ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ – Kannada News | Supreme Court To Order SIT Probe of NEET Protest Violence

ನವದೆಹಲಿ, ಜುಲೈ 28: ಕಳೆದ ವಾರ ದೇಶಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿರುವ ಆರೋಪಗಳ ಕುರಿತು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಅಭಿಪ್ರಾಯಪಟ್ಟಿದೆ. ಈ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಸುಪ್ರೀಂ ಕೋರ್ಟ್ ಸುಳಿವು ನೀಡಿದ್ದು, ಈ ಕುರಿತು ಕೇಂದ್ರ ಸರ್ಕಾರ, ದೆಹಲಿ ಎನ್‌ಸಿಟಿ ಹಾಗೂ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಪ್ರತಿಕ್ರಿಯೆಯನ್ನು ಕೋರಿದೆ.

ಪ್ರತಿಭಟನಾಕಾರರ ವೈಯಕ್ತಿಕ ಮಾಹಿತಿ ಹಾಗೂ ಡಿಜಿಟಲ್ ಡೇಟಾವನ್ನು ಸುರಕ್ಷಿತವಾಗಿರಿಸಬೇಕು ಮತ್ತು ಸದ್ಯಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಪ್ರತಿಭಟನಾಕಾರರ ವೈಯಕ್ತಿಕ ವಿವರಗಳನ್ನು ಪ್ರಕಟಿಸಬಾರದು ಎಂದೂ ಕಟ್ಟುನಿಟ್ಟಾಗಿ ಹೇಳಿದೆ. ಈಗಾಗಲೇ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ರಾಜ್ಯಗಳು ತನಿಖೆಯನ್ನು ಮುಂದುವರಿಸಬಹುದು. ಆದರೆ ಅಪರಾಧ ಹಿನ್ನೆಲೆಯಿಲ್ಲದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವ್ಯವಸ್ಥಿತ ಅಕ್ರಮಗಳ ವಿರುದ್ಧ ಜುಲೈ ೨೦ ರಿಂದ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ನಡೆಸಿತು. ಗಾಯಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನೂ ಕೋರ್ಟ್ ನಡೆಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಪಟೈಟಿಸ್‌ನಿಂದ ಲಿವರ್ ರಕ್ಷಿಸಿಕೊಳ್ಳಲು ಡಾ. ಸಂಹಿತಾ ಉಲ್ಲೋಡ್ ನೀಡಿರುವ ಟಿಪ್ಸ್! – Kannada News | Hepatitis Symptoms, Risk Factors and Liver Protection Tips

ಯಕೃತ್ತು (ಲಿವರ್) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆಹಾರದ ಜೀರ್ಣಕ್ರಿಯೆ, ವಿಷಕಾರಿ ಪದಾರ್ಥಗಳ ನಿವಾರಣೆ, ಶಕ್ತಿಯ ಸಂಗ್ರಹಣೆ ಹಾಗೂ ಅನೇಕ ಜೀವಸತ್ವಗಳ ಚಯಾಪಚಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ವ್ಯಾಧಿ ಎಂದರೆ ಅದು ಹೆಪಟೈಟಿಸ್; ಯಕೃತ್ತಿನ ಉರಿಯೂತ (inflammation of the Liver). ಇದು ಹೆಪಟೈಟಿಸ್ ವೈರಸ್(hepatitis A,B,CD and E) ಮೂಲಕ ಹರಡುತ್ತದೆ. ಜೊತೆಗೆಅತಿಯಾದ ಮಧ್ಯಪಾನ, ಕೆಲವು ಔಷಧಗಳ ದುಷ್ಪರಿಣಾಮ, ಯಕೃತ್ತಿನಲ್ಲಿ ಸೇರುವ ಕೊಬ್ಬು (fatty liver) ಅಥವಾ ಕಲುಷಿತ ಆಹಾರ/ನೀರಿನ ಕಾರಣಗಳಿಂದಲೂ ಬರಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್ ಡಿ ಎಂ ಆಯುರ್ವೇದ ಕಾಲೇಜಿನ ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡ್ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ಆರೋಗ್ಯ ಸಮಸ್ಯೆಯ ಲಕ್ಷಣ ಮತ್ತು ಇದನ್ನು ತಡೆಗಟ್ಟಲು ಅನುಸರಿಸಬೇಕಾದ ಕೆಲವು ಸಲಹೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಪಟೈಟಿಸ್ ಪ್ರಮುಖ ಲಕ್ಷಣಗಳು:

ಕಾಮಾಲೆ(ಚರ್ಮ ಮತ್ತು ಕಣ್ಣು ಹಳದಿಯಾಗುವುದು), ಜ್ವರ, ಅತಿಯಾದ ಆಯಾಸ, ವಾಂತಿ ಅಥವಾ ವಾಕರಿಕೆ, ಹೊಟ್ಟೆನೋವು ಮತ್ತು ಮಲ ಮೂತ್ರದ ಬಣ್ಣ ಗಾಢವಾಗುವುದು ಮುಂತಾದ ಲಕ್ಷಣಗಳು ಕಾಣಬಹುದು. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಯಕೃತ್ ಹಾನಿ, liver cirrhosis, ಯಕೃತ್ ಕ್ಯಾನ್ಸರ್ ನಂತಹ ದೀರ್ಘ ಉಪದ್ರವಗಳು ಕಾಡಬಹುದು. ಇದು ಒಬ್ಬ ವ್ಯಕ್ತಿಯ ದೈನಂದಿನ ಕ್ರಿಯೆ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು.

ಹೆಪಟೈಟಿಸ್ ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ:

ಆಹಾರ: ಈ ಕಾಯಿಲೆ ಬರದಂತೆ ತಡೆಗಟ್ಟಲು, ಯಕೃತ್ತಿನ ಆರೋಗ್ಯ ಕಾಪಾಡಲು ಜೀವನಶೈಲಿಯ ಬದಲಾವಣೆಗಳು ಬಹಳ ಸಹಾಯಕಾರಿ. ಅದರಲ್ಲಿಯೂ ಮೊದಲಿಗೆ ಯಕೃತ್ತಿನ ಕಾರ್ಯವನ್ನು ಉತ್ತೇಜಿಸಲು ಸಮತೋಲನದ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕಭರಿತ ನಿಯಮಿತ ಆಹಾರ ಸೇವನೆ, ತಾಜಾ ಹಣ್ಣು ತರಕಾರಿಗಳು, ಧಾನ್ಯಗಳ ಬಳಕೆ ಮಾಡಬಹುದು.

ಯಕೃತ್ ಸಂರಕ್ಷಕ ಆಹಾರ (Liver protective foods): ಅಂದರೆ ನೆಲ್ಲಿಕಾಯಿ, ನಿಂಬೆಹಣ್ಣು, ಬ್ರೋಕಲಿ, ಸಕ್ಕರೆ ಸೇರಿಸದ ಕಾಫಿ, ಬೆರ್ರಿ ಹಣ್ಣುಗಳು, ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಆಲಿವ್ ಎಣ್ಣೆ ಇತ್ಯಾದಿಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬಹುದು. ಇದರ ಜೊತೆಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾದ ಸಕ್ಕರೆ ಇರುವ ಆಹಾರ-ಪಾನೀಯಗಳು, ಸಂಸ್ಕರಿತ ಆಹಾರಗಳು, ಜಂಕ್ ಫುಡ್ ಹಾಗೂ ಮದ್ಯಪಾನವನ್ನು ಸಾಧ್ಯವಾದಷ್ಟು ದೂರವಿಡಬೇಕು. ಏಕೆಂದರೆ ಇವು ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಕೊಬ್ಬಿನ ಯಕೃತ್ತು, ಉರಿಯೂತ ಹಾಗೂ ಇತರ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ!

ಗಿಡಮೂಲಿಕೆ: ಯಕೃತ್ತಿನ ಆರೋಗ್ಯಕ್ಕೆ ಹಲವು ಗಿಡಮೂಲಿಕೆಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿ, ಅಮೃತಬಳ್ಳಿ, ನೆಲನಲ್ಲಿ, ಭೃಂಗರಾಜ, ಕಟುಕಿ, ಪುನರ್ನವ ಮುಂತಾದ ಔಷಧಗಳನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆಯೇ ಬಳಕೆ ಮಾಡಬಾರದು. ಅದರ ಬದಲು ಸೂಕ್ತ ಆಯುರ್ವೇದ ತಜ್ಞರ ಸಲಹೆಯ ಮೇರೆಗೆ ಈ ಔಷಧಿಗಳನ್ನು ಸೇವಿಸಬಹುದು.

