Asia Cup 2026: ಏಷ್ಯಾಕಪ್​ಗೆ ಭಾರತ ಮಹಿಳಾ ತಂಡ ಪ್ರಕಟ; ಜೆಮಿಮಾ, ಶ್ರೇಯಾಂಕ ಔಟ್..! – Kannada News | India Women’s Squad for 2026 T20 Asia Cup Announced: Kaur to Lead, Mandhana VC

ಇದೇ ಆಗಸ್ಟ್ 28 ರಿಂದ ಪ್ರಾರಂಭವಾಗಲಿರುವ 2026 ರ ಮಹಿಳಾ ಟಿ20 ಏಷ್ಯಾಕಪ್​ಗೆ (Women’s T20 Asia Cup 2026) ಭಾರತ ಮಹಿಳಾ ತಂಡವನ್ನು (India Women’s Squad) ಪ್ರಕಟಿಸಲಾಗಿದೆ. ಎಂದಿನಂತೆ ಈ ತಂಡವನ್ನು ಹರ್ಮನ್​ಪ್ರೀತ್ ಕೌರ್ (Harmanpreet Kaur) ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಳಿದಂತೆ ತಂಡದಲ್ಲಿ ನಿರೀಕ್ಷಿತ ಹೆಸರುಗಳೇ ಇವೆ. ಆದರೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಗಾಯದಿಂದಾಗಿ ಈ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಾಗೆಯೇ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಆಯ್ಕೆಯಾಗಿಲ್ಲ.

ತಂಡ ಹೀಗಿದೆ

ಬ್ಯಾಟಿಂಗ್‌ ವಿಭಾಗವನ್ನು ನೋಡುವುದಾದರೆ.. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೆಮಿಮಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ಭಾರತಿ ಫುಲ್‌ಮಾಲಿ ಬರಬಹುದು. 4ನೇ ಕ್ರಮಾಂಕದಲ್ಲಿ ನಾಯಕಿ ಹರ್ಮನ್​ಪ್ರೀತ್ ಕೌರ್ ಆಡಿದರೆ, ವಿಕೆಟ್‌ಕೀಪರ್ ಪಾತ್ರದಲ್ಲಿ ರಿಚಾ ಘೋಷ್ ಕಾಣಿಸಿಕೊಳ್ಳಲಿದ್ದಾರೆ.

ಆಲ್‌ರೌಂಡರ್ ಆಗಿ ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರಾಧಾ ಯಾದವ್ ಆಡಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ರೇಣುಕಾ ಠಾಕೂರ್, ನಂದನಿ ಶರ್ಮಾ ಇದ್ದರೆ, ಸ್ಪಿನ್ನರ್‌ಗಳಾಗಿ ಶ್ರೀಚರಣಿ, ಪ್ರೇಮಾ ರಾವತ್ ತಂಡದಲ್ಲಿದ್ದಾರೆ. ಎರಡನೇ ವಿಕೆಟ್​ ಕೀಪರ್ ಆಗಿ ಜಿ. ಕಮಲಿನಿ ಹಾಗೂ ಮತ್ತೊಬ್ಬ ಆರಂಭಿಕ ಆಟಗಾರ್ತಿಯಾಗಿ ಪ್ರತಿಕಾ ರಾವಲ್ ತಂಡದಲ್ಲಿದ್ದಾರೆ.

ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಭಾರತಿ ಫುಲ್‌ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.

ಏಷ್ಯಾಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಗಾಯಕ್ಕೆ ತುತ್ತಾದ ಜೆಮಿಮಾ ರೊಡ್ರಿಗಸ್

ಏಷ್ಯಾಕಪ್ ಯಾವಾಗ ಪ್ರಾರಂಭ?

ಮಹಿಳೆಯರ ಏಷ್ಯಾಕಪ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ದುಬೈನಲ್ಲಿ ನಡೆಯಲಿದೆ. ಅತ್ಯಂತ ಯಶಸ್ವಿ ತಂಡವಾದ ಭಾರತ ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 5 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಭಾರತ ತಂಡವು ಪಾಕಿಸ್ತಾನ, ಥೈಲ್ಯಾಂಡ್, ಹಾಂಗ್ ಕಾಂಗ್, ಚೀನಾ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದ್ದರೆ, ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಇಂಡೋನೇಷ್ಯಾ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಗ್ರೂಪ್ ಬಿ ಯಲ್ಲಿ ಸ್ಥಾನ ಪಡೆದಿವೆ.

ಭಾರತದ ವೇಳಾಪಟ್ಟಿ

  • ಆಗಸ್ಟ್ 30: ಭಾರತ vs. ಥೈಲ್ಯಾಂಡ್
  • ಸೆಪ್ಟೆಂಬರ್ 3: ಭಾರತ vs. ಹಾಂಗ್ ಕಾಂಗ್
  • ಸೆಪ್ಟೆಂಬರ್ 5: ಭಾರತ vs. ಪಾಕಿಸ್ತಾನ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:47 pm, Fri, 14 August 26

Source link

‘ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ’; ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು

ನವದೆಹಲಿ, ಆಗಸ್ಟ್ 14: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಆ ದೇಶದ ಸರ್ಕಾರವು ಅಲ್ಲಿನ ಜನರ ಮೇಲೆ ನಡೆಸುತ್ತಿದೆಯನ್ನಲಾದ ದೌರ್ಜನ್ಯಗಳು ಹಾಗೂ ಆ ಪ್ರದೇಶವನ್ನು ಭಯೋತ್ಪಾದನೆಯ ತಾಣವಾಗಿ ಬಳಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳನ್ನು ಅಂತಾರಾಷ್ಟ್ರೀಯ ಸಮುದಾಯವು ಗಮನಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ. ನಾರ್ವೆಯ ವಿದೇಶಾಂಗ ಸಚಿವರ ಪಾಕಿಸ್ತಾನ ಭೇಟಿಯ ಸಮಯದಲ್ಲಿ ನಡೆದ ಕಾಶ್ಮೀರದ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎರಟು ದಶಕ ಕಳೆದರೂ ಸಿಗದ ಪರಿಹಾರ: ಗದಗ ಡಿಸಿ ಕಾರನ್ನೇ ಕೊಂಡೊಯ್ದ ರೈತರು – Kannada News | Gadag DC Car Seized: Court Orders Action Over 20 Year Delay in Singatalur Project Land Compensation

