ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ – Kannada News | Medicine Shortage Plagues Governments Bowring Hospital in Bengaluru

ಬೆಂಗಳೂರು, ಫೆಬ್ರವರಿ 26: ಶಿವಾಜಿನಗರದಲ್ಲಿರುವ ಬೌರಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಎದುರಾಗಿದ್ದು, ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರು ಬರೆದುಕೊಟ್ಟ ಮಾತ್ರೆಗಳು ಆಸ್ಪತ್ರೆಯ ಔಷಧಾಲಯದಲ್ಲಿ ಲಭ್ಯವಿಲ್ಲದೆ, ರೋಗಿಗಳು ಔಷಧಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ರೋಗಿಗಳು ಹೊರಗಿನ ವೈದ್ಯಕೀಯ ಅಂಗಡಿಗಳಲ್ಲಿ ದುಬಾರಿ ಬೆಲೆ ನೀಡಿ ಔಷಧಿಗಳನ್ನು ಖರೀದಿಸಲು ಅನಿವಾರ್ಯವಾಗಿದೆ. ಹಲವು ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು, ರಕ್ತದೊತ್ತಡ, ಮಧುಮೇಹ ಮತ್ತು ನೋವಿನ ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕ ಅರವಿಂದ್ ಅವರು ಮಾತನಾಡಿ, ಕೆಲವು ಸಣ್ಣ ಪ್ರಮಾಣದ ಔಷಧಿಗಳ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅವುಗಳನ್ನು ತರಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಈ ಲೋಪದೋಷಗಳನ್ನು ಸರಿಪಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಮತ್ತು ಶೀಘ್ರದಲ್ಲೇ ಔಷಧಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹನಿಮೂನ್​​ಗೆ ಬಲು ಸುಂದರ ದ್ವೀಪಕ್ಕೆ ಹೋಗಲಿದ್ದಾರೆ ವಿಜಯ್-ರಶ್ಮಿಕಾ: ಎಲ್ಲಿ ಗೊತ್ತೆ? – Kannada News | Rashmika Mandanna and Vijay Deverakonda’s honeymoon plan details are here

ವಿಜಯ್ ದೇವರಕೊಂಡ (Vijy Deverakonda) ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆಯುತ್ತಿದೆ. ಇಂದು ಹಳದಿ, ಸಂಗೀತ್ ಇನ್ನಿತರೆ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು, ನಾಳೆ (ಫೆಬ್ರವರಿ 26) ಮದುವೆ ಸಮಾರಂಭ ನಡೆಯಲಿದೆ. ಮೊದಲಿಗೆ ತೆಲುಗು ಸಂಪ್ರದಾಯದಂತೆ ವಿವಾಹ ನಡೆಯಲಿದೆ, ಅದಾದ ಬಳಿಕ ಸಂಜೆ ನಡೆವ ಮತ್ತೊಂದು ಕಾರ್ಯಕ್ರಮದಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮಾರ್ಚ್ 04 ರಂದು ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೆ ಟಾಲಿವುಡ್, ಸ್ಯಾಂಡಲ್​​ವುಡ್ ಮತ್ತು ಬಾಲಿವುಡ್​​ನ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜಕಾರಣಿಗಳು ಭಾಗಿ ಆಗಲಿದ್ದಾರೆ. ಆರತಕ್ಷತೆ ಮುಗಿದ ಎರಡೇ ದಿನಕ್ಕೆ ಈ ಜೋಡಿ ಹನಿಮೂನ್​​ಗೆ ರವಾನೆ ಆಗಲಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ತಮ್ಮ ಆರತಕ್ಷತೆ ಮುಗಿಸಿದ ಕೂಡಲೇ ಹನಿಮೂನ್​​ಗೆ ಹೊರಡಲಿದ್ದಾರಂತೆ. ಅದೂ ಅಂತಿಂಥ ಸಾಮಾನ್ಯ ಸ್ಥಳಕ್ಕೆ ಅಲ್ಲ ಬದಲಿಗೆ ಬಲು ಸುಂದರವಾದ ಮತ್ತು ಬಲು ಖಾಸಗಿಯಾದ ದ್ವೀಪದಲ್ಲಿ ಈ ನೂತನ ದಂಪತಿ ಹನಿಮೂನ್ ಆಚರಣೆ ಮಾಡಿಕೊಳ್ಳಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಸಹ ಪ್ರವಾಸದ ಬಗ್ಗೆ ವಿಪರೀತ ಆಸಕ್ತಿ ಉಳ್ಳವರಾಗಿದ್ದು, ಹಾಗಾಗಿಯೇ ಬಲು ಸುಂದರವಾದ ಸ್ಥಳವನ್ನು ಹನಿಮೂನ್​​ಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಖಾಸಗಿ ದ್ವೀಪವಾದ ಕ್ಯಾಲಿವಿನಿ (Calivigny) ದ್ವೀಪಕ್ಕೆ ಹೋರಡಲಿದ್ದಾರೆ. ಅತ್ಯಂತ ಸುಂದರವಾದ ಮತ್ತು ಐಶಾರಾಮಿ ರೆಸಾರ್ಟುಗಳನ್ನು ಮಾತ್ರವೇ ಹೊಂದಿರುವ ದ್ವೀಪ ಇದಾಗಿದೆ. 80 ಎಕರೆ ವಿಶಾಲವಾದ ದ್ವೀಪ ಇದಾಗಿದ್ದು, ಐತಿಹಾಸಿಕ ಕಾರಣಕ್ಕೂ ಸಹ ಮಹತ್ವವಾದ ದ್ವೀಪ ಇದಾಗಿದೆ. ಐಶಾರಾಮಿ ರೆಸಾರ್ಟ್​ ಹೊಂದಿರುವ ಈ ದ್ವೀಪ ಅತ್ಯಂತ ದುಬಾರಿ ದ್ವೀಪವೂ ಸಹ ಹೌದು.

