’25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ’; ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ – Kannada News | Over 25 Crore People Lifted Out Of Poverty President Droupadi Murmu Addresses Nation On Independence Day Eve

ನವದೆಹಲಿ, ಆಗಸ್ಟ್ 14: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಇಂದು (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ದೇಶ-ವಿದೇಶಗಳಲ್ಲಿರುವ ಎಲ್ಲಾ ಭಾರತೀಯರಿಗೂ ಶುಭಾಶಯ ಕೋರಿದರು. ಇದೇ ಮೊದಲ ಬಾರಿ ರಾಷ್ಟ್ರಪತಿಗಳ ಭಾಷಣಕ್ಕೂ ಮುನ್ನ ‘ವಂದೇ ಮಾತರಂ’ ಗೀತೆ ಮೊಳಗಿತು. ನಂತರ ರಾಷ್ಟ್ರಗೀತೆಯಾದ ‘ಜನ ಗಣ ಮನ’ವನ್ನು ಪ್ರಸಾರ ಮಾಡಲಾಯಿತು.

“ದೇಶದಲ್ಲಿ 25 ಕೋಟಿಗೂ ಹೆಚ್ಚು (250 ಮಿಲಿಯನ್) ಜನರನ್ನು ಬಡತನದಿಂದ ಹೊರತರಲಾಗಿದೆ. ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಾಗಿದೆ. ಉಚಿತ ಧಾನ್ಯ ಯೋಜನೆಯ ಮೂಲಕ 80 ಕೋಟಿ (800 ಮಿಲಿಯನ್) ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸಲಾಗಿದೆ. ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ (PM-JAY)ಯಡಿ 60 ಕೋಟಿ ಜನರಿಗೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಪರೀಕ್ಷಾ ಅಕ್ರಮ ತಡೆಗೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ:

ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ಹಾಗೂ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸುವ ಉದ್ದೇಶದಿಂದ ಸರ್ಕಾರವು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಇದನ್ನೂ ಓದಿ: ನಮ್ಮ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು: ರಾಷ್ಟ್ರಪತಿ ದ್ರೌಪದಿ ಮುರ್ಮು ಗಣರಾಜ್ಯೋತ್ಸವ ಸಂದೇಶ

“ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ, ಈ ರಾಷ್ಟ್ರೀಯ ಹಬ್ಬದ ಸವಿನೆನಪಿನಲ್ಲಿ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ಇನ್ನು ಕೆಲವೇ ಗಂಟೆಗಳಲ್ಲಿ ನಮ್ಮ ದೇಶವು ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡಲಿದೆ. ದೇಶ ವಿದೇಶಗಳಲ್ಲಿರುವ ಭಾರತೀಯರು ಸ್ವಾತಂತ್ರ್ಯ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ತ್ರಿವರ್ಣ ಧ್ವಜವು ನಮ್ಮ ಸ್ವತಂತ್ರತೆಯ ಸಂಕೇತವಾಗಿದ್ದು, ಅದನ್ನು ಹೆಮ್ಮೆಯಿಂದ ಹಾರಿಸಲಾಗುತ್ತದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

“ಆಗಸ್ಟ್ 15, 1947ರಂದು ಭಾರತ ಮಾತೆಯು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಳಾದಳು. ಪ್ರಜೆಗಳೇ ಸ್ವತಂತ್ರ ಭಾರತದ ಭವಿಷ್ಯದ ಶಿಲ್ಪಿಗಳಾದರು. ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಮತ್ತು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಬೇಕು. ಇದೇ ಸ್ವಾತಂತ್ರ್ಯದ ನಿಜವಾದ ಅರ್ಥ” ಎಂದು ಅವರು ಕರೆ ನೀಡಿದರು.

ರಾಷ್ಟ್ರ ನಿರ್ಮಾತೃಗಳಿಗೆ ಶ್ಲಾಘನೆ:

ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಶ್ರಮಿಕರು ಮತ್ತು ರೈತರ ಕೊಡುಗೆಯನ್ನು ರಾಷ್ಟ್ರಪತಿ ಮುರ್ಮು ಮುಕ್ತಕಂಠದಿಂದ ಶ್ಲಾಘಿಸಿದರು. ಅಲ್ಲದೆ, ಕ್ರೀಡಾಪಟುಗಳು, ಕಲಾಕಾರರು, ಬುದ್ಧಿಜೀವಿಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳು, ಜನಪ್ರತಿನಿಧಿಗಳು, ನ್ಯಾಯಾಂಗದ ಸದಸ್ಯರು, ನಾಗರಿಕ ಸೇವಕರು, ಹೂಡಿಕೆದಾರರು, ಸಮಾಜ ಸೇವಕರು ಮತ್ತು ಸ್ವಚ್ಛತಾ ಕಾರ್ಯಕರ್ತರ ಶ್ರಮವನ್ನು ಅವರು ಸ್ಮರಿಸಿದರು.

ಇದನ್ನೂ ಓದಿ: Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಮೂರೂ ಸೇನಾ ಪಡೆಗಳು, ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಪೊಲೀಸರ ನಿಸ್ವಾರ್ಥ ಸೇವೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶೇಷವಾಗಿ ಶ್ಲಾಘಿಸಿದರು. ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತಿರುವ ಅನಿವಾಸಿ ಭಾರತೀಯರಿಗೆ ಹಾಗೂ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಪಾಲಿಸುತ್ತಿರುವ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜವಾಬ್ದಾರಿಗಳನ್ನು ಉಲ್ಲೇಖಿಸಿದ ಅವರು, ಶಾಸಕಾಂಗದಲ್ಲಿ ಜನಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಧ್ವನಿಸಬೇಕು, ಕಾರ್ಯಾಂಗವು ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ನೀತಿಗಳನ್ನು ಜಾರಿಗೊಳಿಸಬೇಕು ಹಾಗೂ ನ್ಯಾಯಾಂಗವು ಸಂಪನ್ಮೂಲಗಳ ಕೊರತೆಯಿಂದಾಗಿ ಯಾರಿಗೂ ನ್ಯಾಯ ನಿರಾಕರಣೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:45 pm, Fri, 14 August 26

Source link

ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ – Kannada News | AMCA fighter jet programme, RIL partnership with Rolls Royce to develop indigenous engine

