ಫಿಲಂಫೇರ್ ಪಡೆದ ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳ ಪಟ್ಟಿ – Kannada News | Here is the list of Telugu, Tamil, Malayalam and Hindi movies which won 70th Filmfare award

70ನೇ ಫಿಲ್ಮ್‌ಫೇರ್ ಪ್ರಶಸ್ತಿ (2024) ವಿತರಣೆ ಮಾಡಲಾಗಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯ 2025ರ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ತೆಲುಗು, ತಮಿಳು, ಮಲಯಾಳಂ ಮತ್ತು ತಮಿಳು ಸಿನಿಮಾಗಳ ಪಟ್ಟಿ ಇಲ್ಲಿದೆ. ಕನ್ನಡದಲ್ಲಿ ಯಾರು ಯಾರಿಗೆಲ್ಲ ಪ್ರಶಸ್ತಿ ನೀಡಲಾಯ್ತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ತೆಲುಗು

ಅತ್ಯುತ್ತಮ ಸಿನಿಮಾ: ಪುಷ್ಪ 2: ದಿ ರೂಲ್
ಅತ್ಯುತ್ತಮ ನಿರ್ದೇಶಕ: ಸುಕುಮಾರ್ (ಪುಷ್ಪ 2: ದಿ ರೂಲ್)
ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ 2: ದಿ ರೂಲ್)
ಅತ್ಯುತ್ತಮ ನಟಿ: ನಿವೇತಾ ಥಾಮಸ್ (35 ಚಿನ್ನ ಕಥಾ ಕಾದು)
ಅತ್ಯುತ್ತಮ ಪೋಷಕ ನಟ: ಅಮಿತಾಬ್ ಬಚ್ಚನ್ (ಕಲ್ಕಿ 2898 AD)
ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ 2: ದಿ ರೂಲ್)

ತಮಿಳು

ಅತ್ಯುತ್ತಮ ಸಿನಿಮಾ: ಅಮರನ್
ಅತ್ಯುತ್ತಮ ನಿರ್ದೇಶಕ: ಪಿ.ಎಸ್. ವಿನೋತ್ ರಾಜ್ (ಕೊಟ್ಟುಕ್ಕಾಲಿ) ಮತ್ತು ರಾಜಕುಮಾರ್ ಪೆರಿಯಸಾಮಿ (ಅಮರನ್)
ಅತ್ಯುತ್ತಮ ನಟ: ಶಿವಕಾರ್ತಿಕೇಯನ್ (ಅಮರನ್)
ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಅಮರನ್)
ಅತ್ಯುತ್ತಮ ಪೋಷಕ ನಟ: ಕಾರ್ತಿ (ಮೆಯ್ಯಳಗನ್)
ಅತ್ಯುತ್ತಮ ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್ (ಅಮರನ್)

ಮಲಯಾಳಂ

ಅತ್ಯುತ್ತಮ ಸಿನಿಮಾ: ಮಂಜುಮ್ಮೇಲ್ ಬಾಯ್ಸ್
ಅತ್ಯುತ್ತಮ ನಿರ್ದೇಶಕ: ರಾಹುಲ್ ಸದಾಶಿವನ್ (ಬ್ರಮಯುಗಂ)
ಅತ್ಯುತ್ತಮ ನಟ: ಮಮ್ಮೂಟ್ಟಿ (ಬ್ರಮಯುಗಂ)
ಅತ್ಯುತ್ತಮ ನಟಿ: ಉರ್ವಶಿ (ಉಳ್ಳೊಳುಕ್ಕು)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪೃಥ್ವಿರಾಜ್ ಸುಕುಮಾರನ್ (ಆಡುಜೀವಿತಂ)
ಅತ್ಯುತ್ತಮ ಸಂಗೀತ: ಸುಶಿನ್ ಶ್ಯಾಮ್ (ಆವೇಶಂ)

ಇದನ್ನೂ ಓದಿ: 70ನೇ ಫಿಲ್ಮ್​ಫೇರ್ ಪ್ರಶಸ್ತಿ: ಕನ್ನಡದಲ್ಲಿ ಅವಾರ್ಡ್ ಗೆದ್ದವರ ಪಟ್ಟಿ ಇಲ್ಲಿದೆ..

ಬಾಲಿವುಡ್

ಅತ್ಯುತ್ತಮ ಸಿನಿಮಾ: ಲಾಪತಾ ಲೇಡೀಸ್
ಅತ್ಯುತ್ತಮ ನಿರ್ದೇಶಕ: ಕಿರಣ್ ರಾವ್ (ಚಿತ್ರ: ಲಾಪತಾ ಲೇಡೀಸ್)
ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಮತ್ತು ಅಭಿಷೇಕ್ ಬಚ್ಚನ್ (ಐ ವಾಂಟ್ ಟು ಟಾಕ್)
ಅತ್ಯುತ್ತಮ ನಟಿ: ಆಲಿಯಾ ಭಟ್ (ಜಿಗ್ರಾ)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಾಜ್‌ಕುಮಾರ್ ರಾವ್ (ಶ್ರೀಕಾಂತ್)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಪ್ರತಿಭಾ ರಂತ (ಲಾಪತಾ ಲೇಡೀಸ್)
ಅತ್ಯುತ್ತಮ ಪೋಷಕ ನಟ: ರವಿ ಕಿಶನ್ (ಲಾಪತಾ ಲೇಡೀಸ್)
ಅತ್ಯುತ್ತಮ ಪೋಷಕ ನಟಿ: ಛಾಯಾ ಕದಮ್ (ಲಾಪತಾ ಲೇಡೀಸ್)
ಜೀವಮಾನ ಸಾಧನೆ ಪ್ರಶಸ್ತಿ: ಜೀನತ್ ಅಮಾನ್ ಮತ್ತು ಶ್ಯಾಮ್ ಬೆನಗಲ್ (ಮರಣೋತ್ತರ)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಕೇಸ್: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ? ಸ್ವಾಮೀಜಿ ಆಡಿಯೋ ವೈರಲ್ – Kannada News | BJP MLA Chandru Lamani Arrested In Bribe Case: Swamiji Audio Goes Viral