ಇದನ್ನೂ ಓದಿ:

ವಿಜಯ್ ಮತ್ತು ರಶ್ಮಿಕಾ ಅವರು ಕೇವಲ ಕ್ಯಾಲಿವಿನಿ ದ್ವೀಪ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೇಶಗಳ ಪ್ರವಾಸ ಮಾಡಲಿದ್ದಾರೆ. ರಶ್ಮಿಕಾ ಅವರ ಮೆಚ್ಚಿನ ತಾಣವಾದ ಜಪಾನ್ ಮತ್ತು ವಿಜಯ್ ದೇವರಕೊಂಡ ಅವರ ಮೆಚ್ಚಿನ ತಾಣವಾದ ಇಟಲಿಗೆ ಸಹ ಇವರು ಹನಿಮೂನ್​​ಗೆ ತೆರಳಲಿದ್ದಾರೆ. ಜಪಾನ್, ರಶ್ಮಿಕಾರ ಮೆಚ್ಚಿನ ಪ್ರವಾಸಿ ತಾಣ ಆಗಿದ್ದು, ಈ ಹಿಂದೆ ಅವರು ಜಪಾನಿಗೆ ಹೋದಾಗಲೂ ಈ ಬಗ್ಗೆ ಮಾತನಾಡಿದ್ದರು. ಇದೀಗ ಪತಿಯೊಟ್ಟಿಗೆ ಹನಿಮೂನ್​​ಗೆ ಹೋಗಲಿದ್ದಾರೆ. ಇನ್ನು ವಿಜಯ್ ದೇವರಕೊಂಡಗೆ ಇಟಲಿ ಬಹು ಇಷ್ಟ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ಭಯ ಬೇಡ, ಧೈರ್ಯದಿಂದ ಮುನ್ನುಗ್ಗಿ: ವಿದ್ಯಾರ್ಥಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಶೇಷ ಪತ್ರ

Source link

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯಾದ ಐಷಾರಾಮಿ ರೆಸಾರ್ಟ್ ಹೇಗಿದೆ ಗೊತ್ತೇ? ಫೋಟೊಸ್ ಇಲ್ಲಿದೆ ನೋಡಿ

Source link

ಮಾರ್ಚ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ ಕೆಲಸವನ್ನು ಮಾಡಲೇ ಬಾರದು… – Kannada News | March 2026 Scorpio Astrology: Navigate Planetary Transits and Boost Your Luck

ಮಾರ್ಚ್ 2026ರ ಗ್ರಹಗತಿಗಳ ಆಧಾರದ ಮೇಲೆ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿದೆ. ಶನಿ, ಗುರು ಮತ್ತು ರಾಹು-ಕೇತುಗಳ ಸ್ಥಾನಪಲ್ಲಟವು ನಿಮ್ಮ ಜೀವನದ ಮೇಲೆ ವಿಭಿನ್ನ ಪ್ರಭಾವ ಬೀರಲಿದೆ.

​ನಿಮ್ಮ ರಾಶಿಗೆ ಮಾರ್ಚ್ 2026 ರಲ್ಲಿ ಯಾವ ದಶೆಗಳು ಉತ್ತಮ, ಮಧ್ಯಮ ಮತ್ತು ಅಧಮ ಎಂಬುದರ ವಿವರವಿದು.

​ವೃಶ್ಚಿಕ ರಾಶಿ: ಮಾರ್ಚ್ 2026ರ ದಶಫಲ ವಿಶ್ಲೇಷಣೆ

​ಮಾರ್ಚ್ ತಿಂಗಳಲ್ಲಿ ಗ್ರಹಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಸವಾಲು ಮತ್ತು ಅವಕಾಶಗಳೆರಡನ್ನೂ ಸಮಾನವಾಗಿ ನೀಡಲಿದೆ.

​ಉತ್ತಮ ಫಲ

​ಈ ದಶೆಗಳು ಅಥವಾ ಅಂತರ್ದಶೆಗಳು ನಡೆಯುತ್ತಿದ್ದರೆ ನಿಮಗೆ ಅಭಿವೃದ್ಧಿ ಖಚಿತ.

​ಗುರು ದಶೆ :

ಮಾರ್ಚ್‌ನಲ್ಲಿ ಗುರುವು ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ ಇದ್ದರೂ, ಅದರ ದೃಷ್ಟಿ ನಿಮ್ಮ ವ್ಯಕ್ತಿತ್ವ ಮತ್ತು ಕುಟುಂಬದ ಮೇಲೆ ಇರುತ್ತದೆ. ಸಂಶೋಧನೆ, ವಿಮೆ ಅಥವಾ ಹಠಾತ್ ಧನಲಾಭಕ್ಕೆ ಈ ದಶೆ ಪೂರಕವಾಗಿದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ.

​ಮಂಗಳ ದಶೆ :

ನಿಮ್ಮ ರಾಶ್ಯಾಧಿಪತಿಯಾದ ಮಂಗಳನು ಮಾರ್ಚ್ 15 ರ ಅನಂತರ 4ನೇ ಮನೆಗೆ ಅಂದರೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಆಸ್ತಿ ಖರೀದಿ, ಮನೆ ರಿಪೇರಿ ಅಥವಾ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಜಯ ತಂದುಕೊಡುತ್ತದೆ. ತಾಯಿಯ ಕಡೆಯಿಂದ ಬೆಂಬಲ ಸಿಗಲಿದೆ.