ಎಎಂಸಿಎ ಫೈಟರ್ ಜೆಟ್​ನ ಮಾದರಿImage Credit source: PTI

ಮುಂಬೈ, ಆಗಸ್ಟ್ 14: ಭಾರತದ 5ನೇ ಪೀಳಿಗೆಯ ಯುದ್ಧ ವಿಮಾನ ಯೋಜನೆಯಾದ ‘ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್’ (AMCA) ಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಇಂಜಿನ್ ತಯಾರಿಸಲು ಆಸಕ್ತಿ ತೋರಿದೆ. ಇದಕ್ಕಾಗಿ ಬ್ರಿಟನ್ ಮೂಲದ ರೋಲ್ಸ್ ರಾಯ್ಸ್ (Rolls-Royce) ಜೊತೆ ಆರ್​ಐಎಲ್ ಸಹಭಾಗಿತ್ವ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು ಸೇರಿ ಎಎಂಸಿಎ ಯೋಜನೆಯಡಿ ತಯಾರಾಗುವ ಜೆಟ್​ಗೆ ಸ್ವಂತವಾಗಿ ಕಾಂಬ್ಯಾಟ್ ಇಂಜಿನ್ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಮಾಡಲು ಸಜ್ಜಾಗಿವೆ. ಪ್ರಾಜೆಕ್ಟ್​ನಲ್ಲಿ ಈ ಸಂಸ್ಥೆಗಳು ಬಿಡ್ ಸಲ್ಲಿಸಬಹುದು.

ಏರೋಸ್ಪೇಸ್ ಗ್ಯಾಸ್ ಟರ್ಬೈನ್ ಕಾಂಪ್ಲೆಕ್ಸ್ ಸ್ಥಾಪನೆ

ಈ ಪಾಲುದಾರಿಕೆಯ ಭಾಗವಾಗಿ, ಉಭಯ ಸಂಸ್ಥೆಗಳು ಭಾರತದಲ್ಲಿ ಪವರ್ ಮತ್ತು ಪ್ರೊಪಲ್ಷನ್ ತಂತ್ರಜ್ಞಾನಕ್ಕಾಗಿ ‘ಏರೋಸ್ಪೇಸ್ ಗ್ಯಾಸ್ ಟರ್ಬೈನ್ ಕಾಂಪ್ಲೆಕ್ಸ್’ ಸ್ಥಾಪಿಸಲು ನಿರ್ಧರಿಸಿವೆ. ಇದು ಇಂಜಿನ್ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆ ಸೇರಿದಂತೆ ಸಂಪೂರ್ಣ ಹಂತಗಳನ್ನು ಭಾರತದಲ್ಲಿಯೇ ನಿರ್ವಹಿಸುವ ಕೇಂದ್ರವಾಗಲಿದೆ.

ಇದನ್ನೂ ಓದಿ: CBDC ಆಧಾರಿತ DBTಗೆ ಚಾಲನೆ: ಪ್ರಲ್ಹಾದ್ ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್

ಆತ್ಮನಿರ್ಭರ ಭಾರತಕ್ಕೆ ಬಲ

ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಮತ್ತು ದೇಶೀಯ ರಕ್ಷಣಾ ವಲಯದ ಬಲವರ್ಧನೆಯ ದೃಷ್ಟಿಕೋನಕ್ಕೆ ಈ ಒಪ್ಪಂದವು ಪ್ರಮುಖ ಹೆಜ್ಜೆಯಾಗಲಿದೆ. ಭಾರತದ ಯುದ್ಧ ವಿಮಾನಗಳಿಗೆ ಅಗತ್ಯವಿರುವ ಇಂಜಿನ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ರೋಲ್ಸ್ ರಾಯ್ಸ್​ನ ಟೆಕ್ನಾಲಜಿ, ರಿಲಯನ್ಸ್​ನ ಸ್ಕೇಲಿಂಗ್ ಸಾಮರ್ಥ್ಯದ ಸಮ್ಮಿಲನ: ಅಂಬಾನಿ

“ಭಾರತದ ಕಾರ್ಯತಂತ್ರದ ಸ್ವಾಯತ್ತತೆಗೆ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಅಗತ್ಯ. ರೋಲ್ಸ್-ರಾಯ್ಸ್ ಸಂಸ್ಥೆಯ ವಿಶ್ವದರ್ಜೆಯ ಪ್ರೊಪಲ್ಷನ್ ತಂತ್ರಜ್ಞಾನ ಮತ್ತು ರಿಲಯನ್ಸ್‌ನ ಉತ್ಪಾದನೆ ಹಾಗೂ ಅನುಷ್ಠಾನ ಸಾಮರ್ಥ್ಯವನ್ನು ಒಟ್ಟುಗೂಡಿಸಿ, ಭಾರತದಲ್ಲೇ ಬಲವಾದ ಏರೋ-ಇಂಜಿನ್ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ” ಎಂದು ರಿಲಯನ್ಸ್ ಇಂಡಸ್ಟ್ರೀಸ್​ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಅನಂತ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ

ಶತಮಾನದ ಅನುಭವ ರಿಲಯನ್ಸ್ ಜೊತೆ ಹಂಚಿಕೊಳ್ಳುತ್ತೇವೆ: ರೋಲ್ಸ್ ರಾಯ್ಸ್

“ನಮ್ಮ ಒಂದು ಶತಮಾನದ ಇಂಜಿನಿಯರಿಂಗ್ ಅನುಭವ ಮತ್ತು ಇಂಜಿನ್ ಪರಿಣತಿಯನ್ನು ಭಾರತದ ಪ್ರಮುಖ ಸಂಸ್ಥೆಯಾದ ರಿಲಯನ್ಸ್ ಜೊತೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಇದು ಭಾರತದಲ್ಲಿ ಸಶಸ್ತ್ರ ಏರೋಸ್ಪೇಸ್ ವಲಯವನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ರೋಲ್ಸ್ ರಾಯ್ಸ್ ಪಿಎಲ್​ಸಿಯ ಸಿಇಒ ತುಫಾನ್ ಎರ್ಗಿನ್‌ಬಿಲ್ಗಿಚ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Independence Day 2026: ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ – Kannada News | Independence Day 2026: What are the history and significance of Independence Day?

ಆಗಸ್ಟ್ 15 ನಮ್ಮ ದೇಶ ಸ್ವಾತ್ರಂತ್ರ್ಯ ಪಡೆದ ದಿನ. 1947 ಆಗಸ್ಟ್‌ 15 ರಂದು ಭಾರತವು 200 ವರ್ಷಗಳ ಬ್ರಿಟಿಷ್‌ ಆಳ್ವಿಕೆಯಿಂದ ಮುಕ್ತವಾಗಿ ಭಾರತ ಪ್ರಜಾಸತಾತ್ಮಕ ರಾಷ್ಟ್ರವಾಗಿ ರೂಪುಗೊಂಡಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವ ಸಲುವಾಗಿ ದೇಶಾದ್ಯಂತ ಪ್ರತಿವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ (Independence Day) ದಿನವನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಆಗಸ್ಟ್ 15 ರಂದು 80 ನೇ ಸ್ವಾತಂತ್ರೋತ್ಸವವನ್ನು ಆಚರಿಸಲು ಸಜ್ಜಾಗಿದ್ದಾರೆ.