ಕಾರು ಜಪ್ತಿ ಮಾಡಿದ ರೈತರುImage Credit source: tv9 kannada

ಗದಗ, ಆಗಸ್ಟ್​​ 14: ಅದು ಮೂರು ಜಿಲ್ಲೆಯ ಏತ ನೀರಾವರಿ ಯೋಜನೆ. ಈ ಏತ ನೀರಾವರಿ ಯೋಜನೆ ಜಾರಿಯಾದರೆ ನಮ್ಮ ಬದುಕು ಬಂಗಾರವಾಗುತ್ತೆ ಅಂತ ರೈತರು (Farmers) ಯೋಜನೆ ಭೂಮಿ ನೀಡಿದ್ದರು. ಆದರೆ ಭೂಮಿ ಹೋಯ್ತು ಎರಡು ದಶಕಗಳು ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಹೀಗಾಗಿ ರೈತರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಈಗ ಜಿಲ್ಲಾಧಿಕಾರಿಗಳ ಕಾರು ಸೀಜ್ (Car Seized) ಮಾಡಲು ಆದೇಶ ಮಾಡಿದ್ದು, ಇಂದು ರೈತರು ಡಿಸಿ ಕಾರು ಜಪ್ತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು, ಸರ್ಕಾರದ ಧೋರಣೆ ವಿರುದ್ಧ ರೈತರು ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದರು.

ನನಸಾಗದ ರೈತರ ಕನಸು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ, ಮೇವುಂಡಿ, ಕೊರ್ಲಹಳ್ಳಿ, ಯಕ್ಲಾಪೂರ ಸೇರಿ ಹಲವು ಗ್ರಾಮಗಳ ರೈತರು ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಹಳ್ಳಿಗೆ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರ ಸಿಂಗಟಾಲೂರ ಏತ ನೀರಾವರಿ ಯೋಜನೆ ಮಾಡಿದೆ. ಆರಂಭದಲ್ಲಿ ಯೋಜನೆ ಜಾರಿಯಾದರೆ ನಮ್ಮ ಜಮೀನುಗಳು ಹಸಿರಾಗುತ್ತವೆ, ಬದುಕು ಬಂಗಾರವಾಗುತ್ತೆ ಅಂತ ಕನಸು ಕಂಡಿದ್ದರು.

ಡಿಸಿ ಕಾರು ಸೀಜ್ ಮಾಡಿ ತೆಗೆದುಕೊಂಡು ಹೋದ ರೈತರು

ಇದೆ ಖುಷಿಯಲ್ಲಿ ಯೋಜನೆಗೆ ಗದಗ ಜಿಲ್ಲೆಯ ನೂರಾರು ಕ್ಕೂ ಹೆಚ್ಚು 350ಕ್ಕೂ ಹೆಚ್ಚು ಎಕರೆ ಭೂಮಿ ಯೋಜನೆ ನೀಡಿದ್ದರು. ಆದರೆ ಎರಡು ದಶಕಗಳು ಕಳೆದರೂ ಸರ್ಕಾರ ಪರಿಹಾರ ನೀಡಿಲ್ಲ. ಹೀಗಾಗಿ ರೈತರು ಕೊರ್ಟ್ ಮೊರೆ ಹೋಗಿದ್ದರು. ಇಂದು ಗದಗ ಜಿಲ್ಲಾ ನ್ಯಾಯಾಲಯ ಗದಗ ಡಿಸಿ ಸಿ ಎನ್ ಶ್ರೀಧರ್ ಅವರ ಕಾರನ್ನೇ ಜಪ್ತಿ ಮಾಡುವ ಆದೇಶ ನೀಡಿದೆ. ಹೀಗಾಗಿ ವಕೀಲರ ಸಮೇತ ಡಿಸಿ ಕಚೇರಿಗೆ ಎಂಟ್ರಿ ಕೊಟ್ಟ ರೈತರ ದಂಡು ಡಿಸಿ ಕಾರು ಸೀಜ್ ಮಾಡಿ ತೆಗೆದುಕೊಂಡು ಹೋದರು.

ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಕಂಪ್ಯೂಟರ್, AC ಮಾಯ: ಅಧಿಕಾರಿಗಳೇ ಲೂಟಿ ಮಾಡಿದ್ರಾ?

ಸರ್ಕಾರ, ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತ ವಿರದ್ಧ ರೈತರು ಕಿಡಿಕಾರಿದ್ದಾರೆ. ಎರಡು ದಶಕಗಳು ಕಳೆದ್ರೂ ಪರಿಹಾರ ನೀಡಿದ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಇಂದು ಜಿಲ್ಲಾಡಳಿತ ವಿರುದ್ಧ ಗೆದ್ದು ಬೀಗಿದ್ದಾರೆ. ಒಂದು ಎಕರೆಗೆ 40 ಲಕ್ಷ ರೂ ನೀಡುವಂತೆ ಕೋರ್ಟ್ ಆದೇಶ ಮಾಡಿದೆ ಅಂತ ವಕೀಲರು ಹೇಳಿದ್ದಾರೆ. ಪರಿಹಾರ ನೀಡದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೀಠೋಪಕರಣ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ.