ವಿಹಾರ: ದೇಹದ ತೂಕ ಸಮತೋಲನದಲ್ಲಿ ಇಡುವುದು ಬಹಳ ಮುಖ್ಯ. ಹಾಗಾಗಿ ನಿಯಮಿತ ವ್ಯಾಯಾಮ, ಯೋಗದಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು ಹಲವು ಯಕೃತ್ ಸಮಸ್ಯೆಗಳನ್ನು ದೂರವಿಡಬಹುದು.

ಲಸಿಕೆ: ಹೆಪಟೈಟಿಸ್ ಗೆ ಲಭ್ಯವಿರುವ ಲಸಿಕೆಗಳನ್ನು ಸರಿಯಾದ ವಯಸ್ಸಿನಲ್ಲಿ ತಪ್ಪದೆ ತೆಗೆದುಕೊಳ್ಳುವುದು.

ಕೆಲವು ಮುನ್ನೆಚ್ಚರಿಕೆಗಳು: ಶುದ್ಧ ಕುಡಿಯುವ ನೀರು, ಸ್ವಚ್ಛ ಆಹಾರ, ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸ, ಆಸ್ಪತ್ರೆಗಳಲ್ಲಿ ರಕ್ತ ಮತ್ತು ಸೂಜಿ ಬಳಸುವಾಗ ಸೂಕ್ತ ಮುನ್ನೆಚ್ಚರಿಕೆಯಿಂದ ಸೋಂಕು ಹರಡುವುದನ್ನು ತಡೆಯಬಹುದು.

ಯಾವುದೇ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಸರಿಯಾದ ಆಹಾರ ಪದ್ಧತಿ, ಶಿಸ್ತಿನ ಜೀವನಶೈಲಿ, ಸರಿಯಾದ ಲಸಿಕೆಯಿಂದ ಯಕೃತ್ತಿನ ಆರೋಗ್ಯ ಕಾಪಾಡಿ ರೋಗಗಳನ್ನು ತಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುರಕ್ಷಿತ ಬೆಂಗಳೂರಿಗೆ ಬಿಟಿಪಿ ಹೊಸ ಹೆಜ್ಜೆ: ಅನಾಥ ವಾಹನಗಳ ಬಗ್ಗೆ ದೂರು ನೀಡಲು ಈ ಆಪ್ ಬಳಸಿ – Kannada News | Help BTP Clear Bangalore Roads: Report Abandoned Vehicles via ASTraM App for Public Safety

ಬೆಂಗಳೂರು, ಜು.28: ಬೆಂಗಳೂರು ನಗರದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟುಮಾಡುತ್ತಿರುವ ಅನಾಥ ವಾಹನಗಳನ್ನು (Abandoned Vehicles) ತೆರವುಗೊಳಿಸುವ ವಿಶೇಷ ಅಭಿಯಾನವನ್ನು ಬೆಂಗಳೂರು ಸಂಚಾರ ಪೊಲೀಸ್ (BTP) ತೀವ್ರಗೊಳಿಸಿದೆ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ (ನಗರಾಭಿವೃದ್ಧಿ) ಸಚಿವರು ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಅಭಿಯಾನದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ. ಸುರಕ್ಷಿತ ಹಾಗೂ ಉತ್ತಮ ನಗರಕ್ಕಾಗಿ ಈ ಕಾರ್ಯದಲ್ಲಿ ಭಾಗುವಹಿಸುವಂತೆ ಕೇಳಿಕೊಂಡಿದ್ದಾರೆ.

ನಗರದ ರಸ್ತೆಗಳು ಹಾಗೂ ಕಾಲುದಾರಿಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು BTP ASTraM ಮೊಬೈಲ್ ಆ್ಯಪ್ ಮೂಲಕ ಮಾಹಿತಿ ನೀಡಲು ಕೋರಲಾಗಿದೆ.

ಇದನ್ನೂ ಓದಿ:  ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ

ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿರುವ ಅಧಿಕೃತ ದತ್ತಾಂಶದ ಪ್ರಕಾರ, ಇದುವರೆಗೆ ನಗರದಾದ್ಯಂತ ಕೈಗೊಂಡ ಕ್ರಮಗಳ ವಿವರ ಹೀಗಿದೆ:

ನೋಟಿಸ್ ಅಂಟಿಸಲಾದ ಅನಾಥ ವಾಹನಗಳು: 1,286

ಟೋಯಿಂಗ್ (ತೆರವು) ಮಾಡಲಾದ ವಾಹನಗಳು: 172

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ವಲಯವಾರು ಕೈಗೊಂಡ ಕ್ರಮಗಳ ವಿವರ:

ವಲಯ (Zone) ನೋಟಿಸ್ ಅಂಟಿಸಿದ ವಾಹನಗಳು ಟೋಯಿಂಗ್ ಮಾಡಲಾದ ವಾಹನಗಳು  
ಸೆಂಟ್ರಲ್ (Central) 537 48  
ಪಶ್ಚಿಮ (West) 311 54  
ದಕ್ಷಿಣ (South) 247 34  
ಉತ್ತರ (North) 123 30  
ಪೂರ್ವ (East) 68 6  
ಒಟ್ಟು (Total) 1286 172  

ನಿಮ್ಮ ಬಡಾವಣೆ, ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಬಳಕೆಯಾಗದೆ ಧೂಳು ಹಿಡಿದು ಬಿದ್ದಿರುವ ಅನಾಥ ವಾಹನಗಳು ಕಂಡುಬಂದರೆ, ಸಾರ್ವಜನಿಕರು ತಕ್ಷಣವೇ ‘BTP ASTraM App’ ಡೌನ್‌ಲೋಡ್ ಮಾಡಿಕೊಂಡು, ವಾಹನದ ಫೋಟೋ ಹಾಗೂ ಸ್ಥಳದ ವಿವರದೊಂದಿಗೆ ದೂರು ನೀಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 pm, Tue, 28 July 26

Source link

ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ – Kannada News | India Emerges as World Second Largest Supplier of Seafarers

ನವದೆಹಲಿ, ಜುಲೈ 28: ಭಾರತವು ಜಾಗತಿಕ ಸಾಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2015ರಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದ್ದ ಭಾರತ, ಇದೀಗ 2026ರ ವೇಳೆಗೆ ವಿಶ್ವದ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದೆ. ‘ಬಿಮ್ಕೋ-ಐಸಿಎಸ್ ಸೆಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026’ (BIMCO-ICS Seafarer Workforce Report 2026) ವರದಿಯ ಪ್ರಕಾರ, ಜಾಗತಿಕ ಹಡಗು ರವಾನೆ ಉದ್ಯಮಕ್ಕೆ ಭಾರತವು ಬರೋಬ್ಬರಿ 3,11,936 ನಾವಿಕ ವೃತ್ತಿಪರರನ್ನು ನೀಡುವ ಮೂಲಕ, ಜಾಗತಿಕ ಸಾಗರ ಕಾರ್ಮಿಕ ಶಕ್ತಿಯಲ್ಲಿ ಶೇ. 12.16ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಫಿಲಿಪೈನ್ಸ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ದೇಶ ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

2015ರಲ್ಲಿ ಭಾರತದ ಪಾಲು ಕೇವಲ ಶೇ. 5.2ರಷ್ಟಿತ್ತು (5ನೇ ಸ್ಥಾನ). 2021ರಲ್ಲಿ ಇದು ಶೇ. 6ಕ್ಕೆ ಏರಿಕೆಯಾಗಿತ್ತು. ಆದರೆ ಕಳೆದ ದಶಕದಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದ್ದು, ಶೇ. 12.16ರಷ್ಟು ಏರಿಕೆ ಕಾಣುವ ಮೂಲಕ ಭಾರತ ನಿರ್ಣಾಯಕ ಸಾಧನೆ ಮಾಡಿದೆ.