​ಮಧ್ಯಮ ಫಲ

​ಈ ದಶೆಗಳು ನಡೆಯುತ್ತಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ಸಿಗುತ್ತದೆ:

​ಶುಕ್ರ ದಶೆ :

ಮಾರ್ಚ್ 24ರ ಅನಂತರ ಶುಕ್ರನು 8ನೇ ಮನೆಗೆ ಪ್ರವೇಶಿಸುವುದರಿಂದ ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಭೌತಿಕ ಸುಖಕ್ಕೆ ಕೊರತೆಯಾಗುವುದಿಲ್ಲ. ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿದರೆ ಲಾಭ ಸಾಧಾರಣವಾಗಿರುತ್ತದೆ.

​ಬುಧ ದಶೆ :

ಬುಧನು ವಕ್ರಗತಿಯಲ್ಲಿ ಚಲಿಸುವುದರಿಂದ ವ್ಯಾಪಾರ ಮತ್ತು ಸಂವಹನದಲ್ಲಿ ನಿಧಾನಗತಿ ಇರುತ್ತದೆ. ದೊಡ್ಡ ಬದಲಾವಣೆಗಳಿಗಿಂತ ಹಳೆಯ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ.

​ಅಧಮ ಫಲ

​ಈ ದಶೆಗಳು ನಡೆಯುತ್ತಿರುವಾಗ ಬಹಳ ಜಾಗರೂಕರಾಗಿರಬೇಕು.

​ಶನಿ ದಶೆ :

ವೃಶ್ಚಿಕ ರಾಶಿಯವರಿಗೆ ಶನಿಯು ಪ್ರಸ್ತುತ 5ನೇ ಮನೆಯಲ್ಲಿ ಅಂದರೆ ಮೀನ ರಾಶಿ ಸಂಚರಿಸುತ್ತಿದ್ದಾನೆ. ಇದು ಮಕ್ಕಳ ಶಿಕ್ಷಣ ಅಥವಾ ಪ್ರೇಮ ಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಶನಿ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಬೇಡ.

​ರಾಹು-ಕೇತು ದಶೆ :

ರಾಹು 5ನೇ ಮನೆಯಲ್ಲಿ ಶನಿಯೊಂದಿಗೆ ಇರುವುದರಿಂದ ಗೊಂದಲಗಳು ಹೆಚ್ಚಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಬಹುದು. ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ.

​ವೃಶ್ಚಿಕ ರಾಶಿಯವರು ಈ ತಿಂಗಳ ಅಶುಭ ಫಲಗಳನ್ನು ಕಡಿಮೆ ಮಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

​ಮಂಗಳನು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ ಆಂಜನೇಯನ ಆರಾಧನೆ ನಿಮಗೆ ರಕ್ಷಾ ಕವಚವಾಗಲಿದೆ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶನಿಯ ಕೆಟ್ಟ ದೃಷ್ಟಿಯನ್ನು ತಗ್ಗಿಸುತ್ತದೆ. ಐದನೇ ಮನೆಯಲ್ಲಿ ಗ್ರಹಗಳ ಸಂಯೋಗವಿರುವುದರಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

– ಲೋಹಿತ ಹೆಬ್ಬಾರ್

Source link

ದೆಹಲಿ: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ, ಮೂವರು ಹೆಣ್ಣುಮಕ್ಕಳ ಶವ ಪತ್ತೆ – Kannada News | Delhi Family Murder: Mother and Three Daughters Found Slain, Husband Missing Police Probe

ನವದೆಹಲಿ, ಫೆಬ್ರವರಿ 26: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ ಮತ್ತು ಮೂರು ಹೆಣ್ಣುಮಕ್ಕಳ ಶವ ಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ದೆಹಲಿಯ ಸಮಯಪುರ್ ಬದ್ಲಿಯ ಲೇನ್‌ಗಳಲ್ಲಿನ ಮನೆಯೊಂದರಲ್ಲಿ ಒಂದು ಕೊಲೆ(Murder)ನಡೆದಿದೆ. ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯ ಪತಿ ನಾಪತ್ತೆಯಾಗಿದ್ದಾನೆ. ಚಂದನ್ ಪಾರ್ಕ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.

ಘಟನೆಯ ರಾತ್ರಿ, ಮಕ್ಕಳ ಕಿರುಚಾಟದಿಂದ ಸ್ವಲ್ಪ ಸಮಯದ ಹಿಂದೆ ಎಚ್ಚರಗೊಂಡಿದ್ದ ಹತ್ತಿರದ ನಿವಾಸಿಯೊಬ್ಬರು ಮನೆಯತ್ತ ಕಣ್ಣು ಹಾಯಿಸಿದರು ಮತ್ತು ಹತ್ತಿರದಿಂದ ಪರಿಶೀಲಿಸಿದಾಗ, ಬಾಗಿಲಿನ ಬಿರುಕುಗಳ ಮೂಲಕ ಗಾಢವಾದ ಕೆಂಪು ರಕ್ತದ ಗೆರೆ ಸೋರುತ್ತಿರುವುದನ್ನು ಕಂಡಿದ್ದರು.

ಧೈರ್ಯ ತಂದುಕೊಂಡು ಒಳಗೆ ನೋಡಿದ್ದರು, ರಕ್ತಸಿಕ್ತ ಗೋಡೆಗಳನ್ನು ನೋಡಿ ಅವರ ಕಿರುಚಾಟ ಗಂಟಲಲ್ಲೇ ನಿಂತುಬಿಟ್ಟಿತ್ತು. ರಾತ್ರಿಯ ಮೌನದಲ್ಲಿ, ನಡುಗುವ ಕೈಗಳಿಂದ, ಅವರು ತನ್ನ ಫೋನ್ ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಸಮಯಪುರ್ ಬದ್ಲಿ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಬಂದಿತ್ತು.