ಪರಿಹಾರ ನೀಡದೇ ಚೆಲ್ಲಾಟ: ಕಣ್ಣೀರು ಹಾಕಿದ ರೈತ ಮಹಿಳೆ 

ಇನ್ನೂ ಸರ್ಕಾರದ ವಿಳಂಬಕ್ಕೆ ರೈತ ಮಹಿಳೆ ಕಣ್ಣೀರು ಹಾಕಿದರು. ‘ಹತ್ತು ವರ್ಷವಾದ್ರೂ ಸರ್ಕಾರ ಪರಿಹಾರ ಕೊಟ್ಟಿಲ್ಲ ಅಂತ ಕಣ್ಣೀರು ಹಾಕಿದ್ರು. ಗಂಡ ತೀರಿ ಹೋಗಿದ್ದಾನೆ. ಮಕ್ಕಳ್ಳಿಲ್ಲ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿ ಸಾಕಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಡಿಸಿ, ಅಧಿಕಾರಿಗಳಿಗೆ ಸರ್ಕಾರ ಸಂಬಳ ಕೊಡುತ್ತೆ. ಎಸಿ ರೂಂನಲ್ಲಿ ಹಾಯಾಗಿರ್ತಾರೆ. ನಮ್ಮ ಕಷ್ಟ ಯಾರ ಕೇಳ್ತಾರೆ ಅಂತ ರೈತ ಗದಿಗೆಪ್ಪ ಕಿಡಿ ಕಾರಿದ್ರು. ನಾವು ಗುಡಿಸಲಲ್ಲಿ ವಾಸ ಮಾಡ್ತೀವಿ. ನಮ್ಮ ನೋವು ಯಾವ ಸರ್ಕಾರ ಕೇಳುತ್ತೆ’ ಅಂತ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: Gadag Government Hostel Raid: ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ

ಮುಂಡರಗಿ ಭಾಗದ ರೈತರ ಬದುಕು ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಪಕ್ಕದಲ್ಲೇ ತುಂಗಭದ್ರ ನದಿ ಹರಿದರೂ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯುತ್ತಿಲ್ಲ. ಈಗ ಜಮೀನು ಇಲ್ಲ, ಪರಿಹಾರದ ಹಣವೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಗದಗ ಜಿಲ್ಲೆಯ ಸಚಿವರು, ಶಾಸಕರು ರೈತರ ಸಂಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ತಾಯಿಲ್ಲ. ಇನ್ನಾದ್ರೂ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪಾಕಿಸ್ತಾನ ನಮ್ಮ ರಕ್ತವನ್ನು ಹೀರಿಬಿಟ್ಟಿದೆ’; ಸಿಂಧೂ ಜಲ ಒಪ್ಪಂದ ರದ್ದತಿಗೆ ಒಮರ್ ಅಬ್ದುಲ್ಲಾ ಬೆಂಬಲ – Kannada News | Our blood has been drained; Jammu Kashmir CM Omar Abdullah backs Indus Waters Treaty cancellation

ಶ್ರೀನಗರ, ಆಗಸ್ಟ್ 14: ಸಿಂಧೂ ನದಿ ನೀರು ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿಯ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಇಂದು ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನವು ಭಾರತೀಯರ ರಕ್ತವನ್ನು ಹೀರಿಬಿಟ್ಟಿದೆ” ಎಂದು ವಾಗ್ದಾಳಿ ನಡೆಸಿದ ಅವರು, “ಸಿಂಧೂ ಜಲ ಒಪ್ಪಂದದ ಮೂಲಕ ನಮ್ಮ ರಕ್ತವನ್ನು ಸಂಪೂರ್ಣವಾಗಿ ಹೀರಲಾಗಿದೆ ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಇವು ನಮ್ಮ ನದಿಗಳು. ಇವುಗಳ ಮೇಲೆ ಮೊದಲ ಹಕ್ಕು ನಮ್ಮದೇ ಎಂಬುದು ಸಾರ್ವಕಾಲಿಕ ಸತ್ಯ” ಎಂದು ಅವರು ಹೇಳಿದ್ದಾರೆ.

“ಪಾಕಿಸ್ತಾನವು ಆಗಾಗ ತನ್ನನ್ನು ಕಾಶ್ಮೀರದ ಜನರ ದೊಡ್ಡ ಹಿತೈಷಿ ಎಂದು ಹೇಳಿಕೊಳ್ಳುತ್ತದೆ. ಆದರೆ ನೀರಿನ ವಿಚಾರ ಬಂದಾಗ ಆ ಕಾಳಜಿ ಎಲ್ಲಿ ಮಾಯವಾಗುತ್ತದೆ? ನಮ್ಮದೇ ನದಿಗಳನ್ನು ಬಳಸುವ ನಮ್ಮ ಹಕ್ಕನ್ನು ಕಸಿದುಕೊಂಡಾಗ ಅವರ ಕಾಳಜಿ ಎಲ್ಲಿಗೆ ಹೋಗಿತ್ತು?” ಎಂದು ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ

“ಗಡಿಯಲ್ಲಿರುವ ಒಟ್ಟು 6 ನದಿಗಳಲ್ಲಿ ಪಂಜಾಬ್ ಮೂಲಕ ಹರಿಯುವ 3 ನದಿಗಳನ್ನು ಭಾರತ ತನ್ನ ಬಳಿ ಇಟ್ಟುಕೊಂಡರೆ, ಉಳಿದ 3 ನದಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು. ಆದರೂ ಪಾಕಿಸ್ತಾನಕ್ಕೆ ಸಮಾಧಾನವಿಲ್ಲ. ಅಂದಿನಿಂದ ನಾವು ಸಿಂಧೂ ನದಿ ನೀರು ಒಪ್ಪಂದದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ನಮಗೆ ಚೀನಾಬ್ ನದಿಯಿಂದ ಕುಡಿಯುವ ನೀರನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ತುಲ್ಬುಲ್‌ನಲ್ಲಿ ಬ್ಯಾರೇಜ್ ನಿರ್ಮಿಸಲು ಮತ್ತು ನೀರಾವರಿಗಾಗಿ ಜೇಲಂ ನದಿಯನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ನೀರನ್ನು ಸಂಗ್ರಹಿಸಲು ಮತ್ತು ನಿಯಂತ್ರಿಸಲು ನಮ್ಮ ಯಾವುದೇ ನದಿಗಳ ಮೇಲೆ ದೊಡ್ಡ ಆಣೆಕಟ್ಟು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಇದನ್ನು “ರಕ್ತದ ಹನಿ” ಎಂದು ಕರೆದಿರುವುದು ಒಳ್ಳೆಯದೇ ಆಯಿತು. ಅವರು ಹೇಳಿದ್ದು ಸರಿಯಾಗಿದೆ. ಈ ನೀರು ನಮ್ಮ ರಕ್ತ. ನಮ್ಮ ರಕ್ತವನ್ನು ಹೀರಲಾಗಿದೆ. ಈಗ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ನಮ್ಮ ಜಲಸಂಪನ್ಮೂಲಗಳನ್ನು ನಾವು ಸರಿಯಾಗಿ ಬಳಸಿಕೊಳ್ಳಲು ಇದು ರದ್ದಾಗಿಯೇ ಉಳಿಯಬೇಕು” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪೂರ್ಣ ರಾಜ್ಯದ ಅರ್ಹತೆ ಪುನಃಸ್ಥಾಪನೆಗೆ ಒಮರ್ ಪಟ್ಟು:

ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಅರ್ಹತೆಯನ್ನು ಪುನಃಸ್ಥಾಪಿಸಬೇಕೆಂಬ ತಮ್ಮ ಬೇಡಿಕೆಯನ್ನು ಒಮರ್ ಅಬ್ದುಲ್ಲಾ ಪುನರುಚ್ಚರಿಸಿದ್ದು, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಆರಂಭವಷ್ಟೇ. ಇನ್ನು ಮುಂದೆ ಸಾಕಷ್ಟು ಹೋರಾಟಗಳು ಬರಲಿವೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ವೇತನ ಹಿಂಬಾಕಿ ರಿಲೀಸ್ – Kannada News | Karnataka government releases rs 170 crore salary arrears of transport employees

ಬೆಂಗಳೂರು, (ಆಗಸ್ಟ್ 14): ಕರ್ನಾಟಕ ಸಾರಿಗೆ ನೌಕರರಿಗೆ (Transport Employees) ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. 170 ಕೋಟಿ ರೂಪಾಯಿ ವೇತನ ಹಿಂಬಾಕಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. 26 ತಿಂಗಳ ವೇತನ ಹಿಂಬಾಕಿಯ 1271 ಕೋಟಿ ರೂಪಾಯಿ ಕೊಡಬೇಕಿತ್ತು. ಈ ಹಿಂದೆ ಸರ್ಕಾರ 450 ಕೋಟಿ ಬಿಡುಗಡೆ ಮಾಡಿತ್ತು. 821 ಕೋಟಿ ಹಿಂಬಾಕಿಯಲ್ಲಿ ಇಂದು ಮತ್ತೆ 170 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು ಈ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದು, ಉಳಿದ 651 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ. ಸಾರಿಗೆ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕಲ್ಪಿಸಲಾಗುವುದು. ನಾಲ್ಕು ನಿಗಮಗಳಿಗೆ ಯೋಜನೆ ವಿಸ್ತರಣೆ ಆಗಲಿದೆ ಎಂದು ಉಚಿತ ವೈದ್ಯಕೀಯ ಸೇವೆ ನೀಡುವ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ – Kannada News | Bengaluru Public Outraged Over GBA’s New RS 15,000 Monthly Parking Fee

ಬೆಂಗಳೂರು, ಆಗಸ್ಟ್​​ 14: ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೊಳಿಸಿರುವ ಹೊಸ ಪಾರ್ಕಿಂಗ್ ನಿಯಮಗಳು ನಗರದ ವಾಹನ ಸವಾರರಿಗೆ ತೀವ್ರ ಆಘಾತ ಉಂಟು ಮಾಡಿವೆ. ಮನೆ ಮುಂದೆ ವಾಹನ ನಿಲ್ಲಿಸಲು ತಿಂಗಳಿಗೆ 15 ಸಾವಿರ ರೂ ಶುಲ್ಕ ಪಾವತಿಸಿ ಪಾಸ್ ಪಡೆಯಬೇಕೆಂಬ ನಿಯಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಬಹುತೇಕ ಸಣ್ಣ ನಿವೇಶನಗಳು ಹಾಗೂ ಬಾಡಿಗೆ ಮನೆಗಳಲ್ಲಿ ಸ್ವಂತ ಪಾರ್ಕಿಂಗ್ ಸ್ಥಳಾವಕಾಶ ಇಲ್ಲದಿರುವಾಗ, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಇಷ್ಟೊಂದು ದುಬಾರಿ ಶುಲ್ಕ ವಿಧಿಸುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಜನರು ಕಿಡಿಕಾರಿದ್ದಾರೆ. ಈಗಾಗಲೇ ಪಾಲಿಕೆಗೆ ವಿವಿಧ ತೆರಿಗೆಗಳನ್ನು ಪಾವತಿಸುತ್ತಿದ್ದು, ಜಿಬಿಎ ಮೊದಲು ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಪರ್ಯಾಯ ಮೂಲಸೌಕರ್ಯಗಳನ್ನು ರೂಪಿಸಿ, ಆ ಬಳಿಕ ನಾಮಮಾತ್ರದ ದರ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಗಲಕೋಟೆ ಕಾರು ಸ್ಫೋಟ ಕೇಸ್​​ಗೆ ಟ್ವಿಸ್ಟ್​​! ವೈನ್ ಶಾಪ್ ಮ್ಯಾನೇಜರ್​​​ ಕೊಲೆ ಯತ್ನದ ರಹಸ್ಯ ಬಯಲು – Kannada News | Bagalkot Car Explosion Case Takes a Twist: Mystery Behind Attempted Murder of Wine Shop Manager Revealed

ಬಾಗಲಕೋಟೆ, ಆಗಸ್ಟ್​​ 14: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ನಡೆದಿದ್ದ ವೈನ್ ಶಾಪ್ ಮ್ಯಾನೇಜರ್​​ ಕಾರು ಸ್ಫೋಟ ಪ್ರಕರಣದ (Car Blast) ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ನಾಲ್ಕು ಎಕರೆ ಜಮೀನಿನ ವಿವಾದ ಹಾಗೂ ಹಣಕಾಸಿನ ವಿಚಾರಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಕಾರನ್ನು ಸ್ಫೋಟಿಸಿ ಕೊಲೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಲ್ವರ ಬಂಧನ: ಓರ್ವನ ಪತ್ತೆಗೆ ಬಲೆ ಬೀಸಿದ ಪೊಲೀಸ್​​