ಗದಗ, (ಫೆಬ್ರವರಿ 22): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಮಸಲತ್ತು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರಿ ಟೀಮ್ ನಿಂದ ರೇಡ್ ಎಂಬ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ವಾರ ಒಟಿಟಿಗೆ ಬಂದಿವೆ ಕೆಲ ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ – Kannada News | Here is the list of Movies released this week on OTT

ವಿಶ್ವದ ಬಲು ಜನಪ್ರಿಯ ಮತ್ತು ಟಾಪ್ ಶೆಫ್​​​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಗೋರ್ಡನ್ ರೇಮ್ಜಿ ಬಗೆಗೆ ಹೊಸದೊಂದು ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ಇದೇ ವಾರ ಬಿಡುಗಡೆ ಆಗಿರುವ ಈ ಅಪರೂಪದ ಡಾಕ್ಯುಮೆಂಟರಿಯನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

ಅನುರಾಗ್ ಕಶ್ಯಪ್ ನಿರ್ದೇಶಿಸಿ ಸನ್ನಿ ಲಿಯೋನಿ, ರಾಹುಲ್ ಭಟ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ಆಕ್ಷನ್ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಸಿನಿಮಾ ‘ಕೆನೆಡಿ’ ಇದೇ ವಾರ ನೇರವಾಗಿ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.

ಇದೊಂದು ಹಾಸ್ಯಮಯ ಸಸ್ಪೆನ್ಸ್ ಡ್ರಾಮಾ ಆಗಿದೆ. ಸಿನಿಮಾ, ಲಕ್ಕಿ ಹೆಸರಿನ ನಾಯಿ, ಒಬ್ಬ ಪುಟ್ಟ ಬಾಲಕಿ ಮತ್ತು ಒಬ್ಬ ಯುವಕನ ಸುತ್ತ ನಡೆಯುತ್ತದೆ. ವಿಶೇಷ ಶಕ್ತಿ ಹೊಂದಿರುವ ಲಕ್ಕಿ ನಾಯಿಯನ್ನು ಪಡೆದುಕೊಳ್ಳಲು ರಾಜಕಾರಣಿಯೊಬ್ಬ ಪ್ರಯತ್ನ ಪಟ್ಟಾಗ ನಾಯಿಯನ್ನು ಹೇಗೆ ರಕ್ಷಿಸಲಾಗುತ್ತದೆ ಎಂಬ ಕತೆ ಸಿನಿಮಾನಲ್ಲಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದು.

ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ ‘ರಾಕ್ಷಸ’ ಈ ವಾರ ಒಟಿಟಿಗೆ ಬಂದಿದೆ. ಟ್ರೈಲರ್​​ನಿಂದ ಗಮನ ಸೆಳೆದಿರುವ ಈ ವೆಬ್ ಸರಣಿ ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಕತೆ, ಭಾಷೆಯನ್ನು ಹೊಂದಿದ್ದು, ಇದೀಗ ಜೀ5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಜನಪ್ರಿಯ ಆಕ್ಷನ್ ಮತ್ತು ಥ್ರಿಲ್ಲರ್ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ದಿ ನೈಟ್ ಏಜೆಂಟ್’ ವೆಬ್ ಸರಣಿಯ ಮೂರನೇ ಸೀಸನ್ ಇದೇ ವಾರ ಬಿಡುಗಡೆ ಆಗಿದೆ. ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಮತ್ತು ಡ್ರಾಮಾ ಒಳಗೊಂಡಿರುವ ಈ ವೆಬ್ ಸರಣಿಯ ಹೊಸ ಸೀಸನ್ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಒಟ್ಟಿಗೆ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ತು ಮೇರಿ ಮೇ ತೇರಾ, ಮೇ ತೇರಾ, ತೂ ಮೇರಿ’ ಸಿನಿಮಾ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಅಟ್ಟರ್ ಫ್ಲಾಪ್ ಆದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ.

Published On – 2:46 pm, Sun, 22 February 26

Source link

ವಿವಾದದ ಬೆನ್ನಲ್ಲೇ ಸರಣಿ ಎಕ್ಸ್​​ ಪೋಸ್ಟ್​​ ಬಗ್ಗೆ ಸಿಎಂ ಸ್ಪಷ್ಟನೆ: ಹೆಚ್​​ಡಿಕೆಗೂ ತಿವಿದ ಸಿದ್ದರಾಮಯ್ಯ – Kannada News | CM Siddaramaiah Defends Social Justice Article Amidst Row, Counters HD Kumaraswamy’s Claims

ಬೆಂಗಳೂರು, ಫೆಬ್ರವರಿ 22: ಸಾಮಾಜಿಕ ನ್ಯಾಯದ ಬಗ್ಗೆ ಬರೆದಿದ್ದ ಲೇಖನ ವಿವಾದದ ಕೇಂದ್ರ ಬಿಂದು ಆಗುತ್ತಿದ್ದಂತೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ. ಸಾಮಾಜಿಕ ದಿನದ ಆಚರಣೆ ಅಂಗವಾಗಿ ತಾನು ಪತ್ರಿಕೆಗೆ ಬರೆದ ಲೇಖನ ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ನೀರು ನಿಂತಲ್ಲಿಯೇ ನಿಂತು ಮಡುಗಟ್ಟಿ ಹೋದರೆ ಕೆಸರಾಗುತ್ತದೆ. ಹರಿಯುತ್ತಿದ್ದರೆ ಅದು ತಿಳಿಯಾಗುತ್ತಾ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆ ಕೂಡ ಹಾಗೆಯೇ, ಪಟ್ಟಭದ್ರವಾಗಿ ಉಳಿಯದೆ ಚಲನಶೀಲತೆ ಪಡೆದುಕೊಂಡರೆ ಅದು ಜನಪರವಾಗಿ ಪರಿವರ್ತನೆಯಾಗುತ್ತೆ. ಈ ದೃಷ್ಟಿಯಿಂದ ನನ್ನ ಲೇಖನದ ಬಗ್ಗೆ ಚರ್ಚೆಯನ್ನು ಸ್ವಾಗತಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ತಿಳಿಸಿದ್ದಾರೆ.

