ಎರಡು ವರ್ಷದ ಬಳಿಕ ಶುರುವಾಗುತ್ತಿದೆ ‘ಕಲ್ಕಿ 2’ ಶೂಟಿಂಗ್, ‘ಸಲಾರ್ 2’ ಯಾವಾಗ? – Kannada News | Kalki 2898 AD movie sequel shooting starting in February

ಪ್ರಭಾಸ್ ಭಾರತದ ಸ್ಟಾರ್ ಪ್ಯಾನ್ ಇಂಡಿಯಾ (Pan Inda) ನಟ. ಅವರೆಷ್ಟು ಬ್ಯುಸಿ ಎಂದರೆ ಮುಂದಿನ ಮೂರು ನಾಲ್ಕು ವರ್ಷಗಳಿಗೆ ಈಗಲೇ ಡೇಟ್ಸ್ ಕೊಟ್ಟು ಕೂತಿದ್ದಾರೆ. ಒಟ್ಟಿಗೆ ಎರಡೆರಡು ಸಿನಿಮಾಗಳಲ್ಲಿ ನಟಿಸಿದರೂ ಈಗಿರುವ ಕಮಿಟ್​​ಮೆಂಟ್ ಮುಗಿಸಲು ಎರಡು ವರ್ಷವಾದರೂ ಬೇಕು. ಪ್ರಭಾಸ್ ಎಷ್ಟು ಬ್ಯುಸಿ ಎಂದರೆ ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿರುವ ಸಿನಿಮಾಗಳ ಸೀಕ್ವೆಲ್​​ಗಳ ಭವಿಷ್ಯವೂ ಅತಂತ್ರದಲ್ಲಿದೆ. ಪ್ರಭಾಸ್ ಕೈಯಲ್ಲಿ ಪ್ರಸ್ತುತ ಎರಡು ಸೀಕ್ವೆಲ್ ಸಿನಿಮಾಗಳಿವೆ. ಒಂದು ‘ಕಲ್ಕಿ 2898 ಎಡಿ’ ಮತ್ತು ‘ಸಲಾರ್’ ಈ ಎರಡರಲ್ಲಿ ಮೊದಲಿಗೆ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ರಭಾಸ್ ಪ್ರಾರಂಭಿಸುತ್ತಿದ್ದಾರೆ. ಆದರೆ ‘ಸಲಾರ್’ ಸೀಕ್ವೆಲ್ ಭವಿಷ್ಯ ಈಗಲೂ ಅತಂತ್ರದಲ್ಲಿಯೇ ಇದೆ.

ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿದ್ದ ‘ಸಲಾರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ‘ಸಾಹೋ’, ‘ರಾಧೆ-ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳ ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಅವರನ್ನು ಸೋಲಿನ ಸುಳಿಯಿಂದ ಹೊರತಂಡ ಸಿನಿಮಾ ಅದಾಗಿತ್ತು. ಆದರೆ ‘ಸಲಾರ್’ ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಆದರೆ ಸಿನಿಮಾದ ಸೀಕ್ವೆಲ್ ಬಗ್ಗೆ ಯಾವುದೇ ಸುದ್ದಿ ಇಲ್ಲ. ಆದರೆ ‘ಸಲಾರ್’ ಬಿಡುಗಡೆ ಆಗಿ ಆರು ತಿಂಗಳ ಬಳಿಕ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನ ಚಿತ್ರೀಕರಣಕ್ಕೆ ಓಕೆ ಹೇಳಿದ್ದಾರೆ ಪ್ರಭಾಸ್.

ಇದನ್ನೂ ಓದಿ:ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ?

‘ಕಲ್ಕಿ 2898 ಎಡಿ’ ಸಿನಿಮಾ 2024ರ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಕಲೆಕ್ಷನ್ ಮಾಡಿತು. ಇದೀಗ ಈ ಸಿನಿಮಾದ ಸೀಕ್ವೆಲ್ ಚಿತ್ರೀಕರಣಕ್ಕೆ ಒಪ್ಪಿಗೆ ಸೂಚಿಸಿರುವ ಪ್ರಭಾಸ್, ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆದರೆ ಅದಕ್ಕೂ ಮುಂಚೆ ಬಿಡುಗಡೆ ಆಗಿದ್ದ ‘ಸಲಾರ್’ ಸಿನಿಮಾದ ಬಗ್ಗೆ ಯಾವುದೇ ಸದ್ದಿಲ್ಲ.

‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದರು. ಆದರೆ ಸೀಕ್ವೆಲ್​​ನಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಬೇರೆ ನಟಿಯೊಬ್ಬರು ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ. ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಬಹುಷಃ 2027ರ ಆರಂಭದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ ಬಿಡುಗಡೆ ಆಗಲಿದೆ. ಸೀಕ್ವೆಲ್​​ನಲ್ಲಿ ಕಮಲ್ ಹಾಸನ್ ಅವರು ಪ್ರಭಾಸ್ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್​ಕುಮಾರ್ – Kannada News | Shivarajkumar talk about Dhurandhar Movie in Mumbai during 45 movie press meet

ನಟ ಶಿವರಾಜ್​ಕುಮಾರ್ ಅವರು ಮುಂಬೈಗೆ ತೆರಳಿದ್ದಾರೆ. ಕನ್ನಡದ ‘45’ ಸಿನಿಮಾ (45 Movie) ಹಿಂದಿಯಲ್ಲಿ ಕೂಡ ಬಿಡುಗಡೆ ಆಗಲಿದ್ದು, ಆ ಚಿತ್ರದ ಪ್ರಚಾರವನ್ನು ಅವರು ಮುಂಬೈನಲ್ಲಿ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಭಾಗಿಯಾಗಿದ್ದಾರೆ. ಈ ವೇಳೆ ಅವರಿಗೆ ‘ಧುರಂಧರ್’ (Dhurandhar) ಸಿನಿಮಾ ಬಗ್ಗೆ ಹೇಳಲಾಯಿತು. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆ ಸಿನಿಮಾದಲ್ಲಿ ತಮಗೆ ಏನು ಇಷ್ಟ ಆಯಿತು ಎಂಬುದನ್ನು ಶಿವರಾಜ್​​ಕುಮಾರ್ (Shivarajkumar) ಅವರು ವಿವರಿಸಿದ್ದಾರೆ.