ಮತ್ತಷ್ಟು ಓದಿ: ಅನ್ಯಕೋಮಿನ ಹುಡುಗರಿಂದ ಸಂಕೇತ್ ಕೊಲೆ: ಸಹಾಯಕ್ಕೆ ಬಂದು ಹತ್ಯೆಯಾದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಟಿಟ್ಟ ಗೆಳೆಯ

ಬಾಗಿಲು ತೆರೆದಾಗ, ಊಹಿಸಲೂ ಅಸಾಧ್ಯವಾದ ದೃಶ್ಯವೊಂದು ಅವರ ಮುಂದೆ ಬಂತು, ಇದು ಪೊಲೀಸ್ ಅಧಿಕಾರಿಗಳನ್ನು ಸಹ ದಿಗ್ಭ್ರಮೆಗೊಳಿಸಿತು. ಕೋಣೆಯ ವಿವಿಧ ಭಾಗಗಳಲ್ಲಿ ನಾಲ್ಕು ಶವಗಳು ಬಿದ್ದಿದ್ದವು. ರಕ್ತದಲ್ಲಿ ತೋಯ್ದಿದ್ದವು. ನಿರ್ಜೀವ, ಮೌನ, ರಾತ್ರಿಯ ನಿಶ್ಯಬ್ದದಲ್ಲಿ, ರಕ್ತದ ಕಲೆಗಳು ಜೋರಾಗಿ ಕಿರುಚುತ್ತಿರುವಂತೆ ಭಾಸವಾಗುತ್ತಿತ್ತು. ತಾಯಿಯನ್ನು ಅನಿತಾ ಎಂದು ಗುರುತಿಸಲಾಗಿದೆ.

ಆಕೆಯ ಜೊತೆಗೆ ಆಕೆಯ ಮೂವರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದಾರೆ. ಹಿರಿಯ ಮಗುವಿಗೆ ಕೇವಲ ಏಳು ವರ್ಷ, ಎರಡನೆಯವಳಿಗೆ ಐದು ವರ್ಷ, ಮತ್ತು ಕಿರಿಯಳಿಗೆ ಕೇವಲ ಮೂರು ವರ್ಷ. ಮೂವರ ಕುತ್ತಿಗೆ ಸೀಳಲಾಗಿತ್ತು. ಹರಿತವಾದ ಆಯುಧದಿಂದ ನಡೆಸಲಾದ ಈ ಕೊಲೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿತು.

ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಶೀಘ್ರದಲ್ಲೇ ಬಂದಿದ್ದರು. ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರತಿಯೊಂದು ಮೂಲೆಯನ್ನೂ ಶೋಧಿಸಿದ್ದಾರೆ. ಪೊಲೀಸರು ಆತನನ್ನು ಪತ್ತೆಹಚ್ಚಲು ತ್ವರಿತವಾಗಿ ಒಂದು ತಂಡವನ್ನು ರಚಿಸಿದರು. ರಾತ್ರಿಯಿಡೀ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಯಿತು .ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹತ್ತಿರದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ – Kannada News | A 6th reserve day is typically allocated for the Ranji Trophy final

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 584 ರನ್​ ಕಲೆಹಾಕಿದೆ. ಇದೀಗ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಶುರು ಮಾಡಿದ್ದು, 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

ಇದೀಗ (ಫೆ.26) ಮೂರನೇ ದಿನದಾಟ ನಡೆಯುತ್ತಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭಿಕ ಆಘಾತಕ್ಕೆ ಒಳಗಾಗಿರುವ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲು ಇನ್ನೆರಡು ದಿನಗಳವರೆಗೆ ಬ್ಯಾಟಿಂಗ್ ಮುಂದುವರೆಸಲು ಪ್ಲ್ಯಾನ್ ರೂಪಿಸಲಿದ್ದಾರೆ.

ಒಂದು ವೇಳೆ ಕರ್ನಾಟಕ ತಂಡವು ಪಂದ್ಯದ ಕೊನೆಯ ದಿನದಾಟದವರೆಗೆ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಉಳಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ರಣಜಿ ಟೂರ್ನಿಯ ಫೈನಲ್​ನಲ್ಲಿ ಫಲಿತಾಂಶ ನಿರ್ಧರಿಸಲು ಎರಡು ತಂಡಗಳ ಮೊದಲು ಇನಿಂಗ್ಸ್ ಪೂರ್ಣಗೊಂಡಿರಬೇಕು.