ಸ್ವಾತಂತ್ರ್ಯ ದಿನದ ಇತಿಹಾಸವೇನು?

ಜುಲೈ 4, 1947 ರಂದು, ಭಾರತೀಯ ಸ್ವಾತಂತ್ರ್ಯ ಮಸೂದೆಯನ್ನು ಬ್ರಿಟಿಷ್ ಹೌಸ್ ಆಫ್ ಕೊಲೊನಿಯಲ್​ನಲ್ಲಿ ಪರಿಚಯಿಸಲಾಯಿತು. ಜುಲೈ ತಿಂಗಳ 18 ರಂದು ಆ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆ ಕಾಯ್ದೆಯು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮುಖ್ಯ ಮುನ್ನುಡಿ ಬರೆಯಿತು. ಕೆಲವೇ ಕೆಲವು ದಿನಗಳ ನಂತರದಲ್ಲಿ ಅಂದರೆ 1947 ಆಗಸ್ಟ್ 15 ರಂದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ದೆಹಲಿಯ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು. ಭಾರತವನ್ನು ಅಧಿಕೃತವಾಗಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಯೇ ಬಿಟ್ಟರು. ಈ ಹೋರಾಟದ ಹಾದಿಯಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತರಾಗಲು ದೇಶಪ್ರೇಮಿಗಳು ತಮ್ಮ ಪ್ರಾಣವನ್ನೇ ಅರ್ಪಿಸಿಕೊಂಡರು. ಸ್ವಾತಂತ್ರ್ಯಗಾರರ ತ್ಯಾಗ ಬಲಿದಾನಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: Indian Independence 2026: ತ್ರಿವರ್ಣ ಧ್ವಜದ ಮಧ್ಯದಲ್ಲಿ “ಅಶೋಕ ಚಕ್ರ”ದ ಕುತೂಹಲಕಾರಿ ಸಂಗತಿಗಳು

ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಆಚರಣೆ ಹೇಗೆ?

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ನಾವು ಈ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರನ್ನು ಗೌರವಿಸಬೇಕಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು, ಭಾರತದ ಪ್ರಧಾನಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಾವು ಕೂಡ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ನಾಗರಿಕರು ವಿವಿಧ ಕಡೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

ಗಮನ ಸೆಳೆಯುತ್ತಿದೆ ‘ಇರುಮುಡಿ’ ಸಿನಿಮಾ, ‘ಟಾಕ್ಸಿಕ್’ಗೆ ಠಕ್ಕರ್? – Kannada News | Ravi Teja’s Irumudi movie to be release on August 21

ರವಿತೇಜ, ತೆಲುಗಿನಲ್ಲಿ (Telugu) ದಶಕಗಳಿಂದ ಕೆಲಸ ಮಾಡುತ್ತಿರುವ ಸ್ಟಾರ್ ನಟ. ಮಾಸ್ ಮಹಾರಾಜ ಎಂದೇ ಕರೆಸಿಕೊಳ್ಳುವ ರವಿತೇಜ ಇತ್ತೀಚೆಗೆ ಯಾಕೋ ತುಸು ಮಂಕಾಗಿದ್ದಾರೆ. ವಿಶೇಷವಾಗಿ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಲ್ಲಿ ಎಡವುತ್ತಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಒಂದರ ಹಿಂದೊಂದು ಫ್ಲಾಪ್ ಆದವು. ಆದರೆ ಇದೀಗ ರವಿತೇಜ ‘ಇರುಮುಡಿ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.

‘ಇರುಮುಡಿ’ ಹೆಸರೇ ಹೇಳುವಂತೆ ಅಯ್ಯಪ್ಪ ಸ್ವಾಮಿಯ ಕುರಿತಾದ ಕತೆ. ಸಿನಿಮಾದ ಪೋಸ್ಟರ್​​ಗಳಲ್ಲಿ ಸಹ ರವಿತೇಜ ಇರುಮುಡಿ ಹೊತ್ತಿರುವ ಜೊತೆಗೆ ಅವರ ಮಗಳು ಸಹ ಇರುವ ಪೋಸ್ಟರ್​​ಗಳು ಬಿಡುಗಡೆ ಆಗಿದ್ದವು. ಇದು ಮಲಯಾಳಂನ ‘ಮಲಿಕಾಪುರಂ’ ಸಿನಿಮಾದ ರೀಮೇಕ್ ಎಂದುಕೊಳ್ಳಲಾಗಿತ್ತು. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬಳಿಕ ಸಿನಿಮಾ ಕೇವಲ ಅಯ್ಯಪ್ಪ ಸ್ವಾಮಿ, ಇರುಮುಡಿ ಬಗ್ಗೆ ಮಾತ್ರವೇ ಅಲ್ಲದೆ, ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಎಂಬುದು ತಿಳಿಯುತ್ತಿದೆ.

ಟ್ರೈಲರ್​​ನಲ್ಲಿರುವಂತೆ ನಾಯಕ ಅಯ್ಯಪ್ಪನ ಪರಮ ಭಕ್ತ, ಆದರೆ ಮಾಲೆ ಧರಿಸದಾಗ ಮದ್ಯ ಸೇವಿಸುವ, ಜಗಳ ಮಾಡುವ ವ್ಯಕ್ತಿ. ಆದರೆ ಮಗಳೆಂದರೆ ಆತನಿಗೆ ಪ್ರಾಣ. ಆದರೆ ಆ ಊರಿನಲ್ಲಿ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯಲು ಆರಂಭವಾಗುತ್ತವೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಹಾಗೂ ಊರಿನ ಎಲ್ಲ ಹೆಣ್ಣು ಮಕ್ಕಳನ್ನು ಅತ್ಯಾಚಾರಿಗಳಿಂದ ಸಂರಕ್ಷಿಸಿಕೊಳ್ಳಲು ಹೋರಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಒಟಿಟಿಗೆ ಬಂತು ರಶ್ಮಿಕಾ, ಶಾಹಿದ್ ಕಪೂರ್, ಕೃತಿ ಸನನ್ ನಟನೆಯ ‘ಕಾಕ್‌ಟೇಲ್ 2’ ಸಿನಿಮಾ