‘ನನ್ನ ನಿಲುವು ಸಾಮಾಜಿಕ ನ್ಯಾಯದ ಪರ’

ಸಾಮಾಜಿಕ ನ್ಯಾಯದ ಬಗ್ಗೆ ನಾನು ಇದೇ ಮೊದಲ ಬಾರಿ ಮಾತನಾಡಿದ್ದಲ್ಲ. ನನ್ನ ರಾಜಕೀಯ ಜೀವನ ನೋಡುತ್ತಾ ಬಂದವರಿಗೆ ಇದು ಗೊತ್ತಿರುತ್ತದೆ. ಅಧಿಕಾರ ಇರಲಿ, ಇಲ್ಲದೆ ಇರಲಿ ಸಾಮಾಜಿಕ ನ್ಯಾಯದ ಪರ ನನ್ನ ನಿಲುವು ಇರಲಿದೆ. ಜಾತಿ ವ್ಯವಸ್ಥೆ ಬಗ್ಗೆ ಟೀಕಿಸ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದ್ದು, ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ರಣರಂಗದಿಂದ ಓಡಿ ಹೋಗುವ ಹೇಡಿ ನಾನಲ್ಲ ಎಂದ ಸಿದ್ದರಾಮಯ್ಯ; ಏನಿದು ಸಿಎಂ ಸರಣಿ ಪೋಸ್ಟ್​ಗಳ ಮರ್ಮ?

ಹೆಚ್​​ಡಿಕೆಗೆ ತಿರುಗೇಟು

ತಮ್ಮ ಲೇಖನದ ಬಗ್ಗೆ ಟೀಕೆ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೂ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಚಲನಶೀಲ ಸಮಾಜದ ಅಗತ್ಯವಿದೆ. ಹೆಚ್​ಡಿಡಿ, ಹೆಚ್​ಡಿಕೆ ಸ್ವಜಾತಿ ವಿರೋಧಿಗಳು ಮತ್ತು ಕುಟುಂಬವಾದಿಗಳು. ಸ್ವಾರ್ಥಕ್ಕಾಗಿ ತಮ್ಮ ಜಾತಿಯ ನಾಯಕರು ಬೆಳೆಯದಂತೆ ಅವರು ತುಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಜೆಡಿಎಸ್‌ ಬಿಟ್ಟ ಒಕ್ಕಲಿಗ ನಾಯಕರ ಪಟ್ಟಿಯನ್ನೂ ಸಿಎಂ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ ನಾಯಕರನ್ನು ಗುರುತಿಸಿ ಬೆಳೆಸಿದ್ದು ಕೇವಲ ಕಾಂಗ್ರೆಸ್ ಮಾತ್ರ. ಡಿಕೆಶಿ ಸೇರಿ ಸಮರ್ಥ ಒಕ್ಕಲಿಗ ನಾಯಕರ ದಂಡೇ ಕಾಂಗ್ರೆಸ್‌ ಪಕ್ಷದಲ್ಲಿದೆ. ಒಕ್ಕಲಿಗರು ಅಥವಾ ದಲಿತರು ಸಿಎಂ ಆಗೋದು ಕಾಂಗ್ರೆಸ್‌ನಿಂದ ಮಾತ್ರ. ಜೆಡಿಎಸ್ ಅಥವಾ ಬಿಜೆಪಿಯಲ್ಲಿ ದಲಿತ ಸಿಎಂ ಮಾಡುವ ತಾಕತ್ತಿದೆಯೇ? ಎಂದವರು ಪ್ರಶ್ನಿಸಿದ್ದಾರೆ. ಅಧಿಕಾರಕ್ಕಾಗಿ ಜಾತಿ ಎಳೆದು ತಂದಿಲ್ಲ, 4 ದಶಕದಿಂದ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬೆನ್ನಿಗೆ ನಿಂತ ರಾಜಣ್ಣ

ಜಾತಿ ಅಸ್ತ್ರ ಬಳಸಿ ಸರಣಿ ಪೋಸ್ಟ್​​ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಮಾಜಿ ಸಚಿವ ಕೆ.ಎನ್​. ರಾಜಣ್ಣ ನಿಂತಿದ್ದಾರೆ. ಪ್ರಧಾನಿ ಮೋದಿರನ್ನು ಟೀ ಮಾರುವವ ಅಂತಾ ಮಾತನಾಡಲ್ವಾ? ಹಾಗೆ ಸಿಎಂ ಸಿದ್ದರಾಮಯ್ಯ ಕುರಿ ಕಾಯುವವನು ಅಂತಾ ಹೇಳ್ತಾರೆ. ಪತ್ರಿಕೆಯಲ್ಲಿ ಬರೆದ ಲೇಖನದ ಮಾಹಿತಿಯನ್ನು ಟ್ವೀಟ್​ ಮಾಡಿದ್ದಾರೆ. ಅದರಲ್ಲಿ ತಪ್ಪೇನು ಇದೆ ಎಂದು ರಾಜಣ್ಣ ಪ್ರಶ್ನಿಸಿದ್ದಾರೆ. 2 ವರ್ಷ ಕುರಿ, ಎಮ್ಮೆ ಕಾಯುತ್ತಿದ್ದೆ ಎಂದು ಖುದ್ದು ಸಿಎಂ ಹೇಳಿದ್ದಾರೆ. ಚರ್ಚೆ ಆಗಲಿ ಬಿಡಿ, ಎಲ್ಲವೂ ಗೊತ್ತಾಗುತ್ತೆ. ರಾಜಕೀಯ ಅಂದರೆ ಸಂಘರ್ಷ, ಕುರ್ಚಿಗಾಗಿ ಪೈಪೋಟಿ ನಡೆಯುತ್ತೆ ಎಂದವರು ತಿಳಿಸಿದ್ದಾರೆ.