ಒಂದು ವೇಳೆ 2ನೇ ಬ್ಯಾಟಿಂಗ್ ಆಡಿದ ತಂಡವು ಮೊದಲ ಇನಿಂಗ್ಸ್ ಪೂರ್ಣಗೊಳಿಸದೇ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಂದ್ಯದ ಅವಧಿ: ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಸಾಮಾನ್ಯವಾಗಿ 5 ದಿನಗಳವರೆಗೆ ನಡೆಯುತ್ತವೆ.
  • 6ನೇ ದಿನದ ಬಳಕೆ: ಒಂದು ವೇಳೆ ಮೊದಲ 5 ದಿನಗಳಲ್ಲಿ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಪಂದ್ಯದ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಆಗ 6ನೇ ದಿನವನ್ನು ಬಳಸಲಾಗುತ್ತದೆ.
  • ವಿಜೇತರ ನಿರ್ಧಾರ: ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಉದಾಹರಣೆಗೆ: ಕರ್ನಾಟಕ ತಂಡವು ಇದೀಗ ಮೊದಲ ಇನಿಂಗ್ಸ್ ಆಡುತ್ತಿದೆ. ಭಾನುವಾರದೊಳಗೆ ಜಮ್ಮು-ಕಾಶ್ಮೀರ ತಂಡಕ್ಕೆ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಆರನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಮೊದಲ ಇನಿಂಗ್ಸ್​ ಪೂರ್ಣಗೊಳಿಸಲೆಂದೇ ಇಂತಹದೊಂದು ನಿಯಮ ರೂಪಿಸಲಾಗಿದೆ. ಅಂದರೆ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಂಡರೆ ಒಂದು ತಂಡದ ಇನಿಂಗ್ಸ್​ನಲ್ಲಿ ಮುನ್ನಡೆ ಕಂಡು ಬರಲಿದೆ. ಹೀಗೆ ಮೊದಲ ಇನಿಂಗ್ಸ್ ಪೂರ್ಣಗೊಂಡಿದ್ದರೆ ಪ್ರಥಮ ಇನಿಂಗ್ಸ್​ನಲ್ಲಿ ಮುನ್ನಡೆ ಹೊಂದಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ರಣಜಿ ಟ್ರೋಫಿ ಫೈನಲ್ ‘ಡ್ರಾ’ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ಅಥವಾ ಆರು ದಿನಗಳ ಆಟದ ನಂತರವೂ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ 584 ರನ್ ಗಳಿಸಿದೆ. ಕರ್ನಾಟಕ ಈ ಮೊತ್ತವನ್ನು ದಾಟಿದರೆ ಮಾತ್ರ ಮುನ್ನಡೆಯ ಆಧಾರದ ಮೇಲೆ ಗೆಲ್ಲಲು ಸಾಧ್ಯ.
  • ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ: ಒಂದು ವೇಳೆ ಮಳೆ ಅಥವಾ ಇತರ ಕಾರಣಗಳಿಂದ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಅಂದರೆ ಕರ್ನಾಟಕ ತಂಡ  ತನ್ನ ಮೊದಲ ಇನಿಂಗ್ಸ್ ಮುಗಿಸುವ ಮೊದಲೇ ಪಂದ್ಯ ಅಂತ್ಯವಾದರೆ ಆಗ ಲೀಗ್ ಹಂತದ ಅಂಕಗಳನ್ನು ಪರಿಗಣಿಸಲಾಗುತ್ತದೆ.
  • ಲೀಗ್ ಹಂತದ ಅಂಕಗಳು ಸಮ: ಒಂದು ವೇಳೆ ಉಭಯ ತಂಡಗಳ ಲೀಗ್ ಹಂತದ ಅಂಕಗಳು ಸಮವಾಗಿದ್ದರೆ, ಈ ವೇಳೆ ಯಾವ ತಂಡಕ್ಕೆ ಹೆಚ್ಚು ಬೋನಸ್ ಅಂಕ ಸಿಕ್ಕಿದೆ ಎಂದು ನೋಡಲಾಗುತ್ತದೆ.
  • ಬೋನಸ್ ಅಂಕಗಳು ಸಮ: ಲೀಗ್ ಅಂಕಗಳು ಮತ್ತು  ಬೋನಸ್ ಅಂಕಗಳು ಸಮವಾಗಿದ್ದರೆ ಲೀಗ್ ಹಂತದಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ತಂಡ ಯಾವುದೆಂದು ನೋಡಲಾಗುತ್ತದೆ.
  • ಹೆಚ್ಚಿನ ಗೆಲುವುಗಳು ಸಮ: ಇನ್ನು ಲೀಗ್ ಹಂತದಲ್ಲಿ ಉಭಯ ತಂಡಗಳು ಸಮಾನವಾದ ಗೆಲುವು ದಾಖಲಿಸಿದ್ದರೆ ಕ್ವೋಶಿಯಂಟ್​​ನ ಮೊರೆ ಹೋಗಲಾಗುತ್ತದೆ.
  • ಕ್ವೋಶಿಯಂಟ್: ಲೀಗ್ ಹಂತದಲ್ಲಿ ಎರಡು ತಂಡಗಳ ಗೆಲುವುಗಳ ಸಂಖ್ಯೆಯೂ ಸಮನಾಗಿದ್ದರೆ, ಇಡೀ ಟೂರ್ನಿಯಲ್ಲಿ ತಂಡಗಳ ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ. ಈ ವೇಳೆ ಯಾವ ತಂಡ ಕ್ವೋಶಿಯಂಟ್ ಹೆಚ್ಚಿರುತ್ತದೋ ಅವರೇ ಚಾಂಪಿಯನ್. ಕ್ವೋಶಿಯಂಟ್ ಎಂದರೆ- (ತಂಡದ ಒಟ್ಟು ರನ್ / ಒಟ್ಟು ವಿಕೆಟ್ ಪತನ) ÷ (ಎದುರಾಳಿ ತಂಡದ ಒಟ್ಟು ರನ್ / ಎದುರಾಳಿಯ ಒಟ್ಟು ವಿಕೆಟ್ ಪತನ)
  • ಕ್ವೋಶಿಯಂಟ್ ಸಮ: ಕ್ವೋಶಿಯಂಟ್ ಲೆಕ್ಕಾಚಾರ ಕೂಡ ಸಮವಾಗಿದ್ದರೆ ಪ್ರತಿ ವಿಕೆಟ್‌ಗೆ ಗಳಿಸಿದ ರನ್‌ಗಳ ಸರಾಸರಿಯನ್ನು ನೋಡಲಾಗುತ್ತದೆ. ಈ ವೇಳೆ ಯಾರು ಮುಂದಿರುತ್ತಾರೋ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
  • ಜಂಟಿ ವಿಜೇತರು: ಮೇಲೆ ತಿಳಿಸಿದ ಎಲ್ಲಾ ಮಾನದಂಡಗಳಲ್ಲೂ (Points, Wins, Quotient) ಉಭಯ ತಂಡಗಳು ಸಮಬಲ ಸಾಧಿಸಿದರೆ ಮಾತ್ರ, ರಣಜಿ ಟ್ರೋಫಿಯನ್ನು ಉಭಯ ತಂಡಗಳಿಗೆ ಹಂಚಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: IND vs ZIM: ಪಂದ್ಯ ಗೆಲ್ಲಲು ‘ಕೆಮಿಕಲ್’ ಮೊರೆ ಹೋದ ಟೀಮ್ ಇಂಡಿಯಾ?