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಪ್ರಮುಖ ಸಂಚುಕೋರ ಶಿವಾನಂದ ಪರಸಪ್ಪ ಜಲ್ಲಿ (29), ಸ್ಫೋಟಕ ಇಡಲು ಸಹಕರಿಸಿದ ರೇವಣಪ್ಪ ನಿಂಗಪ್ಪ ಜಲ್ಲಿ (24), ಮೊಬೈಲ್ ಹಾಗೂ ಬೆದರಿಕೆ ಸಂದೇಶ ರವಾನೆಗೆ ನೆರವಾದ ಹೆಬ್ಬಾಳಟ್ಟಿ ಗ್ರಾಮದ ಮಹಾದೇವ ಬೀರಪ್ಪ ಸಂಗಾಪುರ (21) ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಬಬಲೇಶ್ವರದ ಮಲ್ಲಿಕಾರ್ಜುನ ಮುರಗೆಪ್ಪ ಭದ್ರಾಪನವರ (23) ಬಂಧಿತ ಆರೋಪಿಗಳು. ಸ್ಫೋಟಕಗಳನ್ನು ಪೂರೈಸಿದ್ದ ಮತ್ತೊಬ್ಬ ಪ್ರಮುಖ ಸೂತ್ರಧಾರ ಗಜಾನನ ಸಂಗಾಪುರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹಿಪ್ಪರಗಿಯಲ್ಲಿ ಬಾರ್​​ ಮುಂದೆ ನಿಲ್ಲಿಸಿದ್ದ ಕಾರು ಸ್ಫೋಟ: ತಪ್ಪಿದ ಭಾರಿ ದುರಂತ

ಜುಲೈ 25ರ ರಾತ್ರಿ 10.45ರ ಸುಮಾರಿಗೆ ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಶಾಪ್ ಮ್ಯಾನೇಜರ್ ಹನುಮಂತ ಅಥಣಿ ಅವರ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಭೀಕರವಾಗಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಬಿಡಿಭಾಗಗಳು ನೂರಾರು ಮೀಟರ್ ದೂರ ಹಾಗೂ ಮರಗಳ ಮೇಲೂ ಹಾರಿ ಬಿದ್ದಿದ್ದವು. ಆ ಸಮಯದಲ್ಲಿ ಮ್ಯಾನೇಜರ್ ಹನುಮಂತ, ಕಾರು ಹತ್ತಲು ಹೋಗುವ ಮುನ್ನ ಕ್ಯಾಶ್ ಕೌಂಟರ್ ಬಳಿ ಕೆಲ ಕ್ಷಣ ನಿಂತಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಬೆಳಗಾವಿ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಜಮೀನು ವಿವಾದವೇ ಕೃತ್ಯಕ್ಕೆ ಕಾರಣ

ಪೊಲೀಸರ ತನಿಖೆ ವೇಳೆ ಜಮೀನು ವಿವಾದವೇ ಈ ಕೃತ್ಯಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಹನುಮಂತ ಹೆಬ್ಬಾಳಟ್ಟಿ ಗ್ರಾಮದ ಲಿಂಗಪ್ಪ ಎಂಬುವರಿಗೆ 40 ಲಕ್ಷ ರೂ ಸಾಲ ನೀಡಿದ್ದು, ಹಣ ಮರಳಿಸದ ಕಾರಣ ಅವರ 4 ಎಕರೆ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಬಳಿಕ ಲಿಂಗಪ್ಪನ ಸಹೋದರನ ಮಗ ಶಿವಾನಂದ ಜಲ್ಲಿ, ತಾನು 67 ಲಕ್ಷ ರೂ ನೀಡುವುದಾಗಿ ಹೇಳಿ ಹೊಲವನ್ನು ಬಿಡಿಸಿಕೊಂಡಿದ್ದ. ಆದರೆ ಮೊದಲ ಕಂತು ಮತ್ತು ಬಡ್ಡಿ ಹಣವನ್ನು ನೀಡದೆ ಸತಾಯಿಸುತ್ತಿದ್ದ. ಹನುಮಂತ ಹಣ ನೀಡುವಂತೆ ಅಥವಾ ಜಮೀನು ಬಿಡುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಿವಾನಂದ, ಹನುಮಂತನನ್ನು ಮುಗಿಸಿದರೆ ಹಣವನ್ನೂ ನೀಡಬೇಕಿಲ್ಲ ಮತ್ತು ಆಸ್ತಿಯೂ ಉಳಿಯುತ್ತದೆ ಎಂದು ಸಂಚು ರೂಪಿಸಿದ್ದ.

ವಿಫಲವಾದ ಕೊಲೆ ಯತ್ನ ಪ್ಲ್ಯಾನ್​​

ಬೆಳಗಾವಿಯ ಅಥಣಿ ಹಾಗೂ ವಿಜಯಪುರದ ಕಲ್ಲೂರಿನಲ್ಲಿ ಜಿಲೆಟಿನ್ ಮತ್ತು ಡೆಟೋನೇಟರ್ ಖರೀದಿಸಿ, ಘಟನೆಯ ರಾತ್ರಿ ಕಾರಿನ ಮುಂಭಾಗದ ಎಡಗಡೆಯ ಟೈರ್ ಹಿಂಭಾಗ 30 ಜಿಲೆಟಿನ್ ಕಡ್ಡಿಗಳ ಸ್ಫೋಟಕವನ್ನು ಇರಿಸಲಾಗಿತ್ತು. ಬಳಿಕ ವೈನ್ ಶಾಪ್ ಪಕ್ಕದ ಕಬ್ಬಿನ ಗದ್ದೆಯಲ್ಲಿ 100 ಮೀಟರ್ ದೂರ ಕುಳಿತು ಡೆಟೋನೇಟರ್ ವೈರ್ ಮೂಲಕ ಕಾರನ್ನು ಸ್ಫೋಟಿಸಲಾಗಿತ್ತು. ಆದರೆ ಕೊಲೆ ಯತ್ನ ವಿಫಲವಾಗಿತ್ತು.

ಇದನ್ನೂ ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?