ವರದಿ: ಈರಣ್ಣಾ ಬಸವ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:46 pm, Sun, 22 February 26

Source link

ಬಾಗಲಕೋಟೆ ಬೆನ್ನಲ್ಲೇ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ವಿಡಿಯೋ ವೈರಲ್​​ – Kannada News | Kalaburagi: Stone pelting during Shivaji Jayanti celebrations after Bagalkot; video goes viral

ಕಲಬುರಗಿ, ಫೆಬ್ರವರಿ 22: ಬಾಗಲಕೋಟೆಯಲ್ಲಿ (Bagalkote) ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಗಲಾಟೆ ಮಾಸುವ ಮುನ್ನವೇ ನಿನ್ನೆ ಕಲಬುರಗಿಯಲ್ಲೂ (Kalaburagi) ಅಂತಹದೊಂದು ಗಲಾಟೆ ನಡೆದಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಕೂಡ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಡಿಜೆ ಸೌಂಡ್‌ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ಸಂಘರ್ಷವೇ ನಡೆದಿದ್ದು, ಅಕ್ಷರಶಃ ಗ್ರಾಮ ಬೂದಿ ಮುಚ್ಚಿದ ಕೆಂಡವಾಗಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿರುವ ಮತ್ತೊಂದು ವಿಡಿಯೋ ವೈರಲ್​ ಆಗಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಗಣೇಶ ಕಟ್ಟೆಯ ಮೇಲೆ ಶಿವಾಜಿ ಜಯಂತಿ ಆಚರಣೆ ವೇಳೆ ಗಲಾಟೆ ನಡೆದಿದೆ. ಎರಡು ಸಮುದಾಯಗಳ ನಡುವೆ ಮಾರಾಮಾರಿ ವೇಳೆ ಮಕ್ಕಳು ಕಲ್ಲಿನಿಂದ ಹಲ್ಲೆ ಮಾಡಿರುವ ಮತ್ತೊಂದು ವಿಡಿಯೋ ಇದೀಗ ಲಭ್ಯವಾಗಿದೆ. ಮನೆಯ ಮಾಳಿಗೆ ಮೇಲೆ ಬಾಲಕನೊಬ್ಬ ಕೈಯಲ್ಲಿ ಕಲ್ಲು ಹಿಡಿದು ನಿಂತಿರುವ ವಿಡಿಯೋ ಸದ್ಯ ವೈರಲ್​ ಆಗಿದೆ.

ಘಟನೆ ಹಿನ್ನಲೆ 

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ಮಧ್ಯೆ ಗಲಾಟೆಯಾಗಿದೆ. ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಮೆರವಣಿಗೆ ವೇಳೆ ರಾವೂರ್ ಗ್ರಾಮದ ಗಣೇಶ ಕಟ್ಟೆ ಬಳಿ ಡಿಜೆ ಸೌಂಡ್‌ಗೆ ಬನಾಯೇಂಗೆ ಮಂದಿರ್ ಹಾಡಿಗೆ ಹಿಂದೂ ಕಾರ್ಯಕರ್ತರು ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ದರಂತೆ. ಈ ವೇಳೆ ಅಲ್ಲಿಗೆ ಬಂದ ಮುಸ್ಲಿಮರು ಕಿರಿಕ್ ಮಾಡಿದ್ದಾರೆ. ಸೌಂಡ್ ಕಡಿಮೆ ಮಾಡಿ ಅಂತಾ ಹೇಳಿದ್ದೆ ತಡ ಎರಡು ಸಮುದಾಯದ ಮಧ್ಯೆ ಗಲಾಟೆ ಆರಂಭವಾಗಿದೆ. ಈ ವೇಳೆ ಕಟ್ಟಿಗೆ, ಕಲ್ಲಿನಿಂದ ಹೊಡೆದಾಟ ಶುರುವಾಗಿದ್ದು, ನಾಲ್ಕೈದು ಜನರಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯದವರಿಂದ ದೂರು, ಪ್ರತಿದೂರು ದಾಖಲಾಗದ ಹಿನ್ನಲೆಯಲ್ಲಿ ವಾಡಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತಿರುಮಲೇಶ್ ಅವರು ಸುಮೋಟೋ ಕೇಸ್​ದಾಖಲಸಿಕೊಂಡಿದ್ದಾರೆ. ಬಿಎನ್‌ಎಸ್ 126 ಕಾಯ್ದೆಯಡಿ 8 ಜನರ ವಿರುದ್ಧ ಕೇಸ್​ ದಾಖಲಾಗಿದೆ.

ಈ ಬಗ್ಗೆ ಎಸ್​​ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿದ್ದು, ಶಿವಾಜಿ ಜಯಂತ್ಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ಮಧ್ಯೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಓರ್ವ ವ್ಯಕ್ತಿಗೆ ಗಾಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಎರಡು ಕೋಮುಗಳಿಂದು ಯಾವುದೇ ದೂರು, ಪ್ರತಿದೂರು ದಾಖಲಾಗದ ಹಿನ್ನಲೆಯಲ್ಲಿ ವಾಡಿ ಪೊಲೀಸ್ ಠಾಣೆಯಿಂದ ಎರಡು ಕೋಮಿನ 8 ಜನರ ವಿರುದ್ಧ ಕೇಸ್​ ದಾಖಲಿಸಿರುವುದಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಪ್ರಲ್ಹಾದ್ ಜೋಶಿ ವಾಗ್ದಾಳಿ

ಸದ್ಯ ರಾವೂರ್ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:14 pm, Sun, 22 February 26

Source link

ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರ ಇದ್ದಾರೆ? ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್ – Kannada News | Congress MLA KN Rajanna Bats on BJP MLA Chandru Lamani caught taking bribe

ನವದೆಹಲಿ,(ಫೆಬ್ರವರಿ 22): ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಸಹಾಯಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚೆಕ್ ಡ್ಯಾಂ ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಪಡೆಯುವಾಗ ಇವರು ಸಿಕ್ಕಿಬಿದ್ದಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ವಿಪಕ್ಷ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿ, ನಾವು ಆತನ ಬಗ್ಗೆ ಮರುಕ ವ್ಯಕ್ತಪಡಿಸಬೇಕು ಅಷ್ಟೇ. ಸತ್ಯಹರಿಶ್ಚಂದ್ರನ ಮಕ್ಕಳು ಯಾರು ಇದ್ದಾರೆ ಹೇಳಿ ನೋಡೋಣ. ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರ ಇದ್ದಾರೆ. ಇವನ್ಯಾರೋ ಬಡಪಾಯಿ ಸಿಕ್ಕಿ ಹಾಕಿಕೊಂಡಿದ್ದಾನೆ ಅಷ್ಟೇ ಎಂದು ಲಂಚ ಸ್ವೀಕರಿಸಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