‘ಇರುಮುಡಿ’ ಸಿನಿಮಾನಲ್ಲಿ ಅಯ್ಯಪ್ಪನ ಭಕ್ತಿ, ಮಾಲಧಾರಣೆ ಒಂದು ವಿಷಯವೇ ಹೊರತು ಇಡೀ ಸಿನಿಮಾ ಅದರ ಬಗ್ಗೆಯೇ ಇಲ್ಲ ಎಂಬುದನ್ನು ಟ್ರೈಲರ್ ಹೇಳುತ್ತಿದೆ. ಟ್ರೈಲರ್ ಬಿಡುಗಡೆ ಬಳಿಕ ‘ಇರುಮುಡಿ’ ಸಿನಿಮಾ ಟ್ರೆಂಡ್ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಆಗಸ್ಟ್ 16 ರಂದು ನಡೆಯಲಿದ್ದು, ಅಯ್ಯಪ್ಪ ಮಾಲಧಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಆ ಕಾರ್ಯಕ್ರಮಕ್ಕೆ ರಾಮ್ ಚರಣ್ ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆಯೂ ಇದೆ.

‘ಇರುಮುಡಿ’ ಸಿನಿಮಾ ಆಗಸ್ಟ್ 21 ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಬಾಲಿವುಡ್ ಸಿನಿಮಾಗಳು ಸಹ ‘ಟಾಕ್ಸಿಕ್’ ಎದುರು ಸ್ಪರ್ಧೆ ಬೇಡವೆಂದು ರಿಲೀಸ್ ಮುಂದೂಡಿಕೆ ಮಾಡಿಕೊಳ್ಳುತ್ತಿರುವಾಗ ‘ಇರುಮುಡಿ’ ಸಿನಿಮಾ ಹಿಂಜರಿಕೆ ಇಲ್ಲದೆ ರಿಲೀಸ್​​ಗೆ ರೆಡಿ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಬಳಿ ಈ ದಾಖಲೆಗಳಿದ್ರೆ ಮೃತ ವ್ಯಕ್ತಿಯ ಬ್ಯಾಂಕ್ ಖಾತೆಗಳ ವಿವರ ಪಡೆಯೋದು ಸುಲಭ – Kannada News | Bank Account: You can obtain details of the deceased person’s bank account if you have these documents

ಪ್ರತಿಯೊಬ್ಬರ ಬಳಿ ಉಳಿತಾಯ ಬ್ಯಾಂಕ್ (Saving Account) , ಚಾಲ್ತಿ ಖಾತೆ ಹೀಗೆ ಒಂದಾದರೂ ಖಾತೆಯನ್ನು ಹೊಂದಿರುತ್ತಾರೆ. ಆದರೆ ಖಾತೆ ಹೊಂದಿದ ವ್ಯಕ್ತಿ ಮೃತ ಪಟ್ಟರೆ ಆ ಖಾತೆಯ ಮೊತ್ತವನ್ನು ನಾಮಿನಿ ಪಡೆಯಬಹುದು. ಆದರೆ ಈ ಖಾತೆಯಲ್ಲಿ ನಾಮಿನಿ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಆಧರಿಸಿ ಪ್ರಕ್ರಿಯೆ ಬದಲಾಗುತ್ತದೆ. ಮೃತಪಟ್ಟ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳು, ಕುಟುಂಬ ಸದಸ್ಯರು ಅಥವಾ ನಾಮಿನಿಗಳು ತಮ್ಮ ಖಾತೆಯಲ್ಲಿರುವ ಹಣವನ್ನು ಕ್ಲೈಮ್ ಮಾಡುತ್ತಾರೆ. ಒಂದು ವೇಳೆ ಖಾತೆದಾರರ ಬ್ಯಾಂಕ್ ವಿವರಗಳ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಯುಡಿಜಿಎಎಂ ಪೋರ್ಟಲ್ ಮೂಲಕ ಪರಿಶೀಲಿಸಬಹುದು. ಆದರೆ ಇದಕ್ಕೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಜನ್ಮ ದಿನಾಂಕದ ಮಾಹಿತಿ ಹಾಗೂ ಇನ್ನಿತ್ತರ ದಾಖಲೆಗಳು ನಿಮ್ಮ ಬಳಿ ಇರಬೇಕು.

ಮೃತ ವ್ಯಕ್ತಿ ಬ್ಯಾಂಕ್ ವಿವರಗಳನ್ನು ತಿಳಿದುಕೊಳ್ಳುವುದು ಹೇಗೆ?

ಹಂತ 1: ಮೊದಲು ನೀವು UDGAM Portal ವೆಬ್ ಸೈಟ್‌ಗೆ ಭೇಟಿ ನೀಡಿ.

ಹಂತ 2: ಮೃತ ವ್ಯಕ್ತಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆ ನೀಡಿ ಲಾಗಿನ್ ಖಾತೆ ತೆರೆಯಿರಿ.

ಹಂತ 4: ಮೃತ ವ್ಯಕ್ತಿಯ ಪೂರ್ಣ ಹೆಸರನ್ನು ಸರಿಯಾಗಿ ಟೈಪ್ ಮಾಡಿ. ಮೃತ ವ್ಯಕ್ತಿ ಹೊಂದಿದ್ದ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ.

ಹಂತ 5: ಮೃತ ವ್ಯಕ್ತಿಯ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ, ವೋಟರ್ ಐಡಿ, ಪಾಸ್‌ಪೋರ್ಟ್ ಈ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು.

ಹಂತ 6: ಈ ವಿವರಗಳನ್ನು ಸಲ್ಲಿಸಿದ ನಂತರ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕ್ಲೈಮ್ ಮಾಡದ ಹಣವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಹಂತ 7: ಪೋರ್ಟಲ್ ನ ಸ್ಕ್ರೀನ್ ಮೇಲೆ ಕಾಣುವ ವಿವರ ಅಥವಾ UDRN ಕೋಡ್‌ನ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಳ್ಳಿ

ಹಂತ 8: ಬ್ಯಾಂಕ್ ಶಾಖೆಗೆ ಮರಣ ಪ್ರಮಾಣಪತ್ರ, ವಾರಸುದಾರರ ದಾಖಲೆ ಹಾಗೂ ಕೆವೈಸಿ ಪತ್ರ ಈ ದಾಖಲೆಗಳೊಂದಿಗೆ ಬ್ಯಾಂಕ್ ಹಣ ಕ್ಲೈಮ್ ಮಾಡಲು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಮೃತ ವ್ಯಕ್ತಿಯ ಹಣವನ್ನು ಯಾರು ಪಡೆಯಲು ಅರ್ಹರಾಗಿರುತ್ತಾರೆ?