ವಿಶ್ವದ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಅಧಿಕಾರಿಗಳ ಪೈಕಿ ಭಾರತೀಯರು ಶೇ. 13.41ರಷ್ಟು ಪಾಲನ್ನು ಹೊಂದಿದ್ದಾರೆ. ಹಾಗೂ ರೇಟಿಂಗ್ಸ್ ವಿಭಾಗದಲ್ಲಿ ಶೇ. 11.29ರಷ್ಟು ಪಾಲು ಹೊಂದಿದ್ದಾರೆ.

ಇದನ್ನೂ ಓದಿ: ರಷ್ಯಾದ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕ ಸಾವಿಗೆ ಭಾರತ ಖಂಡನೆ

ಪ್ರಸ್ತುತ ವಿಶ್ವದಲ್ಲೇ 25.7 ಲಕ್ಷ ನಾವಿಕರ ಪೂರೈಕೆಯಿದ್ದು, 25.5 ಲಕ್ಷ ನಾವಿಕರ ಬೇಡಿಕೆಯಿದೆ. ಜಾಗತಿಕವಾಗಿ ಅರ್ಹ ಅಧಿಕಾರಿಗಳ ಅಭಾವವಿರುವುದರಿಂದ ಭಾರತೀಯ ನಾವಿಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಅವರು 2021ರಿಂದ ಕೈಗೊಂಡ ಮೂಲಸೌಕರ್ಯ ಹಾಗೂ ಶಾಸಕಾಂಗ ಸುಧಾರಣೆಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ

ಈ ವರದಿಯನ್ನು ಸ್ವಾಗತಿಸಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಾರ್ವತ್ರಿಕ ನಾಯಕತ್ವದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ನಾವು ಈಗ ‘ಮಿಷನ್ ಶೇ. 20’ ಎಂಬ ಮುಂದಿನ ರಾಷ್ಟ್ರೀಯ ಗುರಿಯನ್ನು ಹೊಂದಿದ್ದೇವೆ. ಜಾಗತಿಕವಾಗಿ ಮರ್ಚೆಂಟ್ ಹಡಗುಗಳಲ್ಲಿ ಸೇವೆ ಸಲ್ಲಿಸುವ ಪ್ರತಿ 5 ನಾವಿಕರಲ್ಲಿ ಒಬ್ಬರು ಭಾರತೀಯರಾಗಿರಬೇಕು ಎಂಬುದು ನಮ್ಮ ಆಶಯವಾಗಿದೆ. ಸಾಗರ ಶಿಕ್ಷಣದ ಸಾಮರ್ಥ್ಯವನ್ನು ವಿಸ್ತರಿಸುವ ಮೂಲಕ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಟ್ವಾರಾ 1947’ ಟ್ರೇಲರ್: ಹಿಂದೂ-ಮುಸ್ಲಿಂ ಸೌಹಾರ್ದತೆಯ ಕಥೆಯಲ್ಲಿ ಸನ್ನಿ ಡಿಯೋಲ್ ಅಬ್ಬರ – Kannada News | Sunny Deol Batwara 1947 Movie Trailer Film Story CBFC A Certificate

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅಭಿನಯದ ಬಹುನಿರೀಕ್ಷಿತ ‘ಬಟ್ವಾರಾ 1947’ (Batwara 1947) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1947ರ ಭಾರತ-ಪಾಕಿಸ್ತಾನ ವಿಭಜನೆಯ ಭೀಕರ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಟ್ರೇಲರ್, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆಗಸ್ಟ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಆಮಿರ್ ಖಾನ್ (Aamir Khan) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಸಿನಿಮಾದ ಕಥೆಯ ಬಗ್ಗೆ ವಿವರ ನೀಡಲಾಗಿದೆ.

‘ಬಟ್ವಾರಾ 1947’ ಸಿನಿಮಾದ ಕಥೆ:

ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ. ಆದರೆ, ಅದರ ಬೆನ್ನಲ್ಲೇ ದೇಶ ವಿಭಜನೆಯ ಬೆಂಕಿಯಲ್ಲಿ ಮನೆ-ಮಠ ಕಳೆದುಕೊಂಡು, ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ. ಸನ್ನಿ ಡಿಯೋಲ್ ಹಾಗೂ ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಪ್ರೀತಿ ಜಿಂಟಾ ಮತ್ತು ಮಗ ಕರಣ್ ಡಿಯೋಲ್ ಪಾಕಿಸ್ತಾನದ ಲಾಹೋರ್‌ಗೆ ವಲಸೆ ಹೋಗಿ, ಅಲ್ಲಿ ಅವರಿಗೆ ಹಂಚಿಕೆಯಾದ ಹೊಸ ಮನೆಗೆ ತೆರಳುತ್ತಾರೆ. ಅಲ್ಲಿ ಅವರನ್ನು ಅಲಿ ಫಜಲ್ ಸ್ವಾಗತಿಸುತ್ತಾರೆ.

ಆದರೆ, ಆ ಮನೆಯ ಮಹಡಿಯ ಮೇಲೆ ಹಿರಿಯ ಹಿಂದೂ ಮಹಿಳೆಯೊಬ್ಬರು (ಶಬಾನಾ ಅಜ್ಮಿ) ವಾಸಿಸುತ್ತಿದ್ದು, ತಮ್ಮ ಪಾರಂಪರಿಕ ಮನೆಯನ್ನು ತೊರೆಯಲು ನಿರಾಕರಿಸುತ್ತಾರೆ. ಅವರು ತಮ್ಮ ಕೋಣೆಯಲ್ಲಿ ಸಣ್ಣ ದೇವಾಲಯವನ್ನಿಟ್ಟುಕೊಂಡು ಪೂಜೆ ಮಾಡುವುದು ಸ್ಥಳೀಯ ಕೆಲವರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆಕೆಯನ್ನು ಮನೆಯಿಂದ ಹೊರಹಾಕಲು ಗಲಭೆ ಸೃಷ್ಟಿಯಾದಾಗ, ಸನ್ನಿ ಡಿಯೋಲ್ ಆ ತಾಯಿಯ ರಕ್ಷಣೆಗೆ ಗುರಾಣಿಯಾಗಿ ನಿಲ್ಲುತ್ತಾರೆ.

‘ಬಟ್ವಾರಾ 1947’ ಟ್ರೇಲರ್:

ಹಿಂದೂ ಮಹಿಳೆಯನ್ನು ಉಳಿಸಲು ಏಕಿಷ್ಟು ಹಠ ಎಂದು ಕೆಲವರು ಪ್ರಶ್ನಿಸಿದಾಗ, ಸನ್ನಿ ಡಿಯೋಲ್ ‘ಹಿಂದೂ ಮಹಿಳೆಯೇ? ಆಕೆ ಒಬ್ಬ ತಾಯಿ. ಆಕೆಗೆ ಹಿಂದೂ-ಮುಸ್ಲಿಂ ಎಂಬ ಹಣೆಪಟ್ಟಿ ಹಚ್ಚಬೇಡಿ. ನಮ್ಮ ಮೊದಲ ಧರ್ಮವೇ ತಾಯಿ. ನಾವು ಆಡುವ ಮೊದಲ ಮಾತು ಕೂಡ ತಾಯಿ’ ಎಂದು ಗರ್ಜಿಸುವ ಸಂಭಾಷಣೆಯು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಕಟ್ ಇಲ್ಲದೆ ‘A’ ಸರ್ಟಿಫಿಕೇಟ್:

ಈ ಸಿನಿಮಾದ ಮೂಲಕ ನಟಿ ಪ್ರೀತಿ ಜಿಂಟಾ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಚಿತ್ರಕ್ಕೆ ಎ.ಆರ್. ರಹಮಾನ್ ಸಂಗೀತ ಸಂಯೋಜಿಸಿದ್ದು, ಜಾವೇದ್ ಅಖ್ತರ್ ಗೀತರಚನೆ ಮಾಡಿದ್ದಾರೆ. ಈ ನಡುವೆ, ಸೆನ್ಸಾರ್ ಮಂಡಳಿಯು ಯಾವುದೇ ಕಟ್ ಇಲ್ಲದೇ ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸನ್ನಿ ಡಿಯೋಲ್, ‘ಬಟ್ವಾರಾ 1947 ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಂದೂ ಕಟ್ ಇಲ್ಲದೆ ಎ ಸರ್ಟಿಫಿಕೇಟ್ ನೀಡಿದೆ. ಇದು ಪ್ರೀತಿ ಮತ್ತು ಮಾನವೀಯತೆಯ ಕುರಿತಾದ ಸಿನಿಮಾ. ಆಗಸ್ಟ್ 14ರ ವಿಭಜನೆಯ ನೆನಪಿನ ದಿನದಂದು ಚಿತ್ರಮಂದಿರಗಳಲ್ಲಿ ವೀಕ್ಷಿಸಿ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ಸಂಭಾವನೆ ಮಾತ್ರವಲ್ಲ, ಸನ್ನಿ ಡಿಯೋಲ್​ಗೆ ಸರ್ಕಾರದಿಂದ ಸಿಗ್ತಿದೆ ಪಿಂಚಣಿ