ಆಗಸ್ಟ್ 6ರಂದು ಕದ್ದ ಸಿಮ್ ಕಾರ್ಡ್ ಬಳಸಿ ಹನುಮಂತ ಮತ್ತು ಅವರ ಸಹೋದರ ಬಸವರಾಜ್‌ಗೆ ವಾಟ್ಸ್‌ಆ್ಯಪ್ ಹಾಗೂ ಎಸ್‌ಎಂಎಸ್ ಮೂಲಕ ಹಣ ಮತ್ತು ಜಮೀನಿನ ಬೇಡಿಕೆ ಕೈಬಿಡುವಂತೆ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇದೇ ಕದ್ದ ಸಿಮ್ ಕಾರ್ಡ್ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರು, ಸತತ 20 ದಿನಗಳ ಕಾರ್ಯಚರಣೆಯ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾರ್ಮಿಕರ ಬಾಕಿ ಬೇಡಿಕೆ ಈಡೇರಿಕೆಗೆ ಆಗ್ರಹ; ಆಗಸ್ಟ್ 17ರಂದು ಬೃಹತ್ ಪ್ರತಿಭಟನೆಗೆ ಭಾರತೀಯ ಮಜ್ದೂರ್ ಸಂಘ ಕರೆ – Kannada News | Trade union Bharatiya Mazdoor Sangh BMS to hold Nationwide demonstrations on 17th August

ನವದೆಹಲಿ, ಆಗಸ್ಟ್ 14: ಕಾರ್ಮಿಕರು, ನೌಕರರು, ಪಿಂಚಣಿದಾರರು, ಯೋಜನೆ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಶ್ರಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ, ಭಾರತೀಯ ಮಜ್ದೂರ್ ಸಂಘ (BMS) ಆಗಸ್ಟ್ 17ರಂದು ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ದೇಶವ್ಯಾಪಿ ಹೋರಾಟದ ಭಾಗವಾಗಿ, ಆಗಸ್ಟ್ 17ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬಿಎಂಎಸ್ ಬೃಹತ್ ಧರಣಿ ಮತ್ತು ಪ್ರತಿಭಟನಾ ಪ್ರದರ್ಶನವನ್ನು ಆಯೋಜಿಸಲಿದೆ.

ಈ ಹೋರಾಟದಲ್ಲಿ ವಿವಿಧ ವಲಯಗಳ ಕಾರ್ಮಿಕರು ಮತ್ತು ಒಕ್ಕೂಟಗಳ ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಜುಲೈನಲ್ಲಿ ರಾಂಚಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ ಫೆಡರೇಶನ್‌ಗಳಿಗೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೆ, ಜಿಲ್ಲಾಡಳಿತದ ಮೂಲಕ ಗೌರವಾನ್ವಿತ ಪ್ರಧಾನಮಂತ್ರಿ, ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

ಬಿಎಂಎಸ್‌ನ ಮುಖ್ಯ ಬೇಡಿಕೆಗಳು:

EPS-95 ಪಿಂಚಣಿ ಹೆಚ್ಚಳ: EPS-95 ಅಡಿಯಲ್ಲಿ ನೀಡಲಾಗುವ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ 7,500 ರೂ.ಗೆ ಹೆಚ್ಚಿಸಬೇಕು, ಇದನ್ನು ವೇರಿಯಬಲ್ ತುಟ್ಟಿಭತ್ಯೆಗೆ (VDA) ಮತ್ತು ಆಯುಷ್ಮಾನ್ ಭಾರತ್ ಯೋಜನೆಗೆ ಜೋಡಿಸಬೇಕು.

ESI ಮತ್ತು EPF ಮಿತಿ ಹೆಚ್ಚಳ: ESI ವೇತನ ಮಿತಿಯನ್ನು 21,000 ರೂ.ದಿಂದ 42,000 ರೂ.ಗೆ ಹಾಗೂ EPF ವೇತನ ಮಿತಿಯನ್ನು 15,000 ರೂ.ದಿಂದ 30,000 ರೂ.ಗೆ ಹೆಚ್ಚಿಸಬೇಕು.

ಬೋನಸ್ ಮತ್ತು ಗ್ರಾಚುಯಿಟಿ: ಹೊಸ ಕಾರ್ಮಿಕ ಸಂಹಿತೆಗಳ ಪ್ರಕಾರ ಪೂರ್ಣ ವೇತನದ ಮೇಲೆ ಬೋನಸ್ ನೀಡಬೇಕು. ಗ್ರಾಚುಯಿಟಿಯನ್ನು 15 ದಿನಗಳ ವೇತನದಿಂದ 30 ದಿನಗಳ ವೇತನಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲದೆ ಹೆಚ್ಚಿಸಬೇಕು.

ವಿಜ್ಞಾನ ಆಧಾರಿತ ಕನಿಷ್ಠ ವೇತನ: ಹಣದುಬ್ಬರಕ್ಕೆ ಅನುಗುಣವಾಗಿ ಕನಿಷ್ಠ ವೇತನವನ್ನು ವೈಜ್ಞಾನಿಕ ಸೂತ್ರದ ಮೂಲಕ ನಿಗದಿಪಡಿಸಬೇಕು.

ಗುತ್ತಿಗೆ ಮತ್ತು ಯೋಜನೆ ಕಾರ್ಮಿಕರಿಗೆ ನ್ಯಾಯ: ಅಂಗನವಾಡಿ, ಆಶಾ, ಬಿಸಿಯೂಟ, ಎನ್‌ಎಚ್‌ಎಮ್ ಮತ್ತಿತರ ಯೋಜನೆ ಕಾರ್ಮಿಕರ ಗೌರವಧನ ಹೆಚ್ಚಿಸಬೇಕು. ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

ಇತರ ಬೇಡಿಕೆಗಳು: ಬ್ಯಾಂಕಿಂಗ್ ಕ್ಷೇತ್ರದಲ್ಲಿ 5 ದಿನಗಳ ಕೆಲಸದ ಅವಧಿ ಜಾರಿಗೊಳಿಸಬೇಕು. ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸಬೇಕು ಮತ್ತು ಭಾರತೀಯ ಕಾರ್ಮಿಕ ಸಮಾವೇಶವನ್ನು (ILC) ತಕ್ಷಣವೇ ಕರೆಯಬೇಕು.