Source link

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಕೊನೆಯ ವಾರದ ಭವಿಷ್ಯ ತಿಳಿಯಿರಿ – Kannada News | Horoscope February 2026 : Major Planetary Shifts and 5 Planet Conjunction Bring Auspicious Changes

2026ರ ಫೆಬ್ರವರಿಯ ಕೊನೆಯ ವಾರದಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸಕಾರಾತ್ಮಕ ಅಂಶಗಳು ಇರಲಿದ್ದು, ಜೀವನ ಸುಖಮಯ ಎನಿಸಲಿದೆ. ಕುಜನು ಉಚ್ಚಸ್ಥಾನವನ್ನು ಬಿಟ್ಟು ಮುಂದಕ್ಕೆ ಹೋಗಲಿದ್ದಾನೆ, ಮಾತ್ರವಲ್ಲ ಐದು ಗ್ರಹಗಳ ಯೋಗ ಸಂಭವಿಸುವುದು. ಅಪರೂಪದ ಸಂಯೋಗವೂ ಆಗಿದ್ದು ಅನೇಕ ಶುಭಗಳನ್ನು ನಿರೀಕ್ಷಿಸಬಹುದು.

​ಮೇಷ:

ಈ ವಾರ ಸೂರ್ಯ ಮತ್ತು ಬುಧನ ಸಂಚಾರದಿಂದ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದರೂ, ಮಂಗಳನ ಪ್ರಭಾವದಿಂದ ಕೋಪ ಹೆಚ್ಚಾಗಬಹುದು. ಕುಟುಂಬದಲ್ಲಿ ಶಾಂತಿ ಕಾಪಾಡಲು ತಾಳ್ಮೆ ಅಗತ್ಯ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ. ಹೊಸ ಹೂಡಿಕೆಗೆ ಇದು ಸಕಾಲವಾಗಿದ್ದು, ಆತುರದ ನಿರ್ಧಾರಗಳನ್ನು ತಪ್ಪಿಸಿ ಲಾಭ ಪಡೆಯಿರಿ.

​ವೃಷಭ:

ಶುಕ್ರನ ಅನುಗ್ರಹದಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗಲಿವೆ. ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ದೊರೆಯಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ, ಆದರೆ ಗುರುವಿನ ದೃಷ್ಟಿಯಿಂದ ಅನಗತ್ಯ ಖರ್ಚುಗಳೂ ಎದುರಾಗಬಹುದು. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಪ್ರವಾಸದ ಯೋಗವಿದ್ದು, ಪ್ರಯಾಣದಲ್ಲಿ ಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಿ.

​ಮಿಥುನ:

ರಾಹು-ಕೇತುಗಳ ಪ್ರಭಾವದಿಂದ ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಮಾಡಬೇಡಿ. ವಾರದ ಮಧ್ಯಭಾಗದಲ್ಲಿ ಆರ್ಥಿಕ ಸುಧಾರಣೆ ಕಂಡುಬರಲಿದೆ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಲಿದೆ. ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಉತ್ತಮ ಅವಕಾಶಗಳು ಹುಡುಕಿ ಬರಲಿವೆ. ಚರ್ಮದ ಸಮಸ್ಯೆ ಅಥವಾ ಅಲರ್ಜಿ ಕಾಡಬಹುದು, ಎಚ್ಚರವಿರಲಿ. ಅತಿಯಾದ ಯೋಚನೆ ಬಿಟ್ಟು ಧ್ಯಾನ ಮಾಡುವುದು ಮಾನಸಿಕ ನೆಮ್ಮದಿಗೆ ಸಹಕಾರಿ.

​ಕರ್ಕಾಟಕ:

ಈ ವಾರ ಚಂದ್ರನ ಸಂಚಾರವು ನಿಮಗೆ ಮಿಶ್ರಫಲ ನೀಡಲಿದೆ. ಹಿತಶತ್ರುಗಳ ಕಾಟವಿದ್ದರೂ ನಿಮ್ಮ ಚಾಕಚಕ್ಯತೆಯಿಂದ ಜಯಿಸುವಿರಿ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ಶನೈಶ್ಚರನ ಪ್ರಭಾವದಿಂದ ಕೆಲಸದಲ್ಲಿ ವಿಳಂಬವಾಗಬಹುದು, ಧೃತಿಗೆಡಬೇಡಿ. ಸಾಲ ನೀಡುವ ಮುನ್ನ ಎಚ್ಚರವಹಿಸಿ. ಆಹಾರ ಪದ್ಧತಿಯಲ್ಲಿ ಶಿಸ್ತು ಇರಲಿ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಬಾಧಿಸಬಹುದು.

​ಸಿಂಹ:

ಸೂರ್ಯನು ಏಳನೇ ಮನೆಯಲ್ಲಿರುವುದರಿಂದ ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಇರಲಿ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ. ಸಮಾಜದಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಆರ್ಥಿಕವಾಗಿ ಸ್ಥಿರತೆ ಇರಲಿದ್ದು, ಹಳೆಯ ಬಾಕಿ ಹಣ ವಾಪಸ್ ಬರಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚಾಗಬಹುದು. ಅಹಂಕಾರದ ಮಾತುಗಳು ಸಂಬಂಧಗಳನ್ನು ಹಾಳು ಮಾಡಬಹುದು, ಮೃದುವಾಗಿ ವರ್ತಿಸಿ. ವಾರದ ಕೊನೆಯಲ್ಲಿ ದೈವಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ, ಇದು ಮನಸ್ಸಿಗೆ ನೆಮ್ಮದಿ ನೀಡಲಿದೆ.