ಹಿಟ್ ಜೋಡಿಯ ಕಾಂಬಿನೇಷನ್:

90ರ ದಶಕದ ಸೂಪರ್ ಹಿಟ್ ನಟ-ನಿರ್ದೇಶಕ ಜೋಡಿಯಾದ ಸನ್ನಿ ಡಿಯೋಲ್ ಮತ್ತು ರಾಜ್‌ಕುಮಾರ್ ಸಂತೋಷಿ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಘಾತಕ್’, ‘ಘಾಯಲ್’ ಮತ್ತು ‘ದಾಮಿನಿ’ಯಂತಹ ಐಕಾನಿಕ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿಯ ಹೊಸ ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ‘ಬಟ್ವಾರಾ 1947’ ಚಿತ್ರವು ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡಿದವರ ಬಂಧನ, ಗೃಹ ಇಲಾಖೆಗೆ ಹೈಕೋರ್ಟ್ ತರಾಟೆ – Kannada News | Karnataka High court class to Police Department Over Arrested Who Gave Information Illegal Bangladeshi Immigrants

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website

ಬೆಂಗಳೂರು, (ಜುಲೈ 28): ಬೆಂಗಳೂರಿನಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ವಲಸಿಗರ (Illegal Bangladeshi Immigrants) ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಬೆಳ್ಳಂದೂರು ಪೊಲೀಸರ ಕ್ರಮಕ್ಕೆ ಹೈಕೋರ್ಟ್ (Karnataka High court)  ತೀವ್ರ ಅಸಮಾಧಾನ ಹೊರಹಾಕಿದೆ. ನಾಗೇಂದ್ರ ಎಂಬುವರು ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿತ್ತು. ಈ ಪ್ರಕರಣ ರದ್ದುಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಬೆಳ್ಳಂದೂರು ಪೊಲೀಸರ ಈ ನಡೆಗೆ ಅಸಮಾಧಾನಗೊಂಡಿದೆ. ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆಸಿ ಅರ್ಜಿದಾರರ ವಿರುದ್ಧದ ಕೇಸ್​ಗೆ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ?

ಬಾಂಗ್ಲಾ ಮೂಲದ ನಜ್ರೀನಾ ನೀಡಿದ್ದ ದೂರನ್ನು ರದ್ದುಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೊರ್ಟ್,  ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆಸಿದೆ. ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ? ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ ಎಂದು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ನೋಡಿ: ಬಿಜೆಪಿಗರಿಂದ ಸರ್ವೇ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಿಸಿಗರ ಜಾಲ ಪತ್ತೆ

ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ?

ಅಕ್ರಮ ವಲಸಿಗರನ್ನು ಸರ್ಕಾರ, ಪೊಲೀಸರೇ ಬೆಂಬಲಿಸುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ? ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ? ವಲಸಿಗರನ್ನು ಹೊರಗೆ ಕಳಿಸಿ ಅಂದರೆ ದೂರು ನೀಡಿದವರ ಮೇಲೇ ಕೇಸ್. ಅಕ್ರಮ ವಲಸಿಗರ ಓಲೈಕೆ ನಿಲ್ಲಬೇಕು. ಅಕ್ರಮ ವಲಸಿಗರ ಗಡಿಪಾರಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ಖಡಕ್ ಸೂಚನೆ ನೀಡಿದೆ.

ಪೊಲೀಸರ ಕ್ರಮದ ಬಗ್ಗೆ ಆಗಸ್ಟ 6ರೊಳಗೆ ವಿವರಣೆ ನೀಡಲು ಸೂಚನೆ ನೀಡಿದೆ. ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ ವಾದ ಮಂಡನೆ ಮಾಡಿದರು.

ಘಟನೆಯ ಹಿನ್ನೆಲೆ

ಡಾ. ನಾಗೇಂದ್ರಪ್ಪ ಅವರು ಕಳೆದ ಕೆಲವು ಸಮಯದಿಂದ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ಕುರಿತು ಮಾಹಿತಿಯನ್ನು ಕಲೆಹಾಕಿ ಅಧಿಕಾರಿಗಳಿಗೆ ನೀಡುತ್ತಿದ್ದರು. ದೇಶದ ಹಿತದೃಷ್ಟಿಯಿಂದ ತಾವು ಈ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಸಂಬಂಧ ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1695 ಬೆಲೆಯ ಎಲ್‌ಪಿಜಿ ಸಿಲಿಂಡರ್ 942 ರೂ.ಗೆ ಸಿಗುತ್ತಿರುವುದು ಹೇಗೆ? ಪೂರ್ತಿ ವಿವರ ಇಲ್ಲಿದೆ – Kannada News | How is an LPG cylinder priced at Rs 1,695 available for Rs 942? Here are the complete details

ನವದೆಹಲಿ, ಜುಲೈ 28: ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ಏರಿಕೆಯ ಸುದ್ದಿಗಳು ಸಹಜವಾಗಿಯೇ ಜನರಲ್ಲಿ ಕಳವಳವನ್ನುಂಟುಮಾಡುತ್ತವೆ. ಪ್ರತಿ ತಿಂಗಳು ಲಕ್ಷಾಂತರ ಕುಟುಂಬಗಳ ಬಜೆಟ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಅವಲಂಬಿಸಿರುತ್ತದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ತುಂಬಾ ದುಬಾರಿಯಾಗಿದ್ದರೂ ಭಾರತದಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್‌ನ (LPG) ಬೆಲೆ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗುತ್ತಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

ದೇಶದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೇಶೀಯ ಎಲ್‌ಪಿಜಿ ಒದಗಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಈ ನೆರವು ನೀಡದಿದ್ದರೆ, ದೇಶೀಯ ಅನಿಲ ಸಿಲಿಂಡರ್‌ನ ಬೆಲೆ ಪ್ರಸ್ತುತ ಬೆಲೆಗಿಂತ ಹೆಚ್ಚಿನದಾಗಿರುತ್ತದೆ ಎಂದು ಸರ್ಕಾರ ಹೇಳುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಅನಿಲ ಬೆಲೆಗಳು ಹೆಚ್ಚಿದ್ದರೂ, ಅದರ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಸಂಸತ್ತಿನ ಪ್ರತಿಕ್ರಿಯೆಯ ಪ್ರಕಾರ, ಸರ್ಕಾರವು 2022-23ರಲ್ಲಿ ತೈಲ ಕಂಪನಿಗಳಿಗೆ 22,000 ಕೋಟಿ ರೂ.ಗಳ ಪರಿಹಾರವನ್ನು ನೀಡಿದೆ. 2025-26 ಮತ್ತು 2026-27 ವರ್ಷಗಳಿಗೆ ತಲಾ 30,000 ಕೋಟಿ ರೂ.ಗಳ ನಿಬಂಧನೆಯನ್ನು ಮಾಡಲಾಗಿದೆ.

