶೀಟ್ ನೀಡಲು ವಿಳಂಬ ಮಾಡಲಾಗಿದೆ ಮತ್ತು ಅವುಗಳ ಸೀರಿಯಲ್ ನಂಬರ್ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ಆರೋಪಿಸಿದ ಪರೀಕ್ಷಾರ್ಥಿಗಳು, ಪರೀಕ್ಷಾ ಕೇಂದ್ರದ ಹೊರಗೆ ಬಂದು ಪ್ರತಿಭಟಿಸಿದರು. ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳ ಸಮೇತವೇ ಕ್ಯಾಂಪಸ್‌ನಿಂದ ಹೊರಬಂದು ಗದ್ದಲ ಸೃಷ್ಟಿಸಿದರು. ಹೀಗಾಗಿ ಕೆಲಕಾಲ ಗೊಂದಲ ಉಂಟಾಗಿತ್ತು.

ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್​​ಗೆ ಒಂದೇ ನಂಬರ್ ಇರಬೇಕೆಂದಿಲ್ಲ: ಡಿಸಿ ಆನಂದ ಕೆ

ಘಟನೆ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆನಂದ ಕೆ. ‘ಪರೀಕ್ಷಾ ಕೇಂದ್ರಕ್ಕೆ ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಸರಿಯಾದ ಸಮಯಕ್ಕೇ ತರಲಾಗಿತ್ತು. ನಿಯಮದಂತೆ ಪರೀಕ್ಷಾರ್ಥಿಗಳ ಸಮ್ಮುಖದಲ್ಲೇ ಅವುಗಳನ್ನು ತೆರೆಯಲಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್‌ಗಳ ಸೀರಿಯಲ್ ನಂಬರ್ ಒಂದೇ ಇರಬೇಕು ಎಂಬ ನಿಯಮವಿಲ್ಲ. ಓಎಂಆರ್ ಶೀಟ್ ಮೇಲೆ ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ನಮೂದಿಸಿ ಪರೀಕ್ಷೆ ಮುಂದುವರಿಸಲು ಅವಕಾಶವಿತ್ತು. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್‌ಗೆ ಯಾವುದೇ ಟ್ಯಾಗಿಂಗ್ ಅಥವಾ ಬೈಂಡಿಂಗ್ ಇರುವುದಿಲ್ಲ’ ಎಂದು ಅವರು ವಿವರಿಸಿದರು.

ಪರೀಕ್ಷಾ ಕೇಂದ್ರದಿಂದ ಹೊರಬಂದ ಅಭ್ಯರ್ಥಿಗಳು 

‘ಪರೀಕ್ಷಾ ಕೇಂದ್ರದ ಮುಖ್ಯಸ್ಥರು ತಿಳಿಹೇಳಿದಾಗ್ಯೂ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಿಲ್ಲ ಎಂದು ಕ್ಯಾಂಪಸ್‌ನಿಂದ ಹೊರಗೆ ಬಂದಿದ್ದಾರೆ. ನಿಯಮದ ಪ್ರಕಾರ ಲಾಸ್ಟ್ ಬೆಲ್ ಆಗುವವರೆಗೆ ಯಾರೂ ಹೊರಗೆ ಬರುವಂತಿಲ್ಲ. ಒಮ್ಮೆ ಪರೀಕ್ಷಾ ಕೊಠಡಿಯಿಂದ ಹೊರಹೋದ ಅಭ್ಯರ್ಥಿಗಳನ್ನು ಮತ್ತೆ ಒಳ ಹೋಗುವುದು ಪರೀಕ್ಷಾ ಕಾನೂನಿಗೆ ವಿರುದ್ಧವಾದದ್ದು. ಆದರೆ, ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳೊಂದಿಗೆ ಹೊರಹೋದ ಅಭ್ಯರ್ಥಿಗಳು ಕೆಲ ಸಮಯದ ಬಳಿಕ ಮತ್ತೆ ಪರೀಕ್ಷೆ ಬರೆಯಲು ಒಳಗೆ ಹೋಗಬೇಕೆಂದು ಪಟ್ಟು ಹಿಡಿದಿದ್ದರು’ ಎಂದಿದ್ದಾರೆ.

ಇದನ್ನೂ ಓದಿ: ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಇನ್ನು ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಕೇಂದ್ರದಲ್ಲಿ 115ಕ್ಕೂ ಅಧಿಕ ಅಭ್ಯರ್ಥಿಗಳು ಶಾಂತಿಯುತವಾಗಿ ಪರೀಕ್ಷೆ ಬರೆದಿದ್ದಾರೆ. ಇಡೀ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಸಂಪೂರ್ಣ ವರದಿಯನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಲಾಗುವುದು ಎಂದು ಡಿಸಿ ಆನಂದ ಕೆ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version