ಉತ್ತರ: ಮೃತ ವ್ಯಕ್ತಿಯ ಹಣವನ್ನು ಪಡೆಯಲು ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಅರ್ಹರಾಗಿರುತ್ತಾರೆ.

ಪ್ರಶ್ನೆ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯುವುದು ಹೇಗೆ?

ಉತ್ತರ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು UDGAM Portal ವೆಬ್ ಸೈಟ್ ಗೆ ಭೇಟಿ ನೀಡಿ.

ಪ್ರಶ್ನೆ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು ಅವರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ, ವೋಟರ್ ಐಡಿ, ಪಾಸ್‌ಪೋರ್ಟ್ ಈ ದಾಖಲೆಗಳಲ್ಲಿ ಯಾವುದಾದರೂ ಒಂದಿದ್ದರೆ ಸಾಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ನಮ್ಮ ಹೊಸ ಹೀರೋ. ನಿಮ್ಮ ಲೀಡರ್”: ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ – Kannada News | New hero, Your Leader: DK Shivakumar introduced Yatindra Siddaramaiah In assembly council Session

ಬೆಂಗಳೂರು, (ಆಗಸ್ಟ್ 14): ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಆಗಸ್ಟ್ 14) ವಿಧಾನಪರಿಷತ್ ಕಲಾಪದಲ್ಲಿ ನೂತನ ಸಚಿವರನ್ನು ಪರಿಚಯ ಮಾಡಿಕೊಟ್ಟರು. ಈ ವೇಳೆ ಮೊದಲ ಬಾರಿ ಸಚಿವರಾಗಿ ವಿಧಾನ ವಿಧಾನ ಪರಿಷತ್​​​​ನ ಸಭಾನಾಯಕರಾಗಿರುವ ಯತೀಂದ್ರ ಸಿದ್ದರಾಮಯ್ಯವರನ್ನು ವಿಶೇಷ ರೀತಿಯಲ್ಲಿ ಪರಿಚಯ ಮಾಡಿಕೊಟ್ಟರು. ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, “ನಮ್ಮ ಹೊಸ ಹೀರೋ. ನಿಮ್ಮ ಲೀಡರ್” ಎಂದು ಬೆನ್ನುತಟ್ಟಿ ಪರಿಚಯ ಮಾಡಿಕೊಟ್ಟಿರುವುದು ವಿಶೇಷವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

ಧ್ವಜ ಕೇಳೋರಿಲ್ಲ: ದೇಶದ‌ ಏಕೈಕ ಹುಬ್ಬಳ್ಳಿಯ ಖಾದಿ‌‌ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಇದೀಗ ಮುಚ್ಚುವ ಭೀತಿ – Kannada News | Hubballi’s Sole National Flag Manufacturer Faces Closure Threat Over Polyester

ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘImage Credit source: tv9 kannada

ಹುಬ್ಬಳ್ಳಿ, ಆಗಸ್ಟ್​​ 14: ದೇಶಾದ್ಯಂತ ಸ್ವಾತಂತ್ರ್ಯ ದಿನದ (Independence Day) ಸಂಭ್ರಮ ಜೋರಾಗಿದೆ. ಆದರೆ ರಾಷ್ಟ್ರಧ್ವಜಗಳು ಮಾರಾಟವಾಗದೇ ಇರುವುದರಿಂದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ ಸಿಬ್ಬಂದಿ ಕಂಗಾಲಾಗಿದ್ದಾರೆ. ರಾಷ್ಟ್ರದ ಅಧಿಕೃತ ಏಕೈಕ ರಾಷ್ಟ್ರಧ್ವಜ (National Flag) ತಯಾರಿಕೆ ಸಂಸ್ಥೆಯಲ್ಲಿ ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗದೆ ಹಾಗೆ ಉಳಿದಿವೆ. ಪಾಲಿಸ್ಟರ್ ಧ್ವಜಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದರಿಂದ, ಇದೀಗ ಖಾದಿಯಿಂದ ತಯಾರಾಗುವ ಧ್ವಜಗಳನ್ನು ಕೇಳುವರಿಲ್ಲದಂತಾಗಿದೆ. ಹಾಗಾಗಿ ಸಂಸ್ಥೆಯನ್ನೇ ಮುಚ್ಚುವ ಸ್ಥಿತಿ ಎದುರಾಗಿದೆ.

ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯತ್ತ ಮುಖ ಮಾಡಿದ ಜನರು

ಆಗಸ್ಟ್ 15 ಮತ್ತು ಜನವರಿ 26 ಭಾರತೀಯರ ಪಾಲಿಗೆ ಮರೆಯಲಾರದ ದಿನಗಳು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ಹಬ್ಬಗಳನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂದು ಎಲ್ಲಡೆ ರಾಷ್ಟ್ರಧ್ವಜವನ್ನು ಹಾರಿಸಿ, ದೇಶಭಕ್ತಿ ಮೆರೆಯಲಾಗುತ್ತದೆ. ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಹಳ್ಳಿಯ ಶಾಲೆಯವರಗೆ ಹಾರಾಡುತ್ತಿರುವ ರಾಷ್ಟ್ರಧ್ವಜಗಳು ತಯಾರಾಗುವುದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ.

ಇದನ್ನೂ ಓದಿ: Indian Independence 2026: ತ್ರಿವರ್ಣ ಧ್ವಜದ ಮಧ್ಯದಲ್ಲಿ “ಅಶೋಕ ಚಕ್ರ”ದ ಕುತೂಹಲಕಾರಿ ಸಂಗತಿಗಳು