‘ಧುರಂಧರ್ ಸಿನಿಮಾ ಬಹಳ ಚೆನ್ನಾಗಿದೆ. ಸಿನಿಮಾದ ಮೇಕಿಂಗ್ ಮತ್ತು ಎಮೋಷನ್ ಚೆನ್ನಾಗಿದೆ. ಎಲ್ಲರ ನಟನೆ ಅತ್ಯುತ್ತಮವಾಗಿದೆ. ಅಕ್ಷಯ್ ಖನ್ನಾ ನಟನೆ ನನಗೆ ಇಷ್ಟ ಆಯಿತು. ಹಾಗೆಯೇ ರಣವೀರ್ ಸಿಂಗ್ ಕೂಡ ಅಮೇಜಿಂಗ್. ಪಾತ್ರಕ್ಕೆ ಬೇಕಾದ ಸೂಕ್ಷ್ಮವಾದ ಅಭಿನಯವನ್ನು ಅವರು ನೀಡಿದ್ದಾರೆ. ಏನು ಬೇಕಾದರೂ ಮಾಡುವ ಅವಕಾಶ ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ ಇದೆ. ಆದರೆ ರಣವೀರ್ ಸಿಂಗ್ ಮಾಡಿದ ಪಾತ್ರ ಅಷ್ಟು ಸುಲಭವಲ್ಲ’ ಎಂದು ಶಿವರಾಜ್​​ಕುಮಾರ್ ಅವರು ಹೇಳಿದ್ದಾರೆ.

ಈ ಮೊದಲೇ ಶಿವರಾಜ್​​ಕುಮಾರ್ ಅವರಿಗೆ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ನಟಿಸಿರಲಿಲ್ಲ. ‘ಈಗ ಒಂದು ವೇಳೆ ಬಾಲಿವುಡ್ ಸಿನಿಮಾ ಮಾಡುವುದಾದರೆ ಅದು ಹಾಡು, ಡ್ಯಾನ್ಸ್ ಇರುವ ಕಮರ್ಷಿಯಲ್ ಸಿನಿಮಾ ಆಗಿರಬೇಕು. ಆ ಮೂಲಕ ಜನರ ಹೃದಯವನ್ನು ತಲುಪಬೇಕು. ಜನರು ನನ್ನನ್ನು ಪಾತ್ರವಾಗಿ ನೋಡಬೇಕು. ಭಾರತೀಯ ಸಂಸ್ಕೃತಿಯ ಭಾಗ ಆಗಿರಬೇಕು’ ಎಂದಿದ್ದಾರೆ ಶಿವಣ್ಣ.

ಕನ್ನಡ ಚಿತ್ರರಂಗವನ್ನು ಬಾಲಿವುಡ್ ಮಂದಿ ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ: ಚಾಪ್ಟರ್ 1’ ಮುಂತಾದ ಸಿನಿಮಾಗಳ ಮೂಲಕ ಗುರುತಿಸುತ್ತಾರೆ. ಆ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದ ಬಗ್ಗೆ ಹಿಂದಿ ಪ್ರೇಕ್ಷಕರು ಕೂಡ ಮಾತನಾಡುವಂತಾಗಿದೆ. ‘ನಮಗೆ ಆ ಸಿನಿಮಾಗಳ ಯಶಸ್ಸಿನಿಂದ ಹೆಮ್ಮೆ ಆಗಿದೆ. ಅವರು ಪ್ರಯತ್ನ ಮಾಡದೇ ಇದ್ದಿದ್ದರೆ ಈ ಸಿನಿಮಾಗಳು ಇಲ್ಲಿಗೆ ಬರುತ್ತಿರಲಿಲ್ಲ. ಅವರು ಧೈರ್ಯ ತೋರಿಸಿದರು. ಈಗ ನಾವು 45 ಸಿನಿಮಾ ತಂಡದವರು ಬಂದಿದ್ದೇವೆ. ಏನಾಗುತ್ತದೋ ನೋಡೋಣ’ ಎಂದು ಶಿವರಾಜ್​ಕುಮಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ?

ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ‘45’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿದ್ದಾರೆ. ಉಪೇಂದ್ರ, ರಾಜ್ ಬಿ. ಶೆಟ್ಟಿ, ಶಿವರಾಜ್​​ಕುಮಾರ್ ಅವರು ಒಟ್ಟಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರಚಾರ ಕಾರ್ಯದಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಶ್ನೆಪತ್ರಿಕೆ ಲೀಕ್: ಆದ್ರೂ ನಡೆಯಿತು ಪರೀಕ್ಷೆ! – Kannada News | Bengaluru city university bcom 5th semester question paper leaked Before Exam

ಬೆಂಗಳೂರು, (ಜನವರಿ 02): ಹೊಸ ವರ್ಷದಂದೇ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ (BCU) ಬಿಕಾಂ 5ನೇ ಸೆಮಿಸ್ಟರ್‌ನ ‘ಅಡ್ವಾನ್ಸ್ ಅಕೌಂಟಿಂಗ್’ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನ ಸೋರಿಕೆಯಾಗಿದೆ. ಇಂದು (ಜನವರಿ 02) ಬಿಕಾಂ ಐದನೇ ಸೆನಿಸ್ಟರ್ ಅಡ್ವಸನ್ಸ್ ಅಕೌಂಟಿಂಗ್ ಪರೀಕ್ಷೆ ಮುಗಿದು ಹೋಗಿದೆ. ಆದ್ರೆ, ಪರೀಕ್ಷೆಗೂ ಮುನ್ನ ಅಂದರೆ ನಿನ್ನೆ(ಜನವರಿ 01) ಸಂಜೆಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಅಕ್ರಮದ ಹಿಂದೆ ಖಾಸಗಿ ಕಾಲೇಜುಗಳ ಕೈವಾಡವಿದೆ ಎಂದು NSUI ಆರೋಪಿಸಿದ್ದು, ವಿವಿ ಪರೀಕ್ಷಾ ವಿಭಾಗದ ಮೌನವು ಅನುಮಾನಕ್ಕೆ ಕಾರಣವಾಗಿದೆ.

ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಲೀಕ್!

ಇಂದು ಜರುಗಿದ ಬಿಕಾಂ ಐದನೇ ಸೆಮಿಸ್ಟರ್‌ನ ‘ಅಡ್ವಾನ್ಸ್ ಅಕೌಂಟಿಂಗ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ನಿನ್ನೆ ಸಂಜೆಯೇ ಲೀಕ್ ಆಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನಿನ್ನೆ ಸಂಜೆಯಿಂದಲೇ ಪ್ರಶ್ನೆಪತ್ರಿಕೆಯ ಪ್ರತಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ಇಂದು ಪರೀಕ್ಷಾ ಕೇಂದ್ರದಲ್ಲಿ ನೀಡಲಾದ ಪ್ರಶ್ನೆಪತ್ರಿಕೆಗೂ ಲೀಕ್ ಆದ ಪೇಪರ್‌ಗೂ ಸಂಪೂರ್ಣ ಸಾಮ್ಯತೆ ಇರುವುದು ದೃಢಪಟ್ಟಿದೆ. ಇನ್ನು ಈ ವ್ಯವಸ್ಥಿತ ನಕಲು ದಂಧೆಯ ಹಿಂದೆ ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ತಮ್ಮ ಕಾಲೇಜಿನ ಫಲಿತಾಂಶ ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಪರೀಕ್ಷಾ ವಿಭಾಗದ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಪ್ರಶ್ನೆಪತ್ರಿಕೆಯನ್ನು ಮೊದಲೇ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ

ವಿದ್ಯಾರ್ಥಿ ಸಂಘಟನೆ NSUI ಈ ವಿಚಾರದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಸಮರ ಸಾರಿದೆ. ಇಂದಿನ ಪ್ರಶ್ನೆಪತ್ರಿಕೆ ನಿನ್ನೆ ಸಂಜೆಯೇ ನಮಗೆ ಲಭ್ಯವಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಿಗೆ ಇದು ಮಾಡಿದ ದ್ರೋಹ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಇದ್ದರೂ ಸಹ ಬೆಂಗಳೂರು ನಗರ ವಿವಿಯ ಪರೀಕ್ಷಾ ವಿಭಾಗ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಗರಣದ ಬಗ್ಗೆ ವಿಶ್ವವಿದ್ಯಾಲಯವು ಮೌನಕ್ಕೆ ಶರಣಾಗಿರುವುದು ವಿದ್ಯಾರ್ಥಿಗಳ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:43 pm, Fri, 2 January 26

Source link

ಮನೆ ಹೆಸರಲ್ಲಿ ಮಸೀದಿ ನಿರ್ಮಾಣ: ರೊಚ್ಚಿಗೆದ್ದ ಹಿಂದೂ ಸಂಘಟನೆಗಳು – Kannada News | Hubballi Protest: Alleged Illegal Mosque in Nekara Nagar Triggers Public Protest

ಅಕ್ರಮವಾಗಿ ನಿರ್ಮಿಸಿರುವ ಮಸೀದಿ, ಹಿಂದೂಗಳಿಂದ ಪ್ರತಿಭಟನೆ

ಹುಬ್ಬಳ್ಳಿ, ಜನವರಿ 02: ನಗರದ ನೇಕಾರ ನಗರದ ಶಿವನಾಗರ ಬಡಾವಣೆಯಲ್ಲಿ ಕುಟುಂಬವೊಂದು ಮನೆ ನಿರ್ಮಾಣಕ್ಕೆ ಪಾಲಿಕೆಯಿಂದ ಪರವಾನಗಿ ಪಡೆದು ಮನೆ ನಿರ್ಮಾಣ ಮಾಡಿತ್ತು. ಆದರೆ ಹಿಂದೂ ಧರ್ಮದವರು ಹೆಚ್ಚಿರುವ ಸ್ಥಳದಲ್ಲಿ ಮುಸ್ಲಿಂ ಸಮುದಾಯ ಮನೆ ಕಟ್ಟಿದ್ದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮನೆ ಕಟ್ಟಿದವರು ವಾಸಿಸುವ ಬದಲು, ಅದನ್ನು ಮಸೀದಿಯಾಗಿ (Mosque)  ಬದಲಾವಣೆ ಮಾಡಲಾಗಿದೆ. ಮನೆ ಮುಂದೆಯೇ ಮಸೀದಿ ನಿರ್ಮಾಣ ಮಾಡಿ, ಪ್ರತಿನಿತ್ಯ ನೂರಾರು ಜನರು ನಮಾಜ್ ಮಾಡಲು ಆರಂಭಿಸಿದ್ದರು. ಇದು ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವುಗೊಳಿಸಬೇಕು ಅಂತ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ (Protest) ಮಾಡಿದ್ದಾರೆ.

ಹುಬ್ಬಳ್ಳಿ  ನಗರದ ನೇಕಾರನಗರ, ಶಿವನಾಗರ ಬಡಾವಣೆ, ಛಬ್ಬಿ ಪ್ಲಾಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಶೇಕಡಾ 95ಕ್ಕೂ ಹೆಚ್ಚು ಹಿಂದೂಗಳೇ ವಾಸವಾಗಿದ್ದಾರೆ. ಆದರೆ ಇದೇ ಛಬ್ಬಿ ಪ್ಲಾಟ್ ಮತ್ತು ಶಿವನಾಗರ ಬಡಾವಣೆಗೆ ಹೊಂದಿಕೊಂಡು ಮುಸ್ಲಿಂ ಸಮುದಾಯದವರೊಬ್ಬರು ಮನೆ ಕಟ್ಟಿಕೊಂಡಿದ್ದಾರೆ. ಇಲ್ಲಿನ ಜನರು ಅನ್ಯ ಧರ್ಮೀಯರು ಮನೆ ಕಟ್ಟಿಕೊಂಡಿದ್ದಕ್ಕೆ, ಅವರು ಅಲ್ಲೇ ವಾಸವಾಗಿದ್ದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮನೆ ನಿರ್ಮಾಣ ಮಾಡಿದ್ದ ಜಹೀರ್ ಸಾರವಾಡ್, ಜಾಕೀರ್ ಸಾರವಾಡ್ ಅನ್ನೋ ಸಹೋದರರು, ಅಲ್ಲಿ ವಾಸವಾಗದೇ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು

ಪಾಲಿಕೆಯಿಂದ ಪರವಾನಗಿ ಪಡೆದಿದ್ದು ಮನೆಗಾಗಿ, ಆದರೆ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರಂತೆ. ಜೊತೆಗೆ ಅಲ್ಲಿ ಪ್ರತಿನಿತ್ಯ ಐವತ್ತರಿಂದ ನೂರು ಜನರು ಆಗಮಿಸಿ ನಮಾಜ್ ಮಾಡೋದು ಮಾಡುತ್ತಿದ್ದರಂತೆ. ಇದು ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಸುತ್ತಮುತ್ತ ಮೂರು ಮಸೀದಿಗಳಿವೆ. ಇದೀಗ ಮತ್ತೆ ಮನೆಯೊಂದರಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಿದ್ದಾರೆ ಅಂತ ಆರೋಪಿಸಿ, ಅದನ್ನು ತೆರವುಗೊಳಿಸಬೇಕು ಅಂತ ಆಗ್ರಹಿಸಿದ್ದರು.