ಸರ್ಕಾರಿ ತೈಲ ಕಂಪನಿಗಳು ಎಷ್ಟು ನಷ್ಟ ಅನುಭವಿಸುತ್ತವೆ?:

ತೈಲ ಕಂಪನಿಗಳ ಪೂರ್ಣ ನಷ್ಟವನ್ನು ಸರಿದೂಗಿಸಲು ಪರಿಹಾರ ಮಾತ್ರ ಸಾಕಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಜೂನ್ 30ರ ವೇಳೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಮಾರಾಟದಿಂದ 51,000 ಕೋಟಿಗೂ ಹೆಚ್ಚು ಒಟ್ಟು ನಷ್ಟವನ್ನು ಅನುಭವಿಸಿವೆ. 2026ರ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರದ ಮೇಲೆ 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ನ ಬೆಲೆ 1,695 ರೂ. ತಲುಪಿತ್ತು. ಆದರೆ ಅದೇ ಸಿಲಿಂಡರ್ ಅನ್ನು ಗ್ರಾಹಕರಿಗೆ 942 ರೂ.ಗೆ ಮಾರಾಟ ಮಾಡಲಾಯಿತು.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

ಇದರರ್ಥ ಸರ್ಕಾರ ಮತ್ತು ತೈಲ ಕಂಪನಿಗಳು ಪ್ರತಿ ಸಿಲಿಂಡರ್‌ ಮೇಲೆ 700 ರೂ.ಗಿಂತ ಹೆಚ್ಚು ಹೊರೆಯನ್ನು ಹೊತ್ತುಕೊಂಡವು. 105 ಮಿಲಿಯನ್‌ಗಿಂತಲೂ ಹೆಚ್ಚು ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 300 ರೂ. ಸಬ್ಸಿಡಿ ನೀಡಿದ ನಂತರ, ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್‌ನ ಬೆಲೆ ಕೇವಲ 642 ರೂ. ಎಂದು ಸರ್ಕಾರ ಹೇಳಿದೆ. ಪ್ರತಿ ಮನೆಗೆ ನಿಯಮಿತವಾಗಿ ಮತ್ತು ಕೈಗೆಟುಕುವ ಅನಿಲ ಪೂರೈಕೆಯನ್ನು ನಿರ್ವಹಿಸುವುದು ತನ್ನ ಗುರಿಯಾಗಿದೆ ಎಂದು ಸರ್ಕಾರ ಹೇಳಿದೆ.

2022-23 ರಲ್ಲಿ, ಸರ್ಕಾರವು OMCಗಳಿಗೆ 22,000 ಕೋಟಿ ರೂ.ಗಳ ಪರಿಹಾರವನ್ನು ನೀಡಿತು. 2025-26 ಮತ್ತು 2026-27ರಲ್ಲಿ ತಲಾ 30 ಸಾವಿರ ಕೋಟಿ ರೂ.ಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. 2026ರ ಜೂನ್ 30ರ ಹೊತ್ತಿಗೆ, ತೈಲ ಕಂಪನಿಗಳು ದೇಶೀಯ ಎಲ್‌ಪಿಜಿಯಲ್ಲಿ 51 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನುಂಟುಮಾಡಿದ್ದವು.

942 ರೂ.ಗೆ ಗ್ಯಾಸ್ ಸಿಲಿಂಡರ್ ಹೇಗೆ ಸಿಗುತ್ತದೆ?:

ಸರ್ಕಾರದ ಪ್ರಕಾರ, ಜೂನ್ 2026ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ LPG ಬೆಲೆ ತೀವ್ರವಾಗಿ ಏರಿತು. ಆ ಸಮಯದಲ್ಲಿ 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ನ ಮಾರುಕಟ್ಟೆ ಆಧಾರಿತ ಬೆಲೆ 1,695 ರೂ. ತಲುಪಿತು. ಆದರೂ ಗ್ರಾಹಕರಿಗೆ 942 ರೂ. ಮಾತ್ರ ವಿಧಿಸಲಾಗುತ್ತಿತ್ತು. ಇದರರ್ಥ ಪ್ರತಿ ಸಿಲಿಂಡರ್‌ಗೆ 700 ರೂ.ಗಿಂತ ಹೆಚ್ಚಿನ ವ್ಯತ್ಯಾಸವನ್ನು ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಜಂಟಿಯಾಗಿ ಭರಿಸಿವೆ. ಇದರಿಂದಾಗಿ ಜನರು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯುತ್ತಿದ್ದಾರೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಷ್ಟು ಲಾಭ ಸಿಗುತ್ತದೆ?:

ಕೇಂದ್ರ ಸರ್ಕಾರದ ಪ್ರಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಬರುವ 105 ಮಿಲಿಯನ್ ಕುಟುಂಬಗಳಿಗೆ ಕೈಗೆಟುಕುವ ಅಡುಗೆ ಅನಿಲವನ್ನು ಒದಗಿಸಲು ವಿಶೇಷ ಪರಿಹಾರವನ್ನು ನೀಡಲಾಗುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಈ ಫಲಾನುಭವಿಗಳು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 300 ರೂ. ಹೆಚ್ಚುವರಿ ಸಬ್ಸಿಡಿ ಪಡೆಯುತ್ತಾರೆ. ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿಯ ಹೆಚ್ಚಿದ ಬೆಲೆಯ ಗಮನಾರ್ಹ ಭಾಗವನ್ನು ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭರಿಸುತ್ತಿವೆ.

ಇದಕ್ಕಾಗಿಯೇ, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ನಿಜವಾದ ಬೆಲೆ ಸಾಕಷ್ಟು ಹೆಚ್ಚಿದ್ದರೂ, ದೆಹಲಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳು ಕೇವಲ 642 ರೂ.ಗೆ ಪಡೆಯುತ್ತಿದ್ದಾರೆ. ಈ ವ್ಯವಸ್ಥೆಯು ಹಣದುಬ್ಬರದ ಈ ಯುಗದಲ್ಲಿ ಲಕ್ಷಾಂತರ ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲಿನ ಅಡುಗೆ ಅನಿಲದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂದು ಸರ್ಕಾರ ಹೇಳುತ್ತದೆ.

ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ, ಉದ್ಯಮಿಗಳಿಗೆ ಬಿಗ್ ರಿಲೀಫ್

ಸರ್ಕಾರದ ಪ್ರಕಾರ, ದೇಶೀಯ LPG ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿವೆ. 2026ರಲ್ಲಿ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಅಂತಾರಾಷ್ಟ್ರೀಯ LPG ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಯಿತು. ಆದರೆ, ಸರ್ಕಾರವು ಪೂರ್ಣ ಪರಿಣಾಮವು ದೇಶೀಯ ಗ್ರಾಹಕರನ್ನು ತಲುಪದಂತೆ ತಡೆಯಿತು. ಇದರ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಡಿಮೆ ಬೆಲೆಗೆ ಸಿಲಿಂಡರ್‌ಗಳನ್ನು ಮಾರಾಟ ಮಾಡಬೇಕಾಯಿತು. ಜೂನ್ 30, 2026ರ ಹೊತ್ತಿಗೆ ಈ ನಷ್ಟವು 51,000 ಕೋಟಿ ರೂ.ಗಳನ್ನು ಮೀರಿತ್ತು.

ಭಾರತವು ತನ್ನ ಎಲ್‌ಪಿಜಿ ಅಗತ್ಯಗಳಲ್ಲಿ ಸರಿಸುಮಾರು 60% ಆಮದು ಮಾಡಿಕೊಳ್ಳುತ್ತದೆ. ಈ ಪೂರೈಕೆಯಲ್ಲಿ ಸರಿಸುಮಾರು 90% ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉಲ್ಬಣಗೊಂಡ ನಂತರ ಈ ಮಾರ್ಗದ ಮೂಲಕ ಪೂರೈಕೆಯಲ್ಲಿ ಪರಿಣಾಮ ಬೀರಿತು. ಇದರಿಂದ ಸರ್ಕಾರವು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಿತು, ಇತರ ದೇಶಗಳಿಂದ ಆಮದುಗಳನ್ನು ಪ್ರಾರಂಭಿಸಿತು, ದಾಸ್ತಾನುಗಳನ್ನು ಹೆಚ್ಚಿಸಿತು. ಬಿಕ್ಕಟ್ಟಿನ ಹೊರತಾಗಿಯೂ, ದೇಶೀಯ ಅನಿಲ ಪೂರೈಕೆ ನಿರಂತರವಾಗಿ ಮುಂದುವರೆದಿದೆ ಎಂದು ಸರ್ಕಾರ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲೆಲ್ಲೂ ಜೆನ್‌ ಝೀಗಳದ್ದೇ ಹವಾ; Gen-Z ಅಂದ್ರೆ ಯಾರು? ಈ ಪೀಳಿಗೆ ಏಕೆ ಇಷ್ಟೊಂದು ಪವರ್‌ಫುಲ್? – Kannada News | Who Is Gen Z generation? Why is this generation so powerful compared to others?