ಇದನ್ನೂ ಓದಿ: ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ

ಕಾರ್ಮಿಕ ಸಂಹಿತೆಗಳಿಗೆ ವಿರೋಧ:

ಇದೇ ವೇಳೆ, ಕಾರ್ಮಿಕರ ಹಕ್ಕುಗಳು ಮತ್ತು ಉದ್ಯೋಗ ಭದ್ರತೆಯನ್ನು ಸಡಿಲಗೊಳಿಸುವ ‘ಕೈಗಾರಿಕಾ ಸಂಬಂಧಗಳ ಸಂಹಿತೆ’ ಹಾಗೂ ‘ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ’ಗಳ ಹಲವು ನಿಯಮಗಳಿಗೆ ಬಿಎಂಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಕಾರ್ಮಿಕ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದೆ. ಅಂಗನವಾಡಿ ಮುಂತಾದ ಕಡೆ ದಿನಕ್ಕೆ 10ರಿಂದ 12 ಗಂಟೆ ಕೆಲಸ ಮಾಡುವ ಕಾರ್ಮಿಕರನ್ನು ಇಂದಿಗೂ ‘ಖಾಯಂ ಕಾರ್ಮಿಕರು’ ಎಂದು ಪರಿಗಣಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ದೇಶದ 1 ಕೋಟಿಗೂ ಹೆಚ್ಚು ಸ್ಕೀಮ್ ಕಾರ್ಮಿಕರಿಗಾಗಿ ನೂತನ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕೆಂದು ಬಿಎಂಎಸ್ ಸರ್ಕಾರಕ್ಕೆ ಆಗ್ರಹಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಪ್ಲೇಯಿಂಗ್ 11 ಬಗ್ಗೆ ಸುಳಿವು ನೀಡಿದ ಶುಭ್​ಮನ್ ಗಿಲ್ – Kannada News | India vs Sri Lanka 1st Test: Shubman Gill Hints at Playing XI in Galle

ಆಗಸ್ಟ್ 15 ರಿಂದ ಗಾಲೆಯಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಕೂಡ ಸಜ್ಜಾಗಿವೆ. ಆದರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ತಂಡದಲ್ಲಿರಬೇಕಿದ್ದ ಕೆಲವು ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿ ಈ ಪ್ರವಾಸದಿಂದ ಹೊರಗಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ತಂಡದಲ್ಲಿ ಯಾರು ತುಂಬುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇದೀಗ ಈ ಪ್ರಶ್ನೆಗಳಿಗೆಲ್ಲ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ತೆರೆ ಎಳೆದಿದ್ದಾರೆ. ಪಂದ್ಯ ಆರಂಭಕ್ಕೆ ಒಂದು ದಿನ ಮುಂಚೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್ ಪ್ಲೇಯಿಂಗ್ 11 ಬಗ್ಗೆ ಸುಳಿವು ನೀಡಿದ್ದಾರೆ.

ಸಿರಾಜ್ ಜೊತೆಗೆ ಪ್ರಸಿದ್ಧ್

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಮೊಹಮ್ಮದ್ ಸಿರಾಜ್ ಅವರ ಹೆಗಲ ಮೇಲೆ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಎರಡನೇ ವೇಗದ ಬೌಲರ್ ಆಗಿ ಯಾರು ತಂಡದಲ್ಲಿ ಇರುತ್ತಾರೆ ಎಂಬುದೇ ಪ್ರಶ್ನೆ. ಪ್ರಸಿದ್ಧ್ ಕೃಷ್ಣ ಅಥವಾ ಗುರ್ನೂರ್ ಬ್ರಾರ್ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಇದೀಗ ಪತ್ರಿಕಾಗೋಷ್ಠಿಯಲ್ಲಿ ಈ ಗೊಂದಲಗಳಿಗೆ ತೆರೆ ಎಳೆದಿರುವ ಗಿಲ್, ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಪ್ರಸಿದ್ಧ್ ಕೃಷ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ.

ತಂಡದಲ್ಲಿ ನಾಲ್ವರು ವೇಗದ ಬೌಲರ್‌ಗಳಿದ್ದಾರೆ. ಅವರಲ್ಲಿ ಮೊಹಮ್ಮದ್ ಸಿರಾಜ್ ಆಡುವುದು ಖಚಿತ. ಅಕಿಬ್ ನಬಿ ಈ ರೇಸ್‌ನಿಂದ ಹೊರಗುಳಿದಿದ್ದಾರೆ. ಆದ್ದರಿಂದ, ಗುರ್ನೂರ್ ಬ್ರಾರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಆದರೆ ಈಗ, ಶುಭ್‌ಮನ್ ಗಿಲ್ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಅನ್ನು ಹೊಗಳಿರುವುದರಿಂದ, ಅವರಿಗೆ ಪ್ಲೇಯಿಂಗ್ 11 ರಲ್ಲಿ ಅವಕಾಶ ಸಿಗುವ ಸೂಚನೆಗಳಿವೆ. ಇದಕ್ಕೆ ಪೂರಕವಾಗಿ ಪ್ರಸಿದ್ಧ್ ಪ್ರಸ್ತುತ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಆಡಿರುವ 7 ಟೆಸ್ಟ್ ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs SL: ಶೇ. 82 ರಷ್ಟು ಮಳೆ..! ಗಾಲೆ ಟೆಸ್ಟ್ ಮೊದಲ ದಿನದಾಟ ನಡೆಯುವುದು ಅನುಮಾನ

ಮೂವರು ಸ್ಪಿನ್ನರ್‌ಗಳಿಗೆ ಅವಕಾಶ

ಗಾಲೆ ಪಿಚ್ ಅನ್ನು ಗಮನಿಸಿದರೆ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ಹೀಗಾಗಿ ರವೀಂದ್ರ ಜಡೇಜಾ, ಮಾನವ್ ಸುತಾರ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ವೇಗದ ಬೌಲಿಂಗ್ ಜವಾಬ್ದಾರಿ ಸಿರಾಜ್ ಮತ್ತು ಪ್ರಸಿದ್ಧ್ ಅವರ ಹೆಗಲ ಮೇಲೆ ಇರಲಿದೆ. ಸಾಯಿ ಸುದರ್ಶನ್ ಅನುಪಸ್ಥಿತಿಯಲ್ಲಿ, ದೇವದತ್ ಪಡಿಕ್ಕಲ್ ಮೂರನೇ ಸ್ಥಾನದಲ್ಲಿ ಅವಕಾಶ ಪಡೆಯಲಿದ್ದಾರೆ. ಧ್ರುವ್ ಜುರೆಲ್ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಆದ್ದರಿಂದ, ಸರ್ಫರಾಜ್ ಖಾನ್ ಅವಕಾಶಕ್ಕಾಗಿ ಕಾಯಬೇಕಾಗಬಹುದು.