ಕಳೆದ ಐದಾರು ತಿಂಗಳಿಂದ ಸ್ಥಳೀಯರು ಮತ್ತು ಮಸೀದಿ ನಿರ್ಮಾಣ ಮಾಡಿದ್ದ ಸಾರವಾಡ್ ಕುಟುಂಬದವರ ನಡುವೆ ವಾಗ್ವಾದಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದವು. ಈ ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮಟ್ಟಿಲೇರಿತ್ತು. ಪೊಲೀಸರು ಕೂಡ ಎರಡು ಕಡೆಯವರನ್ನು ಕರೆಸಿ, ಶಾಂತಿ ಸುವ್ಯವಸ್ಥೆ ಹಾಳು ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅನ್ಯ ಧರ್ಮೀಯರು, ನಮಾಜ್ ಮಾಡುವುದು ಮುಂದುವರಿಸಿದ್ದರಿಂದ ಹಿಂದೂ ಧರ್ಮೀಯರು ಹೋರಾಟಕ್ಕೆ ಕರೆ ಕೊಟ್ಟಿದ್ದರು. ಇಂದು ಹುಬ್ಬಳ್ಳಿ ನಗರದ ನೇಕಾರ ನಗರದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಸೇರಿದ್ದ ನೂರಾರು ಜನರು ಪ್ರತಿಭಟನೆ ಮಾಡಿದರು.

ಮಸೀದಿ ತೆರವುಗೊಳಿಸದಿದ್ದರೆ ಮತ್ತೆ ಹೋರಾಟ ಎಂದ ಪ್ರಮೋದ್ ಮುತಾಲಿಕ್

ಪ್ರತಿಭಟನೆ ಹಿನ್ನೆಲೆಯಲ್ಲಿ ನೇಕಾರ ನಗರ ಸೇರಿದಂತೆ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳದ ಸುತ್ತಮುತ್ತ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆಮ ಮಾಡಲಾಗಿತ್ತು. ಬ್ಯಾರಿಕೇಡ್​ಗಳನ್ನು ಹಾಕಿ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳಕ್ಕೆ ಬೇರೆಯವರು ಹೋಗದಂತೆ ನಿಷೇಧ ಹೇರಲಾಗಿತ್ತು. ಇನ್ನು ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು. ಮನೆ ನಿರ್ಮಾಣ ಅಂತ ಹೇಳಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಪ್ರತಿನಿತ್ಯ ನೂರಾರು ಜನರು ಬಂದು ನಮಾಜ್ ಮಾಡ್ತಿದ್ದಾರೆ. ಸುತ್ತಮುತ್ತ ಮೂರು ಮಸೀದಿಗಳಿದ್ದರು ಕೂಡ, ಮತ್ತೊಂದು ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ನಾವು ಎಲ್ಲಿಯಾದರೂ ಪ್ರಾರ್ಥನೆ ಮಾಡಿದರೆ, ದೇವಸ್ಥಾನ ಕಟ್ಟಿದ್ದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ಅವುಗಳನ್ನು ತೆರವು ಮಾಡುತ್ತಾರೆ. ಆದರೆ ಇಲ್ಲಿ ಪರವಾನಗಿ ಪಡೆಯದೇ ಮಸೀದಿ ನಿರ್ಮಾಣ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರದೊಳಗೆ ನಿರ್ಮಾಣ ಮಾಡಿರುವ ಮಸೀದಿಯನ್ನು ತೆರವುಗೊಳಿಸದೇ ಇದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ನಮ್ಮ ಮೇಲೆ ಕೃಪೆ ತೋರಿ’: ಮಂತ್ರಾಲಯದ ರಾಯರಿಗೆ ವಿಚಿತ್ರ ಪತ್ರ ಬರೆದ ಉದ್ಯೋಗಾಕಾಂಕ್ಷಿಗಳು

ಘಟನಾ ಸ್ಥಳಕ್ಕೆ ಗುರುವಾರ ಪಾಲಿಕೆ ಮೇಯರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಕ್ರಮವಾಗಿ ನಿರ್ಮಾಣ ಮಾಡಿರುವ ಮಸೀದಿ ತೆರವಿಗೆ ಗಡುವು ನೀಡಿದ್ದಾರೆ. ಇನ್ನು ಹಿಂದೂಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿವೃತ್ತ ಶಿಕ್ಷಕನಿಗೆ ಡಿಜಿಟಲ್​​ ಅರೆಸ್ಟ್​ ಬೆದರಿಕೆ: ಇರುವ ಹಣವೆಲ್ಲ ಕೊಟ್ಟು ಯಾಮಾರಿದ ವ್ಯಕ್ತಿ – Kannada News | Digital Arrest Scam: Retired Teacher Loses 1.6 Cr to Cyber Fraud in Uttara Kannada

ಕಾರವಾರ, ಜನವರಿ 02: ನಿವೃತ್ತ ಶಿಕ್ಷಕನಿಗೆ ಡಿಜಿಟಲ್​​ ಅರೆಸ್ಟ್​​ ಭೀತಿ ಹುಟ್ಟಿಸಿ ವಂಚಕರು ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್​​ನಲ್ಲಿ ನಡೆದಿದೆ. ಅಪರಿಚಿತರ ಕರೆ ನಂಬಿ ಟಿಬೇಟಿಯನ್ ಕ್ಯಾಂಪ್​ ನಂಬರ್​​ 8ರ ನಿವಾಸಿ ಪಲ್ಡೆನ್ ಲೋಬ್ಸಂಗ್ ಚೊಡಾಕ್ ಮೋಸ ಹೋಗಿದ್ದಾರೆ.

2025ರ ನವೆಂಬರ್ 29ರಂದು ಯುವತಿಯೊಬ್ಬಳು ನಿವೃತ್ತ ಶಿಕ್ಷಕರಿಗೆ ವಿಡಿಯೋ ಕರೆ ಮಾಡಿದ್ದು, ಮುಂಬಯಿಯ ಕೋಲವಾ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್​​ ಮಾತಾಡ್ತಾರೆಂದು ಓರ್ವ ಪುರುಷನಿಗೆ ಫೋನ್​​ ಕೊಟ್ಟಿದ್ದಾಳೆ. ಮುಂಬಯಿನಲ್ಲಿ ಇತ್ತಿಚೆಗೆ ಉಗ್ರವಾದಿಯ ಬಂಧನ ಆಗಿದ್ದು, ಆತನ ಬಳಿ 250ಕ್ಕೂ ಹೆಚ್ಚು ಎಟಿಎಂ ಕಾರ್ಡ್​​ಗಳು ಸಿಕ್ಕಿವೆ. ಅದರಲ್ಲಿ ನಿಮ್ಮ ಹೆಸರಿನ ಕಾರ್ಡ್ ಕೂಡ ಇದೆ. ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೊಟ್ಯಾಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದೆ ಎಂದು ಬೆದರಿಸಿದ್ದಾರೆ. ಮುಖಕ್ಕೆ ಬಟ್ಟೆ ಧರಿಸಿದ್ದವರು ಹೇಳಿದ ಮಾತುಗಳಿಂದ ಭಯಗೊಂಡ ಪಲ್ಡೆನ್, ನನ್ನದೇನೂ ತಪ್ಪಿಲ್ಲ. ಈಗ ನಾನೇನು ಮಾಡಬೇಕು ಹೇಳಿ ಎಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ನಿವೃತ್ತ ಶಿಕ್ಷಕನ ಬಳಿ ಹಣ ಪೀಕಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ವಂಚನೆಗೆ ಹೆದರಿ ಫ್ಲಾಟ್, ಸೈಟ್ ಮಾರಿದ್ದಲ್ಲದೆ ಸಾಲ ಮಾಡಿ 2 ಕೋಟಿ ರೂ. ಕಳೆದುಕೊಂಡ ಮಹಿಳಾ ಟೆಕ್ಕಿ

ತನಿಖೆಗಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನ ಹಂತಹಂತವಾಗಿ ನಮ್ಮ ಖಾತೆಗೆ ಹಾಕಿ. ನಿಮ್ಮ ಹಣವನ್ನ ನ್ಯಾಷನಲ್ ಫಂಡ್​​ಗೆ ಜಮೆ ಮಾಡಬೇಕು. ಬಳಿಕ ಹಣವನ್ನು ರಿಟರ್ನ್ ಕೊಡಲಾಗುವುದೆಂದು ನಂಬಿಸಿದ್ದಾರೆ. ವಿಷಯವನ್ನ ಯಾರೊಂದಿಗೂ ಶೇರ್ ಮಾಡದಂತೆ ಷರತ್ತು ಕೂಡ ವಿಧಿಸಿದ್ದಾರೆ.  ಡಿ. 3ರಿಂದ  11ರ ವರೆಗೆ ಬೇರೆ ಬೇರೆ ಖಾತೆಗೆ ಒಟ್ಟು 1,61,00,047 ರೂಪಾಯಿ ಹಾಕಿಸಿಕೊಂಡಿದ್ದ ವಂಚಕರು, ಮತ್ತೆ ಕರೆ ಮಾಡಿ ನಿಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅದು ಬೇಡವೆಂದರೆ ಮತ್ತೆ 40 ಲಕ್ಷ ಕೊಡಿ ಎಂದು ಡಿಮ್ಯಾಂಡ್​​ ಮಾಡಿದ್ದಾರೆ.

ಇದ್ದ ಹಣವನ್ನೆಲ್ಲ ಇವರಿಗೆ ಅದಾಗಲೇ ಕೊಟ್ಟಿದ್ದ ಪಲ್ಡೆನ್, ಸ್ನೇಹಿತನಿಗೆ ಕರೆ ಮಾಡಿ 40 ಲಕ್ಷ ಕೇಳಿದ್ದಾರೆ. ಆಗ ಇಷ್ಟೊಂದು ಹಣ ಯಾಕೆಂದು ಆತ ವಿಚಾರಿಸಿದ ವೇಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆಗ ವಂಚನೆ ಬಗ್ಗೆ ಗೊತ್ತಾಗಿ, ಕೂಡಲೇ ಪಲ್ಡೆನ್ ಅವರು ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಕಾರವಾರ ಸೈಬರ್ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಟ್ಟೆ ಬಿಚ್ಚೊವರೆಗೂ ಬಿಡಲ್ಲ: ಪತಿ ಮತ್ತು ಮಾವನಿಂದ ಚಿತ್ರಹಿಂಸೆ

ಚಿಕ್ಕಮಗಳೂರು, ಜ.2: ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಹಳ್ಳಿಯಲ್ಲಿ ಪತಿ ತನ್ನ ಪತ್ನಿಗೆ ಗಂಡು ಮಗು ಬೇಕೆಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಈ ಪ್ರಕರಣದಲ್ಲಿ ಪತಿ ತಿಮ್ಮಪ್ಪ ಮತ್ತು ಮಾವ ಗುಂಡಪ್ಪ ಅವರನ್ನು ಬಂಧಿಸಲಾಗಿದೆ. ತಾರಾ ಎಂಬ ಮಹಿಳೆ ಡಿ.29ರಂದು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾರಾ ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಟಿವಿ9 ಜತೆಗೆ ಹಂಚಿಕೊಂಡಿದ್ದಾರೆ, ಊಟ ಮಾಡುತ್ತಿದ್ದಾಗ ತನ್ನ ತಟ್ಟೆಯನ್ನು ಕಿತ್ತು ನೆಲಕ್ಕೆಸೆದು, ನಂತರ ಬಟ್ಟೆ ಬಿಚ್ಚಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾಗಿ ವಿವರಿಸಿದ್ದಾರೆ. ತಾರಾ ಅವರ ಹೇಳಿಕೆಯ ಪ್ರಕಾರ, ಈ ಘಟನೆಯು ಸಂಜೆ ನಡೆದಿದೆ. ಅವರು ತಮ್ಮ ಕೆಲಸ ಮುಗಿಸಿ ಊಟಕ್ಕೆ ಕುಳಿತಿದ್ದಾಗ, ಪತಿ ತಿಮ್ಮಪ್ಪ “ನನಗೆ ಊಟ ಹಾಕಲ್ಲ, ನೀನು ಮಾತ್ರ ಊಟ ಮಾಡುತ್ತೀಯಾ” ಎಂದು ಹೇಳಿದ್ದಾನೆ. ನಂತರ ಆಕೆಯನ್ನು ವಿವಸ್ತ್ರಗೊಳಿಸಿ, ದೊಣ್ಣೆಯಿಂದ ಹೊಡೆದಿದ್ದಾನೆ. ತಾರಾ ಹಿಂಬಾಗಿಲಿನಿಂದ ಓಡಿಹೋಗಿ ಟವಲ್ ಸುತ್ತಿಕೊಂಡು ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಾರೆ. ಲಿಂಗದಹಳ್ಳಿ ಪೊಲೀಸರ ಸಹಕಾರದಿಂದ ತಾವು ಜೀವಂತ ಉಳಿದಿರುವುದಾಗಿ ತಾರಾ ತಿಳಿಸಿದ್ದು, ತಮಗೆ ನ್ಯಾಯ ಸಿಗಬೇಕು ಎಂದು ಬೇಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪತಿ ಕುಟುಂಬ ಸದಸ್ಯರಿಂದ ಬೆದರಿಕೆ ಕರೆಗಳೂ ಬರುತ್ತಿವೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನರ್ಸ್​​ಗೆ ಸೈಬರ್​ ವಂಚಕರಿಂದ ಮಕ್ಮಲ್​​ ಟೋಪಿ: ಕಳೆದುಕೊಂಡಿದ್ದು ಬರೋಬ್ಬರಿ 12 ಲಕ್ಷ – Kannada News | Chikkaballapur Nurse Loses 12 Lakh Rupees to Cyber Fraud

ಚಿಕ್ಕಬಳ್ಳಾಪುರ, ಜನವರಿ 02: ಪಾರ್ಟ್​​ ಟೈಂ ಕೆಲಸಕ್ಕಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದ ನರ್ಸ್​​ ಒಬ್ಬರು ಆನ್​​ಲೈನ್​​ ವಂಚನೆಗೆ ಒಳಗಾಗಿ ಬರೋಬ್ಬರಿ 12 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾನು ಮೋಸ ಹೋಗಿದ್ದು ಅರಿವಾದ ಬಳಿಕ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದಾಳೆ.