​ಕನ್ಯಾ:

ಬುಧನ ಸ್ಥಾನ ಬದಲಾವಣೆಯಿಂದ ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಕೈಸೇರಲಿವೆ. ಮಾತಿನ ಚತುರತೆಯಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ಪೂರೈಸುವಿರಿ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಶುಭ ಫಲವಿದೆ. ಬೆನ್ನು ನೋವು ಅಥವಾ ಕುತ್ತಿಗೆ ನೋವಿನ ಸಮಸ್ಯೆ ಕಾಡಬಹುದು. ಹೂಡಿಕೆಯಿಂದ ಲಾಭ ಸಿಗಲಿದೆ. ಸಂಬಂಧಿಕರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಅನಗತ್ಯ ಟೀಕೆಗಳಿಂದ ದೂರವಿದ್ದು ಸ್ವಂತ ಪ್ರಗತಿಯತ್ತ ಗಮನ ಹರಿಸಿ.

​ತುಲಾ:

ಶುಕ್ರ ಮತ್ತು ಶನಿಯ ಯುತಿಯಿಂದಾಗಿ ವೈಯಕ್ತಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಹಣಕಾಸಿನ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳಿ. ಕೆಲಸದಲ್ಲಿ ಒತ್ತಡ ಹೆಚ್ಚಾದರೂ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ. ಸೃಜನಶೀಲ ಕೆಲಸಗಳಿಗೆ ಆದ್ಯತೆ ನೀಡಿ. ಅಜೀರ್ಣದ ಸಮಸ್ಯೆ ಕಾಡಬಹುದು, ಆಹಾರದಲ್ಲಿ ನಿಯಂತ್ರಣವಿರಲಿ. ವಾರದ ಅಂತ್ಯದ ವೇಳೆಗೆ ಮಾನಸಿಕ ನೆಮ್ಮದಿ ಮತ್ತು ನೆಮ್ಮದಿಯ ಕ್ಷಣಗಳು ಲಭಿಸಲಿವೆ.

​ವೃಶ್ಚಿಕ:

ಮಂಗಳನ ಸಂಚಾರವು ನಿಮಗೆ ಧೈರ್ಯ ಮತ್ತು ಉತ್ಸಾಹವನ್ನು ನೀಡಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಲಾಭ ನಿರೀಕ್ಷಿಸಬಹುದು. ದೀರ್ಘಕಾಲದ ವಿವಾದಗಳು ಬಗೆಹರಿಯಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಆದರೆ, ರಕ್ತದೊತ್ತಡದ ಸಮಸ್ಯೆ ಇರುವವರು ಎಚ್ಚರದಿಂದಿರಬೇಕು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ವಾರದ ಮಧ್ಯದಲ್ಲಿ ಧನಲಾಭದ ಮುನ್ಸೂಚನೆ ಇದ್ದು, ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.

ಧನುಸ್ಸು:

ಗುರು ಬಲವು ಹೆಚ್ಚಿರುವುದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಗೌರವ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ಧಾರ್ಮಿಕ ಪ್ರವಾಸದ ಯೋಜನೆ ರೂಪಿಸುವಿರಿ. ಹಳೆಯ ಗೆಳೆಯರ ಭೇಟಿ ಹೊಸ ಅವಕಾಶಗಳನ್ನು ತರಬಹುದು. ವಾಹನ ಚಾಲನೆಯಲ್ಲಿ ಅತೀವ ಜಾಗ್ರತೆ ಅಗತ್ಯ. ಹೂಡಿಕೆಯಲ್ಲಿ ಲಾಭವಿದ್ದರೂ ಆತುರ ಬೇಡ. ಮಾನಸಿಕವಾಗಿ ಸದೃಢರಾಗಿ ಕಾರ್ಯನಿರ್ವಹಿಸಿ, ನಿಮ್ಮ ಗುರಿಯನ್ನು ತಲುಪಲು ಈ ವಾರ ಪೂರಕವಾಗಿದೆ.

​ಮಕರ:

ಶನಿಯ ಪ್ರಭಾವದಿಂದ ಕೆಲಸದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗಬಹುದು. ಆರ್ಥಿಕವಾಗಿ ಸಾಮಾನ್ಯ ಫಲಿತಾಂಶವಿರಲಿದೆ. ನ್ಯಾಯಾಲಯದ ಕೆಲಸಗಳಲ್ಲಿ ಜಯ ಸಿಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ದೊರೆತರೂ ಶಾಶ್ವತವಾಗಿರುತ್ತದೆ. ಕಣ್ಣಿನ ಸಮಸ್ಯೆ ಅಥವಾ ನಿದ್ರಾಹೀನತೆ ಕಾಡಬಹುದು. ಹೊಸಬರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಕಾದಿದೆ. ಪೋಷಕರ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ. ವಾರದ ಕೊನೆಯಲ್ಲಿ ಅನಿರೀಕ್ಷಿತ ಅತಿಥಿಗಳ ಆಗಮನ ಸಂತಸ ನೀಡಲಿದೆ.

​ಕುಂಭ:

ನಿಮ್ಮ ರಾಶಿಯಲ್ಲಿ ಗ್ರಹಗಳ ಸಂಚಾರವು ಹೊಸ ಹಾದಿಗಳನ್ನು ತೆರೆಯಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಕಲಾ ಮತ್ತು ತಾಂತ್ರಿಕ ಕ್ಷೇತ್ರದವರಿಗೆ ಸುವರ್ಣ ಅವಕಾಶಗಳು ಲಭಿಸಲಿವೆ. ಶತ್ರುಗಳ ಸಂಚು ವಿಫಲವಾಗಲಿದೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ. ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗುವಿರಿ. ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗು ಬರಲಿದ್ದು, ಎಲ್ಲರ ಗಮನ ಸೆಳೆಯುವಿರಿ. ಆದಾಯ ಹೆಚ್ಚಿಸಲು ಹೊಸ ಯೋಜನೆಗಳನ್ನು ರೂಪಿಸಿ.