ಇಂದಿನ ಯುವ ಸಮೂಹ ಅದರಲ್ಲೂ ಈ ಜೆನ್‌ ಝೀ ಗಳು (Gen Z) ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದ್ದಾರೆ. ತಮ್ಮ ಮೋಜು-ಮಸ್ತಿಯ ಹೊರತಾಗಿ ತಪ್ಪುಗಳು ನಡೆದಾಗ ಅದನ್ನು ಧೈರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಸಮಾನತೆ, ಹಕ್ಕುಗಳ ಬಗ್ಗೆ ಧ್ವನಿಯೆತ್ತಿ ಮಾತನಾಡುತ್ತಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ನೇಪಾಳದ ಜೆನ್‌ ಝೀಗಳು ಅಲ್ಲಿನ ಭ್ರಷ್ಟಾಚಾರ ಮತ್ತು ಹಳೆಯ ರಾಜಕೀಯ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು, ಸರ್ಕಾರವನ್ನೇ ಬದಲಿಸಿದರು. ಇದನ್ನೇ ಪ್ರೇರಣೆಯನ್ನಾಗಿಟ್ಟುಕೊಂಡು ಭಾರತದಲ್ಲಿನ ಯುವ ಸಮುದಾಯ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ, ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಜೆನ್‌ ಝೀ ಗಳು ಈ ಪ್ರತಿಭಟನೆಯ ಯಶಸ್ಸಿಗೆ ಅತಿದೊಡ್ಡ ಕೊಡುಗೆ ನೀಡಿದವರು ಎಂದು ಹೇಳಬಹುದು. ಈ ಎರಡು ಘಟನೆಗಳು ಜನರೇಷನ್‌ ಝಡ್‌ ಪೀಳಿಗೆ ಎಷ್ಟು ಶಕ್ತಿಶಾಲಿ ಎಂಬುದನ್ನು ಜಗತ್ತಿಗೆ ತೋರಿಸಿವೆ. ಸರ್ಕಾರಗಳನ್ನೇ ಅಲ್ಲಾಡಿಸಿದ ಈ ಜನರೇಷನ್‌ ಝಡ್‌ ಯಾರು? ಈ ಯುವ ಪೀಳಿಗೆ ಏಕೆ ಇಷ್ಟೊಂದು ಪವರ್‌ ಫುಲ್‌ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಜನರೇಷನ್‌  ಝಡ್‌ ಯಾರು?

ಜನರೇಷನ್ ಝಡ್ (Gen-Z) ಎಂದರೆ ಸಾಮಾನ್ಯವಾಗಿ 1997 ಮತ್ತು 2012 ರ ನಡುವೆ ಜನಿಸಿದ ಜನರ ಪೀಳಿಗೆಯಾಗಿದೆ. ಇದು ತಂತ್ರಜ್ಞಾನ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ ಬೆಳೆದ ಯುವಜನರ ಗುಂಪು.  ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬೆಳೆದ ಪೀಳಿಗೆ ಇದಾಗಿದೆ.

ಜನರೇಷನ್ ಝಡ್  ಬಾಲ್ಯದಿಂದಲೂ ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಜಗತ್ತನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಸ್ವೀಕರಿಸಿದ ಪೀಳಿಗೆಯಾಗಿದೆ. ಈ ಪೀಳಿಗೆ ಸೋಷಿಯಲ್‌ ಮೀಡಿಯಾಗಳನ್ನು ಮೋಜು, ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯನ್ನಾಗಿ ಮಾತ್ರವಲ್ಲ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಹ ಬಳಸುತ್ತದೆ. ಹೌದು ಶಿಕ್ಷಣ, ವೃತ್ತಿ, ಮಾನಸಿಕ ಆರೋಗ್ಯ, ಪರಿಸರ, ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಪೀಳಿಗೆ ಮುಕ್ತವಾಗಿ ವ್ಯಕ್ತಪಡಿಸುತ್ತಿದೆ. ಇತ್ತೀಚಿಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ನಡೆದ ಜೆಜ್‌ ಝೀ ಗಳ ಪ್ರತಿಭಟನೆಯೇ ಇದಕ್ಕೆ ಸೂಕ್ತ ಉದಾಹರಣೆ.

ಜನರೇಷನ್ ಝಡ್ ಹೆಸರು ಹೇಗೆ ಬಂತು?

ಮಿಲೇನಿಯಲ್ಸ್ ಪೀಳಿಗೆಯನ್ನು ಜನರೇಷನ್ Y ಎಂದು ಕರೆಯಲಾಗುತ್ತಿದ್ದರಿಂದ, ನಂತರದ ಪೀಳಿಗೆಯನ್ನು ಇಂಗ್ಲಿಷ್ ವರ್ಣಮಾಲೆಯ ಮುಂದಿನ ಅಕ್ಷರವಾದ Z ಅನ್ನು ಆಧರಿಸಿ ಜನರೇಷನ್ Z ಎಂದು ಹೆಸರಿಸಲಾಯಿತು.

ಜನರೇಷನ್ ಝಡ್ ಪೀಳಿಗೆಯ ಚಿಂತನೆ ಏಕೆ ಭಿನ್ನವಾಗಿದೆ?

ಈ ಪೀಳಿಗೆಯು ಮಾಹಿತಿಯನ್ನು ಸಂಗ್ರಹಿಸಲು ಟಿವಿ ಅಥವಾ ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮೂಲಗಳನ್ನು ಬಳಸುತ್ತದೆ. ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಲ್ಲಿ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಈ ಪೀಳಿಗೆಯವರು ತುಂಬಾನೇ ಸಕ್ರಿಯರಾಗಿದ್ದಾರೆ.  ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಪೀಳಿಗೆಯ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಅವರು ಮಾಹಿತಿಯನ್ನು ಸಂಗ್ರಹಿಸಲು, ಕಲಿಯಲು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಈ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತಾರೆ.

ಜನರೇಷನ್ ಝಡ್ ಜನರು ಪರಿಸರ, ಮಾನಸಿಕ ಆರೋಗ್ಯ, ಸಮಾನತೆ, ವೈವಿಧ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ವಿಷಯಗಳನ್ನು ಹಿಂದಿನ ಹಲವು ತಲೆಮಾರುಗಳಿಗಿಂತ ಹೆಚ್ಚು ಮುಕ್ತವಾಗಿ ಚರ್ಚಿಸುತ್ತಾರೆ.  ಅಲ್ಲದೆ‌ ಜೆನ್‌ ಝೀ ಗಳು ತುಂಬಾನೇ ಬುದ್ಧಿವಂತಿಕೆಯಿಂದ ಯೋಚಿಸುತ್ತಾರೆ.  ಈ ಪೀಳಿಗೆಯು ಕೇವಲ 9 ಟು 5 ಕೆಲಸಗಳನ್ನು ಅವಲಂಬಿಸುವುದಕ್ಕಿಂತ ಬಿಸಿನೆಸ್, ನವೋದ್ಯಮ, ಕಂಟೆಂಟ್‌ ಕ್ರೀಯೆಷನ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇತರ ಹೊಸ ವೃತ್ತಿ ಆಯ್ಕೆಗಳತ್ತ ಆಕರ್ಷಿತವಾಗಿದೆ.

ಜನರೇಷನ್ ಝಡ್ ಅತ್ಯಂತ ಪ್ರಭಾವಶಾಲಿ ಪೀಳಿಗೆಯೇ?

ಬಾಂಗ್ಲಾದೇಶ, ನೇಪಾಳ ಮತ್ತು ಈಗ ಭಾರತದಲ್ಲಿ ನಡೆದ ಜೆನ್‌ ಝೀ ಚಳುವಳಿಗಳೇ ಈ ಪೀಳಿಗೆಯು ಎಷ್ಟೊಂದು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಟ್ಟಿದೆ. ಈ ಪೀಳಿಗೆಯ ಜನ ತಮಗಾಗಿ ಕೆಲಸ ಮಾಡುವುದು ಮಾತ್ರವಲ್ಲಸಾಮಾಜಿಕ ಬದಲಾವಣೆಗಳಿಗೂ ಸಹ ಶ್ರಮಿಸುತ್ತಿದ್ದಾರೆ.  ಒಟ್ಟಾರೆಯಾಗಿ, ಜೆನ್‌ ಝೀಗಳು ಒಗ್ಗಟ್ಟಾಗಿ ನಿಂತು  ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಜಗತ್ತನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.  ಮುಂಬರುವ ವರ್ಷಗಳಲ್ಲಿ ರಾಜಕೀಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಮಾರುಕಟ್ಟೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಜೆನ್‌ ಝೀ ಗಳ ಸಾಮಾರ್ಥ್ಯ ಪ್ರಭಾವ ಬೀರಲಿದೆ.