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಭಾರತಿ ಎನ್ನುವ ಮಹಿಳೆ ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಇದ್ದ ಹಿನ್ನೆಲೆ ಪಾರ್ಟ್​​ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಇನ್ಸ್ಟಾಗ್ರಾಮ್​​ ಲಿಂಕೊಂದು ಅವರ ಕಣ್ಣಿಗೆ ಬಿದ್ದಿದ್ದು, ಅದರ ಮೇಲೆ ಕ್ಲಿಕ್​​ ಮಾಡಿದ್ದರು. ಆ ಬಳಿಕ ಅವರಿಗೆ ಕಾಲ್​​ ಬಂದಿದ್ದು, ಟೆಲಿಗ್ರಾಮ್​​ ಗ್ರೂಪ್​​ ಒಂದಕ್ಕೆ ಭಾರತಿ ಅವರನ್ನು ಸೇರಿಸಿದ್ದರು. ಬಳಿಕ ಹಣದಾಸೆ ತೋರಿಸಿ ಇನ್ವೆಸ್ಟ್​​ ಮಾಡುವಂತೆ ಆರೋಪಿಗಳು ತಿಳಿಸಿದ್ದರು. ಅವರನ್ನು ನಂಬಿ ಹೇಳಿದಂತೆಲ್ಲ ಭಾರತಿ ಮಾಡಿದ್ದರು. ಅಂತಿಮವಾಗಿ ನಿಮ್ಮ ಖಾತೆಯಲ್ಲಿ 15 ಲಕ್ಷ ಹಣವಿದೆ ಎಂದಿದ್ದ ಆರೋಪಿಗಳು, ಅದನ್ನು ವಿತ್​​ ಡ್ರಾ ಮಾಡಲು ಅಂತ ನಾನಾ ಕಾರಣ ಹೇಳಿ ಬರೋಬ್ಬರಿ 12 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೃಂಗೇರಿ ವ್ಯಕ್ತಿಗೆ ಕೋಟ್ಯಂತರ ರೂ ವಂಚನೆ;  ಷೇರು ಮಾರ್ಕೆಟ್ ಬಗ್ಗೆ ಇರಲಿ ಎಚ್ಚರಿಕೆ

ಇನ್ನು ಹಣ ಸಿಗುವ ನಂಬಿಕೆಯಿಂದ ನರ್ಸ್​​ ಭಾರತಿ ತನ್ನ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಸಹ ಬ್ಯಾಂಕ್​​ನಲ್ಲಿ ಅಡ ಇಟ್ಟು ಹಣ ಕಟ್ಟಿದ್ದಾರೆ. ಆದ್ರೂ ವಂಚಕರು ಹೇಳಿದ್ದ ಆ 15 ಲಕ್ಷ ರೂ. ಮಾತ್ರ ಕೈ ಸೇರಿಲ್ಲ. ಅಂತಿಮವಾಗಿ ತಾನು ಮೋಸ ಹೋದ ಬಗ್ಗೆ ಭಾರತಿಗೆ ಅರಿವಾಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್​​ ವಂಚನೆಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತರೇ ಇಂತಹ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಳ್ಳುತ್ತಿರೋದು ನಿಜಕ್ಕೂ ದುರ್ದೈವ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇರಳದಲ್ಲಿ ‘ಜನ ನಾಯಗನ್’ ಅಡ್ವಾನ್ಸ್ ಬುಕಿಂಗ್: ಇದು ಅನ್ಯಾಯವಲ್ಲದೆ ಮತ್ತೇನು? – Kannada News | Jana Nayagan movie advance booking open in Kochi huge price difference compare to Bengaluru

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 9 ರಂದು ಬಿಡುಗಡೆ ಆಗಲಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮಾತ್ರವೇ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಲಾಗಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿದ್ದು, ಕೊಚ್ಚಿಯಲ್ಲಿ ಇತ್ತೀಚೆಗಷ್ಟೆ ಓಪನ್ ಆಗಿದೆ. ಆದರೆ ಬೆಂಗಳೂರಿನ ಟಿಕೆಟ್ ದರಕ್ಕೂ, ಕೊಚ್ಚಿಯ ಟಿಕೆಟ್ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಬೆಂಗಳೂರಿನಲ್ಲಿ ಪ್ರಸ್ತುತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಅಡ್ವಾನ್ಸ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಜನವರಿ 09ರ ಮುಂಜಾನೆ 6 ಗಂಟೆಯ ವಿಶೇಷ ಶೋ ಟಿಕೆಟ್​​ಗಳನ್ನಷ್ಟೆ ಬುಕ್ ಮಾಡಲು ಅವಕಾಶ ಇದೆ. ಈ ಶೋಗಳಿಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ಟಿಕೆಟ್​ಗೆ 800 ಮತ್ತು 1000 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಟಿಕೆಟ್ಟಿಗೆ 800 ರೂಪಾಯಿ, ಬಾಲ್ಕನಿಗೆ 1000 ಬೆಲೆ ಇದೆ. ಕೆಲ ಚಿತ್ರಮಂದಿರಗಳಲ್ಲಿ ಈ ಬೆಲೆ 1000 ಮತ್ತು 1200 ಸಹ ಇದೆ.

ಆದರೆ ಕೇರಳದ ಕೊಚ್ಚಿಯಲ್ಲಿ ಬೇರೆಯದ್ದೇ ಕತೆ ಇದೆ. ಕೇರಳದಲ್ಲಿಯೂ ಬೆಳಿಗ್ಗೆ 6 ಗಂಟೆ ಶೋ ಆಯೋಜನೆ ಮಾಡಲಾಗಿದೆ. ಆದರೆ ಆ ವಿಶೇಷ ಶೋ ಟಿಕೆಟ್​​ನ ಪ್ರಾರಂಭಿಕ ಬೆಲೆ ಕೇವಲ 120 ರೂಪಾಯಿಗಳಿವೆ. ಕೆಲವು ಚಿತ್ರಮಂದಿರಗಳಲ್ಲಿ ಆರಂಭಿಕ ಬೆಲೆ 190 ರೂಪಾಯಿಗಳಿವೆ. ಗರಿಷ್ಟ ಬೆಲೆ 350 ರೂಪಾಯಿಗಳಷ್ಟೆ. ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ‘ಜನ ನಾಯಗನ್’ ಸಿನಿಮಾ ಟಿಕೆಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ?