​ಮೀನ:

ಗುರುವಿನ ಸ್ಥಾನವು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ನೀಡಲಿದೆ. ವಿದೇಶಿ ಸಂಬಂಧಗಳಿಂದ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಕಂಡುಬರಲಿದೆ. ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಇದು ಸಕಾಲ. ವಿಶ್ರಾಂತಿ ಅಗತ್ಯ. ದಾನ ಧರ್ಮದ ಕಡೆಗೆ ಒಲವು ಹೆಚ್ಚಾಗಲಿದೆ. ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ವಾರದ ಅಂತ್ಯಕ್ಕೆ ಧನಲಾಭ ಮತ್ತು ಕುಟುಂಬದವರೊಂದಿಗೆ ಸಂತಸದ ಸಮಯ ಕಳೆಯುವ ಯೋಗವಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!ಎಸಿ ಗೋದಾಮಿಗೂ ತಗುಲಿದ ಬೆಂಕಿ – Kannada News | Makali Warehouse Fire: Short Circuit Leads to Multi Warehouse Blaze

ನೆಲಮಂಗಲ, ಫೆಬ್ರವರಿ 22: ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ತಾಲೂಕಿನ ಮಾಕಳಿ ಬಳಿಯ ಒಂದು ಪ್ರಮುಖ ವೇರ್‌ಹೌಸ್ ಸಂಕೀರ್ಣದಲ್ಲಿ ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಿಂದ ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸುಗಂಧ ದ್ರವ್ಯಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಭೀಕರ ಬೆಂಕಿ ಕಾಣಿಸಿಕೊಂಡಿದೆ.

ವೇಗವಾಗಿ ಹರಡಿದ ಬೆಂಕಿ ಕೇವಲ ಒಂದು ಗಂಟೆಯೊಳಗೆ ಅಕ್ಕ ಪಕ್ಕದ ಮೂರರಿಂದ ನಾಲ್ಕು ಗೋದಾಮುಗಳಿಗೆ ವ್ಯಾಪಿಸಿದೆ. ಈ ಗೋದಾಮುಗಳಲ್ಲಿ ನಾಯಿಗಳ ಆಹಾರ ಸಂಗ್ರಹಿಸುವ ಪೆಡಿಗ್ರಿ ಗೋದಾಮು, ಎಸಿ ಸಾಮಗ್ರಿಗಳನ್ನು ಸಂಗ್ರಹಿಸುವ ಎಸಿ ಗೋದಾಮುಗಳು ಸೇರಿವೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಶೇಷವಾಗಿ, ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಎಚ್‌ಪಿ ಗ್ಯಾಸ್ ಸಿಲಿಂಡರ್ ಸಂಗ್ರಹವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಭಾರತದ ಅತಿವೇಗದ ಮೆಟ್ರೋ ಮತ್ತು ನಮೋ ಭಾರತ್ ಕಾರಿಡಾರ್ ಉದ್ಘಾಟಿಸಿದ ಪಿಎಂ ಮೋದಿ – Kannada News | PM Narendra Modi launches Meerut Metro and Namo Bharat rail corridor

ನವದೆಹಲಿ, ಫೆಬ್ರುವರಿ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಭಾನುವಾರ ಎರಡು ಮಹತ್ವದ ಇನ್​ಫ್ರಾಸ್ಟ್ರಕ್ಚರ್ ಸೇವೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಉತ್ತರಪ್ರದೇಶದ ಮೀರತ್ ನಗರದಲ್ಲಿ ಮೆಟ್ರೋ ಸರ್ವಿಸ್​ಗೆ (Meerut Metro) ಚಾಲನೆ ನೀಡಿದ್ದಾರೆ. ಹಾಗೆಯೇ, ದೆಹಲಿಯಿಂದ ಮೀರತ್​ವರೆಗಿನ ರಾಪಿಡ್ ರೈಲ್ ಕಾರಿಡಾರ್ (Delhi Meerut Rapid Rail Corridor) ಅನ್ನೂ ಆರಂಭಿಸಿದ್ದಾರೆ. ದೆಹಲಿ-ಮೀರತ್ ರೈಲು ಕಾರಿಡಾರ್​ನಲ್ಲಿರುವ ಶತಾಬ್ದಿ ನಗರ್ ನಿಲ್ದಾಣದಿಂದ ನಮೋ ಭಾರತ್ ಟ್ರೈನ್​ಗೆ ಪಿಎಂ ಚಾಲನೆ ಕೊಟ್ಟಿದ್ದಾರೆ.

ಭಾರತದ ಅತಿವೇಗದ ಮೆಟ್ರೋ ಸಿಸ್ಟಂ

ಮೀರತ್ ಮೆಟ್ರೋದಲ್ಲಿ ಆಪರೇಷನಲ್ ಸ್ಪೀಡ್ 120 ಕಿಮೀ ಇದೆ. ಇದು ಭಾರತದ ಅತಿವೇಗದ ಮೆಟ್ರೋ ಸಿಸ್ಟಂ ಎನಿಸಿದೆ. ಇದು 23 ಕಿಮೀ ರೈಲ್ ನೆಟ್ವರ್ಕ್ ಹೊಂದಿದೆ. ಈ 23 ಕಿಮೀ ಕಾರಿಡಾರ್​ನಲ್ಲಿ 16 ಕಿಮೀ ಎಲಿವೇಟೆಡ್ ಟ್ರ್ಯಾಕ್ ಆಗಿದೆ. ಉಳಿದ 7 ಕಿಮೀ ಟ್ರ್ಯಾಕ್ ಅಂಡರ್​ಗ್ರೌಂಡ್​ನಲ್ಲಿ ಸಾಗುತ್ತದೆ. ಈ ಕಾರಿಡಾರ್​ನಲ್ಲಿ 21 ಕಿಮೀ ದೂರವನ್ನು ಕೇವಲ 30 ನಿಮಿಷದಲ್ಲಿ ಕ್ರಮಿಸಬಲ್ಲುದು ಮೆಟ್ರೋ ಟ್ರೈನುಗಳು.

ಇದನ್ನೂ ಓದಿ: ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು

ಈ ಮೆಟ್ರೋ ಸಿಸ್ಟಂನಲ್ಲಿ 12 ಸ್ಟೇಷನ್​ಗಳಿವೆ. ಪೀಕ್ ಅವರ್​ನಲ್ಲಿ ಇಲ್ಲಿ ರೈಲುಗಳು 5ರಿಂದ 10 ನಿಮಿಷಗಳಿಗೊಮ್ಮೆ ಓಡುತ್ತವೆ. ಪೀಕ್ ಅಲ್ಲದ ಸಮಯಗಳಲ್ಲಿ 10ರಿಂದ 15 ನಿಮಿಷಕ್ಕೊಮ್ಮೆ ಟ್ರೈನುಗಳು ಆಪರೇಟ್ ಆಗುತ್ತವೆ.