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್​ ಐದನೇ ದಿನದಾಟದ ಮೊದಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಐದನೇ ದಿನದಾಟದ ಅಂತ್ಯದೊಳಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಇದ್ದರೆ ಮಾತ್ರ ಪಂದ್ಯವನ್ನು 6ನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಹೀಗಾಗಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಣ ಪಂದ್ಯದಲ್ಲಿ ಫಲಿತಾಂಶವನ್ನು ಎದುರು ನೋಡಬಹುದು.

Source link

ಎಂಟು ವಾರಗಳ ವರೆಗೆ ಒಟಿಟಿಯಲ್ಲಿ ಬಿಡುಗಡೆ ಇಲ್ಲ: ಟಾಲಿವುಡ್ ಮಹತ್ವದ ನಿರ್ಧಾರ – Kannada News | Tollywood decided OTT window for Telugu Movies

ಚಿತ್ರಮಂದಿರಕ್ಕೆ (Theater) ಜನ ಬರುತ್ತಿಲ್ಲ, ಸಿನಿಮಾಗಳ ಬಜೆಟ್ ಹೆಚ್ಚಾಗಿದೆ, ನಿರ್ಮಾಪಕರು ನಷ್ಟದಲ್ಲಿದ್ದಾರೆ ಎಂಬ ದೂರುಗಳು ಎಲ್ಲ ಚಿತ್ರರಂಗಗಳಿಂದಲೂ ಕೇಳಿ ಬರುತ್ತಿದೆ. ಪೈರಸಿ, ಸಿನಿಮಾಗಳನ್ನು ಪರೋಕ್ಷವಾಗಿ ಕಾಡಿದರೆ ಒಟಿಟಿಗಳು ನೇರವಾಗಿ ಜನರು ಚಿತ್ರಮಂದಿರಕ್ಕೆ ಬರದಂತೆ ತಡೆಯುತ್ತಿವೆ ಎಂದು ವಿತರಕರು ಕೆಲ ನಿರ್ಮಾಪಕರು ಆರೋಪಿಸುತ್ತಲೇ ಬಂದಿದ್ದಾರೆ. ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆ ಆದ ತಿಂಗಳಿಗೆ ಮುಂಚೆಯೇ ಒಟಿಟಿಗೆ ಬರುವ ಮೂಲಕ ಚಿತ್ರಮಂದಿರಗಳ ಮಾಲೀಕರು, ವಿತರಕರು ನಷ್ಟ ಹೊಂದಿದ ಉದಾಹರಣೆಗಳಿವೆ, ಇದೇ ಕಾರಣಕ್ಕೆ ಇದೀಗ ನೆರೆಯ ತೆಲುಗು ಚಿತ್ರರಂಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಇನ್ನು ಮುಂದೆ ನಿರ್ಮಾಣ ಆಗುವ ಯಾವುದೇ ತೆಲುಗು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂಬ ಶಿಸ್ತಿನ ಷರತ್ತನ್ನು ತೆಲುಗು ಸಿನಿಮಾ ಚೇಂಬರ್, ನಿರ್ಮಾಪಕರ ಸಂಘ ತೆಗೆದುಕೊಂಡಿದೆ. ಸುಮಾರು 40 ಮಂದಿ ಸಿನಿಮಾ ವಿತರಕರು, ಪ್ರದರ್ಶಕರು ಮತ್ತು ನಿರ್ಮಾಪಕರು ಸಭೆ ನಡೆಸಿ ಸಿನಿಮಾಗಳ ಒಟಿಟಿ ಬಿಡುಗಡೆ ಮೇಲೆ ನಿಯಂತ್ರಣ ಹೇರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ತೆಲುಗು ಫಿಲಂ ಚೇಂಬರ್​​ನ ಎಕ್ಸಿಕ್ಯೂಟಿವ್ ಕಮಿಟಿ ಮುಂದೆ ನಿರ್ಧಾರವನ್ನು ಪ್ರಕಟಿಸಿದ್ದು, ಕಮಿಟಿಯಲ್ಲಿರುವ ನಿರ್ಮಾಪಕರು ಇತರೆ ಸದಸ್ಯರು ಸಹ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದು, ಇನ್ನು ಮುಂದೆ ನಿರ್ಮಾಣ ಆಗುವ ತೆಲುಗು ಸಿನಿಮಾಗಳು ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಎಂಟು ವಾರಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂದು ಆದೇಶಿಸಿದೆ. ಈ ಸಭೆಯಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರುಗಳಾದ ದಿಲ್ ರಾಜು, ಸುರೇಶ್ ಬಾಬು, ಸುನಿಲ್ ನಾರಂಗ್, ಠಾಗೂರ್ ಮಧು ಇನ್ನೂ ಹಲವರು ಭಾಗಿ ಆಗಿದ್ದರು.