ಕೇರಳದ ಕೊಚ್ಚಿಯಲ್ಲಿ ವಿಶೇಷ ಶೋನ ಟಿಕೆಟ್​​ಗೆ ಹೆಚ್ಚು ಬೆಲೆ ಸಾಮಾನ್ಯ ಶೋಗೆ ಕಡಿಮೆ ಬೆಲೆ ಎಂಬ ವ್ಯತ್ಯಾಸವಿಲ್ಲ. ಯಾವುದೇ ಶೋನ ಟಿಕೆಟ್ ಖರೀದಿ ಮಾಡಿದರು ಒಂದೇ ಟಿಕೆಟ್ ಬೆಲೆ ಇದೆ. ಆದರೆ ಬೆಂಗಳೂರಿನಲ್ಲಿ ವಿಶೇಷ ಶೋಗೆ 1000 ರೂಪಾಯಿ ನೀಡಬೇಕಿದೆ. ಇದು ಅನ್ಯಾಯ ಅಲ್ಲದೆ ಮತ್ತೇನು ಎಂಬ ಪ್ರಶ್ನೆ ಬೆಂಗಳೂರಿನ ಸಿನಿಮಾ ಪ್ರೇಮಿಗಳದ್ದು.

‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಪ್ರಸ್ತುತ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ಮಾತ್ರವೇ ಓಪನ್ ಆಗಿದೆ. ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲಿ ಇನ್ನಷ್ಟೆ ಓಪನ್ ಆಗಬೇಕಿದೆ. ಆದರೆ ಅಲ್ಲಿಯೂ ಸಹ ಟಿಕೆಟ್ ದರಗಳು ಕಡಿಮೆಯೇ ಇರಲಿವೆ. ಆದರೆ ‘ಜನ ನಾಯಗನ್’ ನಿರ್ಮಾಪಕರು ಮತ್ತು ವಿತರಕರು ಹಣ ದೋಚಿಕೊಳ್ಳಲು ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನೇ ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು? – Kannada News | Kambala Controversy: Bhishma of Kambala Gunapala Kadamba get Insulte in a Crowded Public Gathering

ಮಂಗಳೂರು, ಜನವರಿ 02: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ (Kambala). ಕಂಬಳಕ್ಕೆ ಪ್ರೇಕ್ಷಕ ವರ್ಗ ಹೆಚ್ಚಾಗುತ್ತಿದ್ದಂತೆಯೇ ಇದೀಗ ಕಂಬಳ‌ ಸಮಿತಿ ಒಡೆದ ಮನೆಯಾಗಿದೆ. ಕಂಬಳದ ಹಿರಿಯ ಗೌರವ ಸಲಹೆಗಾರ, ಕಂಬಳದ ಭೀಷ್ಮ ಎಂದೇ ಕರೆಯಲ್ಪಡುವ ಗುಣಪಾಲ‌‌ ಕಡಂಬರಿಗೆ (Gunapal Kadamba) ತುಂಬಿದ ಸಭೆಯಲ್ಲೇ ಏಕವಚನ ಪ್ರಯೋಗ ಮಾಡಿದ್ದು, ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದ ಕಂಬಳದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಂಬಳ ವಲಯದಲ್ಲಿ‌ ಬಿರುಗಾಳಿ ಎಬ್ಬಿದೆ.

ಹೌದು, ಸಾಧನೆಗಳ ಮೂಲಕ ಸುದ್ದಿಯಾಗುತ್ತಿದ್ದ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಭಾರೀ ಭಿನ್ನಾಭಿಪ್ರಾಯ ಸ್ಫೋಟವಾಗಿದೆ. ಕಂಬಳ ಸಮಿತಿಯ ಶೀತಲ ಸಮರ ಇದೀಗ ಬಹಿರಂಗವಾಗಿದ್ದು, ಕಂಬಳ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ನಡೆದದ್ದೇನು?

ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ಮಂಗಳೂರು ಕಂಬಳ ಕಳೆದ ಶನಿವಾರ ಅದ್ಧೂರಿಯಿಂದ ನಡೆಯಿತು. ರಾತ್ರಿ ವೇಳೆ ರೇಸ್ ಎಂಡ್ ಪಾಯಿಂಟ್ ನಲ್ಲಿ ಗುಣಪಾಲ ಕಡಂಬ ಮೈಕ್‌‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರೇಸ್‌ ಆರಂಭದ ಪಾಯಿಂಟ್‌ನಲ್ಲಿ ಯಶವಂತ್ ಎಂಬುವವರು ಮೈಕ್‍‌ನಲ್ಲಿ ಸ್ಪರ್ಧೆಗೆ ಕೋಣಗಳನ್ನು ಬಿಡಲು ಸೂಚಿಸುತ್ತಿದ್ದರು. ಈ ವೇಳೆ ಏಕಾಏಕಿ ಯಶವಂತ್‌ರಿಂದ ಮೈಕ್ ಕಸಿದುಕೊಂಡ ಕಂಬಳ ಸಮಿತಿ ಕಾರ್ಯಕಾರಿಣಿ ಸದಸ್ಯ ಅರುಣ್ ಶೆಟ್ಟಿ ಬಜಪೆ ಎಂಬಾತ ಗುಣಪಾಲ ಕಡಂಬರಿಗೆ ಏಕವಚನದಲ್ಲೇ ಬೈಯುವುದಕ್ಕೆ ಆರಂಭಿಸಿದರು. ಈ ವೇಳೆ ಕಡಂಬರು ಸುಮ್ಮನಿದ್ದು, ಕಂಬಳ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಟ್ಟಿರು. ಆದರೆ ಅರುಣ್ ಶೆಟ್ಟಿ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು

ಇನ್ನು ವೈರಲ್ ವಿಡಿಯೋಗೆ ಮಾನಹಾನಿಕಾರಕ ಬರಹ ಬರೆದು ಕಂಬಳ ಸಮಿತಿ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲಿಗೆ ಕಡಂಬ ವಿರುದ್ಧ ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿಗೆ ಇದ್ದ ತೀವ್ರ ಅಸಮಾಧಾನ ಬಯಲಾಗಿದೆ. 79ರ ಹರೆಯದ ಗುಣಪಾಲ‌‌ ಕಡಂಬ ಕಳೆದ 55 ವರ್ಷಗಳಿಂದ ಕಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದು, ಹಿರಿಯ ಜೀವಕ್ಕೆ ಮಾಡಿದ ಅವಮಾನಕ್ಕೆ ಕಂಬಳ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಂಬಳ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಗುಣಪಾಲ ಕಡಂಬ ಅಭಿಮಾನಿಗಳು ಜಿಲ್ಲಾ ಕಂಬಳ ಸಮಿತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಕರಣ ತಣಿಸಲು ಮುಂದಾಗಿದ್ದಾರೆ. ಕಂಬಳದಲ್ಲಿ ವಿವಾದಗಳು ಸಾಮಾನ್ಯವಾಗಿದ್ದು, ಈ ಬಾರಿ ಬಹಿರಂಗವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗುಣಪಾಲ ಕಡಂಬರಿಗೆ ಆದ ಅವಮಾನದ ಬಗ್ಗೆ ಕಂಬಳ‌ ಸಮಿತಿಯ ಹಿರಿಯರು ಕೂತು ಸಮಾಲೋಚನೆ ನಡೆಸಿ ವಿವಾದ ಬಗೆಹರಿಸುವುದಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ತುಳುವನ್ನು 2ನೇ ಅಧಿಕೃತ ಭಾಷೆಯಾಗಿಸಲು ಗಂಭೀರ ಪ್ರಯತ್ನ; ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ದೇವಿಪ್ರಸಾದ್ ಶೆಟ್ಟಿ ಅಧಿಕಾರಕ್ಕೆ ಬಂದ ಬಳಿಕವೇ ಕಂಬಳದಲ್ಲಿ ಗುಂಪುಗಾರಿಕೆ ಆರಂಭವಾಗಿದೆ ಅನ್ನೋದು ಕಡಂಬ ಅಭಿಮಾನಿಗಳ ಆರೋಪ. ಸಮಿತಿಯ ಅವಧಿ ಮುಕ್ತಾಯವಾದರೂ ಅಧಿಕಾರ ಬಿಟ್ಟುಕೊಡದೇ ಗುಂಪುಗಾರಿಕೆ ಮಾಡಲಾಗುತ್ತಿದೆ ಅಂತಾ ಆರೋಪಿಸಲಾಗಿದೆ. ಅದೇ ಏನೇ ಆದರೂ ಪೇಟಾದ ತೂಗುಕತ್ತಿಯ ನಡುವೆ ಕಂಬಳದೊಳಗೆಯೇ ಅಸಮಾಧಾನ ಭುಗಿಲೆದ್ದಿದ್ದು, ಹಿರಿಯರ ಸ್ವಪ್ರತಿಷ್ಠೆ ಕಂಬಳಕ್ಕೆ ಕುತ್ತು ತರದೇ ಇರಲಿ ಅನ್ನೋದು ಅಸಂಖ್ಯಾತ ಅಭಿಮಾನಿಗಳ‌ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ – Kannada News | Bangalore Seasonal Flu Outbreak: Symptoms, Risks & Prevention Tips

ಬೆಂಗಳೂರು, ಜ.2: ಬೆಂಗಳೂರಿನಲ್ಲಿ ಕಾಲೋಚಿತ ಜ್ವರ (seasonal flu Bangalore) ಮತ್ತು ಇತರ ಉಸಿರಾಟದ ಕಾಯಿಲೆಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ. ಕೆಮ್ಮು, ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಗಳು ವರದಿ ಮಾಡಿದೆ. ತಾಪಮಾನದಲ್ಲಿನ ಏರಿಳಿತ, ಅದರಲ್ಲೂ ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ, ರಾತ್ರಿ ಹೊತ್ತು ತಂಪಾದ ಗಾಳಿ, ಇದು ಸೋಂಕುಗಳು ಹರಡಲು ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಿವೆ ಎಂದು ವೈದ್ಯರು ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳಿಗೆ ನೀಡಲಾಗುವ ಸೌಲಭ್ಯದ ಆಧಾರದಿಂದ ಕಾಲೋಚಿತ ಜ್ವರ ಪ್ರಕರಣಗಳು ಹೆಚ್ಚಾಗಿದೆ ಎಂಬ ವರದಿಯನ್ನು ನೀಡಲಾಗಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ .

ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ ಎಂಬ ವರದಿಯನ್ನು ನೀಡಿದೆ. ಇನ್ನು ಈ ಜ್ವರಕ್ಕೆ ಆಸ್ತಮಾ, ಬ್ರಾಂಕೈಟಿಸ್, (ಶ್ವಾಸಕೋಶದ ಉಸಿರಾಟದ ನಾಳಗಳು ಉರಿ) ಮಧುಮೇಹ, ಅಲರ್ಜಿಗಳು ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳು ಇರುವವರೇ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ಪ್ರಮಾಣದ ಪ್ರಕರಣಗಳು 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡು ಬಂದಿದೆ. ರೋಗಿಗಳಲ್ಲಿ ಸಾಮಾನ್ಯವಾಗಿ ಆರಂಭದಲ್ಲಿ ಸೌಮ್ಯ ಜ್ವರ ಪತ್ತೆ ಮಾಡಲಾಗಿದೆ. ನಂತರ ನಿರಂತರ ಕೆಮ್ಮು, ಶೀತ, ಎದೆಯ ಅಸ್ವಸ್ಥತೆ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಸೋಂಕಿತ ಮೇಲ್ಮೈ ಸಂಪರ್ಕದಿಂದ ಅಂದರೆ ಉಸಿರಾಟ ಗಾಳಿ, ಕೆಮ್ಮು, ಸ್ವರ್ಶದಿಂದ ಈ ರೋಗವು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಋತುಮಾನದ ಜ್ವರವು ಸಾಮಾನ್ಯವಾಗಿ ಒಂದು ವಾರದೊಳಗೆ ಪರಿಹರವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಅಥವಾ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ ಜನರು ಸೇರಿದಂತೆ ಇತರ ರೋಗಿಗಳು ಇದರಿಂದ ಹೆಚ್ಚಿನ ಅಪಾಯಗಳನ್ನು ಅನುಭವಿಸಬಹುದು.

ಇದನ್ನೂ ಓದಿ: ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್

ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ ಅಥವಾ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ವಿಳಂಬ ಮಾಡಬೇಡಿ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕೆಲವೊಂದು ಶಿಬಿರಗಳು ನಡೆಸುತ್ತಿದೆ. ಇದಕ್ಕಾಗಿ ವೈದ್ಯಕೀಯ ಸೌಲಭ್ಯಗಳು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಚಳಿಗಾಲದ ತಿಂಗಳುಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಜಿಲ್ಲಾ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಇದರ ಬಗ್ಗೆ ಖಾಸಗಿ ಆಸ್ಪತ್ರೆಗಳು ಸಹ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Fri, 2 January 26

Source link

Exit mobile version