ದೆಹಲಿ ಮೀರತ್ ನಮೋ ಭಾರತ್ ಕಾರಿಡಾರ್…

ದೆಹಲಿಯಿಂದ ಮೀರತ್​ವರೆಗೆ 82 ಕಿಮೀ ನಮೋ ಭಾರತ್ ಕಾರಿಡಾರ್ ನಿರ್ಮಾಣವಾಗಿದೆ. ವಿವಿಧ ಹಂತಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈ ಟ್ರ್ಯಾಕ್​ನಲ್ಲಿ ನಮೋ ಭಾರತ್ ಸೆಮಿ ಸ್ಪೀಡ್ ಟ್ರೈನುಗಳು ಚಲಿಸುತ್ತವೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಅವಧಿ ಎರಡು ಗಂಟೆಯಿಂದ 55 ನಿಮಿಷಕ್ಕೆ ಇಳಿಕೆ ಆಗುತ್ತದೆ. ನಮೋ ಭಾರತ್ ಟ್ರೈನುಗಳನ್ನು 180 ಕಿಮೀ ವೇಗದಲ್ಲಿ ಚಲಿಸುವಂತೆ ಡಿಸೈನ್ ಮಾಡಲಾಗಿದೆ. ಇದರ ಗರಿಷ್ಠ ಆಪರೇಷನಲ್ ಸ್ಪೀಡ್ 160 ಕಿಮೀ ಇದೆ. ಸರಾಸರಿ ವೇಗ 90 ಕಿಮೀಯಾಗಿದೆ.

ಇದನ್ನೂ ಓದಿ: Mann Ki Baat: AI ಇಂಪ್ಯಾಕ್ಟ್ ಸಮಿಟ್, ಡಿಜಿಟಲ್​​ ವಂಚನೆ ಸೇರಿ ಹಲವು ಅಂಶ ಉಲ್ಲೇಖಿಸಿದ ನಮೋ

ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ ಮೀರತ್ ನಗರವು ದೆಹಲಿಯಿಂದ ಸುಮಾರು 100 ಕಿಮೀ ದೂರದಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು! – Kannada News | Crime Wave in Karnataka: Bengaluru Gold Theft, Hassan Home Break in, Mysore Temple Robbery

ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ನೆಲಮಂಗಲ, ಫೆಬ್ರವರಿ 22: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ನಾಗಸಂದ್ರದ ಪೂರನ್ ಜ್ಯುವೆಲರ್ಸ್‌ನಲ್ಲಿ ಚಿನ್ನ ಖರೀದಿ ನೆಪದಲ್ಲಿ ಬಂದಿದ್ದ ಕಳ್ಳನು (Gold Theft) ಅಟೆಂಶನ್ ಡೈವರ್ಶನ್ ತಂತ್ರ ಬಳಸಿ ಸುಮಾರು 3 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮಹೇಂದ್ರ ಅವರ ಮಾಲಿಕತ್ವದ ಅಂಗಡಿಯಲ್ಲಿ ಉಂಗುರ ತೂಕ ತೋರಿಸುವಂತೆ ಕೇಳಿ ಗಮನ ಬೇರೆಡೆ ಸೆಳೆದ ಕಳ್ಳ, ಅಸಲಿ ಉಂಗುರ ಬದಲು ನಕಲಿ ಉಂಗುರವನ್ನು ಟ್ರೇನಲ್ಲಿ ಇಟ್ಟು ಪರಾರಿಯಾಗಿದ್ದಾನೆ. ಕಳ್ಳನ ಕೈಚಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳ್ಳತನ ಮಾಡಲು ಬಂದವನಿಗೆ ಹಿಗ್ಗಾಮುಗ್ಗಾ ಥಳಿತ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಐವರು ಕದೀಮರಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನದ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ನಡೆದಿದೆ. ಕಾರಿನಲ್ಲಿ ಬಂದಿದ್ದ ಗ್ಯಾಂಗ್, ಮನೆಯ ಲಾಕ್ ಮುರಿಯಲು ಡ್ರ್ಯಾಗರ್ ಸೇರಿದಂತೆ ಉಪಕರಣಗಳನ್ನು ತಂದಿತ್ತು ಎನ್ನಲಾಗಿದೆ. ಮನೆ ಮಾಲೀಕ ಸಂತೋಷ್ ಮೊಬೈಲ್‌ನಲ್ಲಿ ಸಿಸಿಟಿವಿ ದೃಶ್ಯ ಗಮನಿಸಿ ತಕ್ಷಣ ಸ್ನೇಹಿತರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕಳ್ಳರನ್ನು ಹಿಡಿಯಲು ಯತ್ನಿಸಿದಾಗ ಮೂವರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವಸ್ಥಾನದ ಹುಂಡಿ ಹಣ ಕಳವು

ಮತ್ತೊಂದೆಡೆ ದೇಗುಲದಲ್ಲಿ ಕಳ್ಳತನ ನಡೆದಿರುವ ಘಟನೆ ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೈಸೂರು–ಬೆಂಗಳೂರು ರಸ್ತೆಯಲ್ಲಿರುವ ಷಷ್ಠಿ ಸುಬ್ರಮಣ್ಯ ಸ್ವಾಮಿ ದೇಗುಲದ ಬೀಗ ಮುರಿದು ಒಳನುಗ್ಗಿದ ಖದೀಮರು, ದೇವಾಲಯದ ಗೋಲಕವನ್ನು ಹೊರಗೆ ತೆಗೆದುಕೊಂಡು ಹೋಗಿ ಒಡೆದು ಹಣ ಕಳವು ಮಾಡಿದ್ದಾರೆ. ಘಟನೆ ಬೆಳಗ್ಗೆ ತಿಳಿದುಬಂದಿದ್ದು, ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version