ಇದನ್ನೂ ಓದಿ:ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ

ಈಗ ನಿರ್ಮಾಣ ಆಗಿರುವ ಸಿನಿಮಾಗಳು, ಈಗ ಶೇಕಡ 60% ಚಿತ್ರೀಕರಣ ಪೂರೈಸಿರುವ ಸಿನಿಮಾಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಆದರೆ ಈ ಮುಂದೆ ನಿರ್ಮಾಣಗೊಳ್ಳುವ ತೆಲುಗು ಸಿನಿಮಾಗಳಿಗೆ ಈ ನಿಯಮ ಅನ್ವಯಿಸಲಿದೆ. ಬಾಲಿವುಡ್​​ನಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ತಮಿಳುನಾಡಿನಲ್ಲಿ ನಾಲ್ಕು ವಾರಗಳ ನಿಯಮ ಇದೆಯಾದರೂ ಕೆಲವು ಸಿನಿಮಾಗಳನ್ನು ಈ ನಿಯಮವನ್ನು ಮುರಿದ ಉದಾಹರಣೆಯೂ ಇದೆ. ಮಲಯಾಳಂ ಚಿತ್ರರಂಗದಲ್ಲಿ ಆರು ವಾರಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಮಾಡಬಹುದಾಗಿದೆ. ಕನ್ನಡದಲ್ಲಿ ನಿರ್ದಿಷ್ಟ ನಿಯಮ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಚೀನೀ ಸ್ಮಾರ್ಟ್​ಫೋನ್​ಗಳ ಆದಾಯ ಮೊದಲ ಬಾರಿಗೆ ಕುಸಿತ; ಐಫೋನ್, ಸ್ಯಾಮ್ಸುಂಗ್​ಗೆ ಧಕ್ಕೆ ಇಲ್ಲ – Kannada News | Chinese smartphone companies see first ever revenue drop in India

ನವದೆಹಲಿ, ಫೆಬ್ರುವರಿ 26: ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ (chinese smarphone companies) ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್​ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಚೀನೀ ಕಂಪನಿಗಳು ವಾರ್ಷಿಕ ಆದಾಯದಲ್ಲಿ ಇಳಿಕೆ ಕಂಡಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ.

ವರದಿ ಪ್ರಕಾರ, ಭಾರತದಲ್ಲಿ ಬ್ಯುಸಿನೆಸ್ ಮಾಡುತ್ತಿರುವ ಚೀನಾದ 9 ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳ ಒಟ್ಟಾರೆ ಆದಾಯ 2024-25ರಲ್ಲಿ ಶೇ. 4.5ರಷ್ಟು ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಕಂಪನಿಗಳು ಶೇ. 42ರಷ್ಟು ಆದಾಯ ಹೆಚ್ಚಳ ಕಂಡಿದ್ದವು.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

ಒಟ್ಟಾರೆ ಫೋನ್ ಮಾರಾಟ ಸಂಖ್ಯೆಯಲ್ಲಿ ಚೀನೀ ಪ್ರಾಬಲ್ಯ ಮುಂದುವರಿಕೆ

ಅತಿಹೆಚ್ಚು ಸ್ಮಾರ್ಟ್​ಫೋನ್​ಗಳು ಮಾರಾಟ ಆಗುತ್ತಿರುವುದು ಚೀನೀ ಬ್ರ್ಯಾಂಡ್​ನವೇ. 2024-25ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳಲ್ಲಿ ಚೀನೀ ಕಂಪನಿಗಳ ಪಾಲು ಶೇ. 73-75ರಷ್ಟು ಇದೆ. ಆದರೆ, ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು ಕಡಿಮೆ ಆಗಿದೆ. 2023ರಲ್ಲಿ ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಪಾಲು ಶೇ. 54 ಇತ್ತು. 2024ರಲ್ಲಿ ಅದು ಶೇ. 48ಕ್ಕೆ ಇಳಿಕೆ ಆಗಿದೆ.

20,000 ರೂಗಿಂತ ಕಡಿಮೆ ಬೆಲೆಯ ಸ್ಮಾರ್ಟ್​​ಫೊನ್​ಗಳ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು 2023ರಲ್ಲಿ ಶೇ. 38 ಇದ್ದದ್ದು 2025ರಲ್ಲಿ ಶೇ. 29ಕ್ಕೆ ಇಳಿದಿದೆ.

ಬಜೆಟ್ ಫೋನ್​ಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತಿದೆ. ಹೆಚ್ಚಿನ ಮೌಲ್ಯದ ಸ್ಮಾರ್ಟ್​ಫೋನ್​ಗಳ ಮಾರಾಟ ಏರುತ್ತಿರುವುದನ್ನು ಇದು ತೋರಿಸುತ್ತದೆ. 45,000 ರೂಗಿಂತ ಹೆಚ್ಚಿನ ಮೌಲ್ಯದ ಪ್ರೀಮಿಯಮ್ ಸೆಗ್ಮೆಂಟ್ ಸ್ಮಾರ್ಟ್​ಫೋನ್​ಗಳ ರೀಟೇಲ್ ಮಾರಾಟ ಮೌಲ್ಯ 2023ರಲ್ಲಿ ಶೇ. 36 ಇದ್ದದ್ದು 2025ರಲ್ಲಿ ಶೇ. 47ಕ್ಕೆ ಏರಿದೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಉನ್ನತ ಸ್ತರದ ಫೋನ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಲಾಭ ಆ್ಯಪಲ್ ಮತ್ತು ಸ್ಯಾಮ್ಸುಂಗ್ ಕಂಪನಿಗಳಿಗೆ ದಕ್ಕುತ್ತಿದೆ. 2024-25ರಲ್ಲಿ ಭಾರತದಲ್ಲಿ ಆ್ಯಪಲ್​ನ ಮಾರಾಟ ಆದಾಯ ಶೇ. 18ರಷ್ಟು ಹೆಚ್ಚಿದರೆ, ಸ್ಯಾಮ್ಸುಂಗ್ ಶೇ. 12ರಷ್ಟು ಹೆಚ್ಚು ಮಾರಾಟ ಕಂಡಿದೆ.