ಜನರೇಷನ್  ಝೆಡ್ ನಂತರದ ಪೀಳಿಗೆಯನ್ನು ಏನೆಂದು ಕರೆಯುತ್ತಾರೆ?

ಜನರೇಷನ್ Z ನಂತರದ ಪೀಳಿಗೆಯನ್ನು ಜನರೇಷನ್ ಆಲ್ಫಾ ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಆಸ್ಟ್ರೇಲಿಯಾದ ಸಂಶೋಧಕ ಮಾರ್ಕ್ ಮೆಕ್ರಿಂಡಲ್ 2008 ರಲ್ಲಿ ಸೃಷ್ಟಿಸಿದರು ಮತ್ತು ಇದು ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ “ಆಲ್ಫಾ” ನಿಂದ ಬಂದಿದೆ. ಈ ಪೀಳಿಗೆಯವರು ಸಂಪೂರ್ಣವಾಗಿ 21 ನೇ ಶತಮಾನದಲ್ಲಿ ಜನಿಸಿದ ಮೊದಲನೆಯವರು. 2013 ರಿಂದ 2024 ರವರೆಗೆ ಜನಿಸಿದವರು ಜೆನ್‌ ಆಲ್ಫಾಗಳು. 2025 ರ ನಂತರ ಪ್ರಾರಂಭವಾಗುವ ಪೀಳಿಗೆಯನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ, ಇದು 2025 ರಿಂದ 2039 ರವರೆಗೆ ಇರುತ್ತದೆ.

ಈ ವಿಭಿನ್ನ ಪೀಳಿಗೆಗಳಿಗೆ ಹೆಸರು ಇಡುವುದು ಯಾರು?

ಈ ಪೀಳಿಗೆಗಳ  ಹೆಸರುಗಳನ್ನು ಯಾವುದೇ ಸರ್ಕಾರಿ ಸಂಸ್ಥೆ ಹೆಸರಿಸಿಲ್ಲ. ಸಮಾಜಶಾಸ್ತ್ರಜ್ಞರು ಮತ್ತು ಸಂಶೋಧಕರು ಅವುಗಳನ್ನು ನಿಯೋಜಿಸುತ್ತಾರೆ. ಜನರೇಷನ್ ಬೀಟಾ ಎಂಬ ಪದವನ್ನು ಪ್ರಸಿದ್ಧ ಸಮಾಜಶಾಸ್ತ್ರಜ್ಞ ಮಾರ್ಕ್ ಮೆಕ್‌ಕ್ರಿಂಡಲ್ ಸೃಷ್ಟಿಸಿದರು.

ಇದನ್ನೂ ಓದಿ: ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು

ಈ ವಿಭಿನ್ನ ಪೀಳಿಗೆಗಳ ಅರ್ಥವೇನು?

ಸಮಾಜಶಾಸ್ತ್ರದಲ್ಲಿ, ಒಂದು ಪೀಳಿಗೆಯನ್ನು ಸರಿಸುಮಾರು 15 ರಿಂದ 20 ವರ್ಷಗಳ ಅಂತರದಲ್ಲಿ ಜನಿಸಿದ ಜನರ ಗುಂಪು ಎಂದು ವ್ಯಾಖ್ಯಾನಿಸಲಾಗಿದೆ. ಪ್ರತಿಯೊಂದು ಪೀಳಿಗೆಯೂ ಅದರ ಕಾಲದ ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳು ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ.

  • ಬೇಬಿ ಬೂಮರ್ಸ್ (1946–1964): ಎರಡನೇ ಮಹಾಯುದ್ಧದ ನಂತರ ಜನಿಸಿದ ಪೀಳಿಗೆ
  • ಜನರೇಷನ್ ಎಕ್ಸ್ (1965–1980): ಸಾಂಪ್ರದಾಯಿಕ ಮತ್ತು ಆಧುನಿಕ ಯುಗಗಳ ನಡುವಿನ ಪೀಳಿಗೆ
  • ಮಿಲೇನಿಯಲ್ಸ್ /ಜೆನ್ ವೈ (1981–1996): ಇಂಟರ್ನೆಟ್‌ನ ಆರಂಭಿಕ ಆಗಮನದೊಂದಿಗೆ ಬೆಳೆದ ಪೀಳಿಗೆ
  • ಜನರಲ್ ಝೆಡ್‌ / ಜೆನ್‌ ಝೀ (1997–2012): ಡಿಜಿಟಲ್ ಯುಗದಲ್ಲಿ ಹುಟ್ಟಿ ಬೆಳೆದ ಪೀಳಿಗೆ
  • ಜನರಲ್ ಆಲ್ಫಾ (2013 ರಿಂದ 2024): ಎಐ, ಸ್ಮಾರ್ಟ್ ಸಾಧನಗಳು ಮತ್ತು ಹೆಚ್ಚು ಡಿಜಿಟಲ್ ಪರಿಸರದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆ

ಇಷ್ಟೆಲ್ಲಾ ಪೀಳಿಗೆಗಳಿದ್ದರೂ ಇವುಗಳಲ್ಲಿ ಇಂದು ಹೆಚ್ಚು ಚರ್ಚಿಸಲ್ಪಡುವ ಪೀಳಿಗೆ ಎಂದರೆ ಅದು ಜನರೇಷನ್ ಝಡ್.

ಪ್ರತಿ ಪೀಳಿಗೆಗೂ ಹೆಸರಿಡುವ ಒಂದು ಸಾಮಾನ್ಯ ಪದ್ಧತಿ ಇದೆಯೇ?

ಪ್ರತಿ ಪೀಳಿಗೆಗಳಿಗೂ ಹೆಸರಿಡುವ ಪದ್ಧತಿ ಚಾಲ್ತಿಯಲ್ಲಿದೆ. ನೀವು ಆಗಾಗ್ಗೆ ಜೆನ್‌ ಝೀ, ಜೆನ್‌ ಆಲ್ಫಾ, ಜೆನ್‌ ಬೀಟಾ ಪದಗಳನ್ನು ಕೇಳಿರುತ್ತೀರಿ ಅಲ್ವಾ. ಈ ಪದಗಳು ನಮ್ಮ ಪೀಳಿಗೆಗಳನ್ನು ವಿವರಿಸುತ್ತವೆ. ಹಿಂದೆಲ್ಲಾ ಪ್ರತಿ 20 ವರ್ಷಗಳಿಗೊಮ್ಮೆ ಒಂದು ಪೀಳಿಗೆ ಬದಲಾಗುತ್ತಿತ್ತು, ಆದರೆ ಈಗ ತಂತ್ರಜ್ಞಾನದ ವೇಗ ಎಷ್ಟು ವೇಗವಾಗಿದೆ ಎಂದರೆ ಈ ಪೀಳಿಗೆಗಳ ಬದಲಾವಣೆಗಳು ಕೇವಲ 10 ರಿಂದ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನವರಿ 1, 2025 ರಿಂದ, ಜನರೇಷನ್ ಬೀಟಾ ಎಂಬ ಹೊಸ ಪೀಳಿಗೆ ಪ್ರಾರಂಭವಾಗಿದೆ. ಹಿಂದಿನ ತಲೆಮಾರುಗಳು ಪ್ರತಿ 20 ವರ್ಷಗಳಿಗೊಮ್ಮೆ ಬದಲಾಗುತ್ತಿದ್ದವು, ಆದರೆ ಈಗ ಈ ಬದಲಾವಣೆ ಕೇವಲ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನರೇಷನ್ ಝಡ್ (1997-2012) ನಂತರ ಜನರೇಷನ್ ಆಲ್ಫಾ (2013-2024), ಮತ್ತು ಈಗ, ಜನವರಿ 1, 2025 ರಿಂದ ಜನರೇಷನ್ ಬೀಟಾ ಪೀಳಿಗೆ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್‌ ಬೀಟಾ ಎಂದು ಕರೆಯಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮೂರು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಹೊನ್ನಾವರದಲ್ಲಿ ಅಧಿಕ ಮಳೆ – Kannada News | Karnataka Weather Update: IMD Issues Orange Alert for 3 Districts; Honnavar Records Highest Rainfall