ದೇಶದಲ್ಲಿ ರಾಷ್ಟ್ರಧ್ವಜ ತಯಾರಿಕೆ ಮತ್ತು ಮಾರಾಟಕ್ಕೆ ಪರವಾನಗಿ ಪಡೆದ ದೇಶದ ಏಕೈಕ ಸಂಸ್ಥೆ ಎನ್ನುವ ಹೆಮ್ಮೆಯನ್ನು ಈ ಸಂಸ್ಥೆ ಪಡೆದಿತ್ತು. 1957 ರಿಂದ ಇಲ್ಲಿ ಖಾದಿ ಬಟ್ಟೆ ನೇಯುವ ಕೆಲಸ ನಡೆಯುತ್ತಿತ್ತು. ಬಳಿಕ ರಾಷ್ಟ್ರಧ್ವಜಗಳನ್ನು ಸಿದ್ಧ ಮಾಡಿ, ದೇಶಾದ್ಯಂತ ಕಳುಹಿಸಲಾಗುತ್ತಿತ್ತು. ಆಗಸ್ಟ್ 15, ಜನವರಿ 26 ಬಂದರೆ ಈ ಸಂಸ್ಥೆಯಲ್ಲಿ ಕಾಲಿಡಲಿಕ್ಕಾಗದಷ್ಟು ಜನರು. ಹೆಚ್ಚಿನ ಜನರು ಬಂದು ರಾಷ್ಟ್ರಧ್ವಜಗಳನ್ನು ಖರೀದಿಸುತ್ತಿದ್ದರು. ಆದರೆ ಎರಡ್ಮೂರು ವರ್ಷದಿಂದ ಈ ಸಂಸ್ಥೆಯತ್ತ ಜನರು ಮುಖ ಮಾಡುತ್ತಿಲ್ಲ. ಹೀಗಾಗಿ 17 ಎಕರೆ ವಿಸ್ತೀರ್ಣದಲ್ಲಿರುವ ಸಂಸ್ಥೆ ಇದೀಗ ಬಣಗುಡುತ್ತಿದೆ. ಹೀಗೆ ಆದರೆ ಕೆಲವೇ ವರ್ಷಗಳಲ್ಲಿ ಸಂಸ್ಥೆ ಮುಚ್ಚುವ ಹಂತಕ್ಕೆ ಹೋಗುತ್ತೆ ಅಂತಿದ್ದಾರೆ ಸಿಬ್ಬಂದಿ.

50 ಲಕ್ಷ ರೂ ಧ್ವಜಗಳು ಮಾರಾಟ

ಬೆಂಗೇರಿಯಲ್ಲಿರುವ ಈ ಸಂಸ್ಥೆಯಲ್ಲಿ ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳ ಮಾರಾಟ ಗಣನೀಯವಾಗಿ ಕುಸಿತವಾಗಿದೆ. ಈ ಮೊದಲು ವಾರ್ಷಿಕವಾಗಿ ಮೂರು ಕೋಟಿಗೂ ಹೆಚ್ಚು ಹಣವನ್ನು ಸಂಸ್ಥೆ ಕೇವಲ ರಾಷ್ಟ್ರಧ್ವಜಗಳ ಮಾರಾಟದಿಂದ ಗಳಿಸುತ್ತಿತ್ತು. ಆದರೆ ಕಳೆದ ವರ್ಷ ಕೇವಲ 50 ಲಕ್ಷ ರೂ ಮೌಲ್ಯದ ಧ್ವಜಗಳು ಮಾರಟವಾದರೆ, ಈ ವರ್ಷ ಕೂಡ 50 ಲಕ್ಷ ರೂ ಧ್ವಜಗಳು ಮಾತ್ರ ಮಾರಾಟವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಅಂತ ಸಾವಿರಾರು ಧ್ವಜಗಳನ್ನು ಸಂಸ್ಥೆ ಸಿಬ್ಬಂದಿ ತಯಾರು ಮಾಡಿದ್ದರು. ಆದರೆ ಮಾರಾಟವಾಗದೇ ಇದ್ದಿದ್ದರಿಂದ ಅವೆಲ್ಲಾ ಇದೀಗ ಸಂಸ್ಥೆಯ ಗೂಡೌನ್​ ಸೇರಿವೆ.

ಬೆಂಗೇರಿ ಖಾದಿ ಸಂಸ್ಥೆಯ ಮೇಲೆ ದೊಡ್ಡ ಪೆಟ್ಟು

ಇನ್ನು ಗಣನೀಯವಾಗಿ ಮಾರಾಟ ಕಡಿಮೆಯಾಗಲು ಕಾರಣ, ಕೇಂದ್ರ ಸರ್ಕಾರದ ಅದೊಂದು ತಿದ್ದುಪಡಿ. 2022ರಲ್ಲಿ ಆಜಾದಿಕಾ ಅಮೃತ್ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಹರಘರ್ ತಿರಂಗಾ ಅಭಿಯಾನಕ್ಕಾಗಿ, ಕೇಂದ್ರ ಸರ್ಕಾರವು ಧ್ವಜ ಸಂಹಿತೆ 2002ಕ್ಕೆ ತಿದ್ದುಪಡಿ ತಂದಿದ್ದು, ಅದಕ್ಕೂ ಮೊದಲು ಖಾದಿಯಿಂದ ಮಾಡಿದ ರಾಷ್ಟ್ರ ಧ್ವಜಗಳನ್ನು ಮಾತ್ರ ಬಳಸಬೇಕಾಗಿತ್ತು. ಆದರೆ ನೂತನ ನೀತಿಯಿಂದ ಪಾಲಿಸ್ಟರ್ ದ್ವಜಗಳನ್ನು ಕೂಡಾ ಬಳಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಕೇಂದ್ರ ಸರ್ಕಾರದ ನೂತನ ನೀತಿಯೇ ಖಾದಿಯಿಂದ ರಾಷ್ಟ್ರಧ್ವಜ ತಯಾರು ಮಾಡುತ್ತಿದ್ದ ಬೆಂಗೇರಿ ಖಾದಿ ಸಂಸ್ಥೆಯ ಮೇಲೆ ದೊಡ್ಡ ಪೆಟ್ಟು ನೀಡಿದೆ. ಎರಡು ಅಡಿ ಎತ್ತರ, ಮೂರು ಅಡಿ ಉದ್ದದ ಖಾದಿ ರಾಷ್ಟ್ರ ಧ್ವಜದ ಬೆಲೆ 1080 ರೂ ಇದ್ದರೆ, ಅದೇ ಪಾಲಿಸ್ಟರ್ ಧ್ವಜ ಕೇವಲ 200 ರಿಂದು 300 ರೂ ಮಾರಾಟವಾಗುತ್ತಿದೆ. ಹೀಗಾಗಿ ಹೆಚ್ಚಿನ ಜನರು ಬೆಲೆಯಲ್ಲಿ ಹೆಚ್ಚಾಗಿರುವ ಖಾದಿ ಧ್ವಜಗಳ ಖರೀದಿಗೆ ಮುಂದಾಗುತ್ತಿಲ್ಲವಂತೆ.

ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು: ಪ್ರೇಮಾ ಪೂಜಾರಿ

ಬೆಂಗೇರಿಯಲ್ಲಿ ಸಂಸ್ಥೆ, ರಾಷ್ಟ್ರ ಧ್ವಜ ನಿರ್ಮಾಣಕ್ಕೆ ದೇಶದಲ್ಲಿಯೇ ದೊಡ್ಡ ಹೆಸರು ಮಾಡಿತ್ತು. ಪ್ರತಿನಿತ್ಯ ಇಲ್ಲಿ 30 ಹೆಚ್ಚು ಸಿಬ್ಬಂದಿ ರಾಷ್ಟ್ರಧ್ವಜ ತಯಾರಿಕೆ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಬೇಡಿಕೆ ಗಣನೀಯವಾಗಿ ಕುಸಿತ ಹಿನ್ನೆಲೆ ಸಿಬ್ಬಂದಿ ರಾಷ್ಟ್ರಧ್ವಜವನ್ನು ತಯಾರಿಸುವುದನ್ನು ಬಿಟ್ಟು ಖಾದಿ ಚೀಲಗಳನ್ನು ತಯಾರು ಮಾಡುತ್ತಿದ್ದಾರೆ. ‘ಕೇಂದ್ರ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಗೆ ನೀಡಿರುವ ಅನುಮತಿಯನ್ನು ರದ್ದು ಮಾಡಬೇಕು. ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು. ಇದರಿಂದ ಕೈಮಗ್ಗಗಳು ಸೇರಿದಂತೆ ಇದೇ ವೃತ್ತಿಯನ್ನು ನಂಬಿದವರಿಗೆ ಅನಕೂಲವಾಗುತ್ತದೆ’ ಎಂದು ಸಿಬ್ಬಂದಿ ಪ್ರೇಮಾ ಪೂಜಾರಿ ಅವರ ಮಾತು.

ಇದನ್ನೂ ಓದಿ: Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ

ಧ್ವಜ ಸಂಹಿತೆಗೆ ಬದಲಾವಣೆ ಮಾಡಿದ್ದರಿಂದ ಇದೀಗ ಖಾದಿಯಿಂದ ತಯಾರಾಗುವ ರಾಷ್ಟ್ರಧ್ವಜಗಳ ಮಾರಾಟ ಗಣನೀಯವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕಿದೆ. ಆ ಮೂಲಕ ದಶಕಗಳ ಇತಿಹಾಸ ಹೊಂದಿರುವ ಸಂಸ್ಥೆಯನ್ನು ಕಾಪಾಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರಿಕೆಟಿಗ ಅಭಿಷೇಕ್ ಪೊರೆಲ್​ಗೆ 14 ದಿನಗಳ ನ್ಯಾಯಾಂಗ ಬಂಧನ

Source link

ಒಟಿಟಿಗೆ ಬಂತು ರಶ್ಮಿಕಾ, ಶಾಹಿದ್ ಕಪೂರ್, ಕೃತಿ ಸನನ್ ನಟನೆಯ ‘ಕಾಕ್‌ಟೇಲ್ 2’ ಸಿನಿಮಾ – Kannada News | Rashmika Mandanna Shahid Kapoor Kriti Sanon starrer Cocktail 2 OTT Release Netflix

ಮಿಶ್ರ ಪ್ರತಿಕ್ರಿಯೆ ನಡುವೆಯೂ ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಂಡಿದ್ದ ಬಾಲಿವುಡ್‌ನ ರೊಮ್ಯಾಂಟಿಕ್ ಡ್ರಾಮಾ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಈಗ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸುಮಾರು ಎರಡು ತಿಂಗಳ ನಂತರ ಈ ಸಿನಿಮಾ ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್‌ (Netflix) ಮೂಲಕ ಈಗ ವೀಕ್ಷಣೆಗೆ ಲಭ್ಯವಾಗಿದೆ. ಶಾಹಿದ್ ಕಪೂರ್, ಕೃತಿ ಸನನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಆಗಸ್ಟ್ 14 ಶುಕ್ರವಾರದಿಂದ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಕ್‌ಟೇಲ್ 2’ ಬಿಡುಗಡೆ:

ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್‌ಫ್ಲಿಕ್ಸ್ ಸಂಸ್ಥೆಯು ಪೋಸ್ಟರ್ ಜೊತೆಗೆ ಮಾಹಿತಿ ಹಂಚಿಕೊಂಡಿದೆ. ‘ಇಬ್ಬರಿದ್ದರೆ ಜೋಡಿ, ಮೂವರಿದ್ದರೆ ಕಾಕ್‌ಟೇಲ್. ನಿಮ್ಮ ಡೇಟ್ ಫಿಕ್ಸ್ ಆಗಿದೆ. ಕಾಕ್‌ಟೇಲ್ 2 ಸಿನಿಮಾವನ್ನು ಆಗಸ್ಟ್ 14ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ’ ಎಂದು ಬರೆದುಕೊಂಡಿದೆ.

ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರವು ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಸುತ್ತ ಸುತ್ತುತ್ತದೆ. ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸುವ ಆದರೆ ಮದುವೆಗೆ ಹಿಂಜರಿಯುವ ಯುವ ಜೋಡಿಯಾಗಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಇವರ ವಿದೇಶ ಪ್ರವಾಸದ ವೇಳೆ ಕೃತಿ ಸನನ್ ಅವರ ಪಾತ್ರ ಎಂಟ್ರಿ ನೀಡುತ್ತದೆ. ಅಲ್ಲಿಂದ ಇವರ ಪ್ರೀತಿ, ನಂಬಿಕೆ ಮತ್ತು ಸಂಬಂಧದ ನಡುವೆ ಶುರುವಾಗುವ ಭಾವನಾತ್ಮಕ ತಿರುವುಗಳೇ ಸಿನಿಮಾದ ಪ್ರಮುಖ ಕಥಾಹಂದರ.

ವಿಮರ್ಶೆ ನೆಗೆಟಿವ್ ಇದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಹಿಟ್

ಈ ವರ್ಷ ಜೂನ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಕಾಕ್‌ಟೇಲ್ 2’ ಚಿತ್ರಕ್ಕೆ ಆರಂಭದಲ್ಲಿ ನೆಗೆಟಿವ್ ವಿಮರ್ಶೆಗಳು ವ್ಯಕ್ತವಾಗಿದ್ದವು. ಚಿತ್ರಕಥೆಯ ವೇಗ ಹಾಗೂ ಪಾತ್ರಗಳ ನಿರೂಪಣೆಯ ಬಗ್ಗೆ ಟೀಕೆಗಳು ಬಂದರೂ, ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಭಾರಿ ಗಳಿಕೆ ಮಾಡಿದೆ. ಆ ಮೂಲಕ ರಶ್ಮಿಕಾ ಮಂದಣ್ಣ ಅವರ ಖಾತೆಗೆ ಇನ್ನೊಂದು ಹಿಟ್ ಸಿನಿಮಾ ಸೇರ್ಪಡೆ ಆದಂತಾಗಿದೆ.