ಚೀನೀ ಕಂಪನಿಗಳ ಪೈಕಿ ವಿವೊ ಉತ್ತಮ ಸಾಧನೆ ತೋರಿದೆ. ಶೇ. 11ರಷ್ಟು ಆದಾಯ ಏರಿಕೆ ಕಂಡಿದೆ. ಪ್ರೀಮಿಯಮ್ ಸೆಗ್ಮೆಂಟ್​ನಲ್ಲಿ ಇದರ ಪ್ರಬಲ ಉಪಸ್ಥಿತಿ ಇರುವುದರಿಂದ ಆದಾಯ ಕಾಯ್ದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮೂರು ದಾರಿ ಸೇರುವ ಜಾಗದಲ್ಲಿಟ್ಟ ನಿಂಬೆಹಣ್ಣು ತುಳಿದ್ರೆ ಅಪಾಯನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Crossroads Rituals: Understanding the Beliefs Behind Lemons and Offerings

ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ, ನಿಂಬೆಹಣ್ಣು, ರಂಗೋಲಿ, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ದೀಪಗಳು ಅಥವಾ ಸಣ್ಣ ಮಡಕೆಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೀರಿ. ಇಂತಹ ಸನ್ನಿವೇಶಗಳನ್ನು ನೋಡಿದಾಗ, ಇದು ಶುಭವೇ ಅಥವಾ ಅಶುಭವೇ, ಇದನ್ನು ನೋಡುವುದು ಒಳ್ಳೆಯದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಆಚರಣೆಗಳ ಹಿಂದಿನ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ದೃಷ್ಟಿ ತೆಗೆಯುವುದು:

ಈ ರೀತಿಯ ಪೂಜೆಗಳನ್ನು ಮಾಡುವ ಪ್ರಮುಖ ಕಾರಣಗಳಲ್ಲಿ ದೃಷ್ಟಿ ತೆಗೆಯುವುದು ಒಂದು. ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ ದೃಷ್ಟಿ ತೆಗೆಯುವುದು ಸಾಮಾನ್ಯ. ಕೆಲವರು ಸುತ್ತಲೂ ಸಗಣಿ ಹಾಕಿ ಸಗಣಿ ದೀಪಗಳನ್ನು ಸಹ ಇಟ್ಟಿರುತ್ತಾರೆ. ಇದು ಒಂದು ರೀತಿಯ ದೃಷ್ಟಿ ನಿವಾರಣೆಯ ವಿಧಾನ.

ವಾಹನ ಅಪಘಾತ:

ಎರಡನೆಯದಾಗಿ, ವಾಹನ ಅಪಘಾತಗಳು ನಡೆದ ಸ್ಥಳಗಳಲ್ಲಿಯೂ ಇಂತಹ ಪೂಜೆಗಳನ್ನು ಮಾಡಲಾಗುತ್ತದೆ. ಅಪಘಾತದಿಂದ ತಪ್ಪಿಸಿಕೊಂಡು ಬಂದಾಗ ಅಥವಾ ಸಣ್ಣಪುಟ್ಟ ಗಾಯಗಳಾದಾಗ, ಹಿರಿಯರು ಅಪಘಾತ ಸಂಭವಿಸಿದ ಜಾಗದಲ್ಲಿ ಪೂಜೆ ಮಾಡಿಸಲು ಸಲಹೆ ನೀಡುತ್ತಾರೆ. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೂ ಈ ಪೂಜೆಗಳನ್ನು ಮಾಡುವುದುಂಟು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ರೋಗರುಜಿನಗಳ ನಿವಾರಣೆ:

ಮೂರನೆಯ ಪ್ರಮುಖ ಕಾರಣವೆಂದರೆ ರೋಗರುಜಿನೆಗಳ ನಿವಾರಣೆ. ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ಅಥವಾ ನಿರಾಸಕ್ತಿ, ಜವಾಬ್ದಾರಿರಹಿತ ವರ್ತನೆ, ಸರಿಯಾಗಿ ಸ್ಪಂದಿಸದಿರುವುದು, ನೆನಪಿನ ಶಕ್ತಿ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳಿರುವಾಗ ದೇಹದಲ್ಲಿನ ಋಣಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ಹೊರಹಾಕಲು ಈ ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ, ಆ ದಾರಿಯಲ್ಲಿ ನಾವು ಸಾಗಿದಾಗ, ಆ ವಸ್ತುಗಳನ್ನು ತುಳಿದಾಗ ಅಥವಾ ಸ್ಪರ್ಶಿಸಿದಾಗ ನಮಗೆ ಏನಾದರೂ ತೊಂದರೆಯಾಗುತ್ತದೆಯೇ? ಆದರೆ, ಈ ಆಚರಣೆಗಳಿಂದ ಇನ್ನೊಬ್ಬ ವ್ಯಕ್ತಿಗಳಿಗೆ ಯಾವುದೇ ನಕಾರಾತ್ಮಕ ಶಕ್ತಿಗಳು ವರ್ಗಾವಣೆಯಾಗುವುದಿಲ್ಲ. ಹಾಗಾಗಿ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ತೆಗೆದುಕೊಳ್ಳುವ ಅಗತ್ಯವಿಲ್ಲ. ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ರಸ್ತೆಗಳಲ್ಲಿ ಮಾಡಿದ ಪೂಜೆಯ ನಕಾರಾತ್ಮಕ ಶಕ್ತಿಗಳು ಸ್ವಲ್ಪ ಸಮಯದಲ್ಲೇ ಭೂಮಿಗೆ ಲೀನವಾಗಿ, ಪಂಚಭೂತಗಳಲ್ಲಿ ಸೇರಿಹೋಗುತ್ತವೆ. ಇದರಿಂದ ಬೇರೆಯವರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:22 am, Thu, 26 February 26

Source link

Exit mobile version