ಬೆಂಗಳೂರು, ಜುಲೈ 28: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ (Rain) ಮತ್ತೆ ಚುರುಕು ಪಡೆದಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಈ ನಡುವೆ ರಾಜ್ಯಾದ್ಯ ಕೆಲವೆಡೆ ನಾಳೆ ಉತ್ತಮ ಮಳೆಯ ನಿರೀಕ್ಷೆ ಇದ್ದು ಕರಾವಳಿಯ ಎರಡು ಮತ್ತು ಮಲೆನಾಡು ಭಾಗದ ಒಟ್ಟು 3 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ-ಮಲೆನಾಡಲ್ಲಿ ಮಳೆ ಅಬ್ಬರ

ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ನಿರೀಕ್ಷಿಸಲಾಗಿದ್ದು, ಈ ಪೈಕಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ಬಾಗಲಕೋಟೆ, ಬೀದರ್​​, ಗದಗ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ್ಲಿ ಗಂಟೆಗೆ 40-50 ಕಿ.ಮೀ. ವೇಗದ ಗಾಳಿಯ ಜೊತೆಗೆ ವರುಣಾರ್ಭಟ ಇರಲಿದೆ. ಹಾಗೆಯೇ ದಕ್ಷಿಣ ಒಳನಾಡಿನ, ಚಿಕ್ಕಮಗಳೂರಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಕೋಲಾರ, ಕೊಡಗು, ಮೈಸೂರು, ರಾಮನಗರ ಮತ್ತು ತುಮಕೂರಲ್ಲೂ ಮಳೆಯ ಸಾಧ್ಯತೆ ಇದೆ.

ಇದನ್ನೂ ಓದಿ: ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು; ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು

ಹೊನ್ನಾವರದಲ್ಲಿ ಉತ್ತಮ ಮಳೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 102 ಮಿ.ಮೀ. ಮಳೆಯಾಗಿದೆ. ಸುಳ್ಯದ ದೇವಚಳ್ಳ ಮತ್ತು ಕಾರ್ಕಳದ ನೀರೆಯಲ್ಲಿ ತಲಾ 99 ಮಿ.ಮೀ, ತೀರ್ಥಹಳ್ಳಿಯ ಆಗುಂಬೆಯಲ್ಲಿ 81 ಮಿ.ಮೀ, ಶೃಂಗೇರಿಯ ಕಿಗ್ಗದಲ್ಲಿ 52 ಮಿ.ಮೀ, ಸಕಲೇಶಪುರದ ಹೊಗದಹಳ್ಳದಲ್ಲಿ 44 ಮಿ.ಮೀ ಮತ್ತು ವಿರಾಜಪೇಟೆಯ ಬಿರುನಾನಿಯಲ್ಲಿ 43 ಮಿ.ಮೀ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ – Kannada News | 498A Cases: Karnataka HC Questions Definition of ‘Cruelty’ in Domestic Disputes

ಬೆಂಗಳೂರು ಜು. 28: ಅತ್ತೆಯ ವಿರುದ್ಧ ತಾವು ದಾಖಲಿಸಿದ್ದ 498ಎ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು (Stay) ತೆರವುಗೊಳಿಸುವಂತೆ ಕೋರಿ ಸೊಸೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, “ಸಂಸಾರದ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಪರಾಧ ಅಥವಾ 498ಎ ಅಡಿಯ ಕ್ರೌರ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವೇ?” ಎಂದು ತೀವ್ರವಾಗಿ ಪ್ರಶ್ನಿಸಿದೆ.

ಅರ್ಜಿದಾರ ಸೊಸೆಯು ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ. ತಮ್ಮ ದೂರಿನಲ್ಲಿ ಅತ್ತೆಯನ್ನು ‘ಟಾಕ್ಸಿಕ್ ಅತ್ತೆ’ ಎಂದು ಉಲ್ಲೇಖಿಸಿರುವ ಸೊಸೆ, ಅತ್ತೆ, ಅತ್ತೆಯ ಸಹೋದರ ಹಾಗೂ ಪತಿಯ ಸ್ನೇಹಿತನ ವಿರುದ್ಧ 498ಎ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆ ವೇಳೆ ಅವರು ಮಂಡಿಸಿದ ವಾದಗಳು ಇದೀಗ ಎಲ್ಲಡೆ ವೈರಲ್​ ಆಗಿದೆ.

ಪತಿಯ ಊಟ ಮುಗಿಯುವವರೆಗೆ ಅತ್ತೆ ನನಗೆ ಊಟ ನೀಡುತ್ತಿರಲಿಲ್ಲ. ಪತಿಗೆ ಬಿಸಿ ರಾಗಿ ಮುದ್ದೆ ಹಾಗೂ ಬಿಸಿ ದೋಸೆ ನೀಡಿದರೆ, ನನಗೆ ದಿನವೂ ದೋಸೆ ಅಕ್ಕಿಯ ಅನ್ನ ಮತ್ತು ದಾಲ್ ನೀಡುತ್ತಿದ್ದರು. ಸರಿಯಾದ ಪೌಷ್ಟಿಕಾಂಶಯುತ ಆಹಾರ ನೀಡದ ಕಾರಣ ನನಗೆ ಕೂದಲು ಉದುರಿದೆ. ಅಲ್ಲದೆ, ನಾನು ಬಳಸುತ್ತಿದ್ದ ‘ಮೀರಾ’ ಶ್ಯಾಂಪೂ ಬದಲಿಗೆ ‘ಡೌ (Dove)’ ಶ್ಯಾಂಪೂ ಬಳಸುವಂತೆ ಪತಿ ಒತ್ತಾಯಿಸುತ್ತಿದ್ದರು.

ಕಳೆದ ಒಂದು ತಿಂಗಳಿಂದ ಅತ್ತೆ ನನ್ನನ್ನು ಅಡುಗೆಮನೆಗೇ ಬಿಡುತ್ತಿಲ್ಲ. ಐದೂವರೆ ತಿಂಗಳ ಸಂಸಾರದಲ್ಲಿ ತೀವ್ರ ಕಿರುಕುಳ ನೀಡಿದ್ದು, ತವರು ಮನೆಯ ಮುಂದೆ ಬಂದು ತೆಗಳಿದ್ದಾರೆ ಎಂದು ವಾದಿಸಿದರು.

ಇದನ್ನೂ ಓದಿ: ಕಿವುಡ ತಂದೆಯ ಕನಸು ನನಸಾಗಿಸಿದ ಮಗ; AI ಎಂಜಿನಿಯರ್ ಆಗಿ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್

ಹೈಕೋರ್ಟ್​ನ ಗಂಭೀರ ಪ್ರಶ್ನೆ:

ಸೊಸೆಯ ಈ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಕಠಿಣ ಪ್ರಾಸಂಗಿಕ ಪ್ರಶ್ನೆಗಳನ್ನು ಎತ್ತಿತು. “ಇಂತಹ ಮನೆಯ ದೈನಂದಿನ ಸಾಮಾನ್ಯ ಸಮಸ್ಯೆಗಳನ್ನು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಿ. ಆದರೆ ಇವೆಲ್ಲವನ್ನೂ ೪೯೮ಎ ಅಡಿಯ ಕ್ರೌರ್ಯ ಅಥವಾ ಅಪರಾಧ ಎನ್ನಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿತು. ಕ್ರೌರ್ಯ ಎಂಬುದು ದೂರುದಾರರ ವೈಯಕ್ತಿಕ ದೃಷ್ಟಿಕೋನದಲ್ಲಿರುವುದಲ್ಲ, ಅದು ಕಾನೂನಿನಲ್ಲಿ ನಿರ್ವಚಿಸಿರುವಂತಿರಬೇಕು. ಮನೆಯ ದೈನಂದಿನ ಘಟನೆಗಳನ್ನು ಅಪರಾಧ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು, ಅರ್ಜಿಯ ಆದೇಶವನ್ನು ಕಾಯ್ದಿರಿಸಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Tue, 28 July 26

Source link

Exit mobile version