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣಗೆ ಗಂಭೀರ ಗಾಯ: ಮುಂದಿನ 6 ವಾರಗಳ ಕಾಲ ವಿಶ್ರಾಂತಿ ಅಗತ್ಯ

ಭಾರತದಲ್ಲಿ ಮೊದಲ ದಿನವೇ 13 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ‘ಕಾಕ್‌ಟೇಲ್ 2’ ಸಿನಿಮಾ, ಮೊದಲ ವಾರಾಂತ್ಯಕ್ಕೆ 47 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಒಟ್ಟಾರೆಯಾಗಿ ಭಾರತದಲ್ಲಿ 100 ಕೋಟಿ ರೂಪಾಯಿ ಗಡಿ ದಾಟುವ ಜೊತೆಗೆ ವಿದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಅಂತಿಮವಾಗಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 147 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾಗಳ ಸಾಲಿನಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ – Kannada News | Dont mistake Indias tolerance for weakness NSA Ajit Doval message on Operation Sindoor

ನವದೆಹಲಿ, ಆಗಸ್ಟ್ 14: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ (Operation Sindoor) ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಡಿಸ್ಕವರಿ ಚಾನೆಲ್‌ನ ಮುಂಬರುವ ಡಾಕ್ಯುಸರಣಿ ‘ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್’ ನಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಹಿರಿಯ ಸೇನಾ ಮತ್ತು ರಾಷ್ಟ್ರೀಯ ಭದ್ರತಾ ನಾಯಕರ ಪ್ರತ್ಯಕ್ಷ ಅನುಭವಗಳನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರದಲ್ಲಿ, 88 ಗಂಟೆಗಳ ಕಾಲ ನಡೆದ ಈ ಸುದೀರ್ಘ ಆಪರೇಷನ್ ಸಿಂಧೂರ್ ದಾಳಿಯ ಕುರಿತು ಅಜಿತ್ ದೋವಲ್ ಅವರ ಅಪರೂಪದ ಸಂದರ್ಶನವಿದೆ.

“ಭಯೋತ್ಪಾದನೆಗೆ ನೀಡುವ ಈ ಬೆಂಬಲ ಅಥವಾ ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದನ್ನು ನಮಗೆ ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಸೇನೆ ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸಿದ್ದೆವು. ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಭಾರತ ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧವಾಗಿದೆ. ಒಮ್ಮೆ ವಿಷಯ ಶುರುವಾದರೆ, ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಎಷ್ಟು ಅಗತ್ಯವೋ ಅಷ್ಟು ದೂರ ಹೋಗಲು ನಾವು ಸಿದ್ಧರಿದ್ದೇವೆ. ಅದಕ್ಕೆ ಯಾವುದೇ ಮಿತಿಗಳಿಲ್ಲ. ನಾವು ನಮ್ಮ ದೇಹದ ಕೊನೆಯ ರಕ್ತದ ಹನಿಯವರೆಗೂ ಹೋರಾಡುತ್ತೇವೆ” ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಅಜಿತ್ ದೋವಲ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಯೋಧರ ಹೆಸರು ಪ್ರಕಟ

“ಪ್ರಪಂಚಕ್ಕೆ ಭಾರತದ ಸಂದೇಶ ಅತ್ಯಂತ ಸ್ಪಷ್ಟವಾಗಿದೆ. ಭಾರತ ತೋರುವ ಔದಾರ್ಯ ಅಥವಾ ಸಹಿಷ್ಣುತೆಯನ್ನು ನಮ್ಮ ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬಾರದು. ಭಾರತವು ಅಪಾಯಗಳನ್ನು ಎದುರಿಸಲು ಸಿದ್ಧವಿದೆ. ಅದರ ಪರಿಣಾಮ ಏನೇ ಇರಲಿ, ಶತ್ರುಗಳ ಮೇಲೆ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ” ಎಂದು ಅಜಿತ್ ದೋವಲ್ ಹೇಳಿದ್ದಾರೆ.

ಶತ್ರು ಶಿಬಿರಗಳ ಧ್ವಂಸವೇ ಮುಖ್ಯ ಉದ್ದೇಶ:

88 ಗಂಟೆಗಳ ಕಾಲ ನಡೆದ ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯ ಮುಖ್ಯ ಉದ್ದೇಶ ಶತ್ರುಗಳ ತರಬೇತಿ ಶಿಬಿರಗಳನ್ನು ನಾಶಪಡಿಸುವುದಾಗಿತ್ತು. ವಿಶೇಷವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದವರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಏನಿದು ಆಪರೇಷನ್ ಸಿಂಧೂರ್?:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳು ಮತ್ತು ಶಿಬಿರಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯ ನಂತರ ಪಾಕಿಸ್ತಾನವೂ ಭಾರತದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ಮೂಲಕ ದಾಳಿಗೆ ಯತ್ನಿಸಿತ್ತು. ಭಾರತದ ಪ್ರತ್ಯುತ್ತರದೊಂದಿಗೆ ಎರಡೂ ದೇಶಗಳ ನಡುವೆ ಸುಮಾರು 88 ಗಂಟೆಗಳ ಕಾಲ ತೀವ್ರ ಮಿಲಿಟರಿ ಸಂಘರ್ಷ ನಡೆಯಿತು. ಮೇ 10ರ ಸಂಜೆ ಎರಡೂ ದೇಶಗಳ ನಡುವೆ ಮಾತುಕತೆ ನಡೆದ ನಂತರ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಯಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ಹುತಾತ್ಮರ ವಿವಾದ; ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್​ಗೆ ಕಾಂಗ್ರೆಸ್ ಪತ್ರ

ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ 2 ಭಾಗಗಳ ಡಾಕ್ಯುಸರಣಿಯಲ್ಲಿ ಆಪರೇಷನ್ ಸಿಂಧೂರ್‌ನ ನಿರ್ಧಾರಗಳು, ತಂತ್ರಗಳು ಮತ್ತು ನೈಜ ಘಟನೆಗಳ ಬಗ್ಗೆ ಭಾರತದ ಸೇನಾ ನಾಯಕರು ಮತ್ತು ಭದ್ರತಾ ಅಧಿಕಾರಿಗಳು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 15ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಮತ್ತು ಡಿಸ್ಕವರಿ ಪ್ಲಸ್‌ನಲ್ಲಿ ಈ ಡಾಕ್ಯುಸರಣಿ ಪ್ರತ್ಯೇಕವಾಗಿ ಪ್ರಸಾರವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version