ಭಾರತದ ಸಂಭಾವ್ಯ ಆಡುವ 11: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸಿತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:04 pm, Fri, 14 August 26

Source link

ಚೀನಾದಲ್ಲೂ ಅಬ್ಬರಿಸಲಿದೆ ‘ರಾಮಾಯಣ’ ಸಿನಿಮಾ; ಆದರೆ, ಬದಲಾಗಲಿದೆ ಶೀರ್ಷಿಕೆ – Kannada News | Ranbir Kapoor Yash Sai Pallavi starrer Ramayana Part 1 releasing in China but New Title

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ನಟನೆಯ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಲು ಸಜ್ಜಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದಲ್ಲೂ ಈ ಮಹಾಕಾವ್ಯ ಆಧಾರಿತ ಸಿನಿಮಾ ತೆರೆಕಾಣಲಿದ್ದು, ಅಲ್ಲಿ ಹೊಸ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಲಿದೆ. ಈ ಹಿಂದೆ ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಸಿನಿಮಾ ಚೀನಾದಲ್ಲಿ ಭಾರಿ ದಾಖಲೆ ಬರೆದಿತ್ತು. ಇದೀಗ ಸುಮಾರು ಒಂದು ದಶಕದ ನಂತರ ಅವರ ‘ರಾಮಾಯಣ’ ಚಿತ್ರವೂ ಚೀನಾ (China) ಮಾರುಕಟ್ಟೆಗೆ ಕಾಲಿಡುತ್ತಿದೆ.

ಚೀನಾದಲ್ಲಿ ಹೊಸ ಹೆಸರು: ‘ದಿ ಲೆಜೆಂಡ್ ಆಫ್ ಪ್ರಿನ್ಸ್’:

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚೀನಾದಲ್ಲಿ ಈ ಚಿತ್ರಕ್ಕೆ ‘ದಿ ಲೆಜೆಂಡ್ ಆಫ್ ಪ್ರಿನ್ಸ್’ (The Legend of Prince) ಎಂದು ಹೆಸರಿಡಲಾಗಿದೆ. ಪ್ರಸಿದ್ಧ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಚೀನಾದಲ್ಲಿ ಈ ಸಿನಿಮಾವನ್ನು ವಿತರಣೆ ಮಾಡಲಿದೆ. ಅಲ್ಲಿನ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಚಿತ್ರದ ಪ್ರಚಾರಕ್ಕಾಗಿ ಚೀನಾದಲ್ಲಿ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲು ಚಿತ್ರತಂಡ ಯೋಜಿಸಿದೆ. ಸೆಪ್ಟೆಂಬರ್ 24ರಂದು ಅಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ತದನಂತರ ಅಕ್ಟೋಬರ್ 1ರಿಂದ ಪ್ರಾರಂಭವಾಗುವ ಚೀನಾದ ‘ಗೋಲ್ಡನ್ ವೀಕ್’ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ಭಾರಿ ಪ್ರಚಾರ ಪ್ರವಾಸ ನಡೆಸಲು ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ತಂಡ ಯೋಜನೆ ರೂಪಿಸಿದೆ.

ದೀಪಾವಳಿ ಧಮಾಕಾ: ಬಿಡುಗಡೆ ದಿನಾಂಕ ಘೋಷಣೆ:

‘ರಾಮಾಯಣ: ಪಾರ್ಟ್ 1’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ 6ರಂದು ಬಿಡುಗಡೆಯಾಗಲಿದ್ದು, ಭಾರತದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಶುಕ್ರವಾರ ತೆರೆಕಾಣಲಿದೆ. ವಿದೇಶದ ಪ್ರೇಕ್ಷಕರು ಎರಡು ದಿನ ಮುಂಚಿತನಾಗಿಯೇ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ದೀಪಾವಳಿ ಹಬ್ಬ ಇರುವುದರಿಂದ, ಮಾರುಕಟ್ಟೆ ದೃಷ್ಟಿಯಿಂದ ಚಿತ್ರತಂಡ ಭಾರತದಲ್ಲಿ 2 ದಿನ ತಡವಾಗಿ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಭಾರತಕ್ಕೂ ಮುನ್ನ ವಿದೇಶದಲ್ಲಿ ‘ರಾಮಾಯಣ’ ರಿಲೀಸ್; ಲೀಕ್ ಭೀತಿಯಲ್ಲಿ ಫ್ಯಾನ್ಸ್ ಅಪ್ಸೆಟ್

‘ರಾಮಾಯಣ’ ಸಿನಿಮಾದ ವಿಎಫ್‌ಎಕ್ಸ್ ಹಾಗೂ ಸಿಜಿಐ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಮಿಶ್ರ ಪ್ರತಿಕ್ರಿಯೆಗೆ ರಣಬೀರ್ ಕಪೂರ್ ಅವರು ಉತ್ತರ ನೀಡಿದ್ದಾರೆ. ‘ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಸಿಜಿ ವಿಮರ್ಶಕರು ಹೆಚ್ಚಾಗಿದ್ದಾರೆ. ವರ್ಷಗಟ್ಟಲೆ ಶ್ರಮವಹಿಸಿ ಕೆಲಸ ಮಾಡಿದ ಕಲಾವಿದರ ಶ್ರಮವನ್ನು ಗುರುತಿಸಬೇಕು’ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version